You are currently viewing ಕೋವಿಡ್‌-19  ರ ವಿರುದ್ಧ mRNA ವ್ಯಾಕ್ಸೀನ್‌ ರೂಪಿಸಲು ಸಾಧ್ಯಮಾಡಿದ ಮೂಲ ವಿಜ್ಞಾನದ ಸಂಶೋಧನೆಗೆ 2023ರ ವೈದ್ಯಕೀಯ ನೊಬೆಲ್‌

ಕೋವಿಡ್‌-19 ರ ವಿರುದ್ಧ mRNA ವ್ಯಾಕ್ಸೀನ್‌ ರೂಪಿಸಲು ಸಾಧ್ಯಮಾಡಿದ ಮೂಲ ವಿಜ್ಞಾನದ ಸಂಶೋಧನೆಗೆ 2023ರ ವೈದ್ಯಕೀಯ ನೊಬೆಲ್‌

ಈ ವರ್ಷದ ವೈದ್ಯಕೀಯ ನೊಬೆಲ್‌ ಪುರಸ್ಕಾರವನ್ನು ಕ್ಯಾಟಲಿನ್‌ ಕ್ಯಾರಿಕೊವ್‌ (Katalin Karikó)  ಡ್ರಿವ್ಯೂ ವೈಸ್‌ ಮನ್‌ (Drew Weissman) ಎಂಬ ಇಬ್ಬರು ಸಂಶೋಧಕರು ಕೊವಿಡ್‌-19 ಸಾಂಕ್ರಾಮಿಕ ರೋಗಕ್ಕೆ  mRNA (ಮೆಸೆಂಜರ್ ಆರ್‌ಎನ್‌ಎ) ವ್ಯಾಕ್ಸೀನ್‌ ರೂಪಿಸಲು ಸಾಧ್ಯಮಾಡಿದ ಮೂಲ ವಿಜ್ಞಾನದ ಸಂಶೋಧನೆಗೆ ಪಡೆದಿದ್ದಾರೆ. ಅವರಿಬ್ಬರೂ ಕೋವಿಡ್‌ ಬರುವುದಕ್ಕೆ ಮೊದಲೇ 2005ರಲ್ಲೇ ಈ ಸಂಶೋಧನೆಯ ಅಡಿಪಾಯದ ಶೋಧವನ್ನು ಕೈಗೊಂಡಿದ್ದರು. RNA ರಸಾಯನ ವಿಜ್ಞಾನ ತಜ್ಞೆಯಾದ ಕ್ಯಾಟಲಿನ್‌ ಕ್ಯಾರಿಕೊವ್‌ ಮತ್ತು ಇಮ್ಯುನಾಲಜಿ ತಜ್ಞರಾದ ಡ್ರಿವ್ಯೂ ವೈಸ್‌ ಮನ್‌ ಜೊತೆಯಾಗಿಯೇ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಇಂತಹಾ ಮಹತ್ವದ ಅಧ್ಯಯನವನ್ನು ನಡೆಸಿದ್ದಾರೆ.

       ಕೋವಿಡ್‌ ಸಮಯದಲ್ಲಿ ನಮ್ಮ ವೆಬ್‌ಪುಟದಲ್ಲಿ ನಿರಂತರವಾಗಿ ಪ್ರಕಟಿಸಿದ್ದ ಬರಹಗಳನ್ನು ಗಮನಿಸಿದ್ದರೆ ನೀವು ಖಂಡಿತವಾಗಿಯೂ ಕೋವಿಡ್‌ ವ್ಯಾಕ್ಸೀನ್‌ಗಳೇಕೆ ಈ ವರ್ಷ ನೊಬೆಲ್‌ ಪಡೆಯಲಿಲ್ಲ? ಎಂಬ ಬರಹವನ್ನು ( ಈ ಲಿಂಕ್‌ ಅಲ್ಲಿ ನೋಡಬಹುದು) ಓದಿರುತ್ತೀರಿ. ಅದರಲ್ಲಿ ಒಂದು ವೇಳೆ ಕೋವಿಡ್‌ ವ್ಯಾಕ್ಸೀನಿಗೆ ಬರುವುದಾದರೆ mRNA ವ್ಯಾಕ್ಸೀನ್‌ಗೆ ಬರುವ ಸಾಧ್ಯತೆಗಳ ಬಗ್ಗೆ ಬರೆದಿದ್ದೆ. ಜೊತೆಗೆ ಅಂತಹಾ ಸಂಶೋಧನೆಗೆ ನೊಬೆಲ್‌ ಸಮಿತಿಯ ಮೆಚ್ಚುಗೆಯ ಬಗೆಗೂ ಅದರಲ್ಲಿ ವಿವರಣೆಯನ್ನು ಒದಗಿಸಿದ್ದೆ. ಅದೇನೆ ಇರಲಿ. ಈ ವರ್ಷ ಅದೇ ಸಂಶೋಧನೆಗೆ ನೊಬೆಲ್‌ ಪುರಸ್ಕಾರವು ಲಭ್ಯವಾಗಿದ್ದು, ಆ ಊಹೆಯನ್ನು ಸತ್ಯವಾಗಿಸಿದೆ. ಇದರ ಮೂಲ ವೈಜ್ಞಾನಿಕ ವಿವರಗಳನ್ನು ನೋಡೋಣ.

ವ್ಯಾಕ್ಸೀನು ಹಾಕಿಸುವುದು ಎಂದರೆ, ರೋಗ ಬರುವುದಕ್ಕೆ ಮೊದಲೇ ರೋಗಕಾರಕವಾದ ರೋಗಾಣುವಿಂದ ಪಡೆದ ವಸ್ತುವಿನಿಂದ, ಅಥವಾ ಅರೆಜೀವಗೊಳಿಸಿದ ರೋಗಾಣುವನ್ನೇ ಬಳಸಿ ಪ್ರತಿರೋಧವನ್ನು ಒಡ್ಡುವ ಕ್ರಿಯೆ. ಇಂತಹಾ ಸಾಂಪ್ರದಾಯಿಕ ವ್ಯಾಕ್ಸೀನುಗಳಿಂದ ಪೋಲಿಯೊ, ದಡಾರ ಹಳದಿ ಜ್ವರ ಮುಂತಾದ ರೋಗಗಳನ್ನು ತುಂಬಾ ಯಶಸ್ವಿಯಾಗಿ ತಡೆಗಟ್ಟಿದ ಉದಾಹರಣೆಗಳು ಜಗತ್ತಿನಾದ್ಯಂತ ಜನಪ್ರಿಯವಾದುವು.  

ಆದರೆ ಇತ್ತೀಚೆಗಿನ ಜೈವಿಕ ಅಧ್ಯಯನಗಳ ಫಲವಾಗಿ ಮಾಲೆಕ್ಯೂಲಾರ್‌(ಆಣ್ವಿಕ) ಜೀವಿವಿಜ್ಞಾನದ ಬದಲಾವಣೆಗಳು ಹೊಸತೊಂದು ಲೋಕವನ್ನು ತೆರೆದಿಡುವಲ್ಲಿ ಯಶಸ್ವಿಯಾಗಿವೆ. ಇದರ ಫಲಿತಗಳಿಂದಾಗಿ ಇಡೀ ಜೀವಾಣುವನ್ನು ಅಥವಾ ಅರೆಜೀವಿಗೊಳಿಸಿದ ರೋಗಾಣುವನ್ನು ಪ್ರತಿರೋಧ ಒಡ್ಡಲು ಬಳಸುವುದರ ಬದಲಾಗಿ, ಆಯಾ ರೋಗಾಣುವಿನ ಭಾಗಗಳನ್ನು -ಉದಾಹರಣೆಗೆ ಅವುಗಳ ದೇಹದ ಪ್ರೊಟೀನುಗಳು, ಜೀನುಗಳ ಭಾಗವೋ ಇತ್ಯಾದಿ- ಬಳಸಿಯೂ ಪ್ರತಿರೋಧವನ್ನು ಉಂಟುಮಾಡುವ ಬಗ್ಗೆ ನಿದರ್ಶನಗಳು ಸಾಭೀತಾಗತೊಡಗಿದವು. ಎಬೋಲಾ ವೈರಸ್ಸನ್ನು ಈ ಬಗೆಯ ವ್ಯಾಕ್ಸೀನಿನಿಂದ ನಿಯಂತ್ರಿಸಬಹುದಾಗಿದ್ದು ಉತ್ತಮ ಉದಾಹರಣೆಯಾಗಿದೆ.  

            ಈ ಬಗೆಯ ವ್ಯಾಕ್ಸೀನು ತಯಾರಿಯಲ್ಲಿ ಒಂದು ಪುಟ್ಟ ತಡೆಯಿದ್ದಿತು. ಅದೆಂದರೆ ವ್ಯಾಕ್ಸೀನು ತಯಾರಿಗೆ ಜೀವಿಕೋಶಗಳೇ (Cell Culture) ಬೇಕಾಗಿದ್ದು ಹೆಚ್ಚಿನ ವ್ಯಾಕ್ಸೀನು ತಯಾರಿಗೆ ತುಂಬಾ ಸಮಯವು ಬೇಕಾಗುತ್ತಿತ್ತು. ಆಗ ತಕ್ಷಣದಕ್ಕೇ ಸಾಕಷ್ಟು ಲಸಿಕೆ ಅಥವಾ ವ್ಯಾಕ್ಸೀನ್‌ ಅನ್ನು ಉತ್ಪಾದನೆ ಮಾಡಲು ಕಷ್ಟವಾಗುತ್ತಿತ್ತು. ಇದೀಗ ಈ ಜೀವಿಕೋಶದ ಮೂಲಕವೇ ಉತ್ಪಾದಿಸುವ ಬದಲೀ ಮಾರ್ಗವನ್ನೂ ಕೂಡ ಮೆಸೆಂಜರ್ ಆರ್‌ಎನ್‌ಎ (mRNA) ಪ್ರೊಟೀನುಗಳ ಮೂಲಕ ಪ್ರಸ್ತುತ ಇಬ್ಬರೂ ಸಂಶೋಧಕರ ಅಧ್ಯಯನಗಳು ಸೂಚಿಸಿ ದಕ್ಷತೆಯನ್ನು ಮೆರೆದಿವೆ.

       ನಮ್ಮ ಜೀವಕೋಶಗಳ ಡಿಎನ್‌ಎಯಲ್ಲಿ ಕೋಡ್ ಮಾಡಲಾದ ಆನುವಂಶಿಕ ಮಾಹಿತಿಯನ್ನು ಮೆಸೆಂಜರ್ ಆರ್‌ಎನ್‌ಎ (mRNA) ಗೆ ವರ್ಗಾಯಿಸಲಾಗುತ್ತದೆ, ಇದನ್ನು ಪ್ರೊಟೀನ್ ಉತ್ಪಾದನೆಗೆ ಮೂಲ ಮಾದರಿ (ಟೆಂಪ್ಲೇಟ್‌) ಯಂತೆ ಬಳಸಲಾಗುತ್ತದೆ. 1980 ರ ದಶಕದಲ್ಲಿ, ಸೆಲ್ ಕಲ್ಚರ್ ಇಲ್ಲದೆ mRNA ಯನ್ನು ಉತ್ಪಾದಿಸುವ ಸಮರ್ಥ ವಿಧಾನಗಳನ್ನು ಪರಿಚಯಿಸಲಾಯಿತು, ಇದನ್ನು ವಿಟ್ರೊ ಟ್ರಾನ್ಸ್‌ಕ್ರಿಪ್ಷನ್ ಎಂದು ಕರೆಯಲಾಗುತ್ತದೆ. ಈ ಹಂತವು ಮಾಲೆಕ್ಯೂಲಾರ್‌ (ಆಣ್ವಿಕ) ಜೀವಿವಿಜ್ಞಾನದ ಅನ್ವಯಗಳ ಅಭಿವೃದ್ಧಿಯನ್ನು ವೇಗಗೊಳಿಸಿತು. ಲಸಿಕೆ ಮತ್ತು ಚಿಕಿತ್ಸಕ ಉದ್ದೇಶಗಳಿಗಾಗಿ ಎಂಆರ್‌ಎನ್‌ಎ ತಂತ್ರಜ್ಞಾನಗಳನ್ನು ಬಳಸುವ ಆಲೋಚನೆಗಳೂ ಸಹ ಪ್ರಾರಂಭವಾದವು. ಆದರೆ ಇವುಗಳಲ್ಲಿಯೂ ಕೆಲವು ಅಡೆ ತಡೆಗಳು ಇದ್ದವು. ಅವುಗಳನ್ನು ನಿವಾರಿಸಲು ಕ್ಯಾಟಲಿನ್‌ ಕ್ಯಾರಿಕೊವ್‌ ಅವರ ಕ್ಯಾರಿಯರ್ ಲಿಪಿಡ್ ಸಿಸ್ಟಮ್‌ಗಳ ಅಭಿವೃದ್ಧಿಯ ದೃಢ ಅಧ್ಯಯನವು ಸಹಾಯಕವಾಯಿತು.   

       ಅವರು 1990 ರ ದಶಕದ ಆರಂಭದಲ್ಲಿ, ಅವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾಗ, ಅವರು ತಮ್ಮ ಯೋಜನೆಯ ಮಹತ್ವವನ್ನು ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಲ್ಲದೆ, ಅದರ ಮುಂದುವರಿಕೆಯ ಪ್ರತಿರೋಧ ಅಧ್ಯಯನಕ್ಕೆ ಅಗತ್ಯವಾದ ನೆರವನ್ನು ಅವರ ಸಹೋದ್ಯೋಗಿ ಡ್ರಿವ್ಯೂ ವೈಸ್‌ ಮನ್‌ ಅವರಿಂದ ಪಡೆದರು. ಇಮ್ಯುನೊಲೊಜಿಸ್ಟ್ ಆದ ವೈಸ್‌ಮನ್‌ ಅವರು ವ್ಯಾಕ್ಸಿನ್‌-ಪ್ರೇರಿತ ಪ್ರತಿರಕ್ಷಣಾ ಪ್ರತಿಕ್ರಿಯೆಗಳ ಸಕ್ರಿಯಗೊಳಿಸುವಿಕೆಯಲ್ಲಿ ಪ್ರಮುಖ ಕಾರ್ಯಗಳನ್ನು ಹೊಂದಿರುವ ಜೀವಿ(ಡೆಂಡ್ರಿಟಿಕ್) ಕೋಶಗಳಲ್ಲಿ ಅವರು ಆಸಕ್ತಿ ಹೊಂದಿದ್ದರು. ಹಾಗಾಗಿ ಕ್ಯಾರಿಕೊವ್‌ ಅವರ ಹೊಸ ಆಲೋಚನೆಗಳಿಂದ ಪ್ರಭಾವಿತರಾಗಿ ಉತ್ತೇಜಿನೆಗೊಂಡರು. ಇದರಿಂದಾಗಿ ಇಬ್ಬರ ಸಹಯೋಗವು RNA ಪ್ರಕಾರಗಳು ಪ್ರತಿರಕ್ಷಣಾ ವ್ಯವಸ್ಥೆಯೊಂದಿಗೆ ಹೇಗೆ ಸಂವಹನ ನಡೆಸುತ್ತವೆ ಎಂಬ ತಿಳಿವಳಿಕೆಯನ್ನು ಫಲಪ್ರದವಾಗಿಸಿತು. ಇದೇ mRNA ಬಳಸಿ ಪ್ರತಿರೋಧವನ್ನು ಉತ್ತೇಜಿಸುವ ಜ್ಞಾನಕ್ಕೆ ಕಾರಣವಾಯಿತು. ಆದಾಗ್ಯೂ ಅದೊಂದು ಬಗೆಯ ಉರಿಯೂತಕ್ಕೆ ಕಾರಣವಾಗುತ್ತಿತ್ತು. ಆ ಉರಿಯೂತವನ್ನು ನಿವಾರಿಸಲು   mRNA ಯಲ್ಲಿ ಆನುವಂಶಿಕ ಬೇಸ್ ಮಾರ್ಪಾಡುಗಳನ್ನು ಸೇರಿಸಿದಾಗ ಉರಿಯೂತದ ಪ್ರತಿಕ್ರಿಯೆಯನ್ನು ಬಹುತೇಕ ಕಡಿಮೆ ಮಾಡಲು ಸಾಧ್ಯವಾಯಿತು.  ಈ ಮೂಲ ವೈಜ್ಞಾನಿಕ ಸಂಗತಿಗಳನ್ನು ಈ ಇಬ್ಬರೂ ಸಂಶೋಧಕರು COVID-19 ಸಾಂಕ್ರಾಮಿಕ ರೋಗಕ್ಕೆ ಹದಿನೈದು ವರ್ಷಗಳ ಮೊದಲು 2005ರಲ್ಲೇ ಪ್ರಕಟಿಸಿದ್ದರು.

ಮುಂದೆ 2008 ಮತ್ತು 2010 ರಲ್ಲಿ ಪ್ರಕಟವಾದ ಹೆಚ್ಚಿನ ಅಧ್ಯಯನಗಳಲ್ಲಿ, ಕ್ಯಾರಿಕೊವ್‌ ಮತ್ತು ವೈಸ್‌ಮನ್ ಅವರು ಮೂಲ ಮಾರ್ಪಾಡುಗಳನ್ನು ಬಳಸಿ ಇನ್ನೂ ಹೆಚ್ಚಿನ ಫಲಶೃತಿಯನ್ನು ಕಾಣಲಾಯಿತು. ಇದರಿಂದ ಕ್ಲಿನಿಕಲ್‌ ಉದ್ದೇಶಗಳಲ್ಲಿ ಹೆಚ್ಚಿನ ಬಳಕೆಯನ್ನು ಉತ್ತೇಜಿಸಲೂ ಸಾಧ್ಯವಾಯಿತು. ಹಾಗಾಗಿ mRNA ವ್ಯಾಕ್ಸೀನುಗಳು (Pfizer-BioNtech ಮತ್ತು Modern)  ಬಳಕೆಗೆ ಬಂದವು.

ಈ ಬಗೆಯ  mRNA ವ್ಯಾಕ್ಸೀನುಗಳ ಪ್ರತಿರೋಧವನ್ನು ಇನ್ನೂ ಹಲವಾರು ಬಗೆಯ ರೋಗ ನಿಯಂತ್ರಣದಲ್ಲಿ ಬಳಸಲೂ ಸಾಧ್ಯವಿದೆ. ಮುಂದೊಂದು ದಿನ ಇಂತಹಾ ಬಗೆ ಬಗೆಯ ಪ್ರತಿರೋಧವನ್ನು ನಿರ್ಣಯಿಸುವಲ್ಲಿ ಮಹತ್ತರ ಪಾತ್ರವನ್ನು mRNA ವ್ಯಾಕ್ಸೀನುಗಳು ವಹಿಸಲಿವೆ. ಇದನ್ನು  ಕ್ಯಾನ್ಸರುಗಳ ಚಿಕಿತ್ಸೆಯಲ್ಲೂ, ಔಷಧವನ್ನು ನಿಗಧಿತ ದೇಹದ ಭಾಗಕ್ಕೆ ಅಥವಾ ಅಂಗಾಂಶಗಳಲ್ಲಿ ಡಿಲವರಿ ಮಾಡಿ ಚಿಕಿತ್ಸೆಯನ್ನು ಫಲಪ್ರದವಾಗಿಸಲೂ ಹಾಗೂ ಮತ್ತಿತರ ಯಾವುದೇ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೂ ಬಳಸಬಹುದಾಗಿದೆ.

ಕ್ಯಾಟಲಿನ್‌ ಕ್ಯಾರಿಕೊವ್‌ (Katalin Karikó)  ಅವರು 1955 ರಲ್ಲಿ ಹಂಗೇರಿಯ ಸ್ಜೋಲ್ನೋಕ್‌ (Szolnok)ನಲ್ಲಿ ಜನಿಸಿದರು. ಅವರು 1982 ರಲ್ಲಿ ಸ್ಜೆಡ್ ವಿಶ್ವವಿದ್ಯಾಲಯ (Szeged University)ದಿಂದ ತಮ್ಮ ಪಿಎಚ್‌ಡಿ ಪಡೆದರು ಮತ್ತು 1985 ರವರೆಗೆ ಸ್ಜೆಡ್‌ನಲ್ಲಿರುವ ಹಂಗೇರಿಯನ್ ಅಕಾಡೆಮಿ ಆಫ್ ಸೈನ್ಸಸ್‌ನಲ್ಲಿ ಪೋಸ್ಟ್‌ಡಾಕ್ಟರಲ್ ಸಂಶೋಧನೆ ನಡೆಸಿದರು. ನಂತರ ಅವರು ಟೆಂಪಲ್ ಯೂನಿವರ್ಸಿಟಿ, ಫಿಲಡೆಲ್ಫಿಯಾ ಮತ್ತು ಬೆಥೆಸ್ಡಾದ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಪೋಸ್ಟ್‌ಡಾಕ್ಟರಲ್ ಸಂಶೋಧನೆ ನಡೆಸಿದರು. 1989 ರಲ್ಲಿ, ಅವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇರಿಕೊಂಡು 2013 ರವರೆಗೆ ಅಲ್ಲಿಯೇ ಇದ್ದರು. ಅದರ ನಂತರ, ಅವರು ಬಯೋಎನ್ಟೆಕ್ ಆರ್‌ಎನ್‌ಎ. (BioNTech RNA)  ಔಷಧ ಕಂಪನಿಯಲ್ಲಿ ಹಿರಿಯ ಉಪಾಧ್ಯಕ್ಷರಾದರು. 2021 ರಿಂದ, ಅವರು ಸ್ಜೆಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪೆರಲ್ಮನ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿಯೂ ಪ್ರಾಧ್ಯಾಪಕರಾಗಿದ್ದಾರೆ.

ಡ್ರಿವ್ಯೂ ವೈಸ್‌ ಮನ್‌ (Drew Weissman) 1959 ರಲ್ಲಿ ಯುಎಸ್ಎಯ ಮ್ಯಾಸಚೂಸೆಟ್ಸ್‌ನ ಲೆಕ್ಸಿಂಗ್ಟನ್‌ನಲ್ಲಿ ಜನಿಸಿದರು. ಅವರು 1987 ರಲ್ಲಿ ಬೋಸ್ಟನ್ ವಿಶ್ವವಿದ್ಯಾನಿಲಯದಿಂದ ತಮ್ಮ MD ಮತ್ತು PhD ಪದವಿಗಳನ್ನು ಪಡೆದರು. ಅವರು ಹಾರ್ವರ್ಡ್ ವೈದ್ಯಕೀಯ ಶಾಲೆಯಲ್ಲಿ ಬೆತ್ ಇಸ್ರೇಲ್ ಡೀಕಾನೆಸ್ ಮೆಡಿಕಲ್ ಸೆಂಟರ್‌ (Beth Israel Deaconess Medical Centre) ನಲ್ಲಿ ತಮ್ಮ ಕ್ಲಿನಿಕಲ್ ತರಬೇತಿಯನ್ನು ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನಲ್ಲಿ ಪೋಸ್ಟ್‌ಡಾಕ್ಟರಲ್ ಸಂಶೋಧನೆಯನ್ನು ಮಾಡಿದರು. 1997 ರಲ್ಲಿ, ವೈಸ್‌ಮನ್ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪೆರಲ್‌ಮನ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ತಮ್ಮ ಸಂಶೋಧನಾ ತಂಡವನ್ನು ಸ್ಥಾಪಿಸಿದರು. ಅವರು ಅಲ್ಲಿಯೇ ಪ್ರೊಫೆಸರ್ ಆಗಿದ್ದು ಮತ್ತು ಆರ್‌ಎನ್‌ಎ ಇನ್ನೋವೇಶನ್‌ಗಳಿಗಾಗಿ ಪೆನ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕರೂ (Penn Institute for RNA Innovations) ಆಗಿದ್ದಾರೆ.‌

ಇಬ್ಬರಿಗೂ CPUS ಮತ್ತು ಅದರ ಹಿತೈಷಿಗಳ ಅಭಿನಂದನೆಗಳು

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್

ಪ್ರಸ್ತುತ ಪುರಸ್ಕಾರದ ಮೈಲುಗಲ್ಲಾದ ಸಂಶೋಧನಾ ಪ್ರಬಂಧಗಳು

Karikó, K., Buckstein, M., Ni, H. and Weissman, D. Suppression of RNA Recognition by Toll-like Receptors: The impact of nucleoside modification and the evolutionary origin of RNA. Immunity 23, 165–175 (2005).

Karikó, K., Muramatsu, H., Welsh, F.A., Ludwig, J., Kato, H., Akira, S. and Weissman, D. Incorporation of pseudouridine into mRNA yields superior nonimmunogenic vector with increased translational capacity and biological stability. Mol Ther 16, 1833–1840 (2008).

Anderson, B.R., Muramatsu, H., Nallagatla, S.R., Bevilacqua, P.C., Sansing, L.H., Weissman, D. and Karikó, K. Incorporation of pseudouridine into mRNA enhances translation by diminishing PKR activation. Nucleic Acids Res38, 5884–5892 (2010).

Leave a Reply