You are currently viewing ಕೇಸರಿ ಬೇಳೆಯ ಜತೆಗೆ ಗೊಂದಲಗೊಳ್ಳಬಾರದ “ಮಸೂರ್‌ ದಾಲ್‌” : Lentil (Lens culinaris)

ಕೇಸರಿ ಬೇಳೆಯ ಜತೆಗೆ ಗೊಂದಲಗೊಳ್ಳಬಾರದ “ಮಸೂರ್‌ ದಾಲ್‌” : Lentil (Lens culinaris)

ಕೃಷಿಕಾಲೇಜಿನ ನನ್ನ ಗೆಳೆಯರೊಬ್ಬರು ಮಸೂರ್‌ ದಾಲ್‌ ಬಗ್ಗೆ ಬರೆದು ಅದಕ್ಕಿರುವ ಅನುಮಾನಗಳ ವಿವರಿಸಿ ಎಂದಿದ್ದರು. ಅನುಮಾನಗಳು ಎಂದೆನ್ನಲು ಕಾರಣ, ಮಸೂರ್‌ ದಾಲ್‌ನ ಬಣ್ಣ ಕೇಸರಿ, ಕಂದು ಅಥವಾ ಕಪ್ಪು, ಹಸಿರು ಮಿಶ್ರಿತ ಕಪ್ಪು ಇರುವುದರಿಂದ “ಕೇಸರಿಬೇಳೆ” ಎಂದೇ ಇರುವ ಮತ್ತೊಂದು ತುಸು ವಿಷಪೂರಿತ ಬೇಳೆಯ ಜೊತೆಗೆ ಹೋಲಿಸುವುದುಂಟು. “ಕೇಸರಿ ದಾಲ್‌” ಒಂದು ಬೇರೆಯದೇ ಆದ ಲೆಗ್ಯೂಮ್‌ ಕಾಳು/ಬೇಳೆ. ಮಸೂರ್‌ ದಾಲ್‌ ಕೂಡ “ಕೇಸರಿ” ಬಣ್ಣವಿರುವುದರಿಂದ ಈ ಗೊಂದಲ. ಬಹಳ ಜನರು ಇದೇ ಗೊಂದಲದಲ್ಲಿ ಇರುವ ಬಗ್ಗೆ ಅನೇಕರಿಗೆ ತಿಳಿದಿರಬಹುದು. ದಕ್ಷಿಣ ಭಾರತದಲ್ಲಿ ಇದು ಹೆಚ್ಚು ಜನಪ್ರಿಯವಲ್ಲ. ಇರಲಿ, ಈ ಅನುಮಾನಗಳಿಗೆ ಕೊಂಚ ಬ್ರೇಕ್‌ ಕೊಡಲು ಉದ್ದೇಶ ಏನೆಂದರೆ ಇತ್ತೀಚೆಗೆ ಮಸೂರ್‌ ದಾಲ್‌ ದಕ್ಷಿಣಕ್ಕೂ ಬರುತ್ತಿದೆ. ಅಲ್ಲಲ್ಲಿ ಸಿಗುವ ಸಾಧ್ಯತೆಯೂ ಹೆಚ್ಚಾಗಿದೆ. ಜೊತೆಗೆ ಮಸೂರ್‌ ದಾಲ್‌ಗೆ ಕೆಲವೊಂದು ವಿಶೇಷಗಳಿವೆ. ಇವನ್ನೆಲ್ಲಾ ವಿವರವಾಗಿ ನೋಡೋಣ.

       ಅನುಮಾನ ಅಥವಾ ಗೊಂದಲಗಳಿಂದಲೇ ಪ್ರಾರಂಭಿಸೋಣ. ಹೆಚ್ಚಿನ ಪಾಲು ಬೇಳೆಯಾಗುವ ಲೆಗ್ಯೂಮ್‌ಗಳು ತಮ್ಮೊಳಗೆ ತುಸು ಆಹಾರವಾಗದ ಅಂಶಗಳನ್ನು (Anti-nutrition factors) ಹೊಂದಿರುವುದು ಸಹಜ. ಇವು ನಾವು ನಿತ್ಯವೂ ಬಳಸುವ ಬೇಳೆ-ಕಾಳುಗಳಲ್ಲೂ ಇವೆ. ಆದರೆ ಬೇಯಿಸಿದಾಗ ಈ ಅಂಶ ಕಡಿಮೆಯಾಗುವ ಹಾಗೂ ಕೆಲವೊಂದು ಪ್ರಭೇದಗಳಲ್ಲಿ ಇವುಗಳ ಅಂಶವೂ ಕಡಿಮೆ ಇರುತ್ತದೆ. ಅಲ್ಲದೇ ಇದೇ ಪ್ರತಿಆಹಾರ ಅಂಶವೂ ಸಹಾ ಕೆಲವೊಂದು ಔಷಧಿಯ ಪರಿಣಾಮಗಳನ್ನೂ ಕೊಡಲಿದೆ. ಹಾಗಾಗಿ ಸ್ವಲ್ಪವೇ ಬಳಸಿದಾಗ ಅವುಗಳು ಅರಿವಿಗೆ ಬರುವುದಿಲ್ಲ. ಸಾಮಾನ್ಯ ತೊಗರಿ ಬೇಳೆಯನ್ನೋ ಅಥವಾ ಕಡಲೆ ಬೇಳೆ ಅಥವಾ ಅವರೆ ಬೇಳೆಯನ್ನೋ ಹೆಚ್ಚು ಅಂದರೆ ಹೊಟ್ಟೆ ತುಂಬಾ ಒಂದನ್ನೇ ತೊಂದರೆ ಖಂಡಿತಾ ವ್ಯತ್ಯಾಸವಾಗುತ್ತದೆ. ಅಕ್ಕಿ, ಗೋಧಿ, ರಾಗಿ ಮುಂತಾದ ಏಕದಳ ಧಾನ್ಯದ ಜೊತೆಗೆ ಬಳಸುವುದರಿಂದ ಅವೇನೂ ನಮ್ಮ ಅರಿವಿಗೆ ಬರುವುದಿಲ್ಲ.

       ಮಸೂರ್‌ ದಾಲ್‌ ಅನ್ನು ಲೆಂಟಿಲ್‌ (Lentil)ಎಂದು ಕರೆದರೆ, ಕೇಸರಿ ದಾಲ್‌ ಅನ್ನು ಗ್ರೀನ್‌ ಪೀ (Grass Pea)ಎಂದು ಕರೆಯಲಾಗುತ್ತದೆ. ಲೆಂಟಿಲ್‌ ಸಸ್ಯವೈಜ್ಞಾನಿಕ ಹೆಸರು ಲೆನ್ಸ್‌ ಕ್ಯುಲಿನರಿಸ್‌ (Lens culinaris) ಎಂದಾದರೆ ಕೇಸರಿದಾಲ್‌ಗೆ ಲ್ಯಥೆರಿಸ್‌ ಸಟೈವಸ್‌  (Lathyrus sativus) ಎಂದಿದೆ.  ಎರಡೂ ಒಂದೇ ಕುಟುಂಬದವು ಸಂಕುಲಗಳು ಬೇರೆ, ಬೇರೆ! ಲ್ಯಥೆರಿಸ್‌ ಸಂಕುಲದ ಕಾಳು-ಬೇಳೆಯನ್ನು ಅತಿಯಾಗಿ ಬಳಸಿದಾಗ ಮಾನವರಲ್ಲಿ ಉಂಟಾಗುವ ನರಸಂಬಂಧಿ ಏರು ಪೇರನ್ನು ಲ್ಯಥೆರಿಸಮ್‌ ಎಂದು ಕರೆಯುತ್ತಾರೆ. ಆದ್ದರಿಂದಲೇ ಈ ಸಂಕುಲವನ್ನೂ ಬೇರೆಯಾಗಿಸಿ ಹಾಗೆಯೇ ಹೆಸರಿಸಿದ್ದಾರೆ. ಕೇಸರಿ ಬೇಳೆಗೆ ಈ ಗುಣ ಹೆಚ್ಚಾಗಿಯೇ ಇರುವುದರಿಂದ ದಕ್ಷಿಣದವರಿಗೆ ಹೆದರಿಕೆ. ಇದರಿಂದ ತುಂಬಾ ಸುಸ್ತಾದಂತೆ, ಹೊಟ್ಟೆಯುಬ್ಬಿಸಿದಂತೆ, ಮಾನಸಿಕ ಸ್ಥಿಮಿತ ತುಸು ಏರು-ಪೇರಾದಂತೆ, ವಾಂತಿ ಇತ್ಯಾದಿಗಳು ಇದರ ಲಕ್ಷಣಗಳು. ಹಾಗಿದ್ದೂ ಇದನ್ನು ಏಕೆ ಬೆಳೆಯುತ್ತಾರೆ? ಏಕೆ ಬಳಸುತ್ತಾರೆ? ನಿಮ್ಮ ಕುತೂಹಲ ಸಹಜ. ಕಾರಣ ಇಷ್ಟೇ ಕೇಸರಿದಾಲ್‌ ಕಡಿಮೆ ಮಳೆಯಲ್ಲೂ ಅತೀ ಶೀತದಲ್ಲೂ ಬೆಳೆಯುತ್ತದೆ. ಪಾಕ ಪ್ರಾವೀಣ್ಯತೆಯು ಬಳಸುವ ಮಾರ್ಗಗಳನ್ನು ಉತ್ತರದವರು ಕಂಡುಕೊಂಡಿದ್ದಾರೆ. ಆದ್ದರಿಂದ ಆ ಬೆಳೆಯೂ ಇದೆ. ಜೊತೆಗೆ ಇತ್ತಿಚೆಗೆ ಅಂತಹಾ ಅನಾಹುತ ಮಾಡದಿರುವ ತಳಿಗಳನ್ನು ಹುಡುಕಲಾಗಿದೆ.  ಇದರಿಂದಾಗಿ ಮಸೂರ್‌ ದಾಲ್‌ ಕೂಡ “ಕೇಸರಿ” ಬಣ್ಣದ್ದಿರುವಾಗ ಸಹಜವಾದ ಗೊಂದಲ – ಅನುಮಾನ! ಅದೂ ದಕ್ಷಿಣದವರಿಗೆ!    

ಹಾಗಾದರೆ ಮಸೂರ್‌ ದಾಲ್‌ದು ಏನು ವಿಶೇಷತೆ? ಕಳೆದ ನಾಲ್ಕಾರು ವರ್ಷಗಳಿಂದ ನಾನೂ ಪ್ರತೀವರ್ಷ ದೆಹಲಿಗೆ ಅಥವಾ ಉತ್ತರ ಭಾರತದಕಡೆ ಹೋದಾಗಲೆಲ್ಲಾ ಮಸೂರ್‌ ದಾಲ್‌ ಖಾದ್ಯಗಳನ್ನು ಸವಿದು ಆನಂದಿಸಿದ್ದೆ. ಅದಕ್ಕಿರುವ ವಿಶೇಷತೆ ಎಂದರೆ ಕಾಳಾಗಲಿ-ಬೇಳೆಯಾಗಲಿ, ನೋಡಲು ಚಿಕ್ಕ ತೊಗರಿಯಂತಿದ್ದು, ಬೇಯುವ ಗುಣ ಮಾತ್ರ ಒಂದು ರೀತಿಯಲ್ಲಿ ಹೆಸರುಕಾಳು-ಬೇಳೆ ಅಥವಾ ಕಡಲೆಕಾಳು ಬೇಳೆಯಂತೆ! ತೊಗರಿಯಲ್ಲಿ ಸರಿಯಾಗಿ ಬೇಯಿಸಲಾಗದ ಕೆಲವು ತಳಿಗಳಿವೆ. ಹಾಗಾಗಿ ಈ ಅನುಕೂಲ ಜೊತೆಗೆ ಅದರಲ್ಲಿರುವ ಆಹಾರಾಂಶಗಳ ಗುಣ. ಕಾಳುಗಳು ಸಹಾ ತುಸು ಅಂಟು ಮೆತ್ತಿಕೊಂಡಂತೆ ಭಾಸವಾದರೂ ರುಚಿಕರವಾಗಿಯೂ ಅನುಕೂಲವಾದ ಬಳಕೆಯನ್ನು ಕೊಡುತ್ತವೆ. ಮಸೂರ್‌ ಚಳಿಯ ವಾತಾವರಣ ಹಾಗೂ ಒಣ ಹವೆ ಎರಡಕ್ಕೂ ಒಗ್ಗಿರುವ ಬೆಳೆ.

ಈ ಲೆಂಟಿಲ್‌-ಮಸೂರ್‌ ದಾಲ್‌ ಹಾಗೆ ನೋಡಿದರೆ ಭಾರತದ ಅತ್ಯಂತ ಹಳೆಯ ಲೆಗ್ಯೂಮ್‌ ಬೆಳೆ. ಕೃಷಿಯ ಪುರಾತತ್ವ ಅಧ್ಯಯನಕಾರರ ಪ್ರಕಾರ ಹಳೆಯ ಪ್ರಪಂಚ, ಅಂದರೆ -ಏಶಿಯಾ, ಯೂರೋಪ್‌, ಆಫ್ರಿಕಾ-ದ ಮೊದಲ ಕೃಷಿಯ ಎಂಟು ಕಾಳುಗಳಲ್ಲಿ ಮಸೂರ್‌ ಕೂಡ ಒಂದು. ನಮ್ಮ ಇತರೇ ಯಾವುದೇ ಬೇಳೆ-ಕಾಳಿಗಿಂತಲೂ ಹಳೆಯದು. ಮಸೂರ್‌ನ ಕೃಷಿ-ವಿಕಾಸದ ನೆಲೆಯನ್ನು  ಹಿಂದೂ ಖುಷ್‌ ಹಾಗೂ ಹಿಮಾಲಯ ಪರ್ವತಗಳ ಮಧ್ಯದ ಪ್ರದೇಶವೆಂದು ಅರಿಯಲಾಗಿದೆ. ಮೂಲತ ಲೆಂಟಿಲ್‌ ಬೆಳೆಯು ಲ್ಯವೆಂಟ್‌(Levant) ಎಂದು ಗುರುತಿಸುವ ಪೂರ್ವ ಮೆಡಿಟರೇನಿಯನ್‌ ಪ್ರದೇಶ. ಇದು ಈಗಿನ ಲೆಬನಾನ್‌, ಸಿರಿಯಾ, ಜೊರ್ಡಾನ್‌, ಇಸ್ರೇಲ್‌, ಪ್ಯಾಲೆಸ್ತೇನ್‌, ಜೊತೆಗೆ ಸ್ವಲ್ಪ ಭಾಗ ಟರ್ಕಿ ಹಾಗೂ ಇರಾಕ್‌ನ ಪರ್ಯಾಯ ದ್ವೀಪಪ್ರದೇಶಗಳನ್ನು ಒಳಗೊಂಡಿದೆ. ಲ್ಯವೆಂಟ್‌- ಪದವು ಸೂರ್ಯನು ಉದಯಿಸುವ ದಿಕ್ಕಿನ ಭೌಗೋಳಿಕ ಪ್ರದೇಶವನ್ನು ಸೂಚಿಸುವ ಅರಬ್‌ ಮೂಲದ ಪದ. ಒಂದು ರೀತಿಯಲ್ಲಿ ಹೊಸತನದ ವಿಕಾಸದ ನೆಲೆಯೆಂದು  ಖ್ಯಾತವಾದುದು. ಕೃಷಿಯ ಬೆಳೆಗಳಲ್ಲಿ ಅತ್ಯಂತ ಹಳೆಯ ನೆಲೆಯ ಪ್ರದೇಶವಾಗಿದೆ.  ಇಂದಿನ ಸಿರಿಯಾ ಪ್ರದೇಶದಲ್ಲಿ ಅತ್ಯಂತ ಹಳೆಯ ಕಾಳುಗಳ ಪಳೆಯುಳಿಕೆಗಳು ಸಿಕ್ಕಿವೆ, ಅವುಗಳು ಕನಿಷ್ಠ 11,000 -11,500 ವರ್ಷಗಳಿಗೂ ಹಿಂದೆ ಕೃಷಿಗೆ ಒಳಗಾದ ಬೆಳೆಗಳ ಪಳೆಯುಳಿಕೆಗಳು ಎಂದು ತಿಳಿದಿದೆ.

ಮಸೂರ್‌ ಸ್ವಕೀಯ ಪರಾಗಸ್ಪರ್ಶದಿಂದ ಕಾಳು ಕಟ್ಟುವ ವಾರ್ಷಿಕ ಬೆಳೆ. ಮೂಲತಃ ಚಳಿಯ ಬೆಳೆ, 80 ದಿನಗಳಿಂದ 110 ದಿನಗಳಲ್ಲಿ ಜೀವನ ಚಕ್ರವನ್ನು ಪೂರೈಸುತ್ತದೆ. ಇದು ನಮ್ಮಲ್ಲೂ ಬೆಳೆಯುವ ಕಡಲೆ ಬೆಳೆಯನ್ನು ಹೋಲುವ ಬೆಳೆ. ಕಡಲೆ, ಮಸೂರ್‌ ಹಾಗೂ ಕೇಸರಿ ಮೂರೂ ಒಂದು ಅಥವಾ ಎರಡು ಕಾಳುಗಳನ್ನು ಹೊಂದಿರುವ ಕಾಯಿಗಳನ್ನು ಬಿಡುತ್ತವೆ. ವಾತಾವರಣದ ಹೊಂದಾಣಿಕೆಯಲ್ಲಿ ಮೂರೂ ಬೆಳೆಗಳಿಗೂ ಸಾಮ್ಯತೆಯಿದೆ. ಚಳಿಗಾಲದ ಇಬ್ಬನಿಯನ್ನು ಪ್ರೀತಿಸುವ ಬೆಳೆಗಳಿವು.

ನಾವು ಬಳಸುವ ಬೇಳೆ-ಕಾಳಿಗೆ ಹೋಲಿಸಿದರೆ ಮಸೂರ್‌ ಸುಲಭವಾಗಿ ಬೇಯಿಸಬಲ್ಲ ಹಾಗೂ ಹೆಚ್ಚು ಆಹಾರಾಂಶಗಳನ್ನೂ ಹೊಂದಿರುವ ಬೆಳೆ. ಎಲ್ಲಾ ಬೇಳೆ-ಕಾಳುಗಳಲ್ಲಿಯೂ ಇರುವ ಪಾಲಿ ಫೀನಾಲ್‌ಗಳು, ಅಲ್ಕಲಾಯ್ಡ್‌ಗಳು, ಪ್ರೊಟೀನ್‌, ಲೆಕ್ಟಿನ್‌ಗಳು, ಆಕ್ಸಲೇಟ್‌ಗಳು ಈ ಕಾಳಿನಲ್ಲೂ ಗಣನೀಯ ಪ್ರಮಾಣದಲ್ಲಿವೆ. ಇದರ ಕಾಳಿನ ಸಿಪ್ಪೆಯೂ ಇತರೇ ಲೆಗ್ಯೂಮ್‌ ಕಾಳುಗಳಂತೆಯೇ ಹೆಚ್ಚು ಪಾಲಿಫೀನಾಲ್‌ಗಳನ್ನು ಹೊಂದಿದೆ. ಇದರಿಂದಾಗಿ ಇದರ ಅಂಟಾಕ್ಸಿಡೆಂಟ್‌ ಗುಣವೂ ಹೆಚ್ಚು.

ಮಸೂರ್‌ ದಾಲ್‌ನ ವಿಶೇಷತೆ ಎಂದರೆ  ತಕ್ಷಣವೇ ಜೀರ್ಣವಾಗುವ ಸಕ್ಕರೆ-ಪಿಷ್ಠವನ್ನು ಕಡಿಮೆ ಹೊಂದಿದ್ದು, ನಿಧಾನವಾಗಿ ಜೀರ್ಣವಾಗುವ ಸಕ್ಕರೆ-ಪಿಷ್ಠವನ್ನು ಹೆಚ್ಚಾಗಿ ಹೊಂದಿದೆ. ಇದರಿಂದಾಗಿ ಇದು ಮಧುಮೇಹಿಗಳಿಗೆ ಒಳ್ಳೆಯ ಕಾಳು-ಬೇಳೆ. ಅಲ್ಲದೆ ಇದರಲ್ಲಿ ಒಂದಷ್ಟು ಸಕ್ಕರೆಯ ಅಂಶವು ಜೀರ್ಣವಾಗದೆ ತಪ್ಪಿಸಿಕೊಳ್ಳುತ್ತದೆ. ಅದನ್ನು ರೆಸಿಸ್ಟೆಂಟ್‌ ಸಕ್ಕರೆ ಎನ್ನುತ್ತಾರೆ. ಒಂದಷ್ಟು ಪಿಷ್ಠವು ಈ ಕಾಳುಗಳನ್ನು ಬೇಯಿಸಿದಾಗ ಬಿಡುಗಡೆಗೊಂಡು ಕಾಳಿನ ಸುತ್ತಾ ಗೋಂದಿನಂತೆ-ಅಂಟಿನಂತೆ ಕಾಣಬರುತ್ತದೆ. ಇದೊಂದು ಬಗೆಯ ವಿಶೇಷ ಸ್ಪರ್ಶ ಹಾಗೂ ರುಚಿಯನ್ನು ಇತರೇ ಕಾಳು-ಬೇಳೆಗಳಿಗೆ ಹೋಲಿಸಿದರೆ ಕಾಣಬಹುದು.

ಮಸೂರ್ ದಾಲ್‌ – ಕೇಸರಿಬೇಳೆಯಲ್ಲ! ನಮ್ಮ ಇತರೇ ಕಾಳು-ಬೇಳೆಯಂತೆಯೇ! ಜೊತೆಗೆ ಕಡಿಮೆ ಸಕ್ಕರೆ-ಪಿಷ್ಠವನ್ನು ಬಿಡುಗಡೆ ಮಾಡುವ ಬೇಳೆ-ಕಾಳು. ಬೇಯಿಸುವುದೂ ಸುಲಭ. ಉತ್ತಮವಾದ ಪ್ರೊಟೀನ್‌ ಇರುವ ಕಾಳು. ಪ್ರೊಟೀನ್‌ ಮತ್ತು ಆಹಾರದ ಶಕ್ತಿಯ ಹೆಚ್ಚಿನ ಅನುಪಾತ ಇರುವ ಬೇಳೆ-ಕಾಳು. ಇದು ಸೊಯಾಬೀನ್‌ ನಂತರದ ಸ್ಥಾನವನ್ನು ಪಡೆದ ಕಾಳು. ಹಾಗಾಗಿ ಇದರ ಆಹಾರ ಬೇಡಿಕೆ ಹೆಚ್ಚುತ್ತಿದ್ದು, ಆರೋಗ್ಯದ ನೆರವಿನ ವಿಶೇಷ ಬೆಳೆಯಾಗಿದೆ. ಇದು ಸುಲಭ ಬೆಲೆ ಕೂಡ.

 ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್‌

This Post Has One Comment

  1. ಡಾ ರುದ್ರೇಶ್ ಅದರಂಗಿ

    ನಿಜಕ್ಕೂ ಒಳ್ಳೆಯ ಉಪಯುಕ್ತ ಮಾಹಿತಿ ನೀಡಿರುವಿರಿ ಧನ್ಯವಾದಗಳು ಸರ್

Leave a Reply