“My Very Educative Mother Just Shows Us Nine Planets”. ಈ ವಾಕ್ಯ ಸದಾ ನನ್ನ ನೆನಪಿನಲ್ಲಿ ಹಸಿರಾಗಿರುತ್ತದೆ. ಇದು ನಮ್ಮ ಸೂರ್ಯಮಂಡಲದ ಗ್ರಹಗಳನ್ನು ಸುಲಭ ರೀತಿಯಲ್ಲಿ ಜ್ಞಾಪಕದಲ್ಲಿಟ್ಟುಕೊಳ್ಳಲು ನನ್ನ ಪ್ರೌಢಶಾಲೆಯ ವಿಜ್ಞಾನ ಬೋಧಕರಾದ ಗೀತಾ ಟೀಚರ್ ಹೇಳಿಕೊಟ್ಟದ್ದು. ನಮ್ಮ ಅಮ್ಮ ಸೂರ್ಯಮಂಡಲದ ಒಂಭತ್ತು ಗ್ರಹಗಳನ್ನು ತೋರಿಸಿದರು ಎನ್ನುವುದೇ ಒಂದು ಪುಳಕ. ಗಮನಿಸಿ ಈ ವಾಕ್ಯದ ಪ್ರತಿ ಪದದ ಪ್ರತಿ ಅಕ್ಷರ ಒಂದೊಂದು ಗ್ರಹವನ್ನು ತೋರಿಸುತ್ತದೆ (M – Mercury, V-Venus, E-Earth, M-Mars, J-Jupiter, S- Saturn, U- Uranus, P- Pluto …. 2006 ರ ನಂತರ ಪ್ಲೂಟೋ ವನ್ನು ಸೂರ್ಯಮಂಡಲದ ಗ್ರಹಗಳ ಪಟ್ಟಿಯಿಂದ ತೆಗೆಯಲಾಗಿದೆ. ಆದರೆ ನಾವು ಹೈಸ್ಕೂಲ್ ಓದುವ ಕಾಲದಲ್ಲಿ ಅದು ನಮ್ಮ ನವಗ್ರಹಗಳಲ್ಲಿ ಒಂದಾಗಿತ್ತು). ಈಗ ಸೂರ್ಯಮಂಡಲದ ಗ್ರಹಗಳನ್ನು ಜ್ಞಾಪಿಸಿಕೊಳ್ಳಬೇಕಾದ ಅಗತ್ಯವೇನು? ಕಳೆದ ಕೆಲವು ವಾರಗಳ ಹಿಂದೆ ಇದೇ ಪುಸ್ತಕಯಾನದಲ್ಲಿ ಜಯಂತ್ ವಿ. ನಾರ್ಳಿಕರ್ ರವರ “ಸೈಂಟಿಫಿಕ್ ಎಜ್” ಪರಿಚಯಿಸಿದ್ದೆ. ಅದರಲ್ಲಿ ಅವರು ’ಮೂಲ ವಿಜ್ಞಾನವನ್ನು ಅರಿಯಬೇಕಾದರೆ ಮೊದಲು ಅಸ್ಟ್ರಾನಮಿಯನ್ನು ಓದಿ, ಅರ್ಥೈಸಿಕೊಳ್ಳಿ” ಎಂದು ಪ್ರತಿಪಾದಿಸಿದ್ದರು. ಹಾಗಾಗಿ ಅಸ್ಟ್ರಾನಮಿಯನ್ನು ಸುಲಭ ರೀತಿಯಲ್ಲಿ ಅರ್ಥೈಸುವ ಮತ್ತು ಮುಂದಿನ ಕುತೂಹಲಗಳಿಗೆ ಒಂದು ಅದ್ಭುತ ಪ್ರವೇಶಿಕೆಯನ್ನು ಕೊಡುವ ಪುಸ್ತಕಗಳನ್ನು ಹುಡುಕುತ್ತಿದ್ದಾಗ ನನ್ನ ಕಣ್ಣಿಗೆ ಬಿದ್ದದ್ದು ಡಾ. ಮಣಿಭೌಮಿಕ್ ರವರ “ಕಾಸ್ಮಿಕ್ ಡಿಟೆಕ್ಟಿವ್”. ಇಂಗ್ಲಿಷ್ ನಲ್ಲಿರುವ ಮೂಲಪುಸ್ತಕವನ್ನು ಅದೇ ಹೆಸರಿನಲ್ಲಿ 2009 – “ಅಂತರರಾಷ್ಟ್ರೀಯ ಖಗೋಳ ವಿಜ್ಞಾನ ವರ್ಷ” ದಂದು ಡಾ. ಕೆ. ಪುಟ್ಟಸ್ವಾಮಿಯವರು ಅಭಿನವ ಪ್ರಕಾಶನದ ಅಡಿಯಲ್ಲಿ ಕನ್ನಡಕ್ಕೆ ತಂದಿದ್ದಾರೆ. ಇಂದು ಪುಸ್ತಕಯಾನದಲ್ಲಿ ಖಗೋಳದ ಪತ್ತೆದಾರಿಕೆಯ ಪುಸ್ತಕ “ಕಾಸ್ಮಿಕ್ ಡಿಟೆಕ್ಟಿವ್ “ ಅನ್ನು ಅವಲೋಕಿಸೋಣ. (ಓದುಗರ ಗಮನಕ್ಕೆ: ನನ್ನ ಈ ಬರಹಕ್ಕೆ ಡಾ. ಕೆ. ಪುಟ್ಟಸ್ವಾಮಿಯವರು ಭಾಷಾಂತರಿಸಿರುವ ಕನ್ನಡ ಪುಸ್ತಕವೇ ಆಧಾರ).
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿರುವ ಡಾ. ಮಣಿಲಾಲ್ ಭೌಮಿಕ್ ರವರು ಭಾರತದ ಬಂಗಾಳದ ಮೂಲೆಯ ಕುಗ್ರಾಮವೊಂದರಲ್ಲಿ ಜನಿಸಿ, ಕ್ಷಾಮಢಾಮರ, ಸಾಂಕ್ರಾಮಿಕರೋಗಗಳ ಹಾವಳಿಯಲಿ ಮಿಂದು, ಬಡತನ ಬೇಗೆಯಲಿ ಬೆಂದು, ಖರಗಪುರದ ಐಐಟಿಯಿಂದ ಮೊಟ್ಟಮೊದಲ ಪಿ,ಎಚ್.ಡಿ. ಪದವಿ ಪಡೆದ ವಿದ್ಯಾರ್ಥಿ. ಪ್ರತಿಷ್ಠಿತ ಸ್ಲೋ ಆನ್ ಫೌಂಡೇಷನ್ ಫೆಲೋಷಿಪ್ ಪಡೆದು ಲಾಸ್ ಏಂಜಲೀಸ್ ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಡಾಕ್ಟರಲ್ ಸಂಶೋಧನೆ ನಡೆಸಿದರು. ’ಲಸಿಕ್’ ನೇತ್ರಚಿಕಿತ್ಸೆಯು ಸಾಧ್ಯವಾಗಲು ಕಾರಣವಾದ ಲೇಸರ್ ತಂತ್ರಜ್ಞಾನದ ಸಹ ಸಂಶೋಧಕರಾಗಿ ಅಂತರರಾಷ್ಟ್ರೀಯ ಪ್ರಸಿದ್ಧಿ ಮತ್ತು ಯಶಸ್ಸನ್ನು ಪಡೆದರು. ಭೌಮಿಕ್ ರವರು ಅಧ್ಯಯನ ಮಾಡಿದ ಐ.ಐ.ಟಿ. ಅವರಿಗೆ ಜೀವಮಾನ ಶೈಕ್ಷಣಿಕ ಸಾಧನೆಗಾಗಿ ಡಿ.ಎಸ್.ಸಿ. ಗೌರವ ಪದವಿಯನ್ನು ಪ್ರದಾನ ಮಾಡಿದೆ. ಭಾರತ ಸರ್ಕಾರ “ಪದ್ಮಶ್ರೀ” ಪ್ರಶಸ್ತಿ ನೀಡಿ ಗೌರವಿಸಿದೆ.
ಡಾ. ಕೆ. ಪುಟ್ಟಸ್ವಾಮಿ ರವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಮತ್ತು ಕನ್ನಡ ವಿಶ್ವವಿದ್ಯಾನಿಲಯದಿಂದ ಡಿ.ಲಿಟ್ ಪದವಿ ಪಡೆದಿದ್ದಾರೆ. ಪತ್ರಕರ್ತರಾಗಿ ವೃತ್ತಿಜೀವನ ಆರಂಭಿಸಿದ ಪುಟ್ಟಸ್ವಾಮಿರವರು ನಂತರ ಕರ್ನಾಟಕ ಸರ್ಕಾರದ ವಾರ್ತಾಇಲಾಖೆ, ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ, ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಸೇವೆಸಲ್ಲಿಸಿ ಈಗ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಪುಟ್ಟಸ್ವಾಮಿಯವರು ಜೀವ ಸಂಕುಲಗಳ ಉಗಮ, ಜೀವಜಾಲ, ಭುವನದ ಬೆಡಗು, ಸಿನಿಮಾಯಾನ, ಜನತೆಯ ರಾಜ್ಯ, ಆಧುನಿಕ ವಿಜ್ಞಾನಕ್ಕೆ ಗಾಂಧಿಯ ಸವಾಲು, ಮುಂತಾದ ಕೃತಿಗಳನ್ನು ರಚಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ಪ್ರತಿಷ್ಠಿತ ಸ್ವರ್ಣಕಮಲ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
’ಕಾಸ್ಮಿಕ್ ಡಿಟೆಕ್ಟೀವ್’ ಪುಸ್ತಕ ತೆರೆದುಕೊಳ್ಳುವುದೇ ’ನಕ್ಷತ್ರಗಳ ಆಕಾಶ’ ದಿಂದ. ಸೂರ್ಯ ಪಶ್ಚಿಮಕ್ಕೆ ಸರಿದು ಕತ್ತಲಾಗುತ್ತಿದ್ದಂತೆ ಆಕಾಶದಲ್ಲಿ ಮಿನುಗುವ ನಕ್ಷತ್ರಗಳನ್ನು ಕಣ್ತುಂಬಿಕೊಂಡು ಆನಂದಿಸಿದ ಬಾಲ್ಯದಿನಗಳ ನೆನಪು ಇಲ್ಲಿ ಮರುಕಳಿಸಿದೆ. ನಕ್ಷತ್ರಗಳು ತುಂಬಿದ ಆಕಾಶದಲ್ಲಿ ಹರಡಿಕೊಂಡಿರುವ ಕಿನ್ನರಕಥೆಗಳನ್ನು ಅಜ್ಜಿಯ ಬಾಯಿಂದ ಕೇಳಿದ ನೆನಪುಗಳನ್ನು, ಎಣಿಸಿದ ನಕ್ಷತ್ರಗಳ ಲೆಕ್ಕತಪ್ಪಿದ ರೋಮಾಂಚನವನ್ನು ಹಂಚುತ್ತಲೇ ಮಣಿಭೌಮಿಕ್ ರವರು, “ ರಾತ್ರಿಯ ಆಗಸದ ಕಪ್ಪು ಭಿತ್ತಿಯಲ್ಲಿ ಹೊಳೆವ ಆ ಅಸಂಖ್ಯಾತ ನಕ್ಷತ್ರಗಳು ಎಲ್ಲಿಂದ ಬಂದವು? ಅವು ಎಂದೆಂದಿಗೂ ಹಾಗೆಯೇ ಹೊಳೆಯುತ್ತಿರುತ್ತವೆಯೇ? ಅಥವಾ ಮನುಷ್ಯರಂತೆ ಅವುಗಳಿಗೂ ಹುಟ್ಟು, ಬೆಳವಣಿಗೆ, ಸಾವು ಎಂಬುದಿದೆಯೇ? ಅವು ನಮ್ಮಿಂದ ಎಷ್ಟು ದೂರದಲ್ಲಿದೆ? ಈ ಪ್ರಶ್ನೆಗಳಿಗೆ ಉತ್ತರಕ್ಕಾಗಿ ನಕ್ಷತ್ರಗಳ ಬಳಿ ಹೋಗಬೇಕೆ? ಅಥವಾ ಉತ್ತರ ತಿಳಿದಿರುವವರು ನಮ್ಮಲ್ಲಿಯೇ ಇರಬಹುದೇ?” ಎನ್ನುವ ಪ್ರಶ್ನೆಗಳನ್ನು ನಮಗೆ ಹಂಚುತ್ತಾ ಖಗೋಳ ಪತ್ತೆದಾರಿಕೆಗೆ ನಮ್ಮನ್ನು ಅಣಿಗೊಳಿಸುತ್ತಾರೆ. ಇನ್ನೂ ಮುಖ್ಯವಾಗಿ “ಖಗೋಳ ವಿಶ್ವದಲ್ಲಿರುವ ನಕ್ಷತ್ರ, ಗ್ರಹ, ಆಕಾಶಕಾಯಗಳಂತೆ ನಾವು ಜೀವಿಗಳು ಸಹ ನಕ್ಷತ್ರದ ಧೂಳಿನಿಂದಲೇ ಆಗಿರುವುದು ಸತ್ಯ. ವಿಶ್ವವು ವಿಚಿತ್ರವೆಂಬಂತೆ, ಅಪರಿಚಿತವೆಂಬಂತೆ ಅಗಾಧ ಮತ್ತು ಸಂಕೀರ್ಣವೆಂಬಂತೆ ಕಾಣಬಹುದು. ಇತರ ಭಾಗಗಳಂತೆ ನಾವು ಸಹ ಒಂದು ಅವಿಭಾಜ್ಯ ಅಂಗ. ನಾವಿಲ್ಲದ ವಿಶ್ವವು ಅಪೂರ್ಣ. ವಿಶ್ವವನ್ನು ಅವಲೋಕಿಸುವವರನ್ನು ಅದರಿಂದ ಬೇರ್ಪಡಿಸುವುದು ಸಾಧ್ಯವಿಲ್ಲ” ಎಂದು ನಮ್ಮ ಕುತೂಹಲವನ್ನು ಕೆರಳಿಸಿ, ನಮ್ಮನ್ನು ಪುಸ್ತಕದೊಳಗೆ ಎಳೆದೊಯ್ದು, ನಮ್ಮ ಕಣ್ಣ ಮುಂದೆ ಇರುವ ಸಾಕ್ಷ್ಯಗಳಿಂದ ಖಗೋಳ ಪತ್ತೆದಾರಿಕೆಯನ್ನು ಆರಂಭಿಸೋಣ ಎಂಬ ಮನೋಭಾವವನ್ನು ಉತ್ತೇಜಿಸುತ್ತಾರೆ.
PC: Natioanl Geography Kids
ಮೊದಲಿಗೆ ನಮ್ಮನ್ನು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ, “ಈ ನಕ್ಷತ್ರಗಳ ಲೋಕದಲ್ಲಿ ನಾವೆಲ್ಲಿದ್ದೇವೆ?” ಎಂಬುದು. ನಮಗೆಲ್ಲರಿಗೂ ತಿಳಿದಿರುವ ಹಾಗೆ ನಾವಿರುವುದು ಸೂರ್ಯಮಂಡಲದಲ್ಲಿ. ಈ ಸೂರ್ಯಮಂಡಲ ಆಕಾಶಗಂಗೆ ಎನ್ನುವ ಗ್ಯಾಲಕ್ಸಿಯಲ್ಲಿದೆ ಎಂಬುದು. ಹಾಗಾದರೆ ನಮ್ಮ ಸುತ್ತ ಎಷ್ಟು ಗ್ಯಾಲಕ್ಸಿಗಳಿವೆ?. ಈ ವಿಶ್ವದಲ್ಲಿ ಗ್ಯಾಲಕ್ಸಿಗಳ ಹೊರತಾಗಿ ಮತ್ತೇನಿವೆ? ಈ ಪ್ರಶ್ನೆಗಳಿಗೆ ಉತ್ತರವೆಂಬಂತೆ “ನಕ್ಷತ್ರಗಳಲ್ಲಿ ನಮ್ಮ ಮನೆ” ಅನ್ನುವ ಅಧ್ಯಾಯದಲ್ಲಿ ಹಬಲ್ ಸ್ಪೇಸ್ ಟೆಲಿಸ್ಕೋಪ್, ಕೋಬೆ(COBE- Cosmic Background Explorer) ಉಪಗ್ರಹ ಹಾಗೂ WMAP( Wilkinson Microwave Anisotropy Probe) ಟೆಲಿಸ್ಕೋಪ್ ಗಳ ದತ್ತಾಂಶಗಳ ಆಧಾರದಲ್ಲಿ, “ನಮ್ಮ ವಿಶ್ವದಲ್ಲಿ ಸುಮಾರು 125 ಬಿಲಿಯನ್ ಗ್ಯಾಲಕ್ಸಿಗಳಿವೆ. ಅದರಲ್ಲಿ ಆಕಾಶಗಂಗೆ(Milky way) ಒಂದು. ಆಕಾಶಗಂಗೆಯ ಉದ್ದ 1,00,000 ಬೆಳಕಿನ ವರ್ಷ(ಜ್ಯೋತಿರ್ವರ್ಷ)ಗಳು. ಆಕಾಶಗಂಗೆಯ ಮಧ್ಯಭಾಗದಿಂದ ಮೂರನೇ ಎರಡರಷ್ಟು ದೂರದಲ್ಲಿ 200 ಬಿಲಿಯನ್ ಗಳಿಗೂ ಹೆಚ್ಚು ನಕ್ಷತ್ರಗಳಿವೆ. ಈ ನಕ್ಷತ್ರರಾಶಿಯಲ್ಲಿ ಸೂರ್ಯನೂ ಒಂದು. ಅಂತಹ ಸೂರ್ಯನ ಸುತ್ತ ಪರಿಭ್ರಮಿಸುತ್ತಿರುವ ಗ್ರಹವೊಂದರಲ್ಲಿ ನಾವು ಬದುಕುತ್ತಿದ್ದೇವೆ” ಎನ್ನುವುದನ್ನು ಈ ಪುಸ್ತಕದಲ್ಲಿ ಕಾಣಬಹುದಾಗಿದೆ. ಈ ಜ್ಞಾನವನ್ನು ನಿಖರವಾಗಿ ಅರ್ಥಮಾಡಿಸಲು ಖಗೋಳ ವಿಜ್ಞಾನದ ಅಳತೆಗೋಲುಗಳಾದ ಬೆಳಕಿನವೇಗ, ಜ್ಯೋತಿರ್ವರ್ಷ, ಅಸ್ಟ್ರಾನಾಮಿಕಲ್ ಯೂನಿಟ್ ಮುಂತಾದ ಪದಗಳ ಸವಿವರವನ್ನೂ ಸಹ ಇಲ್ಲಿ ಕಾಣಬಹುದು. ಜೊತೆಗೆ ನಕ್ಷತ್ರ, ಗ್ಯಾಲಕ್ಷಿಗಳ ಜೊತೆಗೆ ವಿಶ್ವದಲ್ಲಿರುವ ಇನ್ನಿತರ ವಿದ್ಯಮಾನಗಳಾದ ನೆಬುಲ(Nebula), ಬಿಳಿ ಕುಬ್ಜ (White Dwarf), ಸೂಪರ್ ನೋವಾ(Super Nova), ನ್ಯೂಟ್ರಾನ್ ನಕ್ಷತ್ರಗಳು, ಕಪ್ಪು ಕುಳಿ(Black Hole), ಕಪ್ಪು ವಸ್ತು(Dark Matter), ಕಪ್ಪು ಚೈತನ್ಯ(Dark Energy), ಕ್ವಾಸಾರ್ (Quasar) ಗಳ ವಿವರಗಳು ಅದರ ಪ್ರಕ್ರಿಯೆಗಳೊಂದಿಗೆ ಇಲ್ಲಿ ದಾಖಲಾಗಿರುವುದು, ಓದುಗರ ಕುತೂಹಲವನ್ನು ಕೆರಳಿಸಿ ಪತ್ತೆದಾರಿಕೆಯನ್ನು ಮುಂದುವರೆಸುತ್ತದೆ.
ಜೊತೆಗೆ ನಮ್ಮ ಪತ್ತೆಗಾರಿಕೆಯ ಮನಸ್ಸಿಗೆ ಕೆಲಸ ಕೊಡಲು ಇಲ್ಲಿ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಮೊದಲಿಗೆ, ನಮ್ಮ ಸೂರ್ಯನ ಹಾಗೆಯೇ ಎಲ್ಲಾ ನಕ್ಷತ್ರಗಳ ಮಂಡಲದಲ್ಲಿ ತಲಾ ಸರಾಸರಿ ಆರು ಗ್ರಹಗಳಿದ್ದು, ಹತ್ತಾರು ಉಪಗ್ರಹಗಳಿದ್ದರೆ, ಬಾಹ್ಯಾಕಾಶದಲ್ಲಿ ಸುಮಾರು 125 ಬಿಲಿಯನ್ ಗ್ಯಾಲಕ್ಸಿಗಳಲ್ಲಿ ಸರಾಸರಿ 100 ಬಿಲಿಯನ ನಕ್ಷತ್ರಗಳಿವೆಯೆಂದು ಕೊಂಡರೆ, ಒಟ್ಟು ಬ್ರಹ್ಮಾಂಡದಲ್ಲಿ ಎಷ್ಟು ಗ್ರಹಗಳಿರಬಹುದು, ಉಪಗ್ರಹಗಳಿರಬಹುದು? ಕುತೂಹಲವಿದೆಯಲ್ಲವೇ? ನಮ್ಮ ಮೆದುಳಿಗೆ ಕೆಲಸ ಸಿಕ್ಕಿತಲ್ಲವೇ? ಬನ್ನಿ ಮುಂದುವರೆಯೋಣ.
ಭೂಮಿಯ ಮೇಲಿನ ಜೀವಿಗಳಿಗೆ ಹುಟ್ಟು ಸಾವುಗಳಿರುವಂತೆ ನಕ್ಷತ್ರಗಳಿಗೂ ಹುಟ್ಟು ಸಾವುಗಳಿವೆಯೇ? ಈ ಪ್ರಶ್ನೆಗೆ ಉತ್ತರವೆಂಬಂತೆ ಈ ಹೊತ್ತಿಗೆಯು ಪುರಾವೆಗಳೊಂದಿಗೆ ಹೀಗೆ ಮುಂದುವರೆಯುತ್ತಾರೆ. “ನಕ್ಷತ್ರ ರೂಪುಗೊಳ್ಳಲು ಬೇಕಾಗಿರುವ ಮೂಲ ಕಚ್ಚಾವಸ್ತುಗಳಾದ ಅನಿಲ ಮತ್ತು ಧೂಳು ಗುರುತ್ವದ ಬಲದಿಂದ ಸಾಂದ್ರತೆಗೊಂಡು ಆದಿ ನಕ್ಷತ್ರ(Protostars)ಗಳು ರೂಪುಗೊಳ್ಳುತ್ತವೆ. ಆ ಶಾಖದುಂಡೆಯು ಸಂಕುಚಿತಗೊಳ್ಳುತ್ತಾ ಶಾಖದ ಪ್ರಮಾಣ ವೃದ್ಧಿಸುತ್ತದೆ. ಅಂತಿಮವಾಗಿ ಶಾಖದುಂಡೆಯ ತಿರುಳಿನಲ್ಲಿ ಶಾಖವು ಹತ್ತು ಮಿಲಿಯನ್ ಡಿಗ್ರಿ ಸೆಲ್ಸಿಯಸ್ ನಷ್ಟು ಮುಟ್ಟಿದಾಗ ಜಲಜನಕವು ಹೀಲಿಯಂ ಆಗಿ ಪರಿವರ್ತನೆಯಾಗುವ ನ್ಯೂಕ್ಲಿಯರ್ ಫ್ಯೂಷನ್(Nuclear Fusion)ಆರಂಭವಾಗುತ್ತದೆ. ಈ ಕ್ರಿಯೆ ಆರಂಭವಾದ ಕೂಡಲೇ ಪ್ರಕಾಶಮಾನವಾದ ಬೆಳಕಿನ ರೂಪದಲ್ಲಿ ಶಕ್ತಿ ಬಿಡುಗಡೆಯಾಗುತ್ತದೆ. ಹೀಗೆ ನಕ್ಷತ್ರವೊಂದು ಜನ್ಮತಾಳುತ್ತದೆ. ನಕ್ಷತ್ರದ ಗಾತ್ರವು ಅದು ರೂಪುಗೊಳ್ಳುವಾಗ ಸಂಗ್ರಹಿಸುವ ಧೂಳು ಮತ್ತು ಅನಿಲದ ಪ್ರಮಾಣವನ್ನು ಆಧರಿಸಿದೆ. ನಮ್ಮ ಸೂರ್ಯ ನಕ್ಷತ್ರವಾಗಿ ಬೆಳೆಯಲು ತೆಗೆದುಕೊಂಡ ಅವಧಿ ಸುಮಾರು 30 ಮಿಲಿಯನ್ ವರ್ಷಗಳು. ಅತಿ ಭಾರವಾದ ನಕ್ಷತ್ರಗಳು ವೇಗವಾಗಿ ಸಂಕುಚಿತಗೊಂಡು ಬೇಗನೆ ನಕ್ಷತ್ರವಾಗಿ ರೂಪುಗೊಳ್ಳುತ್ತವೆ. ಸೂರ್ಯನಿಗಿಂತಲೂ ಐದು ಪಟ್ಟು ಕಡಿಮೆ ದ್ರವ್ಯರಾಶಿಯ ನಕ್ಷತ್ರಗಳು ಹುಟ್ಟಲು ಒಂದು ಬಿಲಿಯನ್ ವರ್ಷ ಬೇಕಾಗುತ್ತದೆ”.
ಒಂದು ನಕ್ಷತ್ರವಾಗಿ ಉಳಿಯುವುದೆಂದರೆ , ಕುಗ್ಗುವ ಮತ್ತು ಹಿಗ್ಗುವ ನಡುವಿನ ಸಮತೋಲನ. ಒಂದೆಡೆ ಗುರುತ್ವವು ಎಲ್ಲವನ್ನೂ ನಕ್ಷತ್ರದ ಕೇಂದ್ರಕ್ಕೆ ಸೆಳೆದರೆ, ಕೇಂದ್ರಭಾಗದಲ್ಲಿರುವ ನ್ಯೂಕ್ಲಿಯರ್ ಕುಲುಮೆಯಲ್ಲಿ ನಡೆಯುವ ನ್ಯೂಕ್ಲಿಯರ್ ಫ್ಯೂಷನ್ ಪ್ರತಿಯೊಂದನ್ನು ಹೊರಗೆ ತಳ್ಳುತ್ತಿರುತ್ತದೆ. ಈ ಎರಡೂ ಬಲಗಳು ಸಮತೋಲನಕ್ಕೆ ಬಂದಾಗಷ್ಟೇ ಸ್ಥಿರ ನಕ್ಷತ್ರ ರೂಪುಗೊಳ್ಳುತ್ತದೆ. ನಕ್ಷತ್ರದಲ್ಲಿ ಸಾಕಷ್ಟು ಜಲಜನಕ ಇಂಧನ ಇರುವವರೆಗೆ ಈ ಸಮತೋಲನವನ್ನು ಅದು ಕಾಯ್ದುಕೊಳ್ಳುತ್ತದೆ. ಇರುವ ಎಲ್ಲ ಜಲಜನಕವು ಹೀಲಿಯಂ ಆಗಿ ಪರಿವರ್ತನೆಗೊಂಡಾಗ, ನಕ್ಷತ್ರ ಕ್ಷಯಿಸಲಾರಂಭಿಸುತ್ತದೆ. ಗುರುತ್ವ ಶಕ್ತಿಯ ಬಲ ಮೇಲುಗೈ ಸಾಧಿಸುತ್ತದೆ. ಅಂತಿಮವಾಗಿ ಗುರುತ್ವ ಈ ಹೋರಾಟದಲ್ಲಿ ಜಯಗಳಿಸುತ್ತದೆ. ನಕ್ಷತ್ರ ಯಾವುದಾದರೊಂದು ವಿಧಾನದಲ್ಲಿ ಕುಸಿಯುತ್ತದೆ. ಈ ಪ್ರಕ್ರಿಯೆಗಳೇ ಬಿಳಿಕುಬ್ಜ(ಸಣ್ಣ ನಕ್ಷತ್ರದ ಸಾವು), ಸುಪರ್ ನೋವಾ (ದೊಡ್ಡ ನಕ್ಷತ್ರದ ಸಾವು), ನ್ಯೂಟ್ರಾನ್ ನಕ್ಷತ್ರಗಳು, ಕಪ್ಪು ಕುಳಿಗಳು ಮತ್ತು ಕ್ವಾಸಾರ್ ಗಳು. ಈ ಪ್ರಕ್ರಿಯೆಗಳಲ್ಲಿ ಸತ್ತ ಒಂದು ನಕ್ಷತ್ರದ ಸ್ಥಾನದಲ್ಲಿ ಅನೇಕ ನಕ್ಷತ್ರಗಳು ಹುಟ್ಟುತ್ತವೆ. ಈ ಪ್ರಕ್ರಿಯೆಗಳ ವಿವರವನ್ನು ತಿಳಿಯಲು ಈ ಕಾಸ್ಮಿಕ್ ಡಿಟೆಕ್ಟಿವ್ ಪುಸ್ತಕವನ್ನು ಓದಬೇಕು.
ಹಾಗಾದರೆ “ವಿಶ್ವ” ಎಂದರೇನು? ಅಥವಾ ಬ್ರಹ್ಮಾಂಡ ಎಂದರೇನು? ಲ್ಯಾಟಿನ್ ನಲ್ಲಿ ಯೂನಸ್(Unus) ಎಂದರೆ ಏಕ ಎಂದೂ, ವರ್ಟಿಯರ್(vertere)ಎಂದರೆ ಮಾರ್ಪಡುವ ಎಂದು ಅರ್ಥ. ಒಟ್ಟಾರೆ ಯೂನಿವರ್ಟೀಯರ್ ಅಥವಾ ಯೂನಿವರ್ಸ್ ಎಂದರೆ ’ಏಕವಾಗಿ ಮಾರ್ಪಡುಗೊಳ್ಳು’ ಎಂದರ್ಥ. ವರ್ಸ್(verse) ಎಂದರೆ ’ಲಯಬದ್ಧ’ವಾದ ಪದ್ಯಪಂಕ್ತಿ ಅಥವಾ ಲಯಬದ್ಧವಾಗಿ ಹೇಳುವ ಶ್ಲೋಕ ಎಂದರ್ಥ. ಯೂನಿವರ್ಸ್ ಅಥವಾ ವಿಶ್ವವು ನಿಜವಾಗಿ ಲಯಬದ್ಧವಾಗಿ ರಚನೆಗೊಂಡ ಒಂದು ಮಹಾಕಾವ್ಯ. ವಿಶ್ವವು ಪ್ರತಿಯೊಂದನ್ನು ಒಳಗೊಂಡಂತೆಯೇ ವಿಕಾಸವಾಗುತ್ತಿದೆ ಎನ್ನುವುದು ಸೂಕ್ತ.
PC:NewScientist.com
ಇದಕ್ಕೆ ಪೂರಕವಾಗಿ ಈ ಪುಸ್ತಕದಲ್ಲಿ ಸೃಷ್ಟಿಯ ಪುರಾವೆಗಳು ಹೇಳುವುದೇನೆಂದರೆ ಆ ಕಾಲದ ಎಲ್ಲ ವಿಜ್ಞಾನಿಗಳಂತೆಯೇ ಭೌತವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್ ಸಹ ಈ ವಿಶ್ವವು ಬದಲಾಗದೆ ಸ್ಥಿರವಾಗಿದೆಯೆಂದೇ ನಂಬಿದ್ದರು. ತಾವು ಪ್ರಸ್ತುತ ಪಡಿಸಿದ ಸೂತ್ರವು ಅವರ ನಂಬಿಕೆಗೆ ವಿರುದ್ಧವಾಗಿದೆಯೆಂದು ತಿಳಿದಿದ್ದರೂ ಈ ವಿಶ್ವವು ಹಿಗ್ಗದೆ ಅಥವಾ ಕುಗ್ಗದೆ ಸ್ಥಿರವಾಗಿದೆಯೆಂದು ಭಾವಿಸಿದ್ದರು. ವಿಶ್ವ ವಿಸ್ತಾರವಾಗುತ್ತಿರುವ ಸಂಗತಿಯನ್ನು ನಂಬಲು ಅವರಿಗೆ ಕರಾರುವಕ್ಕಾದ ಪುರಾವೆಯೊಂದರ ಅಗತ್ಯವಿತ್ತು. 1920ರ ದಶಕದಲ್ಲಿ ಅಮೆರಿಕದ ಖ್ಯಾತ ಖಗೋಳ ವಿಜ್ಞಾನಿ ಎಡ್ವಿನ್ ಹಬಲ್ ( ಹಬಲ್ ಸ್ಪೇಸ್ ಟೆಲಿಸ್ಕೋಪ್ ಇವರ ಹೆಸರಿನ ಗೌರವದಲ್ಲಿರುವುದು) ತನ್ನ ಸಂಶೋಧನೆಯಲ್ಲಿ ಆಂಡ್ರೋಮಿಡಾ ಗ್ಯಾಲಕ್ಸಿಯು ಆಕಾಶಗಂಗೆಯ ಭಾಗವಾಗಿರದೆ ಹೊರಗಿದೆ ಎಂಬುದನ್ನು ಪುರಾವೆಗಳೊಂದಿಗೆ ತಿಳಿಸಿದ. ಆಂಡ್ರೋಮಿಡಾ ಗ್ಯಾಲಕ್ಸಿಯನ್ನು ಹಬಲ್ ಗುರುತಿಸಿದ ತಕ್ಷಣವೇ ಇತರೆ ಗ್ಯಾಲಕ್ಸಿಗಳು ಗೋಚರವಾಗತೊಡಗಿದವು. ಇದ್ದಕ್ಕಿದ್ದಂತೆ ನಮ್ಮ ಬ್ರಹ್ಮಾಂಡ ದೊಡ್ದದಾಗಿ ಕಾಣತೊಡಗಿತು. ಗ್ಯಾಲಕ್ಸಿಗಳ ಬೆಳಕನ್ನು ಆಧರಿಸಿ ಅವುಗಳ ವರ್ಣಪಟಲ(Color Spectrum)ವನ್ನು ವಿಶ್ಲೇಷಿಸಿದರು. ಆ ಮೂಲಕ ಅವರು ಬಹುತೇಕ ಗ್ಯಾಲಕ್ಸಿಗಳು ನಮ್ಮಿಂದ ದೂರವಾಗುತ್ತಿರುವ ವಿದ್ಯಮಾನವನ್ನು ಅರಿತರು. ಅಷ್ಟೇ ಅಲ್ಲ ಗ್ಯಾಲಕ್ಸಿಗಳು ಪರಸ್ಪರ ದೂರವಾಗಿ ಚಲಿಸುತ್ತಿರುವುದೂ ಖಚಿತವಾಯಿತು.
ವಿಶ್ವವು ವಿಸ್ತಾರವಾಗುತ್ತಿರುವುದಕ್ಕೆ ಮೂಲಭೂತ ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ನೆರವಾದ ವಿಜ್ಞಾನಿಗಳೆಂದರೆ ಜಾರ್ಜಸ್ ಲೆಮೈತ್ರೆ ಮತ್ತು ಜಾರ್ಜ್ ಗ್ಯಾಮೊ. ವಿಶ್ವವು ಮುಂದಿನ ದಿನಗಳಲ್ಲಿ ವಿಸ್ತಾರವಾಗುತ್ತಾ ಸಾಗುತ್ತದೆ ಎನ್ನುವುದು ನಿಜವೇ ಆಗಿದ್ದರೆ, ಭೂತಕಾಲದಲ್ಲಿ ಹಿಂದಕ್ಕೆ ಚಲಿಸಿ ನೋಡಿದರೆ ಅವು ಹೆಚ್ಚು ಹೆಚ್ಚು ಹತ್ತಿರದಲ್ಲಿದ್ದವು ಎಂಬುದು ನಿಜವಲ್ಲವೇ? ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಐನ್ ಸ್ಟೈನ್ ರವರ ಸೂತ್ರದನುಸಾರ ಗ್ಯಾಲಕ್ಸಿಗಳು ಹಿಂದಕ್ಕೆ ಮರಳಿ ಹತ್ತಿರವಾಗುತ್ತಾ ಸಾಗಿ ಆರಂಭದ ಬಿಂದುವಿನಲ್ಲಿ ಒಗ್ಗೂಡಿಬಿಡುತ್ತವೆ. ಕೊನೆಗೆ ವಿಶ್ವದಲ್ಲಿರುವ ಎಲ್ಲ ವಸ್ತುಗಳೂ ಒಂದು ಸಣ್ಣ ಸ್ಥಳದಲ್ಲಿ ಒಟ್ಟಾಗಿ ಸೇರಿಬಿಡುತ್ತವೆ. ಆ ಬಿಂದುವನ್ನು ತಲುಪುವ ಮುನ್ನವೇ ವಿಶ್ವದ ಸಮಸ್ತ ದ್ರವ್ಯರಾಶಿಯೂ ಅಸಾಧಾರಣ ಶಾಖದಿಂದಾಗಿ ಪರಿಶುದ್ಧ ಚೈತನ್ಯವಾಗಿ ಪರಿವರ್ತನೆಯಾಗುತ್ತದೆ. ಇಡೀ ಬ್ರಹ್ಮಾಂಡವನ್ನು ಒಂದು ಕಿತ್ತಳೆ ಹಣ್ಣಿನ ಗಾತ್ರಕ್ಕೆ ಸಂಕುಚಿತ ಗೊಳಿಸಿದರೆ ಅಲ್ಲಿ ಉತ್ಪತ್ತಿಯಾಗಬಹುದಾದ ಶಾಖದ ಪ್ರಮಾಣವನ್ನು ಕಲ್ಪಿಸಿಕೊಳ್ಳವುದು ಅಸಾಧ್ಯ. ಅಪಾರ ದ್ರವ್ಯರಾಶಿಯು ಸೂಕ್ಷ್ಮಗಾತ್ರಕ್ಕೆ ಕುಗ್ಗಿದಾಗ ’ಕಾಸ್ಮಿಕ್ ಸ್ಫೋಟ’ವೊಂದು ಸಂಭವಿಸುವುದನ್ನು ಭೌತವಿಜ್ಞಾನದ ನಿಯಮಗಳು ವಿವರಿಸುತ್ತವೆ. ಆ ಸ್ಫೋಟವೇ ವಿಶ್ವದ ಜನನ(Birth Cry- ಶಿಶುವಿನ ಅಳು). ಈ ಕಾಸ್ಮಿಕ್ ಸ್ಫೋಟವೇ ವಿಶ್ವದ ವಿಸ್ತರಣೆಗೆ ಚಾಲನೆ ನೀಡಿದೆ. ಭೌತವಿಜ್ಞಾನದ ಈ ಸಿದ್ಧಾಂತವನ್ನು ಒಪ್ಪದ ಖಗೋಳ ವಿಜ್ಞಾನಿ ಫ್ರೆಡ್ ಹಾಯ್ಲ್, ಈ ಹೊಸ ವೈಜ್ಞಾನಿಕ ಪರಿಕಲ್ಪನೆಯನ್ನು (ಕಾಸ್ಮಿಕ್ ಸ್ಫೋಟವನ್ನು)’ಬಿಗ್ ಬ್ಯಾಂಗ್’ ಎಂಬ ಹೆಸರಿನಿಂದ ಗೇಲಿಮಾಡಿದ. ಆದರೆ ಅದು ತಮಾಷೆಯ ವಿಷಯವಾಗುವ ಬದಲು ಗಂಭೀರ ಅಧ್ಯಯನಕ್ಕೆ ದಾರಿಯಾಯಿತು.
ಇಲ್ಲಿ ದಿಗ್ಭ್ರಮೆ ಹಿಡಿಸುವ ಪ್ರಶ್ನೆಯೆಂದರೆ ಬಿಗ್ ಬ್ಯಾಂಗ್ ಕೆಂಡದುಂಡೆಯ ಅಪಾರ ಶಕ್ತಿಯನ್ನು ಸೃಷ್ಟಿಸಿದ್ದು ಯಾವುದು? ಇದಕ್ಕೆ ಉತ್ತರವಾಗಿ ಖಗೋಳ ವಿಜ್ಞಾನಿ ಅಲನ್ ಗುಥ್ 1979 ರಲ್ಲಿ ವಿಶ್ವ ವಿಸ್ತರಣೆಯ ’ಉಬ್ಬರಸಿದ್ಧಾಂತ’ವನ್ನು ಪ್ರಸ್ತುತಪಡಿಸಿದ. ಗುರುತ್ವವು ಕೆಲವು ನಿರ್ದಿಷ್ಟ ವಿಶೇಷ ಸನ್ನಿವೇಶಗಳಲ್ಲಿ ಆಕರ್ಷಿಸುವ ಬದಲು ವಿಕರ್ಷಣೆ(Repulsion) ತೋರುವುದನ್ನು ಐನ್ ಸ್ಟೈನ್ ರವರ ಸಮೀಕರಣಗಳು ಸೂಚಿಸುತ್ತವೆ. ಗುರುತ್ವವು ವಿಕರ್ಷಿಸುವಂಥ ಇಂತಹ ಸನ್ನಿವೇಷಗಳು ವಿಶ್ವಸೃಷ್ಟಿಯ ಆರಂಭದಲ್ಲಿ ಇದ್ದಿರಬಹುದೇ? ಅಲನ್ ಗುಥ್ ಆ ಬಗ್ಗೆ ಕೆಲವು ಸುಳಿವುಗಳನ್ನು ಕಂಡು ಹಿಡಿದ. ವಿಕರ್ಷಕ ಶಕ್ತಿಯು ತತ್ ಕ್ಷಣವೇ ಒಂದು ಪರಮಾಣು ಗಾತ್ರದ ವಿಶ್ವವನ್ನು ಒಂದು ಕಿತ್ತಳೆ ಹಣ್ಣಿನ ಗಾತ್ರಕ್ಕೆ ವಿಸ್ತರಿಸಬಲ್ಲದೆಂಬುದನ್ನು ಅವನು ನಿರೂಪಿಸಿದನು. ಇದರ ಅನುಪಾತ 1 ಮತ್ತು ಒಂದರ ಪಕ್ಕ ಮುವ್ವತ್ತು ಸೊನ್ನೆಗಳನ್ನು ಹಾಕಿದರೆ ಎಷ್ಟು ಪ್ರಮಾಣವಾಗುತ್ತದೋ ಅಷ್ಟು. ಅಂದರೆ ಒಂದು ಘನ ಮಿ.ಮೀ. ವಿಶ್ವವು ಕಣ್ಣಿವೆಯಿಕ್ಕುವಷ್ಟರಲ್ಲಿ ಒಂದರ ಪಕ್ಕ 30 ಸೊನ್ನೆ ಹಾಕಿದರೆ ಎಷ್ಟು ಗಾತ್ರದ ಘನ ಮಿ.ಮೀ ನಷ್ಟು ವಿಸ್ತರಿಸಿಬಿಡುತ್ತದೆ. ಅದಕ್ಕಾಗಿಯೇ ಇದನ್ನು ಉಬ್ಬರ ಎಂದು ಕರೆಯುವುದು. ತಾಯಿಯ ಗರ್ಭದಲ್ಲಿ ಬೆಚ್ಚಗಿರುವ ಶಿಶುವು ಹೆರಿಗೆಯ ಸಮಯದಲ್ಲಿ ಹೊರಬರಲು ಆರಂಭದಲ್ಲಿ ಪ್ರತಿರೋಧಿಸುವ ಹಾಗೆಯೇ ವಿಶ್ವವೂ ತನ್ನ ಜನನದ ಸಮಯದಲ್ಲಿ ಸ್ವಲ್ಪ ಪ್ರತಿರೋಧ ಒಡ್ಡಿರಬಹುದೆಂದು ಉಬ್ಬರ ಸಿದ್ಧಾಂತ ಪ್ರತಿಪಾದಿಸುತ್ತದೆ. ಬಿಗ್ ಬ್ಯಾಂಗ್ ಸಂಭವಿಸಿದ ಕ್ಷಣದಲ್ಲೇ ಅದು ಸೃಷ್ಟಿಯಾಗಿ, ಅಲ್ಲಿಂದ ನಿಲ್ಲದೆ ವಿಸ್ತರಿಸುತ್ತಾ ಸಾಗಿದೆ.
PC:Pinterest
ಮತ್ತೊಂದು ಅಧ್ಯಾಯದಲ್ಲಿ ಮಣಿಭೌಮಿಕ್ ರವರು ಸೂರ್ಯನ ಪರಿವಾರವನ್ನು ಸುಮಾರು 80AU(1 AU – Astronomical Unit – ಸೂರ್ಯನಿಂದ ಭೂಮಿಗಿರುವ ದೂರ- 9 ಕೋಟಿ ಮೈಲು ಅಥವಾ 15 ಕೋಟಿ ಕಿಲೋ ಮೀಟರ್ ) ದೂರವಿರುವ ಏಕಾಂತ ಸ್ಥಳದಿಂದ ನಮಗೆ ತೋರಿಸುತ್ತಾರೆ. ಶಿಲಾಗ್ರಹಗಳಾದ ಬುಧ, ಶುಕ್ರ, ಭೂಮಿ, ಮಂಗಳ, ಕ್ಷುದ್ರಗ್ರಹಗಳು ಮತ್ತು ಉಲ್ಕಾಕಲ್ಪಗಳ ಜೊತೆಗೆ ಅನಿಲಗ್ರಹಗಳಾದ ಗುರು, ಶನಿ, ಯುರೇನಸ್, ನೆಪ್ಚುನ್, ಪ್ಲೂಟೊ ಮತ್ತು ಸೂರ್ಯನನ್ನು ಸಂದರ್ಶಿಸುತ್ತಾರೆ. ಅಲ್ಲಿರುವ ವಾತಾವರಣ, ಮಾರುತಗಳು, ಉಂಗುರಗಳು ಉಪಗ್ರಹಗಳು ಇತ್ಯಾದಿಗಳ ಬಗ್ಗೆ ಸವಿವರವಾಗಿ ಮಾತನಾಡುತ್ತಾರೆ. ನಮ್ಮ ಭೂಮಿಯ ಬಗ್ಗೆ ವಿವರಿಸುತ್ತಾ, ಭೂಮಿಯ ವಯಸ್ಸು, ಆರಂಭದ ಭೂಮಿಯ ಸ್ವರೂಪ, ವಾಯುಮಂಡಲ, ಶಿಲಾ ಪರ್ವತಗಳ, ಸಾಗರಗಳ ಉಗಮ, ಸಸ್ಯ, ಅರಣ್ಯಗಳ ಸೃಷ್ಟಿ, ಖಂಡಗಳ ರೂಪಾಂತರ, ಜೀವಿಗಳ ಉಗಮಕ್ಕೆ ಸೂಕ್ತವಾದ ಪರಿಸರದ ಸೃಷ್ಟಿ, ಭೂಮಿಯ ಮೇಲಿನ ಮೊದಲ ಜೀವಿ ಮತ್ತು ನಾವು ಮಾನವರು ಸಹ ನಕ್ಷತ್ರಗಳ ಅನಿಲ-ಧೂಳುಗಳಿಂದಲೇ ರೂಪುಗೊಂಡ ವಿಷಯಗಳನ್ನು ತಿಳಿಸುತ್ತಾರೆ.
PC: Space.com
ನಮ್ಮ ವಿಶ್ವವು ತೀರಾ ಸಂಕೀರ್ಣವಾಗಿದೆ. ಭೌತಿಕವಾಗಿ ಎಲ್ಲವೂ ಒಂದೇ ಮೂಲದಿಂದ ಬಂದಿವೆ ಎಂಬ ಸತ್ಯವನ್ನು ನಿರೂಪಿಸುವ ಹತ್ತಿರಕ್ಕೆ ಕಣಭೌತವಿಜ್ಞಾನಿ (Particle Physist)ಗಳು ಬಂದಿದ್ದಾರೆಂದು ತಿಳಿಯುತ್ತದೆ. ಆಧುನಿಕ ಕಾಸ್ಮಾಲಜಿ ಮತ್ತು ಕ್ವಾಂಟಂ ಸಿದ್ಧಾಂತಗಳ ಇತ್ತೀಚಿನ ಸಂಶೋಧನೆಗಳು ’ಒಂದೇ ಮೂಲ’ದ ಸಿದ್ಧಾಂತವನ್ನು ಬೆಂಬಲಿಸುತ್ತಿವೆ. ಮ್ಯಾಪ್ ಉಪಗ್ರಹವು ಸಂಗ್ರಹಿಸಿದ ವಿವರಗಳನ್ನು ಆಧರಿಸಿ ವಿಶ್ವದ ಒಂದು ’ಕಾಲಯಾನ’ (Timeline) ದ ಚಿತ್ರವನ್ನು ಬಿಡಿಸಲಾಗಿದೆ. ಅದನ್ನು ನೋಡಿದರೆ ಪ್ರತಿಯೊಂದು ಸಹ ಒಂದೇ ಮೂಲದಿಂದ ಉಗಮಿಸಿರಬಹುದೆಂಬ ಸಿದ್ಧಾಂತವನ್ನೇ ಬಲವಾಗಿ ಸೂಚಿಸುತ್ತದೆ. ಆದರೆ ಅದು ಏನು? ವಿಶ್ವವನ್ನು ಸೃಷ್ಟಿಸಬಲ್ಲ ಮೂಲ ಯಾವುದು? ಈ ಪ್ರಶ್ನೆಗಳು ಮುಂದೆ ಪತ್ತೆ ಮಾಡಬೇಕಾದ ಅಂತಿಮ ಮತ್ತು ಬಹುದೊಡ್ದ ನಿಗೂಢವನ್ನು ಎತ್ತಿ ತೋರಿಸುತ್ತವೆ. ಈ ಪ್ರಶ್ನೆಗಳಿಗೆಲ್ಲಾ ಉತ್ತರ ಹುಡುಕಲು ನಾವು-ನೀವು ಮುನ್ನುಗ್ಗುವಂತೆ ಪ್ರೇರೆಪಿಸುತ್ತದೆ ’ಈ ಕಾಸ್ಮಿಕ್ ಡಿಟೆಕ್ಟಿವ್’ .
ಪುಸ್ತಕದ ಪ್ರಕಾಶಕರು ಹೇಳುವಂತೆ ಶಾಲಾಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯುವಂತೆ ಮಣಿಭೌಮಿಕ್ ನಮ್ಮನ್ನು ಸೌರಮಂಡಲ, ಗೆಲಾಕ್ಸಿಗಳಿಗೆ ಸುಲಭವಾಗಿ ಪ್ರವೇಶ ಕಲ್ಪಿಸಿಕೊಡುತ್ತಾರೆ. ’ಈ ಜಗತ್ತು ನಿಗೂಢಗಳಿಂದ ಕೂಡಿದೆ’ ಎಂಬ ವಿವರಣೆಯಿಂದ ಆರಂಭವಾಗುವ ಈ ಪುಸ್ತಕ ಮುಂದಿನ ಯುವ ಪೀಳಿಗೆ ಈ ಅಧ್ಯಯನವನ್ನು ಮುಂದುವರೆಸುತ್ತದೆ’ ಎಂಬ ಆಶಾಭಾವನೆಯಿಂದ ಮುಗಿಯುತ್ತದೆ. ಹೀಗಾಗಿ ಈ ಪುಸ್ತಕ ಭೂಮಿ ಮತ್ತಿತರ ಗ್ರಹಗಳು ರೂಪುಗೊಂಡ ಕೇವಲ ಚರಿತ್ರೆಯಲ್ಲ; ಮುಂದೆ ಹಾಗೆ ರೂಪುಗೊಳ್ಳಲು ಕಾರಣವಾದ ಸಂಗತಿಗಳೇನು ಎಂಬ ಕುರಿತು ಅಧ್ಯಯನ ಕೈಗೊಳ್ಳಲು ಕಲ್ಪಿಸಿದ ವೇದಿಕೆ.
ಮಣಿಭೌಮಿಕ್ ಮತ್ತು ಅವರ ಸಾಧನೆಯ ಬಗ್ಗೆ ಮತ್ತಷ್ಟು ತಿಳಿಯಲು ಈ ಕೊಂಡಿಗಳನ್ನು ಬಳಸಿ:
ನಮಸ್ಕಾರ
ಪ್ರೊ.ವೆಂಕಟೇಶ ಜಿ. 09.02.2022