ಗಸಗಸೆ ಪಾಯಸವನ್ನು ಕುಡಿದು ಮಲಗಿದರೆ ಸರಿಯಾದ ನಿದ್ದೆ ಎನ್ನುವ ಮಾತು ಪರಿಚಿತವಾದ್ದೇ! ಹೌದು, ಅದರಲ್ಲಿ ತುಸುವೆ ನಿದ್ದೆ ಬರಿಸುವ ರಸಾಯನಿಕವಿರಬಹುದು, ಅದೂ ಬೀಜಗಳ ಮೆಲೆ ಕೊಯಿಲಿನ ಸಂಸ್ಕರಣೆಯ ಕಾರಣದಿಂದ ಉಳಿದುಕೊಂಡದಷ್ಟೇ! ಆದರೆ, ಗಸಗಸೆಯ ಬೀಜಗಳನ್ನು ಸುತ್ತುವರಿದ ಕಾಯಿಯ ಕವಚದಲ್ಲಂತೂ ಮತ್ತು ಬರಿಸುವ, ನಿದ್ದೆ ಬರಿಸುವ, ನೋವೇ ತಿಳಿವಿಗೆ ಬಾರದ ಹಾಗೆ ಮಾಡುವ ರಸಾಯನಿಕ ಮಾರ್ಫೀನು ಮುಂತಾದ ಅಲ್ಕಲಾಯ್ಡ್ಗಳು ಸಾಕಷ್ಟೇ ಇವೆ. ಹಾಗಾಗಿಯೇ ಗಸಗಸೆಯ ಗಿಡವನ್ನು ಅಫೀಮಿನ ಗಿಡ ಎಂದೇ ಹೆಸರಿಸುವುದು. ಸಾಲದಕ್ಕೆ ಕಾನೂನು ಬಾಹಿರವಾಗಿ ಯಾರೂ ಬೆಳೆಯುವಂತೆಯೂ ಇಲ್ಲ. ಅದರ ಕೃಷಿ ಏನಿದ್ದರೂ ಲೈಸೆನ್ಸ್ ಪಡೆದ ನೆಲದಲ್ಲಿ, ಜೊತೆಗೆ ಕನಿಷ್ಠ ಉತ್ಪನ್ನವನ್ನೂ ಕೊಯಿಲು ಮಾಡಿಯೇ ಕೊಡಬೇಕು. ಒಂದು ವೇಳೆ ಕಡಿಮೆ ಉತ್ಪಾದಿಸಿದ್ದಾದರೆ, ಕದ್ದು ಕಾನೂನುಬಾಹಿರ ಮಾರುಕಟ್ಟೆಗೆ ಸಾಗಿಸಿರಬಹುದೆಂಬ ಅನುಮಾನದಲ್ಲಿ ವಿಚಾರಣೆಗೆ ಒಳಪಡಬೇಕು. ಇಂತಹದ್ದೊಂದು ಅಪೂರ್ವ ಚೌಕಟ್ಟಿನ ಒಳಗಿನ ಬೆಳೆ ಗಸಗಸೆಯ ಉತ್ಪಾದನೆ.
ಗಿಡವೆಲ್ಲಾ ಅಮಲು ಮತ್ತು ನಿದ್ದೆ ಬರಿಸುವ ರಸಾಯನಿಕವನ್ನು ಹೊಂದಿದ್ದರೆ, ಕಾಳುಗಳು ಮಾತ್ರ ಹೆಚ್ಚೂ ಕಡಿಮೆ ಇದರಿಂದ ಮುಕ್ತವಾಗಿವೆ. ಇದ್ದರೂ ಬಹಳ ಕಡಿಮೆ ಕೊಯಿಲಿನ ವಿವಿಧತೆಯ-ಬಗೆಗಳಿಂದ ಉಳಿಕೆಯಾದದ್ದು ಮಾತ್ರವೇ ಇರುತ್ತದೆ. ಸ್ವಲ್ಪವೇ ಅಲ್ಕಲಾಯ್ಡ್ ಇದ್ದು ಅದರ ತುಸು ಹೆಚ್ಚಿನ ಬಳಕೆ ನಿದ್ದೆ/ಅಮಲನ್ನು ಖಂಡಿತಾ ತರಿಸಬಲ್ಲದು. ಈ ರಸಾಯನಿಕವು ಅತ್ಯಂತ ಪ್ರಬಲವಾದ ನೋವು ನಿವಾರಕ. ಶಸ್ತ್ರ ಚಿಕಿತ್ಸೆಯಲ್ಲಿ ಅಮಲು ತರಿಸಿ, ನೋವು ನಿವಾರಿಸುವ ರಸಾಯನಿಕವನ್ನು ಪಡೆಲೆಂದೇ ಬಳಸುವ ಮಾರ್ಫೀನು ಮುಂತಾದವುಗಳಿಂದಲೇ ಇದಕ್ಕೊಂದು ವಿಶೇಷ ನೀತಿ ನಿಯಮಗಳು-ರೀತಿ ರಿವಾಜುಗಳು. ಈ ಎಲ್ಲಾ ಬಿಗಿ ಹಿಡಿತದ ವಾತಾವರಣದಲ್ಲೂ ನಮ್ಮ ಆಹಾರದ ಚೆಲುವನ್ನು ಹೆಚ್ಚಿಸಲು ಕಿರೀಟದಂತೆ ಮೇಲುದುರಿಸುವ ಗಸಗಸೆಗೆಯ ಬಳಕೆಯು ಮುಕ್ತವಾಗಿದೆ. ಅಮಲು ತರಿಸುವ ಕಳ್ಳ-ಸಾಕಾಣಿಕೆಯ ಕಥನವನ್ನೂ ತನ್ನೊಳಗಿಟ್ಟುಕೊಂಡ ಗಿಡ ಮತ್ತದರ ನಿಗೂಢ ಉತ್ಪಾದನೆಯು ರಾಷ್ಟ್ರ ರಾಷ್ಟ್ರಗಳ ನಡುವಿನ ಯುದ್ಧಗಳಿಗೂ ಕಾರಣವಾಗಿದೆ. ಸೌಂದರ್ಯ, ಅಮಲು, ನಿದ್ದೆ, ಹಣ, ಸಿರಿವಂತಿಕೆಯ ಲಾಲಸೆ, ವಹಿವಾಟಿನ ಪೈಪೋಟಿಯ ನಡುವೆ ಯುದ್ಧಗಳು ಇವೆಲ್ಲದರ ವಿಶಿಷ್ಟ ಸಂಗತಿಗಳನ್ನು ಜತೆಗೆ ಸಸ್ಯವಿಜ್ಞಾನದ ಕಥನವನ್ನೂ ನೋಡೋಣ.
ಗಸಗಸೆಯ ಗಿಡವನ್ನು ಸಸ್ಯವೈಜ್ಞಾನಿಕವಾಗಿ ಪಾಪಾವರ್ ಸೋಮ್ನಿಫೆರಂ (Papaver somniferum) ಎಂದೂ ಸಾಮಾನ್ಯವಾಗಿ ಅಫೀಮಿನ ಗಸಗಸೆ (Opium Poppy) ಎಂದೇ ಕರೆಯಲಾಗುತ್ತದೆ. ಈ ಸಸ್ಯವನ್ನು ಕೃಷಿ ಮಾಡುವುದೇ ಗಸಗಸೆಯ ಬೀಜಗಳಿಗಾಗಿ ಮತ್ತು ಅದರ ಕಾಯಿಯ ಕವಚ/ಹೊಟ್ಟು, ತೊಟ್ಟು, ಗಿಡ/ಎಲೆಗಳಲ್ಲಿ ಇರುವ ಅಫೀಮ (Opium) ಅನ್ನು ಪಡೆಯುವ ಔಷಧ ಉದ್ಯಮಗಳಿಗಾಗಿ. ಪಾಪಾವರ್ (Papaver)ಪದವು ಲ್ಯಾಟಿನ್ ಪದ ಪಾಪವರಂ (Papaverum) ನಿಂದ ಹುಟ್ಟಿದ್ದು ಅದರ ಅರ್ಥವು ಅಲಂಕಾರದ ಗುಬುಟು ಎನ್ನವ ಪಾಆ.ಪೀ (Poppy) ಎಂದಾಗಿದೆ. ಗಿಡದ ಕಾಯಿಗಳು ಗುಬುಟಿನ ಆಕಾರದಲ್ಲಿ ಇರುವುದರಿಂದ ಹೀಗೆ ಕರೆಯಲಾಗಿದೆ. ನಾವು ಕುಳಿತುಕೊಳ್ಳುವ ಕುರ್ಚಿ, ಸೋಫಾ ಅಥವಾ ಏಣಿಯ ಏರುವಲ್ಲಿಯ ಕೈಹಿಡಿಗಳ ರೂಪನ್ನು ಗುಬುಟು ಎನ್ನುತ್ತೇವಲ್ಲವೇ? ಹಾಗೆಯೇ ಗಿಡದ ಕಾಯಿಗಳೂ! ಇನ್ನು ಸೊಮ್ನಿಫೆರಂ (Somniferum) ಪದದ ಅರ್ಥವು ಲ್ಯಾಟಿನ್ ಭಾಷೆಯಲ್ಲಿ ನಿದ್ದೆ ಬರಿಸುವಂತಹದು ಎಂದಾಗಿದೆ. ಈ ನಿದ್ದೆ ಬರಿಸುವ ರಸಾಯನಿಕ ಅಫೀಮು-ಮಾರ್ಫೀನ್ ಕುರಿತು, ಸಸ್ಯವೈಜ್ಞಾನಿಕ ಸಂಗತಿಗಳ ತಿಳಿದು ಮುಂದೆ ವಿವರವಾಗಿ ನೋಡೋಣ.
ಗಸಗಸೆಯ ಗಿಡವು ಪಾಪಾವರೇಸಿಯೇ (Papaveraceae) ಎಂಬ ಸಸ್ಯ ಕುಟುಂಬದ ಸಸ್ಯ. ಇದು ಮೆಡಿಟರೇನಿಯನ್ ಪ್ರದೇಶದ ಪೂರ್ವದ ನೆಲದಲ್ಲಿ ವಿಕಾಸಗೊಂಡಿದ್ದು, ಕೃಷಿಯ ಕಾರಣಕ್ಕೆ ಹಾಗೂ ಆಸಕ್ತಿಯಲ್ಲಿ ಪರಿಚಯಿಸಿದ ಕಾರಣದಿಂದ ಏಶಿಯಾ ಮತ್ತು ಯೂರೋಪನ್ನು ಹಬ್ಬಿದೆ. ಇದರಿಂದಾಗಿ ನಿಜವಾದ ನೆಲೆಯ ಕುರುಹುಗಳು ಅಪರೂಪ. ಈ ಕುಟುಂಬದಲ್ಲಿ ಸುಮಾರು 42 ಸಂಕುಲಗಳಿದ್ದು 775 ಪ್ರಭೇದಗಳನ್ನು ಹೊಂದಿರುತ್ತದೆ. ಈ ಕುಟುಂಬವು ಶೀತವಲಯದಲ್ಲೂ ಮತ್ತು ಸಮಶೀತೋಷ್ಣವಲಯದಲ್ಲೂ ತನ್ನ ಸದಸ್ಯ ಗಿಡಗಳನ್ನು ಹೊಂದಿದೆ. ಹೆಚ್ಚಾಗಿ ಭೂಗೋಳದ ಉತ್ತರಾರ್ಧದಲ್ಲಿ ಹೆಚ್ಚಿನ ಸಸ್ಯಗಳು ಹರಡಿ ನೆಲೆಯಾಗಿವೆ. ಹೆಚ್ಚಿನವು ಸಣ್ಣ ಗಿಡಗಳೇ! ಕೆಲವಷ್ಟೇ ಸಣ್ಣ ಮರಗಳಾಗಿವೆ. ಅನೇಕ ಪ್ರಭೇದಗಳು ಹಾಲು ಬಣ್ಣದ ಲೇಟೆಕ್ಸ್ ಅನ್ನು ಒಸರಿಸುತ್ತವೆ. ಇದು ಬಳಿಯ ಬಣ್ಣವಲ್ಲದೆ, ಹಳದಿ ಮಿಶ್ರಿತವಾಗಿಯೂ ಕೆಂಪು ಮಿಶ್ರಿತವಾಗಿಯೂ ಇದ್ದು, ಎಲ್ಲದರಲ್ಲೂ ಅಫೀಮು ಇರುವುದಿಲ್ಲ. ಅಫೀಮನ್ನು ಹೆಚ್ಚು ಪ್ರಮಾಣದಲ್ಲಿ ಕಂಡುಕೊಂಡೇ ಗಸಗಸೆಯ ಗಿಡವನ್ನು ಸಹಸ್ರಾರು ವರ್ಷಗಳಿಂದಲೂ ಮಾನವತೆಯು ಬಳಸಿಕೊಂಡು ಬಂದಿದೆ.
ಗಸಗಸೆಯ (Papaver somniferum) ಗಿಡವು ಸುಮಾರು ಒಂದು ಮೀಟರ್ ಎತ್ತರದ ವಾರ್ಷಿಕ ಸಸ್ಯ. ಇದು ನೀಲಿ-ಮಿಶ್ರಿತ ಹಸಿರು ಬಣ್ಣವನ್ನು ವಿಕಾಸ ಪಡಿಸಿಕೊಂಡಿದ್ದು, ಎಲೆಗಳ ಮೇಲೆ ಹಾಗೂ ಕಾಂಡದ ಮೇಲೆಯೂ ಸಣ್ನ ಸಣ್ಣ ರೋಮಗಳಿಂದ ಆವೃತವಾಗಿದೆ. ಸುಂದರವಾದ ಬಿಳಿಯಿಂದ ಕೆಂಪು ಬಣ್ಣದ ಹೂಗಳು ಈ ಗಿಡದ್ದು. ಹಾಗಾಗಿ ಅಲಂಕಾರಿಕ ಗಿಡವಾಗಿಯೂ ಇದು ಪ್ರಸಿದ್ಧಿಯನ್ನು ಪಡೆದಿದೆ. ಕಾಯಿಗಳು ರೋಮರಹಿತವಾಗಿದ್ದು, ದುಂಡನೆಯ ಗುಬುಟಿನಂತೆ ತಲೆಯೆತ್ತಿ ಚಾಚಿರುತ್ತವೆ. ಸಸ್ಯದ ಎಲ್ಲಾ ಹಸಿರು ಭಾಗವು ಗೀರಿದರೆ ಅಥವಾ ಗಾಯವಾದರೆ ಹಾಲು ಒಸರುತ್ತದೆ. ಆದರೆ ಸಂತಾನೋತ್ಪತ್ತಿಯ ಭಾಗದಲ್ಲಿ ಹೆಚ್ಚಿನ ರಸಾಯನಿಕಗಳ ತುಂಬಿ ಕೊಟ್ಟಿರುವುದು, ಹಾಗೂ ಇದು ಜೀವಿ ಸಂಕುಲವು ಸಂತಾನೋತ್ಪತ್ತಿಗೆ ಕೊಟ್ಟಿರುವ ವಿಶೇಷವೂ ಹೌದು.
ನಮ್ಮ ಆಹಾರದಲ್ಲಿ ಬಳಸುವ ಗಸಗಸೆಯು ಒಂದು ಎಣ್ಣೆಯ ಕಾಳು. ಇದರ ಬಳಕೆಯನ್ನು ಹಲವಾರು ನಾಗರಿಕ ಸಮಾಜದ ಪಾರಂಪರಿಕ ವೈದ್ಯಕೀಯ ದಾಖಲೆಗಳಲ್ಲಿ ಕಾಣಬಹುದು. ಉದಾಹರಣೆಗೆ ಕಿ.ಪೂ. ೧೫೫೦ರ ಈಜಿಪ್ಟರ ಗಿಡ-ಮೂಲಿಕೆಯ ದಾಖಲೆ ಎಬೆರ್ಸ್ ಪಪೈರಸ್ (Ebers Papyrus) ನಲ್ಲಿ ಮತ್ತನ್ನು ಅಥವಾ ಅಮಲನ್ನು ತರಿಸುವ ವಸ್ತುವೆಂದು ಕರೆಯಲಾಗಿದೆ. ಭಾರತೀಯ ದಾಖಲೆಗಳಲ್ಲಿ ಹತ್ತನೆಯ ಶತಮಾನದ “ಧನ್ವಂತರಿಯ ನಿಘಂಟು” ಅದರಲ್ಲಿ ವಿವಿಧ ಬಳಕೆಯನ್ನು ಪ್ರಸ್ತಾಪಿಸಲಾಗಿದೆ. ಭಾರತೀಯ ಹಿನ್ನೆಲೆಯ ಚರಿತ್ರೆಯಲ್ಲಿ 16 ನೆಯ ಶತಮಾನದ ವ್ಯವಹಾರಿಕ ಬಳಕೆಯು ತುಂಬಾ ಪ್ರಸಿದ್ಧವಾದುದು. (ಅದನ್ನು ಮುಂದೆ ಭಾರತೀಯ ಗಸಗಸೆಯ ಕೃಷಿ, ಅಫೀಮಿನ ವಹಿವಾಟು ಶೀರ್ಷಿಕೆಯಲ್ಲಿ ನೋಡೋಣ).
ಗಸಗಸೆಯ ಕಾಳುಗಳು ತೀರಾ ಚಿಕ್ಕವು. ಒಂದು ಮಿ.ಮೀ. ಗಿಂತಲೂ ಚಿಕ್ಕವು. ಹಾಗೂ ಹಗುರವಾದವೂ ಕೂಡ. ಕಿಡ್ನಿ ಆಕಾರದ ಮೈಲ್ಮೈಯಲ್ಲಿ ಕುಳಿಯನ್ನುಳ್ಳ ಪುಟ್ಟ ಪುಟ್ಟ ಕಾಳುಗಳು. ಪ್ರತೀ ಗ್ರಾಂನಲ್ಲಿ ಸುಮಾರು 3000-3400 ಗಸಗಸೆಯ ಕಾಳುಗಳು ಇರುತ್ತವೆ. ಈ ಕಾಳುಗಳ ಪರಿಮಳವು ಬೇಯಿಸಿದ ಹಾಗೂ ಸಕ್ಕರೆಯು ಹುರಿದಂತಹಾ ಅನಾನಸ್ಸಿನಂತೆ ಇರುತ್ತದೆ. ಇದಕ್ಕೆ ಕಾರಣ ಅದರಲ್ಲಿರುವ 2-Pentylfuran ಎಂದು ಕರೆಯಲಾಗುವ ಹಣ್ಣಿನ ಪರಿಮಳದ ರಸಾಯನಿಕ. ಇದು ಬಗೆಯ ಬಗೆಯ ಪರಿಮಳದ ಮಿಶ್ರಣವೇ ಹೌದು. ಕಾಳುಗಳು ಸಾಕಷ್ಟು ಶಕ್ತಿಯನ್ನೂ ನೀಡಬಲ್ಲವು. ಪ್ರತೀ 100 ಗ್ರಾಂ 525 ಕ್ಯಾಲೋರಿಯಷ್ಟು ಶಕ್ತಿಯನ್ನು ಜೊತೆಗೆ ಥಯಾಮಿನ್, ಫೋಲೇಟ್ ಅಲ್ಲದೆ ಒಂದಷ್ಟು ಖನಿಜಗಳನ್ನೂ ಮುಖ್ಯವಾಗಿ ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಗ್ನೀಸಿಯಂ, ಮ್ಯಾಂಗನೀಸ್, ರಂಜಕ ಹಾಗೂ ಸತುವನ್ನೂ ಕೊಡುತ್ತವೆ. ಇದು ಪ್ರೊಟೀನ್ಯುಕ್ತವೂ ಹೌದು ಪ್ರತೀ 100 ಗ್ರಾಂ ಕಾಳುಗಳು 21 ಗ್ರಾಂ ಪ್ರೊಟೀನನ್ನು, 28 ಗ್ರಾಂ ಕಾರ್ಬೊಹೈಡ್ರೇಟನ್ನು, 42 ಗ್ರಾಂ ಕೊಬ್ಬನ್ನು ಕೊಡಬಲ್ಲವು. ಇದರಿಂದ ತೆಗೆದ ಎಣ್ಣೆಯು ವಿವಿಧ ಖಾದ್ಯಗಳಲ್ಲಿ ಔಷಧಿಯ ಬಳಕೆಯಲ್ಲಿ ಹಾಗೂ ಹಲವು ಯಾಂತ್ರಿಕ ಬಳಕೆಯಲ್ಲಿಯೂ ಇದೆ.
ಆಹಾರದ ಬಳಕೆಯಂತೂ ನಮ್ಮೆಲ್ಲಾ ರಾಜ್ಯಗಳ ಆಹಾರ ಪದ್ದತಿಯಲ್ಲಿ ಪಾಯಸದಿಂದ ಮೊದಲ್ಗೊಂಡು ವಿವಿಧ ಸಿಹಿಗಳಲ್ಲಿ, ಅಲ್ಲದೆ ಬ್ರೆಡ್ಡು, ಕೇಕು ಮುಂತಾದೆಡೆ ಅಲಂಕಾರಿಕವಾಗಿ ಬಳಸುವುದು ಗೊತ್ತೇ ಇರುವ ಸಂಗತಿ. ಮಾಂಸಹಾರಿ ತಯಾರಿಗಳಲ್ಲೂ ಮಸಾಲೆಯಾಗಿ ಇದರ ಬಳಕೆಯು ವಿಶೇಷವೇ!
ಮಾರ್ಫೀನ್ ಮತ್ತಿತರ ಸರಿ ಸುಮಾರು 80 ಬಗೆಯ ಅಲ್ಕಾಲಾಯ್ಡ್ಗಳು ಗಸಗಸೆಯ ಕಾಯಿಗಳಲ್ಲಿ ಮತ್ತು ಕಾಯಿಯ ತೊಟ್ಟುಗಳಲ್ಲಿ ತುಂಬಿಕೊಂಡಿರುತ್ತವೆ. ಮೊದಲು ಕೇವಲ ಹಸಿರು ಕಾಯಿಯಲ್ಲಿ ಒಸರುವ ಹಾಲಿನಿಂದ ಮಾತ್ರವೇ ಅಫೀಮನ್ನು ಪಡೆಯಲಾಗುತ್ತಿತ್ತು. ನಂತರದಲ್ಲಿ, ಹಾಲಿನಿಂದಲ್ಲದೆ ಗಸಗಸೆಯ ಕೊಯಿಲಿನ ನಂತರದಲ್ಲೂ ಅಫೀಮನ್ನು ಪಡೆಯುವಂತೆ ಈ ಮುಂದೆ ಹೇಳುವ ವಿಧಾನವು ಬಳಕೆಗೆ ಬಂತು. ಕಾಯಿಗಳನ್ನು ಸರಿ ಸುಮಾರು ೮ ಅಂಗುಲ ತೊಟ್ಟು ಇರುವಂತೆ ಕತ್ತರಿಸಿ ಕೊಯಿಲು ಮಾಡಲಾಗುತ್ತದೆ. ಅದರಿಂದ ಬೀಜವನ್ನು ಬೇರ್ಪಡಿಸಿ ಉಳಿದ ಹೊಟ್ಟನ್ನು (Poppy Straw) ಬಳಸಿ ಸಂಶ್ಲೇಷಣೆ ಮಾಡಿ, ಅಫೀಮ್ (Opium) ರಸಾಯನಿಕವನ್ನು ಪಡೆಯಲಾಗುತ್ತದೆ. ಈ ಪದ್ದತಿಯನ್ನು ಗಸಗಸೆ -ಪಪ್ಪಿ ಹೊಟ್ಟಿನ ಸಾಂದ್ರೀಕರಿಸುವ ವಿಧಾನ (Concentrate of Poppy Straw) ಎಂದೇ ಕರೆಯಲಾಗುವುದು.
ಇದನ್ನು ರಸಾಯನಿಕವಾಗಿ ಕಂಡು ಹಿಡಿದು ಒಂದು ಪದ್ದತಿಯಾಗಿ ರೂಪಿಸಿದವರು, ಜಾನಸ್ ಕಾಬೇ (János Kabay -1896-1936) ಎಂಬ ಹಂಗರಿಯ ಔಷಧ ರಸಾಯನಿಕ ತಜ್ಞ. ಮಾರ್ಫೀನ್ ಉತ್ಪಾದನೆಯನ್ನು ಸುಧಾರಿಸಿದ ಕೀರ್ತೀ ಈ ಸಂಶೋಧಕರದ್ದು. ಸಾಮಾನ್ಯವಾಗಿ ಹಸಿರು ಕಾಯಿಗಳಿಂದ ಕವಚದ ಮೇಲೆ ಗೀರಿ ಅದರಿಂದ ಒಸರಿಸುವ ಹಾಲನ್ನು ಒಣಗಲು ಬಿಟ್ಟು ಅದನ್ನು ಸಂಗ್ರಹಿಸಿ ಮಾರ್ಫೀನ್ ತಯಾರಿಸಲಾಗುತ್ತಿತ್ತು. ಜಾನಸ್ ಕಾಬೇ 1925ರಲ್ಲಿ ಹಸಿರು ಕಾಯಿಯಿಂದ ಸಂಸ್ಕರಿಸುವ ಸುಧಾರಿತ ವಿಧಾನವನ್ನು ಮತ್ತು 1931ರಲ್ಲಿ ಗಸಗಸೆ ಬಿಜಗಳನ್ನು ತೆಗೆದು ಒಣಗಿದ ಕಾಯಿ ಕವಚ ಹಾಗೂ ಹೊಟ್ಟಿನಿಂದಲೂ ಸಂಸ್ಕರಿಸುವ ರಸಾಯನಿಕ ವಿಧಾನವನ್ನು ಕಂಡುಹಿಡಿದು ಮಹತ್ತರವಾದ ಉಪಕಾರವನ್ನು ವೈದ್ಯಲೋಕದ ಔಷಧವಿಜ್ಞಾನಕ್ಕೆ ಮಾಡಿದ್ದಾರೆ. ಅಲ್ಲಿಯ ವರೆಗೂ ಗಸಗಸೆಯ ಕಾಳು ತೆಗೆದ ಹುಲ್ಲನ್ನು/ಹೊಟ್ಟನ್ನು ಸುಮ್ಮನೆ ಗೊಬ್ಬರಕ್ಕೆಂದೋ ಅತವಾ ಮತ್ತಾವುದೋ ಬಳಕೆಗೆ ಉಪಯೋಗಿಸಲಾಗುತ್ತಿತ್ತು. ಜಗತ್ತಿನ ಎಲ್ಲಾ ಔಷಧ ಉದ್ಯಮದಲ್ಲಿ ಮಾರ್ಫೀನ್ ಅತ್ಯಂತ ಪ್ರಮುಖವಾದ ರಸಾಯನಿಕ. ಜಾನಸ್ ಕಾಬೇ ಅವರನ್ನು ಹಂಗರಿಯ ಮಾರ್ಫಿನ್ ಉತ್ಪಾದನೆಯ ಪಿತಾಮಹಾ ಎಂದೇ ಕರೆಯಲಾಗುತ್ತದೆ. ಇಂದು ಬಹುಪಾಲು ಉದ್ಯಮಗಳಲ್ಲಿ ಕಾಬೇ ವಿಧಾನವನ್ನೇ ಬಳಸಲಾಗುತ್ತಿರುವುದು ಒಂದು ವಿಶೇಷವಾಗಿದೆ.
ಗಸಗಸೆಯ ಕಾಳುಗಳಲ್ಲಿ ನಿದ್ದೆ ಬರಿಸುವಷ್ಟು ಗಮನಾರ್ಹವಾದ ಅಫೀಮು ಇಲ್ಲದಿದ್ದರೂ ಸ್ವಲ್ಪ ಪ್ರಮಾಣದಲ್ಲಿರುವುದು ತಿಳಿದು ಬಂದಿದೆ. ಪ್ರತೀ ಒಂದು ಗ್ರಾಂ ಕಾಳಿನಲ್ಲಿ 33 ಮೈಕ್ರೋ ಗ್ರಾಂ ಮಾರ್ಫೀನ್ 14 ಮೈಕ್ರೋ ಗ್ರಾಂ ಕೊಡೈನ್ ರಸಾಯನಿಕಗಳು ಇರಬಲ್ಲವು. ಹಾಗಾಗಿ ಆಟೋಟಗಳಲ್ಲಿ ಅಫೀಮು ಸೇವಿಸಿರುವ ಬಗ್ಗೆ ನಡೆಸಲಾಗುವ “ಡ್ರಗ್ ಟೆಸ್ಟ್” ನಲ್ಲಿ ಮುಕ್ತವೆಂದು ಪ್ರಮಾಣೀಕರಿಸಲು ಕೆಲವು ದಿನಗಳಿಂದಾದರೂ ಗಸಗಸೆಯನ್ನು ಸೇವಿಸದಿರುವುದು ಸೂಕ್ತವಾಗಿದೆ. ಸಾಮಾನ್ಯವಾಗಿ ಇದನ್ನು ಡ್ರಗ್ ಟೆಸ್ಟ್ ಗುರುತಿಸದಿದ್ದರೂ, ಜಾಗರೂಕತೆಯ ಹಿನ್ನೆಲೆಯಲ್ಲಿ ಪಾಲಿಸುವುದು ಒಳಿತು.
ಭಾರತದಲ್ಲಿ ಅಫೀಮಿನ ವಹಿವಾಟು
ಗಸಗಸೆಯ ಉತ್ಪನ್ನದಲ್ಲಿ ಟರ್ಕಿಯು ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ಝೆಕ್ ರಿಪಬ್ಲಿಕ್ ಸ್ಪೇಯಿನ್, ಫ್ರಾನ್ಸ್, ಹಂಗರಿಯ ಜೊತೆಗೆ ಭಾರತ ಪಾಕಿಸ್ತಾನ, ಆಫ್ಗಾನಿಸ್ತಾನವೂ ಸೇರಿದೆ. ಭಾರತದಲ್ಲಿ ಗಸಗಸೆಯನ್ನು ಸರಿ ಸುಮಾರು 10ನೆಯ ಶತಮಾನದಿಂದ ಬೆಳೆಯಲಾಗುತ್ತಿದೆ. ಸುಮಾರು 1590ರಲ್ಲಿ ಶೇಕ್ ಅಬುಲ್ ಫಜಲ್ ಸಂಗ್ರಹಿಸಿ ಪ್ರಕಟಿಸಿದ ಐನ್-ಇ-ಅಕ್ಬಾರಿ (Ain-i-Akbari)ಯಲ್ಲಿ ಆಗ್ರಾ, ಅಲಹಬಾದ್ ಸುತ್ತಲಿನ ಪ್ರದೇಶದಲ್ಲಿ ಬೆಳೆಯುತ್ತಿರುವ ಬಗ್ಗೆ ಹೇಳಲಾಗಿದೆ. ಆಗ ದೆಹಲಿಯಲ್ಲಿ 1543-1606 ರ ಮಧ್ಯೆ ಆಳುತ್ತಿದ್ದ ಅಕ್ಬರ್ ಮೊಟ್ಟ ಮೊದಲು ಅಫೀಮು ಬೆಳೆಗಾರರಿಂದ ಕಂದಾಯ ಸಂಗ್ರಹಿಸಿದ ಬಗ್ಗೆ ಮೊದಲ ದಾಖಲೆ ಸಿಗುತ್ತದೆ. ನಂತರದಲ್ಲಿ ಬ್ರಿಟೀಷರು ಈಸ್ಟ್ ಇಂಡಿಯಾ ಕಂಪನಿಯ ಮೂಲಕ ಅಫೀಮಿನ ವಹಿವಾಟಿನಲ್ಲಿ ತೊಡಗಿದ್ದೂ ತಿಳಿಯುತ್ತದೆ. ಮುಂದೆ 1947ರಲ್ಲಿ ಭಾರತವು ಸ್ವಾತಂತ್ರ್ಯ ಪಡೆದ ನಂತರ ಅಫೀಮು ಔಷಧೀಯ ಹಾಗೂ ನಶೆ ತರುವ ವಸ್ತುವಾದ್ದರಿಂದ ಅದರ ಕೃಷಿ ಮತ್ತು ಕೊಯಿಲಿನ ಬಗ್ಗೆ ನೀತಿ ನಿಯಮಗಳು ಜಾರಿಯಾಗುತ್ತವೆ.
ಹಾಗಾಗಿ 1950ರಲ್ಲಿ ಸೆಂಟ್ರಲ್ ಬ್ಯೂರೊ ಆಫ್ ನಾರ್ಕೊಟಿಕ್ಸ್ (CBN) ರೂಪುಗೊಂದು ಅಫೀಮು ಬೆಳೆಯಲು ಲೈಸೆನ್ಸ್ ನೀಡುವ ಏಕೈಕ ಸಂಸ್ಥೆಯಾಗುತ್ತದೆ. ಅದರ ಪ್ರಕಾರ ಕೇವಲ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ರಾಜಸ್ತಾನ ಮತ್ತು ಮಧ್ಯ ಪ್ರದೇಶ ರಾಜ್ಯಗಳು ಮಾತ್ರವೇ ಗಸಗಸೆಯ ಕೃಷಿ ಮಾಡಲು ಒಪ್ಪಿತವಾದ ರಾಜ್ಯಗಳು. ವಲಯ ಮಟ್ಟದಲ್ಲೂ ನಾರ್ಕೊಟಿಕ್ಸ್ ಅಧಿಕಾರಿಗಳಿದ್ದು ಲೈಸೆನ್ಸ್ ನೀಡಿ ನಿಯಂತ್ರಿಸುವ ಜವಾಬ್ದಾರಿ ಹೊಂದಿರುತ್ತಾರೆ. ಒಂದು ರೀತಿಯಲ್ಲಿ ಭಾರತವು 16ನೆಯ ಶತಮಾನದಿಂದಲೂ ಗಸಗಸೆ-ಅಫೀಮಿನ ಕೃಷಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡೇ ಬಂದಿದೆ. ಆದಾಗ್ಯೂ ಹಲವು ಕಳ್ಳತನದ ಕೃಷಿ ಮತ್ತು ವಹಿವಾಟು ನಡೆಯುವ ಬಗ್ಗೆಯೂ ಸರ್ಕಾರವು ಕಣ್ಗಾವಲಿಟ್ಟು ಕಾಯುತ್ತದೆ.
ಅಫೀಮು ಎನ್ನುವುದು ಮುಖ್ಯವಾಗಿ ಎರಡು ಗುಂಪುಗಳ ಅಲ್ಕಲಾಯ್ಡ್ಗಳನ್ನು! ಮಾರ್ಫೀನ್ ಮತ್ತು ಕೊಡೇನ್ಗಳು ಇವುಗಳ ಪ್ರತಿ ಉತ್ಪನ್ನಗಳು. ಇದರಲ್ಲಿ ಮಾರ್ಫೀನ್ ಬಹಳ ಮುಖ್ಯವಾದ ಅಲ್ಕಲಾಯ್ಡ್ ಆಗಿದೆ. ಅಫೀಮು ಬಳಸುವುದು ಅನೇಕರಲ್ಲಿ ವ್ಯಸನವನ್ನು ತಂದಿಟ್ಟು, ದೈಹಿಕವಾಗಿ ನಿಯಂತ್ರಣವನ್ನು ತಪ್ಪುವಷ್ಟು ಹಾನಿ ಮಾಡುತ್ತದೆ. ಇದೇ ವೈದ್ಯಕೀಯ ಬಳಕೆಯಲ್ಲಿ ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸಿ, ಅರವಳಿಕೆ (Anaesthesia) ಯ ರಸಾಯನಿಕವಾಗಿ ಉಪಯುಕ್ತವಾಗಿದೆ. ಅರವಳಿಕೆ ತಜ್ಞರ ರಾಯಲ್ ಕಾಲೇಜಿನ (The Royal College of Anaesthetists) ಕೋಟಿನ ತೋಳಿನ ಮೇಲೆ ಇರುವ ಲೋಗೊದಲ್ಲಿ ಇಂದಿಗೂ ಗಸಗಸೆಯ ಕಾಯಿಗಳ ಚಿತ್ರವಿದೆ.
ಗ್ಯಾಲನ್ (Galen) ಎಂದೇ ಗುರುತಿಸುವ ಗ್ರೀಕ್ ವೈದ್ಯ ಅಲೀಯಸ್ ಗ್ಯಾಲೆನಸ್ (Aelius Galenus) ಕ್ರಿ.ಶ. 200ರ ಸುಮಾರಿಗೆ ಮೊಟ್ಟ ಮೊದಲ ಬಾರಿಗೆ ಅಫಿಮು ನೋವು ನಿವಾರಕವೆಂದು ಪ್ರಚುರ ಪಡಿಸಿದರು. ಆದರೂ ಇದರ ಬಳಕೆಯ ಮಿತಿಯ ಬಗ್ಗೆ ಅನುಮಾನಗಳು ಇದ್ದೇ ಇದ್ದವು. ಇದು ಮಿತಿಯ ಬಳಕೆಗೆ ಒಗ್ಗಲು ಮುಂದೆ 650 ವರ್ಷಗಳೇ ಬೇಕಾದವು. ಅಲ್ ಕಿನೈದಿ(Al Kindi) ಎಂಬ ಅರಬ್ಬಿನ ದಾರ್ಶನಿಕ ವೈದ್ಯ ಕ್ರಿ.ಶ. 850ರಲ್ಲಿ ಅಫೀಮಿನ ಬಳಕೆಯ ಪ್ರಮಾಣ (Dosage) ದ ಬಗ್ಗೆ ಮಹತ್ವವಾದ ತಿಳಿವಳಿಕೆಯನ್ನು ಗುರುತಿಸಿದನು. ಮುಂದೆ ಕ್ರಿ.ಶ.1000ದ ವೇಳೆಗೆ ಅಲ್ ಬಿರುನಿ ಎಂಬಾತನಿಂದಾಗಿ ಅಫೀಮಿನ ಸಹಿಷ್ಣುತೆ (Tolerance), ವ್ಯಸನ (Addiction) ಮತ್ತು ಮಿತಿಮೀರಿದ (Overdose) ಸೇವನೆಯ ವಿದ್ಯಮಾನಗಳು ಚೆನ್ನಾಗಿಯೆ ತಿಳಿದವು. ಮುಂದಿನ ದಿನಗಳಲ್ಲಿ ಅಫೀಮಿನ ಅಲ್ಕಲಾಯ್ಡ್ಗಳ ಬಗ್ಗೆ ತಿಳಿವಳಿಕೆಯು ಬಂದ ಮೇಲೆ ಆಧುನಿಕ ವೈದ್ಯಕೀಯ ಇತಿಹಾಸದಲ್ಲಿ ಹೊಸತೊಂದು ಲೋಕವೇ ತೆರೆಯಿತು. ನಂತರದ ವಿದ್ಯಾಮಾನಗಳು ಉತ್ಪನ್ನ, ಸಂಸ್ಕರಣೆ, ಬಳಕೆ, ಪ್ರಮಾಣ ಇತ್ಯಾದಿಗಳೆಲ್ಲದರೆ ಮೇಲೆಯೂ ನೀತಿ ನಿಯಮಗಳು, ರೀತಿ ರಿವಾಜುಗಳೂ ಹುಟ್ಟಿಕೊಂಡು ಕಾನೂನಿನ ಚೌಕಟ್ಟಿಗೆ ಒಳಪಟ್ಟವು.
ಅಫೀಮು ಯುದ್ಧಗಳು (Opium Wars)
ಬಳಕೆ, ಮಾರಾಟ, ಲಾಭದ ಹುನ್ನಾರಗಳಿಂದಾಗಿ ಅಫೀಮಿಗೆ ತುಂಬಾ ದೊಡ್ಡ ಶಕ್ತಿಯು ದೊರೆತು ಅಂತರರಾಷ್ಟ್ರೀಯವಾಗಿ ಬೆಳೆದು ಅದು ಯುದ್ಧಗಳಿಗೆ ಕೂಡ ಕಾರಣವಾಯಿತು. ಅಫೀಮು ಮಾನವತೆಗೆ ಪರಿಚಯಗೊಂಡ ಮೊದಲು ಔಷಧಿಯ ಬಳಕೆಗೆ, ಮೂಲತಃ ನೋವು ನಿವಾರಕವಾಗಿ ಅರವಳಿಕೆಯಲ್ಲಿ ಜನಪ್ರಿಯವಾಗಿದ್ದರೂ, ನಾಗರಿಕ ಸಮಾಜ ಬೆಳೆದಂತೆ ಅದರ ಅಮಲು ತರಿಸುವ ಗುಣ ಹೆಚ್ಚು ಆಕರ್ಷಣೀಯವಾಗಿ ಅದರಲ್ಲೂ ಚೀನಿಯರಲ್ಲಿ ವ್ಯಸನವಾಗಿ ಬೆಳೆಯಿತು. ಈಗಲೂ ಚೀನಿಯರು ಧೂಮಪಾನದಲ್ಲಿ ಹೆಚ್ಚು ವ್ಯಸನಿಗಳೇ ಅಗಿದ್ದಾರೆ. ಅಫೀಮು ಧೂಮಪಾನದಲ್ಲಿ ಬೆರೆತು, ಚೀನಿಯರಿಗೆ ಅಫೀಮು ಪಶ್ಚಿಮದ ಮಾರಾಟಗಾರ ಕಂಪನಿಗಳ ಮೂಲಕ, ಜೊತೆಗೆ ಕಳ್ಳಸಾಗಣೆಯಲ್ಲಿಯೂ ತಲುಪಲು ಆರಂಭವಾದದ್ದೇ ಯುದ್ಧಗಳಿಗೆ ಕಾರಣವಾಯಿತು.
ನಡೆದದ್ದೇನೆಂದರೆ 18ನೆಯ ಶತಮಾನದ ಕೊನೆಯಲ್ಲಿ ಮತ್ತು 19ನೆಯ ಶತಮಾನದ ಆರಂಭದಲ್ಲಿ ಚೀನಿಯರಿಂದ ಹೆಚ್ಚು ಲಾಭ ಪಡೆಯಲು, ಅಷ್ಟೊತ್ತಿಗಾಗಲೇ ಭಾರತದಲ್ಲಿ ಸಾಮ್ರಾಜ್ಯ ಸ್ಥಾಪಿಸಿದ್ದ ಬ್ರಿಟೀಷರು, ಬಂಗಾಳದಲ್ಲಿ ಹೆಚ್ಚು ಅಫೀಮನ್ನು ಬೆಳೆದು ಚೀನಾಕ್ಕೆ ರಫ್ತು ಮಾಡತೊಡಗಿದರು. ಚೀನಾದ ಚಕ್ರವರ್ತಿಗಳು 1729, 1799, 1814 ಮತ್ತು 1831ರಲ್ಲಿ ನಿರಂತರವಾಗಿ ಅಫೀಮನ್ನು ನಿಷೇಧಿಸಲು ಆಮದನ್ನು ನಿಯಂತ್ರಿಸತೊಡಗಿದರು. ಆದರೂ ನಿರಂತರವಾಗಿ ಪಾಸ್ಚಿಮಾತ್ಯ ರಾಷ್ಟ್ರಗಳು ಪ್ರಮುಖವಾಗಿ ಬ್ರಿಟನ್, ಅಲ್ಲದೆ ಕೆಲವು ಅಮೆರಿಕದ ವರ್ತಕರು ಹಾಗೂ ಫ್ರಾನ್ಸಿನ ವರ್ತಕರೂ ಲಾಭದ ಆಸೆಗಾಗಿ ಪ್ರಚೋಧಿಸುತ್ತಲೇ ಇದ್ದರು. ಇದರಿಂದಾಗಿ 1839ರಲ್ಲಿ ಮೊಟ್ಟ ಮೊದಲ ಒಪಿಯಂ ವಾರ್-ಅಫೀಮಿನ ಯುದ್ಧ ಚೀನಿಯರು ಮತ್ತು ಬ್ರಿಟೀಷರ ನಡುವೆ ಆರಂಭವಾಯಿತು. ಮುಕ್ತವಾಗಿದ್ದ ಬಂದರುಗಳನ್ನು ಮುಚ್ಚುವುದು ಅಫಿಮನ್ನು ನಾಶಗೊಳಿಸುವುದು, ವರ್ತಕರನ್ನು ತಡೆದು ಕಸಿಯುವುದು ಮುಂತಾದ ಬಗೆಗಳಲ್ಲಿ ಯುದ್ಧವು ನಡೆಯತೊಡಗಿತು.
ಹೀಗಾಗಿ ಮೊದಲ ಅಫೀಮಿನ ಯುದ್ಧ 1839 ರಿಂದ 1842ರ ವರೆಗೂ ನಡೆಯಿತು. ಮುಂದೆ ಮತ್ತೊಮ್ಮೆ 1854ರಲ್ಲಿ ಎರಡನೆಯ ಯುದ್ಧಯೂ ನಡೆಯಿತು. ಎರಡನೆಯ ಬಾರಿ ಫ್ರಾನ್ಸ್ ಕೂಡ ಭಾಗಿಯಾಯಿತು. ಎರಡೂ ಯುದ್ಧಗಳಲ್ಲಿ ಚೀನಾವು ಸೋತು ಪಾಶ್ಚಿಮಾತ್ಯ ಶಕ್ತಿಗೆ ಮಣಿಯಬೇಕಾಯಿತು. ಮತ್ತೆ ಚೀನಾದ ಬಂದರುಗಳು ಅಫೀಮಿನ ಮಾರಾಟಕ್ಕೆ ತೆರೆದುಕೊಂಡವು. ಹೀಗೆ ಪುಟ್ಟ ಕಾಳಿನ ಗಿಡದ ಅಮಲಿನಲ್ಲಿ ಯುದ್ಧವೂ ನಡೆದು ಸುಮಾರು 18,000 -20,000 ಜನರ ಸಾವು ನೋವಿಗೆ ಕಾರಣವಾಯಿತು. ಇವರಲ್ಲಿ ಹೆಚ್ಚಾಗಿ ಎಲ್ಲರೂ ಚೀನಿಯರೇ! ಸುಮಾರು ನೂರಾರು ಮಂದಿ ಅಷ್ಟೇ ಬ್ರಿಟೀಷರು.
ಓಪಿಯಂ ಯುದ್ಧಕ್ಕೆ ಪ್ರಮುಖ ನಾಯಕ ಚೀನಿಯ ದಾರ್ಶನಿಕ ರಾಜನೀತಿಜ್ಞ ಲಿನ್ ಝಾಶು (Lin Zexu (30 August 1785 – 22 November 1850) ನಿಜಕ್ಕೂ ಲಿನ್ ಅಮಲು ತರುವ ವ್ಯಸನಕ್ಕೆ ಕೊನೆ ಹಾಡಬೇಕೆಂದು ವಿರೋಧಿಸಿದ್ದರೆ, ಆತನನ್ನೇ ಹೊಣೆಗಾರನನ್ನಾಗಿ ಮಾಡಿದ್ದು ಇತಿಹಾಸ. ಆತ ಅಫೀಮನ್ನು ತಡೆಯುವಂತೆ ರಾಣಿ ವಿಕ್ಟೋರಿಯಾಗೂ ಪತ್ರ ಬರೆದು ವಿನಂತಿಸಿದ್ದರಂತೆ! ದುರಾದೃಷ್ಟಕ್ಕೆ ಆ ಪತ್ರ ರಾಣಿಯನ್ನು ತಲುಪಲೇ ಇಲ್ಲ ಎಂಬ ಅಂದಾಜಿದೆ, ಏಕೆಂದರೆ ಏನೂ ಪ್ರತ್ಯುತ್ತರವೇನೂ ಬರಲೇ ಇಲ್ಲ. ಮುಂದೊಮ್ಮೆ ಸಾರ್ವಜನಿಕವಾಗಿ ಮುಕ್ತವಾಗಿ ಲಂಡನ್ ಟೈಮ್ಸ್ನಲ್ಲಿ ಅದು ಪ್ರಕಟಣೆಯಾಗಿತ್ತು. ಆದರೆ ಅಮಲಿಗೆ ಯಾರು ತಾನೇ ತಡೆ ಹಿಡಿಯಬಲ್ಲರು. ಮುಂದೊಂದು ದಿನ, ಅಫೀಮಿನ ವಿರೋಧದ ರುವಾರಿ ಲಿನ್ ಝಾಶು (Lin Zexu) ಅವರಿಗೊಂದು ಸ್ಮಾರಕವನ್ನು ನ್ಯೂಯಾರ್ಕ್ ನಗರದ ಚೀನಾ ಟೌನ್-ಮಾನ್ಹಟನ್ ಅಲ್ಲಿ ಒಂದು ಚೌಕದಲ್ಲಿ ಕಟ್ಟಲಾಯಿತು. ಅದನ್ನು ಲಿನ್ ಝಾಶು ಚೌಕವೆಂದೂ, ಚಾತಂ ಚೌಕವೆಂದೂ ಕರೆಯಲಾಗುತ್ತದೆ.
ಒಂದು ಮಿಲಿಗ್ರಾಂಗಿಂತಲೂ ಕಡಿಮೆ ತೂಕದ, ಮಿ.ಮೀಗಿಂತಾ ಚಿಕ್ಕ ಚಿಕ್ಕ ಕಾಳುಗಳು ನಮ್ಮ ಆಹಾರದಲ್ಲಿ ಒಂದಾಗಿ ಸೌಂದರ್ಯ, ರುಚಿ, ಕೊಬ್ಬು, ಅಮಲು, ಔಷಧ, ನೋವು ನಿವಾರಕ ಅಷ್ಟೆಲ್ಲವೂ ಆಗಿ, ತುಂಬಾ ಕಟ್ಟು ನಿಟ್ಟಾದ ಕಾನೂನಿನ ಒಳಪಟ್ಟಿವೆ. ಬೆಳೆಯುತ್ತಲೇ ಲಾಭ, ಪರಿಹಾರ, ಸಾಂಸ್ಕೃತಿಕ ಪರಿಣಾಮಗಳು ಅಷ್ಟೇಕೆ ಯುದ್ಧಗಳಿಗೂ ಕಾರಣವಾಗಿ ನಮ್ಮೊಡನೆ ಒಂದಾಗಿ ಮಾನವ ಸಂಸ್ಕೃತಿಗೆ ಅಮಲಿನ ಸೌಂದರ್ಯವನ್ನು, ನೋವಿಗೆ ಪರಿಹಾರವನ್ನೂ ಕೊಟ್ಟಿದೆ.
ಹೆಚ್ಚಿನ ಓದಿಗೆ: