You are currently viewing ಕಾಯಿಯನ್ನೇ ಕಾಳು ಎಂದು ಕರೆಸಿಕೊಳ್ಳುವ ಕೊತ್ತಂಬರಿ Coriandrum sativum

ಕಾಯಿಯನ್ನೇ ಕಾಳು ಎಂದು ಕರೆಸಿಕೊಳ್ಳುವ ಕೊತ್ತಂಬರಿ Coriandrum sativum

ಬಾಲ್ಯದಲ್ಲಿ ಯಾರನ್ನಾದರೂ ತಮಾಷೆಗೆ “ಓಹ್‌ ಇವನೇನು ರಾಜ..ಮಹಾರಾಜ, ಕೊತ್ತಂಬರಿ ಬೀಜ” ಎಂದು ಆಡಿಕೊಳ್ಳುತ್ತಿದ್ದೆವು. ರಾಜನಿಂದ ಏಕ್‌ದಂ ಕೊತ್ತಂಬರಿ ಬೀಜಕ್ಕೆ ಇಳಿಸಿ ಹೀಯಾಳಿಸುವ ನೆನಪುಗಳು ಯಾರಿಗಾದರೂ ಬಗೆ ಬಗೆಯ ರೂಪದಲ್ಲಿ ಇದ್ದಿರಬಹುದು. ಈ ಸಂಗತಿ ಕೊತ್ತಂಬರಿ ಸಸ್ಯಕ್ಕೂ ತಿಳಿದಿರುವ ಬಗ್ಗೆ ನನಗೆ ಆದರ ವೈವಿಧ್ಯಮಯ ವಿಚಾರಗಳ ಒಳಹೊಕ್ಕಾಗ ಅನ್ನಿಸಿದೆ. ಹೌದು, ಕೊತ್ತಂಬರಿಗೆ ಸಂಬಾರು ಪದಾರ್ಥಗಳಲ್ಲೇ ತೀರಾ ಕಡೆಯ ಗೌರವ ಕೊಟ್ಟಿದ್ದೇವೆ. ಸಂಬಾರು ಪುಡಿಯಲ್ಲಿ ಒಟ್ಟಾರೆಯ ಹೆಚ್ಚುವರಿ (ಬಲ್ಕ್‌)ಯಲ್ಲಿ ಇದರ ಬಳಕೆಯು ಮುಖ್ಯವಾಗಿದೆ. ರೇಟೂ ಸಹಾ ಇತರೇ ಸ್ಪೈಸ್‌ಗಳಿಗೆ ಹೋಲಿಸಿದರೆ ಕಡಿಮೆಯೆ. ಅಷ್ಟೆ ಅಲ್ಲಾ, ಇದನ್ನು ವೈಜ್ಞಾನಿಕವಾಗಿ ಗುರುತಿಸಿ ಹೆಸರಿಸುವಾಗಲೂ ಕಾರ್ಲ್‌ ಲಿನೆಯಾಸ್‌ ಅವರೂ ಸಹಾ ಇದೊಂದು ಕಳೆ ಗಿಡ ಎಂದೇ ಗುರುತಿಸಿ ಹೆಸರಿಸಿದ್ದರು. ಇಂದಿಗೂ ಕೃಷಿಯಲ್ಲಿ ಒಳಗಾಗಿದ್ದರೂ ಸಹಾ ತನ್ನ ಕಳೆ-ಗಿಡದ ವನ್ಯ ಸಂಸ್ಕೃತಿಯನ್ನು ಬಿಟ್ಟು ಕೊಡದ ಗಿಡ. ಜಗತ್ತಿನ ಹಲವಾರು ಕಳೆಯ ಗಿಡಗಳಂತೆ ಆಕ್ರಮಣಕಾರಿ ಸಸ್ಯಗಳ ಗುಂಪಿನಲ್ಲೂ ಗುರುತಿಸಿಕೊಂಡ ಗಿಡ, ಮಾತ್ರವಲ್ಲ ಬಹು ಪಾಲು ವನ್ಯ ಸಸ್ಯಗಳಂತೆ ಅಕಾಲವಾಗಿಯೂ ಹೂಬಿಟ್ಟು ಬದುಕು ಕಟ್ಟಿಕೊಳ್ಳುವ ಗುಣವುಳ್ಳದ್ದು. ನೀವೆಲ್ಲಾ ಎಳೆಯ ಗಿಡಗಳಲ್ಲಿ ಒಮ್ಮೊಮ್ಮೆ ಹೂವನ್ನು ನೋಡಿರಬಹುದು. ಗಿಡಗಳು ಚಿಕ್ಕದಾಗಿದ್ದರೂ ಹೂಬಿಟ್ಟು ಬಲಿತಂತೆ ಕಾಣುತ್ತದೆ. ಆದರೆ ಇದೇ ಗಿಡ ಮತ್ತೊಮ್ಮೆ ಹೂವನ್ನು ಬಿಟ್ಟು ಬೀಜಗಟ್ಟಲು ಅಣಿಯಾಗುತ್ತದೆ. ಇಂತಹಾ ವಿಚಿತ್ರವಾದ ಹಾಗೂ ವಿಶೇಷವಾದ ಗುಣವನ್ನು ಕೇವಲ ವನ್ಯ ಸಸ್ಯಗಳಲ್ಲಿ ಮಾತ್ರವೇ ಕಾಣಬಹುದು. ತನ್ನನ್ನು ಎಲ್ಲಿ ಕಡೆಗಣಿಸುತ್ತಾರೊ ಎಂದು ತನ್ನ ವಂಶೋದ್ಧಾರಕ್ಕೆ ಸದಾ ಅಣಿಯಾಗಿರುವ ಕೊತ್ತಂಬರಿಯು ಕೃಷಿಗೆ ಒಳಗಾಗಿ ಸಹಸ್ರಾರು ವರ್ಷಗಳಾದರೂ ತನ್ನ ವನ್ಯ ಗುಣವನ್ನು ಕಳೆದುಕೊಳ್ಳದ ಜಾಣತನವನ್ನೂ ಉಳಿಸಿಕೊಂಡಿದೆ. ಅಯ್ಯೋ ಇದೊಂದೇ ಅಲ್ಲಾ..! ಕಾಳಿಗೆ ಇರುವ ವೈಭವಭರಿತವಾದ ಗುಣವನ್ನು ಬೇರೊಂದು ಬಗೆಯಲ್ಲಿ ವಿಸ್ತರಿಸಿಕೊಂಡು ಸಸ್ಯದ ಮೈಯೆಲ್ಲಾ ಘಮಘಮಿಸುತ್ತದೆ. ಸಾಲದಕ್ಕೆ ಬೇರಿಗೂ ಅದೇ ಪರಿಮಳವನ್ನು ತುಂಬಿಕೊಂಡೂ ಅದನ್ನೂ ಮಾನವಕುಲವು ಆಶ್ರಯಿಸುವಂತೆ ನೋಡಿಕೊಂಡಿದೆ. ಹಾಗಾಗಿ ನಿಜಕ್ಕೂ ಕೊತ್ತಂಬರಿಯ ವಿಷಯದಲ್ಲಿ ಏನ್‌..! ಮಹಾ! ಎನ್ನುವಂತೆಯೇ ಇಲ್ಲ. ಗೊತ್ತಾದ ಸಮಯದಲ್ಲಿ ಕೊಯಿಲು ಮಾಡಿದರೆ ಸಸ್ಯದ ಯಾವುದೇ ಭಾಗವನ್ನು ಸೀಳಿದರೂ ಅದೇ ಪರಿಮಳವನ್ನು ಬೀರುತ್ತಾ ಸಂಭ್ರಮಿಸುವ ಅಪರೂಪದ ಗಿಡ.

ಕಳೆದವಾರದ ಸಬ್ಬಸಿಗೆಯ ಪರಿಮಳವಿನ್ನೂ ಮಾಸಿರದ ಈ ಹೊತ್ತಿನಲ್ಲಿ ಅದೇ ಸಸ್ಯಕುಟುಂಬದ (Apiaceae) ಕೊತ್ತಂಬರಿಯ ಕಥನವನ್ನು ಹೇಳುವ ಅನಿವಾರ್ಯವಾದ ಖುಷಿಯು ಎದುರಾಗಿದೆ. ಕರಿಬೇವು-ಕೊತ್ತಂಬರಿಗಳು ಕೊಳ್ಳುವಾಗಲಂತೂ ನೆನಪಿಗೆ ಒಮ್ಮೆಲೆ ಬರುವುದಲ್ಲದೆ, ನಮ್ಮ ದೈನಂದಿನ ಬಳಕೆಯ ತಿನಿಸುಗಳಲ್ಲಿಯೂ ಒಂದಾಗಿರುತ್ತವೆ. ಕೊತ್ತಂಬರಿಯು ಅನೇಕ ಸಂಗತಿಗಳನ್ನು ತನ್ನೊಳಗಿಟ್ಟುಕೊಂಡು ಮೈಯೆಲ್ಲಾ ಪರಿಮಳಭರಿತವಾಗಿದ್ದು ಮಾನವಕುಲವು ಅತ್ಯಂತ ಹಿಂದಿನಿಂದಲೂ ಬಳಸುತ್ತಿರುವ ಸಂಬಾರು ಸಸ್ಯವಾಗಿದೆ. ಬಳಕೆಯ ಹಿತದಲ್ಲಿ ಅತ್ಯಂತ ಆಪ್ತವಾದ ಸಂಬಾರು ಸಸ್ಯವೂ ಹೌದು! ಹಾಗೆಂದು ಕರೆಯಿಸಿಕೊಳ್ಳದೆಯೂ ಚಟ್ನಿ, ಪಲ್ಯಗಳಲ್ಲಿ, ಸಂಜೆಯ ಚಾಟ್‌ಗಳ ಮೇಲುದುರಿಸುವ ಭಾಗವೂ ಆಗಿದೆ. ಹಸಿರು ಮೆಣಸಿನ ಕಾಯಿಯ ಚಟ್ನಿ ಕೊತ್ತಂಬರಿ ಸೊಪ್ಪಿನ ಬೆರಕೆಯಿಲ್ಲದೆ ಪರಿಪೂರ್ಣವಾಗುವುದಿಲ್ಲ. ಬಳಕೆಯು ಅಷ್ಟೆಕ್ಕೆ ನಿಲ್ಲುವುದಿಲ್ಲ. ಹಸಿರು ಸೊಪ್ಪು ಸಣ್ಣಗೆ ಹೆಚ್ಚಿ ಬಳಸಿದರೂ ಸಾರು, ಪಲ್ಯಗಳ ಸಂಬಾರು ಪರಿಮಳದಲ್ಲಿ ಕೊತ್ತಂಬರಿ ಕಾಳು ಇಲ್ಲದೆ ಅದರ ತೃಪ್ತಿ ಇಡಿಯಾಗಿ ದಕ್ಕುವುದಿಲ್ಲ. ಚೀನಿಯರು ಬೇರನ್ನೂ ಬಳಸಿ, ಒಂದು ಸಸ್ಯದ ಪರಿಪೂರ್ಣ ಬಳಕೆಯ ಸಾಧ್ಯತೆಯನ್ನು ದಾಖಲು ಮಾಡಿದ್ದಾರೆ. ಪರಿಮಳಕ್ಕೆ ಅಗತ್ಯವಾದ ತೈಲವನ್ನು ಗಿಡವನ್ನೆಲ್ಲಾ ಆವರಿಸಿಕೊಳ್ಳುವಂತೆ ವಿಕಾಸಗೊಳಿಸಿಕೊಂಡಿರುವ ವಿಚಿತ್ರ ಸಸ್ಯವಿದು.

ಸಸ್ಯವೈಜ್ಞಾನಿಕವಾಗಿ ಕೊರಿಯಾಂಡ್ರಂ ಸಟೈವಂ (Coriandrum sativum)ಎಂದು ಹೆಸರಿಸಿದ ಜೀವಿ ವರ್ಗೀಕರಣ ಪಿತಾಮಹಾ ಕಾರ್ಲ್‌ ಲಿನೆಯಾಸ್‌ ಅವರು ಆಗ ಆ ಸಸ್ಯವನ್ನು ಇಟಲಿಯಿಂದ ಪಡೆದುಕೊಂಡಿದ್ದರು. ಕೊರಿಯಾಂಡ್ರಂ ಸಂಕುಲವು ಸಟೈವಂ ಜೊತೆಗೆ ಟೊರ್ಡಿಲಿಯಂ ಎಂಬ ಪ್ರಭೇಧವನ್ನೂ ಹೊಂದಿದ್ದು ಅದು ಅಪ್ಪಟ ವನ್ಯ ಪ್ರಭೇದವಾಗಿದೆ. ಇದೇ ಸಂಕುಲಕ್ಕೆ ಹತ್ತಿರವಾದ ಮತ್ತೊಂದು ಸಂಕುಲವು ಬೈಫೊರ ಎಂಬುದಾಗಿದ್ದು, ಅದೂ ಸಹಾ ವನ್ಯತಳಿಯೇ! ಹಾಗಾಗಿ ಇವೆಲ್ಲವೂ ಕಳೆನಾಶಕಗಳ ವಿಪರೀತ ಬಳಕೆಯಿಂದ ಹಲವಾರು ಕಡೆಗಳಲ್ಲಿ ವಿನಾಶದ ಹಾದಿಯನ್ನು ಹಿಡಿದಿವೆ. ಹಾಗಾಗಿ ಕೊತ್ತಂಬರಿಯ ಹತ್ತಿರದ ಸಂಕುಲಗಳು ವಿನಾಶಕ್ಕೆ ಹತ್ತಿರವಾಗಿದ್ದು, ಕೊತ್ತಂಬರಿಗೆ ವಿಕಾಸದ ಹಾದಿಯ ಸಂಬಂಧಿಯನ್ನು ಕಳೆದುಕೊಳ್ಳುತ್ತಿರುವ ದುಃಖ ಆವರಿಸಿಕೊಂಡಿದೆ. ಇಷ್ಟೆಲ್ಲದರ ಜೊತೆಗೆ ಇವೆಲ್ಲವುಗಳ ವರ್ಗದ ಸಸ್ಯಗಳು ಬಹು ಪಾಲು ವನ್ಯ ಸಸ್ಯಗಳೇ ಆಗಿದ್ದು ಎಲ್ಲವೂ ಕಳೆನಾಶಕಗಳ ಹಾವಳಿಯಲ್ಲಿ ನರಳಿವೆ. ಇದರ ಜೊತೆಗೇ ಕೊತ್ತಂಬರಿಯು ತನ್ನ ವನ್ಯ ಸಂತಾನ ಪ್ರವೃತ್ತಿಯನ್ನು ಉಳಿಸಿಕೊಂಡು ನಮ್ಮ ಸಂಬಾರಿನ ಪರಿಮಳಕ್ಕೆ ಸಾಥ್‌ ನೀಡುತ್ತಿದೆ. ಅದಕ್ಕಾಗಿ ಮೈಯೆಲ್ಲಾ ಸುವಾಸನೆಯನ್ನು ತುಂಬಿಕೊಂಡು ಹೂವು-ಬಿಟ್ಟು ಬೀಜಗಟ್ಟುವ ಹವಣಿಕೆಯನ್ನು ಮಡಿಲಲ್ಲಿಟ್ಟು ನಮ್ಮ ನಿಮ್ಮೆಲ್ಲರ ಅಡುಗೆಯ ಮನೆಯ ಶಾಶ್ವತ ಸದಸ್ಯನಾಗಿದೆ. ಕೊತ್ತಂಬರಿಯು ನಮ್ಮ ದೇಶಕ್ಕೆ ಹೇಗೆ ಬಂತೆಂಬುದು ದಾಖಲೆಗಳಲ್ಲಿ ಇಲ್ಲ. ಬಹುಶಃ ಹಿಂದಿನ ಅರಬ್ಬರ ಓಡಾಟದಲ್ಲಿ ತನ್ನ ತವರೂರಾದ ಇರಾನ್‌ನಿಂದ ಬಂದಿದೆ. ಬಹುಪಾಲು ಜಗತ್ತನ್ನು ಆವರಿಸಿರುವ ಕೊತ್ತಂಬರಿಯು ಆಫ್ರಿಕಾವನ್ನು ಮಾತ್ರ ಅಷ್ಟೊಂದು ಹಿತವಾಗಿಸಿಕೊಂಡಿಲ್ಲ. ಜಗತ್ತಿನ ಆಕ್ರಮಣಕಾರಿ ಸಸ್ಯಗಳಲ್ಲಿ ಒಂದಾಗಿ ಆಫ್ರಿಕಾ, ಕೆನಡಾ, ಉತ್ತರ ಚೀನಾದ ಪ್ರದೇಶಗಳನ್ನು ಹೊರತುಪಡಿಸಿ, ಪ್ರಪಂಚದಾದ್ಯಂತ ಹಬ್ಬಿದೆ.

ಕೊರಿಯಾಂಡರ್‌ ಇಂಗ್ಲೀಶಿನ ಪದವು 14ನೆಯ ಶತಮಾನದಿಂದೀಚೆಗಷ್ಟೇ ಬಳಕೆಯಲ್ಲಿದೆ. ಇದೇ ಪದವು ಇದರ ಸಂಕುಲದ ಹೆಸರಿಗೂ ಮೂಲವಾಗಿದ್ದು ಅದನ್ನು ಮೂಲತಃ ಪ್ರಾಚೀನ ಗ್ರೀಕ್‌ ಪದವಾದ ಕೊರಿಯಾಂಡ್ರನ್‌ ಎಂಬುದರಿಂದ ಪಡೆಯಲಾಗಿದೆ. ಈ ಪದವೂ ಸಹಾ ಕೊರಿಸ್‌ ಎಂದರೆ “ತಿಗಣೆ” ಎಂಬ ಅರ್ಥ ಹೊಂದಿರುವ ಪದದ ವ್ಯುತ್ಪತ್ತಿಯಾಗಿದ್ದು ಅದು ಬಲಿಯದ ಕಾಳುಗಳ ವಾಸನೆಯಿಂದ ಹಾಗೆ ಕರೆದಿರಬಹುದು ಎಂದೇ ನಂಬಲಾಗಿದೆ. ಕೊರಿಯಾಂಡರ್‌ ಆಗಲಿ ಕನ್ನಡದ ಕೊತ್ತಂಬರಿಯಾಗಲಿ ಎರಡೂ “ಕ”ಕಾರದ ಸದ್ದನ್ನು ಹೊಂದಿರುವಂತೆ ಜಗತ್ತಿನ ಬಹುಪಾಲು ಭಾಷೆಯ ಪದಗಳು ಕ-ಕಾರದ ಸದ್ದಿನ ಪದಗಳನ್ನೇ ಹೊಂದಿರುವುದು ಕೊತ್ತಂಬರಿಯ ವಿಶೇಷ. ಸಂಸ್ಕೃತದಲ್ಲಿಯೂ “ಧನಯಾಕ ಹಾಗೂ ಕೊಸ್ತುಂಬರಿ” ಎಂಬ ಪದಗಳಿಂದ ಕರೆಯುವುದರಿಂದ ಇವರೆಡೂ ಪದಗಳ ವಿಕಾಸದ ಪದಗಳಾದ ಧನಿಯಾ ಮತ್ತು ಕೊತ್ತಂಬರಿ ಎರಡೂ ನಮ್ಮಲ್ಲಿ ಬಳಕೆಯಲ್ಲಿವೆ. ಬಹುತೇಕ ಯೂರೋಪ್‌ ರಾಷ್ಟ್ರಗಳು, ಉತ್ತರ ಮತ್ತು ದಕ್ಷಿಣ ಅಮೆರಿಕಾ ಹಾಗೂ ಮೆಕ್ಸಿಕೊಗಳಲ್ಲಿ ಸೊಪ್ಪನ್ನು ಸಿಲಾಂಟ್ರೊ ಎಂದೂ ಬೀಜ ಅಥವಾ ಕಾಳನ್ನು ಕೊರಿಯಾಂಡರ್‌ ಎಂದೂ ಕರೆಯುತ್ತಾರೆ. ಸಿಲಾಂಟ್ರೊ ಮೂಲತಃ ಸ್ಪಾನಿಷ್‌ ಪದ. ವಿಕಾಸದಿಂದ ಇರಾನಿನ ತವರಿನದಾಗಿದ್ದರೂ, ಕೊತ್ತಂಬರಿಯ ಅತ್ಯಂತ ಹಳೆಯ ಅವಶೇಷಗಳು ದೊರೆತಿರುವುದು ಇಸ್ರೇಲಿನಲ್ಲಿ. ಅಲ್ಲಿನ “ನಹಲ್‌ ಹೆಮರ್‌” ಎಂಬ ಗುಹೆಯಲ್ಲಿ ಕಾಳಿನ ಅವಶೇಷಗಳು ದೊರೆತಿವೆ. ಹೀಗೆಯೇ ಈಜಿಪ್ಟಿನಲ್ಲೂ ಸಮಾಧಿಗಳಲ್ಲಿ ಕೊತ್ತಂಬರಿಯ ಬೀಜಗಳು ದೊರೆತಿದ್ದು, ಪ್ರಾಚೀನ ಈಜಿಪ್ಟರು ಕೊತ್ತಂಬರಿಯ ಬಳಸುತ್ತಿದ್ದ ಕುರುಹು ಎಂದು ನಂಬಲಾಗಿದೆ. ಆದಾಗ್ಯೂ ಈಜಿಪ್ಟಿನಲ್ಲಿ ಕೊತ್ತಂಬರಿ ಸಸ್ಯದ ಯಾವುದೇ ವನ್ಯ ತಳಿಗಳು ದೊರಕದಿದ್ದರೂ, ಅಲ್ಲಿನ ಗೋರಿಗಳಲ್ಲಿ ದೊರೆತ ವಿಶೇಷತೆ ಮಾತ್ರ ಅಚ್ಚರಿಯಾಗಿದ್ದು, ಈಜಿಪ್ಟಿಗೆ ಈ ಸಸ್ಯವು ಪರಿಚಯಿಸಲ್ಪಟ್ಟ ಬೆಳೆ ಎಂಬುದಾಗಿ ತಿಳಿಯಲಾಗಿದೆ.

ಭಾರತೀಯ ಬಳಕೆಯಲ್ಲಿ ಕೊತ್ತಂಬರಿಯು ಅತ್ಯಂತ ಹಳೆಯ ದಾಖಲೆಗಳಲ್ಲಿ ಒಂದು ಎಂದೇ ನಂಬಲಾಗಿದೆ. ಇಲ್ಲಿ ಕ್ರಿ.ಪೂ 5000ದಷ್ಟು ಹಿಂದಿನಿಂದಲೇ ಬಳಸುತ್ತಿರುವ ಬಗೆಗೆ ಅನುಮಾನಗಳಿವೆ. ಇಸ್ರೇಲಿನಲ್ಲಿ ಕ್ರಿ.ಪೂ 2500 ವರ್ಷಗಳ ಹಿಂದಿನ ಕುರುಹು ಸಿಕ್ಕಿದ್ದರೆ, ಈಜಿಪ್ಟರಲ್ಲಿ ಕ್ರಿ.ಪೂ. 1550ರಷ್ಟು ಹಿಂದಿನ ದಾಖಲೆಗಳು ದೊರೆತಿವೆ. ಗ್ರೀಕ್‌ ಬರಹಗಾರರಾದ ಥಿಯೊಪ್ರಾಸ್ಟಸ್‌, ಹಿಪ್ಪೊಕ್ರಟೆಸ್‌ ಅಲ್ಲದೆ ಲ್ಯಾಟಿನ್‌ ಲೇಖಕರೂ ಇದನ್ನು ಉಲ್ಲೇಖಿಸಿದ್ದಾರೆ. ಯಹೂದ್ಯರು ಕೊತ್ತಂಬರಿಯ ಪ್ರಿಯರಾಗಿದ್ದ ಬಗ್ಗೆ ಹಳೆಯ ಒಡಂಬಡಿಕೆಯ ದಾಖಲೆಗಳಿಂದಲೂ ತಿಳಿದು ಬರುತ್ತದೆ. ಚೀನಿಯರಿಗೆ ಪರ್ಷಿಯನ್ನರು ಕೊತ್ತಂಬರಿಯನ್ನು ಪರಿಚಯಿಸಿದರು ಎಂಬುದಕ್ಕೆ ಚೀನಿಯರಲ್ಲಿ ಪರ್ಷಿಯನ್‌ ಪದವೇ ಬಹಳ ಕಾಲ ಬಳಕೆಯಲ್ಲಿದ್ದ ಸಾಕ್ಷಿಯನ್ನು ಅಧ್ಯಯನಕಾರರು ಗುರುತಿಸಿದ್ದಾರೆ. ಯೂರೋಪಿಗೆ ರೋಮನ್ನರು ಪರಿಚಿಯಿಸಿದರು. ಹಳೆಯ ರಷಿಯಾದ ಒಕ್ಕೂಟವು ಕೊತ್ತಂಬರಿಯ ವಿಶೇಷ ಉತ್ಪಾದನೆಯಲ್ಲಿ ಒಲವು ಹೊಂದಿದ್ದ ಬಗ್ಗೆ ಸಾಕ್ಷಿಗಳಿವೆ. ಕೊತ್ತಂಬರಿಯಿಂದ ತೈಲವನ್ನು ತೆಗೆಯುವ ಉದ್ಯಮದಲ್ಲೂ ರಷಿಯಾದ ಒಕ್ಕೂಟ ಮುಂಚೂಣಿಯಲ್ಲಿತ್ತು. ಈಗಲೂ ರಷಿಯಾ ಕೊತ್ತಂಬರಿಯ ಉತ್ಪಾದನೆ ಮತ್ತು ವೈವಿಧ್ಯ ಬಳಕೆಯಲ್ಲಿ ಅತ್ಯಂತ ಆಸಕ್ತ ದೇಶವಾಗಿದೆ.

ಕೊತ್ತಂಬರಿಯ ಹೂವುಗಳ ಬಗೆಗೆ ವಿಶೇಷವಾಗಿರುವ ಸಂಗತಿಗಳಿವೆ. ಹೂವುಗಳು ಪಿಂಕ್‌ ಬಣ್ಣದ ಚಹರೆ ಹೊಂದಿದ್ದು ದಟ್ಟ ಬಿಳಿಯ ಬಣ್ಣದಿಂದ ಕೂಡಿರುತ್ತದೆ. ಹೂವುಗಳು ಚಿಕ್ಕದಾಗಿದ್ದರೂ ಅಪಾರ ಜೇನು ನೊಣಗಳನ್ನು ಆಕರ್ಷಿಸುವ ಗುಣವನ್ನು ಹೊಂದಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಹೂವುಗಳಲ್ಲಿ ಸ್ರವಿಸುವ ಮಕರಂದ. ಹಾಗಾಗಿ ಜೀವಿಪರಿಸರದ ದೃಷ್ಟಿಯಿಂದ ಅಪಾರ ಸಾಧ್ಯತೆಯ ಸಸ್ಯವಾಗಿದೆ. ಒಂದು ಅಂದಾಜಿನಂತೆ ಒಂದು ಹೆಕ್ಟೇರ್‌ ಕೊತ್ತಂಬರಿಯ ಹೊಲದಲ್ಲಿ ಇರುವ ಹೂವುಗಳಿಂದ ಸುಮಾರು 500 ಕಿ.ಗ್ರಾಂ ಜೇನುತುಪ್ಪವನ್ನು ಸಂಗ್ರಹಿಸಬಹುದಂತೆ. ಅಂದರೆ ಪ್ರತೀ ಎಕರೆಯಲ್ಲೂ 200 ಕಿ.ಗ್ರಾಂ ಜೇನು ತುಪ್ಪವನ್ನು ಪಡೆಯಬಹುದಾಗಿದೆ. ಹಾಗಾಗಿ ತುಂಬು ಹೂಬಿಟ್ಟ ಕೊತ್ತಂಬರಿಯ ಹೊಲವು ಜೈವಿಕ ತೋಟದಂತೆ ವರ್ತಿಸಿ ಪರಿಸರ ಹಾಗೂ ಆರ್ಥಿಕ ದೃಷ್ಟಿಯಿಂದ ಪ್ರಾಮುಖ್ಯತೆಯನ್ನು ಪ್ರತಿಷ್ಠಾಪಿಸಿದೆ.

ಕೊತ್ತಂಬರಿಯ ಬಳಕೆಯ ಬಗೆಗೆ ನಮಗೆಲ್ಲರಿಗೂ ಅಪಾರ ತಿಳಿವಳಿಕೆಯು ಇದೆ. ಎಳೆಯ ಸೊಪ್ಪಿನಿಂದ ಆರಂಭಿಸಿ ಬಲಿತ ಕಾಳಿನವರೆಗೂ ಸಸ್ಯದ ಬಹುತೇಕ ಭಾಗಗಳನ್ನು ಆಹಾರ ಮತ್ತು ಔಷಧಗಳೆರಡರಲ್ಲೂ ಬಳಸುತ್ತಿದ್ದೇವೆ. ಹಸಿರು ಸಸ್ಯದ ಪರಿಮಳಕ್ಕೆ ಅದರಲ್ಲಿರುವ ಅಲ್ಡಿಹೈಡ್‌ಗಳೆಂಬ ಇಂಗಾಲದ ಸಂಯುಕ್ತಗಳೇ ಕಾರಣ. ಈ ಅಲ್ಡಿಹೈಡ್‌ ರಾಸಾಯನಿಕಗಳು ಗಿಡವು ಬಲಿಯುತ್ತಾ ಹೋದಂತೆ ಕಡಿಮೆಯಾಗುತ್ತಾ ಬರುತ್ತವೆ. ಕೊನೆಗೆ ಸಂಪೂರ್ಣ ಮಾಯವಾಗುತ್ತವೆ. ಬಲಿತ ಗಿಡಗಳಲ್ಲಿ ಬೀಜಗಳು (ಕಾಯಿಗಳು) ತೈಲಗಳಾಗಿ ಪರಿಮಳವನ್ನು ವಿಕಸಿಸಿಕೊಂಡು ವಿಶೇಷ ಪದಾರ್ಥವಾಗಿ ನಮ್ಮ ನಿಮ್ಮೆಲ್ಲರ ಬಳಕೆಗೆ ದಕ್ಕಿವೆ. ಮುಂದೆ ಅಧ್ಯಯನಗಳಾದಂತೆ ಇವುಗಳನ್ನು ಅರಿಯುವ, ಸಂಸ್ಕರಿಸಿ ಪಡೆಯುವ ಬಗೆಗೆ ಸಂಶೋಧನೆಗಳು ನಡೆದಿವೆ.

ಕೈಗಾರಿಕಾ ಕ್ರಾಂತಿಯ ನಂತರದ ಕೊತ್ತಂಬರಿಯಿಂದ ತೈಲವನ್ನು ಹೊರತೆಗೆಯುವ ಅನುಶೋಧಗಳಾದವು. ಹಾಗಾಗಿ ಕೊತ್ತಂಬರಿಯು ಉದ್ಯಮದ ಕಚ್ಚಾ ಪದಾರ್ಥವಾಗಿಯೂ ಬೆಲೆಯನ್ನು ಪಡೆಯಿತು. ತೀರಾ ಉಪಯೋಗಕಾರಿ ತೈಲವನ್ನೂ (Essential Oil) ಮತ್ತು ಕೊಬ್ಬಿನ ಎಣ್ಣೆಯನ್ನು (Fatty Acid) ಕೊತ್ತಂಬರಿಯಿಂದ ಸಂಸ್ಕರಿಸಿ ತೆಗೆಯಲಾಗುತ್ತದೆ. ಬೀಜಗಳಲ್ಲಿ ಉಪಯೋಗಿ ತೈಲವು ಪ್ರತಿಶತ 0.03 ಯಿಂದ 2.6ರ ವರೆಗೂ ಇದ್ದರೆ, ಅದರಲ್ಲಿನ ಕೊಬ್ಬಿನ ತೈಲವು ಪ್ರತಿಶತ 9ರಿಂದ 27ರಷ್ಟು ಇರುತ್ತದೆ. ಉಪಯೋಗಿ ತೈಲಗಳಲ್ಲಿ ಲಿನಲಾಲ್‌ ಹಾಗೂ ಟರ್ಪನೆನ್‌ ಮುಂತಾದವು ಪ್ರಮುಖವಾಗಿವೆ. ಕೊಬ್ಬಿನ ಆಮ್ಲಗಳಲ್ಲಿ ಒಲಿಯಿಕ್‌, ಲಿನೊಲಿಯಿಕ್‌ ಪೆಟ್ರೊಸೆಲಿನಿಕ್‌ ಆಮ್ಲಗಳು ಪ್ರಮುಖವಾದವು.

ರಷಿಯಾದಲ್ಲಿ 1885ರಷ್ಟು ಹಿಂದೆಯೇ ಕೊತ್ತಂಬರಿಯ ಭಟ್ಟಿ ಇಳಿಸುವ ವಿಧಾನದಿಂದ ತೈಲವನ್ನು ಸಂಸ್ಕರಿಸಿ ಪಡೆಯಲಾಯಿತು. 1830ರಿಂದಲೇ ರಷಿಯಾದಲ್ಲಿ ಕೊತ್ತಂಬರಿಯು ಪರಿಚಯಗೊಂಡು ಅದಕ್ಕೊಂದು ವಿಶೇಷ ಕೈಗಾರಿಕಾ ಉತ್ಪನ್ನದ ಮಾರ್ಗವನ್ನು ಹುಡುಕಿಕೊಟ್ಟಿತ್ತು. ಇಂದಿಗೂ ಕೊತ್ತಂಬರಿಯಿಂದ ಉಪಯೋಗಿ ತೈಲವನ್ನು ಪಡೆಯುವಲ್ಲಿ ರಷಿಯಾವು ಮುಂಚೂಣಿಯಲ್ಲೇ ಇದೆ. ಹೀಗೆ ಸಂಸ್ಕರಿಸಿ ಪಡೆದ ತೈಲವನ್ನು ವಿವಿಧ ಖಾದ್ಯಗಳಿಗೆ ಪರಿಮಳವನ್ನು ಕೊಡಲು ಬಳಸಲಾಗುತ್ತದೆ. ಜೊತೆಗೆ ಕೆಲವೊಂದು ಬಗೆಯ ಸೋಪು ತಯಾರಿಯಲ್ಲೂ ಬಳಸುತ್ತಾರೆ. ಕೊತ್ತಂಬರಿ ಪರಿಮಳದ ಅತ್ಯಂತ ಮುಖ್ಯವಾದ ವಿಶೇಷವೆಂದರೆ ಅದರ ಪರಿಮಳವು ಬದಲಾಗುವುದಿಲ್ಲ. ಹಲವಾರು ದಿನಗಳವರೆಗೂ ಒಂದೇ ಬಗೆಯ ಪರಿಮಳವನ್ನು ಕೊಡುವುದರಿಂದ ಕೊತ್ತಂಬರಿಯ ಪರಿಮಳಕ್ಕೆ ಕೈಗಾರಿಕೆಯಲ್ಲಿ ವಿಶೇಷ ಸ್ಥಾನ ದೊರಕಿದೆ. ಇತ್ತೀಚೆಗೆ ಭಟ್ಟಿ ಇಳುಸುವ ಮಾದರಿಯಲ್ಲಿದೆ ವಿವಿಧ ಬಗೆಯ ಸಂಸ್ಕರಣೆಯ ಅನುಶೋಧಗಳಾಗಿದ್ದು ಕೊತ್ತಂಬರಿಯ ಪರಿಮಳದ ಕೈಗಾರಿಕೆಯು ಮಹತ್ವವನ್ನು ಪಡೆದಿದೆ. ಜೊತೆಗೆ ನೈಸರ್ಗಿಕ ತೈಲಗಳ ಬಳಕೆಯಲ್ಲಿ ಹೆಚ್ಚಿನ ಬೇಡಿಕೆಗಳು ಬರುತ್ತಿದ್ದು ಕೊತ್ತಂಬರಿಯ ಪರಿಮಳವಿನ್ನೂ ಹೆಚ್ಚಿನ ಅಗತ್ಯದ ಸ್ಥಾನವನ್ನು ಪಡೆಯುವಲ್ಲಿ ಯಶಸನ್ನು ಗಳಿಸಲಿದೆ.

ಕೊತ್ತಂಬರಿಯಲ್ಲಿರುವ ಕೊಬ್ಬಿನಾಮ್ಲದಲ್ಲಿ ಪ್ರಮುಖವಾದ ಪೆಟ್ರೊಸೆಲಿನಿಕ್‌ ಆಮ್ಲವು ಲಿನೊಲಿನಿಯಿಕ್‌ ಆಮ್ಲದ ಮತ್ತೊಂದು ರೂಪವಾಗಿದ್ದು ಬಗೆ ಬಗೆಯ ಉಪಯೋಗಗಳನ್ನು ಹೊಂದಿದೆ. ಪ್ರಮುಖವಾಗಿ ಹಲವಾರು ಔಷಧಗಳಲ್ಲಿಯೂ ಬಳಸಲಾಗುತ್ತದೆ. ಕೊತ್ತಂಬರಿಯ ಕೊಬ್ಬಿನಾಮ್ಲದ ಬಗೆಗೆ ಸಾಕಷ್ಟು ಕುತೂಹಲಗಳು ಕೈಗಾರಿಕಾ ಅನುಶೋಧಗಳಲ್ಲಿ ಸೇರಿಕೊಂಡಿವೆ.

ಕೊತ್ತಂಬರಿ ಸೊಪ್ಪಿನ ಪರಿಮಳಕ್ಕೂ ಬೀಜ ಅಥವಾ ಕಾಳಿನ ಪರಿಮಳಕ್ಕೂ ಸಾಕಷ್ಟು ವ್ಯತ್ಯಾಸವಿದೆ. ತಾಜಾ ಸೊಪ್ಪು ಜಗತ್ತಿನಾದ್ಯಂತ ಬಳಕೆಯಲ್ಲಿದೆ. ಅದು ತರಕಾರಿಯಂತೆಯೂ ಜೊತೆಗೆ ಸಾಂಬಾರಿನ ಪರಿಮಳವನ್ನು ಸೇರಿ ಬಳಸುವುದಂತೂ ಎಲ್ಲಾ ಸಂಸ್ಕೃತಿಗಳಿಗೂ ತಿಳಿದಿದೆ. ಹದವಾಗಿ ಹುರಿದ ಬೀಜದ ಬಳಕೆಯು ಭಾರತೀಯ ಅಡುಗೆಯನ್ನು ಪರಿಮಳಯುಕ್ತವಾಗಿಸಿದೆ. ಇದು ಸಸ್ಯಹಾರಿ ಹಾಗೂ ಮಾಂಸಹಾರಿ ಅಡುಗೆಗಳೆರಡರಲ್ಲೂ ಕೆಂಪು ಮೆಣಸಿನಕಾಯಿಯ ಜೊತೆಯ ಶಾಶ್ವತ ಸ್ಥಾನವನ್ನು ಪಡೆದಿದೆ. ಕೊತ್ತಂಬರಿ ಬೀಜದ ಪರಿಮಳವು ಬಿಯರ್‌ ಹಾಗೂ ಜಿನ್‌ ಗಳೆರಡು ಆಲ್ಕೊಹಾಲ್‌ ಪೇಯಗಳನ್ನು ಆವರಿಸಿದೆ. ಪ್ರಮುಖವಾಗಿ ಜಿನ್‌ ತಯಾರಿಯಲ್ಲಿ ಕೊತ್ತಂಬರಿಯ ಪರಿಮಳದ ವಿಶೇಷ ಬಳಕೆಯನ್ನು ಕಾಣಬಹುದು.

ಕೆಲವರಿಗೆ ಕೊತ್ತಂಬರಿ ಸೊಪ್ಪನ್ನು ತಿನ್ನಲಾಗುವುದಿಲ್ಲ. ಅದೇನು ಅಲರ್ಜಿಯಂತಲ್ಲ! ಅವರಿಗೆ ಅದೊಂದು ಬಗೆಯ ಸೋಪಿನ ಅನಿಸಿಕೆಯನ್ನು ತರಿಸಿ ವಾಕರಿಕೆ ತರಿಸುವುದುಂಟು. ಅದರ ಬಗೆಗೆ ತೀರಾ ಇತ್ತೀಚೆಗಿನವರೆಗೂ ನಿಖರವಾಗಿ ತಿಳಿದಿರಲಿಲ್ಲ. ಆದರೆ ಈತ್ತೀಚೆಗಿನ ತಿಳಿವಳಿಕೆಯಂತೆ ಅದು ಆಯಾ ವ್ಯಕ್ತಿಗಳ ಆನುವಂಶಿಕ ಕಾರಣದಿಂದ ಹಾಗಾಗುವುದಂತೆ! ಅದನ್ನು ಅನುಭವಕ್ಕೆ ತರುವ ಜೀನುಗಳ ಕಾರಣವನ್ನು ಪತ್ತೆ ಹಚ್ಚಲಾಗಿದೆ. ಕೊತ್ತಂಬರಿಯ ವಿಚಾರದಲ್ಲಿ ಕೇವಲ ಎರಡು ಬಗೆಯ ಗ್ರಹಿಕೆಗಳಿವೆ. ಕೊತ್ತಂಬರಿಯ ಅತ್ಯಂತ ಪ್ರಿಯರು ಅಥವಾ ಕೊತ್ತಂಬರಿಯ ವಿರೋಧಿಗಳು! ಕೊತ್ತಂಬರಿಯನ್ನು ಇಷ್ಟ ಪಡುವವರೇ ಹೆಚ್ಚು. ಬಹಳ ಅಪರೂಪಕ್ಕೆ ಒಲ್ಲದವರು ಸಿಕ್ಕಾರು. ರುಚಿ ಮತ್ತು ವಾಸನೆಯ ತಜ್ಞರು ಕೂಡ ಇದಕ್ಕೆ ನಿಖರವಾದ ವಿವರಗಳನ್ನು ನೀಡಲಾಗಿಲ್ಲ. ಆದರೆ ಎಲ್ಲಿ ಜನರು ಇಷ್ಟ ಪಟ್ಟು ಹಸಿರು ಸೊಪ್ಪನ್ನು ತಿನ್ನುತ್ತಾರೋ- ಉದಾಹರಣೆಗೆ ಭಾರತ ಮತ್ತು ಮೆಕ್ಸಿಕೊಗಳಲ್ಲಿ- ಇದನ್ನು ವಿರೋಧಿಸುವ ಮಂದಿ ಕಡಿಮೆ ಇದ್ದಾರೆ. ಇದಕ್ಕೆ ಪ್ರಮುಖ ಕಾರಣ ಈ ಜನಸಂಖ್ಯೆಯು ನಿರಂತರವಾಗಿ ಒಂದಲ್ಲ ಒಂದು ಬಗೆಯಲ್ಲಿ ಹಸಿರು ಸೊಪ್ಪಿಗೆ ಮುಖಾಮುಖಿಯಾಗುತ್ತಲೇ ಇದ್ದಾರೆ. ಮಧ್ಯ ಪ್ರಾಚ್ಯ, ಆಫ್ರಿಕಾಗಳಲ್ಲಿ ಇಷ್ಟಪಡದ ಜನಸಂಖ್ಯೆ ಪ್ರತಿಶತ 20ರಷ್ಟಿದೆ. ಆದರೂ ಸಹಾ ಇವರಿಗೂ ಒಗ್ಗಿಸಬಹುದು ಎಂದೇ ನಂಬಲಾಗಿದೆ.

ಕೊತ್ತಂಬರಿಯ ವಿವಿಧ ತಳಿಗಳ ಸಂಗ್ರಿಹಿಸಿ ಪೋಷಿಸುವ ಪ್ರಯತ್ನ ಒಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದಿದೆ. ಆಗ ವಿವಿಧ ದೇಶಗಳಿಂದ ಸುಮಾರು 240ಕ್ಕೂ ಹೆಚ್ಚು ಬಗೆಯ ಕೊತ್ತಂಬರಿ ತಳಿಗಳನ್ನು ಸಂಗ್ರಹಿಸಲಾಯಿತು. ಇವುಗಳನ್ನೆಲ್ಲಾ ಅಂತರರಾಷ್ಟ್ರೀಯ ಕೊತ್ತಂಬರಿ ಜೀನ್‌ ಬ್ಯಾಂಕ್‌ ಆಗಿ ನಿರ್ವಹಿಸಲು ಕಳೆದ ಶತಮಾನದ ಅಂತ್ಯದಲ್ಲಿ ಈ ಪ್ರಯತ್ನವು ನಡೆಯಿತು. ಈ ಪ್ರಯತ್ನಕ್ಕೆ ನಮ್ಮ ದೇಶದ ಸಹಕಾರವು ಅದೆಷ್ಟು ತೀರಾ ನಿರಾಶಾದಾಯಕ ಎಂದರೆ ಭಾರತವು ಕೇವಲ ಎರಡೇ ತಳಿಗಳನ್ನು ಕೊಡಲು ಸಾಧ್ಯವಾಗಿದೆ. ನೆರೆಯ ಪಾಕಿಸ್ಥಾನವು 8 ತಳಿಗಳನ್ನು ಕೊಟ್ಟಿದ್ದರೆ, ಚಿಕ್ಕ ದೇಶವಾದ ಭೂತಾನ್‌ ಸಹಾ 7 ತಳಿಗಳನ್ನು ಕೊಟ್ಟಿದೆ. ಜಾರ್ಜಿಯಾ ದೇಶ ಒಂದೇ 50ಕ್ಕೂ ಹೆಚ್ಚು ಬಗೆಯ ಕೊತ್ತಂಬರಿ ತಳಿಗಳನ್ನು ಸಂಗ್ರಹಿಸಿ ಕೊಟ್ಟಿದೆ. ಗೇಟರ್‌ಸ್ಲೆಬಾನ್‌ ಜೀನ್‌ ಬ್ಯಾಂಕ್‌ (Gatersleben Genebank) ಅಭಿವೃದ್ಧಿಯನ್ನು ಅಂತರರಾಷ್ಟ್ರೀಯ ಸಸ್ಯ ಆನುವಂಶಿಕ ಸಂಪನ್ಮೂಲ ಸಂಸ್ಥೆಯ (International Plant Genetic Resources Institute) ಪ್ರಯತ್ನದಿಂದ ಕೈಗೊಳ್ಳಲಾಗಿತ್ತು. ಅದರ ಅಧ್ಯಯನಕಾರರು ಭಾರತೀಯ ಬಳಕೆಯಲ್ಲಿ ತುಂಬಾ ಇದ್ದರೂ ಸಹಾ ಹೆಚ್ಚಿನ ವಿವಿಧತೆಯನ್ನು ಆಯ್ದು ರಕ್ಷಿಸಿ ಕೊಡಲು ಸಾಧ್ಯವಾಗಿಲ್ಲದರ ಬಗ್ಗೆ ಅಲವತ್ತುಗೊಂಡಿದ್ದಾರೆ.

ಅದೇನೆ ಇರಲಿ ಕೊತ್ತಂಬರಿಯ ಪರಿಮಳವು ಮೂಗು ಮನಸ್ಸನ್ನು ಮಾತ್ರವಲ್ಲದೆ, ಮೈಯನ್ನೆಲ್ಲಾ ಸಂರಕ್ಷಣೆಯ ಹಿತದಲ್ಲಿ ಆವರಿಸಿ ಮಾನವರನ್ನು ಸಲಹುತ್ತಿದೆ. ವಿವಿಧ ಬಗೆಯ ಕಷಾಯಗಳಲ್ಲಿ ಕೊತ್ತಂಬರಿಯ ಪರಿಮಳವು ಸೇರಿಕೊಂಡಿದೆ. ಅನೇಕ ಬಗೆಯ ಆರೋಗ್ಯ ಪರಿಹಾರವಾಗಿ ಔಷಧಗಳಲ್ಲಿ ಬಳಕೆಯಾಗುತ್ತಿದೆ. ಶೀತ, ಕೆಮ್ಮು, ಉರಿಯೂತ, ಗಂಟಲು ಬೇನೆ, ಅಜೀರ್ಣದ ಸಮಸ್ಯೆಗಳು, ಉಸಿರಾಟದ ಏರು-ಪೇರು, ಅಲರ್ಜಿ ಇವುಗಳಿಗೆಲ್ಲಾ ಪರಿಹಾರವನ್ನು ಕೊಡುತ್ತಾ, ತಾನು ಕೇವಲ ಕಳೆಯ ಗಿಡ ಮಾತ್ರವಲ್ಲ! ಇಡೀ ಮಾನವಕುಲದ ಅನನ್ಯ ಸಂಗಾತಿ ಎಂದು ಸಾಬೀತು ಪಡಿಸಿದೆ. ಹಾಗೆಂದೇ ದಿನವೂ ನಮ್ಮ ಊಟದ ತಾಟಿದ ಪರಿಮಳವನ್ನು ಶಾಶ್ವತವಾಗಿಸಿದೆ. ಕೊತ್ತಂಬರಿಯ ವಿಶೇಷಣಗಳನ್ನು ಓದಿ ನಿಮ್ಮ ಇಂದಿನ ಸಾರಿನ ಪರಿಮಳವು ತುಸು ಹೆಚ್ಚೇ ಆಗಿದ್ದಲ್ಲಿ, ನನಗೂ ಸ್ವಲ್ಪ ಹಂಚಿ.

ನಮಸ್ಕಾರ.

ಡಾ. ಟಿ.ಎಸ್.‌ ಚನ್ನೇಶ್

This Post Has 2 Comments

  1. ಶ್ರೀಹರಿ ಕೊಚ್ಚಿನ್

    ಕೊತ್ತಂಬರಿಯ ಸಂಪೂರ್ಣ ಸಾರವನ್ನು ಕಟ್ಟಿಕೊಟ್ಟಿದ್ದೀರ. ನಾನು ಕೊತ್ತಂಬರಿಯ ಪ್ರಿಯರ ಗುಂಪಿನಲ್ಲಿದ್ದೇನೆ . ಲೇಖನ ಓದುತ್ತ ಓದುತ್ತಾ ಕಂಪು ಆವರಿಸಿಕೊಳ್ಳುತ್ತೆ . ಕೊತ್ತಂಬರಿಯ ಸೊಪ್ಪು ಸರ್ವಾಂತರ್ಯಾಮಿ ಸ್ವಾದ ಇಮ್ಮಡಿ ಖಚಿತ . ಈ ಬೀಜ ಬಳಸದ ಸಾಂಬಾರು ಮಸಾಲೆ ಊಹಿಸಲಸಾದ್ಯ . ಇನ್ನೂರು ಕೇಜಿಯಷ್ಟು ಜೇನು ಒಂದೆಕರೆಯಲ್ಲಿ ಸಾಧ್ಯ ಎನ್ನುವುದು ಇನ್ನೊಂದು ಗರಿಮೆ .ನಿಮಗೆ ಧನ್ಯವಾದ ಸರ್ ..

  2. ಚಂದ್ರಕಾಂತ

    ಧನ್ಯವಾದಗಳು ಚನ್ನೇಶ್ ಸರ್!! ಮಾಹಿತಿ ಪೂರ್ಣ ಲೇಖನ!!

Leave a Reply