You are currently viewing ಕೊರೊನ ವೈರಸ್ಸುಗಳ ವಿಕಾಸದ ಚಲನಶೀಲತೆ ಹಾಗೂ ವ್ಯಾಕ್ಸೀನು

ಕೊರೊನ ವೈರಸ್ಸುಗಳ ವಿಕಾಸದ ಚಲನಶೀಲತೆ ಹಾಗೂ ವ್ಯಾಕ್ಸೀನು

ಕಳೆದ ಎರಡು-ಮೂರು ವರ್ಷಗಳವರೆಗೂ ಸಣ್ಣ ಪುಟ್ಟ ಶೀತ-ನೆಗಡಿ ತರುತ್ತಿದ್ದ ಜ್ವರ ಮುಂತಾದ ಸಂದರ್ಭಗಳಲ್ಲಿ ಇದೇನು ವೈರಲ್,‌ ವಾರವಿದ್ದು ಹೋಗುತ್ತೆ ಬಿಡಿ ಎಂಬ ಧೈರ್ಯದ ಮಾತುಗಳು ಸಹಜವಾಗಿದ್ದವು. ಆದರೆ ಈಗ ಹಾಗಿಲ್ಲ. ಅಂದಂತೆ 21ನೆಯ ಶತಮಾನದ ಮೂರನೆಯ ವರ್ಷ(ಫೆಬ್ರವರಿ 2003) ತೀವ್ರ ಉಸಿರಾಟದ ಸಮಸ್ಯೆಯ ಸಂಬಂಧಿತ ವೈರಸ್ಸು ಮೊಟ್ಟ ಮೊದಲು ಕಾಣಿಸಿಕೊಂಡಿತು. ಆದಾಗ್ಯೂ ಮುಂದೆ 2012ರಲ್ಲಿ ಮಿಡಲ್‌ ಈಸ್ಟ್‌ ರೆಸ್ಪಿರೇಟರಿ ವೈರಸ್‌ ಕಾಣಿಸಿಕೊಂಡರೂ ಭಾರತವನ್ನೇನೂ ಯಾವುವೂ ಬಾಧಿಸಿರಲಿಲ್ಲ. ಅದರ ತಿಳಿವಳಿಕೆಯ ಚರ್ಚೆಗಳೂ ಅಷ್ಟಾಗಿ ಪ್ರಚಲಿತವಾಗಿರಲಿಲ್ಲ. ಕಳೆದ ಶತಮಾನದ ಜೀವಿವಿಜ್ಞಾನದ ಬದಲಾವಣೆಗಳೂ ಸಹಾ ವೈರಸ್ಸುಗಳ ಬಗೆಗೆ ಅಷ್ಟೇನೂ ಚಿಂತನೆಗೆ ಎಣೆಮಾಡಿಕೊಟ್ಟಿರಲಿಲ್ಲ.  ಒಟ್ಟಾಗಿ ನಮ್ಮಲ್ಲಂತೂ ವೈರಸ್ಸುಗಳ ಬಗೆಗೇನೂ ದೊಡ್ಡ ಭಯ ಹುಟ್ಟಿಸಿರಲಿಲ್ಲ. ವೈರಲ್‌ ಫೀವರ್ರಾ… ಹೋಗುತ್ತೆ ಅಂತಲೋ. ಕಾಮನ್‌ ಶೀತ ತಾನೆ ವೈರಸ್ಸಿನದಲ್ಲವಾ..? ಎಂಬಂತಹಾ ಸಹಜವಾದ ಮಾತುಗಳೇ ಇರುತ್ತಿದ್ದವು.

ಆದರೆ ವರ್ಷವಿಡೀ ಹಾಗಾಗಿಲ್ಲ. ಜೀವಿಗಳೇ ಎಂದು ಪರಿಗಣಿಸದ ವೈರಸ್ಸುಗಳಿಗೆ ಎಲ್ಲಿಲ್ಲದ ಪ್ರಾಮುಖ್ಯತೆ ಬಂದು ವೈಜ್ಞಾನಿಕ ಚರ್ಚೆಗಳಲ್ಲಿಯೂ ಅವಕಾಶ ದೊರಕಿದೆ. ಮುಖ್ಯವಾಗಿ ವೈರಸ್ಸುಗಳನ್ನು ಹರಡುವ ಮಾಧ್ಯಮಗಳ ಬಗೆಗೆ ಒಂದಿಷ್ಟು ಕಾಳಜಿ ಇತ್ತು.  ಸಸ್ಯ ಸಂಬಂಧೀ ವೈರಸ್ಸುಗಳಲ್ಲೂ ಅಷ್ಟೇ! ಅವುಗಳನ್ನು ಹರಡುವ ಕೀಟಗಳ ನಿರ್ವಹಣೆಯ ಮೂಲಕ ವೈರಸ್ಸುಗಳ ನಿಗಾವಣೆ ನಡೆಯುತ್ತಿತ್ತು. ನೇರವಾದ ವೈರಸ್ಸುಗಳ ಕುರಿತಂತೆ ಜಾಗತಿಕವಾಗಿಯೂ ಕೇವಲ ಒಂದು ದಶಕದಿಂದ ಆಮೂಲಾಗ್ರವಾಗಿ ಅವುಗಳ ಬಗೆಗೆ ಅನಿವಾರ್ಯವಾದ ಆಸಕ್ತಿ ಮೂಡಿದೆ.  ವೈರಸ್ಸುಗಳ ವಿಕಾಸದ ಆಸಕ್ತಿಯ  “ವೈರಸ್‌ ಎವಲ್ಯೂಶನ್‌”  ಎಂಬ ಅಂತರರಾಷ್ಟ್ರೀಯ ವೈಜ್ಞಾನಿಕ ಪತ್ರಿಕೆಯನ್ನು ಕೇವಲ 6 ವರ್ಷಗಳ ಹಿಂದೆಯಷ್ಟೇ ಆಕ್ಸ್‌ಫರ್ಡ್‌ ಅಕಾಡೆಮಿಯಿಂದ ಆರಂಭಿಸಲಾಗಿದೆ. ಇದೀಗ ತನ್ನ 7ನೆಯ ವರ್ಷದ ಮೊದಲ ಸಂಚಿಕೆಯಲ್ಲಿ ಕರೋನ ವೈರಸ್ಸುಗಳ ವಿಕಾಸ ಮಹತ್ವದ ಅನುಶೋಧವು ಪ್ರಕಟವಾಗಿದ್ದು ಅದು ಉಸಿರಾಟವನ್ನು ತೀವ್ರವಾಗಿ ಕಾಡುವ ವೈರಸ್ಸುಗಳ ವಿಕಾಸದಲ್ಲಿ ಬದಲಾದ ಸನ್ನಿವೇಶಗಳ ಹಾಗೂ ವ್ಯಾಕ್ಸೀನು ಕುರಿತ ಹೊಸತೊಂದು ಮಹತ್ವದ ಚರ್ಚೆಯನ್ನು ತೆರೆದಿಟ್ಟಿವೆ. ವೈರಸ್ಸುಗಳ ವಿಕಾಸವನ್ನು ಅರ್ಥೈಸುವುದು ಪಕ್ಕಾ ಅಂತರ್‌-ಶಿಸ್ತೀಯ ಅನುಸಂಧಾನ. ಏಕೆಂದರೆ ಇದು ವೈರಾಲಜಿ(Virology), ಜೀವಿವಿಕಾಸ ವಿಜ್ಞಾನ(Evolutionary Biology), ಎಪಿಡಮಾಲಜಿ(Epidemiology), ಇಕಾಲಜಿ(Ecology), ಕಂಪ್ಯೂಟರಿಕೃತ ಜೀವಿವಿಜ್ಞಾನ(Computational Biology) ಮತ್ತು ಜೀನೊಮಿಕ್ಸ್‌(Genomics) ಇವೆಲ್ಲಾ ಜ್ಞಾನಶಿಸ್ತುಗಳನ್ನೂ ಒಳಗೊಂಡಿದೆ. ಇಂತಹ ವಿಶಿಷ್ಟ ವಿಜ್ಞಾನ ಪತ್ರಿಕೆಯಲ್ಲಿ ಚರ್ಚೆಗೆ ತೆರೆದುಕೊಂಡ ವಿಚಾರಗಳ  ಸಂಕ್ಷಿಪ್ತ ವಿವರಗಳು ಇಲ್ಲಿವೆ.

     ಸಮುದಾಯಗಳಲ್ಲಿ ರಕ್ಷಿತವಾದ ಇಮ್ಯುನಿಟಿಯು ಆರ್‌ಎನ್‌ಎ. (RNA) ವೈರಸ್ಸುಗಳ ವಿಕಾಸವನ್ನು ಪ್ರಭಾವಿಸುತ್ತದೆ. ಅಂತಹಾ ಸಂದರ್ಭಗಳಲ್ಲಿ ಹೊಸತೊಂದು ಆಂಟಿಜೆನಿಕ್‌ ಮೂಲವನ್ನು ಸೃಜಿಸಿಕೊಂಡು ವೈರಸ್ಸು ವರ್ಷಕ್ಕೊಮ್ಮೆ ಹೊಸತೇನೋ ಎನ್ನುವಂತೆ ವಿಕಾಸವಾಗುತ್ತದೆ. ಹಾಗಾಗಿ ಇನ್‌ಫ್ಲುಯೆಂಜಾ ವೈರಸ್ಸಿಗೆ ಪ್ರತೀ ವರ್ಷವೂ ಹೊಸ ವ್ಯಾಕ್ಸೀನು ಬೇಕಾಗುತ್ತದೆ ಎಂಬ ವಿವರಗಳೀಗ ಪ್ರಚಲಿತವಾಗಿವೆ. ಆಂಟಿಜೆನಿಕ್‌ ಡ್ರಿಫ್ಟ್‌ (Anti-genic Drift) ಪ್ರತಿರೋಧದ ಮಹತ್ವದ ಬದಲಾವಣೆ ಎಂಬ ಹೆಸರಿನಿಂದ ಇದೀಗ ಗುರುತಿಸಲಾಗುತ್ತಿರುವ ಈ ಹೊಸ ಮಾರ್ಗವನ್ನು ವೈರಸ್ಸುಗಳು ಹುಡುಕಿಕೊಳ್ಳುತ್ತಿರುವ ಬಗೆಗೆ ಹೊಸತಾದ ತಿಳಿವಳಿಕೆಯು ಇದೀಗ ಸಾಧ್ಯವಾಗಿದೆ. ಇತ್ತೀಚೆಗೆ ಬಂದಿರುವ ಕೋವಿಡ್‌-19ಕ್ಕೂ ಸಹಾ ಇದೇ ಮಾರ್ಗದ ವಿಕಾಸವು ವೈರಸ್ಸುಗಳಿಗೆ ಸಾಧ್ಯವಿದ್ದು, ಕೊರೊನ ವೈರಸ್ಸನ್ನೂ ಪ್ರತಿರೋಧಿಸಲು ವರ್ಷ ವರ್ಷವೂ ಹೊಸ ವ್ಯಾಕ್ಸೀನು ಬೇಕಾಗುತ್ತದೆಯೇ, ಎನ್ನುವ ಮಹತ್ತರವಾದ ಚರ್ಚೆಯನ್ನು ಮೊನ್ನೆಯಷ್ಟೇ  ಜರ್ಮನಿಯ ಬರ್ಲಿನ್‌ ವಿಶ್ವವಿದ್ಯಾಲಯ ಹಾಗೂ ಹುಂಬೊಲ್ಟ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು “ವೈರಸ್‌ ಎವಲ್ಯೂಶನ್‌” ಎಂಬ ವೈಜ್ಞಾನಿಕ ಪತ್ರಿಕೆಯ ಅನುಶೋಧದ ಪ್ರಬಂಧದ ಮೂಲಕ ಎತ್ತಿದ್ದಾರೆ. ವೆಂಡಿ ಜೊ, ಕ್ರಿಸ್ಟಿಯನ್‌ ಡ್ರಾಸ್ಟನ್‌ ಮತ್ತು ಫೆಲಿಕ್ಸ್‌ ಡ್ರೆಕ್ಸ್ಲರ್‌ ಎಂಬ ಮೂವರು ವಿಜ್ಞಾನಿಗಳು ಜೊತೆಗೂಡಿ ಈ ಮಹತ್ವದ ಸಂಗತಿಯನ್ನು ಹೊರಗೆಡಹಿದ್ದಾರೆ. ತೀರಾ ಅವಗಣನೆಗೆ ಒಳಗಾಗಿದ್ದ ವೈರಸ್ಸುಗಳ ವಿಕಾಸ ಬಗ್ಗೆಯೇ ಇರಬಹುದಾದ ಮಹತ್ವವಾದ ವಿಚಾರವು ಇದಾಗಿದ್ದು ಕೆಲವು ಸೂಕ್ಷ್ಮವಾದ ಹಾಗೂ ಅರ್ಥವಾಗಬಲ್ಲ ವಿಶೇಷಗಳಿಂದ ಒಂದಷ್ಟು ಸಾರ್ವಜನಿಕ ತಿಳಿವು ಅಗತ್ಯವಾದೀತು.

ವರ್ಷ ವರ್ಷವೂ ವ್ಯಾಕ್ಸೀನ್‌    

ಇದೀಗ ಚರ್ಚೆಗೆ ಬಂದಿರುವ ಕೊರೊನಾ ವೈರಸ್ಸುಗಳ ವಿಕಾಸದ ಸಂಗತಿಗಳು ಹಾಗೇನಾದರೂ ಸತ್ಯವೆಂದು ಸಾಬೀತಾದರೆ ಅಥವಾ ಭಯದ ಪ್ರಭಾವಳಿಯ ಜೊತಗೆ ರಾಜಕಾರಣವೂ ಬೆರೆತರಂತೂ ಕರೋನ ತಡೆಗೆ ವರ್ಷ ವರ್ಷವೂ ವ್ಯಾಕ್ಸೀನು ಹಾಕಿಸಿಕೊಳ್ಳಬೇಕಾಗಬಹುದು. ಅದೇನೆ ಇರಲಿ ಇವನ್ನೆಲ್ಲಾ ತುಸು ವಿವರವಾಗಿ ತಿಳಿದುಕೊಳ್ಳಲು ಮುಂದುವರೆಯೋಣ.  

ಹಾಗಾದರೆ, ಈ ಜರ್ಮನಿಯ ವಿಜ್ಞಾನಿಗಳು ಸಂಶೋಧಿಸಿದ್ದಾದರೂ ಏನು? ಹಿಂದೆಂದೂ ಇಲ್ಲದ ಈ ವಿಚಾರ ಇಷ್ಟು ಬೇಗ ಈ ಬಗೆಯ ತಿಳಿವಿನಿಂದ ಚರ್ಚೆಗೆ ಸಾಧ್ಯವಾದದ್ದಾದರೂ ಹೇಗೆ? ಈ ಅನುಮಾನಗಳು ಸಹಜ. ತುಸು ತಾಳ್ಮೆಯಿಂದ ವಿವೇಚಿಸುವುದಾದರೆ ಒಂದಷ್ಟು ಸಾಮಾನ್ಯ ತಿಳಿವು ಸಾಧ್ಯವಾಗಬಹುದು. ಜೀವಿಗಳೇ ಅಲ್ಲದ ವೈರಸ್ಸುಗಳನ್ನು ಅರ್ಥ ಮಾಡಿಕೊಳ್ಳಲು ಇರುವ ಏಕೈಕ ಪರಿಕರ ಎಂದರೆ ಅದರ ಜೆನೆಟಿಕ್‌ ವಿನ್ಯಾಸ. ಜೀವಿಗಳಾದರೆ ಈ ವಿನ್ಯಾಸದ ತಿಳಿವು ಇಲ್ಲದೆಯೂ ಕೇವಲ ಅವುಗಳ ವರ್ತನೆಯಲ್ಲಿಯೇ ಅವುಗಳ ಬದಲಾವಣೆಗಳನ್ನು ಅರಿಯಬಹುದು. ಆದರೆ ವೈರಸ್ಸುಗಳ ಬದಲಾವಣೆಗಳನ್ನು ವರ್ತನೆಗಳ ಮೂಲಕ ತಿಳಿಯಲು ಅವುಗಳು ಇತರೇ ಜೀವಿಗಳಂತೆ ಅಲ್ಲವಲ್ಲ! ಹಾಗಾಗಿ ವಿನ್ಯಾಸದ ಅರ್ಥೈಸುವಿಕೆಯು ಜೆನೆಟಿಕ್‌ ಬೇಸ್‌ ಪೇರುಗಳ ಹಂದರವನ್ನು ಮೊರೆಹೋಗುವುದು ಅನಿವಾರ್ಯ. ಇದು ತೀರಾ ಇತ್ತೀಚೆಗೆ ಕಂಪ್ಯೂಟರ್‌ (ಕಂಪ್ಯೂಟೇಷನ್‌ ಜೀವಿವಿಜ್ಞಾನ) ಬಳಸಿ ತೀವ್ರವೇಗದಲ್ಲಿ ಅರಿಯುವುದು ಇತ್ತೀಚೆಗಿನ ಸಾಧ್ಯತೆ. ಹಾಗಾಗಿ ಈ ಹೊಸ ಚರ್ಚೆ. ಅವು ಸಂಶೋಧಿಸಿದ್ದು ಏನೆಂದರೆ ಈಗಾಗಲೆ ಚಾಲ್ತಿಯಲ್ಲಿ ಇರುವ ಇನ್‌ಫ್ಲುಯಂಜಾ ವೈರಸ್ಸಿನ ವರ್ಷ ವರ್ಷದ ವ್ಯಾಕ್ಸಿನಿನ ತಿಳಿವು. ಜೊತೆಗೆ ಅವುಗಳ ಜೊತೆಗೆ ಸಾಮಾನ್ಯ ಶೀತವನ್ನು ತರುವ ವೈರಸ್ಸುಗಳ ಜೆನೆಟಿಕ್‌ ವಿನ್ಯಾಸಗಳ ಸಮೀಕರಣ. ಇದೇನಿದು ಎಲ್ಲಿಂದೆಲ್ಲಿಗೆ ಸಂಬಂಧ ಎನ್ನಬೇಕಿಲ್ಲ. ಹಾಗಾದರೆ ಏನಿದೆಲ್ಲ?

ಇದೀಗ ಜಾಗತಿಕವಾಗಿ ಆವರಿಸಿರುವ ಕೋವಿಡ್‌-19 ಅಥವಾ  Severe Acute Respiratory Syndrome Coronavirus-2 (SARS-CoV-2) ನಂತೆಯೆ ಸಾಮಾನ್ಯ ಋತುಮಾನಗಳ ಶೀತ-ನೆಗಡಿ ತರುವ ಕೊರೊನ ವೈರಸ್ಸುಗಳೂ Seasonal Human Coronaviruses (HCoV) ಸಹಾ ಪ್ರಾಣಿ ಮೂಲದ ವಿಕಾಸವನ್ನೇ ಆಶ್ರಯಿಸಿವೆ. ಇವೆರಡರ ವಿಕಾಸದ ಕ್ರಮಗಳೂ ಒಂದೇ ಬಗೆಯವಾಗಿವೆ. ಇದೀಗ ಜರ್ಮನಿಯ ವಿಜ್ಞಾನಿಗಳು ಸಾಮಾನ್ಯ ಶೀತ ನೆಗಡಿಯ ವೈರಸ್ಸುಗಳನ್ನು (HCoV) ಇನ್‌ಫ್ಲುಯಂಜಾ ವೈರಸ್ಸುಗಳ ಜೀನೋಮುಗಳ ಜೊತೆಗೆ ಸಮೀಕರಿಸಿ ಅವುಗಳನ್ನು ವಿಶ್ಲೇಷಿಸಿದ್ದಾರೆ. ಮಾನವರಲ್ಲಿ ಇನ್‌ಫ್ಲುಯಂಜಾ ತರುವ ವೈರಸ್ಸುಗಳ (IAV) ಒಂದು ಹೊಸತಾದ ಬಗೆಯನ್ನು (H3N2) ಅನುಮಾನಾಸ್ಪದವಾಗಿರುವ ಕೆಲವು ಕರೋನಾ ವೈರಸ್ಸುಗಳ ಜೊತೆಗೆ ಜೀನೋಮುಗಳ ಸಂಕೀರ್ಣತೆಯ ವಿವರಗಳಿಂದ ವಿಕಾಸವನ್ನು ಅರ್ಥೈಸಲು ಪ್ರಯತ್ನಿಸಿದ್ದಾರೆ. ಅವುಗಳ ನಡುವೆ ವಿಕಾಸದ ವೇಗದ ಸಾಮ್ಯತೆಯನ್ನೂ ಹಾಗೂ ಒಂದೇ ಬಗೆಯ ಮಾರ್ಗಗಳಿರುವುದನ್ನೂ ಗಮನಿಸಿ ಪ್ರಕಟಿಸಿದ್ದಾರೆ. ಹಾಗಾಗಿ ಇದೀಗ ತುಂಬಾ ಭಯವನ್ನು ತಂದಿರುವ ಕೋವಿಡ್‌-೧೯ ಕರೋನಾ ವೈರಸ್ಸು (SARS-CoV-2) ತನ್ನ ವಿಕಾಸದ ಪಥದಲ್ಲಿ ಇನ್‌ಫ್ಲುಯಂಜಾ ತರುವ ವೈರಸ್ಸುಗಳನ್ನು(IAV) ಪಥವನ್ನೇ ಹೋಲುತ್ತಿರುವ ಬಗ್ಗೆ ಅನುಶೋಧಿಸಿದ್ದಾರೆ. ಇದರಿಂದಾಗಿ ಈ ಹಿಂದೆ ಗಮನಕ್ಕೆ ತಂದಿದ್ದ ಆಂಟಿಜೆನಿಕ್‌ ಡ್ರಿಫ್ಟ್‌ (Anti-genic Drift) ಪ್ರತಿರೋಧದ ಮಹತ್ವದ ಬದಲಾವಣೆಯನ್ನು ಕೋವಿಡ್‌-19 ಅನ್ನೂ ಸಹಾ ಒಳಗೊಂಡಿದ್ದು ಅದರಿಂದಾಗಿಯೇ “ಬ್ರೆಜಿಲ್‌” ವೇರಿಯೆಂಟ್ಸ್‌, ಯುಕೆ ವೇರಿಯೆಂಟ್ಸ್‌” ಎನ್ನುವ ಹೊಸ ವೈರಸ್ಸು ತಳಿಗಳು ವಿವಿಧ ಅಲೆಗಳನ್ನು ತಂದಿರುತ್ತವೆ.

ಈಗ ಏನಿಲ್ಲವೆಂದರೂ ಜಾಗತಿಕವಾಗಿ ವಿವಿಧ ದೇಶಗಳಲ್ಲಿ 150ಕ್ಕೂ ಹೆಚ್ಚು ಬಗೆಯ ವ್ಯಾಕ್ಸೀನುಗಳು ಪ್ರಾಯೋಗಿಕ ಅಭಿವೃದ್ಧಿಯ ಹಂತದಲ್ಲಿವೆ. ಕೆಲವು ಈಗಾಗಲೇ ಎಲ್ಲಾ ಹಂತಗಳನ್ನೂ ದಾಟಿ ಬಳಕೆಗೂ ಬಂದಿವೆ. ಕೆಲವು ಒಂದೇ ಬಾರಿ ಕೊಡುವ ವ್ಯಾಕ್ಸೀನುಗಳಾಗಿದ್ದರೆ (Johnson & Johnson Vaccine) ಕೆಲವು ಎರಡು ಬಾರಿ ಕೊಡಬೇಕಿದೆ (Covishield ಮತ್ತು Covaxin). ಬಹುಪಾಲು ಕೋವಿಡ್‌-19 ವ್ಯಾಕ್ಸೀನುಗಳು ಎಂ-ಆರ್‌ಎನ್‌ಎ (ನ್ಯುಕ್ಲಿಯೆಕ್‌ ಆಮ್ಲ) ಅಥವಾ ವೈರಸ್ಸಿನ ಪ್ರೊಟೀನ್‌ ತುಣುಕನ್ನು ಒಳಗೊಂಡ ಅಥವಾ ವೈರಸ್‌ ತುಣುಕನ್ನೇ ರೋಗಕಾರಕವಾಗದಂತೆ ಮಾಡಿದ (mRNA-, subunit-or vector-based) ವ್ಯಾಕ್ಸೀನುಗಳಾಗಿವೆ. ಇವೆಲ್ಲವೂ ಮೂಲ ವೈರಸ್ಸು ಹೊಂದಿರುವ ಕಿರೀಟ(Spike)ದ ಪ್ರೊಟೀನ್‌ ನ ಪ್ರತಿರೂಪದ ಗುರುತನ್ನು ಹೊಂದಿದ್ದು ಅದೇ ಜೀವಿಕೋಶಕ್ಕೆ ಅಂಟಿದಾಗ ಬಂಧವನ್ನು ಉಂಟುಮಾಡುವುದಾಗಿರುತ್ತದೆ. ಇದನ್ನು ಬಳಸಿಯೇ ಪ್ರತಿರೋಧವನ್ನು ಅಥವಾ ಇಮ್ಯುನಿಟಿಯನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಆದರೀಗ ಪ್ರಸ್ತುತ ಕೋವಿಡ್‌ -19 ವೈರಸ್ಸು ತನ್ನಲ್ಲಿರುವ ಈ ಪ್ರೊಟೀನ್‌ ರೂಪವನ್ನೇ ಬದಲಿಸುವ ವಿಕಾಸವನ್ನು ಬಳಸುವುದು ತಿಳಿದು ಬಂದಿದೆ. ಹಾಗಾಗಿ ಒಂದು ಅಂದಾಜಿನಂತೆ ವಾರ್ಷಿಕವಾಗಿ ಬದಲಾಗುವ ಈ ವಿಕಾಸದ ಪಥವನ್ನು ಅನುಸರಿಸಿ ವ್ಯಾಕ್ಸೀನುಗಳನ್ನೂ ಹೊಸತಾಗಿ ರೂಪಿಸಬೇಕಾ ಎಂಬುದು ಇದೀಗ ಎದುರಾಗಿರುವ ಪ್ರಶ್ನೆ! ಆದರೆ ಇದೀಗ ಇರುವ ಕೋವಿಡ್‌ ಕಂಟ್ರೋಲಿಗೆ ಬಂದರೆ ಸರಿ ಇಲ್ಲವಾದರೆ ಈ ಪ್ರಶ್ನೆ ಇನ್ನೂ ದೊಡ್ಡದಾದೀತು ಎನ್ನುತ್ತದೆ ಸಂಶೋಧನೆಯ ಸಾರ.

ಬಹಳ ದೊಡ್ಡ ಭಯ ಏನಿಲ್ಲ! ವರ್ಷಕ್ಕೊಮ್ಮೆ ಒಂದೋ ಅಥವಾ ಎರಡು ಬಾರಿ ಸಣ್ಣ ಸೂಜಿಯ ಚುಚ್ಚಿಸಿಕೊಳ್ಳುವ ನೋವನ್ನಾದರೂ ಸಹಿಸಲು ಸಾರ್ವಜನಿಕರು ಅಣಿಯಾಗಬೇಕು. ಆದರೆ ಇದರ ಹಿಂದಿರುವ ಉದ್ಯಮ ಹಾಗೂ ವೈದ್ಯಕೀಯ ರಾಜಕಾರಣ ಅಲ್ಲದೆ ಅಧಿಕಾರಿ ರಾಜಕಾರಣ ಎಲ್ಲವೂ ಬೃಹತ್ತಾಗದಂತೆ ಸಾರ್ವಜನಿಕ ತಿಳಿವು ಅಗತ್ಯವಾದೀತು.

ಆದರೆ ಏಕೆ ಹೀಗೆ ವೈರಸ್ಸುಗಳು ವಿಕಾಸದ ಪಥವನ್ನು ಬದಲಿಸುವ ತಂತ್ರಗಾರಿಕೆಯನ್ನು ಬಳಸಿವೆ ಎಂದರೆ, ಮಾನವ ನಿರ್ಮಿತ ಕೆಲಸಗಳು ಕಾರಣ. ಹೇಗೆಂದರೆ ಒಂದು ಕಾಲದಲ್ಲಿ ಯಾವುದೋ ಜೀವಿಗಳಲ್ಲಿದ್ದು (ಬಾವಲಿ, ಮುಂತಾಗಿ) ಅವುಗಳಿಗೇನೂ ತೊಂದರೆ ಕೊಡದೆ, ತಮ್ಮ ಬದುಕನ್ನು ಕಟ್ಟಿಕೊಂಡಿದ್ದವನ್ನು ಮನೆಯೊಳಗೆ ಕರೆತಂದ ಕೆಲಸ ಮಾನವ ನಿರ್ಮಿತವಾದದ್ದು. ಇದನ್ನೆಲ್ಲಾ ಜೊತೆಗೆ ಒಟ್ಟಾರೆ ವ್ಯಾಕ್ಸೀನಿನ ಜೀವಿರಸಾಯನಿಕತೆಯನ್ನೂ ಕೆಲವೇ ವಾಕ್ಯಗಳಲ್ಲಿ ಹೇಳಲು ಆಗದು. ಈ ಪ್ರಬಂಧವು ಸುಮಾರು 100ಕ್ಕೂ ಹೆಚ್ಚು ಇತರೇ ವೈಜ್ಞಾನಿಕ ಪ್ರಬಂಧಗಳನ್ನು ತನ್ನ ಪರಾಮರ್ಶನದಲ್ಲಿ ಬಳಸಿಕೊಂಡಿದೆ. ಅವೆಲ್ಲದರ ಸಾರವನ್ನೂ ಬಳಸಿ ಮುಂದುವರೆದ ಶೋಧವನ್ನು ನಮ್ಮ ಜಾಯಮಾನಕ್ಕೆ ಅರ್ಥೈಸಿಕೊಳ್ಳಲು ನಾಲ್ಕಾರು ದಿನಗಳು ವ್ಯಯವಾಗಿವೆ. ಹಾಗಾಗಿ ಅದರ ಸಂಕೀರ್ಣತೆಯ ಸ್ವರೂಪ ಅರ್ಥವಾಗಬಹುದು.

ಅತಿ ದೊಡ್ಡ ಸಮಾಧಾನವೆಂದರೆ ವೈರಸ್ಸುಗಳ ಹುಟ್ಟು ವಿಕಾಸಗಳ ಬಗೆಗೆ ಶತಮಾನಗಳ ಕಾಲ ಸಾಧ್ಯವಾಗದ್ದೀಗ ಒಂದೇ ದಶಕದಲ್ಲಿ ಸಾಧ್ಯವಾಗಿದೆ. ಬದುಕಿನ ಸಂಕೀರ್ಣತೆಯು ಇಷ್ಟೊಂದು ಪುಟ್ಟ ಜೀವಿಯೇ ಅಲ್ಲದ ಪ್ರೊಟೀನಿನ ತುಣುಕೊಂದರಿಂದ ಅಲ್ಲೋಲ ಕಲ್ಲೋಲವಾಗುವುದೇ? ಒಂದು ಅರ್ಥದಲ್ಲಿ ನಿಜವೇ ಆಗಿದೆ. ಒಂದೇ ಒಂದು ಅಮೈನೋ ಆಮ್ಲದ ಬದಲಾವಣೆಯು ಮಾನವರಲ್ಲಿ ಇಮ್ಯುನಿಟಿಯ ಪಥದ ದಿಕ್ಕನ್ನೇ ತಪ್ಪಿಸಿಬಲ್ಲದು. ಇವೆಲ್ಲವೂ ಇದೀಗ ವಿವಿಧ ವೈರಸ್ಸುಗಳ ವಿಕಾಸದ ಹಾದಿಯಲ್ಲಿ ತಿಳಿಯಲಾದ ಸಂಗತಿಗಳು. ಈ ಅಧ್ಯಯನದಲ್ಲಿ ಬಳಸಲಾದ ಒಂದು ಬಗೆಯ ವೈರಸ್ಸು (H3N2) ಕೋವಿಡ್‌-19ರಂತೆಯೇ ಪ್ರಾಣಿ ಮೂಲದ ವಿಕಾಸವನ್ನೇ ಹೊಂದಿದೆ. ಇದು ಸಾಮ್ಯವಿರುವ ಇನ್‌ಫ್ಲುಯಾಂಜಾ ವೈರಸ್ಸು ಈಗಾಗಲೇ ಪ್ರತೀ ವರ್ಷವೂ ಹೊಸತಾದ ವ್ಯಾಕ್ಸೀನನ್ನು ಬಯಸುತ್ತಿದೆ. ಹೀಗಾಗಿ ಈ ಬಗೆಯ ಮಾಹಿತಿಗಳು ಹೊರ ಬಂದಿವೆ.

ಇವೆಲ್ಲವೂ ಇನ್ನೂ ಸಂಶೋಧಕರ ಆಂತರಿಕ ಚರ್ಚೆಯಲ್ಲಿದ್ದು, ಸಾರ್ವಜನಿಕ ತಿಳಿವಿಗೇನು ಬಂದಿಲ್ಲ. ಆದರೇನಂತೆ ಕರೋನಾ ಸುದ್ದಿಗಳು ಅತ್ಯಂತ ವೇಗದಲ್ಲಿ ಪ್ರಸರಿಸುವ ಜೊತೆಗೆ ಸಾಂಕ್ರಾಮಿಕತೆಯ ಹಿನ್ನಲೆಯಲ್ಲಿ ತಪ್ಪು ದಾರಿಯನ್ನೂ ಹಿಡಿಸುವ ಸುದ್ದಿಗಳು ಹಾಗಾಗಿ ನಮ್ಮೆಲ್ಲರಿಗೂ ಒಂದಷ್ಟು ಮೂಲಭೂತ ವಿಚಾರಗಳಿಂದ ಮುಂಬರುವ ದಿನಗಳನ್ನು ಎದುರಿಸುವಂತಾಗಲಿ ಎಂಬ ಆಶಯ ಈ ಟಿಪ್ಪಣಿಗಳದ್ದು.

ಹಾಂ..ಹೊಸತೊಂದು ವಿಚಾರವೂ ಪ್ರಬಂಧದ ಆಚೆಯ ಓದಿನಿಂದ ತಿಳಿದಿದೆ. ಅದೇನಂದರೆ ಈ RNA ವೈರಸ್ಸುಗಳ ವ್ಯಾಕ್ಸೀನು ಕ್ಯಾನ್ಸರ್‌ ಇಮ್ಯೂನ್‌ ಥೆರಪಿಯಲ್ಲೂ ಬಳಸುವ ಬಗ್ಗೆ ಬೃಹತ್ತಾದ ಚರ್ಚೆಗಳು ಆರಂಭವಾಗಿವೆ. ಕೊರೊನಾ ಎಲ್ಲಿಂದೆಲ್ಲಿಗೆ ಕೊಂಡೊಯ್ಯುತ್ತದೆಯೋ ಕಾದು ನೋಡೋಣ. ಹಾಗೊಂದು ವೇಳೆ ಪ್ರತೀ ವರ್ಷವೂ ವ್ಯಾಕ್ಸೀನಿಗೂ, ಜೊತೆಗೆ ಈಗಾಗಲೇ ಕೊಡುತ್ತಿರುವುದರಲ್ಲಿಯ ಎರಡನೆಯದಲ್ಲ ಮೂರನೆಯ ಡೋಸ್‌ಗೂ ತಾಳ್ಮೆಯಿರಲಿ ಅಷ್ಟೆ! ಕಾರಣವಿಷ್ಟೇ ಬಹುಶಃ ಮೊಟ್ಟ ಮೊದಲ ಬಾರಿಗೆ ವೈಜ್ಞಾನಿಕ ಸಮೂಹವೊಂದು ಇಷ್ಟೊಂದು ಜಾಗರೂಕವಾಗಿ ಹಾಗೂ ಅಂತರ್‌ಶಿಸ್ತೀಯ ಮಾನದಂಡಗಳ ಮೂಲಕ ಒಗ್ಗಟ್ಟಾಗಿದೆ. ಅದಕ್ಕಾದರೂ ಸಾರ್ವಜನಿಕ ತಾಳ್ಮೆ ಹಾಗೂ ವಿಜ್ಞಾನಕ್ಕೆ ಬೆಂಬಲ ಹೆಚ್ಚಬೇಕಿದೆ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್.‌

This Post Has 7 Comments

  1. K H Sampath Kumar

    Thanks for the good information

  2. ಸಾಕಷ್ಟು ಮಾಹಿತಿ ಪೂರ್ಣ ಲೇಖನ ಕೊಟ್ಟಿದ್ದಕ್ಕಾಗಿ ವಂದನೆಗಳು ಡಾ. ಚನ್ನೇಶ್.

  3. Sreepathi

    Informative article.
    The farma companies may expect rich harvest in future!

  4. ಚಲಪತಿ. ಆರ್

    ಕರೋನಾದ ಹೊಸಹೊಸ ಸಂಗತಿಗಳು ತಿಳಿಯುತ್ತಿರುವಂತೆಯೇ ಅದರ ಎದುರಿಸಬೇಕಾದ ನೆಲೆಯಲ್ಲಿಯೂ ಹೊಸ ಸಂಶೋಧನೆಗಳು ನಡೆಯುತ್ತಿವೆ. ಈ ಹೊಸ ವಿಚಾರಗಳನ್ನು ಕನ್ನಡಕ್ಕೆ ಪರಿಚಯಿಸುತ್ತಿರುವ ತಮಗೆ ಅಭಿನಂದನೆ

  5. Venkatesh

    https://www.youtube.com/watch?v=lZkbVLPRtUw
    Dr. BM Hegde ಯವರು ವೈರಸ್ಸು ಗಿಂತ ಮಾನವನ ಮಾನವನ ಇಮ್ಮುನಿಟಿ ರೋಗ ನಿರೋಧಕ ಶಕ್ತಿ ಮುಖ್ಯ, ಇನ್ನೂ ವ್ಯಾಕ್ಶೀನು ಒಂದು ದೊಡ್ಡ ಮಾರುಕಟ್ಟೆ ಮೆಡಿಕಲ್ ಮಾಫಿಯಾ ಎನ್ನುತ್ತಾರೆ. ಬಹಳಷ್ಟು ಧೈರ್ಯವಂತ ವೈದ್ಯರು ಇದರ ವಿರುದ್ದವಾಗಿ ಮಾತಾಡುತ್ತಿದ್ದಾರೆ. ಅಮೆರಿಕದಲ್ಲಿ ಅರ್ಧದಷ್ಟು ಜನ ವ್ಯಾಕ್ಸಿನ್ ವಿರೋಧಿಯಾಗಿದ್ದಾರೆ.. ಅಲ್ಲಿ ಮಕ್ಕಳುಗಳು ಆಟಿಸಂ ಇತರೆ ಸೈಡ್ ಎಫೆಕ್ಟ್ ಗಳನ್ನ ವಾಕ್ಸೀನು ಗಳಿಂದ ಪಡೆದು ಜೀವನ ಪೂರ್ತಿ ಅನುಭವಿಸುತ್ತಿದ್ದಾರೆನ್ನುತ್ತದೆ ರಿಪೋರ್ಟುಗಳು.
    ವಿಚಿತ್ರವೆಂದರೆ..
    ಕರೋನ ಕಾಲದಲ್ಲಿ ಎಲ್ಲಾ ಸಾವನ್ನು ಕರೋನ ಸಾವು ಎನ್ನುತ್ತಿದ್ದ ವೈದ್ಯಕೀಯ ಜಗತ್ತು..
    ವ್ಯಾಕ್ಸಿನ್ ಕಾಲದಲ್ಲಿ: ಎಲ್ಲಾ ವ್ಯಾಕ್ಸಿನ್ ಪರಿಣಾಮಗಳನ್ನು ಸಾವನ್ನೂ ಪೇಷಂಟ್ ನ ಆರೋಗ್ಯದ ಇತರೆ ಲಕ್ಷಣಗಳು..
    ಎಂದು ವ್ಯತಿರಿಕ್ಟ ಹೇಳಿಕೆ ನೀಡುತ್ತಾ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದೆ..
    ವ್ಯಾಕ್ಸಿನ್ ದುಷ್ಪರಿಣಾಮಕ್ಕೆ ಜನ ಕೋರ್ಟಿಗೆ ಹೋಗಲು ಅವಕಾಶ ಇಲ್ಲದಂತೆ ಕಾನೂನಿದೆ ಎಂದು ವರದಿಯಿದೆ ಇದು ನಿಜವೇ?

    ದಯವಿಟ್ಟು ಮುಂದಿನ ಲೇಖನದಲ್ಲಿ ಕರೋನ ವ್ಯಾಕ್ಸಿನ್ ಕರಾಳ ಮುಖವನ್ನು ತಿಳಿಸಿ.. ವ್ಯಾಕ್ಸೀನು ತೆಗೆದುಕೊಳ್ಳುವುದು ಅವರವರ ಜವಾಬ್ದಾರಿ ಹಾಗೂ ಇಷ್ಟಾನಿಷ್ಟಗಳಿಗೆ ಬಿಟ್ಟ ವಿಚಾರ ಎಂಬಲ್ಲಿಗಾದರೂ ತಲುಪಬೇಕು.. ಏಕೆಂದರೆ ವ್ಯಾಕ್ಸಿನು ತೆಗೆದುಕೊಂಡವರು ತೆಗೆದುಕೊಳ್ಳದವರು ಇಬ್ಬರನ್ನು ಮುಂದೆ ಸ್ಟಡಿ ಮಾಡಬೇಕಲ್ಲವೆ?

  6. RAMESH GOVIND PAI

    Dr. Chennesh,
    a question from an ignorant: is a virus a matter or a live being? if the virus is not live how does it evolve? can one kill some that are not alive?

    1. CPUS

      It is a sort of in between. It behaves as life withing a living cell. Outside it is just a Nucleic acid with a protein cover. It evolves and replicate within the host.

Leave a Reply