You are currently viewing ಕನ್ನಡಕ್ಕೊಂದು ವಿಜ್ಞಾನದ ಓದು

ಕನ್ನಡಕ್ಕೊಂದು ವಿಜ್ಞಾನದ ಓದು

(ವಿಜ್ಞಾನ ಓದು ಎಂದರೇನು?  ಕನ್ನಡಕ್ಕಾಗಿ ಅಂತಹದೊಂದು ಬೇಕಾ? ಇಂತಹದೊದ್ದರ ಚರ್ಚೆ ಇಂದಿನ ಅಗತ್ಯಗಳಲ್ಲೊಂದು. ಏಕೆಂದರೆ ನಮ್ಮಲ್ಲಿ ಓದು ಎನ್ನುವುದು ಬಹುಪಾಲು ಸಾಹಿತ್ಯಿಕವಾದ ಓದೇ ಆಗಿದೆ. ಸಾಹಿತ್ಯದಲ್ಲಿ ಸಹಜವಾಗಿ ಕಾಣಬರುವ ಒಂದು ಬಗೆಯ ಎಲ್ಲವೂ ಕೊನೆಯನ್ನು ಕಾಣುವ ಮಾದರಿಯ ಓದನ್ನು ವಿಜ್ಞಾನದ ಓದಿನಲ್ಲಿ ಕಾಣಲಾಗದು. ಕತೆ ಕಾದಂಬರಿಯಂತೆ- ಮುಗಿದ ನಂತರ ಇನ್ನೇನೂ ಉಳಿದಿಲ್ಲ ಎನ್ನಿಸುವ ಅನಪೇಕ್ಷತೆಯನ್ನು ವಿಜ್ಞಾನದ ಬರಹಗಳು ಮಾಡಲಾರವು. ವಿಜ್ಞಾನ ಓದು ಏನಿದ್ದರೂ, ಮತ್ತೊಂದು ಓದಿಗೆ ಹಚ್ಚುವ, ಅಥವಾ ಆಗಲೇ ಓದಿದ ಸಂಗತಿಯನ್ನು ಸಮೀಕರಿಸಿ ನೋಡುವ ಬಗೆಯದ್ದಾಗಿರುತ್ತದೆ).

“Nobody ever figures out what life is all about, and it doesn’t matter. Explore the world. Nearly everything is really interesting if you go into it deeply enough. Work as hard and as much as you want to on the things you like to do the best. Don’t think about what you want to be, but what you want to do. Keep up some kind of a minimum with other things so that society doesn’t stop you from doing anything at all.”  Richard Feynman     Physics Nobel Laureate

ಮಲೆನಾಡಿನ ಪ್ರಮುಖ ಜಿಲ್ಲಾ ಸ್ಥಳ ಶಿವಮೊಗ್ಗದಿಂದ ನನ್ನೂರು ನ್ಯಾಮತಿ ಮುಕ್ಕಾಲು ತಾಸಿನ ದಾರಿ. ನಾನಲ್ಲಿ ಐದನೇ ತರಗತಿಯಲ್ಲಿದ್ದಾಗ ಹೊಸದಾಗಿ ಬಂದ ಮೇಷ್ಟ್ರು ಒಬ್ಬರು ವಿಜ್ಞಾನದ ಮೊದಲ ಪೀರಿಯಡ್ಡಿನಲ್ಲೇ ಕೈಯಲ್ಲೊಂದು ಗಾಜಿನ ಬೀಕರನ್ನು ಹಿಡಿದು ತಂದಿದ್ದರು. ನಮ್ಮ ಪುಟ್ಟ ಕಣ್ಣುಗಳನ್ನು ಸಾಕಷ್ಟು ಅಗಲಿಸಿ ತುಂಬು ಕುತೂಹಲದಿಂದ ನೋಡುತ್ತಿದ್ದೆವು. ಸಸ್ಯಗಳು ನೀರನ್ನು ಬೇರಿನಿಂದಲೇ ಹೀರುತ್ತವೆ ಎಂಬುದನ್ನು ತೋರಿಸಲು ಪ್ರಯೋಗವನ್ನು ಆರಂಭಿಸಿದರು. ಬೀಕರಿಗೆ ಮುಕ್ಕಾಲು ಭಾಗ ನೀರನ್ನು ತುಂಬಿ, ತಮ್ಮ ಜೇಬಿನಿಂದ ಪೆನ್ನನ್ನು ತೆಗೆದು, ಅದರಲ್ಲಿನ ಕೆಂಪು ಇಂಕನ್ನು ನಾಲ್ಕೈದು ಹನಿ ಬೆರೆಸಿ, ನೀರನ್ನು ಕೆಂಪಾಗಿಸಿದರು. ಶಾಲಾ ಆವರಣದಲ್ಲಿ ಬೆಳೆದಿದ್ದ ಕರ್ಣಕುಂಡಲ (ಬಾಲ್ಸಮ್) ಸಸಿಗಳನ್ನು ಕಿತ್ತು ತರಿಸಿ ಕೆಂಪಾದ ನೀರಿನಲ್ಲಿ ಬೇರುಗಳು ಮುಳುಗುವಂತೆ ಇಳಿಬಿಟ್ಟರು. ಸಸಿಗಳಿರುವ ಬೀಕರನ್ನು ಬಿಸಿಲಲ್ಲಿ ಇರಿಸಿದರು. ಮುಂದೆ ಪಾಠವನ್ನು ಆರಂಭಿಸಿ ಅದರ ವಿವರಣೆಯನ್ನು ಮುಂದುವರಿಸಿದರು. ಅವರ ಪೀರಿಯಡ್ಡಿನ ಕೊನೆಯ ವೇಳೆಗೆ ಬೀಕರನ್ನು ತಂದು ಸಸಿಗಳ ಕಾಂಡಗಳು ಕೆಂಪೇರಿರುವುದನ್ನು ತೋರಿಸಿದ್ದರು. ವಿಜ್ಞಾನದ ಕಲಿಕೆಯ ಪ್ರಾಯೋಗಿಕ ಅನುಭವ ಅದಾಗಿತ್ತು. ಸುಮಾರು 45 ವರ್ಷಗಳ ಹಿಂದೆಯೇ ವಿಜ್ಞಾನವನ್ನು ಕಲಿಸಿದ ಮಾದರಿ ಅದು. ಇದೇ ಪ್ರಯೋಗವನ್ನು ಹಲವರಿಗೆ ಅವರ ಶಾಲೆಯ ಕಲಿಕೆಯಲ್ಲಿ ತೋರಿಸಿರಲು ಸಾಧ್ಯವಿದೆ.

       ಅದಾಗಿ ಸರಿಸುಮಾರು 25 ವರ್ಷಗಳ ನಂತರದ ಘಟನೆ. ಕೃಷಿಯನ್ನು ಹವ್ಯಾಸವಾಗಿ ಪ್ರೀತಿಯಿಂದ ಕೈಗೊಂಡ ತರ್ಕಶಾಸ್ತ್ರದ ಉಪನ್ಯಾಸಕರು ತಮ್ಮ ಅನುಭವವನ್ನು ದಾಖಲು ಮಾಡಿ ಪುಸ್ತಕವಾಗಿ ಪ್ರಕಟಿಸಲು ಮುಂದಾದರು. ಅದರ ಪ್ರಕಾಶಕರು ಕೃಷಿವಿಜ್ಞಾನಿಯಾದ ನನಗೆ ಓದಿ ವೈಜ್ಞಾನಿಕ ಸಂಗತಿಗಳ ಒರೆಹಚ್ಚಲು ಕೊಟ್ಟಿದ್ದರು. ತೆಂಗನ್ನು ಬೆಳೆಯುತ್ತಿದ್ದ ತರ್ಕಶಾಸ್ತ್ರದ ಮೇಷ್ಟ್ರು, ತೆಂಗಿನ ಗರಿಗಳು ಆಗಸಕ್ಕೆ ತೆರೆದುಕೊಂಡಿರುವುದೇ ನೀರನ್ನು ಹೀರುವ ಅನುಕೂಲಕ್ಕಾಗಿ ಎಂದು ತರ್ಕಿಸಿ ಬರೆದು ದಾಖಲಿಸಿ ಗಿಡಗಳಿಗೆ ನೀರುಣಿಸುವುದೇನೂ ಬೇಡ ಅಥವಾ ಸ್ವಲ್ಪವೇ ಉಣಿಸಿದರೂ ಸಾಕು ಎಂಬಂತೆ ವಾದಿಸಿದ್ದರು. ಅವರಿಗೆ ವೈಜ್ಞಾನಿಕ ಸತ್ಯವನ್ನು ಒಪ್ಪಿಸಲು ನಮಗೆ ಸಾಕುಸಾಕಾಗಿತ್ತು. ತಮಗೆ ಅನಿಸಿದ್ದನ್ನು ತಮ್ಮ ತರ್ಕಶಾಸ್ತ್ರದ ಓದಿನ ಅಧಿಕಾರವನ್ನು ಬಳಸಿ ಆಗಸದಿಂದ ನೀರು ಹೀರುವ ಬಗೆಗೆ ಬರೆದು ದಾಖಲಿಸಲು ಅವರು ಯತ್ನಿಸಿದ್ದರು. ಹೀಗೆ ತಮ್ಮ ಅನಿಸಿಕೆಯನ್ನು ಬಹುದೊಡ್ಡ ಜ್ಞಾನವನ್ನಾಗಿಸುವ ಪರಂಪರೆಯು ಸಾಹಿತ್ಯಿಕ ಹಿನ್ನೆಲೆಯಿಂದ ಬಂದದ್ದು. ‘ನನಗೇನು ಅನ್ನಿಸುತ್ತೆ’ ಅಂದರೆ, ಅಥವಾ ‘ಈ ಬಗ್ಗೆ ನನ್ನ ತಕರಾರು ಇದೆ’ ಎನ್ನುವಂತಹ  ಮಾತುಗಳನ್ನು ಸಾಹಿತ್ಯಿಕ ಚರ್ಚೆಗಳಲ್ಲಿ ಕೇಳಿಯೇ ಇರುತ್ತೀರಿ. ಈ ಉದಾಹರಣೆಯನ್ನು ಕೊಡಲು ಕಾರಣವಿದೆ. ಈ ಬಗೆಯ ಅನಿಸಿಕೆಗಳ ಆಧಾರಿತ ಸಂಗತಿಗಳನ್ನು ಒಳಗೊಂಡ ವಿಜ್ಞಾನ ಬರಹಗಳನ್ನು ಪತ್ರಿಕೆಗಳೂ ಪ್ರಕಟಿಸಿ ಓದುಗರನ್ನು ಕಂಗೆಡಿಸಿದ್ದಿದೆ. ಜತೆಗೆ ಕೆಲವರು ತಮ್ಮ ಆಳದ ಅರಿವಿನ ಕೊರತೆಯಿಂದ, ವಿಜ್ಞಾನದ ಆರಂಭಿಕ ವರ್ಷಗಳ ಅನುಶೋಧಗಳನ್ನು ಅರಿಯದೆ ಇನ್ನೂ ಸಂಶೋಧಿಸಬೇಕಿದೆ ಎಂಬ ತೀರ್ಮಾನಗಳನ್ನು ಕೊಡುತ್ತಾರೆ. ಇಂತಹ ಬರಹಗಳು ಕನ್ನಡದ ಓದುಗರನ್ನು ಇನ್ನೂ 17-18ನೇ ಶತಮಾನದಲ್ಲೇ ಉಳಿಸುತ್ತಿವೆ. ಹೀಗೆ ಅನಿಸಿಕೆಗಳ ಆಧಾರಿತವಾದ ಇಂತಹ ಲೇಖನಗಳ ಹಲವಾರು ಉದಾಹರಣೆಗಳಿವೆ.

ಇದೊಂದು ಬಗೆಯಾದರೆ, ಮತ್ತೊಂದು ಬಗೆಯ ಉತ್ಪ್ರೇಯ ಸಂಗತಿಯು ಫೇಸ್‌ಬುಕ್‌ನಲ್ಲಿ ಹರಿದಾಡಿತ್ತು. ಅದೇನೆಂದರೆ ಸಸ್ಯಗಳಿಗೆ ನೀರು ಉಣಿಸುವುದೇನೂ ಬೇಡ, ಅವುಗಳಿಗೆ ಬೇಕಾಗಿರುವುದು ಕೇವಲ ಮಣ್ಣಿನ ತೇವಾಂಶ ಮಾತ್ರ ಎನ್ನುವ ಮಾಹಿತಿ! ನೀರು ಬೇಡ, ತೇವಾಂಶ ಸಾಕು ಎನ್ನುವುದರ ಮೂಲಕ ನೀರು-ತೇವಾಂಶದ ಸಂಬಂಧವನ್ನು ಅದು ನಿರಾಕರಿಸಿತ್ತು. ಇದು ಕೃಷಿಯ ಹಿತಚಿಂತಕ ಸ್ವಯಂ ಸೇವಕರಲ್ಲಿ ಬಹುದೊಡ್ಡ ಸಂಶೋಧನೆಯೆಂದೆನಿಸಿ, ಈವರೆಗೂ ಕೃಷಿವಿಜ್ಞಾನದಲ್ಲಿ ಚರ್ಚಿಸಿದ್ದನ್ನು ಒಂದು ಮೋಸವೇ ಎಂಬಂತೆ ಅನುಮಾನ ತಂದಿತ್ತು.

ಇನ್ನೂ ಒಂದು ಉದಾಹರಣೆ ಹೀಗಿದೆ. ಅದು ಸೂರ್ಯಕಾಂತಿ ಗಿಡಗಳಿಗೆ ಸಂಬಂಧಿಸಿದ್ದು. ಸಾಮಾನ್ಯವಾಗಿ ಹಗಲಿನ ಹೊತ್ತು ಸೂರ್ಯಕಾಂತಿ ಹೂಗಳು ಎಳೆಯದಾಗಿದ್ದಾಗ ಮಾತ್ರವೇ ಸೂರ್ಯನತ್ತ ಮುಖ ಮಾಡಿ ಸೂರ್ಯನನ್ನು ಅನುಸರಿಸುತ್ತ ಪೂರ್ವದಿಂದ ಪಶ್ಚಿಮಕ್ಕೆ ತಿರುಗುತ್ತವೆ. ಮರುದಿನ ಬೆಳಗಿನ ಹೊತ್ತಿಗೆ ಮತ್ತೆ ಪೂರ್ವಕ್ಕೆ ತಿರುಗಿರುತ್ತವೆ. ಮತ್ತದೇ ಸೂರ್ಯನ ಅನುಸರಿಸುವಿಕೆ ಪುನರಾವರ್ತನೆಗೊಳ್ಳುತ್ತದೆ. ಆದರೆ ತೆನೆಯು ಕಾಳು ತುಂಬುತ್ತಾ ಹೋದಂತೆ ಮತ್ತು ಬಲಿತ ಮೇಲೆ ಕೇವಲ ಪೂರ್ವಕ್ಕೆ ಮಾತ್ರವೆ ಮುಖ ಮಾಡಿರುತ್ತವೆ. ಸೂರ್ಯನನ್ನು ಅನುಸರಿಸುವ ಸಸ್ಯಗಳ ಬಗ್ಗೆ ವಿಜ್ಞಾನದ ಆರಂಭಕಾಲದ ಅಧ್ಯಯನಗಳೇ ದಾಖಲಿಸಿವೆ. ಕಾಳು ಕಟ್ಟಿದ ಮೇಲೆ ಸೂರ್ಯಕಾಂತಿಯಲ್ಲಿ ತೆನೆಯ ಕೆಳಗಿನ ಜೀವಿಕೋಶಗಳು ಭಾರವನ್ನು ಹೊತ್ತು ತಿರುಗಾಡಲಾರವು. ಕಾಂಡದ ಕುತ್ತಿಗೆಯ ಜೀವಿಕೋಶಗಳು ತೆನೆ ತುಂಬಿಕೊಂಡಾಗ ಗಟ್ಟಿಯಾಗಿರುವುದನ್ನು ೧೮ನೇ ಶತಮಾನದಲ್ಲೇ ಅರಿಯಲಾಗಿತ್ತು. ಆದರೆ 21ನೇ ಶತಮಾನದಲ್ಲಿ ಇದನ್ನು ಕುಲಾಂತರಿ ತಳಿಯಿಂದಾದುದೆಂದು ಹಬ್ಬಿಸಲಾಗಿತ್ತು. ಕೆಲವು ಎನ್.ಜಿ.ಒ. ಮಿತ್ರರು ಅದರ ಕುರಿತು ಕೋಲಾಹಲವನ್ನು ಎಬ್ಬಿಸುವವರಿದ್ದರು. ಕೆಲವು ರೈತರು ನಿಜಕ್ಕೂ ಕಂಗಾಲಾಗಿದ್ದರು. ಇಂತಹ ಸುದ್ದಿಗಳಿಗೆ ಮಾಧ್ಯಮವು ಪುಲಕಗೊಂಡು ಭಾರಿ ಸಂಶೋಧನೆಯೆಂಬಂತೆ ಪ್ರಕಟಿಸುವ ಮೂರ್ಖತನವನ್ನೂ ತೋರುವುದರಲ್ಲಿತ್ತು. ಆದರೆ ಸುದ್ದಿ ಹಾಗೆಯೇ ಸಪ್ಪಗಾಗಿತ್ತು. ವಿಜ್ಞಾನದ ಅರಿವು ಆಳವಾದ ಓದು ಮತ್ತು ಜ್ಞಾನದ ಸಮೀಕರಣವನ್ನು ಬಯಸುತ್ತದೆ. ಅಂದರೆ ಅದನ್ನು ಕೇವಲ ನಮ್ಮ ಮಿತಿಯೊಳಗಿನ ಓದು ಮತ್ತು ತಾರ್ಕಿಕ ನಿರ್ಧಾರಗಳಿಂದ ಕಟ್ಟಿಕೊಡಲು ಸಾಧ್ಯವಿಲ್ಲ.

ಇಂತಹ ಪರಿಸ್ಥಿತಿಯಲ್ಲಿ ಪ್ರಸ್ತುತ ಪ್ರಚಲಿತವಾಗಿರುವ ವಿಜ್ಞಾನವನ್ನು ಈ ಮುಂದಿನಂತೆ ಮೂರು ಬಗೆಯಲ್ಲಿ ವಿಭಜಿಸಬಹುದು.

ಮೊದಲನೆಯದಾಗಿ ಕಾರ್ಪೋರೇಟ್ ವಿಜ್ಞಾನ! ಇದು ಕಾರ್ಪೋರೇಟ್ ಜಗತ್ತು ತನ್ನ ಲಾಭದ ಹುನ್ನಾರದಲ್ಲಿ ಪ್ರತಿಫಲಿಸುವ ವಿಜ್ಞಾನ. ಇದರಲ್ಲಿ ‘ವಿಜ್ಞಾನದ ಉತ್ಪನ್ನಗಳು’ ಎಂದೇ ಹೇಳುತ್ತ ಕಂಪನಿಗಳ ಲಾಭವನ್ನಷ್ಟೇ ಮುಖ್ಯವಾಗಿಟ್ಟುಕೊಂಡು ಎಲ್ಲವೂ ಸಾಧ್ಯ ಎಂಬಂತೆ ವಿವರಿಸಲಾಗುವುದು. ವಿಜ್ಞಾನವನ್ನು ನಿಸರ್ಗದಿಂದ ಬೇರೆ ಮಾಡಿ ಕೇವಲ ಲಾಭದ ಹಿತದೆಡೆಗೆ ಕೊಂಡೊಯ್ದು, ಹೆಚ್ಚೂ ಕಡಿಮೆ ಏನು ತಿಂದಾದರೂ ಬದುಕಲು ಸಾಧ್ಯ ಎಂಬಂತಹ ಅರಿವನ್ನು ಕೊಡುವುದು. ತುಂಬಾ ಸರಳವಾದ ಉದಾಹರಣೆಯೆಂದರೆ ಸಸ್ಯ ಜನ್ಯ ಎಣ್ಣೆಯನ್ನು ಕೊಲೆಸ್ಟರಾಲ್‌ರಹಿತ ಎಂಬ ಲೇಬಲ್ ಹಚ್ಚಿ ಮಾರುವುದನ್ನು ಕಂಡಿರುತ್ತೀರಿ. ವಾಸ್ತವವಾಗಿ ಸಸ್ಯಜನ್ಯ ಎಣ್ಣೆಯಲ್ಲಿ ಕೊಲೆಸ್ಟರಾಲ್ ಇರುವುದೇ ಇಲ್ಲ! ಹೀಗೆ ಇದೆನೋ ಹೊಸ ಉತ್ಪನ್ನ ಎಂಬಂತೆ ಬಿಂಬಿಸಿ ಮಾರುವ ಕಾರ್ಪೋರೇಟ್ ಜ್ಞಾನದ ಮಾದರಿ ಇದು.

ಎರಡನೆಯದು ಎನ್.ಜಿ.ಓ. ವಿಜ್ಞಾನ! ಎನ್.ಜಿ.ಓ. ಪರಂಪರೆಯಲ್ಲೊಂದು ವಿಜ್ಞಾನದ ಮೀಮಾಂಸೆಯಿದೆ. ಅದರಲ್ಲಿ ವಿವರಣೆಯೆಂಬುದು ಅನುಮಾನಗಳ ವೈಭವೀಕರಣ! ಇಲ್ಲಿ ಅನೇಕ ಬಗೆಯಲ್ಲಿ ವಿಜ್ಞಾನವನ್ನು ಕೇಡುಗ -‘ವಿಲನ್’- ಎಂಬಂತೆ ಕಾಣಲಾಗುತ್ತದೆ. ಇವರು ತಮ್ಮ ನಿಸರ್ಗಸ್ನೇಹಿ ಆಲೋಚನೆಗಳ ಹಿನ್ನೆಲೆಯಲ್ಲಿ ಕೇವಲ ಅನಿಸಿಕೆಗಳಿಂದ, ತಾವು ಕಂಡದ್ದೇ ಸತ್ಯ ಎಂಬ ತಿಳಿವಿನಿಂದ ಅನುಮಾನಗಳನ್ನು ಹುಟ್ಟುಹಾಕಿ ವಿವರಿಸುತ್ತಿರುತ್ತಾರೆ. ಇದೊಂದು ಯಾವುದೇ ಆಳದ ತಿಳಿವಳಿಕೆ ಅಥವಾ ಓದು ಇಲ್ಲದೆ ತೀರಾ ಭಾವನಾತ್ಮಕವಾಗಿ ವಿವರಿಸುವ ಮಾದರಿಯಾಗಿದ್ದು ಸಮಾಜವನ್ನು ಇಡಿಯಾಗಿ ಕಂಗೆಡಿಸಬಲ್ಲದು. ಹಿಂದೊಮ್ಮೆ ಇಂದೋರ್ ಮಾದರಿ ಕಾಂಪೋಸ್ಟ್ ತಯಾರಿಕಾ ಕೈಪಿಡಿಯನ್ನು ಅನುವಾದಿಸಿದ ರಾಜ್ಯದ ಹೆಸರಾಂತ ಎನ್.ಜಿ.ಓ. ಇಂದೋರ್ (ಊರಿನ ಹೆಸರು) ಅನ್ನು ಇನ್‌ಡೋರ್ (Indore ಅನ್ನು In-Door) ಇರಬೇಕೆಂದು  ಓದಿಕೊಂಡು ‘ಒಳಾಂಗಣ ಕಾಂಪೋಸ್ಟ್’ ಎಂದು ಪ್ರಕಟಿಸಿತ್ತು. ಹೆಸರಾಂತ ಕೃಷಿ ವಿಜ್ಞಾನಿ ಸರ್ ಆಲ್ಬರ್ಟ್ ಹೊವರ್ಡ್ ಇಂದೋರಿನಲ್ಲಿ ಕಾಂಪೋಸ್ಟ್ ತಯಾರಿಕೆಯ ಮಾದರಿಯನ್ನು ರೂಪಿಸಿದ್ದನ್ನು ಸಂಪೂರ್ಣ ತಿಳಿದುಕೊಳ್ಳುವ ಯಾವ ವ್ಯವಧಾನವೂ ಇಲ್ಲದೆ ಅವಸರದಲ್ಲಿ ಆ ಸಂಸ್ಥೆ ಮಾಡಿದ್ದ ಇಡವಟ್ಟಿದು. ಇವು ಕೇವಲ ಉದಾಹರಣೆಗಳಷ್ಟೆ. ಕನ್ನಡದಲ್ಲಿ ಇಂತಹ ನೂರಾರು ಆಭಾಸಗಳನ್ನು  ಕಾಣಬಹುದು.

ಮೂರನೆಯ ಬಗೆಯೆಂದರೆ ನೈಜವಾದ ಎಲ್ಲ ಸಂದರ್ಭದಲ್ಲೂ ಸಲ್ಲುವ ಹಾಗೂ ಕೇವಲ ಸತ್ಯವನ್ನು ಬಿಂಬಿಸುವ ವಿಜ್ಞಾನ. ಇದು ನಿಜಕ್ಕೂ ಜನರಿಗೆ ತಲುಪಬೇಕಾಗಿರುವ ಜ್ಞಾನ. ಇದರಲ್ಲಿ ಯಾವುದೇ ಹುನ್ನಾರಗಳೂ ಇಲ್ಲ, ಎಮೋಷನ್ನುಗಳೂ ಇಲ್ಲ. ಆದರೆ ಇದಕ್ಕೆ ಬೇಕಿರುವುದು ವಿಷಯದ ಆಳಕ್ಕಿಳಿದು ತಿಳಿದುಕೊಳ್ಳುವ ತಾಳ್ಮೆ ಹಾಗೂ ಆಸಕ್ತಿ.  ಈ ಮೂರೂ ಬಗೆಯ ವಿಜ್ಞಾನಗಳ ವ್ಯತ್ಯಾಸಗಳನ್ನು ಓದುಗರು ತಿಳಿಯುವ ಜರೂರು ಖಂಡಿತ ಇದೆ. ಕನ್ನಡದ ಮಟ್ಟಿಗಂತೂ ಇದು ತುಂಬಾ ಹೆಚ್ಚಾಗಿದೆ. ಓದು ಮತ್ತು ಬರಹವನ್ನು ಕನ್ನಡದಲ್ಲಿ ನಿರ್ದೇಶಿಸುತ್ತಿರುವ ಮಾನದಂಡಗಳನ್ನೂ ಒಡೆದು ಜ್ಞಾನ ಅಥವಾ ತಿಳಿವಳಿಕೆಗೆ ಇರುವ ವೈಶಾಲ್ಯವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಇದಕ್ಕೆಲ್ಲ್ಲ ನಮ್ಮ ಜ್ಞಾನ ಪರಂಪರೆಯ ಹಿಂದೆ ಓಡುವ ಮನಸ್ಸನ್ನು ರೂಪಿಸುವ ಮಾರ್ಗಗಳ ಹೊಣೆಗಾರಿಕೆ ಮುಖ್ಯವಾಗುತ್ತದೆ.

ಜ್ಞಾನ ಪರಂಪರೆಯ ಬೆನ್ನು ಹತ್ತುವ ಕೆಲಸವೆಂದರೆ ಕಲಿಕೆಯ ಹಿಂದೆ ಹೋಗುವುದು. ಕಲಿಕೆಯೆಂದರೆ, ಶಾಲೆ ಕಾಲೇಜು, ವಿಶ್ವವಿದ್ಯಾಲಯಗಳನ್ನು ಸೇರಿ ಪದವಿ ಗಳಿಸುವುದು. ಇದು ನಮ್ಮಲ್ಲಿ ಸಾಮಾನ್ಯವಾಗಿರುವ ಸಂಗತಿ. ಅಂದರೆ ವಿದ್ಯಾಸಂಸ್ಥೆಗಳಲ್ಲಿ ಉತ್ತಮವಾದುದನ್ನು ಕಲಿಯುವ ಮತ್ತು ಅದನ್ನು ಒಳಿತಿಗಾಗಿ ಬಳಸುವ ಜ್ಞಾನ ಸಂಪಾದನೆಯಾಗಬೇಕು. ಆದರೆ ನಮ್ಮಲ್ಲಿ ಸೇರಿ ಕಲಿಯುವುದಕ್ಕಿಂತಲೂ ವಿದ್ಯಾಸಂಸ್ಥೆಯ ಒಳಸೇರುವ ಬಗೆಯನ್ನು ವ್ಯಾವಹಾರಿಕವಾಗಿಸಿರುವುದು ಬಹುದೊಡ್ಡ ಸಾಮಾಜಿಕ ದುರಂತ. ಪ್ರತಿ ಪಟ್ಟಣಗಳಲ್ಲೂ ಐಐಟಿ-ಜೆಇಇ (IIT-JEE) ಪರೀಕ್ಷಾ ತರಬೇತಿಯನ್ನು ಸೇರಿಸಿ ಪಾಠ ಹೇಳುವ ಸಂಸ್ಥೆಗಳ ಜಾಹೀರಾತುಗಳು ಕಾಣುತ್ತವೆ. ಅಂತಹ ಸಂಸ್ಥೆಗಳೆಲ್ಲವಕ್ಕೂ ಸೇರುವ ಜಾಣತನವನ್ನು ಕಲಿಸುವ ವ್ಯವಹಾರವೇ ದೊಡ್ಡದಾಗಿ ಕಾಣುತ್ತದೆ. ಇದು ನಿಜಕ್ಕೂ ಒಳಗಿನ ಕಲಿಕೆಯನ್ನು ವ್ಯವಸ್ಥಿತವಾಗಿಸಲು ಸಹಾಯ ಮಾಡುತ್ತದೆಯೇ ಅಥವಾ ಪದವಿ ಪಡೆದ ಮೇಲೆ ಅವರು ಯಶಸ್ವಿಯಾಗಿರಲು ಉಪಯೋಗವೇ? ಯಾವುದೂ ತಿಳಿಯುವುದಿಲ್ಲ. ಒಟ್ಟಿನಲ್ಲಿ ಲಾಭದ ಆಸೆಯ ಮನಸ್ಸನ್ನು ಉಪಯೋಗಿಸಿಕೊಳ್ಳುತ್ತವೆ ಅಷ್ಟೆ. ನಿಜವಾದ ಜ್ಞಾನದ ಹುಡುಕಾಟಕ್ಕೆ ನಮ್ಮಲ್ಲಿ ಮಾದರಿಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ. ಕಲಿಕೆಯು ಒಂದು ರೀತಿಯಲ್ಲಿ ಅಣಕು, ನೋಡಿ ತಿಳಿಯುವುದು, ಅನುಭವಿಸುತ್ತಾ ಯಶಸ್ಸನ್ನು ಸಾಧಿಸುವುದು. ಇವೆಲ್ಲವೂ ಸಾಧ್ಯವಾಗಲು ಓದು-ಬರಹಗಳು ನೀಡುವ ತಂತ್ರಗಳಿಂದ ಮಾರ್ಗದರ್ಶನ ಮಾಡಬಹುದು. ಜ್ಞಾನ ಸಂಪಾದನೆಗೆ ಒಳಹೊಕ್ಕು ಕಲಿಕೆಯ ಸೌಂದರ್ಯವನ್ನು ಆನಂದಿಸುವ, ಹಾಗೂ ಅದಕ್ಕೆ ಬೇಕಿರುವ ವಿನಯ, ಶ್ರದ್ಧೆ, ಕಲಿಕೆಯ ಸಮೀಕರಣ ಹೀಗೆ ಈ ಎಲ್ಲವನ್ನೂ ಒಪ್ಪಿಕೊಳ್ಳುವ ಮನಸ್ಸನ್ನು ರೂಪಿಸಿಕೊಳ್ಳಬೇಕು. ಇವುಗಳನ್ನೆಲ್ಲ ಕಲಿಸುವ ಮೂಲಕ ಆಳದ ಜ್ಞಾನವು ತಿಳಿವಳಿಕೆಯಲ್ಲಿ ಸೇರಿ ಅದರ ಸೌಂದರ್ಯವನ್ನು ಅನುಭವಿಸುವಂತಾಗಬೇಕು.

       ನಮ್ಮ ಜ್ಞಾನ ಪರಂಪರೆಯಲ್ಲಿ ವಿಜ್ಞಾನದ ಆಯ್ಕೆ ಮತ್ತು ಅದರ ಅನುರಣನದಲ್ಲಿ ಮಾದರಿಗಳಿಲ್ಲದೆ ಇರುವುದೇ ಕನ್ನಡದ ವಿಜ್ಞಾನದ ಓದಿನ ಪ್ರಮುಖ ತೊಡಕು. ವಿಜ್ಞಾನವು ಕೇವಲ ವ್ಯಾವಹಾರಿಕ, ಲಾಭದ ಹಿನ್ನೆಲೆಯ ಅಥವಾ ಕೆಲಸ ಗಿಟ್ಟಿಸುವ ಆಯ್ಕೆಯಾಗಿದೆ. ಹಾಗಿರುವಾಗ ಇನ್ನು ಅದರ ಅನುರಣನವನ್ನು ಸಾಧಿಸುವುದು ಹೇಗೆ? ಅನುರಣನ ಸಾಧ್ಯವಾಗಲು ಅದರ ಆನಂದವನ್ನು ಅನುಭವಿಸಲು ಬರಬೇಕು. ಆನಂದ ಅನುಭವಕ್ಕೆ ಬರಲು ಅದರ ಭವ್ಯವಾದ ತಿಳಿವಳಿಕೆಯನ್ನು ಹೊಂದಬೇಕು. ಅದಕ್ಕೆ ಕಷ್ಟಪಡಲು ತಯಾರಿರಬೇಕು. ನಮ್ಮಲ್ಲಿ ಆದರೆ ಸಾಹಿತ್ಯದ ಮತ್ತು ಸಂಗೀತದ ಅನುರಣನ ವಿಪುಲವಾಗಿ ಬೆಳೆದಿವೆ. ಇದರ ಮಾರ್ಗಗಳಲ್ಲಿನ ಗ್ರಹಿಕೆಗಳು ಭಿನ್ನ. ಅದೇ ಮಾದರಿಯನ್ನು ವಿಜ್ಞಾನಕ್ಕೂ ಅಳವಡಿಸುವುದರಿಂದ ವಿಜ್ಞಾನದ ಹಾದಿಯಲ್ಲಿ ಇನ್ನೂ ಅಸ್ಪಷ್ಟತೆಯೇ ತುಂಬಿದೆ. ಇದು ಕನ್ನಡದ ಮಾರ್ಗದಲ್ಲಂತೂ ಸ್ಪಷ್ಟ. ಇದಕ್ಕೆ ಈಗ ಕೆಲವು ಉದಾಹರಣೆಗಳನ್ನು ಗಮನಿಸೋಣ.

ನಮ್ಮಲ್ಲಿ ಒಂದು ವಿಜ್ಞಾನ ವಿದ್ಯಾಲಯದ ಗ್ರಂಥಾಲಯವನ್ನೂ ಅಲ್ಲಿರುವ ಭೈರಪ್ಪ, ಕುವೆಂಪು, ತೇಜಸ್ವಿ, ಕಟ್ಟೀಮನಿ, ಬೇಂದ್ರೆಯವರ ಪುಸ್ತಕಗಳಿದ್ದಾಗ ಮಾತ್ರ ಹೊಗಳುವ ಅಥವಾ ಗುರುತಿಸುವ ಸಂಪ್ರದಾಯ ನಮ್ಮಲ್ಲಿದೆ. Wealth of India series ಅನ್ನಾಗಲಿ, ಫೈನ್‌ಮನ್ ಪಾಠಗಳನ್ನಾಗಲಿ, AOAC (American Association of Analytical Chemists) ವರದಿಗಳನ್ನಾಗಲಿ, ಡಾರ್ವಿನ್ನರ Origin of Species ಬಗೆಯಾಗಲಿ, ರಿಚರ್ಡ್ ಡಾಕಿನ್ಸ್ ಅವರ Selfish Gene  ಪುಸ್ತಕಗಳನ್ನು ಹುಡುಕಿ ಮಾತಾಡುವ  ಸಂಪ್ರದಾಯವಾಗಲಿ ನಮ್ಮಲ್ಲಿ ಇಲ್ಲ. ಅಥವಾ ರಾಮನ್, ರಾಮಾನುಜನ್, ಸತೀಶ್ ಧವನ್, ಹೋಮಿ ಭಾಭಾ, ನಾರ್ಳೀಕರ್ ಮುಂತಾದವರ ಕೃತಿಗಳನ್ನು ಹುಡುಕುವುದು ಅಥವಾ ಗುರುತಿಸಿ ಮಾತನಾಡುವುದು ವಿಜ್ಞಾನದ ವಿದ್ಯಾರ್ಥಿಗಳಿಗೂ ತಿಳಿಯದ ಸಂಗತಿ. ಅವರ ಕೃತಿಗಳೆಂದೂ ಗ್ರಂಥಾಲಯಗಳನ್ನು ಹೊಗಳುವ/ವಿವರಿಸುವ ಮಾನದಂಡಗಳಾಗಿಯೇ ಇಲ್ಲ. ಕನ್ನಡದಲ್ಲಿ ವಿಜ್ಞಾನದ ದಾಖಲೆಗಳು ಕಡಿಮೆ ಇರುವುದಾದರೂ ವಿಜ್ಞಾನದ ಗ್ರಂಥಾಲಯವನ್ನು ಹೊಕ್ಕ ಕನ್ನಡದ ಮನಸ್ಸು ಮಾನದಂಡಕ್ಕೆ ಕೇವಲ ಸಾಹಿತ್ಯಕ್ಕೇ ಮೊರೆ ಹೋಗುವುದಂತೂ ವಿಜ್ಞಾನದ ಅನುರಣನಕ್ಕಿರುವ ಸಮಸ್ಯೆಯೇ.

ಇನ್ನು ವಿಜ್ಞಾನವನ್ನು ನಾವು ಒಂದು ಕಲಾಕೃತಿಯಲ್ಲಿ ಕಾಣುವ ಬಗೆಯನ್ನು ಗಮನಿಸೋಣ.  “ಅ ಬ್ಯೂಟಿಫುಲ್ ಮೈಂಡ್” ಪ್ರಖ್ಯಾತ ಗಣಿತಜ್ಞ ಜಾನ್ ನ್ಯಾಶ್ ಅವರ ಜೀವನವನ್ನು ಕುರಿತ ಕೃತಿ ಹಾಗೂ ಸಿನಿಮಾ ಕೂಡ. ಈ ಸಿನಿಮಾ ಬಗ್ಗೆ ಮಾತಾಡುತ್ತಾ ಗಣಿತವನ್ನೇ ಓದಿರುವ ಕನ್ನಡದ ವಿಮರ್ಶಕರೆಂದು ಖ್ಯಾತಿ ಪಡೆದ ಬರಹಗಾರರೊಬ್ಬರು, “ಓ ಅದಾ, ಇಂಗ್ಲೀಶ್ ಸಿನಿಮಾ ಗೊತ್ತಲ್ಲ! ಫುಲ್ ಅರ್ಥ ಆಗೋ ಹಾಗೆ ಇರೊಲ್ಲ”, ಎಂದಿದ್ದರು. ಮತ್ತೋರ್ವ ಖ್ಯಾತ ಕನ್ನಡದ ಕವಿಗಳು ಅದೇ ಚಿತ್ರವನ್ನು ಕುರಿತು, “ಅದೊಂದು ಸ್ಪ್ಲಿಟ್‌ ಪರ್ಸನಾಲಿಟಿಯ ಕಥೆ ತಾನೇ” ಎಂದಿದ್ದರು. ಚಲನಚಿತ್ರದೊಳಗಿರುವ ಹಕ್ಕಿಗಳ ಹೆಜ್ಜೆಗಳಲ್ಲೂ ಆಲ್ಗರಿದಮ್ ಹುಡುಕುವ ಗಣಿತದ ಬೆರಗನ್ನು ಹೇಳುವ ಮಾತಿರಲಿ, ಅದನ್ನು ಒಂದು ಜೀವನ ಕೃತಿಯಾಗಿ ಬರೆದ ಸಿಲ್ವಿಯಾ ನಾಸರ್ ಮಾತುಗಳನ್ನಾದರೂ ಹೇಳುವ ಸಾಮರ್ಥ್ಯ ತೋರಿದ್ದರೆ ನೋಡೋಣ. ಏಕೆಂದರೆ ಅದೇ ಹೆಸರಿನಲ್ಲಿ ಅವರ ಜೀವನ ಕಥೆಯು ಪುಸ್ತಕ ರೂಪದಲ್ಲಿದ್ದು, ಅದರ ಆಧಾರದಿಂದಲೇ ಸಿನಿಮಾ ಹೊರಬಂತು. ಈ ಎರಡೂ ಸಂದರ್ಭಗಳಲ್ಲೂ ಜಾನ್ ನ್ಯಾಶ್ ಬದುಕಿದ್ದರು. ಬದುಕಿದ್ದಾಗಲೇ ವ್ಯಕ್ತಿಯೋರ್ವರ ಜೀವನವು ಒಂದು ಚಲನಚಿತ್ರವಾಗಿ ಹೊರಬಂದ ದಾಖಲೆಗಳು ಅಪರೂಪ. ಸಾಕಷ್ಟು ಡಾಕ್ಯುಮೆಂಟರಿಗಳಿರಬಹುದು, ಆದರೆ ಒಂದು ಕಮರ್ಶಿಯಲ್ ಚಲನಚಿತ್ರವಾಗಿ ಬಂದಿರುವುದು ಬೆರಳೆಣಿಕೆಯಷ್ಟು! ಅದರ ಮೂಲ ಕೃತಿಕಾರ್ತಿ ಸಿಲ್ವಿಯಾ ನಾಸರ್ ಪುಸ್ತಕದ ಮೊದಲ ಮಾತುಗಳಲ್ಲಿ ಹೀಗೆನ್ನುತ್ತಾರೆ. “ತನ್ನ ಬಗ್ಗೆಯೇ ತನಗೇ ಏನೂ ಗೊತ್ತಿಲ್ಲದವರೊಬ್ಬರಿಂದ ಪಡೆದು, ನಾ ಬರೆಯುವುದಾದರೂ ಹೇಗೆ?” ಅದಿರಲಿ ಯಾರೊಬ್ಬರಿಗೂ ಅವರ ಜೀವನ ಪಯಣದ ಬಹುಭಾಗ ತಿಳಿದೇ ಇರಲಿಲ್ಲ. ಸರಿ ಸುಮಾರು ಹತ್ತು ವರ್ಷ ಕಾಲ ಆಸ್ಪತ್ರೆಯಲ್ಲಿ ಒಳರೋಗಿಯಾಗಿದ್ದರು ಜಾನ್. ಇಂತಹ ವ್ಯಕ್ತಿಯು ಅರ್ಥವಿಜ್ಞಾನವನ್ನು ಗಣಿತೀಯ ಮಾದರಿಯ ವಿವರಗಳಿಂದ ಅನುಶೋಧಿಸಿ ನೊಬೆಲ್ ಪಾರಿತೋಷಕ ಪಡೆದ ಬಗೆಯನ್ನು ಆಕೆ ಕಥನವಾಗಿ ಕಟ್ಟಿದ್ದಾದರೂ ಹೇಗೆ? ಈ ಬಗೆಯ ಸಾಹಿತ್ಯಿಕ ಸೃಷ್ಟಿಯ ಬಗ್ಗೆಯೂ ಮಾತಾಡದ ನಮ್ಮ ಸಾಹಿತ್ಯ ಸಮುದಾಯ, ಚಲನಚಿತ್ರವನ್ನು ಒಂದೇ ಮಾತಿನ ಚರ್ಚೆಯಲ್ಲಿ ಮುಗಿಸುತ್ತದೆ. ಜತೆಯಲ್ಲಿ ಇಂತಹ ಸಂದರ್ಭಗಳನ್ನೇ ಮುಖವಾಣಿಗಳಾಗಿಸಿ ಮಾಧ್ಯಮಗಳು ಕೂಡ ಬರೆಯುತ್ತವೆ. ಸಮಾಜವು ಅದನ್ನೇ ಬಲುದೊಡ್ಡ “ಓದ”ನ್ನಾಗಿಸುತ್ತದೆ. ವಿಜ್ಞಾನವು ಮಾತಿನ ಚರ್ಚೆಯಲ್ಲಿ ಸ್ವರೂಪ ಕಳೆದುಕೊಂಡು ಕಡಲಲ್ಲಿ ಕುರುಡಲೆಯುವ ಹಡಗಿನಂತಾಗುತ್ತದೆ.

       ಹೀಗೆ ನಮ್ಮ ಜ್ಞಾನ ಮೀಮಾಂಸೆಯು ತಪ್ಪು ದಾರಿಯ ವಿಕಾಸವನ್ನು ಒಪ್ಪಿಕೊಂಡು ಬೆಳೆಯುತ್ತಿದೆ. ಅದೇ ಕಾರಣಕ್ಕೆ ವಿದ್ಯಾಲಯದ ಒಳಹೋಗುವ ಪ್ರಕ್ರಿಯೆಯೇ ನಮಗೆ ಮುಖ್ಯವಾಗಿ, ಅಲ್ಲಿಂದ ಹೊರಬರುವ ಜಾಣತನ ಬೆಳೆಯುವುದಿಲ್ಲ. ಅಂದರೆ ಎಲ್ಲೆಲ್ಲೂ ಎಂಟ್ರೆನ್ಸ್ ಟೆಸ್ಟ್ ಗೆಲ್ಲುವ ಗುರಿಗಳಿವೆ. ಆದರೆ ಡಿಗ್ರಿ ಮುಗಿಸಿ ಜಾಣರಾಗಿ ಹೊರಬರುವ ದಾರಿಗಳ ಸ್ಪಷ್ಟತೆಯಿಲ್ಲ. ಇದನ್ನು ಒಂದು ಪುಟ್ಟ ರೂಪಕವಾಗಿ ನೋಡುವುದಾದರೆ ಅದು ಹೀಗೆ ಇರಬಹುದು. ಒಂದು ಸಕ್ಕರೆ ಚೀಲದೊಳಗೆ ಹೊಕ್ಕ ಇರುವೆಯೊಂದು ಹೊರಬರಲು ಕಷ್ಟಪಡುವುದನ್ನು ಗಮನಿಸುತ್ತೇವಲ್ಲ ಹಾಗೆ. ಹಾಗಾಗಿ ನಮ್ಮಲ್ಲಿ ಸಂಖ್ಯಾದೃಷ್ಟಿಯಿಂದ ಹೆಚ್ಚುಗಾರಿಕೆಯನ್ನು ಗಳಿಸುವ ಸುಲಭ ತಂತ್ರಗಳಿವೆ. ಅದರೆ ಆಳಕ್ಕಿಳಿದು ಅದರೊಳಗಿನ ಅರಿವಿನಿಂದ ಯೋಗ್ಯತೆಯನ್ನು ಗಳಿಸುವಲ್ಲಿ ವಿಫಲವಾಗುತ್ತಿದ್ದೇವೆ.  ಹಾಗಾಗಿ ನಮ್ಮ ಜ್ಞಾನ ಮೀಮಾಂಸೆಯೇ ಪುನರ್ ಪರಿಶೀಲನೆಗೆ ಒಳಗಾಗಬೇಕಾದ ತುರ್ತು ಇದೆ. ವಿದ್ಯೆಯನ್ನು ಸೃಜಿಸುವ ಸಂಸ್ಥೆಗಳೂ ವ್ಯವಹಾರದ ಕೇಂದ್ರಗಳಾಗಿ, ಶಿಕ್ಷಣವು ವ್ಯವಹಾರವಾಗಿ, ಜ್ಞಾನವು ಅಧಿಕಾರವಾಗಿ ಬೆಳವಣಿಗೆಯನ್ನು ಬಯಸುತ್ತಿರುವ ನಮ್ಮ ಸಮಾಜವನ್ನು ಜ್ಞಾನದ ಹಿನ್ನೆಲೆಯಲ್ಲಿ ಕಟ್ಟುವ ಕಲೆಗಾರಿಕೆಯನ್ನು ಹುಡುಕುವುದಾದರೂ ಹೇಗೆ? ಜ್ಞಾನ ಸಮಾಜದ ನಿರ್ಮಿತಿಯನ್ನು ಮಾತಾಡುವ ರಾಜಕಾರಣವು ಇಂತಹ ವಿದ್ಯಾಲಯಗಳನ್ನು ಪ್ರೋತ್ಸಾಹಿಸುತ್ತಾ ಅದನ್ನು ಹೇಗೆ ಕಟ್ಟುತ್ತದೆ, ಎಂಬುದೇ ಬಲುದೊಡ್ಡ ಪ್ರಶ್ನೆ!

       ಹೀಗಾಗಿ ಮನುಕುಲದ ಅತ್ಯಂತ ಸೃಜನಶೀಲ ಪ್ರಕ್ರಿಯೆಯಾದ ಜ್ಞಾನವನ್ನು ಬೆನ್ನು ಹತ್ತುವ ಅಥವಾ ಜ್ಞಾನ ಶೋಧದ ಪರಂಪರೆಯ ಪರ ವಕಾಲತ್ತು ವಹಿಸಬೇಕಾದ ಪರಿಸ್ಥಿತಿಯು ಎದುರಾಗಿದೆ. ತಿಳಿವಿನ ಹುಡುಕಾಟದಲ್ಲಿ ವಿಜ್ಞಾನದ ವೈಶಾಲ್ಯವು ಊಹೆಗೆ ಮೀರಿದ್ದು. ಅತಂಹದ್ದರಲ್ಲಿ ಜ್ಞಾನವು ಅಧಿಕಾರವಾಗದೆ, ಸಾಮಾಜೀಕರಣಗೊಂಡು ಮಾನವ ಪರಂಪರೆಯನ್ನು ಸಮಸ್ಥಿತಿಯ ನಿರ್ಮಿತಿಯಲ್ಲಿ ನಡೆಸಲು ನಾವು ಅದನ್ನು ಪುನರ್ ವಿಮರ್ಶಿಸಬೇಕಾದ ಪರಿಸ್ಥಿತಿಯಲ್ಲಿದ್ದೇವೆ. ಇದು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋದಲ್ಲಿ, ವಿಜ್ಞಾನದ ರಾಯಭಾರತ್ವವನ್ನು ವಹಿಸಬೇಕಾದ ಪರಿಸ್ಥಿತಿಗಳು ಹೆಚ್ಚುತ್ತಿವೆ ಎನ್ನಬೇಕಾಗಿದೆ. ಏಕೆಂದರೆ ವಿಜ್ಞಾನವನ್ನು ಸಮಾಜದ ಭಾಗವಾಗಿಸದೆ ಕೇವಲ ಅಧಿಕಾರ, ಆಡಳಿತ ಹಾಗೂ ವ್ಯವಹಾರದ ಪ್ರಕ್ರಿಯೆಗಳ ಹುನ್ನಾರವಾಗಿಸಿದ್ದೇವೆ. ಇದರ ಜೊತೆಯಲ್ಲಿ ಕೇವಲ ವ್ಯಕ್ತಿನಿಷ್ಠ ನಿರ್ಧಾರಗಳಿಂದ ಸಮಾಜವನ್ನು ಕುರಿತ ತೀರ್ಮಾನಗಳ ಕೈಗೊಳ್ಳುವಿಕೆಯ ಜ್ಞಾನ ಮೀಮಾಂಸೆಯೂ ಸೇರಿಕೊಂಡಿದೆ. ಹಾಗಾಗಿ ಇವುಗಳಿಂದ ಹೊರಬರುವ ಮಾರ್ಗಗಳ ತಿಳಿವಳಿಕೆಯು ಬೇಕಿದೆ. ಜ್ಞಾನವನ್ನು ಸಾರ್ವತ್ರಿಕವಾಗಿಸುವ ದಾರಿಯನ್ನು ಸ್ವಚ್ಛಗೊಳಿಸಬೇಕು. ತಿಳಿವು ಮುಕ್ತವಾದದ್ದು, ಆದರೆ ಅದನ್ನ ನಮ್ಮದನ್ನಾಗಿಸಲು ಶ್ರದ್ಧೆ ಮತ್ತು ಆಳಕ್ಕಿಳಿಯುವ ಮನಸ್ಸು ಬೇಕು. ವಿಜ್ಞಾನದಲ್ಲಂತೂ ಇದು ಅತ್ಯಂತ ಅವಶ್ಯಕವಾದುದು. ಎಲ್ಲವನ್ನೂ ಕೈಗೆತ್ತಿಕೊಳ್ಳುವ ಅನಿಸಿಕೆಗಳ ಆಧಾರಿತ ಬಾತ್ಮೀದಾರಿಕೆಯನ್ನು ನಿಲ್ಲಿಸಬೇಕು. ಇದೊಂದೇ ಸರಿಯಾದ ಮಾರ್ಗ!

       ನಮ್ಮ ಅಭಿವೃದ್ಧಿ ಚಿಂತನೆಗಳಲ್ಲಿ ಎಲ್ಲದಕ್ಕೂ ಏಕಮುಖವಾಗಿ ಪಾಶ್ಚಾತ್ಯ ಮಾರ್ಗವನ್ನು ಅನುಸರಿಸುವ ನಮ್ಮ ಸಾಮುದಾಯಿಕ ನಿರ್ಧಾರಗಳು ಜ್ಞಾನದ ಆಳಕ್ಕಿಳಿಯುವ ಪ್ರಕ್ರಿಯೆಯಲ್ಲಿ ಅವರನ್ನು ಯಾಕೆ ಅನುಸರಿಸುವುದಿಲ್ಲ ಎಂಬುದು ಬಲುದೊಡ್ಡ ಪ್ರಶ್ನೆಯೇ ಸರಿ. ವಿಜ್ಞಾನದ ಸಂದರ್ಭದಲ್ಲಂತೂ ಇದು ನಿಚ್ಚಳವಾಗಿದೆ. ಇದರಿಂದ ಆಗುತ್ತಿರುವ ನಷ್ಟವೆಂದರೆ ನಾವು ನಮ್ಮ ಸಮುದಾಯವನ್ನು ವಿಕಾಸದಲ್ಲಿ ಹಿಂದಕ್ಕೆ ಕರೆದುಕೊಂಡು ಹೋಗುತ್ತಿದ್ದೇವೆ. ಹಾಗಾಗುತ್ತಿರುವುದರ ದೊಡ್ಡ ನಷ್ಟವೆಂದರೆ ಅದು ಬೇರೊಂದು ಮಾರ್ಗವನ್ನು ಕಂಡುಕೊಂಡು ಇನ್ನೂ ಹೆಚ್ಚಿನ ನಷ್ಟಕ್ಕೂ ಕಾರಣವಾಗುತ್ತಿದೆ.   

ವಿಜ್ಞಾನವು ಸದಾ ದೊಡ್ಡ ಸುದ್ದಿಗಳನ್ನು ಮಾಡುತ್ತಲೇ ಇರುತ್ತದೆ. ಆದರೆ ಇದು ಸಾಮಾನ್ಯರ ಚರ್ಚೆಗಳ ಭಾಗವಾಗುವುದೇ ಇಲ್ಲ. ಸಾಮಾನ್ಯವಾಗಿ ವಿಚಾರಗಳು, ಗ್ರಹಿಕೆಗಳು ಸಾಹಿತ್ಯಿಕ ಸಂದರ್ಭಗಳನ್ನೇ ಸಾಮಾಜಿಕವಾಗಿ ಪರಿಗಣಿಸುವುದುಂಟು. ವಿಜ್ಞಾನವನ್ನು ಕೇವಲ ಒಂದು ವರ್ಗದ ಭಾಷೆಯಾಗಿ –ಇದು ನಮ್ಮದಲ್ಲ ಎಂಬಂತೆ- ನೋಡುವುದೇ ಹೆಚ್ಚು. ಆದರೆ, ವಿಜ್ಞಾನವು ಸಮಾಜ ಬಯಸಿದರೂ ಬಯಸದಿದ್ದರೂ ಪ್ರಭಾವಿಸುವುದಂತೂ ಸತ್ಯ. ಸಾಮಾನ್ಯವಾಗಿ ಕಲಾವಿದರು ಅಥವಾ ಸಾಹಿತಿಗಳು ಬಹಳ ಬೇಗ ಪ್ರಸಿದ್ಧಿಗೆ ಬರುತ್ತಾರೆ; ಅವರಿಗೆ ಪಾರಿತೋಷಕಗಳು ಬರುವಷ್ಟರಲ್ಲಿ ಅವರು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತಾರೆ. ಆದರೆ ವಿಜ್ಞಾನಿಗಳು ಪಾರಿತೋಷಕ/ಬಹುಮಾನಗಳು ಬಂದ ಮೇಲೆ ಎಲ್ಲರಿಗೂ ಪರಿಚಿತರಾಗುತ್ತಾರೆ. ವಿಜ್ಞಾನದ ಈ ಪರಿಧಿಯನ್ನು ದಾಟುವುದೇ ಇಲ್ಲಿನ ಪ್ರಬಂಧಗಳ ಆಶಯ. ಒಟ್ಟಿನಲ್ಲಿ ವಿಜ್ಞಾನವೂ ಸಾಮಾನ್ಯರ ಮಾತಿನ ವಿಷಯವಾಗಬೇಕು. ಅದರೊಳಗಿನ ಸತ್ಯವನ್ನು ಪವಾಡದಂತಹ ಗ್ರಹಿಕೆಯಿಂದ ದೂರ ತರಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ವಿಜ್ಞಾನವೂ ಮಾತಿನ ವಸ್ತ್ತುವಾಗಬೇಕು. ವಿಜ್ಞಾನಿಗಳೂ ಇತರರಂತೆ ಜೀವನ ನಡೆಸುವವವರು ಎಂಬ ಸಂಗತಿ ಎಲ್ಲರಿಗೂ ತಿಳಿಯಬೇಕು. ಆಗ ವಿಜ್ಞಾನದ ಅನುರಣನ ಸುಲಭವಾದೀತು.

        ವಸ್ತುನಿಷ್ಠತೆ ವಿಜ್ಞಾನದ ಪರಮ ಗುರಿ. ಅದರಾಚೆಗಿನ ಸಂಗತಿಗಳಲ್ಲಿ ಅದಕ್ಕೆ ಆಸಕ್ತಿಯಿಲ್ಲ. ಕಲೆಯಲ್ಲಿ ಕೇವಲ ರಸಾನುಭವವನ್ನು ಸವಿದು ಒಪ್ಪುವಂತೆ, ಸುಲಭವಾಗಿ ವಿಜ್ಞಾನವು ತನ್ನನ್ನು ತಾನೇ ಒಪ್ಪುವುದಿಲ್ಲ. ಹಾಗೆ ಒಪ್ಪುವ ಮುನ್ನ ಅನೇಕ ಪರೀಕ್ಷೆಗಳಿಗೆ ಒಡ್ಡಿಕೊಳ್ಳುತ್ತದೆ. ಪ್ರಯೋಗಗಳ ಉತ್ತರವಿಲ್ಲದೆ ಅದು ಸಾಬೀತಾಗುವುದಿಲ್ಲ. ಈ ಪ್ರಯೋಗಗಳ ಉತ್ತರಗಳನ್ನು ಆಳಕ್ಕಿಳಿಯದೆ ತಿಳಿಯಲು ಸಾಧ್ಯವಾಗುವುದಿಲ್ಲ. ಸಾಧ್ಯವಾಗಲು ಕಷ್ಟಪಡದೆ ಅನ್ಯ ಮಾರ್ಗವಿಲ್ಲ. ಸತ್ಯವನ್ನು ಬೆನ್ನು ಹತ್ತುವ ಕೆಲಸ ವಿಜ್ಞಾನದ ಆಶಯ. ಒಬ್ಬರ ಅನುಭವಕ್ಕೆ ಬಂದದ್ದು ಎಲ್ಲರ ಅನುಭವಕ್ಕೂ ಬರಬೇಕಾದ ಅನಿವಾರ್ಯವು ವಿಜ್ಞಾನದ ಪರಂಪರೆ. ಆದ್ದರಿಂದ ವಿಜ್ಞಾನದ ವಿಚಾರಗಳನ್ನು ಮಾತುಕತೆಯಾಗಿಸಲು  ಸ್ಪಷ್ಟ ಜ್ಞಾನವನ್ನು ಹೊಂದುವ ತಯಾರಿ ಬೇಕಾಗುತ್ತದೆ. ಅಸ್ಪಷ್ಟತೆಯು ಕೇವಲ ಅನಿಸಿಕೆಗಳನ್ನು ತಿಳಿವಳಿಕೆಯಾಗಿಸುತ್ತದೆ. ಆಗ ಗುರಿ ಅಗೋಚರ ಎನಿಸುತ್ತದೆ. 

       ದಿನವೂ ಅನೇಕ ವಿಜ್ಞಾನಗಳನ್ನು ಕುರಿತ ಸಂಗತಿಗಳನ್ನು ಸುದ್ದಿಯಗಿ ಓದುತ್ತೇವೆ. ಇದು ಹವಾಮಾನ ವೈಪರೀತ್ಯದ ಕುರಿತಾಗಿರಬಹುದು, ರಾಕೆಟ್ ಉಡಾವಣೆಯ ಬಗೆಗಾಗಿರಬಹುದು ಅಥವಾ ವೈದ್ಯಕೀಯ ಮಾಹಿತಿಯೂ ಆದೀತು. ಇವೆಲ್ಲವನ್ನೂ ನಮ್ಮ ದೈನಂದಿನ ಸಹಜ ಮಾತಿನ ಚರ್ಚೆಗಳಲ್ಲಿ ಬಳಸುತ್ತೇವೆ. ಹಾಗಂತ ಬಳಸುವವರು ವಿಜ್ಞಾನದ ವಿದ್ಯಾರ್ಥಿಗಳೇ ಆಗಿರಬೇಕಿಲ್ಲ. ಈ ಬಗೆಯ ವೈಜ್ಞಾನಿಕ ತಿಳಿವನ್ನು ಒಳಗೊಳ್ಳುವ ಅಧ್ಯಯನಗಳು ವಿಜ್ಞಾನದ ಮೂಲ ಅಧ್ಯಯನಕ್ಕಿಂತ ಭಿನ್ನವಾದವು. ಇವೆಲ್ಲವನ್ನೂ ವೈಜ್ಞಾನಿಕ ಸಾಕ್ಷರತೆಯ ಹಿನ್ನೆಲೆಯಲ್ಲಿ ನೋಡುತ್ತೇವೆ. ವೈಜ್ಞಾನಿಕ ಸಾಕ್ಷರತೆಯು ವಿಜ್ಞಾನದ ಇತಿಹಾಸಕ್ಕೆ ಹೋಲಿಸಿದರೆ ತುಂಬಾ ಹೊಸತು. ವಿಜ್ಞಾನಕ್ಕೆ ಶತಮಾನಗಳ ಚರಿತ್ರೆ ಇದ್ದರೆ, ವೈಜ್ಞಾನಿಕ ಸಾಕ್ಷರೆತೆಯು ಬಳಕೆಗೆ ಬಂದು ಕೇವಲ ದಶಕಗಳಾಗಿವೆ. ಪಾಲ್ ಹರ್ಡ್ ಎಂಬಾತ ೧೯೫೮ರಲ್ಲಿ ಮೊದಲ ಬಾರಿಗೆ ‘ವೈಜ್ಞಾನಿಕ ಸಾಕ್ಷರತೆ’ ಎಂಬ ಪದವನ್ನು ಬಳಸಿದರು. ಶಾಲಾ ಶಿಕ್ಷಣದಲ್ಲಿ ವಿಜ್ಞಾನದ ಜವಾಬ್ದಾರಿ ಮತ್ತು ಮಹತ್ವಗಳ ಅಧ್ಯಯನದ ಫಲಿತಗಳ ಕುರಿತ ಪ್ರಕಟಣೆಯಲ್ಲಿ ವೈಜ್ಞಾನಿಕ ಸಾಕ್ಷರತೆಯನ್ನು ಬಳಸಲಾಗಿತ್ತು. ನಂತರವೇ ಇದರ ಬಗೆಗೆ ಒಂದಷ್ಟು ಚರ್ಚೆಗಳಿಂದ ಪುನರ್ ವಿಮರ್ಶಿಸುವ, ಜತೆಗೆ ಅರ್ಥೈಸುವ ಕುರಿತು ಸಾಕಷ್ಟು ಕೆಲಸಗಳಾಗಿವೆ. ಹಾಗೆ ನೋಡಿದರೆ ನಮ್ಮೆಲ್ಲರ ತಿಳಿವಳಿಕೆಗೆ ವಿಜ್ಞಾನದ ಪರಿಚಯವಿದೆ. ಸಾಕ್ಷರತೆಯೂ ತಿಳಿದಿದೆ. ಸಾಮಾನ್ಯ ತಿಳಿವಳಿಕೆಯಲ್ಲಿ ಸಾಕ್ಷರತೆಯನ್ನು ಕೇವಲ ಓದು ಮತ್ತು ಬರಹದ ಬಗೆಗೆ ಇರುವ ಜ್ಞಾನವೆಂಬುದಾಗಿ ವಿವರಿಸುತ್ತೇವೆ. ವಿಜ್ಞಾನವು ಸತ್ಯದ ಅರಿವು. ಆದರೆ ವೈಜ್ಞಾನಿಕ ಸಾಕ್ಷರತೆ ತುಸು ಭಿನ್ನವಾದುದು. ಇತ್ತೀಚೆಗಿನ ಶಿಕ್ಷಣ ಹಾಗೂ ನಾಗರಿಕ ಜೀವನದಲ್ಲಿ ವೈಜ್ಞಾನಿಕ ಸಾಕ್ಷರತೆಯ ಪರಿಣಾಮವನ್ನು ತುಂಬಾ ಪ್ರಮುಖವಾಗಿ ಗುರುತಿಸುವ ಚರ್ಚೆಗಳಾಗುತ್ತಿವೆ. ವೈಜ್ಞಾನಿಕ ಸಾಕ್ಷರತೆಯು ವಿಜ್ಞಾನದ ಓದು ಮತ್ತು ಅದರ ಅನುರಣನದಿಂದ ಬರುವಂತಹದ್ದು. ಒಂದು ರೀತಿಯಲ್ಲಿ ವೈವಿಧ್ಯಮಯ ವಿಜ್ಞಾನಗಳ ಸಂಗತಿಗಳ ತಿಳಿವಳಿಕೆಯು ವೈಜ್ಞಾನಿಕ ಸಾಕ್ಷರತೆಯನ್ನು ರೂಪಿಸಬಲ್ಲದು.

       ವೈಜ್ಞಾನಿಕ ಸಾಕ್ಷರತೆಯು ವಿಜ್ಞಾನದ ಪರಿಕಲ್ಪನೆ ಮತ್ತು ಪ್ರಕ್ರಿಯೆಗಳನ್ನು ಅರಿತುಕೊಂಡು ಯಾವುದೇ ವ್ಯಕ್ತಿಯು ತನ್ನ ವೈಯಕ್ತಿಕ ನಿರ್ಧಾರಗಳನ್ನು ಮಾಡಲು ಬಳಸುವಂತಹ ಜ್ಞಾನ. ಸಹಜವಾಗಿ ಇದು ಅನೇಕ ನಾಗರಿಕ ಮತ್ತು ಸಾಂಸ್ಕೃತಿಕ ವ್ಯವಹಾರಗಳಲ್ಲಿ ಮತ್ತು ಆರ್ಥಿಕ ಉತ್ಪಾದನೆಗಳಲ್ಲಿಯೂ ಬಳಕೆಯಾಗುತ್ತದೆ. ಇದೊಂದು ಬಗೆಯಲ್ಲಿ ವಿಜ್ಞಾನದ ಸಾಮಾನ್ಯ ಜ್ಞಾನ. ಇದರಲ್ಲಿ ವಿಜ್ಞಾನದ ವಿದ್ವತ್ತಿನ ಅವಶ್ಯಕತೆಯೇನೂ ಇಲ್ಲ. ಇದರಲ್ಲಿ ನಮ್ಮ ತಿಳಿವಿನಿಂದ ವರ್ತಿಸುವ ಸಂಗತಿಗಳೂ ಸೇರಿರುತ್ತವೆ. ಒಂದರ್ಥದಲ್ಲಿ ನಮ್ಮ ದೈನಂದಿನ ಅನುಭವಗಳಲ್ಲಿ ಸಹಜವಾಗಿ ಪ್ರಶ್ನಿಸಿ ಪಡೆಯುವ, ಜೊತೆಗೆ ಕುತೂಹಲದಿಂದ ಅರಿತುಕೊಳ್ಳುವ ಉತ್ತರಗಳು ಸೇರಿರಬಹುದು. ಇವೆಲ್ಲ ಆಯಾ ವ್ಯಕ್ತಿಯ ವೈಯಕ್ತಿಕ ಆಸಕ್ತಿ ಹಾಗೂ ಸಾಮರ್ಥ್ಯವನ್ನು ಅವಲಂಬಿಸಿರುತ್ತವೆ. ಇವುಗಳನ್ನು ಸಹಜವಾಗಿ ನಮ್ಮ ಜನಪ್ರಿಯ ವಿಜ್ಞಾನದ ಓದಿನಿಂದಲೂ ಸಾರ್ವಜನಿಕ ಚರ್ಚೆಗಳಿಂದಲೂ ಗಳಿಸಬಹುದು. ಸಾಮಾನ್ಯ ಸಾಕ್ಷರತೆಯ ವಿವರಣೆಯಂತೆ ಕೇವಲ ಓದು-ಬರಹ ಬಲ್ಲವರು ಎಂದುಕೊಳ್ಳುವ ಹಾಗೆ, ವಿಜ್ಞಾನದ ಓದಿನಿಂದ ಅರಿತಿದನ್ನು ಸಾರ್ವಜನಿಕ ತಿಳಿವಳಿಕೆಯಾಗಿಸುವ ಸಾಧ್ಯತೆ ಎನ್ನಬಹುದು. ಇದು ಸಾಧ್ಯವಾಗಬೇಕಾದರೆ “ವಿಜ್ಞಾನದ ಓದು” ಎನ್ನುವುದನ್ನು ಸರಿಯಾಗಿ ಗ್ರಹಿಸಬೇಕಿದೆ. ಒಂದೇ ಓದಿಗೆ ದಕ್ಕದ ಅನೇಕ ಸಂದರ್ಭಗಳು ವಿಜ್ಞಾನದಲ್ಲಿ ಇರಬಹುದು. ಮತ್ತೆ ಮತ್ತೆ ಓದುವ, ಅನುರಣಿಸುವ, ಮಾತುಕತೆಗೆ ಒಗ್ಗಿಸುವ ಬಗೆಯನ್ನು ವಿಜ್ಞಾನದ ಓದಿನಲ್ಲಿ ಸೇರಿಸಿಕೊಳ್ಳಬೇಕಿದೆ.

       ಹಾಗಾದರೆ ವಿಜ್ಞಾನದ್ದೇ ಆದ ಓದು ಎನ್ನುವುದು ಇದೆಯೇ? ಅದು ಇತರೆ ಓದಿಗಿಂತ ಭಿನ್ನವೇ? ಸಾಮಾನ್ಯ ಓದಿಗೂ ವಿಜ್ಞಾನದ ಓದಿಗೂ ನಡುವಣ ಸಂಬಂಧಗಳೇನು? ಇವೆಲ್ಲ ಪ್ರಶ್ನೆಗಳು ಉದ್ಭವಿಸಬಹುದು.  ವಿಜ್ಞಾನದ ತಿಳಿವಳಿಕೆ, ಬಳಕೆ ಮತ್ತು ಅದರ ಸುತ್ತ ಆಗುಹೋಗುಗಳ ಸಾಮಾನ್ಯ ಸಂಗತಿಗಳು ಮಾಮೂಲಿಗಿಂತ ಭಿನ್ನ ಹಾಗೂ ಅದಕ್ಕಾಗಿಯೇ ಅದರ ಓದಿಗೂ ಒಂದಷ್ಟು ತಯಾರಿ ಬೇಕು. ಮಾಮೂಲಿಯಂತೆ ವಿಜ್ಞಾನವನ್ನು ಸಾಧಾರಣವಾಗಿ ಯಾವುದಾದರೂ ಒಂದು ಸಮಸ್ಯೆಯ ಪರಿಹಾರಕ್ಕೆ ಮಾತ್ರವೇ ಬಯಸದೆ ಅದರ ಒಳಗಿನ ಸೌಂದರ್ಯವನ್ನೂ ಅರಿಯಬೇಕಿದೆ. ವಿಜ್ಞಾನದ ಓದು ಕೂಡ ಶಾಲಾಕಾಲೇಜುಗಳ ಪಠ್ಯದ ವಿಷಯವಾಗಿ ಸಾಕಷ್ಟು ಜನಪ್ರಿಯವಾಗಿದೆ. ಹಾಗಾಗಿ ವಿಜ್ಞಾನವನ್ನು ಜನಪ್ರಿಯಗೊಳಿಸುವುದು ಬೇಕಿಲ್ಲ. ಆದರೆ ಅದರ ಸಾರ್ವಜನಿಕ ತಿಳಿವಳಿಕೆಯನ್ನು ಹೆಚ್ಚಿಸಲು ಅನುವು ಮಾಡಬೇಕಿದೆ. ಅಂತಹ ವಿಜ್ಞಾನದ ಓದು ಸೃಷ್ಟಿಯಾಗಬೇಕಿದೆ.

       ವಿಜ್ಞಾನವು ಒಂದು ಸಂಚಿತವಾದ ಜ್ಞಾನ. ಒಂದು ರೀತಿಯಲ್ಲಿ ನಾವೆಲ್ಲರೂ ನ್ಯೂಟನ್, ಐನ್‌ಸ್ಟೈನ್ ಮುಂತಾದ ಮೇಧಾವಿಗಳಂತಹವರ ಜ್ಞಾನದ ಮೇಲೆ ಕುಳಿತಿದ್ದೇವೆ. ನಮ್ಮ ತಿಳಿವಳಿಕೆಯು ಸಹಜವಾಗಿ ಹಿಂದಿನ ತಿಳಿವಳಿಕೆಯನ್ನು ಬಳಸಿಕೊಂಡಿರುತ್ತದೆ. ಅದರ ಜತೆಗೆ ಅನೇಕ ವೈಜ್ಞಾನಿಕ ಸಂಗತಿಗಳನ್ನು ಸಮೀಕರಿಸಿ ಒಂದಷ್ಟು ಸಾಂದರ್ಭಿಕ ತೀರ್ಮಾನಗಳನ್ನು ಮಾಡುವ ತಿಳಿವಳಿಕೆಯಾಗಿಯೂ ವರ್ತಿಸುತ್ತದೆ. ವೈಜ್ಞಾನಿಕ ಸಾಕ್ಷರತೆಯು ಈ ತಿಳಿವಳಿಕೆಯನ್ನು ಹೆಚ್ಚಿಸಲು ಸಹಾಯವಾಗುತ್ತದೆ.  

       ಸಾಮಾನ್ಯವಾಗಿ ವಿಜ್ಞಾನವನ್ನು ಶಿಕ್ಷಣದಲ್ಲಿ ಒಂದು ಭಾಗವಾಗಿ/ಶಿಸ್ತಾಗಿ ಅಳವಡಿಸುವುದರ ಮೂಲಕ ಕಲಿಸಲಾಗುತ್ತದೆ. ಅದಕ್ಕೆ ಬದಲಾಗಿ ಇಡೀ ಶಿಕ್ಷಣವನ್ನೇ ವಿಜ್ಞಾನದ ಹಿನ್ನೆಲೆಯಲ್ಲಿ ಕಲಿಸಬೇಕು. ಆಗ ವೈಜ್ಞಾನಿಕ ಸಾಕ್ಷರತೆಯ ಗುರಿ ಸಾಧ್ಯವಾಗುತ್ತದೆ. ಜೊತೆಗೆ, ವಿಜ್ಞಾನದ ತಿಳಿವಳಿಕೆಯು ಸಾಮಾನ್ಯ ಚರ್ಚೆಗಳಿಗೆ ದಕ್ಕಿ ವೈಜಾನಿಕ ಸಾಕ್ಷರತೆಯು ಹೆಚ್ಚುತ್ತದೆ. ಜತೆಯಲ್ಲಿ ವಿಜ್ಞಾನದ ವೈವಿಧ್ಯಮಯ ಪದ್ಧತಿಗಳ ಸಂಬಂಧಗಳ ಅರಿವೂ ಹೆಚ್ಚಾಗುತ್ತಾ ಓದಿನ ಪರಿಶ್ರಮ ಸಾರ್ಥಕವಾಗುತ್ತದೆ. ಅದಕ್ಕೆಲ್ಲ ವಿಜ್ಞಾನದ ವೈವಿಧ್ಯತೆಯ ಸಂಗತಿಗಳ ಓದು, ಮರುಓದು, ಮತ್ತೊಂದು ಓದು ಬೇಕಾಗುತ್ತದೆ. ಇದರಿಂದ ಸಂಗೀತದಂತೆ ಅನುರಣಿಸಲು ವಿಜ್ಞಾನದ ಅನುರಣನದ ಲಯ ದಕ್ಕುತ್ತದೆ. ಬಹುಮುಖ್ಯವಾಗಿ ವೈಜ್ಞಾನಿಕ ಸಾಕ್ಷರತೆಯು ವೈವಿಧ್ಯಮಯವಾದ ಜ್ಞಾನಗಳ ಸಂಚಯವನ್ನು ಬಯಸುತ್ತದೆ. ಅದು ವಿವಿಧ ವಿಜ್ಞಾನ ಸಂಗತಿಗಳನ್ನು ಓದಿನ ಮೂಲಕ, ಮರುಓದಿನ ಮೂಲಕ ಅನುರಣಿಸುವ, ಮಾತಿಗೆ ಒಗ್ಗಿಸುವ ಪ್ರಯೋಗಗಳಲ್ಲಿ ಯಶಸ್ಸನ್ನು ಕಾಣುತ್ತದೆ.

ಕೊನೆಯ ಮಾತು. ವಿಜ್ಞಾನದ ಓದು ಒಣಸಂಗತಿಗಳ ಓದು ಎಂಬುದು ಹಲವಾರು ಓದುಗರ ಅಭಿಪ್ರಾಯ. ವಿಜ್ಞಾನದ ಓದಿನಲ್ಲಿ ಜೀವವಿಲ್ಲ ಎಂಬಂತೆ ಅದನ್ನು ಅಲೌಕಿಕ ಎಂದು ದೂಷಿಸುತ್ತಾರೆ. ಹಾಗಾಗಿ ಅನೇಕರು ಆರಂಭದಿಂದಲೂ ವಿಜ್ಞಾನದ ಓದನ್ನು ಎಚ್ಚರಿಕೆಯಿಂದ ಕಂಡಿದ್ದಾರೆ. ಏಕೆಂದರೆ ಎಲ್ಲವನ್ನೂ ಆಳಕ್ಕಿಳಿದು ಅರ್ಥೈಸಿ, ಸತ್ಯವನ್ನು ಅರಿಯುವ ಪ್ರಯತ್ನವನ್ನು ವಿಜ್ಞಾನ ಮಾಡುತ್ತದೆ. ಹಾಗೆ ತಿಳಿದರೆ ವಸ್ತುವಿನ ಸೌಂದರ್ಯ ಹಾಳಾಗುತ್ತದೆ ಎಂಬುದು ಸಾಮಾನ್ಯ ತಿಳಿವಳಿಕೆ. ಅಂತಹ ಮಾತಿಗೆ ಉತ್ತರವೆಂಬಂತೆ ವಿಜ್ಞಾನ ಸಂವಹನದ ಮಾಂತ್ರಿಕ, ಅಪ್ರತಿಮ ವಿಜ್ಞಾನಿ, ಭೌತವಿಜ್ಞಾನದಲ್ಲಿ ನೊಬೆಲ್ ಪಡೆದ ರಿಚರ್ಡ್ ಫೈನ್‌ಮನ್ ಅವರ ಈ ಮುಂದಿನ ಸಾಲುಗಳು ನೆನಪಾಗುತ್ತಿವೆ.

“Poets say science takes away from the beauty of the stars – mere globs of gas atoms. I, too, can see the stars on a desert night, and feel them. But do I see less or more?”

       ವಿಜ್ಞಾನ ತೋರುವ ಸೌಂದರ್ಯದ ಸೊಗಸನ್ನು ಅರಿಯಲು ಒಂದಷ್ಟು ತಯಾರಿ ಬೇಕೇ ಬೇಕು, ಅದು ಮತ್ತೆ ಮತ್ತೆ ಓದುವುದರಿಂದ ಬರುತ್ತದೆಯೆ ವಿನಾಃ, ವಿಜ್ಞಾನದ ಓದನ್ನು ಇತರೇ ಮಾನದಂಡಗಳಲ್ಲಿ ವಿಮರ್ಶಿಸುವುದರಿಂದ ಅಲ್ಲ. 

ನಮಸ್ಕಾರ

ಡಾ. ಟಿ.ಎಸ್. ಚನ್ನೇಶ್

This Post Has One Comment

  1. Ranga Rao R H

    Wonderful messages sir. Great information about Man and Nature and Literature.

Leave a Reply