” I have always imagined that Paradise will be some kind of Library”- Jorge Luis Borges
ಅರ್ಜೆಂಟೀನಾ ಖ್ಯಾತ ಬರಹಗಾರ, ಜಾಜ್ ಲೂಯಿಸ್ ಬೊಗೆಸ್ (Jorge Luis Borges) ಲೈಬ್ರರಿಯನ್ನೇ ಸ್ವರ್ಗವಾಗಿ ಕಂಡವರು. ಓದಿನ ಮಹತ್ವವನ್ನು ಬರಹಗಾರರು, ಸಂಶೋಧಕರು, ಅರಿವಿನ ಹುಡುಕಾಟದವರು ಕಂಡಷ್ಟು ಬೇರೊಬ್ಬರು ಕಾಣುವುದು ಅಪರೂಪ. ಓದುವುದು ಎಂದರೇನು? ಅದೊಂದು ಬರಹದ ಅಥವಾ ಮುದ್ರಿತ ಲೇಖನವನ್ನು (The action or skill of going through written or printed article Silently or Aloud) ಗಟ್ಟಿಯಾಗಿ (ಧ್ವನಿಹೊರಡಿಸಿ) ಅಥವಾ ಮನಸ್ಸಿನೊಳಗೇ ಅನುಸರಿಸುವ ಮಾರ್ಗ, ಎನ್ನುವುದು ಸಾಮಾನ್ಯವಾದ ವಿವರಣೆ. ನಿಜವಾದ ಅರ್ಥದಲ್ಲಿ ಓದು ನಡೆದಿದೆ ಅಂದರೆ ಅದರಿಂದ ಹೊಮ್ಮುವ ಅರ್ಥವನ್ನು ಗ್ರಹಿಸಿದೆ ಎಂದರ್ಥ(Reading is the construction of meaning).
ಓದಿನ ಗ್ರಹಿಕೆ ಎಂದರೆ ಪಠ್ಯವನ್ನು ಓದುವ, ಪ್ರಕ್ರಿಯೆಗೊಳಿಸುವ ಮತ್ತು ಅದರ ಅರ್ಥವನ್ನು.ತಿಳಿದುಕೊಳ್ಳುವ ಸಾಮರ್ಥ್ಯ. ಇದು ಎರಡು ಅಂತರ್ ಸಂಪರ್ಕಿತ (Interconnected) ಸಾಮರ್ಥ್ಯಗಳ ಮೇಲೆ ಅವಲಂಬಿತವಾಗಿದೆ: ಅವುಗಳೆಂದರೆ, ಪದಗಳ ಓದುವಿಕೆ (ಪುಟದಲ್ಲಿನ ಚಿಹ್ನೆಗಳನ್ನು ಡಿಕೋಡ್ ಮಾಡಲು ಸಾಧ್ಯವಾಗುತ್ತದೆ) ಮತ್ತು ಭಾಷಾ ಗ್ರಹಿಕೆ (ಪದಗಳು ಮತ್ತು ವಾಕ್ಯಗಳ ಅರ್ಥವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ).
ನನ್ನ ಓದಿನ ನೆನಪುಗಳು ಸ್ಪಷ್ಟವಾಗಿರುವುದು ಐದನೆಯ ತರಗತಿಯಲ್ಲಿದ್ದ ಸಮಯದಿಂದ, ಆಗ ನನ್ನ ತಾಯಿ ನನ್ನೂರಿನ ಹೆಣ್ಣು ಮಕ್ಕಳ ಶಾಲೆಯಲ್ಲಿ ಶಿಕ್ಷಕಿ, ಜೊತೆಗೆ ಶಾಲೆಯ ಲೈಬ್ರರಿಯನ್ನು ಅವರೇ ನಿರ್ವಹಿಸುತ್ತಿದ್ದರು. ಆಕೆಯ ಶಾಲೆಯ ಟೈಮ್ ಭಿನ್ನವಾಗಿತ್ತು. ಕಟ್ಟಡದ ಕೊರತೆಯ ಕಾರಣದಿಂದ ಇನ್ನೊಂದು ಶಾಲೆಯು ಅಲ್ಲಿಯೇ ನಡೆಬೇಕಾದ್ದರಿಂದ, ಇಂತಹಾ ಹೊಂದಾಣಿಕೆ! ಪ್ರತೀ ಶನಿವಾರ ನಮಗೆ ಬೆಳಗಿನ ಶಾಲೆಯಾದರೆ, ಆಕೆಗೆ ಮಧ್ಯಾಹ್ನದಿಂದ ಸಂಜೆಯವರೆಗೂ. ನಮಗೆ ಬಿಡುವಿದ್ದ ಸಮಯದಲ್ಲಿ ಅವರ ಶಾಲೆ! ಹಾಗಾಗಿ ಪ್ರತೀ ಶನಿವಾರವೂ ಮಧ್ಯಾಹ್ನದಲ್ಲಿ ಆಕೆಯ ಶಾಲೆಗೆ ಹೋಗಿ ಅವರು ನಿರ್ವಹಿಸುತ್ತಿದ್ದ ಲೈಬ್ರರಿಯಲ್ಲಿ ಇಡೀ ದಿನ ಸಂಜೆಯ ತನಕ ಕಳೆಯಬಹುದಿತ್ತು. ಜೊತೆಗೆ ಪುಸ್ತಕಗಳನ್ನೂ ಎರವಲು ಪಡೆದು ತರಬಹುದಿತ್ತು. ಆ ಎಳೆಯ ವಯಸ್ಸಿನಲ್ಲೇ ಕರ್ನಾಟಕ ಸಹಕಾರಿ ಪ್ರಕಾಶನ ಮಂದಿರ ಪ್ರಕಟಿಸಿದ್ದ ಕಿರಿಯರ ವಿಶ್ವಕೋಶ (Encyclopedia) ಜ್ಞಾನ ಗಂಗೋತ್ರಿ ಪರಿಚಯವಾಗಿತ್ತು. ಕೈ ತುಂಬಾ ಭಾರವಾಗಿ ಹಿಡಿಯಲು ಕಷ್ಟ ಪಡುತ್ತಿದ್ದುರೂ, ಜೊತೆಗೆ ಅದನ್ನು ಓದಿದರೆ ಎಲ್ಲವೂ ತಿಳಿಯುವ ಬಗೆಗೂ ಅಮ್ಮ ಹೇಳಿದ್ದನ್ನು ಕೇಳಿ ಓದಿನ ಉತ್ಸಹಕ್ಕೆ ಬೆಂಬಲ ಸಿಕ್ಕಿತ್ತು.
ಹತ್ತನೆಯ ತರಗತಿಯವರೆಗೂ ಸುಮಾರು ಐದು ವರ್ಷಗಳ ಕಾಲ, ವಿಶ್ವಕೋಶದ ಕೆಲವು ಪುಟಗಳನ್ನೂ ಅಲ್ಲದೇ ನೂರಾರು ಪುಸ್ತಕಗಳನ್ನು ಓದುವ ಅವಕಾಶ ಸಿಕ್ಕಿತ್ತು! ಮೊಟ್ಟ ಮೊದಲು ಓದಿನ ಗೀಳನ್ನು ಹಚ್ಚಿದ್ದು ನನ್ನ ಅಮ್ಮ. ಮನುಕುಲದ ಕಥೆ, ಜೀವ ಜಗತ್ತು, ಭೌತ ಜಗತ್ತು, ಯಂತ್ರ ಜಗತ್ತು, ಕ್ರೀಡೆ ಮತ್ತು ಮನೋಲ್ಲಾಸ ಮುಂತಾಗಿ 6-8 ಸಂಪುಟಗಳು ಇದ್ದದ್ದು ಅವುಗಳೊಳಗೆ ಕಣ್ಣಾಡಿಸಿದ್ದು, ನೆನಪಲ್ಲಿದೆ. ಐ.ಬಿ.ಎಚ್. ಪ್ರಕಾಶನದ ಕನ್ನಡ ನಾಡು ಮತ್ತು ಪರಂಪರೆ ಶ್ರೇಣಿಯ ನೂರಾರು ಪುಸ್ತಕಳು, ರಾಷ್ಟ್ರೋತ್ಥಾನದ ಭಾರತ-ಭಾರತಿ ಪುಸ್ತಕದ 500 ಪುಟ್ಟ ಪುಸ್ತಕಗಳೂ ಓದಿನ ಹವ್ಯಾಸವನ್ನು ಬೆಳೆಸಿದ್ದವು. ಟಿ.ಕೆ. ರಾಮರಾವ್ ಅವರ “ಗೋಳದ ಮೇಲೊಂದು ಸುತ್ತು”, ಹೊ. ಶ್ರೀನಿವಾಸಯ್ಯ ನವರ “ನಾ ಕಂಡ ಜರ್ಮನಿ” ಕಾರಂತರ ಬಾಲ ಪ್ರಪಂಚ, ಅಮರ ಚಿತ್ರಕಥೆಗಳ ಕಾರ್ಟೂನು ಪುಸ್ತಕಗಳು, ಎಚ್. ತಿಪ್ಪೇರುದ್ರಸ್ವಾಮಿಯವರ “ಕರ್ನಾಟಕ ಸಂಸ್ಕೃತಿ ಸಮೀಕ್ಷೆ” ಹೀಗೆ ನೂರಾರು ಪುಸ್ತಕಗಳ ಓದುವ ಅವಕಾಶ ಸಿಕ್ಕಿತ್ತು.
ಪದವಿ ತರಗತಿಗೆ ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿದ ಕೂಡಲೆ ಆಕರ್ಷಕವಾಗಿ ಕಂಡದ್ದೇ ಜಿಕೆವಿಕೆಯ ಕೃಷಿ ವಿಶ್ವವಿದ್ಯಾಲಯದ ಲೈಬ್ರರಿ. ಲೂಯಿ ಪಾಶ್ಚರ್‌ನ ಜೀವನ ಚಿತ್ರ, ಫೈನ್ ಮನ್ ಅವರ ಲೆಕ್ಚರ್ ಸೀರೀಸ್, ರಾಬರ್ಟ್ ಕಾನಿಗಲ್ “ದಿ ಮ್ಯಾನ್ ಹೂ ನ್ಯೂ ಇನ್‌ಫಿನಿಟಿ” ಸಾಲದಕ್ಕೆ ನೊಬೆಲ್ ಲೆಕ್ಚರ್ ಸೀರಿಸ್, ಶೇಕ್ಸ್‌ಪಿಯರ್‌ನ ಸಾನೆಟ್ಟುಗಳು, ವಿಲಿಯಂ ಬ್ಲೇಕ್ ಕವಿತೆಗೆಳು, ಡಾಂಟೆಯ ಡಿವೈನ್ ಕಾಮಿಡಿ, ಮಿಲ್ಟನ್‌ನ ಪ್ಯಾರಡೈಸ್ ಲಾಸ್ಟ್, ಇವೆಲ್ಲಾ ಪರಿಚಯವಾದವು. ಶೇಕ್ಸ್ ಪಿಯರ್‌ನ ಸಾನೆಟ್ 116 (Let me not to the marriage of true minds), ವಿಲಿಯಂ ಬ್ಲೇಕ್‌ನ The Garden of Love ಕವಿತೆಗಳು ಹೆಚ್ಚೂ ಕಡಿಮೆ ಬಾಯಿಪಾಠವಾಗಿದ್ದವು.
ಜಿಕೆವಿಕೆ ಲೈಬ್ರರಿಯು ಮಣ್ಣು/ಕೃಷಿ ವಿಜ್ಞಾನದ ಓದಿನ ಮೂಲಕ ಅನೇಕ ವಿಜ್ಞಾನದ ಲೇಖಕರನ್ನು ಪರಿಚಯಿಸಿತ್ತು. ಅಲನ್ ಮತ್ತು ಅರ್ಥರ್ ಸ್ಟ್ರೆಹ್ಲರ್ ಅವರ ಫಿಸಿಕಲ್ ಜಿಯಾಗ್ರಫಿ, ಬ್ರಾಡ್‌ಶಹಾ ಮತ್ತು ಚೆಡ್‌ವಿಕ್ ರ “ದ ರೆಸ್ಟೊರೇಶನ್ ಆಫ್ ಲ್ಯಾಂಡ್”, ರಾಚೆಲ್ ಕಾರಸನ್ ಅವರ ಸೈಲೆಂಟ್ ಸ್ಪ್ರಿಂಗ್, ಮತ್ತು ಇಕಾಲಜಿ ಆಫ್ ಪಾಲಿಟಿಕ್ಸ್ ನ ಆಂಡ್ರ್ಯೂ ಗೂರ್ಜ್, ಲಿಮಿಟ್ಸ್ ಟು ಮೆಡಿಸನ್ ನ ಇವಾನ್ ಇಲಿಚ್, ಹೀಗೆ ಪಟ್ಟಿ ಮಾಡುತ್ತಾ ಹೋದರೆ ನೂರಾರು ಪುಸ್ತಕಗಳ ಸಾಲು ಸಾಲು ಬರೆಯಬೇಕಾದೀತು. ಜಿಕೆವಿಕೆಯ ಓದಿನ ದಿನಗಳಲ್ಲಿ ಓದಿನ ಗ್ರಹಿಕೆಯ ಮನವರಿಕೆಯಾಗಿತ್ತು. ನನ್ನ ಹಿರಿಯ ಗೆಳೆಯರೊಬ್ಬರಾದ ಶ್ರೀ ರಾಜಗೋಪಾಲ್ ಎಂಬುವರು ವಿಶಿಷ್ಟವಾದ ಓದಿನ ವ್ಯಕ್ತಿ. ಒಂದು ಪುಸ್ತಕವನ್ನು ಓದಲು ತೆರೆದರೆ ಪೂರ್ಣ ಆದ ಮೇಲೆಯೇ ಅದನ್ನು ಮುಚ್ಚುತ್ತಿದ್ದರು. ಅಂದರೆ ಹತ್ತು ಪುಟ ಓದಿದರೆ, ಅಲ್ಲಿ ಪುಸ್ತಕವನ್ನು ಹಾಗೇ ಮಡಿಸಿಟ್ಟು ಕಂಕುಳಲ್ಲಿ ಇರಿಸಿಕೊಂಡು ಓಡಾಡುತ್ತಿದ್ದರು. ಅವರು ಓದಿದರೆ ಪುಸ್ತಕ ಸ್ವಲ್ಪವಾದರೂ ಹಾಳಾಗಿರುತ್ತಿತ್ತು. ಅಂದರೆ ಅವರು ಮಡಿಸಿಟ್ಟುಕೊಂಡು ಬಗಲಲ್ಲಿ ಇಟ್ಟು ಓಡಾಡುತ್ತಿದ್ದುದೇ ಕಾರಣ! ಹಾಗಾಗಿ ರಾಜಗೋಪಾಲ್ ಪುಸ್ತಕವನ್ನು ತಿನ್ನುತ್ತಾರೆ ಎಂದೇ ನಾವು ತಮಾಷೆ ಮಾಡಿಕೊಳ್ಳುತ್ತಿದ್ದೆವು. ಅವರು ಓದಿದ ಪುಸ್ತಕವನ್ನುಅದರ ಬೈಂಡಿಂಗ್ ನೋಡಿ ಹೇಳಬಹುದಿತ್ತು. ಅಷ್ಟು ಅಚ್ಚುಕಟ್ಟಾಗಿ ಪುಟದಿಂದ ಪುಟದ ಕೊನೆಯವರೆಗೂ ಓದಿ, ಓದಿದ್ದನ್ನು ಆವೇಶದಿಂದ ಮಾತಾಡಬಲ್ಲ ಶಕ್ತಿಯೂ ರಾಜಗೋಪಾಲ್ ಅವರಿಗೆ ಇತ್ತು. ತಮ್ಮ ಓದಿನ ಹವ್ಯಾಸವನ್ನು ತಮ್ಮದೇ ತರ್ಕಕ್ಕೆ ಒಪ್ಪಿಸಿ ಮಾತಾಡುತ್ತಿದ್ದ ಅವರ ಮಾತುಗಳಿಗೆ ತಲೆದೂಗುತ್ತಿದ್ದೆವು. ಕಾಲೇಜಿನ ಸಿಲಬಸ್ ನ ಪಾಠಗಳಿಗಿಂತಾ ಈ ಓದಿನಿಂದಲೇ ಅವರಿಗೆ ಬ್ಯಾಂಕ್ ಉದ್ಯೋಗ ದೊರತದ್ದು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಇರುವ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ(KSCST)ಯಲ್ಲಿ ವಿಜ್ಞಾನಿಯಾಗಿದ್ದಾಗ ಅಲ್ಲಿನ ಲೈಬ್ರರಿಯನ್ನು ನಿರ್ವಹಿಸುವ ಜವಾಬ್ದಾರಿ ನನಗೆ ಬಂದಿತ್ತು. ಸರಿ ಸುಮಾರು ಎರಡು ವರ್ಷಗಳ ಕಾಲಕ್ಕಿಂತಲೂ ಹೆಚ್ಚು ಸಮಯ ಲೈಬ್ರರಿಯ ಒಳಗೇ ಕುಳಿತೇ, ನನ್ನ ವೈಜ್ಞಾನಿಕ ಸಂಶೋಧನೆ ಹಾಗೂ ಪುಸ್ತಕಗಳ ಓದನ್ನು ನಡೆಸಿದ್ದ ನೆನಪುಗಳು ಸಾಕಷ್ಟು ಇವೆ. ಆಗ ಪರಿಚಯಗೊಂಡ ನೂರಾರು ವಿಜ್ಞಾನ ಲೇಖಕರ ಪುಸ್ತಕಗಳು ಓದಿನ ಆನಂದವನ್ನು ಹೆಚ್ಚಿಸಿದ್ದವು. ಜಾನ್ ಗ್ರಿಬಿನ್ ಮತ್ತು ಮೇರಿ ಗ್ರಿಬಿನ್, ಎಂಟ್ರೊಪಿಯ ಜಿರೆಮಿ ರೆಫ್ಕಿನ್ (Jeremy Rifkin), ಆಲ್ವಿನ್ ಟಾಫ್ಲರ್, ವಿಗ್ನೆಟ್ಸ್ ಇನ್ ಫಿಸಿಕ್ಸ್ (Vignettes in Physics) ಶ್ರೇಣಿಯ ವೆಂಕಟರಾಮನ್, ಮುಂತಾದವರು ಐಐಎಸ್‌ಸಿಯ ಸಮಯದಲ್ಲಿ ಪರಿಚಯಗೊಂಡವರು.
ಈಗಲೂ ನನ್ನ ಸಂಪರ್ಕದಲ್ಲಿರುವ ನನಗಿಂತಲೂ ಚಿಕ್ಕವರಾದ ಗೆಳೆಯ ಭಾನು ಸಿಂಹ, ತಮ್ಮ ಅಪಾರ ಓದಿನ ಹವ್ಯಾಸವನ್ನು ಹೇಳುವುದೇ ಭಿನ್ನವಾಗಿದೆ. ತಮ್ಮ ಓದಿನ ಇಚ್ಛೆಯು ಪಿ ಟು ಪಿ (From P to P) ಎಂದೇ ಹೇಳುತ್ತಾರೆ. ಅಂದರೆ ಅಶ್ಲೀಲ ಸಾಹಿತ್ಯದಿಂದ (Porno to Philosophy) ದರ್ಶನಶಾಸ್ತ್ರದವರೆಗೂ ಎಂದವರು ತಮ್ಮ ಅಪಾರ ಓದಿನ ಹವ್ಯಾಸವನ್ನೇ ತಮಾಷೆ ಮಾಡಿಕೊಂಡು ಹೇಳುತ್ತಾರೆ. ಈ ಇಬ್ಬರೂ ನಾನು ಕಂಡಂತಹಾ ಮಹಾನ್ ಓದುಗರು. ನಾನು ಕಾಣದ ಇನ್ನೂ ಇಬ್ಬರು ವಿಖ್ಯಾತ ಒದುಗರಿದ್ದಾರೆ. ಅಪಾರ ಜನಪ್ರಿಯತೆಯ ಅವರನ್ನು ಪರಿಚಯಿಸಬೇಕಿಲ್ಲ. ಆದರೆ ಅವರ ಓದಿನ ಬಗ್ಗೆ ಹೇಳದಿದ್ದರೆ ಓದಿನ ಆನಂದಕ್ಕೊಂದು ಪರಿಪೂರ್ಣತೆ ಇರುವುದಿಲ್ಲ.
ಚೀನಾದ ಕ್ರಾಂತಿಕಾರಿ ರಾಜಕೀಯ ಮುಖಂಡ ಮಾವೋ ತ್ಸೆ ತುಂಗ್ (Mao Zedong) ಅಪಾರ ಓದಿನ ಹುಚ್ಚಿದ್ದ ವ್ಯಕ್ತಿ. ಆತ ತನ್ನ ಅಧಿಕಾರದ ಅವಧಿಯಲ್ಲಿ “ನೀವು ಹೆಚ್ಚು ಪುಸ್ತಕಗಳನ್ನು ಓದಿದಷ್ಟು, ನೀವು ಹೆಚ್ಚು ಮೂರ್ಖರಾಗುತ್ತೀರಿ (The more books you read, the more stupid you become) ಎಂಬ ಆಜ್ಞೆಯನ್ನೇ ಹೊರಡಿಸಿ ಜನರ ಓದನ್ನು ಕಡಿಮೆ ಮಾಡಿ ಸಹಸ್ರಾರು ಪುಸ್ತಕಗಳನ್ನು ಬೆಂಕಿಗೆ ಹಾಕಲು ಹೇಳಿದ್ದ. ಆದರೆ ಸ್ವತಃ ಅತ್ಯಂತ ದೊಡ್ಡ ಓದುಗ. ತನಗಾಗಿ ಮಾಡಿಸಿಕೊಂಡ ಹಾಸಿಗೆಯಲ್ಲಿ ಹತ್ತಾರು ಪುಸ್ತಕಗಳನ್ನು ಹರಡಿಕೊಂಡು ಅವುಗಳ ಮಧ್ಯದಲ್ಲೆ ಮಲಗಲು ಬಯಸುತ್ತಿದ್ದ ವಿಶಿಷ್ಟ ಓದುಗ.
ಆಚಾರ್ಯ ರಜನೀಶ್ (ಓಶೋ) ತನ್ನ ಮನೆಯಲ್ಲಿ ಸುಮಾರು 150,000 ಪುಸ್ತಕಗಳನ್ನು ಸಂಗ್ರಹಿಸಿದ್ದಲ್ಲದೆ ಎಲ್ಲವನ್ನೂ ಓದಿದ್ದ ವ್ಯಕ್ತಿ. ಅವರ ಅಪಾರ ಓದಿನ ಹವ್ಯಾಸ ವನ್ನು Books I Have Loved ಎಂಬ 15 ನಿಮಿಷದ ವಿಡಿಯೋವನ್ನು https://www.youtube.com/watch?v=j1h8-WvzexY ಲಿಂಕ್ ನಲ್ಲಿ ನೋಡಬಹುದು. ಓಶೋ ತನ್ನ ಲೈಬ್ರರಿಯನ್ನು 16 ಡಿಗ್ರಿ ಸೆಂಟಿಗ್ರೇಡ್ ನಲ್ಲಿ ಇರಿಸಿ ಪುಸ್ತಕಗಳು ಹಾಳಾಗದಂತೆ ಕಾಪಾಡಿಕೊಂಡಿದ್ದರು.
ಓದಿಗೆ ಹಲವಾರು ಲಾಭಗಳಿವೆ. ಮೊದಲನೆಯದಾಗಿ, ಓದಿಗೆ ಯಾವುದೇ ರೀತಿಯ ವಯಸ್ಸಿನ ಪರಿಣಾಮ ಅಡ್ಡ ಬರುವುದಿಲ್ಲ. ನಾವು ಎಷ್ಟೇ ಯುವಕರಾಗಬಹುದು ಅಥವಾ ವಯಸ್ಸಾದವರಾಗಬಹುದು, ಆದರೆ ಓದುವಿಕೆಯನ್ನು ಯಾವಾಗಲೂ ಮುಂದುವರಿಸಬಹುದು. ನಾವು ವಯಸ್ಸಾದಂತೆ ನೃತ್ಯ, ಹಾಡುಗಾರಿಕೆ, ನುಡಿಸುವಿಕೆಯಂತಹ ಇತರ ಚಟುವಟಿಕೆಗಳನ್ನು ಮೊದಲಿನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲಾಗುವುದಿಲ್ಲ. ಆದರೆ, ಓದುವುದು ಯಾವಾಗಲೂ ಹೆಚ್ಚುತ್ತಲೇ ಮುಂದುವರೆಯುತ್ತದೆ. ಓದುವಿಕೆಯ ದಕ್ಷತೆಯು ವಿರಳವಾಗಿ ಕಡಿಮೆಯಾಗುತ್ತದೆ, ದಿನಕಳೆದಂತೆ ಹೆಚ್ಚಿನ ಸಾಮರ್ಥ್ಯದ ಅನುಭವವಾಗುತ್ತದೆ. ಎರಡನೆಯದಾಗಿ, ಓದುವಿಕೆಯು ನಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಓದು ಯಾವುದಾದರೂ ಒಂದು ವಿಷಯದ ಮೇಲೆ ಕೇಂದ್ರೀಕರಿಸುವ ಶಕ್ತಿಯನ್ನು ನೀಡುತ್ತದೆ. ಓದುವುದು ಒಂದು ರೀತಿಯ ಧ್ಯಾನ. ನಮಗೆಲ್ಲಾ ತಿಳಿದಿರುವಂತೆ, ಸರಿಯಾದ ಧ್ಯಾನವು ಆಂತರಿಕ ಶಕ್ತಿ ಮತ್ತು ಶಾಂತಿಯನ್ನು ನೀಡುತ್ತದೆ, ಅದ್ದರಿಂದ ಓದುವಿಕೆಯು ನಮ್ಮ ಒಳನೋಟಕ್ಕೆ ಹೊಸ ಬಾಗಿಲು ತೆರೆಯುತ್ತದೆ. ಮೂರನೆಯದಾಗಿ, ಓದುವಿಕೆ ಆತ್ಮವಿಶ್ವಾಸದ ಮಟ್ಟವನ್ನು ನಿರ್ಮಿಸುತ್ತದೆ. ನಿರ್ದಿಷ್ಟ ವಿಷಯದ ಬಗ್ಗೆ ಓದಿದ ನಂತರ, ಯಾರೇ ಒಬ್ಬರು ಆಳವಾದ ಜ್ಞಾನ ಮತ್ತು ಅದರ ಮೇಲೆ ಹಿಡಿತವನ್ನು ಬೆಳೆಸಿಕೊಳ್ಳುತ್ತಾರೆ. ಅದನ್ನು ಇತರರಿಗೆ ವಿವರಿಸುವುದರ ಮೂಲಕ ಶಾಂತವಾದ ಆತ್ಮವಿಶ್ವಾಸವನ್ನು ಅನುಭವಿಸುತ್ತಾರೆ. ಕೊನೆಯದಾಗಿ, ಮನಸ್ಸಿನಲ್ಲಿ ಓದುವುದು, ಎಂದಿಗೂ ಇತರರಿಗೆ ಯಾವುದೇ ರೀತಿಯ ಅಡಚಣೆಯನ್ನು ಉಂಟುಮಾಡುವುದಿಲ್ಲ. ಓದು ಒಂದು ಚಟುವಟಿಕೆಯಾಗಿ ಯಾರಿಗೂ ತೊಂದರೆಯನ್ನು ಕೊಡುವುದಿಲ್ಲ. ನಿಮ್ಮ ಪಾಡಿಗೆ ನೀವು ಮೆಚ್ಚಿನ ಓದುವ ಸ್ಥಳದಲ್ಲಿ ಮೌನವಾಗಿ ಕುಳಿತು, ಮತ್ತು ಪುಟಗಳನ್ನು ತಿರುಗಿಸುತ್ತಾ ಸಂಪೂರ್ಣ ಸಂತೋಷವನ್ನು ಅನುಭವಿಸಬಹುದು. ಓದಿನ ಹವ್ಯಾಸ ಯಾರಿಗಾದರೂ, ಯಾವುದಕ್ಕಾದರೂ (ಉದಾಹರಣೆಗೆ, ಬಸ್ಸು, ರೈಲು, ವಿಮಾನ ಪಯಣದಲ್ಲಿ) ಕಾಯುವಾಗ ಸಹಾಯಕ್ಕೆ ಬರುವ ಅತ್ಯಂತ ಮೆಚ್ಚಿನ ಸಂಗಾತಿಯಾಗಿರುತ್ತದೆ.
ಮೇಲಿನ ಎಲ್ಲಾ ಪ್ರಯೋಜನಗಳ ಕಾರಣದಿಂದಾಗಿ ಪ್ರತಿಯೊಬ್ಬರು ಯಾವಾಗಲೂ ಹೆಚ್ಚು ಮತ್ತು ಹೆಚ್ಚು ಓದುವ ಅಭ್ಯಾಸವನ್ನು ಬೆಳೆಸಲು ಪ್ರಯತ್ನಿಸಬೇಕು. ಯಾವುದೇ ಮನರಂಜನೆಯು ಓದುವಿಕೆಗಿಂತಾ ಹೆಚ್ಚು ಅಗ್ಗವಲ್ಲ. ನಾನು ಕೆಲವು ವಿದ್ಯಾರ್ಥಿಗಳ ಜೊತೆ ಮತ್ತು ಕೆಲವು ಶಿಕ್ಷಕ/ಶಿಕ್ಷಕಿಯರ ಜೊತೆ ವಿಜ್ಞಾನದ ಓದು/ಕಲಿಕೆಯ ಆನಂದ ಬಗ್ಗೆ ಕೆಲಸಮಾಡುತ್ತೇನೆ. ವಿದ್ಯಾರ್ಥಿಗಳಂತೂ ತಮ್ಮ ಶಾಲಾ ಪುಸ್ತಕಗಳನ್ನು ಓದಿದರೆ ಹೆಚ್ಚು! ಇನ್ನು ಟೀಚರ್ಸ್ ಕೂಡ ತಮ್ಮ ಓದಿನ ಪುಸ್ತಕಗಳ ಬಗ್ಗೆ ಮಾತಾಡಿದರೂ ಉತ್ತರಿಸುವ ಗೊಡವೆಗೇ ಹೋಗುವುದಿಲ್ಲ. ಸುಮಾರು 90% ನಷ್ಟು ಜನರಿಗೆ ಓದುವುದು ಹವ್ಯಾಸವೇ ಆಗಿಲ್ಲ. ಇನ್ನು ಬರೆಯುದಂತೂ ದೂರವೇ ಉಳಿಯಿತು. ತಮ್ಮ ಓದಿನ ಹಿನ್ನೆಲೆಯಿಂದ ಕಾಡುವ ಪುಸ್ತಕವನ್ನು ಕುರಿತು ಅನೇಕರು ಮಾತಾಡುವುದೇ ಇಲ್ಲ.
ಸಾಮಾನ್ಯವಾಗಿ ಸಾಹಿತಿಗಳನ್ನು ಬರಹಗಾರರನ್ನು ಹೆಚ್ಚು ಓದಿಕೊಂಡಿದ್ದಾರೆ (Well Read) ಎಂದು ಗುರುತಿಸುತ್ತೇವೆ. ಆದರೆ ವಿಜ್ಞಾನಿಗಳನ್ನು, ಐನ್‌ಸ್ಟೈನ್, ನ್ಯೂಟನ್ ಡಾರ್ವಿನ್ ಅವರನ್ನೂ ಸಹಾ ಹೆಚ್ಚು ಓದಿದವರು (Well Read) ಎಂದು ಗುರುತಿಸುವುದಿಲ್ಲ. ಮೇಧಾವಿಗಳು ಎನ್ನಬಹುದು, ಆದರೆ ವಿಜ್ಞಾನದ ಸಂಶೋಧನೆ ಹಾಗೂ ಅದನ್ನೂ ಬರೆದು ಪ್ರಕಟಿಸುವ ಜವಾಬ್ದಾರಿಯಲ್ಲಿ ಅಪಾರ ಓದು ಬೇಕಾಗುತ್ತದೆ. ವಿಜ್ಞಾನಿಗಳ ತಿಳಿವನ್ನು ಮಾತ್ರಿಕ ಹಿನ್ನೆಲೆಯಲ್ಲಿ ನೋಡುವುದರಿಂದ ಅವರ ಓದಿನ ಶ್ರಮ ಸಾಮಾನ್ಯ ತಿಳಿವಿಗೆ ದಕ್ಕುವುದಿಲ್ಲ. ಅದರಲ್ಲೂ ಈಗಂತೂ ವಿಜ್ಞಾನದ ವಿದ್ಯಾರ್ಥಿಗಳು ಸರಿಯಾದ ಉತ್ತರವನ್ನು ಆರಿಸಿ ಬರೆಯುವುದರಲ್ಲಿ (Choose the best answer) ನಿಸ್ಸೀಮರಾಗುತ್ತಿದ್ದಾರೆ. ಓದಿನಿಂದ ವಂಚಿತರೂ ಆಗುತ್ತಿದ್ದಾರೆ. ಏನಾದರೂ ಪ್ರಶ್ನೆ ಕೇಳಿದರೆ ಆಪ್ಶನ್ಸ್ ಪ್ಲೀಸ್ ಎನ್ನುತ್ತಾರೆ. ಇಂತಹಾ ಹಿನ್ನೆಲೆಯಲ್ಲಿಯೇ ವಿಜ್ಞಾನದ ಓದನ್ನು ಗ್ರಹಿಕೆಗೆ ಒಳಪಡಿಸುವ ತುರ್ತು ಹೆಚ್ಚಾಗುತ್ತಿದೆ. ಹಾಗಾಗಿ CPUS ಪುಸ್ತಕಯಾನ ಎಂಬ ಸೀರೀಸ್ ಅನ್ನು ಆರಂಭಿಸಿತ್ತು. ಸುಮಾರು 25 ಕ್ಕೂ ಹೆಚ್ಚು ಪುಸ್ತಕಗಳನ್ನು ಈಗಾಗಲೇ ಪರಿಚಯಿಸಿದ್ದು ನೂರು ಪುಸ್ತಕಗಳನ್ನಾದರೂ ಪರಿಚಯಿಸುವ ಆಶಯ ಹೊಂದಿದೆ. ಈ ಪುಸ್ತಕ ಪರಿಚಯವನ್ನು ಈ ಲಿಂಕ್‌ನಲ್ಲಿ ನೋಡಬಹುದು.
A good book + coffee/tea/wine + uninterrupted time = Bliss. ಓದಿನ ಆನಂದ ತಿಳಿದಿರುವ ಅನೇಕ ಓದುಗರಿಗೆ ಈ ಸೂತ್ರವು ಗೊತ್ತಿರುತ್ತದೆ. ಇದು ಅಲ್ಲದೆ ಪುರುಷಪರವಾದ ಮತ್ತೊಂದು ಮಾತೂ ರೂಢಿಯಲ್ಲಿದೆ. ಮತ್ತು ಭರಿಸುವಂತಹಾ ಮೂರರಲ್ಲಿ ಪುಸ್ತಕವು ಒಂದು ಎನ್ನುವುದನ್ನು ಹೀಗೆ ಹೇಳುತ್ತಾರೆ. Wine, Women and Books! ಈ ಮೂರೂ ಮತ್ತು ಭರಿಸುವಷ್ಟು ಹಿತವಾದವು ಎನ್ನುತ್ತದೆ, ರೂಢಿಗತವಾದ ಆ ಮಾತು.
“I cannot sleep unless I am surrounded by books.” … ಇದೂ ಸಹಾ ಅರ್ಜೆಂಟೀನಾ ಬರಹಗಾರ ಜಾಜ್ ಲೂಯಿಸ್ ಬೊಗೆಸ್ ಅವರ ಮಾತು. ಇದೂ ಸಹಾ ಅನೇಕರಿಗೆ ಹವ್ಯಾಸವಾಗಿರಲು ಸಾಕು. ಮಲಗಲು ಒಂದು ಡೋಸ್ ಓದಿನ ಅನುಭವಕ್ಕೆ ತೆರೆದುಕೊಳ್ಳುವ ಶಿಸ್ತು!
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
Excellent 👌
ಓದಿನ ಅನುಭವವನ್ನು ಓದಿನಲ್ಲಿ ತಲ್ಲೀನರಾಗುವಂತೆ ಕಟ್ಟಿ ಕೊಟ್ಟಿದ್ದಾರೆ ಚನ್ನೇಶ್.