ಪೇರಲ, ಪೇರಳೆ, ಪೆರುಕಾಯಿ, ಪ್ಯಾರಲಕಾಯಿ, ಸೀಬೆ, ಚೇಪೆಕಾಯಿ ಹೀಗೆ ಕನ್ನಡದಲ್ಲೇ ನಾಲ್ಕಾರು ಹೆಸರಿನಿಂದ ಕರೆಯಿಸಿಕೊಂಡ ಸಸ್ಯ, ಭಾರತೀಯವಲ್ಲ ಅಂದರೆ ಅಚ್ಚರಿಯಾದೀತು. ಇಡೀ ದೇಶದ ಬಹುಪಾಲು ಪ್ರದೇಶದಲ್ಲಿ ಬೆಳೆಯುವ ಸೀಬೆಯು ಅದೆಷ್ಟು ಜನಪ್ರಿಯ ಎಂದರೆ, ಇದು ನಮ್ಮದಲ್ಲ ಎಂದರೆ ನಂಬುವುದೇ ಕಷ್ಟ. ಆದರೆ ಅದು ನಿಜ. ಪೇರಲ ಹಣ್ಣು ನಮ್ಮದಲ್ಲ. ನಮ್ಮೂರಿಗೆ ಬಂದು ಬಹಳ ದಿನವೂ ಆಗಿಲ್ಲ. 16-17ನೆಯ ಶತಮಾನದಲ್ಲಿ ಪೋರ್ಚುಗೀಸರು ಇದನ್ನು ಭಾರತಕ್ಕೆ ಪರಿಚಯಿಸಿದರು. ಅವರಿಗೂ ಸ್ಪಾನಿಷರು ಪರಿಚಯಿಸಿದ್ದರು. ಸ್ಪಾನಿಷರೂ ಕೂಡ ಯೂರೋಪಿಗೆ ದಕ್ಷಿಣ ಅಮೆರಿಕದಿಂದ ತಂದಿದ್ದರು. ದಕ್ಷಿಣ ಅಮೆರಿಕದ ಪೆರುವಿನಲ್ಲಿ ಮೊದಲು ಕೃಷಿಗೆ ಒಳಗಾಗಿದ್ದರಿಂದ, “ಪೆರು”ವಿನ ಕಾಯಿ ಎಂದೇ ಇಂಡಿಯಾದಲ್ಲಿ ಪರಿಚಯಗೊಂಡು ಪೇರುಕಾಯಿ-ಪೇರುಹಣ್ಣಾಗಿ, ಪೇರಲ ಅಥವಾ ಪೇರಳೆಯಾಗಿದೆ. ಯೂರೋಪಿಯನ್ನರು ಇದನ್ನು ಉಷ್ಣವಲಯದ ಸೇಬು ಎಂದೂ ಕರೆದದ್ದರಿಂದ ಸೇಬು ಇಲ್ಲಿ ಸೀಬೆಯಾಗಿದೆ. ಸೀಬೆಯ ಗ್ರಾಮ್ಯ “ಚೇಪೆ”ಕಾಯಿ! ಇಷ್ಟೆಲ್ಲವಾಗಿಯೂ ನಮ್ಮದಲ್ಲದ ಪೇರಲದ ಉತ್ಪಾದನೆಯಲ್ಲಿ ಮಾತ್ರ ಜಗತ್ತಿನಲ್ಲಿ ನಾವೇ ನಂಬರ್ ಒನ್. ಅಷ್ಟೇ ಅಲ್ಲ ನಮ್ಮ ನಂಬರ್ ಒನ್ ಸ್ಥಾನವನ್ನು ಅಷ್ಟು ಸುಲಭವಾಗಿ ಬೇರೆಯವರು ಯಾರೂ ಕಸಿದುಕೊಳ್ಳಲೂ ಆಗದು. ಜಗತ್ತಿನ ಪ್ರತಿಶತ 40-42ರಷ್ಟನ್ನು ಭಾರತ ಒಂದೇ ಉತ್ಪಾದಿಸುತ್ತಿದೆ. ಎರಡನೆಯ ಸ್ಥಾನದ ಚೀನಾ ಕೇವಲ ಪ್ರತಿಶತ 10ರಷ್ಟನ್ನು ಉತ್ಪಾದಿಸುತ್ತಿವೆ. ಹಾಗಾಗಿ ಪೇರಳೆಯ ಉತ್ಪಾದನೆಯಲ್ಲಿ ನಮ್ಮ ದೇಶವನ್ನು ಹಿಂದಕ್ಕೆ ಸರಿಸುವುದು ಅಷ್ಟು ಸುಲಭವಿಲ್ಲ. ಸೀಬೆಯ ಹಣ್ಣು ಪಾಕಿಸ್ತಾನದಲ್ಲಿ ಚಳಿಗಾಲದ ರಾಷ್ಟ್ರೀಯ ಹಣ್ಣು ಎಂಬ ಗೌರವವನ್ನು ಪಡೆದಿದೆ. ನಮ್ಮ ದೇಶದಲ್ಲಂತೂ ಹೆಚ್ಚೂ ಕಡಿಮೆ ಪ್ರತೀ ಊರಲ್ಲೂ ಒಂದಾದರೂ ಮರವಿದ್ದೀತು! ಅಷ್ಟೊಂದು ಜನಪ್ರಿಯತೆಯನ್ನು ಗಳಿಸಿದೆ. ಈಗಲೂ ಶಾಲೆಗಳ ಮುಂದೆ, ಬಸ್ಸುಗಳ ನಿಲ್ದಾಣಗಳಲ್ಲಿ ಹೊತ್ತು ಮಾರುವವರನ್ನೂ, ಕತ್ತರಿಸಿ ರುಚಿ ತೋರಿಸುವವರನ್ನೂ ಎಲ್ಲರೂ ನೋಡಿರುತ್ತೀರಿ. ಹದವಾಗಿ ಉಪ್ಪು-ಮೆಣಸನ್ನು ಬೆರೆಸಿದ ಪುಡಿಯನ್ನು ಹಚ್ಚಿದ್ದನ್ನು ಕೊಂಡು ತಿನ್ನದವರು ಅಪರೂಪ. ಇದೇ ರುಚಿಯು ಪೇರಳೆಯ ರಸಕ್ಕೂ ಮಸಾಲೆಯಾಗಿಸುವ ಪರಿಪಾಠವೂ ಬಂದಿದೆ.
ಸೀಬೆಯ ತವರೂರು ದಕ್ಷಿಣ ಅಮೆರಿಕದ ಉತ್ತರಾರ್ಧದಿಂದ ಮಧ್ಯ ಅಮೆರಿಕದವರೆಗಿನ ಪ್ರದೇಶವೆಂದು ನಂಬಲಾಗಿದೆ. ಉತ್ಖನನಗಳಿಂದ ನಡೆಸಲಾದ ಪುರಾತತ್ವ ಅಧ್ಯಯನಗಳು(Archaeological Studies) ಪೆರು ದೇಶದಲ್ಲಿ ಸುಮಾರು 4500 ವರ್ಷಗಳ ಹಿಂದೆಯೇ ಸೀಬೆಯನ್ನು ಕೃಷಿಗೆ ಒಳಪಡಿಸಿದ್ದ ಬಗ್ಗೆ ದೃಢ ಪಡಿಸಿವೆ. ಹಾಗಾಗಿ ಅಲ್ಲಿಂದಲೇ ಹಲವಾರೂ ಕಡೆಗೂ ಹಬ್ಬಿರುವ ಸಾಧ್ಯತೆ ಇದ್ದು, ಬಹುಶಃ ಭಾರತಕ್ಕೆ ತಂದ ಪೋರ್ಚುಗೀಸರು “ಪೆರುವಿನ ಕಾಯಿ” ಎಂದು ಮಲಬಾರಿನಲ್ಲಿ ತೀರವನ್ನು ಸೇರಿದಾಗ ಹೇಳಿದ್ದೇ, ಮಲಯಾಳದಲ್ಲಿ “ಪೇರುಕ್ಕಾ” ಆಗಿ ತೀರದಗುಂಟ ಸಾಗಿ ಮುಂಬಯಿಯವರೆಗೂ ಹೋಗಿ ಅಲ್ಲೆಲ್ಲಾ “ಪೇರುಕಾಯಿ” ಆಗಿ, ಪೇರಲ-ಪೇರಳೆಯಾಗಿದೆ.
ಇಂಗ್ಲೀಶಿನಲ್ಲಿ ಗ್ವಾವಾ (Guava) ಎಂದು ಕರೆಯುವ ಹೆಸರು ಸ್ಪಾನಿಷ್ ನಿಂದ ಬಂದದ್ದು. ಸ್ಪಾನಿಷರಿಗೆ ದಕ್ಷಿಣ ಅಮೆರಿಕ ನೆಲೆಯ ಮೂಲನಿವಾಸಿಗಳು ಕರೆಯುವ ಪದದಿಂದ ಹುಟ್ಟಿಕೊಂಡು ಹೆಚ್ಚೂ -ಕಡಿಮೆ ಅದೇ ಸದ್ದಿಗೆ ಹತ್ತಿರದ ಪದವಾಗಿದೆ. ಇಂಡಿಯಾದಲ್ಲಿ ಹೆಚ್ಚು ತಾಜಾ ಆಗಿ ತಿನ್ನುವ ಬಳಕೆಯಿಂದ ಪೇರಲವು ಜನಪ್ರಿಯವಾಗಿದೆ. ಅನೇಕರಿಗೆ ಪೇರಲ ಕಾಯಿಯನ್ನು ತಮ್ಮೂರಿನ ಯಾರಾದರೂ ಮನೆಯ ಹಿತ್ತಿಲಲ್ಲಿ ಕಿತ್ತು ತಿಂದು ಬೈಸಿಕೊಂಡ ಬಾಲ್ಯ ನೆನಪಿಗೆ ಬಾರದಿರದು. ಪೇರಲವು ಹಾಗೇ ಅಲ್ಲೇ ಕಿತ್ತು ತಿಂದ ಅನುಭವಕ್ಕೆ ತುಂಬಾ ಜನಪ್ರಿಯ. ಕೃಷಿ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಸಂಜೆಯಲ್ಲಿ ಕತ್ತಲು ಸಮೀಪಿಸುವಾಗ ಕೆಲವು ತುಂಟ ಗೆಳೆಯರ ಜೊತೆ ಅಲ್ಲಿನ ತೋಟದ ಸೀಬೆಯನ್ನು ಕದ್ದು ತಂದದ್ದನ್ನು ತಿಂದದ್ದು ನನಗೂ ನೆನಪಿದೆ. ಆಗಂತೂ ಕೆಲವರು ಸೇಬೆಯನ್ನು ತರುವ ಎಕ್ಸ್‌ಪರ್ಟ್‌ಗಳಾಗಿದ್ದರು. ಎಷ್ಟೋ ಶಾಲೆಗಳ ಆವರಣಗಳಲ್ಲೂ ಪೇರಲ ಮರಗಳಿರುವುದನ್ನು ನೋಡಿದ್ದೇನೆ. ನನ್ನೂರಿನ ಪ್ರಾಥಮಿಕ ಶಾಲೆಯಲ್ಲೂ ಮರಗಳಿದ್ದವು. ಕದ್ದು ತಿನ್ನಲು ಪೇರಲ ಸುಲಭದ್ದು. ಇದನ್ನು ಸುಲಿಯಲೂ ಬೇಕಿಲ್ಲ, ಕತ್ತರಿಸಲೂ ಚಾಕೂ ಬೇಡ, ತಿಂದರೆ ರಸವೂ ಸುರಿಯದು-ಹಾಗಾಗಿ ಕೈತೊಳೆಯುವ ಗೋಜೂ ಇಲ್ಲ. ಕಾಯಿಗೆ ಕೈ ಹಾಕಿ-ನಂತರ ಕೈಯನ್ನು ಬಾಯಿಗೆ ಹಾಕಿದರೆ, ಸೀಬೆಯು ಹೊಟ್ಟೆಯನ್ನು ಸೇರಲು ತಡವಾಗುವುದಿಲ್ಲ.
ಸೀಡಿಯಂ ಗ್ವಜಾವ (Psidium guajava) ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ಈ ಸಸ್ಯವು ಮಿರ್ಟೇಸಿಯೆ ಸಸ್ಯ ಕುಟುಂಬಕ್ಕೆ ಸೇರಿದೆ. ಇದೇ ಕುಟುಂಬದ ಮತ್ತೆರಡು ಜನಪ್ರಿಯ ಸಸ್ಯಗಳೆಂದರೆ “ನೇರಳೆ” ಹಾಗೂ “ನೀಲಗಿರಿ”! (ಈ ಎರಡರ ಕಥನಗಳನ್ನೂ ಈಗಾಗಲೇ ಸಸ್ಯಯಾನದಲ್ಲಿ ನೀವು ಓದಿರುತ್ತೀರಿ) ಈ ಕುಟುಂಬದ ಸದಸ್ಯ ಸಸ್ಯಗಳ ಬಹು ಮುಖ್ಯ ಗುಣ ಲಕ್ಷಣ ಅದರ ತೊಗಟೆಯದು. ಕಾಂಡದಿಂದ ಸಿಪ್ಪೆ ಸೀಳಿದಂತೆ ಕಾಣುವ ತೊಗಟೆ. ಅಥವಾ ಸೀಳಿಯೇ ಹೊರ ಬರುವ ತೊಗಟೆಯೂ ಇದ್ದೀತು. ಅದರ ಹಿಂದೆ ಹಸಿರು ಅಥವಾ ಹಸಿರ ಛಾಯೆಯ ಒಳಕಾಂಡ! ಸೀಬೆಯಲ್ಲೂ ಹಾಗೆಯೇ. (ಚಿತ್ರ ನೋಡಿ) ಕಾಂಡ ಮತ್ತು ರೆಂಬೆ-ಕೊಂಬೆಗಳ ತೊಗಟೆಯು ಚಕ್ಕಳದಂತೆ ಅಥವಾ ಮೇಲ್ಪದರ ಹೊರಬರುವಂತೆ ಮೇಲೆದ್ದ ದೃಶ್ಯವು ಸಹಜವಾದುದು! ಮತ್ತೊಂದು ಸಾಮಾನ್ಯ ಸಂಗತಿ ಎಂದರೆ ಪೂರ್ತಿ ಕಾಂಡವನ್ನು ನೆಲಮಟ್ಟಕ್ಕೆ ಅಥವಾ ತುಸು ಎತ್ತರದಲ್ಲಿ ಕತ್ತರಿಸಿದರೂ ಮತ್ತೆ ಸುತ್ತಲೂ ಚಿಗುರಿ ಬೆಳೆಯುವ ಗುಣ. ಈ ಕೂಳೆ ಬೆಳೆಯನ್ನು ನೀಲಗಿರಿಯ ತೋಪುಗಳಲ್ಲಿ ಬಳಸಲಾಗುತ್ತದೆ. ಸೀಬೆಯ ಮರಗಳು ಅಷ್ಟು ದೊಡ್ಡವೇನಲ್ಲ, 20-30 ಅಡಿಯಷ್ಟೇ! ಅದರಲ್ಲೂ ಇತ್ತೀಚೆಗಿನ ತಳಿಗಳು ದೊಡ್ಡ ಪೊದೆಯ ಗಿಡಗಳಂತೆ ಕಡಿಮೆ ಎತ್ತರವುಳ್ಳವಾಗಿಯೇ ಇರುತ್ತವೆ.
ಸೀಬೆಯು ನಿತ್ಯ ಹರಿದ್ವರ್ಣದ ಗಿಡ. ಅದರ ಎಲೆಗಳು ವಿಶೇಷವಾದ ಪರಿಮಳವನ್ನು ಹೊಂದಿದ್ದು, ದಪ್ಪನಾಗಿರುತ್ತವೆ. ದಪ್ಪವಾದ ಎಲೆಗಳು ತುಸು ಒರಟು. ಮಾಸಲು ಹಸಿರಿನಿಂದ – ದಟ್ಟ ಹಸಿರಿನ ಬಣ್ಣದವು. ಎಲೆಗಳೂ ವಿಶೇಷವಾದ ಔಷಧೀಯ ಬಳಕೆಯನ್ನು ಹೊಂದಿದ್ದು ಅದನ್ನು ವಿವರವಾಗಿ ಮುಂದೆ ನೋಡೋಣ.
ಮಿರ್ಟೇಸಿಯೆ ಕುಟುಂಬದ ಹೂವುಗಳದ್ದೂ ಒಂದು ವಿಶೇಷವಿದೆ. ಬಹು ಪಾಲು ಇವುಗಳ ಹೂವುಗಳಲ್ಲಿ ಗಂಡು ಭಾಗ (ಸ್ಟೇಮನ್ಸ್-Stamens) ಎದ್ದು ಕಾಣುವ ಲಕ್ಷಣದವು. ದಟ್ಟ ಬಿಳಿಯ ಬಣ್ಣದ ಹೂವುಗಳಲ್ಲಿ ಸ್ಟೇಮನ್ಸ್ ದಳಗಳ ಮಧ್ಯೆ ಚಾಚಿ ಬಂದಂತೆ ಕಾಣುತ್ತವೆ. ಹಣ್ಣುಗಳು ರಸಭರಿತವಾದ ಬೆರ್ರಿಗಳು. ವಿಶೇಷವೆಂದರೆ ಸಾಕಷ್ಟು ಬೀಜಗಳನ್ನು ಮಧ್ಯೆ ಸುತ್ತುವರಿದಂತೆ ಹೊಂದಿದ್ದು ಅದರ ಮೇಲೆ ಹಾಗೂ ಅವುಗಳನ್ನೊಳಗೊಂಡ ಹಾಗೆ ತಿರುಳು ತುಂಬಿಕೊಂಡಿರುತ್ತದೆ. ಸಿಪ್ಪೆಯೂ ಸುಲಭವಾಗಿ ಹಲ್ಲಿಗೆ ಸೀಳುಲು ಬರುವಂತಿದ್ದು, ಅದಕ್ಕೆ ಆದರದ್ದೇ ಆದ ಪರಿಮಳವನ್ನು ಹೊಂದಿರುತ್ತದೆ. ಹಾಗಾಗಿ ಎಳೆಯ ಕಾಯಿಯಿಂದ ಹಣ್ಣಾಗುವವರೆಗೂ ಆ ಪರಿಮಳದ ವಿವಿಧತೆಯನ್ನೂ ಪೇರಲದಲ್ಲಿ ಕಾಣುತ್ತೇವೆ. ಕಾಯಿ -ಹಣ್ಣಾಗಿ ಮಾಗಿದಂತೆ ಈ ಪರಿಮಳವು ತುಸುವೇ ಬದಲಾಗುತ್ತಾ ಸಾಗುತ್ತದೆ.
ಪೇರಲ ಹಣ್ಣು ತನ್ನೊಳಗೆ ಹೊಂದಿರುವ ವಿಟಮಿನ್ “ಸಿ” ಹಾಗೂ “ಪೆಕ್ಟಿನ್” ನಿಂದ ತುಂಬಾ ಉಪಕಾರಿಯಾಗಿದೆ. ಪೆಕ್ಟಿನ್ ಸಂಕೀರ್ಣವಾದ ಸಕ್ಕರೆಯ ಅಣುಗಳಿಂದಾದ ರಾಸಾಯನಿಕ. ಪೇರಳೆಯಲ್ಲದೆ ಕಿತ್ತಳೆ, ಸೇಬು ಮುಂತಾದ ಹಣ್ಣುಗಳಲ್ಲಿಯೂ ಇದು ಸಾಕಷ್ಟಿದೆ. ಹಣ್ಣುಗಳಿಂದ ಜಾಮ್, ಜೆಲ್ಲಿಗಳನ್ನು ತಯಾರಿಸುವ ಗುಣವನ್ನು ಇದು ನಿರ್ಧರಿಸುತ್ತದೆ. ಇದಲ್ಲದೆ ಅನೇಕ ಇತರೇ ವಿಟಮಿನ್ನುಗಳು ಸಾಕಷ್ಟು ಪ್ರೊಟೀನ್ ಅನ್ನೂ ಹೊಂದಿರುವ ಸೀಬೆಯು ಭಾರತದಲ್ಲಂತೂ ಬಹು ಪಾಲು ರಾಜ್ಯಗಳಲ್ಲಿ ಬೆಳೆಯುತ್ತದೆ. ಈ ಸಸ್ಯವು ವರ್ಷಕ್ಕೆ ಎರಡು ಬಾರಿ ಫಲ ಕೊಡುವುದರಿಂದ ವರ್ಷದ ಬಹುಪಾಲು ಕಾಲದಲ್ಲಿ ದೊರಕುತ್ತದೆ. ಈಗಂತೂ ಶ್ರಾವಣದ ಸಮಯದಲ್ಲಿ ಈ ಹಣ್ಣು ತುಂಬಾ ಜನಪ್ರಿಯವಾಗಿದ್ದು ಎಲ್ಲೆಡೆ ಕಾಣಸಿಗುತ್ತದೆ. ಹೆಚ್ಚೂ ಕಡಿಮೆ ಎಲ್ಲಾ ರಾಜ್ಯಗಳಲ್ಲೂ ಬೆಳೆಯುವ ಸೀಬೆಯು, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಛತ್ತೀಸ್‌ಗಡ್, ಪಂಜಾಬ್, ಗುಜರಾತ್, ತಮಿಳುನಾಡು, ಕರ್ನಾಟಕ, ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶಗಳಲ್ಲಿ ಹೆಚ್ಚು ಉತ್ಪಾದನೆಯ ಮೊದಲ ಹತ್ತು ರಾಜ್ಯಗಳಾಗಿವೆ.
ಹೊಂದಿಕೊಳ್ಳುವ ಮತ್ತು ತಡೆದುಕೊಳ್ಳುವ ಗುಣದ ಸಸ್ಯವಾದ ಸೀಬೆಯನ್ನು ಬೆಳೆಸುವುದು ಸುಲಭ. ಉಷ್ಣವಲಯದಲ್ಲಿ ತುಂಬಾ ಚೆನ್ನಾಗಿ ಬಗೆ ಬಗೆಯ ಮಣ್ಣುಗಳಿಗೆ ಹೊಂದಿಕೊಂಡು ಬೆಳೆಯಬಲ್ಲದು. ಮಣ್ಣಿನ ರಸಸಾರ 4.5 (ಆಮ್ಲೀಯ) ದಿಂದ 8.2 (ಕ್ಷಾರೀಯ)ದ ವರೆಗೂ ಹೊಂದಿಕೊಂಡು ಫಲಕೊಡುತ್ತದೆ. ತುಂಬಾ ರಭಸವಾದ ಬೆಳವಣಿಗೆಯನ್ನು ಹೊಂದಿರುವ ಪೇರಲವು 30-40 ವರ್ಷಗಳವರೆಗೂ ಫಲಕೊಡುತ್ತದೆ. ಫಲಕೊಡಲು ಮರವು 3-4 ವರ್ಷದಿಂದ ಆರಂಭವಾಗಿ 15-20 ವರ್ಷದವರೆಗೂ ಹೆಚ್ಚಿನ ಇಳುವರಿ ಕೊಡುತ್ತದೆ. ನಂತರ ಕ್ಷೀಣಿಸುತ್ತಾ ಇಳುವರಿ ಕಡಿಮೆಯಾಗುತ್ತದೆ. ಹೆಚ್ಚಿನ ಉಷ್ಣತೆಗೂ ಹಾಗೂ ಬರದ ಸನ್ನಿವೇಶಗಳನ್ನೂ ತಾಳಿಕೊಂಡ ಬೆಳೆಯುವ ವಿಶಿಷ್ಟ ಹಣ್ಣಿನ ಮರ. ದೇಶಾದ್ಯಂತ ತರಹೆವಾರಿ ತಳಿಗಳಿದ್ದು, ತಿರುಳಿನ ಬಣ್ಣ ಹಳದಿ ಮಿಶ್ರಿತ ಬಿಳಿಯಿಂದ ಪಿಂಕ್ ಬಣ್ಣದವರೆಗೂ ಸಾಧಾರಣವಾಗಿ ಕಂಡುಬರುತ್ತವೆ. ಲಕ್ನೊ -49 ಮತ್ತು ಅಲಹಬಾದ್ ಸಫೇದ್ ತಳಿಗಳು ತುಂಬಾ ಜನಪ್ರಿಯವಾದವು. ಗಾತ್ರದಲ್ಲೂ ದೊಡ್ಡದಾದ ಅಲಹಬಾದ್ ಸಫೇದ್ 200-220 ಗ್ರಾಂ ತೂಕವನ್ನು ಹೊಂದಿದ್ದು, ಹಣ್ಣಿನ ರುಚಿಯೂ ಹಿತವಾಗಿರುತ್ತದೆ. ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ ಬೆಂಗಳೂರು ಕಳೆದ ವರ್ಷ ಅರ್ಕ ಪೂರ್ಣ ಎಂಬ ತಳಿಯನ್ನು ಬಿಡುಗಡೆ ಮಾಡಿದೆ. ಅದು 230 ಗ್ರಾಂ ವರೆಗೂ ತೂಕವನ್ನು ಹೊಂದಿದ್ದು ದೇಶದ ದೊಡ್ಡ ತಳಿಯಾಗಿದೆ. ಐದನೆಯ ವರ್ಷದಿಂದ ಈ ತಳಿಯಲ್ಲಿ ಪ್ರತಿ ಮರವು ಸುಮಾರು 75-80 ಕಿಲೋ ಹಣ್ಣುಗಳನ್ನು ಇಳುವರಿ ಕೊಡುತ್ತದೆ. ಛತ್ತೀಸ್‌ಗಡದ ವಿಎನ್‌ಆರ್ -ಬಿಹಿ (VNR-Bihi) ಎಂಬ ತಳಿಯ ಒಂದೊಂದು ಹಣ್ಣು ಕಾಲು ಕಿಲೋದಿಂದ ಒಂದೂಕಾಲು ಕಿಲೋ ತೂಗಬಲ್ಲವು. ಆದರೆ ಈ ಹಣ್ಣಿನ ಸಿಪ್ಪೆಯು ತುಂಬಾ ದಪ್ಪ. ತಿರುಳು ಅಲಹಬಾದ್ ಸಫೇದ್ ಅಥವಾ ಅರ್ಕ ಪೂರ್ಣದ ಹಣ್ಣಿನಷ್ಟು ಮೃದುವಾಗಿಲ್ಲ.
ಸೀಬೆಯ ಸಸ್ಯದ ವಿವಿಧ ಭಾಗಗಳು ಬಗೆ ಬಗೆಯ ಬಳಕೆಗಳನ್ನು ಮಾನವ ಕುಲಕ್ಕೆ ಒದಗಿಸಿದೆ. ನಮಗೆಲ್ಲಾ ಹೆಚ್ಚಿನ ಪಾಲು ಕೇವಲ ಹಣ್ಣು ಅಥವಾ ಕಾಯಿಯ ತಿನ್ನುವುದಷ್ಟೇ ತಿಳಿದಿರಬಹುದು. ಆದರೆ ಅದರ ಎಲೆಗಳು, ರೆಂಬೆ-ಕೊಂಬೆಗಳ ವಿಶೇಷ ಉರುವಲಿನ ಉಪಯೋಗ ತಿಳಿದಿರುವ ಸಾಧ್ಯತೆಯು ಕಡಿಮೆ. ಪೇರಲದ ರೆಂಬೆಗಳನ್ನು ಉರುವಲನ್ನಾಗಿಸಿ ಮಾಂಸಕ್ಕೆ ಹೊಗೆ ಕೊಟ್ಟು ಗ್ರಿಲ್ (Grill) ಮಾಡುವ ವಿಶೇಷವಾದ ಸಂಸ್ಕರಣೆಯಲ್ಲಿ ಬಳಸಲಾಗುತ್ತದೆ. ಹೆಚ್ಚು ಹವಾಯ್ ದ್ವೀಪಗಳಲ್ಲಿ ಚಾಲ್ತಿ ಇರುವ ಈ ಬಗೆಯು ಅನೇಕ ಕಡೆಗೂ ಹಬ್ಬಿದೆ. ಪೇರಲದ ಕಟ್ಟಿಗೆಯು ಅರೆ-ಸಿಹಿಯ ಪರಿಮಳವನ್ನು ಹೊಂದಿದ್ದು, ಅದರ ಹೊಗೆಯಿಂದ ಮಾಂಸದ ತುಣುಕುಗಳನ್ನು, ಮೀನನ್ನೂ, ಹುರಿದಂತೆ ಬೇಯಿಸಿದರೆ, ಅದಕ್ಕೆ ವಿಭಿನ್ನ ಪರಿಮಳವು ಸೇರಿಕೊಳ್ಳುತ್ತದೆ. ಇದನ್ನು ಹಲವು ಸಮುದಾಯಗಳು ಕಂಡುಕೊಂಡು, ರೆಂಬೆ-ಕೊಂಬೆಗಳಿಗೂ ಮಾರುಕಟ್ಟೆಯನ್ನು ಒದಗಿಸಿವೆ. ಇತ್ತೀಚೆಗೆ ಇದೊಂದು ಉದ್ಯಮವೇ ಆಗಿದ್ದು, ಅವುಗಳು ಸಾವಯವ ಸೀಬೆ ಕಟ್ಟಿಗೆಗಳನ್ನು ಒದಗಿಸುವ ಕೆಲಸವನ್ನೂ ಮಾಡುತ್ತಿವೆ.
ಕೆಲವು ಪುಟ್ಟ ಮಕ್ಕಳು ಸೀಬೆಯ ಹಣ್ಣನ್ನು ತಿನ್ನಲು ಒಪ್ಪದಿರಲು ಹಣ್ಣೊಳಗೆ ಕಲ್ಲುಗಳಿವೆ ಎಂಬ ಕಾರಣ ಕೊಡುವುದನ್ನು ನೋಡಿರಬಹುದು. ನಿಜಕ್ಕೂ ಸೀಬೆಯ ಬೀಜಗಳು ತುಂಬಾ ಗಟ್ಟಿಯಾದವೇ! ನಾವು ಸಾಮಾನ್ಯವಾಗಿ ತಿರುಳಿನ ಮಧ್ಯೆದಲ್ಲಿ ಇರುವ ಬೀಜಗಳನ್ನು ಅಗಿಯದೇ ನುಂಗುವುದೇ ಹೆಚ್ಚು! ಹಣ್ಣನ್ನು ತಿನ್ನುವಾಗ ಒಂದೇ ಒಂದು ಬೀಜವನ್ನು ಬಾಯಲ್ಲಿ ಉಳಿಸಿಕೊಂಡು ಕಚ್ಚಲು ಪ್ರಯತ್ನಿಸಿ, ಆಗ ಬೀಜಗಳ ಗಡಸುತನ ತಿಳಿಯುತ್ತದೆ. ಬೀಜಗಳೂ ಸಾಕಷ್ಟು ಆಹಾರಾಂಶಗಳನ್ನೂ, ಒಂದಷ್ಟು ಎಣ್ಣೆಯನ್ನು ಹೊಂದಿರುತ್ತವೆ. ಬೀಜದ ಎಣ್ಣೆಯನ್ನು ವಿವಿಧ ಆಹಾರ ಸಂಸ್ಕರಣೆಯಲ್ಲಿ, ಸೌಂದರ್ಯವರ್ಧಕಗಳಲ್ಲಿ, ಚರ್ಮವನ್ನು ಆರೋಗ್ಯವಾಗಿಡುವ ವಿವಿಧ ಕ್ರೀಮ್‌ಗಳಲ್ಲಿ ಬಳಸಲಾಗುತ್ತದೆ.
ಸೀಬೆಯ ಎಲೆಗಳನ್ನು ವಿವಿಧ ಸಮುದಾಯಗಳು ಪಾರಂಪರಿಕವಾಗಿ ಹಲವಾರು ಆರೋಗ್ಯದ ಲಾಭಗಳಿಗೆ ಬಳಸುತ್ತಿವೆ. ಎಲೆಯನ್ನು ಕಿತ್ತು ಉಜ್ಜಿದರೂ ನಿಮಗೆ ಅದರೊಳಗಿನ ಪರಿಮಳದಿಂದ ಏನಾದರೂ ಲಾಭವಿದ್ದಿರಬಹುದೇ ಎಂಬ ಅನುಮಾನ ಬರಬಹುದು. ದಕ್ಷಿಣ ಅಮೆರಿಕದ ಹಲವು ಸಮುದಾಯಗಳು ಎಲೆಗಳನ್ನು ಅನೇಕ ಲಾಭಗಳಿಗೆ ಬಳಸುವುದರ ಉದ್ದವಾದ ಪಟ್ಟಿಯನ್ನೇ ಕೊಡಬಹುದು. ಮಾಯನ್ ಪರಂಪರೆಯಲ್ಲೂ ಎಲೆಗಳನ್ನು ಕೆಮ್ಮ, ಹೊಟ್ಟೆ ನೋವಿನ ಪರಿಹಾರಕ್ಕೆ ಬಳಸಲಾಗುತ್ತಿತ್ತು. ಈಗಲೂ ದಕ್ಷಿಣ ಅಮೆರಿಕದ ಅನೇಕ ದೇಶಗಳ ಪಾರಂಪರಿಕ ವೈದ್ಯ ಚಿಕಿತ್ಸೆಯಲ್ಲಿ ಕೆಮ್ಮು, ಅತಿಯಾದ ಭೇದಿ, ಹೊಟ್ಟೆ ನೋವು, ಪಚನಕ್ರಿಯೆಯ ವೃದ್ಧಿ ಮುಂತಾದ ಪರಿಹಾರಗಳಾಗಿ ಬಳಸುತ್ತಾರೆ. ಆಫ್ರಿಕಾ ದೇಶಗಳಲ್ಲೂ ಕೂಡ ಇಂತಹಾ ಬಳಕೆಯನ್ನು ಅನೇಕ ಅಧ್ಯಯನಗಳು ದಾಖಲಿಸಿವೆ. ಚೀನಿಯರು ಎಲೆಗಳನ್ನು ನಂಜು ನಿವಾರಕ ಹಾಗೂ ಹೊಟ್ಟೆನೋವಿಗೆ ಬಳಸುತ್ತಾರೆ. ಪಪಾ ನ್ಯುಗಿನಿಯಾ ಸುತ್ತಮುತ್ತಲಿನ ದ್ವೀಪಗಳ ಸಮೂಹದಲ್ಲೂ ಕೂಡ ಇದೇ ಬಗೆಯ ಅನುಕೂಲವನ್ನು ಕಂಡುಕೊಳ್ಳಲಾಗಿದೆ. ಭಾರತೀಯ ಪರಂಪರೆಯಲ್ಲೂ ಎಲೆಗಳ ಕಷಾಯವು ಕೀಲು ನೋವು ಹಾಗೂ ಕಿಬ್ಬೊಟ್ಟೆಯ ನೋವು ನಿವಾರಕವಾಗಿ ಬಳಸುತ್ತಾರೆ. ಕೆಲವು ಪ್ರದೇಶಗಳಲ್ಲಿ ಹಲ್ಲು ಮತು ಒಸಡಿನ ರಕ್ಷಣೆಯಲ್ಲೂ ಎಲೆಗಳ ಕಷಾಯವನ್ನು ಬಳಸುತ್ತಾರೆ. ಈ ಎಲ್ಲಾ ಬಹುತೇಕ ಬಳಕೆಗಳಲ್ಲೂ ಎಲೆಗಳನ್ನು ಸಾಧಾರಣವಾಗಿ ಕಷಾಯವಾಗಿ ಬಳಸುವುದನ್ನು ಕಾಣಬಹುದು.
ಸರಳವಾಗಿ ನೀರೊಳಗೆ ಎಲೆಗಳನ್ನು ಕುದಿಸಿ, ಸೋಸಿದ ನೀರನ್ನು ತಲೆಯ ಕೂದಲಿನ ಆರೋಗ್ಯದ ಹಿತಕ್ಕೆ ಬಳಸಬಹುದು. ಚರ್ಮದ ಹಿತಕ್ಕೂ ಆದೀತು. ಕಳೆದ ಶತಮಾನದ ಕೊನೆಯ ದಶಕಗಳಿಂದ ಈಚೆಗೆ ಇಂತಹಾ ಉಪಯೋಗಗಳ ಒರೆಹಚ್ಚಿ ನೋಡುವ ಅಧ್ಯಯನಗಳನ್ನು ಸೀಬೆಯನ್ನೂ ಸೇರಿಸಿ ಇತರೇ ಸಸ್ಯಗಳ ಬಗೆಗೂ ಕಾಣಬಹುದು. ಇವುಗಳು ಸಸ್ಯ ಭಾಗಗಳಲ್ಲಿ ಇರುವ ವಿವಿಧ ರಾಸಾಯನಿಕಗಳ ಹುಡುಕಾಟವನ್ನೂ ಮಾಡಿವೆ. ಸೀಬೆಯಲ್ಲಿ ಹಣ್ಣು, ಹಣ್ಣಿನ ಸಿಪ್ಪೆ, ಎಲೆಗಳು, ತೊಗಟೆಯಲ್ಲಿರುವ ಅನೇಕ ರಾಸಾಯನಿಕಗಳನ್ನು ಪತ್ತೆ ಹಚ್ಚಿದ್ದಾರೆ. ಅವುಗಳಲ್ಲಿ ಟ್ಯಾನಿನ್‌ಗಳು, ಅಮೈನೋ ಆಮ್ಲಗಳು, ವಿಟಮಿನ್ನುಗಳು, ಕೆಲವು ಸ್ಟಿರಾಲ್‌ಗಳೂ ಮುಖ್ಯವಾದವು. ಅವುಗಳದ್ದೇ ದೊಡ್ಡ ಲೋಕ! ಅಷ್ಟೊಂದು ಸಂಕೀರ್ಣವಾದ ರಾಸಾಯನಿಕ ಸಂಗತಿಗಳು ವೈಜ್ಞಾನಿಕ ಪತ್ರಿಕೆಗಳಲ್ಲಿ ಸಿಗುತ್ತವೆ. ಮತ್ತೊಂದು ಬುಹು ಮುಖ್ಯವಾದ ಸಂಗತಿಯೆಂದರೆ ಈ ರಾಸಾಯನಿಕಗಳು ವಿವಿಧ ಜೈವಿಕ ಕ್ರಿಯೆಗಳ ಮೇಲೆ ಉಂಟುಮಾಡುವ ಪರಿಣಾಮಗಳ ಅಧ್ಯಯನಗಳೂ ನಡೆದಿವೆ. ಅವುಗಳು ಮಾನವ ದೇಹದ ಚಯಾಪಚಯ ಕ್ರಿಯೆಗಳ ಮೇಲೆ, ಹೊಟ್ಟೆ ನೋವು, ಪಚನಕ್ರಿಯೆ ಮುಂತಾದವುಗಳ ಪರಿಹಾರವಾಗಿ, ಸೋಂಕು ಉಂಟುಮಾಡುವ ಸೂಕ್ಷ್ಮಜೀವಿಗಳ ನಿಯಂತ್ರಿಸುವ ಕುರಿತು, ಕ್ಯಾನ್ಸರ್ ಕೋಶಗಳ ನಿಯಂತ್ರಣಗಳ ಕುರಿತೂ ಅಧ್ಯಯನಗಳು ನಡೆದಿವೆ.
ಸೀಬೆಯನ್ನು ಅಲಂಕಾರಿಕವಾಗಿ ಬೊನ್ಸಾಯ್ ಮಾಡಿ ಬೆಳೆಸಿರುವ ಉದಾಹರಣೆಗಳೂ ಇವೆ. ಸೀಬೆ ಹಣ್ಣು ಅಂತೂ ಇಷ್ಟೊಂದು ಜನಪ್ರಿಯತೆಯನ್ನು ಪಡೆದು ಲಾಭವನ್ನು ತಂದುಕೊಡುವಲ್ಲಿ ಹೆಸರು ಮಾಡಿದೆ. ಇಡಿಯಾಗಿ ಹಣ್ಣು ಹಲವಾರು ಆಹಾರಾಂಶಗಳನ್ನು ತುಂಬಿಕೊಂಡು ಬಗೆ ಬಗೆಯ ದೈಹಿಕ ಸಮಸ್ಯೆಗಳನ್ನೂ ಕಾಪಾಡುತ್ತಾ ಉಷ್ಣವಲಯದಲ್ಲಿ ಹೆಚ್ಚಿನ ಇಳುವರಿಯನ್ನೂ ಕೊಡುತ್ತಾ ತನ್ನ ಪ್ರಾಮುಖ್ಯತೆಯನ್ನು ಬೆಳೆಸಿಕೊಂಡಿದೆ. ಈಗ ಸೀಬೆಯ ಸೀಸನ್! ಧಾರಾಳವಾಗಿ ಸಿಗುವ ಹಾಗೂ ಹೆಚ್ಚೆನು ದುಬಾರಿಯೂ ಅಲ್ಲದ ಹಣ್ಣನ್ನು ತಿಂದು ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಈಗಂತೂ ಆರೋಗ್ಯ ಭಯದ ವಾತಾವರಣವಿದ್ದು ಉತ್ತಮವಾದ್ದನ್ನು ತಿಂದು, ಚೆನ್ನಾಗಿ ಜೀವನವನ್ನು ನಿಭಾಯಿಸಿಕೊಳ್ಳಬೇಕಾದ ತುರ್ತು ಎಲ್ಲರಿಗೂ ಇದೆ. ಸೀಬೆಯಂತೂ ಸಿದ್ಧವಾಗಿದೆ. ತಿನ್ನಿರಿ, ಆನಂದದ ಜೀವನ ಎಲ್ಲರದ್ದೂ ಆಗಿರಲಿ.
Relax, Be Happy– and Go Guava!
ನಮಸ್ಕಾರ
ಡಾ. ಟಿ. ಎಸ್. ಚನ್ನೇಶ್
ಇಷ್ಟು ಚಂದ ಬರೆಯೋದು ನಿಮಗೆ ಬಿಟ್ಟರೆ ತೇಜಸ್ವಿ ಗೆ ಮಾತ್ರ ಬರೋದು!
ಅರೆರೆ ಆಚಾರ್ಯರೇ, ನೀವು ನನ್ನ ಬಾಯೊಳಗಿನ ಮಾತನ್ನೇ ಆಡಿಬಿಟ್ಟಿರಿ !!!
ನನ್ನದೂ ಅದೇ ಅನಿಸಿಕೆ ಮಾರ್ರೇ!
– ಬಾ.ಹ. ಉಪೇಂದ್ರ
ಪೆರುವಿನ ಕಾಯಿ ಪೇರಲೆ ಕಾಯಿಯಾದ ಬಗೆ ಉತ್ತಮವಾಗಿ ವಿವರಿಸಿದ್ದೀರಿ. ಎಲ್ಲಾ ವಿವರಣೆ ಕಲೆ ಹಾಕಿ ಅದರ ಪ್ರತಿಯೊಂದು ವಿವರವನ್ನೂ ಅತ್ಯುತ್ತಮವಾಗಿ ಕಟ್ಟಿಕೊಟ್ಟಿದ್ದೀರಿ. ಅದಕ್ಕೊಂದು ಥ್ಯಾಂಕ್ಸ್. ಇನ್ನು ಅಲಹಾಬಾದ್ ಸಫೇದ್ ಕಾಯಿ ಕದ್ದು ತಿನ್ನದೇ ಜೀಕೆವೀಕೆ ಯ ಜೀವನ ಅಪೂರ್ಣ.. ಅದನ್ನೊಮ್ಮೆ ನೋಡಿಬಂದರೂ ತಿನ್ನುವ ಆಸೆಯಾಗುತ್ತದೆ. ಅದರ ಇಳುವರಿ ನಂಬಿಕೊಂಡು ಸಂಶೋಧನೆ ಮಾಡಿದವರಿಗೆ ಖಂಡಿತಾ ಗುರಿ ಮುಟ್ಟಲು ಸಾಧ್ಯವಾಗಿರಲಿಕ್ಕಿಲ್ಲ.. ಇನ್ನು ಬೀಜವೇ ಇಲ್ಲದ ಹಣ್ಣು ತಿನ್ನುವಾಸೆ.. ಆಸೆಗೆ ಮಿತಿಯೆಲ್ಲಿ !!