You are currently viewing ಉರಿ  ಬಿಸಿಲಿನಲ್ಲಿ  ಪರಿಮಳದ ತಂಪುನ್ನು ಬೀರುವ  ಮಾವು – Mangifera  indica (ಭಾಗ -1)

ಉರಿ ಬಿಸಿಲಿನಲ್ಲಿ ಪರಿಮಳದ ತಂಪುನ್ನು ಬೀರುವ ಮಾವು – Mangifera indica (ಭಾಗ -1)

ವಾರ್ಷಿಕ ಪರೀಕ್ಷೆಗಳೆಂದರೆ ಓದಿನ ಜೊತೆಗೆ ಬಿಸಿಲಿನಿಂದ ಬೆವರಿಳಿವ ಸಂಕಟ. ಬಾಲ್ಯದಲ್ಲಿ ಪರೀಕ್ಷೆಗಳು ಮುಗಿಯುತ್ತಿದ್ದಂತೆ ರಜೆಗೆ ತೆರೆದುಕೊಳ್ಳುವ ಸಂಭ್ರಮಕ್ಕೆ ಜೊತೆಯಾಗುತ್ತಿದ್ದ ಮಾವಿನ ಪರಿಮಳ ಮಾತ್ರ ಭವಿಷ್ಯದ ನಿರೀಕ್ಷೆಗೆ ಹೊಸತೊಂದು ಪ್ರೀತಿಯನ್ನು ಬೆರೆಸುತ್ತಿತ್ತು. ಬಾಲ್ಯದ ನಮ್ಮ ಶಾಲೆ ಇದ್ದದ್ದೆ ಮಾವಿನ ತೋಪಿನ ಪಕ್ಕದಲ್ಲಿ. ಶಾಲಾ ಆವರಣದಲ್ಲೂ ನಾಲ್ಕಾರು ಮಾವಿನ ಮರಗಳಿದ್ದವು. ಆಗ ಪರೀಕ್ಷೆಯ ಸಮಯದಲ್ಲೇ ಮರಗಳು ಹೂವಾಡುವ ಸಂಭ್ರಮವನ್ನು ನಮ್ಮ ಫಲಿತಾಂಶಗಳ ಜೊತೆ ಸಮೀಕರಿಸಿ ಅನುಭವಿಸುವ ಅರಿವಿಲ್ಲದಿದ್ದರೂ, ಈಗ ನೆನಪಿಸಿಕೊಂಡು ಸಂಭ್ರಮಿಸುತ್ತೇನೆ. ಮಾವಿನ ನೆರಳಲ್ಲೇ ಆಡಿ ಬೆಳೆವ ಅನುಕೂಲವನ್ನು ನಮ್ಮ ಶಾಲೆ ಒದಗಿಸಿತ್ತು.  ಪ್ರತೀ ವರ್ಷ ಮಾವಿನ ಸುಗ್ಗಿಯಲ್ಲಿ ಮನೆಯಲ್ಲೇ ಒತ್ತೆಹಾಕಿದ ರಸಪುರಿ, ಮಲಗೋವಾ, ಬಾದಾಮಿ, ಜೀರಿಗೆ ಮಾವು, ಹೀಗೆ ಯಾವುದಾದರೂ ತಳಿಗಳು ರಜೆಯ ದಿನಗಳಲ್ಲಿ ಆಡುತ್ತಾ ತಿನ್ನುತ್ತಿದ್ದ ಕ್ಷಣಗಳು ಬೇಸಿಗೆಯಲ್ಲಿ ನೆನಪಾಗದಿರದು.

          ಹೂವಾಡುವಾಗ್ಲೇ ಮರ ನೋಡಿ ಮಾರಾಟಕ್ಕೆ ಒಪ್ಪಿಸಿಕೊಳ್ಳುವವರಲ್ಲಿ ಬಹುಪಾಲು ಮುಸಲ್ಮಾನರು. ಮಾವಿಗೂ ಅವರಿಗೂ ಎಲ್ಲಿಲ್ಲದ ನಂಟು, ಅವರೇನು ನೀರು ಕಟ್ಟಿ, ಗೊಬ್ಬರ ಹಾಕಿ ಬೆಳೆಸಿಯೇ ಎಲ್ಲವನ್ನೂ ನಿರ್ಧರಿಸಬೇಕಿಲ್ಲ.  ಆದರೆ ವಹಿವಾಟು ಮಾತ್ರ ಅವರ ಕೈಯಲ್ಲಿಯೇ ಇರೋದಂತೂ ಸುಳ್ಳಲ್ಲ. ರಾಜ್ಯದ ಅನೇಕ ಕಡೆ ಮಾವಿನ ತೋಪುಗಳನ್ನು ಹೂವಾಡುವಾಗಲೇ ನೋಡಿ, ಮೊದಲೇ ಗುತ್ತಿಗೆ ಹಿಡಿದು, ಕಾವಲು ಕಾಯುತ್ತಾ ಮಾರಾಟದ ಕೆಲಸಗಳನ್ನು ಮುಸಲ್ಮಾನ ಕುಟುಂಬಗಳು ನಿಭಾಯಿಸುತ್ತಿವೆ. ಮಾವಿನ ಪರಿಮಳದ ಲಾಭ-ನಷ್ಟಗಳ ವಾಸನೆ ಹಿಡಿಯುವುದು ಶತಮಾನಗಳಿಂದಲೂ ಚರಿತ್ರೆಯಲ್ಲಿ ದಾಖಲಾಗಿದೆ. ನಮ್ಮ ದೇಶಕ್ಕೆ ದಂಡುಕಟ್ಟಿಕೊಂಡು ಬಂದ “ಬಾಬರ್” ಕೂಡ ಇಲ್ಲಿನ ಮಾವಿನ ಪ್ರಸಿದ್ಧಿಯನ್ನು ಮೋಹಿಸಿ ಬಂದವನೇ!

                ಬಾಬರ್‍ ತನ್ನ ಆತ್ಮಕಥೆ “ಬಾಬರ್ ನಾಮ”ದಲ್ಲಿ ವರ್ಣಿಸಿದ ಮಾವಿನ ಮರದ ವಿವರಗಳು ಚಿತ್ರಗಳ ಸಹಿತವಾಗಿದ್ದು ಭಾರತೀಯ ಕೃಷಿ-ತೋಟಗಾರಿಕಾ ಇತಿಹಾಸದ ಮಹತ್ವ ದಾಖಲೆಯಾಗಿವೆ.  ಭಾರತಕ್ಕೆ ಬಂದ ಆತ ಇಲ್ಲಿನ ಮಾವಿನ ಮರದಲ್ಲಿ ಬಿಟ್ಟ ಹಣ್ಣುಗಳನ್ನು ಎಣಿಸಿ, ನಾಲ್ಕಾರು ನೂರು ಹಣ್ಣುಗಳಿರುವ ಮರಗಳನ್ನು ತಾನು ಕಂಡ ಬಗ್ಗೆ ಬರೆದಿಟ್ಟ ಆತನ ವಿವರಗಳನ್ನು ನಮ್ಮ ದೇಸಿ ವ್ಯವಸಾಯದ ಹಿರಿಮೆಯನ್ನು ಹೇಳಿಕೊಳ್ಳಲು “ಸಾವಯವ ಚಿಂತಕ”ರು  ಬಳಸಿಕೊಳ್ಳುತ್ತಾರೆ.  ಜೊತೆಗೆ ಸಂತ ಕವಿ ಅಮೀರ್ ಖುಸ್ರೋ ಕೂಡ “ಮಾವಿನ ಹಣ್ಣು” ಬೆಳೆಯುವ ನೆಲವನ್ನು ಸ್ವರ್ಗವೆಂದೇ ಕರೆದಿದ್ದಾರೆ. ನಿಜಕ್ಕೂ ಮಾವು ಅಖಂಡ ಭಾರತೀಯ ಹಣ್ಣು. ನಮ್ಮ ದೇಶ ಹಾಗೂ ಪಾಕಿಸ್ಥಾನ, ಜೊತೆಗೆ ಬಾಂಗ್ಲಾಕ್ಕೂ ರಾಷ್ಟ್ರೀಯ ಹಣ್ಣು. ಇಂಡಿಯಾ-ಪಾಕ್ ಎರಡೂ ಮಾವನ್ನು ರಾಷ್ಟ್ರೀಯ ಹಣ್ಣು ಎಂದು ಗುರುತಿಸಿದ್ದರೆ, ಬಾಂಗ್ಲಾ ರಾಷ್ಟ್ರೀಯ ಮರ ಎಂದು ಕರೆದಿದೆ.   

                ಮಾವಿನ ಸ್ವರ್ಗವನ್ನು ಬಯಸಿ ಭಾರತಕ್ಕೆ ಬಂದ ಬಾಬರ್‍ ನ ಮೊಮ್ಮೊಗ ಅಕ್ಬರ್ ಕೂಡ ಅಜ್ಜನಂತೆ ಮಾಹಾನ್ “ಮಾವು ಪ್ರೇಮಿ”. ಒಂದು ಲಕ್ಷಕ್ಕೂ ಹೆಚ್ಚು ಮಾವಿನ ಮರಗಳನ್ನು ಅಕ್ಬರ್ ನೆಡಿಸಿದ್ದ ಬಗ್ಗೆ ವಿವರಗಳು ಸಿಗುತ್ತವೆ. ಉತ್ತರ ಬಿಹಾರಿನ “ದರ್ಬಾಂಗ್” ಎಂಬಲ್ಲಿ ಅಕ್ಬರ್ ಮಾವಿನ ತೋಪುಗಳನ್ನು ನೆಡಿಸಿದ್ದನಂತೆ. ಈಗಲೂ ಆ ಪ್ರದೇಶವನ್ನು “ಲಖಿಯಾ ಬಾಗ್” ಎಂದು ಕರೆಯಲಾಗುತ್ತದೆ. ಮಾವಿನ ಪ್ರೀತಿಯನ್ನು ಪ್ರತಿಷ್ಠಾಪಿಸುವಲ್ಲಿ ಮೊಗಲರ ಪ್ರಯತ್ನಗಳು ಬಹಳ ಹೆಸರುವಾಸಿ. ಈಗಲೂ ಮುಸಲ್ಮಾನರೇ ಮಾವಿನ ಬಲು ದೊಡ್ಡ ವಹಿವಾಟುದಾರರು.

                ನಮ್ಮ ದೇಶದ ಮೇಘಾಲಯದ “ದಮಲಗಿರಿ”ಯ ಆಸು ಪಾಸಿನ ದಟ್ಟ ಕಾಡುಗಳಲ್ಲಿ ಸಿಕ್ಕ ಸುಮಾರು 60ದಶಲಕ್ಷ ವರ್ಷಗಳ ಹಿಂದಿನ ಮಾವಿನ ಪಳೆಯುಳಿಕೆ”ಯೇ ಅತ್ಯಂತ ಹಳೆಯದು.  ಜಗತ್ತಿನಲ್ಲಿ ಇಂದು ಎಲ್ಲೇ ಕಾಣಬರುವ ಮಾವು, ನಮ್ಮ ದೇಶದ ನೆಲದ ಪರಿಮಳವನ್ನೇ ಬೀರುತ್ತಿದೆ. ಸಾಹಿತ್ಯಿಕ ದಾಖಲೆಗಳಲ್ಲಿ ಬೃಹದಾರಣ್ಯಕ ಉಪನಿಷತ್ತಿನಿಂದಲೂ ಮಾವಿನ ವಿವರಗಳಿವೆ. “ಅಮ್ರ” ಪದ ಅಲ್ಲಿನದೇ! ಯೂರೋಪಿಗೆ ಪೋರ್ಚುಗೀಸರು ಮಾವನ್ನು ಪರಿಚಯಿಸುವುದರ ಮೂಲಕ ಮಾವು ಜಾಗತಿಕವಾಗಿದೆ ಎಂಬ ವಿವರಗಳಿದ್ದರೂ, ಬುದ್ದನ ಕಾಲದಲ್ಲಿ ಆತನ ಅನುಯಾಯಿ ಬೌದ್ಧ ಸಂತರು ಭಾರತದಾಚೆ ಏಶಿಯಾದಲ್ಲಿ ಹರಡಿದ್ದಂತೂ ನಿಜ. ಬುದ್ಧ ಕೂಡ ಮರಗಳ ಅಡಿಯಲ್ಲಿ ಕುಳಿತು ಮತ್ತು ಮಾವಿನ ಹಣ್ಣುಗಳ ಬಳಸಿಯೇ ಪವಾಡಗಳನ್ನು ಮಾಡಿದ ಸಾದೃಶ್ಯಗಳನ್ನು ಜಾತಕ ಕಥೆಗಳು ಹೇಳುತ್ತವೆ.   

                ಮನುಕುಲದ ಇತಿಹಾಸದಲ್ಲಿ ನಮ್ಮ ನಾಲಿಗೆಯ ರುಚಿ ಮತ್ತು ಅಡಿಗೆ ಮನೆಯ ವೈಭವವನ್ನು ವಿಸ್ತರಿಸಿದ ಕೀರ್ತಿಯು 15 ಮತ್ತು 16ನೆಯ ಶತಮಾನಕ್ಕೆ ಸಲ್ಲುತ್ತದೆ. ಆಗಲೇ ಹೊಸ ಪ್ರಪಂಚವು ಪರಿಚಯಗೊಂಡು ನೂರಾರು ತಿನ್ನಬಹುದಾದ ಗಿಡಮರಗಳು ನಮ್ಮ ಅಡುಗೆಯ ಮನೆಯನ್ನು ಹೊಕ್ಕವು. ಪೂರ್ವ-ಪಶ್ಚಿಮದ ನಾಲಿಗೆಯ ರುಚಿಗಳ ಅಪೂರ್ವ ಸಂಗಮವಾಗಿದ್ದು ಆಗಲೇ. ಅಂತಹಾ ಸುಮಹೂರ್ತದಲ್ಲಿಯೇ ಮಾವೂ ಕೂಡ ಪಶ್ಚಿಮಕ್ಕೆ ತಲುಪಿತು. ಇಂಗ್ಲೀಶಿನ ಮ್ಯಾಂಗೊ ಪದವನ್ನು ಮಲೆಯಾಳಂನ “ಮಾಂಗಾ”ದಿಂದ ಪೋರ್ಚುಗೀಸರು ಸೃಜಿಸಿದರು. 15 ಮತ್ತು 16ನೆಯ ಶತಮಾನದ ಸಾಂಬಾರು ಪದಾರ್ಥಗಳ ವಹಿವಾಟಿಗೆ ದೇಶದ ಪಶ್ಚಿಮ ತೀರವು ತೆರೆದುಕೊಂಡಿದ್ದರಲ್ಲಿ ಕೇರಳದ ಪಾಲು ಹಿರಿದು. ಪೋರ್ಚುಗೀಸರ ಮೂಲಕ ಯೂರೋಪು ಸೇರಿದ “ಮ್ಯಾಂಗೊ”  ಅಕ್ಷರಗಳಲ್ಲಿ ಮೊದಲು ದಾಖಲಾಗಿದ್ದು ಇಟಾಲಿಯನ್ ಭಾಷೆಯಲ್ಲಿ.     

                ಇಟಲಿಯ ಲಿಡಿವಿಕೊ ಡಿ’ ವರ್ತಮಾ ಎಂಬ ಪ್ರವಾಸಿ, ಬರಹಗಾರ, ಪಂಡಿತ ಮೊಟ್ಟ ಮೊದಲು ಮೆಕ್ಕಾವನ್ನು ಹೊಕ್ಕ ಮುಸಲ್ಮಾನೇತರ ಐರೋಪ್ಯ. ಆತನ ಬರಹಗಳಲ್ಲಿ  ಮೊಟ್ಟ ಮೊದಲು “ಮ್ಯಾಂಗೊ” ಪದ 1510ರಲ್ಲಿ ಕಾಣಿಸಿಕೊಂಡಿತು. ಆತನ ಆಸಕ್ತಿಯ ತಿರುಗಾಟಗಳಲ್ಲಿ ಭಾರತವೂ ಸೇರಿತ್ತು. 1504 ಮತ್ತು 1506ರ ನಡುವೆ ಭಾರತಕ್ಕೆ ಭೇಟಿಯಿತ್ತ ವರ್ತಮಾ, ಕರ್ನಾಟಕದ ಬಿಜಾಪುರ, ವಿಜಯನಗರ ಭಟ್ಕಳ ಮುಂತಾದೆಡೆಗಳಲ್ಲಿ ದಿನಗಳನ್ನು ಕಳೆದಿದ್ದಾರೆ.  ಶ್ರೀಲಂಕಾ, ಸೇರಿದಂತೆ ಮಧ್ಯಪ್ರಾಚ್ಯ ದೇಶಗಳಲ್ಲಿ ಅಲೆದಾಡಿದ ಆತನ ಮೂಲಕ “ಮ್ಯಾಂಗೊ” ಪದ ಪ್ರಚಲಿತಕ್ಕೆ ಬಂತು. ಮುಂದೆ ಮಲಬಾರಿನ ಗಿಡ-ಮರಗಳ ವ್ಯವಸ್ಥಿತ ದಾಖಲೆಯಾದ “ವಾನ್ ರೀಡ್‍” ಅವರ “ಹಾರ್ಟಸ್ ಮಲಬಾರಿಕಸ್”ನಲ್ಲಿ 1678ರಲ್ಲಿ ಬಳಕೆಯಾಯಿತು. ಮುಂದೆ ಪೋರ್ಚುಗೀಸರಿಂದಲೇ ಆಫ್ರಿಕಾ ಹಾಗೂ ಬ್ರೆಜಿಲ್ ಅನ್ನು ಹೊಕ್ಕ ಮಾವು ಅಮೆರಿಕಾದಲ್ಲೂ ನೆಲೆಯನ್ನು ಕಂಡಿದೆ. ಮಾವು ಮೊದ ಮೊದಲು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ರಫ್ತಾಗುವಾಗ, ಇಡಿಯಾಗಿ ಕಳುಹಿಸಲು, ತಂಪುಕಾರಕ ವ್ಯವಸ್ಥೆಗಳಿಲ್ಲದೆ ಉಪ್ಪಿನಕಾಯಿಗಳಾಗಿಸಿ ಕಳುಹಿಸಲಾಗುತ್ತಿತ್ತು. ಹಾಗಾಗಿ “ಮ್ಯಾಂಗೊ” ಎಂದರೇನೆ ಉಪ್ಪಿನಕಾಯಿಯಾಗುವ ಎನ್ನುವ ಕ್ರಿಯಾ ಪದದ ಅರ್ಥವಿತ್ತು. ಪಶ್ಚಿಮದ ಜನರಿಗೆ ಮ್ಯಾಂಗೊ ತಿಳಿವಳಿಕೆಯಾಗಿದ್ದೇ ಉಪ್ಪಿನಕಾಯಿಯಾದ್ದರಿಂದಾಗಿ ಹಾಗಾಗಿತ್ತು. ಇಂದಿಗೂ ಉಪ್ಪಿನಕಾಯಿಯಲ್ಲಿ ಮಾವು ವಿಶೇಷ ಸ್ಥಾನವನ್ನೇ ಗಳಿಸಿದೆ.  

                ಸಸ್ಯವಿಜ್ಞಾನಿ ಕಾರ್ಲ್‍ ಲಿನೆಯಾಸ್ ಮಾವಿಗೆ ಮಾಂಜಿಫೆರಾ ಇಂಡಿಕಾ (Mangifera indica) ಎಂದು 1753ರಲ್ಲಿ ನಾಮಕರಣ ಮಾಡಿ, ಅನಕಾರ್ಡಿಯೇಸಿಯೇ(Anacardiaceae) ಸಸ್ಯಕುಟುಂಬವನ್ನು ಸೇರಿಸಿದರು. ಗೋಡಂಬಿ ಕೂಡ ಇದೇ ಕುಟುಂಬದ ಸದಸ್ಯ. ಈ ಕುಟುಂಬದ ಬಹು ಪಾಲು ಗಿಡಗಳು, ನಿತ್ಯ ಹಸಿರಾಗಿದ್ದು, ಸದಾ ಹಸಿರಾದ ಮಾವು ಮತ್ತು ಗೋಡಂಬಿ ಮರಗಳನ್ನು ನಾವು ಕಾಣುತ್ತೇವೆ. ಮಾವಿನ ಎಲೆಗಳು ವಿಶೇಷವಾದವು ಹಾಗೂ ಅವುಗಳ ಉದುರುವ ಪ್ರಕ್ರಿಯೆಯು ಕೂಡ ಆವರ್ತಗಳನ್ನು ಅನುಸರಿಸುತ್ತದೆ. ಹಾಗಾಗಿ ಎಳೆಯ ಮಾವಿನ ಎಲೆಗಳ ಜೊತೆಯಲ್ಲೆ ಸ್ವಲ್ಪ ಮಟ್ಟಿಗಿನ ಬಲಿತವೂ ಇರುವುದುಂಟು. ವರ್ಷಕ್ಕಿಂತಲೂ ಹೆಚ್ಚು ಕಾಲ ಎಲೆಗಳು ಮರದಲ್ಲಿರುತ್ತವೆ. ಬೇಸಿಗೆಯ ಆರಂಭಕ್ಕೆ ಹೊಸ ತಳಿರು ಮರಕ್ಕೆ ಸೊಗಸಾದ ನೋಟವನ್ನು ಕೊಡುತ್ತದೆ. ಈ ತಳಿರಿಗೆ ಆಕರ್ಷಿತವಾಗುವುದರಿಂದ ಕೋಗಿಲೆಯ ಕಂಠವು ಇಂಪಾಗುವುದೆಂಬ ಕುವೆಂಪು ರಚನೆಯ ಹಾಡನ್ನು ಗಾಯಕ ಮನ್ನಾಡೆ ಅವರ ದನಿಯಲ್ಲಿ ಕೇಳಿರುತ್ತೀರಿ. ಹೊಸ ಚಿಗುರಿನ ಜೊತೆಯಲ್ಲೇ ಮಾವಿನ ಹೂವುಗಳೂ ಬೇಸಿಗೆಯನ್ನು ಹಿತವಾಗಿಸುವ ಸುವಾಸನೆಯನ್ನು ಹರಡುತ್ತಿರುತ್ತವೆ. ಬಡಾವಣೆಗಳಲ್ಲಂತೂ ಯಾವುದಾದರೂ ಮಾವಿನ ಮರವಿದ್ದರೆ ಹೂವಾಡುವ ಸಮಯದ ಸಂಜೆಗಳು ಇಡೀ ಬೀದಿಯನ್ನು ಮಾವಿನ ಹೂವಿನ ಸುಗಂಧವನ್ನು ತುಂಬಿಕೊಂಡಿರುತ್ತವೆ. ಮಾವಿನ ಚಿಗುರಿಗೆ, ಎಲೆಗಳಿಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾದ ಸ್ಥಾನವಿದೆ. ಚಿಗುರನ್ನು ತಂದು ತೋರಣ ಕಟ್ಟದೇ ನಮ್ಮ ಸಂಸ್ಕೃತಿಯ ಹೊಸ ವರ್ಷದ ಆಗಮನವಾಗದು. ಯುಗಾದಿಯ ತಳಿರಲ್ಲಿ ಬೇವಿನ ಜೊತೆಗೆ ಮಾವು ಬಾಗಿಲಿನ ಅಂದಕಟ್ಟುತ್ತದೆ. ಅಷ್ಟೇಕೇ, ಪ್ರತೀ ಹಬ್ಬಗಳೂ ಮಾವಿನ ಎಲೆಗಳ ತೋರಣವನ್ನು ಬಯಸುತ್ತವೆ. ಮಾವಿನ ಬಲಿತ ಎಲೆಗಳನ್ನು ಕೈಯಲ್ಲಿ ಹಾಕಿ ಉಜ್ಜಿದಾಗ ಬರುವ ಪರಿಮಳ “ಟರ್ಪಂಟೈನ್” ವಾಸನೆಯುನ್ನು ಹೋಲುತ್ತದೆ. ಆ ಪರಿಮಳಕ್ಕೆ ಕಾರಣ “ಮ್ಯಾಂಜಿಫೆರಿನ್” ಎಂಬ ರಾಸಾಯನಿಕ. ಇದು ಒಂದು ಇಂಗಾಲದ ಸಂಯುಕ್ತ. ಈ ರಾಸಾಯನಿಕವು ವಿವಿಧ ತಳಿಗಳಲ್ಲಿ ವಿವಿಧ ಬಗೆಯಲ್ಲಿತೀರಾ ಕಡಿಮೆ ಇರುವುದುಂಟು.

                ಮಾವಿನ ಹೂವುಗಳ ಕಥನವಂತೂ ವಿಶೇಷವಾಗಿದೆ. ದಟ್ಟ ಹಸಿರಿನ ಎಲೆಗಳ, ರೆಂಬೆ-ಕೊಂಬೆಗಳ ನಡುವೆ ಕಂದು ಮಿಶ್ರಿತ ಹಳದಿ, ಕೆಂಪು, ನೇರಳೆ ಹೀಗೆ ವೈವಿಧ್ಯಮಯ ಬಣ್ಣಗಳ ಹೂವುಗಳ ಸಾಮ್ರಾಜ್ಯ ಸಾಮಾನ್ಯವಾಗಿ ಡಿಸೆಂಬರ್-ಜನವರಿಯಿಂದಲೇ ಪ್ರಾರಂಭವಾಗುತ್ತದೆ. ದಟ್ಟ ಬಿಸಿಲಿನ ಒಣ ವಾತಾವರಣದಲ್ಲಿ ಇದು ಕಂಡುಬರುತ್ತದೆ. ಉತ್ತರ ಭಾರತದ ಹಲವು ಕಡೆಗಳಲ್ಲಿ ಜನವರಿ-ಫೆಬ್ರವರಿಯಿಂದ, ಕೆಲವು ಕಡೆ ಮಾರ್ಚ್‍  ತಿಂಗಳಲ್ಲಿ ಹೂವಾಡುತ್ತವೆ. ಹೂಬಿಡುವಿಕೆಯಲ್ಲಿ ಮಾವಿನದು ತುಂಬಾ ವೈವಿಧ್ಯತೆಯನ್ನು ವಿಕಾಸಗೊಳಿಸಿಕೊಂಡಿದೆ. ಹೆಚ್ಚೂ ಕಡಿಮೆ ಹತ್ತು ವರ್ಷದೊಳಗಿನ ಮರಗಳು ಪ್ರತೀ ವರ್ಷ ಹೂವನ್ನು ಬಿಡುತ್ತವೆ. ಅದರ ನಂತರದಲ್ಲಿ ಬಹುಪಾಲು ತಳಿಗಳು ಎರಡು ವರ್ಷಕ್ಕೊಮ್ಮೆ ಹೂಬಿಡುವುದಕ್ಕೆ ಆರಂಭಿಸುತ್ತವೆ. ಕೆಲವು ಮರಗಳಲ್ಲಿ ಕೆಲವೊಂದು ಕೊಂಬೆಗಳಲ್ಲಿ ಮಾತ್ರವೇ ಹೂಗಳಿದ್ದು, ಕೆಲವೊಂದರಲ್ಲಿ ಹೂವೇ ಇರುವುದಿಲ್ಲ. ಹೀಗೆ ಮರವು ಜಾಣತನದಿಂದ ಹೂಬಿಡುವ, ಬಿಡದಿರುವಿಕೆಯನ್ನು ರೂಢಿಸಿಕೊಂಡಿದ್ದು, ವಿಶ್ರಾಂತಿಯನ್ನು ಬಯಸುತ್ತದೆ. ಈ ಕಾಲದಲ್ಲಿ ಸಾಕಷ್ಟು ಕಾಣುವ ಹೂವಗಳೆಲ್ಲವೂ ಹಣ್ಣಾಗಿದ್ದರೆ ಮರವು ಬಿದ್ದೇ ಹೋಗುತ್ತಿತ್ತು. ಎಲ್ಲಾ ಹೂವುಗಳೂ ಕಾಯಿಕಟ್ಟುವುದಿಲ್ಲ. ಕೆಲವೊಂದು ತಳಿಗಳಲ್ಲಿ ಒಂದೊಂದು ಬಗೆಯ ಹೂ-ಕಾಯಾಗುವ ಲಕ್ಷಣವನ್ನು ಮಾವು ಹೊಂದಿದೆ. ಮಾವಿನಲ್ಲಿ ಸಮಸ್ಯೆ ಇರುವುದೇ ಹೂವು-ಕಾಯಾಗುವಿಕೆಯಲ್ಲಿ.

                ಮಾವಿನ ತಳಿರಿನ-ಹೂಗೊಂಚಲನ್ನು ನಲ್ಲ-ನಲ್ಲೆಯರ ಪ್ರೀತಿಯ ರೂಪಕವಾಗಿಸಿ ಕವಿಗಳು ಹಾಡಿದ್ದರೂ, ಮಾವು ಮಾತ್ರ ತನ್ನೊಳಗೇ ಪ್ರೀತಿಯಿಂದ ವಂಚಿತವಾಗಿ ಕಾಯಿಕಟ್ಟದ ಪರಿಸ್ಥಿತಿಯಲ್ಲಿದೆ. ಹೂಗೊಂಚಲುಗಳು 3ರಿಂದ 40ಸೆಂ.ಮೀ ಇರುವುದುಂಟು. ಉದ್ದವಾದ ಗೊಂಚಲುಗಳಲ್ಲಿ 500ರಿಂದ 6000 ಹೂಗಳಿರುತ್ತದೆ. ಅವುಗಳಲ್ಲಿ ಪ್ರತಿಶತ 1ರಷ್ಟು ಹೂವುಗಳು ಕಾಯಾದರೆ ಹೆಚ್ಚು. ಒಟ್ಟು ಹೂವುಗಳಲ್ಲಿ ಶೇ70-75 ರಷ್ಟು ಮಾತ್ರವೇ ಗಂಡು-ಹೆಣ್ಣು ಭಾಗಗಳನ್ನು ಹೊಂದಿರುವ ಹೂಗಳು ಉಳಿದ ಕಾಲುಭಾಗ ಬರೀ ಗಂಡು ಹೂಗಳು. ಗಂಡು ಭಾಗಹೊಂದಿರುವ ಜೊತೆಗಾರ ಹೂವುಗಳಲ್ಲಿ ಮುಕ್ಕಾಲು ಭಾಗ ಗಂಡುಗಳು ಸಂತಾನೋತ್ಪತ್ತಿಯಲ್ಲಿ ಭಾಗವಹಿಸವು. ಹೂವಿನ ಗಂಡು ಭಾಗವಾಗಿರುವ ನಾಲ್ಕು ಸ್ಟೇಮನ್‍ ಗಳಲ್ಲಿ ಒಂದು ಮಾತ್ರವೇ ಫಲವಂತ. ಉಳಿದ ಮೂರು ಉಪಯೋಗಕ್ಕೆ ಬಾರವು. ಕೆಲವು ಮರದ ಹೂವಿನ ಗಂಡು-ಹೆಣ್ಣುಗಳಲ್ಲಿ ಸಾಮರಸ್ಯವೇ ಇರದು. ಮಾವಿನ ಪರಾಗಸ್ಪರ್ಶಕ್ಕೆ ಜೇನುಗಳೂ ಹೆಚ್ಚು ಬರುವುದಿಲ್ಲ. ಕೆಲವು ಹಕ್ಕಿಗಳು, ಬಾವಲಿಗಳು ಪರಾಗ ಹೊತ್ತು ಹಂಚುತ್ತವೆ. ಮೈಯೆಲ್ಲಾ ಹೂವು ತುಂಬಿಕೊಂಡು ಸಿಂಗರಗೊಂಡ ಮರದ ನೋಟದಲ್ಲಿರುವ ಸಂಭ್ರಮ, ಪರಾಗಸ್ಪರ್ಶವಾಗಿ ಗರ್ಭಧರಿಸುವುದರಲ್ಲಿ ಇಲ್ಲ. 

                ಮಾವಿನ ಹೂಗಳೆಲ್ಲಾ ಕಾಯಾಗುವ ಪ್ರೀತಿಯಲ್ಲಿ ವಂಚನೆಗೊಂಡಿದ್ದರೂ, ಮಾವಿನ ತಳಿಗಳ ವೈವಿಧ್ಯತೆ ಸಂಭ್ರಮದಲ್ಲಾಗಿಲ್ಲ. ಜಗತ್ತಿನಲ್ಲಿ 500ಕ್ಕೂ ಹೆಚ್ಚು ವಿಖ್ಯಾತ ತಳಿಗಳಿವೆ. ಜಗತ್ತಿನಲ್ಲೇ ಅತ್ಯಂತ ಜನಪ್ರಿಯ ಹಾಗೂ ಹೆಚ್ಚು ಬೆಲೆಯ ಆಲ್ಫಾನ್ಸೊಗೆ ಹೆಸರು ಬಂದದ್ದರಲ್ಲೇ ವಿಶೇಷವಿದೆ. ಆಲ್ಫಾನ್ಸೊ  ಜೊತೆಗೆ ನೂರಾರು ತಳಿ ವೈಭವದ ಸಾಂಸ್ಕೃತಿಕ, ವೈಜ್ಞಾನಿಕತೆ ಹಾಗೂ ಹೆಸರು ಮಾಡಿದ ಮರಗಳ ಕುರಿತು ಮುಂದಿನವಾರ ನೋಡೋಣ! ನಮಸ್ಕಾರ… ಚನ್ನೇಶ್

This Post Has One Comment

  1. Krishnamurthy B S

    ನಿಮ್ಮ ಬರಹಗಳನ್ನು ಓದುವುದೇ…ಒಂದು ಅಧ್ಭುತ ಅನುಭವ…ವಿಚಾರಗಳಿಗೆ, ಚಿಂತನೆಗಳಿಗೆ,ಹೊಚ್ಚ ಹೊಸತನದ ವೈವಿಧ್ಯಮಯ ಕಲ್ಪನೆ ಗಳಿಗೆ ಅಡಿಪಾಯ.. ನಿಮಗೆ ನನ್ನ ಅಗಣಿತ ನಮನಗಳು…

Leave a Reply