You are currently viewing ಉರಿ ಬಿಸಿಲಿಗೆ ಛಾವಣೆಯ ಹರಡಿ ತಂಪನೀವ ಹೊಂಗೆ – Pongamia pinnata

ಉರಿ ಬಿಸಿಲಿಗೆ ಛಾವಣೆಯ ಹರಡಿ ತಂಪನೀವ ಹೊಂಗೆ – Pongamia pinnata

ನನ್ನ ಮನೆಯ ಕಾಂಪೌಂಡಿಗೆ ಆತುಕೊಂಡ ಹಾಗೆ ರಸ್ತೆಯ ಬದಿಯಲ್ಲಿ ಒಂದು ಹೊಂಗೆ ಮರವಿದೆ. ಕಳೆದ ಹತ್ತಾರು ವರ್ಷಗಳಿಂದಲೂ ದಿನವೂ ಅದರ ಛಾವಣೆಯ ನೆರಳನ್ನು ಹಾದು ಮನೆಯೊಳಗೆ ಹೋಗುವ ಸುಖವನ್ನು ಅನುಭವಿಸಿದ್ದೇನೆ.  ಕಳೆದ ಕೆಲದಿನಗಳಿಂದ ಇವತ್ತಿನ ತನಕ ಅದು  ನನ್ನನ್ನೇ ನೋಡುತ್ತಾ  ಅಣಕಿಸುತ್ತಿದ್ದಂತೆ ಅನಿಸುತ್ತಿತ್ತು. ಅದರಿಂದ ಬೀಸುವ ತಂಗಾಳಿಯಲ್ಲಿ  “ನಾನು ನಿನಗೇನು  ಕಂಡಿಲ್ಲವಾ” ಎಂಬ ಧ್ವನಿಯು ನನ್ನ ಕಿವಿಗಷ್ಟೇ ಕೇಳಿಸುತ್ತಿತ್ತು. ದಿನವೂ ಅದರ ಛಾವಣೆಯಿಂದ ಇಳಿ ಬಿದ್ದ ಎಲೆಯ ಸರಮಾಲೆಯನ್ನು ತಾಕಿಸಿಕೊಂಡು ಬರುವ  ಹಿತವನ್ನೇ ಅದು ತನ್ನ ಪ್ರೀತಿಯ ಪ್ರತಿಭಟನೆಯಂತೆ ತೋರುತ್ತಿತ್ತು.  ಅದಕ್ಕೆ ಪ್ರತಿದ್ವನಿಸುವಂತೆ ಗೆಳೆಯ ಪ್ರೊ. ವೆಂಕಟೇಶ್ ಕಳೆದ ವಾರದಿಂದ ಮನೆಗೆ ಬಂದಾಗೆಲ್ಲಾ ಯುಗಾದಿಗೆ ಬೇವು-ಮಾವುಗಳ ಜೊತೆಗೆ ಹೊಂಗೆಗೂ ಪಾಲಿದೆ, ಎಂದು ಎಚ್ಚರಿಸುತ್ತಿದ್ದರು.  ಜತೆಗೆ ದಿನವೂ ಸುರಿವ ಅದರ ರಾಶಿ ರಾಶಿ ಹೂವುಗಳ ನೆನೆದು, ಎಲ್ಲವೂ ಉದುರುವಂತೆ ಕಾಣುವ ಅದರಲ್ಲಿ ಕಾಯಾಗುವ ಬಗೆಗೆ ವಿಸ್ಮಯದಿಂದ ವಿಚಾರಿಸುತ್ತಲೂ ಇದ್ದರು.  ಜೀವಪರ ಕಾಳಜಿಯಿರುವ ಇಲೆಕ್ಟ್ರಾನಿಕ್ಸ್ ವಿದ್ಯಾರ್ಥಿಯಾದ ಅವರಿಗೂ, ಎದುರಲ್ಲೇ ದಿನವೂ ಕಾಣುವ ಹೊಂಗೆಗೂ ಸಮಾಧಾನಿಸುವ ಜರೂರು ಸಸ್ಯಯಾನಕ್ಕೆ ಖಂಡಿತಾ ಇದೆ. ಯುಗಾದಿಯ ಮರುದಿನವೇ ಮನೆಯ ಮುಂದೆ ಸುರಿದ ಹೊಂಗೆಯ ಹೂವಿನ ರಾಶಿ, ನೆಲವನ್ನಾವರಿಸಿ ಮತ್ತಷ್ಟು ಒತ್ತಾಯವನ್ನೂ  ತಂದಿದೆ.

            ಈಗಂತೂ ರಾಜ್ಯದಲ್ಲಿ ಎಲ್ಲೆಲ್ಲಿ ಹೊಂಗೆಯ ಮರಗಳಿದ್ದಾವೂ ಅವೆಲ್ಲವೂ ಹಸಿರುಟ್ಟು, ಹೂಮುಡಿದು ವಸಂತ ಆಗಮಿಸಿದ್ದನ್ನು ಸಾದರ ಪಡಿಸುತ್ತಲೇ ಇವೆ.  ಅರೆ ಕ್ಷಣ ಹೊಂಗೆಯ ನೆರಳಿಗೆ ನಿಂತರೂ ಪಟ್, ಪಟ್ ಎಂದು ಹೂವು ಬೀಳುವ ಸದ್ದನ್ನು ಕೇಳದಿರುವುದು ಅಪರೂಪ. ಬಿಳಿಯಿಂದ ಪಿಂಕ್ ಹೊದ್ದ ಕೆಂಪು ಬಣ್ಣದ ಹೂವುಗಳು ಉದುರುತ್ತಲೇ ಇರುವ ಸೋಜಿಗವನ್ನು ಅರೇ ಹೌದಲ್ಲಾ… ಹೂವು ಕಾಯಾಗ ಬೇಡವೇ…ಮೊಗ್ಗೇ ಉದುರುವಂತೆ ಕಾಣುತ್ತಿದೆ, ಎನ್ನಿಸಿದರೂ ಅಚ್ಚರಿಯಲ್ಲ. ಯುಗಾದಿಯ ನಂತರದ  ಈ ದಿನಗಳಲ್ಲಿ ಹೊಂಗೆಯ ಚೆಲುವನ್ನು ಆಸ್ವಾದಿಸುವುದೇ ಅಪ್ಯಾಯಮಾನ. ನೆರಳಿನ  ಆಹ್ಲಾದಕತೆಯನ್ನು ವರ್ಣಿಸಲು ಅಕ್ಷರಗಳಿಗಾಗದು. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಹೊಂಗೆಯ ಸಂಭ್ರಮ ಒಂದು ಕೈ ಮೇಲು. ಅಪ್ಪಟ ಬಿಸಿಲಿನಲ್ಲಿ ಹೊಸ ಚಿಗುರನ್ನೇ ಮೈತುಂಬಾ ಹೊದ್ದು ಛಾವಣೆಯನ್ನು ಆಗಸಕ್ಕೆ ಹರಡಿಕೊಂಡಿರುತ್ತದೆ. ಚಾವಣಿಯಿಂದ ಇಳಿಬಿದ್ದ ಎಲೆಗಳ ಸರಮಾಲೆಗಳು ಮಾತ್ರ ಬೀಸುವ ಗಾಳಿಗೆ ಜೋಕಾಲಿಯಾಡುತ್ತಾ ಮರದಡಿಯ ಉಲ್ಲಾಸವನ್ನು ಹೆಚ್ಚಿಸುತ್ತವೆ.  

            ಹೊಂಗೆಯ ಮರಕ್ಕೆ ಕಾರ್ಲ್‍ ಲಿನೆಯಾಸ್ ಅವರಿಟ್ಟ ವೈಜ್ಞಾನಿಕ ಹೆಸರು ಪೊಂಗಾಮಿಯಾ ಪಿನ್ನಾಟ (Pongamia pinnata).  ಜೀವಿವಿಜ್ಞಾನದಲ್ಲಿ ಹೆಸರಿಸುವ, ಬದಲಾಯಿಸುವ ಸಂಗತಿಗಳು ನಡೆಯುತ್ತಲೇ ಇರುತ್ತವೆ. ಹೊಂಗೆಗೂ ಇದೇ ಸಂಕಟ ಹಲವು ಭಾರಿ ಎದುರಾಗಿದೆ. ಆದರೂ ಲಿನೆಯಾಸ್ ಕರೆದ ಹೆಸರಿನ ಮುಂದೆ ಬದಲಾದ ಇತರೇ ಹೆಸರುಗಳು ಜನಪ್ರಿಯವಾಗಿಲ್ಲ. ನನ್ನ ಕ್ಲಾಸ್ ಮೇಟ್ ಒಬ್ಬ ಮುಳ್ಳೇಗೌಡ ಅಂತಾ ಇದ್ದರು. ಹಳ್ಳಿಯಿಂದ ಬೆಂಗಳೂರಿಗೆ ಬಂದ ಬೆರಗಿನಲ್ಲಿ ವರ್ಷ ಕಳೆಯುವುದರೊಳಗೆ ಕಿರಣ್ ಎಂದು ಹೆಸರು ಬದಲಾಯಿಸಿಕೊಂಡಿದ್ದ. ಆದರೂ ಯಾರಿಗೂ ಕಿರಣ್ ಆಗಿರದೇ, ಕಿರಣ್‍-ಮುಳ್ಳೇಗೌಡ ಆಗಿದ್ದ. ಹೊಂಗೆಗೂ ಹಾಗೆಯೇ Pongamia glabra,  Derris indica  ಮತ್ತು Cystisus pinnatus ಎನ್ನುವ ಹೆಸರುಗಳನ್ನು ಇಟ್ಟರೂ ಅದು Pongamia pinnata ಎಂದೇ ಜನಪ್ರಿಯವಾಗಿದೆ. ಆದರೆ ಇತ್ತೀಚೆಗೆ ಹೊಂಗೆಯನ್ನು ಜೈವಿಕ ಇಂಧನವಾಗಿ ಬಳಸುವುದು ಹೆಚ್ಚಾಗಿ ಅದಕ್ಕೆ Millettia pinnata ಎಂಬ ಹೆಸರಿಗೆ ಬದಲಾಯಿಸಲಾಗಿದೆ.  ಹಾಗಾಗಿ ಕಳೆದ ಕೆಲವರ್ಷಗಳಲ್ಲಿ ಹೊಂಗೆಯ ಸಂಶೋಧನಾ ಲೇಖನ ಬರೆಯುವಾಗ ವೈಜ್ಞಾನಿಕ ಪ್ರಬಂಧಕಾರರಿಗೆ ಎಲ್ಲಾ ಹೆಸರುಗಳನ್ನು ಹೇಳಿ ಅದನ್ನು ಪರಿಚಯಿಸುವ ಸಂಕಟ ಬಂದಿದೆ. ನಮ್ಮ ಕಿರಣ್-ಮುಳ್ಳೇಗೌಡನ ಹಾಗೇ!!

            ಲೆಗ್ಯೂಮ್ ಕುಲದ ಸಸ್ಯವಾದ ಹೊಂಗೆಯು ಫ್ಯಾಬೇಸಿಯೇ ಸಸ್ಯಕುಟುಂಬಕ್ಕೆ ಸೇರಿದೆ. ಇದೇ ಕುಟುಂಬವನ್ನು ಪಾಪಿಲಿಯೊನೇಸಿಯೆ (Papilionaceae) ಅಥವಾ ಲೆಗ್ಯುಮಿನೊಸಿಯೆ  (Leguminosae) ಎಂದೂ ಕರೆಯಲಾಗುತ್ತದೆ.   ಇದೀಗ ನಾವು 21ನೆಯ ಶತಮಾನ ಕಾಲು ಭಾಗ ಕಳೆದ ಮೇಲೆ ಅದನ್ನು ವಿವರಿಸಿ ಪರಿಚಯಿಸುವ ಮಾತಿರಲಿ ಬಹಳ ಹಿಂದೆಯೇ 1834ರಲ್ಲೇ ಹೊಂಗೆಯ ಸಸ್ಯ ವರ್ಣನೆಯನ್ನು ಸ್ಕಾಟ್‍ ಲ್ಯಾಂಡಿನ ಸಸ್ಯ ವಿಜ್ಞಾನಿಗಳಾದ ರಾಬರ್ಟ್‍  ವೈಟ್ ಮತ್ತು ಜಾರ್ಜ್‍ ಅರ್ನಾಟ್  ಸೊಗಸಾಗಿ ಮಾಡಿದ್ದಾರೆ. ಅದರ ಹಿಂದೆ ರಾಬರ್ಟ್‍  ವೈಟ್ ಅವರ  ಸಸ್ಯಪ್ರೀತಿಯ ದೊಡ್ಡ ಕಥನವೇ ಇದೆ. ಅವರ ದಾಖಲೆಯಲ್ಲಿ ಹೊಂಗೆಯ ವರ್ಣನೆಯು ಈ ಕೆಳಗಿನಂತಿದೆ.

            “ಹೊಂಗೆಯು ಸಣ್ಣ ಮರ ಅಥವಾ ದೊಡ್ಡ ಪೊದರು ಗಿಡ. ಅದರ ಎಲೆಗಳು ಅಸಮವಾಗಿ ಅಂಟಿಕೊಂಡಿದ್ದು, ಸಾಮಾನ್ಯವಾಗಿ ಒಂದನ್ನೊಂದು ಅಭಿಮುಖವಾಗಿರುತ್ತವೆ. ಹೊಗೆಯ ಮರದ ಹೂವುಗಳ ಪುಷ್ಪಪಾತ್ರೆಯು ಕಪ್ಪಿನ (Cup) ಆಕಾರದಲ್ಲಿದ್ದು, ಒಂದು ಬಗೆಯಲ್ಲಿ ಉಡುಗಿದಂತಿರುತ್ತದೆ. ಆದರೆ ಅದರ ಪುಷ್ಪದಳಗಳು ಚಿಟ್ಟೆಯಂತೆ ಹರಡಿಕೊಂಡಿರುತ್ತದೆ. ಹೂವಿನ ಕೇಸರಗಳು ಬುಡದಲ್ಲಿ ಎರಡು ಗುಂಪುಗಳಾಗಿದ್ದು ತುದಿಯಲ್ಲೂ ಹಾಗೇ ಇರುತ್ತವೆ. ಆದರೆ ಮಧ್ಯದಲ್ಲಿ  ಮಾತ್ರ ಒಂದೇ ಗುಂಪಿನ ಕೇಸರಗಳನ್ನು ಹೊಂದಿರುತ್ತದೆ. ಹೂವಿಂದ ಕಾಯಿ ಕಟ್ಟಿದಾಗ ಸಾಮಾನ್ಯವಾಗಿ ಒಂದೇ ಕೋಶದ ಕಾಯಿ ಇದ್ದು ಒಳಗೊಂದೇ ಬೀಜವಿರುತ್ತದೆ. ಕೆಲವೊಮ್ಮೆ ಎರಡಿದ್ದರೂ ಇರಬಹುದು. ಆದರೆ ಅಪರೂಪ. ಕಾಯಿಯ ಒಳಗೋಡೆ ನಿಮ್ನವಾಗಿದ್ದು ಹೊರಗೋಡೆ ಉಬ್ಬಿದಂತಿರುತ್ತದೆ”.  ಅದಲ್ಲದೆ ಮುಂದೆ ರಾಬರ್ಟ್‍  ವೈಟ್ ಅವರು 1866ರಲ್ಲಿ ಅಂತರರಾಷ್ಟ್ರೀಯ ಸಸ್ಯವಿಜ್ಞಾನ ಕಾಂಗ್ರೆಸ್ಸಿನಲ್ಲಿ ಇಂಡಿಯಾದ ವಸಂತಾಗಮನದ ಸಸ್ಯ ವೈಭವದ ಕುರಿತು ಎಂಬ ಶೀರ್ಷಿಕೆಯ ಪ್ರಬಂಧವನ್ನು ಮಂಡಿಸಿ ಅದರಲ್ಲಿ ಭಾರತೀಯ ಚೈತ್ರಕಾಲವನ್ನು ಕಾವ್ಯಮಯವಾಗಿ ವರ್ಣಿಸಿದ್ದಾರೆ. ಇಲ್ಲಿ ಭಾರತದಲ್ಲಿ, ದಟ್ಟ ಬಿಸಿಲಿನ ಬೇಗೆಯಲ್ಲಿ, ದಿನವೆಲ್ಲವೂ ಬರೀ ಹಗಲಿನಂತಿದ್ದು, ಉಷ್ಣ ದಗೆಯು ತುಂಬಿರುವಾಗ ಗಿಡಮರಗಳು ಚಿಗುರು ಬಿಟ್ಟು ಹಸಿರು ತುಂಬಿಕೊಂಡಿರುತ್ತವೆ. ಗಿಡಮರಗಳು ಒಣಗಿ ಮುರುಟಬೇಕೆನ್ನುವ ವಾತಾವರಣಕ್ಕೆ ವಿರುದ್ಧವಾಗಿ ಚಿಗುರಿ ವಸಂತವನ್ನು ಆಹ್ವಾನಿಸುತ್ತವೆ ಎಂಬ ಸಾರದೊಂದಿಗೆ ತಮ್ಮ ಅನುಶೋಧವನ್ನು ವೈಟ್ ಪ್ರಕಟಿಸಿದ್ದಾರೆ.

            ವೈಟ್ ಅಸಾಧಾರಣ ಸಸ್ಯ ಪ್ರೇಮಿ  ಹಾಗೂ ವೈದ್ಯ. 1819ರಲ್ಲೇ ಭಾರತಕ್ಕೆ ಬಂದು ದಕ್ಷಿಣ ಭಾರತದಲ್ಲಿ ಹಲವು ಕಡೆ ಅಸಿಸ್ಟೆಂಟ್ ಸರ್ಜನ್ ಆಗಿದ್ದವರು. ಕರ್ನಾಟಕದಲ್ಲೂ ಶ್ರೀರಂಗಪಟ್ಟಣದ ಪಶುಪಾಲನಾ ವಿಭಾಗದಲ್ಲಿದ್ದು ಮುಂದೆ ಬಳ್ಳಾರಿಯ ರೆಜಿಮೆಂಟಿನಲ್ಲೂ ಕಾರ್ಯ ನಿರ್ವಹಿಸಿದವರು. ಅಕ್ಷರಶಃ ಕಾವೇರಿಯಿಂದ ತುಂಗಭದ್ರೆಯವರೆಗೂ ಸಸ್ಯ ಸಂಪತ್ತನ್ನು ಹುಡುಕಾಡಿದ ಇವರು 1831ರಲ್ಲಿ  ಸ್ವಂತ ಕೆಲಸದ ಮೇಲೆ ಕೆಲಕಾಲ ತಾಯಿನಾಡಿಗೆ ಹಿಂದಿರುಗುವಾಗ ತಮ್ಮ ಜೊತೆ ಕೊಂಡೊಯ್ದ ಸಸ್ಯ ರಾಶಿ, 4000 ಪ್ರಭೇದಗಳ ಸುಮಾರು 1,00,000 ಗಿಡಗಳನ್ನು ಹೊಂದಿತ್ತು. ಅಲ್ಲದೆ ಅವುಗಳೆದರ ಒಟ್ಟು ತೂಕ ಬರೊಬ್ಬರಿ 2 ಟನ್ನುಗಳು. ಅಷ್ಟೊಂದು ಸಸ್ಯರಾಶಿಯ ವಿಂಗಡಿಸಿ ವಿವರಿಸಲು ಸಹಾಯ ವಾದ ಗೆಳೆಯನೇ ಜಾರ್ಜ್‍ ಅರ್ನಾಟ್.  ಆಗ 1834ರಲ್ಲಿ ಅವರಿಬ್ಬರೂ ಜೊತೆಯಾಗಿ ವಿವರಿಸಿದ್ದರಲ್ಲಿ ಹೊಂಗೆಯ ಚಿತ್ರಣ ಮತ್ತು ನಮ್ಮ ವಸಂತ ಮಾಸದ ವರ್ಣನೆಯೂ ಸೇರಿತ್ತು.  ನಂತರ 1834ರಲ್ಲಿಯೇ ಮತ್ತೆ ಭಾರತಕ್ಕೆ ಬಂದ  ರಾಬರ್ಟ್‍ ವೈಟ್ ಬಳ್ಳಾರಿಗೆ ಬಂದು ಮುಂದೆ ಇಡೀ ದಕ್ಷಿಣ ಭಾರತದ ಉದ್ದಗಲಕ್ಕೂ ತಿರುಗಾಡುತ್ತಾರೆ. 1853ರವರೆಗೂ ಭಾರತದಲ್ಲೇ ಇದ್ದು ಇಡೀ ಸಸ್ಯವಿಜ್ಞಾನಕ್ಕೆ ಅದರಲ್ಲೂ ಚೈತ್ರಕಾಲದ ಸಸ್ಯಗಳ ವರ್ತನೆಯನ್ನು ಅರಿಯುವ ಮೂಲಭೂತ ವಿಧಾನಗಳನ್ನು ಸ್ಥಾಪಿಸಿದ್ದಾರೆ.  ಇದಕ್ಕಿಂತಲೂ ಹೆಚ್ಚಾಗಿ ತಮಗೆ ಸಹಾಯ ಮಾಡಿದ ಕೂಲಿಯವರನ್ನೂ ನೆನೆಯುವ ಅಪರೂಪದ ವಿಜ್ಞಾನಿಯಾಗಿದ್ದರು. ಅವರ ಹೆಸರುಗಳನ್ನೂ ಸೇರಿಸಿಕೊಂಡೇ  ದಾಖಲಿಸಿದ್ದಾರೆ. ನಿವೃತ್ತಿಯ ನಂತರ ವಾಪಾಸ್ಸು ಸ್ವದೇಶಕ್ಕೆ ಹಿಂತಿರುಗಿದಾಗ ಬರಿಗೈಯಲ್ಲಿದ್ದವರು. ತಮ್ಮ ಮಕ್ಕಳಿಂದ ಮೊಮ್ಮಕ್ಕಳಿಗೂ ಏನೂ ಉಳಿಸದವರು, ತಮ್ಮ ಸರ್ ನೇಮ್-ಅಡ್ಡ ಹೆಸರನ್ನೂ ಸಹಾ…! ರಾಬರ್ಟ್‍  ವೈಟ್ ಅವರದ್ದೂ ಅಪ್ಪಟ ಹೊಂಗೆಯಂತಹಾ ಜೀವನವೇ!  ಹೊಂಗೆಯು ತಾನು ಸುಡು ಬಿಸಿಲಲ್ಲಿ ನಿಂತು ಕೆಳಗೆ ತಂಪನೀವ ಮರದ ಹಾಗೆ.

ಹೊಂಗೆ ನೆರಳಿನ ಸುಖದುಃಖ

ಹೊಂಗೆಯ ನೆರಳೆಂದರೆ ಸುಖ-ದುಃಖದ ಸಂಗಮ. ಅದರ ಚೆಲುವು ಅಪ್ರತಿಮ. ಒಳ್ಳೆಯ ಬಿಸಿಲು ಕಾಲದಲ್ಲಿ ಅದೆಂತಹ ಚೆಲುವನ್ನು ನೆರಳಲ್ಲಿಟ್ಟು ಆಹ್ವಾನಿಸುವುದಲ್ಲವೇ? ದಟ್ಟ ಬಿಸಿಲಲ್ಲಿ ಆಸರೆ ಬಯಸಿದವರಿಗೆ ತಂಪನ್ನೆರೆವ ಅದರ ಜೀವದ ಗುಟ್ಟೇನು? ಹೊರಗೆ ಮೈದಾನದಲ್ಲೋ, ಜಮೀನಿನ ಅಂಚಲ್ಲೋ, ರಸೆಯ ಬದಿಯಲ್ಲೋ, ಪಾರ್ಕಿನಲ್ಲೋ ಅಡ್ಡಾಡುವಾಗ, ಬಿಸಿಯ ತಡೆಯಲೆಂದಾಗ ಕಂಡ ಹೊಂಗೆಯ ಮರದ ತಿಳಿ ಹಸಿರು ಮನಸ್ಸನ್ನು ಆಕರ್ಷಿಸುವುದು ಸಹಜವೇ! ಅದೆಂತಹ ವಿಚಿತ್ರ ನೋಡಿ. ಬಟ್ಟಾ ಬಯಲಲ್ಲಿ ಬಿಸಿಲ ಬೇಗೆಯಲ್ಲಿ ಬಸವಳಿವ ಸಂದರ್ಭದಲ್ಲಿ ಅಂತಹ ತಂಪನ್ನಿಟ್ಟು ಕರೆ ಕೊಡುವ ಜೀವಿ. ಏಕೀ ಜೈವಿಕ ಹೊಂದಾಣಿಕೆ, ಈ ಬಿಸಿಲಿಗೇ ಏಕೆ ಹೀಗೆಲ್ಲಾ ಚಿಗುರಿ, ತಂಪನೆರೆವ ಬಯಕೆ?  ಇದೇ ಸಮಯದಲ್ಲೇ ಇಂತಹ ತಂಪನ್ನಿಡಲೆಂದೇ ಚಿಗುರನ್ನೂ ಕೊಟ್ಟು, ಸೊಬಗನ್ನು ಹೆಚ್ಚಿಸಿಕೊಂಡು ನೆರಳು ನೀಡುತ್ತದೆ. ಆದರೆ ಅದೂ ಕೂಡ ತಂಪನ್ನು ಬಯಸುವ ಹೊತ್ತಿನಲ್ಲೇ ತನ್ನ ಬಯಸುವ ಜೀವಿಗಳಿಗೆ ಸೊಬಗಿನಿಂದ ತಂಪನ್ನೆರೆಯುತ್ತದೆ.

          ಬಹು ಪಾಲು ಗಿಡ ಮರಗಳೂ ಇದೇ ಸಮಯದಲ್ಲೇ ಚಿಗುರು ಹೂವನ್ನು ಅಣಿಮಾಡಿಕೊಂಡು ಕಾಯುತ್ತವಾದರೂ, ಹೊಂಗೆಯ ಚೆಲುವು ಹಾಗೂ ತಂಪು ಭಿನ್ನವೇ! ಅದರ ಸುಖ ಹಾಗೂ ದುಃಖಗಳು ಜೈವಿಕ ಕಾರ್ಯಾಚರಣೆಯಲ್ಲಿ ಮುಳುಗಿಹೋಗಿವೆ. ಇದಕ್ಕಾಗಿ ಮರದ ತಯಾರಿ  ಹಿಂದಿನ ವರ್ಷವೇ ಆರಂಭವಾಗಿರುತ್ತದೆ. ಎಲ್ಲ ಸಸ್ಯಗಳೂ ಸ್ವಾಭಾವಿಕವಾಗಿ ಹೀರುಗೊಳವೆಗಳ ಮೂಲಕ ನೀರನ್ನು ಹೀರಿ ತುದಿಯವರೆಗೂ ಸಾಗಿಸುತ್ತವೆ. ಎಲೆಯ ಹರಹಿನಲ್ಲಿ ತಲುಪಿ ಅಲ್ಲಿನ ಪತ್ರರಂಧ್ರದ ಮೂಲಕ ಹೆಚ್ಚಿನ ನೀರನ್ನು ಬಾಷ್ಪವಿಸರ್ಜನೆ ಎಂದು ಕರೆಯುವ ಕ್ರಿಯೆಯಿಂದ ಹೊರಬಿಡುತ್ತವೆ. ಈ ಕೆಲಸವೆಲ್ಲಾ ಬರೀ ಹಗಲೇ ನಡೆಯುತ್ತದೆ. ಹಾಗಂತ ರಾತ್ರಿಯಲ್ಲಿ ಸಸ್ಯ ದೇಹವನ್ನು ಸೇರಿದ ನೀರು ಹೆಚ್ಚಾದರೆ ಹೋರಹೋಗುವುದೆ? ಅಥವಾ ಉಳಿದರೆ ಒಳಗೇ ಒತ್ತಡವನ್ನು ಉಂಟುಮಾಡುವುದಲ್ಲವೇ? ರಾತ್ರಿಯಲ್ಲಿ ಹೆಚ್ಚಿದ ನೀರನ್ನೂ ಹೊರ ಬಿಡಲು ಆಗದು. ಏಕೆಂದರೆ ಪತ್ರರಂದ್ರಗಳು ಮುಚ್ಚಿಕೊಂಡು ಆಗುವ ನಷ್ಟಕ್ಕೆ ಬ್ರೇಕ್ ಹಾಕಿರುತ್ತವೆ. ಆದಕ್ಕೆಂದೇ ಕೆಲವೇ ಗಿಡಗಳು ಮತ್ತು  ಎಲ್ಲಾ ಹುಲ್ಲುಗಳೂ ಬದಲಿ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತವೆ. ಬೇರೊಂದು ಬಗೆಯ  -ಹೈಡತೋಡ್ಗಳೆಂದು ಕರೆಯುವ- ವಿಶೇಷ ಕವಾಟಗಳ ಮೂಲಕ ನೀರನ್ನು ಚಿಗುರೆಲೆ, ಚಿಗುರೆಲೆಯ ತೊಟ್ಟು ಇಂತಹವುಗಳ ಮೂಲಕ ಹೊರ ಹಾಕಿ ಅಲ್ಲಿನ ಮೇಲ್ಮೈಯನ್ನೆಲ್ಲಾ ತಂಪುಗೊಳಿಸಿಟ್ಟಿರುತ್ತವೆ. ಕೆಲವು ವೇಳೆ ಈ ಕೆಲಸ ಹಗಲೂ ಆಗುವುದುಂಟು. ಅದರಲ್ಲಿ ಹೊಂಗೆಯ ಗಿಡವೊಂದು ವಿಶೇಷ. ಇದನ್ನು ಗಟೇಷನ್ ಎಂದೂ ಕರೆಯುತ್ತಾರೆ. ಇದೊಂದು ವಿಶೇಷವಾಗಿ ನೀರನ್ನು ಹೊರ ಹಾಕಿ ಚಿಗುರೆಲೆಯ, ಜತೆಗೆ ಅವುಗಳ ತೊಟ್ಟಿನಲ್ಲೂ ತಂಪನ್ನಿಟ್ಟುಕೊಳ್ಳುವ ವಿಧಾನ. ಅದಕ್ಕೇ  ನಾವು ಅನುಭವಿಸುವ ವಿಶೇಷವಾದ ಹೊಂಗೆಯ ತಂಪು.

          ಬರೀ ಸುರಿವ ಹೂಗಳನ್ನಿಟ್ಟು ಕಾಯಿ ಕಟ್ಟುವುದು ಹೇಗೆಂದು ಗೆಳೆಯ ವೆಂಕಟೇಶ್ ಪ್ರಶ್ನಿಸಿದ್ದರಲ್ಲವೇ? ನಿಮ್ಮ ಅನುಮಾನವೂ ಅದೇ ಆಗಿದ್ದಿರಬಹುದು. ಆ ಪ್ರಶ್ನೆಯಿರುವ ಅನೇಕರನ್ನು ಪ್ರತಿನಿಧಿಸಿ ಅವರು ಮಾತಿಗಿಳಿದಿದ್ದರು. ಹೊಂಗೆಯ ಮರದಲ್ಲಿ ಪ್ರತಿಶತ 1ರಿಂದ 3 ರಷ್ಟು ಮಾತ್ರವೇ ಹೂವುಗಳು ಕಾಯಾಗುವುದು. ಉಳಿದವೆಲ್ಲಾ ನೆಲಕಾಣುವುದೇ ಹೆಚ್ಚು. ಕಾಯಾಗುವ ಹೂವುಗಳನ್ನು ಗಿಡದೊಳಗೇ ಉಡುಗಿದ/ಸಣ್ಣಗಾದ ರೀತಿಯಲ್ಲಿ ಕಾಣಬಹುದು. ಕೆಲವು ಕಡೆ ಇದನ್ನು ಹೂನುಂಗುವುದು ಎನ್ನುತ್ತಾರೆ. ಹೂವು ಗಿಡದೊಳಗೇ ನುಂಗಿದಂತೆ ಸಣ್ಣದಾಗಿ ನಿಧಾನವಾಗಿ ಹೀಚು ಮೂಡುತ್ತದೆ. ಪ್ರತೀ ನೂರು ಹೂವಿಗೆ ಒಂದೋ ಎರಡೋ ನುಂಗುವ ಗಿಡದೊಳಗೆ ಅವುಗಳನ್ನು ನೇರವಾಗಿ ಕಾಣುವುದು ಕಷ್ಟವೇ ನಿಜ. ಸೂಕ್ಷ್ಮವಾಗಿ ನೋಡುವ ಕಣ್ಣುಗಳಿಗೆ  ಅವು ಖಂಡಿತಾ ಕಾಣುತ್ತವೆ.

          ಹೂಗಳು ಕಾಯಾಗಿ ಅದರಿಂದ ಸಿಗುವ ಬೀಜಗಳಿಗೀಗ ಬಯೋಡೀಸೆಲ್ ಸಂಭ್ರಮ. ಎಣ್ಣೆಯಿಂದ ಜೈವಿಕ ಇಂಧನವಾಗಿಸಿ, ಮಾಮೂಲಿ ಡೀಸೆಲ್ಲಿನ ಜೊತೆ ಬೆರೆಸಿ ಬಳಸಲಾಗುತ್ತಿದೆ. ಇದೇ ಕಾರಣಕ್ಕೇ ಹೊಂಗೆಯನ್ನು ಹೊಸ ಹೆಸರಿನಿಂದ  ಕರೆದದ್ದು ಎಂದು ಈಗಾಗಲೇ ಹೇಳಿದ್ದೆನಲ್ಲವೇ? ಇದರ ಜೊತೆಗೆ ಹೊಂಗೆಯು ಔಷಧ/ರಾಸಾಯನಿಕಗಳ ತಯಾರಿಯಲ್ಲೂ ಕಳೆದ ಒಂದೆರಡು ದಶಕಗಳಿಂದ ಸಂಶೋಧಕರಲ್ಲಿ ಹೊಸ ಹುರುಪು ನೀಡಿದೆ. ಜಗತ್ತಿನಾದ್ಯಂತ ಹತ್ತಾರು ಸಸ್ಯರಸಾಯನಿಕತಜ್ಞರು ತುಂಬು ಉತ್ಸಾಹದಿಂದ ಶೋಧಿಸಿದ್ದಾರೆ. ಅವರು ಎಲೆ, ಹೂ, ಕಾಯಿ-ಬೀಜ, ತೊಗಟೆ, ಬೇರುಗಳನ್ನು ಬೇರೆ-ಬೇರೆಯಾಗಿ ವಿವಿಧ ರಾಸಾಯನಿಕಗಳಲ್ಲಿ ಕಷಾಯ ಮಾಡಿ, ಭಟ್ಟಿ ಇಳಿಸಿ ಸಾಕಷ್ಟು ಹೊಳಹುಗಳ ಪಟ್ಟಿ ಮಾಡಿದ್ದಾರೆ. ಔಷಧಿಯ ಅನುಶೋಧಕರು ಭಟ್ಟಿ ಇಳಿಸಿ ಪಡೆದ ರಾಸಾಯನಿಕಗಳನ್ನು ಔಷಧವಾಗಿ ಚಿಕಿತ್ಸೆಗಳಲ್ಲಿ ಬಳಸಿ ದಾಖಲು ಮಾಡಿದ್ದಾರೆ.

          ಇಡೀ ಗಿಡ/ಮರದಲ್ಲಿ ಫ್ಲೆವಿನಾಯ್ಡ್ ಗುಂಪಿಗೆ ಸೇರಿರುವ ಹತ್ತಾರು ರಾಸಾಯನಿಕಗಳು ತುಂಬಿಕೊಂಡಿವೆ. ಇವೆಲ್ಲವೂ ಹೂವಿನಲ್ಲಿ, ಎಲೆಯಲ್ಲಿ, ಒಳಮರದ ಹೃದಯದಲ್ಲಿ, ಹೊರ ತೊಗಟೆಯಲ್ಲಿ ಬಗೆ ಬಗೆಯಾಗಿದ್ದು, ಎಲ್ಲವೂ ವಿಭಿನ್ನ ಉಪಯೋಗಗಳನ್ನು ದಾಖಲಿಸಿವೆ. ಹೂವುಗಳು ಕೆಲವು ಸರಳ ಹಾಗೂ ಅಷ್ಟೆನೂ ಪ್ರಬಲವಲ್ಲದ ರಾಸಾಯನಿಕಗಳನ್ನು ಹೊಂದಿದ್ದರೆ, ಎಲೆ ಹಾಗೂ ಕಾಂಡದ ಒಳಮೈಯ ದಿಂಡು ಸಂಕೀರ್ಣ ಹಾಗೂ ಸಾಕಷ್ಟು ಪ್ರಬಲವಾದ ರಾಸಾಯನಿಕಗಳನ್ನು ಹೊಂದಿವೆ.

          ಹೊಂಗೆಯ ಕಾಯಿ, ಬೀಜ, ಎಣ್ಣೆ, ಎಲೆ, ಹೂವುಗಳು ಮತ್ತು ಬೇರುಗಳ ಕಷಾಯ ಅಥವಾ ಪಡೆದ ದ್ರವ್ಯದಿಂದ ಆಯುರ್ವೇದ ಹಾಗೂ ಯುನಾನಿ ಎರಡೂ ಪದ್ಧತಿಗಳಲ್ಲೂ ಔಷಧಗಳನ್ನು ತಯಾರಿಸುವ ಪರಂಪರೆಯು ತುಂಬಾ ಹಳೆಯದು. ಹಿಂದೆಯೇ 16 ಹಾಗೂ 17ನೆಯ ಶತಮಾನದಲ್ಲಿಯೆ  ದೇಹದೊಳಗಿನ ಪರೋಪಜೀವಿಗಳ ನಾಶದಲ್ಲಿ ಹೊಂಗೆಯ ವಿವಿಧ ಭಾಗಗಳನ್ನು ಬಳಸಿರುವುದು ತಿಳಿದಿದೆ. ಮೂತ್ರ ಸಂಬಂಧಿ ತೊಂದರೆಗಳಿಗೆ ಹಾಗೂ ಮಧುಮೇಹಕ್ಕೂ ಸಹಾ ನಮ್ಮ ದೇಶವೇ ಅಲ್ಲದೆ ಶ್ರೀಲಂಕಾ, ವಿಯಟ್ನಾಂ, ಚೀನಾ ಮುಂತಾದೆಡೆಗಳಲ್ಲಿಯೂ ಹೊಂಗೆಯ ನೆರವನ್ನು ಜನಪದೀಯರು ಪಡೆದಿದ್ದಾರೆ. ಬೀಜಗಳನ್ನು ಸುಟ್ಟು ಪಡೆದ ಬೂದಿಯನ್ನು ಹಲ್ಲುಗಳನ್ನು ಗಟ್ಟಿಗೊಳಿಸುವ ಚಿಕಿತ್ಸೆಯಲ್ಲಿ ಯುನಾನಿ ಪದ್ಧತಿಯು ಬಳಸಿಕೊಂಡಿದೆ. ನಮ್ಮ ದೇಶದಲ್ಲಿಯೂ ಚರ್ಮದ ವಿವಿಧ ತೊಂದರೆಗಳ ನಿವಾರಣೆಯಲ್ಲಿ ಹೊಂಗೆಯನ್ನು ನಂಬಿಕೊಳ್ಳಲಾಗಿದೆ. ನೇರವಾಗಿ ಸಸ್ಯದ ರಸವನ್ನು ಕಡಿತ ಹಾಗೂ ಉರಿಗೆ ಬಳಸುವ ವಿಧಾನವನ್ನು ಕಂಡುಕೊಂಡಿದ್ದಾರೆ. ಎಲೆಗಳಂತೂ ದೇಹದ ಜಂತುಹುಳುಗಳ ನಿವಾರಣೆಗೆ, ಪಚನಕ್ರಿಯೆಗೆ ಅನುಕೂಲಕರ ಎಂಬುದನ್ನು ಅರಿಯಲಾಗಿದೆ. ಸಿದ್ಧಾ ಹಾಗೂ ಆಯುರ್ವೇದ ಪದ್ಧತಿಗಳು ಹೂವುಗಳನ್ನು ನೀರಿನಲ್ಲಿ ಕುದಿಸಿ ಸೋಸಿದ ಕಷಾಯವನ್ನು ಮಧುಮೇಹದಲ್ಲಿ ಬಳಸುವುದನ್ನು ಶಿಫಾರಸ್ಸು ಮಾಡುತ್ತವೆ. ಈ ಹಿನ್ನೆಲೆಯಲ್ಲಿ ಬ್ಯಾಕ್ಟಿರಿಯಾ ಮತ್ತು ಶಿಲೀಂದ್ರಗಳನ್ನು ನಾಶಪಡಿಸುವ ಸಾಧ್ಯತೆಯನ್ನು ಆಧುನಿಕ ಅಧ್ಯಯನಗಳು ಔಷಧವಿಜ್ಞಾನಿಗಳು ಪಡೆದಿದ್ದಾರೆ. ಹೊಂಗೆಯ ರಾಸಾನಿಕತೆಯೇ ದೊಡ್ಡ ಪ್ರಬಂಧವಾಗುವಷ್ಟು ಹರಹನ್ನು ಪಡೆದಿದೆ. ಆಸಕ್ತ ಮನಸ್ಸುಗಳು ಹುಡುಕಿ ಪಡೆದು ಆನಂದವನ್ನು ಹೆಚ್ಚಿಸಿಕೊಳ್ಳಬಹುದು. ಇದೆಲ್ಲದರ ಜೊತೆಗೆ ಹೊಂಗೆಯ ಹಿಂಡಿಯಾಗಲಿ ಅಥವಾ ಉದುರಿದೆಲೆ ಮತ್ತು ಹೂರಾಶಿಯ ಗೊಬ್ಬರದ ಬೆಲೆಯಂತೂ ಅಪಾರವಾಗಿದ್ದು ರೈತರನ್ನು ಸದಾ ಆಕರ್ಷಿಸಿದೆ. ಹಾಗಾಗಿ ಹೊಲದ ಬದುಗಳನ್ನು ಹೊಂಗೆ ಮರಗಳು ಸ್ವಂತ ಜಾಗಗಳನ್ನಾಗಿಸಿಕೊಂಡಿದೆ.

          ಈಗಂತೂ ಯುಗಾದಿಯನ್ನು ದಾಟಿ ಚೈತ್ರ ಮಾಸದ ಸೊಬಗನ್ನು ಅನುಭವಿಸುತ್ತಿದ್ದೇವೆ. ಕಾಣುವ ಹೊಂಗೆಯ ಮರಗಳೆಲ್ಲಾ ತಮಗೇ ಭಾರ ಎನಿಸುವಷ್ಟು ಮೈತುಂಬಾ ಎಲೆ-ಹೂಗಳನ್ನು ಬಿಟ್ಟು ನಳ ನಳಿಸುತ್ತಿವೆ. ವಸಂತ ಋತುವಿನಲ್ಲಿ ಚಿಗುರಿನ ಆಗಮನದ ಕಾಲಧರ್ಮದ ಜೊತೆ ಸಸ್ಯರಾಶಿಯ ಒಳಮರ್ಮವು ನಿಸರ್ಗದ ಕಾಯಕದಲ್ಲಿ ತೊಡಗಿದೆ. ಎಲೆಗಳ ಕೆಲಸವೇ ಬಿಸಿಲಿನ ಶಕ್ತಿಯನ್ನು ಹರಿತ್ತುಗಳ ಮೂಲಕ ಹೀರಿ, ಆಹಾರದ ಉತ್ಪಾದನೆ ಮಾಡುವುದು.  ಈಗ ಬಿಸಿಲೂ ಹೆಚ್ಚಾಗಿದ್ದು, ಜತೆಗೆ ಮುಂದೆ ಬೀಳುವ ಮಳೆಯ ಮುನ್ಸೂಚನೆಯೂ ಇರುತ್ತದೆ, ಅದಕ್ಕಾಗಿ ಎಲೆಗಳ, ಎಳೆಯತನದ ಚುರುಕುತನವೂ ಬೇಕು.  ಅದಕ್ಕಾಗಿ ರೆಂಬೆಕೊಂಬೆಗಳಲ್ಲಿ ಚಿಗುರನ್ನು ಹರಡಿಕೊಳ್ಳುವ ಹೊಂಗೆಯ ರಾಚನಿಕ ಹರಹು ಮತ್ತು ಕಾಲದ ಆಯಾಮವಾದ ವಸಂತದ ಸಮಯ ಇವೆರಡೂ ವಿಕಾಸದಿಂದಲೂ ಅನುಕೂಲಕರ ಆಶಯಗಳನ್ನು ಕಷ್ಪಪಟ್ಟೇ ಅಭಿವೃದ್ಧಿಪಡಿಸಿಕೊಂಡಿವೆ.  ವಸಂತವಿರುವಷ್ಟೂ ಕಾಲ ಹೊಂಗೆಯ ನೆರಳ ಚೆಲುವೂ ತಂಪೂ ಇರಲಿವೆ. ಜೊತೆಗೆ ನಮ್ಮೆಲ್ಲರಿಗೂ ಅದರ ಸೊಬಗಿನ ಆನಂದ ಕೂಡ.

ನಮಸ್ಕಾರ

– ಚನ್ನೇಶ್

This Post Has One Comment

  1. Sreepathi

    Good and timely article. Felt very cool and fresh.

Leave a Reply