You are currently viewing ಉತ್ತರ ಕರ್ನಾಟಕದ ಸವಣೂರಿನ ಆಫ್ರಿಕನ್ ಮರಗಳು. Living marvels of the state Baobab Trees- Adansonia digitata.

ಉತ್ತರ ಕರ್ನಾಟಕದ ಸವಣೂರಿನ ಆಫ್ರಿಕನ್ ಮರಗಳು. Living marvels of the state Baobab Trees- Adansonia digitata.

ಹಾಗೆ ಒಂದು ರಜೆಯ ದಿನ ಹಾವೇರಿಯ ಹತ್ತಿರದ ತಾಲ್ಲೂಕು ಕೇಂದ್ರ ಸವಣೂರಿಗೆ ಭೇಟಿ ಕೊಡಿ. ಅಲ್ಲಿಂದ ನೇರವಾಗಿ ಆಫ್ರಿಕಾಗೆ ಹೋಗಬಹುದು. ಇಲ್ಲ ಹೋಗದೇ ಅಲ್ಲೇ ಸವಣೂರಿನಲ್ಲೇ ನಿಂತು ಆಫ್ರಿಕಾದ ನೋಟವನ್ನು ಸವಿಯಬಹುದು. ನಿಜ ಏನಂದ್ರೆ, ನಮ್ಮ ರಾಜ್ಯದ ಸವಣೂರಿನಲ್ಲಿ ಅಪರೂಪದ ಮರಗಳಿವೆ. ಅವುಗಳ ಮೂಲ ತವರೂರು ಆಫ್ರಿಕಾ. ಆ ಮರಗಳನ್ನು ಅಲ್ಲಿ ಹುಣಸೆಮರಗಳೆಂದೇ ಕರೆಯುತ್ತಾರೆ. ಆದರೆ ಅವು ನಿಜಕ್ಕೂ ಹುಣಸೆಮರಗಳೇನೂ ಅಲ್ಲ. ಹಾಗನ್ನಲು ಇರಬಹುದಾದ ಒಂದು ಪ್ರಮುಖ ಕಾರಣವೇನೆಂದರೆ ಅದರ ಕಾಯಿಗಳು ಹುಣಸೆಯಂತೆ ಹುಳಿ ರುಚಿಯನ್ನು ಹೊಂದಿವೆ. ಹುಣಸೆಯಲ್ಲಿ ಇದ್ದಂತೆಯೇ ಇದರಲ್ಲೂ ಟಾರ್ಟಾರಿಕ್ ಆಮ್ಲವೇ ಇದೆ. ಜೊತೆಯಲ್ಲಿ ಸಾಕಷ್ಟು ವಿಟಮಿನ್ “ಸಿ”ಯನ್ನೂ ಹೊಂದಿದೆ. ಬೊಬಾಬ್ ಮರಗಳು. ಬೊಬಾಬ್ ಪದವು ಅರಾಬಿಕ್ ಮೂಲದ್ದು, ಅದರ ಅರ್ಥ “ಹಲವು ಬೀಜಗಳ ತಂದೆ” 
ಆಫ್ರಿಕಾದ ಆಸೆ ತೋರಿಸಿ, ಇದೇನು ಅಂದುಕೊಳ್ಳಬೇಡಿ. ಸವಣೂರಿನ ಹುಣಸೆಮರಗಳೆಂದು ಹೆಸರುವಾಸಿಯಾದ ಆ ಮೂರೂ ಮರಗಳು ಆಫ್ರಿಕಾದ ಬೊಬಾಬ್ ಮರಗಳು. ಮರಗಳು ಎಂದರೆ ನಿಜಕ್ಕೂ ಹೆಮ್ಮರಗಳೇ! ಹಲವಾರು ಸಂಗತಿಗಳಿಂದ ತೀರಾ ಅಪರೂಪದ ಹಾಗೂ ವಿಶೇಷ ಕಥನಗಳನ್ನು ಹೊಟ್ಟೆಯಲ್ಲಿಟ್ಟುಕೊಂಡ ಮರಗಳು, ಇವು. ವಿಚಿತ್ರವಾದ ವಿನ್ಯಾಸಗಳಿಂದ ತಲೆಕೆಳಗಾಗಿ ನಿಂತಂತೆ ಕಾಣುವುದರಿಂದ ಮೂಲ ತವರಿನಲ್ಲಿ ಇವನ್ನು “ತಲೆ ಕೆಳಗಾಗಿಸಿಕೊಂಡ ಮರ” ಎಂದೇ ಕರೆಯುತ್ತಾರೆ. ಜೊತೆಗೆ ಇವುಗಳಿಗೆ “ಮಂಗನ ರೊಟ್ಟಿ ಮರ” ಎಂತಲೂ ಕರೆಯುತ್ತಾರೆ. ರಾಜ್ಯದ ಸವಣೂರಿನಲ್ಲಿ ಸಾವಿರಾರು ವರ್ಷಗಳಿಂದಲೂ ಇರುವ ಕಾರಣಕ್ಕೆ, ಇವು ಹೇಗೆ ಬಂದಿವೆ ಎಂಬುದಕ್ಕೆ ಅಲ್ಲಿನ ಜನ ಶ್ರೀಕೃಷ್ಣ ತಂದು ನೆಟ್ಟ ಎನ್ನುತ್ತಾರೆ. ಏಕೆಂದರೆ ನಿಜಕ್ಕೂ ಮರಗಳು ಅಷ್ಟು ಹಳೆಯವು. ಸಾವಿರಾರು ವರ್ಷಗಳಿಂದಲೂ ಇರುವುದರಿಂದ ಯಾವುದೇ ಖಚಿತ ಕಾಲಮಾನವನ್ನು ಕೊಡಲಾಗುವುದಿಲ್ಲ. ಇತರೇ ಮರಗಳಂತೆ ಮೂಲ ಕಾಂಡದಲ್ಲಿ ಬಳೆಗಳನ್ನು ಹೊಂದಿರದೆ ತನ್ನ ವಯಸ್ಸಿನ ಗುಟ್ಟನ್ನು ಬಿಟ್ಟುಕೊಡದ ಮರಗಳಿವು. ಸಾಲದಕ್ಕೆ ಮರಗಳ ಕಾಂಡವು ಹಸಿ-ಹಸಿಯಾಗೇ ಇರುವ ಗುಣವನ್ನು ಹೊಂದಿದೆ. ಸುಮಾರು ನೂರಾರು ಅಡಿಗಳಷ್ಟು ಸುತ್ತಳತೆಯನ್ನು ಹೊಂದಿರುವ ಮರಗಳ ಕಾಂಡಗಳಲ್ಲಿ ಪ್ರತಿಶತ 80ರಷ್ಟು ನೀರೇ ತುಂಬಿಕೊಂಡು ಸದಾ ನಳನಳಿಸುತ್ತದೆ. 
ಮೂಲ ತವರಿನಲ್ಲಿ ಅತ್ಯಂತ ಹಳೆಯ ಮರಗಳು ಇವೆ. ಹಳೆಯವೆಂದರೆ ಸಾವಿರಾರು ವರ್ಷಗಳ ಹಿರಿತನವನ್ನು ಹೊಂದಿದ ಮರಗಳೇ! ಪ್ರತೀ ಬೊಬಾಬ್ ಕನಿಷ್ಠ 1000 ದಿಂದ 3000 ವರ್ಷಗಳವರೆಗೂ ಬೆಳೆಯುದೆಂಬ ಅಂದಾಜಿದೆ. ಅಷ್ಟಕ್ಕೂ ಈ ಮರಗಳನ್ನು ಕೊಂದು ಸಾಯಿಸುವುದು ಕೂಡ ಅಷ್ಟು ಸುಲಭವಲ್ಲ. ಏಕೆಂದರೆ ಮರದ ತೊಗಟೆಯನ್ನು ಎಷ್ಟು ಕೆತ್ತಿದರೂ, ಮತ್ತೆ ಮತ್ತೆ ಬೆಳೆಸಿಕೊಳ್ಳುತ್ತದೆ. ಒಂದು ಬಗೆಯಲ್ಲಿ ಅದರ ಅಗಾಧವಾದ ಮೈಯ ಚರ್ಮವನ್ನು ಅದೆಷ್ಟು ಸುಲಿದರೂ ಹೊಸದಾಗಿ ಬೆಳೆಸಿಕೊಳ್ಳಲು ತನಗೆ ತಾನೆ ಸರ್ಜರಿ ಮಾಡಿಕೊಂಡು, ಚಿರಯೌವನವನ್ನು ಪಡೆಯುತ್ತದೆ. ಏಕೆಂದರೆ ಮರವನ್ನು ಕೊಲ್ಲಲು ಮೂಲ ಕಾಂಡವನ್ನು ತಾನೆ ತೆಗೆಯಬೇಕು! ಅದು ವಿಪರೀತ ಅಗಲವೂ, ಹಾಗೂ ತನಗೆ ತಾನೆ ಮೈ ಕೆತ್ತಿದರೂ, ಮತ್ತೆ ಗಾಯ ಮಾಯಿಸಿಕೊಂಡು ಹೊಸದಾಗಬಲ್ಲದನ್ನು ಕೊಲ್ಲುವುದು ಹೇಗಲ್ಲವೇ? 


ಈ ಬಗೆಯ ತಾಜಾತನವನ್ನು ಕಾಪಾಡಿಕೊಂಡಿರಲು ಸಾಕಷ್ಟು ಕಾರಣಗಳಿವೆ. ಸವಣೂರಿನ ಬೊಬಾಬ್ ಸಂಬಂಧಿಕ ಪ್ರಭೇದಗಳು ಒಟ್ಟು ಎಂಟು ಇವೆ. ಮೂಲ ಬೊಬಾಬ್, ಆಫ್ರಿಕಾದಲ್ಲೆ ಇದ್ದರೆ, ಆರು ಮಡಗಾಸ್ಕರ್ ನಲ್ಲೂ ಒಂದು ಆಸ್ಟ್ರೇಲಿಯಾದಲ್ಲೂ ಇದೆ. ನಮ್ಮ ಸವಣೂರಿನ ಬೊಬಾಬ್ ಅತಿ ಹೆಚ್ಚು ಬದುಕಬಲ್ಲ ಪ್ರಭೇದವಾಗಿದೆ. ಕಾರಣ ಅದು ಆಫ್ರಿಕಾದ ಸವನ್ನಾ ಕಾಡುಗಳ ಒಣ ಪ್ರದೇಶಗಳಲ್ಲಿ ವಿಕಾಸಗೊಂಡಿದೆ. ವರ್ಷವೆಲ್ಲಾ ಬೇಸಿಗೆಯಂತಹಾ ನೆಲದಲ್ಲಿ ಬದುಕಲು ತನ್ನೊಡಲಲ್ಲೇ ನೀರನ್ನಿಟ್ಟುಕೊಂಡು ತಂಪಾಗಿರುತ್ತದೆ. ಇದನ್ನು ಬಲ್ಲ ಅಲ್ಲಿನ ಆನೆಗಳು ಸದಾ ಅದರ ತೊಗಟೆಯನ್ನು ಕಿತ್ತು ಮೆಲ್ಲುತ್ತವೆ. ಆ ಮೂಲಕ ನೀರಿಲ್ಲದ ಕ್ಷಣಗಳಲ್ಲೂ ಬಾಯಿಯನ್ನು ಒದ್ದೆ ಮಾಡಿಕೊಳ್ಳುವ ಬಗೆಯನ್ನವು ಕಂಡುಕೊಂಡಿವೆ. ಇಂತಹ ನಿರಂತರವಾದ ಮೈ-ಸುಲಿಸಿಕೊಳ್ಳುವುದಕ್ಕೆ ಒಗ್ಗಿಕೊಂಡು ಮತ್ತೂ ಬದುಕುವ ಆಸೆಯನ್ನು ಬೊಬಾಬ್ ವಿಕಸಿಸಿಕೊಂಡಿವೆ. ಹಾಗಾಗಿ ಸದಾ ಬಿಸಿಲಿನ ಒಣ ವಾತಾವರಣದಲ್ಲಿ ಬೊಬಾಬ್ ಗಳು ಬದುಕಿನ ಕಲೆಯನ್ನು ನಿರಂತರವಾಗಿಸಿಕೊಂಡು ಸಾವಿರಾರು ವರ್ಷ ಸುಮ್ಮನೆ ಬಿಸಿಲಿಗೆ ಮೈಚಾಚಿ ನಿಂತುಕೊಂಡು ಆಫ್ರಿಕನ್ ಜನಾಂಗಕ್ಕೆ ದೈವಸ್ವರೂಪಿಗಳಾಗಿವೆ. ಬೊಬಾಬ್ ಗಳು ಅಪಾರ ದಪ್ಟನಾದ ಕಾಂಡವನ್ನು ಹೊಂದಿರುವುದರಿಂದ ಅವುಗಳ ಪೊಟರೆಗಳಲ್ಲಿ ಕೆಲವೊಮ್ಮೆ ಸಾಕಷ್ಟು ನೀರು ಸಂಗ್ರಹವಾಗಿರುವುದುಂಟು. ಅಂತಹ ಪೊಟರೆಗಳು ಸಣ್ಣ ಬಾವಿಗಳಂತೆ ಉಪಯೋಗಕ್ಕೆ ಬರುತ್ತವೆ. ಅಲ್ಲಿನ ನೀರನ್ನು ಕುಡಿದು, ಮರದ ನೆರಳಲ್ಲಿ ದಣಿವಾರಿಸಿಕೊಳ್ಳುವ ಬಗೆಗಳೂ ಇವೆ. ಸದಾ ತಾಜಾತನವನ್ನು ಹೊಂದಿರುವ ಈ ಮರಗಳ ಕಾಂಡಗಳು ಲಕ್ಷಾಂತರ ಲೀಟರ್ ನೀರನ್ನು ಹೊಂದಿರುತ್ತವೆ ಎಂಬ ಅಂದಾಜಿದೆ. 
ಆಫ್ರಿಕಾವನ್ನು ಪ್ರತಿನಿಧಿಸುವ ಈ ಬೊಬಾಬ್ ಗಳು, ಅಲ್ಲಿನ ಜನಮಾನಸದಲ್ಲಿ ಬಹುದೊಡ್ಡ ಸಾಂಸ್ಕೃತಿಕ ಹೆಮ್ಮೆಯ ಜೀವಿಗಳು. ಹಿಂದೊಮ್ಮೆ ಅಲ್ಲಿನ ರಾಜರುಗಳು, ಈ ಮರಗಳ ಕೆಳಗೆ ನ್ಯಾಯ ತೀರ್ಮಾನಗಳನ್ನೂ, ಮುಖ್ಯವಾದ ಚರ್ಚೆಗಳನ್ನೂ ಮಾಡುತ್ತಿದ್ದರಂತೆ. ಮರಗಳು ಒಂದು ಬಗೆಯ “ಶಕ್ತಿ”ಯನ್ನು ಕೊಡುತ್ತವೆಂಬ ನಂಬಿಕೆ ಈಗಲೂ ಇದೆ. ಹಾಗಾಗಿ ಆಫ್ರಿಕಾದ ಜನಪದದಲ್ಲಿ ಬೊಬಾಬ್ ಗಳಿಗೆ ವಿಶೇಷ ಸ್ಥಾನವಿದೆ. ಮರದ ಹೂ-ಹಣ್ಣು ಎಲೆಗಳು ವಿವಿಧ ಆಹಾರಗಳ ಮೂಲವಾಗಿದ್ದು ಪಶು-ಪಕ್ಷಿಗಳನ್ನೂ ಆಕರ್ಷಿಸುವಲ್ಲಿ ಬೊಬಾಬ್ ಹೆಚ್ಚುಗಾರಿಕೆಯನ್ನು ಮೆರೆದಿದೆ. ವರ್ಷದಲ್ಲಿ ಸರಿ ಸುಮಾರು ಒಂಭತ್ತು ತಿಂಗಳು ಎಲೆಗಳನ್ನೇ ಹೊಂದಿಲ್ಲದೆ ಬರಿ ಮೈಯಲ್ಲಿ ನಿಂತಂತೆ ಕಾಣುತ್ತದೆ. ಕೈಬೆರಳಂತೆ ಐದು ಎಲೆಗಳ ಗುಂಪುಗಳ ಜೋಡಣೆಯಾಗಿದೆ. ಬುಡ ಬಲು ದೊಡ್ಡದಾಗಿ ತಲೆಯ ಮೇಲಿನ ಕೀರೀಟವು ಒಣಗಿದ ಬೇರುಗಳಂತೆ ಗೋಚರಿಸುವುದರಿಂದ ಮರವೊಂದು ತಲೆ ಕೆಳಗಾಗಿ ನಿಂತ ಹಾಗೆ ಕಾಣುತ್ತದೆ. ಅದರ ಹೂಗಳು ಒಂದೇ ದಿನದಲ್ಲಿ ಅರಳಿ ಉದುರಿ ಹೋಗುತ್ತವೆ. ಆಗೆ ಕೆಲವು ಪ್ರಾಣಿಗಳು ಆಯ್ದು ತಿನ್ನುತ್ತವೆ. ಹಣ್ಣುಗಳು ನಿಧಾನವಾಗಿ ಬಲಿಯುತ್ತವೆ. ಮೊಟ್ಟೆಯಾಕಾರದ ಹಣ್ಣುಗಳು ಗಟ್ಟಿ ಪದರವನ್ನು ಹೊಂದಿದ್ದು ಅದನ್ನು ಸುಲಿದಾಗ ಅದರ ತಿರುಳು ಒಣಗಿದ್ದರೆ ಪುಟಿ ಪುಟಿಯಂತೆ ಉದುರುತ್ತದೆ. ಈ ತಿರುಳಿನ ಪುಡಿಯನ್ನು ಪೇಯವನ್ನು ಮಾಡಲು ಬಳಸುತ್ತಾರೆ. ಅದಕ್ಕೆ ಜ್ವರ ಪರಿಹಾರದ ಗುಣಗಳೂ ಇವೆ. ಜೊತೆಯಲ್ಲಿ ಇದನ್ನು ಬಳಸಿ, ಸಾಂಬಾರಿನ ಗ್ರೆವಿ ಮಾಡಲು, ಜಾಮ್ ಹಾಗೂ ಸಾಸ್ ಮಾಡಲೂ ಬಳಸುತ್ತಾರೆ. ಬೀಜದಿಂದ ತೆಗೆದ ಎಣ್ಣೆಯು ಚರ್ಮವನ್ನು ಒದ್ದೆಯಾಗಿಡುವ ಮೂಲಕ ಆರೋಗ್ಯಕ್ಕೆ ತುಂಬಾ ಸಹಕಾರಿ. 
ಬೊಬಾಬ್ ಮರಗಳು ದೀರ್ಘಾಯುಷ್ಯನ್ನು ಹೊಂದಿರುವುದರಿಂದ, ಅವುಗಳ ವಿನ್ಯಾಸವೂ ವಿಚಿತ್ರವಾಗಿರುವುದರಿಂದ, ಬಿಸಿಲನ್ನು ತಡೆದು, ನೆರಳನ್ನು ಕೊಡುವ ಕಾರಣಕ್ಕೆ ಮತ್ತವುಗಳ ತನ್ನನ್ನು ತಾನು ಕಾಪಾಡಿಕೊಳ್ಳ ಗುಣಕ್ಕೆ ಹತ್ತು ಹಲವು ಕಥೆಗಳು ಮೂಲ ಆಫ್ರಿಕನ್ನರಲ್ಲಿ ಹುಟ್ಟಿಕೊಂಡಿವೆ. ಅವು ಹಲವು ನಂಬಿಕೆಗಳಿಗೂ ಕಾರಣವಾಗಿವೆ. ಹಾಗಾಗಿ ತೊಗಟೆಯನ್ನು ನೀರಲ್ಲಿ ಹಾಕಿ, ಆ ನೀರಿನ ಸ್ನಾನವನ್ನು ಕಡ್ಡಾಯವಾಗಿ ಮಾಡುವ ಸಂಪ್ರದಾಯವೊಂದು ಬೆಳೆದಿದೆ. ಇದರಿಂದ ಜನರು ಶಕ್ತಿವಂತರೂ, ಆರೋಗ್ಯವಂತರೂ ಆಗುವ ನಂಬಿಕೆ ಅವರದ್ದು.

ಸವಣೂರಿನ ಈ ಮರಗಳ ವೈಜ್ಞಾನಿಕ ಹೆಸರು ಆಡನ್ ಸೊನಿಯ ಡಿಜಿಟಾಟ (Adansonia digitata). ಇದು ಹತ್ತಿ, ಬೆಂಡೆ ಮುಂತಾದ ಸಸ್ಯಗಳ ಕುಟುಂಬಕ್ಕೇ ಸೇರಿದ ಸಸ್ಯವಿದು. 18ನೆಯ ಶತಮಾನದಲ್ಲಿ ಫ್ರಾನ್ಸ್ ದೇಶದ ನಿಸರ್ಗ ತಜ್ಞರಾಗಿದ್ದ ಮೈಕೆಲ್ ಆಡೆನ್ಸನ್ ಎಂಬ ವಿಜ್ಞಾನಿಯು ಆಫಿಕ್ರಾದ ಬೊಬಾಬ್ ಮರದ ಕುಲದ ಬಗ್ಗೆ ಹೆಚ್ಚು ಕೆಲಸ ಮಾಡಿದವರು. ಮೈಕೆಲ್ ಆಡೆನ್ಸನ್ ಫ್ರಾನ್ಸಿನಿಂದ ಆಫ್ರಿಕಾದ ಸೆನೆಗಾಲ್ಗೆ ತೆರಳಿ 5 ವರ್ಷಕಾಲ ಅಲ್ಲಿನ ಕಾಡುಗಳಲ್ಲಿ ಅಲೆದಾಡುತ್ತಾ ಅಲ್ಲಿನ ಸಸ್ಯ, ಪ್ರಾಣಿ ಸಂಕುಲವನ್ನು ಅಧ್ಯಯನ ಮಾಡಿದವರು. ಮೈಕೆಲ್ ಆಡೆನ್ಸನ್ ಮೊಟ್ಟ ಮೊದಲ ಬಾರಿಗೆ ಈ ಸಸ್ಯ ಸಂಕುಲವನ್ನು ವೈಜ್ಞಾನಿಕವಾಗಿ ವಿವರಿಸಿದ ವಿಜ್ಞಾನಿ. ಹಾಗಾಗಿ ಅದರ ಸಂಕುಲವನ್ನು ಆತನ ಹೆಸರಿನಿಂದಲೇ ಕರೆಯಲಾಗುತ್ತದೆ. ಪ್ರಭೇದದ ಡಿಜಿಟಾಟ, (ಡಿಜಿಟ್ -ಕೈ ಬೆರಳು) ನಿಂದ ಬಂದಿದ್ದು, ಎಲೆಗಳು ಹಾಗಿರುವುದನ್ನು ಕಾಣಬಹುದು. ಬೊಬಾಬ್ ಮರದ ಸಂಬಂಧಿಗಳನ್ನು ವಿವರಿಸಿದ ಆಡೆನ್ಸನ್ ಅವುಗಳ ಜೊತೆಗೆ ಸುಮಾರು 58 ಕುಟುಂಬಗಳ ಸಸ್ಯಗಳನ್ನು ಗುರುತಿಸಿದ್ದವರು. ಆಡೆನ್ಸನ್ ಅವರ ಸಾವಿನ ಬಯಕೆಯು ವಿಚಿತ್ರವಾಗಿತ್ತು. ಏನೆಂದರೆ ತಾನು ಸತ್ತ ನಂತರ ಗೋರಿಯ ಮೇಲೆ ತಾನು ವಿವರಿಸಿದ ಸಂಕುಲದ ಗಿಡ-ಮರಗಳ ಹೂಗಳ ಮಾಲೆಯೊಂದನ್ನು ಮಾತ್ರವೇ ಹಾಕಬೇಕೆಂದು ಕೋರಿದ್ದವರು. ಏನೇ ಆಗಲಿ ಆಡೆನ್ಸನ್ ಅವರು ವಿವರಿಸಿಕೊಟ್ಟ ಜೀವಿಯ ಕುಲವೊಂದು ಒಣ ವಾತಾವರಣದ ಬದುಕನ್ನು ಪ್ರೀತಿಸಬಲ್ಲ ಬಗೆಯನ್ನು ಜಗತ್ತಿಗೆ ತಿಳಿಸುತ್ತಾ ಅದರೊಳಗೂ ನಿರಂತರತೆಯನ್ನು ದೀರ್ಘಕಾಲ ಹಸಿರಾಗಿಟ್ಟಿದೆ. 
ದೀರ್ಘಾಯುಷ್ಯದ ಕುತೂಹಲಕ್ಕಾದರೂ, -ಸಾವಿರಾರು ವರ್ಷಗಳ ಕಾಲ ಬೃಹತ್ತಾಗಿ ಬೆಳೆದು ನಿಂತಿರುವ ಸವಣೂರಿನ ಬೊಬಾಬ್ ಮರಗಳನ್ನು ಒಮ್ಮೆಯಾದರೂ ನೋಡಲೇಬೇಕು. ಉತ್ತರ ಕರ್ನಾಟಕದ ಹಾವೇರಿಯಿಂದ ಗದಗಿಗೆ ಹೋಗುವ ಮಾರ್ಗದಲ್ಲಿರುವ ಬೇಸಿಗೆಯ ಒಣ ವಾತಾರಣದ ಜೀವಿವೊಂದರ ಬದುಕಿನ ಆಶಯವನ್ನು ಕಾಣಬಹುದು.

— ಡಾ.ಟಿ.ಎಸ್.ಚನ್ನೇಶ್

Leave a Reply