You are currently viewing ಆಳೆತ್ತರದ ಎಲೆಯ ವಿಸ್ಮಯ – Coccoloba gigantifolia

ಆಳೆತ್ತರದ ಎಲೆಯ ವಿಸ್ಮಯ – Coccoloba gigantifolia

ಮೊಟ್ಟ ಮೊದಲ ಬಾರಿಗೆ 1982ರಲ್ಲಿ ಬ್ರೆಜಿಲ್‌ ದೇಶದ ಅಮೆಜಾನಸ್‌ ರಾಜ್ಯ (Amazonas State) ದ ಮಡೆರಿಯಾ ನದಿಯ ಉಪನದಿಯಾದ ಕ್ಯಾನುಮಾ ನದಿಯ ಪಾತ್ರದ ಬಳಿ ಸುಮಾರು ಒಂದೂವರೆ ಮೀಟರ್‌ ಉದ್ದವಾದ ಎಲೆಯುಳ್ಳ ಮರವೊಂದು ಪತ್ತೆಯಾಗಿತ್ತು. ರಾಷ್ಟ್ರೀಯ ಅಮೆಜಾನ್ ಸಂಶೋಧನಾ ಸಂಸ್ಥೆ (The National Institute of Amazonian Research -INPA)ಯು ಅಮೆಜಾನಿನ ಸಸ್ಯಗಳ ತಿಳಿವಿನ ಹುಡುಕಾಟದ ಯಾತ್ರೆ-(ಪ್ರಾಜೆಕ್ಟ್ ಫ್ಲೋರಾ ಅಮೆಜಾನಿಕ-Project Flora Amazônica) ಯ ಸಂದರ್ಭದಲ್ಲಿ ಇದು ಸಿಕ್ಕಿತ್ತು. ಆಗ ಆ ಮರದ ಫಲವಂತ ಭಾಗಗಳಾವುವೂ (ಹೂ, ಹೂಗೊಂಚಲು, ಕಾಯಿ ಬೀಜ ಇತ್ಯಾದಿ) ದೊರಕದೆ, ಅದನ್ನು ಗುರುತಿಸುವುದು ಸಾಧ್ಯವಾಗಿರಲಿಲ್ಲ. ಇನ್ನು ನಾಮಕರಣವಾದರೂ ಹೇಗಾದೀತು? ಜೊತೆಗೆ, ಅದರ ಯಾವ ಭಾಗವನ್ನೂ ಸಂಗ್ರಹಿಸಿರಲೂ ಆಗಿರಲಿಲ್ಲ. ನಂತರದಲ್ಲಿ ಮುಂದೆ 1986 ರಲ್ಲಿ ನಡೆಸಲಾದ ಮತ್ತೊಂದು ಅಧ್ಯಯನ ಯಾತ್ರೆಯಲ್ಲಿ ಅಮೆಜಾನಿನ ರಾಷ್ಟ್ರೀಯ ಸಂಶೋಧನಾ ಸಂಸ್ಥೆ (INPA) ಯ ಸಸ್ಯವಿಜ್ಞಾನಿ ಜ್ಯಾನ್‌ ರೆವೆಲ್ಲಾ (Juan Revella) ಅವರು ಅಗಲವಾದ ಎಲೆಯ ಹಾಗೂ ಫಲವಂತವಾಲ್ಲದ ಮರದ ಫೋಟೊವನ್ನು ಚಿತ್ರಿಸಿದ್ದರು. ಆಗಲಾದರೂ ಒಣಗಿಸಿದ ಎಲೆಯ (Herbarium)ನ್ನು ಸಂಗ್ರಹಿಸಲೂ ಕೂಡ ಸಾಧ್ಯವಾಗಿರಲಿಲ್ಲ. ಹಾಗಾಗಿ ಯಾವುದೇ ನಿಖರವಾದ ವಿವರಗಳ ತೀರ್ಮಾನ ಕಷ್ಟವಾಗಿತ್ತು.

       ಮುಂದೆ, 1989 ಮತ್ತು 1993ರ ನಡುವೆ ಮತ್ತೆ ನಡೆಸಲಾದ ಅಮೆಜಾನ್‌ ಸಂಶೋಧನಾ ಯಾತ್ರೆಯಲ್ಲಿ, ರಾಷ್ಟ್ರೀಯ ಅಮೆಜಾನ್‌ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳಾದ C.A. ಫೆರೆರಿಯಾ, R. ಗ್ರಿಬೆಲ್‌ ಮತ್ತು ಜೈಮೆ ಫ್ರಾಂಕ್ಯಾ (C.A. Cid Ferreira, R. Gribel, and Jaime Tadeu França) ಇವರುಗಳಿಗೆ ಸುಮಾರು 14 ಮರಗಳು ಕಣ್ಣಿಗೆ ಬಿದ್ದವು. ಆಗಲೂ ಅವುಗಳಲ್ಲಿ ಯಾವುದೇ ಫಲವಂತ ಭಾಗಗಳು ದೊರಕದೆ, ಮತ್ತೊಮ್ಮೆ ನಿರಾಸೆಯಾಗಿತ್ತು. ಆದರೆ ಬೃಹತ್ತಾದ ಎಲೆಗಳನ್ನು ಸಂಗ್ರಹಿಸಿ ಒಣಗಿಸಿ ಹರ್ಬೇರಿಯಂ (Herbarium) ಮಾಡಲು ಸಾಧ್ಯವಾಗಿತ್ತು. ಅದರಿಂದಾಗಿ ರಾಷ್ಟ್ರೀಯ ಅಮೆಜಾನ್‌ ಸಂಶೋಧನಾ ಸಂಸ್ಥೆ (INPA)ಯು ಅತ್ಯಂತ ದೊಡ್ಡದಾದ ಎಲೆಗಳನ್ನಾದರೂ ಪ್ರದರ್ಶನಕ್ಕೆ ಒದಗಿಸುವಷ್ಟು ಸಂತಸವನ್ನು ಪಡೆದಿತ್ತು. ಆನಂತರದಲ್ಲಿ 2005ರ ಆಗಸ್ಟ್‌ ನಲ್ಲಿ ಮತ್ತೆ ನಡೆಸಲಾದ ಯಾತ್ರೆಯಲ್ಲಿ C.A. ಫೆರೆರಿಯಾ ಮತ್ತು R. ಗ್ರಿಬೆಲ್‌  ಅವರು ಫಲವಂತ ಹೂಗೊಂಚಲು ಮತ್ತು ಇತರೇ ಭಾಗಗಳನ್ನು ಸಂಗ್ರಹಿಸಿದ್ದರು. ಮರದ ಕೆಳಗೆ ಬಿದ್ದ ಕಾಯಿ, ಬೀಜಗಳನ್ನೂ ಸಂಗ್ರಹಿಸಿ ಕೊಂಡೊಯ್ಯಲು ಆಗಿತ್ತು. ಫಲವಂತ ಭಾಗಗಳನ್ನು ರಾಷ್ಟ್ರೀಯ ಅಮೆಜಾನ್‌ ಸಂಶೋಧನಾ ಸಂಸ್ಥೆ (INPA)ಯ ಸಂಗ್ರಹಾಲಯದಲ್ಲಿ ಹರ್ಬೇರಿಯಂಗಳಾಗಿಸಿ ಜೊತೆಗೆ ಬೀಜಗಳನ್ನು ಸಸಿಗಳನ್ನಾಗಿಸುವ ಪ್ರಯತ್ನವನ್ನೂ ಆರಂಭಿಸಲಾಗಿತ್ತು. ಹೀಗೆ 2005ರಲ್ಲಿ ಆರಂಭವಾದ ಗುರುತಿಸುವ ಮತ್ತು ನಾಮಕರಣವನ್ನೂ ಮಾಡುವ ಪ್ರಕ್ರಿಯೆಯು ಮುಂದೆ ಒಟ್ಟು 13 ವರ್ಷಗಳು ಹಿಡಿಯಿತು. ಕಡೆಗೆ 2018ರಷ್ಟೊತ್ತಿಗೆ ಅದನ್ನು ಪಾಲಿಗೊನೇಸಿಯೇ (Polygonaceae) ಸಸ್ಯ ಕುಟುಂಬದ, ಕೊಕೋಲೊಬಾ (Coccoloba)ಸಂಕುಲಕ್ಕೆ ಸೇರಿಸಿ, ಅದರ ಎಲೆಗಳ ಬೃಹತ್ತಾದ ಪ್ರಾಮುಖ್ಯತೆಯಿಂದಾಗಿ Coccoloba gigantifolia ಎಂದು ನಾಮಕರಣ ಮಾಡಲಾಯಿತು. ಇದರ ಸಂಶೋಧನಾ ವಿವರಗಳನ್ನು Acta Amazonica ಸಂಶೋಧನಾ ಪತ್ರಿಕೆಯು ಕಳೆದ 2019ರಲ್ಲಿ ಪ್ರಕಟಿಸಿದೆ.

ಈ ಪ್ರಭೇದದ ವಿಶೇಷತೆಗಳನ್ನು ಮತ್ತು ಅದರ ಗುರುತು ಹಚ್ಚಿ ನಾಮಕರಣ ಮಾಡಿದ ಶ್ರಮದಾಯಕ ಕುತೂಹಲದ ವಿವರಗಳನ್ನು ನೋಡೋಣ.  

            ಕೊಕೋಲೊಬಾ (Coccoloba)ಸಂಕುಲವನ್ನು 1855ರಷ್ಟು ಹಿಂದೆಯೇ ವಿವರಿಸಲಾಗಿತ್ತು. ಆಗಲೂ ಈ ಸಂಕುಲದ ಪ್ರಭೇದಗಳನ್ನು ಗುರುತಿಸಿ ಹೆಸರಿಸುವ ಸಂಕಷ್ಟವನ್ನು ವಿಜ್ಞಾನಿಗಳು ದಾಖಲಿಸಿದ್ದರು. ಪ್ರಭೇದಗಳ ಗುಣ-ಲಕ್ಷಣಗಳ ಕಟ್ಟುಪಾಡನ್ನು ತೀರ್ಮಾನಿಸಿ ಅರ್ಥೈಸುವುದು ತೀರಾ ಗೊಂದಲಮಯವಾದ ವಿಷಯ. ಅದರಲ್ಲೂ ಕೊಕೋಲೊಬಾದಲ್ಲಂತೂ ಮತ್ತಷ್ಟೂ ಕಷ್ಟ. ಏಕೆಂದರೆ, ಒಂದಕ್ಕೊಂದು ತೀರಾ ಹತ್ತಿರವಾದ ಗುಣ-ಲಕ್ಷಣಗಳಲ್ಲಿ ಭಿನ್ನವಾಗಿರುವ ಸಂದರ್ಭಗಳು ಹೆಚ್ಚು. ಪಾಲಿಗೊನೇಸಿಯೇ ಕುಟುಂಬದ  ಗಿಡ-ಮರಗಳನ್ನು ಅವುಗಳ ಹೊರ ನೋಟದ ವಿವರಗಳಿಂದ ಒಂದಷ್ಟು ತಿಳಿದು, ಅವುಗಳ ಜೀವನ ಶೈಲಿಯನ್ನು ಅನುಸರಿಸಿ ವಿಂಗಡಿಸಿದ್ದರೂ ಸಂಕುಲ ಹಾಗೂ ಪ್ರಭೇದಗಳಲ್ಲಿ ವಿಸ್ತರಿಸಿ ವಿವರಿಸುವುದು. ಕಷ್ಟವೇ ಆಗಿತ್ತು. ಹಾಗಾಗಿ ಕೊಕೋಲೊಬಾ ಜೈಗಾಂಟಿಕಾ (Coccoloba gigantifolia) ವನ್ನೂ ಗುರುತಿಸಿ ವಿವರಿಸಲು ಸುಮಾರು 35 ವರ್ಷಗಳಿಗೂ ಹೆಚ್ಚು ಸಮಯ ಹಿಡಿದಿದೆ. ಅದರಲ್ಲೂ 10-15 ವರ್ಷಗಳ ನಿರಂತರವಾದ ತಾಳ್ಮೆಯ ಕುತೂಹಲದ ಪರಿಶ್ರಮ ಇದೆ.

       2005ರಲ್ಲಿ C.A. ಫೆರೆರಿಯಾ ಮತ್ತು R. ಗ್ರಿಬೆಲ್‌ರವರು, ಎಲೆಗಳು ಮರದ ಕೆಳಗೆ ಬಿದ್ದ ಕಾಯಿ, ಬೀಜಗಳನ್ನೂ ಸಂಗ್ರಹಿಸಿ ರಾಷ್ಟ್ರೀಯ ಅಮೆಜಾನ್‌ ಸಂಶೋಧನಾ ಸಂಸ್ಥೆ (INPA) ಗೆ ತಂದು ಹರ್ಬೇರಿಯಂ ಮಾಡಿ ಬೀಜಗಳನ್ನು ಬಿತ್ತಿ ಬೆಳೆಯುವ ಪ್ರಯತ್ನವನ್ನು ಆರಂಭಿಸಿದರು. ಸರಿ ಸುಮಾರು 13 ವರ್ಷಗಳ ಶ್ರದ್ಧೆ ಮತ್ತು ತಾಳ್ಮೆಯ ಫಲವಾಗಿ ಒಂದು ಸಸಿಯು ಸಂಪೂರ್ಣ ಫಲಭರಿತವಾಗಿ ಹೂ ಬಿಟ್ಟು, ಕಾಯಾಗಿ ಬೀಜಗಟ್ಟುವ ಸ್ಥಿತಿಗೆ ತಲುಪಿತ್ತು. ಅಷ್ಟೂ ವರ್ಷಗಳ ಕಾಲ ಸಸ್ಯವನ್ನು ಅರಿತು ವಿವರಿಸಿದ್ದಲ್ಲದೆ, ಅದು ಈವರೆವಿಗೂ ತಿಳಿಯದ ಹೊಸತೊಂದು ಪ್ರಭೇದವೆಂದು ಗೊತ್ತಾಗಿತ್ತು.

       ಆ ಪ್ರಭೇದವು ಆಗಲೇ ತಿಳಿದಿದ್ದ ಸಮುದ್ರ ದ್ರಾಕ್ಷಿ (Seagrape)ಎಂದು ಕರೆಯಲಾಗುತ್ತಿದ್ದ ಕೊಕೋಲೊಬಾ ಯುವಿಫೆರಾ (Coccoloba uvifera)ದ ಸಂಬಂಧಿ. ಇದರ ಕಾಯಿ/ಹಣ್ಣುಗಳು ದ್ರಾಕ್ಷಿಯನ್ನು ಹೋಲುತ್ತಿದ್ದು ಅದೇ ಬಣ್ಣ, ಅದೇ ರೀತಿಯಲ್ಲೇ ಪ್ರಬುದ್ಧತೆಗೂ ಬಂದೂ ದ್ರಾಕ್ಷಿಯಂತೆಯೇ ಊದಬಣ್ಣಕ್ಕೂ ತಿರುಗುತ್ತವೆ. ದ್ರಾಕ್ಷಿಯನ್ನು ಬಳಸಿದಂತೆಯೇ ಹಾಗೆಯೇ ತಿನ್ನಬಹುದು, ಜಾಮ್‌ ಜೆಲ್ಲಿ ಮಾಡಬಹುದು, ಹುದುಗು (Fermentation) ಬರಿಸಿ ವೈನ್‌ ಕೂಡ ಮಾಡಬಹುದು. ಆದರೆ gigantifolia ದಲ್ಲೂ ಹಾಗೇನಾ ಇನ್ನೂ ತಿಳಿಯಬೇಕಿದೆ.

ಕೊಕೋಲೊಬಾ ಜೈಗ್ಯಾಂಟಿಫೊಲಿಯಾ (C.  gigantifolia) ಒಂದು ಅಪರೂಪದ ಪ್ರಭೇದ. ಇದರ ಸಸ್ಯ ವರ್ಣನೆಯೂ ವಿಶೇಷವೇ. ನೀಳವಾದ ಸುಮಾರು 50 ಅಡಿಗಳಷ್ಟು (10-15 ಮೀ) ಎತ್ತರಕ್ಕೆ ಬೆಳೆಯುವ ಮರ. ಮರದ ಕಾಂಡದ ಆರಂಭದಲ್ಲಿ ಕೆಲವೊಮ್ಮೆ ಕೊಂಬೆಗಳಾಗುವಂತೆ ಮುಗುಳೊಡೆದರೂ ಅವುಗಳು ಹೆಚ್ಚು ಬೆಳೆಯವು. ಅವು ಹಾಗೆ ಹರೆಯದವೇ (Pubescent Branches) ಆದ ಕೊಂಬೆಗಳಂತೆ ಇರುತ್ತವೆ. ಹಾಗಾಗಿ ಒಂಟಿ ಕಾಂಡ ಹಾಗೂ ಕವಲೊಡೆಯದ ರೆಂಬೆ-ಕೊಂಬೆಗಳಿಲ್ಲ ನೇರವಾಗಿ 40-50 ಅಡಿಗಳ ಎತ್ತರದ ಮರ. ಮೇಲೆ ಎಲೆಗಳ ಹರಹಿನಿಂದ ಕಂಗೊಳಿಸುತ್ತವೆ.

ಮರದ ಪ್ರಭೇದದ ಹೆಸರೇ ಹೇಳುವಂತೆ ವಿಶೇಷವೆಂದರೆ ಎಲೆಗಳದ್ದೇ. ಎಲೆಗಳ ಉದ್ದ 1.5 ಮೀ ನಿಂದ 2.25 ಮೀ ಗಳಷ್ಟು ಮತ್ತು ಅಗಲ 1.25 – 1.50 ಮೀ. ಇಷ್ಟೊಂದು ಹರವಾದ ಎಲೆಗಳು ಮರದ ಕಾಂಡಕ್ಕೆ ಒಂದಾದರೊಂದಂತೆ ಸುತ್ತುವರೆದಿರುತ್ತವೆ. ಈ ಪ್ರಭೇದವು ಕೇವಲ ದಕ್ಷಿಣ ಅಮೆರಿಕದ ಮಡೆರಿಯಾ ನದಿಯ ಆಸುಪಾಸಿನಲ್ಲಿ ಮಾತ್ರವೇ ಕಾಣಬರುತ್ತಿದ್ದು, ಅಲ್ಲಿಗೆ ಸೀಮಿತಗೊಂಡಿದೆ. ಮಡೆರಿಯಾ ನದಿಯ ಜಲಾನಯನ ಪ್ರದೇಶದಲ್ಲಿ ಮಾತ್ರವೇ ಈ ಜೈಗ್ಯಾಂಟಿಫೊಲಿಯಾ ಮರಗಳನ್ನು, ಅದೂ ಅಲ್ಲಲ್ಲಿ ಕಾಣಬಹುದು.  

ಕೆಲವು ವಿಜ್ಞಾನಿಗಳ ಇಷ್ಟೊಂದು ಅಗಲವಾದ  ಎಲೆಗಳನ್ನು ಹೊಂದಿರುವುದೇ ಅಮೆಜಾನ್‌ ನಂತಹಾ ಕಾಡಿಗೆ ಸೀಮಿತವಾದ್ದರಿಂದ! ಏಕೆಂದರೆ ಅಲ್ಲಿ ದಟ್ಟ ನೆರಳು ಮತ್ತು ಬಿಸಿಲಿನ ಪೈಪೋಟಿ ಎಲೆಗಳ ವಿಶಾಲ ಸ್ಥಿತಿಗೆ ವಿಕಾಸವಾಗಿದೆ. ಹಾಗಾಗಿ ಬೇರೆಡೆ ಬೆಳೆದಾಗ ಇದೇ ಬಗೆಯ ಉದ್ದ ಮತ್ತು ಅಗಲವಾದ ಎಲೆಗಳು ಬರುವುದೂ ಅಪರೂಪವೇನೋ! ಅಷ್ಟೊಂದು ಉದ್ದ ಮತ್ತು ಅಗಲವಾದ ಎಲೆಗಳಾಗಿದ್ದರೂ ಬಲವಾದ ತೊಟ್ಟು ಇದ್ದು ಇರುವ ಒಂದೇ ಕಾಂಡವನ್ನು ಸುತ್ತುವರೆದು, ಕೊಡೆ ಹಿಡಿದಂತೆ ಗೋಚರವಾಗುತ್ತದೆ.

ಹಾಗಾಗಿ ಕೇವಲ ಒಂದೇ ನದಿಯ ಸುಮಾರು ನೂರಾರು ಕಿ. ಮೀ ಉದ್ದಗಲದಲ್ಲಿ ಮಾತ್ರವೇ ವಾಸಸ್ಥಾಳವನ್ನಾಗಿಸಿ ಬದುಕುತ್ತಿರುವ ಮರ Coccoloba gigantifolia. ಅಷ್ಟೇ ಅಲ್ಲದೆ ಇಂತಹಾ ಅಪರೂಪದ ಹಾಗೂ ಕಡಿಮೆ ಸಂಖ್ಯೆಯ ಸೀಮಿತ ವಸತಿಯನ್ನೂ ಹೊಂದಿರುವ ಈ ಸಸ್ಯವನ್ನು “ಅಪಾಯದ ಅಂಚಿನಲ್ಲಿ ಇರುವ ಮರ” ಎಂದು ಗುರುತಿಸಲಾಗಿದೆ. ಅಲ್ಲದೆ ಅಪಾಯದ ಅಂಚಿನ ಸಸ್ಯಗಳ ಕೆಂಪು (Red Book of Flora) ಪಟ್ಟಿಯಲ್ಲಿ ಸೇರಿಸಲು ಸಂಶೋಧಕರು ಕೂಡ ಶಿಫಾರಸ್ಸು ಮಾಡಿದ್ದಾರೆ. ಇಂತಹಾ ಹರವಾದ ವಿಸ್ತೀರ್ಣವಾದ ಎಲೆಗಳನ್ನು ಹೊಂದಿರುವ ಈ ಸಸ್ಯದ ದ್ಯುತಿ ಸಂಶ್ಲೇಷಣೆಯೂ (Photosynthesis) ಭಿನ್ನವಾಗಿರಬಹುದೇ? ಎಂದೂ ಸಂಶೋಧಕರು ಕುತೂಹಲಗೊಂಡಿದ್ದಾರೆ.

ಸಸ್ಯ ವಿಜ್ಞಾನದ ಕೌತುಕವೆಂಬಂತೆ ಇಷ್ಟೊಂದು ಅಗಲವಾದ ಎಲೆಯ ಮರವನ್ನು ಕುರಿತು ಮೊದಲು ತಿಳಿಸಿದ್ದು  CPUS ನ ಹಿತೈಷಿಗಳೂ ನನ್ನ ಹಿರಿಯ ಮಿತ್ರರೂ, ವಾಷಿಂಗಟನ್‌ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಆಗಿರುವ ಪ್ರೊ. ಮೋಹನ್‌ ಕುಮಾರ್‌. ನಂತರ ಅದರ ಮೂಲ ಸಂಶೋಧನಾ ಪ್ರಬಂಧವನ್ನು ಇಂಟರ್‌ನೆಟ್‌ ನಲ್ಲಿ ಹುಡುಕಿದೆ. ಈ ಹಿಂದೆ ಸಸ್ಯಯಾನ ಎಂದು ಬರೆಯುತ್ತಿದ್ದಾಗಿನ ಅನುಭವಗಳು ನೆನಪಾಗಿ, ಅದನ್ನು ತಿಂಗಳಿಗೊಂದು ಬಾರಿಯಾದರೂ ಮುಂದುವರೆಸುವ ಪ್ರೇರಣೆ ಸಿಕ್ಕಿತು.  ಪ್ರೊ. ಮೋಹನ್‌ ಕುಮಾರ್‌. ಅವರಿಗೆ ಧನ್ಯವಾದಗಳು.

ಇಂದು (04-ಮೇ 2022) ಕರ್ನಾಟಕ ರಾಜ್ಯಾದ್ಯಂತ PUC  ವಿದ್ಯಾರ್ಥಿಗಳು ಜೀವಿವಿಜ್ಞಾನ ಪರೀಕ್ಷೆಯನ್ನು ಬರೆಯುತ್ತಾರೆ. ಜೀವನ ಬದಲಿಸುವ ಈ ಪರೀಕ್ಷೆಯು ಅವರಿಗೆಲ್ಲಾ Coccoloba gigantifolia ದ ಎಲೆಗಳ ಹಾಗೆ ಸಾಕಷ್ಟು ಹರವಾದ ಅವಕಾಶಗಳನ್ನು ಕೊಡಲಿ ಎಂದು, ಹೊಸ ಜೀವಿಯ ಬರಹದ ಜೊತೆಯಾಗಿಸಿ CPUS ಹಾರೈಸುತ್ತದೆ.

(ಇದರ ಬಹುಪಾಲು ಮಾಹಿತಿ ಹಾಗೂ ಚಿತ್ರಗಳನ್ನು ಕೆಳಗಿನ ವಿಜ್ಞಾನ ಪ್ರಬಂಧದಿಂದ ಪಡೆಯಲಾಗಿದೆ)

ನಮಸ್ಕಾರ.

ಡಾ. ಟಿ.ಎಸ್.‌ ಚನ್ನೇಶ್.‌

ಹೆಚ್ಚಿನ ಓದಿಗೆ:

Melo, E. D., Ferreira, C. A. C., & Gribel, R. (2019). A new species of Coccoloba P. Browne (Polygonaceae) from the Brazilian Amazon with exceptionally large leaves. Acta Amazonica49(4), 324-329. doi:10.1590/1809-4392201804771

Leave a Reply