ಚಳಿಗಾಲದ ಆರಂಭಕ್ಕೆ ಬರುವ ತಾಜಾ ಬಟಾಣಿಯು, ಹಸಿರು ಬಣ್ಣದ ಮುತ್ತುಗಳನ್ನು, ಹಚ್ಚ ಹಸಿರಾದ ಕಾಯಿಯಲ್ಲಿ ಜೋಡಿಸಿಟ್ಟ ಹಾಗಿರುತ್ತವೆ. ಬಿಡಿಸಲೂ ಸುಲಭ, ಬೇಯಿಸಲೂ ಅಷ್ಟೇ! ಕಾಳಿನ ಹಸಿರಿಗೂ ವಿಶೇಷ ಕಾರಣವನ್ನು ಹೊಂದಿರುವ ಬಟಾಣಿಯು ಸಸ್ಯ ವೈಜ್ಞಾನಿಕ ಜಗತ್ತಿನಲ್ಲಿಯೂ ವಿಶೇಷವಾಗಿದ್ದು ಜೊತೆಗೆ ಮಾನವ ಸಂಬಂಧದಲ್ಲೂ ವಿಶೇಷತೆಯ ಹೊಂದಿದೆ. ಹೌದು ನವಶಿಲಾಯುಗದ ಅಂತ್ಯದಲ್ಲಿ ಕೃಷಿಯ ಆರಂಭಕ್ಕೆ ಕಾರಣವಾದ ಎಂಟು ಬೆಳೆಗಳಲ್ಲಿ ಒಂದು ಬಟಾಣಿ. ಹಬ್ಬಿ ಬೆಳೆಯುವ ಸಸ್ಯ, ತುದಿಯಲ್ಲಾಡುವ ಮುಗುಳು, ಆಕರ್ಷಕವಾದ ಹೂಗಳು, ಹಚ್ಚ ಹಸಿರಾದ ಕಾಯಿಗಳು, ಮತ್ತೊಳಗಿನ ಮುತ್ತಿನಂತಾ ಮುದ್ದಾದ ಕಾಳುಗಳು! ಮುದ್ದು ಮುದ್ದಾದ ಪುಟಾಣಿಯರಿಗೆ ಬಟಾಣಿಯ ಜೊತೆ ಸಮೀಕರಿಸಿ ಮಾತಾಡುವುದುಂಟು. ಬಟಾಣಿಯ ಕಾಳುಗಳು, ಜೋಡಣೆಯಲ್ಲಷ್ಟೇ ಅಲ್ಲ ನೋಡಲೂ ಸುಂದರವಾದ ಕಾಳುಗಳು.

ವಿಜ್ಞಾನ ಜಗತ್ತಿಗೆ ಹೊಸತೊಂದು ಲೋಕವನ್ನು ತೆರೆದಿಟ್ಟು, ಆನುವಂಶಿಕ ಸಂಗತಿಗಳನ್ನು ಜೈವಿಕ ಪರಂಪರೆಯ ಭಾಗವಾಗಿಸಲು ಕಾರಣವಾದ ಕೀರ್ತಿ ಈ ಸಸ್ಯಸಂಕುಲದ್ದು. ಇಂದು ಆನುವಂಶಿಕ ವಿಜ್ಞಾನವು ವಿಶೇಷ ಭಾಗವಾಗಿ ಬೆಳೆಯಲು ಮೂಲ ತಳಹದಿಯ ವಿವರಗಳನ್ನು ಒದಗಿಸಿದ್ದು ಈ ಸಸ್ಯಗಳ ಒಡನಾಟದ ಅಧ್ಯಯನಗಳು. ಹಿಂದಿನ ಆಸ್ಟ್ರಿಯಾದ ಈಗಿನ ಝೆಕ್ ದೇಶದಲ್ಲಿರುವ ಬರ್ನೊಃ (Brno) ಅಲ್ಲಿದ್ದ ಗ್ರೆಗೊರ್ ಜಾನ್ ಮೆಂಡಲ್ ಎಂಬ ಪಾದ್ರಿ ಹಾಗೂ ಸಸ್ಯವಿಜ್ಞಾನಿಯು ಸರಿ ಸುಮಾರು 30,000 ಕ್ಕೂ ಹೆಚ್ಚು ಬಟಾಣಿಯ ಸಸ್ಯಗಳನ್ನು ಏಳು ವರ್ಷಗಳಷ್ಟು ದೀರ್ಘ ಕಾಲದ ಅಧ್ಯಯನಗಳಿಂದ ಇಂದಿನ “ಜೆನೆಟಿಕ್ಸ್” ಅಧ್ಯಯನ ವಿಭಾಗಕ್ಕೆ ಕಾರಣರಾದರು. ಕಾಳಿನ ಹಸಿರು ಬಣ್ಣವೂ ವಿಶೇಷವಾಗಿದ್ದು ಸಸ್ಯಗಳಲ್ಲಿನ ಎಲೆಗಳಲ್ಲಿದೆ ಕಾಳೂ ಕೂಡ ದ್ಯುತಿ ಸಂಶ್ಲೇಷಣೆಯಲ್ಲಿ ಬಾಗಿಯಾದ ಸಂಗತಿಯನ್ನು ಒಳಗಿಟ್ಟುಕೊಂಡ ಪ್ರಭೇದ ಬಟಾಣಿ ಪೈಸಮ್ ಸಟೈವಮ್(Pisum sativum).

ಬಟಾಣಿಯು ಲೆಗ್ಯೂಮ್ ಸಸ್ಯಗಳಲ್ಲೊಂದಾದ ಫ್ಯಾಬೇಸಿಯೇ ಅಥವಾ ಲೆಗ್ಯುಮಿನೊಸಿಯೇ ಕುಟುಂಬಕ್ಕೆ ಸೇರಿದೆ. ಈ ಕುಟುಂಬದಲ್ಲಿ 650 ಸಂಕುಲಗಳಿದ್ದು ಸರಿ ಸುಮಾರು 20,000 ಪ್ರಭೇದಗಳನ್ನು ಹೊಂದಿದೆ. ಇಂಗ್ಲೀಷಿನಲ್ಲಿ ಪೀ (Pea) ಎಂದೇ ಸಹಜವಾದ ನಾಮಪದವಾಗಿರುವ ಬಟಾಣಿಗೆ ಈ ಪದವು ಲ್ಯಾಟಿನ್ನ Pisum ನಿಂದ ಬಂದದ್ದು. ಈ ಸಸ್ಯವಲ್ಲದೆ ಹಲವು ಬೇಳೆ-ಕಾಳುಗಳನ್ನು -ಪೀ (Pea)- ಎಂಬುದನ್ನು ಜೋಡಿಸಿ ಹೆಸರಿಸುತ್ತಾರೆ. ಉದಾಹರಣೆಗೆ ಕಡಲೆಗೆ ಚಿಕ್ ಪೀ-Chickpeas, ಅಲಸಂದೆಗೆ ಕೌ-ಪೀ Cowpeas, ತೊಗರಿಗೆ -ಪಿಜನ್ ಪೀ Pigeon Peas, ಹಾಗೆಯೇ ನೆಲಗಡಲೆ-ಶೇಂಗಾಗೆ ಪೀ-ನಟ್ ಹೀಗೆ… ಇನ್ನು ಸಟೈವಮ್ (Sativum) ಅಂದರೆ, ಬಿತ್ತಿದ, ನಾಟಿಮಾಡಿದ, ನೆಟ್ಟ ಎಂಬರ್ಥವಿದೆ.
ಬಟಾಣಿಯನ್ನು ಆನುವಂಶಿಕ ವಿಜ್ಞಾನ, ತಳಿ ಅಭಿವೃದ್ಧಿ ವಿಜ್ಞಾನ, ಜೀವಿರಸಾಯನ ವಿಜ್ಞಾನ ಹಾಗೂ ಮಾಲೆಕ್ಯುಲಾರ್ ಜೀವಿವಿಜ್ಞಾನ ಮುಂತಾದವುಗಳ ಮೂಲವೈಜ್ಞಾನಿಕ ಅಧ್ಯಯನಗಳಲ್ಲಿ ಸಾಕಷ್ಟೇ ಬಳಸಲಾಗಿದೆ ಮತ್ತು ಬಳಸಲಾಗುತ್ತಿದೆ. ಗ್ರೆಗೊರ್ ಮೆಂಡಲ್ ಮಾತ್ರ ಈ ಪೈಸಮ್ (Pisum) ಸಂಕುಲವನ್ನು ಬಳಸಿ ಜನಪ್ರಿಯಗೊಳಿಸಿದ್ದಲ್ಲದೆ, ಮುಂದೆ ಮೆಂಡಲ್ ಮತ್ತು ಬಟಾಣಿಯ ಪ್ರಯೋಗಗಳು ಎಂದೇ ರೂಪಕವಾಗಿಸುವಷ್ಟು ವಿಜ್ಞಾನದಲ್ಲಿ ಗುರುತಿಸಲಾಗಿದೆ. ಈ ಸಸ್ಯ ಸಂಕುಲವು ಹೈಬ್ರಿಡೈಜಶನ್ (ಸಂಕರಗೊಳಿಸುವಿಕೆ) ಗೆ ಒಗ್ಗಿ ಅಧ್ಯಯನಗಳಿಗೆ ಮಹತ್ವವನ್ನು ಕೊಟ್ಟಿದೆ. ಹಾಗಾಗಿ ಮೆಂಡಲ್ ಬಟಾಣಿಯನ್ನೇ ಆಯ್ಕೆ ಮಾಡಿದ ಬಹು ಮುಖ್ಯ ಕಾರಣಗಳೆಂದರೆ, ನಿಜವಾದ ತಳಿ ಅಧ್ಯಯನದಲ್ಲಿ ಸಂತತಿಯಿಂದ ಸಂತತಿಗೆ ಗುಣಗಳ ವರ್ಗಾವಣೆಯ ಸ್ಥಿರತೆ ಹಾಗೂ ಹೂವಾಡುವಾಗ ಇತರೇ ಪರಾಗದಿಂದ ಸಂರಕ್ಷಣೆ ಅಲ್ಲದೆ ಸಂಕರಗೊಂಡ ತಳಿಯ ಸಂತತಿಯಲ್ಲಿ ಫಲವಂತಿಕೆಯಲ್ಲಿ ಬದಲಾಗದಿರುವಿಕೆ. ಇವೆಲ್ಲವೂ ಬಟಾಣಿಯ ಸಂಕುಲದಲ್ಲಿ ಹೇಳಿ ಮಾಡಿಸಿದಂತೆ ಇವೆ. ಆದ್ದರಿಂದ ಇದೊಂದು ಆನುವಂಶಿಕ ಮತ್ತಿತರ ಸಸ್ಯವೈಜ್ಞಾನಿಕ ಅಧ್ಯಯನಗಳಲ್ಲಿ ಮಾಡೆಲ್ ಸಸ್ಯವಾಗಿ ಹೆಸರಾಗಿದೆ. ಆನುವಂಶಿಕ ವಿಜ್ಞಾನವಂತೂ ಬಟಾಣಿ ಹಾಗೂ ಮೆಂಡಲ್ ಅವರನ್ನು ಸಮೀಕರಿಸಿಯೇ ಗುರುತಿಸಿ ಕೊಂಡಾಡಿದೆ.
ಆರಂಭಿಕ ಕೃಷಿಯ ಸಸ್ಯಗಳು
ನವಶಿಲಾಯುಗದ ಆರಂಭವಾದ ಕೃಷಿಯಲ್ಲಿ ಮೊಟ್ಟ ಮೊದಲು ಬಳಸಲಾದವು ಎಂಟು ಸಸ್ಯಗಳು ಮಾತ್ರ ಎಂಬ ಒಂದು ಅಂದಾಜಿದೆ. ಎರಡು ಬಗೆಯ ಗೋಧಿ ಪ್ರಭೇದಗಳು. ಒಂದು ಬಗೆಯ ಮೂಲ ನೈಸರ್ಗಿಕ ಪ್ರಭೇದ -ಎನ್ಕಾರ್ನ್ ಗೋಧಿ (Einkorn Wheat), ಇದು ಮಾನೊಕಾಕಮ್ ಗೋಧಿ. ಮತ್ತೊಂದು ಎಮ್ಮರ್ ಗೋಧಿ (Emmer Wheat), ಇದೊಂದು ಬಗೆಯ ನೈಸರ್ಗಿಕ ಸಂಕರ ಪ್ರಭೇದ. ಇದು ಡೈಕಾಕಂ ಗೋಧಿ. ಮೂರನೆಯದು ಬಾರ್ಲಿ. ಮುಂದೆ ನಾಲ್ಕು ಲೆಗ್ಯೂಮ್ ಸಸ್ಯಗಳು, ಕೇಸರಿ ಬೇಳೆ, ಕಡಲೆ, ಬಟಾಣಿ ಮತ್ತು ಬಿಟರ್ ವಿಚ್ (Bitter vetch) ಎಂಬ ದ್ವಿದಳ ಧಾನ್ಯಗಳು ಹಾಗೂ ಕಡೆಯದು ಅಗಸೆ (Flax or Linseed) ಇವುಗಳನ್ನು ಮೊದಲು ನಿಸರ್ಗದಲ್ಲಿಯೇ ಕಂಡುಕೊಂಡು ತಿನ್ನುತ್ತಿದ್ದರೂ ಬೆಳೆಯಲು ಆರಂಭಿಸಿದ್ದೂ ಈ ಬೆಳೆಗಳ ಮೂಲಕ ಎಂದು ಪ್ರಾಚ್ಯ ಸಂಶೋಧನೆಗಳ ಅಂದಾಜುಗಳಿಂದ ಊಹಿಸಲಾಗಿದೆ. ಈ ಊಹೆಯನ್ನು 1988ರಲ್ಲಿ ವಿಜ್ಞಾನ ಜಗತ್ತಿಗೆ ಮಂಡಿಸಿದವರು ಸಸ್ಯವಿಜ್ಞಾನಿಗಳಾದ ಇಸ್ರೇಲಿನ ಡೇನಿಯಲ್ ಜೊಹರಿ (Daniel Zohary) ಮತ್ತು ಜರ್ಮನಿಯ ಮರಿಯಾ ಹಾಫ್ (Maria Hopf). ಬಟಾಣಿಯು ಮೂಲ ಕೃಷಿಯ ಮೊದಲ ಬೆಳೆಗಳಲ್ಲಿ ಒಂದು.

ಆರಂಭಿಕ ಕೃಷಿಯ ನೆಲೆಯ ಆಸು-ಪಾಸಿನಲ್ಲೇ ಬಟಾಣಿಯ ಉಗಮ ಸ್ಥಾನ ಕೂಡ. ಅಂದರೆ ಕೃಷಿಯು ಆರಂಭವಾದ ನೆಲವನ್ನು, ಅರ್ಧ ಚಂದ್ರಾಕಾರದ ನೆಲ – ಫರ್ಟೈಲ್ ಕ್ರೆಸೆಂಟ್ (Fertile Crescent)- ಎಂದು ಕರೆಯಲಾಗುತ್ತದೆ. ಇದು ಇಂದಿನ ಏಶಿಯಾದ ಪಶ್ಚಿಮ ಹಾಗೂ ಆಫ್ರಿಕಾದ ಉತ್ತರದ ಇರಾಕ್, ಟರ್ಕಿ, ಸಿರಿಯಾ ಲೆಬನಾನ್ ಇಸ್ರೇಲ್ ಮತ್ತು ಪ್ಯಾಲೆಸ್ಟೇನ್ ದೇಶಗಳನ್ನೊಳಗೊಂಡ ಪ್ರದೇಶ. ಬಟಾಣಿಯು ಇದೇ ನೆಲದ ಮೆಡಿಟರೇನಿಯನ್ ಪ್ರದೇಶ ಮತ್ತು ಅದರ ಪೂರ್ವದ ನೆಲದ ಭಾಗದಲ್ಲಿ ವಿಕಾಸವಾಗಿದೆ. ಹಾಗಾಗಿ ಬಟಾಣಿಯ ಸಂಬಧೀ ವನ್ಯ ತಳಿಗಳು ಈ ಭಾಗದಲ್ಲಿ ಮಾತ್ರವೇ ಕಾಣಬರುತ್ತವೆ. ನೈಲ್ ನದಿಯ ಸುತ್ತ-ಮುತ್ತ ಕ್ರಿ.ಪೂ 4800-4200 ರ ನಡುವೆ, ಈಜಿಪ್ಟಿನಲ್ಲು ಕಿ.ಪೂ 3900- 3600 ನಡುವೆ ಇದನ್ನು ಬೆಳೆಸಿದ ಕುರುಹುಗಳು ಸಿಕ್ಕಿವೆ. ಆಫ್ಗಾನಿಸ್ತಾನ ಮತ್ತದರ ಪೂರ್ವಕ್ಕೆ ಈಗಿನ ಪಾಕೀಸ್ತಾನ ಹಾಗೂ ಭಾರತದ ಪೂರ್ವ ರಾಜಸ್ತಾನ-ಗುಜರಾತ್ ನೆಲೆಗಳಲ್ಲಿ ಕ್ರಿ.ಪೂ 2250- 1750 ನಡುವೆ ನಂತರದಲ್ಲಿ ಗಂಗಾನದಿಯ ಬಯಲಿನಲ್ಲಿಯೂ ಹಾಗೆಯೇ ದಕ್ಷಿಣಕ್ಕೂ ಹಬ್ಬಿದ ಬಗ್ಗೆ ಅರಿಯಲಾಗಿದೆ.

ನಂತರದ ಕಾಲಘಟ್ಟದಲ್ಲಿ ಮಾನವರ ವಲಸೆ, ನೆಲದ ಹುಡುಕಾಟಗಳಲ್ಲಿ ಜಗತ್ತಿನ ಅನೇಕ ಭಾಗಗಳ ಕೃಷಿಯಲ್ಲಿ ಒಂದಾಗಿದೆ. ಮೊದ ಮೊದಲು ಒಣಗಿದ ಕಾಳುಗಳಿಗಾಗಿ ಬೆಳೆಯಲಾಗುತ್ತಿದ್ದಾರೂ ಬಲಿಯದ ಕಾಳುಗಳ ಕೊಯಿಲಿಗೆ ಮತ್ತು ಬಳಕೆಗೆ ಮೊದಲಾಗಿದ್ದು ಆಧುನಿಕ ಐರೋಪ್ಯ ಜಗತ್ತಿನಿಂದ! ಕ್ರಿ.ಶ 17ನೆಯ ಶತಮಾನದ ನಂತರದಲ್ಲಿ ಅದರಲ್ಲೂ ಮುಖ್ಯವಾಗಿ ಇಂಗ್ಲಂಡ್ ಹಸಿ ಬಟಾಣಿ (Garden Peas) ಮತ್ತು ಒಣ ಬಟಾಣಿ (Field Peas) ಎಂದು ಗುರುತಿಸಲು ಆರಂಭಿಸಿದ್ದೇ ಹಸಿರಾದ, ನವಿರಾದ ಬಲಿಯದ ಕಾಳುಗಳ ರುಚಿಯನ್ನು ಜಾಗತಿಕ ಸಮೂಹಗಳೂ ಬಳಸಲಾರಂಭಿಸಿದವು. ಸಿಹಿಯಾದ ಬಟಾಣಿ ಕಾಳುಗಳ ತಳಿಯನ್ನು ಅಭಿವೃದ್ಧಿ ಪಡಿಸಿದ ಕೀರ್ತಿ ಇಂಗ್ಲಂಡಿನ ಥಾಮಸ್ ಎಡ್ವರ್ಡ್ ಎಂಬುವರಿಗೆ ಸಲ್ಲುತ್ತದೆ. ಬಟಾಣಿಯ ಬಳಕೆಯಲ್ಲಿ ಒಣ ಕಾಳುಗಳಾಗಲಿ ಅಥವಾ ಬಿಡಿಸಿದ ಬೇಳೆಯಾಗಲಿ ಮುಂದುವರಿದ 19ನೆಯ ಶತಮಾನದ ನಂತರದ ತಿಳಿವಳಿಕೆಯಾಗಿ ಹೆಚ್ಚು ಪ್ರಚಲಿತದಲ್ಲಿದೆ. ಅದರ ಜೊತೆಗೆ ಹಸಿಯಾದ ಬಲಿಯದ ಕಾಳುಗಳೂ ಕೂಡ, ಕೊಯಿಲಿನ ಕಾಲದಲ್ಲಿ ಜನಜನಿತವಾಗಿವೆ.
ಬಟಾಣಿಗಳು ಸಹಜವಾಗಿ ಹಸಿರ ಬಣ್ಣದವೇ ಹೌದು. ಆದರೂ ಹಸಿರು ಮಿಶ್ರಿತ ಹಳದಿ, ತಿಳಿ ಹಳದಿ ಕಾಳುಗಳೂ ಇರುವುದುಂಟು. ಕಾಯಿಗಳಲ್ಲಿ ಕೆಲವು ಕೆನ್ನೀಲಿಯ ಛಾಯೆಯನ್ನು ಹೊಂದಿರುವಂತಹವೂ ಇರುತ್ತವೆ. ಹೆಚ್ಚಿನ ತಳಿಗಳ ಕಾಯಿಗಳು ಹಚ್ಚ ಹಸಿರಿನವು. ಕೆಲವೊಂದು ಕಾಯಿಯನ್ನೇ ಇಡಿಯಾಗಿ ತಿನ್ನುವಂತಹಾ ತಳಿಗಳೂ ಇವೆ. ಇದೊಂದು ಚಳಿಗಾಲದ ಬೆಳೆ ಅಥವಾ ಚಳಿಯು ಅಧಿಕವಾಗಿರುವ ನೆಲದಲ್ಲಿ ಬಿತ್ತನೆಯನ್ನು ಕಾಣುವ ಬೆಳೆ. ಈ ಬೆಳೆಗೆ ವಾತಾವರಣದ ಉಷ್ಣಾಂಶ 15 ರಿಂದ 18°C ಇದ್ದಲ್ಲಿ ತುಂಬಾ ಒಳ್ಳೆಯದು. ಹಾಗಾಗಿಯೇ ದಕ್ಷಿಣ ಭಾರತದ ನೆಲದಲ್ಲಿ ಇದನ್ನು ಬೆಳೆಯಲು ತುಸು ಕಷ್ಟ ಪಡುತ್ತಾರೆ. ಬಿತ್ತನೆಯಾದ 50-60 ದಿನಗಳಲ್ಲಿ ಬೆಳೆಯು ಪ್ರೌಢಾವಸ್ಥೆಯನ್ನು ತಲುಪಿ ಕಾಯಿಗಳನ್ನು ಬಿಡಲು ಆರಂಭವಾಗುತ್ತದೆ, ಸಾಮಾನ್ಯವಾಗಿ ಬಟಾಣಿಯ ಗಿಡಗಳು ಬಳ್ಳಿಯಂತಿದ್ದು, ಮೂರರಿಂದ ಏಳೆಂಟು ಅಡಿಗಳಷ್ಡು ಉದ್ದವಾಗಿ ಬೆಳೆಯುತ್ತವೆ. ಕೆಲವನ್ನು ಗಿಡಗಳಂತೆ ಹಾಗೇ ನೆಲದ ಮೇಲೂ ಕೆಲವನ್ನು ಕೋಲು ಕಟ್ಟಿ ಹಬ್ಬಿಸುವಂತೆಯೂ ಬೆಳೆಯಲಾಗುತ್ತದೆ. ಕೆಲವೆಡೆಗಳಲ್ಲಿ ಸಣ್ಣ ಸಣ್ಣ ಮರದ ಕೊಂಬೆಗಳಿಗೂ, ತಂತಿ-ಬೇಲಿಗಳಲ್ಲೂ ಹಬ್ಬಿಸಿ ಬೆಳೆಯಲಾಗುತ್ತದೆ.
ಬಟಾಣಿಯ ಬೀಜಗಳು ಬಿತ್ತನೆಯಾದ ನಂತರ ಮೊಳೆಕೆ ಆಗುವಲ್ಲಿ ಇತರೇ ದ್ವಿದಳ ಧಾನ್ಯಗಳಿಗಿಂತಾ ಭಿನ್ನವಾದ ಬಗೆಯನ್ನು ವಿಕಾಸಗೊಳಿಸಿಕೊಂಡಿವೆ. ಸಾಮಾನ್ಯವಾಗಿ, ಅವರೆ, ಅಲಸಂದೆ ಇತ್ಯಾದಿಗಳು ಹುಣಸೆಯೂ ಸೇರಿಕೊಂಡು ಮೊಳಕೆಯೊಡೆದು ನೆಲದಿಂದ ಮೇಲೆ ಬಂದಾಗ ಕಾಳು, ಬೇಳೆಗಳಾಗಿ ತೆರೆದುಕೊಂಡು ಹೊರ ಕಾಣುತ್ತವೆ. ಆದರೆ ಬಟಾಣಿಯು ಹಾಗಲ್ಲ. ಕಾಳು ನೆಲದೊಳಗೇ ಉಳಿದು ಕೇವಲ ಗಿಡವಾಗಲು ಬೇಕಾದ ಮೊಳೆತ-ಚಿಗುರಷ್ಟೇ ಹೊರಚಾಚಿರುತ್ತದೆ. ಕಾಳು ಬೇರಿನ ಜೊತೆಗೇ ನೆಲದೊಳಗೆ ಉಳಿದು, ಬೇರಿಗೂ ಮೊಳಕೆಯ ಚಿಗುರಿಗೂ ಆಹಾರವಾಗಿ ಬಳಕೆಯಾಗುತ್ತದೆ. ಇದೇ ಬಗೆಯನ್ನು ಬತ್ತ, ಜೋಳ ಮುಂತಾದ ಸಸ್ಯಗಳಲ್ಲೂ ಕಾಣಬಹುದು.

ಬಟಾಣಿಯ ಹೂವುಗಳು ಬಿಳಿಯವು ಕೆಲವೊಮ್ಮೆ ತುಸು ಕೆನ್ನೀಲಿಯ ಛಾಯೆಯನ್ನೂ ಹೊಂದಿರುತ್ತವೆ. ಸುಂದರವಾದ ಹೂವುಗಳು ಅರಳುವುದೇ ಪರಾಗಸ್ಪರ್ಶವಾದ ಮೇಲೆ! ಅಂದರೆ ಇವು ಸ್ವಕೀಯ ಪರಾಗ ಸ್ಪರ್ಶಕ್ಕೆ ವಿಕಾಸವಾದ ಲೆಗ್ಯೂಮ್ ಗಿಡಗಳು. ಇದನ್ನೆಲ್ಲಾ ಗಮನಿಸಿಯೂ ಗ್ರೆಗೊರ್ ಜಾನ್ ಮೆಂಡಲ್ ಸಂಕರಣಗೊಳಿಸಿ ಸಂತತಿಗಳನ್ನು ತಂದೆ-ತಾಯಿ ಗಿಡಗಳ ಹೋಲಿಕೆಗಳನ್ನು ಲೆಕ್ಕಾಚಾರ ಹಾಕಿ ಆನುವಂಶಿಯ ವಿಜ್ಞಾನಕ್ಕೆ ಬುನಾದಿ ಹಾಕಿಕೊಟ್ಟದ್ದರಲ್ಲಿ “ಬಟಾಣಿ”ಯ ಪಾಲು ನಿಜಕ್ಕೂ ದೊಡ್ಡದು.
ಮೆಂಡಲ್, ಬಟಾಣಿ ಮತ್ತು ಆನುವಂಶಿಯ ವಿಜ್ಞಾನ
ಮೆಂಡಲ್, ಈಗಿನ ಝೆಕ್ ದೇಶದಲ್ಲಿರುವ ಹಿಂದಿನ ಆಸ್ಟ್ರಿಯನ್ ಸಾಮ್ರಾಜ್ಯದ ಸಿಲೇಸಿಯಾ ಎಂಬಲ್ಲಿ ಜರ್ಮನ್ ಭಾಷೆಯನ್ನು ಮಾತನಾಡುವ ಓರ್ವ ರೈತನ ಮಗನಾಗಿ ಜನಿಸಿದ್ದರು. ಗ್ರೆಗೊರ್ ಮೆಂಡಲ್ ಬಾಲ್ಯದಲ್ಲಿ ಜೇನು ಸಾಕಣೆ ಮತ್ತು ತೋಟಗಾರಿಕೆಯಲ್ಲಿ ನಿರತ ಮತ್ತು ಆಸಕ್ತರಾಗಿದ್ದವರು. ಒಲ್ಮಟ್ಜ್ ವಿಶ್ವವಿದ್ಯಾಲಯದಲ್ಲಿ ದರ್ಶನಶಾಸ್ತ್ರ ಮತ್ತು ಭೌತವಿಜ್ಞಾನದ ವಿದ್ಯಾರ್ಥಿಯಾಗಿ ಸೇರಿದ್ದ ಮೆಂಡಲ್ ಬಡತನದ ಕಾರಣದಿಂದ, ತಮ್ಮ ಶಿಕ್ಷಣ ಮತ್ತು ಜೀವನ ನಿರ್ವಹಣೆಗೆ ಮುಂದೆ ಓರ್ವ ಕ್ರೈಸ್ತ ಸನ್ಯಾಸಿಯಾದರು. ಬರ್ನೊಃ (Brno) ಅವರ ಕಾರ್ಯಕ್ಷೇತ್ರ. ಅಲ್ಲಿಯೇ ಅವರ ಬಟಾಣಿಯ ಪ್ರಯೋಗಗಳು ನಡೆಸಿದ್ದು. ಕೆಲಕಾಲ ಶಿಕ್ಷಕರಾಗಿ, ಮತ್ತು ವಿಯನ್ನಾ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿಯೂ ಕಳೆದ ಮೆಂಡಲ್ ಕಡೆಯವರೆಗೂ ಕಳೆದದ್ದು ಬರ್ನೊಃ ಚರ್ಚ್ನಲ್ಲಿ.

ಅಲ್ಲಿನ ತೋಟದಲ್ಲೇ ಸತತವಾಗಿ ಸುಮಾರು 7 ವರ್ಷಗಳ ಕಾಲ (1856 ಮತ್ತು 1863ರ ನಡುವೆ) ಸುಮಾರು 30,000 ಬಟಾಣಿ ಸಸ್ಯಗಳನ್ನು ಬೆಳೆದು ಅವುಗಳ ಬಗೆ ಬಗೆಯ ಸಸ್ಯಗುಣಗಳನ್ನು ಅಧ್ಯಯನ ಮಾಡಿದರು. ಜೊತೆಗೆ ಅವು ಸಂತತಿಯಿಂದ ಸಂತತಿಗೆ ವರ್ಗಾಯಿಸುವ ಬಗ್ಗೆ ಬೀಜಗಳ ಆಕಾರ, ಬಣ್ಣ, ಹೂವಿನ ಬಣ್ಣ, ಗಿಡಗಳ ಉದ್ದ ಇತ್ಯಾದಿಗಳನ್ನು ಸೂಕ್ಷ್ಮವಾಗಿ ನೋಡಿ, ದಾಖಲಿಸಿ, ಇದು ಹೇಗೆ ಲೆಕ್ಕಬದ್ಧವಾದ ದಾಟುವಿಕೆ ಎಂದು ವಿವರಿಸಿ ಇಂದು ಅತ್ಯಂತ ಜನಪ್ರಿಯ ವಿಭಾಗಗಳಲ್ಲಿ ಒಂದಾದ ಆನುವಂಶೀಯ ವಿಜ್ಞಾನಕ್ಕೆ ಕಾರಣರಾದರು. ಅವರನ್ನು “ಆಧುನಿಕ ತಳಿ ವಿಜ್ಞಾನದ ಜನಕ” ಎಂದೇ ಗೌರವಿಸಲಾಗುತ್ತದೆ. (ಅದರ ವಿವರಗಳು ತುಂಬಾ ಉದ್ದವಾದವು. ಹಾಗಾಗಿ ಮುಂದೊಮ್ಮೆ ಇದೇ ವೆಬ್ ಪುಟದ “ಜೀನಿಯಸ್ ಮೈಂಡ್ಸ್” ಅಲ್ಲಿ ಮೆಂಡಲ್ ಅವರನ್ನು ಕುರಿತ ಪ್ರಬಂಧದಲ್ಲಿ ನೋಡಬಹುದು). ಇವರ ಶ್ರಮ ಹಾಗೂ ಬಟಾಣಿಯ ಸ್ಪಂದನೆಯ ಫಲವಾಗಿ “ಮೆಂಡಲರ ತಳಿ ವಿಜ್ಞಾನದ ನಿಯಮಗಳು” ಎಂದೇ ಹುಟ್ಟಿಕೊಂಡವು. ಮುಂದೆ ಇವೇ ಬೃಹತ್ತಾಗಿ ಬಗೆ ಬಗೆಯಾಗಿ ಅಧ್ಯಯನಗೊಂಡು ಅಪಾರ ಜನಪ್ರಿಯವಾದ “ಜೆನೆಟಿಕ್ಸ್” –“ಆನುವಂಶೀಯತೆ ಮತ್ತು ತಳಿವಿಜ್ಞಾನ” ಇಂದು ಜಾಗತಿಕವಾಗಿ ಬೇಡಿಕೆ ಇರುವ ಅಧ್ಯಯನವಾಗಿದೆ.
ನವೆಂಬರ್-ಏಪ್ರಿಲ್ ತಿಂಗಳಲ್ಲಿ ವಿವಿಧ ಪ್ರದೇಶದಲ್ಲಿ ಬಟಾಣಿಯ ಬಿತ್ತನೆ-ಸುಗ್ಗಿಯ ಸಂಭ್ರಮವಿರುತ್ತದೆ. ಹಚ್ಚ-ಹಸಿರಿನ ತಾಜಾ ಕಾಳುಗಳನ್ನು ಬಳಸಿ ಬಗೆ ಬಗೆಯ ತಿನಿಸುಗಳನ್ನು ಮಾಡಿ ಸವಿಯುವ ಆನಂದವೂ ಸೇರಿಕೊಳ್ಳುತ್ತದೆ. ಬಟಾಣಿಯನ್ನು ಪ್ರೊಟೀನಿನ ಮೂಲವಾಗಿ, ಜೊತೆಗೆ ಶಕ್ತಿ ಹಾಗೂ ಖನಿಜಗಳ ಆಗರವಾಗಿ ಬಹು ಹಿಂದಿನಿಂದಲೂ ಗುರುತಿಸಲಾಗಿದೆ. ತಾಜಾ ಕಾಳುಗಳು 5% ಪ್ರೊಟೀನನ್ನು, 14% ಕಾರ್ಬೊಹೈಡ್ರೇಟನ್ನೂ ವಿಟಮಿನ್ “ಬಿ”ಗಳಲ್ಲಿ ಕೆಲವನ್ನು ಮತ್ತು ವಿಟಮಿನ್ “ಸಿ” ಯನ್ನೂ, ಹೊಂದಿವೆ. ಪ್ರತೀ 100ಗ್ರಾಂ ಕಾಳುಗಳು ಕೇವಲ 81 ಕಿಲೋ ಕ್ಯಾಲರಿಯಷ್ಟು ಶಕ್ತಿಯನ್ನು ಮಾತ್ರ ಒದಗಿಸಿ ಮಧುಮೇಹಿಗಳಿಗೂ ಆಕರ್ಷಕ ತಿನಿಸನ್ನು ಒದಗಿಸುತ್ತವೆ. ಚಳಿಗಾಲದ ಬೆಳೆಯ ಕೊಯಿಲಿನ ಸಮಯದಲ್ಲಿ ಕಾಳುಗಳನ್ನು ಸಂಗ್ರಹಿಸಿ ರಿಫ್ರಿಜರೇಟರ್ನಲ್ಲಿ ಶೈತ್ಯಾಂಶಗೊಳಿಸಿ (Frozen Peas) ಸಂಗ್ರಹಿಸಿಯೂ ಬಳಸಲು ಯೋಗ್ಯವಾಗಿರುವಂತಹವು ಬಟಾಣಿ ಕಾಳುಗಳು.

ಒಣಗಿಸಿದ ಕಾಳುಗಳು 60% ಕಾರ್ಬೊಹೈಡ್ರೇಟನ್ನು, 25% ಪ್ರೊಟೀನನ್ನು 25% ನಾರಿನಾಂಶವನ್ನೂ ಹೊಂದಿದ್ದು 340 ಕಿಲೋ ಕ್ಯಾಲೊರಿ ಶಕ್ತಿಯನ್ನು ಒದಗಿಸುತ್ತವೆ. ಜೊತೆಗೆ ಖನಿಜಾಂಶಗಳಾದ ಕಬ್ಬಿಣ, ಮ್ಯಾಂಗನೀಸ್ ಅನ್ನು ಸಾಕಷ್ಟು ಪ್ರಮಾಣದಲ್ಲೂ ಹಾಗೆಯೇ ವಿಟಮಿನ್ “ಬಿ” ಯನ್ನೂ ಒದಗಿಸುವ ಬಗ್ಗೆ ತಿಳಿಯಲಾಗಿದೆ.
ಆಧುನಿಕ ಅಡುಗೆ ವಿಧಾನಗಳಲ್ಲಿ ಬಗೆ ಬಗೆಯಾಗಿ ಜಗತ್ತಿನೆಲ್ಲೆಡೆ ಬಟಾಣಿಯನ್ನು ಹಸಿಯಾಗಿಯೂ ಹಾಗೂ ಒಣಗಿಸಿಯೂ ಬಳಸಲಾಗುತ್ತಿದೆ. ಕಾಳುಗಳನ್ನು ಕುದಿಸಿ, ಬೇಯಿಸಿದಾಗ ಅವುಗಳಿಂದ ದೊರಕುವ ಜೈವಿಕ ಸಾರವು ಹೆಚ್ಚಾಗುವುದಲ್ಲದೆ, ರುಚಿಯಲ್ಲಿ ಸಿಹಿಯು ಹೆಚ್ಚುತ್ತದೆ. ಮಧ್ಯ ಪ್ರಾಚ್ಯ ದೇಶಗಳಲ್ಲಿ ಉತ್ತರ ಆಫ್ರಿಕಾ ಹಾಗೂ ಯೂರೋಪಿನಲ್ಲಿ ಬಟಾಣಿಯು ಅತ್ಯಂತ ಜನಪ್ರಿಯವಾದ ಬಳಕೆಯನ್ನು ಹೊಂದಿದೆ. 17 ಮತ್ತು 18ನೆಯ ಶತಮಾನದ ನಂತರದಲ್ಲಿ ಹಸಿ ಬಟಾಣಿ ಕಾಳುಗಳ ಬಳಕೆಯು ಹೆಚ್ಚಾಗಿ ಜಗತ್ತಿನಾದ್ಯಂತ ಜನಪ್ರಿಯವೂ ಆಯಿತು. ಹಸಿ ಬಟಾಣಿ ಕಾಳುಗಳನ್ನು ಉಪ್ಪಿನ ಕಾಯಿಯಂತೆ ಸಂಗ್ರಹಿಸಿಯೂ ತಿನ್ನಲಾಗುತ್ತದೆ.

Peas Pudding ಎಂಬುದೊಂದು ಬಟಾಣಿಯ ಬೇಳೆಗಳ ಪಾಯಸ ಅಥವಾ ಗಂಜಿಯು ಉತ್ತರ ಅಮೆರಿಕದ ಪಾರಂಪರಿಕ ಆಹಾರ. ಇದೊಂದು ರೀತಿಯಲ್ಲಿ ಹಲವಾರು ದೇಶಗಳಲ್ಲಿ ಜನಪ್ರಿಯವಾದ ಸೂಪ್ ಮಾದರಿಯದು, ತುಸು ಭಿನ್ನವಾಗಿದೆ.

ಭಾರತೀಯ ಅಡುಗೆಯು ತಾಜಾ ಬಟಾಣಿಗಳಿಗೆ ಪುಲಾವ್ ಆಗಿ, ಪಲ್ಯ ಆಗಿ, ಪನ್ನೀರ್ ಆಲೂ ಜೊತೆಗೆ ಆಲೂ ಮಟರ್, ಮಟರ್ ಪನ್ನೀರ್ ಆಗಿ ಹಲವಾರು ತಿನಿಸುಗಳಿಗೆ ಬಳಕೆಯಾಗುತ್ತಲಿದೆ. ಒಣಗಿದ ಕಾಳುಗಳನ್ನು ಹತ್ತಾರು ಗಂಟೆಗಳ ಕಾಲ ನೀರಲ್ಲಿ ನೆನೆಸಿ ವಿವಿಧ ಖಾದ್ಯಗಳಲ್ಲಿ ಬಳಸುವುದು ಜನಪ್ರಿಯವಾಗಿದೆ. ಸೂಪ್ ಆಗಿ, ಹಾಗೆಯೇ ಕರಿದು, ಹುರಿದು ತಿನ್ನಲೂ ಬಟಾಣಿಯು ಹೇಳಿ ಮಾಡಿಸಿದ ಕಾಳು. ಭಾರತೀಯ ತಿನಿಸುಗಳಲ್ಲಿ ಪ್ರೊಟೀನ್ ಒದಗಿಸುವ ಕಾಳುಗಳಲ್ಲಿ ಆಧುನಿಕತೆಯನ್ನು ಮೆರೆಯಿಸುತ್ತಿರುವ ಪ್ರಮುಖವಾದ ಸಸ್ಯ ಬಟಾಣಿ.
ಕಡೆಯಲ್ಲಿ ಬಟಾಣಿಯು ವಿಖ್ಯಾತ ಗ್ರೀಕ್ ಕವಿ ಹೋಮರನನ್ನು ಆಕರ್ಷಿಸಿದ್ದ ಸಂಗತಿಯೊಂದಿಗೆ ಈ ಪ್ರಬಂಧವನ್ನು ಮುಗಿಸುತ್ತೇನೆ. ಹೋಮರ್ ತನ್ನ ಸುಪ್ರಸಿದ್ಧ ಕವಿತೆ ”ದ ಇಲಿಯಡ್” ನಲ್ಲಿ ಬಟಾಣಿಗಳನ್ನು ಸಾಂಕೇತಿಕವಾಗಿ ಉಲ್ಲೇಖಿಸಿದ್ದಾರೆ.
«…So from a wide breezed, volleying through the smooth current, Black beans or green pea beans are jumping…»
In Homer’s Iliad
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
ಹೆಚ್ಚಿನ ಓದಿಗೆ:
Geopprey Peter Savage and S. Deo. 1989. The Nutritional Value of Peas (Pisum sativum). A Literature Review. Nutrition Abstracts and Reviews. 59 (2). 65-88.
Ulrich Kutschera and Rajnish Khanna, 2023., Mendel-200: Pea as a model system to analyze hormone-mediated stem elongation. PLANT SIGNALING & BEHAVIOR 2023, VOL. 18, NO. 1, https://doi.org/10.1080/15592324.2023.2207845
Nataliia Stepanova. et. al. 2024. Non-Foliar Photosynthesis in Pea (Pisum sativum L.) Plants: Beyond the Leaves to Inside the Seeds. Plants, 13, 2945. https://doi.org/10.3390/plants13202945
ಸರ್,
ಮೆಂಡಲ್, ಬಟಾಣಿ,ಜೆನೆಟಿಕ್ಸ್ ಬರಹ ಸರಳವಾಗಿ,ಕುತೂಹಲಕಾರಿಯಾಗಿ,ಅರ್ಥಪೂರ್ಣವಾಗಿ ಚೆಂದ ಇತ್ತು