You are currently viewing ಆಧುನಿಕ ಭೌತವಿಜ್ಞಾನದ ಬಾಗಿಲು ತೆರೆದ ಜೇಮ್ಸ್‌ ಕ್ಲಾರ್ಕ್‌ ಮ್ಯಾಕ್ಸ್‌ವೆಲ್

ಆಧುನಿಕ ಭೌತವಿಜ್ಞಾನದ ಬಾಗಿಲು ತೆರೆದ ಜೇಮ್ಸ್‌ ಕ್ಲಾರ್ಕ್‌ ಮ್ಯಾಕ್ಸ್‌ವೆಲ್

ನ್ಯೂಟನ್ 1676ರಲ್ಲಿ ರಾಬರ್ಟ್‌ ಕುಕ್‌ ಅವರಿಗೆ ಬರೆದ ಒಂದು ಮಾತು ತುಂಬಾ ಪ್ರಸಿದ್ದವಾದದ್ದು. ಅದು ಹೀಗಿದೆ. “ನಾನು ಏನಾದರೂ ಮುಂದೆ ನೋಡುತ್ತಿದ್ದರೆ, ಅದು ದೈತ್ಯ ಸಾಧಕರ ಭುಜಗಳ ಮೇಲೆ ನಿಂತದ್ದಕ್ಕೆ ಸಾಧ್ಯವಾಗಿದೆ” ಅಂದರೆ ಸಂಚಿತವಾದ ಜ್ಞಾನವಾದ ವಿಜ್ಞಾನದಲ್ಲಿ ಜ್ಞಾನ ಪರಂಪರೆಯ ಮೇಲೆ ಮುಂದಿನ ಕಾರ್ಯ ಸಾಧುವಾಗುವ ಬಗ್ಗೆ ಹಾಗಂದಿದ್ದರು. ನ್ಯೂಟನ್‌ಗೇ ದೈತ್ಯ ಸಾಧಕರಿದ್ದರೆ ನಮ್ಮ ಪಾಡೇನು? ಇದೇ ಮಾತನ್ನು ಆಲ್ಬರ್ಟ್‌ ಐನ್‌ಸ್ಟೈನ್‌ ಅವರಿಗೆ ನೀವು ಯಾರ ಭುಜದ ಮೇಲೆ ನಿಂತಿದ್ದೀರಿ? ನ್ಯೂಟನ್ ಅವರ ಭುಜವೇ? ಎಂದೇನಾದರೂ ಕೇಳಿದ್ದರೆ ಅದಕ್ಕವರು ಇಲ್ಲಾ, ನಾನು ಮ್ಯಾಕ್ಸ್‌ವೆಲ್ ಅವರ ಭುಜದ ಮೇಲೆ ಎನ್ನುತ್ತಿದ್ದರು. ಅಷ್ಟರ ಮಟ್ಟಿಗೆ ಜೇಮ್ಸ್ ಕ್ಲಾರ್ಕ್ ಮ್ಯಾಕ್ಸ್‌ವೆಲ್ ಅವರನ್ನು ಪ್ರಭಾವಿಸಿದ್ದರು. ಐನ್‌ಸ್ಟೈನ್‌ರನ್ನೂ ಪ್ರಭಾವಿಸಿದ್ದ ಗುರು ಅವರು. ಅವರ ಫೋಟೊ ಐನ್‌ಸ್ಟೈನ್‌ರ ಓದುವ ಕೊಠಡಿಯನ್ನು ಅಲಂಕರಿಸಿತ್ತು. ಆಲ್ಬರ್ಟ್ ಐನ್‌ಸ್ಟೈನ್‌ ಅವರು ತಮ್ಮ ಓದುವ ಕೋಣೆಯಲ್ಲಿರಿಸಿಕೊಂಡ ಮೂರು ಫೋಟೋಗಳಲ್ಲಿ ಮ್ಯಾಕ್ಸ್‌ವೆಲ್‌ ಅವರದು ಒಂದಾದರೆ ಮತ್ತೆರಡು ಐಸ್ಯಾಕ್ ನ್ಯೂಟನ್ ಮತ್ತು ಮೈಕೆಲ್ ಫ್ಯಾರಡೆ ಅವರದು.  

ವಿಜ್ಞಾನ ಜಗತ್ತಿನಲ್ಲಿ ಜೇಮ್ಸ್ ಕ್ಲಾರ್ಕ್ ಮ್ಯಾಕ್ಸ್‌ವೆಲ್  ಅವರದ್ದು ಬಹು ದೊಡ್ಡ ಹೆಸರು. ಆದರೆ ಅವರ ಬಗ್ಗೆ ತಿಳಿದವರು ಅಪರೂಪ. ನೀವು ಅಪ್ಪಟ ಭೌತವಿಜ್ಞಾನದ ವಿದ್ಯಾರ್ಥಿಗಳಾಗಿಲ್ಲದಿದ್ದಲ್ಲಿ ಜೇಮ್ಸ್ ಕ್ಲಾರ್ಕ್ ಮ್ಯಾಕ್ಸ್‌ವೆಲ್ ಅವರ ಹೆಸರನ್ನು ಕೇಳಿರುವುದು ಅಪರೂಪ. ತಮಾಷೆ ಎಂದರೆ ಹಲವಾರು ಭೌತವಿಜ್ಞಾನದ ವಿದ್ಯಾರ್ಥಿಗಳಿಗೂ ಅವರ ಹೆಸರಿನ ಸಮೀಕರಣಗಳಿಂದ ಮಾತ್ರವೇ ಗೊತ್ತಿರುವ, ಹೆಚ್ಚೇನೂ ತಿಳಿಯದ ಆದರೆ ಬಹು ಮುಖ್ಯ ವೈಜ್ಞಾನಿಕ ಚಿಂತಕ ಮ್ಯಾಕ್ಸ್‌ವೆಲ್‌. ಮೂಲತಃ ಸ್ಕಾಟ್‌ಲ್ಯಾಂಡ್‌ನವರಾದ ಮ್ಯಾಕ್ಸ್‌ವೆಲ್‌ ಅಪ್ರತಿಮ ಭೌತವಿಜ್ಞಾನಿ. ಗಣಿತೀಯ ಭೌತವಿಜ್ಞಾನದಲ್ಲಿ ಬಲು ದೊಡ್ಡ ಹೆಸರು. ವಿದ್ಯುತ್, ಕಾತಂತ್ವಗಳ ಸಮೀಕರಣದ ಸೈದ್ಧಾಂತಿಕ ನಿರೂಪಗಳಲ್ಲಿ ಅವರ ತಿಳಿವು ಇನ್ನೂ ಜಗತ್ತನ್ನು ಮುನ್ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಭೌತವಿಜ್ಞಾನವನ್ನು ಶಾಶ್ವತವಾಗಿ ಬದಲಾಯಿಸಿದ ಕೀರ್ತಿ ಜೇಮ್ಸ್‌ ಕ್ಲಾರ್ಕ್‌ ಮ್ಯಾಕ್ಸ್‌ವೆಲ್‌ ಅವರದ್ದು.

      ಆಧುನಿಕ ಭೌತವಿಜ್ಞಾನದ ಅಡಿಗಲ್ಲನ್ನು ಹಾಕುವಲ್ಲಿ ಅತ್ಯಂತ ಪ್ರಮುಖ ಪಾತ್ರ ಹಾಕಿದವರಲ್ಲಿ ಮ್ಯಾಕ್ಸ್‌ವೆಲ್ ಅವರದು ಬಹಳ ಮುಖ್ಯವಾದ ಪಾತ್ರ. ನಾವೆಲ್ಲಾ ವಿದ್ಯುತ್ ಕಾಂತೀಯ ಸಿದ್ದಾಂತದ ಬಗೆಗೆ ಕೇಳಿದ್ದೇವಲ್ಲವೇ? ಈ ಸಿದ್ದಾಂತವನ್ನು ಪ್ರತಿಪಾದಿಸಿದ ಅವರು ವಿದ್ಯುತ್, ಕಾಂತತ್ವ ಮತ್ತು ಬೆಳಕಿನ ಬಗೆಗೆ ಭೌತವಿಜ್ಞಾನಕ್ಕೆ ಹೊಸತೊಂದು ಸಂಬಂಧವನ್ನು ತಂದುಕೊಟ್ಟರು.  ಜೇಮ್ಸ್ ಕ್ಲಾರ್ಕ್ ಮ್ಯಾಕ್ಸ್‌ವೆಲ್ ರ ಹೆಸರನ್ನು ಕೇಳದೆಯೇ ಅಥವಾ ಕೇಳಿದ್ದರೂ ನೆನಪಿನಲ್ಲಿಲ್ಲದೆಯೇ ಅವರ ಅನೇಕ ಮಹತ್ವದ ವೈಜ್ಞಾನಿಕ ಶೋಧಗಳನ್ನು ಆಗಾಗ್ಗೆ ನಮ್ಮ ಪಾಠಗಳಲ್ಲಿ ಓದಿರುತ್ತೇವೆ.

      ಮನೆಯಲ್ಲಿ ಟಿವಿಯನ್ನು ನೊಡುತ್ತಾ ಕುಳಿತ ನಿಮಗೆ ಬಣ್ಣದ ನೆರಳು ಬೆಳಕಿನ ಆಟದ ಚಿತ್ರಗಳ ಸಾಧ್ಯತೆಗಳಲ್ಲಿ ಜೇಮ್ಸ್ ಮ್ಯಾಕ್ಸ್‌ವೆಲ್ ಅವರ ಕೊಡುಗೆ ಇದೆ ಎಂದು ತಿಳಿದರೆ ಅಚ್ಚರಿಯಾದೀತು. ನಿಜ ಬೆಳಕಿನ ಮಿಶ್ರಣಗಳ ಫಲಿತಾಂಶ ಸಹಾ ಮ್ಯಾಕ್ಸ್‌ವೆಲ್ ಅವರ ಭೌತವೈಜ್ಞಾನಿಕ ವಿವರಗಳನ್ನು ಒಳಗೊಂಡಿದೆ. ಬೆಳಕಿನ ಮಿಶ್ರಣಗಳ ಸಾಧ್ಯತೆಯಿಂದಲೇ ಮೊಟ್ಟ ಮೊದಲ ಬಣ್ಣದ ಫೋಟೊವನ್ನೂ ಪಡೆದವರು ಮ್ಯಾಕ್ಸ್‌ವೆಲ್ . ಅವರ ಬೆಳಕು, ವಿದ್ಯುತ್ ಮತ್ತು ಕಾಂತದ ಸಂಬಂಧಗಳ ಅನ್ವೇ಼ಷಣೆಯು ಭೌತವಿಜ್ಞಾನದ ತಿಳಿವನ್ನು ಶಾಶ್ವತವಾಗಿ ಬದಲಾಯಿಸಿತು. ಅವರಿಗಿಂತಲೂ ಹಿರಿಯರಾದ ಮೈಕೆಲ್ ಫ್ಯಾರಡೆಯ ಅನ್ವೇಷಣೆಗಳ ವಿದ್ಯುತ್ ಮತ್ತು ಕಾಂತದ ಸಂಬಂಧಗಳನ್ನು ಗಣಿತದ ವಿವರಗಳಿಂದ ಶ್ರೀಮಂತವಾಗಿಸಿದ ಕೀರ್ತಿಯೂ ಮ್ಯಾಕ್ಸ್‌ವೆಲ್ ಅವರದು. ಗಣಿತದ ಅರಿವಿರದ ಮೈಕೆಲ್ ಫ್ಯಾರಡೆಯ ನೆರವಿಗೆ ಬಂದವರೇ ಮ್ಯಾಕ್ಸ್‌ವೆಲ್‌ ಅವರು.    

      ಮ್ಯಾಕ್ಸ್‌ವೆಲ್ ಅವರ ಮತ್ತೊಂದು ಹೆಗ್ಗುರುತೆಂದರೆ ಶನಿಗ್ರಹದ ಬಳೆಗಳ ಬಗೆಗಿನ ಅವರಿತ್ತ ವಿವರಗಳು. ಶನಿಗ್ರಹದ ಸುತ್ತಲೂ ಕಾಣುವ ಸುಂದರವಾದ ಬಳೆಗಳು ಹಾಗೆ ಸ್ಥಿರವಾಗಿಯೇ ಇರಬೇಕಾದರೆ ಅವುಗಳು ಖಂಡಿತಾ ಘನರೂಪದ ಬಳೆಗಳಲ್ಲ. ಹಾಗಿದ್ದಲ್ಲಿ ಒಳಕ್ಕೆ ಶನಿಗ್ರಹದ ಕಡೆಗೋ ಅಥವಾ ಹೊರಕ್ಕೋ ಬಾಗುವ ಸಾಧ್ಯತೆಗಳಿರುತ್ತಿತ್ತು. ಅಥವಾ ಒಂದು ವೇಳೆ ಅವು ದ್ರವರೂಪದವಾಗಿದ್ದರೂ ಸ್ಥಿರವಾಗಿ ಇರುತ್ತಿರಲಿಲ್ಲ. ಹಾಗಿರದೆ ಬದಲಾಗಿ ಬಳೆಗಳು ಸಣ್ಣ ಸಣ್ಣ ಘನಾಕೃತಿಯ ಚೂರುಗಳಿಂದಾಗಿವೆ. ಆ ಸಣ್ಣ ಸಣ್ಣ ದ್ರವ್ಯರಾಶಿಯ ಚೂರುಗಳೆಲ್ಲವೂ ಒಂದೇ ವೇಗದಲ್ಲಿ ಗ್ರಹವನ್ನು ಸುತ್ತುತ್ತಿರುವುದರಿಂದ ಒಂದನ್ನೊಂದು ಡಿಕ್ಕಿಯನ್ನು ಹೊಡೆಯುತ್ತಿಲ್ಲ. ಇದನ್ನು ಪ್ರಾಯೋಗಿಕವಾಗಿ ತಿಳಿವಾಗಿಸಲು ಮುಂದೆ ನೂರಾರು ವರ್ಷಗಳ ಕಾಯಬೇಕಾಯಿತು. ಮ್ಯಾಕ್ಸ್‌ವೆಲ್ ವಿವರಿಸಿದ್ದ ಈ ಸಂಗತಿಗಳು ಮುಂದೆ 1980ರಲ್ಲಿ ಶನಿಗ್ರಹದ ಹತ್ತಿರ ಹಾಯ್ದು ಹೋದ “ವಾಯೇಜರ್” ವ್ಯೋಮನೌಕೆಯು ಕಳಿಸಿಕೊಟ್ಟ ವಿವರಗಳಿಂದ ಮೊಟ್ಟ ಮೊದಲು ಸಾಬೀತುಗೊಂಡವು. ತೀರಾ ಇತ್ತೀಚೆಗಿನ ಕ್ಯಾಸಿನಿ  ವಿವರಗಳಿಂದ ಮತ್ತಷ್ಟು ನಿಚ್ಚಳವಾದ ಸಂಗತಿಗಳಾದವು.

      ಶನಿಗ್ರಹದ ಸೌಂದರ್ಯಕ್ಕೆ ಕಾರಣವಾದ ಬಳೆಗಳು ಮುಂದೊಂದು ದಿನ ಸಂಪೂರ್ಣ ಮಾಯವಾಗುವ ಸೂಚನೆಯನ್ನೂ ಮ್ಯಾಕ್ಸ್‌ವೆಲ್ ಕೊಟ್ಟಿದ್ದಾರೆ. ಖಗೋಳವಿದ್ಯಮಾನದಲ್ಲಿ ಇನ್ನೂ ಬಹುದೂರದಲ್ಲಿ ಇರುವ ಆ ದಿನದ ಬಗ್ಗೆ ಆಲೋಚನೆಯು ಸದ್ಯಕ್ಕೆ ಸಾಧುವಲ್ಲವೇನೋ! ಅಲ್ಲಿಯವರೆಗೂ ಶನಿ ಸುಂದರವಾಗಿಯೇ ಇರುವ ಗ್ರಹ!

      ಮ್ಯಾಕ್ಸ್‌ವೆಲ್ ಅವರು ಬದುಕಿದ್ದು ಕೇವಲ 48 ವರ್ಷಗಳು ಮಾತ್ರ. ತಮ್ಮ 14ನೇ ವಯಸ್ಸಿನಲ್ಲಿಯೇ ಮೊದಲ ವೈಜ್ಞಾನಿಕ ಪ್ರಬಂಧ ಬರೆದು ಪ್ರಕಟಿಸಿದ್ದ ಮಾಕ್ಸ್‌ವೆಲ್‌ 25ನೆಯ ವಯಸ್ಸಿನಲ್ಲಿ ಅಬರ್‌ಡೀನ್ ವಿಶ್ವವಿದ್ಯಾಲಯದಲ್ಲಿ ಭೌತವಿಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದರು. ಸ್ಕಾಟ್‌ಲ್ಯಾಂಡ್‌ನ ಆಗರ್ಭ ಶ್ರೀಮಂತ ಮನೆತನದಲ್ಲಿ 13ನೆಯ ಜೂನ್‌ 1831ರಲ್ಲಿ  ಹುಟ್ಟಿದ ಮ್ಯಾಕ್ಸ್‌ವೆಲ್ ತನ್ನ ಎಂಟನೆಯ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡರು. ಅಲ್ಲಿಯವರೆವಿಗೂ ಸಾವಿರಾರು ಎಕರೆಗಳಷ್ಟು ವಿಸ್ತಾರವಾದ ಎಸ್ಟೇಟಿನಲ್ಲಿದ್ದ ನೈಸರ್ಗಿಕ ವಾತಾವರಣದ ಮನೆಯಲ್ಲಿಯೇ ಕಲಿತರು. ತಾಯಿಯನ್ನು ಕಳೆದುಕೊಂಡ ಮೇಲೆಯೇ ಶಾಲೆಗೆ ಹೋದವರು ಮ್ಯಾಕ್ಸ್‌ವೆಲ್. ಇಂಗ್ಲೀಷ್ ಸಾಹಿತ್ಯದ ಮೇಲೂ ಪ್ರಭುತ್ವ ಹೊಂದಿದ್ದಲ್ಲದೇ ಅವರು ಸ್ವತಃ ಕವಿಯಾಗಿದ್ದರು. ಸಾಹಿತ್ಯವನ್ನು ವಿಜ್ಞಾನದಷ್ಟೇ ಶ್ರದ್ಧೆಯಿಂದಲೇ ಓದಿದ್ದ ಮಾಕ್ಸ್‌ವೆಲ್‌ ಅಪಾರ ಜೀವನೋತ್ಸಾಹಿ.  ಭೌತವಿಜ್ಞಾನದ ವಿದ್ಯುತ್ ಕಾಂತೀಯ ಬಲವನ್ನು ವಿವರಿಸಿ ಅದರ ವೇಗವು ಬೆಳಕಿನ ವೇಗಕ್ಕೆ ಸಮವಾಗಿಸಿದ ವಿವರಗಳು ಮುಂದೆ ಶಾಶ್ವತ ಬದಲಾವಣೆ ತಂದ್ದಲ್ಲದೆ ಆಧುನಿಕ ಭೌತವಿಜ್ಞಾನದ ಲೋಕವೊಂದು ತೆರೆದುಕೊಂಡಿತು. ಸಾಪೇಕ್ಷ ಸಿದ್ಧಾಂತವೂ ಸೇರಿದಂತೆ ಕ್ವಾಂಟಂ ಭೌತವಿಜ್ಞಾನದ ಹುಟ್ಟು ಮತ್ತು ವಿವರಗಳಿಗೆ ಮೂಲ ಸರಕನ್ನು ಕೊಟ್ಟವರು ಜೇಮ್ಸ್ ಕ್ಲಾರ್ಕ್ ಮ್ಯಾಕ್ಸ್‌ವೆಲ್ .

ಮಾಕ್ಸ್‌ವೆಲ್‌ ಕಟ್ಟಿದ ಕ್ಯಾವೆಂಡಿಶ್ ಲ್ಯಾಬ್

      ಅಪರೂಪದ ವಿಜ್ಞಾನಿ ಮ್ಯಾಕ್ಸ್‌ವೆಲ್ ನೇತೃತ್ವದಲ್ಲಿ ಕಟ್ಟಲಾದ ಸಂಸ್ಥೆ ಕೇಂಬ್ರಿ‌ಜ್ ವಿಶ್ವವಿದ್ಯಾಲಯದ ಕ್ಯಾವೆಂಡಿಶ್ ಪ್ರಯೋಗಾಲಯ. ಇದರ ಹೆಸರು ಎಷ್ಟು ದೊಡ್ಡದೆಂದರೆ, ಇಲ್ಲಿ ಒಂದಷ್ಟು ಕಾಲ ಇರುವುದೇ ಒಂದು ದೊಡ್ಡ ಕ್ವಾಲಿಫಿಕೇಶನ್ ಇದ್ದಂತೆ. ಅದರ ಆರಂಭದಲ್ಲಿ ಮ್ಯಾಕ್ಸ್‌ವೆಲ್ ಪಾತ್ರ ಬಹು ಮುಖ್ಯವಾದುದು. ಹತ್ತೊಂಭತ್ತನೆಯ ಶತಮಾನದಲ್ಲಿ ಭೌತವಿಜ್ಞಾನವನ್ನು ಗಣಿತದಿಂದ ಬೇರ್ಪಡಿಸಿ ನೋಡುವುದೇ ಕಷ್ಟವಾಗಿತ್ತು. ಸೈದ್ಧಾಂತಿಕ ವಿವರಗಳ ಸಂಗತಿಗಳೇ ಭೌತವಿಜ್ಞಾನವನ್ನು ಆವರಿಸಿದ್ದವು. ಪ್ರಾಯೋಗಿಕ ಮಹತ್ವವಿನ್ನೂ ಅಂಬೆಗಾಲಿಡುತ್ತಾ ವಿಜ್ಞಾನದಲ್ಲಿ ಒಳಹೊಕ್ಕಿತ್ತು. ಹಾಗಾಗಿ ಭೌತವಿಜ್ಞಾನವನ್ನು ಪ್ರಾಯೋಗಿಕವಾಗಿ ಅರಿಯುವ, ಕಲಿಸುವ, ಅಧ್ಯಯನಕ್ಕೆ ಒಳಪಡಿಸುವ ಅವಕಾಶಕ್ಕಾಗಿ ಒಂದು ಪ್ಲಾಟ್‌ಪಾರಂ ಬೇಕಿತ್ತು. ಅದಕ್ಕೆ ಸಮರ್ಥ ನಾಯಕರೆಂದು ಜೇಮ್ಸ್ ಕ್ಲಾರ್ಕ್ ಮ್ಯಾಕ್ಸ್‌ವೆಲ್ ಅವರನ್ನು ಆಹ್ವಾನಿಸಿ ಒಂದು ಪ್ರಯೋಗಾಲಯ ನಿರ್ಮಿಸಲು ಕೇಂಬ್ರಿಜ್ ವಿಶ್ವವಿದ್ಯಾಲಯ ಕೇಳಿಕೊಂಡಿತು. ಬ್ರಿಟನ್ನಿನ ವಿಜ್ಞಾನಿ ಹೆನ್ರಿ ಕ್ಯಾವೆಂಡಿಶ್ ಹೆಸರಿನಲ್ಲಿ ಸ್ಥಾಪಿಸಲು ಹೆನ್ರಿಯ ಸಂಬಂಧಿಯೂ ಡಿವೋನ್‌ಶೈರ್‌ನ ಏಳನೇ ಡ್ಯೂಕ್‌ಆದ ವಿಲಿಯಂ ಕ್ಯಾವೆಂಡಿಶ್ ಮೂಲಧನವನ್ನು ಕೊಟ್ಟರು. ಆಗ ವಿದ್ಯುತ್-ಕಾಂತೀಯ ಸೈದ್ಧಾಂತಿಕ ಸಂಗತಿಗಳಿಂದ ಹೆಸರಾಗಿದ್ದ ಮ್ಯಾಕ್ಸ್ವೆಲ್ ಮೊಟ್ಟ ಮೊದಲ “ಕ್ಯಾವೆಂಡಿಶ್ ಪ್ರೊಫೆಸರ್” ಎಂದೂ ನಾಮಕರಣಗೊಂಡರು.  ಈ ಕ್ಯಾವೆಂಡಿಶ್ ಪ್ರೊಫೆಸರ್ ಎಂದರೆ ಒಂದೇ ಪೀಠ ಕೇಂಬ್ರಿಜ್‌ ಅಲ್ಲಿ 1871ರಲ್ಲಿ ಅವರ ನಾಮಕರಣದಿಂದ ಆರಂಭವಾಯಿತು. ಒಬ್ಬರೇ ಇರುವಂತಹದು. ನಮ್ಮಲ್ಲಿ ರಾಷ್ಟ್ರಕವಿ ತರಹ!

ಕೇಂಬ್ರಿಜ್ ವಿಶ್ವವಿದ್ಯಾಲಯದ ಮೊಟ್ಟ ಮೊದಲ ಕ್ಯಾವೆಂಡಿಶ್ ಪ್ರೊಫೆಸರ್ ಆ ಅವರು ಕ್ಯಾವೆಂಡಿಶ್ ಪ್ರಯೋಗಾಲಯದ ಆರಂಭಕ್ಕೆ ಕಾರಣರಾದರು. ಭೌತವಿಜ್ಞಾನದಲ್ಲಿ ಗಣಿತ ಮತ್ತ ಪ್ರಯೋಗ ಎರಡನ್ನೂ ಅತ್ಯಂತ ಪ್ರಮುಖವಾಗಿ ಬಳಸಿ ಮೇಳೈಸಿದ ಖ್ಯಾತಿ ಜೇಮ್ಸ್ ಮ್ಯಾಕ್ಸ್‌ವೆಲ್ ಅವರದು. ಹೆನ್ರಿ ಕ್ಯಾವೆಂಡಿಶ್ ಪ್ರತಿಪಾದನೆಗಳನ್ನು ಒರೆ ಹಚ್ಚಿನೋಡಿದ್ದಲ್ಲದೆ ಅನಿಲಗಳ ಚಲನೆಯ ಸೈದ್ಧಾಂತಿಕ ವಿವರಗಳಿಗೂ ಕಾರಣರಾದರು. 

      ಕ್ಯಾವೆಂಡಿಶ್ ಪ್ರೊಫೆಸರ್ ಆದ ಮ್ಯಾಕ್ಸ್‌ವೆಲ್ ಕ್ಯಾವೆಂಡಿಶ್ ಲ್ಯಾಬ್ ಅನ್ನು 1874ರಲ್ಲಿ ಆರಂಭಿಸಿದರು. ಭೌತವಿಜ್ಞಾನ ಜಗತ್ತಿನಲ್ಲಿ ಕ್ಯಾವೆಂಡಿಶ್ ಲ್ಯಾಬ್ ಕೊಡುಗೆ ಅಪಾರ. ಮಾಕ್ಸ್‌ವೆಲ್‌ ನಂತರ ಜೆ. ಜೆ. ಥಾಮ್ಸನ್, ರದರ್‌ಫೋರ್ಡ್, ವಿಲಿಯಂ ಲಾರೆನ್ಸ್‌ ಬ್ರಾಗ್, ನೆವಿಲ್ ಮಟ್ ಅಂತಹಾ ಘಟಾನುಘಟಿಗಳು ಕ್ಯಾವೆಂಡಿಶ್ ಪ್ರೊಫೆಸರ್ ಪೀಠವನ್ನು ಅಲಂಕರಿಸಿ ಮುನ್ನಡೆಸಿದ ಪ್ರಯೋಗಾಲಯ. ಪ್ರಸ್ತುತ 1995ರಿಂದ 2020ರ ವರೆಗೂ ರಿಚರ್ಡ್ ಹೆನ್ರಿ ಫ್ರೆಂಡ್ ಅವರು ಕ್ಯಾವೆಂಡಿಶ್ ಪ್ರೊಫೆಸರ್ ಆಗಿದ್ದರು. ಇವರು ಒಂಭತ್ತನೆಯ ಪ್ರೊಫೆಸರ್.  2020 ರಿಂದ ಯಾರೊಬ್ಬರನ್ನೂ ನೇಮಿಸಿಲ್ಲ. 1971ರಿಂದ ಈ ಪೀಠವನ್ನು ಭೌತವಿಜ್ಞಾನದ ಕ್ಯಾವೆಂಡಿಶ್ ಪ್ರೊಫೆಸರ್ ಎಂದು ಮರು ನಾಮಕರಣ ಮಾಡಲಾಗಿದೆ. ಇಡೀ  ಭೌತವಿಜ್ಞಾನದಲ್ಲಿ ಪ್ರಾಯೋಗಿಕವಾಗಿ ಅರಿಯುವ ಸಾಧ್ಯತೆಗಳು ಇಂದು ಸೃಷ್ಟಿಸಿರುವ ಸಾಲಿಡ್ ಸ್ಟೇಟ್, ಕಂಡೆನ್ಸ್ಡ್ ಮಾಟರ್, ಪ್ಲಾಸ್ಮಾ ಭೌತವಿಜ್ಞಾನ, ವಸ್ತು ವಿಜ್ಞಾನದ ಅಪಾರ ಸಾಧ್ಯತೆಗಳು ಇವೆಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ಕ್ಯಾವೆಂಡಿಶ್ ಲ್ಯಾಬ್‌ನಿಂದ ಹುಟ್ಟಿ ಬಂದು ಬೃಹತ್ತಾಗಿ ಬೆಳೆದ ಹೆಮ್ಮರಗಳು. ಅಷ್ಟೇ ಅಲ್ಲಾ ಅಲ್ಲಿನ ಚರ್ಚೆಗಳು, ತಿಳಿವಳಿಕೆಗಳು ಖಗೋಳ ವಿಜ್ಞಾನ, ಜೀವಿವಿಜ್ಞಾನವನ್ನೂ ಬಿಟ್ಟಿಲ್ಲ. ವಸ್ತುಗಳ ಭೌತಿಕ ಸಂರಚನೆಯ ಅಧ್ಯಯನಕ್ಕೆ ಮತ್ತವುಗಳ ವರ್ತನೆಯ ವಿವರಗಳಿಗೆ ಮೂಲಸರಕನ್ನು ಒದಗಿಸಿದ್ದೇ ಮ್ಯಾಕ್ಸ್‌ವೆಲ್ ರ ಕೂಸಾದ ಕ್ಯಾವೆಂಡಿಶ್ ಪ್ರಯೋಗಾಲಯ. ಅಪಾರ ದೂರದೃಷ್ಟಿಯ ಹಿನ್ನೆಲೆಯಲ್ಲಿ ಹಾಗೂ ವಿಜ್ಞಾನದ ಬಹು ಮುಖ್ಯ ಆಯಾಮವಾದ ಪ್ರಾಯೋಗಿಕ ಸಾಧ್ಯತೆಗಳ ಭದ್ರ ಅಡಿಪಾಯವನ್ನೂ ಭೌತವಿಜ್ಞಾನದಲ್ಲಿ ಹಾಗೂ ಅದರ ಅನ್ವಯಗಳಲ್ಲಿ ಅಳವಡಿಸಿದ ಕೀರ್ತಿ ಕ್ಯಾವೆಂಡಿಶ್ ಪ್ರಯೋಗಾಲಯಕ್ಕೆ ಸೇರುತ್ತದೆ. ಇಲ್ಲಿ ಸಂಶೋಧನೆಯಲ್ಲಿ ನಡೆಸಿದ ಒಟ್ಟು 30 ಜನರಿಗೆ ನೊಬೆಲ್ ಬಹುಮಾನಗಳು ಬಂದಿವೆ. 1904ರಲ್ಲೇ ಮೊಟ್ಟ ಮೊದಲ ನೊಬೆಲ್ ಬಹುಮಾನ ಗಳಿಸಿದ ಇಲ್ಲಿನ ವಿಜ್ಞಾನಿಗಳು, ಕಳೆದ ವರ್ಷ 2017ರ ರಸಾಯನವಿಜ್ಞಾನದಲ್ಲಿ ನೊಬೆಲ್ ಪಡೆದ ಜೊಖಿಮ್ ಫ್ರಾಂಕ್ ಕೂಡ ಇಲ್ಲಿ ಎರಡು ವರ್ಷ ಸಂಶೋಧನಾ ವಿಜ್ಞಾನಿಯಾಗಿದ್ದರು. ಶತಮಾನ ದಾಟಿಯೂ ನೊಬೆಲ್ ಪಡೆಯುವ ಶ್ರೇಷ್ಠತೆಯನ್ನು ಉಳಿಸಿಕೊಂಡಿರುವ ಇಂತಹಾ ಒಂದು ಮಹಾನ್‌ ಪ್ರಯೋಗಾಲಯವನ್ನು ಕಟ್ಟಿದ ಮ್ಯಾಕ್ಸ್‌ವೆಲ್ ರ ಬಗ್ಗೆ ನಮಗೆ ಎಷ್ಟೇ ತಿಳಿದರೂ ಅದು ಅಲ್ಪ. ಇಂತಹಾ ಓರ್ವ ಮಹಾನ್‌ ಚಿಂತಕ, ವಿಜ್ಞಾನಿ, 5ನೆಯ ನವೆಂಬರ್‌, 1879 ರಂದು ಮರಣ ಹೊಂದಿದರು. ಆಗಿನ್ನೂ ಅವರಿಗೆ ಕೇವಲ 48ವರ್ಷ.   

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್.‌

This Post Has 3 Comments

  1. Kavita

    Hats off sir, for wonderful details of great scientist Maxwell. Feel like reading an interesting story. Reading in Kannada made it more intersting.

  2. Supriya Nayaka MK

    Neat description….. thank you sir

Leave a Reply