You are currently viewing ಅಲಂಕಾರಕ್ಕೆ ಅಂಟಿಕೊಂಡು ಅಪಾಯದಂಚಿಗೆ ಬಂದ ಇಂಡಿಯಾದ ಕ್ರಿಸ್‌ಮಸ್‌ ಟ್ರೀ: Araucaria columnaris

ಅಲಂಕಾರಕ್ಕೆ ಅಂಟಿಕೊಂಡು ಅಪಾಯದಂಚಿಗೆ ಬಂದ ಇಂಡಿಯಾದ ಕ್ರಿಸ್‌ಮಸ್‌ ಟ್ರೀ: Araucaria columnaris

ಕ್ರಿಸ್‌ಮಸ್‌ ಡಿಸೆಂಬರಿನ ಚಳಿಯ ಜೊತೆಗೆ ಹಬ್ಬದ ರಜೆಯ ಮಜಾ, ಅಲಂಕಾರದ ಮೆರುಗು ಹಾಗೂ ಹೊಸ ವರ್ಷದ ಆಗಮನದ ದಿನಗಳು ಎಲ್ಲವೂ ಒಟ್ಟಾಗಿಸಿ ಇಡೀ ಜಗತ್ತನ್ನು ಸಂಭ್ರಮದಲ್ಲಿ ಇರಿಸುತ್ತದೆ. ಜಗತ್ತಿನ ಅತಿ ದೊಡ್ಡ ಸಮುದಾಯವೊಂದನ್ನು ಪ್ರತಿನಿಧಿಸುವ ಈ ಹಬ್ಬದ ಆಚರಣೆಯನ್ನು “ಅಲಂಕರಿಸುವ” ಸಸ್ಯ “ಕ್ರಿಸ್‌ಮಸ್‌ ಟ್ರೀ”. ಈ ಡಿಸೆಂಬರಿನ ಸಸ್ಯಯಾನದಲ್ಲಿ ಇಂತಹದ್ದೊಂದು ಮರದ ಮಾತುಗಳೇ ಇಲ್ಲದಿದ್ದರೆ ನಿಜಕ್ಕೂ ಅದಕ್ಕೆ ಮೆರುಗು ಇರುವುದಿಲ್ಲ. ಸಸ್ಯಯಾನದ ಎಲ್ಲಾ ಸಹಪಯಣಿಗರಿಗೂ ಕ್ರಿಸ್‌ಮಸ್‌ ಹಬ್ಬದ ಹಾಗೂ ಮುಂಚಿತವಾಗಿ ಹೊಸ ವರ್ಷದ ಶುಭಾಶಯಗಳು.  

ಜಗತ್ತಿನಾದ್ಯಾಂತ ಇದೇ ಬಗೆಯ ವಿವಿಧ ಮರಗಳನ್ನು ಕ್ರಿಸ್‌ಮಸ್‌ನಲ್ಲಿ ಅಲಂಕಾರಕ್ಕೆ ಬಳಸಲಾಗುತ್ತದೆ. ಎಲ್ಲಾ  ಕ್ರಿಸ್‌ಮಸ್‌ ಟ್ರೀಗಳೂ ಪೈನ್‌ ಜಾತಿಯ ಮರಗಳಾಗಿವೆ. ಅವುಗಳಲ್ಲಿ ಮುಖ್ಯವಾಗಿ ಮೂರು ಬಗೆಯ ಮರಗಳಿವೆ. ಎಲ್ಲವೂ ಮುಗಿಲಿಗೆ ಚೂಪಾದ ನೆತ್ತಿಯ ಚಾವಣೆಯ ಕೊನೆಯಾಗಿರುತ್ತವೆ. ಈ ಕಾರಣದಿಂದಲೇ ಅಲಂಕಾರಕ್ಕೆ ಹೇಳಿ ಮಾಡಿಸಿದ ಮರಗಳಾಗಿವೆ. ಹಾಗೆಂದೇ ಹಲವಾರು ಪಾರ್ಕುಗಳಲ್ಲಿ ಅಲಂಕಾರದ ಮರಗಳಾಗಿ ವಿಖ್ಯಾತ. ಕ್ರಿಸ್‌ಮಸ್‌-ಟ್ರೀ ಎಂದು ಬಳಸುವ ಮೂರು ಬಗೆಯ ಪೈನ್‌ಗಳೆಂದರೆ ಸ್ಪರ್ಸ್‌ಗಳು(Spruce), ಪೈನ್‌ಗಳು (Pines) ಮತ್ತು ಫರ್‌ಗಳು (Firs). ಪೈನ್‌ಗಳು ಶುದ್ಧ ಪೈನ್‌ ಮರಗಳಾದರೆ ಉಳಿದವು ಪೈನ್‌ ಬಗೆಯಂತೆಯೇ ತುಸು ಭಿನ್ನವಾದವು. ಎಲ್ಲವೂ ಪೈನೇಸಿಯೆ (Pinaceae) ಎಂಬ ಒಂದೇ ಕುಟುಂಬದ ಸಸ್ಯಗಳು. ಭಾರತದಲ್ಲಿ ಕ್ರಿಸ್‌ಮಸ್‌ ಮರವು ಕ್ಯಾಪ್ಟನ್‌ ಕುಕ್‌ ಸಾಗರಯಾನದಲ್ಲಿ ಗುರುತಿಸಿದ ಅರಕ್ಯುರಿಯ ಕಲಮನಾರಿಸ್‌ (Araucaria columnaris) ಎಂಬುದಾಗಿದೆ. ಇದೂ ಸಹಾ ಪೈನ್‌ ಮರವೇ ಆದರೆ ಭಿನ್ನವಾದ ಕುಟುಂಬಕ್ಕೆ ಸೇರಿಸಲಾಗಿದೆ. ದುರಾದೃಷ್ಠಕ್ಕೆ ಇಂಡಿಯಾದ ಈ ಕ್ರಿಸ್‌ಮಸ್‌ ಟ್ರೀ ಅಪಾಯದ ಅಂಚಿಗೆ ಸೇರಿದ ಸಸ್ಯವೆಂದು ವರ್ಗೀಕರಿಸಿ ಒಂದು ದಶಕವೇ ಆಗಿದೆ. ಪೈನೇಸಿಯೆದ ಸಹ ಕುಟುಂಬದಂತಹಾ ಅರ‍್ಯಾಕೆರೆಸಿಯೆ (Araucariaceae)ಕೇವಲ ಮೂರೇ ಸಂಕುಲದ 40 ಪ್ರಭೇದಗಳ ಕುಟುಂಬ. ಇಂಡಿಯಾದ ಕ್ರಿಸ್‌ಮಸ್‌ ಟ್ರೀ -ಕುಕ್‌ ಪೈನ್‌ ಟ್ರೀ. ಇದು ಕುಕ್‌ ದ್ವೀಪದ ತವರಿನ ಮರ. ಆಸ್ಟ್ರೇಲಿಯಾದ ವಾಯುವ್ಯ ದಿಕ್ಕಿನಲ್ಲಿರುವ ಈ ದ್ವೀಪದಲ್ಲಿ ಈ ಮರವು ಸುಮಾರು 200 ಅಡಿಗಳಷ್ಟು ಎತ್ತರಕ್ಕೆ ಬೆಳೆಯುತ್ತದೆ. ಸಾಮಾನ್ಯವಾಗಿ ಇದು ಮನೆಯೊಳಗಿಡುವ ಅಂದದ ಮರವಾಗಿಯೂ ಬಳಕೆಯಾಗುತ್ತದೆ.  ಹಾಗಾಗಿ ಕುಂಡದಲ್ಲಿಯೂ ಸೊಗಸಾಗಿ ಬೆಳೆಯುತ್ತದೆ. ಬಹುಶಃ ಕೇವಲ ಅಲಂಕಾರದ ಮರವಾಗಿ ಇಡೀ ಏಶಿಯಾ ಹಾಗೂ ಆಸ್ಟ್ರೇಲಿಯಾ ಅಲ್ಲದೆ ಕೆಲವು ಯೂರೋಪಿನ ರಾಷ್ಟ್ರಗಳಲ್ಲಿಯೂ ಜನಪ್ರಿಯವಾದ್ದರಿಂದ ಅಪಾಯದ ಅಂಚಿಗೆ ಸರಿದಿದೆಯೇನೋ!

ಆದರೆ ಪೈನೇಸಿಯೆ ಶುದ್ಧ ಪೈನ್‌ ಕುಟುಂಬ. ಸುಮಾರು 250ಕ್ಕೂ ಹೆಚ್ಚು ಪ್ರಭೇದಗಳನ್ನು ಹೊಂದಿದೆ. ಇಂಡಿಯನ್‌ ಕ್ರಿಸ್‌ಮಸ್‌-ಟ್ರೀ ಸೇರಿದಂತೆ ಜಗತ್ತಿನ ಎಲ್ಲಾ ಕ್ರಿಸ್‌ಮಸ್‌-ಟ್ರೀಗಳೂ ಕೋನಿಫೆರಸ್‌-ಟ್ರೀಗಳೇ! ಎಲ್ಲವೂ ಪೈನ್‌ಗಳೇ. ದೂರದ ನೋಟದಲ್ಲಿ ತುಸುವೇ ಭಿನ್ನವಾಗಿದ್ದು ಒಂದೇ ಬಗೆಯ ಮುಗಿಲೆತ್ತರಕ್ಕೆ ನೆತ್ತಿಯ ಚಾಚಿದಂತಹಾ ಚಾವಣೆಯವು. ಗಿಡ ಬುಡದಿಂದಲೇ ಹರಡಿಕೊಂಡ ಚಾವಣೆಯು ಮೇಲೇರಿದಂತೆ ಚೂಪಾಗುತ್ತಾ ಸಾಗುತ್ತದೆ. ಇವೆಲ್ಲವೂ ಬಿಸಿಲನ್ನು ಸಾಕಷ್ಟು ಪಡೆದು ಚಾವಣೆಯಲೆಲ್ಲಾ ಹರಡಿಕೊಳ್ಳಲು ಮರವೇ ವಿಕಾಸದಲ್ಲಿ ಮಾಡಿಕೊಂಡ ಉಪಾಯ. ಇಲ್ಲವೂ ಶೀತವಲಯದ ಸಸ್ಯಗಳು. ಉಷ್ಣವಲಯಕ್ಕೆ ಅಲಂಕಾರಿಕ ಮರಗಳಾಗಿ ಹೆಚ್ಚು ಪರಿಚಯ ಪಡೆದಿವೆ. ನಿತ್ಯ ಹರಿದ್ವರ್ಣದ ಈ ಮರಗಳು ಅದೇ ಕಾರಣದಿಂದ ಮಾನವ ಸಂಕುಲವನ್ನು ಮುಖಾಮುಖಿಯಾಗಿವೆ. ತನ್ನ ಸೌಂದರ್ಯ ಹಾಗೂ ಹಸಿರಿನ ಚೆಲುವಿಗಾಗಿ ಹಬ್ಬದೂಟದ ಸವಿಗೆ ಅಲಂಕರಿಸಲು ಮನೆಗಳನ್ನು ಹೊಕ್ಕಿದೆ. ಅವೆಲ್ಲವುಗಳ ವಿವರಗಳನ್ನು ಮುಂದೆ ನೋಡೋಣ. ಸರಳವಾಗಿ ಭಾರತೀಯ ಹಬ್ಬ-ಹರಿದಿನಗಳಲ್ಲಿ ಹಸಿರು ತೋರಣವು ಬಾಗಿಲಿಗೆ ಸಿಂಗಾರವಾಗುವಂತೆ ಶೀತವಲಯದಲ್ಲಿ ಕ್ರಿಸ್‌ಮಸ್‌ ತನ್ನ ಸದಾಹಸಿರಾಗಿರುವ ಚೆಲುವಿನಿಂದ ಅದರಲ್ಲೂ ಚಳಿಯಲ್ಲಿ  ಮೆರುಗು ತುಂಬಲು ಸೇರಿಕೊಂಡಿದೆ. ಇದನ್ನೆಲ್ಲಾ ವಿವರವಾಗಿ ಮುಂದೆ ನೋಡೋಣ.   

ಕ್ರಿಶ್ಚಿಯನ್ನರಿಗಿಂತಾ ಮೊದಲೇ ಯೂರೋಪಿನ ಪೇಗನ್ನರು ಮೊದಲು ಮನೆಗೆ ಸದಾ ಹಸಿರಾಗಿರುವ ಗಿಡ-ಮರಗಳನ್ನು ತಂದಿಟ್ಟು, ಆ ಮೂಲಕ ಮನೆಗೆ ನಿಸರ್ಗದ ಆನಂದವನ್ನು ಮನೆಯೊಳಗೂ ಹಸಿರಾಗಿಸುವ ಒತ್ತಾಸೆಯನ್ನು ಆರಂಭಿಸಿದರು.  ಪೇಗನ್ನರು ನಿಸರ್ಗಾರಾಧಕರು. ಹಾಗಾಗಿ ನಿಸರ್ಗದ ಸದಾ ಹಸಿರಾದ ಗಿಡ-ಮರಗಳನ್ನು ಮನೆಯೊಳಗೆ ತಂದಿಟ್ಟು ಇಲ್ಲವೇ ನಾವು ಹಬ್ಬ-ಹರಿದಿನಗಳಲ್ಲಿ ಮಾವಿನ ತೋರಣ ಕಟ್ಟುವಂತೆ ಇಳಿಬಿಡುತ್ತಿದ್ದರು. ಇದೇ ಮುಂದೆ ರೋಮನ್ನರಿಗೆ ಪರಿಣಾಮ ಬೀರಿದೆ ಎಂದು ನಂಬಲಾಗಿದೆ. ಪೇಗನ್ನರಂತೆ ರೋಮನ್ನರೂ ಸಹಾ ಶನಿ ದೇವನನ್ನು ತೃಪ್ತಿ ಪಡಿಸಲು ಡಿಸೆಂಬರ್‌ 17ರಿಂದ 23ರ ನಡುವೆ ಮನೆಗೆ ಸದಾ ಹಸಿರಾಗಿರುವ ಸಸ್ಯವೊಂದನ್ನು ತಂದಿಟ್ಟು ಅಲಂಕರಿಸುವ ಪರಿಪಾಠ ರೂಢಿಸಿಕೊಂಡಿದ್ದರು.  

ನಂತರ 16ನೆಯ ಶತಮಾನದಲ್ಲಿ ಜರ್ಮನರು ಮನೆಗೆ ಚಳಿಯ ದಿನಗಳಲ್ಲಿ ಹಗಲು ಕಡಿಮೆ ಇರುವುದರಿಂದ,  ಮುಂದೆ ಬೆಸುಗೆಗೆ ತೆರೆದುಕೊಳ್ಳುವ ಹೆಚ್ಚಿನ ಹಗಲಿನ ದಿನಗಳನ್ನು ಆಹ್ವಾನಿಸುವ ಪರಿಪಾಠಕ್ಕೆ ಕ್ರಿಸ್‌ಮಸ್‌-ಟ್ರೀಯನ್ನು ಅಲಂಕರಿಸಲು ಆರಂಭಿಸಿದರು.  ಒಂದು ಐತಿಹ್ಯದ ಪ್ರಕಾರ 16ನೆಯ ಶತಮಾನದಲ್ಲಿದ್ದ ಜರ್ಮನಿಯ ಪ್ರಟೆಸ್ಟೆಂಟ್‌ ಸುಧಾರಕ ಪಾದ್ರಿ ಮಾರ್ಟಿನ್‌ ಲೂಥರ್‌ನಿಂದಾ ಇದು ಆರಂಭವಾಯಿತು ಎನ್ನಲಾಗಿದೆ. ಒಮ್ಮೆ ಮಾರ್ಟಿನ್‌ ಲೂಥರ್‌ ದಟ್ಟ ಹಸಿರಿನ ಪೈನ್‌ ಮರಗಳನ್ನು ಹಾದು ಬರುತ್ತಿದ್ದಾಗ, ಚಳಿಗಾಲ, ಮರಗಳು ಹಿಮವನ್ನು ಹೊದ್ದು ಆಗಸಕ್ಕೆ ಮುತ್ತಿಡುವಂತೆ ನಿಂತಿದ್ದವಂತೆ. ಆಗಸಕ್ಕೆ ತೆರೆದು ಅವುಗಳಲ್ಲಿ ಸಂಜೆಯ ಕಪ್ಪು ಕತ್ತಲನಲ್ಲಿ ಆಗಸದ ನಕ್ಷತ್ರಗಳು ಹಿಮದ ಪ್ರತಿಫಲನದಲ್ಲಿ ಇಡೀ ಮರಗಳು ಅಲಂಕರಿಸಿ ನಿಂತಹಾಗೆ ಕಂಡಿದ್ದವಂತೆ. ಈ ಸೌಂದರ್ಯವನ್ನು ಮನೆಯಲ್ಲಿಯ ಹೆಂಡತಿ ಮಕ್ಕಳಿಗೆ ಹೇಳಲು ಮಾರ್ಟಿನ್‌ ಲೂಥರ್‌ ಅಲ್ಲಿನ ಪೈನ್‌ ಮರವೊಂದರ ರೆಂಬೆಯನ್ನು ಕತ್ತರಿಸಿ ತಂದು ಮನೆಯೊಳಗೆ ಅಲಂಕರಿಸಿ ತೋರಿಸಿದನೆಂದು ಐತಿಹ್ಯ ಹೇಳುತ್ತದೆ. ಆತನೇ ಮೊಟ್ಟ ಮೊದಲು ಕ್ರಿಸ್‌ಮಸ್‌ ಮರಕ್ಕೆ ಕ್ಯಾಂಡಲ್ಲಿನ ಬೆಳಕನ್ನು ಹಚ್ಚಿ ಅವುಗಳನ್ನೇ ನಕ್ಷತ್ರಗಳಾಗಿಸಿ ಮಕ್ಕಳಿಗೆ ತೋರಿಸಿದ್ದನಂತೆ. ಹೀಗೆ ಬೆಳಗುವ ಮೊಂಬತ್ತಿಯು ಸಹಾ ಬೆಳಕಿನ ಆಚರಣೆಗೆ ಸೇರಿಕೊಂಡಿತು.   

ಹಾಗಾಗಿ ಅಲ್ಲಿಂದ ಮುಂದೆ ಜರ್ಮನರಲ್ಲಿ ಹೀಗೆ ಕಾಡಿನಿಂದ ಪೈನ್‌ ಗಿಡಗಳನ್ನು ಮನೆಗೆ ತಂದು ಅಲಂಕರಿಸಿಡುವ ಪರಿಪಾಠ ಆರಂಭವಾಯಿತು. ಅದರಲ್ಲೂ ಡಿಸೆಂಬರ್‌ 21-22 ರಂದು ಆರಂಭವಾಗುವ ಉತ್ತರಾಯಣ ಸಂಕ್ರಾಂತಿ(Winter Solstice)ಯಂದು ದೀರ್ಘವಾದ ರಾತ್ರಿ ಮತ್ತು ಕಿರಿದಾದ ಹಗಲು! ಹಿರಿದಾದ ಹಗಲಿಗೆ ತೆರೆದುಕೊಳ್ಳುವ ದಿನವನ್ನು ಸದಾ ಹಸಿರಾಗಿಸುವಂತೆ ಆರಂಭವಾದ ಈ ಆಚರಣೆಯು ಹಾಗೆ ಮುಂದುವರೆದು ಯೂರೋಪಿಗೆಲ್ಲಾ ಹಬ್ಬಿತು. ಮುಂದೆ ಜರ್ಮನಿಯಿಂದ ವಲಸೆ ಹೋಗಿ ಅನ್ಯ ದೇಶಗಳಲ್ಲಿ ನೆಲೆಯಾದವರ ಆಚರಣೆಯಿಂದ ಹಬ್ಬಿದೆ ಎಂದೇ ನಂಬಲಾಗಿದೆ. ಆದಾಗ್ಯೂ ೧೮೪8ರಲ್ಲಿ ಮತ್ತೊಂದು ಸುದ್ದಿಯ ಪ್ರಕಟಣೆಯು ಅದನ್ನು ಮತ್ತಷ್ಟು ಜನಪ್ರಿಯವಾಗಿಸಿತು. ಅದೇನೆಂದರೆ..

ಬ್ರಿಟನ್‌ನ ರಾಜ ಮನೆತನವು 1848ರಲ್ಲಿ ಆಚರಿಸಿದ ಕ್ರಿಸ್‌ಮಸ್‌ ಹಬ್ಬದ ಸಂಭ್ರಮದ ಚಿತ್ರಣವು “ಲಂಡನ್‌ ನ್ಯೂಸ್‌” ಪತ್ರಿಕೆಯಲ್ಲಿ ಪ್ರಕಟವಾಯಿತು.  ರಾಜ ಮನೆತನವು ಅದ್ದೂರಿಯಾಗಿ ಮರವನ್ನು ಅಲಂಕರಿಸಿಟ್ಟದ್ದಲ್ಲದೆ  ಬ್ರಿಟನ್ನಿನ ರಾಣಿ ವಿಕ್ಟೋರಿಯಾ ಮತ್ತು ರಾಜಕುಮಾರ ಆಲ್ಬರ್ಟ್‌ ಇಬ್ಬರೂ ‌1848 ಮತ್ತು 1850ರ ನಡುವೆ ಮರವನ್ನು ಸಿಂಗರಿಸಿ ಹಬ್ಬದ ಆಚರಣೆಯನ್ನು ಜನಪ್ರಿಯಗೊಳಿಸಿದರು. ಇದರಿಂದಾಗಿ ಮನೆಯ ಮುಖ್ಯ ಹಾಲ್‌ನಲ್ಲಿ ಮರವನ್ನೋ ಅಥವಾ ಮರದ ಕೊಂಬೆಯನ್ನೂ ಅಲಂಕರಿಸಿಡುವ ಪರಂಪರೆ ಅಲ್ಲಿಂದ ಎಲ್ಲೆಡೆ ಹಬ್ಬಿತು.  

ವೈಟ್‌ ಹೌಸ್‌ ನ ಕ್ರಿಸ್‌ಮಸ್‌ ಸಂಭ್ರಮ

ಮುಂದೆ ಮರವನ್ನು ಅಲಂಕರಿಸಿಡುವ ಮತ್ತು ಅದನ್ನು ವಿರೋಧಿಸುವ ನಾನಾ ಚರ್ಚೆಗಳು ಧಾರಾಳವಾಗಿ ಜನಪ್ರಿಯವಾಗಿವೆ. ಅದರಲ್ಲೂ ಅಮೆರಿಕದ “ವೈಟ್‌ ಹೌಸ್‌” ಆಚರಣೆಯ ಸುದ್ದಿಗಳು ಇವುಗಳನ್ನೂ ಒಳಗೊಂಡಿವೆ. ಒಮ್ಮೆ ಅಮೆರಿಕದ ಅಧ್ಯಕ್ಷ ರೂಸ್‌ವೆಲ್ಟ್‌ ಅಂತಹಾ ನಿರ್ಧಾರವನ್ನು ತೆಗೆದುಕೊಂಡಿದ್ದರಂತೆ. ಆದಾಗ್ಯೂ ಅವರ ಮಗ, ಅವರ ಕಣ್ಣು ತಪ್ಪಿಸಿ ಅಲಂಕರಿಸಿದ್ದನಂತೆ. ಇದೊಂದು ದೊಡ್ಡ ಚರ್ಚೆಯೇ ನಡೆದಿದೆ. ಆದರೂ ವೈಟ್‌ ಹೌಸ್‌ನ ಸಂಭ್ರಮದ ಆಚರಣೆಯು ದೊಡ್ಡ ಸುದ್ದಿಯೇ ಸರಿ.  ಹೀಗೆ ಎಲ್ಲ ಧರ್ಮಗಳ ಸಂಪ್ರದಾಯಿಕ ಸಂಗತಿಗಳ ಹಾಗೆ ಇಲ್ಲೂ, ಅದರಲ್ಲೂ ಸಸ್ಯವೊಂದರ ಕೇವಲ ಅಲಂಕಾರಕ್ಕಾಗಿ ಮನೆ ಮನೆಯಲ್ಲೂ ಕಾಪಿಡುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಆದ್ದರಿಂದಲೇ ಕೃತಕ ಕ್ರಿಸ್‌ಮಸ್‌ ಮರಗಳು ಕೂಡ ಸೃಷ್ಟಿಯಾದವು. ಅನೇಕ ಕಡೆ ಕೃತಕ ಮರಗಳ ಅಲಂಕಾರ ಕೂಡ ಮಾಡುವುದುಂಟು.

ವಿವಿಧ ದೇಶಗಳಲ್ಲಿ ವಿವಿಧ ಬಗೆಯ ಆಚರಣೆಯಾಗಿ ಕ್ರಿಸ್‌ಮಸ್‌-ಟ್ರೀ ಭಾಗಿಯಾಗಿದೆ.  ಬ್ರೆಜಿಲ್‌ ದೇಶದಲ್ಲಿ ಕ್ರಿಸ್‌ಮಸ್‌ ಸಮಯದಲ್ಲಿ ಚಳಿಯೇ ಇರುವುದಿಲ್ಲ. ಬೇಸಿಗೆ ಆರಂಭವಾಗಿರುತ್ತದೆ. ಹಾಗಾಗಿ ಅಲ್ಲಿ ಮರಗಳ ಮೇಲೆ ಹತ್ತಿಯನ್ನಿಟ್ಟು, ಹಿಮ ಬಿದ್ದಂತೆ ಕಾಣಲು ಅಲಂಕಾರ ಮಾಡಲಾಗುತ್ತದೆ. ನಾರ್ವೇ ದೇಶದಲ್ಲಿ ಮತ್ತೊಂದು ಬಗೆಯ ಆಚರಣೆಯಿದೆ. ಅಲ್ಲಿ ಪೋಷಕರು ಅಲಂಕರಿಸುವಾಗ, ಮಕ್ಕಳು ನೋಡದಂತಿರಲು ಆ ಕೋಣೆಯ ಬಾಗಿಲು ಹಾಕಿರುವುದುಂಟು. ಒಮ್ಮೆಲೆ ಮಕ್ಕಳಿಗೆ ಅಚ್ಚರಿಯನ್ನು ಕೊಡುವ ಉದ್ದೇಶದ ಆಚರಣೆಯಂತೆ! ಇಟಲಿಯಲ್ಲಿ ಅಲಂಕರಿಸಿದ ಮರದ ಮುಂದೆ ಮಂಡಿಯೂರಿ ಕುಳಿತು ಗೌರವ ಸಲ್ಲಿಸುವ, ಹಾಗೆಯೇ ಸಂಗೀತವನ್ನೂ ನುಡಿಸುವ ಪರಂಪರೆಯಿದೆ.

ಹೀಗೆ ಒಂದೊಂದು ದೇಶವೂ ಒಂದೊಂದು ರೀತಿ ರಿವಾಜನ್ನು ರೂಢಿಸಿಕೊಂಡಿದೆ. ಭಾರತೀಯ ಕ್ರಿಶ್ಚಿಯನ್ನರಂತೂ ಈ ನೆಲದ ವಿವಿಧ ಸಾಂಸ್ಕೃತಿಕ ಹೊಂದಾಣಿಕೆಗಳನ್ನು ಮಾಡಿಕೊಂಡು ಆಚರಿಸುತ್ತಾರೆ. ಇಲ್ಲಿ ತೇರು-ಜಾತ್ರೆಗಳೂ ಆಚರಣೆಯ ಭಾಗವಾಗುವುದುಂಟು. ಅಂತೂ ಕ್ರಿಸ್‌ಮಸ್‌-ಟ್ರೀ ಡಿಸೆಂಬರಿನಲ್ಲಿ ಆಯಾ ನೆಲದ ಸಾಂಸ್ಕೃತಿಕ ಸಂಪ್ರದಾಯಿಕ ಅಲಂಕಾರವನ್ನೂ, ಜೊತೆಗೆ ತನ್ನದೇ ಪಾರಂಪರಿಕ ಹಿಮದ ಹೊದಿಕೆಯ ಛಾಪನ್ನೂ, ಬೆಳಕಿನ ಪ್ರತಿಫಲನದ ಹಾಗೂ ಉಡುಗೊರೆಗಳ ಪ್ರದರ್ಶನವನ್ನೂ ಫಲವಾಗಿ ಬಿಟ್ಟು ನಳ ನಳಿಸುತ್ತದೆ.

ನಮಸ್ಕಾರ

ಡಾ. ಟಿ.ಎಸ್‌. ಚನ್ನೇಶ್

This Post Has One Comment

  1. Dr.Shankar Ramachandra Kandagal

    ಬಹುತೇಕರಿಗೆ ಚಿರಪರಿಚಿತವೆನಿಸದ ಅಲಂಕಾರವೇ ಅಪಾಯವೆನಿಸುವ ಕ್ರಿಸ್ಮಸ್ ಮರದ ಆಮೂಲಾಗ್ರ ಮಾಹಿತಿ ಹೊತ್ತು ತಂದಿರುವ ಲೇಖನ ಕ್ರಿಸ್ಮಸ್ ಹಬ್ಬಕ್ಕೆ ಕಳೆ ಕಟ್ಟಿ, ಸಸ್ಯಯಾನದ ಸೊಬಗನ್ನು ಸಮೃದ್ಧಗೊಳಿಸಿದೆ.ಡಾ.ಟಿ .ಎಸ್.ಚನ್ನೇಶರಿಗೆ ಹೃತ್ಪೂರ್ವಕ ಅಭಿನಂದನೆಗಳು.
    ಡಾ.ಶಂಕರ ರಾಮಚಂದ್ರ ಕಂದಗಲ್ಲ
    ವಿಶ್ರಾಂತ ಪ್ರಾಚಾರ್ಯರು,ಬಾಗಲಕೋಟೆ.

Leave a Reply