ಅಮೆರಿಕಾದ ಕಾಂಗ್ರೆಸ್ಸು 2004ರ ನವೆಂಬರ್ ಅಲ್ಲಿ “ಓಕ್“ ಮರವನ್ನು ರಾಷ್ಟ್ರೀಯ ಮರವೆಂದು ಅಧಿಕೃತವಾಗಿ ಘೋಷಿಸಿದೆ. ಓಕ್ ಮರವನ್ನೇ ಆಯ್ಕೆ ಮಾಡಿದ್ದು ಏಕೆ? ಓಕ್ ನೂರಾರು ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ, ಸಹಸ್ರಾರು ವರ್ಷ ಬಾಳುವ ಮರ. ಓಕ್ ಮರದ ಆಯ್ಕೆಯಲ್ಲಿ ಬಹಳ ಸ್ವಾರಸ್ಯವಾದ ಸಂಗತಿಗಳಿದ್ದು, ಅಮೆರಿಕದ ಹಾಗೂ ಓಕ್ ಮರದ ಮಹತ್ವದಲ್ಲಿ ಜಾಗತಿಕ ಆಸಕ್ತಿಯನ್ನು ಒಳಗೊಂಡಿವೆ. ಜಗತ್ತಿನಾದ್ಯಂತ 471 ಒಪ್ಪಿತವಾದ ಪ್ರಭೇದಗಳಲ್ಲಿ 60 ರಿಂದ 90 ಪ್ರಭೇದಗಳನ್ನು ಸ್ಥಳೀಯವಾಗಿ ಹೊಂದಿರುವ ಅಮೆರಿಕಾವು ಓಕ್ ಅನ್ನು ಹೆಚ್ಚು ಕಾಲ ಬದುಕುವ ಮತ್ತು ಸರ್ವಶಕ್ತವಾದ ಮರವೆಂದು ಗೌರವದಿಂದ ಕಾಣುತ್ತಿದೆ. ಜಗತ್ತಿನ ಬಲಿಷ್ಠವಾದ, ಅತಿ ಹೆಚ್ಚು ಬಾಳುತ್ತಿರುವ, ಬೃಹತ್ತಾದ ಮರಗಳಲ್ಲಿ ಒಂದಾದ ಓಕ್ಗಳ ಚರಿತ್ರೆಯೂ ಕೂಡ ಭವ್ಯವಾಗಿಯೇ ಇದೆ. ಇವೆಲ್ಲವುಗಳ ಓದಿನ ಆನಂದಕ್ಕಾಗಿ ಅಮೆರಿಕದ ರಾಷ್ಟ್ರೀಯ ಮರದ ಕಥನದಿಂದಲೇ ಓಕ್ಗಳ ಪರಿಚಯವನ್ನು ನೋಡೋಣ.

ಅಮೆರಿಕಾದ ವನಮಹೋತ್ಸವ ದಿನದ ಪ್ರತಿಷ್ಠಾನ (Arbor Day Foundation)ವು 2004ರಲ್ಲಿ ಅಮೆರಿಕಾದ ನಾಗರಿಕರನ್ನು ಕುರಿತು ಯಾವ ಮರವನ್ನು ರಾಷ್ಟ್ರೀಯ ಮರವನ್ನಾಗಿ ಒಪ್ಪಿಕೊಳ್ಳಲು ಬಯಸಿದ್ದೀರಿ ಎನ್ನುವ ಸರ್ವೆಯೊಂದನ್ನು ಮಾಡಿತು. ಅಮೆರಿಕಾದ ಸ್ಥಳೀಯ ಮರಗಳಲ್ಲಿ ಸುಮಾರು 21 ಪ್ರಭೇದಗಳನ್ನು ಆಯ್ಕೆ ಮಾಡಿ ನಾಗರಿಕರಲ್ಲಿ ತಮ್ಮಿಷ್ಟದ ಮರಕ್ಕೆ ಓಟು ಮಾಡಿ ತಿಳಿಸಲು ಕೋರಿತ್ತು. ಸುಮಾರು ನಾಲ್ಕು ತಿಂಗಳಗಳಷ್ಟು ದೀರ್ಘವಾಗಿ ನಡೆದ ಓಟು ಮಾಡುವಿಕೆಯಲ್ಲಿ ಮೊದಲ ದಿನದ ಓಟಿನಲ್ಲಿಯೇ ಸುಮಾರು 1,01,000 ಕ್ಕೂ ಹೆಚ್ಚು ಓಟುಗಳನ್ನು ಪಡೆದ ಓಕ್ ಮರವು ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಸುಮಾರು 81,000 ಓಟುಗಳನ್ನು ಪಡೆದ ಅತ್ಯಂತ ಎತ್ತರದ ಹಾಗೂ ಬೃಹತ್ತಾದ ಮರಗಳ ಖ್ಯಾತಿಯ ಅಮೆರಿಕನ್ ರೆಡ್ವುಡ್ (Sequoioideae ಉಪಕುಟುಂಬದವು) ಇತ್ತು. ಒಟ್ಟಾರೆಯ ಮೊದಲ ಐದು ಸ್ಥಾನಗಳ ಇತರ ಮೂರರಲ್ಲಿ ಅಮೆರಿಕನ್ ಡಾಗ್ವುಡ್ (Cornus florida), ಮೆಪಲ್ (Acer spp) ಮತ್ತು ಪೈನ್ (Pinusspp) ಮರಗಳು ಇದ್ದವು.
ಒಂದು ರಾಷ್ಟ್ರೀಯ ಮರ ಎನ್ನಲು ಅದಕ್ಕಿರುವ ಮಹತ್ವವನ್ನು ನಮ್ಮದೇ ರಾಷ್ಟ್ರೀಯ ಮರವಾದ ಆಲದ ಜೊತೆ ಸಮೀಕರಿಸಿ ನೋಡೋಣ. ಆಲದ ಮರವು ನಮ್ಮದೇ ದೇಶದ ತವರಿನದು, ಮಾತ್ರವಲ್ಲದೆ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಹರವಾದ ಚಾವಣಿ (Canopy)ಯನ್ನು ಹೊಂದಿರುವ ಮರ. ಭಾರತೀಯತೆಯ ಸಂಸ್ಕೃತಿಯ ಸಹಬಾಳ್ವೆ ಹಾಗೂ ಐಕ್ಯತೆಯ ಸಂಕೇತವಾಗಿ ಆಲವನ್ನು ರಾಷ್ಟ್ರದ ಹೆಮ್ಮೆ ಎಂದು ಪರಿಗಣಿಸಿ, 1950ರಲ್ಲಿಯೇ ರಾಷ್ಟ್ರೀಯ ವೃಕ್ಷವನ್ನಾಗಿ ಘೋಷಿಸಿದೆ. ಈ ಗೌರವದ ಮತ್ತೊಂದು ಪ್ರಮುಖ ಕಾರಣವೆಂದರೆ ಬ್ರಿಟೀಷರು ತಮ್ಮ ವಸಾಹತು ಧೋರಣೆಯ ವಿರೋಧಿಗಳನ್ನು ದಂಡಿಸಲು ಆಲದ ಮರದ ತಾಣಗಳನ್ನು ಬಳಸುತ್ತಿದ್ದುದರ ಸಂತಾಪ ಸೂಚನೆಯೂ ಎಂಬಂತೆ ಆಲದ ಮರಕ್ಕೆ ನಾವು ರಾಷ್ಟ್ರೀಯ ಸ್ಥಾನ-ಮಾನವನ್ನು ಕೊಟ್ಟಿದ್ದೇವೆ. ಇದರಡಿಯ ನೆರಳಲ್ಲಿ ಮಾನವರೇ ಸಮಾವೇಶಗಳನ್ನು ನಡೆಸಿದ ಉದಾಹರಣೆಗಳಲ್ಲದೆ, ಸಹಸ್ರಾರು ಹಕ್ಕಿಗಳಿಗೆ ಆಶ್ರಯವಾಗಿರುವುದು ಗೊತ್ತಿರುವ ವಿಚಾರ. (ಆಲದ ವಿವರಗಳ ಸಸ್ಯಯಾನದ ಲೇಖನವನ್ನು ಓದಲು ಲಿಂಕ್ (https://cfpus.org/ಸಮಾಜವಾದಕ್ಕೂ–ನೆರಳು–ಕೊಟ್ಟ/ ಅನ್ನು ನೋಡಿ).
ವನ ಮಹೋತ್ಸವ ದಿನದ ಪ್ರತಿಷ್ಠಾನ (Arbor Day Foundation) ಒಂದು ಲಾಭರಹಿತವಾದ ಶೈಕ್ಷಣಿಕ ಆಸಕ್ತಿಯ ಸಂಸ್ಥೆಯಾಗಿದ್ದು ನಾಗರಿಕರಲ್ಲಿ ಗಿಡ-ಮರಗಳ, ಪರಿಸರದ ಪ್ರೀತಿಯನ್ನು ಬೆಳೆಸುವಲ್ಲಿ ಆಸಕ್ತವಾಗಿದೆ (https://www.arborday.org/). ಅದರ ಮಹತ್ವದ ಸರ್ವೆಯಿಂದ ಅಮೆರಿಕವು ಒಂದು ರಾಷ್ಟ್ರೀಯ ಮರವನ್ನು ಗುರುತಿಸಲು, ಪ್ರಜಾತಾಂತ್ರಿಕ ಒಪ್ಪಿಗೆಗಳಿಗೆ ಒಡ್ಡಿಕೊಂಡು ಓಕ್ ಮರದ ಆಯ್ಕೆಗೆ ಸರ್ಕಾರದ ಕಾಂಗ್ರೆಸ್ಸಿಗೆ ಬೆಂಬಲವಾಗಿತ್ತು.
ಓಕ್ ಮರವನ್ನು ಬೆಂಬಲಿಸಿದ ನಾಗರಿಕರು ಅದರ ಆಯ್ಕೆಯಲ್ಲಿ ಪರಿಗಣಿಸಿದ್ದು, ಇಡೀ ದೇಶದ ಎಲ್ಲೆಂದರಲ್ಲಿ ಕಾಣುವ ಮರದ ಮಹತ್ವದ ಜೊತೆಗೆ ಸುಮಾರು 60ಕ್ಕೂ ಹೆಚ್ಚು ಸ್ಥಳೀಯವಾದ ಪ್ರಭೇದಗಳ ಓಕ್ ಸಂಕುಲದ ರಾಷ್ಟ್ರಾದ್ಯಂತ ಹರಡುವಿಕೆಯನ್ನು ಹಾಗೂ ಅದರ ಬಲಿಷ್ಠತೆಯನ್ನು ಮೆಚ್ಚಿಕೊಂಡಿದ್ದೇ ಕಾರಣ. ಅದಲ್ಲದೆ ಓಕ್ ಮರಗಳನ್ನು ನಂಬಿಕೊಂಡೇ ಸುಮಾರು 950 ಪ್ರಭೇದಗಳ ಕೀಟಗಳ ಕಂಬಳಿ ಹುಳು (Caterpillars) ಗಳು ಬದುಕುತ್ತಿವೆ, ಅವುಗಳನ್ನು ಹಿಡಿದು ತಿನ್ನಲು ಹಕ್ಕಿಗಳು ಬರುತ್ತವೆ, ಜೊತೆಗೆ ಇದರ ಕಾಯಿ ಕೂಡ ಸಾಕಷ್ಟು ಆಹಾರಾಂಶಗಳನ್ನು ಹೊಂದಿದ್ದು ಮಾನವರೂ ಸೇರಿದಂತೆ, ನೂರಾರು ಜೀವಿಗಳಿಗೆ ಆಹಾರವಾಗಿದೆ. ಅಮೆರಿಕದಲ್ಲಿ ಹಸಿರು ಕಾಣುವಲ್ಲೆಲ್ಲಾ ಬೇಬಿ ಓಕ್ಗಳಿಂದ ಮೊದಲಗೊಂಡು, ಮುತ್ತಜ್ಜ/ಮುತ್ತಜ್ಜಿ ಓಕ್ಗಳವರೆಗೂ ಸಹಜವಾಗಿ ನೋಡಬಹುದು. ಶಕ್ತಿಯುತ ರಾಷ್ಟ್ರ ಅಮೆರಿಕದ ರಾಷ್ಟ್ರೀಯ ಮರವಾಗಿರುವ ಶಕ್ತವಾದ ಹಾಗೂ ಭವ್ಯವೂ ಆದ ಓಕ್ ಮರ ಮತ್ತದರ ಜೈವಿಕ ಪರಂಪರೆಯ ಕಥನವನ್ನು ಇನ್ನು ಮುಂದೆ ನೋಡೋಣ

ಅಮೆರಿಕದ ನೆಲದಲ್ಲಿ ಸಾಕಷ್ಟು ಹಸಿರು ಗಿಡ-ಮರಗಳ ದಟ್ಟಣೆ, ಪಾರ್ಕು, ಇತ್ಯಾದಿಗಳ ಕಂಡರೆ ಅವುಗಳಲ್ಲಿ ಒಂದಾದರೂ ಓಕ್ ಮರ ಇದ್ದೇ ಇರುತ್ತದೆ. ಅಷ್ಟೊಂದು ಅಗಾಧವಾದ ಭೌಗೋಳೀಕ ಹರಹನ್ನು ಹೊಂದಿರುವ ಓಕ್, ಮಧ್ಯದ ಮರಳುಗಾಡು ಮತ್ತಿತರ ಒಣ ನೆಲವನ್ನು ಹೊರತು ಪಡಿಸಿದರೆ ಎಲ್ಲಾ ಕಡೆಗಳಲ್ಲೂ ಓಕ್ ಮರಗಳಿವೆ. ಜಾಗತಿಕ ಹರಹಿನ ಪ್ರತಿಶತ ೧೦ಕ್ಕಿಂತಲೂ ಹೆಚ್ಚು ಪ್ರಭೇದಗಳ ಹಂಚಿಕೆಯ ನೆಲ ಅಮೆರಿಕಾ! ಓಕ್ ಮರಗಳು ಫ್ಯಾಗೇಸಿಯೇ (Fagaceae) ಸಸ್ಯ ಕುಟುಂಬದ ಕ್ಯೂರ್ಕಸ್ (Quercus) ಎನ್ನುವ ಸಂಕುಲದವು. ಹಲವು ಅಧ್ಯಯನಗಳ ವರದಿಗಳು ಸುಮಾರು 500 ಪ್ರಭೇದಗಳಿರುವ ಸಂಕುಲ (Genus) ಎಂದು ಗುರುತಿಸಿದ್ದರೆ, ವಿಖ್ಯಾತ ರಾಯಲ್ ಬಟಾನಿಕಲ್ ಗಾರ್ಡನ್ ಕ್ಯೂ-ಗಾರ್ಡನ್-ನ ಜಗತ್ತಿನ ಸಸ್ಯ ಸಂಗ್ರಹದ ಪಟ್ಟಿಯಲ್ಲಿ 471 ಒಪ್ಪಿತ ಪ್ರಭೇದಗಳೆಂದು ದಾಖಲಾಗಿವೆ. ಬಹಳ ಮುಖ್ಯವಾಗಿ ಈ ಪ್ರಭೇದಗಳ ನಡುವೆ ಸಂಕರಗಳಾಗುವ ಸಾಧ್ಯತೆಯು ಹೆಚ್ಚೇ ಇರುವ ಕಾರಣದಿಂದ ನೂರಾರು ಹೈಬ್ರಿಡ್ ಓಕ್ಗಳು ಇದ್ದು ಪ್ರಭೇದಗಳ ಗುರುತಿಸುವಿಕೆಯಲ್ಲಿ ಮತ್ತು ಹರಡುವಿಕೆಯಲ್ಲಿಯೂ ಅಗಾಧತೆಯು ಸಹಜವಾಗಿ ಕಾಣಬರುತ್ತದೆ. ಈ ಹೈಬ್ರಿಡ್ಗಳ ಕಾರಣದಿಂದಾಗಿಯೂ ಮರವನ್ನು ಪ್ರಭೇಧವಾಗಿ ಗುರುತಿಸಲು ಕಷ್ಟವೂ ಆಗಿದೆ.

ಓಕ್ ಗಟ್ಟಿಯಾದ ಚೌಬೀನೆಯನ್ನು (Hardwood) ಹೊಂದಿರುವ ಮರ. ಗಟ್ಟಿ ಮರ ಎನ್ನುವ ಕಾರಣಕ್ಕೇನೆ ಇದರ ಉಪಯೋಗ ಕೂಡ ಅಮೆರಿಕದ ಮನೆ-ಮನಗಳ ಬಹು ಮುಖ್ಯ ಆಶಯಗಳಲ್ಲೊಂದು. ಇಡೀ ಜಗತ್ತಿನ ಒಟ್ಟೂ ಭೌಗೊಳಿಕ ಹರಹಿನಲ್ಲಿ ನೆಲದ ಉತ್ತರಾರ್ಧ ಗೋಳದಲ್ಲಿ ಹೆಚ್ಚೂ -ಕಡಿಮೆ ಸೀಮಿತವಾಗಿರುವ ಅಥವಾ ಹರಡಿಕೊಂಡಿರುವ ಮರ. ಬಹು ಮುಖ್ಯವಾಗಿ ಸಸ್ಯಶಾಸ್ತ್ರೀಯವಾಗಿ ಹಳೆಯ ಜಗತ್ತು (Old World) ಮತ್ತು ಹೊಸ ಜಗತ್ತು (New World)ಗಳ ಓಕ್ಗಳು ಎಂದು ಎರಡು ಬಗೆಯಲ್ಲಿ ವಿಂಗಡಿಸಲಾಗುತ್ತದೆ. ಬಹು ಸುಲಭವಾಗಿ ಸುಮಾರು 500 ಪ್ರಭೇದಗಳ ನಡುವೆ ಹೈಬ್ರಿಡ್ಗಳಾಗುತ್ತಿದ್ದು ಓಕ್ಗಳ ಹರಹು ಮತ್ತಷ್ಟು ವಿಶಾಲವಾದದ್ದಾಗಿದೆ. ಆದ್ದರಿಂದಲೇ ಓಕ್ ಮರಗಳ ಐತಿಹಾಸಿಕ ವಿವರಗಳನ್ನು ಹೀಗೀಗೆ ಎಂದು ವಿವರಿಸಿ ವಿಂಗಡಿಸಿ ಹೆಳುವುದು ಕಷ್ಟ. ಉತ್ತರಾರ್ಧ ಗೋಳದ ಶೀತ ಹಾಗೂ ಸಮಶೀತೋಷ್ಣವಲಯದಲ್ಲಿ ಮಾತ್ರವೇ ಹೆಚ್ಚಾಗಿ ಕಾಣುವ ಇವುಗಳು ಅಮೆರಿಕಾ ಖಂಡದಲ್ಲೂ ಉತ್ತರ ಅಮೆರಿಕಾಕ್ಕೆ ಸೀಮಿತವಾದವು. ಉಷ್ಣವಲಯದ ದಕ್ಷಿಣ ಅಮೆರಿಕಾದಲ್ಲಿ ಆಸಕ್ತಿಯಿಂದ ಕೆಲವೆಡೆ ಪರಿಚಯಿಸಿರುವುದನ್ನು ಬಿಟ್ಟರೆ ಸಹಜವಾಗಿ ಹರಡಿಲ್ಲ.

ಜಗತ್ತಿನಾದ್ಯಂತ ಉತ್ತರಾರ್ಧ ಗೋಳದಲ್ಲಿ ಹರಡಿರುವ ಓಕ್ ಮೆಕ್ಸಿಕೊ ದೇಶದಲ್ಲಿ ಅತೀ ಹೆಚ್ಚು ಅಂದರೆ ಸುಮಾರು 160ಕ್ಕೂ ಹೆಚ್ಚು ಪ್ರಭೇದಗಳನ್ನು ಹೊಂದಿದ್ದರೆ, ಚೀನಾವು ಸುಮಾರು 100ಕ್ಕೂ ಹೆಚ್ಚು ಪ್ರಭೇದಗಳನ್ನು ಹೊಂದಿದೆ. ಚೀನಾದ ಒಟ್ಟು ಸ್ವಾಭಾವಿಕ ಅರಣ್ಯದಲ್ಲಿ ಸುಮಾರು ಪ್ರತಿಶತ 10ಕ್ಕಿಂತಲೂ ಪ್ರದೇಶವನ್ನು ಓಕ್ ಸಂಕುಲವೊಂದೇ ಹರಡಿಕೊಂಡಿದೆ. ಅಮೆರಿಕಾವು 60ಕ್ಕಿಂತಲೂ ಹೆಚ್ಚು ಸ್ಥಳೀಯವಾದ ಓಕ್ಗಳಲ್ಲದೆ, ಒಟ್ಟಾರೆಯಾಗಿ ಸುಮಾರು 90-100ರಷ್ಟು ಪ್ರಭೇದಗಳಿಂದ ಸಮೃದ್ಧವಾಗಿದೆ.

ಓಕ್ ಒಂದು ಗಟ್ಟಿ ಮರ. ಹಲವಾರು ಪ್ರಭೇದಗಳು ಹೆಚ್ಚು ಕಾಲ ಬದುಕಬಲ್ಲವು. ನೀಳವಾದ ಮುಖ್ಯ ಕಾಂಡವು ಕನಿಷ್ಠ ನಾಲ್ಕಾರು ಅಡಿಗಳಿಂದ ಹತ್ತಾರು ಅಡಿಗಳವರೆಗೆ ಇದ್ದು, ನಂತರದಲ್ಲಿ ಇತ್ತರಕ್ಕೆ ಹೋದಂತೆ ಕವಲೊಡೆದು ಹರವಾಗಿಯೂ, ಇಲ್ಲವೆ ಚೂಪಾಗಿಯೂ ಬೆಳೆದು ಚಾಚಿಕೊಂಡಂತೆ ಇರುತ್ತವೆ. ಕೊಂಬೆಗಳೂ ಕೂಡ ದಷ್ಟ-ಪುಷ್ಟವಾಗಿದ್ದು ಅದರ ಮರದ ಬಳಕೆಗೆ ಅನುಕೂಲಕರವಾಗಿವೆ. ಅಮೆರಿಕದಲ್ಲಂತೂ ವಸತಿಯ ಮನೆಗಳಂತೂ ಮರದಲ್ಲೇ ಕಟ್ಟಿದವು. ಅವುಗಳಿಗೆಲ್ಲಾ ಹೇಳಿ ಮಾಡಿಸಿದ ಮರ ಓಕ್.

ಈಗಾಗಲೆ ಹೇಳಿರುವಂತೆ ಹಳೆಯ ಜಗತ್ತಿಗೂ ಮತ್ತು ಹೊಸಜಗತ್ತಿಗೂ ಭಿನ್ನವಾಗಿ ಹಬ್ಬಿಕೊಂಡ ಓಕ್ ಮರಗಳು ಅವುಗಳ ಎಲೆಗಳಿಂದಲೂ ಭಿನ್ನವಾಗಿಯೂ ವೈಭವಯುತವಾಗಿಯೂ ಕಾಣುತವೆ. ಓಕ್ ಮರಗಳಲ್ಲಿ ಎಲೆಗಳ ನೋಟದ್ದೇ ವೈಭವ! ಬಗೆ ಬಗೆಯ ಓಕ್ಗಳಿದ್ದು ಎಲೆಗಳನ್ನು ಮುಖ್ಯವಾಗಿ ವೃತ್ತಾಕಾರವಾಗಿ ಹಬ್ಬಿಕೊಂಡಿರುವುದರಿಂದ ಮೊದಲು ಗುರುತಿಸಬಹುದು. ಅಂದರೆ ಸಾಮಾನ್ಯವಾಗಿ ಬೇವಿನ ಎಲೆಗಳು ಎದುರು-ಬದುರಾಗಿದ್ದರೆ, ಓಕ್ಗಳಲ್ಲಿ ಸುತ್ತವರಿದಿರುತ್ತವೆ. ಜೊತೆಗ ಎಲೆಗಳ ಪ್ರಾಕಾರವೇ ಬಗೆ ಬಗೆಯ ಅಕಾರಗಳಿರುವುದರಿಂದ ಸೊಬಗು ಭಿನ್ನವಾಗಿರುತ್ತದೆ.

ಓಕ್ ಕಾಯಿಗಳು ಗಟ್ಟಿಯಾದ ಕವಚದ ನಟ್ಗಳು! ಕೋಕೊನಟ್, ಗ್ರೌಂಡ್ನಟ್ ತರಹ ಅಲ್ಲ. ಸಸ್ಯವೈಜ್ಞಾನಿಕವಾಗಿ ಗಟ್ಟಿಯಾದ ಕಾಯಿಗಳ ನಟ್ಗಳು. ಅವುಗಳನ್ನು ಎಕಾರ್ನ್ಗಳು (Acorns) ಎಂದು ಕರೆಯಲಾಗುತ್ತದೆ. ಇವುಗಳ ನೋಟವು ಪ್ರಭೇದಗಳಿಂದ ಪ್ರಭೇದಗಳಿಗೆ ಭಿನ್ನವಾಗಿತ್ತದೆ. ಇವು ಪ್ರೊಟೀನ್ ಮತ್ತು ಕೊಬ್ಬುಗಳೆರಡನ್ನೂ ಹೊಂದಿದ್ದು ವನ್ಯಜೀವಿಗಳಿಗೆ ಆಹಾರವಾಗಿ ಸಹಾಯಕವಾಗುವುದಲ್ಲದೆ, ಹಂದಿ ಸಾಕಣೆ ಮತ್ತು ಕೋಳಿ ಸಾಕಾಣಿಕೆಯಲ್ಲೂ ಬಳಸಲಾಗುತ್ತದೆ. ಕೆಲವು ಕಡೆಗಳಲ್ಲಿ ಎಕಾರ್ನ್ಗಳನ್ನು ಟ್ಯಾನಿನ್ ರಹಿತವಾಗಿಸಿ ಮಾನವರೂ ಬಳಸುತ್ತಾರೆ. ಇದೆ ನಟ್ ಮೊಳಕೆಯಾಗುವಾಗ ಎರಡು ಬೇಳೆಯಂತೆ ಒಡೆದು ಮೂಲದೇಟು ಹೊರಬಂದು ಸಸ್ಯವಾಗಿ ಗಿಡವಾಗಿ ಮುಂದೆ ಮರವಾಗಿ ಬೆಳೆಯುತ್ತದೆ.

ಅಷ್ಟೆಲ್ಲಾ ನೂರಾರು ಪ್ರಬೇಧಗಳಿದ್ದರೂ ಅವುಗಳನ್ನೆಲ್ಲವನ್ನೂ ಪ್ರಮುಖವಾಗಿ ಬಿಳಿಯ ಓಕ್ ಮತ್ತು ಕೆಂಪು ಓಕ್ ಎಂದು ಎರಡು ಬಗೆಗಳೆಂದು ಸಾಮಾನ್ಯವಾಗಿ ವರ್ಗೀಕರೀಸುತ್ತಾರೆ. ಇದಕ್ಕೆ ಮುಖ್ಯವಾಗಿ ಮರಗಳ ಕಾಂಡ, ಎಲೆಗಳು ಮತ್ತು ಅದರ ಕಾಯಿಗಳ ನೋಟವನ್ನು ಗಮನದಲ್ಲಿಟ್ಟು ಮಾಡಲಾಗುತ್ತದೆ.
ಬಿಳಿಯ ಓಕ್ಗಳ ಕಾಂಡದ ನೋಟವು ದಟ್ಟವಾದ ಬಣ್ಣದಾಗಿರದೆ ತಿಳಿಯಾಗಿರುತ್ತದೆ. ಎಲೆಗಳು ಚಿಕ್ಕವಾಗಿದ್ದು, ನಯವಾಗಿಯೂ ಮತ್ತು ದುಂಡಾಗಿಯೂ ಇರುತ್ತವೆ. ಎಲೆಗಳ ಅಂಚಿನ ಹಾಲೆಗಳ ನಡುವೆ ಮೃದುವಾದ ವಕ್ರಾಕೃತಿಗಳೊಂದಿಗೆ ಸುಂದರವಾಗಿರುತ್ತವೆ. ಬಲಿತು ಮಾಗಿ ಉದುರುವಾಗ ಕೆಂಪು ಇಲ್ಲವೆ ಕೆಂಪು-ಕೆಂದು (ಮರೂನ್) ಬಣ್ಣದವಾಗಿರುತ್ತವೆ. ಕಾಯಿಗಳೂ ಕೂಡ ತಿಳಿಯಾದ ಬಣ್ಣವನ್ನೇ ಹೊಂದಿದ್ದು ಅವುಗಳ ಮುಚ್ಚುವ ಟೋಪಿಯು ಚಿಕ್ಕದು. ಅದೆಲ್ಲಕ್ಕಿಂತಲೂ ಮರದ ಚೌಬೀನೆಯು ಕೊರೆದಾಗ ಕಾಣುವ ಬಿಳಿಯ ಬಣ್ಣದ ಛಾಯೆಯು ವರ್ಗೀಕರಣದಲ್ಲಿ ಬಹು ಮುಖ್ಯ. ಮಾಗಿದ ಎಲೆಗಳು ಹೆಚ್ಚೂ ಕಡಿಮೆ ಕೆಂಬಣ್ಣದವೇ ಆಗಿದ್ದೂ ಚೌಬೀನೆ ಬಿಳಿಯನ್ನು ಹೊಂದಿರುವವನ್ನು ಬಿಳಿಯ ಓಕ್ ಎಂದೇ ಗುರುತಿಸಲಾಗುತ್ತದೆ. ಅಲ್ಲದೆ ಬಿಳಿಯ ಓಕ್ಗಳು ನೂರಾರು ಅಡಿ ಎತ್ತರಕ್ಕೆ ಬೆಳೆಯುತ್ತವೆ.

ಕೆಂಪು ಓಕ್ಗಳ ಮರಗಳ ಕಾಂಡವು ದಟ್ಟ ಬಣ್ಣದ್ದಾಗಿರುತ್ತವೆ. ಎಲೆಗಳು ಉದ್ದವಾಗಿಯೂ ನೀಳವಾಗಿಯೂ ಇದ್ದು ಅವುಗಳ ಅಂಚು ವಿಭಾಗಿಸಿಕೊಂಡು ಮೊನಚಾಗಿದ್ದು, ನಕ್ಷತ್ರಗಳ ತುದಿಗಳಂತೆ ಸುಂದರವಾಗಿ ಗೋಚರವಾಗುತ್ತವೆ. ಎಲೆಗಳು ಮಾಗಿ ಉದುರುವಾಗ ಕೆಂಪುಬಣ್ಣದಿಂದ ಕಂದು ಬಣ್ಣದೆಡೆಗೆ (Reddish-Brown) ತಿರುಗಿದ ನೋಟವನ್ನು ಹೊಂದಿರುತ್ತವೆ. ಕಾಯಿಗಳು ದಟ್ಟವಾದ ಬಣ್ಣದಿಂದ ಕೂಡಿದ್ದು, ತುಸು ದೊಡ್ಡ ದಾದ ಟೋಪಿಯಿಂದ ಮುಚ್ಚಿದಂತೆ ಕಾಣುತ್ತವೆ.
ಜಾಗತಿಕವಾಗಿ ಕೆಂಪು ಮತ್ತು ಬಿಳಿ ಓಕ್ ಎಂಬ ಸಾಮಾನ್ಯ ಬಗೆಗಳಿದ್ದರೂ, ಜನಪ್ರಿಯವಾದ ವಿಂಗಡಣೆಯಲ್ಲಿ ಓಕ್ ಮರಗಳನ್ನು ಬ್ಲಾಕ್ ಓಕ್ (Black Oak), ಬರ್ ಓಕ್ (Bur Oak), ಚೆಸ್ನಟ್ ಓಕ್ (Chestnut Oak), ಇಂಗ್ಲೀಶ್ ಓಕ್ (English Oak), ಲೈವ್ ಓಕ್ (Live Oak), ಪಿನ್ ಓಕ್ (Pin Oak), ರೆಡ್ ಓಕ್ (Red Oak), ವೈಟ್ ಓಕ್ (White Oak), ವಾಟರ್ ಓಕ್ (Water Oak), ವಿಲ್ಲೊ ಓಕ್ (Willow Oak), ಸ್ವಾಂಪ್ ಚೆಸ್ಟ್ನಟ್ ಓಕ್ (Swamp Chestnut Oak) ಸ್ಕ್ರಬ್ ಓಕ್ (Scrub Oak) ಎಂದು ಜನಪ್ರಿಯ ಭಾಷೆಯಿಂದ ವಿಂಗಡಿಸುತ್ತಾರೆ. ಇವೆಲ್ಲವನ್ನೂ ನಿಗಧಿತವಾದ ಸಸ್ಯ ವೈಜ್ಞಾನಿಕ ಪ್ರಭೇದಗಳನ್ನು ಗುರುತು ಪಡಿಸಿದೆ. ಆದರೆ ಸ್ಕ್ರಬ್ ಓಕ್ ಹಲವಾರು ಜನಪ್ರಿಯವಲ್ಲದ ಮಿಶ್ರ ಪ್ರಭೇದಗಳು ಎನ್ನಬಹುದು.
ಯಾವುದೇ ಓಕ್ ಆಗಿರಲಿ, ಕೆಂಪು ಅಥವಾ ಬಿಳಿ! ಪುರಾಣ ಮತ್ತು ದಂತಕಥೆಗಳ ಕಥೆಗಳಿಗೆ ಹೋಗದೆ ಓಕ್ ಮರಗಳ ಬಗ್ಗೆ ಮಾತನಾಡುವುದು ಕಷ್ಟ. ಮಾನವಕುಲದ ಕಥೆಯಲ್ಲಿ ಓಕ್ ಮರಗಳು ಪುರಾಣ ಮತ್ತು ದಂತ ಕಥೆಗಳ ಮೂಲಕ ಹೆಣೆದುಕೊಂಡಿವೆ. ಅವುಗಳ ವಿಸ್ತಾರ ಮತ್ತು ಹರಹು ಎಷ್ಟಿದೆ ಎಂದರೆ ಅವುಗಳಲ್ಲವನ್ನೂ ಅಕ್ಷರಶಃ ಬರೆಯಲು ಸಾಧ್ಯವಿಲ್ಲ. 4 ನೇ ಶತಮಾನದ ಆರಂಭದಿಂದಲೂ, ಪ್ರಪಂಚದ ಹೆಚ್ಚಿನ ಭಾಗಗಳಲ್ಲಿ ಬರೆಯಲು ಬಳಸುವ ಇಂಕ್ ಅನ್ನು ಓಕ್ ಕಾಯಿಗಳಿಂದ ತಯಾರಿಸಲಾಗುತ್ತಿತ್ತು. ಸಾವಿರಾರು ವರ್ಷಗಳಿಂದ, ಉತ್ತರ ಅಮೆರಿಕಾ, ಏಷ್ಯಾ, ಉತ್ತರ ಆಫ್ರಿಕಾ ಮತ್ತು ಯುರೋಪಿನಾದ್ಯಂತ ಜನರು ಓಕ್ಗಳನ್ನು ಪ್ರಮುಖ ಆಹಾರ ಮೂಲವಾಗಿ ಅವಲಂಬಿಸಿದ್ದರು.
ಪ್ರಾಚೀನ ಡ್ರುಯಿಡ್ಡರು (High Ranking People of ancient cultures), ಗ್ರೀಕರು, ರೋಮನ್ನರು ಓಕ್ ಮರವನ್ನು ಶಕ್ತಿ ಮತ್ತು ಸಹಿಷ್ಣುತೆಯ ಪವಿತ್ರ ಸಂಕೇತವಾದ ಇದು ಭೂಮಿ ಮತ್ತು ಸ್ವರ್ಗದ ನಡುವಿನ ಅತೀಂದ್ರಿಯ ಕೊಂಡಿಯಾಗಿ ಕಂಡು ಇತರ ಮರಗಳಿಗಿಂತ ಪೂಜಿನೀಯ ಎಂದೇ ಭಾವಿಸಿದ್ದರು. ಪ್ರಾಚೀನ ರಾಜರು ಓಕ್ ಎಲೆಗಳ ಕಿರೀಟಗಳನ್ನು ಧರಿಸುತಿದ್ದರು. ಅಲ್ಲದೆ ಯುದ್ಧಗಳಿಂದ ಯಶಸ್ವಿಯಾಗಿ ಹಿಂದಿರುಗಿದ ರೋಮನ್ ಕಮಾಂಡರ್ಗಳನ್ನು ವಿಜಯ ಮೆರವಣಿಗೆಗಳಲ್ಲಿ ಓಕ್-ಎಲೆಯ ಕಿರೀಟಗಳಿಂದ ಸನ್ಮಾನಿಸಿ ಅಲಂಕರಿಸುತ್ತಿದ್ದರು. ಇಂದಿಗೂ ಸಹ, ಓಕ್ ಎಲೆಗಳನ್ನು ಪ್ರಪಂಚದಾದ್ಯಂತ ಅನೇಕ ಮಿಲಿಟರಿ ಶ್ರೇಣಿಗಳಲ್ಲಿ ಮತ್ತು ಹಲವಾರು ಸರ್ಕಾರಿ ಪ್ರಶಸ್ತಿಗಳಿಗೆ ಅಲಂಕಾರಿಕ ಸಂಕೇತಗಳಾಗಿ ಬಳಸಲಾಗುತ್ತದೆ.
ಬೋಟ್ಗಳ ತಯಾರಿಯಿಂದ ವೈನ್ ತಯಾರಿಸುವ ಬ್ಯಾರಲ್ಗಳವರೆಗೆ ಓಕ್ ಮರಗಳಿಂದ ನಿರ್ಮಿಸಿ ಅಗಾಧವಾಗಿ ಬಳಸಿ ಮಾನವರ ಜೀವನದಲ್ಲಿ ಬೆಸೆದಿರುವ ಈ ಓಕ್ ಮರಗಳು ಸಹಸ್ರಾರು ಕಾಲ ಬಾಳಿ-ಬದುಕುವುದರಿಂದ ಮನುಕುಲದ ಜೀವನದ ಆಧ್ಯಂತಿಕ ರೂಪಕವಾಗಿ ಮೆರೆದಿವೆ. ರಾಷ್ಟ್ರಗಳ ಹೆಮ್ಮೆಯೆನಿಸುವಲ್ಲಿ ಅಮೆರಿಕಾ ಮಾತ್ರವಲ್ಲ ಬಲ್ಗೇರಿಯಾ, ಕ್ರೋಶಿಯಾ, ಸೈಪ್ರಸ್, ಎಸ್ತೊನಿಯಾ, ಫ್ರಾನ್ಸ್, ಜರ್ಮನಿ, ಮಾಲ್ಡೊವಾ, ಜೋರ್ಡಾನ್, ಲಾಟ್ವಿಯಾ, ಲಿಥಿವೇನಿಯಾ, ಪೋಲೆಂಡ್, ರೊಮನಿಯಾ, ಸೆರ್ಬಿನ್ ಮತ್ತು ವೇಲ್ಸ್ ಮುಂತಾದ ೧೫ ರಾಷ್ಟ್ರಗಳ ರಾಷ್ಟ್ರೀಯ ಮರವೆಂದು ಗೌರವಿಸಲ್ಪಟ್ಟಿದೆ.
ಲಿಥಿವೇನಿಯಾ ರಾಷ್ಟ್ರದ ಉದಯದ ಹಿನ್ನಲೆಯನ್ನೂ ಒಳಗೊಂಡಿರುವ ಓಕ್ ಅಲ್ಲಿಯೇ ಸುಮಾರು 1500-2000 ವರ್ಷಗಳು ಹಳೆಯದಾದ ಮರವನ್ನು ಸಂರಕ್ಷಿಸಲಾಗಿದೆ. ಅದರ ಪುಟ್ಟ ವಿವರಣೆಯ ಚಿತ್ರದೊಂದಿದೆ ಈ ಪ್ರಬಂಧವನ್ನು ಮುಗಿಸುತ್ತೇನೆ. ಮುಂದೊಮ್ಮೆ ಓಕ್ ಮರಗಳ ಕಥನಗಳನ್ನು ಬಿಡಿ, ಬಿಡಿಯಾಗಿ ಸಾಧ್ಯವಾದರೆ CPUS ನ ವೆಬ್ಪುಟಗಳಲ್ಲಿ ಮತ್ತೆ ನೋಡಬಹುದು.

ಸದ್ಯಕ್ಕೆ ಅಮೆರಿಕೆಯಲ್ಲಿ ಕಳೆದ ನೂರಾರು ದಿನಗಳಲ್ಲಿ ಅತ್ಯಂತ ಆಪ್ತವಾದ ಓಕ್ ಮರವನ್ನು ಪರಿಚಯಿಸಿ ವಿರಮಿಸುತ್ತೇನೆ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
