You are currently viewing ಅಗಲಿದ ವಿಜ್ಞಾನದ ಅಜ್ಜನಿಗೊಂದು ವಿದಾಯ

ಅಗಲಿದ ವಿಜ್ಞಾನದ ಅಜ್ಜನಿಗೊಂದು ವಿದಾಯ

“A common temptation of youth is the desire to be famous or glamorous or powerful. I realized that not everyone can be “king of the mountain” even for a short time. Can being king, therefore, be what gives meaning to life? I began to understand that any meaning to a life is not to be king of a castle, but the significance and permanence of what we serve”   – John Goodenough

ಪ್ರತಿಯೊಬ್ಬ ಮಾನವನನ್ನೂ ಒಂದು ವಸ್ತುವಿನ ಮೂಲಕ ತಲುಪುವುದು ನಿಜಕ್ಕೂ ಕಷ್ಟ ಸಾಧ್ಯವಾದುದು. ಪರಿಕಲ್ಪನೆಗಳ ಮೂಲಕ, ಸಿದ್ಧಾಂತಗಳ ಮೂಲಕ, ವಿಚಾರಗಳ ಮೂಲಕ ತಲುಪವುದು ಆದೀತು. ಆದರೆ ಪ್ರೊ. ಜಾನ್‌ ಗುಡ್‌ಎನಫ್‌ ಲಿಥಿಯಂ ಬ್ಯಾಟರಿಯ ಮೂಲಕ ಅಕ್ಷರಶಃ ಭೂಮಿಯ ಮೇಲಿನ ಪ್ರತಿಯೊಬ್ಬರನ್ನೂ ತಲುಪಿದ್ದಾರೆ.

       ವೈಯಕ್ತಿಕವಾಗಿ ನನಗೆ ಜಾನ್‌ ಗುಡ್‌ಎನಫ್‌ ಅವರು ಪರಿಚಯವಾಗಿದ್ದು 2015ರಲ್ಲಿ ಬ್ಯಾಟರಿಗಳನ್ನು ಕುರಿತಂತೆ ಅನ್ವಯಿಕ ಸಂಶೋಧನೆಗಳ ಅಧ್ಯಯನದ ಓದಿನಲ್ಲಿ. ನಾನಾಗ ನೈನ್‌ ಸಿಗ್ಮಾ (NineSigma) ಎಂಬ ಇನ್ನೊವೇಶನ್‌ ಟೆಕ್ನಾಲಜೀಸ್‌ ಮ್ಯಾನೇಜ್‌ಮೆಂಟ್‌ ಕಂಪನಿ (IT service management company) ಯಲ್ಲಿ ಸಂಶೋಧಕನಾಗಿ ಕೆಲಸ ನಿರ್ವಹಿಸುತ್ತಿದ್ದೆ. ಅದೊಂದು ಅಂತರರಾಷ್ಟ್ರೀಯ ಆನ್‌ ಲೈನ್‌ ಕೆಲಸ (Online Work). Open Innovation Researcher ಆದ ನನಗೆ ಪ್ರತೀ ತಿಂಗಳಲ್ಲೂ ವಿಧ ವಿಧವಾದ ಅನ್ವೇಷಣೆಗಳ ಇತಿಹಾಸ ಮತ್ತು ಆನ್ವಯಿಕ ವಿಚಾರಗಳ ಓದು ಮತ್ತು ವರದಿಯ ಕೆಲಸ. ಹೀಗೆ ಬ್ಯಾಟರಿಗಳ ಕುರಿತ ಓದಿನಲ್ಲಿ ಅವುಗಳ ಆಳದ ವಿಚಾರಕ್ಕೆ ಹೊಕ್ಕಾಗ ಪರಿಚಯವಾದವರು ಜಾನ್‌ ಗುಡ್‌ಎನಫ್‌!

       ಅದೇನೋ ಆ ಕ್ಷಣದಲ್ಲೇ ಅವರ ಕುರಿತಂತೆ ಅತೀವ ಆಸಕ್ತಿಯಿಂದ ಅಂತರ್ಜಾಲವನ್ನು ಜಾಲಾಡಿ ವಾರಗಟ್ಟಲೇ ಹುಡುಕಾಡಿ ವಿಷಯಗಳ ಸಂಗ್ರಹಿಸಿದ್ದೆ. ಹಾಗೆ ಮಾಡಲು ಕಾರಣವಿತ್ತು. ಮೊದಲ ದಿನವೇ ತಿಳಿದದ್ದು ಅವರಾಗಲೇ 90 ವಸಂತಗಳ ದಾಟಿದವರು, ಇನ್ನೂ ಟೆಕ್ಸಾಸ್‌ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಯಲ್ಲಿ ತೊಡಗಿದ್ದಾರೆ ಎಂಬ ವಿಶೇಷವಾದ ಸಂಗತಿ! ಎಲ್ಲದಕ್ಕೂ ಹೆಚ್ಚಿನ ಕುತೂಹಲ ಹಾಗೂ ಅಚ್ಚರಿಯಾಗಿದ್ದು, ನನ್ನ ಲ್ಯಾಪ್‌ಟ್ಯಾಪಿನ ಬ್ಯಾಟರಿಯಲ್ಲೂ, ಮೊಬೈಲಿನ ಎನರ್ಜಿಯಲ್ಲೂ ಕಂಪ್ಯೂಟರಿನ ರ‍್ಯಾಂಡಮ್‌ ಆಕ್ಸಸ್‌ ಮೆಮೊರಿ (RAM)ನಲ್ಲೂ ಅವರ ಕೊಡುಗೆ ಇದ್ದದ್ದು! ತೊಂಭತ್ತು ದಾಟಿಯೂ ದಣಿಯದ ಉತ್ಸಾಹ! ಸಾಲದಕ್ಕೆ ಕಾರುಗಳ ಬ್ಯಾಟರಿಗೆಂದು ಇನ್ನೂ ಏನಾದರೂ ಮಾಡುವ ಅವರ ಸಂಶೋಧನಾ ಹುಡುಕಾಟ. ಹೀಗೆ ಇವೆಲ್ಲಾ ತಿಳಿಯುತ್ತಲೇ, ಅವರನ್ನು ಪ್ರಭಾವಿಸಿರುವ ಜೀವನವನ್ನು ತಿಳಿಯಲೆಂದು ಅವರ ವೈಯಕ್ತಿಕ ವಿಚಾರಗಳ ಅರಿಯುತ್ತಲೇ ದಂಗಾಗಿ ಹೋದೆ! (ಆಗ ಒಂದಷ್ಟು ಕಲೆ ಹಾಕಿ “ಕನ್ನಡ ಪ್ರಭ”ದಲ್ಲಿ ವಿಜ್ಞಾನ ಲೋಕದ ನನ್ನ ಕಾಲಂನಲ್ಲಿ ಲೇಖನ ಬರೆದು ಅವರನ್ನು ಮೊದಲ ಬಾರಿಗೆ ಪರಿಚಯಸಿದ್ದೆ).  

       ನಿಜ, ಅಷ್ಟೊಂದು ಉತ್ಸಾಹದ ಅಜ್ಜನಿಗೆ ಅಕ್ಷರಶಃ ತನ್ನವರೆಂದೂ ಯಾರೂ ಇಲ್ಲ. ಅವರ ಹೆಂಡತಿ ಐರೆನ್‌ ವೈಸ್‌ಮನ್‌ (Irene Wiseman) ಸಂಪೂರ್ಣ ಹಾಸಿಗೆ ಹಿಡಿದಿದ್ದರು. ಅವರಿಗೆ ಯಾವ ನೆನಪುಗಳೂ ಇರಲಿಲ್ಲ. (ಮುಂದೆ ಅವರು 2016ರಲ್ಲಿ ತೀರಿಕೊಂಡರು). ಸ್ವಂತ ಮಕ್ಕಳೂ ಇರಲಿಲ್ಲ. ಅಮೆರಿಕದ ಆಸ್ಟಿನ್‌ ನಲ್ಲಿರುವ ಟೆಕ್ಸಾಸ್‌ ವಿಶ್ವವಿದ್ಯಾಲಯದ ಮೆಕಾನಿಕಲ್‌ ಇಂಜನೀಯರಿಂಗ್‌ ಮತ್ತು ಇಲೆಕ್ಟ್ರಿಕಲ್‌ ಇಂಜನೀಯರಿಂಗ್‌ ವಿಭಾಗದಲ್ಲಿ ಪ್ರೊಫೆಸರ್‌ ಆಗಿದ್ದ ಅವರಿಗೆ ಜೀವನ ನಿರ್ವಹಣೆಗೆ ವಿಶ್ವವಿದ್ಯಾಲಯವೇ ಸಹಾಯಕರನ್ನು ನೀಡಿತ್ತು. 2019ರಲ್ಲಿ ಅವರಿಗೆ ರಸಾಯನ ವಿಜ್ಞಾನದಲ್ಲಿ ನೊಬೆಲ್‌ ಪ್ರಶಸ್ತಿ ಬಂದಾಗ ಅವರಿಗೆ 97 ದಾಟಿ 98ಕ್ಕೆ ಕಾಲಿಟ್ಟಿದ್ದರು. (ವಿವರಗಳಿಗೆ ಲಿಂಕ್‌   https://bit.ly/2IFjxDc  ನೋಡಿ) ಗಾಲಿ ಕುರ್ಚಿಯಲ್ಲಿ ಪ್ರಶಸ್ತಿ  ಸ್ವೀಕರಿಸಿದ ಗುಡ್‌ಎನಫ್‌ ಅತ್ಯಂತ ಹಿರಿಯ ನೊಬೆಲ್‌ ಪುರಸ್ಕೃತರಾಗಿ ಇನ್ನೂ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಆಗಿದ್ದರು.  ದಿನವೂ ಪ್ರಯೋಗಾಲಯಕ್ಕೆ ಭೇಟಿಯಿತ್ತು ಏನಾದರೊಂದು ಹೊಸತನ್ನು ಹುಡುಕುವ ಪ್ರಯತ್ನದಲ್ಲಿದ್ದರು.       

       ಇಂತಹವರೊಬ್ಬರನ್ನು ಹುಡುಕುತ್ತಾ ಅರಿಯುತ್ತಾ ನನ್ನ ವೈಯಕ್ತಿಕ ಉತ್ಸಾಹಕ್ಕೆ ಕಾರಣಗಳನ್ನು ಅರಿಸಿಕೊಳ್ಳುವ ಅವಕಾಶವನ್ನು ಬೆಳೆಸಿಕೊಳ್ಳಲು ಇವರನ್ನು ವೈಯಕ್ತಿಕವಾಗಿ ಮತ್ತಷ್ಟು ತಿಳಿಯಲು ಅಂತರ್ಜಾಲದ ಓದಿನಲ್ಲಿ ಸಿಕ್ಕದ್ದು ಕೇವಲ 90 ಪುಟಗಳ ಅವರ ಪುಟ್ಟ ಆತ್ಮ ಕಥೆ. ಆಧುನಿಕ ಜಗತ್ತಿನ ಬಹು ದೊಡ್ಡ ಬದಲಾವಣೆಗೆ ಕಾರಣವಾದ ಶಕ್ತಿಯ ಸಂಗ್ರಹ ಮತ್ತು ಅದಕ್ಕೊಂದು ಚಲನೆಯ ಸಾಧ್ಯತೆ ಹಾಗೂ ಹಗುರವಾಗಿಸುತ್ತಾ ಬೆಳೆಸಿದ್ದು. ಇವೆಲ್ಲವನ್ನೂ ಭೂಮಂಡಲವನ್ನೆಲ್ಲಾ ವ್ಯಾಪಿಸುವಷ್ಟು ಬೆಳೆಸಿದ ಅಜ್ಜ ತನ್ನ ಬಗೆಗೆ ಹೇಳಿಕೊಂಡದ್ದು ೮೦ಪುಟಗಳೇ! ಅದರೊಳಗೂ ಅಚ್ಚರಿಯಾಗುವ ಬೆಚ್ಚಿ ಬೀಳುವ ಸಂಗತಿಗಳು. ಪರಸ್ಪರ ಹೊಂದಾಣಿಕೆಯೇ ಇಲ್ಲದ ದಂಪತಿಗಳಿಗೆ ಬೇಡವಾದ ಮಗುವಾಗಿ ಹುಟ್ಟಿ, ತಾಯಿಯ ಸಂಬಂಧವಾದ ಕರುಳಬಳ್ಳಿಯಿಂದಲೇ ವಂಚಿತರಾದ ಬದುಕು. Witness to Grace 2008ರಲ್ಲಿ ಪ್ರಕಟವಾದ ಅವರ ಪುಟ್ಟ ಆತ್ಮಕಥೆ.  

ವಯಸ್ಸು 12 ತುಂಬಿದಾಗ ಸೇರಿದ ಬೋರ್ಡಿಂಗ್‌ ಶಾಲೆಯಲ್ಲಿಯೇ ಬಾಲ್ಯ ಕಳೆಯಿತು.ಮನೆಯೆಂದರೆ ಸ್ನೇಹಿತರಂತಾದ ಅಣ್ಣ-ತಮ್ಮಂದಿರು, ಅವರ ನಾಯಿ ಮತ್ತು ಮನೆಯ ಸೇವಕಿ ಮಾತ್ರ! ಅಮ್ಮನ ಕುರಿತು ಅವರ ಮಾತುಗಳಲ್ಲಿ ಹೇಳಿರುವಂತೆ “My mother’s milk proved poisoned and I was nourished with a formula by a nurse. My mother and I never bonded. ಬೋರ್ಡಿಂಗ್‌ ಶಾಲೆಯಲ್ಲಿದ್ದಾಗ ಅವರಮ್ಮ ಒಮ್ಮೆ ಮಾತ್ರವೇ ಪತ್ರ ಬರೆದಿದ್ದರಂತೆ! ಅಪ್ಪ 3-4 ತಿಂಗಳಿಗೆ ಆಗಾಗ್ಗೆ ಪತ್ರ ಬರೆಯುತ್ತಿದ್ದರು. ಅಪ್ಪ-ಅಮ್ಮನ ಪ್ರೀತಿಯಿಂದ ಸಂಪೂರ್ಣ ವಂಚಿತರಾಗಿದ್ದೂ ಅಲ್ಲದೆ ಅವರೊಬ್ಬ ಗುರುತಿಸಲಾಗದ ಡಿಸ್ಲೆಕ್ಸಿಯಾ ಹುಡುಗರಾಗಿದ್ದರು (ಡಿಸ್ಲೆಕ್ಸಿಯಾ ಒಂದು ಕಲಿಕೆಯ ಅಸ್ವಸ್ಥತೆಯಾಗಿದ್ದು, ಮಾತಿನ ಶಬ್ದಗಳನ್ನು ಗುರುತಿಸುವಲ್ಲಿ ಮತ್ತು ಅಕ್ಷರಗಳು ಮತ್ತು ಪದಗಳಿಗೆ ಅವು ಹೇಗೆ ಸಂಬಂಧಿಸಿವೆ ಎಂಬುದನ್ನು ಕಲಿಯುವಲ್ಲಿ ಸಮಸ್ಯೆಗಳಿಂದಾಗಿ ಓದುವಲ್ಲಿ ತೊಂದರೆಯನ್ನು ಒಳಗೊಂಡಿರುತ್ತದೆ). ಹಾಗಾಗಿ ಭಾಷೆ ಮತ್ತು ಚರಿತ್ರೆಯನ್ನು ಕಡೆಗಣಿಸಿ, ಗಣಿತದ ಹಿಂದೆ ಹೋದರು, ತಮ್ಮಷ್ಟಕ್ಕೇ ತಾವೇ ಒಳಿತಿನ ದಾರಿಯನ್ನು ಕಂಡುಕೊಂಡು ಬೆಳೆದರು. ಬೆಳೆಯುತ್ತಾ, ಜಗತ್ತನೇ ಬೆಳೆಸುವ ಬ್ಯಾಟರಿಯನ್ನೂ ಕಂಡುಹಿಡಿದು ನೊಬೆಲ್‌ ಪುರಸ್ಕಾರಕ್ಕೂ ಭಾಜನರಾದರು. ಇವೆಲ್ಲದರ ನಡುವೆಯೇ ತಮ್ಮನ್ನು ತಾವೇ ರೂಪಿಸಿಕೊಳ್ಳುತ್ತಾ ಜಗತ್ತಿನ ಇತಿಹಾಸವನ್ನೇ ಬದಲಿಸಿದ ಅವರು ಸ್ವಾಭಾವಿಕವಾಗಿ ಆಧ್ಯಾತ್ಮದ ಮೊರೆ ಹೊಕ್ಕರು. ಹಾಗೆಂದೇ ಅವರ ಆತ್ಮಕಥಾನಕವು A personal story of awakening to the beauty of holiness, the art of metaphor, the sacredness of dialogue, meaning in service to that which is eternal, and the reality of Evil, this book also chronicles a struggle to find a calling to a career in the science of the solid state, a career that brought together physics, chemistry and engineering. The author leaves to the reader the decision as to what was the result of chance and what was the leading of the Spirit of Love. ಎಂದೇ ಪರಿಚಯಗೊಂಡಿದೆ.

ಅವರ ಪ್ರಯೋಗಾಲಯದಲ್ಲಿ ಅವರು ಕುಳಿತುಕೊಳ್ಳುತ್ತಿದ್ದ ಕೋಣೆಯಲ್ಲಿ ಜೀಸಸ್‌ ಕ್ರಿಸ್ತನನ್ನು ಶಿಲುಬೆಗೆ ಏರಿಸುವ ಮೊದಲು ತನ್ನ ಶಿಷ್ಯರ ಜೊತೆ ನಡೆಸಿದ ಚಿತ್ರಣದ The Last Supper ಕಲಾಕೃತಿಯನ್ನು ತೂಗು ಹಾಕಿಕೊಂಡಿದ್ದರು. ದೈವಭಕ್ತರಾದ ಅವರು ತಮ್ಮ ಜೀವನಗಾಥೆಯನ್ನು ಪವಿತ್ರತೆಯ ಸೌಂದರ್ಯದ, ರೂಪಕದ ಕಲಾತ್ಮಕತೆಯ, ಮಾತಿನ ಪೂಜ್ಯತೆಯ, ನಿರಂತರವಾದ ಸೇವೆಯ ಅರ್ಥ ಹಾಗೂ ಕೆಡುಕಿನ ನೈಜತೆಯನ್ನೂ ಅರಿಯುವ ಅವಕಾಶವೆಂದೇ ಕರೆದಿದ್ದಾರೆ. ಚರ್ಚಿನ ಸಂಬಂಧ ಸಮುದಾಯದ ಸಂಬಂಧಗಳನ್ನು ಗಳಿಸಿಕೊಟ್ಟಿತೇ ವಿನಃ, ಪೂಜೆಯ ಆಚರಣೆಗಳ ಅರ್ಥವನ್ನು ತಿಳಿಸಲಿಲ್ಲ ಎಂದೂ ಹೇಳಿದ್ದಾರೆ.

       ಕಳೆದ ವರ್ಷ 2022 ರ ಜುಲೈನಲ್ಲಿ  ನೂರು ತುಂಬಿದಾಗ ಟೆಕ್ಸಾಸ್‌ ವಿಶ್ವವಿದ್ಯಾಲಯ ಅವರ ಶತಾಯುಷ್ಯದ ಸ್ಮರಣೆಗೆ ಸೆಮಿನಾರನ್ನು ಆಯೋಜಿಸಿತ್ತು. ಆಸಕ್ತರು ಅದರ ಪೂರ್ಣ ವಿಡಿಯೋವನ್ನು   https://www.youtube.com/watch?v=GRIcuAcKMy0   ಲಿಂಕ್‌ನಲ್ಲಿ ಗಮನಿಸಬಹುದಾಗಿದೆ. ಆಗಲೂ CPUS ಅವರ ಸಾಧನೆಯನ್ನು ಕನ್ನಡದ ಓದುಗರಿಗೆ ಪರಿಚಯಿಸಲು ತನ್ನ ವೆಬ್‌ ಪುಟದಲ್ಲಿ ಪ್ರಕಟಿಸಿದ ವಿಶೇಷ ಲೇಖನವನ್ನು https://bit.ly/3aYmjVv  ಲಿಂಕ್‌ ನಲ್ಲಿ ಓದಬಹುದು. ವಿಖ್ಯಾತ ರಸಾಯನ ವಿಜ್ಞಾನ ಪತ್ರಿಕೆ “ಮಾಲೆಕ್ಯೂಲ್ಸ್‌” ಜಾನ್‌ ಅವರ ಶತಮಾನೋತ್ಸವ ವರ್ಷಕ್ಕೆಂದು 2021ರಲ್ಲಿ ಒಂದು ವಿಶೇಷ ಸಂಚಿಕೆಯನ್ನು ರೂಪಿಸಿತ್ತು. ಸುಮಾರು 16 ಪ್ರಬಂಧಗಳಿರುವ 250 ಪುಟಗಳ ಸಂಚಿಕೆಯನ್ನು  ಆಸಕ್ತರು  https://www.mdpi.com/books/pdfdownload/book/5102 ಲಿಂಕ್‌ ಅಲ್ಲಿ ಪಡೆಯಬಹುದಾಗಿದೆ.

ಸದಾ ಹೊಸತೊಂದನ್ನು ಕೊಡುವ ಉತ್ಸಾಹದ ದಣಿವರಿಯದ ವಿಜ್ಞಾನದ ಅಜ್ಜನಿಗೆ ಹಲವಾರು ಗೌರವಗಳು ಸಂದಿವೆ. ಕಳೆದ 2009ರ ಎನ್ರಿಕೋ ಫರ್ಮಿ ಪರಸ್ಕಾರದ ಜತೆಗೆ 2013ರಲ್ಲಿ ಅಮೇರಿಕಾದ ರಾಷ್ಟ್ರೀಯ ವಿಜ್ಞಾನ ಪುರಸ್ಕಾರ ಲಭಿಸಿದೆ. 2019 ರಲ್ಲಿ ಕೋಪ್ಲೆ ಮೆಡಲ್‌ ಜೊತೆಗೆ ರಸಾಯನವಿಜ್ಞಾನದ ರಾಯಲ್ ಸೊಸೈಟಿಯು ಜಾನ್ ಗುಡ್ಎನಫ್ ಹೆಸರಲ್ಲಿ ರಸಾಯನವಿಜ್ಞಾನದ ಬಹುಮಾನವನ್ನು ಸ್ಥಾಪಿಸಿದೆ.

       ಅವರ ಬಹು ಮುಖ್ಯ ಕೊಡುಗೆ ಎಂದರೆ ಘನ ಸ್ಥಿತಿಯ ವಿಜ್ಞಾನ (Solid State Science). ಫ್ರಾನ್ಸ್‌  ದೇಶದ ಬೊರ್ಡೊ (Bordeaux) ನಗರದಲ್ಲಿ ಸೆಪ್ಟೆಂಬರ್‌, 1964ರಲ್ಲಿ ವಿಜ್ಞಾನಿಗಳ ಸಮಾವೇಶವೊಂದರಲ್ಲಿ ಮೊಟ್ಟ ಮೊದಲ ಬಾರಿಗೆ ಜಾನ್‌ ಅವರು ವೆನಡಿಯಮ್ ಆಕ್ಸೈಡ್ (VO2) ನಲ್ಲಿ ಲೋಹದಿಂದ ಅಲೋಹದ ಕಡೆಯ ಪರಿವರ್ತನೆ (Metal-to-nonmetal transition of Vanadium Oxide VO2) ಯ ಕುರಿತು ಪ್ರಸ್ತಾಪಿಸುತ್ತಾ ಮೊಟ್ಟ ಮೊದಲ ಬಾರಿಗೆ ಅಂತರ್‌ ಶಿಸ್ತೀಯ ಅಧ್ಯಯನಗಳ ಕಡೆಗೆ ವಿಜ್ಞಾನಿಗಳ ಗಮನ ಸೆಳೆದಿದ್ದರು. ಹಾಗೆಂದೇ ಭೌತವಿಜ್ಞಾನ, ರಸಾಯನ ವಿಜ್ಞಾನ ಮತ್ತು ಇಂಜನೀಯರಿಂಗ್‌ ವಿಜ್ಞಾನಗಳನ್ನು ಒಂದಾಗಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು.

       ಸಹಜವಾದ ಮಾತಿನಲ್ಲಿ ಪ್ರಸ್ತಾಪಿಸುವ Good Enough ಪದಗಳ ಜೊತೆ ನೆನಪಾಗುವುದೇ, ಎಷ್ಟು ಮಾಡಿದರೂ ನೂರು ತುಂಬಿದರೂ It wasn’t enough for GOODENOUGH ಎಂಬುದರ ಜೊತೆಗಿನ ವಿಜ್ಞಾನ ಈ ಅಜ್ಜ. ಕಳೆದ ಹೆಚ್ಚೂ ಕಡಿಮೆ ಆರೆಂಟು ವರ್ಷಗಳಲ್ಲಿ ಈ ಮಾತಿನ ಜೊತೆಗೆ ಸಾವಿರಾರು ವಿಜ್ಞಾನದ ವಿದ್ಯಾರ್ಥಿಗಳಿಗೆ ಈ ಅಜ್ಜನ ಕುರಿತು ಹೇಳಿ ಆನಂದಿಸಿದ್ದೇನೆ. ಆದರೀಗ ಎರಡು ದಿನಗಳು ಅವರಿಲ್ಲದ ಮೌನವನ್ನು ಒಬ್ಬನೇ ದುಃಖದಲ್ಲಿ ಅನುಭವಿಸಿದ್ದೇನೆ. ಅವರನ್ನು ಕಂಡಿಲ್ಲ, ಮಾತಾಡಿಲ್ಲ, 90ದಾಟಿದ ಅವರಿಗೆ ಒಂದು ಇ-ಮೇಲ್‌ ಬರೆದು ತೊಂದರೆಕೊಡದಿರಲೆಂದು ಅಂದುಕೊಂಡ ಕೊರಗು ಶಾಶ್ವತವಾಗಿ ನನ್ನೊಳಗೇ ಉಳಿದುಕೊಂಡಿದೆ. ಅವರ ಏರು ದನಿಯ ನಗು ಇಂಜನೀಯರಿಂಗ್‌ ವಿಭಾಗದಲ್ಲಿ ಅವರಿದ್ದರೆ ಕೇಳುತ್ತಿತ್ತಂತೆ. ಅಲ್ಲಿಯೂ ಇನ್ನು ಅವರ ನಗುವಿರದ ಮೌನ.

       ಕಡೆಗೆ ಆರಂಭದ ಅವರ ಮಾತುಗಳನ್ನೇ ಪುನರುಚ್ಚರಿಸಿ ಅಂತಹಾ ಮಹಾತ್ಮನೊಬ್ಬ ವಿಜ್ಞಾನದಲ್ಲಿ ಎಲ್ಲರನ್ನೂ ತಲುಪುವ ಸಾಧ್ಯತೆಯನ್ನು ಅನುಭವಕ್ಕೂ ಕೊಟ್ಟ ನೆಮ್ಮದಿಯಲ್ಲಿ ಮುಗಿಸುತ್ತೇನೆ.

“ಯುವಕರ  ಆಸೆಯು ಸಾಮಾನ್ಯವಾಗಿ ಪ್ರಸಿದ್ಧಿ ಪಡೆಯುವುದು ಅಥವಾ ಗ್ಲಾಮರಸ್‌ ಆಗಿರುವುದು ಅಥವಾ ಶಕ್ತಿಶಾಲಿಯಾಗಬೇಕೆಂದೇ ಇರುತ್ತದೆ. ಹಾಗಂತ ಎಲ್ಲರೂ ಸ್ವಲ್ಪ ಸಮಯಕ್ಕಾದರೂ ಸಹಾ “ಪರ್ವತದ ರಾಜ” ಆಗಲು ಸಾಧ್ಯವಿಲ್ಲ ಎಂಬುದನ್ನು ನಾನು ಅರಿತುಕೊಂಡೆ. ಆದ್ದರಿಂದ, ರಾಜನಾದರೇನು., ಜೀವನಕ್ಕೆ ಏನು ಅರ್ಥವಿದೆ? ಜೀವನದ ನಿಜವಾದ ಅರ್ಥವು ಯಾವುದೋ ಕೋಟೆಯ ರಾಜನಾಗುವುದಲ್ಲ, ಬದಲಾಗಿ ನಾವು ಸಲ್ಲಿಸುವ ಸೇವೆಯ ಮಹತ್ವ ಮತ್ತು ಶಾಶ್ವತತೆಯಲ್ಲಿದೆ ಎಂದು ನಾನು ತಿಳಿಯಲು ಪ್ರಾರಂಭಿಸಿದೆ”. – ಪ್ರೊ. ಜಾನ್‌ ಗುಡ್‌ಎನಫ್‌

ಅದೆಷ್ಟು ಸತ್ಯವಾದ ಸದಾ ಅನುರಣಿಸುವ ಮಾತುಗಳು

ಅವರ ಆತ್ಮಕ್ಕೆ ಶಾಂತಿ ಸಿಗಲಿ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್‌

Leave a Reply