You are currently viewing ಬೀಜಗಟ್ಟದೆಯೂ ಬದುಕುಳಿದಿರುವ ಬೆಳ್ಳುಳ್ಳಿ

ಬೀಜಗಟ್ಟದೆಯೂ ಬದುಕುಳಿದಿರುವ ಬೆಳ್ಳುಳ್ಳಿ

ಬೆಳ್ಳುಳ್ಳಿಯ ವಿಚಾರಗಳು ಮಾತಿಗೆ ಬಂದಾಗ, ಒಂದೋ ಅದರ ವಾಸನೆಯ ಕುರಿತು ಅಥವಾ ಅದನ್ನು ತಿನ್ನದೇ ಇರುವ ಬಗೆಗೆ ಪ್ರಮುಖವಾಗಿರುವುದಂತೂ ಸತ್ಯ. ಈರುಳ್ಳಿಯ ಸಂಬಂಧಿಯೂ ಆದ ಬೆಳ್ಳುಳ್ಳಿ, ಬಣ್ಣದಿಂದ ಮಾತ್ರ ಅಪ್ಪಟ ಬಿಳಿ. ಅದಕ್ಕೇ ಬಿಳಿಯದಾದ ಉಳ್ಳಿ ಬೆಳ್ಳುಳ್ಳಿಯಾಗಿದೆ. ಹೆಚ್ಚು ನೀರಿರುವ ಉಳ್ಳಿ ನೀರುಳ್ಳಿಯಾಗಿದೆ. ಇವೆರಡೂ ಒಂದೇ ಸಂಕುಲದ ಸದಸ್ಯರು, ತಿನ್ನುವ ವಿಚಾರದಲ್ಲಿ ಈರುಳ್ಳಿಗೆ ಸ್ವಲ್ಪ ಬೆಂಬಲವು ಸಿಕ್ಕಿದ್ದರೂ, ಬೆಳ್ಳುಳ್ಳಿ ಮಾತ್ರ ತಟ್ಟೆಯಲ್ಲಿ ಶೂದ್ರ! ಇದು ವಾಸನೆಯಿಂದ ಮಾತ್ರವೇ ಅನ್ನಿಸಿದರೂ ಅದರ ಹಿಂದಿರುವ ಜಟಾಪಟಿಗಳು ನೂರೆಂಟು. ಅವುಗಳೆಲ್ಲವಕ್ಕೂ ಶೈವ-ವೈದಿಕಗಳ ಪರಾಪರಗಳ ಪರಾಕುಗಳು ಸೇರಿವೆಯೇ ಹೊರತು ವೈಜ್ಞಾನಿಕವಾಗಿ ಸತ್ಯವಾದ  ತತ್ವಗಳಾವುವೂ ದನಿಯಾಗಿಲ್ಲ. ತಿನ್ನುವವರು ಮತ್ತು ತಿನ್ನದಿರುವವರಿಬ್ಬರೂ ಇತರೇ ಸಂಗತಿಗಳಿಗಿಂತಲೂ ಇದೆಲ್ಲಾ ಏಕೆ? ಹೇಗೆ? -ಎಂಬುದರಲ್ಲಿ ಹೆಚ್ಚು ಜಿಜ್ಞಾಸುಗಳಾಗಿರುವುದರಿಂದ ಸೂಕ್ಷ್ಮವಾಗಿ ವಾಗ್ವಾದಗಳನ್ನೂ, ವಾಸ್ತವಗಳನ್ನೂ ಬೆರಸಿದ ವಿಚಾರಗಳಿಂದಲೇ ಆರಂಭಿಸುತ್ತೇನೆ. ಮುಂದುವರೆದಂತೆ ಉಳಿದ ಸಂಗತಿಗಳಿಂದ ತಮ್ಮ ತಮ್ಮ ಇಚ್ಛಾನುಸಾರವಾದ ನಿಮ್ಮ ತೀರ್ಮಾನಗಳನ್ನು ಇಡೀ ಪ್ರಬಂಧದ ಉದ್ದಕ್ಕೂ  ಚರ್ಚಿಸುವ ವಿಚಾರಗಳಿಂದ ಬಲಪಡಿಸಿಕೊಳ್ಳಬಹುದು ಅಥವಾ ಬದಲಿಸಿಕೊಳ್ಳಬಹುದು!

          ಅತ್ಯಂತ ಪ್ರಮುಖವಾದ ಸಂಗತಿಯೆಂದರೆ ಬೆಳ್ಳುಳ್ಳಿಯು ಬೀಜವನ್ನೇ ಉತ್ಪಾದಿಸುವುದಿಲ್ಲ. ಕೃಷಿಗೆ ಒಳಗಾಗಿರುವ ಬೆಳ್ಳುಳ್ಳಿಯು ನಪುಂಸಕವಾದ ಗಿಡ. ಹೂವು ಬಿಡುವ ಹಂತದಲ್ಲೇ ಅದರ ಎಲ್ಲಾ ಶಕ್ತಿಯು ಅಲೈಂಗಿಕವಾದ ದೇಹದ ಭಾಗಗಳಿಗೆ ಹಂಚಿಹೋಗಿ ಹೂವು ಪಕ್ವವಾಗದೆ ಫಲವಂತಿಕೆಯನ್ನು ಪಡೆಯುವುದೇ ಇಲ್ಲ. ಹೀಗೆ ಬೀಜಗಳೇ ಹುಟ್ಟದ ಸಸ್ಯವೊಂದು ಅಗಾಧ ವಿವಿಧತೆಯನ್ನು ಹೊಂದುವುದು ಸೈದ್ಧಾಂತಿಕವಾಗಿ ಆಗದ ಮಾತು. ಆದರೆ ಬೆಳ್ಳುಳ್ಳಿಯಲ್ಲಿ ಹಾಗಾಗಿಲ್ಲ. ಸಿದ್ಧಾಂತಕ್ಕೆ ವಿರೋಧವಾಗಿ ಅಪಾರ ವಿವಿಧತೆಯನ್ನೂ ಸಾಧಿಸಿದೆ. ಇದೊಂದು ನಿಸರ್ಗದ ವಿಚಿತ್ರವೇ ಸರಿ. ಹಾಗಾಗಲು ಇರುವ ಅಥವಾ ಇರಬಹುದಾದ ಮಾರ್ಗವೆಂದರೆ ಅದನ್ನು ಉದ್ದೇಶಪೂರ್ವಕವಾಗಿ ಸಾಕಿ-ಬೆಳೆಸುವ ಹಿತದಿಂದ ಮಾತ್ರ! ಹಾಗಿದ್ದಲ್ಲಿ ಅದು ಬೇಕು ಎನ್ನುವ ಮಾನವ ಹಿತವು ಅದನ್ನು ಸಾಕಿ, ಜಗತ್ತಿನಾದ್ಯಂತ ಪಸರಿಸಿದ್ದರಿಂದ ಇಂದು ಸಾವಿರಾರು ಬಗೆಯ ಬೆಳ್ಳುಳ್ಳಿಯ ತಳಿಗಳಿವೆ. ಅವೆಲ್ಲವೂ ಕೃಷಿಗೆ ಒಳಗಾಗಿ ಬೆಳೆಯುವ ಮೂಲಕ ತಮ್ಮೊಳಗೇ ಮ್ಯುಟೇಶನ್‌ (ದಿಢೀರ್‌ ಆನುವಂಶಿಕ ಬದಲಾವಣೆ) ಮೂಲಕ ಬಗೆ ಬಗೆಯಾಗಿ ವಿಕಾಸಗೊಳ್ಳುತ್ತಾ ಬಂದಿವೆ. ಇದಕ್ಕೆಲ್ಲಾ ೬೦೦೦ ವರ್ಷಗಳ ಸುಧೀರ್ಘ ಕೃಷಿ ಮಾಡಿ ಬೆಳೆಸಿದ ಇತಿಹಾಸವಿದೆ. ಆದಿಯಿಂದ ನಿನ್ನೆ ಮೊನ್ನೆಯವರೆಗೂ ಬೀಜಗಟ್ಟದೇ ಬಗೆ ಬಗೆಯಾಗಿ ವಿಕಾಸಗೊಂಡಿರುವ ಬೆಳ್ಳುಳ್ಳಿ ಮಾನವ ಹಿತವನ್ನು ಬೆಳೆಸುತ್ತಲೇ ಬಂದುದರ ಫಲ. ಅದೇನೋ ಸರಿ ಆದರೆ ಅದ್ಯಾಕೆ, “ಇಲ್ಲಿ ಬೆಳ್ಳುಳ್ಳಿಯನ್ನು ಬಳಸುವುದಿಲ್ಲ” ಎಂದು ಬೋರ್ಡು ಹಾಕಿರುವ ಹೋಟೆಲುಗಳೂ ಇವೆಯಲ್ಲ ಅನ್ನಿಸುವುದು ತಾನೇ?

          ಈ ಉಳ್ಳಿಗಳ ವಿಚಾರದಲ್ಲಿ ಕನ್ನಡದ ಓದುಗರಿಗೆ ಹಿತವಾಗಬಲ್ಲ ವಾಗ್ವಾದ ಎಂದರೆ ಡಾ.ಚಿದಾನಂದ ಮೂರ್ತಿಯವರು ಮತ್ತು ಡಾ. ಬಿ.ಜಿ.ಎಲ್‌ ಸ್ವಾಮಿಯವರ ನಡುವಿನ ಚರ್ಚೆ. ಬಿ.ಜಿ.ಎಲ್‌ ಅವರ ಅಭಿನಂದನಾ ಗ್ರಂಥವಾದ ಸ್ವಾಮಿಯಾನದಲ್ಲಿ ಚಿಮೂ ಪ್ರೀತಿಯಿಂದಲೇ ತಮ್ಮ ಕೋಪವನ್ನು ತೋಡಿಕೊಂಡಿದ್ದಾರೆ. ಹರಿಹರನ ರಗಳೆಗಳಲ್ಲಿ ಬರುವ ಉಳ್ಳಿಯು ನೀರುಳ್ಳಿಯೋ-ಬೆಳ್ಳುಳ್ಳಿಯೋ ಎಂಬ ಉಪಶೀರ್ಷಿಕೆಯಲ್ಲಿ ಸ್ವಾಮಿಯವರ ತೀರ್ಮಾನಗಳನ್ನು  ಪ್ರಸ್ತಾಪಿಸಿದ್ದಾರೆ. ಚಿಮೂ ಅದನ್ನು ಸ್ವಾಮಿಯವರು ತೀರಿಕೊಂಡಮೇಲೆ ಬರೆದದ್ದಾದರಿಂದ, ಅವರ ಸ್ವಭಾವವನ್ನು ಹಾಗೂ ಸ್ವಾಮಿಯವರ ಹಠವನ್ನೂ(ಚಿಮೂ ಕೂಡ ಪ್ರಸ್ತಾಪಿಸಿದಂತೆಯೇ) ಬಲ್ಲ ಕನ್ನಡದ ಓದುಗರೂ ನೈಜ ಚರ್ಚೆಯಲ್ಲಿನ ತಾರಕವನ್ನು ಊಹಿಸಿಕೊಳ್ಳಬೇಕಾಗುತ್ತದೆ.  ಇದರ ಜೊತೆಗೆ ವೈಯಕ್ತಿಕವಾಗಿ ನನಗೂ ಹಲವಾರು ಬೆಳ್ಳುಳ್ಳಿಯ ವಿರೋಧಿಗಳ ಸಹವಾಸ ಹೆಚ್ಚೇ ಇದೆ. ನನ್ನ ಮನೆಯಿಂದ ಬಂದದ್ದೆಲ್ಲವೂ ಬೆಳ್ಳುಳ್ಳಿಯನ್ನು ಒಳಗೊಂಡೇ ಇದ್ದೀತು ಎಂಬ ಗುಮಾನಿಯು ಅವರನ್ನು ಕಾಡುವ ಅವರ ನೂರಾರು ಪ್ರತಿಕ್ರಿಯೆಗಳನ್ನು ನೋಡಿದ್ದೇನೆ. ಹೀಗಾದಾಗ ಅವರೇನು ಮಾಸ್‌ ಸ್ಪೆಕ್ಟ್ರೋಮೀಟರ್‌ (Mass Spectrometer) ಇನ್ಸ್‌ಟ್ರುಮೆಂಟಾ ಎಂದು ಪ್ರತಿಬಾರಿಯೂ ಅನ್ನಿಸಿದೆ. ಅದನ್ನೆಲ್ಲಾ ಬೌದ್ಧಿಕ ಚರ್ಚೆಗಳಲ್ಲಿ ಕಟ್ಟಿಕೊಡಲು ಖಂಡಿತಾ ಸಾಧ್ಯವಾಗದ ಸಂಗತಿ. 

          ವಾಸ್ತವವೇನೆಂದರೆ ಬೆಳ್ಳುಳ್ಳಿಯು ಶ್ರಮಸಂಸ್ಕೃತಿಯ ಪ್ರತೀಕ. ಕಂಚಿನಯುಗವೆಂದು ಕರೆಯಲಾಗುವ ಇತಿಹಾಸ ಕಾಲದಲ್ಲಿ  ಕೆಲವೊಂದು ಕಾರ್ಮಿಕ ಸಮುದಾಯಗಳು ಅಥವಾ ಸಾಮಾಜಿಕವಾಗಿ ಹಿಂದುಳಿದ ವರ್ಗಗಳು ಮಾತ್ರವೇ ತೀರಾ ವಾಸನೆಯುಳ್ಳ ಬೆಳ್ಳುಳ್ಳಿಯನ್ನು ಬಳಸುತ್ತಿದ್ದರು. ಅವರಿಂದ ಬೇರೆಯದಾಗಿ ಉನ್ನತಸ್ಥಾನದಲ್ಲಿ ಗುರುತಿಸಿಕೊಳ್ಳಲು ಮೇಲುವರ್ಗವು ವಾಸನೆಯನ್ನೇ ದೊಡ್ಡದು ಮಾಡಿದ್ದಿರಬಹುದು. ಅದನ್ನು ಸಾಕ್ಷೀಕರಿಸುವ ಐತಿಹಾಸಿಕ ವಿವರಗಳು ಈಜಿಪ್ಟರಲ್ಲಿ ಸಿಕ್ಕಿವೆ. ಈಜಿಪ್ಟಿನ ಪಿರಮಿಡ್ಡುಗಳ ನಿರ್ಮಿಸುವಾಗ ಕಾರ್ಮಿಕರಿಗೆ ಕಷ್ಟ ಪಟ್ಟಾದರೂ ಬೆಳ್ಳುಳ್ಳಿ-ಈರುಳ್ಳಿಯನ್ನು ಒದಗಿಸುತ್ತಿದ್ದ ಪುರಾವೆಗಳು ಸಿಕ್ಕಿವೆ. ಜೊತೆಗೆ ಆ ಕಾಲದಲ್ಲಿ ಈ ಉಳ್ಳಿಗಳ ಕೊರತೆಯಾದರೆ ನಿರ್ಮಾಣವು ಕುಂಠಿತವಾಗುವುದರ ಭಯಗಳೂ ಇದ್ದವಂತೆ. ಮೇಲುವರ್ಗದವರು ಬಳಸದ ಕಾರಣವು ಕೇವಲ ವಾಸನೆ ಮಾತ್ರವೇ ಆಗಿದ್ದುದು ಮಾತ್ರ ನಿಜ. ಆದರೆ ಪಿರಮಿಡ್ಡುಗಳಲ್ಲಿ ಸಂರಕ್ಷಿಸಿಟ್ಟ “ಮಮ್ಮಿ”ಗಳ ಜೊತೆಗೆ ಈ ಉಳ್ಳಿಗಳನ್ನು ಇಡುತ್ತಿದ್ದ ವಿಚಾರ ಮಾತ್ರ ವಿಶೇಷವಾದುದು. ಈ ವಾಸನೆಯಿಂದ ಮರುಜೀವ ಬರಬಹುದೆಂಬ ನಂಬಿಕೆಯು ಉನ್ನತಸ್ಥರದವರಲ್ಲಿ ಇದ್ದುದು ಸ್ಪಷ್ಟ. ಬದುಕಿದ್ದಾಗ ತಿನ್ನದೆ, ಸತ್ತವರಿಗೆ ಮರುಜೀವಕೊಡುವ ನಂಬಿಕೆಯಿರಿಸಿಕೊಂಡ ಸಮುದಾಯದ ತಿಳಿವಳಿಕೆ ಮಾತ್ರ ವಿಚಿತ್ರ ದ್ವಂಧ್ವವೇ ಸರಿ. ಈ ಕುರಿತು ಕೆಲವು ಇತಿಹಾಸಕಾರರು ಭಿನ್ನವಾದ ಅಭಿಪ್ರಾಯಗಳನ್ನೂ ವ್ಯಕ್ತಪಡಿಸಿದ್ದಾರೆ.  ಕಾರ್ಮಿಕರಿಗೆ ಶಕ್ತಿಯು ಒದಗಿ ಅವರು ಧೀರ್ಘಕಾಲ ಬಾಳಲಿ ಎಂಬ ಆಶಯವೂ ಆಳುವವರಿಗೆ ಇತ್ತು ಎಂಬುದೇ ಆ ಅಭಿಪ್ರಾಯ. ಹಾಗಾಗಿ ಬಹುಪಾಲು ಈಜಿಪ್ಟರಿಗೆ ಬೆಳ್ಳುಳ್ಳಿಯು ಧೀರ್ಘಕಾಲದ ಬದುಕನ್ನು ಕೊಡುವುದೆಂಬ ನಂಬಿಕೆಯಂತೂ ಇತ್ತು. ಅದರಿಂದಾಗಿಯೇ ಗೋರಿಗಳಿರುವ ಸ್ಥಳಗಳಲ್ಲಿ ಬೆಳ್ಳುಳ್ಳಿಯನ್ನೂ ಮತ್ತು ಅದರ ಚಿತ್ರಗಳನ್ನು ಕಾಣಬಹುದಾಗಿದೆ.

          ಆದರೆ ನಮ್ಮ ಸಂಸ್ಕೃತಿಯಲ್ಲಿ ಅದಕ್ಕೆ ಪರ್ಯಾಯದ ಬಳಕೆಯಾಗಿರುವ “ಇಂಗು” ಸಹಾ ವಾಸನೆಯನ್ನೇ ಕೊಡುತ್ತದೆ. ವಿಚಿತ್ರವೆಂದರೆ ಇಂಗೂ ಸಹಾ ಈರುಳ್ಳಿ-ಬೆಳ್ಳುಳ್ಳಿಗಳು ವಿಕಾಸಗೊಂಡಿರುವ ಮಧ್ಯ ಏಶಿಯಾದ ಆಸುಪಾಸಿನ ಜಾಗದಲ್ಲೇ ವಿಕಾಸವಾಗಿರುವ ಸಸ್ಯದ “ರಾಳ”ದಿಂದ ತಯಾರಿಸಲಾಗುತ್ತದೆ. ಇಂಗನ್ನು ಅಸಿಫೋಟಿಡಾ -Asafoetida- ಅಂದರೆ Smelling, Fetid -ಕೆಟ್ಟವಾಸನೆಯ ಎಂಬ ಅರ್ಥದಿಂದಲೇ ಕರೆಯಲಾಗುತ್ತದೆ.. ಈ ಪದವನ್ನು ಕೆಲವೊಂದು ಸಂಸ್ಕೃತಿಗಳು “ದೇವರ ಆಹಾರ-Food of God” ಎಂದು ಕರೆದಿದ್ದರೆ, ಕೆಲವೊಂದು “ದೆವ್ವದ ಮಲ-Devil’s Dung” ಎಂದೂ ಕರೆದಿದ್ದಾರೆ. ಇಂಗು ಅಥವಾ ಹಿಂಗು ಸಹಾ ಫೆರುಲಾ ಅಸಿಫೋಟಿಡಾ (Ferula asafoetida)  ಎಂಬ ವೈಜ್ಞಾನಿಕ ಹೆಸರಿನ ಒಂದು ಸಸ್ಯದ ಉತ್ಪನ್ನವಾದ ರಾಳವಾದ್ದರಿಂದ ಇದೇ ಸಸ್ಯಯಾನದಲ್ಲಿ ಮುಂದೆ ಎಂದಾದರೂ ಅದರ ವಿವರಗಳನ್ನೂ ನೋಡೋಣ.  ನಾವು ತಿನ್ನುವ ಇಂಗೂ ಸಹಾ ಅಪಟ್ಟವಾದ ರಾಳವಲ್ಲ. ಪ್ಯೂರ್‌ ರಾಳ ವಿಪರೀತ ಕೆಟ್ಟ ವಾಸನೆಯಿರುತ್ತದೆ. ನಮ್ಮ ಬಳಕೆಯ ಇಂಗಿನಲ್ಲಿ ಪ್ರತಿಶತ ೩೦ರಷ್ಟು ಮಾತ್ರ ಅಪ್ಪಟ-ರಾಳವಿದ್ದು ಉಳಿದ ೭೦ ಭಾಗವನ್ನು ಅಕ್ಕಿ ಅಥವಾ ಗೋಧಿಹಿಟ್ಟನ್ನು ಬಳಸಿ ಮಾಡಲಾಗಿರುತ್ತದೆ. ಅಪ್ಪಟ ಇಂಗಿನ ವಾಸನೆಯನ್ನು ಸಹಿಸುವುದು ಕಷ್ಟ!

          ಅಮರಿಲಿಡೇಸಿಯೆ (Amaryllidaceae) ಎಂಬ ಕುಟುಂಬದ ಸಸ್ಯವಾದ ಬೆಳ್ಳುಳ್ಳಿಯನ್ನು ಸಸ್ಯ ವರ್ಗೀಕರಣ ಮತ್ತು ಹೆಸರುಗಳ ಸೂಚಿಸಿದ ವಿಜ್ಞಾನಿ ಕಾರ್ಲ್ ಲಿನೆಯಾಸ್‌ ಆಲಿಯಮ್‌ ಸಾಟೈವಮ್‌ (Allium sativum ) ಎಂದೇ ಕರೆದಿದ್ದಾರೆ. ಆದರೆ ಈಗ ನಮ್ಮೊಡನಿರುವ ಬೆಳ್ಳುಳ್ಳಿಯು ವನ್ಯ ಮೂಲವಾದ  ಆಲಿಯಮ್‌ ಲಾಂಗಿಕ್ಯುಸ್ಪಿಸ್‌ (Allium longicuspis) ನಿಂದ ವಿಕಾಸಗೊಂಡಿರುವ ಬಗೆಗೆ ನಂಬಲಾಗಿದೆ. ಅದರ ಜೊತೆಗೆ ಇನ್ನೂ ಕೆಲವು ಮೂಲಗಳ ಪ್ರಕಾರ ಈಗಿರುವ ಬೆಳ್ಳುಳ್ಳಿಯು ಎರಡು ಫಲಭರಿತವಾದ ಪ್ರಭೇದಗಳಿಂದ ಸಂಕರಗೊಂಡು ವಿಕಾಸವಾದ ನಪುಂಸಕ ಹೈಬ್ರಿಡ್‌ (ಸಂಕರ-ತಳಿ) ಎಂಬ ವಾದಗಳೂ ಇವೆ.  ಆದ್ದರಿಂದಲೇ ಕ್ರಮೇಣ ಬೀಜಗಳನ್ನು ಉತ್ಪಾದಿಸುವುದನ್ನು ಅದು ಮರೆತೇ ಬಿಟ್ಟಿದೆ ಎನ್ನಲಾಗುತ್ತದೆ. ಆದರೂ ಬದುಕಿ ಉಳಿಯಲು ಲೈಂಗಿಕವಾಗಿದ್ದ ಸಸ್ಯವು ಲೈಂಗಿಕವಲ್ಲದ ವಂಶಾಭಿವೃದ್ಧಿಗೆ ಬದಲಾಯಿಸಿಕೊಳ್ಳುವ ಕ್ರಿಯೆಯನ್ನು (ಅಪೋಮಿಕ್ಸಿಸ್‌- Apomixis) ವಿಕಾಸಗೊಳಿಸಿಕೊಂಡಿದೆ ಎಂಬ ತೀರ್ಮಾನಕ್ಕೆ ಬರಲಾಗಿದೆ. ಹಾಗಾಗಿ ಬೆಳ್ಳುಳ್ಳಿಯನ್ನು ಬೆಳೆಯಲು ಇಡೀ ಬೆಳ್ಳುಳ್ಳಿಯನ್ನು ಒಡೆದಾಗ ದೊರಕುವ ಸಣ್ಣ ಸಣ್ಣ ಇಲುಕು(ಬೇಳೆ ಎಂದೂ ಕರೆಯುವ)ಗಳನ್ನು ಬಳಸಲಾಗುತ್ತದೆ. ಇತ್ತೀಚೆಗಿನ ದಶಕಗಳಲ್ಲಿ ಹೂಗೊಂಚಲನ್ನು ಆರಂಭದಲ್ಲೇ ಫಲವಂತವನ್ನಾಗಿ ಮಾಡಿ ಬೀಜಗಳನ್ನು ಪಡೆಯುವ ಪ್ರಯತ್ನಗಳು ಯಶಸ್ವಿಯೂ ಆಗಿವೆ. ಆದರೂ ಇಲುಕುಗಳ ಕೃಷಿಯೇ ಹೆಚ್ಚು ಪ್ರಚಲಿತ ಮತ್ತು ಸಹಜವಾದುದು. ಹೂಗೊಂಚಲ ಜೊತೆಗೆ ಬೆಳೆಯುವ ಇತರೇ ಸಸ್ಯಭಾಗವನ್ನು ಕತ್ತರಿಸಿ ಹೂಗೊಂಚಲಿಗೆ ಪ್ರಾಶಸ್ತ್ಯ ನೀಡುವ ಮೂಲಕ ಬೀಜಗಳ ಉತ್ಪಾದನೆಯನ್ನು ಪ್ರಚೋದಿಸಬಹುದಾಗಿದೆ.

          ಬೆಳ್ಳುಳ್ಳಿಯ ವಿಕಾಸದ ಮೂಲ ವನ್ಯ ತಳಿಯಾದ ಆಲಿಯಮ್‌ ಲಾಂಗಿಕ್ಯುಸ್ಪಿಸ್‌ (Allium longicuspis) ಸಸ್ಯವು ಮಧ್ಯ ಏಷಿಯಾದ ಅದರಲ್ಲೂ ಚೀನಾ ಮತ್ತು ಕಜೆಕಿಸ್ತಾನ್‌ ಮಧ್ಯದ ಗಡಿಭಾಗದ ಪರ್ವತ ಪ್ರದೇಶಗಳಲ್ಲಿ ಹೇರಳವಾಗಿ ಕಂಡು ಬರುತ್ತದೆ. ಆ ಪರ್ವತವನ್ನು ಅಲ್ಲಿನ ದೇಸಿ ಸಮುದಾಯದ ಭಾಷೆಯಲ್ಲಿ “ಸ್ವರ್ಗದ ಪರ್ವತ” ಎಂದೇ ಕರೆಯಲಾಗುತ್ತದೆ. ಅಲ್ಲಿಂದ ಸುತ್ತ ಮುತ್ತಲಲ್ಲಿ  ಬೆಳ್ಳುಳ್ಳಿಯು ಹಬ್ಬಿದೆ. ಅದರ ಆಸುಪಾಸಿನ ಸ್ಥಳವು ನಾಗರಿಕ ಜೀವನವು ಆರಂಭವಾದಾಗಿನಿಂದಲೂ ಏಷಿಯಾ, ಯೂರೋಪು ಹಾಗೂ ಆಫ್ರಿಕಾ ಖಂಡಗಳನ್ನು ಬೆಸೆದಿದ್ದ ಮಾನವ ವ್ಯವಹಾರಗಳ ಲಿಂಕ್‌-ರೋಡ್‌ ಆಗಿತ್ತು. ಆದ್ದರಿಂದ ವ್ಯಾಪಾರಿಗಳು ಅಲೆದಾಡುತ್ತಾ ಈರುಳ್ಳಿ-ಬೆಳ್ಳುಳ್ಳಿಗಳನ್ನು ತೆಗೆದುಕೊಂಡು ಜಗತ್ತಿನ ಹಲವೆಡೆ ಪಸರಿಸಿದ್ದಾರೆ. ಬೆಳ್ಳುಳ್ಳಿಯನ್ನು ಅತಿ ಹೆಚ್ಚಾಗಿ ಆದಿಯಿಂದಲೇ ಬೆಳೆಯುವ ರಾಷ್ಟ್ರಗಳಲ್ಲಿ ಭಾರತವು ಪ್ರಮುಖವಾದುದು. ಹಾಗಾಗಿ ಬೆಳ್ಳುಳ್ಳಿಯು ಇಲ್ಲಿಂದಲೇ ಅನೇಕ ರಾಷ್ಟ್ರಗಳಿಗೆ ಪರಿಚಯಗೊಂಡಿದೆ. ಆದರೆ ಇಂದು ಚೀನಾವು ಅತ್ಯಂತ ಹೆಚ್ಚು ಬೆಳ್ಳುಳ್ಳಿಯನ್ನು ಬೆಳೆಯುವ ರಾಷ್ಟ್ರವಾಗಿದ್ದು ಪ್ರತಿಶತ 80ರಷ್ಟನ್ನು ಅದೊಂದೇ ಉತ್ಪಾದಿಸಿ, ಜಗತ್ತಿಗೆಲ್ಲಾ ರಫ್ತು ಮಾಡುತ್ತದೆ. ಅದರ ನಂತರದ ಸ್ಥಾನ ಭಾರತದ್ದಾಗಿದ್ದು, ಜಗತ್ತಿನ ಪ್ರತಿಶತ 5-6 ರಷ್ಟು ಉತ್ಪಾದನೆಯಿಂದ   ಬೆಳ್ಳುಳ್ಳಿಯ ವಹಿವಾಟಿನಲ್ಲಿ ಪ್ರಮುಖವಾಗಿದೆ. ನಂತರದ ಸ್ಥಾನದಲ್ಲಿ ಬಾಂಗ್ಲಾ, ಪಾಕಿಸ್ತಾನಗಳಿವೆ. ಯೂರೋಪನ್ನು ಹೊಕ್ಕ ಬೆಳ್ಳುಳ್ಳಿಯು ಅಲ್ಲಿನ ಸ್ಪೇನ್‌, ಗ್ರೀಕ್‌, ಇಟಲಿ, ಬ್ರಿಟನ್‌, ಫ್ರಾನ್ಸ್‌ ಮುಂತಾದ ನೆಲದಲ್ಲಿ ಹೊಂದಿಕೊಂಡು ವಿವಿಧ ಬಗೆಯ ಬೆಳ್ಳುಳ್ಳಿಯಾಗಿ ವಿಕಾಸಗೊಂಡಿದೆ. ಹಾಗಾಗಿ ಯೂರೋಪಿನ ವೈವಿಧ್ಯಮಯ ಬೆಳ್ಳುಳ್ಳಿಗಳು ಹೆಸರುವಾಸಿ.  ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯವು ಬೆಳ್ಳುಳ್ಳಿ ಉತ್ಪಾದನೆ ಹಾಗೂ ಬಳಕೆಗಳಿಂದ ಹೆಸರುವಾಸಿಯಾಗಿದೆ. ಅದನ್ನು ಬೆಳ್ಳುಳ್ಳಿಯ ರಾಜಧಾನಿ ಎಂದೇ ಕರೆಯಲಾಗುತ್ತದೆ.

          ಜಗತ್ತಿನಾದ್ಯಂತ ಹಲವಾರು ಬಗೆಗಳಿದ್ದರೂ ಮುಖ್ಯವಾಗಿ ಎರಡು ಬಗೆಯ ಬೆಳ್ಳುಳ್ಳಿಗಳನ್ನು ಕಾಣುತ್ತೇವೆ. ಮೊದಲನೆಯದು ಮೃದುವಾದ ಕುತ್ತಿಗೆಯುಳ್ಳ ಬೆಳ್ಳುಳ್ಳಿ ಮತ್ತೊಂದು ದಪ್ಪನಾದ ಗಟ್ಟಿಯಾದ ಕುತ್ತಿಗೆಯುಳ್ಳ ಬೆಳ್ಳುಳ್ಳಿ. ಇದನ್ನು ಬೆಳ್ಳುಳ್ಳಿ ಗಡ್ಡೆಯನ್ನು ಹಿಡಿದಾಗ ತುದಿಯ ಕುತ್ತಿಗೆಯನ್ನು ನೋಡಿ ಅರಿಯಬಹುದು. ನಾವು ಅವುಗಳನ್ನೇ ನಾಟಿ ಮತ್ತು ಹೈಬ್ರಿಡ್‌ ಎಂದು ಹೇಳುತ್ತೇವೆ. ಇವೆಲ್ಲವೂ ವನ್ಯ ತಳಿಯಿಂದ ಪಡೆದು ಆನುವಂಶಿಕ ಬದಲಾವಣೆಯಲ್ಲಿ ಇರುವಂತಹಾ ಎರಡೇ ವಿಧಗಳು. ಆದರೆ ಗಡ್ಡೆಯನ್ನು ಒಡೆದಾಗಿನ ಇಲುಕುಗಳ ಒಳ ಮೈಬಣ್ಣ, ಆಕಾರ, ಗಾತ್ರ ಇವುಗಳಲ್ಲಿ ವಿವಿಧತೆಯನ್ನು ಕಾಣಬಹುದು. ಕೆಲವು ಹಸಿರು ಮಿಶ್ರ ಬಿಳಿ, ಕೆಲವು ಅಪ್ಪಟ ಬಿಳಿ, ಕೆಲವು ಕಂದು ಮಿಶ್ರಿತ, ಕೆಲವು ದಟ್ಟ ಕೆಂಬಣ್ಣ, ನೇರಳೆ ಮಿಶ್ರಿತ ಕಂದು ಮುಂತಾಗಿ ವಿವಿಧತೆಯನ್ನು ಕಾಣಬಹುದು. ಕುತ್ತಿಗೆಯು ದಪ್ಪವಾದ ಬೆಳ್ಳುಳ್ಳಿಯ ಗಡ್ಡೆಯ ಮಧ್ಯದ ಕಡ್ಡಿಯಂತಹಾ ಭಾಗವನ್ನು ಅದನ್ನು ಪ್ರತಿನಿಧಿಸುತ್ತದೆ. ಮೃದುವಾದ ಗಡ್ಡೆಗಳಲ್ಲಿ ಕಡ್ಡಿಯಂತಹಾ ಭಾಗವು ಇರುವುದೇ ಇಲ್ಲ.

          ಕೃಷಿಯ ಅಳವಡಿಕೆಯಲ್ಲಿ ಬೆಳ್ಳುಳ್ಳಿಗೆ ವಿಶೇಷ ಸ್ಥಾನವಿದೆ. ಏಕೆಂದರೆ ಬೆಳೆಯುವುದು ಸುಲಭ. ಹೆಚ್ಚು ನೀರೂ ಬೇಡ, ಒಣಪ್ರದೇಶಕ್ಕೆ ಒಗ್ಗುತ್ತದೆ. ಕೀಟ-ರೋಗಗಳ ಕಾಟವು ಹೆಚ್ಚೂ ಕಡಿಮೆ ಇಲ್ಲವೇ ಇಲ್ಲ. ಇದ್ದರೂ ಸುಲಭವಾಗಿ ನಿಯಂತ್ರಣದಲ್ಲಿಡಬಹುದಾಗಿದೆ. ಕೆಲವೊಮ್ಮೆ ನೆಮೆಟೋಡುಗಳ ತೊಂದರೆಯನ್ನು ಮಾತ್ರವೇ ಬೆಳ್ಳುಳ್ಳಿಯು ಅನುಭವಿಸುತ್ತದೆ. ಬೆಳೆಯ ಬದಲಾವಣೆಯಿಂದ ಅದನ್ನು ಸುಲಭವಾಗಿ ನಿಯಂತ್ರಿಸಬಹುದು. ಸಾಮಾನ್ಯವಾಗಿ ನಿರಂತರವಾಗಿ ಬೆಳ್ಳುಳ್ಳಿಯನ್ನು ಬೆಳೆಯುವುದೂ ಕಡಿಮೆ. ಹಾಗಾಗಿ ಏನೂ ಸಮಸ್ಯೆಯಿಲ್ಲ. ನಮ್ಮ ರಾಜ್ಯದ ಹಾವೇರಿ, ಗದಗ ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ನೆಲವನ್ನು ಬೆಳ್ಳುಳ್ಳಿ ಬೆಳೆಯಲೆಂದು ಉಚಿತವಾಗಿ ಕೊಡುವ ರೂಢಿ ಇತ್ತು. ಕಾರಣ ಬೆಳ್ಳುಳ್ಳಿ ಬೆಳೆದ ನಂತರದ ಬೆಳೆಗೆ ಹೆಚ್ಚಿನ ರೋಗ ಬೀಳುವುದಿಲ್ಲ ಎಂದು ಅಲ್ಲಿನ ರೈತರು ಹೇಳುತ್ತಿದ್ದುದನ್ನು ಹದಿನೈದು -ಇಪ್ಪತ್ತು ವರ್ಷಗಳ ಹಿಂದೆ ಆ ಪ್ರದೇಶಗಳಲ್ಲಿ ಕೃಷಿ ಜೀವಿ ವೈವಿಧ್ಯ ಅಧ್ಯಯನದಲ್ಲಿ ತೊಡಗಿದ್ದಾಗ ಕೇಳಿದ್ದೆ.

          ಅನೇಕ ತರಕಾರಿಗಳು ತಮ್ಮೊಳಗೆ ಹಲವಾರು ಆಂಟಿ-ಆಕ್ಸಿಡೆಂಟುಗಳನ್ನು ತುಂಬಿಕೊಂಡು ಕ್ಯಾನ್ಸರ್‌ ಜೀವಿಕೋಶಗಳನ್ನು ನಾಶಪಡಿಸುತ್ತಾ  ನಮ್ಮ ಪ್ರತಿರೋಧ ವ್ಯವಸ್ಥೆಯನ್ನು (ಇಮ್ಯೂನ್‌ ಸಿಸ್ಟಮ್‌) ಉತ್ತೇಜಿಸುತ್ತವೆ. ಅಲ್ಲದೆ ಹಲವು ರೋಗಕಾರಕಗಳನ್ನು ನಾಶಪಡಿಸಲು, ಜೊತೆಗೆ ನೋವು ನಿವಾರಕಗಳಾಗಿಯೂ  ಸಹಾ ಬಳಸಬಹುದಾಗಿವೆ. ಹಾಗಾಗಿ ಔಷಧ ತಯಾರಿಗಳಲ್ಲಿ ಸಸ್ಯಲೋಕದ ದೊಡ್ಡ ಪಾತ್ರವನ್ನೇ ನಾವು ಕಾಣುತ್ತೇವೆ. ಅವುಗಳಲ್ಲಿ ನಿಜಕ್ಕೂ ಮೊದಲಿನಿಂದಲೂ ದೊಡ್ಡದಾದ ಹೆಸರನ್ನೇ ಗಳಿಸಿರುವುದೆಂದರೆ ಬೆಳ್ಳುಳ್ಳಿ. ಸಹಸ್ರಾರು ವರ್ಷಗಳಿಂದಲೂ ಔಷಧವಾಗಿ ಬೆಳ್ಳುಳ್ಳಿಯ ಪಾತ್ರವನ್ನು ಬಹುಪಾಲು ಸಮುದಾಯಗಳು ಗುರುತಿಸಿವೆ. ಮಾನವ ಕುಲದ ಆರೋಗ್ಯದ ಹಿತದಲ್ಲಿ “ಪೆನ್ಸಿಲಿನ್‌” ಆವಿಷ್ಕಾರ ಬಹಳ ಮುಖ್ಯವಾದುದು. ಆದರೆ ಅದು ಎರಡನೆಯ ಮಹಾ ಯುದ್ಧದ ನಂತರದ ದಿನಗಳಲ್ಲಿ ರಷಿಯಾದಂತಹ ದೇಶಗಳಲ್ಲಿ ಪೆನ್ಸಿಲಿನ್‌ ಕೊರತೆಯ ಸಂದರ್ಭದಲ್ಲಿ ಅದಕ್ಕೆ ಪರ್ಯಾಯವಾಗಿ ಬೆಳ್ಳುಳ್ಳಿಯನ್ನು ಹೆಚ್ಚು ಹೆಚ್ಚು ಬೆಳೆಯುವಂತೆ ಪ್ರೋತ್ಸಾಹಿಸಲಾಗಿತ್ತು. ಗಾಯಗೊಂಡ ಸೈನಿಕರಿಗೆ ಪ್ರಾಥಮಿಕ ಉಪಚಾರಕ್ಕೆ ಬೆಳ್ಳುಳ್ಳಿಯ ಲಾಭವನ್ನು ಪ್ರಮುಖವಾಗಿ ಪರಿಗಣಿಸಲಾಗಿತ್ತು. ಸೋವಿಯತ್‌ ಒಕ್ಕೂಟದಲ್ಲಿ ಬೆಳ್ಳುಳ್ಳಿಯು “ರಷಿಯಾದ ಪೆನ್ಸಿಲಿನ್‌” ಎಂಬ ಹೆಸರಿಗೂ ಕಾರಣವಾಗಿತ್ತು.

          ಬೆಳ್ಳುಳ್ಳಿಯ ಔಷಧ ಗುಣಗಳ ಬಗೆಗೆ ಭಾರತವೂ ಸೇರಿದಂತೆ ಜಗತ್ತಿನ ಹಲವು ಸಮುದಾಯಗಳು ಆದಿಯಿಂದಲೂ ಆಸಕ್ತಿಯಿಂದ ದಾಖಲೆಗಳನ್ನು ಮಾಡಿವೆ ಜೊತೆಗೆ ಸಾಕಷ್ಟು ಬಳಕೆಯನ್ನೂ ಸಹಾ.  ಬೆಳ್ಳುಳ್ಳಿ ಇತಿಹಾಸದ ಅತ್ಯಂತ ಮಹತ್ವದ ಕ್ಷಣಗಳಲ್ಲಿ ಅದರ ವಿಸ್ತರಣೆಯು ಪ್ರಮುಖವಾಗಿದೆ. ಮಧ್ಯಪ್ರಾಚ್ಯ ಮತ್ತು ಪೂರ್ವ ಯುರೋಪಿನಾದ್ಯಂತ ಮುಸ್ಲಿಂ ಆಳ್ವಿಕೆಯು ಬೆಳ್ಳುಳ್ಳಿಯನ್ನು ಹರಡಲು ಅನುವು ಮಾಡಿಕೊಟ್ಟಿತು. ಅಲ್ಲೆಲ್ಲಾ ಬೆಳ್ಳುಳ್ಳಿಯನ್ನು ಅತ್ಯುತ್ತಮ ವೈದ್ಯಕೀಯ ಪರಿಹಾರವೆಂದು ಸ್ವಾಗತಿಸಲಾಯಿತು. ಹದಿನೇಳನೆಯ ಶತಮಾನದ ವೈದ್ಯಕೀಯ ಪುಸ್ತಕಗಳು ಪ್ಲೇಗ್ ಮತ್ತು ಸಿಡುಬಿಗೆ ಬೆಳ್ಳುಳ್ಳಿಯು ಅತ್ಯುತ್ತಮವಾದ ಚಿಕಿತ್ಸೆ ನೀಡುತ್ತದೆ ಎಂದು ವಿವರಿಸಿದವು. ಹಲವು ಪ್ರಸಿದ್ಧ ರಸಾಯನ ವಿಜ್ಞಾನಿಗಳು ಮತ್ತು ಸೂಕ್ಷ್ಮಜೀವಿವಿಜ್ಞಾನಿಗಳು  ಬೆಳ್ಳುಳ್ಳಿಯು ರೋಗಾಣುಗಳನ್ನು ಕೊಲ್ಲುವ ಮೂಲಕ ಗಾಯದ ಸೋಂಕಿನ ಸಾಧ್ಯತೆಯನ್ನು ಕಡಿಮೆ ಮಾಡುವ ಕುರಿತು ಸಾಬೀತು ಮಾಡಿದರು. ಮುಂದೆ ಎರಡೂ ವಿಶ್ವಯುದ್ಧಗಳ ಸಮಯದಲ್ಲಿ ಬೆಳ್ಳುಳ್ಳಿಯನ್ನು ನಂಜುನಿರೋಧಕ ಮತ್ತು ಭೇದಿ ಚಿಕಿತ್ಸೆಗಾಗಿ ವ್ಯಾಪಕವಾಗಿ ಬಳಸುವಂತೆ ಪ್ರೇರೇಪಣೆಯು ಸಿಕ್ಕಿತು.   ಮತ್ತೀಗ ಆಧುನಿಕ ಸಂದರ್ಭದಲ್ಲಿ ಬೆಳ್ಳುಳ್ಳಿಯ ಕಷಾಯವು ಸಾವಯವ ಹಾಗೂ ಸುಸ್ಥಿರ ಕೃಷಿಯಲ್ಲೂ ಬಳಕೆಯಾಗುತ್ತಿದೆ.

          ಇವುಗಳ ನಡುವೆ ಹಲವು ವೈದ್ಯಕೀಯ ಚಿಕಿತ್ಸಾ ಅಧ್ಯಯನಗಳನ್ನು ಬೆಳ್ಳುಳ್ಳಿಯನ್ನು ಬಳಸಿ ನಿರ್ವಹಿಸಲಾಗಿದೆ. ಪ್ರಮುಖವಾಗಿ ಕೆಲವು ಬಗೆಯ ಕಾನ್ಸರ್‌ ಜೀವಿಕೋಶಗಳ ನಿಯಂತ್ರಣದ ಪರಿಹಾರವನ್ನು ಸಂಶೋಧನೆಗಳು ಸಾಬೀತು ಮಾಡಿವೆ. ಆದರೆ ಹೃದಯ ಸಂಬಂಧಿತ ಹಾಗೂ ಅಧಿಕ ಒತ್ತಡವನ್ನು ನಿಭಾಯಿಸುವ ಪಾರಂಪರಿಕ ನಂಬಿಕೆಯನ್ನು ಆಧುನಿಕ ಶೋಧಗಳು ದೃಢಪಡಿಸಿಲ್ಲ. ಈ ಬಗೆಯ ಅಧ್ಯಯನಗಳ ಬಗೆಗೆ ಅನುಮಾನಗಳನ್ನೂ ವ್ಯಕ್ತಪಡಿಸುವ ಚರ್ಚೆಗಳೂ ಸಾಕಷ್ಟಿವೆ.  

          ಬೆಳ್ಳುಳ್ಳಿಯನ್ನು ತಿನ್ನುವ ಸಾವಿರ ಕಾರಣಗಳು ಇತಿಹಾಸದ ದಾಖಲೆಗಳು ಸಿಗುತ್ತವೆ. ತಿನ್ನಬಾರದು ಎಂಬುದಕ್ಕೆ ಸಾಕ್ಷಿಗಳು ಅಪರೂಪ. ಆಶ್ಚರ್ಯವೆಂಬಂತೆ ಬೌದ್ಧ ಸಮುದಾಯವೂ ಸಹಾ ಕಿಸ್ತಶಕ ಒಂದು ಮತ್ತು ಹತ್ತನೆಯ ಶತಮಾನದ ನಡುವೆ ಸಕಾರಣಗಳಿಲ್ಲದೆ ಬೆಳ್ಳುಳ್ಳಿಯ ಬಳಕೆಗೆ ನಿಷೇಧ ಹೇರಿತ್ತು. ಬೌದ್ಧ ಮತ ಹೆಚ್ಚು ಪ್ರಚಾರದಲ್ಲಿರುವ ಚೀನಾ ದೇಶವೇ ಈಗಂತೂ ಮುಕ್ಕಾಲು ಭಾಗ ಬೆಳ್ಳುಳ್ಳಿ ಬೆಳೆಯುತ್ತಾ ಎಲ್ಲವನ್ನೂ ಮೀರಿರುವುದು ತಿಳಿದ ಸಂಗತಿ. ಹಲವು ಸಮುದಾಯಗಳಲ್ಲಿ ಬೆಳ್ಳುಳ್ಳಿಯು ಆಹಾರ ಮತ್ತು ಔಷಧಗಳೆರಡರಲ್ಲೂ ಮಹತ್ವ ಪಡೆದ ಅತ್ಯಂತ ಜನಪ್ರಿಯವಾದ ಸಸ್ಯಗಳಲ್ಲಿ ಪ್ರಮುಖವಾಗಿದೆ.  

          ಎಲ್ಲಾ ಕಾಲದಲ್ಲೂ, ಅವಕಾಶವಿದ್ದ ಮಾನವ ಸಮುದಾಯವು ತಮ್ಮ ಬೇಕು-ಬೇಡಗಳನ್ನು ಸಾರ್ವಜನಿಕಗೊಳಿಸುವ ಇರಾದೆಯನ್ನು ಸ್ಥಾಪಿಸುತ್ತಲೇ ಬಂದಿರುವ ಕಾರಣ, ಮಾತಿಗಷ್ಟೇ ಇರುವ ಈ ಚರ್ಚೆಗಳನ್ನು ನಂಬಬಹುದು ಅಥವಾ ಬೆಳ್ಳುಳ್ಳಿಯ ಹದವಾದ ಒಗ್ಗರಣೆಯನ್ನು ಬಳಸಿದ ತಿನಿಸುಗಳನ್ನು ಎಂಜಾಯ್‌ ಮಾಡುಬಹುದು.  ಇದೇ ನಾವು-ನೀವೆಲ್ಲರೂ ಮಾಡಬಹುದಾದ ಕೆಲಸ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್‌ 

This Post Has 2 Comments

  1. Haleshi C

    A good scientific article, very informative, some body has to read, who argue without any scientific evidences

  2. RanganathaaRao N R

    Yes indeed good scientific article

Leave a Reply to Haleshi C Cancel reply