You are currently viewing ಸಸ್ಯಯಾನ ನೆರವಿಗೆ ವರ್ಗೀಕರಣದ ಬೆಂಬಲ….

ಸಸ್ಯಯಾನ ನೆರವಿಗೆ ವರ್ಗೀಕರಣದ ಬೆಂಬಲ….

ನನ್ನ ಆಪ್ತರು ಇಲೆಕ್ಟ್ರಾನಿಕ್ ಓದಿನ ಹಿನ್ನೆಲೆಯವರಾದರೂ ಜೀವಪರ ಜಿಜ್ಞಾಸೆಯಿಂದ ಈ ಸಸ್ಯಯಾನದ ಬಹು ದೊಡ್ಡ ಬೆಂಬಲಿಗರು. “ಏನನ್ನಾದರೂ ಅದರ ಹೆಸರಿನಿಂದ ತಿಳಿದುಕೊಳ್ಳುವುದಕ್ಕಿಂತಾ ಅದರ ಬಗ್ಗೆ ತಿಳಿದುಕೊಳ್ಳುವುದು ಬಹು ಮುಖ್ಯ” ಎಂಬ ರಿಚರ್ಡ್ ಫೈನ್ ಮನ್ ಅವರ ಜನಪ್ರಿಯ ಹಿತನುಡಿಯ ಆಶಯದಂತೆ ಗಿಡ-ಮರಗಳ ವೈವಿಧ್ಯ ಸಂಗತಿಗಳ ತಿಳಿಯಲು ಸಹಾಯವಾಗುವಾ ಸಸ್ಯವರ್ಗೀಕರಣ ಕುರಿತು ಅಪೇಕ್ಷಿಸಿದ್ದರು. ನಾನೇನು ಅಪ್ಪಟ ಸಸ್ಯವಿಜ್ಞಾನದ ವಿದ್ಯಾರ್ಥಿ ಅಲ್ಲ. ಕೃಷಿ ವಿದ್ಯಾರ್ಥಿಯಾಗಿದ್ದಾಗ ಸಸ್ಯವಿಜ್ಞಾನದ ಗುರುಗಳಾಗಿದ್ದ ಡಾ. ಸತ್ಯವತಿಯವರಿಂದ ಸಸ್ಯ ವರ್ಗೀಕರಣದ ಕೆಲವು ಪಾಠಗಳನ್ನು ಕಲಿತಿದ್ದೆ. ಅವರೂ ಇಲ್ಲದ ಈ ಸಂದರ್ಭದಲ್ಲಿ ಅವರ ನೆನಪಿಗೆ ಗೌರವಪೂರ್ವಕ ಅರ್ಪಣೆಯಾಗಿ ಕೆಲವು ಟಿಪ್ಪಣಿಗಳನ್ನು ಬರೆಯುತ್ತಿದ್ದೇನೆ. ಸಸ್ಯಯಾನದ ಆಶಯಕ್ಕೆ ಇವು ಮತ್ತಷ್ಟು ಸಹಕಾರಿ ಆದಾವು. 
ಗಿಡ-ಮರಗಳ, ಹೂ-ಹಣ್ಣುಗಳ ಸೌಂದರ್ಯಕ್ಕೆ, ಮಾರು ಹೋಗದವರಾರು? ಇಲೆಕ್ಟ್ರಾನಿಕ್ಸ್ ಇರಲಿ, ರಾಜಕೀಯ ವಿಜ್ಞಾನದವರಾಗಿರಲಿ ಗಿಡಗಳ ಮಧ್ಯೆ, ಹೂ-ರಾಶಿಗಳ ಜೊತೆಗೆ, ಮರದ ಕೆಳಗೆ ನಿಂತೋ ಕುಳಿತೋ ಫೋಟೊ ತೆಗೆದುಕೊಂಡು ಗೆಳೆಯ-ಗೆಳತಿಯರಿಗೆ ಹಂಚಿ ಅಥವಾ ಪ್ರೊಫೈಲ್ ಗೆ ಸೇರಿಸಿ ಖುಷಿ ಪಡುವುದಿಲ್ಲವೇ? ಮೂಲತಃ ಜೀವಿಗಳ ಅದರಲ್ಲೂ ಸಸ್ಯ ಸಂಕುಲದ ಅಪಾರ ಸಂಖ್ಯೆಯಿಂದಾಗಿ ಅವುಗಳನ್ನು ವಿಂಗಡಿಸಿ, ಗುಂಪುಗಳಾಗಿಸಿ ಕೆಲವೊಂದು ಹಿತವಾದ ಆಸಕ್ತಿಗಳನ್ನು ಆರೋಪಿಸಿ/ಹೊಗಳಿಕೆಯಾಗಿಸಿ ಮಾತಾಡುವುದು ಸಹಜವಾದುದು. ಆಯಾ ಕಾಲಕ್ಕೆ ತಕ್ಕದಾದ ಆಸಕ್ತಿಗಳಿಂದ ಈ ಪರಂಪರೆಯು ವಿಜ್ಞಾನ ಮಾರ್ಗದಲ್ಲಿ ಬಹು ದೊಡ್ಡ ಹೆದ್ದಾರಿಯನ್ನು ನಿರ್ಮಿಸಿದೆ. ಆ ದಾರಿಯು ಚೆಲುವನ್ನು ವಿವಿಧತೆಗಳ ತೋರಣದಿಂದ ಅಲಂಕರಿಸಿ ಭವ್ಯವಾದ ಸಂಕುಲಗಳ ಸಂಸಾರಗಳನ್ನು ವಿಜೃಂಭಿಸಿದೆ. ಸಂಸಾರಗಳು ಸೃಷ್ಟಿಯಲ್ಲಿ ಬಳಸಿದ ಸಂಬಂಧಗಳ ಅನುಬಂಧಗಳ ವಿವರಗಳು ಒಂದಷ್ಟಾದರೂ ದಕ್ಕಿ ಒಂದು ಅರ್ಥಪೂರ್ಣ ವಿವರಗಳ ಕಥಾನಕವು ನಮ್ಮೊಳಗಿನ ಗ್ರಹಿಕೆಯಾಗಬಲ್ಲದು. 
ಸಸ್ಯ ವಿಜ್ಞಾನದ ಇತಿಹಾಸದ ಮೊದಲ ದಿನಗಳಲ್ಲಿ ಸಸ್ಯಗಳ ವರ್ಗೀಕರಣವು ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದೆ. ಉಪಯೋಗದ ದೃಷ್ಟಿಯಿಂದಾದರೂ ಗಿಡ-ಮರಗಳನ್ನು, ಪಶು-ಪಕ್ಷಿಗಳನ್ನು ವರ್ಗೀಕರಿಸಿ ಮನುಕುಲವು ಅವುಗಳಿಂದ ಬೆಂಬಲವನ್ನು ತನ್ನ ಹಿತದಲ್ಲಿ ಬಳಸಿದೆ. ಆ ತಿಳಿವಳಿಕೆಯನ್ನು ಸಂತತಿಗಳಿಂದ ಸಂತತಿಗೆ ವರ್ಗಾಯಿಸಿದೆ. ಹೀಗೆ ಪ್ರಚಲಿತ ದಾಖಲೆಗಳಲ್ಲಿ ಅತ್ಯಂತ ಹಳೆಯ ನಿದರ್ಶನವಾಗಿ “ಸಸ್ಯಗಳ ಕುರಿತ ಅನ್ವೇಷಣೆ”ಯನ್ನು ಕ್ರಿ.ಪೂ 372 ಮತ್ತು 287ರ ನಡುವೆ ಜೀವಿಸಿದ್ದ ಗ್ರೀಕ್ ತತ್ವಜ್ಞಾನಿಯಾದ ಥಿಯೋಫ್ರಾಸ್ಟಸ್ ಅವರಿಂದ ಕಾಣಬಹುದು. ಅವರನ್ನು “ಸಸ್ಯವಿಜ್ಞಾನದ ಪಿತಾಮಹಾ” ಎಂಬುದಾಗಿಯೂ ಕರೆಯಲಾಗುತ್ತದೆ. ಭಾರತೀಯ ನೆಲದಲ್ಲೂ ಕ್ರಿಸ್ತಪೂರ್ವದಲ್ಲೇ ಅಥರ್ವವೇದದಲ್ಲೂ ಹಾಗೂ ಸುಶ್ರೂತ ಸಂಹಿತದಲ್ಲೂ ಗಿಡ-ಮರಗಳ ವೈವಿದ್ಯಮಯ ಔಷಧೀಯ ವಿವರಣೆಯ ದಾಖಲೆಗಳಾಗಿದ್ದವು. ಅಲ್ಲಿಂದ ಮುಂದುವರೆದು ವೈವಿಧ್ಯಮಯ ದಾಖಲೆಗಳಾಗಿ ಪ್ಲಿನೇಯ “ಹಿಸ್ಟೊರಿಯಾ ನ್ಯಾಚುರಲಿಸ್”, ಡಿಸ್ಚೊರೈಡೆಸ್ ಅವರ “ಮಟಿರಿಯಾ ಮೆಡಿಕಾ” ಮೂಲಕ ಜೊತೆಗೆ ಇತರೆ ಕೆಲವು ಇಂಗ್ಲೀಶ್, ಜರ್ಮನ್, ಫ್ರೆಂಚ್, ಸಂಸ್ಕೃತ ಸ್ವಿಡಿಶ್, ಮುಂತಾದ ಭಾಷೆಗಳ ವೈವಿಧ್ಯಮಯ ದಾಖಲೆಗಳಲ್ಲಿ ಸಸ್ಯಗಳ ತಿಳಿವಳಿಕೆಯ ಹಿತದಿಂದ ವರ್ಗೀಕರಣದ ಮೆಟ್ಟಿಲುಗಳು ಸೃಷ್ಟಿಯಾದವು. 
ಕ್ರಿಸ್ತಶಕ 15ನೆಯ ಶತಮಾನದಲ್ಲಿ ಮೊದಲಬಾರಿಗೆ ಸಸ್ಯಗಳ ಕುರಿತ ಮೊದಲ ಮುದ್ರಿತ ಪುಸ್ತಕಗಳು ಹೊರಬಂದವು. ಅವುಗಳಲ್ಲಿ ಒಟ್ಟೊ ಬುನ್ಫೆಲ್ಸ್ ಅವರ “ಹರ್ಬೆರಿಯಮ್ ವಿವಾ ಐಕೊನಿಸ್-(-(Herbarium vivae Eiconis)”, ಜರ್ಮನಿಯ ಜಿರೊಮ್ ಬಾಕ್ ಅವರ Nue Kreuterbuch ಪುಸ್ತಕಗಳು ವರ್ಗೀಕರಣ ಮೊದಲ ಪಾಠಗಳನ್ನು ಕೊಟ್ಟವು. ಅವುಗಳಲ್ಲಿ ಮೊದಲ ಬಾರಿಗೆ ಗಿಡಗಳು (Herbs), ಪೊದರುಗಿಡ ಅಥವಾ ಸಣ್ಣ ಮರ (Shrubs) ಹಾಗೂ ಮರ (Trees) ಗಳೆಂದು ಮೂರು ವಿಭಾಗಗಳಾಗಿ ವಿಂಗಡಿಸಲಾಯಿತು. ಅಲ್ಲಿಂದ ಮುಂದೆ ಸಸ್ಯಗಳ ಬೆಳವಣಿಗೆ, ಆಕಾರ, ಹೂ-ಹಣ್ಣುಗಳ ವೈವಿಧ್ಯತೆ ಇವೇ ಮುಂತಾಗಿ ಮುಖ್ಯವಾಗಿಸಿಕೊಂಡು ವರ್ಗೀಕರಿಸುವ ವಿಧಾನಗಳು ಹುಟ್ಟಿಕೊಂಡವು. ಇದೀಗ ಪ್ರಚಲಿತವಿರುವ ಆಯಾಮಗಳನ್ನು ಪ್ರಮುಖವಾಗಿಸಿ ನೋಡುವುದಾದರೆ ಈ ಮುಂದಿನ ವರ್ಗೀಕರಣದ ಹಂತಗಳು ಮುಖ್ಯವಾದವು.
ಜಾನ್ ರೇ ಎಂಬ ಇಂಗ್ಲೀಶ್ ನಿಸರ್ಗ ತಜ್ಞ ಮೊಟ್ಟ ಮೊದಲಬಾರಿಗೆ ಹೂ ಬಿಡುವ ಸಸ್ಯಗಳನ್ನು ಏಕ ದಳ ಹಾಗೂ ದ್ವಿದಳ ಸಸ್ಯಗಳೆಂದು ವರ್ಗೀಕರಿಸಿದರು. ಸ್ವೀಡನ್ ದೇಶದಲ್ಲಿ 1707 ಮತ್ತು 1778ರ ನಡುವೆ ಜೀವಿಸಿದ್ದ ಕಾರ್ಲ್ ವಾನ್ ಲಿನೆಯಾಸ್ ಎಂಬ ನಿಸರ್ಗ ತಜ್ಞ ಇದೀಗ ಪ್ರಚಲಿತ ಇರುವ ಪದ್ದತಿಗಳಿಗೆ ಮೂಲ ಸರಕನ್ನು ಒದಗಿಸುವ ಮೂಲಕ ಹೊಸತೊಂದು ವರ್ಗೀಕರಣದ ಭಾಷೆಗೆ ಅಡಿಪಾಯ ಹಾಕಿದರು. “ಆಧುನಿಕ ಸಸ್ಯ ವಿಜ್ಞಾನದ ಪಿತಾಮಹಾ” ಎಂದು ಕರೆಯಲಾಗುವ ಲಿನೆಯಸ್ ಸ್ವತಃ ತಾನೇ ಸಾವಿರಾರು ಪ್ರಾಣಿ-ಸಸ್ಯಗಳನ್ನು ಸಂಗ್ರಹಿಸಿದ್ದಲ್ಲದೆ, ತನ್ನ ವಿದ್ಯಾರ್ಥಿಗಳನ್ನು ಜಗತ್ತಿನ ಇತರೇ ಹಲವಾರು ದೇಶಗಳಿಗೆ ಕಳಹಿಸಿ ವೈವಿಧ್ಯಮಯವಾದ ಜೀವಿ ಪ್ರಭೇದಗಳನ್ನು ಸಂಗ್ರಹಿಸಿದರು. ಅವರ ಒಟ್ಟು ಸಂಗ್ರಹವು ಸುಮಾರು 40,000 ಕ್ಕೂ ಹೆಚ್ಚು ಜೀವಿಗಳನ್ನು ಒಳಗೊಂಡಿತ್ತು ಎನ್ನಲಾಗುತ್ತದೆ. 
ಲಿನೆಯಾಸ್ ಪದ್ದತಿಗಳನ್ನು ಮಾದರಿಯಾಗಿ ಇಟ್ಟುಕೊಂಡು ರಚಿಸಿದ ಭಾರತೀಯ ಸಸ್ಯ ಸಂಪನ್ಮೂಲವನ್ನು ಕುರಿತ ಮೊಟ್ಟ ಮೊದಲ ದಾಖಲೆ “ಫ್ಲೋರಾ ಇಂಡಿಕಾ – (Flora Indica)”. ಅದರ ಕರ್ತೃ ಸ್ಕಾಟ್ಲ್ಯಾಂಡ್ನ ವಿಲಿಯಂ ರಾಕ್ಸ್ ಬರ್ಗ್ (William Roxburgh). ಇವರು ನಮ್ಮ ದೇಶಕ್ಕೆ ಮೂಲತಃ ವೈದ್ಯರಾಗಿ ಸೇವೆ ಸಲ್ಲಿಸಲು ಮದ್ರಾಸ್ ಪ್ರಾಂತ್ಯಕ್ಕೆ ಬಂದವರು ಹವ್ಯಾಸದಿಂದ ಸಸ್ಯವಿಜ್ಞಾನದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದರು. 1781 ರಿಂದ 89ರ ನಡುವೆ ಕರ್ನಾಟಕದಲ್ಲಿಯೂ ಸೇವೆ ಮಾಡಿ ಪಶ್ಚಿಮಘಟ್ಟಗಳಲ್ಲಿ ತಿರುಗಾಡಿ ಅಪಾರ ಸಸ್ಯರಾಶಿಗೆ ಬೆರಗಾದವರು. ನಮ್ಮ ದೇಶಾದ್ಯಂತ ಸುತ್ತಾಡಿ ಇಲ್ಲಿನ ಸಸ್ಯ ಅಧ್ಯಯನವನ್ನು ಮಾಡಿದ್ದಲ್ಲದೆ, ಭಾರತದ ಸಸ್ಯ ವಿಜ್ಞಾನಕ್ಕೆ ಮೂಲ ತಳಹದಿಯನ್ನು ಒದಗಿಸಿದ್ದಾರೆ. ಕೊಲ್ಕತ್ತಾದ ಸಸ್ಯೋದ್ಯಾನದಲ್ಲಿ ಇವರ ಕುರುಹುಗಳನ್ನು ಇಂದಿಗೂ ಕಾಣಬಹುದು. ಇವರ ಕುರಿತು ಹಲವಾರು ಸಂಗತಿಗಳಿದ್ದು ಮುಂದೊಮ್ಮೆ ಸಾಧ್ಯಮಾಡಿಕೊಂಡು ನೋಡೋಣ.
ಜಗತ್ತಿನ ಲಕ್ಷಾಂತರ ಸಸ್ಯಗಳನ್ನು ವರ್ಗೀಕರಿಸಿ ಅವುಗಳಿಗೆ ಹೆಸರು ಕೊಡುವ ಮಾರ್ಗದ ಹರಿಕಾರ ಕಾರ್ಲ್ ಲಿನೆಯಸ್, ಸ್ವತಃ ಸುಮಾರು 7,700ಕ್ಕೂ ಹೆಚ್ಚು ಸಸ್ಯಗಳಿಗೆ ಹೆಸರನ್ನಿಟ್ಟಿದ್ದಾರೆ. ಇಂದಿಗೂ ಜೀವಿಗಳನ್ನು ವೈಜ್ಞಾನಿಕ ಹೆಸರಿನಿಂದ ಗುರುತಿಸುವುದು ಬಹು ದೊಡ್ಡ ಜಾಣ್ಮೆಯಾಗಿರುವುದು ನಮ್ಮ ನಿಮ್ಮೆಲ್ಲರಿಗೂ ತಿಳಿದ ಸಂಗತಿಯೆ. ಎರಡು ಹೆಸರಿನ ವೈಜ್ಞಾನಿಕ ಹೆಸರಿನ ದ್ವಿನಾಮ ಪದ್ದತಿಯಾದ ಅದರಿಂದ ಅವರಿಟ್ಟ ಹೆಸರುಗಳನ್ನು ಇಂದಿಗೂ ಬಳಕೆಯಲ್ಲಿವೆ. ಒಂದು ಸಸ್ಯದ ವೈಜ್ಞಾನಿಕ ಹೆಸರನ್ನು ಹೇಳಿ ಅದು ಇಂತಹಾ ಕುಟುಂಬದ ಸದಸ್ಯ ಎಂದು ಗುರುತಿಸುವುದು ಸಸ್ಯವಿಜ್ಞಾನದ ವಿದ್ಯಾರ್ಥಿಗೆ ಬಹಳ ಹೆಮ್ಮೆಯ ಸಂಗತಿ. ಒಂದೇ ಕುಟುಂಬದ ಸದಸ್ಯರು ಕೆಲವೊಂದು ಗುಣಗಳಲ್ಲಿ ಸಂಬಂಧಗಳನ್ನು ಹೊಂದಿದ್ದು, ಈ ಗುರುತಿಸುವಲ್ಲಿ ಸಹಾಯವಾಗುತ್ತದೆ. ಅಲ್ಲದೆ ಕೆಲವೊಂದು ಗುಣಗಳು ಒಂದಕ್ಕಿಂದಾ ಮತ್ತೊಂದರಲ್ಲಿ ವಿಕಾಸದ ಮುಂದುವರಿಕೆಯಂತೆ ಕಂಡರೂ ಆಶ್ಚರ್ಯವಿಲ್ಲ. ಅದೇ ರೀತಿ ಒಂದೇ ಸಂಕುಲದ ವಿಭಿನ್ನ ಪ್ರಭೇದಗಳು ಮತ್ತಷ್ಟು ಹೆಚ್ಚಿನ ಸಂಬಂಧಗಳನ್ನು ಹೊಂದಿರುವುದು ಸಹಜ, ಹಾಗಾಗಿ ಅವುಗಳು ಒಂಸು ಸಂಕುಲದೊಳಗೆ ಆದರೆ ವಿಭಿನ್ನ ಪ್ರಭೇದಗಳಾಗಿ ಗುರುತಿಸಲಾಗುತ್ತದೆ. ಹಾಗೇಯೆ ಇನ್ನು ಪ್ರಭೇದದೊಳಗೇ ವೈವಿಧ್ಯಮಯ ತಳಿಗಳು ಬೆಳೆಯುವ ಪ್ರದೇಶಗಳು, ಮುಂತಾದ ಕಾರಣಗಳಿಂದ ಭಿನ್ನವಾಗಿರಲೂ ಬಹುದು. ಸಂಬಂದಗಳೊಳಗೆ ಸಂತತಿಗಳ ವಿನಿಮಯಯೂ ಸಾಧ್ಯ. ಇವೆಲ್ಲವನ್ನೂ ವರ್ಗೀಕರಣ ವಿಜ್ಞಾನವು ನಿಭಾಯಿಸುವ ತಿಳಿವಳಿಕೆಯಾಗಿ ಗಿಡ-ಮರಗಳನ್ನು ಅರಿಯುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಹೀಗೆ ವರ್ಗೀಕರಣದ ಹಿನ್ನೆಲೆಯ ಕಥಾನಕವು ಹೀಗೆ ಹುಟ್ಟಿಕೊಂಡಿತು. ಮುಂದೆ ಬೆಳವಣಿಯಾಗಿ ಇಂದು ಪ್ರಚಲಿತವಾಗಿರುವ ಸಂಗತಿಗಳಿಂದ ವರ್ಗೀಕರಣ ವಿಜ್ಞಾನವನ್ನೀಗ ನೋಡೋಣ.
ಆಧುನಿಕ ವರ್ಗೀಕರಣ ವಿಜ್ಞಾನದಲ್ಲಿ ಜೀವಿವಿಕಾಸದ ಸಂಗತಿಗಳು ಪ್ರಮುಖವಾದ ಆಯಾಮವಾಗಿಸಿ ವರ್ಗೀಕರಣದ ವೈಧಾನಿಕತೆಗಳನ್ನು ಮೂರು ಮುಖ್ಯ ಹಂತಗಳಾಗಿ ವಿಂಗಡಿಸಲಾಗುತ್ತದೆ. ಅವುಗಳನ್ನು ಜೀವಿವಿಕಾಸದ ಹರಿಕಾರ ಡಾರ್ವಿನ್‍ ಗಿಂತಲೂ ಪೂರ್ವದ ಹಂತ, ಡಾರ್ವಿನ್ ಸಮಕಾಲಿನ ಹಂತ ಹಾಗೂ ಡಾರ್ವಿನ್ ನಂತರದ ಹಂತವೆಂದು ಕರೆಯಲಾಗುತ್ತದೆ. ಡಾರ್ವಿನ್ ಪೂರ್ವದಲ್ಲಿ ಹಾಗೂ ಡಾರ್ವಿನ್ ಅವರ ಸಮಕಾಲೀನದಲ್ಲಿ ಜೀವಿವಿಕಾಸದ ವಿಚಾರಗಳು ಪ್ರಮುಖವಾಗಿರಲೇ ಇಲ್ಲ. ಆದರೆ ಅದು ಬಹು ಮುಖ್ಯವಾದ ಜ್ಞಾನವಾಗಿ ಬೆಳೆದದ್ದರಿಂದ ಆಧುನಿಕ ವರ್ಗೀಕರಣವು ವಿಕಾಸವನ್ನು ಮುಖ್ಯವಾದ ಸಂಗತಿಯನ್ನಾಗಿಸಿ ಮುಂದುವರೆಸಿದೆ. ಲಿನೆಯಸ್ ಅವರನ್ನೂ ಒಳಗೊಂಡು ಡಾರ್ವಿನ್ ಪೂರ್ವದ ಎಲ್ಲಾ ವಿಜ್ಞಾನಿಗಳೂ ಹೆಚ್ಚು ಕಡಿಮೆ ಒಂದು ಗುಣವನ್ನು ಪ್ರಮುಖವಾದ ವಿಚಾರವನ್ನಾಗಿಸಿ ವರ್ಗೀಕರಣವನ್ನು ಮಾಡಿದ್ದಾರೆ. ಆಧುನಿಕ ವರ್ಗೀಕರಣಕ್ಕೆ ಕಾರಣರೆಂದು ಪಿತಾಮಹಾರೆಂದೂ ಕರೆಯಲಾಗುವ ಲಿನೆಯಾಸ್ ಸ್ವತಃ ಒಂದೇ ಒಂದು ಗುಣವನ್ನು ಪ್ರಮುಖವಾಗಿ ಬಳಸಿಕೊಂಡಿದ್ದರು. ಈ ಗುಣಗಳು ಎಂದರೆ ಏನು ಒಂದಷ್ಟು ಗಮನ ಹರಿಸೋಣ. ಮೊದಲಿನ ಬಹು ಪಾಲು ವರ್ಗೀಕರಣ ಆಸಕ್ತಿಯ ವಿಜ್ಞಾನಿಗಳು ಪ್ರಭೇದವನ್ನು ಪ್ರತಿಸ್ಟಾಪಿಸುವಂತಹಾ ವಿವರಣೆಗಳಲ್ಲಿ ಹೆಚ್ಚು ತೊಡಗಿಕೊಂಡಿದ್ದರು. ಅದಕ್ಕೆಲ್ಲಾ ಮೂಲ ಕಾರಣವು ಯಾವುದೇ ಸಸ್ಯವನ್ನು ಗುರುತಿಸಿ ಸಾದ್ಯವಾದಷ್ಟು ಸಂಬಂಧಗಳುಳ್ಳ ಇತರೇ ಸಸ್ಯಗಳೊಂದಿಗೆ ಗುಂಪಾಗಿಸಿವುದಷ್ಟೇ ಆಗಿತ್ತು. ಆ ಸಂಬಂಧಗಳನ್ನು ಈಗಿರುವಂತೆ ನಡುವಣ ಆನುವಂಶಿಕ ಅಥವಾ ಮತ್ತಿತರೇ ಯಾವುದೇ ಕುಲಸಂಹಿತೆಗಳಾಗಿಸಬಲ್ಲ ವಿವರಗಳಿಂದ ವಿವರಿಸಿರಲಿಲ್ಲ. 
ಒಂದು ಕ್ಷಣ ಈ ವರ್ಗೀಕರಣದ ಹಿನ್ನೆಲೆಯ ಎಲ್ಲಾ ತರ್ಕ ಸಿದ್ಧಾಂತಗಳ ಬಿಟ್ಟು ಆಲೋಚಿಸೋಣ. ಸಾಮಾನ್ಯವಾಗಿ ನಮ್ಮ ಮುಂದೆ ನೂರಾರು ಬಗೆಯ ಗಿಡ-ಮರಗಳಿವೆ ಎಂದು ಭಾವಿಸೋಣ. ಯಾವುದೇ ಮೂಲಮಾನಗಳ ಪರಿಚಯ ಇಲ್ಲದಿದ್ದರೂ ನಾವು ಅವುಗಳನ್ನು ಹೇಗೆ ವಿಂಗಡಿಸುತ್ತೇವೆ? ನಮ್ಮ ನೋಟಕ್ಕೆ ಸಿಗುವಂತಹಾ ಆಯಾ ಗಿಡ ಮರಗಳ ಕೆಲವು ವಿಶೇಷಗಳಲ್ಲಿ ಎದ್ದು ಕಾಣುವಂತಹಾ ಹೂವಿನ, ಕಾಯಿಗಳ, ಎಲೆ-ಕಾಂಡಗಳ ಗುಣಗಳನ್ನು ಬಳಸಿಕೊಳ್ಳುತ್ತೇವಲ್ಲವೇ? ವಿಜ್ಞಾನಿಗಳೂ ಅದನ್ನೇ ಮಾಡಿದ್ದು. ಆದರೆ ಅವರು ಒಂದು ಗೊತ್ತಾದ ಮಾರ್ಗವನ್ನು ಅನುಸರಿಸಿದರು. ಹಾಗೆ ಆ ರೀತಿಯಲ್ಲಿ ಲಿನೆಯಾಸ್ ಹೂವಿನಲ್ಲಿ ಇರುವ ಪುಂಕೇಸರವನ್ನು ಅವಲಂಬಿಸಿದ್ದರು. ಈ ಸ್ಟೇಮನ್ ಅಥವಾ ಪುಂಕೇಸರವನ್ನು ಆಧಾರವಾಗಿಟ್ಟುಕೊಂಡು ಹೂಬಿಡುವ ಸಸ್ಯಗಳನ್ನು ಸುಮಾರು 24 ವರ್ಗಗಳಾಗಿ ವಿಂಗಡಿಸಿದ್ದರು. ಅವುಗಳ ಸರಳ ವಿವರ ಹೀಗಿದೆ. 
ಪುಂಕೇಸರಗಳ ಸಂಖ್ಯೆ 1, 2, 4….. 12ರವರೆಗೂ, 12 ವರ್ಗಗಳು, ನಂತರದಲ್ಲಿ ಪುಂಕೇಸರಗಳು 12ಕ್ಕಿಂತಾ ಹೆಚ್ಚಿರುವ ಹೂಗಳ ವರ್ಗಗಳು, ನಂತರ ಆ ಪುಂಕೇಸರಗಳು ಹೂವಿನ ಯಾವ ಭಾಗಕ್ಕೆ ಅಂಟಿಕೊಂಡಿವೆ ಎಂಬುದನ್ನು ಬಳಸಿ ಸುಮಾರು ಒಂದಷ್ಟು, ಹಾಗೆಯೇ ಇವೇ ಪುಂಕೇಸರಗಳು ಜೋಡಣೆಯನ್ನು ಗಮನಿಸಿ ಒಂದಷ್ಟು, ಹೀಗೆ ಸಾಧ್ಯವಾದಷ್ಟೂ ಕೇವಲ ಪುಂಕೇಸರವನ್ನು ಮಾತ್ರವೇ ಪರಿಗಣಿಸಿ ಹೂಬಿಡುವ ಸಸ್ಯಲೋಕವನ್ನು 24 ವರ್ಗಗಳಾಗಿ ವರ್ಗೀಕರಿಸಿದ್ದರು. 
ನಂತರ ಮುಂದೆ ಡಾರ್ವಿನ್ ನಂತರದಲ್ಲಿ ಜೀವಿವಿಕಾಸವಿಜ್ಞಾನವು ವರ್ಗೀಕರಣವನ್ನು ಪ್ರೋತ್ಸಾಹಿಸುವ ವಿವರಗಳನ್ನು ಕೊಡುವುದರಿಂದ ವಿಕಾಸ ಹಿನ್ನೆಲೆಯನ್ನು ಬಳಸಿ ಸಸ್ಯಗಳನ್ನು ವರ್ಗೀಕರಿಸಿಲಾಯಿತು. ಈ ಅಂಶಗಳನ್ನು ಪ್ರಮುಖವಾಗಿಟ್ಟುಕೊಂಡು ಸಸ್ಯ ಜೀವ ಸಂಕುಲಗಳನ್ನು ಹಲವಾರು ಬಗೆಯಲ್ಲಿ ವರ್ಗೀಕರಣವನ್ನು ಮಾಡಲಾಗಿದೆ. ನೂರಾರು ಸಸ್ಯ ವರ್ಗೀಕರಣ ವಿಜ್ಞಾನಿಗಳು ಈ ಪದ್ದತಿಗಳ ಆವಿಷ್ಕಾರದಲ್ಲಿ ತೊಡಗಿಸಿಕೊಂಡಿದ್ದರು. ಕೇವಲ ಹೂಬಿಡುವ ಸಸ್ಯಗಳಲ್ಲೇ ಸುಮಾರು 3,55,000 ಸಸ್ಯಗಳನ್ನು ಈವರೆಗೆ ಗುರುತಿಸಲಾಗಿದೆ. ಅಂದ ಮೇಲೆ ಉಳಿದೆಲ್ಲಾ ಜೀವಿ ಪ್ರಪಂಚದ ಅಗಾಧತೆಯನ್ನು ಊಹಿಸಬಹುದು. ಹಾಗಾಗಿ, ಒಟ್ಟಾರೆ ಸಸ್ಯಗಳಲ್ಲಿ ಹಬ್ಬುವ/ಬೆಳೆಯುವ ಬಗೆ, ಕಾಂಡದ ಮೇಲ್ಮೈ ಸಂಗತಿಗಳು, ಆಕೃತಿ, ಎಲೆಗಳ ವಿನ್ಯಾಸ, ಹೂಗೊಂಚಲಿನ ವಿನ್ಯಾಸ, ಹೂಗಳ ವಿವರಗಳು, ಪರಾಗಸ್ಪರ್ಶದ ರೀತಿ ರಿವಾಜುಗಳು, ಹಣ್ಣ-ಕಾಯಿಗಳ ಗುಣ ಲಕ್ಷಣಗಳು, ಪ್ರಸರಣ ವೈವಿಧ್ಯತೆ ಇವೇ ಮುಂತಾಗಿ ಸಂಗತಿಗಳ ವೈವಿಧ್ಯಮಯ ಸಂಬಂಧಗಳು ಇವೆಲ್ಲವನ್ನೂ ಒಟ್ಟು ಮಾಡಿ ಸಾಕಷ್ಟು ವಿವಿಧ ಬಗೆಯ ವರ್ಗೀಕರಣವನ್ನು ಸಸ್ಯವಿಜ್ಞಾನದ ಹಿನ್ನೆಲೆಯಲ್ಲಿಯೇ ಕಾಣುತ್ತೇವೆ.
ಎಲ್ಲವನ್ನೂ ಅರ್ಥ ಮಾಡಿಕೊಂಡು ವಿಕಾಸದ ಹಿನ್ನೆಲೆಯ ಹಾಗೂ ಪ್ರಾಯೋಗಿಕವಾಗಿ ಸಾಧ್ಯವಾಗ ಮಾದರಿಗಳ ಮಾರ್ಗಗಳಲ್ಲಿ ಮುಖ್ಯವಾದ ಮುಂದಿನ ಮೂರು ವಿಧಾನಗಳು ಜೀವಿವೈಜ್ಞಾನಿಕ ಜಗತ್ತಿನಲ್ಲಿ ಹೆಚ್ಚು ಪ್ರಚಲಿತದಲ್ಲಿವೆ. ಅವುಗಳೆಂದರೆ ಮೊದಲನೆಯದಾಗಿ 1) George Bentham (1800-1884) ಮತ್ತು Joseph Dalton Hooker (1817-1911) ಎಂಬ ಇಬ್ಬರು ಬ್ರಿಟೀಷ್ ಸಸ್ಯವಿಜ್ಞಾನಿಗಳ ಬೆಂಥಮ್ ಮತ್ತು ಹುಕರ್ ವರ್ಗೀಕರಣ ಪದ್ದತಿ. ಈ ಪದ್ದತಿಯು ಯೂರೋಪ್ ಅಲ್ಲದೆ ಭಾರತವೂ ಸೇರಿದಂತೆ ಏಶಿಯಾದ ದೇಶಗಳಲ್ಲೆಲ್ಲಾ ಜನಪ್ರಿಯವಾಗಿದೆ. ಇದರಲ್ಲಿ ವಿಕಾಸ ಚಿಂತನೆಗಳನ್ನು ಅಳವಡಿಸದಿದ್ದರೂ, ಪ್ರಾಯೋಗಿಕವಾದ ಹಲವಾರು ಸಾಧ್ಯತೆಗಳ ವೈಧಾನಿಕತೆಯನ್ನು ಬಳಸಿಕೊಂಡು ಸೃಷ್ಟಿಯಾದ ಪದ್ದತಿ. ಹೆಚ್ಚು ಬಳಕೆಯಲ್ಲಿರುವ ಪದ್ದತಿಯೂ ಹೌದು. ಈ ಪದ್ದತಿಯಲ್ಲಿ ಹೂ ಬಿಡುವ ಸಸ್ಯಗಳನ್ನು 202 ಕುಟುಂಬಗಳಾಗಿ ವಿಂಗಡಿಸಲಾಗಿದೆ. 2) ಜರ್ಮನಿಯ ಸಸ್ಯವಿಜ್ಞಾನಿಗಳಾದ Adolf Engler (1844 –1930) ಮತ್ತು Karl Anton Prantl (1849 -1893) ಅವರ ಎಂಗ್ಲರ್ ಮತ್ತು ಪ್ರಂಟ್ಲ್ ಪದ್ದತಿ. ಇದು ಜೀವಿವಿಕಾಸದ ಹಾಗೂ ಆನುವಂಶಿಕ ವಿವರಗಳನ್ನು ಅಳವಡಿಸಿಕೊಂಡು ಮಾಡಲಾದ ಪದ್ದತಿ. ಇದು ಉತ್ತರ ಹಾಗೂ ದಕ್ಷಿಣ ಅಮೆರಿಕಗಳೆರಡರಲ್ಲೂ ಹೆಚ್ಚು ಜನಪ್ರಿಯವಾಗಿದೆ. ಈ ಪದ್ದತಿಯಲ್ಲಿ ಹೂ ಬಿಡುವ ಸಸ್ಯಗಳನ್ನು 280 ಕುಟುಂಬಗಳಾಗಿ ವಿಂಗಡಿಸಲಾಗಿದೆ. ಹಾಗೂ 3) ಬ್ರಿಟೀಷ್ ಸಸ್ಯವಿಜ್ಞಾನಿ ಜಾನ್ ಹಟ್ಚಿನ್ಸನ್ (John Hutchinson-1884 – 1972) ಅವರ ಹಟ್ಚಿನ್ಸನ್ ಪದ್ದತಿ. ಇದು ಒಂದು ರೀತಿಯಲ್ಲಿ ಈ ಎರಡನ್ನೂ ಅಂದರೆ ಜೀವಿ ವಿಕಾಸದ ಸಂಗತಿಗಳನ್ನೂ ಮತ್ತು ಪ್ರಾಯೋಗಿಕ ಸಂಗತಿಗಳೆರಡನ್ನೂ ಒಟ್ಟು ಗೂಡಿಸಿ ಮಾಡಲಾದ ಪದ್ದತಿ. ಇದರಲ್ಲಿ ಹೂಬಿಡುವ ಸಸ್ಯಗಳ ಒಟ್ಟು ಕುಟುಂಬಗಳ ಸಂಖ್ಯೆ 411. ಇದು ಬೆಂಥಮ್ ಮತ್ತು ಹುಕರ್ ಪದ್ದತಿಗೆ ಹೆಚ್ಚು ಹತ್ತಿರವಾದ ಪದ್ದತಿಯಾಗಿದೆ.

ಈ ಮೂರೂ ಮಾರ್ಗಗಳ ವಿವಿಧತೆಯನ್ನು ಸಮೀಕರಿಸಿ ಇಂದು ನಾವು ಬಳಸುವ ಪ್ರಾಯೋಗಿಕ ಸಹಜವಾದ ವರ್ಗೀಕರಣವನ್ನು ಸಂಕ್ಷಿಪ್ತವಾಗಿ ನೋಡೋಣ. ಚಿತ್ರದಲ್ಲಿರುವ ತ್ರಿಕೋನ ಮಾದರಿಯಲ್ಲಿ ಸಸ್ಯಗಳ ವರ್ಗೀಕರಣವನ್ನು ಮಾಡಲಾಗುತ್ತದೆ. ಸಸ್ಯಸಾಮ್ರಾಜ್ಯದಿಂದ ಆರಂಭಿಸಿ, ವಿಭಾಗ, ವರ್ಗಗಳೆಂದು ವಿಭಜಿಸಿ, ಅದರ ಮುಂದೆ ಕುಟುಂಬಗಳಾಗಿಸಿ ಅದರ ಕೆಳಗಡೆ ಕುಲ ಅಥವಾ ಜಾತಿ ಹಾಗೂ ಕೊನೆಯಲ್ಲಿ ಪ್ರಭೇದವೆಂದು ಗುರುತಿಸಲಾಗುವುದು. ಕೆಳಸ್ತರದ ಕೊನೆಯ ಎರಡು ವಿಭಜನೆಗಳನ್ನು ಬಳಸಿ ಆಯಾ ಸಸ್ಯಗಳ ಹೆಸರನ್ನು ದ್ವಿನಾಮ ರೂಪದಲ್ಲಿ ಸೂಚಿಸಲಾಗುವುದು.

ಸಸ್ಯಸಾಮ್ರಾಜ್ಯದಲ್ಲಿ ನಾಳಗಳುಳ್ಳ (Vascular) ಮತ್ತು ನಾಳ ರಹಿತ ((Non-Vascular )ಎಂಬ ಎರಡು ಮುಖ್ಯ ಸಸ್ಯ ವಿಭಾಗಗಳಿವೆ. ನಾಳ ಇರುವ ಸಸ್ಯಗಳಲ್ಲಿ ಬೇರು ಕಾಂಡ ಹಾಗೂ ಎಲೆಗಳು ಇರುತ್ತವೆ. ನಾಳಗಳಿಂದ ನೀರು ಮತ್ತ ಆಹಾರವನ್ನು ಸಸ್ಯಗಳ ದೇಹಗಳೊಳಗೆ ಸರಬರಾಜು ಮಾಡುವ ವ್ಯವಸ್ಥೆ ಇರುತ್ತದೆ. ನಾಳರಹಿತವಾದ್ದರಲ್ಲಿ ಎಲೆ ಕಾಂಡ ಬೇರುಗಳೇನೂ ಇವುಗಳಿರುವುದಿಲ್ಲ. ಹಾಗೇಯೇ ಮುಂದುವರೆದು ನಾಳಸಹಿತವಾದ ಸಸ್ಯಗಳನ್ನು ಬೀಜ ಸಹಿತವೋ ಬೀಜ ರಹಿತವೋ ಎಂಬುದಾಗಿ ಪುನರ್ ವಿಂಗಡಣೆಯಾಗಿದೆ. ಬೀಜವಿದ್ದರೆ ಬೀಜ ಕವಚಿರುವುದೋ ಇಲ್ಲವೋ ಎಂಬದು ಮುಂದಿನ ವಿಭಜನೆಗೆ ಕಾರಣವಾಗಿದೆ. ಬೀಜ ಕವಚ ಇರುವಂತಹವನ್ನು ಮುಂದೆ ಏಕದಳ ಹಾಗೂ ದ್ವಿದಳ ಎಂಬ ಎರಡು ವಿಭಜನೆಯನ್ನು ವರ್ಗಗಳೆಂದು (Class) ಬೀಜ ದಳಗಳನ್ನು ಆಧರಿಸಿ ಮಾಡಲಾಗಿದೆ. ಅದರ ನಂತರ ಕುಟುಂಬ (Family). ಕುಟುಂಬದೊಳಗೆ ಹಲವು ಕುಲ ಅಥವಾ ಜಾತಿ (Genus) ನಂತರ ಕೊನೆಯದಾಗಿ ಪ್ರಭೇದ (Species) ಉದಾಹರಣೆಗೆ ಮಾವಿನ ಮರವನ್ನು Mangifera indica ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲಾಗುತ್ತದೆ. Mangifera-Genus) ಮತ್ತು indica-Species). ಇದು ಬೀಜಸಹಿತವಾದ ದ್ವಿದಳ ಸಸ್ಯ. ಇದರ ಕುಟುಂಬವು Anacardiaceae ಹೆಸರಿನಿಂದ ಗುರುತಿಸಲಾಗುತ್ತದೆ. ಇಷ್ಟು ಸಂಕ್ಷಿಪ್ತವಾದ ವಿವರಗಳು ನನ್ನ ಆಪ್ತರಿಗೆ ಸಹ್ಯವಾಗಬಹುದು. ಜೊತೆಗೆ ನನ್ನ ಇತರೇ ಓದುಗರಿಗೂ ಸಸ್ಯ ವರ್ಗೀಕರಣದ ಹೆದ್ದಾರಿಯ ಕುರಿತ ಸಣ್ಣ-ಪುಟ್ಟ ಮಾರ್ಗಸೂಚಿಗಳು ದೊರುಕುತ್ತವೆ ಎಂಬ ಆಶೆಯಿಂದ ಕೊನೆಗೊಳಿಸುತ್ತೇನೆ. 
ಆರಂಭದಲ್ಲಿ ನನ್ನ ಸಸ್ಯವಿಜ್ಞಾನ ಗುರುವಾಗಿದ್ದ ಡಾ. ಸತ್ಯವತಿ ಮೇಡಂ ಅವರ ನೆನಪಿಸಿದ್ದೆ. ಟಿಪ್ಪಣಿಯನ್ನು ಮುಗಿಸಲೂ, ಅವರ ಜೊತೆ ಕಲಿಯುವಾಗ ನಡೆದ ಒಂದು ಘಟನೆಯೊಂದಿಗೆ ಮುಗಿಸುತ್ತೇನೆ. ಸ್ನಾತಕ ಪದವಿಯ ಮೂಲ ಕೋರ್ಸ್ ಅನ್ನೂ ಹಾಗೂ ಇಷ್ಟ ಪಟ್ಟು ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚಿನ ಕೋರ್ಸ್ ಅದರಲ್ಲೂ ವರ್ಗೀಕರಣ ವಿಜ್ಞಾನದ ಮೂಲ ಪಾಠಗಳನ್ನು ಅವರಿಂದ ಕಲಿತಿದ್ದೆ. ವರ್ಗೀಕರಣ ವಿಜ್ಞಾನ-Taxonomy ಯನ್ನು Tax-On-Me ಎಂದು ತಮಾಷೆಗೆ ಕರೆಯಲಾಗುತ್ತದೆ. ಅಂದರೆ ಯಾರೂ ಹೆಚ್ಚು ವಿದ್ಯಾರ್ಥಿಗಳು ಈ ತರಗತಿಗಳನ್ನು ತೆಗೆದುಕೊಳ್ಳುವುದಿಲ್ಲ. ನಾನು ತರಗತಿಗಳಿಗೆ ರಿಜಿಸ್ಟರ್ ಮಾಡಿಸಿದಾಗಲೂ 4-5 ವಿದ್ಯಾರ್ಥಿಗಳು ಮಾತ್ರವೇ ಇದ್ದೆವು. ಪ್ರಯೋಗಾಲಯದ ಕೊನೆಯ ಪರೀಕ್ಷೆಯು ತುಂಬಾ ಉದ್ದವಾಗಿರುತ್ತಿತ್ತು. ಅಂದರೆ ಪರೀಕ್ಷೆಯ ಪ್ರಮುಖ ಭಾಗ ಲ್ಯಾಬ್ ನಲ್ಲಿ ಊಟ ಮಾಡುವುದು. ಆದರೆ ಊಟದಲ್ಲಿ ತಟ್ಟೆಗೆ ಬಂದಿರುವ ಎಲ್ಲಾ ಸಸ್ಯಗಳನ್ನು ಗುರುತಿಸುತ್ತಾ, ವರ್ಗೀಕರಣ ಕ್ರಮವನ್ನು ಅನುಸರಿಸಿ ಹೆಸರಿಸುವುದೇ ಮುಖ್ಯ ಪರೀಕ್ಷೆ! ಒಂದು ವೇಳೆ ಚಿತ್ರಾನ್ನ ಊಟದಲ್ಲಿ ಇದ್ದರೆ, ಅಕ್ಕಿ, ಸಾಸಿವೆ, ಎಣ್ಣೆಯನ್ನು ಮಾಡಲು ಬಳಸಿದ್ದ ಕಾಳು ಹೀಗೆ…. ಕೊನೆಗೆ ಕಾಫಿಯೂ ಇರುತ್ತಿತ್ತು. ಅಷ್ಟರೊಳಗೆ 2-3 ಕೋರ್ಸ್ ಗಳನ್ನು ಮಾಡಿದ್ದರಿಂದ ತಮಾಷೆಯಾಗಿ ಉತ್ತರ ಬರೆದು ದಿಗಿಲೆಬ್ಬಿಸಬಹುದಿತ್ತು. ಕಾಫಿಯಲ್ಲಿ ಎರಡು ಪ್ರಭೇದಗಳಿರುತ್ತವೆ. ಬೆಟ್ಟದ ಮೇಲೆ ಬೆಳೆಯುವ ಹಾಗೂ ಕೆಳಗಿನ ಇಳಿಜಾರಲ್ಲಿ ಬೆಳೆಯುವ ಎಂಬುದಾಗಿ ಎರಡು. ಅರೆಬಿಕಾ ಹಾಗೂ ರೊಬಸ್ಟಾ…. ಎಂಬ ಹೆಸರುಗಳನ್ನು ರುಚಿಯಿಂದ ಹೇಳಲಾಗದು ಎಂದೇ ಬರೆಯುತ್ತಿದ್ದೆವು. ಫುಲ್ ಮಾರ್ಕ್ ಗಳೂ ಬರುತ್ತಿದ್ದವು, ಬಿಡಿ! ಕಾಫಿ ಕುಡಿದಾದ ಮೇಲೆ ಇನ್ನೇನಿದೆ.. ಅಲ್ಲವೇ? ಉದ್ದವಾದ ಬರಹವನ್ನು ಮುಗಿಸಲು ಸೂಚನೆ ಸಿಕ್ಕಂತಾಯಿತು. 
ಈ ಬರಹವನ್ನು ನನ್ನೊಳಗೆ ಸಸ್ಯ ಪ್ರೀತಿಯನ್ನು ಬೆಳೆಸಿದ ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ಸಸ್ಯ ವಿಜ್ಞಾನದ ಪ್ರಾಧ್ಯಾಪಕಿಯಾಗಿದ್ದ ಡಾ. ಸತ್ಯವತಿ ಮೇಡಂ ಅವರಿಗೆ ಗೌರವ ಪೂರ್ವಕವಾಗಿ ಅರ್ಪಿಸಿದ್ದೇನೆ.

— ಡಾ.ಟಿ.ಎಸ್.ಚನ್ನೇಶ್

Leave a Reply