ನೊಬೆಲ್ ಪ್ರಶಸ್ತಿಯನ್ನು ಯಾರೂ ಅರ್ಜಿ ಹಾಕಿ ಪಡೆಯುವಂತಿಲ್ಲ! ಪ್ರತಿಯೊಂದು ಆಯ್ಕೆಯೂ ಕೇವಲ ನಾಮನಿರ್ದೇಶನದ ಶಿಫಾರಸ್ಸಿನ ಮೇಲೆ ನಂತರ ಆಯ್ಕೆ ಸಮಿತಿಯ ಚರ್ಚೆಗಳಲ್ಲಿ ನಿರ್ಣಯವಾಗುತ್ತವೆ. ನೊಬೆಲ್ ಬಹುಮಾನಕ್ಕೆ ಪ್ರತಿ ವಿಭಾಗದಲ್ಲೂ ವ್ಯಕ್ತಿಗಳ ಆಯ್ಕೆಯು ಸಾಧಾರಣ ಸಂಗತಿಯಲ್ಲ. ಜಾಗತಿಕವಾದ ಸಹಸ್ರಾರು ಸಾಧಕರಲ್ಲಿ ಅತ್ಯುತ್ತಮರಾದವರನ್ನು, ಆಲ್ಫ್ರೆಡ್ ನೊಬೆಲ್ರವರ ಸದಾಶಯದಂತೆಯೇ ಪ್ರತೀ ವಿಭಾಗದಲ್ಲಿ ಗರಿಷ್ಠ ಮೂರು ಜನರನ್ನು ಮಾತ್ರವೇ ಆಯ್ಕೆ ಮಾಡಬೇಕು. ಜ್ಞಾನದ ಅಗಾಧತೆಯಲ್ಲಿ ಅನುಶೋಧಗಳು ತೆರೆದುಕೊಳ್ಳುತ್ತಾ ಹೊಂದಂತೆ ಅದರಲ್ಲೂ ವಿಭಾಗದಲ್ಲಿ ಬಹುಮಾನದ ಪ್ರಕ್ರಿಯೆಯು ಸಂಕೀರ್ಣವಾಗುತ್ತಲೇ ವಿಕಾಸಗೊಳ್ಳುತ್ತಿದೆ.
ಪ್ರತಿ ವರ್ಷ ಭೌತವಿಜ್ಞಾನ, ರಸಾಯನ ವಿಜ್ಞಾನ ಹಾಗೂ ಶರೀರಕ್ರಿಯಾ ವಿಜ್ಞಾನ ಅಥವಾ ವೈದ್ಯಕೀಯ ವಿಭಾಗದಲ್ಲಿ ವಿಜ್ಞಾನಿಗಳನ್ನು ಅವರ ಮಹತ್ತರ ಕೊಡುಗೆಗಳ ಆಧಾರದ ಮೇಲೆ ಗುರುತಿಸಬೇಕು. ಜೊತೆಯಲ್ಲಿ ಸಾಹಿತ್ಯಕ್ಕೂ ಮಹತ್ತರ ಕೊಡುಗೆ ನೀಡಿದ ವ್ಯಕ್ತಿಯನ್ನು ಗುರುತಿಸಬೇಕು. ಅಲ್ಲದೆ ಅಂತರರಾಷ್ಟ್ರೀಯ ಶಾಂತಿಗಾಗಿ ನೀಡಿದ ಕೊಡುಗೆಗಾಗಿ ವ್ಯಕ್ತಿ ಅಥವಾ ಸಂಸ್ಥೆಯನ್ನು ಗುರುತಿಸಬೇಕು. ಈ ವಿಭಾಗಗಳಲ್ಲಿ ಮಾತ್ರವೇ ಬಹುಮಾನಗಳನ್ನು ನೀಡಲು ಸ್ವತಃ ಆಲ್ಫ್ರೆಡ್ ನೊಬೆಲ್ ನಿರ್ಧರಿಸಿದ್ದು, ಐದು ವಿಭಾಗಗಳ ಬಹುಮಾನದ ಆಯ್ಕೆಯ ಜವಾಬ್ದಾರಿಯನ್ನು ನಾಲ್ಕು ಪ್ರಮುಖ ಸಂಸ್ಥೆಗಳಿಗೆ ವಹಿಸಿಕೊಟ್ಟು ಉಯಿಲು ಬರೆದಿದ್ದಾರೆ. ಇಡೀ ಆಯ್ಕೆಯ ಸಂಪೂರ್ಣ ಜವಾಬ್ದಾರಿ ಮತ್ತು ನಿರ್ಣಯಗಳು ಆ ಸಂಸ್ಥೆಗಳಿಗೆ ಮಾತ್ರವೇ ಸೀಮಿತ. ಅವುಗಳನ್ನು ಯಾರೂ ಪ್ರಶ್ನಿಸುವಂತಿಲ್ಲ.
ಸ್ವೀಡನ್ ದೇಶದ ಮೂರು ಸಂಸ್ಥೆಗಳು ಹಾಗೂ ನಾರ್ವೆಯ ಒಂದು ಸಂಸ್ಥೆಯು ಪ್ರತಿ ವರ್ಷ ಈ ಜವಾಬ್ದಾರಿಯನ್ನು ನಿರ್ವಹಿಸುತ್ತವೆ. ಸ್ವೀಡನ್ ದೇಶದ ಸಂಸ್ಥೆಗಳು ವಿಜ್ಞಾನ ಹಾಗೂ ಸಾಹಿತ್ಯದ ಆಯ್ಕೆಯನ್ನು ಹಾಗೂ ನಾರ್ವೆಯ ಸಂಸ್ಥೆಯು ಶಾಂತಿ ಪುರಸ್ಕಾರದ ಆಯ್ಕೆಯನ್ನು ಮಾಡುತ್ತವೆ. ಈ ನಾಲ್ಕೂ ಸಂಸ್ಥೆಗಳ ಪರಿಚಯವನ್ನು ಮುಂದೆ ವಿವರಿಸಲಾಗಿದೆ. ಇದರ ಜೊತೆಯಲ್ಲಿ 1969ರಲ್ಲಿ ಅರ್ಥವಿಜ್ಞಾನದಲ್ಲೂ ನೊಬೆಲ್ ಬಹುಮಾನವನ್ನ ಸ್ವೀಡಿಶ್ ಬ್ಯಾಂಕ್ ಸ್ಥಾಪಿಸಿದ್ದು, ಅದನ್ನು ನೊಬೆಲ್ ಹೆಸರಿನಲ್ಲಿಯೆ ನೀಡಲಾಗುತ್ತದೆ.
1. ರಾಯಲ್ ಸ್ವೀಡಿಶ್ ವಿಜ್ಞಾನ ಅಕಾಡೆಮಿ
ರಾಯಲ್ ಸ್ವೀಡಿಶ್ ವಿಜ್ಞಾನ ಅಕಾಡೆಮಿಯು 1739ರ ಜೂನ್ 2ರಂದು ಸ್ಥಾಪಿತವಾದ ವೈಜ್ಞಾನಿಕ ಸಂಸ್ಥೆ. ನಮಗೆಲ್ಲಾ ಜೀವಿವಿಜ್ಞಾನದಲ್ಲಿ ಜೀವಿ ಪ್ರಭೇದಗಳನ್ನು ಎರಡು ಹೆಸರುಗಳಾಗಿ ಕರೆಯುವ ದ್ವಿನಾಮ ಪದ್ದತಿ (Binomial Nomenclature) ತಿಳಿದಿದೆಯಲ್ಲವೆ? ಹಾಗೆ ಎರಡು ಹೆಸರುಗಳಿಂದ ಜೀವಿಗಳನ್ನು ಸಾರ್ವತ್ರಿಕವಾಗಿ ಕರೆಯುವುದನ್ನು ಮೊಟ್ಟ ಮೊದಲು ಆರಂಭಿಸಿದವರು ಸ್ವೀಡನ್ ದೇಶದ ಜೀವಿವಿಜ್ಞಾನಿ ಹಾಗೂ ನಿಸರ್ಗತಜ್ಞ ಕಾರ್ಲ್ ಲಿನೆಯಾಸ್. ಇದೇ ಕಾರ್ಲ್ ಲಿನೆಯಾಸ್ ಕೆಲವು ಗೆಳೆಯರ ಜೊತೆಗೂಡಿ ರಾಯಲ್ ಸ್ವೀಡಿಶ್ ವಿಜ್ಞಾನ ಅಕಾಡೆಮಿಯನ್ನು ಆರಂಭಿಸಿದರು. ಸ್ವತಃ ಆಲ್ಫ್ರೆಡ್ ನೊಬೆಲ್ ಕೂಡ ಈ ಅಕಾಡೆಮಿಯ ಸದಸ್ಯರಾಗಿದ್ದರು. ಈ ಸಂಸ್ಥೆಯು ಸ್ವೀಡನ್ ಅಲ್ಲದೆ ಇತರೇ ದೇಶದ ಹೆಸರಾಂತ ವ್ಯಕ್ತಿಗಳನ್ನೂ ಸದಸ್ಯರನ್ನಾಗಿ ಹೊಂದಿದೆ. ಸದ್ಯಕ್ಕೆ ಈ ಅಕಾಡೆಮಿಗೆ 470 ಸ್ವೀಡಿಶ್ ಹಾಗೂ 175 ಹೊರದೇಶಗಳ ಸದಸ್ಯರಿದ್ದಾರೆ. ಈ ಅಕಾಡೆಮಿಯು ಭೌತವಿಜ್ಞಾನ, ರಸಾಯನ ವಿಜ್ಞಾನ ಮತ್ತು ಅರ್ಥವಿಜ್ಞಾನದ ಬಹುಮಾನವನ್ನು ಆಯ್ಕೆ ಮಾಡಲು ಜವಾಬ್ದಾರನಾಗಿರುತ್ತದೆ. ಇದರ ಕೇಂದ್ರ ಕಛೇರಿಯು ಸ್ವೀಡನ್ನ ಸ್ಟಾಕ್ಹೋಮ್ ನಗರದಲ್ಲಿದೆ.
2. ಸ್ಟಾಕ್ಹೋಮ್ನ ಕರೊಲಿನ್ಸ್ಕಾ ಇನ್ಸ್ಟಿಟ್ಯೂಟ್ನ ನೊಬೆಲ್ ಅಸೆಂಬ್ಲಿ
ಸ್ಟಾಕ್ಹೋಮ್ನಲ್ಲಿ ಇರುವ ಕರೊಲಿನ್ಸ್ಕಾ ಇನ್ಸ್ಟಿಟ್ಯೂಟ್ ಒಂದು ವೈದ್ಯಕೀಯ ವಿಶ್ವವಿದ್ಯಾಲಯ. ಹತ್ತೊಂಬತ್ತನೆಯ ಶತಮಾನದ ಆದಿಯಲ್ಲಿ 1810ರಲ್ಲಿಯೆ ಆರಂಭವಾದ ಈ ವಿದ್ಯಾಲಯವು ವೈದ್ಯಕೀಯ ರಂಗದಲ್ಲಿ ಜಗದ್ವಿಖ್ಯಾತವಾದ ಬೃಹತ್ ಸಂಸ್ಥೆಗಳಲ್ಲೊಂದು. ಸುಮಾರು 6000ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳನ್ನೂ ಈ ಸಂಸ್ಥೆಯು ಹೊಂದಿದೆ. ವೈದ್ಯಕೀಯ ವಿಜ್ಞಾನದ ಬಹುತೇಕ ವಿಭಾಗಗಳನ್ನೂ ಹೊಂದಿರುವ ಈ ಸಂಸ್ಥೆಯು ಯೂರೋಪ್ನಲ್ಲಿ ಅತ್ಯಂತ ಹೆಚ್ಚು ಮನ್ನಣೆಗೆ ಪಾತ್ರವಾಗಿದೆ. ವಸ್ತುಗಳನ್ನು ರಸಾಯನಿಕ ಸೂತ್ರಗಳ ಮೂಲಕ ವಿವರಿಸುವುದನ್ನು ಕಂಡುಹಿಡಿದು ಆಧುನಿಕ ರಸಾಯನವಿಜ್ಞಾನದ ಪಿತಾಮಹರೆಂದು ಖ್ಯಾತರಾದ ಹಾಗೂ ಸಿಲಿಕಾನ್, ಸೆಲೆನಿಯಂ, ಸೆರಿಯಂ ಮತ್ತು ಥೋರಿಯಂ ಮೂಲವಸ್ತುಗಳನ್ನು ಅನ್ವೇಷಿಸಿದ ಜೆಕೊಬ್ ಬರ್ಜೇಲಿಯಸ್ ಈ ಸಂಸ್ಥೆಯಲ್ಲಿ ಪ್ರೊಫೆಸರ್ ಆಗಿದ್ದರು.
ಈ ವಿದ್ಯಾಲಯದ ಸುಮಾರು 50 ಜನ ವೈದ್ಯಕೀಯ ಪ್ರೊಫೆಸರ್ಗಳು ವಿಜ್ಞಾನಿಗಳನ್ನು ಒಳಗೊಂಡಂತೆ ಸಮಿತಿಯನ್ನು ರಚಿಸಲಾಗುತ್ತದೆ. ಅದನ್ನೇ ಕರೊಲಿನ್ಸ್ಕಾ ಇನ್ಸ್ಟಿಟ್ಯೂಟ್ನ ನೊಬೆಲ್ ಅಸೆಂಬ್ಲಿಯೆಂದು ಕರೆಯಲಾಗುತ್ತದೆ. ಈ ನೊಬೆಲ್ ಅಸೆಂಬ್ಲಿಯು ವೈದ್ಯಕೀಯ ವಿಜ್ಞಾನ ಅಥವಾ ಶರೀರಕ್ರಿಯಾ ವಿಜ್ಞಾನದ ನೊಬೆಲ್ ಬಹುಮಾನವನ್ನು ಪ್ರತಿ ವರ್ಷ ಆಯ್ಕೆ ಮಾಡುತ್ತದೆ.
3. ರಾಯಲ್ ಸ್ವೀಡಿಶ್ ಅಕಾಡೆಮಿ
ಸ್ವೀಡಿಶ್ ಅಕಾಡೆಮಿಯು 1786ರಲ್ಲಿಯೆ ಆರಂಭವಾದ ಸ್ವತಂತ್ರ ಸಾಂಸ್ಕೃತಿಕ ಸಂಸ್ಥೆ. ಅಂದಿನ ಸ್ವೀಡನ್ ದೇಶದ ರಾಜ (Gustav III) ಅದರ ಆರಂಭದ ಬುನಾದಿಯನ್ನು ಹಾಕಿಕೊಟ್ಟ. ಸ್ವೀಡನ್ ದೇಶದ ಭಾಷೆ, ಸಾಂಸ್ಕೃತಿಕ ಇತಿಹಾಸ ಮುಂತಾದ ವಿಚಾರಗಳಲ್ಲಿ ಈ ಸಂಸ್ಥೆಯು ಆಸಕ್ತವಾಗಿದೆ. ಇದೇ ಸ್ವೀಡಿಶ್ ಅಕಾಡೆಮಿಯು ನೊಬೆಲ್ ಸಾಹಿತ್ಯದ ಆಯ್ಕೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ಈ ಅಕಾಡೆಮಿಯಲ್ಲಿ 18 ಜನ ಸದಸ್ಯರು ಇರುತ್ತಾರೆ.
4. ನಾರ್ವೆಯ ನೊಬೆಲ್ ಸಮಿತಿ
ನಾರ್ವೆಯ ನೊಬೆಲ್ ಸಮಿತಿಯು ನಾರ್ವೆ ದೇಶದ ಪಾರ್ಲಿಮೆಂಟು ನಿರ್ಧರಿಸುವ ಸಮಿತಿ. ಇದನ್ನು ನಾರ್ವೆಯ ನೊಬೆಲ್ ಇನ್ಸ್ಟಿಟ್ಯೂಟ್ ಎಂದೇ ಕರೆಯಲಾಗುತ್ತದೆ. ಇದು ನೊಬೆಲ್ ಶಾಂತಿ ಪುರಸ್ಕಾರದ ಜವಾಬ್ದಾರಿಯನ್ನು ಹೊಂದಿದೆ. ಉಳಿದೆಲ್ಲಾ ಬಹುಮಾನಗಳನ್ನು ಸ್ವೀಡನ್ ದೇಶಕ್ಕೆ ನಿರ್ವಹಿಸುವ ಜವಾಬ್ದಾರಿಕೊಟ್ಟು ಶಾಂತಿ ಪುರಸ್ಕಾರಕ್ಕೆಂದು ನಾರ್ವೆಗೆ ವಹಿಸಿದ್ದ ಕಾರಣಗಳ ಬಗ್ಗೆ ಆಲ್ಫ್ರಡ್ ನೊಬೆಲ್ ಯಾವುದೇ ವಿವರಗಳನ್ನು ಉಯಿಲಿನಲ್ಲಿ ಬರೆದಿಟ್ಟಿಲ್ಲ. ಅಂತರರಾಷ್ಟ್ರೀಯ ಶಾಂತಿಯ ಬಗೆಗೆ ಕೆಲಸವನ್ನು ನಿರ್ವಹಿಸುವ ಆಯ್ಕೆಯನ್ನು ನಾರ್ವೆಯ ಪಾರ್ಲಿಮೆಂಟು ರಚಿಸುವ ಈ ಸಮಿತಿಯು ನಿರ್ವಹಿಸುತ್ತದೆ. ಶಾಂತಿ ಪುರಸ್ಕಾರವು ಇತರೇ ವಿಷಯವಾರು ಪುರಸ್ಕಾರಗಳಂತೆ ನಿರ್ಧರಿತವಾಗದೆ ವಿಭಿನ್ನವಾಗಿರುತ್ತವೆ. ಅದನ್ನು ಮುಂದೆ ನೋಡಬಹುದು. ಈ ನೊಬೆಲ್ ಸಮಿತಿಯು ನಾರ್ವೇಜಿಯನ್ ನೊಬೆಲ್ ಇನ್ಸ್ಟಿಟ್ಯೂಟ್ ಓಸ್ಲೋದಿಂದ ಕೆಲಸವನ್ನು ನಿರ್ವಹಿಸುತ್ತದೆ.
ನೊಬೆಲ್ ಆಯ್ಕೆಯ ಚಟುವಟಿಕೆಗಳು
ಪ್ರತಿ ವರ್ಷದ ನೊಬೆಲ್ ಚಟುವಟಿಕೆಗಳು ಹಿಂದಿನ ವರ್ಷವೇ ಆರಂಭವಾಗಿರುತ್ತವೆ. ಉದಾಹರಣೆಗೆ 2024ರ ನೊಬೆಲ್ ಕಾರ್ಯಕ್ರಮಗಳು 2023ರ ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗಿದ್ದವು. ಅಂದರೆ ಒಂದು ವರ್ಷದ ನೊಬೆಲ್ ಪ್ರಕ್ರಿಯೆಯು ಸರಿ ಸುಮಾರು 15 ತಿಂಗಳನ್ನು ತೆಗೆದುಕೊಳ್ಳುತ್ತದೆ. ಹಿಂದಿನ ವರ್ಷದ ಸೆಪ್ಟೆಂಬರ್ನಿಂದ ಆರಂಭವಾಗಿ, ಆಯ್ಕೆಯಾದವರಿಗೆ ಬಹುಮಾನಗಳನ್ನು ಕೊಡುವ ಮುಂದಿನ ವರ್ಷದ ಡಿಸೆಂಬರ್ ಸಮಾರಂಭದವರೆಗೂ ಒಟ್ಟು ಹದಿನೈದು ತಿಂಗಳನ್ನು ತೆಗೆದುಕೊಳ್ಳುತ್ತದೆ. ಹಾಗಾಗಿ ಹೆಚ್ಚೂ ಕಡಿಮೆ ಪ್ರತೀ ವರ್ಷ ಸೆಪ್ಟೆಂಬರ್ನಲ್ಲಿಯೇ ಮುಂದಿನ ವರ್ಷದಲ್ಲಿ ಮುಖ್ಯವಾಗಿ ವಿಜ್ಞಾನದಲ್ಲಿ ಆಯ್ಕೆಯನ್ನು ಮಾಡಲು ಗೌಪ್ಯವಾಗಿ ಕರೆ ಕೊಡಲಾಗುತ್ತದೆ. ಅಂದರೆ ನೊಬೆಲ್ ಸಮಿತಿಯು ಆಗ ಪ್ರತೀ ವಿಭಾಗದಲ್ಲೂ ಉದಾಹರಣೆಗೆ ಭೌತವಿಜ್ಞಾನದಲ್ಲಿ ಸುಮಾರು 3000 ಜನ ವಿವಿಧ ಹುದ್ದೆಗಳ ಹಾಗೂ ಹೆಸರಾಂತ ವಿಜ್ಞಾನಿಗಳನ್ನು ಆ ವರ್ಷದ ಶ್ರೇಷ್ಠ ಕೊಡುಗೆಯನ್ನು ನೀಡಿದ ವ್ಯಕ್ತಿಯನ್ನು ಶಿಫಾರಸು ಮಾಡಲು ಕೇಳಿಕೊಳ್ಳುತ್ತದೆ. ಇವರಲ್ಲಿ ಈಗಾಗಲೇ ನೊಬೆಲ್ ಪಡೆದವರೂ ಇರುತ್ತಾರೆ. ಜೊತೆಗೆ ಪ್ರತಿ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯ ನಿರ್ವಹಿಸಿದ ವಿಜ್ಞಾನಿಗಳು ಇರುತ್ತಾರೆ. ಇವರಲ್ಲಿ 2500 ದಿಂದ 2900ರವರೆಗೂ ಅಥವಾ ಇನ್ನೂ ಹೆಚ್ಚು ಶಿಫಾರಸ್ಸುಗಳು ಬಂದು ಸೇರುತ್ತವೆ. ಇವುಗಳಲ್ಲಿ ಹಲವಾರು ಪುನರಾವರ್ತನೆಗಳನ್ನೂ ಹೊಂದಿರುತ್ತವೆ. ಅಂದರೆ ಒಬ್ಬನೇ ವಿಜ್ಞಾನಿಯ ಹೆಸರನ್ನು ಹಲವರು ಶಿಫಾರಸ್ಸು ಮಾಡಿರುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಒಟ್ಟು ಸಂಖ್ಯೆಯು ಕಡಿಮೆಯಾಗುತ್ತದೆ. ಇದೇ ಮಾದರಿಯ ಆಯ್ಕೆಯು ಭೌತವಿಜ್ಞಾನ, ರಸಾಯನವಿಜ್ಞಾನ, ವೈದ್ಯಕೀಯ ಅಥವಾ ಶರೀರಕ್ರಿಯಾವಿಜ್ಞಾನ, ಅರ್ಥವಿಜ್ಞಾನದಲ್ಲಿಯೂ ನಡೆಯುತ್ತದೆ. ಸಾಹಿತ್ಯಕ್ಕೂ ಸಹ ಇದೇ ಮಾದರಿಯ ಶಿಫಾರಸ್ಸುಗಳನ್ನು ತರಿಸಿಕೊಳ್ಳಲಾಗುತ್ತದೆ. ಆದರೆ ಶಾಂತಿಗಾಗಿ ಕೊಡುವ ನೊಬೆಲ್ ಬಹುಮಾನದ ಆಯ್ಕೆಯು ಇದಕ್ಕಿಂತ ಭಿನ್ನವಾಗಿರುತ್ತದೆ.
ಪ್ರತಿ ವರ್ಷವೂ ಜಗತ್ತಿನಾದ್ಯಂತ ಹಲವಾರು ವಿಶ್ವವಿದ್ಯಾಲಯಗಳ ಪ್ರೊಫೆಸರ್ಗಳನ್ನೂ, ವಿಜ್ಞಾನಿಗಳನ್ನೂ, ಈ ಹಿಂದೆ ನೊಬೆಲ್ ಬಹುಮಾನ ಪಡೆದವರನ್ನೂ ಅಲ್ಲದೇ ಹಲವಾರು ದೇಶಗಳ ಪಾರ್ಲಿಮೆಂಟ್ ಸದಸ್ಯರನ್ನೂ ಆಯಾ ವರ್ಷದ ಉನ್ನತ ಸಾಧಕರನ್ನು ನಾಮನಿರ್ದೇಶನ ಮಾಡಲು ಕೋರಲಾಗುತ್ತದೆ. ಹೀಗೆ ಕೋರುವಾಗ ಹಲವು ರಾಷ್ಟ್ರಗಳೂ ಸಂಸ್ಥೆಗಳೂ ವೈವಿಧ್ಯಮಯ ವಿಶ್ವವಿದ್ಯಾಲಯಗಳೂ ಪ್ರತಿನಿಧಿಸುವಂತೆ ನೋಡಿಕೊಳ್ಳಲಾಗುತ್ತದೆ. ಇದರಿಂದ ಜಾಗತಿಕವಾಗಿ ಉನ್ನತ ಸಾಧಕರನ್ನು ಆಯ್ಕೆಗೊಳಿಸುವುದು ಸುಲಭವಾಗುತ್ತದೆ. ಪ್ರತೀ ವರ್ಷವೂ ಈ ಆಯ್ಕೆಯ ಪ್ರಕ್ರಿಯೆಯನ್ನು ಸಾಧ್ಯವಾದಷ್ಟೂ ಸುಧಾರಿಸುವಂತೆ ನೋಡಿಕೊಳ್ಳಲಾಗುತ್ತಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗದಂತೆ ನಡೆಸಿಕೊಳ್ಳುವ ಜವಾಬ್ದಾರಿಯನ್ನು ಒಪ್ಪಿ ನಿರ್ವಹಿಸಲಾಗುತ್ತದೆ.
ವಿಜ್ಞಾನಗಳ ಪ್ರಕಾರದ ನೊಬೆಲ್ ಪುರಸ್ಕಾರಗಳ ಆಯ್ಕೆ
ಭೌತವಿಜ್ಞಾನ ಮತ್ತು ರಸಾಯನವಿಜ್ಞಾನಗಳ ನಾಮನಿರ್ದೇಶನ ಮತ್ತು ಆಯ್ಕೆಯ ಪ್ರಕ್ರಿಯೆಗಳು ಹೆಚ್ಚೂ ಕಡಿಮೆ ಒಂದೇ ಬಗೆಯಲ್ಲಿ ನಡೆಯುತ್ತವೆ. ಈ ಎರಡೂ ವಿಜ್ಞಾನಗಳ ಆಯ್ಕೆಯ ಜವಾಬ್ದಾರಿಯನ್ನು ರಾಯಲ್ ಸ್ವೀಡಿಶ್ ವಿಜ್ಞಾನ ಅಕಾಡೆಮಿಯು ನಿರ್ವಹಿಸುತ್ತದೆ. ಅಕಾಡೆಮಿಯು ಭೌತವಿಜ್ಞಾನ ಹಾಗೂ ರಸಾಯನ ವಿಜ್ಞಾನದಲ್ಲಿ ಒಂದೊಂದು ಆಯ್ಕೆ ಸಮಿತಿಯನ್ನು ರಚಿಸುತ್ತದೆ. ಅಧ್ಯಕ್ಷರು, ಕಾರ್ಯದರ್ಶಿ ಇರುವಂತೆ ಐದು ಜನರ ಆಯ್ಕೆ ಸಮಿತಿಯು ರಚನೆಯಾಗಿರುತ್ತದೆ. ಇದೇ ಸಮಿತಿಯು ಬಹುಮಾನಕ್ಕೆ ಸೂಕ್ತ ವ್ಯಕ್ತಿಗಳ ನಾಮನಿರ್ದೇಶನ ಮಾಡಲು ಪತ್ರಗಳನ್ನು ಜಗತ್ತಿನಾದ್ಯಂತ ವಿವಿಧ ಅರ್ಹರಿಗೆ ರವಾನಿಸುತ್ತದೆ. ಸುಮಾರಾಗಿ ಈ ಎರಡೂ ವಿಜ್ಞಾನಗಳಲ್ಲಿ ನಾಮನಿರ್ದೇಶನ ಮಾಡುವವರು ಒಂದೇ ಬಗೆಯವರಾಗಿರುತ್ತಾರೆ. ಹೀಗೆ ಹೆಸರುಗಳನ್ನು ಸೂಚಿಸುವವರೆಂದರೆ ರಾಯಲ್ ಸ್ವೀಡಿಶ್ ವಿಜ್ಞಾನ ಅಕಾಡೆಮಿಯ ಸದಸ್ಯರು. ನೊಬೆಲ್ ಆಯ್ಕೆ ಸಮಿತಿಯ ಸದಸ್ಯರು, ಆಯಾ ವಿಜ್ಞಾನಗಳಲ್ಲಿ ನೊಬೆಲ್ ಪಡೆದ ವಿಜ್ಞಾನಿಗಳು, ಸ್ವೀಡನ್, ನಾರ್ವೆ, ಫಿನ್ಲೆಂಡ್, ಡೆನ್ಮಾರ್ಕ್, ಐಸ್ಲ್ಯಾಂಡ್ ದೇಶಗಳ ವಿವಿಧ ವಿಶ್ವವಿದ್ಯಾಲಯಗಳ ಆಯಾ ವಿಜ್ಞಾನದ ಪ್ರೊಫೆಸರ್ಗಳು. ಜೊತೆಗೆ ಇತರೇ ಯಾವುದೇ ದೇಶದ ಕನಿಷ್ಠ ಆರು ವಿಶ್ವವಿದ್ಯಾಲಯಗಳ ವಿಜ್ಞಾನ ವಿಭಾಗಗಳಲ್ಲೂ ಮುಖ್ಯಸ್ಥರಾಗಿ ಇರುವವರು ಹಾಗೂ ಸ್ವೀಡಿಶ್ ಅಕಾಡೆಮಿಯು ಬಯಸುವ ಯಾವುದೇ ಇತರೇ ಸದಸ್ಯರು ನಿರ್ದೇಶನ ಮಾಡಲು ಅರ್ಹರಾಗಿರುತ್ತಾರೆ. ಭೌತವಿಜ್ಞಾನದ ನೊಬೆಲ್ ಪುರಸ್ಕೃತರು ಮತ್ತು ಭೌತವಿಜ್ಞಾನದ ಆಯ್ಕೆ ಸಮಿತಿಯ ಸದಸ್ಯರು ರಸಾಯನವಿಜ್ಞಾನಕ್ಕೂ ನಾಮನಿರ್ದೇಶನ ಮಾಡಲು ಅರ್ಹರಾಗಿರುತ್ತಾರೆ. ಆದರೆ ರಸಾಯನ ವಿಜ್ಞಾನಿಗಳು ಮಾತ್ರ ರಸಾಯನ ವಿಜ್ಞಾನಕ್ಕೆ ಸೀಮಿತವಾಗಿರುತ್ತಾರೆ. ಎಲ್ಲಾ ಸಂದರ್ಭಗಳಲ್ಲಿಯೂ ಯಾರೂ ತಾವಾಗಿಯೇ ಅರ್ಜಿ ಸಲ್ಲಿಸುವಂತಿಲ್ಲ. ಆಯ್ಕೆಗಾಗಿ ಕೇವಲ ನಾಮ ನಿರ್ದೇಶನದಿಂದ ಮಾತ್ರವೇ ಸ್ವೀಕರಿಸಲಾಗುತ್ತದೆ.
ರಾಯಲ್ ಸ್ವೀಡಿಶ್ ವಿಜ್ಞಾನ ಅಕಾಡೆಮಿಯು ಭೌತ ಹಾಗೂ ರಸಾಯನ ವಿಜ್ಞಾನಗಳೆರಡರ ಆಯ್ಕೆಯ ಹೆಸರುಗಳನ್ನು ತರಿಸಿಕೊಂಡ ಮೇಲೆ, ಸಮಿತಿಯು ಆಯ್ಕೆ ಮಾಡುವ ಸಂಪೂರ್ಣ ಹಕ್ಕನ್ನು ಹೊಂದಿರುತ್ತದೆ. ಆಯ್ಕೆ ಸಮಿತಿಯಲ್ಲಿ ಸಾಮಾನ್ಯವಾಗಿ ಆಯಾ ವಿಜ್ಞಾನ/ಜ್ಞಾನ ಶಿಸ್ತುಗಳ ತಜ್ಞರೇ ಇದ್ದು ಒಮ್ಮತದಲ್ಲಿ ಆಯ್ಕೆ ನಡೆಯುತ್ತದೆ. ಆಯ್ಕೆಯನ್ನು ಯಾರೂ ಪುನರ್ ಪರಿಶೀಲಿಸುವಂತೆ ಪ್ರಶ್ನಿಸುವಂತಿಲ್ಲ.
ವೈದ್ಯಕೀಯ ಅಥವಾ ಶರೀರಕ್ರಿಯಾ ವಿಜ್ಞಾನದ ಆಯ್ಕೆಯನ್ನು ಸ್ಟಾಕ್ಹೋಮ್ನ ಕರೊಲಿನ್ಸ್ಕಾ ಇನ್ಸ್ಟಿಟ್ಯೂಟ್ನ ನೊಬೆಲ್ ಅಸೆಂಬ್ಲಿಯು ನಿರ್ವಹಿಸುತ್ತದೆ. ಈ ವಿಭಾಗದ ಆಯ್ಕೆ ಸಮಿತಿಯು ನೊಬೆಲ್ ಪಟ್ಟಿ ತಯಾರಿಗೆ ನಾಮ ನಿರ್ದೇಶನದಿಂದ ಹೆಸರನ್ನು ಒಟ್ಟು ಮಾಡುತ್ತದೆ. ನಾಮ ನಿರ್ದೇಶನ ಮಾಡಲು ಅರ್ಹರೆಂದರೆ ನೊಬೆಲ್ ಅಸೆಂಬ್ಲಿಯ ಸದಸ್ಯರು, ಸ್ವೀಡಿಶ್ ಅಕಾಡೆಮಿಯ ವೈದ್ಯಕೀಯ ಮತ್ತು ಜೀವಿವಿಜ್ಞಾನದ ಸದಸ್ಯರು, ವೈದ್ಯಕೀಯ/ಶರೀರಕ್ರಿಯಾ ವಿಜ್ಞಾನದ ನೊಬೆಲ್ ಪುರಸ್ಕೃತರು, ಸ್ವೀಡನ್, ಡೆನ್ಮಾರ್ಕ್, ಫಿನ್ಲ್ಯಾಂಡ್ ಐಸ್ಲ್ಯಾಂಡ್ ಹಾಗೂ ನಾರ್ವೆ ದೇಶಗಳ ವಿವಿಧ ವೈದ್ಯಕೀಯ ವಿಭಾಗದ ಪ್ರೊಫೆಸರ್ಗಳು, ವಿಜ್ಞಾನಿಗಳು, ಅದೇ ರೀತಿಯ ಇತರೇ ಯಾವುದೇ ದೇಶದ ಆರಕ್ಕೂ ಕಡಿಮೆ ಇಲ್ಲದಂತೆ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವಿಭಾಗೀಯ ಮುಖ್ಯಸ್ಥರಾಗಿರುವವರು ಹಾಗೂ ನೊಬೆಲ್ ಅಸೆಂಬ್ಲಿಯು ಸೂಚಿಸುವ ಯಾವುದೇ ವಿಜ್ಞಾನಿಗಳು.
ಸ್ಟಾಕ್ಹೋಮ್ನ ಕರೊಲಿನ್ಸ್ಕಾ ಇನ್ಸ್ಟಿಟ್ಯೂಟ್ನ ನೊಬೆಲ್ ಅಸೆಂಬ್ಲಿಯು ಒಟ್ಟು ಐದು ಜನರ ತಂಡವಾಗಿದ್ದು ಆಯ್ಕೆಗಾಗಿ ಹೆಸರು ಸೂಚಿಸಲು ಅರ್ಹ ಅಭ್ಯರ್ಥಿಗಳಿಗೆ ಸೂಚಿಸುತ್ತದೆ. ನಾಮನಿರ್ದೇಶನದ ಪಟ್ಟಿಯಂತೆ ವಿವರವಾಗಿ ಪರಿಶೋಧಿಸಿ ಅಂತಿಮವಾಗಿ ಆಯ್ಕೆ ಮಾಡುವ ಸಂಪೂರ್ಣ ಹಕ್ಕನ್ನು ಹೊಂದಿರುತ್ತದೆ. ನೇರ ನೇಮಕಕ್ಕೆ ಇಲ್ಲೂ ಅವಕಾಶವಿಲ್ಲ. ಹಾಗಾಗಿ ಯಾರೂ ಬಹುಮಾನಕ್ಕೆಂದು ಅರ್ಜಿ ಸಲ್ಲಿಸುವಂತಿಲ್ಲ.
ಅರ್ಥವಿಜ್ಞಾನದ ನೊಬೆಲ್ ಬಹುಮಾನವನ್ನು ರಾಯಲ್ ಸ್ವೀಡಿಶ್ ವಿಜ್ಞಾನ ಅಕಾಡೆಮಿಯ ಅರ್ಥವಿಜ್ಞಾನ ಸಮಿತಿಯು ನಿರ್ವಹಿಸುತ್ತದೆ. ಅಕಾಡೆಮಿಯ ಸದಸ್ಯರು, ಬಹುಮಾನ ಸಮಿತಿಯ ಸದಸ್ಯರು, ಈಗಾಗಲೇ ಅರ್ಥವಿಜ್ಞಾನದ ನೊಬೆಲ್ ಬಹುಮಾನಿತರು, ಸ್ವೀಡನ್, ನಾರ್ವೆ, ಡೆನ್ಮಾರ್ಕ್, ಫಿನ್ಲ್ಯಾಂಡ್ ಹಾಗೂ ಐಸ್ಲ್ಯಾಂಡ್ನ ವಿವಿಧ ವಿಶ್ವವಿದ್ಯಾಲಯಗಳ ಪ್ರೊಫೆಸರ್ಗಳು ಮತ್ತು ವಿಜ್ಞಾನಿಗಳು, ಜೊತೆಗೆ ಯಾವುದೇ ದೇಶದ ಆರಕ್ಕೂ ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ ವಿಭಾಗದ ಮುಖ್ಯಸ್ಥರಾದವರು ಹಾಗೂ ಸಮಿತಿಯು ಸೂಚಿಸುವ ಯಾವುದೇ ವ್ಯಕ್ತಿಯು ನಾಮನಿರ್ದೇಶನ ಮಾಡಬಹುದು. ಸೂಚಿಸಲ್ಪಟ್ಟ ಹೆಸರುಗಳ ಪಟ್ಟಿಯ ಪರಿಶೀಲನೆ ಆಯ್ಕೆ ಎಲ್ಲವೂ ಸಮಿತಿಯ ಹೊಣೆ ಹಾಗೂ ಸಂಪೂರ್ಣ ಜವಾಬ್ದಾರಿಯುತ ಹಕ್ಕು.
ಎಲ್ಲಾ ವಿಜ್ಞಾನ ಪ್ರಕಾರಗಳ ಬಹುಮಾನವನ್ನು ಸೆಪ್ಟೆಂಬರ್ ತಿಂಗಳಲ್ಲಿ ಹೆಸರು ಸೂಚಿಸುವ ಸದಸ್ಯರಿಗೆ ಪತ್ರ ಬರೆಯುವ ಮೂಲಕ ಆರಂಭಿಸಲಾಗುತ್ತದೆ. ಅವರೆಲ್ಲರೂ ಜನವರಿ 31ರೊಳಗೆ ತಮ್ಮ ಆಯ್ಕೆಯ ಹೆಸರುಗಳನ್ನು ನೊಬೆಲ್ ಸಮಿತಿಗೆ ಕಳಿಸಬೇಕು. ನಿರ್ದೇಶಿತ ಹೆಸರುಗಳ ಪಟ್ಟಿಯನ್ನು ಆಯಾ ವಿಭಾಗದ ತಜ್ಞರೊಂದಿಗೆ ಚರ್ಚಿಸಿ ಸೂಚಿಸಿದ ವ್ಯಕ್ತಿಗಳ ಸಾಧನೆಯ ಪರಿಶೀಲನೆಯನ್ನು ಮುಂದಿನ ಮೇ ತಿಂಗಳವರೆಗೂ ನಡೆಸಲಾಗುತ್ತದೆ. ಮುಂದೆ ಜೂನ್ನಿಂದ ಸೆಪ್ಟೆಂಬರ್ವರೆಗೆ ಮೂರು ತಿಂಗಳು ಸೂಚಿತ ಆಯ್ಕೆಯ ಅಭ್ಯರ್ಥಿಗಳ ವರದಿಯನ್ನು ತಯಾರಿಸಲಾಗುತ್ತದೆ. ಆ ವರದಿಯನ್ನು ಅನುಸರಿಸಿ, ಆಯ್ಕೆಯ ಶಿಫಾರಸ್ಸನ್ನು ಸಮಿತಿಯು ಮಾಡುತ್ತದೆ. ಅದನ್ನು ಆಯಾ ಸಂಸ್ಥೆಗೆ ಕೊಡಲಾಗುತ್ತದೆ. ಆಯಾ ಜವಾಬ್ದಾರ ಸಂಸ್ಥೆಯು ಅಕ್ಟೋಬರ್ ಮೊದಲ ವಾರದಲ್ಲಿ ಆಯ್ಕೆಯಾದವರ ಪಟ್ಟಿಯನ್ನು ಘೋಷಿಸುತ್ತದೆ.
ಸಾಹಿತ್ಯದ ನೊಬೆಲ್ ಬಹುಮಾನದ ತಯಾರಿ, ಆಯ್ಕೆ- ಇತ್ಯಾದಿ.
ಸಾಹಿತ್ಯದ ನೊಬೆಲ್ ಬಹುಮಾನವನ್ನು ಸ್ವೀಡಿಶ್ ಅಕಾಡೆಮಿಯು ನಿರ್ವಹಿಸುತ್ತದೆ. ಆಯ್ಕೆಯ ಸಮಿತಿಗೆ ನಾಮನಿರ್ದೇಶನವನ್ನು ಅಕಾಡೆಮಿಯ ಸದಸ್ಯರು, ಇತರೇ ಸಾಹಿತ್ಯಿಕ ಅಕಾಡೆಮಿಗಳ ಅಧ್ಯಕ್ಷರು, ವಿವಿಧ ವಿಶ್ವವಿದ್ಯಾಲಯಗಳ ಸಾಹಿತ್ಯದ ಪ್ರೊಫೆಸರ್ಗಳು ಮತ್ತು ಈಗಾಗಲೇ ಸಾಹಿತ್ಯದ ನೊಬೆಲ್ ಪಡೆದವರು ಸಾಹಿತ್ಯದ ನೊಬೆಲ್ ಬಹುಮಾನಕ್ಕೆ ನಾಮನಿರ್ದೇಶನವನ್ನು ಮಾಡಬಹುದು. ಸಾಹಿತ್ಯದ ಆಯ್ಕೆ ಸಮಿತಿಯಲ್ಲಿ ಅಕಾಡೆಮಿಯ ಸುಮಾರು ಐದು ಜನ ಸದಸ್ಯರು ಆಯ್ಕೆ ಪ್ರಕ್ರಿಯೆಯನ್ನು ನಿರ್ವಹಿಸುತ್ತಾರೆ.
ಸೆಪ್ಟೆಂಬರ್ನಲ್ಲಿ ಸಮಿತಿಯು ಸಾಹಿತ್ಯದಲ್ಲಿ ಅರ್ಹ ವ್ಯಕ್ತಿಗಳ ಹೆಸರುಗಳನ್ನು ಸೂಚಿಸಲು ಸುಮಾರು 500-800 ಸದಸ್ಯರಿಗೆ ಪತ್ರ ಬರೆಯುತ್ತದೆ. ನಾಮ ನಿರ್ದೇಶನದ ಅರ್ಹ ಸದಸ್ಯರು ಹೆಸರುಗಳನ್ನು ಸೂಚಿಸುವ ಫಾರಂಗಳನ್ನು ಜನವರಿ 31ರೊಳಗೆ ಸಮಿತಿಗೆ ತಲುಪಿಸಬೇಕು. ಮುಂದೆ ಸಮಿತಿಯು ಏಪ್ರಿಲ್ ಒಳಗೆ ಸೂಚಿತ ಹೆಸರುಗಳಲ್ಲಿ 15-20 ಮಂದಿಯ ಆಯ್ಕೆ ಪಟ್ಟಿಯನ್ನು ತಯಾರಿಸುತ್ತದೆ. ಕೊನೆಗೆ ಅಕಾಡೆಮಿಯು ಮೇ ತಿಂಗಳಲ್ಲಿ ೫ ಮಂದಿ ಸಾಹಿತಿಗಳ ಅಂತಿಮ ಪಟ್ಟಿಯನ್ನು ತಯಾರಿಸುತ್ತದೆ. ಮುಂದಿನ ಮೂರು ತಿಂಗಳು ಜೂನ್ನಿಂದ ಆಗಸ್ಟ್ನಲ್ಲಿ ಆ ಆಯ್ದ ಐದು ಮಂದಿಯ ಸಾಹಿತಿಗಳ ಕೃತಿಗಳ ಓದು ನಡೆಯುತ್ತದೆ. ಆ ಮೂಲಕ ಐದು ವ್ಯಕ್ತಿಗಳಲ್ಲಿ ಓರ್ವ ಅರ್ಹರನ್ನು ಆ ವರ್ಷದ ಸೆಪ್ಟೆಂಬರ್ ವೇಳೆಗೆ ಅಂತಿಮಗೊಳಿಸಿ ವ್ಯಕ್ತಿಯನ್ನು ಬಹುಮಾನಕ್ಕೆ ನಿರ್ಧರಿಸಲಾಗುತ್ತದೆ. ಅಕ್ಟೋಬರ್ ಮೊದಲ ವಾರದಲ್ಲಿ ಆಯ್ಕೆಯ ಫಲಿತಾಂಶವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತದೆ. ಇಲ್ಲೂ ಸಹಾ ಯಾರೂ ನೇರವಾಗಿ ಅರ್ಜಿಯನ್ನು ಸಲ್ಲಿಸುವಂತಿಲ್ಲ.
ನೊಬೆಲ್ ಶಾಂತಿ ಪುರಸ್ಕಾರದ ಆಯ್ಕೆ
ನಾರ್ವೆಯ ನೊಬೆಲ್ ಸಮಿತಿಯು ಶಾಂತಿ ಪುರಸ್ಕಾರವನ್ನು ಆಯ್ಕೆ ಮಾಡುವ ಅಧಿಕಾರವನ್ನು ಹೊಂದಿರುತ್ತದೆ. ಈ ಸಮಿತಿಯನ್ನು ನಾರ್ವೆ ದೇಶದ ಪಾರ್ಲಿಮೆಂಟು ನಿರ್ಧರಿಸುತ್ತದೆ. ಹಾಗಾಗಿ ಇದು ನಾರ್ವೆಯ ಪಾರ್ಲಿಮೆಂಟನ ನಿರ್ಧಾರಕ್ಕೆ ಒಳಪಟ್ಟಿದೆ. ಈ ಸಮಿತಿಯಲ್ಲಿ ಐದು ಜನರು ಸದಸ್ಯರಿದ್ದು ಅವರಿಗೆ ಆಯ್ಕೆ ಇತ್ಯಾದಿ ಪ್ರಕ್ರಿಯೆಯಲ್ಲಿ ಸಲಹೆ, ಸಮಾಲೋಚನೆಗೆಂದು ವಿಶೇಷ ತಜ್ಞರು ಸಲಹೆಗಾರರಾಗಿರುತ್ತಾರೆ.
ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ ನಾಮನಿರ್ದೇಶನ ಮಾಡಲು ಯಾವುದೇ ದೇಶದ ಅಸೆಂಬ್ಲಿಯ ಸದಸ್ಯರು, ಪಾರ್ಲಿಮೆಂಟ್ ಸದಸ್ಯರು, ಅಂತರರಾಷ್ಟ್ರೀಯ ನ್ಯಾಯಾಲಯದ ಸದಸ್ಯರು, ಅಂತರರಾಷ್ಟ್ರೀಯ ಕಾನೂನು ಸಂಸ್ಥೆ ಸ್ವಿಜರ್ಲ್ಯಾಂಡ್ ಸದಸ್ಯರು, ನ್ಯಾಯಾಲಯ ವಿಶ್ವವಿದ್ಯಾಲಯದ ಪ್ರೊಫೆಸರ್ಗಳು, ನೊಬೆಲ್ ಶಾಂತಿ ಪುರಸ್ಕೃತರು. ನಾರ್ವೆ ನೊಬೆಲ್ ಸಮಿತಿಯ ಮಾಜಿ ಹಾಗೂ ಹಾಲಿ ಸದಸ್ಯರು ಮಾತ್ರ ಅರ್ಹರಾಗಿರುತ್ತಾರೆ.
ನೊಬೆಲ್ ಪುರಸ್ಕಾರಗಳ ಆಯ್ಕೆಯು ವರ್ಷದಿಂದ ವರ್ಷಕ್ಕೆ ಸಂಕೀರ್ಣವಾಗುತ್ತಲೇ ಇದೆ. ವಿಜ್ಞಾನಗಳ ಸಂಶೋಧನೆಗಳು ಹೆಚ್ಚಿನ ಪಾಲು ಹಲವು ಮನಸ್ಸುಗಳ ಫಲಿತವಾಗಿರುವ ಸಂಭವವೇ ಹೆಚ್ಚು. ಹಾಗಾಗಿ ಮೂರೇ ವ್ಯಕ್ತಿಗಳನ್ನು ಗುರುತಿಸುವ ಬಹುದೊಡ್ಡ ಸಂಕೀರ್ಣತೆಯು ಕಗ್ಗಂಟಾಗುತ್ತಲೇ ಬೆಳೆಯುತ್ತಿದೆ. ಇದನ್ನು ಬದಲಾಯಿಸಲು ನೊಬೆಲ್ ಅವರ ಉಯಿಲು ಅಡ್ಡ ಬರುತ್ತದೆ. ಆದರೆ ಸಂದರ್ಭ ಬದಲಾವಣೆಗೆ ಒತ್ತಾಯಿಸುತ್ತಿದೆ. ಇಂತಹದನ್ನು ನಿಭಾಯಿಸುವ ಬಲು ದೊಡ್ಡ ಜಾಣ್ಮೆ ನೊಬೆಲ್ ಸಮಿತಿಯ ಮುಂದಿದೆ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್.
Very interesting .. there is so much to the Journey of Science…
ಚಂದದ ಲೇಖನ ಡಾ ಚನ್ನೇಶ್ ಸಾರ್