ಆತ್ಮೀಯರೆ ನಮಸ್ಕಾರ
ಅಕ್ಟೋಬರ್ ತಿಂಗಳ ಮೊದಲ ವಾರ ಜಾಗತಿಕವಾದ ಸುದ್ದಿಗಳಲ್ಲಿ ನೊಬೆಲ್ ಬಹುಮಾನದ ಸಂಗತಿಗಳಿಗೆ ಇದ್ದಷ್ಟು ಮಹತ್ವ ಬಹುಶಃ ಮತ್ತಾವುದಕ್ಕೂ ಇರಲು ಸಾದ್ಯವಿಲ್ಲ. ಅದರಲ್ಲೂ ವಿಜ್ಞಾನದ ನೊಬೆಲ್ ಪುರಸ್ಕಾರಗಳಂತೂ ಇಲ್ಲಿಯವರೆಗೂ ಹೆಸರನ್ನೇ ಕೇಳಿರದ ವಿಜ್ಞಾನಿಗಳ ಕುರಿತಂತೆ ಒಮ್ಮೆಲೆ ಜಾಗತಿಕ ಮಾತುಗಳಿಗೆ ಕಾರಣರಾಗುವಂತೆ ಮಾಡುತ್ತವೆ. ಎಂದೂ ಇಲ್ಲದ ಉತ್ಸಾಹದ ಚರ್ಚೆಗಳ ಆರಂಭಕ್ಕೆ ಕಾರಣವಾಗುವ ಸಂಗತಿಗಳು ತೆರೆದುಕೊಳ್ಳುತ್ತವೆ. ಈ ವರ್ಷವೂ ಇನ್ನೇನು ಹತ್ತು ದಿನಗಳು ಕಳೆದರೆ ಸಾಕು! ಅಕ್ಟೋಬರ್ 7ರಂದು ಮಧ್ಯಾಹ್ನ ಮೂರು ಗಂಟೆಗೆ ವೈದ್ಯಕೀಯ ವಿಭಾಗದ ಪುರಸ್ಕಾರ ಪ್ರಕಟವಾಗುತ್ತದೆ. ಮುಂದೆ ಸಾಲು ಸಾಲಾಗಿ ಒಂದರ ಹಿಂದೆ ಒಂದರಂತೆ ಅದೇ ವಾರ (ಅಕ್ಟೋಬರ್, 8,9,10 ಮತ್ತು 11) ಐದು ಬಹುಮಾನಗಳೂ ನಂತರ ಅಕ್ಟೋಬರ್ 14ರಂದು ಕಡೆಯ ಪ್ರಕಟಣೆಯಾಗಿ ನೊಬೆಲ್ ನೆನಪಿನ ಅರ್ಥವಿಜ್ಞಾನದ ಪುರಸ್ಕಾರದ ಪ್ರಕಟಣೆ ಹೊರಬೀಳುತ್ತದೆ. ವೈದ್ಯಕೀಯ ವಿಜ್ಞಾನ, ಭೌತವಿಜ್ಞಾನ, ರಸಾಯನವಿಜ್ಞಾನ, ಸಾಹಿತ್ಯ, ಶಾಂತಿ ಹಾಗೂ ಅರ್ಥವಿಜ್ಞಾನಗಳ ಪುರಸ್ಕಾರಗಳು ಅನುಕ್ರಮವಾಗಿ ಪ್ರಕಟಗೊಳ್ಳುತ್ತವೆ. (ಈ ಎಲ್ಲಾ ಪ್ರಶಸ್ತಿಗಳ ವಿವರವಾದ ಸಂಗತಿಗಳು ಪ್ರತೀ ವರ್ಷದಂತೆ ಈ ವರ್ಷವೂ ನ ವೆಬ್ ಪುಟದಲ್ಲಿ ಪ್ರಕಟಗೊಂಡ ಮರುದಿನ ಓದಬಹುದು) ಈವರೆವಿಗೂ 1000 ವ್ಯಕ್ತಿ/ಸಂಸ್ಥೆಗಳು ಪುರಸ್ಕಾರಗೊಂಡ ಸುಮಾರು ಒಂದೂಕಾಲು ಶತಮಾನದ ಚಾರಿತ್ರಿಕ ಕುತೂಹಲಗಳ ಆಯ್ದ ಸಂಗತಿಗಳನ್ನು ನೆನಪಿಸಿಕೊಳ್ಳುವ ನೊಬೆಲ್ ಪುರಸ್ಕಾರಗಳ ನಿರೀಕ್ಷೆಯ ಓದಿನ ಒಂದು ಪುಟ್ಟ ತಯಾರಿ ಇದು.
ನೊಬೆಲ್ ಶಾಂತಿ ಪುರಸ್ಕಾರದ ಹೊರತಾಗಿ ಉಳಿದೆಲ್ಲವೂ ಆಯಾ ಜ್ಞಾನಶಾಖೆಯ ಸಾಧಕರಿಂದಲೇ ನಾಮನಿರ್ದೇಶನ (Nomination) ಗೊಂಡಿರುತ್ತವೆ. ಶಾಂತಿ ಪಾರಿತೋಷಕ ಮಾತ್ರ ಯಾವುದೇ ದೇಶದ ಪಾರ್ಲಿಮೆಂಟ್ ಸದಸ್ಯರೂ ನಾಮಿನೇಟ್ ಮಾಡಬಹುದಾಗಿದೆ. ಜೊತೆಗೆ ಯಾವುದೇ ಪ್ರಕಾರದಲ್ಲೂ 50 ವರ್ಷಗಳವರೆಗೂ, ಯಾರ ಹೆಸರು ನಾಮನಿರ್ದೇಶನಗೊಂಡಿತ್ತು, ಯಾವ ಯಾವ ಹೆಸರುಗಳು ಚರ್ಚೆಯಲ್ಲಿದ್ದವು ಎಂದಾಗಲಿ, ಪೈಪೋಟಿಕೊಟ್ಟ ಸಂಶೋಧನಾ ಸಂಗತಿಗಳ ಬಗೆಗಾಗಲಿ ಯಾವ ಮಾಹಿತಿಯೂ ಹೊರಬೀಳುವುದಿಲ್ಲ. ಆದ್ದರಿಂದ ನಮ್ಮ ಬಾಯಿ ಚಪಲಕ್ಕೆ ಅವರ ಹೆಸರು ಅನುಮೋದನೆಗೊಂಡಿತ್ತು, ಇವರ ಜಾತಿ-ಧರ್ಮದ ಕಾರಣಕ್ಕೆ ಸಿಕ್ಕಿಲ್ಲ, ನಮ್ಮ ದೇಶದವರನ್ನು ಬೇಕಂತಲೇ ಕಡೆಗಾಣಿಸಲಾಗಿದೆ ಇತ್ಯಾದಿಗಳ ಉಹಾಪೋಹಗಳಿಗೆ ಕಾರಣಗಳೇ ಇಲ್ಲ. ಇವೆಲ್ಲಾ ಮಾಧ್ಯಮಗಳ, ಮಾತಿನ ಮಲ್ಲ/ಮಲ್ಲಿಯರ ತೀಟೆ-ತೆವಲುಗಳ ಪುರಾಣಗಳು ಅಷ್ಟೇ! ಆದ್ದರಿಂದ ಆ… ರಾವ್ ಅವರಿಗೆ ಬರಬೇಕಿತ್ತು, ಈ… ರಾಯ್ ಅವರಿಗೆ ತಪ್ಪಿತು, ಮಗದೊಬ್ಬ ಶ್ರೀ.. ಡಾ… ಅವರಿಗೆ ಸಿಗಲಿಲ್ಲ ಎಂಬುವುದರಲ್ಲಿ ಯಾವ ಸತ್ಯಾಂಶಗಳೂ ಇಲ್ಲ.
ಸ್ವತಃ ಮಹಾತ್ಮ ಗಾಂಧಿಯವರಿಗೆ ಐದು ಬಾರಿ ನಿರ್ದೇಶನಗೊಂಡು, ಚರ್ಚೆಗೆ ಬಂದೂ ತಪ್ಪಿಹೋಗಿದ್ದರ ಬಗ್ಗೆ ನೊಬೆಲ್ ಸಮಿತಿಯೇ ಪಶ್ಚಾತ್ತಾಪ ರೂಪದಲ್ಲಿ Mahatma Gandhi, The missing laureate ಎಂದು ತನ್ನ ವೆಬ್ ಪುಟದಲ್ಲಿ (https://www.nobelprize.org/prizes/themes/mahatma-gandhi-the-missing-laureate/) ಪ್ರಕಟಿಸಿದೆ. ಅದೂ 1998ರಲ್ಲಿ ಕೊನೆಯ ನಾಮಿನೇಶನ್ ಆಗಿ 50 ವರ್ಷಗಳ ನಂತರ 1999ರ ಡಿಸೆಂಬರ್ನಲ್ಲಿ ಪ್ರಕಟಿಸಿದೆ. ಆದ್ದರಿಂದ ಈ ವರ್ಷದ ಪ್ರಕಟಣೆಯ ದಿನಗಳು ಮುಂದಿರುವ ಈ ಹೊತ್ತಿನಲ್ಲಿ ಅಥವಾ ಪ್ರಕಟಗೊಂಡ ಒಂದೆರಡು ವಾರಗಳಲ್ಲಾದರೂ ಇಂತಹಾ ಮಾತುಗಳು ಬಂದರೆ ಕೇವಲ ಬಾಯಿ ಮಾತಿನ ಸಂಗತಿಗಳಷ್ಟೇ! ಈ ವರ್ಷ 2024ರ ಕುರಿತು ಏನಾದರೂ ಗೊತ್ತಾಗಬೇಕಿದ್ದರೆ ಅದು 2074ರ ಸುದ್ದಿಯನ್ನು ಈಗಲೇ ವಾಟ್ಸಾಪ್ನಲ್ಲಿ ಹರಿಬಿಟ್ಟಿದ್ದಾರೆಂದು ಅಂದುಕೊಳ್ಳಬೇಕು ಅಷ್ಟೇ.
ಒಂದು ಸಾವಿರ ಪುರಸ್ಕೃತರು.
ಕಳೆದ ಶತಮಾನದ ಆದಿಯಿಂದಲೇ (1901) ಬಹುಮಾನಿಸುವ ಪ್ರಕ್ರಿಯೆ ಆರಂಭಗೊಂಡು, ಕೆಲವು ವರ್ಷಗಳ ಹೊರತಾಗಿ ಈವರೆಗೂ 124 ವರ್ಷಗಳ ಸುದೀರ್ಘ ಕಾಲ ನಿರಂತರವಾಗಿ ನಡೆದಿದೆ. ಈವರೆಗೂ ಭೌತವಿಜ್ಞಾನ (117), ರಸಾಯನವಿಜ್ಞಾನ (115), ವೈದ್ಯಕೀಯ (114), ಸಾಹಿತ್ಯ (116), ಶಾಂತಿ (104) ಹಾಗೂ ಅರ್ಥವಿಜ್ಞಾನ (55)ಗಳಲ್ಲಿ ಒಟ್ಟು 621 ಬಹುಮಾನಗಳನ್ನು 1000 ಪುರಸ್ಕೃತರಿಗೆ ನೀಡಲಾಗಿದೆ. ಅದರಲ್ಲಿ 970 ವ್ಯಕ್ತಿಗಳು ಮತ್ತು 30 ಸಂಸ್ಥೆಗಳೂ ಸೇರಿವೆ. ಇವರಲ್ಲಿ ಮೇಡಂ ಕ್ಯೂರಿ, ಜಾನ್ ಬರ್ಡೀನ್, ಲೈನಸ್ ಪಾಲಿಂಗ್, ಫ್ರೆಡ್ರಿಕ್ ಸ್ಯಾಂಗರ್ ಮತ್ತು ಬ್ಯಾರಿ ಶಾರ್ಪ್ಲೆಸ್ ಅವರು ಹಾಗೂ ವಿಶ್ವ ಸಂಸ್ಥೆಯಲ್ಲಿ ನಿರಾಶ್ರಿತರಿಗಾಗಿರುವ ಹೈ ಕಮೀಷನರ್ ಎರಡೆರಡು ಬಾರಿ ಪ್ರಶಸ್ತಿಯನ್ನು ಪಡೆದರೆ, ರೆಡ್ ಕ್ರಾಸ್ ಸಂಸ್ಥೆಯು ಮೂರು ಬಾರಿ ಪ್ರಶಸ್ತಿಯನ್ನು ಪಡೆದಿದೆ. ಹಾಗಾಗಿ ನಿಖರವಾಗಿ 992ಪುರಸ್ಕೃತರು! ಈ ವರ್ಷ 2024 ರ ಪ್ರಶಸ್ತಿಯು ಪ್ರಕಟಣೆಯಿಂದ ಪುರಸ್ಕೃತರ ನಿಖರವಾದ ಸಂಖ್ಯೆಯು ಸಾವಿರ ದಾಟುತ್ತದೆ.
ಸರಿ ಸುಮಾರು ಒಂದೂ ಕಾಲು ಶತಮಾನದಲ್ಲಿ ಕೇವಲ 6 ಪ್ರಶಸ್ತಿಗಳು ಸಾವಿರ ಸಂಖ್ಯೆಯಲ್ಲಿ ಶ್ರೇಷ್ಠರನ್ನು ಜಗದ್ವಿಖ್ಯಾತರನ್ನಾಗಿಸಿದ ಕೀರ್ತಿಯು ನೊಬೆಲ್ಗೆ ಇದೆ. ಇಷ್ಟೆಲ್ಲದರ ಜೊತೆಗೆ ನೊಬೆಲ್ ಬಹುಮಾನದ ಚರಿತ್ರೆಯು ವಿಜ್ಞಾನದ ಆನ್ವೇಷಣೆಗಳಲ್ಲಿ ಮಾನವತೆಯ ಸಮೀಕರಣದ ಮೂಲಕ ಇತಿಹಾಸವನ್ನು ನಿರ್ಮಿಸಿದೆ. ಇವೆಲ್ಲಗಳಲ್ಲಿ ಆಯ್ದ ಕೆಲವನ್ನು ಒಂದೊದಾಗಿ ಈ ಮುಂದಿನ ಹತ್ತೂ ದಿನ ನೆನಪಿಸಿಕೊಳ್ಳುತ್ತಾ ಈ ವರ್ಷದ ಪ್ರಶಸ್ತಿಗಳ ಪ್ರಕಟಣೆಯ ತಿಳಿವಿಗೆ ತೆರೆದುಕೊಳ್ಳಲು ತಯಾರಿ ಮಾಡಲು CPUS ಈ ಮೂಲಕ ಮುಖಾಮುಖಿಯಾಗುತ್ತಿದೆ. 2024 ರ ಜಗದ್ವಿಖ್ಯಾತ ಪ್ರಶಸ್ತಿಗಳ ಮಾನವತೆಯ ಹಿರಿತನವನ್ನೂ ತಿಳಿಯುವ ತಯಾರಿಗೆ ಈ ಹತ್ತೂ ದಿನಗಳ ಪುಟ್ಟ ಓದು ಕುತೂಹಲದ ನಿರೀಕ್ಷೆಯ ತಯಾರಿಯಾಗಲಿ ಎಂಬ ಆಶಯ.
ನಾಳೆ ಹೊಸತೊಂದು ಕುತೂಹಲದ ನೊಬೆಲ್ ಸಂಗತಿಯೊಂದಿಗೆ ಒಂದಷ್ಟು ತಯಾರಿ… ಮಾಡೋಣ
ನಮಸ್ಕಾರ.
ಡಾ. ಟಿ.ಎಸ್. ಚನ್ನೇಶ್.