You are currently viewing ನಾಲಿಗೆಯ ರುಚಿ ಮತ್ತು ಹೊಟ್ಟೆಯ ಹಸಿವು ಎರಡನ್ನೂ ನಿಭಾಯಿಸುತ್ತಿರುವ -“ಅನ್ನಬ್ರಹ್ಮ” – ಭತ್ತ

ನಾಲಿಗೆಯ ರುಚಿ ಮತ್ತು ಹೊಟ್ಟೆಯ ಹಸಿವು ಎರಡನ್ನೂ ನಿಭಾಯಿಸುತ್ತಿರುವ -“ಅನ್ನಬ್ರಹ್ಮ” – ಭತ್ತ

ನಮ್ಮ ಊಟದ ತಾಟಿನಲ್ಲಿ ಬಹಳ ಪ್ರಮುಖವಾದ ಸ್ಥಾನವನ್ನು ಪಡೆದಿರುವುದೇ “ಅನ್ನ”.  “ಹೊಟ್ಟೆಗೇನು ತಿನ್ನುತ್ತಿಯಾ… ಅನ್ನನೋ ಅಥವಾ…   !” ಎಂಬ ಬೈಗುಳದ ಮಾತನ್ನೂ ನಾವೆಲ್ಲರೂ ಕೇಳಿರುತ್ತೇವೆ. ತಿನ್ನುವುದೇನಿದ್ದರೂ ಅನ್ನವನ್ನೇ ಎನ್ನುವಂತಾಗಿದೆ. ಅನ್ನವು ನಮ್ಮ ಹೊಟ್ಟೆಯ ಹಸಿವನ್ನು ಕಾಪಾಡುವ ರೂಪಕವಾಗಿದೆ. ಪಂಜಾಬ್ ಹರಿಯಾಣ ಮತ್ತು ಉತ್ತರ ಪ್ರದೇಶದ ಕೆಲವು ಪ್ರದೇಶಗಳನ್ನು ಹೊರತು ಪಡಿಸಿದರೆ ಇಡೀ ಇಂಡಿಯಾದ ಊಟದ ಜವಾಬ್ದಾರಿಯನ್ನು ಅನ್ನವೇ ಹೊತ್ತಿದೆ. ಅನ್ನವನ್ನು ಕೊಡುವ ಭತ್ತ, ಒಂದು ಹುಲ್ಲಿನ ಬೆಳೆ!  ಹಾಗೆ ನೋಡಿದರೆ “ಹುಟ್ಟಿಸಿದ ದೇವರು ಹುಲ್ಲನ್ನೇ ಮೇಯಿಸುತ್ತಿದ್ದಾನೆ”. ರಾಗಿ, ಜೋಳ, ಮೆಕ್ಕೆ ಜೋಳ, ಸಜ್ಜೆ, ಕಬ್ಬು, ಎಲ್ಲವೂ ಹುಲ್ಲಿನ ಬೆಳೆಗಳೇ! ಇವೆಲ್ಲವೂ ಪೊಯೇಸಿಯೆ(Poaceae) ಎಂಬ ಸಸ್ಯ ಕುಟುಂಬಕ್ಕೆ ಸೇರಿವೆ. ಜಗತ್ತಿನ ಅರ್ಧದಷ್ಟು ಜನರ ಪ್ರಮುಖ ಆಹಾರವಾಗಿ ಒಂದೇ ಬೆಳೆ “ಭತ್ತ” ಹೊಟ್ಟೆಯ ಹಸಿವನ್ನು ನಿಭಾಯಿಸುತ್ತಿದೆ. “ಒರೈಜಾ ಸಟೈವಾ(Oryza sativa)” ಎಂಬ ವೈಜ್ಞಾನಿಕ ಹೆಸರಿನ ಭತ್ತದ ಎರಡು ಪ್ರಮುಖ ಪ್ರಕಾರಗಳಾದ “ಇಂಡಿಕಾ” ಹಾಗೂ “ಜಪಾನಿಕಾ” ಏಶಿಯಾದಲ್ಲಿವೆ. ಮತ್ತೊಂದು ಪ್ರಭೇದವಾದ “ಒರೈಜಾ ಗ್ಲಾಬೆರ್ರಿಮಾ(Oryza glaberrima)” ಆಫ್ರಿಕಾದ್ದು. ನಮ್ಮದೇ ಆದ ಭತ್ತವು ತನ್ನ ವಿವಿಧತೆಯಿಂದ ಹೆಸರು ಮಾಡಿದ ಬೆಳೆ. ಬಹುಷಃ ಜಗತ್ತಿನ ಯಾವುದೇ ಊಟದ ತಾಟಿನಲ್ಲೂ ಒಂದು ಬೆಳೆಯು ಇಷ್ಟೊಂದು ವೈವಿಧ್ಯತೆಯನ್ನು ಉಂಟುಮಾಡಿರುವ ಸಾಧ್ಯತೆಯೇ ಇಲ್ಲ. ಅಷ್ಟೊಂದು ಶಕ್ತವಾದ ಭತ್ತ, ನಿಜಕ್ಕೂ ಜನರ ಶಕ್ತಿಯನ್ನು ನಿಭಾಯಿಸುತ್ತದೆ. ಯಾವುದೇ ತರಕಾರಿ, ಯಾವುದೇ ಒಗ್ಗರಣೆ, ಯಾವುದೇ ಸ್ಪೈಸ್, ಏನಾದರೂ ಸರಿ ಎಲ್ಲಕ್ಕೂ ಒಗ್ಗಿ “ಬಾತ್” ಗಳಾಗಿಸಿ ನಮ್ಮ ನಾಲಿಗೆಯನ್ನು ತೃಪ್ತಿ ಪಡಿಸಿದೆ, ಅಷ್ಟೇಕೆ ಹೊಟ್ಟೆಯನ್ನೂ ತುಂಬಿಸುತ್ತದೆ.

ಡಾ. ರತನ್ ಲಾಲ್ ಹರಚಂದಲಾಲ್ ರಿಚಾರಿಯಾ

                ಇಂದಿಗೂ ಏನಿಲ್ಲವೆಂದರೂ ಸರಿ ಸುಮಾರು 500ಕ್ಕೂ ಹೆಚ್ಚು ವಿವಿಧ ವಿಜ್ಞಾನ ಸಂಸ್ಥೆಗಳಿಂದ ಬಿಡುಗಡೆಗೊಂಡ ಜನಪ್ರಿಯವಾದ ತಳಿಗಳಿವೆ. ಅದರ ನೂರು ಪಟ್ಟು 50,000ಕ್ಕೂ ಹೆಚ್ಚು ತಳಿಗಳು ಜಗತ್ತಿನ ರೈತರ ಜಮೀನಿಲ್ಲಿ ಬೆಳೆಯಲಾಗುತ್ತಿದೆ. ಲಕ್ಷಾಂತರ  ತಳಿಗಳ  ಸಂಗ್ರಹ  ಜಾಗತಿಕ  ಸಂಗ್ರಾಹಕದಲ್ಲಿದೆ. ನಮ್ಮ ದೇಶದ  ಖ್ಯಾತ ಭತ್ತದ ವಿಜ್ಞಾನಿ  ಡಾ. ರತನ್ ಲಾಲ್ ಹರಚಂದಲಾಲ್ ರಿಚಾರಿಯಾ ಅವರೊಬ್ಬರೇ ಮಧ್ಯಪ್ರದೇಶದ ಹೌಶಂಗಾಬಾದ್ ಜಿಲ್ಲೆಯೊಂದರಲ್ಲೇ 1950-60 ದಶಕದಲ್ಲಿ ಸರಿ ಸುಮಾರು 19,000ಕ್ಕೂ ಹೆಚ್ಚು ತಳಿಗಳನ್ನು ಸಂಗ್ರಹಿಸಿದ್ದರು. ಅಷ್ಟೇ ಅಲ್ಲ ಭತ್ತಕ್ಕೆ ಜಾಗತಿಕ ಮಾನ್ಯತೆ ನೀಡುವ ವೈಜ್ಞಾನಿಕ ಸಂಗತಿಗಳನ್ನು ಪತ್ತೆಹಚ್ಚಲು ಸಾಧ್ಯವಾಗುವ ವಿವಿಧ ತಳಿಗಳ ಕಥನಗಳನ್ನು ಜಾಗರೂಕವಾಗಿ ಸಂಗ್ರಹಿಸುವ ಯೋಜನೆಯನ್ನು ಕಟ್ಟಿ ಕೊಟ್ಟ ಮಹಾನ್ ವಿಜ್ಞಾನಿ. ಸಾವಿರಾರು ತಳಿಗಳನ್ನು ಸಂಗ್ರಹಿಸಿ, ನಮ್ಮ ಒಡಿಸ್ಸಾ ರಾಜ್ಯದಲ್ಲಿನ “ಕಟಕ್” ಎಂಬಲ್ಲಿ ಕೇಂದ್ರೀಯ ಭತ್ತ ಸಂಶೋಧನಾ ಸಂಸ್ಥೆಯ ಮುಂದಾಳತ್ವ ವಹಿಸಿ ಭತ್ತದ ತಳಿಗಳ ಖಜಾನೆಯನ್ನು ಸ್ಥಾಪಿಸಿದ್ದರು.

ಜಾಗತಿಕ ಹುನ್ನಾರಗಳಲ್ಲಿ ಫಿಲಿಪೈನ್ಸ್ ನ ಮನಿಲಾ ಹತ್ತಿರದ ಲಾಸ್ ಬೊನಸ್ ಅಲ್ಲಿ ಸ್ಥಾಪನೆಗೊಂಡ ಅಂತರರಾಷ್ಟ್ರೀಯ ಸಂಸ್ಥೆಗೆ ಡಾ. ಸ್ವಾಮಿನಾಥನ್ ತಮ್ಮ ಅನುಕೂಲದ ಕಾರಣದಿಂದ ಕೊಂಡುಹೋದ ಕಥನವೊಂದು 1986ರಲ್ಲಿ “ದ ಗ್ರೇಟ್ ಜೀನ್ ರಾಬರಿ” ಎಂಬ ವರದಿಯಾಗಿ ಆಗಿನ ಜನಪ್ರಿಯ ವಾರ ಪತ್ರಿಕೆ “ಇಲ್ಲಸ್ಟ್ರೇಟೆಡ್ ವೀಕ್ಲಿ”ಯಲ್ಲಿ ಪ್ರಕಟಗೊಂಡಿತ್ತು. [ “The Great Gene Robbery”, by Dr Claude Alvarez, The Illustrated Weekly of India, March 23-April 5, 1986]. ಅನಂತರ ಸ್ವಾಮಿನಾಥನ್ ಆ ಅಂತರರಾಷ್ಟ್ರೀಯ ಸಂಸ್ಥೆಯ ನಿರ್ದೇಶಕರಾಗಲು ನಮ್ಮ ಭತ್ತದ ತಳಿಗಳ ಸಮೃದ್ಧತೆಯೇ ಕಾರಣವಾಗಿತ್ತು. ಭಾರತೀಯ ತಳಿ ವೈವಿಧ್ಯತೆಯನ್ನು ಹಾಳುಗೆಡಹುವ ಅಮೆರಿಕಾದ ಹುನ್ನಾರಗಳ ಪ್ರಥಮ ಪ್ರಯತ್ನ ಅದು. ಭತ್ತದ ತಳಿಗಳ ಕ್ರಾಂತಿಕಾರಕ ಸಂಗತಿಗಳ ಜನಕ ಡಾ. ರಿಚಾರಿಯಾ ಅವರನ್ನು ಹಿಮ್ಮೆಟ್ಟಿಸಿದ ನಮ್ಮ “ದೇಸಿ” ಹುನ್ನಾರಗಳು ಬೆಳಕಿಗೆ ಬರದೇ ಬತ್ತಿಯೇ ಹೋದವು.

                ನಮಗೆಲ್ಲಾ ಬಹಳ ಪರಿಚಿತವಾದ “ಮುಸ್ಸೌರಿ ತಳಿ”ಯಲ್ಲೇ ಅನೇಕ ಬಗೆಗಳಿವೆ. “ಸೋನಾ” ಕತೆಯೇನೂ ಕಡಿಮೆ ಇಲ್ಲ. ಒಡಿಸ್ಸಾದ ಪುರಿ ಜಗನ್ನಾಥ ದೇವಾಲಯದಲ್ಲಿ ಒಂದು ಸಂಪ್ರದಾಯವಿದೆ. ಅಲ್ಲಿನ ದಿನ ನಿತ್ಯದ ನೈವೇದ್ಯಕ್ಕೆ “ಹೊಸ ಅಕ್ಕಿ” ಅನ್ನವನ್ನು ಮಾತ್ರ ಬಳಸುತ್ತಾರೆ. ಅದು ಅಂದೇ ಕೊಯಿಲು ಮಾಡಿ ಪಡೆದ ಅಕ್ಕಿಯ ಅನ್ನ. ಅಂದರೆ ಪ್ರತೀ ದಿನವೂ ಕೊಯಿಲು ಮಾಡಬಹುದಾದ ತಳಿಗಳಿದ್ದಾವೆ ಎಂದಾಯಿತಲ್ಲವೇ? ದಿನವೂ ಬಿತ್ತಿ ದಿನವೂ ಬೆಳೆದು, ದಿನವೂ ಕೊಯಿಲಿ ಮಾಡುವ ಬೆಳೆ ಇದೆ ಎಂದಾದರೆ ಅದು ಭತ್ತ ಮಾತ್ರ! ನಿಜವಾದ ಅನ್ನ “ಬ್ರಹ್ಮ”. ಯಾವುದೇ ದೇವಾಲಯದಲ್ಲಿ, ಮಠಗಳಲ್ಲಿ, ಸಾಮೂಹಿಕ ಸಂತರ್ಪಣೆಗಳಲ್ಲಿ “ಅನ್ನ”ಕ್ಕೆ ದೊಡ್ಡ ಪಾತ್ರ. “ದೇವರು”ಗಳಿಗೂ ಶಕ್ತಿ ತುಂಬಿದ್ದೇ ಅನ್ನ! ಪುರಿಯನ್ನೂ ಸೇರಿಸಿ, ಧರ್ಮಸ್ಥಳ ಮುಂತಾದ ಯಾವುದೇ ಪ್ರಸಾದವನ್ನು “ಮಹಾ ಪ್ರಸಾದ”ವನ್ನಾಗಿಸಿರುವುದೇ ಭತ್ತದಿಂದ ಪಡೆದ ಅಕ್ಕಿ.  ಒಂದು ರೀತಿಯಲ್ಲಿ ಹೆಚ್ಚೂ ಕಡಿಮೆ ಜೀವನವನ್ನೆಲ್ಲಾ ನೀರಲ್ಲಿ ನಿಂತರೂ, ಜಗತ್ತಿನ ಜನರ ಬದುಕನ್ನು ಕಾಪಾಡುವ ಭತ್ತದಲ್ಲಿ ಒಣ ನೆಲದಲ್ಲೂ ಬೆಳೆವ ತಳಿಗಳಿವೆ. ಇದರ ಎಲ್ಲಾ ಕೆಲವು ವಿವರಗಳ ಕಥನಗಳನ್ನು ಮುಂದೆ ನೋಡೋಣ.

                ತುಂಬಾ ಹಿಂದಿನಿಂದಲೂ ಮಾನವಕುಲವನ್ನು ಹಸಿವಿನಿಂದ ಕಾಪಾಡಿರುವ ಬೆಳೆಗಳಲ್ಲಿ ಭತ್ತಕ್ಕೆ ಮೊದಲನೆಯ ಸ್ಥಾನ. ಭಾರತವನ್ನೂ ಸೇರಿದಂತೆ, ಆಗ್ನೇಯ ಏಶಿಯಾದ ದೇಶಗಳು ಹಾಗೂ ಚೀನಾ ಮುಂತಾದ ನೆಲದಲ್ಲಿನ ದಟ್ಟವಾದ ಜನಸಂಖ್ಯೆಯ ಹಸಿವನ್ನು ತೀರಿಸುವಲ್ಲಿ ಅನ್ನದ ಪಾಲು ದೊಡ್ಡದು. ಅಕ್ಕಿಯು ಹರಡಿರುವ ನೆಲ ಹೆಚ್ಚೂ ಕಡಿಮೆ 80 ದೇಶಗಳನ್ನೂ ದಾಟಿದೆ. ಅಮೆರಿಕಾ ಕೆನಡಾ, ಮತ್ತು ಉತ್ತರ ಯೂರೋಪನ್ನು ಬಿಟ್ಟರೆ, ಲ್ಯಾಟಿನ್ ಅಮೆರಿಕಾ, ಆಫ್ರಿಕಾದ ದೇಶಗಳನ್ನೂ ತಲುಪಿದೆ. ಅನ್ನದ ರುಚಿಯನ್ನು ಎಲ್ಲರ ನಾಲಿಗೆ ಮೇಲೆ ಸ್ಥಿರವಾಗಿರಿಸಿದೆ. ಏಶಿಯಾದಿಂದ ಸಾಗಿ ಮುಂದೆ ಸ್ಪೈನರಿಂದ, ಪೋರ್ಚುಗೀಸರಿಂದ ಹೊಸ ಖಂಡಗಳಿಗೆ ತಲುಪಿದೆ. ಜಗತ್ತಿನ ಅನೇಕ ಬಗೆಯ ನೆಲದ ಮೇಲೆ ಸೊಗಸಾಗಿ ಬೆಳೆವ ಇದರ ವೈವಿಧ್ಯಮಯ ಹೊಂದಾಣಿಕೆಯೇ ಜಗತ್ತನ್ನು ಆವರಿಸುವಂತೆ ಮಾಡಿದೆ. ಒಂದು ಸಣ್ಣ ಹುಲ್ಲಿನ ಕುಲವೊಂದು ಇಂತಹ ಪವಾಡ ಮಾಡಲು ಪಟ್ಟ ಪಾಡು ಅಷ್ಟಿಷ್ಟಲ್ಲ! ಒಣ ನೆಲದಿಂದ ಮೊದಲುಗೊಂಡು ನಿಂತ ನೀರಿನಲ್ಲೂ ತನ್ನ ಜೀವ ಹಿಡಿದುಕೊಂಡು ನಮ್ಮ ಬಟ್ಟಲಿನ ಅನ್ನವನ್ನು ಜೋಪಾನವಾಗಿಸಿದ ಕೀರ್ತಿ ಈ ಬೆಳೆಯದು. ಈ ಭತ್ತದ ಬೆಳೆಯನ್ನು ಇಷ್ಟು ಆತ್ಮೀಯವಾಗಿ ನೆನೆಯಲು ಕಾರಣವೇನೆಂದರೆ ಇದು ಬಹು ದೊಡ್ಡ ಅಪವಾದವನ್ನು ಎದುರಿಸುತ್ತಿದೆ. ಅಂದರೆ ಒಂದು ಕಿಲೋ ಅಕ್ಕಿಯ ಬೆಳೆಯಲು ಬರೋಬ್ಬರಿ ಐದು ಸಾವಿರ ಲೀಟರ್ ಬಯಸುತ್ತದೆ! ಒಂದು ಹುಲ್ಲಿನ ಕುಲದ ತಳಿ ಜಗತ್ತಿನ ಬಹುಪಾಲು ಜನಸಂಖ್ಯೆಯಿರುವ ನೀರು ನಿಂತ ಜೊಂಡು ನೆಲದಲ್ಲೂ ಬೆಳೆದು ಹೊಟ್ಟೆ ತುಂಬಿಸುವ ಜವಾಬ್ದಾರಿ ಹೊರಲು ತನ್ನ ವಿಕಾಸದ ಹಾದಿಯನ್ನು ಒಣ ನೆಲದಿಂದ ನೀರು ತುಂಬಿಯೂ ಸಹಿಸಬಲ್ಲ ಬೇರುಗಳ ಸೃಜಿಸಿಕೊಂಡ ಕಥನ ಇಲ್ಲಿದೆ. ನಿಜಕ್ಕೂ ಬಡಪಾಯಿ ಭತ್ತ ನಮ್ಮೆಲ್ಲರ ಅನ್ನದ ಬಟ್ಟಲನ್ನು ಕಾಪಾಡಿದೆ.

                ಹೌದು,  ಒಂದು ಕಿಲೋ ಅಕ್ಕಿಗೆ 2500-5000 ಲೀಟರ್ ಬೇಕು. ಅಕ್ಕಿಯ ಹತ್ತಿರದ ಸ್ಪರ್ಧಿಯಾದ ಗೋಧಿಗೆ ಪ್ರತೀ ಕಿಲೋಗೆ 1200-1300 ಲೀಟರ್ ಬೇಕು. ಬಹುಪಾಲು ಇತರೇ ಆಹಾರ ಧಾನ್ಯಗಳ ಒಂದು ಕಿಲೋ ಉತ್ಪಾದನೆಗೂ 500 ಲೀಟರ್ ನಿಂದ 800 ಲೀಟರ್ ನೀರು ಬೇಕು. ನೀರಿನ ಬಳಕೆಯನ್ನೇ ಮಾನದಂಡವಾಗಿಟ್ಟು ಅಳೆದರೆ ಈ ಸಾಕ್ಷಿಗಳನ್ನು ಮುಂದಿಟ್ಟುಕೊಂಡು ಯಾವುದನ್ನಾದರೂ ಶಿಕ್ಷಾರ್ಹವೆಂದು ಪರಿಗಣಿಸಬೇಕಾಗುತ್ತದೆ. ಏಕೆಂದರೆ ಭತ್ತವು ಅದೇಕೆ ಅಷ್ಟು ನೀರು ಬಯಸುತ್ತದೆ ಎಂದು ಅರಿಯಲು ಅದರ ವಿಕಾಸದ ಹಾದಿಯನ್ನು ತುಸು ಕ್ರಮಿಸಿ ನೋಡಬೇಕಾಗುತ್ತದೆ. ಭತ್ತದ ತವರು ಏಶಿಯಾ. ಅದು ಭಾರತವೆಂದೂ, ಚೀನಾವೆಂದು ಎರಡು ವಾದಗಳಿವೆ. ಇರಲಿ. ಇಡೀ ಏಶಿಯಾದ ಕೇವಲ ಕೆಸರು ಗದ್ದೆಯಾಗುವಂತಹ ನೆಲವನ್ನು ನಂಬಿದ ಜನರ ಹಸಿವನ್ನೂ ಕಾಪಾಡುವ ಜವಾಬ್ದಾರಿಯನ್ನು ಭತ್ತವು ಹೊತ್ತುಕೊಂಡಿತು. ದಕ್ಷಿಣ ಏಶಿಯಾದ ಹೆಚ್ಚು ಮಳೆಯಾಗುವ ತಗ್ಗು ಪ್ರದೇಶದ ಜೊಂಡು ನೆಲದ ಆಶ್ರಯದ ಅನೇಕ ಸಮುದಾಯಗಳನ್ನು ಜತನದಿಂದ ಕಾಪಾಡುವ ಜವಾಬ್ದಾರಿಯು ಇದರ ವಿಕಾಸವನ್ನು ಹೀಗೆ ಮಾಡಿದೆ. ನಮ್ಮ ಮಲೆನಾಡನ್ನೂ ಸೇರಿದಂತೆ, ಅಸ್ಸಾಂ, ಮೇಘಾಲಯ, ಸಿಕ್ಕಿಂ, ನಾಗಾಲ್ಯಾಂಡ್‍ ಮುಂತಾದೆಡೆಗಳಲ್ಲಿ ಮಳೆಯೂ ಹೆಚ್ಚು, ನೆಲವೂ ತಗ್ಗು! ನೀರು ನಿಲ್ಲುವ ಇಂತಹಾ ನೆಲದಲ್ಲಿ ಕೇವಲ ಕೆಸರು ಗದ್ದೆಯನ್ನಷ್ಟೇ ಮಾಡಬಹುದು. ಅಂತಹಾ ಜಮೀನಿನಲ್ಲೂ ಸಹಸ್ರಾರು ವರ್ಷ ನಿರಂತರವಾಗಿ ಬೆಳೆಯಲಾಗಿರುವ ಒಂದೇ ಬೆಳೆ ಭತ್ತ. ನೀರು ಕಟ್ಟಿ ಬೇರನ್ನು ಉಸಿರು ಕಟ್ಟಿಸಿದರೂ ತೆನೆಕಟ್ಟುವ ಕಲೆಯನ್ನು ಇದೊಂದೇ ಹುಲ್ಲು ಕಲಿತದ್ದಾದರು ಹೇಗೇ? ಬೇರ ತುದಿಯು ಆಮ್ಲಜನಕವಿಲ್ಲದ್ದರೆ ಒಣಗಿ ನೆಲಕಚ್ಚಬೇಕಿತ್ತು. ಉಸಿರುಕಟ್ಟಿ ಪ್ರಾಣ ಬಿಡುವ ಬದಲು ನೀರಲ್ಲಿ ಕರಗಿರುವ ಆಮ್ಲಜನಕವನ್ನೇ ಬಳಸಲು ವಿಕಾಸಗೊಳಿಸಿಕೊಂಡಿದೆ. ಸಾಲದಕ್ಕೆ ನಿರಂತರ ನೀರಿನ ನೆಲದಿಂದ ಕರಗುವ ಸಿಲಿಕಾನ್ ಅನ್ನೂ ತನ್ನ ಮೈಯೊಳಗೆ ಸೆಳೆದುಕೊಂಡು ಅದನ್ನು ಅಕ್ಕಿಯ ಮೈ ಮುಚ್ಚುವ ಬೀಜ ಕವಚಕ್ಕೆ ಗಟ್ಟಿಯಾಗಿಸುವ ಗುಣವನ್ನೂ ವಿಕಾಸಗೊಳಿಸಿದೆ. ಹೆಚ್ಚೂ ಕಡಿಮೆ ತನ್ನ ಮೈಯಷ್ಟೇ ಉದ್ದದ ತೆನೆಯನ್ನೂ ಬಿಡುವ ಏಕೈಕ ಹುಲ್ಲಿನ ಬೆಳೆ ಭತ್ತ. ನಿಜಕ್ಕೂ ಆಧುನಿಕ ಮೆರಗಿನಲ್ಲಿ ಮೈ ಕೆತ್ತಿಸಿಕೊಂಡು ಬಿಳಿಯಾಗಲು ಹೋಗಿ ಜನರಿಂದ ಅಪವಾದ ಸಹಿಸಿಕೊಳ್ಳಬೇಕಿದೆ. ಮಧುಮೇಹಿಗಳಿಗೆ ಅನ್ನ ಬೇಡದ ತುತ್ತಾಗಿಸಲು ಇದು ಸಾಕಷ್ಟೇ!  ಇತರೇ ಹುಲ್ಲಿನ ಬೀಜದಂತೆಯೇ ಕಡಿಮೆ ಶ್ರಮದಿಂದ ಬೀಜ ಕವಚವನ್ನು ತೆರೆದ ಅಕ್ಕಿಯಲ್ಲಿ ಈ ಅಪವಾದಗಳೆಲ್ಲಾ ಇರಲಾರವು.

          ಭತ್ತದ ನೀರಿನ ಬಯಕೆಯು ಅದರ ವಿಕಾಸಗೊಂಡ ಫಲ! ಇಡೀ ಭೂಮಿಯನ್ನು ಆವರಿಸಿರುವ ಎರಡೇ ಬಹು ಮುಖ್ಯ ವಸ್ತುಗಳೆಂದರೆ ನೆಲ ಮತ್ತು ನೀರು. ಇದರಲ್ಲಿ ಯಾವುದು ಅಧಿಕವಾದರೂ ಇನ್ನೊಂದನ್ನು ಆವರಿಸಿ ಅಲ್ಲಿನ ಇಕಾಲಜಿಯನ್ನೇ ಬದಲಿಸುತ್ತದೆ. ಅಂತಹದರಲ್ಲಿ ಒಣನೆಲ- ಕೆಸರುಗದ್ದೆ ಎರಡನ್ನೂ ಸಹಿಸಿಕೊಳ್ಳುವಂತೆ ವಿಕಾಸದ ಹಾದಿಯನ್ನು ಜನರ ಹಸಿವಿನ ಕಾರಣಕ್ಕೇ ಹಿಡಿದು ಛಲ ಸಾಧಿಸಿದ ಬೆಳೆ ಭತ್ತ. ಇಂಡಿಯಾದ ಮತ್ತು ಜಪಾನಿನ ಎರಡು ಬಗೆಯ ತಳಿವೈವಿಧ್ಯಗಳನ್ನು ಲಕ್ಷಾಂತರ ವರ್ಷಗಳ ಹಿಂದೆಯೇ ಬಲಪಡಿಸಿಕೊಂಡು ಬೆಳೆಯುತ್ತಾ, ಸಹಸ್ರಾರು ತಳಿಗಳನ್ನು ಬೆಳೆಯುವಂತೆ ಪ್ರೇರೇಪಣೆಗೊಳಿಸಿದ ಕೀರ್ತಿಯು ಈ ಬೆಳೆಯದು. ಆಧುನಿಕ ಅಭಿವೃದ್ಧಿಯ ಸಂಕೇತದ ಟೊಯೋಟಾ, ಹೊಂಡಾಗಳ ಪದಗಳ ಅರ್ಥವೂ ಭತ್ತಕ್ಕೆ ಸಂಬಂಧಿಸಿದವೇ! ಟೊಯೋಟಾ ಎಂದರೆ ಸಂಪದ್ಭರಿತ ಭತ್ತದ ಗದ್ದೆ ಎಂದೂ, ಹೊಂಡಾ ಎಂದರೆ ಪ್ರಧಾನವಾದ ಭತ್ತದ ಗದ್ದೆಯೆಂದೂ ಅರ್ಥ! ಬದುಕನ್ನು ಹೀಗೆಲ್ಲಾ ಆವರಿಸಿದ ಅನ್ನ ಬ್ರಹ್ಮನ ಕಥನ ಬಹಳ ವಿಶಾಲವಾದುದು. ಅದರ ವಿಕಾಸವೇ ನೀರು-ನೆಲವನ್ನು ಹೇಗಾದರೂ ಸಹಿಸಿಕೊಂಡು ಹಸಿವು ತಡೆದು ಹೊಟ್ಟೆತುಂಬಿಸುವ ಛಲದಿಂದ ಬಂದಿದೆ.

ನೆಲದ ಸಮಸ್ಯೆಗಳಿಗೆ  ಗದ್ದೆ ಮಾಡುವ ಉಪಾಯ

                ನಿರಂತರವಾಗಿ ನೆಲವು ಒಂದಲ್ಲೊಂದು ಸಮಸ್ಯೆಗಳನ್ನು ಒಡ್ಡುತ್ತಿದ್ದರೆ ಮಣ್ಣನ್ನು ಬದಲಾಯಿಸಲು ಆಗುತ್ತದೆಯೇ? ಇದೇನು ತಮಾಷೆಯ ಮಾತೇ? ಒಂದು ಎಕರೆ ಜಮೀನಿನಲ್ಲಿ ಕೇವಲ ಹದಿನೈದು ಅಂಗುಲ ಆಳದ ಮೇಲ್ಮಣ್ಣು ಏನಿಲ್ಲವೆಂದರೂ ಹತ್ತು ಲಕ್ಷ ಕಿಲೋ ಇದ್ದೀತು. ಅಷ್ಟೆಲ್ಲಾ ಮೇಲ್ಮಣ್ಣು ಕೆಟ್ಟರೆ ಬದಲಾಯಿಸಲು ಆದೀತೇ? ಅದಕ್ಕೆ ಗದ್ದೆ ಕಟ್ಟಿ, ಗದ್ದೆ ಮಾಡಿ ಮಣ್ಣನ್ನು ತಿದ್ದುವ ಉಪಾಯವೂ ಇದೆ. ಆದರೆ ನೀರಿನ ತಾಪತ್ರಯ ಇರಬಾರದಷ್ಟೆ! ಗದ್ದೆ ಕಟ್ಟಿದಾಗ, ಮಣ್ಣು ಉಸಿರು ಕಟ್ಟುತ್ತದೆ. ಅದರಲ್ಲಿನ ಗಾಳಿಯೆಲ್ಲಾ ಹೊರ ಬಂದು ಒಳಗಿನ ವಾತಾವರಣವೆಲ್ಲಾ ಗಾಳಿರಹಿತವಾಗುತ್ತದೆ. ಆಮ್ಲಜನಕವಿಲ್ಲದೇ ನಿರ್ಜೀವವಾಗುತ್ತದೆ. ಆಗ ಮಣ್ಣಿನ ರಸಾಯನಶಾಸ್ತ್ರ ಬದಲಾಗುತ್ತದೆ. ರಸಸಾರ ಕ್ಷಾರೀಯವಾಗಿಯೇ ಇರಲಿ ಅಥವಾ ಆಮ್ಲೀಯವಾಗಿಯೇ ಇರಲಿ ಹೇಗಿದ್ದರೂ ರಸಸಾರ ತಟಸ್ಥವಾಗುತ್ತದೆ. ತಟಸ್ಥ ಮಣ್ಣಿನ ಗುಣ ಪಡೆಯಲು ಗದ್ದೆ ಮಾಡುವುದರಿಂದ ಸಾಧ್ಯವಾಗುತ್ತದೆ.  ಅದಾದಾಗ ಮಣ್ಣಿನ ರಸಾಯನಿಕ ಗುಣಗಳು ಹದ್ದು ಬಸ್ತಿಗೆ ಬರುತ್ತವೆ. ಇಡೀ ಮಣ್ಣು ಆ ಕ್ಷಣ ಹೊಸ ರೂಪು ಪಡೆಯುತ್ತದೆ. ಅನೇಕ ಬೆಳೆಗಳಿಗೆ ಬೇಕಾದ ಅನುಕೂಲಕರ ರಸಾಯನಿಕ ಗುಣಗಳನ್ನು ಅಷ್ಟು ಸುಲಭವಾಗಿ ಪಡೆಯಲು ಆಗದು. ಆದರೆ ನೀರು ಕಟ್ಟಿ ಗದ್ದೆ ಮಾಡಿದಾಗ ಸಾಧ್ಯವಾಗುತ್ತದೆ. ನೀರು ಕಟ್ಟಿದಾಗ ಇಡೀ ನೆಲವು ಎರಡು ಬಗೆಯ ರಸಾಯನಿಕ ಪದ್ದತಿಯ ವಾತಾವರಣವನ್ನು ಪಡೆಯುತ್ತದೆ.  ಆಮ್ಲಜನಕವುಳ್ಳ ಆಕ್ಸೈಡುವಲಯ ಮತ್ತು ಅದಿಲ್ಲದ ಆಕ್ಸೈಡ್‍-ರಹಿತ ವಲಯ ಇವೆರಡನ್ನೂ ಬೇರೆಮಾಡಿದ ಪದರವೊಂದು ರೆಡಿಯಾಗುತ್ತದೆ. ಇಂತಹ ಪರಿಸ್ಥಿಯಲ್ಲಿ ಬೇರುಗಳ ಚಟುವಟಿಕೆಯೂ ಇತರೇ ಬೆಳೆಗಳಿಗಿಂತಾ ಭಿನ್ನವಾಗಿರುತ್ತದೆ. ಅದಕ್ಕೆ ನೆಲ ಕೆಟ್ಟರೆ ಗದ್ದೆ ಕಟ್ಟಿ ಅನ್ನೊ ಮಾತು ರೂಢಿಯಲ್ಲಿದೆ. ಕೆಟ್ಟು ಹೋದ ನೆಲವನ್ನು ನಿಭಾಯಿಸುವ ಇಂತಹ ಅದ್ಭುತವಾದ ಕಾಣ್ಕೆಯನ್ನು ಕೊಟ್ಟು ಜೊತೆಗೆ ಅನ್ನವನ್ನೂ ಕೊಡುವ ಬೆಳೆ ಭತ್ತ!

ಅನಿವಾರ್ಯವಾಗುವ ಅನ್ನದ  ಮೇಲಿನ ಪ್ರೀತಿ!

                “ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ” ಈ ಮಾತು ನೆಂಟರ ಮೇಲಿನ ಪ್ರೀತಿಯನ್ನು ಉಳಿಸಿಕೊಂಡು, ಅಕ್ಕಿಯನ್ನು ಉಳಿತಾಯ ಮಾಡುವ ಮನೋಭಾವವನ್ನು ಹೇಳುವಂತಹದ್ದು. ಆದರೆ ಇಲ್ಲಿನ ಪ್ರಶ್ನೆ ಅದಲ್ಲ. ನಮ್ಮ ಆಹಾರದಲ್ಲಿ ಅಕ್ಕಿ ಮೇಲಿನ ಪ್ರೀತಿಯು ಮಾನವ ಕುಲಕ್ಕೆ ಅನಿವಾರ್ಯವಾಗುವ ಸಂಗತಿಯೊಂದಿದೆ. ಈ ಅಂಶಗಳನ್ನು ಭತ್ತವನ್ನು ಕುರಿತ ಕೆಲವು ಅಧ್ಯಯನಗಳು ಸಾಬೀತು ಪಡಿಸಿವೆ. ಇತ್ತೀಚೆಗೆ ನಮ್ಮ ಆಹಾರ ತಜ್ಞರು,  ಸಂತರೂ, ಅಕ್ಕಿಯನ್ನು ಆಹಾರದ ವಿಲನ್ ಅನ್ನಾಗಿಸಿ, ಕಿರುಧಾನ್ಯಗಳನ್ನು ಸಿರಿಧಾನ್ಯವಾಗಿಸಿ, “ಪ್ರಜ್ಞಾವಂತ ಆಹಾರ” ಎಂದೂ ಹೆಸರಿಸಲಾಗಿದೆ. ಇದು ಅಕ್ಕಿ ಮೇಲಿದ್ದ ಸಹಜವಾದ ಪ್ರೀತಿ ವಿಶ್ವಾಸಗಳನ್ನು ಒಂದಷ್ಟು ಮಟ್ಟಿಗೆ ಕುಗ್ಗಿಸಿದೆ. ಆದರೆ ಅಕ್ಕಿಯು ಹಿಂದೆ ಹೇಗೆ ಪ್ರಸ್ತುತವೋ ಮುಂದೆಯೂ ಅದೇ ಪ್ರಸ್ತುತ ಎಂಬ ತಿಳಿವನ್ನು ಸಂಶೋಧನೆಯು ತಿಳಿಸಿದೆ. ವಾಸ್ತವವಾಗಿ ಅಕ್ಕಿ ಎಂಬ ಒಂದೇ ಪ್ರಭೇದದಿಂದ ಮನುಕುಲಕ್ಕೆ ಪ್ರತಿಶತ 20ರಷ್ಟು ಶಕ್ತಿಯು ದೊರಕುತ್ತಿದೆ. ನಮ್ಮ ತಿನ್ನುವ ತುತ್ತಿನಲ್ಲಿ ಅನ್ನದ ಪಾಲು ನಿಜಕ್ಕೂ ದೊಡ್ಡದು. ನಮ್ಮ ಆಹಾರ ಧಾನ್ಯಗಳಲ್ಲಿ ಸಾಕಷ್ಟು ವೈವಿಧ್ಯತೆಯನ್ನು ಹೊಂದಿರುವ ಅತಿ ಮುಖ್ಯ ಬೆಳೆ ಭತ್ತ. ಇಂತಹಾ ಅಕ್ಕಿಯ ಕುರಿತು ತೀರಾ ಇತ್ತೀಚೆಗೆ ಅಕ್ಕಿಯನ್ನೇ ತಿನ್ನದ ದೇಶದಿಂದ ವಿಜ್ಞಾನಿಗಳು ಒಂದಷ್ಟು ಪ್ರೀತಿಯಿಂದ ಸಂಶೋಧನೆಯನ್ನು ಕೈಗೊಂಡು ಅದರ ಸಾಮರ್ಥ್ಯದ ತಿಳಿವನ್ನು ಜಗತ್ತಿಗೆ ಹಂಚಿದ್ದಾರೆ.

                ಈ ಹಿಂದೆ ತಿಳಿದಂತೆ ಒರೈಜಾ ಎಂಬ ಸಸ್ಯ ಸಂಕುಲಕ್ಕೆ ಸೇರಿದ ಪ್ರಮುಖವಾದ ಎರಡು ಪ್ರಭೇದಗಳು ಅನ್ನದ ತಯಾರಿಯಲ್ಲಿ ಹೆಸರುವಾಸಿ. ನಮಗೆಲ್ಲಾ ಪರಿಚಿತವಾದ ಏಷಿಯಾ ಮೂಲದ ಇಂಡಿಕಾ ಪ್ರಭೇದ ಒಂದಾದರೆ, ಆಫ್ರಿಕನ್ ಮೂಲದ ಗ್ಲಾಬೆರ್ರಿಮಾ ಎಂಬ ಪ್ರಭೇದ ಮತ್ತೊಂದು. ಇವೆರಡೂ ಪ್ರಭೇದಗಳು ಸ್ವತಂತ್ರವಾಗಿ ವಿಕಾಸವಾಗಿ ಸಾಗುವಳಿಯಲ್ಲಿ ಒಳಗೊಂಡಿವೆ. ಏಷಿಯಾದಲ್ಲಿ ಸುಮಾರು 10,000 ವರ್ಷಗಳ ಹಿಂದಿನಿಂದ ಹಾಗೂ ಆಫ್ರಿಕಾದ ಪ್ರಭೇದವು 3000 ವರ್ಷಗಳಿಂದ ಉಣ್ಣುವವರ ತಟ್ಟೆಯನ್ನು ಸೇರುತ್ತಿದೆ. ಇತ್ತೀಚೆಗೆ ಏಷಿಯಾದ ಮೂಲದ ಪ್ರಭೇದವು ಸರ್ವವ್ಯಾಪಿಯಾಗಿ ಸರಿಸುಮಾರು ಅರ್ಧದಷ್ಟು ಜಗತ್ತಿನ ಆಹಾರದ ಚಿಂತೆಯನ್ನು ನಿಭಾಯಿಸುತ್ತಿದೆ. ಆಹಾರದಿಂದ ಒದಗುವ ಒಟ್ಟು ಪ್ರತಿಶತ 20ರಷ್ಟು ಶಕ್ತಿಯು ಈ ಒಂದೇ ಪ್ರಭೇದದಿಂದ ಮನುಕುಲಕ್ಕೆ ದೊರಕುತ್ತಿದೆ ಎಂದರೆ ಇದರ ದೈತ್ಯಶಕ್ತಿ ಅರ್ಥವಾಗುತ್ತದೆ. ಅಲ್ಲದೆ ಮುಂದೆ 2050ರ ವೇಳೆಗೆ ಜಗತ್ತಿನ ಒಟ್ಟು ಜನಸಂಖ್ಯೆಯು ಇನ್ನೂ 300 ಕೋಟಿ ಹೆಚ್ಚಾಗಲಿದೆ. ಆಗ ಊಟದ ಚಿಂತೆಗೆ ಅಕ್ಕಿ ಮಾತ್ರವೇ ಪ್ರಬಲವಾದ ಆಹಾರ ಒದಗಿಸುವ ಸಸ್ಯ -ಎಂಬ ಈ ಅಕ್ಕಿಯ ಬೃಹತ್ ದರ್ಶನವನ್ನು ಅಂತರರಾಷ್ಟ್ರೀಯ ತಂಡವೊಂದು ಸಂಶೋಧಿಸಿದೆ. ಇದನ್ನು ಅಕ್ಕಿಯ ಪ್ರಮುಖ ಸಂಕುಲದ ಬಹುಪಾಲು ಪ್ರಭೇದಗಳ ಸಂಪೂರ್ಣ ಆನುವಂಶಿಕ ಗುಣಾವಗುಣಗಳ ಹೆಕ್ಕಿ ವಿಶ್ಲೇಷಿಸಿ ವಿವರಗಳನ್ನು ಅನಾವರಣಗೊಳಿಸಿದೆ. 

                ಅಮೆರಿಕಾದ ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಪ್ರಯೋಗಾಲಯದ ಜೀವಿವಿಜ್ಞಾನಿಗಳ ನೇತೃತ್ವದಲ್ಲಿ ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡವು, ಏಷಿಯಾ, ಉತ್ತರ ಹಾಗೂ ದಕ್ಷಿಣ ಅಮೇರಿಕಾ, ಯೂರೋಪ್, ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಖಂಡಗಳ ಭತ್ತ ಬೆಳೆವ ವಲಯಗಳ ಬಹುಪಾಲು ಭತ್ತದ ಪ್ರಭೇದಗಳನ್ನು ಆನುವಂಶೀಯ ವಿವರಗಳಿನ್ನು ಒರೆಹಚ್ಚಿ ನೋಡಿತು.  ಒರೈಜಾ ಸಂಕುಲದ ಸುಮಾರು 13 ಜೀನೋಮ್ ಮಾದರಿಯ ಪ್ರಭೇದಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ನಡೆಸಲಾಗಿದೆ.  ಈ ಎಲ್ಲಾ ಪ್ರಭೇದಗಳು ಸರಿ ಸುಮಾರು 15ದಶಲಕ್ಷ ವರ್ಷಗಳ ವಿಕಾಸದ ಹಾದಿಯನ್ನು ಸವೆಸಿರುವ ಅರಿವನ್ನು ಪ್ರಸ್ತುತ ಬಳಕೆಯ ಮಾದರಿಗಳಿಗೆ ಹೋಲಿಸಿ ಸಾಮಥ್ಯ೯ವನ್ನು ಅರಿಯಲಾಗಿದೆ. ಈ 13 ಜೀನೋಮ್ ಮಾದರಿಗಳಲ್ಲಿ ದ್ವಿಗುಣಿತ ಹಾಗೂ ಬಹುಗುಣಿತವಾಗುವ ಆನುವಂಶಿಕ ಬಗೆಗಳನ್ನು ಬಳಸಲಾಗಿತ್ತು. ಇದರಲ್ಲಿ ಸಹಜವಾಗಿ ಪ್ರಸ್ತುತ ಸಾಗುವಳಿಯಲ್ಲಿರುವ ಪ್ರಭೇದವೂ ಒಳಗೊಂಡಿತ್ತು. ಈ ಶೋಧದ ಅಧ್ಯಯನದಲ್ಲಿ ಇವೆಲ್ಲವುಗಳ ಜೀನೋಮ್ ವಿವರಗಳಿಂದ ಅವುಗಳ ಬಳಸಿ ಬಂದ ವಿಕಾಸದ ಹಾದಿಯನ್ನು, ಸಾಗಿ ಬಂದ ಸಂಕೀರ್ಣ ತಿಳಿವಳಿಕೆಯನ್ನು ಅರಿಯಲಾಗಿದೆ. ಹಾಗಾಗಿ ಇದರಿಂದ ಸಾಧ್ಯವಾಗಿರುವ ಭತ್ತದ ಆನುವಂಶಿಕ ವಿವರಗಳ ಸಂಪನ್ಮೂಲವು, ಆ ಬೆಳೆಯು ವಿಕಾಸದಲ್ಲಿ 15 ದಶಲಕ್ಷ ವರ್ಷಗಳಷ್ಟು ಬಹುದೂರದ ಹಾದಿಯನ್ನು ಕ್ರಮಿಸಿ ಕೀಟ, ರೋಗಗಳ ಹಾಗೂ ಬರ ಮುಂತಾದ ವಾತಾವರಣದ ಸಂಕೀರ್ಣತೆಗಳ ಅನುಭವಿಸಿಯೂ ಉಳಿದುಕೊಂಡ ಹಿನ್ನೆಲೆಯ ಸಾಮರ್ಥ್ಯವು ಹೊಸತಾದ ಬಗೆ- ಬಗೆಯ ತಳಿಯಾಗಿಸಿರುವ ಸಾಧ್ಯತೆಗಳನ್ನು ಹೊರಹಾಕಿದೆ. ಈಗ ಸಾಗುವಳಿಯಲ್ಲಿರುವ ಪ್ರಭೇದವು ಸುಮಾರು 6000 ವರ್ಷಗಳ ಉಳುಮೆಯ ವೈವಿಧ್ಯತೆಯನ್ನು ಮೈಗೂಡಿಸಿಕೊಂಡು ಅತ್ಯಂತ ಹೆಚ್ಚು ವಿವಿಧತೆಯನ್ನು ಹೊಂದಿದೆ. ಭತ್ತದ ಸಾಮರ್ಥ್ಯವು ವಿವಿಧ ಖಂಡಗಳ ಹಲವು ಪ್ರಭೇದಗಳ ನಡುವೆ ಸಂಕರಗಳಿಂದಾದ ವಿಶೇಷತೆಯನ್ನು ಸಹಾ ಹೊಂದಿದೆ. ಆದ್ದರಿಂದ ಪ್ರಸ್ತುತ ದಾಖಲಾಗಿರುವ ಆನುವಂಶಿಕ ವಿವರಗಳ ಸಂಪನ್ಮೂಲವು ಹೆಚ್ಚುವ ಜನಸಂಖ್ಯೆಗೆ ಅನ್ನದ ದಾರಿಯನ್ನು ಸುಗಮಗೊಳಿಸುವ ಆಶಯವನ್ನು ಕೊಟ್ಟಿದೆ. ಅಪಾರ ವೈವಿಧ್ಯತೆ, ಉತ್ಪಾದನಾ ಸಾಮರ್ಥ್ಯ, ವಾತಾವರಣದ ಸಹಿಷ್ಣುತೆಗಳಿಂದ ಅಕ್ಕಿ ಮುಂದೆಯೂ ಬಹಳ ದೊಡ್ಡ ಪಾತ್ರವನ್ನೇ ವಹಿಸಲಿದೆ.  ಹೀಗೆ ಭತ್ತವು ತನ್ನ ವಿಕಾಸದ ಹಾದಿಯನ್ನು ಗಟ್ಟಿಗೊಳಿಸುತ್ತಲೇ ಮಾನವಕುಲದ ಬೆಂಬಲವಾಗಿರುವ ಬಗೆಯನ್ನು ಮತ್ತಾವ ಬೆಳೆಗಳೂ ವಹಿಸಿಕೊಂಡಿರದ ಸತ್ಯವನ್ನು ಅರ್ಥಮಾಡಿಕೊಳ್ಳಬೇಕಿದೆ.

                ಸಹಸ್ರಾರು ತಳಿಗಳ ಸಂಪತ್ತಿನ ಏಕೈಕ ಬೆಳೆಯ ಮಹತ್ವವನ್ನು ಅಷ್ಟು ಸುಲಭವಾಗಿ ಹೊಡೆದು ಹಾಕಲು “ಮಿಲೆಟ್-ಮೇಳ”ಎಂಬಂತಹ ಪೌರಾಣಿಕ ಪ್ರವಚನಗಳಿಂದ ಸಾಧ್ಯವಾಗುವುದಿಲ್ಲ. ಅಕ್ಕಿಯಲ್ಲಿ ಸಾಕಷ್ಟು ಪ್ರೊಟೀನ್ ಇದ್ದು, ಒಂದಷ್ಟು ವಿಟಮಿನ್‍-ಗಳೂ ಇದ್ದು, ಖನಿಜಾಂಶಗಳೂ ಸಹಾ ಇರುವುದನ್ನು ಉಳಿಸಿಕೊಳ್ಳಲು ಹೆಚ್ಚು ಪಾಲೀಶ್ ಮಾಡದ ಅಕ್ಕಿಯನ್ನು ಬಳಸಬೇಕು. ಆಧುನಿಕ ಬಳಕೆಗಿಂತ ಮಾನವಕುಲ ಮೂಲದ ಬಳಕೆಯಂತೆ ಉಪಯೋಗಿಸಿದರೆ ಅನ್ನಕ್ಕಿಂತಾ ಬೇರೆಯ ಯಾವುದೇ ಕಾಳು ಅಷ್ಟು ಸುಲಭವಾಗಿ ಹೊಟ್ಟೆಯನ್ನು ತುಂಬಿಸುವುದಿಲ್ಲ. ತಳಿಗಳ ಹೆಸರುಗಳು ಪಟ್ಟಿ ಮಾಡಲೂ ಆಗದಷ್ಟು ಉದ್ದವಾಗಿದೆ. ನಮ್ಮ ರಾಜ್ಯದಲ್ಲೇ ರತ್ನಚೂಡಿ, ಮುಂಡುಗ, ಮೈಸೂರು ಸಣ್ಣ, ರಾಜಮುಡಿ, ಬಂಗಾರಸಣ್ಣ, ಬೈರನೆಲ್ಲು, ದೊಡ್ಡಬೈರನೆಲ್ಲು, ಸಣ್ಣ ಬೈರನೆಲ್ಲು, ಗೌರಿ-ಸಣ್ಣ, ಜಯ,  ಬಂಗಾರಕೋವಿ, ರಾಜಭೋಗ, ಗಂಧಸಾಲೆ, ಜೀರೆಗೆ ಸಣ್ಣ, ವಾಳ್ಯಾ, ದೊಡ್ಡವಾಳ್ಯಾ, ಸಣ್ಣವಾಳ್ಯಾ,  ಹೀಗೆ.. ! ಇವಲ್ಲದೆ ಕೃಷಿ ವಿ.ವಿ.ಗಳು ಬಿಡುಗಡೆ ಮಾಡಿದ ತಳಿಗಳೂ ಇವೆ.

                    ಭತ್ತ – ಸ್ವಕೀಯ ಪರಾಗಸ್ಪರ್ಶದಿಂದ ಬೀಜಕಟ್ಟುವ  ಏಕದಳ ಸಸ್ಯ. ಕೆಲವೊಮ್ಮೆ ಪರಕೀಯ ಪರಾಗಸ್ಪರ್ಶವಾದರೂ ಕಡಿಮೆ. ಹೆಚ್ಚು ಸ್ವಕೀಯ ಪರಾಗಸ್ಪರ್ಶ ಆಗುವುದರಿಂದ ಇದರಲ್ಲಿ ವಿವಿಧತೆ ಕಡಿಮೆ ಇರಬೇಕಿತ್ತು. ಆದರೂ ಸಹಸ್ರಾರು ತಳಿಗಳ ವಿಕಾಸಕ್ಕೆ ಕಾರಣವಾಗಿದೆ. ಮೂಲತಃ ನೆಲದ ವಿವಿಧತೆಯು ಅದರಲ್ಲೂ ಜೊಂಡು ನೆಲದ ನೀರುನಿಂತ ಅಹಿತಕರ ವಾತಾವರಣದಿಂದ  ಸಹಸ್ರಾರು ವರ್ಷಗಳ ಕೃಷಿಯಿಂದ ತರೆಹೆವಾರಿಯಾಗಿ ವಿಕಾಸಗೊಂಡಿದೆ. ಹಾಗಾಗಿ ನೀರು-ನೆಲ-ಜನ ಈ ಮೂರನ್ನೂ ಬೆಸುಗೆಯಾಗಿಸುವ ಸಂಗತಿಗಳು ಅಕ್ಕಿಯನ್ನು ಸಹಸ್ರಾರು ಬಗೆಯಲ್ಲಿ ವೈವಿಧ್ಯಮಯಗೊಳಿಸಿವೆ. ಆಯಾ ನೆಲದ ಸಮುದಾಯ, ಶಕ್ತಿ, ವಾತಾವರಣ ಮುಂತಾಗಿ ಹಸಿವಿನ ನಿವಾರಣೆಗೆಂದೇ ಹುಟ್ಟಿಕೊಂಡ ಸಸ್ಯವಾಗಿದೆ. ಪಶ್ಚಿಮ ಬಂಗಾಳದಲ್ಲಿ 5,000 ತಳಿಗಳಿರುವ ಬಗೆಗೆ ದಾಖಲೆಗಳಿವೆ. ಅಲ್ಲಿನ “ತೃಣ” ಮೂಲ ಎನ್ನುವ ರಾಜಕೀಯತೆಯಲ್ಲಿಯೂ ವಿವಿಧತೆಗಳ ತೃಣವಾದ ಭತ್ತವು ರೂಪಕವಾಗಿದೆ.

                ಅಕ್ಕಿಯಿಂದ ಕೇವಲ ಹೊಟ್ಟೆ ತುಂಬಿಸುವುದನ್ನು ಮಾತ್ರವೇ ಮಾನವಕುಲವು ಪರಿಶೋಧಿಸಿಲ್ಲ. ಮತ್ತೇರಿಸಿ ತಮ್ಮನ್ನು ತಾವೇ ಕಳೆದುಹೋಗಲೂ ಕೂಡ ಅಕ್ಕಿಯನ್ನೇ ಮೊರೆಹೋದ ಸಂಗತಿಗಳಿವೆ. ಮಲೆನಾಡಿಗರಿಗೆ “ಅಕ್ಕಿ ಬೋಜ” ಎಂಬುದು ತಿಳಿದಿದೆ. ಅಕ್ಕಿಯನ್ನು ಬಳಸಿ, ಹುದುಗು ಬರಿಸಿ, ಮದ್ಯವನ್ನಾಗಿಸಿದ ಉತ್ಪನ್ನವದು. ಜಪಾನಿನಲ್ಲಿ ಇದರ ಅನುಕೂಲಕ್ಕೆಂದೇ  ಒಂಭತ್ತು ತಳಿಗಳನ್ನು ಸಂರಕ್ಷಿಸಲಾಗಿದೆ. ವೈನ್‍ ತಯಾರಿಯಲ್ಲಿ ಈ ತಳಿಗಳು ಹೆಸರು ಮಾಡಿವೆ.

          ಅಕ್ಕಿ ಅಥವಾ ಅನ್ನದ ಇಂಗ್ಲೀಶ್ ಸಮಾನಾಂತರ ಪದ “ರೈಸ್”ನ ಹುಟ್ಟನ್ನು ಕುರಿತು ಸಂಕುಲದ ಹೆಸರಾದ “ಒರೈಜಾ”ದಲ್ಲಿ ಗ್ರೀಕ್, ಇಟಾಲಿಯಿನ್, ಪರ್ಷಿಯನ್, ಸಂಸ್ಕೃತ, ತಮಿಳು, ದ್ರಾವಿಡ ಮೂಲದ ಹತ್ತಾರು ಚರ್ಚೆಗಳಿವೆ. ಕನ್ನಡವನ್ನೂ ಸೇರಿಕೊಂಡು ದ್ರಾವಿಡ ಮೂಲದ ಭಾಷಾ ಆಸಕ್ತಿಯ “ಫರ್ಡಿನಾಂಡ್ ಕಿಟ್ಟಲ್” ಅವರ ಪ್ರಕಾರ ರೈಸ್ ದ್ರಾವಿಡ ಮೂಲದ ಪದ.

                ಭತ್ತದ ಬೆಳೆಗೆ ಎಳೆತನದಿಂದ ಬಲಿಯುವವರೆಗೂ ದಟ್ಟವಾದ ಹಚ್ಚ ಹಸಿರು ಬಣ್ಣ. ಬಲಿತ ಮೇಲೆ ಬಂಗಾರದ ಹೊಂಬಣ್ಣ! ಇವೆರಡೂ ಮಾನವ ಕುಲವನ್ನು ಸದಾ ಆಕರ್ಷಿಸಿರುವ ಬಣ್ಣಗಳು. “ಹಸಿರು” ಸಮೃದ್ಧಿ ಅಥವಾ ನೆಮ್ಮದಿಯ ಪ್ರತಿನಿಧಿಸಿದರೆ, ಹೊಂಬಣ್ಣ “ಆನಂದ”ವನ್ನು ಅಥವಾ “ಬೆರಗ”ನ್ನು ಪ್ರತಿನಿಧಿಸುತ್ತದೆ.  ನಮ್ಮ “ನೆಮ್ಮದಿ ಮತ್ತು ಆನಂದ” ಎರಡನ್ನೂ ತನ್ನ ಒಡಲೊಳಗಿಟ್ಟು  ಸದಾ ಅವುಗಳಷ್ಟನ್ನೇ ಹೊರಸೂಸುವ  “ಭತ್ತ” ಎಂದೂ ಬತ್ತದ ಸೆಲೆಯಾಗಿದೆ.

ನಮಸ್ಕಾರ. 

– ಚನ್ನೇಶ್

This Post Has 2 Comments

  1. ಅನ್ಸರ್

    ಭತ್ತದ ಬಗ್ಗೆ ಬರೀತಾ ಹೋದರೆ ಅದಕ್ಕೆ ಕೊನೆಯೇ ಇಲ್ಲವೇನೋ ಎಂದು ಅನಿಸುತ್ತೆ.
    ತೈಚುನ್ಗ್ ನೈಟಿವ್ -1 ಜೊತೆ ನಮ್ಮ ಭತ್ತದ ತಳಿ
    ಯಾದ lR-8 ಬೆರಸಿ ಹೊಸತಳಿಗಳ ಕ್ರಾಂತಿಯನ್ನೇ ಎಬ್ಬಿಸಿ ಎಲ್ಲಾ ಭತ್ತದ ರಾಜ್ಯಗಳಲ್ಲಿ ಜನರ ಹೊಟ್ಟೆ ತು0ಬಿಸಿದರೊ ಇಂದಿಗೂ ಮನಸಲ್ಲಿ ನೆನೆಯುವಂತಹ ದಕ್ಷಿಣ ಭಾರತದ ಭತ್ತದ ವಿಜ್ನಾನಿ ಕಾಣಸಿಗುವುದಿಲ್ಲ , ಬಹುಶ ಗ್ರೇಟ್ ಜೀನ್ ರಾಬರಿ ಇದಕ್ಕೆ ಕಾರಣ ಇರಬಹುದೇನೋ. ಬತ್ತದ ಬಗ್ಗೆ ಲೇಖನ ಚನ್ನಾಗಿ ಮೂಡಿ ಬಂದಿದೆ.
    – ಅನ್ಸರ್.

  2. Shreehari Raya

    ಭತ್ತದ ಬಗೆಗಿನ ಇಷ್ಟೊಂದು ವಿವರವಾದ ಬರವಣಿಗೆ ಅಪೂರ್ವ .ಲೇಖಕರು ಭತ್ತದ ಬಗೆಗಿನ ಚಿಕ್ಕ ವಿವರವನ್ನೂ ಬಿಚ್ಚಿಟ್ಟಿದ್ದಾರೆ. ಅನ್ನವಿಲ್ಲದ ಊಟ ಸಾಧ್ಯವೇ ಇಲ್ಲದಷ್ಟು ಒಗ್ಗಿಯಾಗಿದೆ .ವೈದ್ಯರು ಬೆದರಿಸದಿದ್ದರೆ ಅನ್ನವುಣ್ಣುವ ಪ್ರಮಾಣ ಬದಲಾಗುವುದು ಸಾಧ್ಯವೇ ಇರಲಿಲ್ಲ . ಲೇಖಕರ ಭಾಷಾಹಿಡಿತ ಅತ್ಯುತ್ತಮ …ಶ್ರೀಹರಿ ಸಾಗರ

Leave a Reply