You are currently viewing ಇಂಜನಿಯರಿಂಗ್‌ ವಿದ್ಯಾರ್ಥಿಗಳು ಓದಲೇಬೇಕಾದ ಹೆನ್ರಿ ಪೆಟ್ರೋಸ್ಕಿ : A Great Engineer of Simple Tools

ಇಂಜನಿಯರಿಂಗ್‌ ವಿದ್ಯಾರ್ಥಿಗಳು ಓದಲೇಬೇಕಾದ ಹೆನ್ರಿ ಪೆಟ್ರೋಸ್ಕಿ : A Great Engineer of Simple Tools

ಇಂಜನಿಯರ್‌ಗಳ ದಿನಾಚರಣೆಯ ಶುಭಾಶಯಗಳು

Though ours is an age of high technology, the essence of what engineering is and what engineers do is not common knowledge. Even the most elementary principles upon which great bridges, jumbo jets or super computers are built are alien concepts to many. This is so in part because engineering as a human endeavour is not yet integrated into our culture and intellectual tradition. And while the educators are currently wrestling with the problem of introducing technology into conventional academic curricula, thus better preparing today’s students for life in a world increasingly technological, there is yet no consensus as to how technological literacy can best be achieved.  – Henry Petroski  

(ನಮ್ಮದು ಉನ್ನತ ತಂತ್ರಜ್ಞಾನದ ಯುಗವಾದರೂ, ಇಂಜಿನಿಯರಿಂಗ್ ಎಂದರೇನು ಮತ್ತು ಇಂಜಿನಿಯರ್‌ಗಳು ಏನು ಮಾಡುತ್ತಾರೆ ಎಂಬ ವಿಚಾರವು ಇನ್ನೂ ಸಾಮಾನ್ಯರ ತಿಳಿವಳಿಕೆಯಲ್ಲ. ದೊಡ್ಡ-ದೊಡ್ಡ ಸೇತುವೆಗಳು, ಜಂಬೋ ಜೆಟ್‌ಗಳು ಅಥವಾ ಸೂಪರ್ ಕಂಪ್ಯೂಟರ್‌ಗಳನ್ನು ನಿರ್ಮಿಸುವಲ್ಲಿ ಬಳಸುವ ವಿಜ್ಞಾನದ ಪ್ರಾಥಮಿಕ ತತ್ವಗಳೂ ಸಹ ಅನೇಕರಿಗೆ ಸಹಜ ತಿಳಿವಳಿಕೆಗೆ ಹೊರತಾದ ಪರಿಕಲ್ಪನೆಗಳಂತಾಗಿವೆ. ಮಾನವರ ಪ್ರಯತ್ನವಾಗಿ ಇಂಜಿನಿಯರಿಂಗ್ ಇನ್ನೂ ನಮ್ಮ ಸಂಸ್ಕೃತಿ ಮತ್ತು ಬೌದ್ಧಿಕ ಸಂಪ್ರದಾಯದಲ್ಲಿ ಸಂಯೋಜಿಸಲ್ಪಟ್ಟಿಲ್ಲದ ಕಾರಣ ಇದು ಕೇವಲ ಭಾಗಶಃ ಮಾತ್ರ ನಮ್ಮಲ್ಲಿದೆ. ಅಲ್ಲದೇ ಇನ್ನೂ ಶಿಕ್ಷಣತಜ್ಞರು ಸಹಾ ಪ್ರಸ್ತುತ ಸಾಂಪ್ರದಾಯಿಕ ಶೈಕ್ಷಣಿಕ ಪಠ್ಯಕ್ರಮದಲ್ಲಿ ತಂತ್ರಜ್ಞಾನವನ್ನು ಪರಿಚಯಿಸುವ ಸಮಸ್ಯೆಯೊಂದಿಗೆ ಕುಸ್ತಿಯಾಡುತ್ತಿರುವುದರಿಂದ, ಇಂದಿನ ವಿದ್ಯಾರ್ಥಿಗಳನ್ನು ಹೆಚ್ಚು ತಂತ್ರಜ್ಞಾನದ ಜಗತ್ತಿನ ಜೀವನಕ್ಕಾಗಿ ಸಿದ್ಧಪಡಿಸಬೇಕಿದೆ. ಆದರೂ ತಾಂತ್ರಿಕ ಸಾಕ್ಷರತೆಯನ್ನು ಸಾಧಿಸುವ ಕುರಿತು ಇನ್ನೂ ಒಮ್ಮತವಿಲ್ಲ. – ಹೆನ್ರಿ ಪೆಟ್ರೋಸ್ಕಿ)

ಹೆನ್ರಿ ಪೆಟ್ರೋಸ್ಕಿ ಅವರ To Engineer Is Human  ಎಂಬ ಪುಸ್ತಕದ ಮುನ್ನುಡಿಯ ಆರಂಭದ ಸಾಲುಗಳಿವು. ತುಂಬಾ ಗಮನಾರ್ಹವಾದ ಸಂಗತಿಯೆಂದರೆ ಇಂಜನಿಯರಿಂಗ್‌ ಎಂಬ ಮಹತ್ತರವಾದ ವಿಚಾರಗಳ ಹಿಂದೆಯೂ ಪ್ರಾಥಮಿಕವಾದ ತತ್ವಗಳಿವೆ ಎಂದರೂ, ಶಿಕ್ಷಣದಲ್ಲಿ ಕೇವಲ ಅವುಗಳನ್ನು ಪರಿಚಯಿಸುವ ಕ್ರಮಕ್ಕೆ ಮಾತ್ರವೇ ಒತ್ತುಕೊಟ್ಟು ತಾಂತ್ರಿಕ ಸಾಕ್ಷರತೆಯ ಕಡೆಗೆ ಹೋಗಲು ಇರುವ ಸಮಸ್ಯೆಯನ್ನು ಸರಳವಾಗಿ ಕೊಟ್ಟಿದ್ದಾರೆ, ಇಂಜನಿಯರಿಂಗ್‌ ವಿಜ್ಞಾನದ ವಿಶಿಷ್ಟ ಬರಹಗಾರ ಮತ್ತು ಇಂಜನಿಯರಿಂಗ್‌ ವಿಜ್ಞಾನಿ ಹಾಗೂ ಪ್ರೊಫೆಸರ್‌ ಹೆನ್ರಿ ಪೆಟ್ರೋಸ್ಕಿ.  ತಾಂತ್ರಿಕ ವಿಜ್ಞಾನವನ್ನು ಡಿಕೋಡ್‌ ಮಾಡಿ ರಸವತ್ತಾಗಿ ಎಲ್ಲರಿಗೂ ವಿವರಿಸುವಲ್ಲಿ ಪೆಟ್ರೋಸ್ಕಿ ಅವರದ್ದು ಅಸಾಧಾರಣ ಪ್ರತಿಭೆ. ತರಬೇತಿಯಿಂದ ಮಣ್ಣು ವಿಜ್ಞಾನದ ವಿದ್ಯಾರ್ಥಿಯಾದ ನನಗೆ ಆಕರ್ಷಣೆ ಮತ್ತು ಪ್ರೀತಿಯಿಂದ ಇಂಜನಿಯರಿಂಗ್‌ ಅತ್ಯಂತ ಆಪ್ತವಾದ ವಿಜ್ಞಾನ. ಅದರಲ್ಲೂ ಅರಿವಿನ ಪರಿಧಿಗೆ ದಕ್ಕುವಂತೆ ತಂತ್ರಜ್ಞಾನದ ಇತಿಹಾಸ ಮತ್ತು ಅದರೊಳಗಿನ ಆಪ್ತ ಲಯವನ್ನು ತೆರೆದಿಡುವ ಅವರ ಸಂವಹನ ಕೌಶಲ್ಯ ನಿಜಕ್ಕೂ ಪ್ರತಿಯೊಬ್ಬ ಇಂಜನಿಯರಿಂಗ್‌ ವಿದ್ಯಾರ್ಥಿಗೆ ಗೊತ್ತಿರಲೇಬೇಕು ಎನ್ನಿಸಿತು.  

ಹೆನ್ರಿ ಪೆಟ್ರೋಸ್ಕಿ ಅವರ ಕರ್ಮಭೂಮಿ ಅಮೆರಿಕದ ಡ್ಯೂಕ್‌ ವಿಶ್ವವಿದ್ಯಾಲಯ. ತಮ್ಮ ಜೀವನದ ಅತ್ಯಂತ ದೀರ್ಘಕಾಲ ಅಲ್ಲಿ ಇಂಜನಿಯರಿಂಗ್‌ ಮತ್ತು ಇತಿಹಾಸದ ಪ್ರಾಧ್ಯಾಪಕರಾಗಿದ್ದರು. ಇದೇ 2023ರ ಜೂನ್‌ 14ರಂದು ತೀರಿಕೊಂಡರು. ಪೆಟ್ರೋಸ್ಕಿ 1942ರ ಫೆಬ್ರವರಿ 6ರಂದು ನ್ಯೂರ್ಯಾಕ್‌ ನಲ್ಲಿ ಜನಿಸಿದವರು. ಮ್ಯಾನ್‌ಹಟನ್‌ ಕಾಲೇಜಿನಲ್ಲಿ ಮೆಕಾನಿಕಲ್‌ ಇಂಜನಿಯರಿಂಗ್‌ ಪದವಿಯನ್ನು 1963ರಲ್ಲಿ ಪಡೆದರು. ಮುಂದೆ ಅರ್ಬನಾ-ಶಾಂಪೆನ್‌ನ ಇಲಿನಾಯ್‌ ವಿಶ್ವವಿದ್ಯಾಲಯದಲ್ಲಿ ಸೈದ್ಧಾಂತಿಕ ಮತ್ತು ಆನ್ವಯಿಕ ಮೆಕಾನಿಕ್ಸ್‌ (Theoretical and Applied Mechanics) ನಲ್ಲಿ ಸ್ನಾತಕೋತ್ತರ ಹಾಗೂ ಪಿ.ಎಚ್.ಡಿ. ಪದವಿಗಳನ್ನು ಪಡೆದು ಆಸ್ಟಿನ್‌ನ, ಟೆಕ್ಸಾಸ್‌ ವಿಶ್ವವಿದ್ಯಾಲಯದಲ್ಲಿ ಮತ್ತು ಆರ್ಗೊನ್‌ ರಾಷ್ಟ್ರೀಯ ಪ್ರಯೋಗಶಾಲೆಯಲ್ಲಿ ಕೆಲಸ ಮಾಡಿದರು. ಮುಂದೆ 1980ರಲ್ಲಿ ಡ್ಯೂಕ್‌ ವಿಶ್ವವಿದ್ಯಾಲಯವನ್ನು ಸೇರಿ ಅಲ್ಲಿಯೇ ನೆಲೆಯಾದರು.

ತಾಂತ್ರಿಕ ವಿಜ್ಞಾನವನ್ನು ಕಲಿಯುವಾಗಲೇ ಕಾಲೇಜಿನ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಆಸಕ್ತರಾದ ಪೆಟ್ರೋಸ್ಕಿ, ಕಾಲೇಜಿನ ಪತ್ರಿಕೆಗಳಿಗೆ ಬರೆಯುವ ಮೂಲಕ ಬರಹದಲ್ಲಿ ಆಸಕ್ತಿಯನ್ನು ಪಡೆದರು. ಮುಂದೆ ಆರ್ಗೊನ್‌ ರಾಷ್ಟ್ರೀಯ ಪ್ರಯೋಗಶಾಲೆಯಲ್ಲಿ ಸಂಶೋಧಕರಾಗಿದ್ದಾಗಲೂ ಬಿಡುವಿನ ಹಾಗೂ ರಾತ್ರಿ ವೇಳೆಯಲ್ಲಿ ಸಣ್ಣ-ಪುಟ್ಟ ಪ್ರಬಂಧಗಳನ್ನು ಬರೆಯಲು ಆರಂಭಿಸಿದರು. ಮುಖ್ಯವಾಗಿ 14 ಸಾಲುಗಳ “ಸಾನೆಟ್‌” ಗಳಲ್ಲಿ ಇಡಿಯಾದ ಪರಿಕಲ್ಪನೆಯನ್ನು ವಿವರಿಸುವ ಆನಂದವನ್ನು ಕಂಡುಕೊಂಡು, ಪ್ರಭಾವಿತರಾಗಿ 600-800 ಪದಗಳಲ್ಲಿ ವಿಜ್ಞಾನ-ತಂತ್ರಜ್ಞಾನದ ವಿಚಾರಗಳನ್ನು ಎಂ.ಐ.ಟಿ.ಯ ಟೆಕ್ನಿಕಲ್‌ ರಿವ್ಯೂ (MIT’s Technology Review) ಮತ್ತು ನ್ಯೂರ್ಯಾಕ್‌ ಟೈಮ್ಸ್‌ (The New York Times) ಗಳಲ್ಲಿ ಬರೆಯಲು ಆರಂಭಿಸಿದರು. ಹೀಗೆ ಬರೆಯುವ ಆನಂದ ಮತ್ತು ಪ್ರೀತಿಯನ್ನು ಕಂಡುಕೊಂಡು, ವಿಷಯಗಳು ಬಯಸುವ ಉದ್ದುದ್ದವಾದ ವಿವರಗಳ ಬೇಡಿಕೆ ಮತ್ತು ಅವಶ್ಯಕತೆಯಿಂದ 1985- 2022ರ ನಡುವೆ ಸುಮಾರು 20 ಪುಸ್ತಕಗಳನ್ನು (List of His Books ಕೆಳಗಿದೆ) ಪ್ರಕಟಿಸಿದರು. ಅವೆಲ್ಲವೂ ತಂತ್ರಜ್ಞಾನದ ಒಳಗಿನ ಪ್ರಾಥಮಿಕ ಹಾಗೂ ಅವಶ್ಯಕವಾದ ತತ್ವ ಮತ್ತು ಸಂಗತಿಗಳ ವೈಶಿಷ್ಟ್ಯಗಳನ್ನು ಒಳಗೊಂಡಿವೆ. ಬರಹದ ಅವರ ಪ್ರೀತಿಗೆ ಜೊತೆಯಾಗಿ ಅವರ ಸಂಗಾತಿ ಕ್ಯಾಥರೀನ್‌ ಪೆಟ್ರೋಸ್ಕಿ ಅವರಿದ್ದದೂ ದೊಡ್ಡ ಅನುಕೂಲವೇ ಆಗಿರಬಹುದು. ಕ್ಯಾಥರೀನ್‌ ಕೂಡ ಅಮೆರಿಕ ಬರಹಗಾರ್ತಿ ಹಾಗೂ ಫೋಟೊಗ್ರಾಫರ್‌.

ಹೆನ್ರಿ ಪೆಟ್ರೋಸ್ಕಿ 1980ರಲ್ಲಿ ಡ್ಯೂಕ್‌ ವಿಶ್ವವಿದ್ಯಾಲಯವನ್ನು ಸೇರುವಾಗ ಅವರಿಗೆ ನಡೆಸಲಾದ ಇಂಟರ್‌ವ್ಯೂನಲ್ಲಿಯೂ ಅವರಲ್ಲಿರುವ ಬರಹಗಾರನನ್ನು ಗುರುತಿಸಿದ್ದ ಬಗ್ಗೆ ಹೇಳಿಕೊಂಡಿದ್ದಾರೆ. ಬಹುಶಃ ಅದೇ ಅವರು ಅಲ್ಲಿ ಜೀವನ ಪೂರ್ತಿ ತೊಡಗಿಕೊಳ್ಳಲೂ ಸಾಧ್ಯವಾಗಿರಬೇಕು. ಪೆಟ್ರೋಸ್ಕಿ ಡ್ಯೂಕ್‌ ವಿಶ್ವವಿದ್ಯಾಲಯದಲ್ಲಿ ಸಿವಿಲ್‌, ಎನ್ವಿರೋನ್‌ಮೆಂಟಲ್‌ ಇಂಜನಿಯರಿಂಗ್‌ ಮತ್ತು ಇತಿಹಾಸದ ಪ್ರಾಧ್ಯಾಪಕರಾಗಿದ್ದರು. ಅಲ್ಲಿ ಸೇರಿದ ಐದೇ ವರ್ಷದಲ್ಲಿ ಅವರ ಮೊದಲ ಪುಸ್ತಕ To Engineer is Human (1985) ಪ್ರಕಟವಾಯಿತು.

ಇಂಜನಿಯರಿಂಗ್‌ ಎಂದರೇನು ಎಂಬ ಪ್ರಶ್ನೆಗೆ ಅವರ ಉತ್ತರ ಹೀಗಿದೆ.. “ಇಂಜನಿಯರಿಂಗ್‌ ಒಂದು ವಿನ್ಯಾಸವಾಗಿದೆ, ಈ ವಿನ್ಯಾಸವು ವೈಫಲ್ಯಗಳನ್ನು ತಪ್ಪಿಸುವ ಮಾರ್ಗವಾಗಿದ್ದು, ಇಡೀ ಪ್ರಕ್ರಿಯೆಯನ್ನು ನಡೆಸಲು ಅಗತ್ಯ” ಹಾಗಾಗಿ ಪೆಟ್ರೋಸ್ಕಿ ಯಾವುದೇ ಬೃಹತ್‌ ಪ್ರಾಜೆಕ್ಟ್‌ ಅಥವಾ ಕಟ್ಟಡಗಳ ನಿರ್ಮಿತಿಯಲ್ಲಿಯೂ ಸಣ್ಣ-ಪುಟ್ಟ ಅಗತ್ಯಗಳ ಮತ್ತು ಅವುಗಳ ವ್ಯವಸ್ಥಿತ ಜೋಡಣೆಗಳ ಕಡೆಗಿನ ಗಮನ ಮುಖ್ಯ ಎಂದು ಪ್ರತಿಪಾದಿಸುತ್ತಾ, ಅಂತಹಾ ಪುಟ್ಟ ಪುಟ್ಟ ವಿಚಾರಗಳಿಂದಲೇ ಮಹತ್ವದ ಇಂಜನಿಯರಿಂಗ್‌ ಅನ್ನು ವಿವರಿಸಿದರು. ಹಾಗಾಗಿ ಪೇಪರ್‌ ಕ್ಲಿಪ್ಸ್‌, ಪೆನ್ಸಿಲ್‌ ಇತ್ಯಾದಿಗಳು ಅವರ ಪ್ರಮುಖ ಆಕರ್ಷಕ ಟೂಲ್‌ಗಳಾದವು. ಟೂತ್‌ ಪಿಕ್‌, ಪೆನ್ಸಿಲ್‌, ಪೇಪರ್‌ ಬಾಯ್‌, ಇಂಜನಿಯರಿಂಗ್‌ ಆಲ್ಫಬೆಟ್‌ಗಳು, ಇಂಜನಿಯರ್‌ ಒಬ್ಬನ ಮಹಾನ್‌ ಕನಸುಗಳಾದವು. ಬಲ (Force) ದಲ್ಲಿಯ Pull, Push, Slip, Start ಹಾಗೂ Stop ಗಳು ಹದವಾಗಿ ಅಕ್ಷರಗಳಾಗಿ ಹೆಣೆಯಲ್ಪಟ್ಟು ಇಂಜನಿಯರಿಂಗ್‌ ಕೌಶಲ್ಯದ ಮಹಾಕಾವ್ಯದ ಬೃಹತ್‌ ಗ್ರಂಥಗಳಂತೆ ಇಂದು ನಮ್ಮ ಮುಂದಿವೆ.

ಒಂದು ಉದಾಹರಣೆಯೆಂದರೆ ಪೆಟ್ರೋಸ್ಕಿ ಅವರ ಮೂರನೆಯ ಪುಸ್ತಕ, “ದ ಪೆನ್ಸಿಲ್‌- The Pencil: A History of Design and Circumstance,” ಅದರ ಮೊದಲ ಅಧ್ಯಾಯ “What We Forget” ಆರಂಭವಾಗುವುದೇ ಹೀಗೆ

Henry David Thoreau seemed to think of everything when he made a list of essential supplies for a twelve-day excursion into the Maine woods. He included pins, needles,….. ವಿಖ್ಯಾತ ಬರಹಗಾರ ಹೆನ್ರಿ ಡೇವಿಡ್‌ ತೋರೊ ಕಾಡೊಳಗೆ ಕಳೆಯುವ ದಿನಗಳಿಗಾಗಿ ಮಾಡಿದ ತಯಾರಿಯಲ್ಲಿ ಒಂದು ಸೂಜಿ, ಪಿನ್ನೂ… ಏನನ್ನೂ ಬಿಡದಂತೆ ಕೊಂಡೊಯ್ಯಲು ಪಟ್ಟಿ ಮಾಡಿದ್ದರಲ್ಲವೇ? ಎಂಬ ವಿವರಗಳಿಂದ…. ಹೀಗೆ  “ದ ಪೆನ್ಸಿಲ್‌” ಪುಸ್ತಕವು ಓರ್ವ ಇಂಜನಿಯರ್‌ನ ಅಥವಾ ಯಾರಾದರೊಬ್ಬರ ತಯಾರಿಯನ್ನು ಪ್ರೇರೇಪಿಸುತ್ತದೆ. ಇಡೀ ಪುಸ್ತಕವು  ಸುಮಾರು 22 ಅಧ್ಯಾಯಗಳಲ್ಲಿ “ಪೆನ್ಸಿಲ್‌” ಮೂಲಕ ಅದರ ಸಂಪೂರ್ಣ ಇತಿಹಾಸವನ್ನು ಒಳಗೊಂಡು ಇಂಜನಿಯರಿಂಗ್‌ ಅಗತ್ಯದ ಒಟ್ಟಾರೆಯ ವಿನ್ಯಾಸದ ಮತ್ತು ಅದರ ಸುತ್ತಲಿನ ಸನ್ನಿವೇಶವನ್ನು ಸಾಕಷ್ಟು ವಿವರಗಳಿಂದ ಕಟ್ಟಿಕೊಡುತ್ತದೆ.  ಒಂದು ಸಣ್ಣ ವಿಚಾರವು ಮಹತ್ತರವಾದ ಪರಿಕಲ್ಪನೆಯನ್ನು ಕಟ್ಟುವ ಅಥವಾ ಹುಟ್ಟಿಹಾಕುವ ಸಂಪೂರ್ಣ ವಿವರಗಳನ್ನು ಒದಗಿಸುತ್ತದೆ. ಒಬ್ಬ ಇಂಜನಿಯರ್‌ಗೆ ಇರಬೇಕಾದ ಸಣ್ಣ ಸಣ್ಣ ಸಂಗತಿಗಳ ಮಹತ್ವವನ್ನು ತೆರೆದಿಡುತ್ತದೆ.

ಮುಂದಿನದು “The Evolution of Useful Things,”  ಇದರಲ್ಲಿ ಪೆಟ್ರೋಸ್ಕಿ ಅವರು “ಫಾರ್ಮ್ (Form) ಫಂಕ್ಷನ್ (Function) ಅನ್ನು ಅನುಸರಿಸುತ್ತದೆ ಎಂಬುದನ್ನು ನಿರಾಕರಿಸುತ್ತಾರೆ ಮತ್ತು ಬದಲಿಗೆ ಫಾರ್ಮ್, ವೈಫಲ್ಯ (Failure) ಗಳನ್ನು ಅನುಸರಿಸುತ್ತದೆ ಎಂದು ಹೇಳುತ್ತಾರೆ. ನಾವು ಕೆಲಸ ಮಾಡದಿದ್ದಾಗ, ಅವು ವಿಫಲಗೊಳ್ಳುತ್ತವೆ ಮತ್ತು ಸಂಶೋಧಕರು ಮತ್ತು ಎಂಜಿನಿಯರ್‌ಗಳು ಅವುಗಳನ್ನು ಸುಧಾರಿಸುವ ಮಾರ್ಗಗಳನ್ನು ಹುಡುಕುತ್ತಾರೆ”. ಎಂದು ವಿಶ್ಲೇಷಿಸುತ್ತಾರೆ.

       ಹೀಗೆ ವಿವರಗಳು ಬೆಳೆಯುತ್ತಲೇ ಹೋಗುತ್ತವೆ. ಸುಮಾರು 20 ವಿಶಿಷ್ಟವಾದ ಪುಸ್ತಕಗಳ ಮೂಲಕ ಇಂಜನಿಯರಿಂಗ್‌, ವಿಜ್ಞಾನ ಅಲ್ಲದೆ ಕಾವ್ಯ ಸಂಸ್ಕೃತಿ, ಸಾಲದಕ್ಕೆ ಕೌಶಲ್ಯಗಳ ಹಾಗೂ ವೈಫಲ್ಯಗಳ ದಟ್ಟ ಅನುರಣನ ಹಾಗೂ ಸಾರ್ಥಖ್ಯದ ಮಾರ್ಗಗಳ ಉತ್ಖನನ ನಮ್ಮೊಳಗಿನ ಓದಿನಲ್ಲಿ, ಕಲಿಕೆಯಲ್ಲಿ, ಹುಡುಕಾಟದಲ್ಲಿ ಇರಬಹುದಾದ ಬೃಹತ್‌ ಸಮಾಧಾನವನ್ನೂ, ಆನಂದವನ್ನೂ ಒದಗಿಸಿ ಹೆನ್ರಿ ಪೆಟ್ರೋಸ್ಕಿ ಅಮೆರಿಕದ ಇತಿಹಾಸದಲ್ಲಿ “ತಂತ್ರಜ್ಞಾನದ ಕವಿ (America’s Poet Laureate of Technology) ಯಾಗಿ ಶಾಶ್ವತ ಸ್ಥಾನವನ್ನು ಪಡೆದಿದ್ದಾರೆ.

ಪೆಟ್ರೋಸ್ಕಿ ಅವರು ಇಂಜಿನಿಯರಿಂಗ್ ಪರಿಕಲ್ಪನೆಗಳನ್ನು ಸಾಮಾನ್ಯ ತಿಳಿವಿಗೂ ಒಟ್ಟಂದದ ಮಹತ್ವಕ್ಕೂ ಭಾಷಾಂತರಿಸಲು ಮತ್ತು ಅವುಗಳನ್ನು ವ್ಯಾಪಕವಾಗಿ ಸಂವಹನ ಮಾಡಲು ವಿಶೇಷವಾದ ಪ್ರವೀಣರಾಗಿದ್ದರು. ತಮ್ಮ ಪುಸ್ತಕಗಳ ಮೂಲಕ ಸಾಕಷ್ಟು ಕ್ರಾಂತಿಕಾರಿಯಾಗಿ ಭಿನ್ನ ಮಾರ್ಗಗಳ ತಾಂತ್ರಿಕತೆಯ ಸಂವಹನವನ್ನು ಸಾಧಿಸಿದ್ದ ಕೀರ್ತಿ ಪೆಟ್ರೋಸ್ಕಿ ಅವರದ್ದು. ಅಮೆರಿಕೆಯಾದ್ಯಂತ ಅನೇಕ ಪ್ರಶಂಸೆಗಳಿಗೆ ಒಳಗಾಗಿದ್ದ ಪೆಟ್ರೋಸ್ಕಿ ಗೌರವ ಪದವಿಗಳನ್ನು Clarkson University, Trinity College, Valparaiso University, Manhattan College, Missouri University of Science and Technology, and McGill University ಗಳಿಂದ ಪಡೆದಿದ್ದರು. ಅಮೆರಿಕದ ಬೃಹತ್‌ ಸೇತುವೆಗಳು, ವಿಶೇಷ ವಿನ್ಯಾಸಗಳ ಜೊತೆಗೂ ಪೆಟ್ರೋಸ್ಕಿ ಅವರ ಹೆಸರು ಶಾಶ್ವತವಾಗಿದೆ. 

ಸಾಧಾರಣ ಯಃಕಶ್ಚಿತ್ “ಹಲ್ಲು ಕಡ್ಡಿ”ಯು ಕಥೆಯೊಂದು ಬೆಳೆದು ಅಸಾಧಾರಣ ಇಂಜನಿಯರಿಂಗ್‌ ಕೌಶಲ್ಯಗಳನ್ನು ಮೆರೆಸುವ ವಿಶೇಷವಾದ ವಿನ್ಯಾಸಗಳ ಪರಿಮಿತಿಗಳನ್ನು ವಿಸ್ತರಿಸುವ ಓದಿಗಾಗಿ ನಮ್ಮ ಇಂಜನಿಯರಿಂಗ್‌ ವಿದ್ಯಾರ್ಥಿಗಳು ಕಡ್ಡಾಯವಾಗಿ ಹೆನ್ರಿ ಪೆಟ್ರೋಸ್ಕಿ ಅವರನ್ನು ಓದಲೇಬೇಕು. ಖಂಡಿತವಾಗಿಯೂ ಪೆಟ್ರೋಸ್ಕಿಯವರು ಅನೇಕರಿಗೆ ಪರಿಚಯವಿಲ್ಲದ ಕಾರಣ ಈ ಕಡ್ಡಾಯ.  ನನ್ನ ಪುಸ್ತಕಗಳ ಕಪಾಟಿನಲ್ಲೂ Invention by Design ಪುಸ್ತಕವು ಪೂರ್ಣ ಓದಲಾಗದ ನನ್ನನ್ನು ಅಣಕಿಸುತ್ತಾ ಕುಳಿತಿದೆ. ಇವರ ಬಹು ಪಾಲು ಪುಸ್ತಕಗಳು  ಆಗಿ ಇಂಟರ್‌ನೆಟ್‌ ನಲ್ಲಿ e-Bookಗಳಾಗಿ ಸಿಗುತ್ತವೆ. ಓದುವ ಪ್ರೀತಿ, ಜೊತೆಗೆ ಹುಡುಕುವ ಕಣ್ಣುಗಳು ನಿಮಗಿದ್ದರೆ, ಖಂಡಿತಾ…!

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್.‌   

This Post Has 2 Comments

  1. Channesh T S

    Test

Leave a Reply