ಕ್ಯಾನ್ಸರ್!! ಕ್ಯಾನ್ಸರ್ ಖಾಯಿಲೆಯ ಭಾದಿತರ ಜೀವನಗಾಥೆಗಳನ್ನು ಓದಿರುತ್ತೇವೆ. ಅದರ ವಿರುದ್ಧ ಹೋರಾಡಿ ಗೆದ್ದ ಕಥೆಗಳನ್ನು ಓದಿರುತ್ತೇವೆ. ಮನುಷ್ಯ ಜಯಿಸಿರುವ ಎಷ್ಟೋ ಖಾಯಿಲೆಗಳಿರುವಾಗ ಕ್ಯಾನ್ಸರ್ ಏಕೆ ಇನ್ನೂ ಜಯಿಸಲಾಗದ ಯುದ್ಧವಾಗಿದೆ ಎಂದು ಕೆದಕ ಹೋದರೆ ಅದರ ವಿಜ್ಞಾನವನ್ನು ಅರಿಯಬೇಕಾಗುತ್ತದೆ. ಅಂತಹ, ಸಾಮಾನ್ಯರಿಗೆ ಕ್ಯಾನ್ಸರ್ ನ ಜೀವಿವಿಜ್ಞಾನವನ್ನು ತಿಳಿಸುವ ಕೃತಿಯೊಂದನ್ನು “ದ ಸೈನ್ಸ್ ಮಾಸ್ಟರ್ಸ್” ಸರಣಿಯಲ್ಲಿ ಇಂಗ್ಲೀಷಿನಲ್ಲಿ 1998 ರಲ್ಲಿ ಪ್ರಕಟಿಸಲಾಯಿತು. ಸುಮಾರು ಐವತ್ತು ವಷ೯ಗಳಿಂದ ಕ್ಯಾನ್ಸರ್ ಬಯಾಲಜಿಯಲ್ಲಿ ಸಂಶೋಧನೆ ನಡೆಸುತ್ತಿರುವ ಅಮೆರಿಕದ ಎಂ.ಐ.ಟಿ.ಯ ವೈಟ್ ಹೆಡ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿರುವ ಡಾ. ರಾಬಟ್೯ ವೈನ್ ಬಗ್೯ ಬರೆದಿರುವ ಕೃತಿಯೇ “One Renegade Cell”.
ಕ್ಯಾನ್ಸರ್ ಎಂದರೇನು? ಅದನ್ನು ಸಾಮಾನ್ಯರಿಗೆ ತಿಳಿಸುವುದಕ್ಕೆ ತಮ್ಮ ಸಂಶೋಧನಾ ಮತ್ತು ಉಪನ್ಯಾಸದ ಅನುಭವಗಳ ಹಿನ್ನಲೆಯಲ್ಲಿ ಸರಳ ಭಾಷೆಯ ಶಕ್ತ ವಿಚಾರಗಳೊಂದಿಗೆ ಅಥ೯ ಮಾಡಿಸುತ್ತಾರೆ ಡಾ.ವೈನ್ ಬಗ್೯. ಪುಸ್ತಕದ ಮೊದಲ ಅಧ್ಯಾಯ ಈ ಹಿನ್ನೆಲೆಯಲ್ಲಿ ಕ್ಯಾನ್ಸರ್ ತಿಳಿವಳಿಕೆಗೆ ಪೀಠಿಕೆ ಒದಗಿಸುತ್ತದೆ ಹಾಗೂ ಜೀವಿಕೋಶಗಳ ವಿಭಜನೆ ಮತ್ತು ಅಂಗರಚನೆಯ ಸಂಕ್ಷಿಪ್ತ ವಿವರಣೆಯನ್ನು ನೀಡುತ್ತದೆ. ಅದರ ಒಂದು ಉದಾಹರಣೆಯಾಗಿ ಈ ಕೆಳಗಿನ ಅವರ ಪ್ಯಾರಾಗಳನ್ನು ಓದಬಹುದು.
“Tumors are not foreign invaders. They arise from the same material used by the body to construct its own tissues. Tumors use the same components – human cells – to form jumbled masses that disrupt biological order and function and, if left unchecked, to bring the whole complex, life sustaining edifice that is the human body crashing down. Normal and malignant cells know how to build. Each carries its own agenda that tells it when it should grow and divide and how it should aggregate with other cells to create organs and tissues. Our bodies are nothing more than highly complex societies of rather autonomous cells, each retaining many of the attributes of a fully independent organism. Right there, we confront great beauty and profound danger. The beauty lies in the coordinated behavior of so many cells to create the single, highly functional cooperative that is the human body. The danger lies in the absence of a single overseeing master builder, which seems to put the whole enterprise at great risk. Granting autonomy to trillions of worker cells invites chaos. When, as usually happens, these cells are well behaved and public-spirited, extraordinary complex order ensues. But on occasion, a cell may choose to go its own way and invent its own novel version of a tissue or organ. It is then that we see the much-feared chaos that we call cancer”.
ಕ್ಯಾನ್ಸರ್ ಒಂದೇ ಒಂದು ಖಾಯಿಲೆಯಲ್ಲ. ಅದು ಜೀವಿಕೋಶಗಳ ಅನಿಯಂತ್ರಿತ ವಿಭಜನೆ, ಬೆಳವಣಿಗೆ ಮತ್ತು ಸ್ಥಳಾಂತರ ಸೃಷ್ಟಿಸುವ ಹಲವಾರು ಖಾಯಿಲೆಗಳ ಸಮೂಹವನ್ನು ಪ್ರತಿನಿಧಿಸುತ್ತದೆ. ಕ್ಯಾನ್ಸರ್ ನ ಮೂಲ 1970 ರ ದಶಕದವರೆಗೆ ಯಕ್ಷಪ್ರಶ್ನೆಯಾಗಿಯೇ ಉಳಿದಿತ್ತು. ಮಾನವನ ಇತಿಹಾಸದಲ್ಲಿ ಅದರ ಇರುವಿಕೆ ದಾಖಲಾಗಿದ್ದರೂ ಅದರ ಹುಟ್ಟು ಮತ್ತು ಬೆಳವಣಿಗೆಯ ಬಗ್ಗೆ ಸರಿಯಾದ ತಿಳಿವಳಿಕೆ ಇರಲಿಲ್ಲ. ಯೂರೋಪಿನ ಪುನರುತ್ಥಾನ ಹಾಗೂ ಪಶ್ಚಿಮದ ಕೈಗಾರಿಕಾ ಕ್ರಾಂತಿಯೊಂದಿಗೆ ವಿಜ್ಞಾನ ಹಲವು ಶಾಖೆಗಳಾಗಿ ಬೆಳೆಯತೊಡಗಿತ್ತು ಎಂಬುದು ನಮಗೆಲ್ಲರಿಗೂ ತಿಳಿದ ವಿಚಾರ. ಹೀಗೆ ಬೆಳೆದ ವೈದ್ಯಕೀಯ ವಿಜ್ಞಾನ ಕ್ಯಾನ್ಸರ್ ನ ಮೂಲದ ಬಗ್ಗೆ ವಿವಿಧ ರೀತಿಯಲ್ಲಿ ಅಭ್ಯಸಿಸತೊಡಗಿತ್ತು. 20 ನೇ ಶತಮಾನದ ಮಧ್ಯಭಾಗದ ಹೊತ್ತಿಗೆ ಕ್ಯಾನ್ಸರ್ ಮೂಲದ ಬಗ್ಗೆ ಮೂರು ರೀತಿಯ ವಿವರಣೆಗಳನ್ನು ಕೊಡಲಾಗುತ್ತಿತ್ತು. ಕೆಲವು ವಿಜ್ಞಾನಿಗಳು ವೈರಸ್ಸಿನಿಂದ ಕ್ಯಾನ್ಸರ್ ಉಂಟಾಗುತ್ತದೆ ಎಂದರೆ, ಅನುವಂಶೀಯ ಗುಣಗಳಿಂದ ಕ್ಯಾನ್ಸರ್ ಉಂಟಾಗುತ್ತದೆ ಎಂದು ಕೆಲವು ವಿಜ್ಞಾನಿಗಳು ಹಾಗೂ ಮಾಲಿನ್ಯಯುಕ್ತ ಪರಿಸರದಿಂದ ಕ್ಯಾನ್ಸರ್ ಉಂಟಾಗುತ್ತದೆ ಎಂದು ಕೆಲವು ವಿಜ್ಞಾನಿಗಳು ತಮ್ಮ ತಮ್ಮ ವಾದಸರಣಿಗಳನ್ನು ಮುಂದಿಡುತ್ತಿದ್ದರು.
ಈ ಎಲ್ಲಾ ವಿವರಣೆಗಳಿಗೂ ತಕ್ಕಮಟ್ಟಿಗಿನ ಆಧಾರಗಳೂ ಸಿಕ್ಕಿದ್ದವು. ಆದರೆ 1950 ರ ನಂತರ ಉಂಟಾದ ಅಣು-ಜೀವಿವಿಜ್ಞಾನ(Molecular Biology)ದ ಬೆಳವಣಿಗೆಯ ಮೂಲಕ ಕ್ಯಾನ್ಸರ್ ಮೂಲದ ಬಗ್ಗೆ ಸೂಕ್ತವಾದ ಪುರಾವೆಗಳು ದೊರಕತೊಡಗಿದವು. ಮುಂದೆ 1970 ರ ದಶಕದಲ್ಲಿ “ಜೀವಿಕೋಶದೊಳಗೆ ಡಿ.ಎನ್.ಎ. ಕಣಗಳಲ್ಲಿರುವ ವಂಶವಾಹಿ(ಜೀನ್) ಗಳ ರೂಪಾಂತರದ (Mutation) ಮೂಲಕವೇ ಕ್ಯಾನ್ಸರ್ ಸಂಭವಿಸುವುದು ಎಂದು ತಿಳಿಯಿತಲ್ಲದೇ ಇಂತಹ ಕ್ಯಾನ್ಸರ್ ಕಾರಕ ಗುಣಾಣುಗಳನ್ನು ಆಂಕೋಜೀನ್(Oncogene)” ಎಂದು ಕರೆಯಲಾಯಿತು. ಈ ಆಂಕೋಜೀನ್ ಅನ್ನು ಅನ್ವೇಷಿಸಿದ ಅಮೇರಿಕಾ ಸಂಯುಕ್ತ ಸಂಸ್ಥಾನದ(ಯು.ಎಸ್.ಎ) ಡಾ.ಮೈಕೆಲ್ ಬಿಷಪ್ ಹಾಗೂ ಡಾ.ಹೆರಾಲ್ಡ್ ವಾಮಸ್ ಅವರ ಪ್ರಯತ್ನಗಳಿಂದ ಬಹಳ ವಷ೯ಗಳಿಂದ ಇದ್ದ ಪ್ರಶ್ನೆಗೆ ಉತ್ತರ ದೊರೆಯಿತು ಹಾಗೂ ಅವರ ಈ ಅನ್ವೇಷಣೆಗೆ 1989 ರಲ್ಲಿ ಶರೀರವಿಜ್ಞಾನ ಮತ್ತು ವೈದ್ಯಕೀಯ ವಿಜ್ಞಾನ ವಿಭಾಗದ ನೊಬೆಲ್ ಬಹುಮಾನವೂ ಲಭಿಸಿತು. ಈ ಎಲ್ಲಾ ವಿವರಗಳು ಪುಸ್ತಕದಲ್ಲಿ ಸೊಗಸಾಗಿ ಮೂಡಿಬಂದಿವೆ.
ನಂತರ ನಡೆದ ಸಂಶೋಧನೆಗಳು ತಂದುಕೊಟ್ಟ ತಿಳಿವಳಿಕೆಗಳಾದ ಪ್ರೊಟೊ-ಆಂಕೋಜೀನ್, ಟ್ಯೂಮರ್ ಸಪ್ರೆಸರ್ ಜೀನ್, ಹಲವು ವಂಶವಾಹಿಗಳ ರೂಪಾಂತರಗಳನ್ನು ಬೇಡುವ, ಸಾಮಾನ್ಯ ಆರೋಗ್ಯಯುತ ಜೀವಿಕೋಶ ಕ್ಯಾನ್ಸರ್ ಜೀವಿಕೋಶಗಳಾಗಿ ಮಾರಣಾಂತಿಕ ಹಂತ ತಲುಪಲು ಸುಮಾರು ವಷ೯ಗಳು ತೆಗೆದುಕೊಳ್ಳುವ ನಿಧಾನ ಪ್ರಕ್ರಿಯೆ ಈ ಎಲ್ಲಾ ವಿಚಾರಗಳ ವೈಜ್ಞಾನಿಕ ಅರಿವನ್ನು ಮುಂದಿನ ಅಧ್ಯಾಯಗಳಲ್ಲಿ ನೀಡುತ್ತದೆ ಈ ಪುಸ್ತಕ. ಅಲ್ಲದೇ ಕೆಲವು ವಂಶವಾಹಿಗಳ ರೂಪಾಂತರಗಳು ಅನುವಂಶೀಯವಾಗಿ ಮುಂದಿನ ಸಂತತಿಗೆ ವಗಾ೯ವಣೆಗೊಳ್ಳುವ ಬಗ್ಗೆ ಹಾಗೂ ಅವು ಸ್ತನ ಕ್ಯಾನ್ಸರ್, ಕಣ್ಣಿನ ರೆಪ್ಪೆಯಲ್ಲಿ ಕಂಡುಬರುವ ಕ್ಯಾನ್ಸರ್ ಸೃಷ್ಟಿಸುವ ವಿವರಣೆಯನ್ನೂ ನೀಡುತ್ತದೆ. ಜೊತೆಗೆ ಜೀವಿಕೋಶಗಳು ಎಷ್ಟು ಬಾರಿ ವಿಭಜನೆ ಹೊಂದಬೇಕೆಂದು ನಿಧ೯ರಿಸುವ ಟೆಲೊಮೀರ್, ಡಿ.ಎನ್.ಎ. ಕಾಪಿಯಲ್ಲಿ ಉಂಟಾಗಬಹುದಾದ ತಪ್ಪುಗಳು ಹಾಗೂ ಅದನ್ನು ಸರಿಪಡಿಸುವ ಜೀವಿಕೋಶದ ಆಂತರಿಕ ಪ್ರಕ್ರಿಯೆ, ಜೀವಿಕೋಶ ಬೆಳವಣಿಗೆಯ ಚಕ್ರ ನಿಯಂತ್ರಿಸುವ ಗಡಿಯಾರ, ಜೀವಿಕೋಶಗಳ ಆತ್ಮಹತ್ಯೆ (Apoptosis) ನಿಯಂತ್ರಿಸುವ p53 ವಂಶವಾಹಿಗಳು, ಹೀಗೆ ಕ್ಯಾನ್ಸರ್ ತಡೆಗಟ್ಟಲು ನಿಸಗ೯ ನಿಮಿ೯ಸಿರುವ ಒಂದೊಂದೇ ಅಡೆತಡೆಗಳನ್ನು ಅದೇ ನಿಸಗ೯ದ ವಿಕಾಸವಾದದ ಕೂಸಾದ “ಕ್ಯಾನ್ಸರ್ ಜೀವಿಕೋಶಗಳು” ಹೇಗೆ ಮೀರಿ ಬೆಳೆಯುತ್ತವೆ ಹಾಗೂ ಸ್ಥಾನಾಂತರಗೊಳ್ಳುತ್ತವೆ ಎಂಬುದನ್ನು ವಿಶದವಾಗಿ ವಿವರಿಸಿದ್ದಾರೆ ಲೇಖಕರು.
ಪುಸ್ತಕದ ಕೊನೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ, ಅದರ ಬಯಾಲಜಿ ತಿಳಿಯುವ ಮೂಲ ಸಂಶೋಧನೆಗಳು ಹೇಗೆ ಸಹಕಾರಿಯಾಗಬಲ್ಲದು ಎಂಬುದನ್ನು ನಿರೂಪಿಸಿದ್ದಾರೆ. ಪುಸ್ತಕ ಇಪ್ಪತ್ತು ವಷ೯ ಹಳೆಯದಾದರೂ ಕ್ಯಾನ್ಸರ್ ನ ಮೂಲ ಸಂಗತಿಗಳು ಹೆಚ್ಚೇನು ಬದಲಾಗಿಲ್ಲ. ಬದಲಾದ ಸಂಗತಿಗಳಾದ ಕ್ಯಾನ್ಸರ್ ಆಕರ ಜೀವಿಕೋಶಗಳು (Cancer Stem Cells), ಗಡ್ಡೆಯ ಸೂಕ್ಷ್ಮ ಪರಿಸರ (Tumor Micro Environment) ಹಾಗೂ ಕ್ಯಾನ್ಸರ್ ಸ್ಥಾನಾಂತರ (Cancer Invasion and Metastases) ಪ್ರಕ್ರಿಯೆಗಳ ಬಗ್ಗೆ ಬೇರೆ ಕಡೆ ಬರೆದಿದ್ದಾರೆ ಹಾಗೂ ಮಾತನಾಡಿದ್ದಾರೆ ಡಾ. ವೈನ್ ಬಗ್೯.
ಹಲವು ವಷ೯ಗಳಿಂದ ಕ್ಯಾನ್ಸರ್ ಜೀವಿವಿಜ್ಞಾನದ ಕುರಿತಾಗಿ ಸಂಶೋಧಿಸುತ್ತಿರುವ ಡಾ.ರಾಬಟ್೯ ವೈನ್ ಬಗ್೯, ಡಾ. ಡಗ್ಲಾಸ್ ಹನಾಹನ್ ಜೊತೆಗೂಡಿ 2000 ನೇ ಇಸವಿಯಲ್ಲಿ ವಿಶ್ವವಿಖ್ಯಾತ “ಸೆಲ್” ನಿಯತಕಾಲಿಕೆಯಲ್ಲಿ “ಕ್ಯಾನ್ಸರ್ ನ ಹೆಗ್ಗುರುತುಗಳು” ಎಂಬ ಲೇಖನದಲ್ಲಿ ಕ್ಯಾನ್ಸರ್ ಹುಟ್ಟು ಹಾಗೂ ಬೆಳವಣಿಗೆಯ ಕುರಿತಾದ ಆರು ಮುಖ್ಯ ಹೆಗ್ಗುರುತುಗಳನ್ನು ಗುರುತಿಸಿದ್ದರು. ನಂತರ ಕ್ಯಾನ್ಸರ್ ಬಗೆಗೆ ಸಂಶೋಧನೆ ಮುಂದುವರೆದಂತೆ 2011 ರಲ್ಲಿ ಮತ್ತೆ ಇದೇ ಲೇಖನವನ್ನು ಪರಿಷ್ಕರಿಸುತ್ತಾ ಸದ್ಯ ಎಂಟು ಮುಖ್ಯ ಹೆಗ್ಗುರುತುಗಳನ್ನು ಹಾಗೂ ಕ್ಯಾನ್ಸರ್ ಅನ್ನು ಸಬಲಗೊಳಿಸುವ ಎರಡು ಸ್ವಭಾವಗಳನ್ನು ಗುರುತಿಸಿ ಪ್ರಕಟಿಸಿದ್ದಾರೆ. ವೈಜ್ಞಾನಿಕ ಭಾಷೆಯುಳ್ಳ ಆ ಲೇಖನಗಳು ಮುಕ್ತವಾಗಿ ಲಭ್ಯವಿದೆ ಹಾಗೂ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಸೈಟೇಶನ್ ಗಳನ್ನು ಹೊಂದಿವೆ (https://www.cell.com/fulltext/S0092-8674(11)00127-9).
ಡಾ. ರಾಬಟ್೯ ವೈನ್ ಬಗ್೯ ಪರಿಚಿತ ವಲಯದಲ್ಲಿ “ಬಾಬ್ ವೈನ್ ಬಗ್೯” ಎಂದೇ ಚಿರಪರಿಚಿತರು. ಜಮ೯ನಿಯಿಂದ ವಲಸೆ ಬಂದ ಯಹೂದಿ ಕುಟುಂಬಕ್ಕೆ ಸೇರಿದ ಬಾಬ್ ಅತ್ಯಂತ ಉತ್ಸಾಹದಿಂದ ಹಾಗೂ ಜೀವನಪ್ರೀತಿಯಿಂದ ತಮ್ಮ 79 ನೆಯ ವಯಸ್ಸಿನಲ್ಲೂ ಕ್ಯಾನ್ಸರ್ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ವಿಶ್ವದಾದ್ಯಂತ ಸಂಚರಿಸುತ್ತಾ ಕ್ಯಾನ್ಸರ್ ನ ಮೂಲ ವಿಜ್ಞಾನವನ್ನು ಅರಿಯಲು ಹೊಸ ಪೀಳಿಗೆಯನ್ನು ನಿರಂತರವಾಗಿ ಪ್ರೇರೇಪಿಸಿ ಅವರನ್ನು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದಾರೆ. ಇಂದಿಗೂ ಅತ್ಯಂತ ಲವಲವಿಕೆಯಿಂದ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ “ಬಾಬ್” ತಮ್ಮ ಜೀವನಗಾಥೆಯ ಬಗ್ಗೆ “ಕೋಖ್ ಸಂಸ್ಥೆಯಲ್ಲಿ” ಹಂಚಿಕೊಂಡ ವಿವರಗಳು ಈ ಕೊಂಡಿಯಲ್ಲಿ ಲಭ್ಯವಿದೆ ( https://www.youtube.com/watch?v=wZDXVEynBPw ). ಅವರಿಗೆ 2013 ರಲ್ಲಿ ಜೀವಿವಿಜ್ಞಾನ ವಿಭಾಗದಲ್ಲಿ ”ಬ್ರೇಕ್ ಥ್ರೂ ಪ್ರಶಸ್ತಿ” ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. ಇಂತಹ ಜೀವನಪ್ರೀತಿ ಮತ್ತು ವಿಜ್ಞಾನ ಪ್ರೀತಿಯ ಗುರು ಹಾಗೂ ಸಂಶೋಧಕರಿಂದಲೇ ಕ್ಯಾನ್ಸರ್ ನಂತಹ ಖಾಯಿಲೆಗೆ ಪರಿಹಾರದ ಮಾರ್ಗಗಳನ್ನು ರೂಪಿಸುವ ಪ್ರಯತ್ನಗಳು ನಡೆಯುತ್ತಿರುವುದು.
ಮುಂದಿನ ಸಂಚಿಕೆಯಲ್ಲಿ ಡಾ. ಸಿದ್ದಾರ್ಥ ಮುಖರ್ಜಿ ಅವರ ಕ್ಯಾನ್ಸರ್ ಕುರಿತಾದ ಮತ್ತೊಂದು ಪುಸ್ತಕವನ್ನು ನೋಡೋಣ.
ನಮಸ್ಕಾರ.
ಆಕಾಶ್ ಬಾಲಕೃಷ್ಣ