You are currently viewing Five Acres and Independence-  ಐದು ಎಕರೆಯ ಸ್ವಾತಂತ್ರ್ಯ..!

Five Acres and Independence- ಐದು ಎಕರೆಯ ಸ್ವಾತಂತ್ರ್ಯ..!

 “ತುಂಡು ನೆಲದಿಂದ ನೆಮ್ಮದಿಯನ್ನು ಹುಡುಕಾಡುವುದೇ ಭವಿಷ್ಯದ ಅತಿ ದೊಡ್ಡ ಕಲೆ”                  – ಅಬ್ರಾಹಂ ಲಿಂಕನ್ (1809–1865)           

                                       

ಕೃಷಿ ಮಸೂದೆಗಳ ವಿರುದ್ಧ ಹೋರಾಟ, ಹಿಂತೆಗೆಯುವ ನಿರ್ಣಯ, ಪರ-ವಿರೋಧಗಳ ಚರ್ಚೆಯ ಈ ಸಂದರ್ಭ, ಜೊತೆಗೆ ಕೊರೊನಾ ಸಾಂಕ್ರಾಮಿಕತೆಯಿಂದ ಅನುಭವಿಸಿದ ಸಂಕಷ್ಟಗಳ ಈ ಸಮಯದಲ್ಲಿ ಲಿಂಕನ್ ಅವರ ಮೇಲಿನ ಮಾತು ಹಾಗೂ 1935ರಷ್ಟು ಹಿಂದೆಯೇ ಪ್ರಕಟವಾದ M.G. Kains ಅವರ Five Acres and Independence-  ಐದು ಎಕರೆ ಮತ್ತು ಸ್ವಾತಂತ್ರ್ಯ ಪುಸ್ತಕ ಎರಡೂ ಒಟ್ಟೊಟ್ಟಿಗೆ ನೆನಪಾಗುತ್ತಿವೆ.

       ನೆಮ್ಮದಿಯನ್ನು ನೆಲದಿಂದ ಹುಡುಕಾಡಲು ಇರಬೇಕಾದ ಸ್ವಾತಂತ್ರ್ಯಕ್ಕೆ ಆಳುವ ವರ್ಗ ಹಾಗೂ ಬಂಡವಾಳಶಾಹಿಗಳಿಂದ ದೂರವೇ ಇರಬೇಕೆಂಬುದನ್ನು ಅದೆಷ್ಟು ಬಾರಿ ಹೇಳಿದರೂ ಸಾಲದು. ಜಾಗತಿಕ ಮಹಾ ಯುದ್ಧದ ನಂತರದಲ್ಲಿ 1930ರ ಆಸುಪಾಸಿನಲ್ಲಿ ಸಂಭವಿಸಿದ “ದ ಗ್ರೇಟ್‌ ಡಿಪ್ರೆಶನ್‌  (The Great Depression)” ಎಂದೇ ಇತಿಹಾಸದಲ್ಲಿ ದಾಖಲಾದ ಆರ್ಥಿಕ ಸಂಕಷ್ಟದ ಸಮಯದಲ್ಲಿ ಈ ಪುಸ್ತಕವು ರಚನೆಗೊಂಡು ಪ್ರಕಟವಾಗಿತ್ತು. ಆಗ ಮುಚ್ಚಿದ, ದಿವಾಳಿಯಾದ ಕಾರ್ಖಾನೆಗಳ ನೌಕರರಿಗೆ ಉದ್ಯೋಗ ದೊರಕಿಸಲು, ಕೃಷಿಯಲ್ಲಿ ಅನುಭವ ಇಲ್ಲದ ಅವರಿಗೆ ಕೃಷಿ ಕಲಿಕೆಯ ಹಿನ್ನೆಲೆಯಲ್ಲಿ ಇದನ್ನು ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರೊ. ಎಂ. ಜಿ. ಕೈನ್ಸ್‌ ಅವರು ರಚಿಸಿದ್ದರು. ಕಳೆದ ವರ್ಷದ ಕೊರೊನಾ ಸಾಂಕ್ರಾಮಿಕತೆಯ ಕಾಲದಲ್ಲೂ ನಗರವಾಸಿಗಳು ಕೆಲಸಗಳನ್ನು ಕಳೆದುಕೊಂಡಾಗ ಹಿಂದಿರುಗಿ ನೆಮ್ಮದಿ ಕಾಣಲು ಹುಡುಕಾಡಿದ್ದೂ ತಮ್ಮೂರಿನ ನೆಲದಲ್ಲೇ! ಸರ್ಕಾರ, ಬಂಡವಾಳ, ನೌಕರಿಯಿತ್ತ ಕಂಪನಿ ಯಾವುದೇ ಕೈಕೊಟ್ಟಾಗಲೂ ಜನಕ್ಕೆ ನೆನಪಾಗಿದ್ದು ತಮ್ಮೂರಿನ ನೆಲವೇ. ಈಗಲೂ ಹಿಂತಿರುಗಿದ ಅನೇಕರು ನಗರಗಳಿಗೆ ಮರಳಿ ಬಂದಿಲ್ಲ. ದುರಾದೃಷ್ಟವೆಂದರೆ ಕೃಷಿಯ ನೆಮ್ಮದಿಯ ಪಾಠಗಳನ್ನು ಕೃಷಿ ವಿಶ್ವವಿದ್ಯಾಲಯಗಳೂ ಹೇಳಿಕೊಡುತ್ತಿಲ್ಲ. ಅವುಗಳೂ ಕೂಡ ಬಂಡವಾಳಿಶಾಹಿಗಳ ಏಜೆಂಟರಂತೆ ಅವರ ಕಂಪನಿಗಳ-ಕಾರ್ಖಾನೆಗಳ ಉತ್ಪನ್ನಗಳ ಮಾರಾಟದ ಸಂಶೋಧನಾ ಸಾರಗಳನ್ನು ಮುಂದಿಟ್ಟು ಕಲಿಸುತ್ತವೆ. ಹಾಗೆಂದೇ ಕೃಷಿ ಪದವಿ ಪಡೆದವರೂ ಸಹಾ, ನೆಲದಲ್ಲಿ ನೆಮ್ಮದಿಯನ್ನು ಅರಸದೇ, ರಸಗೊಬ್ಬರ-ಕೀಟನಾಶಕಗಳ ಮಾರುಕಟ್ಟೆಗಳಲ್ಲಿ ನೆಲೆಯನ್ನು ಹುಡುಕುತ್ತಾರೆ.

ಇಂತಹ ವಾಸ್ತವ ಈಗಿನ ಜಗತ್ತು ಎಂದರೂ 1935ರಲ್ಲೇ ಇದನ್ನೆಲ್ಲಾ ಮೀರುವ ಪ್ರಯತ್ನವನ್ನು  M.G. Kains ಅವರ Five Acres and Independence-  ಐದು ಎಕರೆ ಮತ್ತು ಸ್ವಾತಂತ್ರ್ಯ ಪುಸ್ತಕವು ಮಾಡಿತ್ತು. ಅದೆಂತಹಾ ಜನಪ್ರಿಯತೆಯನ್ನು ಈ ಪುಸ್ತಕವು ಗಳಿಸಿತ್ತೆಂದರೆ ಮೊದಲ ಏಳು ವರ್ಷಗಳಲ್ಲಿ 14 ಬಾರಿ ಮರು ಮುದ್ರಣಗೊಂಡಿತ್ತು. ಅದರಲ್ಲಿ 8 ಮುದ್ರಣಗಳು 6 ಮತ್ತು 7ನೆಯ ವರ್ಷಗಳಲ್ಲಿ ಹೊರಬಂದಿದ್ದವು. ಏಳನೆಯ ವರ್ಷದ ಮೊದಲ ನಾಲ್ಕೂ ತಿಂಗಳಲ್ಲಿ ಪ್ರತೀ ತಿಂಗಳೂ ಒಂದೊಂದು ಮುದ್ರಣ ಹೊರಬಂದಿದ್ದವು. ಪುಸ್ತಕದ ಉದ್ದೇಶವೇ ನವಕೃಷಿಕರಿಗೆ  ಕೃಷಿ ಕಲಿಕೆಯ ಎಲ್ಲಾ ಮಗ್ಗುಲುಗಳನ್ನೂ ಪರಿಚಯಿಸುವುದಾಗಿತ್ತು.      

ನಮ್ಮ ದೇಶವಿನ್ನೂ ಬ್ರಿಟೀಷರ ದಾಸ್ಯದಲ್ಲಿದ್ದಾಗಲೇ ಅಂದರೆ – 1935ರ ಸಮಯದಲ್ಲಿ  ಆಧುನಿಕತೆ ಹಾಗೂ ಬಂಡವಾಳಶಾಹಿತನ ಇವುಗಳ ಬೆನ್ನು ಹತ್ತಿದ್ದ ಅಮೆರಿಕಾದಲ್ಲಿ ಇಂತಹ ಒಂದು ಚಮತ್ಕಾರ ಸಂಭವಿಸಿತ್ತು. ಅಲ್ಲಿನ ಕೊಲೊಂಬಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಾಪನ ಮಾಡುತ್ತಿದ್ದ ಎಂ. ಜೆ. ಕೈನ್ಸ್ ಎಂಬ ಓರ್ವ ತೋಟಗಾರಿಕಾ ತಜ್ಞರು ಐದು ಎಕರೆಯ ಸ್ವಾತಂತ್ರ್ಯ ದ ಪುಸ್ತಕವನ್ನು ಪ್ರಕಟಿಸಿದ್ದರು. ಇದೊಂದು ಅಚ್ಚರಿ ಎನ್ನಿಸಿದೇ ಇರದು, ಏಕೆಂದರೆ ಅಮೆರಿಕೆಯ ಸಂದರ್ಭವನ್ನು ಕೃಷಿಯಲ್ಲಿ ನಾವು ಆಲೋಚಿಸುವಾಗೆಲ್ಲ ನೆನಪಾಗುವುದೆಂದರೆ ಅಲ್ಲಿನ ನೂರಾರೂ, ಸಾವಿರಾರು ಎಕರೆಗಳ ಬೃಹತ್ ವ್ಯವಸಾಯದ ಚಿತ್ರಣ. ಆರಂಭದಲ್ಲೂ ಅಭಿವೃದ್ಧಿಯನ್ನು ಬಂಡವಾಳದತ್ತ ತೊಡಗಿಸುತ್ತಲೇ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದ್ದ ವಾತಾವರಣವದು. ಅಂತಹ ಪ್ರಪಂಚಕ್ಕೆ ಐದೇ ಎಕರೆಯಲ್ಲಿ ಬದುಕಿನ ಸ್ವಾತಂತ್ರ್ಯವನ್ನು ಕಟ್ಟಿ ಕೊಡುವ ಎಲ್ಲಾ ಆಶಯಗಳನ್ನೂ ಪುಸ್ತಕವು ಹೊತ್ತಿತ್ತು. ಈಗಿನ ಪುಸ್ತಕ ಪ್ರಕಟಣೆಗಳ ಭರಾಟೆಯಲ್ಲಿ ಇದ್ದಿತು ಬಿಡು ಹತ್ತರಲ್ಲಿ ಹನ್ನೊಂದು ಎನ್ನುವಂತೆಯೂ ಇಲ್ಲ. ಪ್ರಕಟವಾದ ಏಳು ವರ್ಷಗಳಲ್ಲಿ 1942ರ ಹೊತ್ತಿಗೆ 14 ಮರು ಮುದ್ರಣಗಳನ್ನು ಕಂಡು ಅತ್ಯಂತ ಮಹತ್ವಾಕಾಂಕ್ಷಿ ಕನಸುಗಳನ್ನು ಬಿತ್ತಿದ ಪುಸ್ತಕ ಇದು.   

       ನಮ್ಮ ರೈತರ ಪರವಾಗಿ ಆಲೋಚಿಸುವಾಗ ಬೇಸರ ಮತ್ತು ನೋವಿನ ಸಂಗತಿ ಏನೆಂದರೆ, ನಮ್ಮ ದೇಶದ ಬಹುಪಾಲು ಕೃಷಿ ವಿಶ್ವವಿದ್ಯಾಲಯಗಳು ಅಮೆರಿಕೆಯ ಸಂಶೋಧನಾ ಮತ್ತು ಶಿಕ್ಷಣ ಮಾದರಿಯನ್ನು ಅನುಸರಿಸುವ ನೆಪದಲ್ಲಿ ಅಲ್ಲಿಗೆ ಹೋದ ಅನೇಕರು ಅಲ್ಲೂ ಇಂತಹದ್ದೊಂದು ಇತ್ತು! ಎಂಬದನ್ನು ಹೊತ್ತು ತರಲಿಲ್ಲ. ತಂದು ನಮ್ಮ ದೇಶೀ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪನಕ್ಕೆ ಒತ್ತು ಕೊಡಲಿಲ್ಲ. ಇದೀಗ ರಾಜಕೀಯ ಕಾರಣಗಳಿಗಷ್ಟೇ ಸಣ್ಣ ರೈತರು ಮುಂತಾಗಿ ಮಾತಾಡುವ ತಜ್ಞರು, ಇಡೀ ಕೃಷಿ ಶಿಕ್ಷಣದ ಇತಿಹಾಸದಲ್ಲಿ ಸಣ್ಣ ಭೂಹಿಡುವಳಿಯನ್ನು ಕಡೆಗಾಣಿಸಿದ ಪಾಲನ್ನು ಹೊತ್ತಿದ್ದಾರೆ. ಸಣ್ಣ ಹಿಡುವಳಿಗಳ ಪರಂಪರೆಯನ್ನೇ ಹತ್ತಿಕ್ಕುವ ತಂತ್ರಜ್ಞಾನಗಳ ಬೆಂಬಲಕ್ಕೆ ನೆರವಾಗಿ ರೈತರ ನೆಮ್ಮದಿಯ ಆಶಯಗಳನ್ನೇ ಬದಿಗೊತ್ತಿ, ದಶಕಗಳ ಕಳೆದ ನಂತರ ಒಣ ಬೇಸಾಯ, ಸಣ್ಣ ಹಾಗೂ ಅತಿ ಸಣ್ಣ ರೈತರ ಧ್ವನಿಯಾಗಿಸುವ ವ್ಯರ್ಥ ಪ್ರಯತ್ನಗಳ ಮಾತನ್ನು ಆಡುತ್ತಿದ್ದಾರೆ.

       ವಾಸ್ತವವಾಗಿ ಐದು ಎಕರೆಯ ಸ್ವಾತಂತ್ರ್ಯದ ಆಶಯಗಳೇನು? ಹೆಚ್ಚೂ ಕಡಿಮೆ 85ವರ್ಷಗಳ ಹಿಂದೆಯೇ ಅಂತಹ ಚಿಂತನೆಗಳ ಉಗಮವಾಗಿದ್ದರೂ ಇಂದಿನವರೆಗೂ ಅವು ಹೆಚ್ಚು ತಿಳಿದಿಲ್ಲವೆನ್ನುವುದು ನಿಜವೇ…! ಎಂ.ಜೆ. ಕೈನ್ಸ್ ಅವರ ಈ ಪುಸ್ತಕ ವಾಸ್ತವವಾಗಿ ಸಣ್ಣ ಜಮೀನಿನ ಆಯ್ಕೆ ಮತ್ತು ನಿರ್ವಹಣೆಯ ಸಮಗ್ರ ಮಾರ್ಗದರ್ಶನವನ್ನು ಪ್ರಾಯೋಗಿಕವಾಗಿ ಚರ್ಚಿಸುತ್ತದೆ. ನೆಲದಿಂದಲೇ ನೆಮ್ಮದಿಯ ಹುಡುಕಾಟ ಕುರಿತ ಲೇಖನದ ಆರಂಭದ ಮಾತುಗಳಂತೂ ಅಬ್ರಾಹಂ ಲಿಂಕನ್ನರಿಂದ ಶತಮಾನಗಳ ಹಿಂದೆಯೆ ವ್ಯಕ್ತಗೊಂಡಿದ್ದವು ಎಂದರೆ ಇಂದು ನೆಲದ ರಾಜಕೀಯಗಳ ನಡುವೆಯೇ ನೆಮ್ಮದಿಯ ಬದುಕನ್ನು ಕಟ್ಟ ಬೇಕಾದ ಅನಿವಾರ್ಯತೆಯ ಭಯ ಕಾಡುತ್ತದೆ. ಈ ಪುಸ್ತಕದಲ್ಲಿ  ಹಳ್ಳಿ ಮತ್ತು ನಗರ ಜೀವನಗಳ ವ್ಯತ್ಯಾಸಗಳನ್ನೂ ಕೃಷಿಯ ಹಿನ್ನೆಲೆಯಿಂದ ವಿವರಿಸುವ ಆರಂಭದಿಂದ ವೈಜ್ಞಾನಿಕ ವಿವರಗಳು ತೆರೆದುಕೊಳ್ಳುತ್ತವೆ. ಕೃಷಿ ವಿಜ್ಞಾನದ ಮರು ವಿಮರ್ಶೆಯ ಈ ಹೊತ್ತಿನಲ್ಲಿ ಚರ್ಚಿಸುತ್ತಿರುವ ಅನೇಕ ಸಂಗತಿಗಳು ದಶಕಗಳ ಹಿಂದೆ ಆಗಲೇ ಅನಾವರಣಗೊಂಡಿದ್ದವು. ಕೃಷಿಯಲ್ಲಿ ಜಾನುವಾರುಗಳ ಅನಿವಾರ್ಯ ಅಗತ್ಯವನ್ನು ಇದರಲ್ಲೂ ಒತ್ತಿ ಹೇಳಲಾಗಿದೆ. ಕೃಷಿಯೆಂಬ ಉತ್ಪಾದಕ ಜಗತ್ತಿಗೆ ಅಗತ್ಯವಾದ ತ್ಯಾಜ್ಯಗಳ ಪುನರ್ಬಳಕೆಯಲ್ಲಿ ಕೈಗೊಳ್ಳಬೇಕಾದ ಸಂಗತಿಗಳಿಲ್ಲಿ ಹೇರಳವಾಗಿವೆ. ಮಣ್ಣು ತನ್ನ ಫಲವತ್ತತೆಯನ್ನು ನಿರಂತರವಾಗಿಸಿಕೊಂಡು ಹಸಿವಿನ ನಿವಾರಣೆಗಳ ಉಪಾಯಗಳನ್ನು ಕೂಡ ವಿವರಿಸುತ್ತದೆ.

       ಕೃಷಿ ಒಂದು ವ್ಯವಸ್ಥೆಯಾಗಿ ವಿವಿಧ ಸಂಪನ್ಮೂಲಗಳನ್ನೂ, ಅಗತ್ಯ ವಾತಾವರಣವನ್ನೂ, ಸಕಾಲಿಕವಾದ ರೋಗ ಹಾಗೂ ಕೀಟಗಳ ನಿವಾರಣೆಯನ್ನೂ ಬಯಸುತ್ತದೆ. ಅದರ ಜತೆಗೇ ಬೆಳೆ ಸಮಯದ ಉತ್ಪಾದನೆಯಲ್ಲಿ ಜೇನು ಹುಳುಗಳು ಮಾಡುವ ಪರಾಗಸ್ಪರ್ಶ ಮುಂತಾದ ವಿಶೇಷಗಳನ್ನೂ ವಿವರಿಸುತ್ತದೆ. ಮಣ್ಣು ನೀರು, ಸಸ್ಯ ಸಂರಕ್ಷಣೆಯ ಹಾಗೂ ಎಲ್ಲಾ ಜಮೀನಿನ ತಾಂತ್ರಿಕ ವಿವರಗಳ ಲೆಕ್ಕಾಚಾರವನ್ನೂ ರೈತರು ಹೇಗೆ ನಿರ್ವಹಿಸಬೇಕು ಎಂಬುದನ್ನೂ ಮಾರ್ಗದರ್ಶನ ಮಾಡುತ್ತದೆ. ಕೃಷಿಯಲ್ಲಿ ಬೆಳೆ ಸಂದರ್ಭದಂತೆ ಬೆಳೆ ಕೊಯಿಲಿನ ನಂತರದ ತಂತ್ರಜ್ಞಾನಗಳ ಬಹು ಮುಖ್ಯವಾದ ಪಾತ್ರವನ್ನು ಇದರಲ್ಲಿ ಅರಿಯಬಹುದಾಗಿದೆ. ಒಟ್ಟಾರೆ ಕೃಷಿಯನ್ನು ಸುಸ್ಥಿರವಾಗಿ ನಿರಂತರವಾಗಿ ಹಸಿವಿನ ನಿವಾರಣೋಪಾಯವಾಗಿ ಬಳಸುವ ಜಾಣ್ಮೆಯನ್ನು ಒದಗಿಸುತ್ತವೆ. ಕೊಯುಲೋತ್ತರ ನಷ್ಟಗಳ ಬಗೆಗೆ ರೈತರಿಗೆ ಅರಿವು ಇರುವುದೂ ಬಹು ಮುಖ್ಯವಾಗುತ್ತದೆ. ಜಗತ್ತಿನ ಬಹುಪಾಲು ಆಹಾರದ ನಷ್ಟವು ಜಮೀನಿನಿಂದ ಹೊರ ಬಂದ ನಂತರೆವೇ ಎಂಬುದೂ ಇಂದಿಗೂ ನಡೆದೇ ಬಂದ ಸಂಗತಿ. ಅದರ ಕುರಿತೂ ಆರಂಭಿಕ ಚರ್ಚೆಗಳನ್ನು ಹುಟ್ಟು ಹಾಕಿದ್ದ ಹೆಮ್ಮೆ ಪ್ರೊ. M.G. ಕೈನ್ಸ್ ಅವರದು. ಮೂಲತಃ ಅವರು ಅರ್ಥವಿಜ್ಞಾನವನ್ನೂ ತೋಟ ನಿರ್ವಹಣೆಯಲ್ಲಿ ಪ್ರಬಲವಾಗಿ ಮನಗಂಡವರಾಗಿದ್ದು, ವ್ಯವಹಾರಿಕ ಜಾಣ್ಮೆಯನ್ನು ರೈತರು ಕಲಿಯುವ ಅಗತ್ಯವನ್ನು ಪ್ರಸ್ತಾಪಿಸುತ್ತಾರೆ.

       ಕೃಷಿಯ ಯಶಸ್ಸಿನ ಗುಟ್ಟಿನ ದರ್ಶನ ಬಹಳ ಸೊಗಸಾಗಿದೆ. ಪುಸ್ತಕದ ಉದ್ದೇಶದ ಆರಂಭಿಕ ಪುಟದಲ್ಲೇ ದಾರಿದೀಪವಾಗುವ ಕುರಿತು ಉದ್ದೇಶವನ್ನು ನಿವೇದಿಸಿದ್ದಾರೆ (ಮೇಲಿನ ಚಿತ್ರದಲ್ಲಿನ The Purpose of the Book ನೋಡಿ). ನಿರಂತರ ಯಶಸ್ಸು ಕಾಣಲು ರೈತರೇನು ಮಾಡಬೇಕು? ಸದಾ ಆಲೋಚಿಸಿ ಕಾರ್ಯಪ್ರವೃತ್ತರಾಗುವ ರೈತರಿಗೆ ಯಶಸ್ಸು ಖಂಡಿತ. ತುಂಡು ನೆಲದಲ್ಲೇ ನೆಮ್ಮದಿಯನ್ನು ಅರಸಿ, ಕಾಯಕವನ್ನೇ ದೈವವೆಂಬಂತೆ ಒಳಗೊಳ್ಳುವ ವ್ಯವಸಾಯವು ಗೆಲ್ಲುತ್ತದೆ. ರೈತ ತನ್ನೆಲ್ಲಾ ಕೆಲಸವನ್ನೂ ಲೆಕ್ಕಾಚಾರ ಮಾಡುತ್ತಲೇ ಮುನ್ನಡೆಯಬೇಕು. ಸದಾ ಸದಾ ಒಬ್ಬ ಒಳ್ಳೆಯ ಶಿಕ್ಷಕ ತನ್ನ ತರಗತಿಯ ಮಕ್ಕಳನ್ನು ವೀಕ್ಷಿಸುವಂತೆ ಇಡೀ ಜಮೀನನ್ನು ವೀಕ್ಷಿಸುತ್ತಿರಬೇಕು. ಆಗ ಜಯ ಸಾಧ್ಯ! ಜತೆಗೆ ರೈತರೂ ನಿತ್ಯವೂ ಹಣದ ಅಗತ್ಯವನ್ನು ಬಯಸುವವರೇ ಅಗಿದ್ದೂ ಅವರ ಉತ್ಪನ್ನಗಳಲ್ಲೂ ದಿನವೂ ಮಾರುವ ಪರಿಕರಗಳಿರುವ ಬಗ್ಗೆ ಒತ್ತಾಯಿಸುತ್ತಾರೆ. ಇದನ್ನು ಹಾಲಿನ ವಹಿವಾಟಿನಲ್ಲಿ ಸಾಧ್ಯಮಾಡಿದ ಕೀರ್ತಿ ನಮ್ಮ ದೇಶದ ಡಾ. ವರ್ಗೀಸ್‌ ಕುರಿಯನ್ ಅವರಿಗಿದೆ. ಬಹು ಮುಖ್ಯವಾದದ್ದು ಎಂದರೆ ಐದೇ ಎಕೆರೆಯ ಬದುಕನ್ನು ವಿವರಿಸುವ ಪುಸ್ತಕವು ಹೆಚ್ಚು ನೆಲವನ್ನು ಹೊಂದಿರುವ ಅಪಾಯವನ್ನೂ ಸಹಾ ವಿವರಿಸುತ್ತದೆ. ಅತಿ ಹೆಚ್ಚು ನೆಲದ ನಿರ್ವಹಣೆಯ ನಷ್ಟ ಹಾಗೂ ಅಸಾಧ್ಯದ ಸಂಗತಿಗಳನ್ನೂ ವಿವರಿಸುತ್ತದೆ.

       ಸಹಜವಾಗಿ ಮಾನವ ಸಂಸ್ಕೃತಿಯು ಯಾವುದೇ ವೃತ್ತಿಯಿಲ್ಲದಿದ್ದರೂ ಬದುಕಿ ಉಳಿಯುತ್ತದೆ. ಆದರೆ ಕೃಷಿಯೇ ಇಲ್ಲವಾದರೆ ಸಂಸ್ಕೃತಿಯೂ ನಾಶವಾಗುತ್ತದೆ. ಕೃಷಿಯಲ್ಲಿ ಮಾತ್ರವೇ ನಮ್ಮ ಅನೇಕ ಅಗತ್ಯಗಳನ್ನು ಒದಗಿಸಿಕೊಂಡು ಸ್ವತಂತ್ರವಾಗಿ ಜೀವಿಸಲು ಸಾಧ್ಯ ಅದೂ ಒಂದು ಪುಟ್ಟ ನೆಲದಲ್ಲಿ! ಅಮೆರಿಕಾದಂತಹ ದೇಶದ ಬದುಕನ್ನೇ ಅದು ಸಾಧ್ಯ ಮಾಡುವುದಾದಲ್ಲಿ ನಮಗೆ ಅಗತ್ಯಗಳ ವಿಚಾರದಲ್ಲಿ ತುಸು ಹೆಚ್ಚೇ ನೆಮ್ಮದಿಯಿಂದಿರುವ ನಮ್ಮಂತಹವರಿಗೆ ಇನ್ನೂ ಕಡಿಮೆ ನೆಲವೇ ಅಂದರೆ 3 ಎಕರೆಗಳಲ್ಲೂ ಸ್ವಾತಂತ್ರ ಸಾಧ್ಯವಿದ್ದೀತು. ಅಂತಹ ಸಂಗತಿಗಳ ಮಾದರಿಗಳನ್ನು ಒದಗಿಸುವ ಜವಾಬ್ದಾರಿ ಕೃಷಿಯನ್ನು ಪೋಷಿಸುವ ಸಂಸ್ಥೆಗಳಿಗಿದೆ.  ಅಗತ್ಯವಾದ ಎಲ್ಲವನ್ನೂ ನೆಲದಿಂದಲೆ ಪಡೆಯುವ ಅನಿವಾರ್ಯಗಳಿಂದ ಇದನ್ನು ಸಾಧ್ಯಮಾಡಬಹುದಾಗಿದೆ. ಇವೆಲ್ಲವೂ ನೆಲದ ಒಡಲಾಳದ ಬಯಕೆಗಳಲ್ಲಿವೆ ಎನ್ನುವುದೇ ಸಮಾಧಾನದ ಸಂಗತಿ.

       ಸುಮಾರು ಒಟ್ಟು 52 ಅಧ್ಯಾಯಗಳಲ್ಲಿ ಪೀಠಿಕೆಯಿಂದ ಆರಂಭಗೊಂಡು, ಹಳ್ಳಿ-ನಗರ ಜೀವನದ ಮೂಲತತ್ವಗಳ ಮೂಲಕ, ಬದುಕಿನ ಯಶಸ್ಸಿನೆಡೆಗೆ ದಾರ್ಶನಿಕನಂತೆ ಪುಟಗಳು ತೆರೆದುಕೊಳ್ಳುತ್ತವೆ. ಹಾಗಿದ್ದಲ್ಲಿ ಯಶಸ್ಸಿನ ಗುಟ್ಟೇನು, ನೆಲದ ಆಯ್ಕೆಯಿಂದ ಮೊದಲಾಗಿ, ವಾತಾವರಣದ ಹಿತ ಜೊತೆಯಾಗುವ ಆರ್ಥಿಕ ಬೆಂಬಲದೊಡನೆ ಹಸಿರಿನ ಜೀವನಕ್ಕೆ ಅಗತ್ಯದ ನೀರು ಪೂರೈಕೆಯ ವಿವರಗಳನ್ನೂ ಬಿಡಿ-ಬಿಡಿಯಾಗಿ ವಿವರಿಸುತ್ತದೆ. ಸಣ್ಣ ಹಿಡುವಳಿಯಲ್ಲಿ ಯಶಸ್ಸಿನ ಪಾಲುದಾರ ಪಶುಸಂಗೋಪನೆಯ ವಿವರಗಳ ಸಮೇತವಾಗಿದೆ. ಬೀಜದಿಂದ ಅಂತಿಮ ಒಕ್ಕಲು-ಮಾರುಕಟ್ಟೆಯ ಮಾರ್ಗದರ್ಶನವೂ ಇದರಲ್ಲಿ ಲಭ್ಯ. ಇನ್ನು ಬೆಳೆಯನ್ನೂ ಒಕ್ಕಲಾದ ಮೇಲಿನ ದಾಸ್ತಾನನ್ನೂ ಕಾಪಾಡಿಕೊಳ್ಳುವ ಪುಟ್ಟ-ಪುಟ್ಟ ವಿವರಗಳೂ ಇಲ್ಲಿವೆ. ಬಹು ದೊಡ್ಡ ಯಶಸ್ಸನ್ನು ಅದು ಕೊಡುವುದು ಹೇಗೆಂದರೆ, ನಿಜಕ್ಕೂ ರೈತ ದಿನವೂ ಗಳಿಸುವಂತಾಗಬೇಕು -ಅಂತಹಾ ಒಂದು ಅಧ್ಯಾಯವನ್ನೇ -ಪುಸ್ತಕವು ಒಳಗೊಂಡಿದೆ.

       ಪುಸ್ತಕದ ಮಾರ್ಗದರ್ಶನವು ಅದೆಷ್ಟು ಪ್ರಬುದ್ಧವಾಗಿ ಮತ್ತು ಬೌದ್ಧಿಕ ಸಂಸ್ಕಾರದೊಡನೆ ರಚನೆಗೊಂಡಿದೆ ಎಂದರೆ ಕಡೆಯ 52ನೆಯ ಅಧ್ಯಾಯದ ಶೀರ್ಷಿಕೆ –“ದ ಫಾರಂ ಲೈಬ್ರರಿ (The Farm Library)”. ಈ ಅಧ್ಯಾಯವು ಅಮೆರಿಕದ ಆ ಸಂದರ್ಭದ ಕೃಷಿಯನ್ನು ಪ್ರೋತ್ಸಾಹಿಸುವ ಅನೇಕ ಮಾರ್ಗದರ್ಶಿ ವರದಿಗಳು, ನಿಯತಕಾಲಿಕಗಳು, ಪುಸ್ತಕಗಳು ಅಲ್ಲದೆ ಕೃಷಿ ಬೆಂಬಲಿಸುವ ಸಂಘ-ಸಂಸ್ಥೆಗಳ ವಿವರಗಳ ಬಗೆಗೆ ಮಾಹಿತಿಯನ್ನು ಒದಗಿಸುತ್ತದೆ.  ಇದೊಂದು ನಿಜಕ್ಕೂ ಯಶಸ್ಸಿನ ಕೃಷಿಯ ಆಯ್ಕೆ ಮತ್ತು ನಿರ್ವಹಣೆಯ ಅತ್ಯದ್ಭುತ ಪ್ರಾಯೋಗಿಕ ಮಾರ್ಗದರ್ಶಿಯೇ!    

       (ಈ ಪುಸ್ತಕ ಆನ್ ಲೈನ್‌ನಲ್ಲಿ ಉಚಿತವಾಗಿ ಲಭ್ಯವಿದೆ, ಆಸಕ್ತರು ಈ ಮುಂದಿನ ಲಿಂಕ್‌ ಅಲ್ಲಿ ಓದಬಹುದು, ಅಲ್ಲದೆ ಡೌನ್‌ಲೋಡ್‌ ಕೂಡ ಮಾಡಿಕೊಳ್ಳಬಹುದು.  https://archive.org/details/in.ernet.dli.2015.49775 )

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್‌.

Leave a Reply