ಹೊಟ್ಟೆ ತುಂಬಿಸುವುದರಿಂದ ಹಿಡಿದು, ಸಂಗೀತ ಹೊಮ್ಮಿಸುವವರೆಗೂ ಮಾನವತೆಯನ್ನು ಬೆಂಬಲಿಸಿರುವ ಕಾಯಿ ಅಂದರೆ ಅದು ಸೋರೆಕಾಯಿ ಅಥವಾ ಹಾಲುಗುಂಬಳ! ಆಹಾರವೂ ಆಗಿದ್ದಲ್ಲದೆ, ಆಹಾರ-ನೀರು ಶೇಖರಿಸುವ ಸಂಗ್ರಾಹಕಗಳಾಗಿಯೂ ತನ್ನ ಪಾತ್ರವನ್ನು ಮೆರೆದಿರುವ ಸೋರೆಕಾಯಿಯ ಬಳ್ಳಿಯು ಜಗದ್ವ್ಯಾಪಿಯಾಗಲು ತಾನೇ ವಲಸೆಯನ್ನೂ ಮಾಡಿದೆ. ಮಾನವಕುಲದ ಆತ್ಯಂತಿಕ ನೆಮ್ಮದಿಯ ಕ್ಷಣಗಳನ್ನು ಆಸ್ವಾದಿಸುವ ಸ್ವರ ಮಾಧುರ್ಯದ ಬೆಸುಗೆಯಾಗಲು ಸಂಗೀತದ ಅನುರಣಿಕೆಯಲ್ಲೂ ಸೋರೆಕಾಯಿ ಇದೆ. ಅನಾಮಧೇಯ ಹಾವಾಡಿಗನೊಬ್ಬನ ಪುಂಗಿಯಿಂದ ಮೊದಲ್ಗೊಂಡು ವಿಶ್ವ ವಿಖ್ಯಾತ ಸಂಗೀತಗಾರರ ತಂಬೂರಿ, ಸರೋದ್, ವೀಣೆಗಳಲ್ಲೂ ಸೋರೆಬುರುಡೆಯು ಸ್ಥಾನವನ್ನು ಪಡೆದಿದೆ.

ಜಗತ್ತಿನ ಅತ್ಯಂತ ಮಿಶ್ರ-ಸಂಸ್ಕೃತಿಯ ನೆಲೆಗಳೆಲ್ಲಿಯೂ ಕಂಡುಬರುವ ಬೆಳೆಗಳಲ್ಲಿ ಒಂದಾದ ಸೋರೆಕಾಯಿ, ಭೂಮಿಯ ಆಧುನಿಕ ಕಾಲದ ಅಂದರೆ ಹೊಲೊಸೀನ್ (ಸುಮಾರು 12,000 ವರ್ಷಗಳಿಂದ ಈಚೆಗೆ) ಆರಂಭದ ವೇಳೆಗೆ ಇಡೀ ಉಷ್ಣವಲಯದಾದ್ಯಂತ (ಪ್ಯಾನ್-ಟ್ರೋಪಿಕಲ್) ಹರಡಿ ತನ್ನ ನೆಲೆಯನ್ನು ಕಂಡುಕೊಂಡಿದೆ. ಸೋರೆಕಾಯಿಯ ಸ್ಥಳೀಯತೆಯ ಬಗೆಗೆ ಎರಡು ಅಭಿಪ್ರಾಯಗಳನ್ನು ಸಸ್ಯ ವಿಜ್ಞಾನದ ಚರಿತ್ರೆಯು ನಂಬಿದೆ. ಅಂದರೆ ಇದೊಂದು ಆಫ್ರಿಕದ ತವರಿನದೆಂದೂ, ಹಾಗೆನೇ ಇಂಡಿಯಾದ ನೆಲದ್ದೆಂದೂ ವಿಜ್ಞಾನಿಗಳಲ್ಲಿ ಒಮ್ಮತವಿದೆ. ಕುಂಬಳಗಳು ಹೆಚ್ಚಿನ ಪಾಲು ಮೂಲ ಆಫ್ರಿಕದವೆಂದೂ, ಅದರಲ್ಲಿ ಈ ಹಾಲುಗುಂಬಳ ಅಥವಾ ಸೋರೆಕಾಯಿಯು ಭಾರತ, ಚೀನಾ, ಜಪಾನ್ ಮುಂತಾದ ಏಶಿಯಾದ ನೆಲೆದೆಡೆಗೆ ಸಾಗಿ, ಅದರ ಪ್ರಭೇದದಿಂದ ಹೊಸಬಗೆಯ ಪ್ರಭೇದವಾಗಿಯೂ ವಿಕಾಸಗೊಂಡಿರಬಹುದೆಂದೂ ವಿಜ್ಞಾನದಲ್ಲಿ ಸಂಗತಿಗಳಿವೆ. ಹಾಗಾಗಿ ಆಫ್ರಿಕಾ ಮತ್ತು ಏಶಿಯಾ ಪ್ರಭೇದಗಳನ್ನು ಭಿನ್ನವಾಗಿಯೂ ನೋಡಬಹುದಾದ ಚರ್ಚೆಗಳೂ ಇವೆ. ಈ ಬೌದ್ಧಿಕ ಚರ್ಚೆಗಳು ಏನೇ ಇರಲಿ, ಸೋರೆಕಾಯಿಯೂ ನಮ್ಮದೂ ಹೌದು, ಆಫ್ರಿಕದ ಮೂಲದ್ದೂ ಹೌದು! ಏಕೆಂದರೆ ಇದರಲ್ಲಿ ಇರುವ ವೈವಿಧ್ಯತೆಗಳು ಹಾಗಿವೆ. ಅವುಗಳು ಸಾಮಾನ್ಯ ನೋಟಕ್ಕೂ ವಿವಿಧ ಆಕಾರಗಳಿಂದ, ರುಚಿಗಳಿಂದ ಭಿನ್ನತೆಯನ್ನು ಸಾಬೀತು ಮಾಡಿವೆ.
ಕುಂಬಳ, ಸೌತೆಗಳ ಕುಟುಂಬವಾದ ಕುಕುರ್ಬಿಟೇಸಿಯೇದ ಪ್ರಮುಖ ಪ್ರಭೇದವಾದ ಸೋರೆಕಾಯಿ ಅಥವಾ ಹಾಲುಗುಂಬಳ, ತನ್ನ ಸಾಮಾನ್ಯವಾದ ಬಾಟಲ್ ಆಕಾರದಿಂದಾಗಿ “ಬಾಟಲ್ ಗೊರ್ಡ್ ” (Bottle Gourd) ಎಂದೇ ಜನಪ್ರಿಯವಾಗಿದೆ. ಸಸ್ಯವೈಜ್ಞಾನಿಕವಾಗಿ ಲಗೆನೇರಿಯಾ ಸೈಕರೆರಿಯಾ (Lagenaria siceraria) ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಸಂಕುಲದ ಹೆಸರಾದ ಲಗೆನೇರಿಯಾ (Lagenaria) ಬಾಟಲ್ ಅಥವಾ ಫ್ಲಾಸ್ಕ್ ಎಂಬ ಅರ್ಥದ ಲ್ಯಾಟಿನ್ ಮೂಲದ ಲಗೇನಾ (Lagena) ಎನ್ನುವ ಪದದಿಂದ ಪಡೆಯಲಾಗಿದೆ. ಪ್ರಭೇದದ ಹೆಸರಾದ ಸೈಕರೆರಿಯಾ (siceraria) ವನ್ನು ದ್ರವ ಇತ್ಯಾದಿಗಳನ್ನು ಕುಡಿಯಲು ಬಳಸುವ ಪಾತ್ರೆ ಎಂಬ ಅರ್ಥದ ಲ್ಯಾಟಿನ್ ಮೂಲದ ಸೈಕೆರಾ(Sicera) ದಿಂದ ಬಳಸಲಾಗಿದೆ. ಈ ವೈಜ್ಞಾನಿಕ ನಾಮಕರಣವನ್ನು ಸ್ಪೈಯಿನ್ ದೇಶದ ಸಸ್ಯ ವಿಜ್ಞಾನಿ, ಭಾಷಾತಜ್ಞ ಹಾಗೂ ಭೂಗೋಳವಿಜ್ಞಾನಿ ಹಾನ್ ಇಗ್ನಾಸಿಯೋಃ ಮೊಲಿನಾ (Juan Ignacio Molina) ಅವರು ಮಾಡಿದ್ದಾರೆ. ಇವರು ಹೆಸರಾಂತ ಜೀವಿವಿಕಾಸ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಅವರನ್ನೂ ಪ್ರಭಾವಿಸಿದ ಅವರಿಗಿಂತಾ ಹಿರಿಯ ವಿಜ್ಞಾನಿ.
ಆಹಾರದ ಬಳಕೆಗಳ ಜೊತೆಗೆ, ಇತರೇ ಬಳಕೆಗಳಿಂದ ವಿವಿಧ ಸಂಸ್ಕೃತಿಗಳ ಮೂಲದಿಂದ ಪ್ರಮುಖವಾಗಿ ಎರಡು ನೆಲೆಗಳಿಂದ ಸೋರೆಕಾಯಿ/ಹಾಲುಗುಂಬಳ ಮಾನವ ಸಂಸ್ಕೃತಿಯಲ್ಲಿ ಒಂದಾಗಿದೆ. ಮಧ್ಯ ಕರ್ನಾಟಕದಲ್ಲಿ ಇದು ಹಾಲುಗುಂಬಳ ಎಂದೇ ಹೆಸರುವಾಸಿ! ಬಗೆ ಬಗೆಯ ಕುಂಬಳಗಳು ಇರುವುದರಿಂದ ಇದನ್ನು ಹೆಚ್ಚುವಾಗ ಒಳಗಿನ ತಿರುಳು ಗಟ್ಟಿಯಾದ ಹಾಲಿನಂತೆ ಇರುವುದರಿಂದ ಇದನ್ನು ಹಾಲುಗುಂಬಳ ಎಂದು ಹೆಸರಿಸಲಾಗಿದೆ. ಚಾಕುವಿನಿಂದ ಹೆಚ್ಚುವಾಗ ಗಟ್ಟಿಯಾದ ಹಾಲಿನ ನೊರೆಯನ್ನು ಸೀಳುತ್ತೇವೋ ಎಂಬಂತೆ ಅನಿಸುವುದರಿಂದ ಹಾಲುಗುಂಬಳ ಎಂಬ ಹೆಸರು. ದಕ್ಷಿಣ ಕರ್ನಾಟಕದಲ್ಲಿ ಸೋರೆಕಾಯಿ ಎನ್ನುವ ಹೆಸರೇ ಜನಪ್ರಿಯ.

ಹೀಗೆ ನಮ್ಮ ನೆಲದಲ್ಲೇ ಎರಡು ಹೆಸರಿನಿಂದ ಜನಪ್ರಿಯವಾದ ಈ ಬಳ್ಳಿಯು ಎರಡೆರಡು ನೆಲದ ಸಂಸ್ಕೃತಿಯ ದಟ್ಟ ಬೆಸುಗೆಯನ್ನು ತನ್ನೊಡಲಲ್ಲಿ ಬೆಚ್ಚಗಿರಿಸಿಕೊಳ್ಳಲು ಸಾಕಷ್ಟು ಕಾರಣಗಳನ್ನು ಚರಿತ್ರೆಯಲ್ಲಿ ಸೇರಿಸಿದೆ. ಕೇವಲ ಆಹಾರವಾಗಿ ಮಾತ್ರವಲ್ಲದೆ, ತನ್ನ ದಪ್ಪಸಿಪ್ಪೆಯಿಂದ ಭಿನ್ನ ಭಿನ್ನವಾದ ಆಕಾರಗಳ, ಜೊತೆಗೆ ವಿವಿಧ ಗಾತ್ರಗಳ ಲಭ್ಯತೆಯಿಂದಾಗಿ ವೈವಿಧ್ಯಮಯ ಬಳಕೆಯನ್ನು ಕಂಡುಕೊಂಡಿವೆ. ಕುಂಬಾರಿಕೆಯು ವಿಕಾಸಗೊಂಡು, ಮಡಿಕೆ-ಕುಡಿಕೆಗಳು ಬಳಕೆಗೆ ಬರುವುದಕ್ಕೆ ಮುನ್ನವೇ ಅಥವಾ ಅದರ ಸಮಾನಾಂತರವಾಗಿಯೇ ಸೋರೆಕಾಯಿಗಳು ನೀರು, ಧಾನ್ಯ ಮುಂತಾದವುಗಳ ಸಂಗ್ರಾಹಕಗಳಾಗಿ ಬಳಕೆಯನ್ನು ಕಂಡಿವೆ. ಅದರಲ್ಲೂ ನೀರಿನ ಸಂಗ್ರಾಹಕ ಮಡಿಕೆಗಳಂತೆ ಸೋರೆಕಾಯಿಗಳು ಆಫ್ರಿಕಾದ ಮೂಲವಾಸಿಗಳಲ್ಲಿ ಅತ್ಯಂತ ಜನಪ್ರಿಯ.

ಸೋರೆಕಾಯಿಯ ಮಡಿಕೆ-ಕುಡಿಕೆಗಳ ಜೊತೆಗೆ ಬಟ್ಟಲುಗಳು, ಪುಟ್ಟ ಪುಟ್ಟ ಚಮಚಗಳೂ ಕೂಡ ಈ ಕಾಯಿಯ ಕೊಡುಗೆಗಳಾಗಿವೆ. ಕಾಯಿಯ ಒಳಗಿನ ತಿರುಳನ್ನು ತೆಗೆದು ಒಣಗಿಸಿದ ಬುರುಡೆಗಳು ಹಗುರವಾಗಿದ್ದು ಮೀನುಗಾರಿಕೆ ಬಲೆಗಳಲ್ಲಿ ತೇಲು ಬುರುಡೆಗಳಾಗಿಯೂ ಬಳಕೆಯನ್ನು ಕೊಟ್ಟಿವೆ.

ಇನ್ನು ಭಾರತದಲ್ಲಿ ಹಾಗೆಯೇ ಆಫ್ರಿಕಾದ ನೆಲದಲ್ಲೂ ಸಂಗೀತಕ್ಕೆ ಸಾಥ್ ಕೊಡಲು ಸ್ವರದ ಅನುರಣಿಕೆಯಲ್ಲಿ ಜೊತೆಯಾಗಿದೆ. ಪುಂಗಿಯಲ್ಲದೆ ಬಗೆ ಬಗೆಯ ತಂತಿ ವಾದ್ಯಗಳ ಸ್ವರದ ಅನುರಣಿಕೆಯ ಬುರುಡೆಯಾಗಿ ಸೋರೆಕಾಯಿಯು ಚಾರಿತ್ರಿಕವಾಗಿ ಮಹತ್ವವನ್ನು ಗಳಿಸಿಕೊಂಡಿದೆ. ಇಂದಿಗೂ ಸೋರೆಕಾಯಿಯ ರೆಸೊನೇಟರ್-ಅನುರಣಿಕೆಯ ಬುರುಡೆಯು ಹೆಚ್ಚು ಬಳಕೆಯಲ್ಲಿಯೇ ಇದೆ. ಹೀಗೆ ಹೊಟ್ಟೆಯನ್ನು ತುಂಬಿಸುವ ಆಹಾರದಿಂದ ಮೊದಲ್ಗೊಂಡು ಮನಸ್ಸಿಗಾನಂದ ಕೊಡುವ ಸಂಗೀತದವರೆಗೂ ಮಾನವರ ಸಂಗಾತಿಯಾಗಿ ಸಹಸ್ರಾರು ವರ್ಷಗಳನ್ನು ಸವೆಸಿದೆ.

ಇಂತಹಾ ವಿಶೇಷಣಗಳ ಜೊತೆಗೆ ಇದೊಂದು ಬಹು ಮುಖ್ಯ ತರಕಾರಿಯಾಗಿ ಹೆಚ್ಚೂ-ಕಡಿಮೆ ಜಗತ್ತಿನ ಉಷ್ಣ ಹಾಗೂ ಸಮಶೀತೋಷ್ಣವಲಯದ ಎಲ್ಲ ನೆಲದಲ್ಲೂ ಪ್ರಮುಖ ಬೆಳೆಯಾಗಿದೆ. ಹಾಲುಗುಂಬಳವು ಪ್ರಾಚ್ಯವಸ್ತು ಸಂಶೋಧನೆಗಳ ಉತ್ಖನನಗಳ ಆಧಾರಗಳಿಂದ ಚೀನಾದ ನೆಲೆಯನ್ನು 8,000-9,000 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿದೆ. ಚೀನಾ ಹಾಗೂ ಜಪಾನ್ಗಳೆರಡರಲ್ಲೂ ಉತ್ಖನನಗಳಲ್ಲಿ ಸೋರೆಕಾಯಿಗಳ ಗುರುತುಗಳು ದಾಖಲಾಗಿವೆ. ಅಚ್ಚರಿಯೆಂಬತೆ ಕೊಲಂಬಸ್ಸನು ಅಮೆರಿಕೆಗೆ ಹೋಗುವ ಮುನ್ನವೇ ಸೋರೆಕಾಯಿಯು ಸಾಗರಗಳ ಕರೆಂಟುಗಳಿಂದ ಅಮೆರಿಕೆಯನ್ನು ಹೊಕ್ಕು ಏನಿಲ್ಲವೆಂದರೂ 8,000 ವರ್ಷಗಳಷ್ಟು ಹಿಂದಿನ ನೆಲೆಗಳನ್ನು ಸಾಬೀತುಪಡಿಸಿವೆ. ಮೂಲ ಆಫ್ರಿಕದ್ದೆಂದು ಬಲವಾದ ಕಾರಣಗಳನ್ನು ಸಸ್ಯ ವೈಜ್ಞಾನಿಕವಾಗಿ ಕಂಡುಕೊಂಡಿದ್ದರೂ ಪೂರ್ವದ ನೆಲಕ್ಕೆ ಸಾಗಿದ್ದಲ್ಲದೆ, ಮೂಲದಿಂದ ಬೇರೆಯೇ ಎನ್ನುವಷ್ಟು ಬದಲಾದ ಸೋರೆಕಾಯಿಗಳು ಏಶಿಯಾದವೇನೋ ಹೌದೌದು ಎನ್ನುವಂತೆ ಚರಿತ್ರೆಯನ್ನು ಕಟ್ಟಿಕೊಂಡಿವೆ.
ಸೋರೆಕಾಯಿಗಳನ್ನು ಅದರಲ್ಲೂ ದೊಡ್ಡ ದೊಡ್ಡ ಗಾತ್ರದ ಮುಖ್ಯವಾಗಿ ಸಂಗ್ರಾಹಕಗಳ ಬಳಕೆಯಿಂದ ಕಲಬಾಶ್ಗಳು (Calabash) ಎಂದು ಕರೆಯಲಾಗುತ್ತದೆ. ಇದು 16 ನೆಯ ಶತಮಾನದ ಫ್ರೆಂಚ್ ಪದದಿಂದ ವಿಕಾಸವಾದದ್ದು. ಈ ಫ್ರೆಂಚ್ ಪದವೂ ಸಹಾ ಪರ್ಷಿಯನ್ ಒಳಗೊಂಡಂತೆ ರೋಮನ್ ಪೂರ್ವದ ಭಾಷಾ ಚರಿತ್ರೆಯ ಮೂಲದ್ದಾಗಿದೆ. ಒಂದು ಬಗೆಯಲ್ಲಿ “ಸಂಗ್ರಾಹಕ” ಅಥವಾ “ಪಾತ್ರೆ” ಮುಂತಾಗಿ ಅರ್ಥವನ್ನು ಕೊಡುವಂತಹದ್ದು. ಒಟ್ಟಾರೆಯ ಶತಮಾನಗಳ ಕಾಲದ ಸುದೀರ್ಘ ಇತಿಹಾಸದ ಬಳಕೆ, ಹರಡುವಿಕೆ, ಇತ್ಯಾದಿಗಳ ವಿಕಾಸದಿಂದಾಗಿ ಈ ಸಸ್ಯದ ಸಾಂಸ್ಕೃತಿಕ ಹರಹು ಇಡೀ ಜಗತ್ತಿನಲ್ಲಿ ಅನಾವರಣವಾಗಿದೆ. ಹಾಗೆಂದೇ ಜಗತ್ತನ್ನೇ ಸೂರೆಗೊಂಡ ಸೋರೆಕಾಯಿ ಎನ್ನಬೇಕಾಗಿದೆ.

ತನ್ನದೇ ಸ್ವಾಭಾವಿಕ ಕಾರಣಗಳಿಂದ ಜಗತ್ತನ್ನು ಆವರಿಸಿದ ಕಥಾನಕವುಳ್ಳ ಸೋರೆಕಾಯಿಯು ಮಾನವರ ಹಿತಾಸಕ್ತಿಯ ಹೊರತಾಗಿಯೂ ಪೂರ್ವ-ಪಶ್ಚಿಮಗಳಾದ್ಯಂತ ಖಂಡಾಂತರವಾಗಿ 8,000 ದಿಂದ 10,000 ವರ್ಷಗಳ ಹಿಂದಿನಿಂದಲೂ ಬೆಳೆಯುತ್ತಿರುವ ಬಳ್ಳಿ. ಹೆಚ್ಚೂ-ಕಡಿಮೆ ಎಲ್ಲಾ ಭೂಖಂಡಗಳಲ್ಲೂ ಇಂದು ಬೆಳೆಯಲಾಗುತ್ತಿರುವ ವಾರ್ಷಿಕ ಬಳ್ಳಿ! ಪಶ್ಚಿಮದ ಯೂರೋಪು ಅಮೆರಿಕಾಗಳಲ್ಲಿ ಉಷ್ಣತೆಯ ನೆಲದಲ್ಲಿ, ಹಾಗೂ ಆಸ್ಟ್ರೇಲಿಯಾದ ಬಿಸಿ ವಾತಾವರಣದಲ್ಲಿ ತನ್ನ ಇರುವನ್ನು ಸ್ಥಾಪಿಸಿದೆ. ಆಫ್ರಿಕಾ-ಏಶಿಯಾಗಳಂತೂ ಸ್ಥಳಿಯತೆಯ ಹಾಗೂ ಸ್ವಾಭಾವಿಕ ಹರಹಿನಿಂದ ನೆಲೆಗಳನ್ನು ಕಂಡುಕೊಂಡಿದೆ.

ತನ್ನ ಬಾಟಲ್ ಆಕಾರದ ಸಹಜವಾದ ನೋಟದಿಂದ ಹೆಸರಾಗಿದ್ದರೂ ಸಹಾ ಬಗೆ ಬಗೆಯ ಆಕಾರಗಳಲ್ಲಿ ಸೋರೆಕಾಯಿಯು ಪ್ರಸಿದ್ಧವಾಗಿದೆ. ದುಂಡನೆಯ, ಉದ್ದನೆಯ, ಬಾತುಕೋಳಿಯಂತಹಾ ಆಕಾರದಲ್ಲೂ ಕಾಯಿಗಳನ್ನು ನೋಡಬಹುದು. ಎಲ್ಲದರಲ್ಲೂ ಎಳೆಯ ಬೀಜಗಳಿರುವಂತೆಯೇ ಬಳಸಿದರೆ, ಬಗೆ ಬಗೆಯ ತಿನಿಸುಗಳಾಗಿ ನಮ್ಮ ಆಹಾರಕ್ಕೆ ಹೊಂದಿಕೊಂಡಿದೆ. ಕಾಯಿಯ ಸಿಪ್ಪೆಯ ದಪ್ಪವಾದ ಕಾರಣದಿಂದ ಒಳಗಿನ ತಿರುಳನ್ನು ತೆರೆದು ಆಯಾ ಕಾಯಿಯ ಆಕಾರದ ವಿವಿಧ ವಸ್ತುಗಳ ವಿಕಾಸದಲ್ಲಿಯೂ ನೆರವಾಗಿದೆ. ಹಾಗೆಂದೇ ವಿವಿಧ ಬಳಕೆಯ ವಸ್ತುಗಳು, ಅಲಂಕಾರಿಕ ಹಾಗೂ ಮಾಧುರ್ಯ ಹೊರಡಿಸುವ ಅನುರಣಿಕೆಯಲ್ಲೂ ಪಾತ್ರ ವಹಿಸಿದೆ.

ಜಗತ್ತನ್ನೆಲ್ಲಾ ಆವರಿಸಿದ್ದರೂ ಈ ಸೋರೆಕಾಯಿಯು ಬಿಸಿಯಾದ ವಾತಾವರಣದ ಬಯಕೆಯುಳ್ಳ ಸಸ್ಯ. ತುಂಬಾ ಚಳಿಯನ್ನಾಗಲಿ, ಮಂಜಿನ ಹವಾಮಾನವನ್ನು ತಡೆದುಕೊಳ್ಳುವುದಿಲ್ಲ. ಸಹಜವಾಗಿ ಉಷ್ಣ ಹಾಗೂ ಸಮಶೀತೋಷ್ಣವಲಯದಲ್ಲಿ ಬೆಳೆಯುವುದಾದರೂ, ಶೀತವಲಯದಲ್ಲಿ ಬೇಸಿಗೆಯ ಬೆಳೆಯಾಗಿ ಜನಪ್ರಿಯವಾಗಿದೆ. ಆಹಾರದಲ್ಲಿ ಎಂದರೆ ಬಲಿಯದ ಕಾಯಿಗಳು ತರಕಾರಿಗಳಾಗಿ ಏಶಿಯಾ ಹಾಗೂ ಆಫ್ರಿಕಾದಲ್ಲಿ ತುಂಬಾ ಬೇಡಿಕೆಯ ತರಕಾರಿ.
ಸೋರೆಕಾಯಿಯು ವಿವಿಧ ಸಂಸ್ಕೃತಿಯಲ್ಲಿ ವೈವಿದ್ಯಮಯವಾದ ಆಹಾರದ ಬಳಕೆಯನ್ನು ಕೊಟ್ಟಿದೆ. ತುಸುವೇ ಬೇಯಿಸಿ ಬಳಸಲೂ ಯೋಗ್ಯವಾಗಿದ್ದು, ಹಾಗೇ ಎಣ್ಣೆಯಲ್ಲಿ ಹುರಿದೂ ಪಲ್ಯ, ಸಾಂಬಾರು ಮತ್ತಿತರ ಖಾದ್ಯಗಳನ್ನು ತಯಾರಿಸುತ್ತಾರೆ. ಬರ್ಮಾ ದೇಶದಲ್ಲಿ ಹಾಲುಗುಂಬಳದ ಎಳೆಯ ಎಲೆಗಳನ್ನು ಕುದಿಸಿ, ಹುದುಗುಗೊಳಿಸಿದ ಮೀನಿನ ಸಾಸ್ನೊಡನೆ ಬಳಸುತ್ತಾರೆ. ಹಾಲುಗುಂಬಳದ ಜೊತೆಗೆ ಮೊಸರನ್ನೂ ಬೆರೆಸಿ ಮಾಡುವ ರಾಯಿತಾವಾಗಲಿ, ಮಜ್ಜಿಗೆ ಹುಳಿಯೂ ಅನೇಕರಿಗೆ ಗೊತ್ತಿರುವಂತಹದ್ದೇ! ಅಮೆರಿಕದ ದೇಶಗಳಲ್ಲಿ ಸೋರೆಯ ಬೀಜಗಳನ್ನು ಹದವಾಗಿ ಹುರಿದು ಹಾಗೇ ತಿನ್ನಲೂ ಅಥವಾ ಪುಡಿ ಮಾಡಿಕೆಲವೊಂದು ಸಾಂಬಾರ ಪದಾರ್ಥಗಳ ಬೆರೆಸಿ ಪೇಯ ಮಾಡಿಯೂ ಬಳಸುತ್ತಾರೆ.
ಹಾಲುಗುಂಬಳದ ರುಚಿ ಒಂದು ರೀತಿಯಲ್ಲಿ ಸೌಮ್ಯ ಹಾಗೂ ಸೂಕ್ಷ್ಮ (Mild and Subtle) ಆದ್ದರಿಂದ ವಿವಿಧ ಬೇಳೆ-ಕಾಳು-ತರಕಾರಿಗಳ ಜೊತೆ ಸುಲಭವಾಗಿ ಹೊಂದಿಕೊಳ್ಳಬಲ್ಲದು. ಸಾಮಾನ್ಯವಾಗಿ ಎಳೆಯ ಬೀಜಗಳು ಮತ್ತವುಗಳನ್ನು ಹೊಂದಿಕೊಂಡ ತಿರುಳನ್ನೂ ತೆಗೆದು ಬಳಸುವುದೇ ಹೆಚ್ಚು. ತೀರಾ ಎಳೆಯದಾಗಿದ್ದಲ್ಲಿ ಅದನ್ನೂ ತಿನ್ನಬಹುದಾಗಿದೆ. ಕೆಲವೊಂದು ಪ್ರದೇಶಗಳಲ್ಲಿ ಸಿಪ್ಪೆಯನ್ನೂ ಒಣಗಿಸಿ ಪುಡಿ ಮಾಡಿ ಅಥವಾ ಹಾಗೇಯೆ ಸಾಂಬಾರ ಪದಾರ್ಥದೊಂದಿಗೆ ಕರಿದೋ, ಹುರಿದೋ ಬಳಸುತ್ತಾರೆ.
ಸೋರೆಕಾಯಿಯನ್ನು ಸಾಂಬಾರು, ಪಲ್ಯ, ಮುಂತಾದ ಬೇಯಿಸಿದ ಭಕ್ಷ್ಯಗಳಲ್ಲಿಯೂ ಬಳಸಬಹುದು. ಇದರ ಸೌಮ್ಯ ಸುವಾಸನೆಯು ವಿವಿಧ ಮಸಾಲೆಗಳು ಮತ್ತು ಮಸಾಲೆಗಳೊಂದಿಗೆ ಹೊಂದಿಕೊಂಡು ವೈವಿಧ್ಯತೆಯ ತಿನಿಸುಗಳನ್ನು ನೀಡುತ್ತದೆ. ಇದನ್ನು ತುರಿದು ಪ್ಯಾನ್ಕೇಕ್ಗಳು ಅಥವಾ ಕೆಲವು ಬೇಕರಿ ಉತ್ಪನ್ನಗಳಲ್ಲಿಯೂ ಬಳಸಬಹುದು. ಹಲ್ವಾದಂತಹಾ ಸಿಹಿ ತಿನಿಸನ್ನೂ ಕೂಡ ಮಾಡುತ್ತಾರೆ.
ಹಾಲುಗುಂಬಳವು, ಕಡಿಮೆ ಸಕ್ಕರೆಯ ಅಂಶವನ್ನು ಹೊಂದಿದ್ದು, ಸಾಕಷ್ಟು ನಾರಿನಾಂಶವನ್ನೂ ಹೊಂದಿರುವುದರಿಂದ ಮಧುಮೇಹಿಗಳಿಗೆ ಉತ್ತಮ ತರಕಾರಿ. ಪ್ರತೀ 100 ಗ್ರಾಂನಲ್ಲಿ ಕೇವಲ 15 ಕಿಲೊ ಕ್ಯಾಲೊರಿ ಶಕ್ತಿಯನ್ನು ಕೊಡುತ್ತದೆ. ಥಯಾಮಿನ್ (B1), ರೈಬೊಫ್ಲೇವಿನ್ (B2) ನಿಯಾಸಿನ್ (B3) ಪೆಂಟತೊನಿಕ್ ಆಮ್ಲ (B5) ಮತ್ತು ವಿಟಮಿನ್ ಬಿ೬ (B6) ಜೊತೆಗೆ ವಿಟಮಿನ್ ಸಿ ಯನ್ನೂ ಹೊಂದಿದೆ. ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಗ್ನೀಸಿಯಂ, ರಂಜಕ, ಪೊಟ್ಯಾಸಿಯಂ ಸತು ಮುಂತಾದ ಖನಿಜಾಂಶಗಳಿಂದಲೂ ಸಮೃದ್ದವಾಗಿದೆ.

ಸಾಂಸ್ಕೃತಿಕವಾಗಿಯೂ ಸೋರೆಕಾಯಿಯು ಸಮೃದ್ಧವಾದ ಚರಿತ್ರೆಯ ಜೊತೆಗೆ ಬೆಸೆದುಕೊಂಡಿದೆ. ಚೀನಿಯರು ಸೋರೆಕಾಯಿಯನ್ನು ಒಳ್ಳೆಯ ಅದೃಷ್ಟ ಹಾಗೂ ದೀರ್ಘಾಯುಷ್ಯದ ಸಂಕೇತವೆಂದೂ ನಂಬುತ್ತಾರೆ. ಭಾರತೀಯ ಪರಂಪರೆಯು ಔಷಧೀಯ ಗುಣಗಳಿಂದ ಜೊತೆಗೆ ಸಿತಾರ್, ವೀಣಾ ಮುಂತಾದ ತಂತಿವಾದ್ಯಗಳಲ್ಲಿ ಸ್ವರದ ಅನುರಣಕವಾಗಿ ಬಳಸುತ್ತದೆ. ಇದು ಭಾರತೀಯ ಎರಡು ಪ್ರಕಾರಗಳಾದ ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತಗಳ ಸಹಚರವಾಗಿ ನಿರಂತರವಾಗಿದೆ.
ಆಫ್ರಿಕವಂತೂ ವಿಕಾಸದ ನೆಲೆಯ ಹಿನ್ನಲೆಯಲ್ಲಿ ಆಹಾರವಾಗಿ, ಸಂಗ್ರಾಹಕವಾಗಿ ಜೊತೆಗೆ ಅಲಂಕಾರಿಕ ವಸ್ತುಗಳ ನಿರ್ಮಿತಿಯಲ್ಲೂ ಸೋರೆಕಾಯಿಯನ್ನು ಬಳಸುತ್ತಲೇ ಇದೆ. ಜೊತೆಗೆ ಅನೇಕ ನಂಬಿಕೆಗಳ ಪುರಾಣಗಳನ್ನೂ ಆಫ್ರಿಕಾದ ಬುಡಕಟ್ಟುಗಳಲ್ಲಿ ಬಿಂಬಿಸಿದೆ. ಐರೋಪ್ಯ ಹಾಗೂ ಅಮೆರಿಕದ ಸಂಸ್ಕೃತಿಗಳು ಸಂಗ್ರಾಹಕಗಳೂ, ಹಕ್ಕಿ ಪಕ್ಷಿಗಳ ಗೂಡುಗಳ ನೆರವಿನಲ್ಲೂ, ಜೊತೆಗೆ ಕುಡಿಯಲು ಹಗುರವಾದ ಸಾಧನಗಳ ನಿರ್ಮಿತಿಯಲ್ಲೂ ಸೋರೆಕಾಯಿಗಳನ್ನು ಬಳಸುತ್ತಲಿವೆ.
ಹಾಲುಗುಂಬಳದ ಬಳ್ಳಿಯು ಸೊಗಸಾದ ನೋಟದವು. ಬಿಳಿಯ ಹೂವುಗಳಂತೂ ನೋಡಲು ತಪ್ಪಿಸಿಕೊಳ್ಳಲೇ ಅಸಾಧ್ಯ ಎಂಬಂತೆ ಎದ್ದು ಕಾಣುತ್ತಿರುತ್ತವೆ. ದಪ್ಪ ದಪ್ಪವಾದ ಎಲೆಗಳು ದಟ್ಟವಾಗಿ ಹರಡಿಕೊಂಡು ಹಸಿರ ರಾಶಿಯನ್ನು ಮೈದುಂಬಿಕೊಂಡಿರುತ್ತದೆ.

ಅಪರೂಪಕ್ಕೆ ಹಾಲುಗುಂಬಳಗಳೂ ಸಹಾ ಬಹುತೇಕ ಕುಂಬಳ ಕುಟುಂಬಗಳ ಸಸ್ಯಗಳಂತೆ ಸ್ವಲ್ಪ ಕಹಿಯನ್ನೂ ಒಳಗೊಂಡಿರುತ್ತವೆ. ಅದಕ್ಕೆ ಕಾರಣ Cucurbitacins ಎಂಬ ರಾಸಾಯನಿಕ. ಇದ ಸಹಜವಾಗಿ ಒಮ್ಮೊಮ್ಮೆ ಹೆಚ್ಚಿನ ಅಂಶವಿದ್ದು ಕಾಯಿ/ಹಣ್ಣಿನ ಕಹಿ ರುಚಿಗೆ ಕಾರಣವಾಗುತ್ತದೆ. ಕೆಲವರಿಗೆ ಇದು ಅಲರ್ಜಿಯನ್ನೂ ಅಥವಾ ಹೆಚ್ಚಾಗಿ ಬಳಸಿದರೆ ಹೊಟ್ಟೆಯ ಅಲ್ಸರನ್ನೂ ತರಬಲ್ಲದು. ಹಾಗಾಗಿ ಕೆಲವರು ಕುಂಬಳಗಳ ರಸವನ್ನು ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಅವರು ಹುಷಾರಾಗಿ ಇರಬೇಕು. ತೀರಾ ಸ್ವಾಭಾವಿಕವಾಗಿ ಕಹಿ ಏನೂ ಇರುವುದಿಲ್ಲ. ಕೆಲವೊಮ್ಮೆ ತೀರಾ ಬಲಿತ, ಹೆಚ್ಚು ಮಾಗಿದ ಕಾಯಿ/ಹಣ್ಣುಗಳಲ್ಲಿ ಇರುವುದುಂಟು.

ಸ್ವಾಭಾವಿಕವಾದ ನೋಟ, ಸ್ಪರ್ಶ, ಹೋಳುಮಾಡಿ ಅಡುಗೆ ತಯಾರಿ, ನಂತರ ರುಚಿ, ಒಣಗಿಸಿ ತಿರುಳು ತೆಗೆದ ಮೇಲೆ ಹಗುರವಾದ ಬುರುಡೆ, ಅದರಿಂದ ಸಂಗೀತದ ಸ್ವರದ ಅನುರಣಿಕೆ, ಬೀಜಗಳದ್ದೇ ಭಿನ್ನ ರುಚಿ ಹೀಗೆ ಸಹಸ್ರಾರು ವರ್ಷಗಳನ್ನು ಮಾನವ ಸಾಂಗತ್ಯದಲ್ಲಿ ಬೆಸಿದಿರುವ ಹಾಲುಗುಂಬಳ ಅಲಿಯಾಸ್ ಸೋರೆಕಾಯಿ ದಟ್ಟ ಹಸಿರಾದ ಹರವಾದ ಎಲೆಗಳ ಬಳ್ಳಿಯಾಗಿ ನಮ್ಮೆಲ್ಲರ ಜೀವನವನ್ನು ಹಬ್ಬಿದೆ. ಅದರ ಕುಡಿ ನೋಟದ ಮುಗುಳುಗಳು, ಸ್ವಚ್ಚ ಬಿಳಿಯ ಹೂವುಗಳೂ ನಗೆಯನ್ನು ಬೀರುತ್ತಾ ಆಹ್ವಾನಿಸುತ್ತಿರುತ್ತವೆ. ಹೂವನ್ನು ನುಂಗುತ್ತಲೇ ಕಾಯಾದ ಮೇಲೆ ಹೊಟ್ಟೆಯನ್ನು ಸೇರುವ, ಅಥವಾ ಒಣಗಿ ಬುರುಡೆಯಾಗಿಯೂ ನಮ್ಮೊಡನೆಯೇ ಇರುತ್ತದೆ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್.
ಹೆಚ್ಚಿನ ಓದಿಗೆ:
1. Plants of the World Online. Board of Trustees of the Royal Botanic Gardens, Kew.
2. David L. Erickson et. al. 2005. An Asian origin for a 10,000-year-old domesticated plant in the Americas. www.pnas.org/cgi/doi/10.1073/pnas.0509279102 PNAS December 20, 2005. vol. 102. No. 51. 18315–18320
3. Melak Agajie. “Bioprospecting Bottle Gourd Plant Species (Lagenaria Siceraria.) As A Cultural Musical Instrument ’Zumbara’ Making Material in Berta Community of Assosa Zone, Benishangul Gumuz Regional State”. Acta Scientific Agriculture 6.3 (2022): 33-37.
