ಕಳೆದ 2021 ವಿಜ್ಞಾನ ಜಗತ್ತಿನ ಮಹತ್ವದ ವರ್ಷ. ಜಾಗತಿಕವಾಗಿ ತಲ್ಲಣಗೊಳಿಸಿದ ಕೊರೊನಾ ವೈರಸ್ಸಿಗೆ ವ್ಯಾಕ್ಸೀನು ಸೇರಿದಂತೆ, ಇಡೀ ವೈರಸ್ ಜಗತ್ತಿನ ಅರಿಯದ ಮುಖವನ್ನು ಅನಾವರಣಗೊಳಿಸಿದೆ. ಮಂಗಳ ಗ್ರಹದ ಅನ್ವೇಷಣೆಯೂ ಸೇರಿದಂತೆ, ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ಗೊಂದು ಸಾಮಾಜಿಕ ಕಳಕಳಿಯನ್ನೂ, ವಾತಾವರಣದ ಬದಲಾವಣೆಯಂತಹಾ ಸೂಕ್ಷ್ಮವಾದ ವಿಷಯಕ್ಕೂ ಎಚ್ಚರಿಕೆಯ ಸಾಮಾಜಿಕತೆಯನ್ನು ಪ್ರಭಾವಿಸಿದ ವರ್ಷ. ಇಂತಹವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ವಿಖ್ಯಾತ ವಿಜ್ಞಾನ ಪತ್ರಿಕೆ “ನೇಚರ್” 2021ರ ವಿಜ್ಞಾನವನ್ನು ರೂಪಿಸಿದವರೆಂದು ಹತ್ತು ಜನರನ್ನು ಆಯ್ಕೆ ಮಾಡಿದೆ. ವಿಶೇಷವೆಂದರೆ ಈ ಪಟ್ಟಿಯ 10 ಜನರಲ್ಲಿ 6 ಮಂದಿ ಮಹಿಳೆಯರೇ ಇದ್ದಾರೆ. ಇದೊಂದು ರ‍್ಯಾಂಕಿಂಗ್ ಪಟ್ಟಿಯೂ ಅಲ್ಲ ಅಥವಾ ಪ್ರಶಸ್ತಿಯೂ ಅಲ್ಲವೆಂದೂ ನೇಚರ್ ಪತ್ರಿಕೆಯ ಸಂಪಾದಕ ಸಮಿತಿ ಹೇಳಿದೆ. ವಿಜ್ಞಾನ ಸಮಾಜೀಕರಣದ ಹಿತವನ್ನೇ ಧ್ಯೇಯವಾಗಿ ಇಟ್ಟುಕೊಂಡ CPUS ಈ ಹತ್ತೂ ವಿಜ್ಞಾನಿಗಳನ್ನು ಕೆಲವು ವಿವರಗಳಿಂದ ಪರಿಚಯಿಸುವ ಪ್ರಯತ್ನ ಮಾಡಿದೆ.
ವಿನ್ನಿ ಬ್ಯಾನ್ಯಿಮಾ : ವ್ಯಾಕ್ಸೀನ್ ವಾರಿಯರ್ – Winnie Byanyima: Vaccine warrior
ಆಗ್ರಹಿಸದ ಹೊರತೂ ವ್ಯಾಕ್ಸೀನುಗಳ ಹಂಚಿಕೆ ಸಮರ್ಪಕವಾಗಿ ಇರುವುದಿಲ್ಲ, ಎಂದು ಕೋವಿಡ್-19ರ ವ್ಯಾಕ್ಸೀನಿಗೂ ಮೊದಲೇ ವಿನ್ನಿ ಬ್ಯಾನ್ಯಿಮಾ ಬಹಳ ಚೆನ್ನಾಗಿಯೇ ಅರಿತಿದ್ದರು. ಕಳೆದ 2020ರಲ್ಲಂತೂ ಕಡಿಮೆ ಹಾಗೂ ಮಧ್ಯಮ ಆದಾಯದ ದೇಶಗಳು ಕೇವಲ ನೆರವಿಗೆ ಮಾತ್ರ ಹಸ್ತವನ್ನು ಚಾಚದೆ ಸರಿಯಾದ ಹಂಚಿಕೆಗೂ ಗಮನಕೊಡಲು ಆಗ್ರಹಿಸಿದ ಪ್ರಮುಖರಲ್ಲಿ ಒಬ್ಬರು. ವ್ಯಾಕ್ಸೀನು ತಯಾರಿಸಿದ ಕಂಪನಿಗಳು ಹಂಚಿಕೆಯಲ್ಲಿ ಹಣಹೂಡುವ ದೇಶಗಳ ಪರವಾಗಿರುವುದು ಸಹಜವಾದುದು. ಆದರೆ ಇನ್ನೂ ಕಡಿಮೆ ಆದಾಯದ ದೇಶಗಳು ತಮ್ಮ ಮೊದಲ ವ್ಯಾಕ್ಸೀನನ್ನು ಕೇವಲ 6 % ಮಾತ್ರವೇ ನೀಡಲು ಸಾಕಾಗಿರುವಾಗ, ಉಳಿದ ಜನಸಮುದಾಯದ ಪಾಡೇನು? ಇದನ್ನು ಸರಿಯಾಗಿ ಅರಿತಿದ್ದ ವಿನ್ನಿ ಅವರ ಹೋರಾಟವು ವ್ಯಾಕ್ಸೀನಿನ ಬೌದ್ಧಿಕ ಆಸ್ತಿಯಾಗುವಲ್ಲಿ ತಡೆ ಉಂಟಾಗಲು ಸಹಕಾರಿಯಾಯಿತು.
ವಿನ್ನಿ ಬ್ಯಾನ್ಯಿಮಾ (Winnie Byanyima) UNAIDS ನ ಕಾರ್ಯಕಾರಿ ನಿರ್ದೇಶಕರು. ಮೂಲತಃ ಆಫ್ರಿಕಾದ ಉಗಾಂಡದವರಾದ ಶ್ರೀಮತಿ ವಿನ್ನಿ ಓರ್ವ ಇಂಜನಿಯರ್. ಮೆಂಚಸ್ಟೆರ್ ವಿಶ್ವವಿದ್ಯಾಲಯದಿಂದ ಏರೊನಾಟಿಕಲ್ ಇಂಜನಿಯರಿಂಗ್ ಪದವಿ ಹಾಗೂ ಕ್ರಾನ್‌ಫೀಲ್ಡ್ ವಿಶ್ವವಿದ್ಯಾಲಯದಿಂದ ಮೆಕಾನಿಕಲ್ ಇಂಜನಿಯರಿಂಗ್ ಅಲ್ಲಿ ಮಾಸ್ಟರ್ ಪದವಿ ಪಡೆದಿದ್ದಾರೆ. ಕಳೆದ 1981 ರಿಂದಲೂ ಚಟುವಟಿಕೆಯಿಂದ ಇರುವ ವಿನ್ನಿ ಅವರು ವಿಶ್ವ ಸಂಸ್ಥೆಯ ಅಂಗ ಸಂಸ್ಥೆಗಳಲ್ಲಿ ಮುಖ್ಯ ನಿರ್ವಾಹಕರಾಗಿ ದುಡಿದಿದ್ದಾರೆ. ಅಂತರರಾಷ್ಟ್ರೀಯವಾಗಿ ಕೇವಲ ಕೆಲವೇ ಔಷಧಿಗಳು ಮತ್ತು ಲಸಿಕೆಗಳು ಲಾಭದ ಹುನ್ನಾರದ ಮಾದರಿಗಳನ್ನು ರೂಪಿಸಿ ತಲುಪಿಸುತ್ತಿರುವುದನ್ನು ಕಂಡು ಕೆರಳಿದವರಲ್ಲಿ ವಿನ್ನಿ ಪ್ರಮುಖರು. ಹಾಗಾಗಿ “ನೀವು ಐಷಾರಾಮಿ ಕೈಚೀಲವನ್ನು ಮಾರಾಟ ಮಾಡುವ ರೀತಿಯಲ್ಲಿಯೇ ನೀವು ಜೀವ ಉಳಿಸುವ ಆರೋಗ್ಯ ತಂತ್ರಜ್ಞಾನವನ್ನು ಮಾರಾಟ ಮಾಡಬಹುದು ಎಂಬ ಈ ಕಲ್ಪನೆಯು ಸರಿಯಲ್ಲ” ಎಂದು ವಾದಿಸುತ್ತಾರೆ. ಅವರ ಹೋರಾಟದ ಫಲವಾಗಿ ವ್ಯಾಕ್ಸೀನುಗಳು ಪೇಟೆಂಟಿನಿಂದ ಮುಕ್ತಿ ಪಡೆದು ಸುಲಭವಾಗಿ ದೊರಕುವಂತಾಗಿದೆ. ಅವರಿಂದಲೇ ವ್ಯಾಕ್ಸೀನು ಹಂಚಿಕೆಯ ಸಮಾಜೀಕರಣದ ಫಲಶೃತಿ ಸಾಧ್ಯವಾಗಿದೆ. ವಿನ್ನಿ ಬ್ಯಾನ್ಯಿಮಾ ಅವರ ನೆರವು ಕೋಟ್ಯಾಂತರ ಜನರ ಆಶಾಕಿರಣವಾಗಿದೆ. ಜಾಗತಿಕವಾಗಿ ಜನಸಾಮಾನ್ಯರ ಆರೋಗ್ಯದ ಹಿತಾಸಕ್ತಿಯಲ್ಲಿ ವಿಶ್ವಸಂಸ್ಥೆಯ ಜವಾಬ್ದಾರಿಯನ್ನು ಹೆಚ್ಚಿಸುವಲ್ಲಿ ವಿನ್ನಿ ಬ್ಯಾನ್ಯಿಮಾ ಅವರ ಪಾತ್ರ ದೊಡ್ಡದು.
ಫ್ರೆಡೆರಿಕ್ ಒಟ್ಟೊ: ಹವಾಮಾನ ಪತ್ತೆದಾರ Friederike Otto: Weather detective
ಪ್ರೆಡೆರಿಕ್ ಒಟ್ಟೊ ಇಂಪಿರಿಯಲ್ ಕಾಲೇಜಿನ ಗ್ರಾಂತಮ್ ಇನ್‌ಸ್ಟಿಟ್ಯೂಟ್ ಆಫ್ ಕ್ಲೈಮೆಟ್ ಚೇಂಜ್ ಅಂಡ್ ಎನವಿರಾನ್‌ಮೆಂಟ್ ನಲ್ಲಿ ಹಿರಿಯ ಉಪನ್ಯಾಸಕರಾಗಿದ್ದಾರೆ. ಕಳೆದ ದಶಕದಿಂದ ತೀವ್ರವಾದ ಪರಿಸರದ ವಾತಾವರಣದ ಬದಲಾವಣೆಗಳ ಅಧ್ಯಯನದಲ್ಲಿ ತೊಡಗಿರುವ ಶ್ರೀಮತಿ ಫ್ರೆಡೆರಿಕ್, ವಾತಾವರಣದ ತೀವ್ರ ವ್ಯತ್ಯಯಗಳ ಮಾಹಿತಿಯನ್ನು ತಕ್ಷಣವೇ ವಿಶ್ಲೇಷಣೆಗೆ ಒಳಪಡಿಸಬಲ್ಲ ವಿಶ್ವ ಹವಾಮಾನ ಗುಣಲಕ್ಷಣ (World Weather Attribution -WWA) ಗಳ ಗುಂಪು ಒಂದನ್ನು 2015ರಲ್ಲಿ ಆರಂಭಿಸಿದರು. ಇದು ಪ್ರಮುಖವಾಗಿ ತೀವ್ರ ಉಷ್ಣತೆಯ ವ್ಯತ್ಯಾಸಗಳ ವಾತಾವರಣದ ಅಧ್ಯಯನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾ ಬಂದಿದೆ. ಕಳೆದ 26ನೆಯ (Conference of Parties) ಸಮಾವೇಶಕ್ಕೂ ತುಸು ಮೊದಲೇ ತಮ್ಮ ವರದಿ ಮತ್ತು ಮಾಹಿತಿಯನ್ನು ಹೊರ ಪಡಿಸಿದ್ದ ಫೆಡೆರಿಕ್ ಅವರು ಮೂಲತಃ ವಿಜ್ಞಾನದ ತಾತ್ವಿಕ ಅಧ್ಯಯನದ ವಿದ್ಯಾರ್ಥಿ. ನಂತರದಲ್ಲಷ್ಟೆ ಅವರು ಭೌತವಿಜ್ಞಾನದ ಕಡೆಗೆ ಹೊರಳಿದರು. ಸುಮಾರು 50ಕ್ಕೂ ಹೆಚ್ಚು ಹವಾಮಾನದ ಪತ್ತೆದಾರಿಕೆಯ ಮಾದರಿಗಳನ್ನು ತಯಾರಿಸಿದ್ದಾರೆ. ಹವಾಮಾನದ ಗುಣಲಕ್ಷಣಗಳ ಕುರಿತಂತೆ ಒಂದು ಬಗೆಯ ಮಾರ್ಗಸೂಚಿಯ ಮಾದರಿಗಳನ್ನು ಕೊಡುಗೆಯಾಗಿ ನೀಡಿದ ಒಟ್ಟೊ 2021ರಲ್ಲಿ ಮಹತ್ವದ ವಿಜ್ಞಾನದ ಕೊಡುಗೆಯನ್ನು ನೀಡಿದ್ದಾರೆ.
ಫ್ರೆಡೆರಿಕ್ ಒಟ್ಟೊ (Friederike Otto) ಮೂಲತಃ ಜರ್ಮನಿಯವರು. ಪೊಟ್ಸ್‌ಡಮ್ ಯೂನಿವರ್ಸಿಟಿ (University of Potsdom) ನಿಂದ ಭೌತವಿಜ್ಞಾನದ ಪದವಿ ಪಡೆದು ನಂತರ ಮುಂದೆ ವಿಜ್ಞಾನದ ತಾತ್ವಿಕ ಅಧ್ಯಯನ (Philosophy of Science)ದಲ್ಲಿ ಪಿಎಚ್.ಡಿ. ಪದವಿಯನ್ನು ಬರ್ಲಿನ್ ನ ಫ್ರೀ ವಿಶ್ವ ವಿದ್ಯಾಲಯದಲ್ಲಿ (Free University)ಯಲ್ಲಿ ಪಡೆದಿದ್ದಾರೆ. ಪ್ರಸ್ತುತ ಬ್ರಿಟಿಷ್ ಪ್ರಜೆಯಾದ ಒಟ್ಟೊ ಜಾಗತಿಕ ಹವಾಮಾನ ಬದಲಾವಣೆಗಳ ಕುರಿತು ಪ್ರಭಾವ ಬೀರಬಲ್ಲ ಮಹತ್ವದ ಸಂಶೋಧಕಿಯಾಗಿದ್ದಾರೆ.
ಜಾಂಗ್ ರಾಂಗ್‌ಚಿಯೊ: ಮಂಗಳನ ಎಕ್ಸ್‌ಪ್ಲೊರರ್ (Zhang Rongqiao: Mars explorer)
“ಒಂದು ಒಳ್ಳೆಯ ಕತ್ತಿಯನ್ನು ಮಸೆಯಲು ಹತ್ತು ವರ್ಷ ಬೇಕು” ಎನ್ನುತ್ತದೆ ಚೀನಾದ ಒಂದು ಗಾದೆ. ನಮ್ಮ ಗುರಿ ಮಂಗಳನ ತಲುಪಿ ಅಲ್ಲಿ ಇಳಿದಾಗ ಗಾದೆಯ ಅನುಭವ ಆಯಿತು ಎಂದವರು ಚೀನಾದ ಮಂಗಳಯಾನದ ಮುಖ್ಯ ರೂವಾರಿ ಜಾಂಗ್ ರಾಂಗ್‌ಚಿಯೊ. ಮಂಗಳನನ್ನು ತಲುಪಿದ ಚೀನಾ, ಅಮೆರಿಕಾ ನಂತರದ ಎರಡನೆಯ ದೇಶ.
ಜಾಂಗ್ ರಾಂಗ್‌ಚಿಯೊ ಚೀನಾದ ಭೌತವಿಜ್ಞಾನಿ ಹಾಗೂ ಏರೊಸ್ಪೇಸ್ ಇಂಜನಿಯರ್. ಇವರು ಚೀನಾದ ಮಂಗಳನ ಎಕ್ಸ್‌ಪ್ಲೊರರ್- ಟಿಯಾನ್‌ವೆನ್ (Tianwen-1) ಅನ್ನು ರೂಪಿಸಿದ ಮುಖ್ಯ ರೂವಾರಿ. ಚೀನಾದ ಬಾಹ್ಯಾಂತರಿಕ್ಷ ತಂತ್ರಜ್ಞಾನ ಅಕಾಡೆಮಿ (China Academy of Space Technology) ಯಿಂದ ಪದವಿ ಪಡೆದು ಮುಂದೆ ತ್ಸಿಂಗ್‌ವಾ ವಿಶ್ವವಿದ್ಯಾಲಯದ ಎಂ.ಬಿ.ಎ. ಪಡೆದವರು. ನಂತರದಲ್ಲಿ ಬೀಜಿಂಗ್ ನ ಉಪಗ್ರಹದ ಮಾಹಿತಿ ಇಂಜನಿಯರಿಂಗ್ ಸಂಸ್ಥೆ (Beijing Institute of Satellite Information Engineering) ಯನ್ನು ಸೇರಿದ ಇವರು ಚೀನಾದ ಬಾಹ್ಯಾಂತರಿಕ್ಷ ಸಮಿತಿಯ ಪ್ರಮುಖ ಸಂಶೋಧಕರು. ಕಳೆದ ಮೇ ತಿಂಗಳಲ್ಲಿ ಮಂಗಳನಲ್ಲಿ ನೌಕೆಯನ್ನು ಇಳಿಸಿದ ತಂತ್ರಜ್ಞಾನವನ್ನು ರೂಪಿಸಿ ಚೀನಾದ ಹೀರೊ ಆಗಿ ಹೊಮ್ಮಿದ್ದಾರೆ.
ಟಿಮಿಟ್ ಗೆಬ್ರು : “ಕೃತಕ ಬುದ್ಧಿಮತ್ತೆ” ನೀತಿಯ ಲೀಡರ್ (Timnit Gebru: AI Ethics Leader)
ಆಕೆ ಗೂಗಲ್ ನಿಂದ ಕೆಲಸ ಕಳೆದುಕೊಂಡಿದ್ದವರು. ಆದರೇನಂತೆ ಕೃತಕ ಬುದ್ಧಿಮತ್ತೆಯ -ಆರ್ಟಿಫಿಶಿಯಲ್ ಇಂಟಲಿಜೆಂಟ್- ನೀತಿ ನಿಯಮಾವಳಿಯ ಸ್ವತಂತ್ರ ಸಂಸ್ಥೆಯೊಂದನ್ನು ಹುಟ್ಟು ಹಾಕಿ ತಾಂತ್ರಿಕತೆಯ ರೀತಿ ರಿವಾಜುಗಳನ್ನು ರೂಪಿಸುತ್ತಾ ಜಾಗತಿಕವಾಗಿ ಪ್ರಶ್ನೆಗಳನ್ನೆತ್ತುತ್ತಿದ್ದಾರೆ. ಟಿಮಿಟ್ ಗೆಬ್ರು (Timnit Gebru) ಗೂಗಲ್ ನಿಂದ ಹೊರತಳ್ಳಲ್ಪಟ್ಟು ಆಕೆಯ ಬದುಕು ಅಕ್ಷರಶಃ ನೋವಿನಲ್ಲಿತ್ತು. ಅನೇಕರು ಆಕೆಯ ಪರವಾಗೇ ಇದ್ದರೂ, ಗೂಗಲ್ ನಿಂದ ಹೊರಬರಲೇ ಬೇಕಾಯ್ತು. ಕಪ್ಪು ವರ್ಣವಿರೋಧವನ್ನು ಕಂಪ್ಯೂಟರ್ ಸಂಶೋಧನೆ ಹಾಗೂ ಉದ್ಯಮದಲ್ಲಿ ಸದಾ ವಿರೋಧಿಸುತ್ತಿದ್ದ ಆಕೆಯ ನಿಲುವಿಗೆ ಕಂಪನಿಗಳು ಮುಗಿಬಿದ್ದಿದ್ದವು. (One may understand the software superiority in our context also) ತಂತ್ರಜ್ಞಾನದಲ್ಲಿ ಈ ಬಗೆಯ ತಾರತಮ್ಯ ಒಂದು ಪ್ರಮುಖ ಸಮಾಜವನ್ನು ದೂರವಿಡುವ ಹುನ್ನಾರವೆಂದು ಆಕೆಯ ಪ್ರಬಲ ಅಭಿಪ್ರಾಯವಾಗಿತ್ತು.
ಕಡೆಗೂ ಗೂಗಲಿನಿಂದ ಹೊರ ಬಂದು ಸರಿಯಾಗಿ ಒಂದು ವರ್ಷದಲ್ಲಿ 2021 ರ ಡಿಸೆಂಬರ್ 2 ರಂದು ದೊಡ್ಡ ದೊಡ್ಡ ಕಂಪನಿಗಳಲ್ಲಿ ನಡೆಯುವ ಕೃತಕ ಬುದ್ದಿಮತ್ತೆಯನ್ನು ಕುರಿತ ಸಂಶೋಧನೆ ಹಾಗೂ ಅಧ್ಯಯನಗಳ ಕುರಿತಂತೆ ಸಂಶೋಧಿಸುವ ಸಂಸ್ಥೆಯೊಂದನ್ನು ಹುಟ್ಟಿಹಾಕಿದರು. ಡಾ.ಟಿಮಿಟ್ ಗೆಬ್ರು, 2018ರಲ್ಲೇ ಗೂಗಲ್ ಅನ್ನು ಸೇರಿ Artificial Intelligent ನ ನೀತಿ ನಿಯಮಗಳ ಟೀಮ್ ಅನ್ನು ಮುನ್ನಡೆಸುವಲ್ಲಿ ಸಹಲೀಡರ್ ಆಗಿದ್ದವರು. ಹಿಂದಿನ ವರ್ಷಗಳ ಅಭಿವೃದ್ಧಿ ಘಟನೆಗಳನ್ನು ಅನುಭವಿಸಿ ಅವರು ಹೇಳುತ್ತಿದ್ದುದು ಹೀಗಿದೆ “AI ಯ ದೋಷಗಳನ್ನು ತಾಂತ್ರಿಕ ಸಮಸ್ಯೆಗಳು ಎಂದು ರೂಪಿಸಬಾರದು, ಏಕೆಂದರೆ ಅವುಗಳು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ದೋಷಯುಕ್ತ ಪರಿಸರದ ಲಕ್ಷಣಗಳಾಗಿದೆ” ಹಾಗೆಂದು ಇತ್ತೀಚೆಗಿನ ತೀವ್ರ ಪಗತಿಯಲ್ಲಿ ಇರುವ ಕೃತಕ ಬುದ್ಧಿಮತ್ತೆಯ ರೂಪಿಸುವ ಪರಿಸರ/ಕಂಪನಿಗಳ ಬಗೆಗೆ ನಿಷ್ಠೂರವಾದ ವಿವರಗಳನ್ನು ನೀಡುತ್ತಿದ್ದರು. ಗೂಗಲ್‌ನಲ್ಲಿದ್ದಾಗ ಸಂಶೋಧನಾ ಟೀಮಿನಲ್ಲಿ ಕಪ್ಪುವರ್ಣ ಜನಾಂಗದ ಪ್ರಾತಿನಿಧ್ಯ ಕಡಿಮೆಯಿದ್ದ ಕಾರಣ ಅವುಗಳ ಉತ್ಪನ್ನಗಳಲ್ಲಿ ಉಂಟಾಗುವ ತಾರತಮ್ಯದ ಏರುಪೇರನ್ನು ಮತ್ತವುಗಳ ನ್ಯೂನ್ಯತೆಗಳನ್ನು ಕಂಡುಕೊಂಡಿದ್ದವರು. ಟಿಮಿಟ್ ಅವರ ಈ ಪ್ರತಿರೋಧವು ಗೂಗಲ್ ಸೇರಿದಂತೆ ಅನೇಕ ಕೃತಕ ಬುದ್ಧಿಮತ್ತೆಯ ಸಂಶೋಧನೆ ನಡೆಸುವ ಸಂಸ್ಥೆಗಳಿಗೆ ಸಂಚಲನವನ್ನು ಉಂಟುಮಾಡಿತ್ತು. ಆಕೆಯ ಪರ್ಯಾಯ ಸಂಸ್ಥೆ ಕಟ್ಟುವ ನಿಲುವನ್ನು ಜಾಗತಿಕವಾಗಿ ಸುಮಾರು 7000 ಸಂಶೋಧಕರು, ಅವರಲ್ಲಿ 2,600 ರಷ್ಟು ಗೂಗಲ್ ನವರೇ ಬೆಂಬಲಿಸಿದ್ದರು. ಅವರ ಈ ನಿಲುವು ಅತ್ಯಂತ ಸಾಮಾಜಿಕ ಕಳಿಕಳಿಯದ್ದಾಗಿದ್ದು ಗೂಗಲ್ ಸೇರಿದಂತೆ ಅನೇಕ ಈ ಬಗೆಯ ತೀರಾ ವಿಶಿಷ್ಟ ಸಂಸ್ಥೆಗಳಿಗೆ ಬಲು ದೊಡ್ಡ ಪಾಠವನ್ನೇ ಕಲಿಸಿತು.
ಡಾ. ಟಿಮಿಟ್ ಗೆಬ್ರು, ಆಫ್ರಿಕಾದವರು. ಇಥಿಯೋಪಿಯಾದಲ್ಲಿ ಎರಿಟ್ರಿಯಾದ ದಂಪತಿಗಳಿಗೆ ಮಗಳಾಗಿ ಹುಟ್ಟಿದರು. ಇಥಿಯೋಪಿಯಾದಲ್ಲಿ 1983/84 ರಲ್ಲಿ ಜನಿಸಿದ್ದ ಟಿಮಿಟ್ ತಮ್ಮ ಐದನೆಯ ವಯಸ್ಸಲ್ಲೇ ತಂದೆಯನ್ನು ಕಳೆದುಕೊಂಡು, ಸಂಪೂರ್ಣ ತಾಯಿಯ ಪೋಷಣೆಯಲ್ಲೇ ಬೆಳೆದರು. ಇಥಿಯೋಪಿಯಾದ ಸಮಸ್ಯೆಗಳಿಂದ ನಿರಾಶ್ರಿತರ ನೆರವಿನ ಸಹಯೋಗದಲ್ಲಿ ಅಮೆರಿಕೆಗೆ ಬಂದವರು. ಮಾಸಾಚುಸೆಟ್ಸ್ ಅಲ್ಲಿ ನೆಲೆಯಾಗಿ ಮುಂದೆ ಸ್ಟ್ಯಾನ್‌ಫೊರ್ಡ್ ವಿಶ್ವವಿದ್ಯಾಲಯದಲ್ಲಿ ಅವಕಾಶ ಪಡೆದು, ಪದವಿ, ಮಾಸ್ಟರ್ಸ್ ಹಾಗೂ ಡಾಕ್ಟೊರೇಟ್ ಪದವಿಗಳನ್ನು ಪಡೆದರು. ಕಂಪ್ಯೂಟರ್ ವಿಜ್ಞಾನಿಯಾಗಿ ಮೈಕ್ರೊಸಾಫ್ಟ್, ಆಪಲ್, ಗೂಗಲ್ ಕಂಪನಿಗಳನ್ನು 2004- 2020 ರವರೆಗೂ ದುಡಿದರು. ಇದೀಗ ಡಿಸ್ಟ್ರಿಬ್ಯೂಟೆಡ್ ಆರ್ಟಿಫಿಶಿಯಲ್ ಇಂಟಲಿಜೆಂನ್ಸ್ ಸಂಸ್ಥೆಯನ್ನು (Distributed Artificial Intelligence Research Institute (DAIR) ನಡೆಸುತ್ತಿದ್ದಾರೆ. ಸಾಮಾಜಿಕ ನಿರ್ಧಾರಗಳಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯ ಸಂಶೋಧನೆಗಳಲ್ಲಿ ಟಿಮಿಟ್ ಗೆಬ್ರು ಬಹು ದೊಡ್ಡ ಹೆಸರು.
ಟುಲಿಯೊ ಡೆ ಒಲಿವೆರಾ: ವೈರಸ್‌ಗಳ ವೇರಿಯಂಟ್ ಟ್ರ್ಯಾಕರ್ (Tulio de Oliveira: Variant tracker)
ದಕ್ಷಿಣ ಆಫ್ರಿಕಾದ ಜೈವಿಕ ಮಾಹಿತಿ ಸಂಶೋಧಕ ಡಾ. ಟುಲಿಯೊ ಡೆ ಒಲಿವೆರಾ ಕಳೆದ ಎರಡು-ಎರಡೂವರೆ ವರ್ಷಗಳ ಜಗತ್ತನ್ನು ಕಾಡಿದ ಕೊರೊನಾ ವೈರಸ್ಸು (SARS-CoV-2) ಗಳ ವೇರಿಯಂಟ್- ಬದಲಾಗುತ್ತಲೇ ಇರುವ ಸಂತತಿ- ಗಳ ಜಾಡುಹಿಡಿಯುವಲ್ಲಿ ಅತ್ಯಂತ ಯಶಸ್ವಿ ಸಂಶೋಧಕರು. ಕೊರೊನಾ ವೈರಸ್ಸು (SARS-CoV-2) ಗಳ ಬದಲಾವಣೆ ಹಾಗೂ ನಿರಂತರತೆಯ ಜಾಡನ್ನು ಹಿಡಿಯುವಲ್ಲಿ ದಕ್ಷಿಣ ಆಫ್ರಿಕಾದ ಕ್ವಜುಲ್-ನೇಟಲ್ ಸಂಶೋಧನಾ (South Africa’s KwaZulu-Natal Research Innovation and Sequencing Platform-KRISP) ಸಂಸ್ಥೆಯ ನಿರ್ದೇಶಕರಾದ ಡಾ. ಟುಲಿಯೊ ಡೆ ಒಲಿವೆರಾ ಅವರದ್ದು ಮಹತ್ವದ ನೆರವು. ಕಳೆದ 2021ರ ನವೆಂಬರ್ ಅಲ್ಲಿ ದಕ್ಷಿಣ ಆಫ್ರಕಾದ ಬೊಟ್ಸ್ವಾನಾದಲ್ಲಿ “ಒಮಿಕ್ರಾನ್- (Omicron) ಅನ್ನು ಅದಕ್ಕೂ ಹಿಂದೆ ಬೀಟಾ ವೈರಸ್ಸನ್ನೂ ಬೇರ್ಪಡಿಸಿ ಇರುವಿಕೆ ಹಾಗೂ ಹರಡುವಿಕೆಯ ಸಂಶೋಧನೆಯನ್ನು ಜಗತ್ತಿಗೇ ನೀಡಿದವರು. ಅದರಲ್ಲೂ ಬೀಟಾ ಜಾಗತಿಕವಾಗಿ ಮೂಲತಃ ಪ್ರಯಾಣದಿಂದ ಹರಡುವಲ್ಲಿ ಪ್ರಮುಖ ಪಾತ್ರವಹಿಸಿದ್ದನ್ನೂ ಊಹಿಸಿ ಸಾಕ್ಷಿ ಪಡಿಸಿದ್ದರು. ತುಂಬಾ ಬೇಗ, ಅತ್ಯಂತ ಸೂಕ್ಷ್ಮವೇಗದಲ್ಲಿ ವೈರಸ್ಸುಗಳ ಬದಲಾಗುವ ಜಾಡುಹಿಡಿಯುವಲ್ಲಿ ಡಾ. ಟುಲಿಯೊ ಅವರ ಜಾಣ್ಮೆಯನ್ನು ಜಗತ್ತಿನಾದ್ಯಂತ ವಿವಿಧ ವಿಜ್ಞಾನಿಗಳು ಶ್ಲಾಘಿಸಿದ್ದಾರೆ.
ಡಾ. ಟುಲಿಯೊ ಒಲಿವೆರಾ, ಹುಟ್ಟಿದ್ದು ಬ್ರೆಜಿಲ್ ಅಲ್ಲಿ. ಬ್ರೆಜಿಲ್ ನ ಪೋರ್ಟ್ ಅಲೆಗ್ರಾದ ಫೆಡರಲ್ ಸಂಶೋಧನಾ ವಿಶ್ವವಿದ್ಯಾಲಯದಲ್ಲಿ (Brazilian Public Federal Research University, Porte Alegre. ) ಶಿಕ್ಷಣ ಪಡೆದರು. ಇದೀಗ ಪೋರ್ಚುಗೀಸ್ ಸೇರಿದಂತೆ, ದಕ್ಷಿಣ ಆಫ್ರಿಕಾದಲ್ಲೂ ಸಂಶೋಧನಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ, ಎಡಿನ್‌ಬರ್ರಾ ವಿಶ್ವವಿದ್ಯಾಲಯಗಳಲ್ಲೂ ಸಂಶೋಧನೆ ನಡೆಸಿದ್ದಾರೆ. ಪ್ರಸ್ತುತ ಕ್ವಜುಲ್-ನೇಟಲ್ ಸಂಶೋಧನಾ (KwaZulu-Natal Research Innovation and Sequencing Platform (KRISP) ಸಂಸ್ಥೆ ಹಾಗೂ ಸಾಂಕ್ರಾಮಿಕ ಪ್ರತಿಕ್ರಿಯೆ ಹಾಗೂ ಮತ್ತು ನಾವೀನ್ಯತೆ ಕೇಂದ್ರ (Centre for Epidemic Response and Innovation -CERI) ಗಳೆರಡನ್ನೂ ಹುಟ್ಟಿ ಹಾಕಿ ಮುನ್ನಡೆಸುತ್ತಿದ್ದಾರೆ. ಚಿಕನ್‌ಗುನ್ಯಾ, ಡೆಂಗ್ಯೂ, ಹೆಪಟೈಟಿಸ್ ಬಿ ಮತ್ತು ಸಿ, ಎಚ್‌ಐವಿ ಹಾಗೂ ಸಾರ್ಸ್ -2, ಹಳದಿ ಜ್ವರ ಹಾಗೂ ಝಿಂಕಾ ( Chikungunya, Dengue, Hepatitis B and C, HIV, SARS-CoV-2, Yellow Fever and Zinka.) ಇವೆಲ್ಲದರಲ್ಲೂ ಡಾ. ಟುಲಿಯೊ ಒಲಿವೆರಾ ಅವರ ಸಂಶೋದನೆಯು ಮಹತ್ವದಾಗಿದೆ.
ಕೊವಿಡ್ -19 ಒಮೊಕ್ರಾನ್ ಅಲ್ಲಿ ಹೆಚ್ಚೂ ಕಡಿಮೆ ನೆಲೆಯಾಗಿ ಅದರ ತೀವ್ರತೆಯಲ್ಲಿ ನಿಧಾನವಾಗುವಿಕೆಯ ತಿಳಿವಿನಲ್ಲಿ ಟುಲಿಯೊ ಅವರ ಸಂಶೋಧನೆಯು ಮಹತ್ವದಾಗಿದೆ. ಸಾಲದಕ್ಕೆ ಮುಂದೆಯೂ ಕಾಡಬಹುದಾಗ ವೈರಸ್ಸುಗಳ ದಾಳಿಯ ಹಿನ್ನೆಲೆಗಳ ಮಾಹಿತಿಯ ನಿರ್ವಹಣೆ ಹಾಗೂ ಅವುಗಳ ಸಂಶೋಧನೆಯ ವಿವರಗಳಲ್ಲಿ ಟುಲಿಯೊ ಅವರ ಟೀಮಿನ ಮೇಲೆ ಜಾಗತಿಕ ನಿರೀಕ್ಷೆಯೂ ಹೆಚ್ಚಿದೆ.
ಜಾನ್ ಜಂಪರ್: ಪ್ರೊಟೀನುಗಳ ಉಹಿಸುವ ಸಂಶೋಧಕ (John Jumper: Protein predictor)
ಆಧುನಿಕ ಜೀವಿ ವಿಜ್ಞಾನದ ತಿಳಿವಳಿಕೆಯಲ್ಲಿ ಪ್ರೊಟೀನುಗಳ ರಚನೆ, ಅವುಗಳು ಮಡಿಸಿಕೊಳ್ಳುವ ವಿಧಾನ, ಜೊತೆಗೆ ಒಂದನ್ನೊಂದು ಗುಂಪಾಗಿ ಹಾಗೂ ವೇಗವರ್ಧಕಗಳಾಗುವ ಬಗೆಗಳು ಮಹತ್ವದ ಬದಲಾವಣೆಗಳು. ಅನಂತ ಸಂಖ್ಯೆಯ ಈ ಪ್ರೊಟೀನುಗಳನ್ನು ರಚನೆಯ ಸಹಿತ ತಿಳಿಯುವ ವಿಧಾನ ತುಂಬಾ ಸಂಕೀರ್ಣ ಹಾಗೂ ಸಾಕಷ್ಟು ಸಮಯವನ್ನು ಬೇಡುವ ಪ್ರಕ್ರಿಯೆ. ಇದನ್ನು ಸಾಧ್ಯ ಮಾಡಿದ ತಂತ್ರವೊಂದನ್ನು ಡಾ. ಜಾನ್ ಜಂಪರ್ (John Jumper) ಮತ್ತು ಅವರ ಟೀಮಿನವರು ಲಂಡನ್ ಮೂಲದ ತಮ್ಮ ಡೀಪ್‌ಮೈಂಡ್ (DeepMind) ಎಂಬ ಸಂಸ್ಥೆಯಲ್ಲಿ ಅಭಿವೃದ್ಧಿ ಪಡಿಸಿದ ಆಲ್ಫಾ ಫೋಲ್ಡ್ (AlphaFold) ಎಂಬ ಕೃತಕ ಬುದ್ಧಿಮತ್ತೆಯ (Artificial Intelligence-AI) ಸಾಧನವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದ್ದಾರೆ. ಇದು ಆಧುನಿಕ ಜೀವಿವಿಜ್ಞಾನವನ್ನು ಮಹತ್ತರವಾಗಿ ಬದಲಾಯಿಸುತ್ತದೆ ಎಂಬುದು ಅನೇಕ ವಿಜ್ಞಾನಿಗಳ ವಿಶ್ಲೇಷಣೆ. ಜೊತೆಗೆ “ರಾಚನಿಕ ಜೀವಿವಿಜ್ಞಾನ (Structural Biology)” ದಲ್ಲಿ ಮೈಲುಗಲ್ಲಾಗುವುದರಲ್ಲಿ ಸಂಶಯವೇ ಇರದು.
ಸಂರಚನೆಗಳ ಊಹಿಸುವ ವೈಜ್ಞಾನಿಕ ಚರಿತ್ರೆಯಲ್ಲಿ ಇದೊಂದು ಮಹತ್ವದ ಬದಲಾವಣೆ. ಯಾವುದೇ ವಸ್ತುವಿನ ವರ್ತನೆ ಮತ್ತು ಅದರ ಗುಣಾತ್ಮಕ ಬಳಕೆಯಲ್ಲಿ ಅದರ ರಚನೆಯ ತಿಳಿವು ಮಹತ್ವದ ಪಾತ್ರ ವಹಿಸುತ್ತದೆ. ಪ್ರೊಟೀನುಗಳು ಜೈವಿಕವಾದವು ಹಾಗೂ ಅತ್ಯಂತ ಸಂಕೀರ್ಣವಾದವು. ಇವುಗಳ ರಾಚಿನಕ ವಿನ್ಯಾಸದ ಅರಿವು ಜೀವಿವಿಜ್ಞಾನದ ಅತ್ಯಂತ ಪ್ರಮುಖವಾದ ವಿಷಯ. ಇದನ್ನೆಲ್ಲಾ 2018 ರಿಂದಲೇ ಸಂಶೋಧಿಸುತ್ತಾ CASP ಎಂಬ ರಾಚನಿಕ ವಿನ್ಯಾಸವನ್ನು ಊಹಿಸುವ (Critical Assessment of Structure Prediction -CASP) ಒಂದು ಸ್ಪರ್ಧೆಯಲ್ಲಿ ಇವರ ಆಲ್ಫಾ ಫೋಲ್ಡ್ (AlphaFold) ಬೇರಾವುದೇ ಕಂಪ್ಯೂಟರ್ ಮೂಲದ ಸಂಶ್ಲೇಷಣೆಯನ್ನು ಹಿಂದೆ ಹಾಕಿ ಹೊಸತೊಂದು ಮಾರ್ಗವನ್ನು ಕೊಟ್ಟಿದೆ.
ಜಾನ್ ಜಂಪರ್ ಮೂಲತಃ ಕಂಡೆನ್ಸ್‌ಡ್ ಮ್ಯಾಟರ್ ಭೌತವಿಜ್ಞಾನದ ವಿದ್ಯಾರ್ಥಿ. ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಮಾಡಿ ಪ್ರೊಟೀನ್‌ಗಳ ಸಹವಾಸಕ್ಕೆ ಬಂದವರು. ಮುಂದೆ ರಸಾಯನವಿಜ್ಞಾನದ ಬೆನ್ನು ಹತ್ತಿ ಅದರಲ್ಲಿ ಕಂಪ್ಯೂಟರ್ ಬಳಕೆಯಿಂದ ಪ್ರೊಟೀನುಗಳ ರಾಚನಿಕ ವಿನ್ಯಾಸಕ್ಕೆ ಕನ್ನಡಿ ಹಿಡಿದರು. ಇದೀಗ ಅವರ ನೇತೃತ್ವದಲ್ಲಿ ಆಲ್ಫಾ ಫೋಲ್ಡ್ (AlphaFold) ತಂತ್ರಾಂಶದಿಂದ ಹೆಚ್ಚೂ ಕಡಿಮೆ ಮಾನವ ದೇಹದ ಎಲ್ಲಾ ಪ್ರೊಟೀನುಗಳ ರಚನೆಯನ್ನು ತಿಳಿಯವಂತಾಗಿದೆ. ಡೀಪ್ ಮೈಂಡ್ ನಿಂದ ಮುಂದೆ 100 ದಶಲಕ್ಷ ಪ್ರೊಟೀನುಗಳ ವಿನ್ಯಾಸವನ್ನು ಶೀಘ್ರದಲ್ಲೇ ವಿವರಸುವ ಎಲ್ಲಾ ಸಾಧ್ಯತೆಗಳೂ ಇವೆ.
ವಿಕ್ಟೊರಿಯಾ ಟೌಲಿ :(Victoria Tauli-Corpuz: Indigenous defender)
ಕಳೆದ ವರ್ಷದಲ್ಲಿ ಯು.ಕೆ.ಯ ಗ್ಲಾಸ್ಗೊ (Glasgow)ನ ಸಂಯುಕ್ತ ರಾಷ್ಟ್ರಗಳ ಹವಾಮಾನ ಸಮಿತ್ COP26 ಆರಂಭಗೊಂಡ ನಂತರದಲ್ಲೇ ಹಲವಾರು ಶ್ರೀಮಂತ ರಾಷ್ಟ್ರಗಳು, ಕೆಲವು ವ್ಯಕ್ತಿಗಳೂ ಹಿಂದೆಂದೂ ಕಾಣದ ಬಾಧ್ಯತೆಯನ್ನು ಹವಾಮಾನ ಬದಲಾವಣೆಯ ನಿಯಂತ್ರಣದತ್ತ ತೋರಿದ್ದಾರೆ. ಅವುಗಳಲ್ಲಿ ಬಹು ಮುಖ್ಯವಾಗಿ ಸರಿ ಸುಮಾರು 1.7 ನೂರು ಕೋಟಿ ಅಮೆರಿಕನ್ ಡಾಲರ್ ಗಳಷ್ಟು ಹಣವನ್ನು ಕಾಡುಗಳ ಸಂರಕ್ಷಣೆಯ ಆದಿವಾಸಿಗಳ ಸಹಾಯಕ್ಕೆ ನೀಡಿದ್ದಾರೆ. ಜೈವಿಕ ವೈವಿಧ್ಯತೆ ಹಾಗೂ ಗ್ಲೋಬಲ್ ವಾರ್ಮಿಂಗ್ ನಂತಹಾ ಕಾರ್ಯಯೋಜನೆಗಳಿಗೆ ನೆರವಾಗಲು ಇಂಗಾಲವನ್ನು ಗಿಡ-ಮರಗಳಲ್ಲಿ ಇಲ್ಲವೇ ಮಣ್ಣಿನಲ್ಲಿ ಬಂಧಿಸುವಂತಹಾ ಕಾರ್ಯಯೋಜನೆಗಳಿಗೆ ಸಹಾಯ ಹಸ್ತ ಚಾಚಿದ್ದಾರೆ. ಇದರ ಹಿಂದಿನ ನಿಜವಾದ ನಾಯಕಿ ವಿಕ್ಟೊರಿಯಾ ಟೌಲಿ(Victoria Tauli-Corpuz) ಅವರು.
ಫಿಲಿಪೈನ್ ಮೂಲದ ವಿಕ್ಟೊರಿಯಾ ಅವರು ಕಳೆದ ಕೆಲವು ದಶಕಗಳ ಕಾಲ ಇದೆ ಹೋರಾಟದಲ್ಲಿ ನಿರತರಾಗಿ. ಯು.ಎನ್ ಅಲ್ಲಿ ಆದಿವಾಸಿಗಳ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಫಿಲಿಪೈನ್ಸ್ (October 19, 1952) ಅಲ್ಲಿ ಜನಿಸಿದ ಶ್ರೀಮತಿ ವಿಕ್ಟೊರಿಯಾ ತಮ್ಮ ಶಿಕ್ಷಣವನ್ನು ಅಲ್ಲಿಯೇ ಪಡೆದರು. ಯು.ಎನ್ ನ ಸ್ಥಳೀಯ ವಿಚಾರಗಳ ಶಾಶ್ವತ ಫೊರಂ (United Nations Permanent Forum on Indigenous Issues (2005-2010))ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿದಿದ್ದಾರೆ. ಜೂನ್ 2014 ರಿಂದ ಯು.ಎನ್ ನ ಸ್ಥಳೀಯ ಜನಸಮುದಾಯದ ಹಕ್ಕುಗಳ ವಿಶೇಷ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಂಚನೆಯ ಕಳ್ಳರನ್ನು ಹಿಡಿವ ಉಪಾಯದ ಗಲ್ಲವ್ಯೂಮ್ ಕಬನಾಕ್ Guillaume Cabanac: Deception sleuth
ವೈಜ್ಞಾನಿಕ ಸಂಶೋಧನೆಗಳು ಜಗತ್ತಿಗೆ ಅದರಲ್ಲೂ ಆಯಾ ವಿಷಯಾಧಾರಿತ ತಜ್ಞರಲ್ಲಿ ಹಂಚಿಕೊಳ್ಳುವುದರಲ್ಲಿ ವಿಜ್ಞಾನ ಪ್ರಬಂಧಗಳ ಪಾತ್ರ ಬಹಳ ಹಿರಿದು. ಹಾಗಾಗಿ ವಿಜ್ಞಾನಿಗಳಿಗೆ ತಮ್ಮ ಶೋಧಗಳ ಪ್ರಕಟಿಸುವ ಕೆಲಸವು ತುಂಬಾ ಮುಖ್ಯವಾದುದು. ಪ್ರತೀ ವರ್ಷ ಆಯಾ ವಿಷಯಗಳಲ್ಲಿ ಏನಾಯ್ತು ಎಂಬ ಒಟ್ಟಾರೆಯ ಪರಾಮರ್ಶನ ಕೂಡ ಆಯಾ ವಿಜ್ಞಾನ ವಿಷಯದ ತಜ್ಞರೊಬ್ಬರಿಂದ ನಡೆಯುತ್ತದೆ ಮತ್ತು ಚರ್ಚೆಗೂ ಒಳಗಾಗುತ್ತದೆ. ಸಾಲದಕ್ಕೆ ವಾರ್ಷಿಕ ಸಮ್ಮೇಳನಗಳಲ್ಲಿ ವಿವಿಧ ತಜ್ಞರ ಸಮ್ಮುಖದಲ್ಲಿ ವಿಮರ್ಶೆಗೆ ಒಳಪಟ್ಟು ಅದರ ಗಹನತೆಯನ್ನು ಹೆಚ್ಚಿಸುವ ಕೆಲಸವೂ ನಡೆಯುತ್ತದೆ. ಇದಕ್ಕೆಲ್ಲಾ ಪ್ರಕಟಿತ ಪ್ರಬಂಧಗಳನ್ನು ಪ್ರಕಟಿಸಿದ ವಿಜ್ಞಾನಿ ಲೇಖಕರ ಜವಾಬ್ದಾರಿಯು ತಿಳಿಯುತ್ತದೆ. ಅದಕ್ಕೆಂದೆ ಅವುಗಳನ್ನು ಸಹಜವಾಗಿ ಅದೇ ವಿಷಯ ತಜ್ಞರಿಂದ ವಿಮರ್ಶೆಗೆ (Peer Reviewed) ಒಳಪಡಿಸಿ ಪ್ರಕಟಿಸಲಾಗುತ್ತದೆ. ಆದರೂ ಅನೇಕ ಬಾರಿ ಸಣ್ಣ-ಪುಟ್ಟ ವಿಜ್ಞಾನ ಪತ್ರಿಕೆಗಳು ಬೇಕಾ ಬಿಟ್ಟಿಯಾಗಿ ಪ್ರಕಟಿಸುವುದುಂಟು. ಅದೊಂದು ವ್ಯವಹಾರವಾಗಿದೆ, ಅದೇನೆ ಇರಲಿ. ಇಂತಹಾ ವಿಜ್ಞಾನ ಪ್ರಬಂಧಗಳಲ್ಲಿ ಸತ್ಯ ಮತ್ತು ಸೌಂದರ್ಯ ಪ್ರಮುಖವಾಗ ಬೇಕಾದ್ದು ಜವಾಬ್ದಾರಿಯುತವಾದದು. ಇದು ಆಯಾ ವಿಜ್ಞಾನಿಯ ಹೆಚ್ಚುಗಾರಿಕೆಯನ್ನು ತಿಳಿಸುತ್ತದೆ. ಅರ್ಥಹೀನ ಅಥವಾ ಸರಿಯಾದ ಜವಾಬ್ದಾರಿ ಇಲ್ಲದ ಬರಹಗಳ ಬಗೆಗೆ ಬೆಳಕು ಚೆಲ್ಲಿದ ವಿಜ್ಞಾನಿ ಗಲ್ಲವ್ಯೂಮ್ ಕಬನಾಕ್.
ಅವರು ಮಾಡಿದ್ದೇನು ಎಂದರೆ ವಿಜ್ಞಾನ ಪ್ರಬಂಧಗಳಲ್ಲಿ ಅರ್ಥಹೀನ ಮಾತುಗಳನ್ನು ಹುಡುಕಿದ್ದು! ಉದಾಹರಣೆಗೆ ಯಾಔಉದೋ ಒಂದು ಪ್ರಬಂಧದಲ್ಲಿ ಒಬ್ಬ ವಿಜ್ಞಾನಿ ಮಹಾಶಯ Solar Energy ಗೆ ಬರೆದದ್ದು ಹೀಗೆ.. Sun oriented force ಮತ್ತೊಬ್ಬ Breast Cancer ಗೆ Bosom Malignancy ಇನ್ನೂ ಓರ್ವ ಬೃಹಸ್ಪತಿ Ant Colony ಗೆ Underground creepy crawly state. ವಿಜ್ಞಾನ ಪ್ರಬಂಧಗಳೆಂದರೆ ಕಥೆ, ಕಾದಂಬರಿಗಳ ಹಾಗಲ್ಲ ತಾನೇ? ಆದ್ದರಿಂದ ಇಂತಹವುಗಳು ಹೆಚ್ಚಾಗಿ ಸೀರಿಯಸ್ಸಾಗಿ ರೀಸರ್ಚ್ ಮಾಡದವರ ಪ್ರಬಂಧಗಳಲ್ಲಿ (Fabricated Paper) ಹೆಚ್ಚು. ಆದ್ದರಿಂದ ಡಾ. ಕಬನಾಕ್ ಇಂತಹಾ ಜವಾಬ್ದಾರಿ ಹೀನ ವಿಜ್ಞಾನ ಬರಹಗಾರರನ್ನು ಪತ್ತೆ ಹಚ್ಚಲೆಂದೇ ಒಂದು ಕಂಪ್ಯೂಟರ್ ಪ್ರೊಗ್ರಾಮ್ ರೂಪಿಸಿದ್ದಾರೆ. (ಇದರ ಬಗ್ಗೆ ಮುಂದೊಮ್ಮೆ ವಿವರವಾಗಿ ನೋಡಬಹುದೇನೋ). ಇಂತಹಾ ತಮಾಷೆಯಾದರೂ ಅತ್ಯಂತ ಕಳಕಳಿಯ ವೈಜ್ಞಾನಿಕ ಸಂವಹನ ಕುರಿತ ಅನುಶೋಧ. ಇವರ ಈ ಕಾರ್ಯದಿಂದ ಮೊದಲ ಹಂತದಲ್ಲೇ ಸುಮಾರು ವಿಜ್ಞಾನ ಪತ್ರಿಕೆಗಳು ಎಚ್ಚೆತ್ತು ಸರಿ ಸುಮಾರು 120 ಪ್ರಬಂಧಗಳನ್ನು ಹಿಂಪಡೆದವು!
The SCIgen ಎಂದುಆರಂಭಿಕವಾಗಿ ನಡೆದ ಈ ಕೆಲಸದಿಂದ ಮಲ್ಟಿ ನಾಶನಲ್ ಟೆಕ್ನಾಲಜಿ ಫರ್ಮ್ ಒಂದು ಮಾಸ್ಕೊದಲ್ಲಿ ಆರಂಭಕ್ಕೆ ಕಾರಣವಾಗಿದೆ. ಈವರೆವಿಗೂ ಕಬನಾಕ್ ಮತ್ತು ಸಂಗಡಿಗರು ಸುಮಾರು 2000 ಕ್ಕೂ ಹೆಚ್ಚು ಪ್ರಬಂಧಗಳಿಂದ Tortured Phrases ಎಂದೇ ಕರೆದ ಅಂತಹಾ 400 ಕ್ಕೂ ಹೆಚ್ಚು ಅಂತಹಾ ಅರ್ಥಹೀನ ಪದಪುಂಜಗಳನ್ನು ಹೆಕ್ಕಿದ್ದಾರೆ. ಅಚ್ಚರಿಯೆಂದರೆ ಕೆಲವು ಶ್ರೇಷ್ಠ ಎಂದೇ ಕರೆದುಕೊಳ್ಳುವ ವಿಜ್ಞಾನ ಪತ್ರಿಕೆಗಳಲ್ಲೂ ಇವೆ! ಫ್ರಾನ್ಸ್ ಮೂಲದವರಾದ ಈತ ಓರ್ವ ಕಂಪ್ಯೂಟರ್ ವಿಜ್ಞಾನದ ಪ್ರೊಫೆಸರ್. ಇವರನ್ನು Guillaume Cabanac, the fake science tracker ಎಂದೇ ಗುರುತಿಸಲಾಗುತ್ತದೆ. ಭಾರತದ ವಿಜ್ಞಾನ ಪತ್ರಿಕೆಗಳನ್ನು ಇವರಿನ್ನೂ ನೋಡಿಲ್ಲ ಎನಿಸುತ್ತಿದೆ. ನಮ್ಮ ಅದೃಷ್ಟ!
ಮೆಘನ್ ಕಾಲ್: ಕೊವಿಡ್ ಸಂವಹನಗಾರ್ತಿ Meaghan Kall: COVID communicator
ಇವರ ಬಗ್ಗೆ ಒಂದೇ ಮಾತಲ್ಲಿ ಹೇಳ ಬೇಕೆಂದರೆ ನಮ್ಮ ದೇಶದ ಯಾವುದೇ ಸರ್ಕಾರಿ ನೌಕರರು ಈ ಬಗೆಯ ಸಾರ್ವಜನಿಕ ಸೇವೆಯನ್ನು ಮಾಡಲು ಸಾಧ್ಯವಾಗುತ್ತಲೇ ಇರಲಿಲ್ಲ. ಅಂತಹ ಮಹತ್ವದ ಸೇವೆಯನ್ನು ಮೆಘನ್ ಕಾಲ್ ಮಾಡಿದ್ದಾರೆ. ಅದೇನದು ಅಷ್ಟೊಂದು ವಿಶಿಷ್ಟವಾದ್ದೇ? ಹೌದು. ನಮ್ಮ ಯಾವುದೇ ಸರ್ಕಾರಿ ಕಛೇರಿಗೆ ಅಥವಾ ನೌಕರರಿಗೆ ಏನಾದರೂ ಮಾಹಿತಿ ಕೇಳಿದರೆ ಒಂದೇ ಕ್ಷಣದಲ್ಲಿ ಕೊಡುವರೇನು? ಅವರನ್ನು ಕೇಳಬೇಕು, ಇವರನ್ನು ಕೇಳಬೇಕು ಎನ್ನುವ ಉತ್ತರ ಸಹಜ ತಾನೇ? ಅದರಲ್ಲೂ ರಾಷ್ಟ್ರೀಯ ಆರೋಗ್ಯ ಸಂಬಂಧಿತ ಮಾಹಿತಿ..! ಅದರಲ್ಲೂ ಮೊನ್ನೆ ಕೊವಿಡ್ ಸಂಕಷ್ಟದಲ್ಲಿ ಯಾರಾದರೂ ಸರಿಯಾದ ಮಾಹಿತಿಗೆ ಸರಕಾರಿ ಕಛೇರಿ/ನೌಕರರನ್ನು ಕಂಡದುಂಟೇ! ಇದೇನು ಸುಲಭವಾಗಿ ನಮ್ಮಲ್ಲಿ “ಡೆತ್ ಸರ್ಟಿಫಿಕೇಟ್” ಕೂಡ ಸಿಗುವುದಿಲ್ಲ.
ಅದೇನೇ ಇರಲಿ ಮೆಘನ್ ಕಾಲ್ ಇಂಗ್ಲಂಡಿನ ಸರ್ಕಾರಿ ಉದ್ಯೋಗಿ, ಎಪಿಡಮಾಲಜಿಸ್ಟ್. ವೈದ್ಯೆ ಅಥವಾ ದಾದಿಯಾಗಬೇಕೆಂಬ ಕನಸು ಹೊತ್ತು, ಮಿಚಿಗನ್ ವಿಶ್ವವಿದ್ಯಾಲಯದಿಂದ ಆಹಾರ ವಿಜ್ಞಾನ ಪದವಿ ಪಡೆದು ಮುಂದೆ ಜಾನ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದಿಂದ ಆರೋಗ್ಯ ವಿಜ್ಞಾನದಲ್ಲಿ ಮಾಸ್ಟರ್ ಪದವಿ ಪಡೆದು ಇದೀಗ ಲಂಡನ್ನಿನ ಯೂನಿವರ್ಸಿಟಿ ಕಾಲೇಜಿನಲ್ಲಿ ಪಿಎಚ್.ಡಿ ಮಾಡುತ್ತಿದ್ದಾರೆ. ಕಳೆದ ವರ್ಷ ಕೊವಿಡ್ ಮಾಹಿತಿಯನ್ನು ಸಾರ್ವಜನಿಕರಿಗೆ ಟ್ವಿಟರ್ ಮೂಲಕ ನಿರಂತರವಾಗಿ ಹಂಚಿದ್ದಾರೆ. ಅದರಲ್ಲೂ ಯು.ಕೆ. ಸರ್ಕಾರವು ಕೊವಿಡ್ ಕುರಿತ ಪ್ರತ್ರಿಕ್ರಿಯೆಯನ್ನು ಖಂಡಿಸಿದ್ದಲ್ಲದೆ, ಪರೀಕ್ಷೆ ಮತ್ತಿತರ ಕೊವಿಡ್ ಕುರಿತ ಸೇವೆಯ ಖಾಸಗೀಕರಣವನ್ನೂ ವಿರೋಧಿಸಿ ಟ್ವೀಟ್ ಮಾಡಿದ್ದರು. ಇದಕ್ಕೆಲ್ಲಾ ಅವರೇನು ಹಿರಿಯ ಅಧಿಕಾರಿಗಳ ಒಪ್ಪಿಗೆಯನ್ನೂ ಪಡೆದಿರಲಿಲ್ಲ. ಕೊವಿಡ್ ಗೂ ಮೊದಲು ಒಂದು ದಶಕದ ಕಾಲ ಯುಕೆಯ ಎಚ್‌ಐವಿ. ಸೋಂಕಿತರ ಸಾಂಕ್ರಾಮಿಕ ಪರಿಸರವನ್ನು ನೋಡಿಕೊಳ್ಳುವ ಹೊಣೆ ಹೊತ್ತಿದ್ದವರು. ಕಳೆದ ವರ್ಷ 2021 ರಲ್ಲಿ ಸುಮಾರು 6000 ಕ್ಕೂ ಹೆಚ್ಚು ಟ್ವೀಟ್‌ಗಳನ್ನು ಆರೋಗ್ಯ ಸಂಬಂಧದಲ್ಲಿ ಮಾಡಿ ಸಾರ್ವಜನಿಕರಿಗೆ ಸತ್ಯವನ್ನು ತೆರೆದಿಟ್ಟದ್ದರು. ಕಾಲ್ ಅವರ ಈ ಧೈರ್ಯದಿಂದ ಯುಕೆ ಸರ್ಕಾರದ ಮಾಹಿತಿಗೂ ಬೆಲೆ ಹೆಚ್ಚಾದದ್ದು ಸಹಜವೇ!
ತಮ್ಮನ್ನು ಪ್ರಶ್ನಿಸಿದವರಿಗೆ ಮೆಘನ್ ಕಾಲ್ ಹೇಳುವುದು ಹೀಗೆ “One of my main aims”, she says, “is really just to try and make sure people are empowered, and have agency to understand the data to make their own decisions, from a reliable source.”
ಜಾನೆಟ್ ವುಡ್‌ಕಾಕ್ : ಔಷಧಗಳ ಏಜೆನ್ಸಿಯ ಮುಖ್ಯಸ್ಥೆ Janet Woodcock: Drug chief
ಕೊವಿಡ್ ಕಾಲದಲ್ಲಿ ಅಮೆರಿಕದ ಔಷಧಗಳ ಏಜೆನ್ಸಿಯನ್ನು ಮುನ್ನಡೆಸುವುದೆಂದರೆ ಸುಲಭದ ಮಾತಾಗಿರಲಿಲ್ಲ. ಅಮೆರಿಕದ ಫುಡ್ ಮತ್ತು ಡ್ರಗ್ ಆಡ್ಮಿನಿಸ್ಟ್ರೇಶನ್ (US Food and Drug Administration-FDA) ನ ಕಾರ್ಯವಾಹಿ ಕಮೀಷನರ್ ಆಗಿದ್ದಾಗ ಪತ್ರಗಳ ಹೊಳೆಯೇ ಹರಿದು ಬರುತ್ತಿತ್ತು. ಕೆಲವು ಆಕೆಯನ್ನು ಬೆಂಬಲಿಸುವುದಾಗಿದ್ದರೆ. ಕೆಲವು ಸಹಜವಾಗಿ ವಿರೋಧದ ಧ್ವನಿಯವು. ಪ್ರಮುಖವಾಗಿ ಒಂದು ಪತ್ರವು ರೋಗಗಳ ನೀತಿ ನಿಯಮಗಳ ನಿರ್ವಹಿಸುವ 82 ಸಂಸ್ಥೆಗಳ ಸಹಿಯನ್ನು ಹೊತ್ತು ಬಂದಿತ್ತು. ಪೇಟೆಂಟ್ ಮತ್ತು ಔಷಧ ಒಪ್ಪಿಗೆಯ ಆಕೆಯ ನಿರ್ಧಾರಗಳನ್ನು ಮೆಚ್ಚಿಗೆಯನ್ನು ಅದು ತಂದಿತ್ತು.
ಡಾ. ವುಡ್‌ಕಾಕ್ ವೃತ್ತಿಯಲ್ಲಿ ವೈದ್ಯೆ. ಅಮೆರಿಕದ ನಾರ್ಥ್ ವೆಸ್ಟರನ್ ವಿಶ್ವವಿದ್ಯಾಲಯದ ಮೆಡಿಕಲ್ ಸ್ಕೂಲ್ ನಿಂದ ವೈದ್ಯ ಪದವಿಯನ್ನು ಪಡೆದು, ಸುಮಾರು 35 ವರ್ಷಗಳ ಕಾಲ FDA ನಲ್ಲಿ ಔಷಧಗಳ ತಪಾಸಣೆಯ ಸಂಶೋಧನೆಯಲ್ಲಿ ತೊಡಗಿದ್ದವರು. ಪೆನ್ಸಿಲ್ವೇನಿಯಾ ರಾಜ್ಯದ ವಾಷಿಂಗ್‌ಟನ್ ಕೌಂಟಿಯಲ್ಲಿ ಜನಿಸಿದಾಕೆ. ಇಲ್ಲ ಸಲ್ಲದಕ್ಕೂ ಕೋರ್ಟು- ಕಾನೂನನ್ನು ಮೊರೆಹೋಗುವ ಅಮೆರಿಕದ ಔಷಧೀಯ ಪರಿಸರವನ್ನು ಕೊವಿಡ್ ಸಂಧರ್ಭದಲ್ಲಂತೂ ನಿಭಾಯಿಸಿದ್ದು ಅಪಾರ ಮೆಚ್ಚುಗೆಗೆ ವ್ಯಕ್ತವಾಗಿದೆ.
ಕಳೆದ ಜನವರಿಯಲ್ಲೇ ಈ ಹತ್ತೂ ವಿಜ್ಞಾನಿಗಳನ್ನು ಪರಿಚಯಿಸುವ ಸಾಧ್ಯತೆ ಇತ್ತು. ಸಾಮಾನ್ಯವಾಗಿ ಜನವರಿಯಲ್ಲಿ ವಾರ್ಷಿಕ ಪರಿಚಯದಂತಹಾ ಸಂದರ್ಭದಲ್ಲಿ ಇದೆಲ್ಲಾ ಬೇಡವೆಂದೇ ಇದೀಗ ಪರಿಚಯಿಸುವ ಪ್ರಯತ್ನ ಮಾಡಿದ್ದೇನೆ. ಇವರಲ್ಲಿ ಕೆಲವರ ಬಗೆಗೆ ಮತ್ತಷ್ಟು ಹುಡುಕಾಟ ಮಾಡಿ ಮತ್ತೊಮ್ಮೆ ಹಂಚಿಕೊಳ್ಳುವ ಪ್ರಯತ್ನವನ್ನೂ ಮಾಡಿಯೇನು. ನೋಡೋಣ. ಕಳೆದ 2021 ಕೊವಿಡ್ ಮುಗಿಯುವ ಆಶಯದ ಜೊತೆಗೆ ಆರ್ಥಿಕ ಸಾಮಾಜಿಕ ಹಿತವನ್ನೂ ವೈವಿಧ್ಯವಾಗಿ ಬಯಸಿದ ವರ್ಷ. ಅಂತಹಾ ವರ್ಷವನ್ನು ರೂಪಿಸಿದ ವಿಜ್ಞಾನಿಗಳು ಇವರು. ದೊಡ್ಡ ಅಚ್ಚರಿಯೆಂದರೆ ಹತ್ತು ಜನರಲ್ಲಿ ಆರು ಜನ ಮಹಿಳೆಯರು. ವಿಶೇಷವಾದವರೇ ತಾನೇ?
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್