ಕಳೆದ ಶತಮಾನಗಳಲ್ಲಿ, ಇತಿಹಾಸದಲ್ಲಿ ಮೊದಲ ಬಾರಿಗೆ, ಜಗತ್ತು ನಿರಂತರವಾದ ಆರ್ಥಿಕ ಬೆಳವಣಿಗೆಯನ್ನು ಕಂಡಿದೆ. ಇದು ಅಪಾರ ಸಂಖ್ಯೆಯ ಜನರನ್ನು ಬಡತನದಿಂದ ಹೊರತಂದಿದೆ ಮತ್ತು ನಮ್ಮ ಸಮೃದ್ಧಿಗೆ ಅಡಿಪಾಯ ಹಾಕಿದೆ. ಇದರ ಅಡಿಪಾಯವು ತಾಂತ್ರಿಕ ನಾವೀನ್ಯತೆಯ ಅಥವಾ ತಂತ್ರಜ್ಞಾನದ ಹೊಸತನದ ನಿರಂತರವಾದ ಹರಿವು ಮತ್ತು ಅವುಗಳ ವಿಕಾಸದಲ್ಲಿದೆ. ಹೊಸ ತಂತ್ರಜ್ಞಾನಗಳು ಹಳೆಯದನ್ನು ಬದಲಾಯಿಸಿದಾಗ ಅದೊಂದು ರೀತಿಯಲ್ಲಿ “ಸೃಜನಶೀಲ ವಿನಾಶ” ಎಂದು ಕರೆಯಲ್ಪಡುವ ಪ್ರಕ್ರಿಯೆಯ ಭಾಗವಾಗಿದ್ದು ಆ ಮೂಲಕ ನಿರಂತರವಾದ ಆರ್ಥಿಕ ಬೆಳವಣಿಗೆಯು ಸಂಭವಿಸುತ್ತದೆ ಎಂಬುದನ್ನು ಪ್ರತಿಪಾದಿಸಿದ ಅಧ್ಯಯನಗಳಿಗೆ ಅರ್ಥವಿಜ್ಞಾನದ ಪುರಸ್ಕಾರ ಲಭಿಸಿದೆ.
ಇವುಗಳಲ್ಲಿ ಎರಡು ಪ್ರಮುಖವಾದ ಅಧ್ಯಯನಗಳಿವೆ. ಮೊದಲನೆಯದಾಗಿ ತಂತ್ರಜ್ಞಾನದ ಪ್ರಗತಿಯ ಮೂಲಕ ನಿರಂತರವಾದ ಆರ್ಥಿಕ ಬೆಳವಣಿಗೆಯ ಅಡಿಪಾಯಗಳನ್ನು ಗುರುತಿಸಿದ ಜೋಯೆಲ್ ಮೊಕೈರ್ ಅವರಿಗೆ ಅರ್ಧ ಬಹುಮಾನ. ಉಳಿದ ಅರ್ಧವನ್ನು ಅಂತಹಾ ನಿರಂತರವಾದ ಆರ್ಥಿಕ ಬೆಳವಣಿಗೆಯನ್ನು ಸೃಜನಶೀಲ ವಿನಾಶದ ಸಾಧ್ಯತೆಯ ಸಿದ್ಧಾಂತವನ್ನು ಮಂಡಿಸಿದ ಫಿಲಿಪ್ ಅಘಿಯಾನ್ ಮತ್ತು ಪೀಟರ್ ಹೊವಿಟ್ ಅವರ ಇಬ್ಬರಿಗೂ ಹಂಚಲಾಗಿದೆ. ಹಾಗಾಗಿ ಈ ವರ್ಷದ ಆರ್ಥಿಕ ವಿಜ್ಞಾನಗಳ ಪುರಸ್ಕೃತರು ಈ ಅಭಿವೃದ್ಧಿ ಏಕೆ ಸಾಧ್ಯವಾಯಿತು ಮತ್ತು ನಿರಂತರ ಬೆಳವಣಿಗೆಗೆ ಏನು ಅಗತ್ಯ ಎಂಬುದನ್ನು ಆರ್ಥಿಕತೆಯ ಇತಿಹಾಸಗಳ ಅಧ್ಯಯನಗಳ ಮೂಲಕ ವಿವರಿಸಿ ಅದನ್ನು ಗಣೀತೀಯ ಮಾದರಿಗಳಿಂದ ವಿಭಿನ್ನ ವಿಧಾನಗಳನ್ನು ಬಳಸಿಕೊಂಡು ಕಟ್ಟಿಕೊಟ್ಟಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನಗಳ ಅನ್ವೇಷಣೆಗಳ ವಿಕಾಸದ ಮೂಲಕ ಆರ್ಥಿಕ ಏಳಿಗೆಯನ್ನು ವಿವರಿಸಿದ ಈ ಅಧ್ಯಯನಗಳಿಗೆ ಈ ವರ್ಷದ ಆಲ್ಫ್ರೆಡ್ ನೊಬೆಲ್ ನೆನಪಿನ ಆರ್ಥಿಕ ವಿಜ್ಞಾನದ ಪ್ರಶಸ್ತಿಯನ್ನು ನೀಡಲಾಗಿದೆ.

ಮಾನವಕುಲದ ಇತಿಹಾಸದ ಬಹುಪಾಲು, ಜೀವನ ಮಟ್ಟಗಳು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಗಣನೀಯವಾಗಿ ಬದಲಾಗಲಿಲ್ಲ, ವಿರಳವಾಗಿ ಪ್ರಮುಖ ಆವಿಷ್ಕಾರಗಳು ಕಂಡುಬಂದರೂ ಸಹ. ಇವು ಕೆಲವೊಮ್ಮೆ ಜೀವನದ ಗುಣಮಟ್ಟದಲ್ಲಿ ಸುಧಾರಣೆಗೆ ಕಾರಣವಾದವು, ಆದರೆ ಬೆಳವಣಿಗೆ ಯಾವಾಗಲೂ ನಿರಂತರವಾಗಿ ಇರದೆ ಅಲ್ಲಲ್ಲಿ ನಿಂತುಹೋಗಿವೆ. ಆದರೆ ವಿಜ್ಞಾನದ ಅನ್ವೇಷಣೆಗಳು ಬೆಳೆದಂತೆ ಜೀವನದ ಸುಧಾರಣೆಯೂ ನಿರಂತರವಾಗಿದೆ. ಹೀಗೆ ಆರ್ಥಿಕ ಬೆಳವಣಿಗೆಯನ್ನು ಐತಿಹಾಸಿಕವಾಗಿ ಅಧ್ಯಯನ ಮಾಡಿ ಅವುಗಳ ಚಲನಶೀಲತೆಯ ಮಾದರಿ ಅಥವಾ ರೂಪಿಕೆ (Pattern) ಗಳನ್ನು ಜೋಯೆಲ್ ಮೊಕೈರ್ ಅವರು ಅರ್ಥೈಸಿ ವಿವರಿಸಿದ್ದಾರೆ.
ಮಧ್ಯಕಾಲೀನ ಯುಗದಲ್ಲಿ ಅಂದರೆ ಸುಮಾರು 14ನೆಯ ಶತಮಾನದಿಂದ 18ನೆಯ ಶತಮಾನದವರೆಗೂ ಒಂದಷ್ಟು ಸಣ್ಣ ಪುಟ್ಟ ವೈಜ್ಞಾನಿಕ ಅನ್ವೇಷಣೆಗಳು ನಡೆದಿವೆ. ಆದರೆ ಅದಕ್ಕೆ ಸಮನಾಂತರವಾಗಿ ಆರ್ಥಿಕ ಅಭಿವೃದ್ಧಿಯನ್ನು ನಿವ್ವಳ ತಲಾವಾರು ಉತ್ಪಾದನೆಯ (GDP) ಯನ್ನು ನೋಡಿದರೆ ಬೆಳವಣಿಗೆಯಲ್ಲಿ ನಿಶ್ಚಲತೆಯು ಸುಲಭವಾಗಿ ಅರ್ಥವಾಗುತ್ತದೆ.

ಆದರೆ ಎರಡು ಶತಮಾನಗಳಿಗಿಂತ ಸ್ವಲ್ಪ ಹಿಂದೆ ಸಂಭವಿಸಿದ ಕೈಗಾರಿಕಾ ಕ್ರಾಂತಿಯಿಂದ ಇದು ಮೂಲಭೂತವಾಗಿ ಬದಲಾಯಿತು. ಬ್ರಿಟನ್ನಲ್ಲಿ ಪ್ರಾರಂಭವಾಗಿ, ನಂತರ ಇತರ ದೇಶಗಳಿಗೆ ಮುಂದುವರೆದು, ತಾಂತ್ರಿಕ ನಾವೀನ್ಯತೆ ಮತ್ತು ವೈಜ್ಞಾನಿಕ ಪ್ರಗತಿಯು ಪ್ರತ್ಯೇಕ ಘಟನೆಗಳ ಬದಲಿಗೆ ನಾವೀನ್ಯತೆ ಮತ್ತು ಪ್ರಗತಿಯ ಅಂತ್ಯವಿಲ್ಲದ ಚಕ್ರಕ್ಕೆ ಕಾರಣವಾಯಿತು. ಇದು ನಿರಂತರ ಮತ್ತು ಗಮನಾರ್ಹವಾಗಿ ಸ್ಥಿರವಾದ ಬೆಳವಣಿಗೆಗೆ ಕಾರಣವಾಯಿತು. ಏಕೆಂದರೆ Growth-ಏಳಿಗೆ ಎನ್ನುವುದು ಕೇವಲ ಹಣಕಾಸನ್ನು ಮಾತ್ರವೇ ಅವಲಂಬಿಸಿದ್ದಲ್ಲ! ಬದಲಾಗಿ ಅದೊಂದು ಒಟ್ಟಾರೆಯಾದ ಮಾನವಕುಲದ ಏಳಿಗೆ- ಅದರಲ್ಲಿ ಉತ್ತಮವಾದ ಉತ್ಪಾದನೆಗಳಿವೆ, ಆರೋಗ್ಯದ ಸುಧಾರಣೆ ಇದೆ, ಸಂವಹನ, ಶಿಕ್ಷಣ ಹೀಗೆ ಎಲ್ಲವನ್ನೂ ಒಳಗೊಂಡ ಒಟ್ಟಾರೆಯ ಜೀವನ ಕ್ರಮದ ಸುಧಾರಣೆಯಾಗಿದೆ.

ಕಳೆದೆರಡು ಶತಮಾನಗಳಲ್ಲಿ -19 ಹಾಗೂ 20ನೆಯ ಶತಮಾನ- ಆಗಿರುವ ಬೆಳವಣಿಗೆಗಳು, ಎಲ್ಲವನ್ನೂ ಸಾಧಿಸಿವೆ. ಜೊತೆಗೆ ಈ ಬೆಳವಣಿಗೆಯ ಮಾದರಿಗಳ ಚಲನಶೀಲತೆಯು ನಿರಂತರವಾಗಿ ಬೆಳೆಯುತ್ತಲೇ ನಡೆದಿದೆ. ಕೈಗಾರಿಕಾ ಕ್ರಾಂತಿಯ ಉಗಿ ಬಂಡಿಯಿಂದ ಆರಂಭಗೊಂಡು ಇಂದಿನ ಕೃತಕ ಬುದ್ಧಿಮತ್ತೆಯವರೆಗೂ ನಿರಂತರವಾಗಿ ಮಾನವಕುಲದ ಏಳಿಗೆಗೆ ಒಟ್ಟಾರೆಯ ಆರ್ಥಿಕತೆಯ ಅಭಿವೃದ್ಧಿಯನ್ನು ಸಾಧ್ಯ ಮಾಡಿವೆ.
ಹಾಗಾದರೆ – ಈ ನಿರಂತರ ಆರ್ಥಿಕ ಬೆಳವಣಿಗೆಯನ್ನು ಸೃಷ್ಟಿಸುವುದು ಯಾವುದು? ಈ ವರ್ಷದ ಪ್ರಶಸ್ತಿ ವಿಜೇತರು ಈ ಪ್ರಶ್ನೆಗೆ ಉತ್ತರಿಸಲು ವಿಭಿನ್ನ ವಿಧಾನಗಳನ್ನು ಬಳಸಿದ್ದಾರೆ. ಆರ್ಥಿಕ ಇತಿಹಾಸದಲ್ಲಿ ತಮ್ಮ ಸಂಶೋಧನೆಯ ಮೂಲಕ, ಜೋಯಲ್ ಮೊಕಿರ್ ಉಪಯುಕ್ತ ಜ್ಞಾನದ ನಿರಂತರ ಹರಿವು ಅಗತ್ಯ ಎಂಬುದನ್ನು ತೋರಿಸಿದ್ದಾರೆ. ಈ ಉಪಯುಕ್ತ ಜ್ಞಾನವನ್ನು ಎರಡು ಭಾಗಗಳಾಗಿ ವಿವರಿಸಿದ್ದಾರೆ. ಅವುಗಳನ್ನು ಜೋಯೆಲ್ ಮೊಕಿರ್ ಅವರು ಪ್ರತಿಪಾದನಾ ಜ್ಞಾನ (Propositional Knowledge) ಮತ್ತು ಸೂಚಿತವಾದ ಜ್ಞಾನ (Prescriptive Knowledge) ಎಂದು ಉಲ್ಲೇಖಿಸುತ್ತಾರೆ. ಪ್ರತಿಪಾದನಾ ಜ್ಞಾನವು ನೈಸರ್ಗಿಕ ಜಗತ್ತಿನಲ್ಲಿ ಕ್ರಮಬದ್ಧತೆಗಳ ವ್ಯವಸ್ಥಿತ ವಿವರಣೆ ಅದು ಏನಾದರೂ ಏಕೆ ಕೆಲಸ ಮಾಡುತ್ತದೆ ಎಂಬುದನ್ನು ತೋರಿಸುವ ಮೂಲಕ ಅದು ಜ್ಞಾನವನ್ನು/ತಿಳಿವಳಿಕೆಯನ್ನು ಪ್ರತಿಪಾದಿಸುತ್ತದೆ. ಸೂಚಿತವಾದ ಜ್ಞಾನವು ಯಾವುದೇ ಸೈದ್ಧಾಂತಿಕ/ಗಣಿತೀಯ ವಿವರಗಳಿಲ್ಲದ ಕೇವಲ ಪ್ರಾಯೋಗಿಕ ಸೂಚನೆಯಂತೆ! ರೇಖಾಚಿತ್ರಗಳ ಮಾದರಿ ಅಥವಾ ಏನಾದರೂ ಕೆಲಸ ಮಾಡಲು ಏನು ಅಗತ್ಯ ಎಂಬುದನ್ನು ವಿವರಿಸುವ ಪಾಕವಿಧಾನಗಳಂತಹ ತಿಳಿವಳಿಕೆ. ಇದೊಂದು ಬಗೆಯಲ್ಲಿ ರೂಢಿಗತವಾದ ತಿಳಿವಳಿಕೆ. ಯಾವುದೇ ವಿವರಣೆಗಳೂ ಇಲ್ಲದೆ ರೂಢಿಯಲ್ಲಿ ಬಂದಂತಹಾ ವಿಧಾನ. ಇವೆರಡೂ ಮಿಳಿತಗೊಂಡಾಗ ಅಭಿವೃದ್ಧಿಯು ಹೆಚ್ಚು ಏಳಿಗೆಯನ್ನು ಹೊಂದಿದೆ ಎಂಬುದು ಜೋಯೆಲ್ ಅವರ ಅಭಿಪ್ರಾಯ.

ತಂತ್ರಜ್ಞಾನವು ವೇಗವಾಗಿ ಮುಂದುವರೆದು ನಮ್ಮೆಲ್ಲರ ಮೇಲೆ ಪರಿಣಾಮ ಬೀರುತ್ತದೆ, ಹೊಸ ಉತ್ಪನ್ನಗಳು ಮತ್ತು ಉತ್ಪಾದನಾ ವಿಧಾನಗಳು ಹಳೆಯದನ್ನು ಎಂದಿಗೂ ಅಂತ್ಯವಿಲ್ಲದ ಚಕ್ರವನ್ನು ಬದಲಾಯಿಸುತ್ತವೆ. ಇದು ನಿರಂತರ ಆರ್ಥಿಕ ಬೆಳವಣಿಗೆಗೆ ಆಧಾರವಾಗಿದೆ, ಇದು ಜಗತ್ತಿನಾದ್ಯಂತ ಜನರಿಗೆ ಉತ್ತಮ ಜೀವನ ಮಟ್ಟ, ಆರೋಗ್ಯ ಮತ್ತು ಜೀವನದ ಗುಣಮಟ್ಟಕ್ಕೆ ಕಾರಣವಾಗುತ್ತದೆ. ಇದೆಲ್ಲವೂ ಒಂದು ಕಥನದಂತೆ ಕಾಣುವ ಹಾಗೂ ಸಾಮಾನ್ಯ ತಿಳಿವಳಿಕೆಗೂ ದಕ್ಕುವ ವಿಷಯವೇ ಹೌದು. ಇದನ್ನೆಲ್ಲವನ್ನೂ ಒಂದು ಸೈದ್ಧಾಂತಿಕ ಮಾದರಿಯಾಗಿ ರೂಪಿಸುವುದರಿಂದ ಈ ವಿಧಾನಗಳಿಗೆ ಅಥವಾ ತಿಳಿವಳಿಕೆಗೆ ಪ್ರಾಯೋಗಿಕವಾದ ಸಾಧ್ಯತೆ ದೊರಕೀತು!
ಫಿಲಿಪ್ ಅಘಿಯಾನ್ ಮತ್ತು ಪೀಟರ್ ಹೊವಿಟ್ ಅವರು ಈ ನಿರಂತರ ಬೆಳವಣಿಗೆಯ ಹಿಂದಿನ ಕಾರ್ಯವಿಧಾನಗಳನ್ನು ಅಧ್ಯಯನ ಮಾಡಿದರು. ಅದಕ್ಕೊಂದು ಸೈದ್ಧಾಂತಿಕ ಮಾದರಿಯನ್ನು ರೂಪಿಸಿದರು. 1992 ರ ಲೇಖನವೊಂದರಲ್ಲಿ, ಅವರು ಸೃಜನಶೀಲ ವಿನಾಶ ಎಂದು ಕರೆಯಲ್ಪಡುವ ಗಣಿತದ ಮಾದರಿಯನ್ನು ನಿರ್ಮಿಸಿದರು: ಹೊಸ ಮತ್ತು ಉತ್ತಮ ಉತ್ಪನ್ನ ಮಾರುಕಟ್ಟೆಗೆ ಪ್ರವೇಶಿಸಿದಾಗ, ಹಳೆಯ ಉತ್ಪನ್ನಗಳನ್ನು ಮಾರಾಟ ಮಾಡುವ ಕಂಪನಿಗಳು ನಷ್ಟವನ್ನು ಅನುಭವಿಸುತ್ತವೆ. ನಾವೀನ್ಯತೆ ಹೊಸದನ್ನು ಪ್ರತಿನಿಧಿಸುತ್ತದೆ ಮತ್ತು ಹೀಗಾಗಿ ಸೃಜನಶೀಲವಾಗಿದೆ. ಆದಾಗ್ಯೂ, ಇದು ವಿನಾಶಕಾರಿಯೂ ಆಗಿದೆ, ಏಕೆಂದರೆ ಹಳತಾದ ತಂತ್ರಜ್ಞಾನವು ನಾವಿನ್ಯತೆಯ ಜೊತೆಗೆ ಸ್ಪರ್ಧಿಸಲಾರದೆ ಸೋಲುತ್ತದೆ. ಇದನ್ನೇ ಸೃಜನಶೀಲ ವಿನಾಶ (Creative Destruction) ಎಂದು ಕರೆದಿರುವುದು.

ಉದಾಹರಣೆಗೆ ಹೊಸ ಹೊಸ ಫೋನುಗಳು ಬಂದ ಹಾಗೆ ಹಳೆಯ ಮಾಡೆಲ್ಗಳು ಉಪಯೋಗಕ್ಕೆ ಬರದಂತವಾಗಲಿಲ್ಲವೇ? ಹಾಗಾಗಿಯೇ ಈಗೀಗ ಅದರಲ್ಲೂ ಡಿಜಿಟಲ್ ಯುಗದಲ್ಲಿ ಮಾಡೆಲ್ಗಳು, ವರ್ಶನ್ಗಳು ಮುಂತಾದಿ ಹೊಸ ಹೊಸ ಉತ್ಪನ್ನಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಲೇ ಇರುತ್ತವೆ. ಇದರಲ್ಲಿ ಹಳೆಯ ಉಪಕರಣ ಅಥವಾ ಉತ್ಪನ್ನಗಳ ವಿನಾಶ ಅಥವಾ ನಿರುಪಕ್ತತೆಯು ಆಗುವುದೇನೋ ನಿಜವೇ! ಆದರ ಅಂತಹಾ ಸೃಜನಶೀಲ ವಿನಾಶವು ಸೃಷ್ಟಿಸುವ ಸಂಘರ್ಷಗಳನ್ನು ಹೇಗೆ ಎಂಬುದನ್ನು ರಚನಾತ್ಮಕ ರೀತಿಯಲ್ಲಿ ನಿರ್ವಹಿಸಬೇಕು. ಇಲ್ಲದಿದ್ದರೆ ಅವುಗಳು ಹೊಸತನ/ನಾವೀನ್ಯತೆಯನ್ನು ನಿರ್ಬಂಧಿಸಿ, ಅನನುಕೂಲತೆಯ ಅಪಾಯವನ್ನು ಉಂಟುಮಾಡುತ್ತದೆ.
ಸಂಶೋಧನೆಯಿಂದ ಹೊಸ ಸಂಶೋಧನೆಯತ್ತ
ರಚನಾತ್ಮಕ ರೀತಿಯ ನಿರ್ವಹಣೆಯನ್ನು ಈ ವರ್ಷದ ಪ್ರಶಸ್ತಿ ವಿಜೇತರು ವಿಭಿನ್ನ ರೀತಿಯಲ್ಲಿ ತೋರಿಸುತ್ತಾರೆ, 1992 ರಲ್ಲಿ ಅಘಿಯಾನ್ ಮತ್ತು ಹೊವಿಟ್ ನಿರ್ಮಿಸಿದ ಮಾದರಿಯು ಹೊಸ ಹೊಸ ಸಂಶೋಧನೆಗಳಿಗೆ ಕಾರಣವಾಗಿದೆ. ಇದರಲ್ಲಿ ಪರಸ್ಪರ ಸ್ಪರ್ಧಿಸುವ ಉತ್ಪನ್ನಗಳ/ಕಂಪನಿಗಳ ಸಂಖ್ಯೆಯನ್ನು ಒಳಗೊಂಡಿರುವ ಮಾರುಕಟ್ಟೆ ಸಾಂದ್ರತೆಯ ಮಟ್ಟಗಳ ಅಧ್ಯಯನವೂ ಸೇರಿದೆ. ಸಂಶೋಧಕರ ಸಿದ್ಧಾಂತವು ಇವುಗಳು ಅದೆಷ್ಟು ಹೊಸತನವನ್ನು ನಿಭಾಯಿಸಬಲ್ಲವು ಎಂದು ಸಾಬೀತು ಮಾಡಿದ್ದಾರೆ. ಇದಕ್ಕೆ ಸಮೀಕರಿಸಲಾದ ವೈಜ್ಞಾನಿಕ ಬೆಳವಣಿಗೆಗಳು ಬೆಂಬಲವನ್ನು ಕೊಟ್ಟಿವೆ/ಕೊಡುತ್ತಲೂ ಇವೆ. ಮಾನವಕುಲದ ಏಳಿಗೆಯ ನಿರಂತರತೆಯನ್ನು ಈ ಹೊಸತನದ ಆವಿಷ್ಕಾರಗಳು ನಡೆಯುತ್ತಲೇ ಬಗೆ ಬಗೆಯ ರೂಪಗಳಲ್ಲಿ ದೊರಕುತ್ತಿರುವುದನ್ನು ದಾಖಲಿಸಿವೆ.

ಈ ಹಿನ್ನೆಲೆಯಲ್ಲಿಯೇ Skill Development, Innovative Products, Modern Entrepreneurs, ಮುಂತಾದ ಸಾಮಾಜಿಕ ಹಿತಾಸಕ್ತಿಯ ವಿವರಣೆಗಳನ್ನು ಕೇಳುತ್ತಲೂ ಸಾಧ್ಯಗೊಳಿಸುತ್ತಲೂ ಇದ್ದೇವೆ.
ಆದರೆ ಇವೆಲ್ಲವೂ ಒಂದು ಬೌದ್ಧಿಕ ಸಮಾಜದಲ್ಲಿ ನಿರಂತತೆಯನ್ನು ಸಾಧಿಸಲು ಯೋಗ್ಯವಿರಬಹುದು. ಇನ್ನೂ ಏಳಿಗೆಯನ್ನು ಸಾಧಿಸುವ ಸಮಾಜವನ್ನು ಉತ್ಪನ್ನಗಳ ಮೂಲಕ ಮಾರುಕಟ್ಟೆಯ ಕಾರಣದಿಂದ ಶೋಷಿಸಲೂ ಕಾರಣವಾಗಬಹುದು. ಇಂತಹದೊಂದು ಇಷ್ಟೊಂದು ಗಮನಾರ್ಹವಾಗಿ ಅನಾವರಣವಾಗಿರುವ ಹಾಗೂ ಆಗುತ್ತಲೇ ಇರುವ ಹೊತ್ತಿನಲ್ಲಿ 1970ರ ದಶಕದಲ್ಲಿ ಪ್ರಕಟವಾದ ಆಲ್ವಿನ್ ಟಾಫ್ಲರ್ ಅವರ Future Shock ನೆನಪಾಯಿತು. ಅದು ಪ್ರಕಟವಾದಾಗ ಅದೊಂದು ನಿಜಕ್ಕೂ ಶಾಕ್ ಕೊಟ್ಟ ಪುಸ್ತಕವೇ! ಇಡೀ ಪುಸ್ತಕದ ಗ್ರಹಿಕೆಯನ್ನು ಲೇಖಕರ ಮಾತಿನಲ್ಲೇ ಹೇಳಬಹುದಾದರೆ ಅದು ಹೀಗಿದೆ “Toomuch change in too short a period of time”.
ಈ ಗ್ರಹಿಕೆಯನ್ನು ತಂತ್ರಜ್ಞಾನದ ವಿಕಾಸ ಮತ್ತು ಒಪ್ಪಿಕೊಳ್ಳುವ ಮನಸ್ಥಿತಿಯ ಬಗೆಗೂ ಈಗಾಗಲೇ ಸಾಕಷ್ಟು ಅಧ್ಯಯನಗಳು ನಡೆದಿವೆ. ಸದ್ಯದ ಚರ್ಚೆಯಲ್ಲಿ ಕೃತಕ ಬುದ್ಧಿಮತ್ತೆಯನ್ನು ಒಪ್ಪಿಕೊಳ್ಳುವಿಕೆಯ ಹಿಂಜರಿಕೆಗಳನ್ನು ಉದಾಹರಿಸಬಹುದೇನೋ! ಇಂತಹವು ನಿರಂತರವಾಗಿಯೂ ಇವೆ. ಕೈಗಾರಿಕಾ ಕ್ರಾಂತಿಯ ಆರಂಭದ ಕಾಲಕ್ಕೆ ಈ ಒಪ್ಪಿಕೊಳ್ಳುವ ಮನಸ್ಥಿತಿಯ ಹಿಂಜರಿಕೆಯೇ ಆರ್ಥಿಕ ಏಳಿಗೆಯ ನಿರಂತರತೆಯನ್ನು ನಿಶ್ಚಲವಾಗಿಸಿದ್ದ ಕಾರಣ. ಆದರೀಗ ತಂತ್ರಜ್ಞಾನದ ವಿಕಾಸದ ಕಾಲ ಹಾಗೂ ಅದನ್ನು ಒಪ್ಪಿಕೊಳ್ಳುವ ಸಮಯದ ನಡುವಿನ ಅಂತರವು ಕಡಿಮೆಯಾಗುತ್ತಾ ಸಾಗಿರುವದರಿಂದ ಆರ್ಥಿಕ ಏಳಿಗೆಯು ನಿರಂತರತೆಯನ್ನು ಸಾಧಿಸುತ್ತಾ ಸಾಗಿದೆ.
ಜೋಯೆಲ್ ಮೊಕೈರ್

ಇಸ್ರೇಲಿ ಮೂಲದ ಅಮೆರಿಕನ್ನರಾದ ಜೋಯೆಲ್ ಅವರು ನೆದರ್ಲ್ಯಾಂಡಿನ ಲೈಡೆನ್ ಎಂಬಲ್ಲಿ 26ನೆಯ ಜುಲೈ 1946ರಂದು ಜನಿಸಿದರು. ಯಹೂದಿ ಸಂತ್ರಸ್ತ ಡಚ್ ಕುಟುಂಬದವರಾದ ಇವರು ಒಂದು ವರ್ಷದವರಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಜರುಸಲೇಮಿನ ಹೀಬ್ರೂ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪಡೆದ ನಂತರ ಅವರ ತಾಯಿಯೊಂದಿಗೆ ಅಮೆರಿಕಕ್ಕೆ ವಲಸೆ ಬಂದರು. ಅಮೆರಿಕದ ಯೇಲ್ ವಿಶ್ವವಿದ್ಯಾಲಯದಲ್ಲಿ 1972ರಲ್ಲಿ ಎಂ.ಫಿಲ್ ಪದವಿಯನ್ನೂ ನಂತರ 1974ರಲ್ಲಿ ಪಿ.ಎಚ್.ಡಿ. ಪದವಿಯನ್ನೂ ಪಡೆದರು. ನಂತರ ಕೂಡಲೇ ನಾರ್ತ್ ಈಸ್ಟ್ರನ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇರಿ ಅಂದಿನಿಂದ ಇವರೆವಿಗೂ ಅಲ್ಲಿಯೇ ಇದ್ದಾರೆ. ಅವರೊಬ್ಬ ಹೆಸರಾಂತ ಆರ್ಥಿಕತೆಯ ಇತಿಹಾಸಕಾರ ಹಾಗೂ ಅವರ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಶಿಕ್ಷಕರು.
ಫಿಲಿಪ್ ಅಘಿಯಾನ್ (Philippe Aghion)

ಫಿಲಿಪ್ ಅಘಿಯಾನ್ ಓರ್ವ ಫ್ರೆಂಚ್ ಅರ್ಥಶಾಸ್ತ್ರಜ್ಞರು. ಫ್ರಾನ್ಸಿನ ಪ್ಯಾರಿಸ್ನಲ್ಲಿ 1956ರ ಆಗಸ್ಟ್ 17ರಂದು ಜನಿಸಿದರು. ಅವರ ತಾಯಿ ಗ್ಯಾಬಿ ಅಘಿಯಾನ್ ಓರ್ವ ಹೆಸರಾಂತ ಫ್ರೆಂಚ್ ಫ್ಯಾಶನ್ ಡಿಸೈನರ್. ಹಾಗಾಗಿ ಫಿಲಿಪ್ ಕಲಾವಿದರ ನಡುವೆ ಬೆಳೆದರು. ಫಿಲಿಪ್ ಅವರು ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ಗಣಿತದಲ್ಲಿ ಪದವಿಯನ್ನು ಪಡೆದರು. ಅಲ್ಲಿನ ಪಿ.ಎಚ್.ಡಿಯ ಜೊತೆಗೆ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲೂ ಪಿ.ಎಚ್.ಡಿ. ಪದವಿಯನ್ನು ಪಡೆದರು. ಬೊಸ್ಟನ್ನ ಮಸಾಚುಸೇಟ್ಸ್ ತಾಂತ್ರಿಕ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಯನ್ನು ಅರಂಭಿಸಿದ ಫಿಲಿಪ್, 1989ರಲ್ಲಿ ಫ್ರಾನ್ಸ್ಗೆ ಹಿಂದಿರುಗಿ ಫ್ರೆಂಚ್ ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಸಂಶೋಧಕರಾಗಿ ಸೇರಿದರು. 1996ರಲ್ಲಿ ಇಂಗ್ಲಂಡಿಗೆ ಬಂದು ಲಂಡನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು. 2002 ಮತ್ತು 2015ರ ನಡುವೆ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲೂ ಪ್ರಾಧ್ಯಾಪಕರಾಗಿದ್ದರು. ನಂತರ ಲಂಡನ್ ಸ್ಕೂಲ್ ಆಫ್ ಇಕಾನಾಮಿಕ್ಸ್ ಸೇರಿ ಪ್ರಾಧ್ಯಾಪಕರಾದರು. ವಿಶ್ವವಿದ್ಯಾಲಯಗಳ ಸ್ವಾಯತ್ತತೆಯ ಕುರಿತಂತೆ ಇವರ ಮುಂದಾಳತ್ವದ ಅಘಿಯಾನ್ ವರದಿ (2010) ಎಂದು ಹೆಸರಾದ ಅಧ್ಯಯನ ವರದಿಯು ವಿಖ್ಯಾತವಾದುದು.
ಪೀಟರ್ ಹೊವಿಟ್ (Peter Howitt)

ಪೀಟರ್ ಹೊವಿಟ್ ಓರ್ವ ಕೆನೆಡಿಯನ್ ಆರ್ಥಿಕ ತಜ್ಞ. ಕೆನಡಾದ ಓಂಟೊರಿಯೋದ ಗಾಲ್ಫ್ ಎಂಬಲ್ಲಿ 1946ರ ಮೇ 31ರಂದು ಜನಿಸಿದರು. ಕೆನಡಾದ ಮ್ಯಾಗ್ಹಿಲ್ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು 1968ರಲ್ಲಿ ಪಡೆದ ನಂತರ ವೆಸ್ಟ್ರನ್ ಓಂಟೋರಿಯೋ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಪದವಿಯನ್ನು ಪಡೆದರು. ಮುಂದೆ ಅಮೆರಿಕದ ನಾರ್ತ್ವೆಸ್ಟ್ರನ್ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ. ಪದವಿಯನ್ನು 1973ರಲ್ಲಿ ಹಣಕಾಸಿನ ಚಲನಶೀಲತೆಯ ಸಿದ್ಧಾಂತದ ಅಧ್ಯಯನಕ್ಕೆ ಪಡೆದರು. ಓಹಿಯೊ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿದ್ದ, ಪೀಟರ್ 2000ದಲ್ಲಿ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ 2013ರವರೆಗೂ ಅಲ್ಲಿ ಇದ್ದರು, ಇದೀಗ ಅಲ್ಲಿಯೇ ಎಮರಿಟಸ್ ಪ್ರಾಧ್ಯಾಪಕರಾಗಿದ್ದಾರೆ. ಅಲ್ಲದೆ ದೀರ್ಘಕಾಲದಿಂದಲೂ ಕೆನಡಾದ “ಥಿಂಕ್ ಟ್ಯಾಂಕ್” ಪಾಲಿಸಿ ಸಂಸ್ಥೆ ಸಿ. ಡಿ. ಹೊವೆ ಇನ್ಸ್ಟಿಟ್ಯೂಟ್ ಜೊತೆಗೆ ಸಂಬಂಧವನ್ನು ಹೊಂದಿದ್ದು, ಅಧ್ಯಯನಗಳನ್ನು ನಡೆಸಿದ್ದಾರೆ.
ಹೆಚ್ಚಿನ ಓದಿಗೆ ಪುರಸ್ಕೃತರ ಸಂಶೋಧನಾ ಪ್ರಕಟಣೆಗಳು:
Aghion, P. and P. Howitt (1992). A model of growth through creative destruction. Econometrica 60(2), 323–351.
Aghion, P. and P. Howitt (1994). Growth and unemployment. The Review of Economic Studies 61(3), 477–494. 40
Aghion, P. and P. Howitt (1996). Research and development in the growth process. Journal of Economic Growth 1(1), 49–73.
Mokyr, J. (1990a). The lever of riches: Technological creativity and economic progress. Oxford, U.K.: Oxford University Press.
Mokyr, J. (1992). Technological inertia in economic history. The Journal of Economic History 52(2), 325–338.
Mokyr, J. (2002). The gifts of Athena: Historical origins of the knowledge economy. Princeton, New Jersey, U.S.: Princeton University Press.
Mokyr, J. (2005a). The intellectual origins of modern economic growth. The Journal of Economic History 65(2), 285–351.
(ಕಾರಣಾಂತರಗಳಿಂದ ಈ ವರ್ಷದ ಅರ್ಥವಿಜ್ಞಾನದ ವಿವರಣೆಯ ಬರಹ ತಡವಾಯಿತು, ಕ್ಷಮೆ ಇರಲಿ)
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್.
