You are currently viewing ಹೊಟ್ಟೆ ತುಂಬಿಸುವ ತರಕಾರಿ ಆಲೂಗಡ್ಡೆ- Potato Solanum tuberosum

ಹೊಟ್ಟೆ ತುಂಬಿಸುವ ತರಕಾರಿ ಆಲೂಗಡ್ಡೆ- Potato Solanum tuberosum

ಆಲೂ, ಆಲೂಗಡ್ಡೆ, ಬಟಾಟೆಯ ಜನಪ್ರಿಯತೆಯು ಹಸಿವು, ಬಡತನ, ಪ್ರೀತಿ, ಹಗೆತನ, ಶ್ರೀಮಂತಿಕೆ, ಆಧುನಿಕತೆ, ರಾಜಕಾರಣ, ಆಧ್ಯಾತ್ಮ, ಮುಂತಾದ ಮಾನವತೆಯ ಎಲ್ಲಾ ಪ್ರಕಾರದ ಸಾಂಸ್ಕೃತಿಕ ಮಗ್ಗುಲನ್ನೂ ತನ್ನೊಳಗಿಟ್ಟು ಜಗತ್ತನ್ನು ಆದಿಕಾಲದಿಂದಲೂ ಸಲಹಿದೆ. ಮತ್ತೀಗ ಆಧುನಿಕ ಕಾಲವನ್ನೂ ಸಲಹುತ್ತಿದೆ. ಹೌದು! ಬೀಜದಿಂದ, ಬೀಜವಿಲ್ಲದೆ ಹೇಗಾದರೂ ಸರಿ ಮೊಳೆತು ಗಿಡವಾಗುವ, ಗಿಡದ ಕಾಂಡವೇ, ನೆಲದೊಳಗಿಳಿದು ತನ್ನೊಳಗೆ ಆಹಾರವನ್ನು ತುಂಬಿಕೊಂಡು ಗಡ್ಡೆಯಾಗಿ ಮಾನವ ಕುಲದ ಹಸಿವನ್ನು ತುಂಬಲೆಂದೇ ಹುಟ್ಟು ಪಡೆದ ವಿಶಿಷ್ಟ ಸಸ್ಯ. ಮಕ್ಕಳಿಂದ – ಮುದುಕರವರೆಗೂ ಆಲೂನ ತರಹೇವಾರಿ ತಯಾರಿಗಳು ಆಕರ್ಷಿಸುತ್ತವೆ. ಏನು ಕೊಟ್ಟರೂ ಬೇಡವೆನ್ನುವ ಮಗು ಚಿಪ್ಸ್‌ ಕೊಟ್ಟರೆ ಸುಮ್ಮನಾಗುವ ಆರೋಪವನ್ನು ಮಾಡುವ ಅದೆಷ್ಟು ಪೋಷರಿಕರಿಲ್ಲ, ಅಲ್ಲವೇ? ಬೇಕ್‌ ಮಾಡಿರಿ, ಬೇಯಿಸಿರಿ, ಕರಿದು ತಯಾರಿಸಿ, ಹುರಿದು ಕೊಡಿ, ಎಲ್ಲದರಲ್ಲೂ ಆಲೂ ಇಷ್ಟವಾಗುತ್ತದೆ. ತರಕಾರಿಯಾಗಿ ಪಲ್ಯ ಮಾಡಿ, ಹಾಗೇ ಬೇಯಿಸಿ ಉಪ್ಪು ಹಚ್ಚಿ ಸವಿಯಲೂ ಸರಿಯೇ, ಅವುಗಳ ವೈವಿಧ್ಯಮಯ ನೋಟ, ಆಕಾರ, ಹೊರ ಮೈ ಬಣ್ಣ, ರುಚಿ, ತುಂಬಿಕೊಂಡಿರುವ ಆಹಾರದ ಗುಣ ಎಲ್ಲದರಿಂದಲೂ ಬಗೆ ಬಗೆಯಾದ ವಿಶಿಷ್ಟತೆಯನ್ನು ತನ್ನಲಿಟ್ಟುಕೊಂಡಿದೆ.

ಅಷ್ಟಕ್ಕೂ ಆಲೂ.. ಕಾಯಿಯೇನಲ್ಲ! ಗಡ್ಡೆಯಾಗಿ ಮಾರ್ಪಾಡಾದ ಕಾಂಡ. ಹೀಗೆ ಕಾಂಡವೇ ನೆಲದೊಳಗಿಳಿದು ಗಡ್ಡೆಯಾಗಿ ನಮ್ಮ ಹೊಟ್ಟೆಯನ್ನು ತುಂಬಿಸುತ್ತಿದೆ. ನಿಜಕ್ಕೂ ಹೊಟ್ಟೆ ತುಂಬಿಸುವ ತರಕಾರಿ! ಜಾಗತಿಕವಾಗಿ ಅದರಲ್ಲೂ ಪಾಶ್ಚಿಮಾತ್ಯ ಸಂಸ್ಕೃತಿಗಳಲ್ಲಿ ಪ್ರಮುಖವಾಗಿ ಆಹಾರ. ಪಶ್ಚಿಮದಿಂದ ಪೂರ್ವಕ್ಕೆ ಪರಿಚಯಗೊಂಡು ತನ್ನ ಸಾಮ್ರಾಜ್ಯವನ್ನೇ ಸ್ಥಾಪಿಸಿರುವ ತರಕಾರಿ ಕೂಡ. ಚೀನಾ ಆಲೂ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಭಾರತವು ಎರಡನೆಯ ಸ್ಥಾನದಲ್ಲಿದೆ. ಎರಡೂ ಸೇರಿ ಜಗತ್ತಿನ ಮೂರನೆಯ ಒಂದು ಭಾಗಕ್ಕೂ ಹೆಚ್ಚು ಆಲೂವನ್ನು ಉತ್ಪಾದಿಸುತ್ತವೆ. ತಿನ್ನುವುದು ಕಾಂಡವಾದರೆ ಅದೇನು ಕಾಯಿ ಬಿಡದ ಗಿಡವೇ? ಇಲ್ಲ, ಆಲೂ ಸಹಾ ಹೂವು ಬಿಟ್ಟು, ಕಾಯಿಗಳನ್ನು ಬಿಡುತ್ತದೆ. ಹೂವುಗಳು ಬದನೆಯ ಹೂವುಗಳನ್ನು ಹೋಲುತ್ತವೆ. ಆದರೆ ಉಷ್ಣವಲಯದಲ್ಲಿ ಹೂವುಗಳು ಉದುರುವುದೇ ಹೆಚ್ಚು! ಶೀತವಲಯದಲ್ಲಿ ಹಗಲಿನ ಕಾಲವು ಉದ್ದವಿರುವ ಪ್ರದೇಶಗಳಲ್ಲಿ ಹೂವು ಪರಾಗಸ್ಪರ್ಶಗೊಂಡು ಕಾಯಿ ಬಿಡುತ್ತದೆ. ಕಾಯಿಯು ಸಣ್ಣ ಟೊಮ್ಯಾಟೊವನ್ನು ಹೋಲುತ್ತದೆ. ಆದರೆ ಇದು ತಿನ್ನಬಾರದ ಹಣ್ಣು! ಇದರಲ್ಲಿ ಸೊಲಾನಿನ್‌ (Solanine) ಎಂಬ ವಿಷಯುಕ್ತವಾದ ರಸಾಯನಿಕವಿರುತ್ತದೆ. ಇದು ನಮ್ಮ ದೇಹವನ್ನು ಸೇರಿದರೆ ವಾಂತಿ, ತಲೆಸುತ್ತುವುದು, ಕೆಲವೊಮ್ಮೆ, ಪ್ರಜ್ಞೆ ತಪ್ಪಿವುದಲ್ಲದೆ, ಸಾವಿಗೂ ಕಾರಣವಾಗಬಹುದು. ನಿಜವಾಗಿ ಹುಟ್ಟು ಪಡೆದ ಬೀಜಗಳನ್ನು ಸಸ್ಯ ತಳಿ ಅಭಿವೃದ್ಧಿಯಲ್ಲಿ ಮಾತ್ರವೇ ಬಳಸಲಾಗುತ್ತದೆ.   

   ಆಲೂ ಸಸ್ಯವು ತನ್ನ ತವರು ನೆಲವಾದ ಪೆರು ಮತ್ತು ಬೊಲಿವಿಯಾ ದೇಶಗಳ ಆಂಡೀಸ್‌ ಪರ್ವತಗಳ ಕಣಿವೆಯ ಮೂಲ ನಿವಾಸಿಗಳ ಪೌರಾಣಿಕ ಹಿನ್ನಲೆಯಲ್ಲಿ ಪಚಮಮಾ ಎಂಬ ಭೂದೇವತೆಯ ಮಗಳಾದ ಆಕ್ಸೊಮಮಾ ಎಂಬ ದೇವತೆಯ ಪ್ರತಿರೂಪವಾಗಿದೆ. ಆಂಡೀಸ್‌ ಪರ್ವತ ಪ್ರದೇಶವು ಅದೆಷ್ಟು ಆಲೂವಿನ ಬಗೆಗಳನ್ನು ಹೊಂದಿದೆ ಎಂದರೆ, ಜಾಗತಿಕವಾಗಿ ಇಂದು ಪ್ರಚಲಿತವಿರುವ 5000 ತಳಿಗಳಲ್ಲಿ 3000 ತಳಿಗಳು ಅದೇ ನೆಲದಲ್ಲಿ, ಇನ್ನೂ ಪ್ರಚಲಿತದಲ್ಲಿವೆ. ಅಲ್ಲಿನ ಪ್ರತಿ ಕಣಿವೆಯಲ್ಲೂ ನೂರಾರು ತಳಿಗಳಿವೆ. ಸುಮಾರು 7 ರಿಂದ 10 ಸಾವಿರ ವರ್ಷಗಳ ಹಿಂದಿನಿಂದಲೂ ಇದ್ದಿರಬಹುದಾದ ಆಲೂವು ಜನಬಳಕೆಗೆ ಪ್ರಚಲಿತವಾದದ್ದು ಇಂಕಾ ನಾಗರಿಕ ಸಮುದಾಯದಿಂದ. ಇಂಕಾ ಸಮುದಾಯವು ಬಗೆ ಬಗೆಯ ಬಣ್ಣ, ಆಕಾರದ ಗಡ್ಡೆಗಳ ಸಾವಿರಾರು ತಳಿಗಳನ್ನು ಹುಡುಕಿ ಪೋಷಿಸಿ ಬೆಳೆಸಿದರು. ಆಲೂವಿನ ಕೃಷಿ ಪರಂಪರೆಯನ್ನು ಜಗತ್ತಿಗೆ ತೆರೆದಿಟ್ಟ ಕೀರ್ತಿ ಈ ಸುಮುದಾಯಕ್ಕೆ ಸೇರುತ್ತದೆ. ಅವರು ಕೇವಲ ಬೆಳೆಯಲಿಲ್ಲ, ಆಲೂವನ್ನು ಆಕ್ಸೊಮಮಾ ಎಂಬ ದೇವತೆಯಾಗಿಸಿ ಪೂಜಿಸಿದರು. ಮುಖ್ಯ ಆಹಾರವನ್ನಾಗಿ ಪೋಷಿಸಿದರು.  

       ಜಾಗತಿಕವಾಗಿ ಇಂದಿಗೂ ಆಲೂಗಡ್ಡೆಯು ಮೆಕ್ಕೆಜೋಳ, ಗೋಧಿ ಮತ್ತು ಭತ್ತದ ತರುವಾಯು ಅತಿ ಹೆಚ್ಚು ಬಳಸುವ ಅತಿ ಮುಖ್ಯವಾದ ಆಹಾರದ ಬೆಳೆ. ಜಾಗತಿಕವಾಗಿ ನಾಲ್ಕನೆಯ ಪ್ರಮುಖ ಆಹಾರದ ಬೆಳೆಯಾದ ಆಲೂ ದಕ್ಷಿಣ ಅಮೆರಿಕದ ಆಂಡಿಸ್‌ ಪರ್ವತ ಶ್ರೇಣಿಯ ತವರಿನ ಸಸ್ಯ. ಆಂಡಿಸ್‌ ಪರ್ವತದ ಪ್ರದೇಶದಿಂದ ಭೂಮಿಯಾಚೆ ಮಂಗಳ ಗ್ರಹದಲ್ಲೂ ಬೆಳೆಯುವ ಪರಿಕಲ್ಪನೆಯ ಕನಸನ್ನು ತಂದಿತ್ತ ವಿಶಿಷ್ಟವಾದ ಸಸ್ಯ. ಕಳೆದ ಕೆಲವು ದಶಕಗಳಿಂದ ಬಾಹ್ಯಾಕಾಶದ ನೆಲೆಯ ಹುಡುಕಾಟದಲ್ಲಿ ನೆರೆಯ ಮಂಗಳನನ್ನು ತಲುಪಿ ವಾಪಸ್ಸು ಬರುವಷ್ಟು ಕಾಲದ ಆಹಾರವನ್ನು ಕೊಂಡೊಯ್ಯಲು ಸಾಧ್ಯವಾಗದ ಮಾತು. ಆ ಕಾರಣಕ್ಕಾಗಿ ವ್ಯೋಮದಲ್ಲಿ ಅದರಲ್ಲೂ ಮಂಗಳನಲ್ಲೂ ಬೆಳೆಯಬಹುದಾದ ಲಕ್ಷಣಗಳನ್ನು ನಾಸಾ ಗುರುತಿಸಿ ಕಳೆದ ಎರಡು-ಮೂರು ದಶಕಗಳಿಂದ ಸಂಶೋಧನೆಯಲ್ಲಿ ತೊಡಗಿದೆ. (ಮಂಗಳಯಾನದ ಮಾರ್ಷಿಯನ್‌ ಚಲನಚಿತ್ರದಲ್ಲಿ ಮಂಗಳನಲ್ಲಿ ಆಲೂ ಬೆಳೆಯುವ ದೃಶ್ಯವಿದೆ). ಬಾಹ್ಯಾಕಾಶದಲ್ಲಿ ಬೆಳೆದ ಮೊಟ್ಟ ಮೊದಲ ತರಕಾರಿ ಆಲೂ!

ಆಲೂ ಟೊಮ್ಯಾಟೊ, ಬದನೆಗಳ ಜಾತಿಗೇ ಸೇರಿದ ಸಸ್ಯ. ಇವೆಲ್ಲವೂ ಸೊಲನೇಸಿಯೇ (Solanaceae) ಎಂಬ ಸಸ್ಯ ಕುಟುಂಬದವು. ಅರ್ಜೆಂಟೈನ, ಬೊಲಿವಿಯ ಮತ್ತು ಪೆರು ದೇಶಗಳ ನೆಲವನ್ನು ತವರನ್ನಾಗಿಸಿಕೊಂಡ ಸೊಲಾನಮ್‌  ಬ್ರೆವಿಕಾಲ್‌ (Solanum brevicaule) ಎಂಬ ವನ್ಯ ಮೂಲದಿಂದ ವಿಕಾಸ ಹೊಂದಿದ ಸೊಲಾನಮ್‌ ಟ್ಯುಬರೋಸಮ್‌ (Solanum tuberosum) ಎಂಬುದು ಇದೀಗ ಕೃಷಿಯಲ್ಲಿ ಇರುವ ಪ್ರಭೇದ. ಸಾಮಾನ್ಯವಾಗಿ ಕೃಷಿಯಲ್ಲಿ ಬೀಜದ ಗಡ್ಡೆಗಳ ಗಿಣ್ಣುಗಳನ್ನು ಬಳಸಿ ಬೆಳೆಯಲಾಗುತ್ತದೆ. ಕಬ್ಬನ್ನೂ ಕೂಡ ಕಾಂಡದಿಂದಲೇ ಬೀಜವನ್ನು ಪಡೆಯುವಂತೆ ಆಲೂವಿನಲ್ಲೂ ಸಹಾ ಕಾಂಡವಾದ ಗಡ್ಡೆಗಳಿಂದಲೇ ನಾಟಿಯ ಬೀಜದ ಗಡ್ಡೆಗಳನ್ನು ಪಡೆಯಲಾಗುತ್ತದೆ.

ಸಾವಿರಾರು ತಳಿಗಳು ಜಗತ್ತಿನಾದ್ಯಂತ ಜನಪ್ರಿಯವಾಗಿದ್ದು, ಹಲವು ಅನೇಕ ವೈವಿಧ್ಯಮಯ ಬಣ್ಣದ ಗಡ್ಡೆಗಳನ್ನೂ ಹೊಂದಿವೆ. ಆಧುನಿಕ ಕೃಷಿಗೆ ಆಲೂವಿನ ತಳಿಗಳನ್ನು ಅಭಿವೃದ್ಧಿ ಪಡಿಸಿ ಬಗೆ ಬಗೆಯ ತಿನಿಸುಗಳಿಗೆ ಯೋಗ್ಯವಾಗಿಸಿದ ಕೀರ್ತಿಯು ಲೂಥರ್‌ ಬರ್‌ಬ್ಯಾಂಕ್‌ ಎಂಬ ಸಸ್ಯ ವಿಜ್ಞಾನಿಗೆ ಸೇರಿದೆ. ಅಮೆರಿಕದಲ್ಲಿ ಬರ್‌ಬ್ಯಾಂಕ್‌ ತಳಿ ಎಂದೇ ಹೆಸರಾದ ರುಸೆಟ್‌ ಬರ್‌ಬ್ಯಾಂಕ್‌ ಆಲೂಗಳು ಇಂದಿಗೂ ಪ್ರಚಲಿತವಿವೆ. ಕಂದು-ಕೆಂಪು ಬಣ್ಣದ ದಪ್ಪನಾದ ಗಡ್ಡೆಗಳ ರುಸೆಟ್‌ ಬರ್‌ಬ್ಯಾಂಕ್‌ ಆಲೂಗಳು ಫ್ರೆಂಚ್‌ ಫ್ರೈ ತಯಾರಿಯಲ್ಲಿ ತುಂಬಾ ಜನಪ್ರಿಯ. ನಮ್ಮಲ್ಲೂ ಚಿಪ್ಸ್‌ ತಯಾರಿಯಲ್ಲಿ ಅವುಗಳಿಗೆ ಹೆಚ್ಚಿನ ಬೇಡಿಕೆ ಇದೆ. ದಪ್ಪವಾದ ಗಡ್ಡೆಗಳ ಕಂದು-ಕೆಂಪು ಬಣ್ಣದ ಗಡ್ಡೆಗಳ ಆಲೂ ಬರ್‌ಬ್ಯಾಂಕ್‌ ತಳಿ.

ಲೂಥರ್‌ ಬರ್‌ಬ್ಯಾಂಕ್‌ ಓರ್ವ ವಿಶಿಷ್ಟ ಸಸ್ಯ ತಳಿ ವಿಜ್ಞಾನಿಯಾಗಿದ್ದವರು ಸರಿ-ಸುಮಾರು ೮೦೦ ಬಗೆಯ ತಳಿಗಳನ್ನು ವಿವಿಧ ಸಸ್ಯಗಳಲ್ಲಿ ಅಭಿವೃದ್ಧಿ ಪಡಿಸಿದ್ದಾರೆ. ಈ ತಳಿಗಳು ಅನೇಕ ಹಣ್ಣಿನ, ತರಕಾರಿಯ, ಹೂವಿನ ಹಾಗೂ ಅಲಂಕಾರಿಕ ಗಿಡಗಳಾಗಿದ್ದು, ಅವರ ಕೊಡುಗೆಯ ಆಲೂವಿನ ಉತ್ಪಾದನೆಯಲ್ಲೂ ಪ್ರಾಮುಖ್ಯವಾಗಿದೆ. ಇಂದಿಗೂ ವಿವಿಧ ಆಲೂ ಆಹಾರೋದ್ಯಮದಲ್ಲಿ ಜಗತ್ತಿನಾದ್ಯಂತ ಅಪಾರ ಬೇಡಿಕೆಯಿರುವ ರಸೆಟ್‌ ಬರ್‌ಬ್ಯಾಂಕ್‌ ತಳಿಯು, ಸಂಸ್ಕರಣೆಗೆ ಹೆಸರುವಾಸಿ. ಲೂಥರ್‌ ಬರ್‌ಬ್ಯಾಂಕ್‌ ಕೇವಲ ಹೈಸ್ಕೂಲು ಶಾಲೆಯ ಶಿಕ್ಷಣವನ್ನು ಪಡೆದೂ ಮುಂದೆ ಆಸಕ್ತಿಯಿಂದ ವಿವಿಧ ಸಸ್ಯಗಳ ಸಂಕರಣದಲ್ಲಿ ತೊಡಗಿಸಿಕೊಂಡರು. ಅನೇಕ ವೃತ್ತಿ ನಿರತ ವಿಜ್ಞಾನಿಗಳು ಲೂಥರ್‌ ಅವರನ್ನು ಸಸ್ಯವಿಜ್ಞಾನಿ ಎಂದು ಕರೆಯಲು ಆಕ್ಷೇಪಿಸುತ್ತಿದ್ದರೂ, ಅವರ ಕೊಡುಗೆ ಮಾತ್ರ ಅಪಾರವಾಗಿದೆ. ಪ್ರಾಯೋಗಿಕವಾಗಿ, ತಳಿ ಅಭಿವೃದ್ಧಿ ಹಾಗೂ ಸಂಕರಣದಲ್ಲಿ ತೊಡಗಿಸಿಕೊಂಡ ವಿಶಿಷ್ಟ ವಿಜ್ಞಾನಿ ಮತ್ತು ಕೃಷಿಕ.

ಮೂಲತಃ ದಕ್ಷಿಣ ಅಮೆರಿಕದ ಆಲೂವು ಜಾಗತಿಕವಾಗಿ ಪರಿಚಯಗೊಳ್ಳಲು ಸ್ಪಾನಿಷರು ಕಾರಣ. ಅಲ್ಲಿಗೆ ಲಗ್ಗೆಯಿಟ್ಟು ವಸಹಾತು ಮಾಡಿಕೊಂಡ ಸ್ಪಾನಿಷರು, ಇಂಕಾ ನೆಲದ ಚಿನ್ನವನ್ನು ಕಬಳಿಸಿದ ನಂತರ ಅವರಿಗೆ ಬೆಳೆಯುವ ಚಿನ್ನವಾಗಿದ್ದೇ “ಆಲೂ”. ಕೊಲಂಬಸ್ಸನ ನಂತರದಲ್ಲಿ ಯೂರೋಪನ್ನು ಹೊಕ್ಕ ಆಲೂ 17ನೆಯ ಶತಮಾನದ ಹೊತ್ತಿಗೆ ಪ್ರಮುಖ ಬೆಳೆಯಾಗಿತ್ತು. ಮುಂದೆ, 18 ಮತ್ತು 19ನೆಯ ಶತಮಾನದಲ್ಲಿ ಏಷಿಯಾ-ಯೂರೋಪುಗಳಲ್ಲಿ ಬೆಳೆದ ಜನಸಂಖ್ಯೆ ಹಾಗೂ ನಗರೀಕರಣಕ್ಕೆ ಆಲೂ ಬೆಳೆಯೇ ಪ್ರಮುಖ ಕಾರಣ ಎನ್ನುವ ವಿವರಣೆಗಳಿವೆ. ಅದರಲ್ಲೂ ನಗರಗಳ ಜನಸಂಖ್ಯೆಯ ಹೆಚ್ಚಳದ ಹಸಿವನ್ನು ನೀಗಿಸುವಲ್ಲಿ ಆಲೂವಿನ ಪಾತ್ರ ದೊಡ್ಡದು. ಯೂರೋಪಿಗೆ ಪರಿಚಯಗೊಂಡ ಆಲೂ ಸುಲಭವಾಗಿ ಎಲ್ಲರನ್ನೂ ತಲುಪಿರಲಿಲ್ಲ. ಇದಕ್ಕೂ ಕಾರಣರಾದವರು ಫ್ರಾನ್ಸ್‌ನ ಓರ್ವ ಔಷಧ ತಜ್ಞ.

ಪರಿಚಯದ ಆರಂಭದಲ್ಲಿ ಆಲೂ ಯೂರೋಪಿನ ಕೈದಿಗಳ ಆಹಾರಕ್ಕೆ ಬಳಸಲಾಗುತ್ತಿತ್ತು. ಫ್ರಾನ್ಸ್‌ ದೇಶದ ಸೈನ್ಯದಲ್ಲಿ “ಅಂಟ್ವಾನ್‌ ಆಗಸ್ಟೀನ್‌ ಪರ್ಮೆಂಟಿಯೆ” ಎಂಬುವರು 1754 ಮತ್ತು 1773ರ ಮಧ್ಯೆ ಔಷಧ ತಜ್ಞ (ಫಾರ್ಮಾಸಿಸ್ಟ್‌) ಆಗಿದ್ದರು. ಅವರು ಜರ್ಮನಿಯಲ್ಲಿ ಕೈದಿಯಾಗಿ ಸಿಕ್ಕಿಕೊಂಡಾಗ ಒತ್ತಾಯದ ಊಟದಲ್ಲಿ ಆಲೂ ಆಹಾರವಾಗಿ ಪರಿಚಯಗೊಂಡಿತ್ತು. ಸಾಲದಕ್ಕೆ ಕೇವಲ ಆಲೂ ತಿಂದು ಬದುಕಿದ್ದ ತಮ್ಮ ಬಗ್ಗೆಯೇ ಸ್ವತಃ ಔಷಧ ತಜ್ಞರಾಗಿದ್ದ ಆಗಸ್ಟೀನ್‌ ಅವರಿಗೆ ಅದರ ಬಗ್ಗೆ ಕುತೂಹಲ ಬೆಳೆಯಿತು. ಮುಂದೆ 1772ರಲ್ಲಿ ಬಿಡುಗಡೆಗೊಂಡು ಮೊಟ್ಟ ಮೊದಲು ಆಲೂವಿನ ಅಧ್ಯಯನದಲ್ಲಿ ತೊಡಗಿದರು. ಆಗಿನ್ನೂ ಫ್ರಾನ್ಸ್‌ ದೇಶವು ಆಲೂವನ್ನು ಬಹಿಷ್ಕರಿಸಿದ ದೇಶಗಳಲ್ಲಿ ಒಂದಾಗಿತ್ತು. ಮುಂದೆ 1773ರ ವೇಳೆಗೆ ಫ್ರಾನ್ಸ್‌ ಬಹಿಷ್ಕಾರವನ್ನು ಹಿಂಪಡೆಯುವಲ್ಲಿ ಅದರ ಆರೋಗ್ಯ ಪೂರ್ಣವಾದ ಆಹಾರದ ಗುಣಗಳನ್ನು ಗುರುತಿಸಿದ ಆಗಸ್ಟೀನ್‌ ಕಾರಣರಾದರು. ಯೂರೋಪಿನಲ್ಲಿ ಅದರ ಜನಪ್ರಿಯತೆಗೂ ಕಾರಣರಾದರು.

ಮೂಲ ಆಹಾರವಾಗಿ ಜಗತ್ತು ನಂಬಿಕೊಂಡಿರುವುದು ಕಾಳುಗಳನ್ನು. ಅಂತಹದರಲ್ಲಿ ಅವುಗಳಿಗೆ ಪೈಪೊಟಿಯಿತ್ತು, ಪ್ರತಿ ಎಕರೆಗೆ ಹೆಚ್ಚಿನ ಶಕ್ತಿಯನ್ನು ಕೊಡುವ ಗಡ್ಡೆಯೆಂದರೆ ಆಲೂ! ಬಿಹಾರದ ರಾಕೇಶ್‌ ಕುಮಾರ್‌ ಎಂಬ ರೈತರೊಬ್ಬರು 2013ರಲ್ಲಿ ಪ್ರತಿ ಎಕರೆಗೆ 43.52 ಟನ್ನುಗಳಷ್ಟು ಆಲೂ ಬೆಳೆದು ಜಾಗತಿಕ ದಾಖಲೆಯನ್ನು ನಿರ್ಮಿಸಿದ್ದರು. ಆಲೂ ಯೂರೋಪಿನಲ್ಲಂತೂ ಅದೆಷ್ಟು ಜನಪ್ರಿಯ ಆಹಾರ ಎಂದರೆ ೧೮ ಮತ್ತು ೧೯ನೆಯ ಶತಮಾನದಲ್ಲಿ ಬರೀ ಆಲೂ ತಿಂದು ಬದುಕಿದ ದಾಖಲೆಗಳೂ ಇವೆ. ವಿಖ್ಯಾತ ಅರ್ಥಿಕ ತಜ್ಞ ಹಾಗೂ ರಾಜಕೀಯ ಚಿಂತಕ ಕಾರ್ಲ್‌ ಮಾರ್ಕ್ಸ್‌ ಅವರ ಪ್ರಮುಕ ಆಹಾರ ಕೂಡ ಆಲೂ ಆಗಿದ್ದು ಜನಪ್ರಿಯವಾದ ಸಂಗತಿ. ಶೀತ ಮತ್ತು ಸಮಶೀತೋಷ್ಣವಲಯದ ಬಡವರನ್ನು ಸಂಬಾಳಿಸಿದ್ದೇ ಆಲೂ! ಅದಕ್ಕೆ ಗಡ್ಡೆ-ಗೆಣಸನ್ನಾದರೂ ತಿಂದು ಬದುಕಿದ್ದು ಎನ್ನುವ ಮಾತಿದೆಯಲ್ಲವೇ? ಆಲೂವಿನಲ್ಲಿ ಸಕ್ಕರೆಯ ಅಂಶ ಇತರೇ ಪಿಷ್ಠವನ್ನು ಒದಗಿಸುವ ಕಾಳುಗಳಂತೆ ಅಲ್ಲ. ಇದರಲ್ಲಿನದು ರಂಜಕಯುಕ್ತವಾದ ಗ್ಲೂಕೋಸ್‌. ಆಲೂವಿನ ಆಹಾರದ ಗುಣಗಳು ನಿಜಕ್ಕೂ ಸಾಕಷ್ಟು ಅನುಕೂಲವಾದವು. ಪೊಟ್ಯಾಶ್‌, ರಂಜಕ, ಕ್ಯಾಲ್ಸಿಯಂ ಮ್ಯಾಗ್ನಿಸಿಯಂ ಮುಂತಾದ ಖನಿಜಗಳೇ ಅಲ್ಲದೆ ವಿಟಮಿನ್ನುಗಳು ಹಾಗೂ ಪ್ರೊಟೀನ್‌ ಅನ್ನೂ ಒಳಗೊಂಡಿದೆ. ಬೇಯಿಸಿದ-ಆಲೂ ಕರಿದ-ಆಲೂಗಿಂತ ಹೆಚ್ಚು ಆರೋಗ್ಯಪೂರ್ಣವಾದುದು. ಆದರೂ ಕರಿದ-ಹುರಿದ ಸಾಕಷ್ಟು ಸಂಸ್ಕರಿಸಿದ ಆಲೂ ನಗರದ ಶ್ರೀಮಂತ ಆಹಾರವಾಗಿ ಆಧುನಿಕತೆಯನ್ನೂ ಮೆರೆಯುತ್ತಿದೆ.

ಇಷ್ಟೆಲ್ಲಾ ಹೆಗ್ಗಳಿಕೆಯ ಜೊತೆಗೆ ಹತ್ತು ಲಕ್ಷಕ್ಕೂ ಹೆಚ್ಚು ಜನರನ್ನು ಹಸಿವಿನಿಂದ ಕಂಗೆಡಿಸಿ ಸಾವಿಗೆ ಕಾರಣವಾದ ಆರೋಪವನ್ನು ಆಲೂ ತನ್ನೊಳಗೆ ಇಟ್ಟುಕೊಂಡಿದೆ. ತನ್ನ ಆಹಾರ ಜನಪ್ರಿಯತೆಯಲ್ಲಿ ಯೂರೋಪಿನ ಐರ್ಲೆಂಡಿನಲ್ಲಿ ಬಹಳ ಪ್ರಮುಖ ಬೆಳೆಯಾಗಿದ್ದ ಆಲೂ ಬೆಂಕಿರೋಗಕ್ಕೆ ತತ್ತರಿಸಿ ಹೋಯಿತು. ಇಡೀ ಯೂರೋಪನ್ನು 1840ರಲ್ಲಿ ಆವರಿಸಿದ ಆಲೂವಿನ ಲೇಟ್‌ ಬ್ಲೈಟ್‌ 1852ರವರೆಗೂ ಕಾಡಿತು. ಐರ್ಲೆಂಡ್‌ ಅಂತೂ ಸುಮಾರು ಕಾಲು ಭಾಗ ಜನಸಂಖ್ಯೆಯನ್ನು ಕಳೆದುಕೊಂಡಿತು. ಜನರು ಹಸಿವಿನಿಂದ ಕಂಗಾಲಾಗಿ ಹೋದರು. ಹತ್ತು ಲಕ್ಷ ಜನರು ಸಾವನ್ನಪ್ಪಿದರೆ, ಅದರ ಎರಡಕ್ಕೂ ಹೆಚ್ಚು ಪಟ್ಟು ಜನ ಐರ್ಲೆಂಡ್‌ ತೊರೆದು ವಲಸೆ ಹೋದರು. ಪ್ರತೀ ವರ್ಷವೂ ಬೆಳೆಯ ನಾಶವು ಜನರನ್ನು ಹಸಿವಿನಿಂದ ತತ್ತರಿಸುವಂತೆ ಮಾಡಿತು. ಒಂದು ದಶಕಕ್ಕೂ ಹೆಚ್ಚು ಕಾಲ ಇಡೀ ದೇಶದ ಪ್ರಮುಖ ಆಹಾರದ ಬೆಳೆ ಕೈಕೊಟ್ಟು ಕಂಗೆಡಿಸಿತು. ಇಡೀ ಐರ್ಲೆಂಡ್‌ ಶಾಶ್ವತವಾಗಿ ಬದಲಾಗಿ ಹೋಯಿತು.

ಆಂಡಿಸ್‌ ನಂತಹಾ ಬೆಟ್ಟದ ದಟ್ಟ ಅರಣ್ಯದ ಮೂಲ ನಿವಾಸಿಗಳ ಪ್ರಮುಖ ಆಹಾರವಾಗಿದ್ದ ಆಲೂ, ಜಾಗತಿಕವಾಗಿ ಅತ್ಯಂತ ಯಶಸ್ಸನ್ನು ಪಡೆದ ಬೆಳೆ. ಶೀತ, ಉಷ್ಣ ಎರಡರ ವಾತಾವರಣವನ್ನೂ ತನ್ನೊಳಗೆ ಒಗ್ಗಿಸಿಕೊಂಡು ತನ್ನ ಶರೀರದ ಜೀವಿರಾಸಾಯನಿಕತೆಯನ್ನೇ ವಿಶಿಷ್ಟವಾಗಿಸಿಕೊಂಡ ಸಸ್ಯ. ಹಾಗಾಗಿಯೇ ಜಗತ್ತನ್ನು ಇಷ್ಟೆಲ್ಲಾ ಆವರಿಸಿದೆ. ಎಲ್ಲ ಖಂಡಗಳನ್ನೂ ತನ್ನ ನೆಲೆಯಾಗಿಸಿಕೊಂಡಿದೆ. ಅಷ್ಟಾಗಿಯೂ ತನ್ನ ಮೂಲನೆಲೆಯನ್ನು ಅಷ್ಟೇ ವಿಶಿಷ್ಟವಾಗಿ ಆಶ್ರಯಿಸಿದೆ.    

ಜನರ ಬದುಕನ್ನು ಬದಲಿಸಿದ ಬೆಳೆಗಳಲ್ಲಿ ಆಲೂಗೆ ಪ್ರಮುಖ ಸ್ಥಾನವಿದೆ. ತಿನ್ನುವ ತಟ್ಟೆಯ ಆಕರ್ಷಣೆಯನ್ನೂ ಕೂಡ. ಆಲೂ ಹುಳಿ, ಆಲೂ ಪಲ್ಯ, ಆಲೂ ರಾಯಿತ, ಆಲೂ ಪಚಡಿ, ಫ್ರೈಡ್‌ ಆಲೂ, ಸಮೋಸವನ್ನು ತುಂಬಿಸುವ ಆಲೂ, ಪರೋಟದ ಪದರಗಳ ನಡುವಿನ ಮೆದುಹಾಸು ಆಲೂ. ಮ್ಯಾಕ್‌ಡೊನಾಲ್ಡ್‌ ಎಂಬ ಅಂತರರಾಷ್ಟ್ರೀಯ ಕಂಪನಿಯನ್ನು ಗುರುತಿಸುವುದೇ ಅದರ ಆಲೂ ತಯಾರಿಗಳಿಂದ! ಬಡವರ ಹೊಟ್ಟೆಯನ್ನೂ ಸಿರಿವಂತರ ನಾಲಿಗೆಯನ್ನೂ ಒಟ್ಟೊಟ್ಟಾಗಿ ಆಳುತ್ತಿರುವ ಆಲೂ, ಜಾಗತಿಕವಾಗಿಯೂ ಮಾನವ ಸಂಸ್ಕೃತಿಯಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದೆ.

ಹೆಚ್ಚಿನ ಓದಿಗೆ:

 1. John Reader, 2008. Potato: A History of the propitious esculent. Yale University Press. New Haven & London
 2. John A. McDougall, 2012.  The Starch Solution Rodele Books
 3. NASA. (2015). Meals Ready to Eat: Expedition 44 Crew Members Sample Leafy Greens Grown on Space Station. Retrieved from NASA website: Crew Members Sample Leafy Greens Grown on Space Station | NASA
 4. Rebecca Earle, Feeding the People. The politics of the potato.
 5. https://the-martian.fandom.com/wiki/Potatoes

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್

This Post Has 3 Comments

 1. Vasanth Kumar

  Late blight of Potato and Irish famine are missing.

  1. CPUS

   Please read gain

 2. Anupam a

  Very nice article and useful to our students, to know ,how they have to know

Leave a Reply