You are currently viewing ಹೇಳೋದು ಆಚಾರ, ತಿನ್ನೋದು ಬದನೆಕಾಯಿ: (Solanum melongena)

ಹೇಳೋದು ಆಚಾರ, ತಿನ್ನೋದು ಬದನೆಕಾಯಿ: (Solanum melongena)

ಈ ಗಾದೆ ಮಾತನ್ನು ಕೇಳಿಯೇ ಇರುತ್ತೀರಿ. ತಿನ್ನೋದು ಬದನೆಕಾಯಿ ಅಂದರೂ ಬದನೆಕಾಯಿ ತಿನ್ನಲು ಸಾಕಷ್ಟು ಅಡ್ಡಿಗಳಿವೆ. ಅಯ್ಯೋ ಬದನೆಕಾಯಿ ತಿನ್ನಬಾರದು! ವಾಯು! ಅನ್ನುವ ಮಾತೂ ಕೂಡ ಸೇರಿಕೊಂಡಿದೆ. ಮತ್ತೂ ಕೆಲವರಲ್ಲಿ ಇದನ್ನು ‘ವಿಶ್ವಾಮಿತ್ರ ಸೃಷ್ಟಿ’ ಎಂದು ತಿನ್ನಲು ನಿಷೇಧವಿದೆ. ಇದು ಅಪ್ಪಟ ಭಾರತೀಯ ತರಕಾರಿ, ನಮ್ಮ ದೇಶಾದ್ಯಂತ ಎಲ್ಲೆಡೆಯೂ ಮತ್ತು ಎಲ್ಲಾ ಕಾಲದಲ್ಲೂ ಬೆಳೆಯುತ್ತದೆ. ಎತ್ತರದ ಗಿರಿ ಪ್ರದೇಶಗಳನ್ನು ಹೊರತು ಪಡಿಸಿ ಭಾರತದಾದ್ಯಂತ ಇದು ಒಗ್ಗಿದೆ. ಬದನೆಯ ತವರೂರು ಭಾರತ. ಬದನೆ ನಮ್ಮದೇ ತರಕಾರಿ ಆದರೂ ನಮ್ಮದೇ ಆದ ಆಯುರ್ವೇದವು ಸಹಾ ಇದನ್ನು ತಿನ್ನಲು ಒಂದಷ್ಟು ನಿಷೇಧವನ್ನು ಒಡ್ಡಿದೆ. ಇದು ಋತುಸ್ರಾವವನ್ನು ಹೆಚ್ಚಿಸುವುದೆಂದು ಅದರಿಂದಾಗಿ ಗರ್ಭಿಣಿಯರು ತಿನ್ನಬಾರದು, ಇತ್ಯಾದಿ.  ಆದಾಗ್ಯೂ ಎಲ್ಲಾ ಕಾಲದಲ್ಲೂ ಸುಲಭ ಬೆಲೆಗೆ ದಕ್ಕುವ ತರಕಾರಿ ಬದನೆ! ಈ ತರಕಾರಿಯು ಟೊಮ್ಯಾಟೊ, ಆಲುಗಡ್ಡೆಯ ಕುಟುಂಬವಾದ ಸೊಲನೇಸಿಯೆಗೆ ಸೇರಿದ್ದರೂ, ಅವೆರಡಕ್ಕೂ ಇರುವ ಮರ್ಯಾದೆ ಇದಕ್ಕಿಲ್ಲ. ಟೊಮ್ಯಾಟೊದ ಬಣ್ಣವಾಗಲಿ, ಆಲೂವಿನ ಮೃದುವಾದ ಹಿತವಾಗಲಿ ಇದಕ್ಕಿಲ್ಲದಿರಬಹುದು, ಆದರೂ ವಿವಿಧ ಭಕ್ಷಗಳ ತಯಾರಿಯಲ್ಲಿ ಬದನೆಗಿರುವ ವಿಶೇಷತೆ ಆಲೂವಿಗಂತೂ ಖಂಡಿತಾ ಇಲ್ಲ. ಅವು ಎಷ್ಟೆಂದರೂ ಪಶ್ಚಿಮದಿಂದ ಬಂದವು, ಇದು ಹಿತ್ತಲ ಗಿಡ, ಪಾಪ. ಇಷ್ಟಾದರೂ ತನ್ನಲ್ಲಿ ಅಪಾರ ಸಾಧ್ಯತೆಗಳನ್ನಿಟ್ಟಿದೆ. ಮೊನ್ನೆ ಬಿಟಿ ಗಲಾಟೆಯಲ್ಲಿ ಮೈಗೇ ತನ್ನದಲ್ಲದ ಜೀನ್ ಹೊತ್ತುಕೊಂಡು ಸುದ್ದಿಮಾಡಿ, ಪಾರ್ಲಿಮೆಂಟ್ ಅನ್ನೂ ಕೂಡ ಹೊಕ್ಕ ಬೆಳೆ.

            ಇದರ ವೈಜ್ಞಾನಿಕ ಹೆಸರು ಕೂಡ ಸೊಲಾನಮ್ ಮೆಲಾಂಜಿನಾ (Solanum melongena). ಈ ಹೆಸರೇ ಇದಕ್ಕೊಂದು ಅಪವಾದವನ್ನು ಅಂಟಿಸಿದೆ. ಮೆಲಾಂಜಿನಾ ಪದವು ಇಟಾಲಿಯನ್ ಮೂಲದ್ದು. ಅದರ ಜನಪದೀಯ ಅರ್ಥದಲ್ಲಿ ಅದಕ್ಕೆ “ಹುಚ್ಚು ಸೇಬು” ಎಂದಿದೆ. ಇದಕ್ಕೆಲ್ಲಾ ಕಾರಣಗಳನ್ನು ವಿವಿಧ ಸಂಸ್ಕೃತಿಗಳಿಂದ ಪಡೆದಿರಬೇಕು. ಕಾರಣ ಬದನೆಯನ್ನು ಆಂಗ್ಲಬಾಷೆಯಲ್ಲಿ “ಎಗ್ ಪ್ಲಾಂಟ್” (Egg Plant) ಎಂದು ಕರೆಯುತ್ತಾರೆ. ಕೋಳಿ ಮೊಟ್ಟೆಯನ್ನು ಹೋಲುವ ತಳಿಗಳಿಂದ ಹಾಗೆ ಹೆಸರು ಪಡೆದಿದೆ. ಅಪ್ಪಟ ಬಿಳಿಯ ಕೋಳಿ ಮೊಟ್ಟೆಯ ಆಕಾರದ ಬದನೆಗಳು ಇವೆ. 

                ನಮ್ಮ ರಾಜ್ಯದ ಉಡುಪಿಯ ಮಟ್ಟಿ ಗುಳ್ಳ ಎನ್ನುವ ತಳಿಯೊಂದು ಜನಪ್ರಿಯವಾಗಿದೆ. “ಗುಳ್ಳ” ಪದವು ಅದರ ಆಕಾರದಿಂದ ಪಡೆದಂತಹದ್ದು. ಗುಂಡಗೆ ದುಂಡಾಗಿರುವುದರಿಂದ ಹಾಗೆ ಕರೆಯಲಾಗುತ್ತದೆ. ಉಡುಪಿಯ  “ಮಟ್ಟಿ” ಹಳ್ಳಿಯ ಆಸುಪಾಸಿನಲ್ಲಿ ಸುಮಾರು 400 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಈ ತಳಿಯನ್ನು ಬೆಳೆಯಲಾಗುತ್ತಿದೆ. ಉಡುಪಿ, ಮಂಗಳೂರು ಜಿಲ್ಲೆಯಾದ್ಯಂತ ಸಾಂಬಾರಿಗೆ ಇದು ಜನಪ್ರಿಯವಾಗಿದ್ದು, ಇದಕ್ಕೆ ಭೌಗೋಳಿಕ ಗುರುತನ್ನೂ (Geographical Indication) ಸಹಾ ಕೊಡಲಾಗಿದೆ.

                ಭಾರತದಲ್ಲಿ ವಿಕಾಸಗೊಂಡು ಚೀನಾ ಹೊಕ್ಕು, ಅಲ್ಲಿಂದ ಅರಬ್ಬರ ಮೂಲಕ ಪಶ್ಚಿಮಕ್ಕೂ ತಲುಪಿ ಈಜಿಪ್ಟ್, ಇಟಲಿ, ಫ್ರಾನ್ಸ್‍ ಗಳಲ್ಲೂ ಖ್ಯಾತಿಯನ್ನು ಗಳಿಸಿಕೊಂಡಿದೆ. ಇಷ್ಟೆಲ್ಲಾ ಪಡೆದಿದ್ದರೂ ಅದರ ಸವಿಯಲ್ಲಿನ ವೈಚಿತ್ರ್ಯ ಅದಕ್ಕೆ ಅಪಖ್ಯಾತಿ ತಂದಿರಬಹುದು. ಅದೇ ಕೆಲವರಿಗೆ ಹಿಡಿಸದ ರುಚಿಯನ್ನು ಕೊಡುತ್ತದೆ. ಇದಕ್ಕೆ ಕಾರಣ ಅದರಲ್ಲಿನ ಗ್ಲೈಕೊಅಲ್ಕಲಾಯ್ಡ್ ಎನ್ನುವ ರಾಸಾಯನಿಕ! ಸಾಮಾನ್ಯವಾಗಿ ಇದು ಕಡಿಮೆ ಪ್ರಮಾಣದಲ್ಲಿಯೇ ಇರುತ್ತದೆ. ಕೆಲವೊಂದರಲ್ಲಿ ಹೆಚ್ಚಾಗಿ ಕಹಿಯಾಗುವ ಸಾಧ್ಯತೆ ಇದೆ. ಇದೇ ಅದರ ರುಚಿಗೆ ಸೇರಿ ಒಂದಷ್ಟು ಹೆಸರು ಕೆಡಿಸಿಕೊಂಡಿರಬೇಕು. ಅದಿಲ್ಲದಿದ್ದರೆ ಇದೊಂದು ಉತ್ತಮ ತರಕಾರಿಯೇ. ಸಾಕಷ್ಟೇ ಆಹಾರಾಂಶಗಳನ್ನೂ ಮೈಯಲ್ಲಿ ತುಂಬಿಕೊಂಡು ತಿಂದವರಿಗೂ ಒಪ್ಪಿಸುವ ಜವಾಬ್ದಾರಿ ಹೊತ್ತಿದೆ. ಸಾಕಷ್ಟು ಖನಿಜಾಂಶಗಳನ್ನು ಮತ್ತು ನಾರಿನಂಶವನ್ನೂ ಹೊಂದಿರುವುದರಿಂದಲೇ ಸಕ್ಕರೆ ಕಾಯಿಲೆಯವರಿಗೆ ಇದು ಮಹತ್ವ ಪಡೆದಿದೆ. ಕಾಲ್ಸಿಯಂ, ಮೆಗ್ನೀಸಿಯಂ, ಗಂಧಕ ಮತ್ತು ರಂಜಕದಿಂದ ಸಮೃದ್ಧವಾಗಿದೆ. ಜತೆಗೆ ಪೊಟ್ಯಾಸಿಯಂ, ಸೋಡಿಯಂ, ಕಬ್ಬಿಣ, ಸತುಗಳನ್ನೂ ಒದಗಿಸುತ್ತದೆ. ಹಾಗೇಯೇ ಜೀವಸತ್ವಗಳಿಂದಲೂ ತುಂಬಿದೆ. ಇದರಲ್ಲಿ ವಿಟಮಿನ್ ಎ, ಫೋಲಿಕ್ ಆಮ್ಲ, ಥಯಾಮಿನ್, ಸಿ ವಿಟಮಿನ್ಗಳು ಹೇರಳವಾಗಿವೆ. ಇವೆಲ್ಲಾ ಜವಬ್ದಾರಿಯನ್ನು ಹೊತ್ತೇ ಸಾಕಷ್ಟು ಜನಪ್ರಿಯತೆಯನ್ನು ತನ್ನ ಅಪಖ್ಯಾತಿಯ ಜೊತೆಗೇ ಗಳಿಸಿಕೊಂಡಿದೆ. ಇಷ್ಟೆಲ್ಲಾ ಒಳ್ಳೆಯ ಗುಣಗಳಿರುವುದರಿಂದಲೇ, ಬೇರು, ಎಲೆ, ಕಾಂಡ, ಕಾಯಿ ಏನನ್ನು ಬಿಡದಂತೆ ಕೀಟಗಳು ಇದಕ್ಕೆ ಕಾಡುತ್ತವೆ. ಬದನೆಗೆ ಬೀಳುವ ಕಾಯಿಕೊರಕ ಮತ್ತು ಕಾಂಡಕೊರಕ ಕೀಟಗಳ ಹಾವಳಿಯಿಂದ ಭಾರತ ಒಂದರಲ್ಲೇ ಸುಮಾರು 900 ಕೋಟಿ ರೂ ಮೌಲ್ಯದ ಬೆಳೆ ಹಾಳಾಗುವುದೆಂಬ ಅಂದಾಜಿದೆ.    

          ಬದನೆಗೆ ಭಾರತದಲ್ಲಿ ಸುಮಾರು 4000 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಸಕ್ಕರೆ ಕಾಯಿಲೆ ಇರುವವರಿಗೂ, ಲಿವರ್ ಸಮಸ್ಯೆ ಇರುವವರಿಗೂ ಇದರಲ್ಲಿ ಪರಿಹಾರವಿದೆ ಎಂದು ಅಧ್ಯಯನಗಳು ತಿಳಿಸುತ್ತವೆ. ಆಯುರ್ವೇದ ಕೂಡ ಇದಕ್ಕೆ ಸಮ್ಮತಿಸುತ್ತದೆ. ಭಾರತದಿಂದ ಇಂಗ್ಲೆಂಡಿಗೆ ಹೆಚ್ಚಾಗಿ ರಫ್ತಾಗುವ ಮೂಲಕ ತನ್ನ ಹಿರಿಮೆಯನ್ನು ಸಾಧಿಸಿದೆ. ವೈವಿಧ್ಯಮಯ ಬಣ್ಣ, ಆಕಾರದ ಕಾಯಿಗಳು ಜನರನ್ನು ವೈವಿಧ್ಯಮಯವಾಗಿಯೇ ಆಕರ್ಷಿಸಿವೆ. ಬಿಳಿ, ಊದ, ಕಪ್ಪು, ಕಂದು, ಹಸಿರು, ಈ ಎಲ್ಲಾ ಬಣ್ಣಗಳ ಜೊತೆ ಮಿಶ್ರವಾದ ಬಿಳಿ ಹೀಗೆ ಬಗೆ ಬಗೆಯಾಗಿ ತರಹೇವಾರಿ ತಳಿಗಳನ್ನು ಹೊಂದಿದೆ. ಈ ಸಸ್ಯದ ವಿಶೇಷವೆಂದರೆ ಇದೊಂದು ಬಹು ವಾರ್ಷಿಕ ಸಸ್ಯ, ಇಡೀ ಜೀವನ ಪೂರ್ತಿ ಬೆಳೆಯುತ್ತಲೇ ಇದ್ದು ಹೂವುಗಳನ್ನು ಬಿಡುತ್ತದೆ. ಇದರ ಹೂಗಳಲ್ಲೊಂದು ವಿಶೇಷವಿದೆ, ದಳ, ಪುಷ್ಪಪಾತ್ರೆಯ ದಳ, ಪರಾಗರೇಣು, ಇತ್ಯಾದಿ ಎಲ್ಲವೂ ಐದು (5) -ಐದು ಇರುತ್ತವೆ.  ಆದರೂ ವಾರ್ಷಿಕ ಬೆಳೆಯಾಗಿಯೇ ರೈತರಲ್ಲಿ ಜನಪ್ರಿಯ. ಇಷ್ಟ ಪಡದವರು ಏನೆಂದೇ ಬೈದು ಕರೆಯಲಿ, ಎಣ್ಣೆಗಾಯಿ ರುಚಿ ಮಾತ್ರ ಅವರಲ್ಲೂ ನೀರೂರಿಸುತ್ತದೆ. ಜೊತೆಗೆ ಸುಟ್ಟು ಮಾಡಿದ ಚಟ್ಣಿಯಾಗಲಿ, ಬದನೆಕಾಯಿ ಗೊಜ್ಜು ಇದರ ಹೆಸರನ್ನು ಖಾಯಂಗೊಳಿಸಿದೆ. ವಾಂಗೀಬಾತ್‍ ನಲ್ಲಿ ಅನ್ನ ಜೊತೆಗೂ ಸೇರಬಹುದೆಂದು ಸಾಬೀತು ಮಾಡಿದೆ.

          ಇಷ್ಟೆಲ್ಲಾ ಮಹತ್ವದಿಂದಲೇ ಈ ತರಕಾರಿಯ ಬೆನ್ನು ಹತ್ತಿ ಬಿಟಿಯಾಗಿಸುವ ಪ್ರಯತ್ನಕ್ಕೆ ಕಂಪನಿಗಳು ಮುಂದಾಗಿರುವುದು. ನೂರಾರು ಕೋಟಿ ರೂಪಾಯಿಯ ಉಳಿತಾಯದ ನೆಪದಿಂದ ಇದನ್ನು ಕುಲಾಂತರಿ ಮಾಡಿ ನಮ್ಮ ತಟ್ಟೆಗೂ ಹೊರಗಿನವರು ಕೈ ಹಾಕಿದ್ದಾರೆ. ಈಗಾಗಲೇ ಬಿಟಿಯನ್ನು ಹತ್ತಿಯಲ್ಲಿ ಕಂಡ ರೈತರು ಅನುಭಸಿದ ಗೊಂದಲಗಳನ್ನು ಬದನೆಯಲ್ಲಿ ಕಾಣುವುದು ಬೇಡವೆಂದೇ ಸರ್ಕಾರ ಸದ್ಯಕ್ಕೆ ತಡೆಯೊಡ್ಡಿದೆ. ಆದರೂ ಈಗಾಗಲೇ ಸಂಶೋಧನೆಯ ನೆಪದಲ್ಲಿ ತೋಟಗಳನ್ನು ಸೇರಿದ ಬಿಟಿ -ಬಿಟ್ಟಿಯಾಗಿ ಜೀನುಗಳನ್ನು ಹಂಚೀತೆಂಬ ಅನುಮಾನಗಳು ಕೆಲವು ಚಿಂತಕರನ್ನು ಕಾಡುತ್ತಿದೆ. ಅವರ ಅನುಮಾನಕ್ಕೆ ಕಾರಣಗಳಿವೆ. ಈ ಬೆಳೆಯು ಸಾಮಾನ್ಯವಾಗಿ ಸ್ವಕೀಯ ಪರಾಗಸ್ಪರ್ಶದಿಂದ ಕಾಯಿಕಚ್ಚುವುದಾದರೂ, ಸಹ ಕೆಲವೊಮ್ಮೆ ಪರಕೀಯ ಪರಾಗಸ್ಪರ್ಶಕ್ಕೆ ಅನುವು ಮಾಡಿಕೊಡುತ್ತದೆ. ವಿಕಾಸದ ಹಾದಿಯಲ್ಲಿ ಈ ತಕರಾರನ್ನು ಯಾವ ತರಕಾರಿಯೂ ತಡೆಯುವಂತಿಲ್ಲ. ನೈಸರ್ಗಿಕವಾಗಿ ಪರಾಗವು ಕೀಟಗಳ ಮೂಲಕ, ನೀರು ಗಾಳಿಯ ಮೂಲಕ ಈಗಾಗಲೇ ನಮ್ಮ ಹಿತ್ತಿಲ ಬದನೆಯನ್ನು ತಲುಪಿ ಸ್ವಲ್ಪ ಕಾಡಿರುವ ಸಾಧ್ಯತೆಯಿದೆ. ಆದಾಗ್ಯೂ ತನ್ನ ಪರಾಗವನ್ನೇ ಇಷ್ಟ ಪಡುವ ಮೂಲಕ ತನ್ನ ತಾನು ಕಾಯ್ದುಕೊಳುವ ಭಾರತೀಯ ಗುಣವನ್ನೇ ನಂಬಿಕೊಂಡಿದೆ. ಇದೇ ಇದನ್ನೂ ಕಾಯುತ್ತಿದ್ದರೂ ಆಶ್ಚರ್ಯವಿಲ್ಲ!

          ಬಿಟಿ ವಿರೋಧದ ಅಲೆಯಲ್ಲಿ ಬದನೆಯು ಸಾಕಷ್ಟು ಸುದ್ದಿ ಮಾಡಿದೆ. ಮಹಿಕೊ ಬೀಜ ಕಂಪನಿಯು ಬಿಟಿ ಬದನೆಯನ್ನು ಅಭಿವೃದ್ಧಿ ಪಡಿಸಿ ವಿವಿಧ ತಳಿಗಳಲ್ಲಿ ಬಿಟಿ ಜೀನನ್ನು ಸೇರಿಸಿ ಮಾರಾಟ ಮಾಡಲು ಆಲೋಚಿಸಿತ್ತು. ಆದರೆ ಬಿಟಿ ವಿರೋಧದ ಹಿನ್ನೆಲೆಯಲ್ಲಿ ಬದನೆಯು ಒಂದು ತಿನ್ನುವ ತರಕಾರಿಯಾಗಿದ್ದು ಅದರ ಬಗ್ಗೆ ಸದ್ಯಕ್ಕೆ ನಿಷೇಧವನ್ನು ಹೇರಿದೆ. ಇಲ್ಲವಾದಲ್ಲಿ ನಮ್ಮ ಧಾರವಾಡದ ಕೃಷಿ ವಿಶ್ವವಿದ್ಯಾಲಯವು ಬೀಜ ಕಂಪನಿಯ ಜೊತೆಗೆ ಕೈಜೋಡಿಸಿ ಬಿಟಿ ಬದನೆಯ ಬೀಜೋತ್ಪಾದನೆಗೆ ತಯಾರಾಗಿತ್ತು.  ಈಗಂತೂ ಬಿಟಿ ಬದನೆಯು ತಟ್ಟೆಯನ್ನು ತಲುಪುತ್ತಿಲ್ಲ. ಅದರ ಲಾಭ ನಷ್ಟಗಳ ಪರ-ವಿರೋಧಗಳ ಸಂಗತಿಗಳು ಸಾಕಷ್ಟು ಇವೆ.

ಬದನೆಯ ಬಯಕೆಗೆ ರುಚಿಯ ವೈವಿಧ್ಯತೆ

ಬದನೆಯ ಖ್ಯಾತಿ-ಅಪಖ್ಯಾತಿಗಳೇನೇ ಇರಲಿ ಅದೊಂದು ತರಕಾರಿಯಾಗಿ ವಿವಿಧ ಖಾದ್ಯಗಳ ತಯಾರಿಯಲ್ಲಿ ಭಾರತದಲ್ಲಿ ಅಷ್ಟೇ ಅಲ್ಲ, ಅನೇಕ ರಾಷ್ಟ್ರಗಳಲ್ಲೂ ಜನಪ್ರಿಯವೇ! ಎಣ್ಣೆಯ ಜೊತೆ ಅದನ್ನು ಹುರಿದು, ಮಸಾಲೆಯಲ್ಲಿ ಬೆರೆಸುವ, ಸಾಂಬಾರಿನಲ್ಲಿ ಬೇಯಿಸುವ, ಸುಟ್ಟು ಅರೆದು ಚಟ್ಣಿಯಾಗಿಸುವ, ಹೀಗೆ ವಿವಿಧ ತರಹೇವಾರಿ ಸರಿ ಸುಮಾರು 25ಕ್ಕೂ ಹೆಚ್ಚು ಬಗೆಯ ಖಾದ್ಯಗಳಲ್ಲಿ ಬದನೆಯು ನಮ್ಮ ಅಡಿಗೆ ಮನೆಯಲ್ಲಿ ಹೆಸರು ಮಾಡಿದೆ. ಅದರ ರುಚಿ ಹಿಡಿಸಿದವರಿಗಂತೂ ಬಯಕೆಗೆ ಮೂರು ಬಾಯಿ! ಬದನೆಯ ಆಸೆಯಿಂದ ತಿನ್ನಲೇ ಬೇಕೆಂದು ರಾಜನ ತೋಟದಿಂದಲೇ ಕದ್ದು ತಿಂದ ತೆನ್ನಾಲಿ ರಾಮಕೃಷ್ಣನ ಕಥೆಯು ತುಂಬಾ ಜನಪ್ರಿಯವಾದದ್ದು. 

          ಬದನೆಯ ಪಲ್ಯ, ಚಟ್ಣಿಗಳು ರೊಟ್ಟಿ ಚಪಾತಿಯ ಜೊತೆಗಾರರಾದರೆ, ವಾಂಗೀಭಾತ್ನಲ್ಲಿ ಅನ್ನದ ಸಂಗಾತಿ. ಮುದ್ದೆಯನ್ನು ಅನ್ನವನ್ನೂ ಬೆರೆಸಲು ಹೇಗೂ ಸಾಂಬಾರು ಇದ್ದೇ ಇದೆ. ಇವೆಲ್ಲವಕ್ಕೂ ಮೇಲಾಗಿ ಎಣ್ಣೆಗಾಯಿಯು ಉತ್ತರ ಕರ್ನಾಟಕವನ್ನು ರಾಜ್ಯಾದ್ಯಂತ ರುಚಿಯ ಹೆಸರಲ್ಲಿ ಹಸಿರಾಗಿಸಿದೆ. ಉತ್ತರಕರ್ನಾಟಕದ ಎಣ್ಣೆಗಾಯಿ ಅಂತಲೇ ಬೋರ್ಡು ಹಾಕಿಕೊಂಡ ಅಂಗಡಿಗಳು ಇದೀಗ ದಕ್ಷಿಣ ಕರ್ನಾಟಕದಲ್ಲಿ ಜನಪ್ರಿಯವಾಗತೊಡಗಿವೆ.

          ಇಟಾಲಿಯನ್ ರೆಸಿಪಿಗಳಲ್ಲಿ ಬದನೆಯು ವಿಶೇಷವಾದ ಸ್ಥಾನವನ್ನು ಗಳಿಸಿದೆ. ಜೊತೆಗೆ ಫ್ರೆಂಚ್ ಖಾದ್ಯಗಳಲ್ಲೂ ಮಧ್ಯಪ್ರಾಚ್ಯ ಅಲ್ಲದೆ ಮೆಡಟರೇನಿಯನ್ ಭಕ್ಷ್ಯಗಳಲ್ಲೂ ಹೆಸರು ಮಾಡದೆ. ಎಣ್ಣೆಯ ಜೊತೆ ವಿವಿಧ ಹದಗಳ ಬೆರಕೆಯನ್ನು ಬದನೆಯಷ್ಟು ವೈವಿಧ್ಯಮಯವಾಗಿ ಸಮದೂಗಿಸಿಕೊಂಡಷ್ಟು ಇತರೆ ತರಕಾರಿಗಳು ಇಲ್ಲ. ಡೀಪ್ ಫ್ರೈ, ಸಿಂಪಲ್ ಫ್ರೈ, ಮಾಡರೇಟ್ ಫ್ರೈ, ಸ್ಪೈಸಿ, ಹೀಗೆ ನಮೂನೆಯ ಹೆಸರುಗಳಿಂದ ವಿದೇಶಿ ಖಾದ್ಯಗಳಲ್ಲೂ ಬೆರಗು ಮೂಡಿಸಿದೆ.

ಅಲರ್ಜಿಯ ಹೊತ್ತುಕೊಂಡ ಬದನೆ ಬದನೆಯ ಬಳಕೆದಾರರಲ್ಲೂ ಅಲರ್ಜಿಯನ್ನು ಬದನೆಯು ದಾಖಲಿಸಿದೆ. ಸುಮಾರು ಒಂದು ದಶಕದ ಹಿಂದೆ 2008ರಲ್ಲಿ ನಮ್ಮ ದೇಶದಲ್ಲೇ ಬದನೆಯನ್ನು ಖುಷಿಯಿಂದ ಬಳಸುವವರ ಸುಮಾರು 800 ಜನರನ್ನು ಒಳಗೊಂಡ ಅಧ್ಯಯನವೊಂದು ನಡೆಯಿತು. ಬದನೆಯು ಉಂಟುಮಾಡುವ ಅಲರ್ಜಿಯನ್ನು ಕುರಿತೇ ಅಧ್ಯಯನವು ಗುರಿಯನ್ನು ಹೊಂದಿದ್ದು, ಬಳಸುವ ಸರಿ ಸುಮಾರು ಪ್ರತಿಶತ 10ರಷ್ಟು ಮಂದಿಯಲ್ಲಿ ವಿವಿಧ ಬಗೆಯ ಅಲರ್ಜಿಯನ್ನು ದಾಖಲಿಸಿತ್ತು. ಹೆಚ್ಚಿನವರು ತಿಂದ ಕೆಲವು ಗಂಟೆಗಳ ಅವಧಿಯಲ್ಲಿ ಸಣ್ಣ-ಪುಟ್ಟ ಅಲರ್ಜಿಯನ್ನು ದಾಖಲಿಸಿದ್ದರು. ಬಹುಷಃ ಇದು ಹೆಚ್ಚಾದಾಗ ಉಂಟಾಗಬಹುದಾದ ಪ್ರತಿರೋಧದಿಂದ ಒಂದಷ್ಟು ಬದನೆಯು ಅಪಖ್ಯಾತಿಯನ್ನು ಗಳಿಸಿಕೊಂಡಿರಬಹುದು. ಏನೇ ಆಗಲಿ ವಾಂಗೀಭಾತ್ ಮತ್ತು ಎಣ್ಣೆಗಾಯಿಗಳು ಸಾಕಷ್ಟು ಮೋಡಿ ಮಾಡಿ ಬದನೆಯ ಸ್ವಾರಸ್ಯವನ್ನು ಶಾಶ್ವತವಾಗಿಸಿರುವುದಂತೂ ನಿಜ!

— ಡಾ.ಚನ್ನೇಶ್ ಟಿ.ಎಸ್.

This Post Has 3 Comments

  1. Sreepathi

    Interesting article about a local vegetable.
    ಈರನಗೆರೆ, ಮೈಸೂರು ಬದನೆ ate few local breeds that occur to my mind quickly.
    Kutumba badane is veriety which I grow in our kitchen garden

  2. ಶ್ರೀಹರಿ, ಕೊಚ್ಚಿನ್

    ಬದನೆ ನಂಜು ಅದನ್ನ ತಿನ್ನಬೇಡ ಗಾಯ ಒಣಗಲ್ಲ ಅಂತ ಅಮ್ಮ ಚಿಕ್ಕಂದಿನಿಂದಲೂ ಹೇಳಿದ್ದೇ ಬಂತು ಅನ್ನೋದು ಬಿಟ್ಟರೆ ತಿನ್ನೋದು ಬಿಟ್ಟಿದ್ದೇ ಇಲ್ಲ . ಅಷ್ಟು ರುಚಿ ಈ ಕಾಯಿಗೆ. ನೀವಂದ ಎಣ್ಣೆಗಾಯಿ , ಕಾವಲಿಯ ಹದ ಉರಿಯಲ್ಲಿ ಹುರಿದು ತಿರುಳನ್ನು ಬೆಳ್ಳುಳ್ಳಿ ಈರುಳ್ಳಿಯ ಜೊತೆ ಬೆರೆಸಿದ ಗೊಜ್ಜನ್ನು ಅಕ್ಕಿರೊಟ್ಟಿ ಅಥವಾ ಇನ್ಯಾವುದೇ ರೊಟ್ಟಿಯ ಜೊತೆ ತಿಂದರೆ ಆಹಾ ..
    ನಿಮ್ಮ ಲೇಖನಗಳು ಪೂರ್ಣ ವಿವರಣೆಯಿಂದ ಕೂಡಿರುತ್ತವೆ .ಓದಲು ಚೆನ್ನ …

  3. Narasimha murthy

    ಸೊಗಸಾದ ಚಿತ್ರಣ

Leave a Reply