You are currently viewing ಹೂವಿಗಿಲ್ಲದ ಪೂಜ್ಯತೆಯನ್ನು ಎಲೆಯಲ್ಲಿ ಇಟ್ಟ ಬಿಲ್ವ : Aegle marmelos

ಹೂವಿಗಿಲ್ಲದ ಪೂಜ್ಯತೆಯನ್ನು ಎಲೆಯಲ್ಲಿ ಇಟ್ಟ ಬಿಲ್ವ : Aegle marmelos

ಪೂಜೆಯಲ್ಲಿ ಹೂವಿಗೆ ಏನೂ ಕೆಲಸ ಕೊಡದೆ, ಎಲೆಗಳಲ್ಲೆಲ್ಲಾ ಅದರ ಸ್ಥಾನವನ್ನು ತುಂಬಿಕೊಂಡ ವಿಶಿಷ್ಠ ಸಸ್ಯ ಬಿಲ್ವ. ಆಡು ಭಾಷೆಯಲ್ಲಿ ಬಿಲ್ಪತ್ರೆಯಾಗಿರುವ, ಬಿಲ್ವ ಪತ್ರೆ ಅಥವಾ ಬಿಲ್ವ ಪತ್ರಿಯು ಒಂದು ಮರ. ಎಲೆಗಿರುವ ವಿಶೇಷತೆಯಿಂದಲೇ “ಪತ್ರ” ಎನ್ನುವುದು ಅದರ ಜೊತೆಯಾಗಿದೆ. ಶೈವರ ಮನೆಗಳಲ್ಲಂತೂ ಪತ್ರೆ ಅಥವಾ ಪತ್ರಿ ಮರ ಎಂದು ಕರೆಯುತ್ತಿದ್ದರೆ, ಅದು ಬಿಲ್ವಕ್ಕೆ ಎನ್ನುವುದು ಸಾಮಾನ್ಯವಾದ ಸಂಗತಿ. ಕಳೆದ ವಾರದ ತುಳಸಿಯು ವೈಷ್ಣವರ ಮನೆ ಅಥವಾ ದೇವಾಲಯಗಳಲ್ಲಿ ಮಹತ್ವ ಪಡೆದಿದ್ದರೆ ಬಿಲ್ವವು ಶೈವರ ಮನೆ ಅಥವಾ ದೇವಾಲಯಗಳಲ್ಲಿ ಪ್ರಮುಖವಾಗಿದೆ.

ನೀಳ ಕಾಂಡದಿಂದ ನೇರವಾಗಿ 10ರಿಂದ 15 ಮೀಟರ್‌ ಎತ್ತರಕ್ಕೆ ಬೆಳೆಯುವ ಸಸ್ಯ ಬಿಲ್ವ. ಕಾಂಡದ ಹೊರಮೈ ಸಿಪ್ಪೆಯಿಂದ ಕಳಚಿಕೊಂಡಂತೆ ಕಾಣುವ, ಮಾಸಲು ಬಿಳಿಯ ಬಣ್ಣದ್ದು. ಗಿಡದ ತಾರಸಿಯು ದಟ್ಟ ಹಸಿರನ್ನು ಹೊಂದಿದ್ದು, ಆಕರ್ಷಕವಾದ ಮರವೇ! ಆದರೆ ರೆಂಬೆಗಳಲ್ಲಿ ಸಾಕಷ್ಟು ಮುಳ್ಳುಗಳಿದ್ದು, ಎಲೆಗಳ ಬುಡದಲ್ಲಿ ಅವಿತಿರುತ್ತವೆ. ಒಂದು ರೀತಿಯಲ್ಲಿ ಎಲೆಗಳನ್ನು ಬಿಡಿಸಲು ತಾದಾತ್ಮತೆಯ ಸೂಕ್ಷ್ಮತೆಯನ್ನು ಬಯಸುವಂತೆ! ಬಿಲ್ವ ಟೊಂಗೆಗಳಿಂದ ಸೂಕ್ಷ್ಮವಾಗಿಯೇ ಎಲೆಗಳನ್ನು ಬಿಡಿಸಬೇಕು! ಇದನ್ನಿಟ್ಟುಕೊಂಡೇ ಹಿಂದೂ ಧರ್ಮದಲ್ಲಿ ಅದರಲ್ಲೂ ಶಿವ ಸಂಸ್ಕೃತಿಯ ಹಿಂದೆ ಹೋದವರಲ್ಲಿ ಆಧ್ಯಾತ್ಮಿಕ ಬೆರಗನ್ನು ತುಂಬಿಕೊಟ್ಟ ಮರ, ತನ್ನದೇ ವಿಶೇಷತೆಗಳಿಂದ ಒಂದು ಸಸ್ಯವಾಗಿ, ಸಸ್ಯಯಾನದಲ್ಲಿ ಚರ್ಚಿಸಲೇಬೇಕಾದ ಸ್ಥಾನವನ್ನು ಪಡೆದಿದೆ. ಮೂಲತಃ ಎಲೆಗಳ ವಿನ್ಯಾಸವು, ನಾವು ಸಹಜವಾಗಿ ಗಮನಿಸುವ ಅನೇಕ ಗಿಡ ಮರಗಳಂತೆ ಅಲ್ಲ. ಇದು ಮೂರು ಎಲೆಗಳ ಜೋಡಣೆಯನ್ನು ಹೊಂದಿದ್ದು, “ಟ್ರೈಫೋಲಿಯೇಟ್‌ (3-foliolate)” ವಿನ್ಯಾಸವೆಂದೇ ಹೆಸರುವಾಸಿ. ಈ ವಿನ್ಯಾಸ ಜೋಡಣೆಯು ಗ್ರೀಕ್‌ ಪುರಾಣ ಹಾಗೂ ಹಿಂದೂ ಪುರಾಣಗಳೆರಡಲ್ಲೂ ಅದಕ್ಕೊಂದು ಆಧ್ಯಾತ್ಮಿಕ ಸ್ಥಾನವನ್ನು ಗಳಿಸಿಕೊಟ್ಟಿದೆ. ಇವೆಲ್ಲವೂ ಕೇವಲ ನಂಬಿಕೆಯ ಸಂಗತಿಗಳಾದರೂ ಸಾಂಸ್ಕೃತಿಕವಾಗಿ ಮಾನವ ಸಮುದಾಯವು ವೈವಿಧ್ಯಮಯ ಸನ್ನಿವೇಶದ ವಿವರಗಳ ವಿಕಾಸಗೊಳಿಸಿರುವುದರ ಸಾಕ್ಷಿಯಾಗಿದೆ. ಈ ಸಾಕ್ಷಿಯು ಬಳಕೆಯಲ್ಲಿ, ಅಲ್ಲದೆ ಸಾಮಾಜಿಕವಾಗಿ ಮುಖಾಮುಖಿಯಾಗುವ ಸಂದರ್ಭಗಳನ್ನು ಸೃಷ್ಟಿಸಿರುವುದು ತಿಳಿಯುತ್ತದೆ. ಗ್ರೀಕ್‌ ಹಿನ್ನೆಲೆಯು ಇದೀಗ ಅದರ ವೈಜ್ಞಾನಿಕ ಹೆಸರಿನಲ್ಲಿ ದಾಖಲಾಗಿ ನಂಬಿಕೆಯ ನೆನಪುಗಳನ್ನು ಮಾನವ ಕುಲದಲ್ಲಿ ದಾಟಿಸುತ್ತಿದ್ದರೆ, ಹಿಂದೂ ನಂಬಿಕೆಯು ಅದಕ್ಕಿರುವ ಪೂಜ್ಯತೆ ಬಳಕೆಯಿಂದ ಗೌರವ ಕೊಡುತ್ತಾ ಮುಂದೆ ಕೊಂಡೊಯ್ಯುತ್ತಿದೆ. ಇವುಗಳೆರಡನ್ನೂ ತುಸು ವಿವರಗಳಿಂದ ನೋಡೋಣ.

ಈಗಾಗಲೇ ಪ್ರಸ್ತಾಪಿಸಿರುವ ಮೂರು -ಎಲೆಗಳ ಜೋಡಣೆಯ ವಿನ್ಯಾಸದಿಂದಾಗಿ ಹಿಂದೂ ದರ್ಶನವು ಮರಕ್ಕೆ ಪೂಜ್ಯತೆಯ ಸ್ಥಾನವನ್ನು ಕೊಟ್ಟಿದೆ. ಸಾಮಾನ್ಯವಾಗಿ ಹಲವಾರು ಗಿಡ-ಮರಗಳ ಎಲೆಗಳಲ್ಲಿ ಈ ವಿಶಿಷ್ಠ ಜೋಡಣೆಗಳಿರದ ಕಾರಣಕ್ಕೆ ಮಾನವ ಕುಲವು ಸೃಜಿಸಿಕೊಂಡ ಈ ಕಥನವು ವಿಸ್ಮಯವುಳ್ಳದ್ದು. ಇದೇ ಶಿವನಿಗೆ ಪ್ರಿಯವೆನ್ನುವ ನಂಬಿಕೆಯನ್ನೂ ಹುಟ್ಟಿ ಹಾಕಿದೆ. ತುಳಸಿಯಲ್ಲಿ ಲಕ್ಷ್ಮಿ ಇರುವ ಹಾಗೆ ಬಿಲ್ವದಲ್ಲಿ ಪಾರ್ವತಿ ಇದ್ದಾಳೆ, ಹಾಗಾಗಿ ಬಿಲ್ವ ಪತ್ರೆ (ಎಲೆಯು) ಶಿವನಿಗೆ ಪ್ರಿಯ! ಒಮ್ಮೆ ಪಾರ್ವತಿಯು ತನ್ನ ಗೆಳತಿಯರೊಂದಿಗೆ ಪರ್ವತಗಳ ಸುತ್ತಾಟದ ಸಂಚಾರಕ್ಕೆ ಹೋದಾಗ, ಅಲೆದಾಟದ ಶ್ರಮಕ್ಕೆ ಆಕೆಗೆ ಬೆವರು ಬರುತ್ತಿತ್ತಂತೆ. ಆ ಬೆವರಿನ ಹನಿಗಳು ಪಾರ್ವತಿಯ ಹಣೆಯಲ್ಲಿ ಇಳಿಯುತ್ತಿದ್ದಾಗ ಪಾರ್ವತಿಯು ಒರೆಸಿ ನೆಲಕ್ಕೆ ಹಾಕಿದಳಂತೆ. ಅದರಿಂದ ಶಂಕರನ ಮೂರು ಕಣ್ಣುಗಳನ್ನು ಹೋಲುವಂತೆ ಮೂರು ಎಲೆಗಳ ಜೋಡಣೆಯ ಒಂದು ಸಸ್ಯ ಹುಟ್ಟಿತಂತೆ. ಅದನ್ನು ಕಂಡ ಪಾರ್ವತಿಯು, ಗೆಳತಿಯರಿಗೆ “ಹೇ.. ನೋಡಿ ಈ ಮರ ಎಷ್ಟು ಸುಂದರವಾಗಿದೆ, ನನಗಂತೂ ಅದ್ಭುತ ಕಲಾಕೃತಿಯಂತಿದೆ” ಎಂದಳಂತೆ. ಕೂಡಲೆ ಆಕೆಯ ಗೆಳತಿಯರು ಅದಕ್ಕೊಂದು ಪಾವಿತ್ರತೆಯ ಭಾವ ತೋರುತ್ತಿದ್ದಂತೆ, ಪಾರ್ವತಿಯು ನನ್ನ ಹಣೆಯ ಹನಿಗಳು ತ್ರಿನೇತ್ರನ ತಲುಪುವ ಪ್ರೀತಿಯಲ್ಲಿ ಅದರ ಎಲೆಗಳಲ್ಲಿ ಸೌಂದರ್ಯದಲ್ಲಿ ತಾನು ಒಂದಾಗಿ “ಬಿಲ್ವ” ಎಂದು ಹೆಸರಿಟ್ಟಳಂತೆ. ಹಾಗಾಗಿ ಅದು ಶಿವನಿಗೆ ಪ್ರಿಯವಾದ ಪಾರ್ವತಿಯ ಸಂಕೇತವಾಗಿ ಅವನಿಗೆ ಅರ್ಪಿಸಲಾಗುತ್ತದೆ. ಅದರ ಹೂವಿಗೆ ಪರಿಮಳವಿರುವುದೇನೋ ಹೌದು. ಆದರೆ ಪೂಜ್ಯತೆ ಅದರಲ್ಲೂ ಶಿವನಿಗರ್ಪಿಸಲು ಎಲೆಗಳೇ ಸರಿ, ಎಂಥ ವಿಚಿತ್ರವಲ್ಲವೇ?

ಗ್ರೀಕ್‌ ಪುರಾಣದಲ್ಲಿ ಹೆಸ್ಪೆರಿಡೆಸ್‌ ಸಹೋದರಿಯರು ಎಂಬ ಹೆಸರಿನ ದೇವತೆಗಳಿದ್ದಾರೆ. ಅವರನ್ನು ಮೂರು, ಐದು, ಏಳು ಮುಂತಾಗಿ ಉದಾಹರಿಸುತ್ತಾರೆ. ಹೆಸ್ಪೆರಿಡೆಸ್‌ ಸಹೋದರಿಯರು ಮೂವರು ಇದ್ದರೆಂಬುದು ಮೂರು ಎಲೆಗಳ ವಿನ್ಯಾಸದ ನೆನಪಲ್ಲೂ ಬಂದಿದ್ದರೆ, ಕೆಲವೊಮ್ಮೆ ಬಿಲ್ವದಲ್ಲಿ ಐದು ಎಲೆಗಳ ಅಪರೂಪ ಜೋಡಣೆಯು ಐದು ಸಹೋದರಿಯರ ನೆನಪಿಸುತ್ತದೆ. ಅವರೆಲ್ಲರೂ ಡ್ರಾಗನ್‌ ಸಹಾಯದಿಂದ ಚಿನ್ನದ ಸೇಬಿನ ತೋಟವನ್ನು ಕಾಯುವ ಹೊಣೆಹೊತ್ತವರು. ಈ ಹೆಸ್ಪೆರಿಡೆಸ್‌ ಸಹೋದರಿಯರಲ್ಲಿ ಈಗೊ (Aegle) ಮತ್ತು ಹೆಸ್ಪೆರೆಥಸಾ (Hesperethusa) ಹೆಸರಿನವರು ಇಬ್ಬರು, ಅವರ ಹೆಸರುಗಳು ಬಿಲ್ವದ ನೆನಪಲ್ಲಿ ಇವೆ. ಬಿಲ್ವದ ಕಾಯಿ ಪೂರ್ಣ ಬಲಿತು ಹಣ್ಣಾದಾಗ ಹೆಚ್ಚೂ ಕಡಿಮೆ ಬಂಗಾರದ ಲೇಪ ಮಾಡಿಕೊಂಡಂತೆ ಕಾಣುತ್ತದೆ. ಅದಕ್ಕೆ ಅದನ್ನು ಚಿನ್ನದ ಸೇಬು (Golden Apple)” ಎಂಬ ಹೆಸರಿನಿಂದ ಕರೆಯುತ್ತಾರೆ. ಗ್ರೀಕ್‌ ಪುರಾಣದ ಚಿನ್ನದ ಸೇಬಿನ ತೋಟದ ಹೊಣೆಗಾರರಾದ ಹೆಸ್ಪೆರಿಡೆಸ್‌ ಸಹೋದರಿಯರ ನೆನಪಿನಲ್ಲಿ ಅದೇ ಹೆಸರಿನ ಬಿಲ್ವಕ್ಕೆ ವೈಜ್ಞಾನಿಕ ನಾಮಕರಣವನ್ನು ಮಾಡಲಾಗಿದೆ. ಸಂಕುಲದ ಹೆಸರಿನಲ್ಲಿ ಈಗೊ (Aegle)ವನ್ನು ನೆನಪಿಸಿಕೊಂಡರೆ, ಅದರ ಕಾಯಿ ಅಥವಾ ಹಣ್ಣಿನ ರೂಪವನ್ನು ಹೆಸ್ಪೆರಿಡಿಯಂ ಎಂದು ಕರೆದು ಹೆಸ್ಪೆರಿಡೆಸ್‌ ನೆನಪಿಸಿಕೊಳ್ಳಲಾಗಿದೆ. ಹೆಸ್ಪೆರಿಡಿಯಂ ಹಣ್ಣುಗಳೆಂದು ಕಿತ್ತಳೆ ಕುಟುಂಬದ (ರೂಟೇಸಿಯೆ – Rutaceae) ದಪ್ಪ ಸಿಪ್ಪೆಯ ಹಣ್ಣುಗಳಿಗೆ ಕರೆಯಲಾಗುತ್ತದೆ. ಮುಂದೆ ಬಿಲ್ವ ಕಾಯಿಯ ಕುರಿತು ಅದರ ವಿವರವನ್ನು ನೋಡೋಣವಂತೆ.

ಬಿಲ್ವದ ವೈಜ್ಞಾನಿಕ ಹೆಸರು ಈಗೊ ಮರ್ಮೆಲೊಸ್‌ (Aegle marmelos) ಈಗೊ( Aegle) ಗ್ರೀಕ್‌ ದೇವತೆಯ ಹೆಸರು, marmelos ಪೋರ್ಚುಗೀಸ್‌ ಪದ marmalade -ಅಂದರೆ ಕಹಿ ಕಿತ್ತಳೆಯ ಪರಿಮಳ ಎಂಬರ್ಥದಿಂದ ವಿಕಾಸಪಡೆದ ಹೆಸರಾಗಿದೆ. ಹಣ್ಣು ಕಹಿ ಕಿತ್ತಳೆಯ ಪರಿಮಳವನ್ನು ಕೊಡುವುದರಿಂದ ಹಾಗೆ ಹೆಸರು. ಹೀಗೆ ಪೂಜ್ಯತೆಯ ಜೊತೆಗೆ ವಿಶಿಷ್ಠ ಪರಿಮಳದ ಹಿನ್ನೆಲೆಯನ್ನು ಅದರ ನಾಮಕರಣದಲ್ಲೇ ಪ್ರತಿಸ್ಠಾಪಿಸಲಾಗಿದೆ. ಬಹುಪಾಲು ಸಸ್ಯ ವರ್ಗೀಕರಣ ಮತ್ತು ನಾಮಕರಣದಲ್ಲಿ ಇಂತಹಾ ಸಾಮಾಜಿಕ ಮುಖಾಮುಖಿಯು ತುಂಬಿ ತುಳುಕುತ್ತದೆ. ಆದರೆ ನಮ್ಮಲ್ಲಿ ವಿಜ್ಞಾನವನ್ನು ಸಮಾಜದಿಂದ ಮರೆಮಾಚಿ ವ್ಯಾಖ್ಯಾನಿಸುವ ಅನೇಕ ಅರೆಜ್ಞಾನ ಪಿಪಾಸು “ಬೃಹಸ್ಪತಿ”ಗಳನ್ನು ನಾವು ಒಪ್ಪಿಕೊಂಡಿದ್ದೇವಲ್ಲಾ ಎನ್ನುವುದೇ ವಿಸ್ಮಯ. ಇಂತಹವರು ಪಶ್ಚಿಮ ಮತ್ತು ಪೂರ್ವ ದೇಶಗಳೆರಡರಲ್ಲೂ ಇದ್ದಾರೆ ಬಿಡಿ.

ಹೀಗೆ ಪುರಾತನ ಗ್ರೀಕ್‌ ಮತ್ತು ಹಿಂದೂ ಪುರಾಣಗಳೆರಡರ ಹಿನ್ನೆಲೆಯಲ್ಲಿ ಸಾಮಾಜಿಕ ಸಂಕೇತಗಳನ್ನು ಹೊತ್ತ ಬಿಲ್ವವನ್ನು ಪೂಜನೀಯವಾಗಿ ಕಾಣಲು ಅದರ ಎಲೆಗಳ ಅಪರೂಪದ ವಿನ್ಯಾಸದ ಜೊತೆಗೆ, ಅದರ ಕಾಯಿಗಳ ವಿಶೇಷತೆಯೂ ಕಾರಣ. ಕಿತ್ತಳೆಯ ಕುಟುಂಬದ ಸದಸ್ಯವಾದ ಬಿಲ್ವ, ಅದರ ಜೊತೆಗೆ ಔಷಧಿಯ ಮಹತ್ವವನ್ನು ಸುಮಾರು 5000 ವರ್ಷಗಳಿಂದಲೂ ಮಾನವ ಕುಲಕ್ಕೆ ಪರಿಚಯಿಸಿಕೊಂಡಿದೆ. ಎಲೆಗಳು, ಹೂವುಗಳು, ಕಾಯಿ ಹಾಗೂ ಬೇರೂ ಸಹಾ ಔಷಧಿಯ ರಾಸಾಯನಿಕ ಗುಣಗಳನ್ನು ವೈವಿಧ್ಯಮಯವಾಗಿ ದಾಖಲು ಮಾಡಿವೆ. ಸಾಮಾನ್ಯವಾಗಿ ಪೂಜೆ-ಪುನಸ್ಕಾರಗಳಲ್ಲಿ ಹೂವಿಗೆ ವಿಶೇಷ ಸ್ಥಾನ ಆದರೆ ಇದರ ಹೂವುಗಳು ಕಾಯಿಯಾದ ಮೇಲೆ ಅಂತಹದ್ದನ್ನು ಗಳಿಸುತ್ತವೆ. ಹೂವುಗಳು ಸಿಹಿಯಾದ ಪರಿಮಳವನ್ನು ಹೊಂದಿರುತ್ತವೆ. ಅವುಗಳು ಗಂಡು-ಹೆಣ್ಣಿನ ಭಾಗಗಳೆರಡನ್ನೂ ಒಟ್ಟಿಗೆ ಹೊಂದಿರುತ್ತವೆ. ಹೂಗಳು ಹೆಚ್ಚೆಂದರೆ ಒಂದರಿಂದ ಎರಡು ಸೆಂ.ಮೀ ಉದ್ದವಾದವು ಅಷ್ಟೆ. ಮಾಸಲು ಹಸಿರಿನ ಬಿಳಿ ಅಥವಾ ಹಳದಿ ಬಣ್ಣದ ನೋಟದವು. ಸಾಮಾನ್ಯವಾಗಿ ಎಳೆಯ ಎಲೆಗಳ ಮಧ್ಯದಲ್ಲಿ ಕಾಣಬರುತ್ತವೆ.

ಹೂವುಗಳು ದುಂಬಿಗಳನ್ನು ಆಕರ್ಷಿಸುವಲ್ಲಿ ಯಾವುದೇ ಸಸ್ಯಗಳಿಗೆ ಸಾಟಿಯಾಗುತ್ತವೆ. ಪರಾಗಸ್ಪರ್ಶವಾಗಿ ಕಾಯಿಯಾದ ಮೇಲೆ ಹೂವುಗಳಿಗೆ ಸಿಗದಿದ್ದ ಪೂಜ್ಯತೆಯು ಸಿಗಲಾರಂಭಿಸುತ್ತದೆ. ಅದಕ್ಕೂ ಸಸ್ಯವೈಜ್ಞಾನಿಕ ಸಂಗತಿಗಳನ್ನು ಸಾಂಸ್ಕೃತಿಕವಾಗಿ ಮುಖಾಮುಖಿಯಾಗಿಸಿ ನೋಡಬಹುದು. ಸಾಮಾನ್ಯವಾಗಿ ಬಿಲ್ವ ಮರವನ್ನು ನಿರಂತರವಾಗಿ ಗಮನಿಸಿದ್ದವರಿಗೆ ಈ ಮುಂದಿನ ವಿಶೇಷ ಸಂಗತಿಗಳು ತಿಳಿದಿರುತ್ತವೆ. ಅಂದರೆ ಬಿಲ್ವದ ಮರದಲ್ಲಿ ಕಾಯಿಗಳು ತುಂಬಾ ಕಾಲ ಇರುವುದುಂಟು. ಹಸಿರಿನಿಂದ ಬೂದ ಬಣ್ಣದ ಕಾಯಾಗಿ, ಹಣ್ಣಾಗಿ ಹಳದಿ ಅಥವಾ ಚಿನ್ನದ ಬಣ್ಣಕ್ಕೆ ತಿರುಗಿ ಪೂರ್ತಿ ಮಾಗಲು 10ರಿಂದ 11 ತಿಂಗಳನ್ನೇ ತೆಗೆದುಕೊಳ್ಳುತ್ತವೆ. ಹಾಗಾಗಿ ಮರ ಕಾಯಿಗಳನ್ನು ಉದುರಿಸುವುದು ಸಹಜವಾಗಿರದು. ಹಾಗಾಗಿ ಕಾಯಿಗಳು ಮರದ ಮೇಲೆ ಇರುವಂತೆ ಕಂಡು ಹಿಂದೂಗಳು ಅವುಗಳಲ್ಲಿ ದೈವತ್ವ ತುಂಬಿದ್ದಾರೆ. ಕೆಲವೊಮ್ಮೆ ಮರದಲ್ಲೇ ಕಾಯಿಗಳು ಕರಗಿ ಹೋದಂತೆ ಕೀಟ/ಪಕ್ಷಿಗಳಿಗೆ ಆಹಾರವಾಗಿ ಬಲಿಯಾಗುವುದುಂಟು. ಹೆಚ್ಚಾಗಿ ಕೀಟಗಳಿಗೆ! ದಪ್ಪ ಸಿಪ್ಪೆಯಾದ್ದರಿಂದ ಸುಲಭಕ್ಕೆ ಧಕ್ಕೆಯಾಗುವುದೂ ಇಲ್ಲ. ಕೆಲವೊಮ್ಮೆ ಅಲ್ಲೇ ಮಾಯವಾದಂತೆ ಅನ್ನಿಸಿದ್ದರೂ ಅಚ್ಚರಿಯೇನಿಲ್ಲ! ಹೀಗೆ ತಿಂಗಳುಗಟ್ಟಲೇ ಮರದಲ್ಲೆ ಇರುವ ಕಾಯಿಗಳ ಒಳಗೆ 8-15 ವಿಭಾಗಗಳಿರುತ್ತವೆ. ಕಿತ್ತಳೆ ಅಥವಾ ಮೋಸುಂಬಿಯಲ್ಲಿ ತೊಳೆಗಳಿರುವಂತೆ ಇದರ ಒಳಗೂ ವಿಭಾಗಗಳಾಗಿ ಕಾಣುತ್ತವೆ. ಅದರ ವಿಶೇಷ ಪರಿಮಳ ತುಂಬಾ ಹಿತವಾಗಿರುತ್ತದೆ. ಇದೇ ಅದರ ವಿಶಿಷ್ಠತೆಯನ್ನು ಮಾನವ ಕುಲವು ಪರಿಚಯಿಸಿಕೊಂಡಿದೆ. ಕಿತ್ತಳೆ ಜಾತಿಯ ಬಹುಪಾಲು ಕಾಯಿ/ಹಣ್ಣುಗಳ ಸಿಪ್ಪೆಯು ದಪ್ಪ ಅಲ್ಲದೆ ಅದರೊಳಗೆ ಒಂದು ಬಗೆಯ “ರಸಭರಿತ” ಸ್ಥಿತಿ ಇರುವುದು. ಅದೊಂದು ಬಗೆಯ ಔಷಧೀಯ, ಪರಿಮಳದ ರಾಸಾಯನಿಕಗಳನ್ನು ಒದಗಿಸುತ್ತದೆ. ಆದರೆ ಬಿಲ್ವದಲ್ಲಿ ಹೊರ ಮೈ ಗಟ್ಟಿ. ಒಳಗೂ ಅಷ್ಟೇ ಕಿತ್ತಳೆಗಳಿಗಿಂತಾ ಭಿನ್ನ.

ಬಿಲ್ವದ ಕಾಯಿಗಳು ದೈವತ್ವಕ್ಕೇರಿದ ಸಂಗತಿಯನ್ನು ಪ್ರಸ್ತಾಪಿಸಿದ್ದೆನಲ್ಲ. ಅದರ ಜೊತೆಗೆ ಅವುಗಳು ನೆಲಕ್ಕೆ ಬೀಳದಂತೆ ಸಿಕ್ಕರೆ ಅವುಗಳ ಪೂಜ್ಯತೆ ಮತ್ತೂ ಹೆಚ್ಚುತ್ತದೆ. ಹಾಗಾಗಿ ಕೀಳುವುದೆಂದರೆ ಮುಳ್ಳುಗಳೇ ತುಂಬಿರುವ ಮರವನೇರುವುದೂ ಕಷ್ಟ. ಹೇಗೋ ಜತನದಿಂದ ಕಾಯಿ ಕೀಳುವ ಸಲಕರಣೆ ಬಳಸಿ ಅಥವಾ ಬೀಳುವಾಗಲೇ ಹಿಡಿವ ಸಾಹಸ ಮಾಡಿ ತಂದು ಶ್ರಾವಣ ಮಾಸದಲ್ಲಿ ಮನೆಯಲ್ಲಿಟ್ಟು ಪೂಜೆಮಾಡುತ್ತಾರೆ. ಮದುವೆಗೆ ಗಂಡು ಸಿಗದ ಹೆಣ್ಣು ಮಕ್ಕಳಿಂದ ಹೀಗೆ ತಂದ ಕಾಯಿಗೆ ಪೂಜೆ ಮಾಡಿಸಿವುದುಂಟು, ಕಾಕತಾಳಿಯವೆಂಬಂತೆ ಆಷಾಡ ಕಳೆದು ಶ್ರಾವಣ ಬಂದಿರುವುದರಿಂದ ಮದುವೆಗೆ ಹೆಣ್ಣು-ಗಂಡುಗಳ ಹುಡುಕಾಟಕ್ಕೆ ಫಲ ಸಿಗುತ್ತದೆ. ಅಂತೂ ಬಿಲ್ವ ಫಲದ ವಿಶೇಷತೆಗೆ ಮುಂದುವರೆಯುವ ಸಾಧ್ಯತೆಗಳೂ ಹೆಚ್ಚುತ್ತವೆ. ಅದರ ಜೊತೆಗೆ ಕಾಯಿಗಳು ಸಾಮಾನ್ಯವಾಗಿ ಒಡೆದು ಸೀಳುವುದಿಲ್ಲ. ಒಂದು ರೀತಿಯಲ್ಲಿ ಒಣಗಿದ ಚೆಂಡಿನಂತೆ ಅದರೊಳಗಿನ ನೀರು ಕಡಿಮೆಯಾಗುತ್ತಾ ಹಗುರವಾಗುತ್ತದೆ ಅಷ್ಟೆ. ಇದರಿಂದಾಗಿ ಬಹುಕಾಲ ಬಾಳುವ ಅದರ ಗುಣವು ಅದನ್ನು ದೈವತ್ವಕ್ಕೇರಿಸಿದೆ.

ಹಿಂದೂಗಳಲ್ಲಿ ಮಾತ್ರವಲ್ಲವೆ ಬೌದ್ಧರಲ್ಲೂ ಇದರ ಬಗೆಗಿನ ನಂಬಿಕೆಗಳು ವಿಚಿತ್ರವಾಗಿ ಬಳಕೆಯಲ್ಲಿವೆ. ನೇಪಾಳದ ಕಠ್ಮಂಡು ಕಣಿವೆಯಲ್ಲಿ “ನೇವರ್‌” ಎಂಬ ಸಮುದಾಯವಿದೆ. ಆ ಸಮುದಾಯದಲ್ಲಿ ಹಿಂದೂ ಹಾಗೂ ಬೌದ್ಧರು ಎರಡೂ ಧರ್ಮಗಳವರಿದ್ದಾರೆ. ಅವರು ಬಿಲ್ವದ ಕಾಯಿ ಹೀಗೆ ಸೀಳದೆ ನಾಶಹೊಂದದಿರುವುದಕ್ಕೆ ಅದಕ್ಕೊಂದು ಅಮರತ್ವದ ಸಂಕೇತವನ್ನಾಗಿಸಿದ್ದಾರೆ. “ಬೇಲ್‌ ಬಿವಾಹ” ಎನ್ನುವ ಆಚರಣೆಯು ಅವರಲ್ಲಿದೆ. ಇದರಲ್ಲಿ ಹೆಣ್ಣು ಮಕ್ಕಳಿಗೆ ಬೇಲ್‌ ಅಥವಾ ಬಿಲ್ವದ ಕಾಯಿಯ ಜೊತೆಗೆ ವಿವಾಹದ ಮಾಡಿಸುವುದು. ಹೀಗೆ ಮಾಡುವುದರಿಂದ ಕಾಯಿ “ಅಮರ” ಆದ್ದರಿಂದ ಆ ಮಕ್ಕಳು ವಿಧವೆಯರೇ ಆಗುವುದಿಲ್ಲ ಎನ್ನುವ ನಂಬಿಕೆ ಈ ಸಮುದಾಯದ್ದು. ನೂರಾರು ವರ್ಷಗಳಿಂದಲೂ ಜಾರಿಯಲ್ಲಿರುವ ಆಚರಣೆಯು ಕನ್ಯಾದಾನದ ಸಂದರ್ಭದಲ್ಲಿ ಮೊದಲು ಮಾಡುವ ವಿವಾಹವಾಗಿಯೂ ಬಳಕೆಯಲ್ಲಿದೆ. ಇದರಿಂದಾಗಿ ನೇಪಾಳದ ನೇವರ್‌ ಸಮುದಾಯದಲ್ಲಿ ವಿಧವೆಯರಿಗೆ ವಿಶೇಷ ಸ್ಥಾನ! ನೇಪಾಳದಲ್ಲಿ ಬಿಲ್ವದ ಕಾಯಿಯು “ದಿವ್ಯ ಪುರುಷ” ಎನ್ನಿಸಿಕೊಂಡಿದೆ.

ಬಿಲ್ವ ಸಸ್ಯದ ಎಲೆ, ಕಾಯಿ, ಬೀಜ ಮತ್ತು ಬೇರುಗಳು ಬಗೆ ಬಗೆಯ ಔಷಧಿಯ ಗುಣಗಳನ್ನು ಹೊಂದಿವೆ. ಕಾಯಿಗಳನ್ನು ನೇರವಾಗಿ ತಿನ್ನಬಹುದು. ಹಸಿಯಾಗಿಯೂ ಅಥವಾ ಒಣಗಿದವನ್ನೂ ಸಹಾ. ಸಾಮಾನ್ಯವಾಗಿ ಒಣಗಿದವನ್ನು ತಿರುಳನ್ನು ತೆಗೆದು ಹಸಿಯಾಗಿದ್ದಾಲೂ ಅಥವಾ ಒಣಗಿದ್ದರೆ ಪುಡಿಮಾಡಿ ಸಿಹಿಗೊಳಿಸಿ ಮೆಲ್ಲಬಹುದು. ಬಗೆ ಬಗೆಯ ಶರಬತ್ತು, ಪಾನಕ, ಕಷಾಯಗಳಾಗಿಯೂ ಬಳಸಬಹುದು. ಐಸ್‌ಕ್ರೀಂ, ಸಕ್ಕರೆಯ ಕ್ಯಾಂಡಿಗಳಲ್ಲಿ ಪರಿಮಳಕ್ಕೆ ಬೆರಸುತ್ತಾರೆ. ಕಿತ್ತಳೆಯ ಪರಿಮಳವಿರುವುದರಿಂದ ಹಿತವಾದ ಅನುಭವವನ್ನು ಕೊಡುತ್ತದೆ. ಆದರೆ ತುಸು ಒಗರು ಮತ್ತು ತುಸುವೇ ಕಹಿಯಾದ ರುಚಿಯೂ ಬೆರೆತಿರುವುದು. ನನ್ನ ಬಾಲ್ಯದಲ್ಲಿ ನನ್ನ ಅಜ್ಜಿ ಬಿಲ್ವದ ಕಾಯಿಗಳನ್ನು ಉಪ್ಪಿನಕಾಯಿ ಹಾಕಿಡುತ್ತಿದ್ದರು. ತಿನ್ನುವುದು ಆ ವಯೋಮಾನದಲ್ಲಿ ಅಷ್ಟಕಷ್ಟೇ ಆಗಿದ್ದರೂ ಅದರ ನೆನಪು, ಜೊತೆಗೆ ಅಜ್ಜಿ ಮತ್ತು ನನ್ನ ಅಮ್ಮ ಬಾಯಲ್ಲಿಟ್ಟು ಆನಂದಿಸುತ್ತಿದ್ದುದು ಮಾತ್ರ ಮರೆಯದೇ ಉಳಿದಿದೆ. ಪಾನಕವಂತೂ ರುಚಿಯಾಗಿಯೇ ಇರುತ್ತಿತ್ತು.

ಬಿಲ್ವದ ಎಲೆ, ಕಾಯಿ ಮುಂತಾದವುಗಳ ರಾಸಾಯನಿಕತೆಗಳು ಅಲ್ಲಲ್ಲಿ ಅಧ್ಯಯನಕ್ಕೆ ಒಳಗಾಗಿವೆ. ಆಯುರ್ವೇದದ ದಾಖಲೆಗಳ ಹೊರತಾಗಿ ನಿಖರವಾದ ಔಷಧೀಯ ವಿವರಗಳು ಅಧ್ಯಯನಕ್ಕೆ ಒಳಗಾದುದು ಕಡಿಮೆ. ಆದರೆ ಸಾಕಷ್ಟು ಜನಪದ ಔಷಧೀಯ ಪರಂಪರೆಯಲ್ಲಿ ವಿಸ್ತಾರವಾದ ಸಂಗತಿಗಳಿವೆ. ಬಹಳ ಮುಖ್ಯವಾಗಿ ಹಣ್ಣಿಗೆ ಜೀರ್ಣಶಕ್ತಿಯನ್ನು ಹೆಚ್ಚಿಸುವ, ಅತೀಭೇದಿಯನ್ನು ಕಡಿಮೆಗೊಳಿಸುವ ಮಾಹಿತಿಯನ್ನು ಕಾಣಬಹುದು. ಹಾಗಾಗಿ ಹಣ್ಣಿನ ಪಾನಕವು ಜೀರ್ಣಶಕ್ತಿ ವೃದ್ಧಿಸುವ ಅಥವಾ ತಿನ್ನುವ ಹಂಬಲವನ್ನು ಉತ್ತೇಜಿಸುವ ವಿವರಗಳು ದೊರಕುತ್ತವೆ. ಕರುಳು ಸಂಬಂಧಿತ ಗ್ಯಾಸ್ಟ್ರಿಕ್‌ ಪರಿಹಾರಗಳಿಗೆ ಉತ್ತಮ ಫಲ. ಬಿಲ್ವದ ಬೇರು ಆಯುರ್ವೇದದ ದಶಮೂಲ ಎನ್ನುವ ಹತ್ತು ಬೇರುಗಳನ್ನೊಳಗೊಂಡ ಔಷಧದಲ್ಲಿ ಒಂದಾಗಿದೆ. ಇದನ್ನು ಜ್ವರ ಮುಂತಾದ ಪರಿಹಾರಗಳಲ್ಲಿ ಬಳಸಲಾಗುತ್ತದೆ. ಒಟ್ಟಾರೆ ಬಿಲ್ವದ ಫಲಗಳಲ್ಲಿ ಆರೋಗ್ಯಕಾರಿ ಅಂಶಗಳನ್ನು ಗಿಡವೆಲ್ಲಾ ಆವರಿಸುವಂತೆ ನಂಬಲಾಗಿದೆ.

ಎಲೆಗಳಲ್ಲಿ ಅದರ ದೈವತ್ವದ ಜೊತೆಗೆ ಮಾನದ ದೇಹತೂಕದ ಇಳಿಕೆಗೆ ಸಹಾಯವಾಗುವ ಗುಣಗಳನ್ನು ಕೆಲವು ಸಮುದಾಯಗಳು ಗುರುತಿಸಿವೆ. ಬಿಲ್ವ ಎಲೆಗಳಲ್ಲಿ ಇರುವ ಏಜಿಲಿನ್‌ (Aegeline) ಎನ್ನುವ ಈ ರಾಸಾಯನಿಕವು ದೇಹ ತೂಕದ ಇಳಿಕೆಗೆ ಸಹಾಯವಾಗುತ್ತದೆ ಎಂಬುದಾಗಿ ನಂಬಲಾಗಿದೆ. ಆದರೆ ಇದೇ ರಾಸಾಯನಿಕವೂ ಕೆಲವೊಬ್ಬರಲ್ಲಿ ಲಿವರ್‌ ಮೇಲೆ ಪರಿಣಾಮ ಬೀರುವುದನ್ನೂ ಕಂಡುಕೊಂಡು ಎಚ್ಚರಿಕೆಯನ್ನೂ ಕೆಲವು ಅಧ್ಯಯನಗಳು ಕೊಟ್ಟಿವೆ. ಆದ್ದರಿಂದ ಎಲೆಗಳನ್ನು ಬಳಸುವುದರ ಬಗೆಗೆ ಮಾಹಿತಿಯ ಕೊರತೆಗಳಿವೆ.

ಬಿಲ್ವ ಮರದ ವಿವಿಧ ಭಾಗಗಳಿಂದ ಹತ್ತಾರು ರಾಸಾಯನಿಕ ಸಂಯುಕ್ತಗಳನ್ನು ಗುರುತಿಸಲಾಗಿದೆ. ಇದರಲ್ಲಿ ವಿಶೇಷವಾಗಿ ಬಹುತೇಕ ಸಸ್ಯಗಳಲ್ಲಿಲ್ಲದ ಅಪರೂಪವಾದ ಕೇವಲ ಕಿತ್ತಳೆ ಮತ್ತು ಕೊತ್ತಂಬರಿ ಕುಟುಂಬಗಳಿಗೆ ಸೀಮಿತವಾದ ಫ್ಯುರಕ್ಯುಮರಿನ್‌ಗಳೆಂಬ (Furacoumarins) ಎಂಬ ಇಂಗಾಲಯುತವಾದ ಸಂಯುಕ್ತಗಳಿವೆ. ಆಲ-ಅತ್ತಿ, ಅಥವಾ ಲೆಗ್ಯೂಮ್‌ ಕುಟುಂಬಗಳಲ್ಲಿ ಕೆಲವೇ ಗಿಡಮರಗಳು ಇದೇ ಸಂಯುಕ್ತಗಳನ್ನು ಹೊಂದಿವೆ. ಇವು ವಿಷಯುಕ್ತವಾದ ರಾಸಾಯನಿಕಗಳು, ಅದರಲ್ಲೂ ನೇರವಾಗಿ ಫಂಗೈ ಅಥವಾ ಶಿಲೀಂದ್ರಗಳನ್ನು ನಿಯಂತ್ರಿಸಲು ಸಹಕಾರಿ. ಇದರಿಂದ ಸಂಸ್ಕರಿಸಲಾದ ಹಲವು ಔಷಧಗಳು ಲಿವರ್‌, ಕರುಳು ಮುಂತಾದವುಗಳಲ್ಲಿ ಸೋಂಕು ನಿವಾರಿಸುವ ಗುಣಗಳನ್ನು ಮಾನವ ಕುಲಕ್ಕೆ ಒದಗಿಸಿವೆ. ಇದಲ್ಲದೆ ಫ್ಲೆವಿನಾಡ್‌ಗಳು, ಉಪಯುಕ್ತವಾದ ತೈಲಗಳು, ಹಲವಾರು ಅಲ್ಕಲಾಯ್ಡ್‌ಗಳು ಈ ಮರದ ಉತ್ಪತ್ತಿ. ಈ ಹಿಂದೆ ಹೇಳಿದಂತೆ ಬಹಳ ಮುಖ್ಯವಾದ ಏಜಿಲಿನ್‌ (Aegeline)ಅನ್ನು ಬಿಲ್ವದ ಎಲೆಗಳಿಂದಲೇ ಸಂಸ್ಕರಿಸಿ ಔಷಧಗಳ ಸಂಯುಕ್ತಗಳಲ್ಲಿ ಬಳಸಲಾಗುತ್ತದೆ.

ಬಿಲ್ವ ಒಂದು ವೃಕ್ಷವಾಗಿ ಉಷ್ಣವಲಯ ಹಾಗೂ ಅರೆ ಉಷ್ಣ ವಲಯದ ಪ್ರದೇಶಗಳಲ್ಲೆಲ್ಲಾ ಸುಲಭವಾಗಿ ಬೆಳೆಯಬಲ್ಲುದು. ಹೆಚ್ಚೇನೂ ನೀರನ್ನೂ ಬೇಡುವುದಿಲ್ಲ. ಸುಲಭವಾಗಿ ಬೀಜಗಳಿಂದ ಸಸಿ ಬೆಳೆಸಿ, ನಾಟಿ ಮಾಡಬಹುದು. ಆದರೆ ಶೈವ ಸಂಸ್ಕೃತಿಯವರು ಇದನ್ನು ಬೆಳೆಸುವುದರ ಹಿಂದೆ ವಿಚಿತ್ರವಾದ ನಂಬಿಕೆ, ಆಚರಣೆಗಳನ್ನು ರೂಢಿಸಿಕೊಂಡಿದ್ದಾರೆ. ಹಲವರಂತೂ ಬೆಳೆಸುವ ಧೈರ್ಯವನ್ನೂ ಮಾಡುವುದಿಲ್ಲ. ಆಕಸ್ಮಾತ್‌ ಬೆಳೆದಿದ್ದರೆ ಅದನ್ನು ಕಾಪಾಡಿಕೊಳ್ಳಲು ಬೇಕಾದ ರಕ್ಷಣೆಯಂತೂ ಹೆದರಿಕೆಯಿಂದಲಾದರೂ ಸಿಗುವುದು ಗ್ಯಾರಂಟಿ. ನನ್ನೂರಿನ ನಮ್ಮ ಜಮೀನಿನ ಹತ್ತಿರ ರಸ್ತೆಯಲ್ಲೊಂದು ಮರವಿದೆ. ಅಲ್ಲಿನ ಸುತ್ತಮುತ್ತಲಿನ ರೈತರು ಅದಕ್ಕೆ ಕಟ್ಟೆ ಕಟ್ಟಿ, ಎಲ್ಲರೂ ಸೇರಿ ವರ್ಷಕ್ಕೊಮ್ಮೆ ಹಾಗೂ ವೈಯಕ್ತಿವಾಗಿ ಅವರವರ ಭಾವಕ್ಕೆ ತಕ್ಕಹಾಗೆ ಪೂಜೆ ಪುನಸ್ಕಾರಗಳನ್ನು ಮಾಡುತ್ತಾ ಅದನ್ನು ಅಲ್ಲಿ ತಮ್ಮನ್ನೆಲ್ಲಾ ಕಾಯುವ ದೈವವನ್ನಾಗಿಸಿದ್ದಾರೆ. ಹೀಗೆ ನಿಮಗೂ ಅಂತಹ ನಿಮ್ಮದೇ ಆದ ಸಂಗತಿಗಳನ್ನು ಈ ಮರದ ಕುರಿತು ಹೇಳಲು ಸಾಧ್ಯವಿರಬಹುದು.

ಭಾರತದಲ್ಲಂತೂ ಈ ಮರವು ನಾಲ್ಕೈದು ರಾಜ್ಯಗಳ ಹೊರತಾಗಿ ಎಲ್ಲಾ ರಾಜ್ಯಗಳಲ್ಲೂ ಇದೆ. ಜಮ್ಮು, ಕಾಶ್ಮೀರ, ಹಿಮಾಚಲ ಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ ರಾಜ್ಯಗಳಲ್ಲಿ ಮಾತ್ರ ಬಿಲ್ವ ಮರವಿಲ್ಲ. ಹಾಗಾಗಿ ಏನೂ ಬೆಳೆಯದಿದ್ದರೂ ಇದು ಬೆಳೆಯ ಬಲ್ಲದೆಂಬ ನಂಬಿಕೆ ಇದೆ. ಅದಕ್ಕೆ ಪೂರಕವಾಗಿ ಇದು ಮಣ್ಣಿನ ರಸಸಾರ (pH) 5ರಿಂದ 10 ರ ನಡುವೆ ಕೂಡ ಬೆಳೆಯಬಲ್ಲುದು ಎಂಬ ವೈಜ್ಞಾನಿಕ ವಿವರಣೆ ಲಭ್ಯವಿದೆ! (ವಿಶೇಷತೆ ಏನೂ ಎಂದರೆ ಕಾಫಿ ಗಿಡ -ಉದಾಹರಣೆಗೆ 4ರಿಂದ 5 ಅಥವಾ 5.5ರೊಳಗೆ ಮಾತ್ರವೇ ಬೆಳೆಯುತ್ತದೆ. 7ಅಥವಾ ಅದಕ್ಕಿಂತಾ ಹೆಚ್ಚು pH ಇರುವ ಮಣ್ಣಿನಲ್ಲಿ ಬೆಳೆಯುವುದಿಲ್ಲ. ಹಾಗೆ ಬಹು ಪಾಲು ಕೃಷಿಗೆ ಒಳಗಾಗಿಗುವ ಸಸ್ಯಗಳು pH 6ರಿಂದ 8ರೊಳಗೆ ಮಾತ್ರವೇ ಬೆಳೆಯುತ್ತವೆ). ಜೊತೆಗೆ ಉಷ್ಣವನ್ನೂ ಶೀತವನ್ನೂ ತಡೆದುಕೊಳ್ಳುವ ಶಕ್ತಿಯೂ ಅಷ್ಟೇ! ತೀರಾ ಶೀತದಲ್ಲೂ ಇರಬಲ್ಲದು, ಬಿಸಿಲಿನ ಬೇಗೆಯನ್ನೂ ತಡೆದುಕೊಳ್ಳಬಲ್ಲದು. ಅಚ್ಚರಿ ಎಂದರೆ ತಾಪಮಾನ 7–48°C ವರೆಗೂ ತಾಳಿಕೊಳ್ಳಬಲ್ಲದು! ಇಷ್ಟೆಲ್ಲಾ ಸಾಕಲ್ಲವೇ ದೈವತ್ವವನ್ನು ಆವಾಹಿಸಿ ಮಾನವ ಕುಲವು ಖುಷಿಗೊಂಡು ಮೂಗಿನ ಮೇಲೆ ಬೆರಳಿಟ್ಟು, ಅಥವಾ ಕೈ ಮುಗಿದು ಸುಮ್ಮನಾಗಲು! ಹಾಗಾಗಿ ಇದನ್ನು ಉರುವಲಾಗಿ ಯಾರೂ ಬಳಸುವುದಿಲ್ಲ. ಉರಿ ಹಚ್ಚಿದ್ದು ಗೊತ್ತಾದರೆ ಸಾಕು, ಖಂಡಿತಾ ಒಲೆಯಿಂದಲೂ ತೆಗೆದು ಹಾಕುವ ನಂಬಿಕೆಗಳಿವೆ. ಮರವನ್ನಂತೂ ಕಡಿದು ತರುವುದು ದೂರವೇ ಉಳಿಯಿತು.

ಕೊನೆಯ ಮಾತು: ನಮ್ಮ ರಾಜ್ಯದ ಶಿವಮೊಗ್ಗಾ ‌ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪದ ಹತ್ತಿರ ಬಳ್ಳಿಗಾವಿ ಎಂಬ ಸಣ್ಣ ಹಳ್ಳಿ ಇದೆ. ಅದು ಶರಣ ಕವಿ ಅಲ್ಲಮ ಪ್ರಭು ಹುಟ್ಟಿದ ಊರು. ಅಲ್ಲಿ ಅಲ್ಲಮನ ಗುರು ಅನಿಮಿಷದೇವ ಇದ್ದನೆಂಬ ನಂಬಿಕೆಯ ಗುಡಿಯೊಂದಿದೆ. ಅದು ಇರುವುದೇ ಬಿಲ್ವ ವನದಲ್ಲಿ ಎಕರೆಗಟ್ಟಲೆ ನೂರಾರು ಬಿಲ್ವ ಮರಗಳು ಅಲ್ಲಿವೆ.

ಬರಿ ಹೊಟ್ಟೆಗೆ ಅನ್ನ ಅಷ್ಟೇ ಅಲ್ಲಾ, ಮೈಗೆ ಮದ್ದು, ಬಿಸಿಲಿಗೆ ನೆರಳು- ಬರೀ ಮರದ ಚಾವಣಿಯ ನೆರಳಲ್ಲ, ಮನೆಯ ಕಟ್ಟಲು ನಾಟ, ಅಲ್ಲದೆ ಮಾನಸಿಕ ಸಮಾಧಾನಕ್ಕೆ ದೈವತ್ವಕ್ಕೇರಿಸುವ ನಂಬಿಕೆಗಳು, ಹಾಗೆಯೇ ನಮ್ಮನ್ನು ಅಂತ್ಯದ ಪಯಣದಲ್ಲಿ ಸಂಸ್ಕಾರ ಮಾಡುವಲ್ಲಿಯೂ ಕೊಡುವ ಸಹಕಾರ… ಹೀಗೆ ಬಯಸಿದ್ದನ್ನೆಲ್ಲಾ ಮಾಡಿ ಸಲಹುವ ಲೋಕ ಗಿಡ-ಮರಗಳದ್ದು! ಹೇಳಲು ಒಂದೆರಡು ಜೀವನ ಸಾಲವು..ಹಲವರ ಹಲವಾರು ಜೀವನಗಳಾದರೂ ಬೇಕು. ಇದರ ಸಣ್ಣ ಅನುಸಂಧಾನ.. ಈ ಸಸ್ಯಯಾನ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್

This Post Has 2 Comments

  1. Arunkumar h.n

    Thanku for information

  2. Bhuvaneswari

    Oh didnot know that fruits are edible….!! I remember, when we were young , my mother used fruits(ripened) which were fallen on ground for its pulp as hair conditioner after shigakai hair wash….
    Thanks for the informative post…

Leave a Reply