You are currently viewing ಹೂಬಿಡುವ ಸಸ್ಯವಿಕಾಸದ ಕಥೆಯನ್ನು ಹೇಳುವ ಸಂಪಿಗೆ – Magnolia champaca

ಹೂಬಿಡುವ ಸಸ್ಯವಿಕಾಸದ ಕಥೆಯನ್ನು ಹೇಳುವ ಸಂಪಿಗೆ – Magnolia champaca

ಭಾರತದ ಖ್ಯಾತ ಕವಿ ರವೀಂದ್ರನಾಥ ಟಾಗೋರ್ ಅವರ ಕವಿತೆಯೊಂದು ನೆನಪಾಗುತ್ತಿದೆ. ಅದರ ಹೆಸರೇ ಸಂಪಿಗೆ ಹೂ.. (The Champa Flower). ಕವಿತೆಯ ಸಾಲುಗಳು ಆರಂಭವಾಗುವುದೇ ಮಗುವೊಂದು ಅಮ್ಮನನ್ನು ಕೇಳುವ ಪ್ರಶ್ನೆಯಿಂದ! “ಅಮ್ಮ ನಾನೇನಾದರೂ ತಮಾಷೆಗೆ ಒಂದು ಸಂಪಿಗೆ ಹೂವಾಗಿ, ಎತ್ತರದ ಮರದ ತುದಿಯಲ್ಲಿ ಹೊಸ ಚಿಗುರಿನಲ್ಲಿ ಅರಳಿದರೆ ನಿನಗೆ ಗೊತ್ತಾಗುತ್ತಾ?” “ಆಗ, ನೀನು ಮಗು ಎಲ್ಲಿದ್ದೀಯಾ?” ಎಂದು ಕರೆಯುತ್ತೀಯಲ್ಲವೇ ಎನ್ನುತ್ತದೆ ಮಗು. ಮಗುವೊಂದು ದಟ್ಟವಾಗಿ ಎತ್ತರವಾಗಿ ಬೆಳೆದ ಸಂಪಿಗೆಯ ತುದಿಯಲ್ಲಿಯ ಹೂವಾಗಿ ಅಮ್ಮನಿಗೆ ಕಾಡುವ ಪ್ರಶ್ನೆಗಳಲ್ಲೂ ಅದರ ಎತ್ತರದ ಬೆರಗುಗಳ ಹಾಗೂ ಮುಗಿಲೆತ್ತರದ ಆ ಮರದ -ನೆರಳಿನಲ್ಲಿ ಅಮ್ಮನ ಕಾತುರಗಳ ಅದ್ಭುತಗಳು ತೆರೆದುಕೊಳ್ಳುತ್ತವೆ. ಸಸ್ಯಯಾನಕ್ಕಾಗಿ ಕುತೂಹಲದ ಹುಡುಕಾಟದ ಘಳಿಗೆಯಲ್ಲೇ ಆರಂಭದಿಂದಲೂ ಇದರ ಮೊದಲ ಓದುಗನಾಗಿ ಸ್ಪಂದಿಸುವ ಗೆಳೆಯ ಅಪ್ಪನಾಗಿದ್ದು ಸಂಪಿಗೆಯ ಮೂಗಿನ ರಾಜಕುಮಾರಿಯನ್ನು ಸ್ವಾಗತಿಸಿದ್ದಾರೆ. ಸಣ್ಣ ಅಳು ಹೊರತಾಗಿ ಇನ್ನೂ ದೀರ್ಘ ಮೌನ ಹಾಗೂ ನಿದ್ದೆಯಲ್ಲಿರುವ, ಬೆಳಕಿನ್ನೂ ತೆರೆದುಕೊಳ್ಳಬೇಕಿರುವ ಹಸುಗೂಸಿಗೆ ಮುಂದೆ ಎತ್ತರದ ಕನಸುಗಳು ಸಂಪಿಗೆಯ ಮರದಂತೆ ಬೆಳೆಯಲಿವೆ. ಆ ಪುಟ್ಟ ಕಂದನ ಕಾರಣದಿಂದ ರವೀಂದ್ರರ ಕವಿತೆಯ ಆರಂಭದಿಂದ ಸಂಪಿಗೆಯು ಸಸ್ಯಯಾನಕ್ಕೆ ಜೊತೆಯಾಯಿತು.

                ರವೀಂದ್ರರಂತೂ ಎಲ್ಲಾ ಮಕ್ಕಳ ಕನಸುಗಳನ್ನೂ-ಅಮ್ಮನ ಕಾತರಗಳನ್ನೂ ಅದ್ಭುತ ಕವಿತೆಯಲ್ಲಿ ಸಂಪಿಗೆಯ ಪರಿಮಳವಾಗಿಸಿ ಶಾಶ್ವತವಾಗಿಸಿದ್ದಾರೆ. ಬಾಲ್ಯದಲ್ಲಿ ನಾನು ಒಂದು-ಎರಡನೆಯ ತರಗತಿಯವರೆಗೂ ಶಿಕ್ಷಕಿಯಾಗಿದ್ದ ಅಮ್ಮನ ಜೊತೆಯಲ್ಲೇ ಪಕ್ಕದೂರಿನ ಶಾಲೆಗೆ ಹೋಗುತ್ತಿದ್ದೆ. ಮೂರನೆಯ ತರಗತಿಗೆ ನಮ್ಮೂರಿನ ಅಮ್ಮನಿಲ್ಲದ ಶಾಲೆಗೆ ಹೊಸತಾಗಿ ಸೇರಿದಾಗ ಕಟ್ಟಡದ ಒಳಗೇ ಇರುವ ಆಗಸದೆತ್ತರದ ಸಂಪಿಗೆಯ ಮರಗಳನ್ನು ಕಂಡು ಅಚ್ಚರಿಯಾಗಿದ್ದೆ. ಅವುಗಳು ಎಲ್ಲಾ ಮಕ್ಕಳ ಕನಸುಗಳನ್ನು ತನ್ನ ನೆರಳಲ್ಲೇ ಅರಳಿಸುವ ಮರಗಳಾಗಿದ್ದವು. ಮುಂದೆ ಐದು ವರ್ಷಗಳು ನಿರಂತರವಾಗಿ ದಿನವೂ ಸಂಪಿಗೆಯ ನೆರಳು ಹಾಗೂ ತಂಗಾಳಿಯ ಜೊತೆಗೇ ದಿನವೂ ಶಾಲೆಯಲ್ಲಿ ಕಳೆದದ್ದು ನೆನಪಾಗುತ್ತಿದೆ. ನನ್ನ ಶಾಲೆಯ ಕಟ್ಟಡ, ಹಿಂದೊಮ್ಮೆ ತಾಲ್ಲೂಕು ಕಛೇರಿ. ಹಳೆಯ ತಾಲ್ಲೂಕು ಕಛೇರಿಗಳನ್ನು ನೋಡಿದ್ದವರಿಗೆ ನೆನಪಾದೀತು. ತೊಟ್ಟಿ-ಮನೆಯ ತರಹ, ಕಟ್ಟಡದ ಮಧ್ಯದಲ್ಲಿ ಖಾಲಿ ಜಾಗವಿದ್ದು, ಸುತ್ತಲೂ ಕೋಣೆಗಳಿರುತ್ತವೆ. ನಮ್ಮ ಶಾಲೆಯ ಮಧ್ಯೆದಲ್ಲಿದ್ದ ಜಾಗದಲ್ಲಿ ಎತ್ತರವಾದ ಎರಡು ಸಂಪಿಗೆ ಮರಗಳೂ ಕಟ್ಟಡದ ಛಾವಣೆಯನ್ನು ಹಾದು ಮೇಲೆ ಆಗಸಕ್ಕೆ ತೆರೆದುಕೊಂಡಿದ್ದವು. ಕಟ್ಟಡಕ್ಕೆ ಸಂಪಿಗೆಯ ದಟ್ಟ ಹಸಿರಿನ ಛಾವಣೆಯು ಕಿರೀಟದಂತೆ ಕಾಣುತ್ತಿತ್ತು. ಸಾಮಾನ್ಯವಾಗಿ ಸಂಪಿಗೆ ಹೂಗಳು ಕೈಗೆಟುವಂತಿರದೆ ಎತ್ತರದಲ್ಲಿ ಅರಳಿರುವುದೇ ಹೆಚ್ಚು. ಕವಿ ರವೀಂದ್ರರ ಕವಿತೆಯ ಮಗುವೂ ಎತ್ತರದ ಹೂವಾಗಿಯೇ ಅಮ್ಮನ ಜೊತೆಗೆ ಸಂಭಾಷಣೆಗಿಳಿಯುತ್ತದೆ.  ಬಾಲ್ಯದ ಶಾಲಾರಂಭವನ್ನು ಅಮ್ಮನ ಜೊತೆಗೇ ಕಂಡ ನನಗೆ, ಮೊದಲ ಬಾರಿ ಅಮ್ಮನಿಲ್ಲದ ಶಾಲೆಗೆ ಬಂದಾಗ, ಸಂಪಿಗೆಯ ನೆರಳೇ ತಾಯ್ತನದ ಮಡಿಲನ್ನು ಕೊಟ್ಟಿತ್ತು.

                ಗೆಳೆಯನ ಹಸುಗೂಸು ಎತ್ತರದ ಕನಸುಗಳ ಬಿತ್ತಿದ ಸಂದರ್ಭದಲ್ಲಿ ಬಾಲ್ಯದಲ್ಲಿ ನನ್ನನ್ನೂ ಸೇರಿ, ಆಚಾರ್ಯ ರವೀಂದ್ರರ  ಕವಿತೆಯ ಮೂಲಕ ಎಲ್ಲ ಮುಗ್ಧ ಮಕ್ಕಳ ಎತ್ತರದ ಕನಸಿಗೆ ರೂಪಕವಾದ ಸಂಪಿಗೆಯು ಇಂದು ಯಾವ ಅತಿಶಯವೂ ಇಲ್ಲದಂತೆ ಸಸ್ಯಯಾನದ ಸಂಗಾತಿಯಾಗಿದೆ. ಸಂಪಿಗೆಯು ನೆನಪಾದ ಕೂಡಲೇ ನಾಡಿನ ವರನಟ ರಾಜಕುಮಾರರ ಧ್ವನಿಯ “ನಾಸಿಕವೂ ಸಂಪಿಗೆಯಂತೆ….” ಹಾಡಿನ ಸಾಲು ನೆನಪಾಗದೇ ಇರದು. ಜೊತೆಗೆ “ಸಂಪಿಗೆ ಮರದ ಹಸಿರೆಲೆಯ ನಡುವಿ”ನ ಕೋಗಿಲೆಯಂತಹಾ ಇಂಪಾದ ಧ್ವನಿ ಕೂಡ!  ಸಂಪಿಗೆ ಹೂವಿನ ಸೊಗಸಿರುವುದೇ ಎತ್ತರದ ಮರದ ತುದಿಯಲ್ಲಿ, ಹೂವು ಗೊಂಚಲಾಗಿರುವುದಿಲ್ಲ. ಒಂಟಿಯಾಗಿಯೇ.. -ಮುಖದಲ್ಲಿ ಮೂಗಿನ ಹಾಗೆ- ಇರುತ್ತವೆ. ಸಂಪಿಗೆಯು ಒಂಟಿಹೂ, ಆಗಸಕ್ಕೆ ತೆರೆದುಕೊಂಡ ಮೊಗ್ಗುಗಳು ಅರಳಿದಾಗ ಇಳಿ ಬಿದ್ದ ದಳಗಳು ನೆಲವನ್ನು ನೋಡುತ್ತವೆ. ಮಾಗಿದಾದ, ನೆಲಕ್ಕೆ ಬೀಳುತ್ತಲೂ ಸುತ್ತೆಲ್ಲಾ ಅಪಾರ ಪರಿಮಳವನ್ನು ಹರಡುತ್ತವೆ.

                ಸಂಪಿಗೆಯು ಇಂಗ್ಲೀಶಿನಲ್ಲಿ ಚಂಪಕವಾಗಿದೆ. ಮ್ಯಾಗ್ನೊಲಿಸಿಯೆ (Magnoliaceae) ಕುಟುಂಬದ ಅದೇ ಹೆಸರಿನ ಸಂಕುಲದ ಅತ್ಯಂತ ಜನಪ್ರಿಯವಾದ ಮರ. ಪರಿಮಳವನ್ನು ನೋಟದಲ್ಲೂ ಆಗಸದತ್ತೆರಕ್ಕೆ ಕೊಂಡೊಯ್ದ ಮರ. ಇದರ ವೈಜ್ಞಾನಿಕ ಹೆಸರು ಮ್ಯಾಗ್ನೊಲಿಯಾ ಚಂಪಕ (Magnolia champaca). ಸಸ್ಯ ಪ್ರಪಂಚದಲ್ಲಿ ಈ ಸಂಪಿಗೆಯ ಕುಟುಂಬಕ್ಕೆ ವಿಶೇಷ ಸ್ಥಾನವಿದೆ. ಪರಿಮಳದಲ್ಲೂ ಅದನ್ನು ಮೀರಿಸಿದ ಪುಷ್ಪವೊಂದಿಲ್ಲ. ಸಂಪಿಗೆಯನ್ನೂ ಜಾಯ್ ಪರ್ಫ್ಯೂಮ್ ಮರವೆಂದೇ ಕರೆಯುತ್ತಾರೆ. ಆದ್ದರಿಂದಲೇ ಅತ್ಯಂತ ಹೆಚ್ಚು ಬೆಲೆ ಬಾಳುವ ಪರಿಮಳವೊಂದರ ಹೆಸರು ಜಾಯ್ ಪರ್ಫ್ಯೂಮ್ (ಪರಿಮಳ) ಎಂದಿದೆ.  ಹಳದಿ, ಬಿಳಿ, ಬಣ್ಣವಲ್ಲದೆ ಕಂದು ಮಿಶ್ರಿತ ಹಳದಿಯಂತಹಾ ಕೆಂಡ ಸಂಪಿಗೆ ಹೂಗಳು ಸಾಮಾನ್ಯವಾಗಿವೆ.

                ಸಂಪಿಗೆಯು ಅಪ್ಪಟ ಭಾರತೀಯ ಮರ. ದಕ್ಷಿಣ ಚೀನಾದಲ್ಲೂ ಕಂಡುಬರುವುದಲ್ಲದೆ, ಕೊರಿಯಾ, ಇಂಡೋನೇಶಿಯಾ, ಶ್ರೀಲಂಕಾಗಳಲ್ಲೂ ಹೇರಳವಾಗಿವೆ. ಹಿಂದೂ ಧರ್ಮದ ಜೊತೆಗೆ ಬೌದ್ಧ ಧರ್ಮವನ್ನೂ ಸಂಪಿಯ ಹೂವುಗಳು ಅಲಂಕರಿಸಿವೆ. ಹಲವಾರು ದೇವಾಲಯಗಳಲ್ಲದೆ, ಬೌದ್ಧ ಸ್ತೂಪಗಳ, ಪಗೋಡಗಳ ಆಸುಪಾಸು ಸಂಪಿಗೆಯ ಮರಗಳ ನೆಲೆಯನ್ನಾಗಿಸಿವೆ. ಸಂಪಿಗೆಯ ಹೂವುಗಳು ಪರಿಮಳದಲ್ಲಿ ಭವ್ಯತೆಯನ್ನು ಹೊಂದಿರುವಂತೆ, ಅದರ ಹೂವಿನ ರಚನೆಯಲ್ಲೂ ವಿಶೇಷತೆಯನ್ನು ಹೊಂದಿವೆ. ಬಹು ಪಾಲು ಹೂವುಗಳ ದಳಗಳು, ಪುಷ್ಪಪಾತ್ರೆಯ ಎಸಳುಗಳು ತೊಟ್ಟಿನ ಮೇಲೆ ಸುತ್ತುವರೆದು ವೃತ್ತಾಕಾರವಾಗಿ ಜೋಡಿಸಿರುವಂತಿರುತ್ತವೆ. ಆದರೆ ಸಂಪಿಗೆಯ ಕುಟುಂಬದ ಎಲ್ಲಾ ಹೂವುಗಳೂ ಹಾಗಿರುವುದಿಲ್ಲ. ಇವುಗಳಲ್ಲಿ ದಳಗಳನ್ನಾಗಲಿ, ಪುಷ್ಪಪಾತ್ರೆಯ ಎಸಳುಗಳನ್ನಾಗಲಿ ವಿಭಾಗಿಸಿ ನೋಡಲಾಗುವುದಿಲ್ಲ. ಆದ್ದರಿಂದ ದಳಗಳು ಕೋಮಲವಾಗಿದ್ದೂ ಸ್ವಲ್ಪ ದಪ್ಪನಾಗಿರುತ್ತವೆ. ಹಾಗಾಗಿ ಅಷ್ಟು ಸುಲಭಕ್ಕೆ ಬಾಡುವುದಿಲ್ಲ. ಜೊತೆಗೆ ಇವುಗಳಲ್ಲಿ ಕೇಸರ (ಗಂಡು ಭಾಗ) ಹಾಗೂ ಶಲಾಕಾಗ್ರ (ಹೆಣ್ಣು ಭಾಗ)ಗಳೆರಡೂ ಸುತ್ತುವರೆದು ವೃತ್ತದಂತೆ ಅಂಟಿಕೊಂಡಿರುತ್ತವೆ. ಇಂತಹ ಹೂವಿನ ರಚನೆಯನ್ನು ಪಳೆಯುಳಿಕೆಗಳಲ್ಲಿ ಮಾತ್ರವೇ ಕಾಣಬಹುದಾಗಿದೆ. ಆದ್ದರಿಂದ ಸಂಪಿಗೆಯು ಹೂಬಿಡುವ ಸಸ್ಯಗಳ ಅತ್ಯಂತ ಹಳೆಯ ಹಾಗೂ ಹಿರಿಯ ಸದಸ್ಯನೆಂದು ನಂಬಲಾಗಿದೆ.

                ಸಾಕಷ್ಟು ಪರಾಗವನ್ನು ಸೃಜಿಸುವ ಗಂಡುಭಾಗಗಳು, ಸಣ್ಣ ತೊಟ್ಟನ್ನು ಹೊಂದಿರುತ್ತವೆ. ಬಹುಪಾಲು ಹೂವುಗಳಂತೆ ಗಂಡಿನಿಂದ ಸುತ್ತುವರೆದ ಹೆಣ್ಣಿನ ಭಾಗಗಳು ಸಂಪಿಗೆಯವಲ್ಲ. ಬದಲಿಗೆ ಇವು, ಉದ್ದವಾಗಿರುವ ಒಂದು ಭಾಗದಂತಿರುತ್ತವೆ. ಸಂಪಿಗೆ ಹೂವಿನ ದಳಗಳ ಮಧ್ಯದಲ್ಲಿ ಇವುಗಳನ್ನು ಕಾಣಬಹುದು. ಗಂಡು-ಹೆಣ್ಣು ಭಾಗಗಳಲ್ಲಿ ಹೆಣ್ಣಿನ ಭಾಗವೇ ಎದ್ದು ಕಾಣುವಂತಿದ್ದು ಹೂವಿಗೊಂದು ಸೌಂದರ್ಯವನ್ನು ಕೊಟ್ಟಿದೆ. ಒಂಟಿ ಹೂಗಳು ಮರದ ಕೊಂಬೆಗಳ ತುದಿಯಲ್ಲಿ ಎತ್ತರದಲ್ಲಿದ್ದು ಪ್ರತಿಯೊಂದು ತಮ್ಮನ್ನು ಮಾತ್ರವೇ ತಾವು ಬಿಂಬಿಸಿಕೊಳ್ಳುವಂತೆ ಕಾಣುತ್ತವೆ. ಪ್ರತೀ ಹೂವು ತಾನೊಬ್ಬಳೇ ಚೆಲುವೆ ಎಂದು ಸಿಂಗರಿಸಿಕೊಂಡ ಹೆಣ್ಣಂತೆ ಕಾಣುತ್ತಾ ಎತ್ತರದ ಛಾವಣೆಯಲ್ಲಿರುವುದೇ ಹೆಚ್ಚು. ಪ್ರತೀ ಹೂವೂ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಅಣಿಯಾಗಿರುವಂತೆ ಕಾಣುತ್ತದೆ. ಎತ್ತರದಲ್ಲಿ, ಒಂಟಿಯಾಗಿರುವುದರಿಂದ ಸುಲಭಕ್ಕೆ ಸಂಪಿಗೆಯ ಹೂವುಗಳನ್ನು ಮರದಿಂದ ಬಿಡಿಸುವುದು ಕಷ್ಟ. ಈ ಬಗೆಯ ಹೂವಿನ ರಚನೆಯನ್ನು ವಿಕಾಸದ ಆದಿಯ ಹೂವಿನ ರಚನೆಗಳ ಕಾಣಬಹುದಾಗಿದ್ದು, ಸಂಪಿಗೆಯು ಆದಿಕಾಲದ ಹೂಬಿಡುವ ಸಸ್ಯಗಳಲ್ಲೊಂದಾಗಿದೆ. ಆದ್ದರಿಂದ ಸಂಪಿಗೆಯ ಕುಟುಂಬದ ಸದಸ್ಯರನ್ನು ವಿವರಿಸುವ ಕಷ್ಟವನ್ನೂ ಇನ್ನೂ ಸಸ್ಯ ವಿಜ್ಞಾನಿಗಳು ಎದುರಿಸುತ್ತಿದ್ದಾರೆ.

                ಇದರ ಜೊತೆಯಲ್ಲೇ ಇದೇ ಕುಟುಂಬಕ್ಕೆ ವಿಶೇಷತೆಯೊಂದು ಇದೆ. ತಾವು ಗಮನಿಸಿರಬಹುದು ಕೆಲವೊಂದು ಕುಟುಂಬದ ಮನೆಯ ಸಂಬಂಧಿಗಳನ್ನು ಹೌದು! ಇವರು ಅವರ ಮನೆಯ ಸದಸ್ಯರೆಂದು ಕೆಲವೊಂದು ಸೂಕ್ಷ್ಮವಾದ ನೋಟದ ವಿವರಗಳಿಂದ ಹೇಳುತ್ತೇವಲ್ಲವೇ? ಸಂಪಿಗೆಯ ಕುಟುಂಬದ ಸದಸ್ಯರೂ ಹಾಗೆಯೇ! ಈ ಕುಟುಂಬದ ಎಲ್ಲ ಸಸ್ಯಗಳೂ ಒಂದಲ್ಲೊಂದು ಹೊರ ನೋಟವನ್ನು ಸಮೀಕರಿಸಿಕೊಂಡು ಸಂಬಂಧಿಕರಿರಬಹುದು ಎಂದು ಸಾಬೀತು ಪಡಿಸಬಹುದು. ಇದಕ್ಕೆ ಒಂದೇ ಬಗೆಯ ಹೊರ ನೋಟವನ್ನು ಹೊಂದಿದ (Monophyly) ಕುಟುಂಬ ಎನ್ನಲಾಗುತ್ತದೆ. ಇದರ ಜೊತೆಗೆ ಕೆಲವೊಂದು ಕುಟುಂಬಗಳಲ್ಲಿ ವಲಸೆ ಹೋಗಿ ನೆಲೆಯಾದವರ ಮಕ್ಕಳು ಕುಟುಂಬದ ಹಳೆಯ ತಲೆಮಾರಿನ ಸಂಬಂಧವೇ ಇಲ್ಲದಂತೆ ವರ್ತಿಸುವ ರೀತಿ-ರಿವಾಜುಗಳನ್ನೂ ಕಾಣುತ್ತೇವೆ ಅಲ್ಲವೇ? ಹಾಗೆಯೇ ಇದೇ ಕುಟುಂಬದ ಕೆಲವು ಸಸ್ಯಗಳು ವಿವಿಧ ನೆಲೆಗಳ ಆಕ್ರಮಿಸಿರುವುಗಳಲ್ಲಿಯೂ ಕಂಡುಬರುತ್ತವೆ. ಬೇರೆ ಬೇರೆ ಪ್ರದೇಶಗಳಲ್ಲಿ ಬೆಳೆದ ಇದೇ ಕುಟುಂಬದ ಸಸ್ಯಗಳು ವಿವಿಧ್ಯ ವರ್ತನೆಗಳನ್ನು ತೋರುತ್ತವೆ. ಇಂತಹಾ ವೈಚಿತ್ರ್ಯವಿರುವುದರಿಂದಲೇ ಮ್ಯಾಗ್ನೊಲಿಯೆಸಿಯೆ ಕುಟುಂಬವನ್ನು ಡಿ.ಎನ್.ಎ. ಬಳಸಿ ವಿಕಾಸದ ಕಥನವನ್ನು ಕಟ್ಟುವಲ್ಲಿ ವಿಜ್ಞಾನಿಗಳು ಕಷ್ಟ ಪಡುತ್ತಿದ್ದಾರೆ. ಕಾರಣವೇನೆಂದರೆ ಕೆಲವನ್ನು ಸಂಬಂಧಿಗಳು ಹೌದೆಂದು ಸಮಾಜ ಒಪ್ಪಿಕೊಂಡಾಗ, ಅವುಗಳ ಡಿ.ಎನ್.ಎ ಫಿಂಗರ್ ಪ್ರಿಂಟ್ ವ್ಯತ್ಯಾಸವಾದ ವಿವರಗಳನ್ನು ಕೊಡುವುದರಿಂದ ಆಗುವ ಅನುಮಾನಗಳಿಂದ ಹಳೆಯ ವಿವರಗಳಿಗೆ ತಾಳೆಯಾಗುವುದಿಲ್ಲ. ಕೆಲವೊಬ್ಬರು ವಿವರಗಳನ್ನು ಒಪ್ಪಲೂ ತಯಾರಿರುವುದಿಲ್ಲ. ಇವೆಲ್ಲವೂ ಸುಂದರವಾದ ಇಡೀ ವರ್ಷವೆಲ್ಲಾ ಹಸಿರಾಗಿ ನಳನಳಿಸುವ ಅಪಾರ ಪರಿಮಳದ ಹೂಬಿಡುವ ಸಸ್ಯವೊಂದರ ಕೌಟುಂಬಿಕ ಸಂಕಟದ ಸಂಗತಿಗಳು. ಸುಂದರ ಹಾಗೂ ಪರಿಮಳಯುಕ್ತವಾದ ಸಂಪಿಗೆಯ ಸಂಸಾರದಲ್ಲೇ ಸಂಕಟಗಳು ಎಂದ ಮೇಲೆ ನಮ್ಮ ಮನೆಯಲ್ಲಿ ಇರದೇನು, ಅನ್ನಿಸೀತಲ್ಲವೇ?

                ಹೂಬಿಡುವ ಸಸ್ಯಗಳ ವಿಕಾಸದ ಅಧ್ಯಯನದಲ್ಲಿ ಮ್ಯಾಗ್ನೊಲಿಯಾ ಕುಟುಂಬದ ಸಸ್ಯಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಹೂವಿನ ವಿಕಾಸದಲ್ಲಿ ಸಂಪಿಗೆಯ ಸಂಬಂಧಿ ಸಸ್ಯಗಳ ಹೂಗಳು ಕಟ್ಟಿ ಕೊಡುವ ಸಂಗತಿಗಳೂ ಹಾಗೂ ಆಸಕ್ತಿಯ ಪ್ರಶ್ನೆಗಳೂ ಸಸ್ಯವಿಜ್ಞಾನದಲ್ಲಿ ತುಂಬಾ ಜನಪ್ರಿಯವಾದವು. ತೀರಾ ಇತ್ತೀಚೆಗಿನವೆರಗೂ ಅಂದರೆ ಕೇವಲ 5 ವರ್ಷಗಳ ಹಿಂದೆಯಷ್ಟೇ ಎಲೆಯಿಂದ ಹೂವಿವವರೆಗೂ ಪಾಠಗಳನ್ನು ಕಲಿಸುವ ಮ್ಯಾಗ್ನೊಲಿಯಾ ಎನ್ನುವ ಶೀರ್ಷಿಕೆಯ ಸಂಶೋಧನಾ ಪ್ರಬಂಧವೂ ಚೀನಾ ದೇಶದ ಸಂಶೋಧಕರಿಂದ ಪ್ರಕಟವಾಗಿದೆ.  ಚೀನಿ ಸಂಸ್ಕೃತಿಯಲ್ಲಿ ಸಂಪಿಗೆಯ ಪ್ರಭಾವವು ಹೆಚ್ಚು ಎಂದು ಬೌದ್ಧ ಸ್ತೂಪ ಹಾಗೂ ಪಗೋಡಾಗಳಲ್ಲಿನ ಮರಗಳ ನೆನಪಿಸಿತ್ತಾ ಹೇಳಿದ್ದೆನಲ್ಲವೇ? ಚೀನಿ ಸಸ್ಯವಿಜ್ಞಾನ ಸಂಶೋಧಕರಿಗೂ ಅದು ಆಸಕ್ತಿಯನ್ನು ಉಳಿಸಿ, ಬೆಳೆಸುತ್ತಿದೆ. ಈ ಸಸ್ಯಯಾನಕ್ಕೆ ಸ್ಪೂರ್ತಿದಾಯಕರಾಗಿರುವ ಪ್ರೊ. ಬಿ.ಜಿ.ಎಲ್. ಸ್ವಾಮಿಯವರೂ ಸಹಾ ತಮ್ಮ ಗುರುಗಳಾದ ಇರ್ವಿನ್  ಬೈಲಿಯೈ ಅವರ ಜೊತೆಗೂಡಿ ಹೂಬಿಡುವ ಸಸ್ಯಗಳ ವಿಕಾಸದ ಸಂಗತಿಗಳನ್ನೂ ಇದೇ ಹಿನ್ನೆಲೆಯಲ್ಲಿ ಕೆಲವು ಮೂಲಭೂತ ಅಧ್ಯಯನಗಳನ್ನು ಕಳೆದ ಶತಮಾನದ 50ರ ದಶಕದಲ್ಲೇ ಮಾಡಿದ್ದರು.

                ತನ್ನ ಕುಟುಂಬದ ಸಂಕಟದ ಕಥನವೇನಾದರೂ ಆಗಲಿ, ಸಂಪಿಗೆಯು ತಾನು ಮಾತ್ರ ಮ್ಯಾಗ್ನೊಲಿಯೆಸಿಯೆ ಕುಟುಂಬದ ಅತ್ಯಂತ ಜನಪ್ರಿಯ ಸಸ್ಯವಾಗಿದೆ. ಜೊತೆಗೆ ಅಷ್ಟೇ ಚೆಲುವೆಯೂ ಕೂಡ. ಎಲೆಗಳ ಬಣ್ಣವೇ ವಿಶೇಷವಾದ ಹಸಿರು -ಸಂಪಿಗೆ ಮರದ ಹಸಿರೆಲೆ ನಡುವೆಯ ಇಂಪಾದ ಕೋಗಿಲೆಯ ನೆನಪಿಸುವ ಗೀತೆಯಿದೆ ಅಲ್ಲವೇ-. ಎಲೆಗಳು ಅಗಲವಾಗಿದ್ದು ಬೀಸುವ ಗಾಳಿಯಲ್ಲಿ ಪುಟ್ಟ ಗಾಳಿಪಟದಂತೆ ಅಲುಗಾಡುವ ನೋಟವನ್ನು ಕಟ್ಟಿಕೊಂಡು ನಿಂತಿರುತ್ತದೆ. ಎಲೆಗಳ ರಾಚನಿಕ ವಿನ್ಯಾಸವು ಸರಳವಾಗಿರುತ್ತದೆ. ದಟ್ಟವಾದ ಜೋಡಣೆಯಿಂದ ಎಲೆಗಳ ಛಾವಣೆಯು ರೆಂಬೆ-ಕೊಂಬೆಗಳನ್ನು ಆವರಿಸಿರುತ್ತದೆ.  ಎತ್ತರಕ್ಕೆ ಬೆಳೆದಂತೆಲ್ಲಾ ನೂರಾರು ಅಡಿಯಲ್ಲಿರುವ ಅದರ ಛಾವಣೆಯ ಹಾಸು ಸಾಕಷ್ಟು ದಟ್ಟವಾಗಿರುತ್ತದೆ. ಸಂಪಿಗೆ ಮರವು ಸುಮಾರು 100-150 ಅಡಿಗಳಷ್ಟು ಎತ್ತರಕ್ಕೆ ಬೆಳೆಯುತ್ತದೆ. ಅದರ ಬುಡದ ಕಾಂಡದ ದಪ್ಪ 1.5 ಮೀಟರ್ ವರೆಗೂ ಇರುವುದುಂಟು. ಮುಗಿಲೆತ್ತರದಲ್ಲಿ ಬಿಟ್ಟ ಹೂಗಳ ಪರಿಮಳ ಮಾತ್ರ ಮೂಗಿಗೆ ವರ್ಷದ ಮೂರ್ನಾಲ್ಕು ತಿಂಗಳು ಜೂನ್‍ ನಿಂದ ಸೆಪ್ಟೆಂಬರ್ ವರೆಗೂ ಬರುತ್ತದೆ.

                ಸಂಪಿಗೆಯ ಮರದ ಅಡಿಯಲ್ಲಿ ಬುದ್ಧನು ಜ್ಞಾನೋದಯಗೊಂಡನು ಎಂದೂ ನಂಬುವ ಬೌದ್ಧ ಕಥನಗಳಿವೆ. ಆದ್ದರಿಂದ ಬೌದ್ಧರಲ್ಲೂ ಸಂಪಿಗೆಯು ವಿಶೇಷ ಸ್ಥಾನವನ್ನು ಪಡೆದಿದೆ. ಹಿಂದೂ ಸಂಸ್ಕೃತಿಯಲ್ಲೂ ಪೂಜೆಗೆ ಹೂವುಗಳನ್ನು ಬಳಸಲಾಗುತ್ತದೆ. ಮಾಸಲು ಬಿಳಿಯ ಬಣ್ಣದಿಂದ ಕಡು ಕಿತ್ತಳೆಯ ಬಣ್ಣದವರೆಗೂ ವಿವಿಧ ಬಗೆಯ ಸಂಪಿಗೆಯ ತಳಿಗಳಿವೆ. ಕೆಂಡಸಂಪಿಗೆಯ ಬಣ್ಣ ಹಾಗೂ ಪರಿಮಳ ಎರಡೂ ಸಾಕಷ್ಟು ಕಡುವಾಗಿಯೇ ಇರುತ್ತವೆ. ಸಂಪಿಗೆಯ ಮರದ ರೆಂಬೆ ಕೊಂಬೆಗಳೂ ಸಾಕಷ್ಟು ದಪ್ಪವಾಗಿದ್ದು ಮರ-ಮುಟ್ಟುಗಳಿಗೂ ಯೋಗ್ಯವಾಗಿವೆ. ಅದರ ಹೃದಯ ಭಾಗದ ಮರವು ಕಡು-ಕಂದು ಬಣ್ಣದಿಂದಿದ್ದು, ವಿವಿಧ ಫರ್ನೀಚರ್ ಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. 

                ಸಂಪಿಗೆಯು ಪರಿಮಳದ ಜೊತೆಗೆ ಸಾಕಷ್ಟು ಔಷಧೀಯ ಗುಣಗಳನ್ನೂ ಹೊಂದಿದೆ. ಎಲೆಗಳ ಕಷಾಯವನ್ನು ಶಿಲೀಂದ್ರನಾಶಕವಾಗಿ ಹಾಗೂ ಬೀಜಗಳ ಕಷಾಯವನ್ನು ಬ್ಯಾಕ್ಟೀರಿಯನಾಶಕವಾಗಿ ಬಳಸಲಾಗುತ್ತದೆ. ಮಗುವಿನ ಹೆರಿಗೆಯ ನಂತರ ತಾಯಿಗೆ ಸಂಪಿಗೆಯ ತೊಗಟೆ ಮತ್ತು ಎಲೆಗಳ ಕಷಾಯವನ್ನು ತಯಾರಿಸಿ ಕುಡಿಯಲು ಕೊಡಲಾಗುತ್ತದೆ. ಆಯುರ್ವೇದದಲ್ಲೂ ತ್ರಿದೋಷದ ನಿವಾರಣೆಯಲ್ಲಿ ಬಳಕೆಯನ್ನು ದಾಖಲಿಸಲಾಗಿದೆ. ವಿಷಹಾರಿಯಾಗಿಯೂ, ಜಂತು ನಾಶಕವಾಗಿಯೂ ಹಾಗೂ ಪಚನಕ್ರಿಯೆಯ ಉದ್ದೀಪಿಸಲು ಬಳಸಲಾಗುತ್ತದೆ. ಹೂವುಗಳು ತಂಪುಕಾರಕಗಳು, ಉರಿಯನ್ನು ಶಮನಗೊಳಿಸುವ ಗುಣವನ್ನು ಹೊಂದಿವೆ. ಸಂಪಿಗೆಯ ಆಕರ್ಷಕವಾದ ಹಸಿರು ಎಲೆಗಳು, ಹೂವಿನ ಬಣ್ಣ ಹಾಗೂ ಪರಿಮಳ, ದಟ್ಟ ನೆರಳು ಒಟ್ಟಾಗಿ ಸಾಕಷ್ಟು ಕವಿಗಳನ್ನೂ, ಕಥೆಗಾರರನ್ನೂ ಪ್ರಭಾವಿಸಿವೆ. ಜನಪದ ಕಥನಗಳಲ್ಲೂ ಸಾಲು ಸಂಪಿಗೆಯ ನೆರಳಿನ ಸಂಗತಿಗಳು ಹೇರಳವಾಗಿವೆ. 

                ನನ್ನೂರಿನ ಶಾಲೆಯ ಒಳಗೇ ಇದ್ದ ಸಂಪಿಗೆಯ ಮರಗಳೂ ಈಗಿಲ್ಲ. ಅದರ ನೆರಳಲ್ಲಿ, ಅರಳಿದ್ದ ಸಾವಿರಾರು ಪ್ರತಿಭೆಗಳು ರಾಜ್ಯಾದ್ಯಂತ ಹರಡಿ ಪರಿಮಳವನ್ನು ಬೀರುತ್ತಿವೆ. ಕೆಲವು ಸಾಗರವನ್ನೂ ದಾಟಿ ನೆಲೆಯನ್ನೂ ಕಂಡುಕೊಂಡಿವೆ. ಮತ್ತೀಗ ಸಾಕಷ್ಟು ಕನಸುಗಳನ್ನು ಹೊಂದಿರುವ ಸಂಸ್ಥೆ  CPUSನ ಸದಸ್ಯರಲ್ಲೊಬ್ಬರ  ಹಸುಗೂಸು ನಮ್ಮ ಜೊತೆಯಾಗಿದೆ. ಸಂಪಿಗೆಯ ವಿಕಾಸದ ಆಶಯದಂತೆ, ಹೊಸ ಹೊಸ ಪ್ರಶ್ನೆಗಳನ್ನೂ ಕೇಳುವ ಮಗುವಿನ ಕುತೂಹಲದಂತೆ, ನಮ್ಮ ನಿಮ್ಮೆಲ್ಲರ ಕನಸುಗಳನ್ನು ಆಗಸದೆತ್ತರಕ್ಕೆ ಕೊಂಡೊಯ್ಯುವ ಪರಿಮಳಕ್ಕೆ ಈ ಸಸ್ಯಯಾನದ ಸಂಪಿಗೆಯು ನೆಪವಾಗಲಿ. 

ನಮಸ್ಕಾರ,

-ಚನ್ನೇಶ್

This Post Has 2 Comments

  1. ವೆಂಕಟೇಶ್

    Nice informative article. Prof. AKN Reddy ಮನೆ ಮುಂದೆ‌ ಎರಡು ಸಂಪಿಗೆ‌ ಮರವಿತ್ತು. ತುಂಬ ಉದ್ದ ಬೆಳೆದು, ಕರೆಂಟ್ ಕಂಬಕ್ಕೆ ತಾಗುತ್ತಿತ್ತು. ಅಪಘಾತ ತಪ್ಪಿಸಲು, ಅದನ್ನು ಕತ್ತರಿಸಲು ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಸುಮಾರು ಜನ ಬಂದು ಸಂಪಿಗೆ‌ ಮರ‌ ನೋಡಿ ನಾವು ಈ ಮರ‌ವನ್ನು ಕತ್ತರಿಸಲ್ಲ ಎಂದು ಹೇಳಿ ಹೊರಟುಹೋಗುತ್ತಿದ್ದರು.
    ಕಾರಣ ಕೇಳಿದಾಗ, ಸಂಪಿಗೆ ಮರ‌ ಕಡಿದರೆ, ಅವರ ವಂಶ ಅಲ್ಲಿಗೆ‌ ಸಮಾಪ್ತಿಯಾಗುತ್ತದೆ ಎಂದು ಜನ ಹೆದರುತ್ತಿದ್ದರು.

    1. CPUS

      ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

Leave a Reply