You are currently viewing ಹಬ್ಬಗಳ ಸಂಭ್ರಮಕ್ಕೆ ಮೆರುಗು ಕೊಡುವ ಸೇವಂತಿಗೆ : Chrysanthemum indicum

ಹಬ್ಬಗಳ ಸಂಭ್ರಮಕ್ಕೆ ಮೆರುಗು ಕೊಡುವ ಸೇವಂತಿಗೆ : Chrysanthemum indicum

“ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ, ತಾಯಿ ಮಡಿಲಿನಲಿ ಬೀಡು ಬಿಟ್ಟ ಮುದ್ದು ಕೋಳಿ” ಎನ್ನುವ ಹಾಡನ್ನು ಕೇಳಿರುತ್ತೀರಿ. 60ರ ದಶಕದ ಚಲನಚಿತ್ರದ ಈ ಗೀತೆಯಲ್ಲಿ ಮಕ್ಕಳು ಹಾಗೂ ಕೋಳಿಮರಿಗಳ ಕೋಮಲತೆಯನ್ನು ಸೇವಂತಿಗೆ, ಚೆಂಡು ಹೂವುಗಳಿಗೆ ಹೋಲಿಸಲಾಗಿದೆ. ಸೇವಂತಿಗೆ ಮತ್ತು ಚೆಂಡು ಹೂವುಗಳೆರಡೂ ಸಂಬಂಧಿಗಳೇ! ಆಷಾಢ ಕಳೆದು ಶ್ರಾವಣದ ಆರಂಭಕ್ಕೆಲ್ಲಾ ನಮ್ಮೆಲ್ಲರ ಬಹುಪಾಲು ದಿನಗಳು ಸೇವಂತಿಗೆ ಹೂವಿನಿಂದ ತುಂಬು ಸಂಭ್ರಮವು ಜೊತೆಯಾಗಿರುತ್ತವೆ. ಶ್ರಾವಣವು ಹಬ್ಬಗಳ ಮಾಸ. ನಮ್ಮ ಹೆಣ್ಣುಮಕ್ಕಳು ಮಂಗಳವಾರ, ಶುಕ್ರವಾರಗಳಲ್ಲಿ ಒಂದರ ಹಿಂದೊಂದರಂತೆ ಪೂಜೆಗಳಲ್ಲಿ ತೊಡಗಿ ಕೈಯ ಮಣಿಕಟ್ಟಿಗೆ ಸೇವಂತಿಗೆ ಹೂವನ್ನು ಗಡಿಯಾರದಂತೆ ಕಟ್ಟಿಕೊಂಡು ಜೊತೆಗೆ ಸಾಕಷ್ಟು ಸಿಂಗರಿಸಿ ಓಡಾಡುತ್ತಿರುತ್ತಾರೆ.  ಭಾರತೀಯ ಸಂಸ್ಕೃತಿಯಲ್ಲಿ ಸೇವಂತಿಗೆಯು ಅನೇಕ ಸಂಭ್ರಮಗಳಲ್ಲಿ ಜೊತೆಯಾಗಿದೆ. ಹಾಗೆ ನೋಡಿದರೆ ಜಾಗತಿಕವಾಗಿ ವಿವಿಧ ದೇಶಗಳಲ್ಲೂ ಸಾಂಸ್ಕೃತಿಕವಾಗಿ ಸೇವಂತಿಗೆಯು ಬಹು ಮುಖ್ಯವಾದ ಪಾತ್ರವನ್ನೇ ವಹಿಸಿದೆ. ವಿವಿಧ ಬಣ್ಣಗಳ ಸೇವಂತಿಗೆಯು ಇದ್ದರೂ, ತುಂಬಾ ಸಾಮಾನ್ಯವಾದ ಹಳದಿ ಅಥವಾ ಬಂಗಾರದ ಬಣ್ಣದ ಹೂವೇ ಹೆಚ್ಚು ಪರಿಚಿತ. ಇಂಗ್ಲೀಶಿನಲ್ಲಿ ಇದರ ಹೆಸರೂ ಕೂಡ ಅಂತಹದ್ದೇ ಅರ್ಥದಿಂದ ಕರೆಯಲಾಗಿದೆ. ಜೊತೆಗೆ ಅದೇ ಅದರ ಸಂಕುಲದ ಹೆಸರೂ ಕೂಡ. ಕ್ರೈಸಾಂತಮಮ್-( Chrysanthemum) ಪದವು ಪುರಾತನ ಗ್ರೀಕ್ ಭಾಷೆಯ ಬಂಗಾರ (ಕ್ರೈಸಾಸ್-  Chrysos ) ಮತ್ತು ಹೂವು (ಆಂತಮಂ- Anthemon) ಎಂಬ ಎರಡು ಪದಗಳಿಂದಾಗಿದೆ. ಕ್ರೈಸಾಂತಮಮ್ ಸಂಕುಲದಲ್ಲಿ ಅನೇಕ ಪ್ರಭೇದಗಳಿವೆ.  ಕ್ರೈಸಾಂತಮಮ್ ಸಂಕುಲವು ಹೂಬಿಡುವ ಸಸ್ಯ ಜಗತ್ತಿನ ಅತಿ ದೊಡ್ಡ ಕುಟುಂಬವಾದ ಅಸ್ಟೆರೇಸಿಯೆಗೆ ಸೇರಿದೆ. ಅಸ್ಟೆರೇಸಿಯೆ ಪದವೂ “ಸ್ಟಾರ್” ಪದದಿಂದ ವ್ಯುತ್ಪತ್ತಿಯಾಗಿದ್ದು, ಹೂವುಗಳು ನಕ್ಷತ್ರಗಳ ಹೋಲುವುದರಿಂದ ಹಾಗೆ ಹೆಸರಿಸಲಾಗಿದೆ. ಸೂರ್ಯಕಾಂತಿ, ಡೇರೆ, ಹುಚ್ಚೆಳ್ಳು, ಕುಸುಬೆ, ಚೆಂಡು ಹೂ ಮುಂತಾದ ಸಸ್ಯಗಳೆಲ್ಲವೂ ಇದೇ ಕುಟುಂಬದ ಸದಸ್ಯರು. ಸೂರ್ಯಕಾಂತಿ ಅಥವಾ ಸೇವಂತಿಗೆಯಂತೆಯೇ ನಕ್ಷತ್ರಾಕಾರದ ಹೂವಿನಲ್ಲಿ, ಮಧ್ಯೆ ಒಂದು ಪುಟ್ಟ ತಟ್ಟೆಯಂತಿದ್ದು, ಅದರ ಸುತ್ತಲೂ ಕಿರಣಗಳು ಚಿಮ್ಮಿದಂತೆ ಅರುಗಿನಲ್ಲಿ ದಳಗಳು ಸುತ್ತುವರೆದಿದ್ದ ಯಾವುದೇ ಗಿಡ ಕಂಡರೆ ಅದನ್ನು ಇದೇ ಕುಟುಂಬವಿರಬಹುದೆಂದು ಅನುಮಾನಿಸಬಹುದು. ಅಷ್ಟೊಂದು ಸಸ್ಯಗಳು ಇದೇ ಕುಟುಂಬದವು, ಸರಿ ಸುಮಾರು 32,910ಕ್ಕೂ ಹೆಚ್ಚು ಪ್ರಭೇದಗಳನ್ನು ಹೊಂದಿದೆ. ಹಾಗಾಗಿ ಸುಮ್ಮನೆ ಯಾವುದೋ ಬೀಳು ಭೂಮಿಯಲ್ಲಿ ಒಂದಲ್ಲಾ ಒಂದು ಪ್ರಭೇದವನ್ನು ಕಾಣಬಹುದಾಗಿದೆ.

            ಸೇವಂತಿಗೆಯ ಹೂವಿನಲ್ಲಿ ಒಂದು ವಿಶೇಷವಿದೆ. ಅದು ಒಂದು ಹೂವು ಅಲ್ಲ. ನೋಡಲು ಒಂದೇ ಹೂವಿನಂತೆ ಕಾಣುವ ಅದೊಂದು ನೂರಾರು ಹೂವುಗಳ ಸಮೂಹ. ಈ ಹೂವುಗಳ ಸಮೂಹವನ್ನು “ಹೆಡ್” ಅಥವಾ “ಕ್ಯಾಪಿಟುಲಮ್” ಎಂಬ ಹೆಸರಿನಿಂದಲೇ ಕರೆಯಲಾಗುತ್ತದೆ. ಇದರ ಹೂವುಗಳ ಗೊಂಚಲೆಲ್ಲವೂ ಒಂದೇ ಹೂವಿನಂತೆ ಗೋಚರಿಸುವುದೇ ಈ ಕುಟುಂಬದ ವಿಶೇಷ! ಹಾಗಾಗಿ ಅಸ್ಟೆರೇಸಿಯೆ ಕುಟುಂಬವನ್ನು ಈ ಮೊದಲು “ಕಾಂಪೋಸಿಟೆ” ಎಂದು ಕರೆಯಲಾಗುತ್ತಿತ್ತು.  ಒಂದೇ ಹೂವಿನಂತ ಕಂಡರೂ ಅದೊಂದು ಕಾಂಪೋಸಿಟ್ ಅಥವಾ ಸಮೂಹ ಎಂಬ ಅರ್ಥದಲ್ಲಿ ಹಾಗೆ ಕರೆಯಲಾಗುತ್ತಿತ್ತು.

Chrysanthemum indicum Linn flowers. Or Chrysanthemum morifolium Ramat flowers in plantation

            ಸೇವಂತಿಗೆ ಹೂವನ್ನು ಕೈಯಲ್ಲಿ ಹಿಡಿದು ಪರೀಕ್ಷಿಸಿದಾಗ ಹೂವಿನ ಕೇಂದ್ರ ಭಾಗವು ಸ್ವಲ್ಪ ಗಟ್ಟಿಯಾದ “ಡಿಸ್ಕ್” ಅಥವಾ “ತಟ್ಟೆ” ಯಂತೆ ಇರುವುದು ತಿಳಿಯುತ್ತದೆ. ಅದರ ಮೇಲೆ ಜೋಡಣೆಯಾಗಿರುವ ಪುಟ್ಟ ದಳಗಳಲ್ಲದೆ, ಆ ತಟ್ಟೆಯ ಸುತ್ತಲೂ ಹೊಂದಿಸಿ ಜೋಡಿಸಿದಂತಹಾ ಸ್ವಲ್ಪ ದೊಡ್ಡ ದಳಗಳೆಂದು ಎರಡು ವಿಧಗಳನ್ನು ಕಾಣಬಹುದು. ಕೆಲವು ತಳಿಗಳಲ್ಲಿ ಈ ಡಿಸ್ಕ್ ಮೇಲಿನ ಮತ್ತು ಸುತ್ತಲೂ ಇರುವ ದಳಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿರುವುದು ತಿಳಿಯುತ್ತದೆ. ಇದೀಗ ಮಾರುಕಟ್ಟೆಯಲ್ಲಿ ಕಂಡುಬರುವ ಅನೇಕ ಹೂವುಗಳಲ್ಲಿ ಇವೆಲ್ಲವೂ ಒಟ್ಟಾಗಿ ಒಂದೇ ಎಂಬಂತೆ ಕಾಣುವುದಾದರೂ ಸೂಕ್ಷ್ಮವಾಗಿ ನೋಡಿದಾಗ ವ್ಯತ್ಯಾಸ ತಿಳಿಯುತ್ತದೆ. ಇವು ನಿಜಕ್ಕೂ ಕೇವಲ ದಳಗಳಲ್ಲ! ಪ್ರತೀ ದಳವೂ ಒಂದೊಂದು ಹೂವು. ನೂರಾರು ಹೂವುಗಳೂ ದಳಗಳಂತಿದ್ದು ಎಲ್ಲವೂ ಅಚ್ಚುಕಟ್ಟಾಗಿ ಜೋಡಣೆಯಾಗಿ ಒಂದೇ ಹೂವಿನಂತೆ ಕಾಣುತ್ತದೆ.  ಕೆಲವು ತಳಿಗಳಲ್ಲಿ ಡಿಸ್ಕ್ ಮೇಲಿರುವ ಹಾಗೂ ಸುತ್ತಲೂ ಇರುವ ದಳಗಳಲ್ಲಿ ಒಂದಕ್ಕೊಂದು ತೀರಾ ಭಿನ್ನವಾಗಿರುತ್ತವೆ. ಹಾಗೆ ಕಾಣುವ ಹೂವುಗಳ ಡಿಸ್ಕ್ ಮೇಲಿನ ಮುರುಟಿಕೊಂಡಂತಹಾ ದಳಗಳು ಮಾತ್ರವೇ ನಿಜವಾದ ಹೂವುಗಳು. ಅವುಗಳು ಬೀಜಗಟ್ಟುತ್ತವೆ. ಡಿಸ್ಕ್ ಸುತ್ತಲಿನ ದಳಗಳು ಅಥವಾ ಹೂವುಗಳು ಬೀಜಗಟ್ಟುವುದಿಲ್ಲ. ಇದನ್ನು ಸೂರ್ಯಕಾಂತಿಯಲ್ಲಿ ತುಂಬಾ ಸುಲಭವಾಗಿ ಗುರುತಿಸಬಹುದು. ಸುತ್ತಲೂ ಇರುವ ದಳಗಳನ್ನು “ರೇ”(Ray)ಫ್ಲವರ್ ಎಂದೂ ಡಿಸ್ಕ್ ಮೇಲಿನ ದಳಗಳನ್ನು “ಡಿಸ್ಕ್”(Disc)ಪ್ಲವರ್ ಎಂದೂ ಕರೆಯುತ್ತಾರೆ.  ರೇ” (Ray) ಅಂದರೆ ಕಿರಣಗಳ ಹಾಗೆ ಚಿಮ್ಮುವಂತೆ ಇರುವುದರಿಂದ ಹಾಗೆ ಕರೆಯಲಾಗುತ್ತದೆ. ಬೀಜಕ್ಕಾಗಿ ಬೆಳೆಯುವ ಸೂರ್ಯಕಾಂತಿಯಂತಹಾ ಬೆಳೆಗಳಲ್ಲಿ ಈ “ರೇ” ಮತ್ತು “ಡಿಸ್ಕ್” ಹೂವುಗಳ ಬಗ್ಗೆ ಹೆಚ್ಚು ಕಾಳಜಿ. ಏಕೆಂದರೆ ಕಾಳು ಹೆಚ್ಚಾಗಿ ಸಿಗಲು “ಡಿಸ್ಕ್” (Disc) ಥವಾ ತಟ್ಟೆಯ ಮೇಲಿನ ಹೂವುಗಳು ಮುಖ್ಯವಾಗುತ್ತವೆ. ಸುತ್ತಲೂ ಇರುವ ರೇ-ದಳಗಳು ಪರಾಗಸ್ಪರ್ಶಕ್ಕೆ ದುಂಬಿಗಳ ಆಹ್ವಾನದ ಆಕರ್ಷಣೆಗೆ ಮುಖ್ಯವಾಗುತ್ತವೆ. ಸೇವಂತಿಗೆಯನ್ನು ಅಪ್ಪಟ ಅಲಂಕಾರಕ್ಕೆ ಬಳಸುವುದರಿಂದ ಈ “ರೇ” ಮತ್ತು “ಡಿಸ್ಕ್” ಗಳ ವ್ಯತ್ಯಾಸಗಳು ಮುಖ್ಯವಲ್ಲ. ಏನಿದ್ದರೂ ಹೂವಾಗಿದ್ದಾಗ ಎಷ್ಟು ಅಲಂಕಾರಿಕ ಎನ್ನುವುದೇ ಮುಖ್ಯವಾಗುತ್ತದೆ. ಹಾಗಾಗಿ ಮಾರುಕಟ್ಟೆಯಲ್ಲೀಗ ಸೇವಂತಿಗೆಯ ತುಂಬು ದಳದ ತಳಿಗಳೇ ಹೆಚ್ಚು ಪ್ರಚಲಿತವಾಗಿವೆ. ಆದರೂ ವಿವಿಧ ಬಣ್ಣದ ಹೂವುಗಳಲ್ಲಿ ಈ ದಳಗಳ ವ್ಯತ್ಯಾಸಗಳಿನ್ನೂ ಸುಲಭವಾಗಿ ಗುರುತಿಸಬಹುದು.

            ಇಷ್ಟೆಲ್ಲದರ ನಡುವೆಯೂ ಈ ಬಗೆಯ ಹೂವುಗಳ ಸಮೂಹವಾಗಿ ವಿಕಾಸಗೊಂಡು ಅದರೊಳಗೆ ಶಕ್ತಿಯನ್ನೂ ತುಂಬುವಂತಹಾ ಸಾಮರ್ಥ್ಯವನ್ನಿಟ್ಟುಕೊಂಡ ಪರಿ ಮಾತ್ರ ಅರ್ಥವಾಗಿಲ್ಲ. ಏಕೆಂದರೆ ನೋಡಲು ಒಂದೇ ಹೂವಿನಂತೆ, ಆದರೂ ನೂರಾರು ಹೂವುಗಳ ಸಮೂಹ! ಪುಟ್ಟ ಪುಟ್ಟ ಹೂವುಗಳೂ ಇಡೀ ಸಸ್ಯದ ಸಂತಾನಾಭಿವೃದ್ಧಿಯ ಜವಾಬ್ದಾರಿ ಹೊಂದಬೇಕು. ಅದಕ್ಕಾಗಿ ಪರಾಗಸ್ಪರ್ಶವಾಗಲು ದುಂಬಿಗಳ ಆಹ್ವಾನಿಸಬೇಕು. ಅದು ಯಶಸ್ವಿಯಾಗಲು ಸುಂದರವಾದ ಆಕೃತಿಯನ್ನು ವಿನ್ಯಾಸಗೊಳಿಸಬೇಕು. ಇಷ್ಟೆಲ್ಲರ ಮೇಲೂ ಒಂದು ವೇಳೆ ಪರಕೀಯ ಪರಾಗಸ್ಪರ್ಶವಾಗದೇ ಹೋದರೂ ಸಹಾ, ತನ್ನೊಳಗೇ ಇರುವ ಪರಾಗವು ತನ್ನೊಳಗಿನ ಅಂಡಾಶಯವನ್ನು ತಲುಪಿ ಜೀವಿಯನ್ನು ಉಳಿಸಬೇಕು. ಇದನ್ನೆಲ್ಲಾ ವಿಕಾಸದ ಚಿಂತನೆಯಾಗಿಸಿ ಸಾಧ್ಯವಾದಷ್ಟೂ ಕಾರ್ಯಸಾಧುವಾದ ರಚನೆಯನ್ನು ಹೂವು ಹೊಂದಿದೆ. ಇದೆಲ್ಲವೂ ಅತ್ಯಂತ ಸಂಕೀರ್ಣವಾದ ಹೂವುಗಳ ಸಮೂಹವಾದ ವಿಕಾಸವಾಗಿದ್ದು ನಿಸರ್ಗದ ಅತ್ಯದ್ಭುತಗಳಲ್ಲಿ ಒಂದು. ಇದನ್ನು ಬಹಷಃ ಸಾವಿರಾರು ಪ್ರಭೇದಗಳ ಹೂವುಗಳಲ್ಲಿಯೂ ವಿಕಾಸಗೊಳಿಸಿದ್ದರ ಜೀವಿಪರ ಆಶಯವೇ 32 ಸಾವಿರಕ್ಕೂ ಹೆಚ್ಚು ಪ್ರಭೇದಗಳ ಸಮೂಹವಾದ ಹೂವಿರುವ ಈ ಕುಟುಂಬದ ಸಸ್ಯಗಳು ಜಗತ್ತನ್ನಾವರಿಸಿವೆ.            

            ಇದೂ ಅಲ್ಲದೆ ಅದರ ಡಿಸ್ಕ್ ಮತ್ತು ರೇ ಹೂವುಗಳ ಜೋಡಣೆಯಲ್ಲಿಯೂ ಸಾಕಷ್ಟು ಸಂಕೀರ್ಣವಾದ ವಿವಿಧತೆಗಳಿವೆ. ಈ ವೈವಿಧ್ಯತೆಗೆ ಅನುಗುಣವಾಗಿ 13 ಬಗೆಯ ಹೂದಳಗಳ ಜೋಡಣೆಯ ಮಾದರಿಗಳನ್ನಾಗಿ ಅಮೆರಿಕಾದ ಸೇವಂತಿಗೆಯ ಸೊಸೈಟಿಯು ವಿಭಾಗಿಸಿದೆ. ಅವೆಲ್ಲವೂ ಆಕರ್ಷಕ ಜೋಡಣೆಗಳಾಗಿ ಅಲಂಕಾರಿಕವಾಗಿಯೇ ಇರುವಂತೆ ಲೆಕ್ಕವಿರದಷ್ಟು ತಳಿಗಳು ವಿಕಾಸಗೊಂಡಿವೆ. “ರಾಯಲ್ ತೋಟಗಾರಿಕಾ ಸಂಸ್ಥೆ”ಯ “ಗಾರ್ಡನ್ ಆಫ್ ಮೆರಿಟ್” ಪ್ರಶಸ್ತಿಯನ್ನು ಪಡೆದ ತಳಿಗಳೇ ಸುಮಾರು 130 ಇವೆ. ಇನ್ನು ಇತರೇ ದೇಶ ವಿದೇಶಗಳಲ್ಲಿ ಅನಂತಾನಂತ ತಳಿಗಳು ಇವೆ.

            ಸೇವಂತಿಗೆ ಕುಟುಂಬದ ಬಹು ಪಾಲು ಸಸ್ಯಗಳು ಪರಕೀಯ ಪರಾಗಸ್ಪರ್ಶದಿಂದ ಬೀಜಕಟ್ಟುವುದರಿಂದ ಇವುಗಳಲ್ಲಿ ತಳಿ ವೈವಿಧ್ಯವು ಅಪಾರವಾಗಿದೆ. ಒಂದು ಅಂದಾಜಿನಂತೆ ಜಗತ್ತಿನಾದ್ಯಂತ ಬೆಳೆಯಲಾಗುತ್ತಿರುವ ಸೇವಂತಿಗೆ ತಳಿಗಳ ಲೆಕ್ಕವೇ ಸಿಗದು, ಅಷ್ಟೊಂದು ತಳಿಗಳಿವೆಯಂತೆ. ಅಸ್ಟೆರೇಸಿಯೇ ಕುಟುಂಬವೇ ಸಾಕಷ್ಟು ಹರವಾದ ನೆಲೆಯನ್ನು ಹೊಂದಿದ್ದು, ಜತ್ತಿನಾದ್ಯಂತ ಹಲವು ನೆಲವನ್ನು ತವರನ್ನಾಗಿ ಹೊಂದಿವೆ. ಸೇವಂತಿಗೆಯು ಹಲವು ದೇಶಗಳಲ್ಲಿ ನೆಲೆಯನ್ನು ಕಂಡು ಅಲ್ಲಿನ ಇತಿಹಾಸದ ಸಾಂಸ್ಕೃತಿಕ ಭಾಗವಾಗಿದೆ. ಮೂಲತಃ ಏಶಿಯಾದ ತವರಿನದಾಗಿದ್ದರೂ ಚೀನಾದಲ್ಲಿ ಇದರ ಸಂಬಂಧಿಗಳು ಹೆಚ್ಚು. ಚೀನಾವು ಇದರ ವಿವಿಧತೆಯ ಕೇಂದ್ರ. ಜೊತೆಗೆ ಕ್ರಿ.ಪೂ.15ನೆಯ ಶತಮಾನದಿಂದಲೇ ಚೀನಾದಲ್ಲಿ ಇದು ಜನಪ್ರಿಯ ಹೂವಿನ ಬೆಳೆ. ಮುಂದೆ ಕ್ರಿ.ಶ. 8 ಮತ್ತು 12ನೆಯ ಶತಮಾನಗಳ ಮಧ್ಯೆದಲ್ಲಿ ಚೀನಾದಿಂದ ಹೊರಗೆ ಹಬ್ಬಿ ವಿವಿಧ ದೇಶಗಳಲ್ಲೂ ತನ್ನ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಸಾಧಿಸಿದೆ. ತಾನು ನೆಲಕಂಡ ಕಡೆಗಳಲ್ಲೆಲ್ಲಾ ತನ್ನ ಕೋಮಲತೆಯಿಂದ, ಅಲಂಕಾರಿಕ ಗುಣದಿಂದ ವೈವಿಧ್ಯಮಯ ಸಾಂಸ್ಕೃತಿಕ ಹಿರಿಮೆಯ ಮಾನವ ಕುಲದ ಸಂಗಾತಿಯಾಗಿದೆ. 

            ಭಾರತೀಯ ಸೇವಂತಿಗೆ ಎಂದೇ ಕರೆಯಲಾಗುವ ಸಸ್ಯವನ್ನು ಕ್ರೈಸಾಂತಮಮ್ ಇಂಡಿಕಂ (Chrysanthemum indicum)  ಎಂದು ವೈಜ್ಞಾನಿಕವಾಗಿ ಹೆಸರಿಸಲಾಗಿದೆ. ಈ ಪ್ರಭೇದವನ್ನು ಆಧರಿಸಿಯೇ ಪ್ರಸ್ತುತ ಸಂಕುಲದಲ್ಲಿರುವ ಎಲ್ಲಾ ಪ್ರಭೇದಗಳ ನಿರ್ಣಯವನ್ನೂ ಮಾಡಬೇಕೆಂಬ ತೀರ್ಪನ್ನು 1999ರ ಅಂತರರಾಷ್ಟ್ರೀಯ ಸಸ್ಯವಿಜ್ಞಾನ ಕಾಂಗ್ರೆಸ್ಸು ನೀಡಿದೆ. ಹಾಗಾಗಿ ನಮ್ಮಲ್ಲಿ ಕಾಣಬರುವ ಸಾಮಾನ್ಯವಾದ ಸೇವಂತಿಗೆಯು ಭಾರತೀಯ ಸೇವಂತಿಗೆ ಎಂದೂ ಜೊತೆಗೆ  ಕ್ರೈಸಾಂತಮಮ್ ಸಂಕುಲದ  ಎಲ್ಲಾ ಪ್ರಭೇದಗಳೂ ಕ್ರೈಸಾಂತಮಮ್ ಇಂಡಿಕಂ ವರ್ಣನೆಯನ್ನು ಹೋಲಲೇಬೇಕಿರುವುದು ಸರ್ವ ಸಮ್ಮತವಾಗಿದೆ. ಚೀನಾದಲ್ಲಿ ಅಪಾರ ವೈವಿಧ್ಯವಿದ್ದರೂ, ಜಪಾನಿನಲ್ಲಿ ಚಕ್ರಾಧಿಪತ್ಯವನ್ನೇ ಆಕ್ರಮಿಸಿದ್ದರೂ, ಯೂರೋಪಿನಲ್ಲಿ ಜನಪ್ರಿಯ ಅಲಂಕಾರಿಕ ಹೂವಾಗಿದ್ದರೂ, ಅಮೆರಿಕಾದಲ್ಲಿ ವಿಶಿಷ್ಟ ನೆಲೆಯನ್ನು ಹೊಂದಿದ್ದರೂ, ಎಲ್ಲವೂ ನಮ್ಮ “ಇಂಡಿಕಂ”ನ ಮೂಲ ಗುಣಗಳನ್ನು ಹೊಂದಿರಲೇಬೇಕಾದ ವೈಜ್ಞಾನಿಕ ಅನಿವಾರ್ಯತೆಯಾಗಿದೆ.       

            ಚೀನಾದಲ್ಲಿ 1630ರಲ್ಲಿಯೇ ಸೇವಂತಿಗೆಯ 500ಕ್ಕೂ ಹೆಚ್ಚು ತಳಿಗಳು ಪ್ರಚಲಿತವಾಗಿದ್ದವು. ಅಲ್ಲಿನ ಪಾರಂಪರಿಕ ಕಲೆಯಲ್ಲಿ “ನಾಲ್ಕು ಜಂಟಲ್‍ ಮನ್” ಎಂದೇ ಕರೆಯಲಾಗುವ ನಾಲ್ಕು ಹೂವುಗಳಲ್ಲಿ ಸೇವಂತಿಗೆಯೂ ಒಂದು. ಪ್ಲಮ್, ಆರ್ಕಿಡ್ ಮತ್ತು ಬೊಂಬು-ಬಿದಿರಿನ ಹೂವುಗಳು ಇತರೇ ಮೂರು ಹೂವುಗಳು. ಚೀನಾದಿಂದ ಹೊರ ದೇಶಗಳಿಗೆ ಪರಿಚಯಗೊಂಡು ನೆಲೆಕಂಡಲ್ಲೆಲ್ಲಾ ಸೇವಂತಿಗೆಯು ವಿಶೇಷತೆಯನ್ನು ಗಳಿಸುತ್ತಲೇ ಬೆಳೆದಿದೆ.  ಚೀನಾದ ಕಾವ್ಯಗಳಲ್ಲಿ ಸೇವಂತಿಗೆಯು ಸಹಸ್ರಾರು ಬಾರಿ ಅರಳಿದೆ. “ ಕರ್ಸ್ಆಫ್ ಗೋಲ್ಡನ್ ಫ್ಲವರ್” 2006ರಲ್ಲಿ ಬಿಡುಗಡೆಯಾದ ಸೇವಂತಿಗೆಯ ಹೂವಿನ ಹಿನ್ನೆಲೆಯ ಚಲನಚಿತ್ರ.  ಚಿತ್ರದಲ್ಲಿನ ಸೇವಂತಿಗೆಯ ತಾರಸಿಯನ್ನು ಕುರಿತ ಹಾಡು ಅತ್ಯಂತ ಜನಪ್ರಿಯವಾಗಿದೆ. ಇಡೀ ಚಲನಚಿತ್ರವು ಐತಿಹಾಸಿಕ ಮಹತ್ವಗಳನ್ನು ಒಳಗೊಂಡಿದ್ದು,  ಅನಾರೋಗ್ಯ ಪೀಡಿತ ರಾಜಮಾತೆಯೊಬ್ಬಳ ವಿಚಿತ್ರವಾದ ಸೇವಂತಿಗೆ ಪ್ರೀತಿಯನ್ನು ಒಳಗೊಂಡಿದೆ. ಚಲನಚಿತ್ರದ ಶೀರ್ಷಿಕೆಯು ಕವಿ, ಬಂಡಾಯಗಾರ ಹಾಗೂ ತಾಂಗ್ ರಾಜಮನೆತನದ ನಾಯಕರೂ ಆಗಿದ್ದ ಹಾಂಗ್ ಚೌ ಎಂಬುವರು ಸೇವಂತಿಗೆಯನ್ನು ಕುರಿತು ಬರೆದ ಕವನದ ಕೊನೆಯ ಸಾಲಿನಿಂದ ರೂಪಿತವಾಗಿದೆ.   ಸೇವಂತಿಗೆ ನಗರ ಎಂಬ ಅರ್ಥ ಇರುವ ಹಳೆಯ ಒಂದು ನಗರವೂ ಸಹಾ ಚೀನಾದಲ್ಲಿದೆ.

            ಸೇವಂತಿಗೆಯು ಕ್ರಿ.ಶ. 8ನೆಯ ಶತಮಾನದ ನಂತರ ಜಪಾನಿನಲ್ಲಿ ಪ್ರವೇಶ ಪಡೆದು ಮುಂದೆ ಅಲ್ಲಿನ ಜನಸಾಮಾನ್ಯರಿಂದ ಚಕ್ರಾಧಿಪತ್ಯವನ್ನೂ ಆಕ್ರಮಿಸಿದೆ. ಜಪಾನಿನ ಚಕ್ರಾಧಿಪತ್ಯದ ಮುದ್ರೆ ಕೂಡ “ಸೇವಂತಿಗೆ” ಮುದ್ರೆಯಾಗಿದೆ. ಅಲ್ಲಿನ ರಾಜ ಸಿಂಹಾಸನವನ್ನೂ ಕೂಡ “ಸೇವಂತಿಗೆ ಸಿಂಹಾಸನ” ಎಂದೇ ಕರೆಯಲಾಗುತ್ತದೆ. ಜಪಾನಿನಲ್ಲಿ ಸೇವಂತಿಗೆಯ ಅಪಾರವಾದ ಜನಪ್ರಿಯ ಪುಷ್ಪ. ಪ್ರತೀ ವರ್ಷದ ಒಂಭತ್ತನೆಯ ತಿಂಗಳ, ಒಂಭತ್ತನೆಯ ದಿನ, ಅಂದರೆ ಸೆಪ್ಟೆಂಬರ್ 9ರಂದು ಸೇವಂತಿಗೆ ದಿನವನ್ನಾಗಿ ಜಪಾನ್ ಆಚರಿಸುತ್ತದೆ. ಆ ದಿನ ದೇಶಾದ್ಯಂತ ಅನೇಕ ನಗರಗಳಲ್ಲಿ “ಸೇವಂತಿಗೆಯ ಪ್ರದರ್ಶನ”ಗಳು ನಡೆಯುತ್ತವೆ. ಕಿಕು ನಾ ಸೆಕು (Kiku no Sekku) ಎಂದು ಕರೆಯುವ ಸೇವಂತಿಗೆ ದಿನಾಚರಣೆಯು ಜಪಾನಿನ ಪ್ರಖ್ಯಾತ ಐದು ಪಾರಂಪರಿಕ ಹಬ್ಬಗಳಲ್ಲಿ ಒಂದು. ಸೇವಂತಿಗೆಯ ಹಬ್ಬಕ್ಕೇ ಸಹಸ್ರಾರು ವರ್ಷಗಳ ಇತಿಹಾಸವಿದ್ದು ಮೊಟ್ಟ ಮೊದಲು 10ನೆಯ ಶತಮಾನದಲ್ಲಿ ಆಳುತ್ತಿದ್ದ ರಾಜಾಧಿಪತ್ಯವು ಇದನ್ನು ಪ್ರಾರಂಭಿಸಿತು. ಇಂದಿಗೂ ಸೇವಂತಿಗೆ ಹಬ್ಬ ಮುಂದುವರೆದಿದ್ದು ಜಪಾನಿನ ಅತ್ಯಕರ್ಷಕ ಆಚರಣೆಗಳಲ್ಲೊಂದು. ಇಂದಿಗೂ ಸೇವಂತಿಗೆಯನ್ನು ಬೆಳೆಸುವುದು ಜಪಾನಿಯ ಅತ್ಯಂತ ಪ್ರೀತಿಯ ಹವ್ಯಾಸ. ಬೋನ್ಸಾಯ್ ಗಳಲ್ಲೂ ಸೇವಂತಿಗೆಯು ಇದ್ದು ವಿಶೇಷತೆಯನ್ನು ಹೆಚ್ಚಿಸಿದೆ.   

          ಆಸ್ಟ್ರೇಲಿಯಾದಲ್ಲಿ ಬಿಳಿಯ ಸೇವಂತಿಗೆಯನ್ನು “ತಾಯಂದಿರ” ಪ್ರೀತಿಯ ಸಂಕೇತವಾಗಿಸಲಾಗಿದೆ. ಅಲ್ಲಿನ ತಾಯಂದಿರ ದಿನಾಚರಣೆಯನ್ನು ಮೇ ತಿಂಗಳಲ್ಲಿ ಆಚರಿಸಲಾಗುತ್ತಿದ್ದು, ಅಂದು ಬಿಳಿಯ ಸೇವಂತಿಗೆಯನ್ನು ಮುಡಿದು ಸಂಭ್ರಮಿಸುತ್ತಾರೆ. ಆ ಮೂಲಕ ತಾಯಿಯ ಮಮತೆಗೆ ಗೌರವವನ್ನು ಕೊಡುತ್ತಾರೆ. ಅಂದು ಬಿಳಿಯ ಸೇವಂತಿಗೆಯು ಆಸ್ಟ್ರೇಲಿಯಾದ್ಯಂತ ಸಂಭ್ರಮವು ಮಮತೆಯ ಕುರುಹಾಗಿ ತೆರೆದುಕೊಳ್ಳುತ್ತದೆ.

            ಇರಾನಿನ ಜೊರಾಸ್ಟ್ರಿಯನ್ನರಲ್ಲಿ ಒಳಿತಿನ ಆಶೀರ್ವಾದವನ್ನು ಪಡೆಯುವ ಹೆಗ್ಗುರುತಾಗಿ “ಸೇವಂತಿಗೆ”ಯು ಜನಪ್ರಿಯವಾಗಿತ್ತು. ಸ್ತ್ರೀ ದೇವತೆಯೊಬ್ಬಳು ಆಶೀರ್ವಾದವನ್ನು ಕೊಡುವ ಅಧ್ಯಕ್ಷಿಣಿಯಾಗಿಸಿದ ಪರಂಪರೆಯು ಆ ಸಂಸ್ಕೃತಿಯ ಆಚರಣೆಯಲ್ಲಿದೆ.  

            ಸೇವಂತಿಗೆಯು 1798ರಲ್ಲಿ ಅಮೆರಿಕಾವನ್ನು ಪ್ರವೇಶಿಸಿತು. ಮುಂದೆ 1966ರ ವೇಳೆಗೆ ಚಿಕಾಗೋ ನಗರದ ಅಧಿಕೃತ ಪುಷ್ಪವಾಗಿ ಜಾರಿಗೆ ಬಂತು. ಹಾಗೇನೆ ಹಲವು ನಗರಗಳಿಗೂ, ಕೆಲವಾರು ಸಂಘ ಸಂಸ್ಥೆಗಳಿಗೂ ಅಮೆರಿಕಾದಲ್ಲಿ ಸೇವಂತಿಗೆಯನ್ನು ಅಧಿಕೃತ ಪುಷ್ಟವಾಗಿ ಜಾರಿಗೆ ಬಂದಿದೆ. ಅನೇಕಾನೇಕ ಆಚರಣೆಗಳ ಅಲಂಕಾರವನ್ನು ಸೇವಂತಿಗೆಯ ವಿವಿಧ ಬಣ್ಣದ ಹೂವುಗಳು ನಿರ್ವಹಿಸುತ್ತವೆ.

          ನಮ್ಮ ದೇಶದಲ್ಲಿ ಸೇವಂತಿಗೆಯು ಹಾರ, ಅಲಂಕಾರ, ತೋರಣಗಳಿಂದ ಎಲ್ಲಾ ಬಗೆಯ ಸಂದರ್ಭಗಳನ್ನೂ ಆವರಿಸಿದೆ. ವ್ರತಾಚರಣೆ, ಪೂಜೆಗಳು, ಮದುವೆ, ಮುಂಜಿ, ನಾಮಕರಣಗಳು, ಎಲ್ಲದರಲ್ಲೂ ದೀರ್ಘಾಯುಷ್ಯದ ಸಂಕೇತವಾಗಿ ಸೇವಂತಿಗೆಯು ಪ್ರಚಲಿತವಾಗಿದೆ. ಜೊತೆಗೆ ಸಂತೋಷ ಮತ್ತು ತೃಪ್ತಿಯ ರೂಪಕವಾಗಿಯೂ ಸೇವಂತಿಗೆಯು ಬಳಕೆಯಾಗಿದೆ. ಕಡೆಗೆ ಜೀವನದ ಮುಕ್ತಿಗೂ ಸೇವಂತಿಗೆಯ ಹೂವುಗಳು ಬಳಕೆಯಾಗಿ ಅಂತ್ಯಸಂಸ್ಕಾರವನ್ನೂ ಸುಂದರವಾಗಿಸಿವೆ. ಏಶಿಯಾದಲ್ಲಿ ಸೇವಂತಿಗೆಯು ಪ್ರೀತಿಪೂರ್ಣ ಜೀವನ, ನೆಮ್ಮದಿ ಮತ್ತು ಪುನರ್ಜನ್ಮದ ಸಂಕೇತವಾಗಿದೆ.  ಭಾರತೀಯರಲ್ಲಿ ಧಾರ್ಮಿಕ ನೆಲೆಯಲ್ಲಿ ಸೇವಂತಿಗೆಯ ಹೂವು ಹರಹನ್ನು ಗಳಿಸಿದಷ್ಟು ಮತ್ತಾವ ಹೂವೂ ಗಳಿಸಿಲ್ಲ ಎನ್ನಬಹುದು. ಅಷ್ಟು ಯಥೇಚ್ಚವಾಗಿ ಹುಟ್ಟಿನಿಂದ ಸಾವಿನವರೆಗೂ ಎಲ್ಲಾ ಧಾರ್ಮಿಕ ಆಚರಣೆಯಲ್ಲೂ ಸ್ಥಾನವನ್ನು ಪಡೆದಿದೆ. ಶ್ರಾವಣದಿಂದ ಸಂಕ್ರಾಂತಿಯವರೆಗೂ ಸೇವಂತಿಗೆಯ ಸಂಭ್ರಮವು ಭಾರತೀಯರನ್ನು ಆವರಿಸಿಕೊಳ್ಳುತ್ತದೆ.

            ಸೇವಂತಿಗೆಯನ್ನು ನವೆಂಬರ್ ತಿಂಗಳ ಹೂವನ್ನಾಗಿಸಲಾಗಿದೆ. ಜಗತ್ತಿನಾದ್ಯಂತ ಅದರ ವಿವಿಧ ಬಣ್ಣಗಳ ಹೂವುಗಳು ವಿವಿಧ ಅರ್ಥಗಳ ಸಂಕೇತಗಳನ್ನು ಮಾನವ ಕುಲದ ಜೀವನವಾಗಿಸಿವೆ. ಅಚ್ಚ ಬಿಳಿಯ ಸೇವಂತಿಗೆಯು ನಿಷ್ಠೆ ಮತ್ತು ಶ್ರದ್ಧಾಭರಿತ ಪ್ರೀತಿಯ ಸಂಕೇತವಾಗಿದ್ದರೆ, ಕೆಂಪು ಅಪ್ಪಟ ಪ್ರೀತಿಯ ಸಂಕೇತ. ಹಳದಿ ಬಣ್ಣದ ಹೂ ಜೀವನ ಪ್ರೀತಿ ಹಾಗೂ ದುಃಖಗಳೆರಡರ ಸಂಕೇತ. ಸಾಮಾನ್ಯವಾದ ಜನಪ್ರಿಯತೆಯಲ್ಲಿ ಸೇವಂತಿಗೆಯು ಸಂತಸ, ಪ್ರೀತಿ, ನೆಮ್ಮದಿ ಮತ್ತು ದೀರ್ಘಾಯುಷ್ಯದ ಪ್ರತಿನಿಧಿಯಾಗಿ ಅರಳಿದೆ. ಹೀಗೆ ಬಣ್ಣ ಬಣ್ಣದ ಕನಸುಗಳನ್ನು ಕೋಮಲವಾಗಿಸಿ ಹಂಚಿಕೊಳ್ಳಲು ಸೇವಂತಿಗೆಯು ಎಲ್ಲಾ ಸಂಸ್ಕೃತಿಗಳಲ್ಲೂ ಸ್ಥಾನವನ್ನು ಪಡೆದಿದೆ. 

            ಸೇವಂತಿಗೆಯು ಕೇವಲ ಆಕರ್ಷಣೆಗಳ ಮೆರುಗನ್ನು ಮಾತ್ರವೇ ಹಂಚುತ್ತಿಲ್ಲ. ಔಷಧ, ಪರಿಮಳ ತೈಲ, ಖಾದ್ಯ, ಕಷಾಯಗಳ ವಿವಿಧ ಉಪಯೋಗಗಳಲ್ಲದೆ, ಕೀಟನಿಯಂತ್ರಣದಲ್ಲೂ ಭಾಗಿಯಾಗಿದೆ. ದಳಗಳನ್ನು ಕಷಾಯವಾಗಿಸಿ ಸೇವಂತಿಗೆ ಚಹಾ ಮಾಡಿ ಕುಡಿಯುವುದು, ಚೀನಾ, ಕೊರಿಯಾ ಮತ್ತು ಕೆಲವು ಏಶಿಯಾದ ದೇಶಗಳಲ್ಲಿ ಬಳಕೆಯಲ್ಲಿದೆ. ಹೂವಿನ ಮತ್ತು ಗಿಡದ ವಿಶಿಷ್ಟ ಪರಿಮಳವನ್ನು ಕೆಲವು ಖಾದ್ಯಗಳಲ್ಲಿ ಪರಿಮಳವಾಗಿ -ನಾವು ವಿವಿಧ ಬಾತ್ ಗಳನ್ನು ಮಾಡಿದಂತೆ- ಬಳಸಲಾಗುತ್ತದೆ. ಕೆಲವೇ ಎಲೆಗಳನ್ನು ಪುದಿನಾದ ಎಲೆಗಳಂತೆ ಬಳಸಬಹುದು. ಇಂತಹ ಖಾದ್ಯಗಳು ಚೀನಾ, ಕೊರಿಯಾಗಳಲ್ಲಿ ಪ್ರಚಲಿತವಾಗಿವೆ. ಕೊರಿಯಾದಲ್ಲಿ ಒಂದು ಬಗೆಯ ಅಕ್ಕಿಯ ವೈನ್ ಸೇವಂತಿಗೆಯ ಪರಿಮಳದಲ್ಲಿ ತಯಾರಾಗುತ್ತದೆ. 

            ಇಡೀ ಹೂವನ್ನು ಪುಡಿಮಾಡಿ ಅದರಿಂದ ಸಂಸ್ಕರಿಸಿ ಪಡೆದ ಪೈರಿಥ್ರಿನ್ ಎಂಬ ರಾಸಾಯನಿಕವನ್ನು ಕೀಟ ನಿಯಂತ್ರಣದಲ್ಲಿ ಬಳಸಲಾಗುತ್ತದೆ. ಈ ಪೈರಿಥ್ರಿನ್ ರಾಸಾಯನಿಕವು ನರವ್ಯೂಹದ ಮೇಲೆ ಪರಿಣಾಮ ಬೀರುತ್ತದೆ. ನಮ್ಮನ್ನು ಕಚ್ಚಿ ಉಪದ್ರವಗೊಳಿಸುವ ಸೊಳ್ಳೆಯನ್ನೂ ಇದರಲ್ಲಿ ತಡೆಗಟ್ಟಲು ಸಾಧ್ಯವಿದೆ. ಈ ಪೈರಿಥ್ರಿನ್ ಗಳ ಸಂಶ್ಲೇಷಿತ ರೂಪಗಳಾದ ಪೈರಿಥ್ರಾಡ್ ಗಳು ಕೂಡಿಕೊಂಡು ಕೀಟ ನಿಯಂತ್ರಣದ ಉದ್ದಿಮೆಯಲ್ಲಿ ಸೇರಿದ್ದವು. ಇವುಗಳ ಪರಿಸರದ ಹಾನಿಯು ವಿಪರೀತ ಎಂದು ತಿಳಿದು ಬಳಕೆಯನ್ನು ನಿಯಂತ್ರಿಸಲಾಗಿದೆ. ನೇರವಾಗಿ ನೀರು ಸೇರಿದರೆ, ಮೀನು ಮತ್ತು ಮಕ್ಕಳ ಮೇಲೆ ವಿಪರೀತ ಹಾನಿ ಮತ್ತು ಸಾವು ತರುವ ಲಕ್ಷಣಗಳು ಹೆಚ್ಚಾದವು. ವಿವಿಧ ದುಂಬಿಗಳನ್ನು ಆಕರ್ಷಿಸಲೆಂದೇ ತನ್ನ ರೂಪ ಮತ್ತು ಪರಿಮಳವನ್ನು ಅತ್ಯಂತ ಸಂಕೀರ್ಣವಾದ ಸಮೂಹ ಪುಷ್ಪವಾಗಿ ಅರಳಿಸಿ ವಿಕಾಸಗೊಂಡ “ಸೇವಂತಿಗೆ”ಯು ತನ್ನೊಳಗೇ ವಿಷವನ್ನೂ ಇಟ್ಟುಕೊಂಡಿರುವ ತರ್ಕ ಮಾತ್ರ ಅಚ್ಚರಿಯಾದುದು. ನನ್ನ ವೈಯಕ್ತಿಕ ತಿಳಿವಿನಂತೆ, ಕೀಟಗಳ ಆಕರ್ಷಣೆಯಲ್ಲೇ ವೈಪರೀತ್ಯಕ್ಕೆ ಒಳಗಾಗಿ ತನ್ನ ಬದುಕಿಗೇ ಕುತ್ತು ಬರುವುದಾದರೆ ಮುಂಜಾಗ್ರತೆಯಾಗಿ ತನ್ನೊಳಗೇ ವಿಷವನ್ನೂ ಇಟ್ಟು “ಅತೀ ಕೀಟ” ಬಾಧೆಯಿಂದ ಉಳಿಯುವ ಹುನ್ನಾರವೇನಾದರೂ ಸೇವಂತಿಗೆಯಲ್ಲಿ ಅಡಗಿದ್ದಿರಬಹುದು. ಹೂಬಿಡುವ ಸಸ್ಯಗಳಲ್ಲೇ ಪರಕೀಯ ಪರಾಗಸ್ಪರ್ಶವಾಗಲೇ ಬೇಕಾದ ಅನಿವಾರ್ಯತೆಗಾಗಿ ಸುಂದರ ಸಮೂಹ ಪುಷ್ಪವಾದ ಇದು, ಒಂದು ವೇಳೆ ಹಾಗೆ ಆಗದೇ ಇದ್ದಾಗ ತನ್ನೊಳಗೇ ಸ್ವಕೀಯ ಪರಗಾಸ್ಪರ್ಶಕ್ಕೂ ವಿಶೇಷ ನರ್ತನದ ಜಾಣ್ಮೆಯನ್ನೂ ಇಟ್ಟುಕೊಂಡಿದೆ. ಆದಾಗ್ಯೂ ಕೀಟಗಳು ಹೆಚ್ಚಾಗಿ ಬದುಕುಳಿಯಲು ಕಷ್ಟವಾದರೆ ಇಂತಹ ಅಸ್ತ್ರವನ್ನೂ ಇಟ್ಟುಕೊಂಡು, ಇಷ್ಟೆಲ್ಲಾ ಜೀವನ ಪ್ರೀತಿಯನ್ನು ಸಂಪಾದಿಸಿರಬೇಕು.  

          ಶ್ರಾವಣ ಮಾಸದಲ್ಲೀಗ ಸೇವಂತಿಗೆಯ ಸಂಭ್ರಮ. ಅದರ ಜೀವನ ಪ್ರೀತಿಯ, ನೆಮ್ಮದಿಯ ಸಂಕೇತಗಳು ಕೇವಲ ರೂಪಕಗಳಾಗದೆ ಇಡೀ ಮಾನವ ಕುಲದ ಶಾಶ್ವತ ಅನುಭವಗಳಾಗಲಿ ಎಂದು ಆಶಿಸುತ್ತೇನೆ. ನಮಸ್ಕಾರ.

ಚನ್ನೇಶ್

Leave a Reply