You are currently viewing ಸೈನ್ಸ್ ಅಂಡ್ ಜಂಡರ್ – ಮಹಿಳೆಯರ ಬಗೆಗಿನ ಜೀವಿವಿಜ್ಞಾನ ಹಾಗೂ ಅದರ ಸಿದ್ಧಾಂತಗಳ ವಿಮರ್ಶೆ

ಸೈನ್ಸ್ ಅಂಡ್ ಜಂಡರ್ – ಮಹಿಳೆಯರ ಬಗೆಗಿನ ಜೀವಿವಿಜ್ಞಾನ ಹಾಗೂ ಅದರ ಸಿದ್ಧಾಂತಗಳ ವಿಮರ್ಶೆ

ಸೈನ್ಸ್ ಅಂಡ್ ಜಂಡರ್ ಪುಸ್ತಕವು ಮಹಿಳೆಯರ ಕೀಳರಿಮೆಯ ವಿವರವಾದ ಪುರಾಣವನ್ನು ಸೃಷ್ಟಿಸುವಲ್ಲಿ ವಿಜ್ಞಾನದ ಪಾತ್ರವನ್ನು ವಿವರಿಸುತ್ತದೆ. ಲೇಖಕಿ ರೂಥ್ ಬ್ಲೇರ್ (1923-1988) ಅವರು ವಿಜ್ಞಾನ ಕ್ಷೇತ್ರದಲ್ಲಡಗಿರುವ ಲಿಂಗತಾರತಮ್ಯದ ಬಗ್ಗೆ ಬರೆದಿರುವ ಮೊದಲ ಸ್ತ್ರೀಸಮಾನತಾವಾದಿಯಾಗಿದ್ದಾರೆ. ವೈದ್ಯೆಯಾಗಿ ವೃತ್ತಿಯ್ನನಾರಂಭಿಸಿದ ಈಕೆ ಪತಿಯೊಂದಿಗೆ ಬಡವರಿಗಾಗಿ ಕ್ಲಿನಿಕ್ ನಡೆಸಿದರು.

       ನಾಗರಿಕ ಹಕ್ಕುಗಳ ಪ್ರತಿಪಾದಕಿಯಾಗಿದ್ದ ಅವರು ದಿ ಹೌಸ್ ಆಫ್ ಯುಎನ್-ಅಮೆರಿಕ್ ಆಕ್ಟಿವಿಸ್ಟ್ ಕಮಿಟಿಯಲ್ಲಿ (HUAAC) ಕೆಲಸಮಯ ಕಾರ್ಯನಿರ್ವಹಿಸಿದ್ದರು. ಅವರ ಅಸಹಕಾರ ವ್ಯಕ್ತಿತ್ವದಿಂದ ಅವರನ್ನು HUAAC ಕಪ್ಪುಪಟ್ಟಿಗೆ ಸೇರಿಸಲಾಯಿತು. ಅದರಿಂದಾಗಿ ವೈದ್ಯರಾಗಿ ಮುಂದುವರೆಯುವ ಅವಕಾಶ ಕಳೆದುಕೊಂಡರು. ನಂತರ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದಲ್ಲಿ ನ್ಯೂರೋಫಿಸಿಯೋಲಾಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡು ವಿಸ್ಕಾನ್ಸಿನ್- ಮ್ಯಾಡಿಸನ್ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕಾರ್ಯಕ್ರಮ ವಿಭಾಗದಲ್ಲಿ ನ್ಯೂರೋಫಿಸಿಯಾಲಜಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ಸಸ್ತನಿಗಳ ಹೈಪೋಥ್ಯಾಲಮಸ್ ಕುರಿತು ವಿಶೇಷ ಅಧ್ಯಯನ ಮಾಡಿದ್ದು ತಮ್ಮ ಸಂಶೋಧನೆಗಳ ಬಗ್ಗೆ ಹಲವಾರು ವೈಜ್ಞಾನಿಕ ಲೇಖನಗಳು ಹಾಗೂ ಮೂರು ಮೋನೋಗ್ರಾಫ್‌ಗಳನ್ನು ಬರೆದಿದ್ದಾರೆ. ನಂತರದ ದಿನಗಳಲ್ಲಿ  ಸ್ತ್ರೀಸಮಾನತಾವಾದಿಯಾಗಿ ರೂಪಗೊಂಡರು. 

       1970ರಲ್ಲಿ ಬ್ಲೇರ್‌ರವರು ಜೀವಿವಿಜ್ಞಾನವು ಹೇಗೆ ಲಿಂಗ ಹಾಗೂ ಇತರ ಸಾಂಸ್ಕೃತಿಕ ಪಕ್ಷಪಾತಗಳಿಂದ ಬಾಧಿತವಾಗಿದೆ ಎಂದು ತಿಳಿದುಕೊಳ್ಳಲು ಆರಂಭಿಸಿ, ವಿಜ್ಞಾನದ ಸಿದ್ಧಾಂತಗಳನ್ನು ಹಾಗೂ ಅಭ್ಯಾಸಗಳನ್ನು ಮಹಿಳಾಪರ ದೃಷ್ಟಿಕೋನದಿಂದ ವಿಶ್ಲೇಷಿಸಲು ಪ್ರಾರಂಭಿಸಿದರು. 1960ರ ಕೊನೆಯಲ್ಲಿ ಆರಂಭವಾದ ಮಹಿಳಾ ಅಧ್ಯಯನ ಕಾರ್ಯಕ್ರಮಗಳು ವಿಭಿನ್ನತೆ ಹಾಗೂ ಆಳದ ವ್ಯಾಪ್ತಿಯಲ್ಲಿ ಅಳತೆಗೆ ಮೀರಿ ಬೆಳೆದಿವೆ. ಅದರಲ್ಲೂ ಕಲೆ, ಇತಿಹಾಸದ ವಿಭಾಗಗಳಲ್ಲಿ ಮಹಿಳಾ ದೃಷ್ಟಿಕೋನದ ಸಂಶೋಧನೆ ಹಾಗೂ ವಿಶ್ಲೇಷಣೆಗಳು ಹೆಚ್ಚಾಗಿವೆ. ಇವುಗಳಿಗೆ ಹೋಲಿಸಿದಲ್ಲಿ ವಿಜ್ಞಾನ ವಿಭಾಗದಲ್ಲಿ ಮಹಿಳಾ ದೃಷ್ಟಿಕೋನದ ವಿಶ್ಲೇಷಣೆಗಳು ನಗಣ್ಯ. ಈ ಪುಸ್ತಕ ಬಂದು ಸುಮಾರು ಮೂರು ದಶಕಗಳಾಗಿದ್ದರೂ, ಮಹಿಳಾ ಚಿಂತನೆ ಹೊಂದಿದ ಇಂತಹ ವಿಜ್ಞಾನ ವಿಮರ್ಶೆಗಳು ತುಂಬಾ ವಿರಳ.  

       ಇದಕ್ಕೆ ಇವ್ಲಿನ್ ಫಾಕ್ಸ್ ಕೆಲ್ಲರ್ (Evelyn Fox Keller) ಅವರು ಮೂರು ಕಾರಣಗಳನ್ನು ನೀಡುತ್ತಾರೆ. ಮೊದಲನೆಯದು ವಿಜ್ಞಾನವು ವಸ್ತುನಿಷ್ಠವಾಗಿದ್ದು, ಮೌಲ್ಯಯುತ ತಾರ್ಕಿಕ ಚರ್ಚೆಗೆ ಒಳಪಟ್ಟಿರುತ್ತದೆನ್ನುವ ವಿಜ್ಞಾನಿಗಳ ಹಾಗೂ ಜನಮಾನಸದಲ್ಲಿನ ದೃಢವಿಶ್ವಾಸ ವಿಜ್ಞಾನದ ಸಿದ್ಧಾಂತಗಳನ್ನು ಪ್ರಬಲ ಹಾಗೂ ಶಕ್ತಿಯುತವನ್ನಾಗಿಸಿದೆ. ಎರಡನೆಯದು, ವಿಜ್ಞಾನದ ಜ್ಞಾನವಿರುವ ಮಹಿಳೆಯರ ಕಡಿಮೆ ಸಂಖ್ಯೆ, ಅವರಲ್ಲಿ ಮಹಿಳಾಚಿಂತನೆಯ ಕೊರತೆ, ಈ ವಿರಳಾತಿ ವಿರಳರಲ್ಲಿ ವಿಜ್ಞಾನ ಹಾಗೂ ಲಿಂಗತ್ವದ ಬಗ್ಗೆ ಬರೆಯುವವರು ಮತ್ತೂ ವಿರಳವಾಗಿರುವುದು. ಮೂರನೆಯದಾಗಿ, ಬೇರೆ ಕ್ಷೇತ್ರಗಳಲ್ಲಿ ಪರಿಣಿತಿಯಿರುವ ಮಹಿಳಾ ಚಿಂತಕರಲ್ಲಿರುವ ವಿಜ್ಞಾನದಲ್ಲಿನ ಕಡಿಮೆ ತಿಳುವಳಿಕೆ. ಜೊತೆಗೆ, ವಿಜ್ಞಾನದ ಬಗ್ಗೆ ತಿಳಿದುಕೊಳ್ಳಲು ಅವರಿಗಿರುವ ಹೆದರಿಕೆ ಹಾಗೂ ಹಿಂಜರಿಕೆಗಳು ಅವರನ್ನು ಭೌದ್ಧಿಕ ಸಂವಾದಗಳಲ್ಲಿ ತೊಡಗಿಕೊಳ್ಳಲು ಬಿಡುತ್ತಿಲ್ಲ. ಹೀಗಾಗಿ ಮಹಿಳಾಚಿಂತಕರ ವೃತ್ತದಲ್ಲಿ ವಿಜ್ಞಾನದ ಬಗ್ಗೆ ತಿಳಿವಿರುವವರು, ಸಮರ್ಥವಾಗಿ ಬರೆಯುವಂಥವರು ಮಹಿಳಾಚಿಂತಕರ ನಡುವೆ ಉದ್ಭವಿಸುವ ಭಾಗಶಃ ಬೌದ್ಧಿಕ ಪ್ರತ್ಯೇಕತೆಯನ್ನುಭವಿಸುತ್ತಾರೆಂದು ಎಂದು ವಿಶ್ಲೇಷಿಸಿದ್ದಾರೆ. ಈ ಪುಸ್ತಕದಲ್ಲಿ ಲೇಖಕಿಯು ವಿಜ್ಞಾನ ಕೂಡ ಮಹಿಳೆಯರನ್ನು ಎರಡನೇ ದರ್ಜೆ ಪ್ರಜೆಯಾಗಿಸಲು ನೀಡಿರುವ ಕೊಡುಗೆಗಳನ್ನು ವಿಶ್ಲೇಷಿಸಲು ಪ್ರಯತ್ನಿಸಿದ್ದಾರೆ.

       ಮೊದಲ ಅಧ್ಯಾಯದಲ್ಲಿ ವಿಜ್ಞಾನ, ವಿಜ್ಞಾನಿಗಳು ಹಾಗೂ ಸಾಮಾನ್ಯ ವೈಜ್ಞಾನಿಕ ವಿಧಾನ, ನಿರ್ಧಿಷ್ಠ ಇತಿಹಾಸ ಹಾಗೂ ಸಾಂಸ್ಕೃತಿಕ ಸನ್ನಿವೇಶಗಳು, ಪುಸ್ತಕದಲ್ಲಿರುವ ಮುಖ್ಯವಿಷಯಗಳನ್ನು ಪ್ರಸ್ತಾಪಿಸುತ್ತದೆ. ಸ್ವಾಯತ್ತತೆಗಾಗಿ ಹುಟ್ಟುವ ಅಶಾಂತಿ ಹಾಗೂ ಹೋರಾಟದ ಸಮಯಗಳಲ್ಲಿ ಹುಟ್ಟಿದ ಜೀವಿವಿಜ್ಞಾನದ ನಿರ್ಣಾಯಕ ಸಿದ್ಧಾಂತಗಳು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಅಸಮಾನತೆಗಳಿಗೆ ಪ್ರಬಲ ವಿವರಣೆ ನೀಡುತ್ತವೆ. 1970-80ರ ದಶಕಗಳಲ್ಲಿ ಮಾನವ ಸ್ವಭಾವಗಳು ಹಾಗೂ ಸಾಮರ್ಥ್ಯಗಳನ್ನು ವಿವರಿಸುವ ಸಿದ್ಧಾಂತಗಳು ವಿಶ್ಲೇಷಣೆಗಳನ್ನು ಜೀನ್‌ಗಳ ಮಟ್ಟಕ್ಕೆ ತಲುಪಿದ್ದು, ಅಲ್ಲಿ ಮತ್ತೊಮ್ಮೆ ಪ್ರಬಲ ಸಾಂಸ್ಕೃತಿಕ ಪ್ರಭಾವವಿರುವುದನ್ನು ವಿವರಿಸುತ್ತಾರೆ.

       ಎರಡನೇ ಅಧ್ಯಾಯದಲ್ಲಿ ವಿಲ್ಸೋನಿಯನ್ ಸಾಮಾಜಿಕ- ಜೀವಿವಿಜ್ಞಾನದ ಸಿದ್ಧಾಂತಗಳು, ವಿಧಾನಗಳು, ಹಾಗೂ ಪ್ರಮೇಯಗಳ ವಿವರವಾದ ವಿಮರ್ಶೆಯಿದೆ. ೧೯೭೫ರಲ್ಲಿ ಇ.ಓ. ವಿಲ್ಸನ್ ಅವರ ಸಾಮಾಜಿಕ- ಜೀವಿವಿಜ್ಞಾನ ಮನುಷ್ಯನ ಎಲ್ಲಾ ವರ್ತನೆಗಳು, ಸ್ವಭಾವಗಳು, ಸಾಮಾಜಿಕ ಸಂಬಂಧಗಳು ಜೈವಿಕವಾಗಿ, ಹಾಗೂ ವಿಕಸನೀಯವಾಗಿ ನಿರ್ಧಾರಿತವಾಗುತ್ತವೆ ಎಂದೂ, ಮಾನವ ಸ್ವಭಾವದ ಅಂತಿಮ ಶಿಸ್ತೆಂದು ಪರಿಚಯಿಸಿದ್ದಾರೆ. ವಿಜ್ಞಾನದಂತೆಯೇ ಸಾಮಾಜಿಕ ಜೀವಿವಿಜ್ಞಾನ ಕೂಡ ದೋಷಪೂರಿತವಾಗಿದ್ದು ಜೈವಿಕ-ಪರಿಸರದ ಜೈವಿಕ ನಿರ್ಣಾಯಕ ಸಿದ್ಧಾಂತಗಳೂ ಕೂಡ ಕೇವಲ ರಾಜಕೀಯ ಮತ್ತು ಸೈದ್ಧಾಂತಿಕ ಉದ್ದೇಶಗಳಿಗೆ ಮಾತ್ರ ಉಪಯುಕ್ತವೆಂದು ನಿರೂಪಿಸಲು ಪ್ರಯತ್ನಿಸಲಾಗಿದೆ. 

       ಮೂರನೇ ಅಧ್ಯಾಯದಲ್ಲಿ, ವಿಕಸನೀಯ, ಭ್ರೂಣವಿಜ್ಞಾನ ಹಾಗೂ ಪ್ರಸವಾನಂತರದ ಮಾನವನ ಮೆದುಳು ಬೆಳವಣಿಗೆಯನ್ನು ವಿವರಿಸುತ್ತದೆ. ಮೆದುಳಿನ ರಚನೆ ಹಾಗೂ ಕ್ರಿಯಾತ್ಮಕ ಬೆಳವಣಿಗೆಗೆ ಅಗತ್ಯವಾದ ವಿಷಯಗಳು ಆಯಾ ಪ್ರದೇಶದ ಸಂಸ್ಕೃತಿಯ ಪ್ರಭಾವಕ್ಕೊಳಗಾಗಿರುತ್ತದೆ. ಏಕೆಂದರೆ ಸಾಂಸ್ಕೃತಿಕ ವಿಷಯಗಳಿಂದ ಜೀವಿವಿಜ್ಞಾನವನ್ನು ಬೇರ್ಪಡಿಸುವುದು ಅಸಾಧ್ಯವಾಗಿರುವ ಸಂದರ್ಭದಲ್ಲಿ ಮಾನವನ ವರ್ತನೆಗಳಲ್ಲಿ ಹಾಗೂ ಸ್ವಭಾವಗಳ ಅಭಿವೃದ್ಧಿಯಲ್ಲಿ ಸಂಸ್ಕೃತಿಯ ಪ್ರಭಾವ ಒಳಗೂ ಹೊರಗೂ ಹಾಸುಹೊಕ್ಕಾಗಿದೆ. ಇದು ಮೆದುಳುಗಳ ಅಪಾರ ಸಾಮರ್ಥ್ಯಗಳಿಗೆ ಸೀಮಿತ ಚೌಕಟ್ಟು ಒದಗಿಸುತ್ತದೆ ಎಂದು ವಿಮರ್ಶಿಸಲಾಗಿದೆ.

       ನಾಲ್ಕನೇ ಅಧ್ಯಾಯವು ಪುರುಷ ಹಾಗೂ ಸ್ತ್ರೀಯರ ಹಾರ್ಮೋನುಗಳು ಹಾಗೂ ಅವರ ಗುಣಗಳನ್ನು ಲಿಂಗ ಬೇಧಗಳಿಗೆ ಸಮೀಕರಿಸಿ ಹಾರ್ಮೋನುಗಳ ಅಧ್ಯಯನದ ಕುರಿತದ್ದಾಗಿದೆ. ಇಲಿಗಳ ಮೇಲಿನ ಸಂಶೋಧನೆಯ ಆಧಾರದ ಮೇಲೆ ಮನುಷ್ಯರ ಲಿಂಗಭೇಧ ಗುಣಗಳಾದ ಆಕ್ರಮಣಶೀಲತೆ, ಪ್ರಾಬಲ್ಯ, ಬುದ್ಧಿವಂತಿಕೆ, ಲೈಂಗಿಕತೆ ಹಾಗೂ ಲಿಂಗ ಗುರುತಿಸುವಿಕೆಗೆ ಕಾರಣಗಳೆಂಬ ಪರಿಕಲ್ಪನಾ ಮಾದರಿಯನ್ನು ಹೇಗೆ ರೂಪಿಸಲಾಗಿದೆ ಎಂದು ವಿವರಿಸಿದ್ದಾರೆ. ಐದನೇ ಅಧ್ಯಾಯವು ಮಾನವನ ಸಾಂಸ್ಕೃತಿಕ ವಿಕಸನವನನ್ನು ಲಭ್ಯ ಪುರಾತತ್ವ ಶಾಸ್ತ್ರ, ಪ್ರೈಮೆಟಾಲಜಿ ಹಾಗೂ ಮಾನವ ಶಾಸ್ತ್ರಗಳ ಪುರಾವೆಗಳು ಮಾನವನು ಬೇಟೆಗಾರನಾಗಿ ಹೊಮ್ಮಿರುವ ಸಿದ್ಧಾಂತಗಳ ಆಧಾರದಲ್ಲಿ ಮಾನವ ವಿಕಸನದ ಸಮಗ್ರ ವಿವರಣೆಯನ್ನು ನೀಡಲು ಪ್ರಯತ್ನಿಸುತ್ತದೆ.

       ಆರನೇ ಅಧ್ಯಾಯ ಮಹಿಳಾ ಚಿಂತನೆಯ ಮಾನವ ಶಾಸ್ತ್ರವು ಸಾಂಪ್ರದಾಯಿಕ ಮಾನವಶಾಸ್ತçದ ಸಿದ್ಧಾಂತಗಳು ಹಾಗೂ ಸಾರ್ವತ್ರಿಕ ಊಹೆಗಳಿಗೆ ಸವಾಲು ನೀಡುತ್ತದೆ. ಪಾಶ್ಚಾತ್ಯ ಕೈಗಾರಿಕಾ ಸಮಾಜದಲ್ಲಿ ಮಹಿಳೆಯರ ಅಧೀನಸ್ಥಾನಕ್ಕೆ ಐತಿಹಾಸಿಕ ಕಾರಣಗಳು ಹಾಗೂ ಸನ್ನಿವೇಶಗಳನ್ನು, ಪುರುಪ್ರಧಾನ ಸಂಸ್ಕೃತಿಗೆ ಕಾರಣಗಳನ್ನು ಹುಡುಕುತ್ತದೆ. ಏಳನೆಯ ಅಧ್ಯಾಯದಲ್ಲಿ ಲೈಂಗಿಕತೆ ಹಾಗೂ ಪುರುಷಪ್ರಾಧಾನ್ಯತೆ, ಮಹಿಳೆಯರ ದಮನಕ್ಕೆ ವಿಜ್ಞಾನ ಹಾಗೂ ಔಷಧ ಕ್ಷೇತ್ರಗಳ ಪಾತ್ರ ವಿವರಿಸುತ್ತದೆ. ಮಹಿಳೆಯರನ್ನು ಎಲ್ಲಾ ರೀತಿಯಲ್ಲಿಯೂ ತುಳಿದಿಡುವ ಪುರುಷಪ್ರಧಾನ ಸಮಾಜದ ಸಿದ್ಧಾಂತಗಳನ್ನು ವಿವರಿಸುತ್ತದೆ. 

       ಕೊನೆಯ ಅಧ್ಯಾಯ ಪುರುಷಪ್ರಧಾನ ವ್ಯವಸ್ಥೆಯನ್ನು ರೂಪಿಸುವಲ್ಲಿ ವಿಜ್ಞಾನದ ಸೂಚ್ಯ ಪರಿಭಾಷೆಯ ವಸ್ತುನಿಷ್ಠತೆ, ಸತ್ಯ, ಹಾಗೂ ದ್ವಿರೂಪ ರಚನೆಯನ್ನು ವಿಮರ್ಶಿಸುತ್ತದೆ. ದ್ವಿರೂಪ ಕಲ್ಪನೆಯನ್ನು ಧಿಕ್ಕರಿಸುತ್ತಾ ಸ್ತ್ರೀಸಮಾನತಾವಾದಿ ವಿಜ್ಞಾನವನ್ನು ಪ್ರತಿಪಾದಿಸುತ್ತಾ, ನೈಸರ್ಗಿಕ ಹಾಗೂ ಸಾಮಾಜಿಕ ವಿದ್ಯಮಾನಗಳ ನಿರಂತರ ಬದಲಾವಣೆಯ ಸಂಕೀರ್ಣ ಸಂಭವನೀಯತೆಯನ್ನು ಅರ್ಥೈಸಿಕೊಂಡು ಮುಂದುವರೆಯುವ ಬಗ್ಗೆ ವಿವರಣೆ ನೀಡುತ್ತದೆ.  

ನಮಸ್ಕಾರ

                                                – ರಾಜರಾಜೇಶ್ವರಿ

Leave a Reply