ಇತ್ತೀಚೆಗೆ ಈ-ಪತ್ರಿಕೆಯೊಂದರಲ್ಲಿ ಲೇಖನವೊಂದನ್ನು ಓದುತ್ತಿದ್ದಾಗ ಹೀಗೊಂದು ಮಾಹಿತಿ ಸಿಕ್ಕಿತು. ಅದು 1983 ರಲ್ಲಿ ವಿಜ್ಞಾನಿ ಸುಬ್ರಹ್ಮಣ್ಯ ಚಂದ್ರಶೇಖರ್ ರವರಿಗೆ ನೊಬೆಲ್ ಪಾರಿತೋಷಕ ಪ್ರಕಟವಾದಾಗ ಅಮೇರಿಕದ ಪತ್ರಕರ್ತರು ಅವರನ್ನು “ನೊಬೆಲ್ ಪ್ರಶಸ್ತಿ ಬಂತಲ್ಲಾ ಇನ್ನು ನಿಮ್ಮ ಮುಂದಿನ ಆಸೆ ಏನು? ನಿಮ್ಮ ಮುಂದಿನ ಯೋಜನೆಗಳೇನು?” ಎಂದು ಪ್ರಶ್ನಿಸಿದಾಗ ಅವರು “I have to read Shakespeare between the lines” ಎಂದು ಉದ್ಗರಿಸಿದ್ದರಂತೆ. ಇದನ್ನು ಕೇಳಿ ಇಡೀ ಪತ್ರಕರ್ತ ಸಮೂಹ ಹಾಗೂ ಜಗತ್ತು ನಿಬ್ಬೆರಗಾಗುತ್ತದೆಯಂತೆ. ಅವರು ವಿಜ್ಞಾನದ ವಿಷಯದಲ್ಲಿ ತಮ್ಮ ಮುಂದಿನ ಯೋಜನೆಗಳ ರೂಪುರೇಷೆಯನ್ನೋ, ಕಾರ್ಯತಂತ್ರಗಳನ್ನೋ ತಿಳಿಸಬಹುದು ಎಂದು ನಿರೀಕ್ಷಿಸಿದವರಿಗೆ ಆಶ್ಚರ್ಯಕಾದಿತ್ತು. “ನನಗೆ ಬಹಳ ದಿನಗಳಿಂದಲೂ ಒಂದು ಇಚ್ಛೆ ಇದೆ. ನಾನು ಶೇಕ್ಸ್ ಪಿಯರ್ ನನ್ನು ಓದಬೇಕು. ಈಗ ಆರಾಮವಾಗಿ ಓದಬಲ್ಲೆ” ಎಂದ ಎಸ್. ಚಂದ್ರಶೇಖರ್. ಶೇಕ್ಸ್ ಪಿಯರ್ ನನ್ನು ಓದಿದರು. ಓದಿಯೇ ಓದಿದರು ಅಷ್ಟೇ ಅಲ್ಲ ಸರಿಯಾಗಿ ಆ ಓದನ್ನು ಅರಗಿಸಿಕೊಂಡರು. ಅಷ್ಟೂ ಅಲ್ಲದೇ ಶೇಕ್ಸ್ ಪಿಯರ್, ನ್ಯೂಟನ್ ಹಾಗೂ ಬೀಥೊವನ್ ಸೃಜನಶೀಲತೆಯ ಬಗ್ಗೆ ಬರೆದೂ ಬಿಟ್ಟರು. 1987ರಲ್ಲಿ ಅವರ ಈ ಕೃತಿ “Truth and Beauty: Aesthetics and Motivations in Science” ಪ್ರಕಟವಾಯಿತು.
ಈ ವಿಷಯ ನನಗೆ ಕುತೂಹಲ ಕೆರಳಿಸಿತು. ಕುತೂಹಲ ಹೆಚ್ಚಾಗಿ ಈ ಮಾಹಿತಿಯನ್ನು ಸ್ನೇಹಿತರಿಗೆ ರವಾನಿಸಿದೆ. ತಕ್ಷಣವೇ ಇಸ್ರೊ ಸಂಸ್ಥೆಯಲ್ಲಿ ಕೆಲಸಮಾಡುವ ಕಿರಿಯಮಿತ್ರ ಆಕಾಶ್ “ಸರ್ ಸಾಹಿತಿಗಳು, ಪತ್ರಕರ್ತರು, ವಿಜ್ಞಾನಿಗಳನ್ನು, ಅವರ ಹೇಳಿಕೆಗಳನ್ನು ತಮ್ಮದೇ ಆದ ರೀತಿಯಲ್ಲಿ ಉದಾಹರಿಸುತ್ತಾರೆ. ಈ ಪುಸ್ತಕ ನಮ್ಮ ಲೈಬ್ರರಿಯಲ್ಲಿದೆ. ನಾನು ಓದಿದ್ದೇನೆ. ನೀವು ಸಹ ಓದಿ. ಬೇರೆಯದೇ ಆದ ಆಯಾಮವಿದೆ” ಎಂದು ಹೇಳಿ ನನ್ನ ಕುತೂಹಲವನ್ನು ಇಮ್ಮಡಿಗೊಳಿಸಿದರು. ಮರುದಿನವೇ ಆ ಪುಸ್ತಕ ನನ್ನ ಮೇಜಿನ ಮೇಲಿತ್ತು.
ಆ ಕೃತಿಯನ್ನು ತೆರೆದು ಪರಿವಿಡಿ ಮತ್ತು ಪ್ರಸ್ತಾವನೆಯನ್ನು ನೋಡುತ್ತಿದ್ದ ಹಾಗೆ ಕೆಲವು ಸತ್ಯಗಳು ಗೋಚರಿಸಿದವು. ಸಾಮಾನ್ಯವಾಗಿ ನಮ್ಮ ಕೆಲವು ಸಾಹಿತಿಗಳು, ಪತ್ರಕರ್ತರು, ಭಾಷಣಕಾರರು ಯಾವುದೇ ಸಾಧಕನ ವಿಶೇಷತೆಯನ್ನು ಹೇಳುವ ಭರದಲ್ಲಿ ಅರ್ಧಂಬರ್ಧ ತಿಳುವಳಿಕೆಯಿಂದ ಮಾಹಿತಿಯನ್ನು ರವಾನಿಸುತ್ತಾರೆ. ಕೆಲವೊಮ್ಮೆ ಅರ್ಧಸತ್ಯವಾಗಿರುತ್ತದೆ. ಇಲ್ಲಾ ಘೋರವಾದ ಸುಳ್ಳಾಗಿ ಓದುಗರಿಗೆ ತಪ್ಪು ಮಾಹಿತಿ ರವಾನೆಯಾಗಿರುತ್ತದೆ. ಇದು ಕೃತಿಗೂ ಮತ್ತು ಕೃತಿಕಾರನಿಗೂ ಮಾಡುವ ಅವಮಾನ. ಇಂತಹ ತಪ್ಪುಗಳು ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ತಿಳಿಸುವಾಗ ಅಧಿಕವಾಗಿರುತ್ತದೆ. ಅದಕ್ಕೆ ಮುಖ್ಯಕಾರಣ ಅಪೂರ್ಣ ಮಾಹಿತಿ ಸಂಗ್ರಹಣೆ ಹಾಗೂ ತಿಳುವಳಿಕೆ ಮತ್ತು ಒಳಹೊಕ್ಕು ನೋಡದೆ ಮೇಲ್ಪದರದಲ್ಲಿ ತಿಳಿದ ವಿಷಯವನ್ನು ಭಾವನಾತ್ಮಕವಾಗಿ ವರ್ಣಿಸುವುದು.
ಎಸ್. ಚಂದ್ರಶೇಖರ್ ರವರು “I have to read Shakespeare between the lines” ಎಂದಿದ್ದು ಅವನ ಸಾಹಿತ್ಯವನ್ನಷ್ಟೇ ಓದಲಿಕ್ಕಲ್ಲ. ಓದಬೇಕು ಎಂದು ಸುಮ್ಮನೆ ಹೇಳಿರಲಿಲ್ಲ. ಓದಿದರು. ಅಷ್ಟೇ ಅಲ್ಲ ಸರಿಯಾಗಿ ಆ ಓದನ್ನು ಅರಗಿಸಿಕೊಂಡರು. ಅದರ ಫಲವೇ 1987ರಲ್ಲಿ Viking Penguin ರವರಿಂದ ಪ್ರಕಟವಾದ ಕೃತಿ “Truth and Beauty: Aesthetics and Motivations in Science”.
ಅದರ ಅಸಲಿ ವಿಷಯವೇನೆಂದರೆ ಮೊದಲನೆಯದಾಗಿ ಈ ಪುಸ್ತಕ ಪ್ರಕಟಗೊಂಡಿದ್ದು 1987 ರಲ್ಲಿ ಅಂದರೆ ಚಂದ್ರಶೇಖರ್ ರವರಿಗೆ ನೊಬೆಲ್ ಪಾರಿತೋಷಕ ಬಂದ ನಾಲ್ಕು ವರ್ಷಗಳ ನಂತರವಾದರೂ, ಅದರಲ್ಲಿರುವ ಲೇಖನಗಳು 1946 ರಿಂದ 1986 ರ ತನಕ ನಾಲ್ಕು ದಶಕಗಳ ಅವರ ಉಪನ್ಯಾಸಗಳ ಸಂಗ್ರಹ. ಒಟ್ಟು ಏಳು ಉಪನ್ಯಾಸಗಳ ಈ ಸಂಗ್ರಹದಲ್ಲಿ ಮೊದಲ ನಾಲ್ಕು ಉಪನ್ಯಾಸಗಳು ಸೌಂದರ್ಯಪ್ರಜ್ಞೆ ಮತ್ತು ವಿಜ್ಞಾನ ಅಧ್ಯಯನಕ್ಕೆ ಬೇಕಾದ ಪೂರಕ ಮನಸ್ಥಿತಿ ಹಾಗೂ ಉತ್ತೇಜನಗಳ ಬಗ್ಗೆ ಕೇಂದ್ರೀಕೃತವಾದರೆ, ಉಳಿದ ಮೂರು ಉಪನ್ಯಾಸಗಳು ಮೂರು ಶ್ರೇಷ್ಟ ವಿಜ್ಞಾನಿಗಳ ವೈಜ್ಞಾನಿಕ ಕೊಡುಗೆಗಳನ್ನು ವಿವರಿಸುತ್ತಾ ವಿಜ್ಞಾನದ ಸೌಂದರ್ಯಪ್ರಜ್ಞೆಯನ್ನು ನಮ್ಮ ಮನಸ್ಸಿಗೆ ದಾಟಿಸುತ್ತಾರೆ ಚಂದ್ರಶೇಖರ್ ರವರು.
ಅವರ ಈ ಉಪನ್ಯಾಸಗಳ ಶೀರ್ಷಿಕೆಗಳು:
- Scientist(1946)
- The pursuit of Science: Its Motivations(1985)
- Shakespeare, Newton, and Beethoven, or patterns of Creativity (1975)
- Beauty and the Quest for Beauty in Science (1979)
- Edward Arthur Milne: His Part in the Development of Modern Astrophysics(1979)
- Arthur Stanley Eddington:The Most Distinguished Astrophysicist of His Time ಮತ್ತು The Expositor and Exponent of General Relativity(1982)
- Karl Schwarzschild: The Aesthetic base of General Theory of Relativity(1986)
ಕುತೂಹಲಕ್ಕಾಗಿ ಮೂರನೆಯ ಉಪನ್ಯಾಸ “Shakespeare, Newton and Beethoven or Patterns of Creativity” ಯನ್ನು ಅವಲೋಕಿಸಿದರೆ, ಇದು 1975 ರಲ್ಲಿ ಬರೆದದ್ದು. ಅಂದರೆ ಅವರಿಗೆ ನೊಬೆಲ್ ಬಹುಮಾನ ಪ್ರಕಟವಾಗುವ ಮೊದಲೇ, ನಂತರದಲ್ಲಲ್ಲ. ಶೇಕ್ಸ್ ಪಿಯರ್, ನ್ಯೂಟನ್ ಹಾಗೂ ಬೀಥೊವನ್ ಸೃಜನಶೀಲತೆಯ ಬಗ್ಗೆ ಬರೆದದ್ದು. ಇದರಲ್ಲಿ ಅವರು ಒಟ್ಟಾರೆ ಸಾಧನೆಗೆ, ಶ್ರಮ ಮತ್ತು ಸೃಜನಶೀಲತೆ ಒಂದಕ್ಕೊಂದು ಹೇಗೆ ಪೂರಕವಾಗಿ ಜೊತೆಜೊತೆಯಲ್ಲಿ ಸಾಗುತ್ತದೆ ಮತ್ತು ಸಾಗಬೇಕೆಂಬುದನ್ನು ಶೇಕ್ಸ್ ಪಿಯರ್, ಬೀಥೊವನ್ ಹಾಗೂ ನ್ಯೂಟನ್ ರವರ ಸಾಧನೆ, ಶ್ರಮ ಮತ್ತು ಸೃಜನಶೀಲತೆಗಳ ಉದಾಹರಣೆಯೊಂದಿಗೆ ವಿವರಿಸುತ್ತಾರೆ. ಶೇಕ್ಸ್ ಪಿಯರ್ ನ ಸಾಹಿತ್ಯ, ಬೀಥೊವನ್ ರವರ ಕೃತಿಗಳು ಹಾಗೂ ನ್ಯೂಟನ್ ರವರ ಸಾಧನೆಗಳ ಜೊತೆಗೆ, ಅವಕ್ಕೆ ಪೂರಕವಾದ ಸಾಹಿತ್ಯವನ್ನು ಸಹ ಓದಿ, ಅವರ ಜೀವನಯಾನಗಳನ್ನು ವಿವರಿಸುತ್ತಲೇ ಅವರ ಕೃತಿಗಳನ್ನು ಅರ್ಥೈಸಿ ಸೃಜನಶೀಲತೆಯ ಮಾದರಿಗಳನ್ನು ಇಲ್ಲಿ ವಿಶ್ಲೇಷಿಸಿದ್ದಾರೆ. ವೃತ್ತಿಜೀವನದ ಪ್ರಗತಿಯಲ್ಲಿ ವೈಯಕ್ತಿಕ ನ್ಯೂನತೆಗಳ ನಡುವೆಯೂ ಅವರ ಪ್ರತಿಭೆಗಳು ವಿಕಾಸಗೊಂಡು ಮಹತ್ತರವಾದ ಸಾಧನೆಗೆ ಕಾರಣವಾದ ಶ್ರಮ ಮತ್ತು ಸೃಜನಶೀಲತೆಯ ಮಾದರಿಯನ್ನು ಚಂದ್ರಶೇಖರ ರವರು ಬಿಚ್ಚಿಡುತ್ತಾರೆ. ಹಾಗೂ ತಮ್ಮ ಸಾಧನೆ ನೊಬೆಲ್ ಪುರಸ್ಕಾರಕ್ಕಷ್ಟೇ ಸೀಮಿತವಾಗದೆ ಮತ್ತಷ್ಟು ಸಾಧನೆಗೆ ಶೇಕ್ಸ್ ಪಿಯರ್ ನ ಓದು ಪೂರಕವಾಗಲಿ ಎಂಬ ಆಶಯದಲ್ಲಿ “I have to read Shakespeare between the lines” ಎಂದರೆಂದು ನಾನು ಭಾವಿಸುತ್ತೇನೆ.
ನನ್ನನ್ನು ಸೆಳೆದ ಒಂದು ಅಧ್ಯಾಯದ ಹೊರಪದರವನ್ನಷ್ಟೇ ಇಲ್ಲಿ ಕೊಟ್ಟಿದ್ದೇನೆ. ಉಳಿದ ಶೀರ್ಷಿಕೆಗಳನ್ನಷ್ಟೇ ಗಮನಿಸಿ, ವಿಜ್ಞಾನದಲ್ಲಿನ ಸೌಂದರ್ಯವನ್ನು ಅನುಭವಿಸಲು ಚಂದ್ರಶೇಖರವರು ಒಂದು ಮಾರ್ಗವನ್ನು ತೋರಿಸಿದ್ದಾರೆಂಬುದು ತಿಳಿಯುತ್ತದೆ. ಚಂದ್ರಶೇಖರ್ ರವರ ಈ ಪುಸ್ತಕಕ್ಕೆ ಪೂರಕವಾದ ವಿಶ್ಲೇಷಣೆ, ವಿಮರ್ಶೆಗಳು ಅಂತರ್ಜಾಲದಲ್ಲಿ ಸಿಗುತ್ತವೆ. ಮುಖ್ಯವಾಗಿ ನಮ್ಮ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ( Indian Institute of Science, Theoretical Studies) ಎನ್. ಮುಕುಂದ ರವರು ಬರೆದಿರುವ ಲೇಖನವು (J. Genet. Vol.68 No.3 December 1989 pp-189-195 © Printed in India) ಮುಖ್ಯವಾಗಿದೆ.
ಇದರಿಂದ ನಿಮ್ಮ ಓದಿನ ಕುತೂಹಲ ಹೆಚ್ಚಾಗಿ ನೀವೂ ಸಹ “I have to read Shakespeare, Newton, Beethoven, Chandrashekar…..between the lines” ಎಂದು ಕೊಂಡರಷ್ಟೇ ………
ನಮಸ್ಕಾರ
ಪ್ರೊ. ವೆಂಕಟೇಶ ಜಿ