ಚಕ್ಕೆ ಅಥವಾ ದಾಲ್ಚಿನ್ನಿ, ಸಂಬಾರು ಪದಾರ್ಥಗಳಲ್ಲಿ ಕಾಳು ಮೆಣಸಿನ ನಂತರ ಅತೀ ಹೆಚ್ಚು ವಹಿವಾಟು ಹೊಂದಿರುವ ಬೆಳೆ. ಏಲಕ್ಕಿ, ಸಂಬಾರು ಪದಾರ್ಥಗಳ ರಾಣಿ ಎನಿಸಿದರೂ, ಅದರ ಬಳಕೆ ಜಗದ್ವ್ಯಾಪಿಯಲ್ಲ! ಆದರೆ ದಾಲ್ಚಿನ್ನಿಯದು ಹಾಗಲ್ಲ, ಇಡೀ ಜಗತ್ತನ್ನು ಆವರಿಸಿರುವ ಪರಿಮಳ. ಒಂದೊಂದು ನೆಲದಲ್ಲೂ ಒಂದೊಂದು ಬಗೆಯ ಸಸ್ಯದ ಚಕ್ಕೆ, ಒಂದೊಂದು ಕಡೆಯಲ್ಲಿ ದಾಲ್ಚಿನ್ನಿ (Cinnamon)ಯಾಗಿದೆ. ಆದರೆ ನಿಜವಾದ ದಾಲ್ಚಿನ್ನಿಯು ಶ್ರೀಲಂಕಾಗೆ ಸೀಮಿತವಾಗಿದೆ. ಸಿನ್ನಮೊಮಮ್ ವೆರಮ್ (Cinnamomum verum) ಅನ್ನು ಮಾತ್ರವೇ ನಿಜವಾದ ದಾಲ್ಚಿನ್ನಿ true cinnamon) ಅಥವಾ ಸಿಲೋನ್ ದಾಲ್ಚಿನ್ನಿ (Ceylon cinnamon) ಎಂದು ಕರೆಯಲಾಗುತ್ತದೆ. ಇದರ ಪ್ರಭೇದದ ಹೆಸರು ವೆರಮ್ (Verum) ಮೂಲತಃ ಗ್ರೀಕ್ ಮೂಲದ ಪದ ಅದರ ಅರ್ಥವೇ “ನಿಜವಾದ” ಎಂದಾಗಿದೆ.
ಇದಲ್ಲದೆ ಇನ್ನೂ ನಾಲ್ಕಾರು ಪ್ರಭೇದಗಳು ದಾಲ್ಚಿನ್ನಿಯಾಗಿ ಜಗತ್ತಿನಾಧ್ಯಂತ ಜನಪ್ರಿಯವಾಗಿವೆ. ಅವೆಲ್ಲವೂ ಸಿನ್ನಮೊಮಮ್ ಎಂಬ (Cinnamomum ) ಒಂದೇ ಸಂಕುಲಕ್ಕೆ ಸೇರಿವೆ. ಲಾರೇಸಿಯೇ (Lauraceae) ಎಂಬ ಕುಟುಂಬದ ಸಿನ್ನಮೊಮಮ್ (Cinnamomum) ಸಂಕುಲದ ಎಲ್ಲಾ 300 ಪ್ರಭೇದಗಳೂ ಪರಿಮಳಯುಕ್ತವಾಗಿದ್ದು ಕರ್ಪೂರದ ಮರ (Cinnamomum camphora) ಕೂಡ ಇದೇ ಸಂಕುಲದ್ದು. (ಈ ಹಿಂದೆ ಇದೇ ಸಸ್ಯಯಾನದಲ್ಲಿ ಬರೆದ ಕರ್ಪೂರದ ಸಂಕಥನವನ್ನು ಲಿಂಕ್ ನಲ್ಲಿ ಓದಬಹುದು) ಸಿನ್ನಮೊಮಮ್ (Cinnamomum) ಸಂಕುಲದ ನಾಲ್ಕಾರು ಮರಗಳು ದಾಲ್ಚಿನ್ನಿ ಎಂದು ಬಳಸಲಾಗುತ್ತಿದೆ ಎಂದಿದ್ದರೂ, ವಹಿವಾಟಿನಲ್ಲಿ ಅವುಗಳ ವಿಸ್ತಾರ ಹತ್ತಾರು ಪ್ರಭೇದಗಳಾಗಿದ್ದರೂ ಅಚ್ಚರಿಯೇನಲ್ಲ. ನಮಗೆಲ್ಲಾ ಮರದ ತೊಗಟೆಯೇ ದಾಲ್ಚಿನ್ನಿ ಎಂಬ ಅರಿವು ಮಾತ್ರವೇ ಸಹಜವಾಗಿದೆ, ಅಲ್ಲವೇ? ನಿಜಕ್ಕೂ ತೊಗಟೆಯ ಒಳಗಿನ ಚೌಬೀನೆ (ಒಳಮರ)ವೇ ಜಾಗತಿಕವಾಗಿ ಅತ್ಯಂತ ಬೇಡಿಕೆಯಲ್ಲಿರುವ ಚಕ್ಕೆ! ದಾಲ್ಚಿನ್ನಿ..! ಹೊರಗಿನ ತೊಗಟೆಯೂ ಪರಿಮಳಯುಕ್ತವಾಗಿದ್ದು ಬಳಸಬಹುದಾಗಿದ್ದರೂ, ಒಳಮರವು ಬಹುಪಾಲು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಹಿವಾಟಾಗುತ್ತದೆ.
ಅಲ್ಲದೆ ನಿಜವಾದ ದಾಲ್ಚಿನ್ನಿಯ ಹೊರತಾಗಿ ಇತರೇ ಬಹು ಮುಖ್ಯವಾದ ಮೂರು ಪ್ರಭೇದಗಳನ್ನು ಕಾಸಿಯಾ (Cassia) ಪ್ರಭೇದಗಳು ಎಂದು ಕರೆಯಲಾಗುತ್ತದೆ. ಆದರೆ ನಿಜಕ್ಕೂ ಕಾಸಿಯಾ ಪ್ರಭೇದ, ಸಿನ್ನಮೊಮಮ್ ಕಾಸಿಯಾ (Cinnamomum cassia) ಚೀನಾದ ದಾಲ್ಚಿನ್ನಿ (Chinese cinnamon or Chinese cassia). ಆದರೂ ಇತರೇ ಮೂರು ಪ್ರಭೇದಗಳಾದ ಸಿನ್ನಮೊಮಮ್ ಬರ್ಮನೈ (Cinnamomum burmannii) ಸಿನ್ನಮೊಮಮ್ ಲಾವ್‌ರೆರೈ (Cinnamomum loureiroi) ಸಿನ್ನಮೊಮಮ್ ಸಿಟ್ರಿಡೊರಮ್ (Cinnamomum citriodorum) ಗಳನ್ನೂ ಕಾಸಿಯಾ ದಾಲ್ಚಿನ್ನಿ ಎಂದೇ ಸಾಮಾನ್ಯವಾಗಿ ಗುರುತಿಸುತ್ತಾರೆ. ಒಟ್ಟಾರೆ ನಿಜವಾದ ದಾಲ್ಚಿನ್ನಿ ಮತ್ತು ಕಾಸಿಯಾ ದಾಲ್ಚಿನ್ನಿ ಎಂಬ ಬಗೆಗಳು ಜಾಗತಿಕವಾದ ಸಾಮಾನ್ಯ ತಿಳಿವಳಿಕೆ. ಸಿನ್ನಮೊಮಮ್ ಬರ್ಮನೈ (Cinnamomum burmannii) ಪ್ರಭೇದವು ಇಂಡೊನೇಸಿಯಾದ ದಾಲ್ಚಿನ್ನಿ ((Indonesian cinnamon or Padang cassia)ಯಾದರೆ, ಸಿನ್ನಮೊಮಮ್ ಲಾವ್‌ರೆರೈ (Cinnamomum loureiroi) ವು ವಿಯಟ್ನಾಮಿನ ದಾಲ್ಚಿನ್ನಿ (Vietnamese cassia) ಹಾಗೂ ಸಿನ್ನಮೊಮಮ್ ಸಿಟ್ರಿಡೊರಮ್ (Cinnamomum citriodorum) ಪ್ರಭೇದವು ಮಲಬಾರಿನ ದಾಲ್ಚಿನ್ನಿ (Malabar cinnamon).
ದಾಲ್ಚಿನ್ನಿಯು ಒಂದು ಉತ್ಪನ್ನವಾಗಿ ಪಶ್ಚಿಮ ದೇಶಗಳಿಗೆ ಬಹಳ ಕಾಲ ನಿಗೂಢವಾದ ಸಂಗತಿಯೇ ಆಗಿತ್ತು. ಮೂಲದಲ್ಲಿ ಇದರ ವಹಿವಾಟಿನ ವಾರಸುದಾರರಂತಿದ್ದ ಅರಬ್ಬರು ಇದರ ಗುಟ್ಟನ್ನು ಪಶ್ಚಿಮ ದೇಶಗಳಿಗೆ ಬಿಟ್ಟು ಕೊಟ್ಟಿರಲಿಲ್ಲ. ಮರದ ಚಕ್ಕೆಯಂತೆ, ಪುಡಿಯಂತೆ ಮಾರಾಟವಾಗುತ್ತಿದ್ದರೂ, ಚಕ್ಕೆಗಳು ಸುತ್ತುವರೆದ ಸುರುಳಿಗಳಂತೆ ಕಟ್ಟಿ ಮಾರುತ್ತಿದ್ದ ಹಿನ್ನೆಲೆಯಲ್ಲಿಯೋ ಏನೋ ಅಂತೂ ಇದರ ಬಗ್ಗೆ ಸಾಕಷ್ಟು ನಿಗೂಢತೆ ಹಿಂದೆ ಇತ್ತು. ಸುರುಳಿಗಳು ಎಂದರೆ ಏನು ಎಂಬುದು ಮುಂದೆ ವಿವರಿಸುತ್ತೇನೆ. ಮೂಲತಃ ಈಜಿಪ್ಷಿಯನ್ನರು ಇದರ ಬಳಕೆಯನ್ನು ಮಾಡಿರಬಹುದೆಂದು ಅಂದಾಜಿದೆ. ಇಲ್ಲಿಗೆ ಸರಿ ಸುಮಾರು 4000 ವರ್ಷಗಳಿಗೂ ಹಿಂದೆ ಈಜಿಪ್ಟಿನಲ್ಲಿ ಇದರ ಬಳಕೆಯಿತ್ತು. ಅದೂ ಸತ್ತ ದೇಹಗಳ ಸಂರಕ್ಷಣೆಯ “ಮಮ್ಮಿ”ಗಳ ರೂಪಿಸುವಾಗ ಲೇಪನಕ್ಕೆ ಮತ್ತು ಮಾಂಸವನ್ನು ಕೆಡದಂತೆ ಇಡುವ ರಕ್ಷಕವಾಗಿ! ಅಲ್ಲದೆ ಇದು ಅತ್ಯಂತ ದುಬಾರಿಯಾದ ವಸ್ತುವಾಗಿತ್ತು. ಇದಕ್ಕೆ ಬಹು ಮುಖ್ಯ ಕಾರಣ ಇದರ ಪೂರೈಕೆ ಹಾಗೂ ರಾಜ ಮನೆತನಗಳ ಹಾಗೂ ಶ್ರೀಮಂತರ ಕೈಯಿಂದ ಜನಸಾಮಾನ್ಯರಿಗೆ ದಕ್ಕುವುದು ಕಷ್ಟವಾಗಿತ್ತು. ಮಮ್ಮಿಗಳನ್ನು ರೂಪಿಸುವುದು ಎಂದರೆ ಬರೋಬ್ಬರಿ 70 ದಿನಗಳ ಆಚರಣೆ. ಆ ಆಚರಣೆಯ ಉದ್ದಕ್ಕೂ ಲೇಪನಕ್ಕೆ ಇದು ಬಳಸುವುದೂ ಕಾರಣವಾಗಿರಬೇಕು.
ವಾಣಿಜ್ಯ ಬಳಕೆಯಲ್ಲಿ ದುಬಾರಿಯಾಗಿರುವುದರಿಂದ ಹಾಗೂ ಬೇಡಿಕೆಯೂ ಹೆಚ್ಚಿರುವುದರಿಂದ ಸಿನ್ನಮೊಮಮ್ (Cinnamomum ) ಸಂಕುಲದ ವಿವಿಧ ಪ್ರಭೇದಗಳು ಸೇರಿಕೊಳ್ಳುವ ಸಾಧ್ಯತೆಗಳಿವೆ. ಮೂಲತಃ ನಾಲ್ಕಾರು ಇದ್ದರೂ ಇಡೀ ಸಂಕುಲವು ಪರಿಮಳದ ಮೂಲವಾಗಿರುವುದರಿಂದ, ಕಳೆಪೆಯ ಚಕ್ಕೆಯೂ ಮಿಶ್ರಣವಾಗುತ್ತಿರಬಹುದು. ಆದರೂ ಶ್ರೀಲಂಕದ ಸಿಲೋನಿನ್ ದಾಲ್ಚಿನ್ನಿಯು ವಿಶಿಷ್ಟವಾದ ಸಿಹಿಯನ್ನು ಹೊಂದಿದ್ದು, ಅದನ್ನು ಅಣುಕು ಮಾಡುವ ರುಚಿಯ ಚೀನಾದ ದಾಲ್ಚಿನ್ನಿಯು ನಂತರದಲ್ಲಿ ಜನಪ್ರಿಯವಾಯಿತು. ಈಗಂತೂ ಇಂಡೋನೇಷಿಯಾ, ವಿಯಟ್ನಾಂ, ಚೀನಾ ಮತು ಶ್ರೀಲಂಕಾ ದೇಶಗಳು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿವೆ. ಈ ನಾಲ್ಕೂ ದೇಶಗಳು ಜಗತ್ತಿನ 90 %ಗೂ ಹೆಚ್ಚು ಉತ್ಪಾದನೆಯನ್ನು ಮಾಡುತ್ತವೆ. ಇಂಡೋನೇಷಿಯಾ ಪ್ರತಿಶತ 40 ರಷ್ಟು ಉತ್ಪಾದಿಸಿದರೆ, ಚೀನಾ 30ರಷ್ಟನ್ನು ಉತ್ಪಾದಿಸುತ್ತದೆ. ಆದರೆ ನಿಜವಾದ (True) ದಾಲ್ಚಿನ್ನಿಯು ಶ್ರೀಲಂಕಾ ಒಂದರಲ್ಲೇ ಪ್ರತಿಶತ 85ರಷ್ಟು ಉತ್ಪಾದನೆಯಾಗುತ್ತದೆ. ಇದಕ್ಕೆ ಜಾಗತಿಕವಾಗಿ ಹೆಚ್ಚಿನ ಮಾರುಕಟ್ಟೆ ಕೂಡ. ದೇಶಕ್ಕೆ ರಫ್ತು ಮಾಡಿಕೊಳ್ಳುವಲ್ಲಿ ಭಾರತವು ಮೊದಲ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಮೇಘಾಲಯ ಅಸ್ಸಾಂ ಗಳಲ್ಲಿ ಒಂದಷ್ಟು ಬೆಳೆಯಲಾಗುತ್ತದೆ. ಕೇರಳದಲ್ಲಿ ಕಣ್ಣೂರು ಜಿಲ್ಲೆಯ ಅಂಜರಕಂಡಿ ಎಂಬಲ್ಲಿಯ ಸುಮಾರು 200 ಎಕರೆ ಪ್ರದೇಶದ ಒಂದು ದಾಲ್ಚಿನ್ನಿ ಎಸ್ಟೇಟ್ ಏಷಿಯಾದಲ್ಲೇ ಅತಿ ದೊಡ್ಡದು. ಅದನ್ನು 1767ರಲ್ಲಿ ಬ್ರಿಟೀಶ್ ಈಸ್ಟ್ ಇಂಡಿಯಾ ಕಂಪನಿಯ ಲಾರ್ಡ್ ಬ್ರೌನ್ ಎಂಬಾತ ಆರಂಭಿಸಿದ್ದನು.
ದಾಲ್ಚಿನ್ನಿ ಮರಗಳು ನಿತ್ಯ ಹರಿದ್ವರ್ಣದವು. ಗಿಡದ ವಯಸ್ಸು 2-3 ವರ್ಷ ತಲುಪಿದಾಗ ಕಟಾವಿಗೆ ಬರುತ್ತವೆ. ಒಂದು ಅಂಗೈಯ ಹಿಡಿಯಲ್ಲಿ ಹಿಡಯಲು ಸಾಧ್ಯವಾಗುವಷ್ಟು ದಪ್ಪನಾದ ಕೊಂಬೆಗಳು ಕೊಯಿಲು ಮಾಡಬಹುದು. ಮರಗಳು ಸುತ್ತಲೂ ರೆಂಬೆ-ಕೊಂಬೆಗಳನ್ನು ಕಟಾವು ಮಾಡಿದರೆ, ಮತ್ತೆರಡು ವರ್ಷಗಳಲ್ಲಿ ಮತ್ತೆ ಅದೇ ಮರದ ರೆಂಬೆ ಕೊಂಬೆಗಳು ಕಟಾವಿಗೆ ದೊರಕುತ್ತವೆ. ನಾಟಿ ಮಾಡಿದ ಎರಡು ಮೂರು ವರ್ಷಗಳಲ್ಲಿ ಮರವು ಕೊಯಿಲು ಮಾಡಬಲ್ಲ ಉತ್ಪನ್ನವನ್ನು ಕೊಡುತ್ತದೆ. ಕಟಾವಾದ ಕೊಂಬೆಗಳು ಮುಂದೆ ಸಂಸ್ಕರಣೆಗೆ ಒಳಗಾಗುತ್ತವೆ. ಕಟಾವು ಮಾಡಿದ ರೆಂಬೆಗಳನ್ನು ಒಮ್ಮೆ ನೀರಿನಲ್ಲಿ ಅದ್ದಿ ಹಸಿಗೊಳಿಸಿ ಹೊರಮೈ ಕೆರೆಯಲು ಸುಲಭವಾಗಿಸುತ್ತಾರೆ. ಕೊಯಿಲಾದ ಮೊದಲ ಹಂತದ ಸಂಸ್ಕರಣೆಯಲ್ಲಿ ಹಿಡಿಯಲು ಅನುವಾಗುವಂತೆ ತುಂಡು ಮಾಡಿದ ಕೊಂಬೆಗಳನ್ನು ಹೊರ ಮೈಯ ತೊಗಟೆಯನ್ನು ಕೆರೆದು, ಸುಲಿಯಲಾಗುತ್ತದೆ. ನಂತರ ಒಳಮರದ ತೊಗಟೆಯಿಂದ ನಿಧಾನವಾಗಿ ಪದರಗಳನ್ನು ಸುಲಿದು ತೆಗೆಯುತ್ತಾರೆ. ಆ ಸುಲಿದ ಒಳತೊಗಟೆಯೇ ಬೆಲೆ ಬಾಳುವ ದಾಲ್ಚಿನ್ನಿ!
ಒಳಮರದ ಸುಲಿದ ತೊಗಟೆಯು ಸುರುಳಿಯಂತೆ ಸುತ್ತಿಕೊಳ್ಳುತ್ತದೆ, ಇವುಗಳನ್ನು ಕ್ವಿಲ್‌ಗಳು ಎನ್ನುತ್ತಾರೆ. ಪುಡಿಯಾದ ಕ್ವಿಲ್‌ಗಳನ್ನು ಕ್ವಿಲಿಂಗ್‌ಗಳು ಎನ್ನುತ್ತಾರೆ. ಯಾವುದೇ ಭಾಗವನ್ನೂ ವ್ಯರ್ಥ ಮಾಡದೆ ಬಳಸಲಾಗುತ್ತದೆ. ಅದನ್ನು ಅಗಲವಾದ ತೊಗಟೆಯಲ್ಲಿ ಸುತ್ತಿ ಒಣಗಿಸಲಾಗುತ್ತದೆ. ಅದರ ಗಾತ್ರದ ಅನುಗುಣವಾಗಿ ಅದನ್ನು ವಿವಿಧ ಗ್ರೇಡುಗಳಾಗಿ ವಿಭಾಗಿಸಲಾಗುತ್ತದೆ. ಈ ಕ್ವಿಲ್‌ಗಳನ್ನು 6 ಮಿ.ಮೀ, 16 ಮಿ.ಮೀ, 19 ಮಿಮೀ ಮತ್ತು 32ಮಿ.ಮೀ ಗಾತ್ರದ ವಿವಿಧ ಗ್ರೇಡ್‌ಗಳ ದಾಲ್ಚಿನ್ನಿಗಳಾಗಿ ವಿಭಾಗಿಸಲಾಗುತ್ತದೆ. ದಾಲ್ಚಿನ್ನಿಯ ವಾಣಿಜ್ಯ ಉತ್ಪನ್ನಗಳೆಂದರೆ ಕ್ವಿಲ್ಸ್, ಕ್ವಿಲ್ಲಿಂಗ್ಸ್, ಗರಿಗಳು, ಚಿಪ್ಸ್, ದಾಲ್ಚಿನ್ನಿ ತೊಗಟೆ, ತೊಗಟೆಯ ಎಣ್ಣೆ ಮತ್ತು ದಾಲ್ಚಿನ್ನಿ ಎಲೆಯ ಎಣ್ಣೆ. ‘ಕ್ವಿಲ್’ಗಳು ಪ್ರಬುದ್ಧವಾದ ದಾಲ್ಚಿನ್ನಿ ಒಳಮರದ ಸುರುಳಿಗಳು. ಇವುಗಳನ್ನು ಒಳ ತೊಗಟೆಯ ಸಿಪ್ಪೆಯನ್ನು ಕೆರೆದು, ಸುಲಿದು ತಯಾರು ಮಾಡಲಾಗುತ್ತದೆ. ನಂತರ ಇವುಗಳನ್ನು ಟ್ಯೂಬ್‌ಗಳೊಂದಿಗೆ ಜೋಡಿಸಿ, ಹೊಂದಿಸಿ ಸಂಸ್ಕರಿಸಲಾಗುತ್ತದೆ. ಅದನ್ನು ಮೊದಲು ಬಿಸಿಲಿನಲ್ಲಿ ಒಣಗಿಸಿ ನಂತರ ನೆರಳಿನಲ್ಲಿ ಒಣಗಿಸಲಾಗುತ್ತದೆ. ‘ಕ್ವಿಲ್ಲಿಂಗ್ಸ್’ ಎಲ್ಲಾ ದರ್ಜೆಯ ದಾಲ್ಚಿನ್ನಿ ಕ್ವಿಲ್‌ಗಳ ಮುರಿದ ತುಂಡುಗಳು ಮತ್ತು ವಿಭಜನೆಗಳಾಗಿವೆ. ‘ಗರಿಗಳು’ ಗರಿಗಳಂತಹ ಒಳ ತೊಗಟೆಯ ಉಳಿದ ತುಂಡುಗಳು ಮತ್ತು ಸಿಪ್ಪೆಯ ಸಣ್ಣ ತುಂಡುಗಳು ಸೇರಿಕೊಂಡಿರುತ್ತವೆ. ದಾಲ್ಚಿನ್ನಿ ‘ಚಿಪ್ಸ್’ ದಪ್ಪವಾದ ಕಾಂಡಗಳಿಂದ ಒರಟಾದ ಸಿಪ್ಪೆ ತೆಗೆಯಲಾಗದ ತೊಗಟೆಗಳಾಗಿವೆ. ನಮ್ಮಲ್ಲಿ ಹೆಚ್ಚು ಮಾರಟಕ್ಕಿರುವ ಪದಾರ್ಥ. ಎಲೆ ಮತ್ತು ತೊಗಟೆಯನ್ನು ಪ್ರತ್ಯೇಕವಾಗಿ ಬಟ್ಟಿ ಇಳಿಸುವ ಮೂಲಕ ದಾಲ್ಚಿನ್ನಿ ಎಲೆ ಮತ್ತು ತೊಗಟೆ ಎಣ್ಣೆಯನ್ನು ಪಡೆಯಲಾಗುತ್ತದೆ. ಎಲೆಗಳನ್ನೂ ಪಲಾವ್ ಎಲೆಗಳಂತೆ ಬಳಸಬಹುದು.
ದಾಲ್ಚಿನ್ನಿ ತೊಗಟೆಯು ಸೂಕ್ಷ್ಮವಾದ ಸುಗಂಧ ಮತ್ತು ಬೆಚ್ಚಗಿನ ಸಮ್ಮತವಾದ ರುಚಿಯೊಂದಿಗೆ ಜನಪ್ರಿಯ ಮಸಾಲೆಯಾಗಿದೆ. ಇದನ್ನು ಸಣ್ಣ ತುಂಡುಗಳು ಅಥವಾ ಪುಡಿ ರೂಪದಲ್ಲಿ ಬಳಸಲಾಗುತ್ತದೆ. ಇದನ್ನು ಮಿಠಾಯಿ, ಮದ್ಯ, ಔಷಧೀಯ ಮತ್ತು ಸೌಂದರ್ಯವರ್ಧಕಗಳ ಸುವಾಸನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಸಕ್ಕರೆಯ ಜೀರ್ಣಕ್ರಿಯೆಯಲ್ಲಿ ಮಧುಮೇಹಿಗಳಿಗೆ ಸಹಾಯ ಮಾಡುತ್ತದೆ. ದಾಲ್ಚಿನ್ನಿಯ ಬಳಕೆಯನ್ನು ದೇಹದ ಕೊಲೆಸ್ಟರಾಲ್ ತಗ್ಗಿಸುವಲ್ಲಿಯೂ ಸಹಾಯವಾಗಲಿದೆ ಎಂದೂ ಕೆಲವು ಅಧ್ಯಯನಗಳು ತಿಳಿಸುತ್ತದೆ. ಹಾಗೆಯೇ ದೇಹದ ತೂಕವನ್ನೂ ಕಡಿಮೆಗೊಳಿಸುವಲ್ಲಿ ದಾಲ್ಚಿನ್ನಿಯು ಸಹಾಯವಾಗುವುದಂತೆ!
ದಾಲ್ಚಿನ್ನಿ ತೊಗಟೆ ಎಣ್ಣೆಯು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ ಮತ್ತು ದಾಲ್ಚಿನ್ನಿ ಎಲೆಯ ಎಣ್ಣೆಯನ್ನು ಸುಗಂಧ ದ್ರವ್ಯ ಮತ್ತು ಸೌಂದರ್ಯವರ್ಧಕಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ದಾಲ್ಚಿನ್ನಿಯಲ್ಲಿ ಒಟ್ಟಾರೆ ಸುಮಾರು 80 ಬಗೆಯ ಸುಗಂಧಯುಕ್ತ ರಸಾಯನಿಕಗಳು ಇವೆ. ಅವುಗಳು ಕಾಂಡ, ಎಲೆ, ಹೂ, ಹಣ್ಣು ಮುಂತಾಗಿ ವಿವಿಧ ಸಸ್ಯದ ಉತ್ಪನ್ನಗಳಲ್ಲಿ ಹರಡಿವೆ. ಈ ಸುಗಂಧಮಯ ಸಂಗಮವೇ ಅದನ್ನು ವೈವಿಧ್ಯಮಯ ಬಳಕೆಯ ತಿನಿಸುಗಳು, ಪಾನೀಯಗಳಲ್ಲಿ ಉಪಯೋಗಿಸಲಾಗುತ್ತದೆ. ದಾಲ್ಚಿನ್ನಿ ವಿವಿಧ ಮದ್ಯಗಳು, ಅಮೆರಿಕಾ ಯೂರೋಪುಗಳಲ್ಲಿ ತುಂಬಾ ಹೆಸರುವಾಸಿ. ದಾಲ್ಚಿನ್ನಿ ಚಹಾ.. ಸಿನ್ನಮೊನ್ ಟೀ.. ಕೂಡ…ನಮ್ಮಲ್ಲಿಯೂ ದೊರಕುತ್ತದೆ.
ದಾಲ್ಚಿನ್ನಿಯ ಮರಗಳು ಸಿಹಿಯನ್ನು ಜೊತೆಗೆ ಪರಿಮಳವನ್ನೂ ಒಡಲಲ್ಲಿಟ್ಟು ಬೆಳೆದವು. ಕಟಾವಿನಲ್ಲೂ ಸುಲಿಯುವಲ್ಲೂ, ಒಣಗಿಸಿ ಸಾಗಿಸುವಲ್ಲಿಯೂ ಪರಿಮಳದ ಬೆರಗನ್ನು ಹರಡುತ್ತಲೇ ನಮ್ಮೊಳಗೊಂದಾಗಿದೆ ದಾಲ್ಚಿನ್ನಿಯ ಮರಗಳು!
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್.