ಜೀವಿವೈಜ್ಞಾನಿಕ ವಿಚಾರಗಳು, ವರ್ತನೆ, ಭಾವನೆಗಳು, ಅನುಭವಗಳು, ನೋವು-ನಲಿವುಗಳ ಮೂಲಕ ಜೀವತುಂಬಿದ ಕಥಾನಕಗಳು. ಅವುಗಳನ್ನು ಕಾಣದ ಜೀನ್‌ಗಳ ಮೂಲಕ, ಅನುಭವಕ್ಕೆ ದಕ್ಕುವ ಕಥನಗಳಾಗಿಸಿ ವೈಜ್ಞಾನಿಕ ವಿವರಗಳನ್ನು ಸಾರ್ವಜನಿಕ ಓದಿಗೆ ತರವುದು ಕಷ್ಟದ ಕೆಲಸ. ಅದಕ್ಕೆ ಅಪಾರ ದಕ್ಷತೆ, ಜಾಣತನ, ಶ್ರದ್ಧೆ ಜೊತೆಗೆ ಪ್ರಾಮಾಣಿಕವಾದ ಅನುಭವಗಳನ್ನು ಜೀವ ತುಂಬಿ ಪ್ರಸ್ತುತ ಪಡಿಸುವ ಚತುರತೆ ಬೇಕು. ಅಂತಹಾ ಚತುರ ಸಂಶೋಧಕ ವೈದ್ಯ ಬರಹಗಾರ ಡಾ. ಸಿದ್ಧಾರ್ಥ ಮುಖರ್ಜಿಯವರು.
ವೃತ್ತಿಯಲ್ಲಿ ಕ್ಯಾನ್ಸರ್ biologist ಆದ ಸಿದ್ಧಾರ್ಥ ಮುಖರ್ಜಿಯವರು, ಕ್ಯಾನ್ಸರ್ ಕುರಿತಾದ ತಮ್ಮ ಪುಸ್ತಕ The Emperor of all melodies ಪ್ರಕಟಿಸಿ ಅದಕ್ಕೆ ಪುಲಿಟ್ಜರ್ ಪುರಸ್ಕಾರ (Pulitzer Prize) ಪಡೆದು ಅತ್ಯಂತ ಜನಪ್ರಿಯರಾದವರು. ಅದರಲ್ಲಿ “Cancȩr is perhap̧s an ultimate perversion of genetics” ಅಂದರೆ ಕ್ಯಾನ್ಸರ್ ಕಾಯಿಲೆ ಆನುವಂಶಿಕತೆಯ ಅಂತಿಮ ವಿಕೃತಿ ಎಂದು ಕರೆದಿದ್ದಾರೆ. ನಂತರದಲ್ಲಿ ಹಾಗಿದ್ದರೆ ಆನುವಂಶೀಯ ಎಂದರೇನು? ನಮ್ಮ ಜೀನೋಮ್ ಹೇಗೆ ಸಹಜವಾಗಿ ಕಾರ್ಯ ನಿರ್ವಹಿಸುತ್ತದೆ, ನಮ್ಮಲ್ಲಿರುವ ಜೈವಿಕ ಭಿನ್ನತೆ ಹಾಗು ಸಮನ್ವತೆಗೆ (similarity) ಕಾರಣಗಳೇನು? ಎಂಬ ಪ್ರಶ್ನೆಗಳಿಗೆ ಉತ್ತರವೆಂಬಂತೆ ತಮ್ಮ ೨೦೧೬ರಲ್ಲಿ ಬಿಡುಗಡೆಯಾದ ಈ ಪ್ರಸ್ತುತ ಪುಸ್ತಕದ ಶುರುವಿನಲ್ಲಿ ಹೀಗೆ ಬರೆಯುತ್ತಾರೆ “This book is the story of the birth growth and future of one of the most powerful and dangerous ideas in the history of Science: the “gene” the fundamental unit of heredity and the basic unit of all biological information”.
ಜೀವರಾಶಿಯ ವಿಶಿಷ್ಟ ಗುಣವಾದ ಆನುವಂಶಿಕತೆಯ ಮೂಲಭೂತ ವಸ್ತುವಿನ ಹುಡುಕಾಟವನ್ನು ಕ್ರಿ.ಪೂ. 350 Aristotle ನ ವಾದದಿಂದ ಹಿಡಿದು ಇಂದಿನ “gene therapy”ವರೆಗೂ ಅತ್ಯಂತ ವಿಸ್ತಾರವಾಗಿ ಬೆಳೆದು ಬಂದ ಇತಿಹಾಸವನ್ನು ಲೇಖಕರು ಪ್ರಸ್ತುತ ಪಡಿಸಿದ್ದಾರೆ. ತಮ್ಮ ಸ್ವಂತ ಪರಿವಾರದಲ್ಲಿ ಕಂಡಂತಹ ಆನುವಂಶೀಯ ಮನೋರೋಗದ ವ್ಯಥೆಯ ಚಿತ್ರಣವನ್ನು ಕಟ್ಟಿಕೊಡುತ್ತಾ, ಇಂತಹ ರೋಗಗಳಿಗೆ ಹಾಗೂ ಜೀವಿಗಳ ಬಹುಪಾಲು ಗುಣ(traits)ಗಳಿಗೆ ವಂಶ ಪಾರಂಪರೆಯ(ಅನುರಕ್ತ?) ಕೊಡಿಗೆಯಾದ genes ಹಾಗೂ genetic material ಹುಡುಕಾಟದಲ್ಲಿ ದಾಖಲಿಸಿರುವ ಮಾನವನ ಅನವರತ ಪ್ರಯತ್ನದ ಪೂರ್ಣ ಚಿತ್ರಣವನ್ನು ಪುಸ್ತಕ ನೀಡುತ್ತದೆ. ಇಂಗ್ಲಂಡಿನ ಜೀವವಿಜ್ಞಾನಿ ʼಆನುವಂಶಿಕ(genetics)ʼ ಪದವನ್ನು ಮೊದಲಬಾರಿಗೆ ಉಪಯೋಗಿಸಿದ ವಿಲಿಯಂ ಬೇಟಸನರವರ ಮಾತುಗಳಲ್ಲಿ ಆನುವಂಶಿಕತೆ ಪ್ರಾಮುಖ್ಯತೆಯನ್ನು ಹೀಗೆ ಹೇಳಿದ್ದಾರೆ “An exact determination of the laws of heredity will probably work more change in mańs outlook on the world and in his power over nature than any other advance in natural knowledge that can be foreseen”.
ಪುಸ್ತಕವನ್ನು ವಿವಿಧ ಕಾಲಘಟ್ಟ ಹಾಗು ವಿಷಯಾಧಾರಿತವಾಗಿ ವಿಂಗಡಿಸಿದ್ದು, ಆನುವಂಶಿಕ ವಸ್ತು ಹಾಗು ಸಂಬಂಧಿತ ಜೀವಿವಿಜ್ಞಾನದಲ್ಲಿನ ಅನ್ವೇಷಣೆ ಹಾಗೂ ಪ್ರಗತಿಯ ಇತಿಹಾಸವನ್ನು ಕತೆಯ ರೂಪದಲ್ಲಿ ಕಟ್ಟಿಕೊಟ್ಟಿರುವ ಪ್ರಸ್ತುತಿ ಅತ್ಯದ್ಭುತ. ಪುಸ್ತಕವನ್ನು ಆರು ಕಾಲಘಟ್ಟಗಳಾಗಿ ವಿಂಗಡಿಸಿ ಪ್ರಸತುತ ಪಡಿಸಿದ್ದಾರೆ.
1. 1865 -1935 : T he Missing Science of Heredity: ಈ ಅವಧಿಯಲ್ಲಿ ಆನುವಂಶೀಕತೆಯ ಮೂಲ ಹುಡುಕಾಟದಲ್ಲಿ ವೈಜ್ಞಾನಿಕ ತಳಹದಿಯ ಮೇಲೆ ಕಂಡಂತಹ ಮಹತ್ವದ ಅನ್ವೇಷಣೆಯ ಇತಿಹಾಸವನ್ನು ಉಪವಿಷಯಗಳಾಗಿ ವಿಂಗಡಿಸಿ ರೋಚಕವಾಗಿ ತಿಳಿಸಿದ್ದಾರೆ. ಇವುಗಳಲ್ಲಿ, ಇಂಗ್ಲಂಡಿನ Charles Darwinರವರ “On the origin of species by means of Natural selection” ಹಾಗೂ ಆನುವಂಶಿಕತೆಯ ನಿಯಮಗಳು (Laws of heredity) ಕೊಟ್ಟಂತ ʼಆನುವಂಶಿಯತೆಯ ಪಿತಾಮಹಾʼ ಗ್ರೆಗೊರ್ ಯೊಹಾನ್ ಮೆಂಡಲ್ (Gregor Johann Mendel) ನ ವೈಜ್ಞಾನಿಕ ಕಾರ್ಯವನ್ನು Natural science Society, Brno (Czech Republic, ಮಧ್ಯ ಯುರೋಪ್ )ಪ್ರಸ್ತುತಿ, 1900 ರಲ್ಲಿ ಮೆಂಡಲ್ ಮರಣಾನಂತರ ಆತ ಪ್ರತಿಪಾದಿಸಿದ ಸಿದ್ಧಾಂತಗಳ ಮರುಅನ್ವೇಷಣೆ, Francis Galton ನಿಂದ ರೂಪಗೊಂಡ Eugenics ಅಮೇರಿಕ ದೇಶದಲ್ಲಿ ಮಾನವ ಕುಲವನ್ನು ಸ್ವಚ್ಛಗೊಳಿಸುವ “Mass Sterilization” ಹೀಗೆ ಸಿದ್ಧಾಂತಗಳು ಹಾಗು ಅವುಗಳ ಸಮಾಜದಲ್ಲಿನ ನೇರ ಪರಿಣಾಮಗಳ ದಾಖಲೆಗಳನ್ನು ತೆರೆದಿಟ್ಟಿದ್ದಾರೆ.
2. 1930 – 1970 : “In the sum of the parts there are only the parts“: ಈ ಅವಧಿಯ ಸರಿಸುಮಾರಿನಲ್ಲಿ, ಆನುವಂಶೀಕತೆಯ ಕಾರ್ಯವಿಧಾನವನ್ನು ಅರ್ಥೈಸಿಕೊಳ್ಳುವುದಕ್ಕೆ ಕಾರಣವಾದ ಮೂಲ ಪ್ರಯೋಗಗಳ ಹಾಗು ಪ್ರಗತಿಯ ಇತಿಹಾಸದ ವಿವರಗಳಿವೆ. ಮುಖ್ಯವಾಗಿ, ಆಧುನಿಕ ಸಂಶ್ಲೇಷಣೆಯ ವಿಕಾಸ ಸಿದ್ಧಾಂತ ಮತ್ತು ಆನುವಂಶಿಕ ವಿಷಯದಲ್ಲಿನ ಸಮನ್ವಯತೆಯ ತಿಳಿಯಲು ರೊನಾಲ್ಡ್ ಫಿಶ್ ಅವರು ಪ್ರತಿಪಾದಿಸಿದ ಆನುವಂಶಿಕ ಗುಣಲಕ್ಷಣಗಳ ಮಾದರಿ, ಉಕ್ರೇನ ಮೂಲದ ಡೊಬ್ಸಾಸ್ಕಿ (Dobzhasky) ರವರ fruit fly (Drosophila pseudoobscura) ಪ್ರಕೃತಿಯಲ್ಲಿನ ಆನುವಂಶಿಕ ವ್ಯತ್ಯಾಸದ ದಾಖಲೆ, ಜೀನ ಆವರ್ತನ (Gene Frequency) ಬದಲಾವಣೆಗಳನ್ನು ಪ್ರಯೋಗಗಳ ಮೂಲಕ ಸಾಬೀತುಪಡಿಸುತ್ತಾರೆ. ಆನುವಂಶಿಕತೆಯ ಭೌತಿಕ ಆಧಾರವನ್ನು ಥಾಮಸ್ ಮೊರ್ಗನ್ (Thomas Morgan) ಹಾಗು ಅವರ ಶಿಷ್ಯರು “Linkage map” (ಜೀನ್ ಸಂಯೋಜನೆಯ ನಕ್ಷೆ) ಮೂಲಕ ಸಾಬೀತುಪಡಿಸುತ್ತಾರೆ.ಹಾಗೆ, ಅನುವಂಶಿಕತೆಯ ರಾಸಾಯನಿಕ ಆಧಾರವನ್ನು ವಿವಿಧ ಕ್ರಮಬದ್ಧ ಪ್ರಯೋಗಗಳ ಮೂಲಕ ಗ್ರಿಫಿತ್ ಆವೆರಿ (Griffith Muller Avery) ಮತ್ತು ಅವರ ಸಹಾಯಕರು ತೋರಿಸುತ್ತಾರೆ. ಇಪ್ಪತ್ತನೆ ಶತಮಾನದ ಪ್ರಮುಖ ಜೀವಿ ವಿಜ್ಞಾನದ ಅನ್ವೇಷಣೆಯಾದ, ತನ್ನ ವಿನ್ಯಾಸದಲ್ಲಿಯೇ ಅನುವಂಶಿಕತೆಯ ನಿಷ್ಠಾವಂತ ಗುಣಗಳನ್ನುಹೊಂದಿರುವ “Double helical structure of DNA” ಅನ್ವೇಷಣೆಯ ರೋಚಕ ಕತೆಯೂ ಒಳಗೊಂಡಿದೆ. ಮುಂದೆ, ಆನುವಂಶಿಕ ಧಾತು(gene)ವಿನಿಂದ ಕ್ರಿಯೆಗೆ (gene to action) ಮಾಹಿತಿ ಹರಿಯುವ ಕುತೂಹಲಕಾರಿ ರೀತಿ, ಅದಕ್ಕೆ ಪೂರಕವಾದ Triplet Codon ಜೋಡಣೆಯ ಅನ್ವೇಷಣೆಗಳನ್ನು ಒಳಗೊಂಡಿದೆ. ಬರೀ ವಿಜ್ಞಾನದ ಕುತೂಹಲಕಾರಿ ವಿಷಯವಷ್ಟಲ್ಲದೇ, ಇಡೀ ಮಾನವ ಕುಲವನ್ನೇ ಸ್ವಚ್ಛಗೊಳಿಸುವ, ಸಮಾಜದಲ್ಲಿ ಯಾವುದೇ ನ್ಯೂನ್ಯತೆ ಇರದ ಸಂತಾನವನ್ನು ಬೆಳೆಸುವ ವಾದವನ್ನು ಪ್ರತಿಪಾದಿಸುವ ಆನುವಂಶಿಕತೆಯ ಆಧಾರಿತ “Eugenics” ರಾಜಕೀಯ ತಂತ್ರವಾಗಿ ಉಪಯೋಗಿಸಲ್ಪಡುವ ಇತಿಹಾಸದ ಕರಾಳ ದಿನಗಳನ್ನು ವಿವರಿಸುತ್ತಾರೆ. ಜರ್ಮನಿಯಲ್ಲಿ Hitler ತನ್ನ ಅಧಿಪತ್ಯದ ಸಮಯದಲ್ಲಿ(1933 -45) ಸರಿಸುಮಾರು 10 ಲಕ್ಷ ಜನರನ್ನು ʼRacial Hygieneʼ ಹೆಸರಿನಲ್ಲಿ ಬಲಿಕೊಡುವಂತಹ ಬೆಚ್ಚಿಬೀಳಿಸುವ ವಿವರಗಳನ್ನೂ ಒಳಗೊಂಡಿದೆ.
3. 1970 – 2001 : “The Dreams of Geneticists”: ಈ ಕಾಲಘಟ್ಟದಲ್ಲಿ, ಆನುವಂಶಿಕ ಧಾತುವಿನ sequencing (ಅನುಕ್ರಮ) ಹಾಗು cloning ತಂತ್ರಜ್ಞಾನಗಳ ಆವಿಷ್ಕಾರಗಳ ವಿವರಣೆಗಳಿದ್ದು, ಆನುವಂಶಿಕ ವಿಜ್ಞಾನವು ತಂತ್ರಜ್ಞಾನವಾಗಿ ಮಾರ್ಪಾಡುವ ಬೆಳವಣಿಗೆಯನ್ನು ತಿಳಿಯಬಹುದಾಗಿದೆ. Virologist Paul Bergರ ಮರುಸಂಯೋಜಕ (recombinant) DNA ಪರಿಕಲ್ಪನೆ, ಅದರ ಯಶಸ್ವಿ ಪ್ರಯೋಗ, ಸಾರ್ವಜನಿಕ ಆತಂಕಗಳು, ಅನುವಂಶಿಯ ಧಾತುವಿನ ಬರವಣಿಗೆಯ ಭಾಷೆಯಾಗಿ Gene cloning ಅನ್ನು 1973 ರಲ್ಲಿ ವಿಜ್ಞಾನಿಗಳಾದ ಬೋಯೆರ್ ಮತ್ತು ಕೊಹೆನ್ ಅವರು (Recombinant) DNA ಜೀವಂತ ಬ್ಯಾಕ್ಟೀರಿಯಗಳಲ್ಲಿ ಕಾರ್ಯನಿರ್ವಹಿಸುವುದನ್ನು ಜಗತ್ತಿಗೆ ತೋರಿಸುತ್ತಾರೆ. ಮುಂದೆ, gene sequencing ಆವಿಷ್ಕಾರದಿಂದ, ಮನುಷ್ಯ ಜೀವರಾಶಿಗಳ ನೀಲಿ-ನಕ್ಷೆಯಾದ ಜಿನೋಮ (genome) ಓದುವ ಕಲೆಯನ್ನೂ ತಿಳಿಯತ್ತಾನೆ. ಇದರಿಂದ, ಜೀವಿಗಳ ಮಾರ್ಪಡು ಮನುಷ್ಯನಿಗೆ ಸುಲಭಸಾಧ್ಯವಾಗುತ್ತದೆ. ಇದರ ಜೊತೆಗೆ ದುರುಪಯೋಗದ ಎಚ್ಚರಿಕೆಯೂ, ಜಾಗರೂಕ ಬೆಳವಣಿಗೆಯ ಅಗತ್ಯತೆಯನ್ನು ವಿಜ್ಞಾನಿಗಳು ಕಂಡು, Asilomar conference 1973 ಹಾಗೂ ೧೯೭೫ ರಲ್ಲಿ ತಳೀಯವಾಗಿ/ಆನುವಂಶಿಕವಾಗಿ ಮಾರ್ಪಡಿಸಿದ ಜೀವಿಗಳು (genetically modified organisms) ಸಂಬಂಧಿತ ಸಂಶೋಧನೆ ಮೇಲೆ ನಿರ್ಬಂಧನೆಗಳನ್ನು ಹೇರುತ್ತಾರೆ.ಮುಂದೆ gene-en-tech ಕಂಪನಿಯು ಜಗತ್ತಿನ ಮೊದಲ ಮನುಷ್ಯಕೃತ insulin ಸಂಶ್ಲೇಷಿಸಿ ಜಾಗತಿಕವಾಗಿ biotechnology ತಂತ್ರಜ್ಞಾನ ಉತ್ಪನ್ನದ ಮಾರುಕಟ್ಟೆಗೆ ನಾಂದಿಯಾಗುವ ವಿವರಗಳನ್ನು ಬಹಳ ಸೊಗಸಾಗಿ ವಿವರಿಸಿದ್ದಾರೆ.
4. 1970 -2005 : The proper study of mankind is man : ಈ ಭಾಗದಲ್ಲಿ, ವೈದ್ಯಕೀಯ ಚಿಕಿತ್ಸೆಯ ಕಾರಣಕ್ಕಾಗಿ,ಮನುಷ್ಯರಲ್ಲಿ ದಾಖಲಾದ ವಿಚಿತ್ರವಾದ ರೋಗಗಳಿಗೆ ಮೂಲ ಕಾರಣ ಹುಡುಕಾಟದಲ್ಲಿ ಆನುವಂಶೀಕತೆಯ ಅಗತ್ಯತೆ ಕಂಡು ಅವುಗಳ ಬಗ್ಗೆ ಬೆಳಕು ಚೆಲ್ಲುವ ಆಮೂಲಾಗ್ರ ಅಧ್ಯಯನಗಳಿಂದ ವಿವರಿಸುತ್ತಾರೆ. ಸಂಶೋಧಕರಾದ Victor Mckusiç̧ķ John Hopkins 1980 – 1998 ರ ಅವಧಿಯಲ್ಲಿ ಸರಿಸುಮಾರು 12,000 ಅನುವಂಶಿಯ ಧಾತುವಿನ ರೂಪಾಂತರಗಳು ಮನುಷ್ಯನ ವಿವಿಧ ಅಸ್ವಸ್ಥತೆಗಳಿಗೆ ಕೊಂಡಿಯಾಗಿರುದನ್ನು “Encyclopedia of Phenotypȩs genetic traits and disorders ” ಪುಸ್ತಕ (ಹನ್ನೆರೆಡು ಮುದ್ರಣಗಳಲ್ಲಿ) ದಾಖಲಿಸುತ್ತಾರೆ. ಹಾಗೆ, 70 ಹಾಗೂ 80ರ ದಶಕದಲ್ಲಿ ಆನುವಂಶಿಕ ರೋಗನಿರ್ಣಯವು ವೈದ್ಯಕೀಯ ಉದ್ಯಮವಾಗಿ ಮಾರ್ಪಡಾಗುವ ಚಿತ್ರಣವನ್ನು ಮುಂದಿಡುತ್ತಾರೆ ಲೇಖಕರು. ಕೆಲ ವಿಶೇಷ ಕಾಯಿಲೆಗಳಾದ ಕ್ಯಾನ್ಸರ, Schizophrenia ಗಳಿಗೆ ಸುಲಭವಾಗಿ ನೇರ ಆನುವಶಿಂಕ ಮೂಲಗಳು ಸಿಗದೆ, ಇಡೀ human genome ಓದುವ, ಅರ್ಥಮಾಡಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಮನುಷ್ಯ ತನ್ನ ಜೈವಿಕ ನಿರ್ಮಾಣದ ನೀಲಿನಕ್ಷೆಯಾದ genomeನನ್ನು ಗ್ರಹಿಸಲು ಬೇಕಾಗುವ ತಾಂತ್ರಿಕ ಮುನ್ನಡೆಯನ್ನು ಹಂತಹಂತವಾಗಿ ಸಾಧಿಸುವ ರೋಚಕ ಆವಿಷ್ಕಾರಗಳ, ವಿವಿಧ ಅಂತರಾಷ್ಟ್ರೀಯ ಸಭೆಗಳ ಮತ್ತು ಅವುಗಳ ರುವಾರಿಗಳಾದ ಸಂಶೋಧಕರ ಸಂಪೂರ್ಣ ಚಿತ್ರಣವನ್ನು ಕಟ್ಟಿಕೊಡುತ್ತಾರೆ. ಐತಿಹಾಸಿಕ ಮುನ್ನಡೆಯಾದ ಸಂಪೂರ್ಣ human genome sequence 2001ರಲ್ಲಿ ಪ್ರಮುಖ ವೈಜ್ಞಾನಿಕ ಪತ್ರಿಕೆಗಳಲ್ಲಿ ಪ್ರಕಟಣೆಯೊಂದಿಗೆ ಮನುಷ್ಯ ತನ್ನ ಜೈವಿಕ ಹಿತಿಮಿತಿಗಳ ಮೇಲೆ ಹಿಡಿತ ಸಾಧಿಸಲು ಸಾಧ್ಯತೆಗಳ ದಾಪುಗಾಲನ್ನು ಇಟ್ಟಿರುವ ವಿವರಗಳೂ ಇಲ್ಲಿವೆ.
5. 2001-2005 Through the looking glass”: ಈ ಭಾಗದಲ್ಲಿ, ಆನುವಂಶಿಕ ಜ್ಞಾನವನ್ನು ರೋಗಶಾಸ್ತ್ರಕ್ಕೆ ಸೀಮಿತಗೊಳಿಸದೆ, ತನ್ನ ಜೈವಿಕ ಅಸ್ತಿತ್ವದ ಮೂಲಭೂತ ಪ್ರಶ್ನೆಗಳ ಹುಡುಕಾಟದ ಅಸ್ತ್ರವಾಗಿ ಉಪಯೋಗಿಸಲ್ಪಡುವ ವಿವಿಧ ವಿಶಿಷ್ಟ ಪುರಾವೆಗಳ ವಿವರಣೆಗಳನ್ನು ಕಾಣಬಹುದು. ಮುಖ್ಯವಾಗಿ, ಬುದ್ಧಿವಂತಿಕೆಯನ್ನು ಅಳೆಯುವ Intelligent Quotient (IQ) ಜನಾಂಗೀಯ ವ್ಯತ್ಯಾಸ(Racial Difference)ದಲ್ಲಿ ಆನುವಂಶಿಕ ಧಾತುವಿನ ಕೊಡಿಗೆಯೇನು? ಮನುಷ್ಯನ ಭೂಮಿ ಮೇಲಿನ ಅಸ್ತಿತ್ವ ಎಷ್ಟು ಹಳೆಯದು? ನಮ್ಮ ಪೂರ್ವಜರು ಯಾರು? ಲಿಂಗ ನಿರ್ಣಯ ಮತ್ತು ಅದರ ಆನುವಂಶಿಕ ಧಾತುವಿನ ಹುಡುಕಾಟ, ಸಲಿಂಗಕಾಮಿ ಆನುವಂಶಿಕತೆಯಿಂದ ನಿರ್ಧಾರಿತವೇ? ಪ್ರತಿಯೊಬ್ಬರ ವ್ಯಕ್ತಿತ್ವ, ಮನೋಧರ್ಮವೂ ಆನುವಂಶಿಕ ಧಾತುವಿನ ಪ್ರಭಾವಕ್ಕೊಳಪಟ್ಟಿರುದನ್ನು ತಿಳಿಸುತ್ತಾ ಹೀಗೆ ಬರೆಯುತ್ತಾರೆ. “Gender. Sexual preference. Temperament. Personality. Impulsivity. Anxiety. Choice. One by one, the most mystical realms of human experience have become progressively encircled by genes. Aspects of behavior relegated largely or even exclusively to cultures, choices, and environments, or to the unique constructions of self and identity, have turned out to be surprisingly influenced by genes.” ಮುಂದೆ, ಆನುವಂಶಿಕತೆಯ ಅಧ್ಯಯನದಲ್ಲಿ ಹೊಸ ತಿರುವನ್ನು ಕೊಟ್ಟಂತಹ ಎಪಿಜೆನೆಟಿಕ್ಸ್ (Epigenetics) ಬಗೆಗಿನ ಸಂಶೋಧನೆ ಮತ್ತು ಅದರ ಸೂಚ್ಯಾರ್ಥ ನಮ್ಮನ್ನು ಅರಿಯುವಲ್ಲಿ ಬೆಳಕು ಚೆಲ್ಲುವ ಪ್ರಯತ್ನದ ಬಗ್ಗೆಯೂ ವಿವರಗಳಿವೆ.
6. 2015 : Post Genome : ಈ ಕೊನೆಯ ಭಾಗದಲ್ಲಿ, ‘ಹಣೆಬರಹ ಇಂಥಾ ಕಾಯಿಲೆಗಳಿಗೆ ಪರಿಹಾರವೇ ಇಲ್ಲʼ ಎಂದು ತಿಳಿದಿದ್ದ ಕಾಯಿಲೆಗಳಿಗೆ ಆನುವಂಶಿಕತೆಯ ನಿಖರವಾದ ಕಾರಣಗಳಿಂದ Gene therapy ಅಂದರೆ “ಅನುವಂಶಿಕ ಧಾತುವಿನ ಚಿಕಿತ್ಸೆ” ಮೂಲಕ ಇತಿಹಾಸವಾದ ಪ್ರಯೋಗಗಳನ್ನು ಕಾಣಬಹುದು. Genome sequencing ಮೂಲಕ ಗರ್ಭಾವಸ್ಥೆಯಲ್ಲೇ ಹುಟ್ಟಲಿರುವ ಮಗುವಿನ ಸಂಪೂರ್ಣ ಅನುವಂಶಿಕವಾಗಿ ನಿರ್ಧಾರಿತ ರೋಗಗಳ ಚಿತ್ರಣ ಕಾಣಬಹುದಾದರೂ, ಅದನ್ನು ಸರಿಪಡಿಸುವ/ತಿದ್ದುವ ನೈತಿಕ ದ್ವಂದ್ವಗಳ, “ಮನುಷ್ಯ” ನಿರ್ಮಾಣದಲ್ಲಿನ ಸಂಕೀರ್ಣತೆಯ ಬಗ್ಗೆ ಬಹಳ ಸೊಗಸಾಗಿ ವಿವರಿಸಿದ್ದಾರೆ. ಮುಂದುವರೆಯುತ್ತಾ, ನಿಖರವಾದ ಸ್ಥಾನದಲ್ಲಿ ಆನುವಂಶಿಕ ಮಾರ್ಪಾಡು ಸಾಧ್ಯವಾಗಿಸಿದ “Genome editing” ತಂತ್ರಜ್ಞಾನದ ಆವಿಷ್ಕಾರ(2012ರಲ್ಲಿ)ದ ನಂತರದಲ್ಲಿ ಮನುಷ್ಯನ ತನ್ನ ವಿಧಿಲಿಖಿತ ಬರಹವನ್ನೂ ತಿದ್ದಲು ಸಾಧ್ಯವೆನ್ನುವಷ್ಟು ಹತ್ತಿರ ಬೆಳೆದುಬಂದಿದ್ದು, ಸಾರ್ವಜನಿಕರ ತಿಳುವಳಿಕೆ, ಬೆಳವಣಿಗೆಯ ಸಾಧಕ, ಭಾಧಕಗಳ ಸೂಕ್ಷ್ಮತೆಯ ಚಿತ್ರಣವನ್ನು ಒಬ್ಬ ಕ್ರಿಯಾಶೀಲ ಸಂಶೋಧಕರಾಗಿ, ಸೂಕ್ಷ್ಮ ಮನಸ್ಸಿನ “ಮನುಷ್ಯ”ನಾಗಿ ಮುಂದಿಟ್ಟಿದ್ದಾರೆ.
ಸರಿಸುಮಾರು592 ಪುಟಗಳ ಈ ಪುಸ್ತಕವು 2017ರ ಪ್ರತಿಷ್ಟಿತ American Library Association(ALA) notable books list 2017 (Non fiction)ನಲ್ಲಿ ಸ್ಥಾನಪಡೆದಿದೆ ಹಾಗೂ ಹಲವು ಪ್ರತಿಷ್ಟಿತ ಅಂತರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗಳಿಗೆ ಶಿಫಾರಸ್ಸು ಪಡೆದ ಜನಪ್ರಿಯ ಪುಸ್ತಕ.
ವೈದ್ಯಕೀಯ ಸಂಬಂಧಿತವೆಂಬಂತೆ ಭಾಸವಾಗುವ ಈ ಪುಸ್ತಕವು, ವಿವಿಧ ಜೈವಿಕ ವಿಜ್ಞಾನ (ಕೃಷಿ ವಿಜ್ಞಾನ ಸಮೇತ)ಗಳಲ್ಲಿ ನಾಂದಿಯಾಗುವ ವಿವಿಧ ತಂತ್ರಜ್ಞಾನಗಳ ಆವಿಷ್ಕಾರಗಳ ಸಾರ್ವಜನಿಕ ಚರ್ಚೆ,ಅರಿವಿಗಾಗಿ ಎಲ್ಲಾ ರಂಗದವರೂ ಓದಲೇಬೇಕಾದ ಅದ್ಭುತ ಕೃತಿ. ಪುಸ್ತಕದ ಕೊನೆಯಲ್ಲಿ 1865ರ ಗ್ರೆಗೊರ್ ಮೆಂಡಲ್ ರಿಂದ ಆರಂಭಿಸಿ 2000ದ ವರೆಗಿನ ಮಾನವ ಜೀನೊಮ್ ವಿವರಗಳ ಘಟನಾವಳಿಯ ಚಿತ್ರವನ್ನು ಮೊಬೈಲುಗಳಲ್ಲಿ ಓದಲು ತುಸು ಹಿಗ್ಗಿಸಬೇಕಾಗುತ್ತದೆ.
ಡಾ. ಸಿದ್ಧಾರ್ಥ ಮುಖರ್ಜಿಯವರು ಮೂಲತಃ ಬಂಗಾಳಿ ಕುಟುಂಬದವರು. ನವದೆಹಲಿಯಲ್ಲಿ 21ನೆಯ ಜುಲೈ 1970 ರಂದು ಜನಿಸಿದ ಸಿದ್ಧಾರ್ಥ ಅಲ್ಲಿಯೆ ಶಾಲಾ ಶಿಕ್ಷಣ ಮುಗಿಸಿದವರು. ಮುಂದೆ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಜೀವಿವಿಜ್ಞಾನದ ಪದವಿ ಪಡೆದರು. ಮುಂದೆ ರೋಡ್ಸ್ ಸ್ಕಾಲರ್ (Rhodes Scholor) ಪುರಸ್ಕಾರದಿಂದ D.Phil ಅನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲೂ, M.D. ಪದವಿಯನ್ನು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲೂ ಪಡೆದಿದ್ದಾರೆ. ೨೦೧೪ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನೂ ಜೊತೆಗೆ ಅನೇಕ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಪ್ರಸ್ತುತ ಅವರು ಕೊಲಂಬಿಯಾ ವಿಶ್ವವಿದ್ಯಾಲಯದ Division of Hematology and Oncology ದಲ್ಲಿ ವೈದ್ಯಕೀಯ ವಿಜ್ಞಾನದ ಪ್ರೊಫೆಸರ್ ಆಗಿದ್ದಾರೆ. ಡಾ. ಸಿದ್ಧಾರ್ಥ ಮುಖರ್ಜಿ ಅವರ ಅಪಾರ ಓದು, ಸಂಶೋಧನಾ ಹರಹಿನ ಅರಿವನ್ನು ತಿಳಿಯಲು ಅವರ ಅತ್ಯಂತ ವಿಶಿಷ್ಟವಾದ ಟೆಡ್ ಟಾಕ್ (TED Talk) ಅನ್ನು https://www.ted.com/talks/siddhartha_mukherjee_soon_we_ll_cure_diseases_with_a_cell_not_a_pill?language=en ಲಿಂಕ್ ನಲ್ಲಿ ನೋಡಬಹುದು
ಧನ್ಯವಾದಗಳೊಂದಿಗೆ,
ಡಾ. ಭುವನೇಶ್ವರಿ, S
ವಿಜ್ಞಾನಿ (Plant Genetics), Division of Crop Improvement, ICAR-Indian Institute of Vegetable Research, Varanasi-221305
(ಡಾ. ಭುವನೇಶ್ವರಿಯವರು ಸಸ್ಯ ಆನುವಂಶೀಯ ವಿಜ್ಞಾನದಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ನವದೆಹಲಿಯಲ್ಲಿ ಡಾಕ್ಟೊರೆಟ್ ಮಾಡಿ ವಾರಣಾಸಿಯಲ್ಲಿ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವೆಜೆಟಬಲ್ ರೀಸರ್ಚ್ ನಲ್ಲಿ ಸಂಶೋಧಕಿಯಾಗಿದ್ದಾರೆ. ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ನನಗೆ ಕಿರಿಯ ವಿದ್ಯಾರ್ಥಿನಿಯಾಗಿದ್ದರು. ಅವರು ಆನುವಂಶೀಯ ವಿಷಯವನ್ನು ಅತ್ಯಂತ ವಿಸ್ತಾರವಾಗಿ ಪ್ರಸುತಪಡಿಸಿರುವ ಸಿದ್ಧಾರ್ಥ ಮುಖರ್ಜಿಯವರ“The Gene – An Intimate History” ಪುಸ್ತಕವನ್ನು ಪರಿಚಯಿಸಿಕೊಡುವುದರ ಮೂಲಕ CPUSನ ಜೊತೆಯಾಗಿದ್ದಾರೆ).