You are currently viewing ಸಾಕ್‌ ಜೈವಿಕ ಅಧ್ಯಯನಗಳ ಸಂಸ್ಥೆ (Salk Institute of Biological Studies)

ಸಾಕ್‌ ಜೈವಿಕ ಅಧ್ಯಯನಗಳ ಸಂಸ್ಥೆ (Salk Institute of Biological Studies)

ಮಾನವ ಕುಲದ ಆರೋಗ್ಯದ ಸಂಶೋಧನೆಗೆ ಅತ್ಯದ್ಭುತವಾದ ಸಂಸ್ಥೆಯೊಂದು ಅಂದರೆ ಅದು ಸಾಕ್‌ ಇನ್ಸ್‌ಸ್ಟಿಟ್ಯೂಟ್‌ ಆಫ್‌ ಬಯೊಲಾಜಿಕಲ್‌ ಸೈನ್ಸಸ್‌. ಪೋಲಿಯೋ ವ್ಯಾಕ್ಸೀನ್‌ ಅನ್ನು ಅಭಿವೃದ್ಧಿ ಪಡಿಸಿದ ವೈದ್ಯ ವಿಜ್ಞಾನಿ ಜೊನಾಸ್‌ ಸಾಕ್‌ ಅವರು ಅಕ್ಷರಶಃ ಪ್ರತೀ ಹಂತವನ್ನೂ ಆಲೋಚಿಸಿ ನಿರ್ಮಿಸಿದ ಸಂಸ್ಥೆ.

            ಜೊನಾಸ್‌ ಸಾಕ್‌ ಪೋಲಿಯೋ ವ್ಯಾಕ್ಸೀನ್‌ ಅನ್ನು ಅಭಿವೃದ್ಧಿ ಪಡಿಸಿ, ಅದು ಸಾರ್ವಜನಿಕ ಬಳಕೆಗೆ ಬಂದ ಮರುದಿನವೇ ಅವರು ಜಾಗತಿಕವಾಗಿ ಹೀರೋ ಆಗಿ ಹೊರ ಹೊಮ್ಮಿದ್ದರು. ಜಗತ್ತಿನ ಶ್ರೇಷ್ಠ ಪತ್ರಿಕೆಗಳಲ್ಲೊಂದಾದ “ಟೈಮ್‌ -TIME -ಮ್ಯಾಗಜೀನ್‌ 1954ರ ಮಾರ್ಚ್‌ ತಿಂಗಳಲ್ಲಿ ಮುಖಪುಟದಲ್ಲಿ ಸಾಕ್‌ ಅವರ ಚಿತ್ರವನ್ನು ಮುದ್ರಿಸಿತ್ತು. ಆಗ ಜೊನಾಸ್‌ ಸಾಕ್‌ ಅವರಿಗಿನ್ನೂ 40ರ ಹರೆಯ, ಆಗಲೇ ಮಾನವ ಕುಲದ ಆರೋಗ್ಯದ ಹಿತದಲ್ಲಿ ವಿಶಿಷ್ಟವಾದ ಸಂಸ್ಥೆಯ ಅಗತ್ಯವನ್ನು ಅವರು ಮನಗಂಡಿದ್ದರು. ವಿಜ್ಞಾನದ ಸಂಶೋಧನೆಗೆ ಎಲ್ಲಾ ರೀತಿಯಲ್ಲೂ ವಿಶೇಷವಾದ ಅದರಲ್ಲೂ ಮಾನವತೆಯ ಸಮೀಕರಿಸುವ ದಾರಿಯಲ್ಲಿ ಅವರು ನಡೆದರು. ಅವರ ಚಿಂತನೆಯ ಬೆಂಬಲಿಸುವ ಹಾದಿಯನ್ನು ಅನುಸರಿಸುವಂತೆ, ಭೌತಿಕವಾಗಿ ಹಾಗೂ ಬೌದ್ಧಿಕವಾಗಿ ಸಾಧ್ಯವಾಗುವಂತೆ ನಿರ್ಮಿಸಿದ ಸಂಸ್ಥೆಯದು. ಜೊನಾಸ್‌ ಸಾಕ್‌ ಅವರ ಅತಿ ದೊಡ್ಡ ನಂಬಿಕೆಯೆಂದರೆ ವಿಜ್ಞಾನ ಮತ್ತು ಕಲೆ ಎರಡೂ ಸಮ್ಮಿಲನಗೊಂಡಾಗಲೇ ಅದರ ಸಫಲತೆಯು ಸಾರ್ಥಕವಾಗುವುದು. ಅದಕ್ಕೆಂದೇ ಆರಂಭದಲ್ಲೇ ಸಂಪೂರ್ಣ ತೊಡಗಿಸಿಕೊಳ್ಳಬಲ್ಲ ಶ್ರದ್ಧಾವಂತ ವಿಜ್ಞಾನಿಗಳನ್ನು ತಮ್ಮ ಸಂಸ್ಥೆಯ ರಚನೆಯಲ್ಲಿ ತೊಡಗಿಸಿಕೊಂಡರು.

       ಅದೆಂತಹಾ ಘಟಾನುಘಟಿಗಳು ಪರೋಕ್ಷವಾಗಿ ಇಂತಹ ಸಂಸ್ಥೆಯ ಹಿಂದೆ ಇದ್ದರೆಂದರೆ ಆಲ್ಬರ್ಟ್‌ ಐನ್‌ಸ್ಟೈನ್‌, ಎನ್ರಿಕೊ ಫರ್ಮಿ, ನೀಲ್ಸ್‌ ಬೋರ್‌, ಲೀಸಾ ಮೈಟ್ನಾ ಮುಂತಾದವರು. ಇನ್ನು ನೇರವಾಗಿ ಜೊನಾಸ್‌ ಸಾಕ್‌ ಅವರ ಜೊತೆಗೂಡಿದವರು ವಿಖ್ಯಾತ ಗಣಿತಜ್ಞ ಜೇಕಬ್‌ ಬ್ರೊನೌಸ್ಕಿ (Jacob Bronowski), ಮೆಲ್ವಿನ್‌ ಕಾನ್‌ (Melvin Cohn), ರೊಜರ್‌ ಗಿಲೆಮಿನ್‌ (Roger Guillemin), ಫ್ರಾನ್ಸಿಕ್‌ ಕ್ರಿಕ್‌ (Francis Crick) ಮುಂತಾದವರು. ಸಂಸ್ಥೆಯ ಬೋರ್ಡ್‌ನ ಸ್ಥಾಪಕ ಅಧ್ಯಕ್ಷರಾಗಿ “ಮಾಲೆಕ್ಯುಲಾರ್‌ ಬಯಾಲಜಿ (Molecular Biology) ಪದವನ್ನು ಕೊಟ್ಟ ಗಣಿತಜ್ಞ ವಾರನ್‌ ವೀವರ್‌ (Warren Weaver) ಅವರು ಕೈಜೋಡಿಸಿದರು. ಆಧುನಿಕ ನ್ಯೂರೋ ಸೈನ್ಸ್‌ ನ ಪಿತಾಮಹಾ ಎಂದೇ ಕರೆಯುವ ಸ್ಟೀಫನ್‌ ಕುಫರ್‌ (Stephen Kuffler) ಸಹಾ ಸಾಕ್‌ ಜೊತೆಗಿದ್ದರು. ಹೀಗೆ ಇಂತಹವರ ದೊಡ್ಡ ಪಟ್ಟಿಯೇ ಇದೆ. ಇವರ ಜೊತೆಗೆ ನಾಲ್ಕಾರು ಕಿರಿಯ ವಿಜ್ಞಾನಿಗಳೂ ಜೊತೆಯಾದರು. ಅವರಲ್ಲಿ ಪ್ರಮುಖರಾದವರು ಮತ್ತು ಈಗಲೂ ಅಲ್ಲಿಯೇ ಇರುವ ಸೂಸನ್‌ ಬೊರ್ಗೀಸ್‌  (Suzanne Bourgeois).

ಜೀವಿವಿಜ್ಞಾನಿಯಾದ ಸೂಸನ್‌ ಬೊರ್ಗೀಸ್‌,  ಮೆಲ್ವಿನ್‌ ಕಾನ್‌ (Melvin Cohn) ಅವರ ಪತ್ನಿ. ಇವರು ಸಾಕ್‌ ಸಂಸ್ಥೆಯನ್ನು ಕುರಿತು “ಜೆನೆಸಿಸ್‌ ಆಫ್‌ ಸಾಕ್‌ ಇನ್ಸ್‌ಸ್ಟಿಟ್ಯೂಟ್‌- ದ ಎಪಿಕ್‌ ಆಫ್‌ ಇಟ್ಸ್‌ ಫೌಂಡರ್ಸ್‌ (Genesis of the Salk Institute_ The Epic of Its Founders) ಎಂಬ ಪುಸ್ತಕವನ್ನು ಬರೆದಿದ್ದಾರೆ. ಸಂಸ್ಥೆಯ ಆರಂಭದಿಂದ ಇಲ್ಲಿಯ ವರೆವಿಗೂ ಇರುವ ಅವರು ಪುಸ್ತಕದ ರಚನೆಗೆ ಕೊಟ್ಟ ಕಾರಣದಲ್ಲಿ “ಪ್ರೀತಿಯ ಕೆಲಸ (Labour of Love) ವೆಂದೇ ಕರೆದುಕೊಂಡು, ಅದೊಂದು ವಿಜ್ಞಾನದ ಮಹಾಕಾವ್ಯ- (An Epic of Science) ಎಂದೂ ಹೆಸರಿಸಿದ್ದಾರೆ. ಇಡೀ ಪುಸ್ತಕವೇ ಒಂದು ವಿಜ್ಞಾನದ ಇತಿಹಾಸದ ಮಹಾ ಕಾವ್ಯದಂತಿದೆ. ಜೀವಿ ವಿಜ್ಞಾನವು ವಿಜ್ಞಾನದ ಚರಿತ್ರೆಯಲ್ಲೇ ಅತ್ಯಂತ ಸಂಕೀರ್ಣವಾದದು. ಮನಸ್ಸು ಮತ್ತು ಮೆದುಳು ಅನ್ನೂ ಅರ್ಥ ಮಾಡಿಕೊಳ್ಳಲು ಹೆಣಗುವ ಸತ್ಯ ದರ್ಶನದಿಂದ ಮಾನವತೆಯು ಸುಸೂತ್ರವಾದ ಜೀವನ ನಿರ್ವಹಣೆಗೆ ಪಡುವ ಸಮಸ್ಯೆಗಳಿಂದ ಉಪಶಮನಗಳತ್ತ ಸಾಗಲು ಇರುವ ದಾರಿಯ ಸಂಕೀರಣತೆಯು ಒಂದು ಪ್ರಯೋಗಾಲಯದ ಸಂಸ್ಥೆಯ ನಿರ್ಮಿತಿಯಲ್ಲಿ ತೆರೆದುಕೊಳ್ಳುವ ಅನುಭಾವ ಅನನ್ಯವಾದುದು. ಹೌದು ಅದೊಂದು ದಾರ್ಶನಿಕ, ಆಧ್ಯಾತ್ಮಿಕ ಜೊತೆಗೆ ಅತ್ಯಂತ ಪ್ರಾಯೋಗಿಕ ಸಾಧ್ಯತೆಯ ಕುರುಹು.

ಕಲೆಯನ್ನೂ ಸಮಾಜವನ್ನೂ ಬೆರೆಸುವುದರಲ್ಲಿ ಆತ್ಯಂತಿಕ ಪ್ರೀತಿಯಿದ್ದ ಜೊನಾಸ್‌ ಸಾಕ್‌ ಕಟ್ಟಡ ವಿನ್ಯಾಸದ ವಾಸ್ತು ಶಿಲ್ಪಿ ಲೂಯಿಸ್‌ ಕಾನ್‌ (Louis Kahn) ಅವರನ್ನು ಕುರಿತು “ಕಲಾವಿದ ಪಿಕಾಸೊಗೂ ಸಹಾ ಬಂದು ನೋಡಬೇಕು (“Create a facility worthy of a visit by Picasso)” ಅನ್ನಿಸುವಂತೆ ಇರಬೇಕು ಅಂದಿದ್ದರು.  ಲೂಯಿಸ್‌ ಕಾನ್‌ (Louis Kahn) ಹೆಸರಾಂತ ವಾಸ್ತು ಶಿಲ್ಪಿ. ಅಷ್ಟೇ ಅಲ್ಲ ಮಹಾನ್‌ ಮಾನವತಾವಾದಿ, ವಿಶಿಷ್ಟ ಕಲಾವಿದ. ಹಾಗೆಂದೇ ವರ್ಷದಲ್ಲಿ ಭೂಮಿಯು ಹಗಲು-ರಾತ್ರಿಗಳನ್ನು ಸಮನಾಗಿ ಅನುಭವಿಸುವ ಎರಡು ದಿನಗಳಲ್ಲಿ ಸೂರ್ಯನು ಹಾದುಹೋಗುಂತೆ ಕಟ್ಟಡ ವಿನ್ಯಾಸ ಮಾಡಿದರು. ಆಧ್ಯಾತ್ಮಿಕ ಸೌಂದರ್ಯ ಹಾಗೂ ಸ್ಥಳೀಯತೆಯ ಸೊಬಗು ಎರಡನ್ನೂ ಬೆರೆಸುವಲ್ಲಿ ಚತುರರಾದ ಲೂಯಿಸ್‌ ತುಂಬಾ ವಿಶಿಷ್ಟವಾದ ಕಟ್ಟಡವನ್ನು ಕಟ್ಟಿದ್ದಾರೆ.

ಕಟ್ಟಡದ ಪ್ರತೀ ಹಂತದ್ದಲ್ಲೂ ಸಾಕ್‌ ಮತ್ತು ಲೂಯಿಸ್‌ ಚರ್ಚಿಸುತ್ತಲೇ ನಿರ್ಮಾಣ ಮಾಡಿದ್ದಾರೆ. (ಲೂಯಿಸ್‌ ಕಾನ್‌ ಜಗತ್ತಿನಲ್ಲೇ ವಿಶಿಷ್ಟರಾದ ವಾಸ್ತಿಶಿಲ್ಪಿ, ಭಾರತದಲ್ಲೂ IIM, ಅಹಮದಾಬಾದ್‌ ಕಟ್ಟಡ ಹಾಗೂ ಕ್ಯಾಂಪಸ್‌ ನಿರ್ಮಿಸಿದವರು, ಅವರ ವಿಶಿಷ್ಟ ಜೀವನವನ್ನೂ ಮುಂದೊಮ್ಮೆ ನೋಡೋಣ).

ಇಡೀ ಕಟ್ಟಡದ ಎಲ್ಲಾ ಪ್ರಯೋಗಾಲಯಗಳೂ ಫೆಸಿಫಿಕ್‌ ಮಹಾಸಾಗರವನ್ನು ಎದಿರು ನೋಡುವಂತೆ ನಿರ್ಮಿಸಿದ್ದು ವಿಶಿಷ್ಟ ಕಲೆಗಾರಿಕೆ. ವಿಜ್ಞಾನಿಗಳು ಕನಸುಗಳನ್ನು ವಿಸ್ತರಿಸಿಕೊಳ್ಳಲು ಸಾಗರದ ವಿಶಾಲತೆಯು ಸದಾ ಎದುರಾಗಿರುವಂತೆ ವಿನ್ಯಾಸ ಮಾಡಿದ್ದು, ಲೂಯಿಸ್‌ ಅವರ ಹೆಚ್ಚುಗಾರಿಕೆ. ಪ್ರತೀ ಪ್ರಯೋಗಾಲಯವೂ ತೆರೆದುಕೊಂಡ ಹಾಗೆ ಸದಾ ಆಲೋಚನೆ ಹಾಗೂ ಚಟುವಟಿಕೆಗಳಿಗೆ ಅನುವಾಗುವಂತೆ ನಿರ್ಮಿಸಲಾಗಿದೆ. ಕ್ಯಾಲಿಫೋರ್ನಿಯಾದ ಲಾ ಹೋಯಾದಲ್ಲಿ ಫೆಸಿಫಿಕ್‌ ಮಹಾಸಾಗರಕ್ಕೆ ಅಂಟಿಕೊಂಡಂತೆ ಇರುವ ಸಂಸ್ಥೆಯು ಇಂದು ಸುಮಾರು 850 ಸಂಶೋಧಕರನ್ನು ಒಳಗೊಂಡಿದೆ. ಇವರೆಲ್ಲರೂ ಸುಮಾರು 60 ಕ್ಕೂ ಹೆಚ್ಚು ಸಂಶೋಧನಾ ಗುಂಪುಗಳಾಗಿ ಮಾಲೆಕ್ಯುಲಾರ್‌ ಬಯಾಲಜಿ (Molecular Biology), ನ್ಯೂರೊ ಸೈನ್ಸ್‌ (Neuro Science), ಜೆನೆಟಿಕ್ಸ್‌ (Genetics) ಹಾಗೂ ಸಸ್ಯ ಜೀವಿವಿಜ್ಞಾನ (Plant Biology) ವಿಷಯಗಳಲ್ಲಿ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ವಿವಿಧ ಸಂಶೋಧನೆಯ ಗುಂಪುಗಳು ಏಜಿಂಗ್‌ (ಮುಪ್ಪಾಗುವಿಕೆ-ವಯಸ್ಸಾಗುವಿಕೆ), ಕ್ಯಾನ್ಸರ್‌, ಆಲ್‌ಝೈಮರ್ಸ್‌ (ಮರೆಗುಳಿ ಕಾಯಿಲೆ), ಪಾರ್ಕಿನ್‌ಸನ್‌, AIDS, ಹಾಗೂ ನರಸಂಬಂಧಿ ಜೀವಿವಿಜ್ಞಾನ (ನ್ಯೂರೊ ಬಯಾಲಜಿ) ಕುರಿತಂತೆ ಇಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಈ ಸಂಸ್ಥೆಯ ಸಂಬಂಧದಲ್ಲಿ ಒಟ್ಟು 11 ವಿಜ್ಞಾನಿಗಳು ನೊಬೆಲ್‌ ಪುರಸ್ಕಾರವನ್ನು ಪಡೆದಿದ್ದಾರೆ. ಅವರಲ್ಲಿ ಐವರು ಸಾಕ್‌ ಸಂಸ್ಥೆಯ ವಿದ್ಯಾರ್ಥಿಗಳು.

       ಇಷ್ಟೊಂದು ವೈಶಿಷ್ಟಪೂರ್ಣವಾದ ಜೀವಿ ವಿಜ್ಞಾನದ ಕನಸುಗಳನ್ನು ಹೊತ್ತು ಮಾನವತೆಗೆ ಜೊತೆಗೆ ಇಡೀ ಜೀವಿಸಂಕುಲಕ್ಕೆ ನೆರವಾಗುವ ಸತ್ಯ ದರ್ಶನದ ಹಿಂದೆ ಹೋದ ಮಹಾನ್‌ ಸಂಸ್ಥೆಯ ಕುರಿತು ನೂರಾರು ಪದಗಳಲ್ಲಿ ಹೇಳುವುದಾದರೂ ಹೇಗೆ? ವಿಜ್ಞಾನದ ಸಂರಚನೆಯ ಬಗ್ಗೆ ವಿಜ್ಞಾನದ ಸಮಾಜೀಕರಣದ ಹಿನ್ನೆಲೆಯ ಬ್ರುನೊ ಲಾಟುವ್‌ ಅವರ “ಲ್ಯಾಬೊರೇಟರಿ ಲೈಫ್‌” ಕೊಡುಗೆಯನ್ನೂ ನೀಡಿದ ಸಂಸ್ಥೆ ಇದು (ಇದರ ವಿವರಗಳನ್ನಿಲ್ಲಿ ನೋಡಬಹುದು ). ಪಿಕಾಸೊ ಕೂಡ ನೋಡಬೇಕು ಅನ್ನಿಸುವಂತೆ ನಿರ್ಮಿಸಿದ ಸಂಸ್ಥೆಗೆ ಮುಂದೆ ಪಿಕಾಸೊನ ಗೆಳತಿ “ಫ್ರಾಂಸ್‌ವಾಯ್ಸ್‌ ಜಿಲೊ (Françoise Gilot) ಸಾಕ್‌ ಅವರ ಸಂಗಾತಿಯಾಗಿ ಇಲ್ಲಿಯೆ ನೆಲೆ ನಿಂತವರು. ಇದೇ 2022 ರ ನವೆಂಬರ್‌ 26 ಕ್ಕೆ ಅವರಿಗೆ 101ವರ್ಷಗಳು ತುಂಬುತ್ತವೆ. ಸಾಕ್‌ ಸಂಸ್ಥೆಯ ಸಂಗೀತ ಗೋಷ್ಠಿಯ ಗೌರವ ಅಧ್ಯಕ್ಷರಾದ ಅವರು ಪ್ರತೀ ವರ್ಷ ಆವರಣದ ಕಲಾತ್ಮಕತೆಯನ್ನು ಸ್ವಂತ ನಿರ್ವಹಿಸುತ್ತಲೇ ಇದ್ದಾರೆ.  

“ಫ್ರಾಂಸ್‌ವಾಯ್ಸ್‌ ಜಿಲೊ ಮತ್ತು ಅವರು ಸಂಸ್ಥೆಗೆ ರೂಪಿಸಿದ ಕಲಾತ್ಮಕ ಚಿತ್ರ

       ಜೊನಾಸ್‌ ಸಾಕ್‌, 2014 ರಲ್ಲಿ ಗೂಗಲ್‌ ಡೂಡಲ್‌ ನಿಂದಾಗಿ ಅವರನ್ನು ಕುರಿತು ಹೆಚ್ಚು ಹೆಚ್ಚು ತಿಳಿಯುವ ಮನಸ್ಸಾಗಿ, ಹುಡುಕಾಟದಲ್ಲಿ ಅವರು ತೀವ್ರವಾಗಿ ಹತ್ತಿರವಾದರು. ಅದು ಅವರ ಜನ್ಮ ಶತಮಾನೋತ್ಸವ ವರ್ಷ. ಹಿಂದೆಲ್ಲಾ ವಾಕ್ಸೀನ್‌ ಕುರಿತ ಪ್ರಶ್ನೆಗಳಿಗೆ ಜೆನ್ನರ್‌ ಅಥವಾ ಪಾಶ್ಚರ್‌ ಕುರಿತು ಉತ್ತರಿಸುತ್ತ ಇದ್ದೆವು. ಪೋಲಿಯೋ ಹನಿಗಳ ವ್ಯಾಕ್ಸೀನು ಹೊತ್ತ ಸ್ವಯಂ ಸೇವಕರು ಎಲ್ಲೆಂದರಲ್ಲಿ, ಬಸ್‌ ಸ್ಟ್ಯಾಂಡ್‌, ಮನೆ ಮನೆಗಳಲ್ಲಿ, ಬೀದಿ ಬೀದಿಗಳಲ್ಲಿ ಕಾಣಿಸಿಕೊಂಡರೂ ಸಾಕ್‌ ಅಷ್ಟು ಕಾಡಿರಲಿಲ್ಲ. ಕಳೆದ ಆರೆಂಟು ವರ್ಷಗಳಲ್ಲಿ ಸಾಕ್‌ ತಮ್ಮ ಸಾಕ್‌ ಸಂಸ್ಥೆಯ ಮೂಲಕ ಹುಡುಕಾಟಕ್ಕೆ ಹಚ್ಚಿದ್ದರು. ಪ್ರತೀ ತಿಂಗಳು ಸಾಕ್‌ ಸಂಸ್ಥೆಯಿಂದ ವಾರ್ತಾ ಪತ್ರಿಕೆಯು ನನ್ನ ಇ-ಮೇಲಿಗೆ ಬರಲು ಆರಂಭಿಸಿತು. ವಿಜ್ಞಾನದ ಸಮಾಜೀಕರಣದ ಮೊದಲ ಪಾಠಗಳನ್ನು ಸ್ವಲ್ಪ-ಸ್ವಲ್ಪವೇ ಕಲಿಯತೊಡಗಿದ್ದರೂ ಸಾಕ್‌ ಮೂಲಕ ಬ್ರುನೊ ಲಾಟುವ್‌ ಪರಿಚಯಗೊಂಡು ಸಮಾಜೀಕರಣದಲ್ಲಿ ವಿಜ್ಞಾನದ ಸಂರಚನೆಯ ವ್ಯಾಖ್ಯಾನಗಳು ತಿಳಿದವು.

ಲಾ ಹೊಯಾದ ಸಂಸ್ಥೆಯ ವಿಶೇಷತೆಯು ಲೂಯಿಸ್‌ ಕಾನ್‌ ಮೂಲಕ ಹೊಸತೊಂದು ವಾಸ್ತು ಶಿಲ್ಪದ ಲೋಕವನ್ನೇ ತೆರೆದು ಕೊಟ್ಟಿತು. ಅಷ್ಟೇ ಅಲ್ಲ ವಾಸು ವಿನ್ಯಾಸದ ಜೊತೆಗೆ ದಾರ್ಶನಿಕ, ಆಧ್ಯಾತ್ಮಿಕ ವಿಚಾರಗಳ ಹಿತವಾದ ಬೆರಕೆಯು ಅಚ್ಚರಿಯ ಲೋಕಕ್ಕೆ ಕರೆದೊಯ್ದಿದೆ. ವಿನ್ಯಾಸಕ ಲೂಯಿಸ್‌ ಭಾರತ ಬಾಂಗ್ಲಾದೇಶಗಳ ಜೊತೆ ಒಡನಾಡಿದ ವಿವರಗಳಂತೂ ಸಾಧನೆಗಳ ಸಾಧ್ಯತೆಗೆ ಹೀಗೂ ಉಂಟಾ ಅನ್ನಿಸಿದ್ದಿದೆ.  (ಈ ಮಹಾನ್‌ ವ್ಯಕ್ತಿಯ ವಿಚಾರಗಳು ಕಳೆದೆರಡು ದಿನಗಳ ಓದಿನಲ್ಲಿ ಅದೆಷ್ಟು ಭಾರವಾಗಿದೆ ಎಂದರೆ, ಏನನ್ನೂ ಅವರ ಕುರಿತು ಹೇಳಲು ಕಷ್ಟವಾಗುವಷ್ಟು! ನೋಡೋಣ ಮುಂದೊಮ್ಮೆ ಸಾಧ್ಯವಾದೀತು)

ನಾವು CPUS ಅನ್ನು ಆರಂಭಿಸುವಾಗ ಸಂಸ್ಥೆ ಅಂದರೆ ಸಾಕ್‌ ಸಂಸ್ಥೆಯ ಹಾಗೆ ಇರಬೇಕು, ಅನ್ನಿಸಿದ್ದು ನಿಜ.  ಮುಂದೆ ದಿನ ಕಳೆದಂತೆ, ಅದರಲ್ಲೂ ಸಾಕ್‌ ಮೂಲಕ ಪರಿಚಯಗೊಂಡ ಲೂಯಿಸ್‌, ಬ್ರುನೊ,  ಸೂಸನ್‌ ಮೊರ್ಗೀಸ್ ಮತ್ತು,  ಮೆಲ್ವಿನ್‌ ಕಾನ್‌  ದಂಪತಿಗಳು, ಸ್ವತಃ ಸಾಕ್‌ ಅವರ ಎರಡನೆಯ ಪತ್ನಿಯಾದ ಫ್ರಾಂಸ್‌ವಾಯ್ಸ್‌ ಜಿಲೊ ಇವರೆಲ್ಲಾ ವಿಜ್ಞಾನದ ಸತ್ಯದ ದರ್ಶನದ ಜೊತೆಗೆ ಅದರಲ್ಲಿ ಪರಿಹಾರದ ಪ್ರಯೋಗಗಳು ಉಳಿಸಿಹೋಗುವ ಪ್ರಶ್ನೆಗಳು ಇನ್ನೂ ಮಹತ್ವವಾದವು ಎಂಬುದನ್ನು ಕಲಿಸಿವೆ. ವಿಜ್ಞಾನದ ತಿಳಿವಿನಲ್ಲಿ ಸೂಕ್ಷ್ಮತೆಯ ಪಾಠಗಳು ಅನನ್ಯವಾದವು ಎಂಬದಂತೂ ಅಳಿಸಲಾರದ ನೆನಪುಗಳಾಗಿ ಮನಸ್ಸಿನಲ್ಲಿವೆ.

ನನ್ನ ಅನೇಕ ಸಹಚರಿಗಳನ್ನೂ ಸೇರಿಸಿಕೊಂಡು ನನ್ನೊಡನಾಟದಲ್ಲಿ ಈ ಸೂಕ್ಷ್ಮತೆಯ ಪರಿಚಯದ ಸಂಕೀರ್ಣತೆಯನ್ನು ಅರ್ಥ ಮಾಡಿಸಲು ಕಷ್ಟ ಪಟ್ಟಿದ್ದೇನೆ ಹಲವಾರು ಬಾರಿ ಸೋತಿದ್ದೇನೆ. ಸಮಾಜೀಕರಣದ ಮೂಲ ಪಾಠಗಳನ್ನು, ಸಮಯ ಮತ್ತು ಸನ್ನಿವೇಶಗಳಲ್ಲಿ (Time and Space) ಎಂತಹವರಿಗೂ ಭಾರತೀಯ ಸಂದರ್ಭದಲ್ಲಿ ಸಮೀಕರಿಸುವುದು ತುಂಬಾ ಕಷ್ಟ ಎನ್ನಿಸಿದ್ದಿದೆ. ಸಾಕ್‌ ಸಂಸ್ಥೆಯ ವಿಚಾರಗಳ ಹಿಂದೆ ಹೋದ ಮೇಲೆಯಂತೂ ಪ್ರಾಯೋಗಿಕ ಸಾಧ್ಯತೆಗಳ ಮಾತಂತೂ ದೂರವೇ ಉಳಿದಿದೆ. ಕನಿಷ್ಟ ಪರಿಕಲ್ಪನೆಗಳಲ್ಲಾದರೂ  CPUS –ಉಳಿದು ಬೆಳೆಯಬೇಕು, ಎನ್ನುವ ಮಹತ್ವಾಕಾಂಕ್ಷೆಯಂತೂ ಮಾಸುವುದಿಲ್ಲ.  

ನಮಸ್ಕಾರ

 ಡಾ. ಟಿ.ಎಸ್‌ ಚನ್ನೇಶ್

Leave a Reply