You are currently viewing ಸಂಸ್ಕೃತಿಗಳನ್ನು ಬೆಸೆದ ಮೆಕ್ಕೆಜೋಳ : Maize/Corn – Zea mays

ಸಂಸ್ಕೃತಿಗಳನ್ನು ಬೆಸೆದ ಮೆಕ್ಕೆಜೋಳ : Maize/Corn – Zea mays

ನಮ್ಮಲ್ಲಿ ರೊಟ್ಟಿ ಮಾಡುವ ಸಾಮಾನ್ಯವಾದ ಜೋಳಕ್ಕೆ ಹೋಲಿಸಿದರೆ ಮುಸುಕಿನ ಜೋಳ ಅಥವಾ ಮೆಕ್ಕೆಜೋಳ ಅಥವಾ ಗೋವಿನ ಜೋಳ ಭಾರತೀಯರ ಆಹಾರದಲ್ಲಿ ಹೆಚ್ಚು ಬಳಕೆಯಲ್ಲಿ ಇಲ್ಲ. ಆದರೆ ಅಮೆರಿಕ ಖಂಡಗಳಲ್ಲಿ ಇದು ಅವರ ಆಹಾರ ಸಂಸ್ಕೃತಿಯನ್ನು ರೂಪಿಸಿರುವ ಬಹು ಮುಖ್ಯವಾದ ಬೆಳೆ. ಈಗಲೂ ಮೆಕ್ಕೆಜೋಳವನ್ನು ಇಡಿಯಾದ ಸುಟ್ಟ ಅಥವಾ ಬೇಯಿಸಿದ ತೆನೆಯನ್ನು ಹಿಡಿದು ತಿನ್ನುವ ಅಭ್ಯಾಸವೇ ನಮಗೆ ಹೆಚ್ಚು ಪರಿಚಿತ. ಎಂಭತ್ತರ ದಶಕದಲ್ಲಿ ಕೃಷಿ ವಿದ್ಯಾರ್ಥಿಯಾಗಿ ಬೆಂಗಳೂರಿನ ವ್ಯವಸಾಯ ಕಾಲೇಜು ಸೇರಿದ ಸಂದರ್ಭದಲ್ಲಿ ಅದನ್ನು ಬೆಳೆದು ಕಲಿಯುವ ಅನುಭವಕ್ಕೆ ಒಳಗಾಗಬೇಕಿತ್ತು. ಶಿವಮೊಗ್ಗ ಸಮೀಪದ ನನ್ನೂರು ನ್ಯಾಮತಿಯಲ್ಲಿ ಆಗಿನ್ನೂ ಯಾರೂ ಮೆಕ್ಕೆಜೋಳವನ್ನು ಬೆಳೆಯುತ್ತಿರಲಿಲ್ಲ! ಆದರೆ ಈಗ ರಾಜ್ಯದಲ್ಲಿ ಮೆಕ್ಕೆಜೋಳವನ್ನು ಬೆಳೆಯುವ ಪ್ರದೇಶಗಳಲ್ಲಿ ಒಂದಾಗಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯ ಆಶ್ರಿತ ಕೃಷಿಗೆ ಅತ್ಯಂತ ಮೆಕ್ಕೆಜೋಳದಷ್ಟು ಆಪ್ತವಾಗಿ ಹೊಂದಿಕೊಂಡ ಬೆಳೆ ಮತ್ತೊಂದಿಲ್ಲ. ಇದು ಭೂಮಂಡಲದ ಉತ್ತರದ 50 ರೇಖಾಂಶದಿಂದ ದಕ್ಷಿಣದ 40  ರೇಖಾಂಶದವರೆವಿಗೂ ಇದು ಹಬ್ಬಿದೆ.  ಕನಿಷ್ಠ ಮಳೆಯೂ ಒಂದಷ್ಟು ಮೆಕ್ಕೆ ಜೋಳದ ಕೊಯಿಲನ್ನು ಮಾಡಿಸುತ್ತದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಂತೂ ಏನೂ ಬೆಳೆಯಾಗಲಿಲ್ಲ -ಎಂಬುದಕ್ಕೆ ಅರ್ಥ ಬರಬೇಕಾದರೆ, ಆ ವರ್ಷ ಮೆಕ್ಕೆಜೋಳನೂ ಆಗಲಿಲ್ಲ ಅಂದರೆ ಮಾತ್ರವೇ ಸರಿ. ಅಷ್ಟರ ಮಟ್ಟಿಗೆ ಮೆಕ್ಕೆಜೋಳದ ಖಾತ್ರಿ ಕೊಯಿಲು. ಉಷ್ಣವಲಯ, ಸಮಶೀತೋಷ್ಣವಲಯವನ್ನು ಅಷ್ಟರ ಮಟ್ಟಿಗೆ ಆವರಿಸಿದ ಬೆಳೆ -ಮೆಕ್ಕೆಜೋಳ. 

       ರಾಗಿ, ಜೋಳ, ಅಕ್ಕಿ, ಸಜ್ಜೆಯ ಕಾಳುಗಳಿಗೆ ಹೋಲಿಸಿದಲ್ಲಿ ಮೆಕ್ಕೆಜೋಳದ ಕಾಳು ಹಿರಿದು. ಹಾಗಾಗಿ ಪೂರ್ವದ ನೆಲದ ಕಿರಿಧಾನ್ಯಗಳನ್ನು ನುಂಗಿದ ಕಾಳೂ ಎಂಬ ಅಪವಾದದೊಂದಿಗೆ, ಅದೂ ಹಿರಿದಾಗಿಸಲು ತನ್ನ ತವರಿನ ಬುಡಕಟ್ಟುಗಳು ಅನುಶೋಧಿಸಿದ ವಿಶಿಷ್ಟ ಚರಿತ್ರೆಯನ್ನೂ ತನ್ನೊಳಗೆ ಇರಿಸಿಕೊಂಡಿದೆ. ಮೆಕ್ಕೆಜೋಳದ ತವರೂರು ಮಧ್ಯ ಅಮೆರಿಕದ ಮೆಕ್ಸಿಕೊ ದೇಶ. ಇತರೇ ಬಳಕೆಯ ಬಹುಪಾಲು ಸಸ್ಯಗಳಂತೆ ಮೆಕ್ಕೆಜೋಳವು ತನ್ನ ವನ್ಯ ಸಂಬಂಧಿಯನ್ನು ಹೊಂದಿಲ್ಲ, ಅದು ಅಳಿವಿಗೆ ಸೇರಿದೆ ಎಂದೇ ನಂಬಲಾಗಿತ್ತು.  ಉದಾಹರಣೆಗೆ ಗೋಧಿ, ಭತ್ತ, ಅವರೆ ಇತ್ಯಾದಿಗಳು ಈಗ ನಾವು ಬಳಸುವ ಕಾಳುಗಳನ್ನೇ ಹೋಲುವ ಕಾಳುಗಳಿರುವ ಸಸ್ಯಗಳನ್ನು ವನ್ಯದಲ್ಲಿ ಇಂದಿಗೂ ಕಾಣಬಹುದು. ಇದು ಅನೇಕ ಕೃಷಿ ಬೆಳೆಗಳಿಗೂ ಅನ್ವಯಿಸುತ್ತದೆ. ಆದರೆ ಮೆಕ್ಕೆ ಜೋಳ ಅಥವಾ ಮುಸುಕಿನ ಜೋಳವನ್ನು ಸಮೀಪಿಸುವ ಮತ್ತೊಂದು ಬೆಳೆ ವನ್ಯದಲ್ಲಿ ಇಲ್ಲ. ಅಂದರೆ ಈಗ ನಾವೆಲ್ಲಾ ಕಾಣುವ ಒಂಟಿ ಕಾಂಡದ ಮೇಲೆ ಎಲೆಗಳನ್ನು ಹರಡಿಕೊಂಡು, ತುದಿಯಲ್ಲಿ ಹೂಗುಚ್ಚವನ್ನು ಹೊದ್ದು ಕುತ್ತಿಗೆಯಲ್ಲೆಂಬಂತೆ ಗಟ್ಟಿಯಾದ ತೆನೆಯನ್ನು ಬಿಡುವ ಗಿಡವನ್ನೇ ಹೋಲುವ ಮತ್ತೊಂದು ಸಸ್ಯವಿಲ್ಲ. ಆದರೂ ಅದನ್ನು ಜಾಣತನದ ಊಹಿಸಿ ಅದರ ಮೂಲವನ್ನೂ ಸಂಶೋಧಿಸಿದವರು ಓರ್ವ ಕೃಷಿಕನ ಮಗ ಹಾಗೂ ಕೃಷಿ ವಿಜ್ಞಾನಿ. ಅವರು ಜೀನು ಮತ್ತು ವರ್ತೆನೆಗಳ ಸಂಬಂಧದ ಆನುವಂಶಿಕ ಹುಡುಕಾಟದ ವಿಜ್ಞಾನದ ತಿಳಿವಿಗಾಗಿ ನೊಬೆಲ್‌ ಪಾರಿತೋಷಕವನ್ನೂ ಪಡೆದ ವಿಜ್ಞಾನಿ ಕೂಡ.

ಅಷ್ಟೇ ಅಲ್ಲ ಮೆಕ್ಕೆ ಜೋಳದ ಕಾಳುಗಳ ಬಣ್ಣದ ಕಾಲಾಕೃತಿಯ ಜೋಡಣೆಗಳನ್ನು ಇಂದಿಗೂ ಕಾಣುವ ಬಗೆಯ ಹಿಂದಿನ ರಹಸ್ಯವನ್ನೂ ಅವುಗಳ ಕ್ರೊಮೋಸೋಮುಗಳ ಮಾದರಿ (Pattern)ಜೋಡಣೆಗಳನ್ನು ಅರಿಯುವ ಮೂಲಕ ಹೊಸತೊಂದು ವೈಜ್ಞಾನಿಕ ಜಗತ್ತನ್ನು ಪರಿಚಯಿಸಿದ ಹೆಣ್ಣುಮಗಳ ಶ್ರಮವನ್ನೂ ಇದರ ಚರಿತ್ರೆಯು ಒಳಗೊಂಡಿದೆ. ಅಚ್ಚರಿಯೆಂದರೆ ಇದನ್ನೆಲ್ಲಾ ಅನಾವರಣಗೊಳಿಸಿ ಮುವತ್ತು- ಮುವತ್ತೈದು ವರ್ಷಗಳ ನಂತರ ಆಕೆಗೂ ನೊಬೆಲ್‌ ಪುರಸ್ಕಾರ ದೊರೆಯಿತು. ಅಷ್ಟೇ ಅಲ್ಲಾ ಮೆಕ್ಕೆಜೋಳದ ಜೊತೆಗೆ ಆಕೆಯ ಜೀವನ ಎನ್ನುವ ರೂಪಕವೂ ವಿಜ್ಞಾನ ಜಗತ್ತಿನಲ್ಲಿ ಜನಪ್ರಿಯವಾಗಿದೆ. ಇಷ್ಟೆಲ್ಲದರ ಜೊತೆಗೆ ಈ ಮುಸುಕಿನ ಜೋಳದ ಆಧುನಿಕತೆಯ ವಿಶಿಷ್ಟ ಜಗತ್ತೂ ನಿರ್ಮಿತವಾಗಿ ಅದರ ಪಾರಂಪರಿಕ ಅಡಿಪಾಯದ ಜೊತೆಗೆ ಬಹು ದೊಡ್ಡ ಸಂಘರ್ಷಕ್ಕೂ ಕಾರಣವಾಗಿದೆ. ಇವೆಲ್ಲವುಗಳನ್ನೂ ವಿವರವಾಗಿಯೇ ನೋಡೋಣ.

       ಮೆಕ್ಕೆಜೋಳ ಮಾಮೂಲಿ ಜೋಳ ಹಾಗೂ ಅಕ್ಕಿ-ರಾಗಿಯಂತೆಯೇ ಹುಲ್ಲಿನ ಜಾತಿಯ ಸಸ್ಯವೇ! ಇದೂ ಸಹಾ ಅವುಗಳಂತಯೇ ಪೊಯೇಸಿಯೆ ಸಸ್ಯ ಕುಟುಂಬಕ್ಕೇ ಸೇರಿದೆ. ಇದರ ಸಂಕುಲವಾದ ಜಿಯಾ (Zea)ದಲ್ಲಿ ಕೇವಲ ಐದು ಪ್ರಭೇದಗಳನ್ನು ಮಾತ್ರವೇ ಗುರುತಿಸಲಾಗಿದೆ. ನಾವು ಬೆಳೆದು, ಬಳಸುವ ಸಸ್ಯವು ಜಿಯಾ ಮೇಸ್‌ (Zea mays) ಎಂಬ ಸಸ್ಯವೈಜ್ಞಾನಿಕ ಹೆಸರಿನ ಪ್ರಭೇದವಾಗಿದೆ. ಇಡೀ ಅಮೆರಿಕಾ ಖಂಡವನ್ನು ಸಾವಿರಾರು ವರ್ಷಗಳಿಂದ ಸಲಹುತ್ತಿರುವ ಈ ಬೆಳೆಯು ಕೊಲಂಬಸ್‌ ಅಲ್ಲಿಗೆ ಕಾಲಿಟ್ಟು ಹಿಂತಿರುಗಿದಾಗ ತಂದಂತಹಾ ಅನೇಕ ಬೆಳೆಗಳಲ್ಲಿ ಇದೂ ಒಂದು. ಸಾಮಾನ್ಯವಾಗಿ ಇಂಗ್ಲೀಶ್‌ ಭಾಷೆಯಲ್ಲಿ ಮೈಜ್‌, ಕಾರ್ನ್‌ ಅಥವಾ ಇಂಡಿಯನ್‌ ಮೈಜ್‌ ಎಂದು ಕರೆಯಲಾಗುತ್ತದೆ. ಇಂಡಿಯನ್‌ ಮೈಜ್‌ ಎಂದರೆ ಭಾರತೀಯ ಎಂದಲ್ಲ! ಅಮೆರಿಕಾ ಇಂಡಿಯನ್‌ ಬುಡಕಟ್ಟನ್ನು ಒಳಗೊಂಡ ಹೆಸರು. ಈಗ ಇಂಡಿಯನ್‌ ಮೈಜ್‌ ಎಂಬುದು ಜಗತ್ತಿನಲ್ಲಿರುವ ಮೆಕ್ಕೆ ಜೋಳಗಳ ಪೈಕಿ ಅತ್ಯಂತ ಹಳೆಯ ಬಗೆಯ ಬೆಳೆಗೂ ಹಾಗೆ ಕರೆಯುವುದುಂಟು. ಅದನ್ನು ಫ್ಲಿಂಟ್‌ ಕಾರ್ನ್‌ (Flint Corn)ಎಂದೂ ವಿಭಾಗಿಸಲಾಗುತ್ತದೆ. ಈ ಬಗೆಯಲ್ಲದೆ ಡೆಂಟ್‌ ಕಾರ್ನ್‌(Dent Corn), ಸ್ವೀಟ್‌ ಕಾರ್ನ್‌ (Sweet Corn ), ಪಾಪ್‌ ಕಾರ್ನ್‌ (Pop Corn) ಮತ್ತು ವ್ಯಾಕ್ಸಿ ಕಾರ್ನ್‌ (Waxy Corn) ಬಗೆಗಳು ಬಳಕೆಯಲ್ಲಿವೆ.   

ಫ್ಲಿಂಟ್‌ ಕಾರ್ನ್‌ (Flint Corn) ಹೆಸರೇ ಹೇಳುವಂತೆ ಫ್ಲಿಂಟ್‌ ಅಥವಾ ಕಲ್ಲು ಜೋಳ. ಇದರ ಕಾಳುಗಳು ತುಂಬಾ ಗಟ್ಟಿಯಾದ ಕಾರಣದಿಂದ ಹಾಗೆ ಹೆಸರಿಸಲಾಗಿದೆ. ಇದರ ಕಾಳಿನ ಹೊರ ಮೈಯು ತೀರಾ ಗಟ್ಟಿಯಾಗಿದ್ದು ಪುಡಿಯಾಗಿಸಲು ತುಸು ಕಷ್ಟ ಪಡಬೇಕಾಗುತ್ತದೆ. ಈ ಬಗೆಯವು ವಿವಿಧ ಬಣ್ಣಗಳ ಕಾಳುಗಳನ್ನು ಹೊಂದಿರುತ್ತವೆ. ಬಿಳಿ, ಹಳದಿ, ಕೆಂಪು, ನೀಲಿ ಅಲ್ಲದೆ ಕಪ್ಪು ಸಹಾ ಇರುತ್ತವೆ. ಈ ಬಗೆಯ ತಳಿಗಳನ್ನು ಪಾರಂಪರಿಕ ತಳಿಗಳೆಂದು ಸಹಜವಾಗಿ ಕರೆಯಲಾಗುತ್ತದೆ. ಇವು ಹಾಗೂ ಡೆಂಟ್‌ ಕಾರ್ನ್‌(Dent Corn)ಗಳೆರಡನ್ನೂ (Zea mays Indurata) ಎನ್ನಲಾಗುತ್ತದೆ. ಡೆಂಟ್‌ ಕಾರ್ನ್‌ನ ಕಾಳಿನ ಮೇಲ್ಬಾಗ ಡೆಂಟ್‌ ಅಥವಾ ತಗ್ಗಾಗಿ ಇರುತ್ತದೆ. ಹೀಗಾಗಲು ಒಳಗಿನ ಪಿಷ್ಟವು ಒಣಗಿದ ಮೇಲೆ ಉಡುಗಿ (Shrink) ಹಾಗಾಗುತ್ತದೆ. ಇವುಗಳಲ್ಲಿ ಸಾಮಾನ್ಯವಾಗಿ ಹಳದಿ ಅಥವಾ ಬಿಳಿಯ ಬಣ್ಣದವು. ಇದರಲ್ಲಿ ಅಪರೂಪಕ್ಕೆ ಕೆಂಪು ಬಣ್ಣದ ಕಾಳುಗಳಿರುತ್ತವೆ. ಇಂದು ಅಮೆರಿಕದಲ್ಲಿ ಅತಿ ಹೆಚ್ಚು (95%) ಬೆಳೆಯುತ್ತಿರುವ ತಳಿಗಳು.

ಸ್ವೀಟ್‌ ಅಥವಾ ಸಿಹಿಯಾದ ಕಾರ್ನ್‌ (Sweet Corn) ಗಳನ್ನು Zea mays-Saccharata ಎಂದು ಕರೆಯಲಾಗುತ್ತದೆ. ಇವುಗಳು ಡೆಂಟ್‌ ಕಾರ್ನ್‌ ಅಥವಾ ಮತ್ತಾವುದೇ ಕಾರ್ನ್‌ಗಳಿಗಿಂತಲೂ ಹೆಚ್ಚು ಸಕ್ಕರೆಯ ಅಂಶವನ್ನು ಹೊಂದಿರುತ್ತವೆ. ಇದರಲ್ಲಿ ಪ್ರತಿಶತ 20ರವರೆಗೂ ಸಕ್ಕರೆ ಇರುವುದುಂಟು. ಇತರೇ ಪ್ರಕಾರಗಳಲ್ಲಿ 3-5% ಇದ್ದರೆ ಹೆಚ್ಚು. ಜೊತೆಗೆ ಇವುಗಳಲ್ಲಿ ವಿಟಮಿನ್‌ “ಸಿ” ಹಾಗೂ “ಎ” ಕೂಡ ಇರುತ್ತದೆ.

ಫ್ಲೊರ್‌ ಕಾರ್ನ್‌ (Flour Corn) ಅನ್ನು Zea mays  Amylacea ಎಂದು ಕರೆಯುತ್ತಾರೆ. ಇವುಗಳ ಕಾಳಿನ ಹೊರ ಮೈ ಮೃದು. ಸುಲಭವಾಗಿ ಹಿಟ್ಟು ಮಾಡಬಹುದು. ಇದು ಅಮೆರಿಕಾದ ಸ್ಥಳಿಯರು ಜೊತೆಗೆ ದಕ್ಷಿಣ ಅಮೆರಿಕಾದವರೂ ಸಹಾ ಬಳಸುವ ಮೆಕ್ಕೆ ಜೋಳವಾಗಿದೆ.

ಪಾಪ್‌ ಕಾರ್ನ್‌ (Pop Corn) ಅನ್ನು Zea mays- Everta ಎಂದು ಕರೆಯುತ್ತಾರೆ. ಇವುಗಳು ನಮಗೂ ತಿಳಿದಂತೆ “ಪಾಪ್‌” ಹುರಿದು -ಅರಳು- ಮಾಡುವ- ಬಗೆಯವು. ಕಾಳುಗಳನ್ನು ಸುಮಾರು 150-170°C  ಉಷ್ಣತೆಯಲ್ಲಿ ಹುರಿದಾಗ ಅರಳಾಗುತ್ತವೆ. ಈ ಗುಣವೇ ಈ ಮೇಲೆ ಹೇಳಿದ ಸಸ್ಯದ ಪೂರ್ವಜರ ಹುಡುಕಾಟದಲ್ಲಿ ಪತ್ತೆ ಹಚ್ಚಲು ಬಳಕೆಯಾದದ್ದು. ಅದನ್ನು ಮುಂದೆ ನೋಡೋಣ.

ವ್ಯಾಕ್ಸಿ ಕಾರ್ನ್‌(Waxy Corn) ಎಂಬ ಬಗೆಯವನ್ನು  Zea mays -Ceretina  ಎಂದು ಕರೆಯುತ್ತಾರೆ. ಈ ಬಗೆಯ ಜೋಳದ ಕಾಳುಗಳ ಹೊರ ಮೈಯು ಮೇಣದಂತೆ ಹೊಳಪುಳ್ಳವು. ಈ ವ್ಯಾಕ್ಸ್‌ ಅಥವಾ ಮೇಣದಂತಹಾ ಗುಣ ಮತ್ತದರ ಒಟ್ಟು ಪಿಷ್ಠವು ಅಮೈಲೊಪೆಕ್ಟಿನ್‌ ಬಗೆಯಿಂದ ಬಂದಿದೆ. ಆದರೆ ಇತರೇ ಪ್ರಕಾರಗಳಲ್ಲಿ ಪಿಷ್ಠವು ಅಮೈಲೊಸ್‌ ಹೆಚ್ಚಾಗಿ ಇರುವ ಬಗೆಯ ಪಿಷ್ಠ. ಇತ್ತೀಚೆಗೆ ಇವೆರಡೂ ಬಗೆಗಳ ಹಲವಾರು ಹೈಬ್ರಿಡ್‌ಗಳೂ ಬಳಕೆಯಲ್ಲಿವೆ. ಇಂತಹಾ ವ್ಯಾಕ್ಸಿ ಕಾರ್ನ್‌ಗಳು ತಿನಿಸುಗಳ ಹೊರತಾಗಿ ಬಳಕೆಯಾಗುವ ಉತ್ಪನ್ನಗಳ ಕೈಗಾರಿಕೆಯಲ್ಲಿ ಬಳಕೆಯಾಗುತ್ತವೆ. ಬಟ್ಟೆ, ಕಾಗದ ಹಾಗೂ ಬಣ್ಣ ಮುಂತಾದ  ಉತ್ಪನ್ನಗಳಲ್ಲಿ ವ್ಯಾಕ್ಸಿ ಕಾರ್ನ್‌ನ ಎಣ್ಣೆಯನ್ನು ಬಳಸಲಾಗುತ್ತದೆ.

ಇವೆಲ್ಲವುಗಳಲ್ಲೂ ಬೇಬಿ ಕಾರ್ನ್‌ ಅಥವಾ ಎಳೆಯ ತೆನೆಗಳ ಮೆಕ್ಕೆಜೋಳವನ್ನು ಪಡೆಯಬಹುದಾಗಿದೆ. ಕೆಲವು ಕಡೆ ಕೆಲವನ್ನು ಬೇಬಿ ಕಾರ್ನ್‌ ಆಗಿ ಪಡೆಯುತ್ತಾರಷ್ಟೇ! ಮುಖ್ಯವಾಗಿ ಇನ್ನೂ ಬಲಿಯದ, ಹೆಚ್ಚೂ ಕಡಿಮೆ ಪರಾಗಸ್ಪರ್ಶವೇ ಆಗದ ತೆನೆಯದು. ಹಾಗಾಗಿ ಬೇಗನೇ ಕೊಯಿಲು ಮಾಡುವ ಬಗೆಯ ಮೆಕ್ಕೆಜೋಳ. ಇವುಗಳ ಕೊಯಿಲನ್ನು ಕೈಯಿಂದಲೇ ಮಾಡಬೇಕು. ಆದ್ದರಿಂದ ಹೆಚ್ಚು ಶ್ರಮದ ಕೊಯಿಲುಗಳಿವು.

ಈಗ ಮೆಕ್ಕೆಜೋಳದ ಮುಖ್ಯ ಕಥನದ ಭಾಗಕ್ಕೆ ಬಂದಿದ್ದೇವೆ. ಹುಲ್ಲಿನ ಜಾತಿಯದೇ ಆದರೂ ಇದರ ತೆನೆಯು ಮಾತ್ರ ಇತರೆ ಹುಲ್ಲುಗಳಂತಲ್ಲ, ಹುಲ್ಲು ಬೆಳೆಗಳಂತೆಯೂ ಅಲ್ಲ. ಬಹುತೇಕ ಹುಲ್ಲಿನ ಜಾತಿಯವಲ್ಲಿ ಕಾಳುಗಳು ತೆರೆದುಕೊಂಡಿದ್ದರೆ, ಮೆಕ್ಕೆಜೋಳದಲ್ಲಿ ಮಾತ್ರವೇ ಅಚ್ಚುಕಟ್ಟಾಗಿ ಪ್ಯಾಕ್‌ ಮಾಡಿದ ತೆನೆಗಳು. ಅದೂ ದಪ್ಪನಾಗಿ ಸುಲಭವಾಗಿ ತೆರೆದುಕೊಳ್ಳದ ಹಾಗೆ! ಹೌದು ಇಂತಹಾ ಸೊಬಗಿನಿಂದಲೇ ಅದರ ತವರಿನ ಸಮುದಾಯವು ಅದನ್ನು ದೈವದ ಹಾಗೆ ಕಂಡಿದೆ. ಜಗತ್ತಿನ ಹಳೆಯ ಸಂಸ್ಕೃತಿಗಳಲ್ಲಿ ಒಂದಾದ ಮಾಯನ್‌ ಸಂಸ್ಕೃತಿಯ ಸರಿ ಸುಮಾರು 20 ಭಾಷೆಗಳಲ್ಲೂ ಒಂದೇ ಪದದಿಂದ ಮೆಕ್ಕೆಜೋಳವನ್ನು ಕರೆಯಲಾಗುತ್ತದೆ. ಈ ಎಲ್ಲಾ ಮಾಯನ್‌ ಭಾಷೆಗಳಲ್ಲೂ ಇಶೀಮ್‌(Ixim – pronounced ‘ee-sheem’) ಅಂದರೆ ಮೆಕ್ಕೆಜೋಳ ಎಂದೇ! ಸರಿಸುಮಾರು 10,000 ವರ್ಷಗಳ ಹಿಂದೆ ಮಧ್ಯ-ಅಮೆರಿಕದ ಪುರಾತನ ಮಾಯನ್‌ ಸಂಸ್ಕೃತಿಯ ಜನರು ಟಿಯೊಸಿಂಟೆ ಎಂಬ ಹುಲ್ಲಿನಿಂದ ಈಗಿನ ಮೆಕ್ಕೆಜೋಳವನ್ನು ಆರಿಸಿ ಆಯ್ದು ಬೆಳೆಯುತ್ತಲೇ ಅನುಶೋಧಗೊಳಿಸಿದರು. ಇಂದೂ ಸಹಾ ಮೆಕ್ಸಿಕನ್ನರಿಗೆ, ಮೆಕ್ಕೆಜೋಳವು ಒಂದು ಬೆಳೆಯಲ್ಲ ಆದರೆ ದೈನಂದಿನ ಜೀವನಕ್ಕೆ ಅಂತರ್ಗತವಾಗಿರುವ ಆಳವಾದ ಸಾಂಸ್ಕೃತಿಕ ಸಂಕೇತ.    

ಇದಂತೂ ನಿಜಕ್ಕೂ ಅತ್ಯಂತ ಅಚ್ಚರಿಯ ವೈಜ್ಞಾನಿಕ ಸಂಗತಿಯೇ ಆಗಿದೆ. ಈ ಊಹೆಯನ್ನು ಮೊಟ್ಟ ಮೊದಲು ಜಾಣತನದಿಂದ ಮಾಡಿದ ಡಾ. ಜಾರ್ಜ್‌ ವೆಲ್ಸ್‌ ಬೀಡಲ್‌  (George Wells Beadle). ಆಗ ಅವರಿನ್ನೂ ಯುವ ವಿಜ್ಞಾನಿ. ಹಾಗಾಗಿ ಯಾರೂ ಒಪ್ಪದಾದ  ಊಹೆಯನ್ನು ಒರೆಹಚ್ಚಿ ಪತ್ತೆ ಮಾಡಲು ಜಾರ್ಜ್‌ ತಾವು ನಿವೃತ್ತಿಯ ನಂತರವೂ ಸಂಶೋಧನೆಯಲ್ಲಿ ತೊಡಗಿದವರು. ಜಾರ್ಜ್‌ ಓರ್ವ ರೈತನ ಮಗ. ನೆಬ್ರಸ್ಕಾ ರಾಜ್ಯದ ಲಿಂಕ್ಲನ್‌ ಬಳಿಯ ಕೃಷಿ ಕಾಲೇಜಿನ ತುಸು ದೂರದಲ್ಲೇ ಅವರ ತಂದೆ ಕೃಷಿಕರಾಗಿದ್ದರು. ಹೈಸ್ಕೂಲಿನ ವಿದ್ಯಾರ್ಥಿಯ ಜಾಣತನ ಗುರುತಿಸಿದ ಶಿಕ್ಷಕರು ವಿಜ್ಞಾನದ ಕಲಿಕೆಗೆ ಪ್ರೋತ್ಸಾಹಿಸಿ ಹತ್ತಿರದ ನೆಬ್ರಸ್ಕಾ ಕೃಷಿ ಕಾಲೇಜಿಗೆ ಸೇರಿಸಿದರು. ಆನುವಂಶಿಕ ವಿಜ್ಞಾನದ ಪರಿಣಿತಿಯ ಜತೆಯಲ್ಲಿ ಕೃಷಿ ಪದವಿ ಪಡೆದ, ಜಾರ್ಜ್‌ ಮುಂದೆ ಗೋಧಿ ಮತ್ತು ಮೆಕ್ಕೆ ಜೋಳದ ಆನುವಂಶಿಕ ವಿಜ್ಞಾನದ ಹಿಂದೆ ಹೋದವರು. ಪ್ರತಿ ತಳಿ ಅಥವಾ ಜೀವಿಯ ಜೀವಿರಸಾಯನಿಕ ಪ್ರಕ್ರಿಯೆಗಳು ಒಂದೊಂದು ಜೀನುಗಳ ಅವಲಂಬಿಸುವ ಸಿದ್ಧಾಂತದ ಸಂಶೋಧನೆಗಳಿಂದ ಹೆಸರು ಮಾಡಿದರು. ಇದೇ ವಿಷಯಗಳ ಸಂಬಂಧದಲ್ಲಿ 1959ರ ಶರೀರ ಕ್ರಿಯಾ ವಿಜ್ಞಾನ ಮತ್ತು ವೈದ್ಯಕೀಯ ವಿಜ್ಞಾನದ ನೊಬೆಲ್‌ ಪಾರಿತೋಷಕವನ್ನು ಮತ್ತಿಬ್ಬರೊಡನೆ ಹಂಚಿಕೊಂಡರು. ಇದೇ ಜಾರ್ಜ್‌ ಬೀಡಲ್‌ ಮೊಟ್ಟ ಮೊದಲು ಟಿಯೊಸಿಂಟೆ ಹುಲ್ಲನ್ನು ಮೆಕ್ಕೆ ಜೋಳದ ಪೂರ್ವಜರಾಗಿರುವ ಸಸ್ಯ ಎಂದು ಊಹಿಸಿದ್ದು. ಟಿಯೊಸಿಂಟೆಯನ್ನೂ ಒಳಗೊಂಡಂತೆ ಬಗೆ ಬಗೆಯ ಹುಲ್ಲುಗಳ ಕುರಿತು ಅಧ್ಯಯನ ನಡೆಸುತ್ತಿದ್ದ ಬೀಡಲ್‌ ಅವರಿಗೆ ಟಯೊಸಿಂಟೆ ಹುಲ್ಲಿನ ಬೀಜಗಳು ಈಗಿನ ಕಾರ್ನ್‌ ಅಂತೆ “ಪಾಪ್”-‌ ಅರಳಾಗುವ ಗುಣದಿಂದ ಅನುಮಾನ ಹುಟ್ಟಿತ್ತು. ಆದರೆ ಇಡಿ ಗಿಡ ಮೆಕ್ಕೆಜೋಳದಂತೆ ಇಲ್ಲ. ಅಲ್ಲದೆ ಅದರಿಂದ ವಿಕಾಸಗೊಂಡಿದ್ದರೆ ಅದರ ಜೀನುಗಳ ಸಂಬಂಧವು ಸುಳುಹು ಕೊಟ್ಟೀತು ಎಂಬ ಸಂಗತಿಯ ಹಿಂದೆ ಹೋದವರು ಜಾರ್ಜ್‌ ಬೀಡಲ್.‌ ಇಂದಿಗೂ ಈ ಹುಲ್ಲು ಮೆಕ್ಸಿಕೊ ರಾಜ್ಯದಲ್ಲಿ ಇದೆ. ಇದೊಂದು ಕವಲೊಡೆವ ಸಸ್ಯವಾಗಿದ್ದು ತೆನೆಗಳೂ ಹೀಗಿರದೆ ಭಿನ್ನವಾದವು. ಮೆಕ್ಕೆ ಜೋಳದಂತೆ ಒಂದೇ ತೆನೆಯವೂ ಅಲ್ಲ! ಹಲವು ತೆನೆಗಳು ಜೊತೆಗೆ ಸಪೂರದವೂ ಸಹಾ! ಹಾಗಿದ್ದಲ್ಲಿ ಜಾರ್ಜ್‌ ಬೀಡಲ್‌ ಅದು ಹೇಗೆ ಸಾಬೀತು ಮಾಡಿದರು?

ಈ ಎರಡೂ ಸಸ್ಯಗಳೂ ಒಂದೇ ರೀತಿಯಲ್ಲಿ ಕಾಣುವ ಕ್ರೊಮೋಸೋಮುಗಳನ್ನು ಹೊಂದಿರುವುದನ್ನು ಗಮನಿಸಿದ ಜಾರ್ಜ್‌ ಮೊಟ್ಟ ಮೊದಲು ಊಹಿಸಿದರು. ನಂತರ ಅವುಗಳನ್ನು ಸಂಕರಗೊಳಿಸಿ ಪಡೆದ ಮೊದಲ ಸಂತತಿ (F1)ಅನ್ನು ಪಡೆದು ನಂತರ ಎರಡನೆಯ ಸಂತತಿಯಲ್ಲಿ(F2) ಎರಡೂ ಬೆಳೆಗಳ ನಡುವೆ ಇರುವ ಆನುವಂಶಿಕ ಸಂಬಂಧವನ್ನು ಅದೆಷ್ಟು ಜೀನುಗಳು ನಿರ್ವಹಿಸಿ ಬೆಂಬಲಿಸಿವೆ ಎಂಬುದನ್ನು ಪತ್ತೆ ಹಚ್ಚಿದರು. ಇದಕ್ಕಾಗಿ ಜಾರ್ಜ್‌ 52,000 F2 ತಳಿಗಳನ್ನು ಬೆಳೆದು ಪ್ರತಿ ಸಂಕರದಲ್ಲಿ 500ರಲ್ಲಿ ಒಂದು ಟಿಯೊಸಿಂಟೆಯನ್ನು ಒಂದು ಮೆಕ್ಕೆ ಜೋಳವನ್ನು ಹೋಲುತ್ತಿದ್ದವು. ಹಾಗಾಗಿ ಅವುಗಳನ್ನು 4 ರಿಂದ 5 ಜೀನುಗಳಲ್ಲಿ ಮಾತ್ರವೇ ಅವೆರಡೂ ಸಸ್ಯಗಳ ಭಿನ್ನತೆಯನ್ನು ನಿರೂಪಿಸಿವೆ ಎಂಬ ತೀರ್ಮಾನಕ್ಕೆ ಬಂದರು. ಇವರೆನೋ ಟಿಯೊಸಿಂಟೆ ಹಾಗೂ ಈಗಿರುವ ಮೆಕ್ಕೆ ಜೋಳದ ಆನುವಂಶಿಕ-ಜೆನಿಟಿಕ್‌ ಸಂಬಂಧವನ್ನು ನಿರೂಪಿಸಿದರು.  ಇದಕ್ಕೆ ಪೂರಕವಾಗಿ ಮುಂದುರೆದು  ಸ್ಮಿತ್ಸೋನಿಯನ್‌ ಟ್ರಾಪಿಕಲ್‌ ಸಂಸ್ಥೆಯ ಪುರಾತತ್ವ ತಜ್ಞೆ ಡೊಲರ್ಸ್‌ ಪಿಪೆರ್ನೊ (Dolores Piperno) ಅವರು ಅದನ್ನು ಪುರಾತತ್ವ ಅಧ್ಯಯನಕ್ಕೆ ಒಳಪಡಿಸಿ ಒರೆಹಚ್ಚಿ ನೋಡಿ, ಅವರ ಊಹೆಯನ್ನು ಸಾಬೀತು ಪಡಿಸಿ ಬೆಂಬಲಿಸಿದರು. ಇದರಿಂದಾಗಿ ಸುಮಾರು 9000-10,000 ವರ್ಷಗಳ ಹಿಂದೆಯೆ ಟಿಯೊಸಿಂಟೆಯಿಂದ ಆಯ್ದು ಕಾಲಕ್ರಮೇಣ ಈಗಿರುವ ಮೆಕ್ಕೆ ಜೋಳವನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂಬುದು ತಿಳಿದು ಬಂತು. ಇದೊಂದು ಅತ್ಯಂತ ಅಚ್ಚರಿಯ ಅಭಿವೃದ್ಧಿ! ಏಕೆಂದರೆ ಅವರು ರೂಪಿಸಿರುವ ಬೆಳೆ, ಪೋಷಕರನ್ನೇ ಹೋಲದ ಅತ್ಯಂತ ಬದಲಾದ ಸಂಕರ ತಳಿ. ಇಂತಹದನ್ನು ಡಾ. ಜಾರ್ಜ್‌ ಬೀಡಲ್‌ ಯುವ ವಿಜ್ಞಾನಿಯಾಗಿಯೇ ಊಹಿಸಿ ನಿವೃತ್ತಿಯ ನಂತರವೂ ಹುಡುಕಿ ಕೊಟ್ಟ ತಿಳಿವಿನಿಂದ ಸಾಧ್ಯವಾಯಿತು. ಇದನ್ನು ಹೊರತು ಪಡಿಸಿದರೆ ಇಂದಿನ ಮೆಕ್ಕೆ ಜೋಳವನ್ನೇ ಹೋಲುವ ಅತ್ಯಂತ ಹಳೆಯ ಪಳೆಯುಳಿಕೆಯು ಸಿಕ್ಕಿರುವುದು ಕೇವಲ 6000 ವರ್ಷಗಳ ಹಿಂದಿನದು ಮಾತ್ರ. ಆದರೆ ಜಾರ್ಜ್‌ ಅವರ ಊಹೆಯು ಮತ್ತಷ್ಟು ಸರಿ ಸುಮಾರು 3000-3500 ವರ್ಷಗಳ ಹಿಂದಕ್ಕೆ ಕೊಂಡೊಯ್ದದ್ದಲ್ಲದೆ, ಮೂಲ ವಂಶಜರನ್ನೂ ಪತ್ತೆ ಹಚ್ಚಿ ಕೊಟ್ಟಿತು.

       ಇದಕ್ಕೆ ಸಮಾನಾಂತರವಾಗಿ ಮೆಕ್ಕೆಜೋಳ ಮತ್ತೊಂದು ಮಹತ್ವ ಪೂರ್ಣ ವೈಜ್ಞಾನಿಕ ತಿಳಿವಿಗೆ ಆಧಾರವಾಗಿದೆ. ಇದಕ್ಕೆಲ್ಲಾ ಕಾರಣರಾದವರು ಅಪ್ರತಿಮ ಮಹಿಳಾ ವಿಜ್ಞಾನಿ ಬಾರ್ಬರಾ ಮೆಕ್ಲಿಂಗ್ಟಾಕ್‌. ಇವರೂ ಸಹಾ ಕೃಷಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಯಾಗಿಯೇ ವಿಜ್ಞಾನ ಜಗತ್ತಿಗೆ ಬಂದವರು. ಬಾರ್ಬರಾ ಕಾರ್ನೆಲ್‌ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ವಿದ್ಯಾರ್ಥಿ. ಇವರೂ ಜಾರ್ಜ್‌ ಅವರ ಸಮಕಾಲೀನರೇ! ಅವರಿಗಿಂತಾ ಒಂದು ವರ್ಷ ಹಿರಿಯ ಹೆಣ್ಣುಮಗಳು, ಅಲ್ಲದೆ ಜಾರ್ಜ್‌ಗಿಂತಾ  ಐದು ವರ್ಷಗಳ ಹೆಚ್ಚು ಕಾಲ ಬದುಕಿದ್ದರು. ಇವರೂ ಸಹಾ ಮೆಕ್ಕೆಜೋಳದ ವಿಕಾಸದ ಅಧ್ಯಯನವನ್ನು ಅದರ ಕ್ರೊಮೋಸೋಮುಗಳು ಸಂತಾನಾಭಿವೃದ್ಧಿಯ ಮೂಲಕ ಬದಲಾಗುವ ಪ್ರಕ್ರಿಯ ಮೂಲಕ ಮಾಡತೊಡಗಿದ್ದರು. 1920ನೆಯ ವರ್ಷದಲ್ಲಿ ವಿದ್ಯಾರ್ಥಿ ಜೀವನದಿಂದ ಮೆಕ್ಕೆಜೋಳದ ಕ್ರೊಮೋಸೋಮುಗಳ ಅಧ್ಯಯನದಲ್ಲಿ ತೊಡಗಿದ ಬಾರ್ಬರಾ ಹೆಚ್ಚೂ ಕಡಿಮೆ ತನ್ನ ಜೀವ ಪೂರ್ತಿ ಮೆಕ್ಕೆ ಜೋಳದ ಆನುವಂಶಿಕ ವಿವರಗಳ ಮತ್ತು ಜೀನುಗಳು ಅವನ್ನೆಲ್ಲಾ ನಿಭಾಯಿಸುವ ಪ್ರಕ್ರಿಯೆಗಳ ಅಧ್ಯಯನದಲ್ಲಿ ತೊಡಗಿದ್ದರು. ಮೊದ ಮೊದಲು ಯಾವುದೇ ವಿಶ್ವವಿದ್ಯಾಲಯದ ಕೆಲಸವೂ ಸಿಗದೆ ಕಡೆಗೆ “ಕೋಲ್ಡ್‌ ಸ್ಪ್ರಿಂಗ್‌ ಹಾರ್ಬರ್‌” ಪ್ರಯೋಗಾಲಯದಲ್ಲಿ ನೆಲೆಯಾದರು.

ಬಹುಶಃ ಆಗಿನ ಪರಿಸ್ಥಿತಿಯಲ್ಲಿ ಹೆಣ್ಣುಮಗಳೊಬ್ಬರ ಜಾಣ್ಮೆಯನ್ನೂ ಅನುಶೋದವನ್ನು ಬೆಂಬಲಿಸಿದ ಜೊತೆಗೆ ಒಪ್ಪದ ಸಂದರ್ಭವನ್ನು ಒಂಟಿಯಾಗಿಯೆ ಅನುಭವಿಸಿ-ಎದುರಿಸಿದರು. ಅವರ ಸಂಶೋಧನಾ ತಿಳಿವನ್ನು ಮಹಿಳೆಯೆಂಬ ಕಾರಣಕ್ಕೆ ಒಪ್ಪದ ಆ ಸಮಯದಲ್ಲಿ ಇನ್ನೂ ಡಿಎನ್ಎ(DNA)ಗಳ ರಾಚನಿಕ ವಿನ್ಯಾಸ ತಿಳಿಯದ ಕಾಲ ಕೂಡ. ಹಾಗಾಗಿ 1953ರನಂತರ ತಮ್ಮ ಶೋಧದ ಪ್ರಕಟಣೆಗಳನ್ನೇ ನಿಲ್ಲಿಸಿಬಿಟ್ಟರು. ಕಡೆಗೂ ಅವರ 1950-60ರನಡುವಿನ ಸಂಶೋಧನೆಯನ್ನು ಜಗತ್ತು ೭೦ರ ದಶಕದ ನಂತರವೇ ಗುರುತಿಸಲು ಆರಂಭಿಸಿತು. ಆಗ ಮತ್ತೆ ವಿಜ್ಞಾನದ ಸುದ್ದಿಯಲ್ಲಿ ಬಂದು ಗುರುತಿಸುವಂತಾದರು. ಮುಂದೆ 1983ರಲ್ಲಿ ಶರೀರವಿಜ್ಞಾನ ಮತ್ತು ವೈದ್ಯಕೀಯ ವಿಭಾಗದ ನೊಬೆಲ್‌ ಪುರಸ್ಕಾರಕ್ಕೆ  ಪಾತ್ರರಾದರು. ಅವರ ಮೆಕ್ಕ ಜೋಳದ ಜೀನುಗಳ ಪ್ರಕ್ರಿಯಿಂದಾಗಿ ಅವುಗಳು ಮಾರ್ಪಡುವ ಸಂಗತಿಯ ತಿಳಿವಿಗಾಗಿ ಈ ಪುರಸ್ಕಾರ ಅವರ ಅನುಶೋಧದ ಹಲವು ದಶಕಗಳ ನಂತರ ದೊರಕಿತ್ತು. ನಾವು ಸಾಮಾನ್ಯವಾಗಿ ಒಂದೇ ಮೆಕ್ಕೆ ಜೋಳದಲ್ಲಿ ವಿವಿಧ ಬಣ್ಣದ ಕಾಳುಗಳ ಜೋಡಣೆಯನ್ನು ಗಮನಿಸುತ್ತೇವೆ ಅಲ್ಲವೆ? ಅದಕ್ಕೆ ಕಾರಣ ಜೀನುಗಳು ಮಾರ್ಪಡುವಿಕೆ. ಇದನ್ನೇ “ಜಂಪಿಂಗ್‌ ಜೀನ್ಸ್‌” ಎಂದೂ ಕರೆಯಲಾಗುತ್ತದೆ. ಬಾರ್ಬರಾ ಅವರು ಇಡೀ ಜೀವಮಾನವನ್ನೇ ಈ ಬೆಳೆಯ ಜೀನುಗಳು ಸಂತಾನಭಿವೃದ್ಧಿಯ ಮೂಲಕ ಮಾರ್ಪಡುವಿಕೆಯ ನಿರಂತರ ಅಧ್ಯಯನದಲ್ಲಿ ತೊಡಗಿದ್ದರು. ಇತ್ತೀಚೆಗೆ ಬಾರ್ಬರಾ ಜೀವನವನ್ನು ಆಧರಿಸಿದ “Maize -ಮೈಜ್‌” ಎಂಬ ಶೀರ್ಷಿಕೆಯ ಒಂದು ನಾಟಕವನ್ನು ಅವರು ವಿದ್ಯಾರ್ಥಿನಿಯಾಗಿದ್ದ ಕಾರ್ನಲ್‌ ವಿಶ್ವವಿದ್ಯಾಲಯದಲ್ಲಿ ಪ್ರದರ್ಶಿಸಲಾಯಿತು. ಐದಾರು ದಶಕಗಳು ನಿರಂತರವಾಗಿ ಮೆಕ್ಕೆ ಜೋಳದ ಕ್ರೊಮೋಸೋಮುಗಳ ಅಧ್ಯಯನದ ಮೂಲಕ ಜೀನುಗಳ ಮಾರ್ಪಡುವ ಹೊಸ ತಿಳಿವನ್ನು ವಿಜ್ಞಾನ ಜಗತ್ತಿಗೆ ತಂದು ಬೆರಗುಗೊಳಿಸಿದವರು. ಜೀನುಗಳ ಅಧ್ಯಯನದಲ್ಲಿ ಗ್ರೆಗೊರ್‌ ಜಾನ್‌ ಮೆಂಡಲ್‌ ನಂತರ ಅಷ್ಟೊಂದು ಮಹತ್ತರವಾದ ಅನುಶೋಧವನ್ನು ಮಾಡಿದವರು ಯಾರೂ ಇಲ್ಲ. ಬಾರ್ಬರಾ ಮೆಕ್ಲಿಂಗ್ಟಾಕ್‌ಗೆ ನೊಬೆಲ್‌ ಪುರಸ್ಕಾರ ಬಂದ ವರ್ಷವೇ ನಾನು ಆಗಷ್ಟೇ ಕೃಷಿ ಕಾಲೇಜು ಸೇರಿ ಮೆಕ್ಕೆ ಜೋಳವನ್ನು ಬೆಳೆದು ಅನುಭವಕ್ಕೆ ತಂದುಕೊಳ್ಳುವ ಅವಕಾಶವಾಗಿತ್ತು. ನೊಬೆಲ್‌ ಅದ್ಭುತಗಳ ಬೆನ್ನು ಹತ್ತುವ ಆರಂಭದಲ್ಲಿದ್ದ ನನಗೆ ಸುಮಾರು ಮೂರು-ನಾಲ್ಕು ದಶಕಗಳ ನಂತರ ಅದರ ವಿವರಗಳ ಬೆಳಕು ಕಂಡು ಹೀಗೆ ಹಂಚಿಕೊಳ್ಳಲು ಸಾಧ್ಯವಾದ ಖುಷಿಯಿದೆ.

       ಅವರು ಕೃಷಿ ವಿದ್ಯಾರ್ಥಿಯಾಗಿದ್ದಾಗಲೇ ಆಲೋಚಿಸಿ ಸಿದ್ಧಾಂತಗಳನ್ನು ರೂಪಿಸಿ ದಶಕಗಳ ನಂತರ ಮನ್ನಣೆ ಪಡೆದ ಅಪ್ರತಿಮ ವಿಜ್ಞಾನಿ ಬಾರ್ಬರಾ ಮೆಕ್ಲಿಂಗ್ಟಾಕ್‌ ಪುರಸ್ಕಾರಕ್ಕೆ ಒಳಗಾದಾಗ 81 ವರ್ಷದವರು. ಆಗ ನಾನಿನ್ನು ಕೃಷಿ ವಿಜ್ಞಾನದಲ್ಲಿ ಅಂಬೆಗಾಲಿಡುತ್ತಿದ್ದವನು. ಇದೀಗ ಆ ಮಹಾನ್‌ ಜೀವದ ಬಗ್ಗೆ ಮೆಕ್ಕೆಜೋಳದ ಕಾರಣದಿಂದ ಮತ್ತಷ್ಟು ತಿಳಿಯಲು ಸಾಧ್ಯವಾಯಿತು. ದಯವಿಟ್ಟು ನನ್ನ ಮೇಲೆ ವಿಶ್ವಾಸವಿಡಿ ಕೃಷಿ ವಿದ್ಯಾರ್ಥಿಯಾಗಿ ನಾನು ಮೊದಲು ಬಿತ್ತು ಬೆಳೆದದ್ದು ಮೆಕ್ಕೆಜೋಳ. ಮರು ವರ್ಷದಲ್ಲೇ ಬಾರ್ಬರಾ ಅವರಿಗೆ ನೊಬೆಲ್‌ ಪ್ರಶಸ್ತಿಯೂ ಬಂದಿತ್ತು. ಆಗಿನ್ನು ಅದೊಂದು ಸುದ್ದಿಯಷ್ಟೆ! ಬೇರೇನೂ ತಿಳಿದಿರಲಿಲ್ಲ. ಅಂತೂ ಅಂದಿನಿಂದ ಇಂದಿನ ವರೆಗೂ ಮೆಕ್ಕೆ ಜೋಳ ಕಂಡಾಗಲೆಲ್ಲಾ ಬಾರ್ಬರಾ ಕಾಣುತ್ತಾರೆ. ಅವರು ಇಡೀ ಜೀವಮಾನ ಪೂರ್ತಿ ಒಂಟಿಯಾಗಿ ಇದ್ದುದಲ್ಲದೆ, ಒಂದೇ ಬೆಳೆಯ ಮೂಲಕ ಆನುವಂಶಿಕ ವಿವರಗಳ ಹೊಸ ಜಗತ್ತನ್ನೇ ಅನಾವರಣ ಮಾಡಿದರು. ಇಂದಿಗೂ ಕ್ರೊಮೋಸೋಮುಗಳ ಮೂಲಕ ಜೀನುಗಳ ಪ್ರಕ್ರಿಯೆಯನ್ನು ಅರಿಯುವ ಅಧ್ಯಯನಗಳಿಗೆ ಬಾರ್ಬರಾ ಕಾರಣರಾಗಿದ್ದಾರೆ. ಅವರ ಜೀವನ ಚರಿತ್ರಕಾರರಾದ ಎವ್ಲಿನ್‌ ಫಾಕ್ಸ್‌ ಕೆಲ್ಲರ್ ಅವರು ಬಾರ್ಬರ ಜೀವನವನ್ನು “A Feeling for the Organism” ಎಂಬ ಅತ್ಯಾಕರ್ಷಕ ಶೀರ್ಷಿಕೆಯಿಂದ ದಾಖಲಿಸಿದ್ದಾರೆ. ನಿಜಕ್ಕೂ ಅವರ ಜೀವನ ಎನ್ನುವುದು ಒಂದು ಜೀವದ ಬಗೆಗೆ ಅವರಿಗಿದ್ದ ಭಾವನೆಯೇ ಸರಿ.

       ಸಾಂಸ್ಕೃತಿಕ ಸಮದಾಯದಿಂದ ಕೇವಲ ಆಯ್ಕೆ ಮಾಡಿದ್ದಲ್ಲ, ಅಭಿವೃದ್ಧಿ ಪಡಿಸಿದ ಬೆಳೆ. ತೀರಾ ಗಟ್ಟಿಯಾಗಿದ್ದ ಟಯೊಸಿಂಟೆಯನ್ನು ದೊಡ್ಡ ಕಾಳುಗಳ ತೆನೆಯ ಬೆಳೆಯಾಗಿ, ಅದೂ ಹೆಚ್ಚು ಸಕ್ಕರೆಯ ಸವಿಯನ್ನು ಒಳಗೊಳ್ಳುವಂತೆ ಅಭಿವೃದ್ಧಿ ಪಡಿಸಿದ ಬೆಳೆಯನ್ನು, ಬಾರ್ಬರಾ ಮೆಕ್ಲಿಂಗ್ಟಾಕ್‌ ಮತ್ತು ಜಾರ್ಜ್‌ ಬೀಡಲ್‌ ಅವರಂತಹಾ ಮಹಾತ್ಮರ ಒಡನಾಟದ ಈ ಬೆಳೆಯು ನಿಜಕ್ಕೂ ಆಧುನಿಕತೆಯನ್ನು ಸಲಹುತ್ತಿರುವುದು ಸುಳ್ಳಲ್ಲ. ಇಂದು ಅಮೆರಿಕದ ಅನೇಖ ಖಾದ್ಯಗಳು, ಮೆಕ್ಕೆಜೋಳದ ಉತ್ಪನ್ನಗಳು. ಮಾಂಸವೂ ಸಹಾ ಮೆಕ್ಕಜೋಳದ ಪಶುಆಹಾರದಿಂದ ಸಾಕಿದ ಪ್ರಾಣಿಗಳದ್ದೇ! ಅದರ ಉತ್ಪನ್ನವೇ ಮದ್ಯಪಾನವೂ ಸಹಾ.. ಕಳೆದ ಶತಮಾನದ ಕಡೆಯಲ್ಲಂತೂ ಮೆಕ್ಕೆಜೋಳ ಜಗದ್ವ್ಯಾಪಿಯಾಗಿದ್ದಲ್ಲದೆ ಅದರ ಜೀನುಗಳ ಮಾರ್ಪಾಡಿನಲ್ಲೂ ಸುದ್ದಿ ಮಾಡಿತು. ಇದೀಗ 25ವರ್ಷಗಳಿಂದಲೂ ಜಿ.ಎಂ ಕಾರ್ನ್‌ (GM-Corn) ಆಗಿ ಮೆಕ್ಕೆಜೋಳವು ಅನೇಕ ರಾಷ್ಟ್ರಗಳಲ್ಲಿ ಊಟದ ತಾಟಿನಲ್ಲೂ ಹೊಕ್ಕಿದೆ. ಅದಕ್ಕಾಗಿ ಸಾಕಷ್ಟು ಪ್ರತಿಭಟನೆಗಳನ್ನೂ ದಶಕಗಳ ಕಾಲ ಎದುರಿಸಿದೆ. ಆದರೂ ನೂರಾರು ರಾಷ್ಟ್ರಗಳನ್ನು ತಲುಪಿ ಜನರ ನಿದ್ರೆಗೆಡಿಸಿದೆ. ಅಚ್ಚರಿಯ ಸಂಗತಿಯೆಂದರೆ ಇದರ ವಿಕಾಸವೇ ಇಂತಹ ಸಂಕರದ ಸಂಗತಿಗಳಿಂದ ಆರಂಭವಾಗಿದೆ. ಇದರ ಜೊತೆಗೆ ಮೆಕ್ಕೆಜೋಳದ ಆಕರ್ಷಕ ಬಣ್ಣ ಮತ್ತು ತೆನೆಗಳೊಳಗಿನ ವಿನ್ಯಾಸದಿಂದಾಗಿ ವಾಸ್ತುಶಿಲ್ಪ ಮತ್ತು ಕರಕುಶಲ ವಸ್ತುಗಳ ಮೇಲೂ ಪ್ರಭಾವವನ್ನು ಬೀರಿದೆ. ಆಧ್ಯಾತ್ಮಿಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ಮೆಕ್ಕೆಜೋಳವು ಸ್ಥಳಿಯ ಸಮುದಾಯಗಳ ಹಿತವನ್ನು ಉಳಿಸಿಕೊಳ್ಳುತ್ತದೆ ಎಂದೇ ಅದರ ಪಾರಂಪರಿಕ ಉಳಿವಿನ ಹೋರಾಟಗಾರರ ಅಭಿಪ್ರಾಯ. ಜಾಗತೀಕರಣ ತೆರೆದ ಮಾರುಕಟ್ಟೆಗಳು ಆಧುನಿಕತೆಯನ್ನು ಬೆಂಬಲಿಸಿದ್ದ ಮೆಕ್ಕೆಜೋಳವನ್ನು ತೀವ್ರವಾಗಿಯೇ ಕಾಡಿವೆ.

       ಮೆಕ್ಕೆಜೋಳವು ಗಂಡು ಮತ್ತು ಹೆಣ್ಣು ಹೂಗೊಂಚಲನ್ನೂ ಬೇರೆ ಬೇರೆಯಾಗಿ ಹೊಂದಿದ್ದು, ಎರಡನ್ನೂ ಒಂದೇ ಗಿಡದಲ್ಲಿ ಇರುತ್ತದೆ. ಕಾಂಡದ ತುದಿಯ ಹೂವು ಗಂಡು, ಮಧ್ಯದ ರೇಷಿಮೆಯಂತಹಾ ಎಳೆಯ ಗೊಂಚಲು ಹೆಣ್ಣು. ಸ್ವಕೀಯ ಹಾಗೂ ಪರಕೀಯ ಪರಾಗಸ್ಪರ್ಶಗಳೆರಡಕ್ಕೂ ಒಗ್ಗಿರುವ, ತನ್ನೊಳಗೇ ಅಗಾಧ ಜೀನು ಮಾರ್ಪಾಡಿಗೂ ಹೊಂದಿಕೊಂಡ ಬೆಳೆ. ನಮ್ಮ ಹಲ್ಲಿಗೆ ಕಡಿಯಲೂ ಆಗದಂತಹಾ ಹೊರಮೈ ಹೊಂದಿರುವ, ಮೈಯಲ್ಲಷ್ಟು ಹಸಿಯನ್ನಿಟ್ಟು ಮೃದುವಾದವೂ ಆಗಿರುವ ಜೊತೆಗೆ ಅಷ್ಟೂ ಸಕ್ಕರೆಯ ಸವಿಯನ್ನು ಮೈದುಂಬಿಕೊಂಡ ಕಾಳು ಇದು. ಅಗಾಧ ಆಧುನಿಕ ಜಗತ್ತನ್ನೂ ನಿರ್ಮಿಸಿ ಅಪಾರ ಪಾರಂಪರಿಕ ಸಂಸ್ಕೃತಿಯನ್ನೂ ಒಳಗಿಟ್ಟು ಸುಲಭವಾಗಿ ಹಲವು ನೆಲದ ಸಮುದಾಯಗಳನ್ನು ಬೆಸದ ಗಿಡವಿದು. ಅದರ ತವರಿನ ನೆಲದ ಮಹಿಳೆಯೊಬ್ಬಳ ಮಾತುಗಳು ಹೀಗಿವೆ.  “ಮೆಕ್ಕೆಜೋಳವು ನಮಗೆ ಶಾಂತಿಯಿಂದ ಬದುಕಲು ಅನುವು ಮಾಡಿಕೊಡುತ್ತದೆ. ಇದು ನಮ್ಮ ಆಹಾರ ಸುರಕ್ಷತೆಯ ರೂಪವಾಗಿದೆ.” ಅಲ್ಲದೆ ಮೆಕ್ಸಿಕನ್‌ ಮೂಲದ ಹಿರಿಯರೊಬ್ಬರು ಈ ಜೋಳವನ್ನು ವಿವರಿಸುವುದು ಹೀಗೆ…“ಸಹಸ್ರಾರು ವರ್ಷಗಳಿಂದ ನಮ್ಮ ಜನರು ದುಃಖವನ್ನು-ಅಗಾದವಾದ ನೋವುಗಳನ್ನೂ ತಡೆದುಕೊಂಡಿದ್ದರೆ, ಅದಕ್ಕೆ ಕಾರಣ ಈ ಜೋಳವು ನಮಗೆ ಬದುಕಲು ಅವಕಾಶ ಮಾಡಿಕೊಟ್ಟಿದೆ”        

       ಮೆಕ್ಸಿಕನ್‌ ಮೂಲ ನಿವಾಸಿಗಳಿಗೆ ಮೆಕ್ಕೆಜೋಳ “ಮೈಜ್‌-ಗಾಡ್‌”. ನಮಗೆ “ಅನ್ನ ಬ್ರಹ್ಮ”ನಿದ್ದ ಹಾಗೆ. ದೇವರು ತನ್ನ ತಲೆಯನ್ನೇ ನೆಲಕ್ಕುರುಳಿಸಿ ಮತ್ತೆ ಗಿಡವಾಗಿ ಜನರ ಹೊಟ್ಟೆ ಹೊರೆಯುತ್ತಿರುವ ಎಂಬಂತೆ ನಂಬುತ್ತಾರೆ. ರಚನೆ, ಜೀವಿರಸಾಯನಿಕ ಸಂಯೋಜನೆ, ಮಾರ್ಪಾಡುಗಳಿಗೆ ಒಗ್ಗುವ ಆಧುನಿಕತೆ ಎಲ್ಲವನ್ನೂ ನಿಭಾಯಿಸಿ, ಒಣ ನೆಲದಲ್ಲೂ ಒಂದಷ್ಟು ಕಾಳುಕಟ್ಟುವ ಆ ಮೂಲಕ ಸಮುದಾಯಗಳ ಹೊಟ್ಟೆಯನ್ನು ಹೊರೆಯುವ ಅಪಾರ ಸಾಧ್ಯತೆಗಳ ಸಸ್ಯವು ಸಸ್ಯಯಾನದ ನೂರರ ಸಂಭ್ರಮಕ್ಕೆ ಜೊತೆಯಾಗಿದೆ. ವೈಯಕ್ತಿಕವಾಗಿ ಬಾರ್ಬರಾ ಎಂಬ ಮಹಾನ್‌ ಮಹಿಳೆ ಒಂಟಿಯಾಗಿ ಜೀವನವನ್ನು ಈ ಸಸ್ಯದೊಡನೆ ಕಳೆದ ನೆನಪುಗಳ ಜೊತೆಗೆ ವಿಜ್ಞಾನವನ್ನು ಧ್ಯಾನಿಸುವ ಅಪ್ರತಿಮ ವಿಧಾನವನ್ನು ಕೊಟ್ಟದ್ದನ್ನು ಸೂಕ್ಷ್ಮವಾಗಿ ಹೇಳಲು ಸಾಧ್ಯವಾಗಿದೆ.

       ಎಲ್ಲರಿಗೂ ನಮಸ್ಕಾರಗಳು..

ಡಾ. ಟಿ.‌ ಎಸ್.‌ ಚನ್ನೇಶ್

This Post Has One Comment

  1. Rudresh Adarangi

    ಜೋಳವನ್ನು ಕುರಿತು ಅಮೂಲಾಗ್ರವಾದ ಲೇಖನ ಬರೆದಿರುವಿರಿ. ನಿಮ್ಮ ಈ ಲೇಖನ ಸರಣಿ ಶತಮಾನದಿಂದ ಸಹಸ್ರಮಾನವಾಗಲಿ ಎಂದು ಹಾರೈಸುವೆ

Leave a Reply