You are currently viewing ವೈರಸ್ಸಿಗೊಂದು ಔಷಧೀಯ ಕಳೆ ಗಿಡ ಕಿರುನೆಲ್ಲಿ: Phyllanthus amarus

ವೈರಸ್ಸಿಗೊಂದು ಔಷಧೀಯ ಕಳೆ ಗಿಡ ಕಿರುನೆಲ್ಲಿ: Phyllanthus amarus

ಜಾಗತಿಕವಾಗಿ ಮಾನವತೆಯನ್ನು ಕಾಡುತ್ತಿರುವ ಕರೋನ ವೈರಸ್ಸನ್ನು ನಿಯಂತ್ರಿಸಬೇಕಿರುವ ಈ ಸಂದರ್ಭದಲ್ಲಿ ಹೆಪಟೈಟಿಸ್‌ ವೈರಸ್ಸಿಗೆ ಔಷಧವಾಗಿರುವ ಗಿಡ ಸಸ್ಯಯಾನದಲ್ಲಿ ನೆನಪಾಗಿದೆ. ಸಾಮಾನ್ಯ ಕಳೆಗಿಡವಾಗಿ ಅಸಾಮಾನ್ಯ ಪರಂಪರೆಯನ್ನು ಜಾಗತಿಕವಾಗಿಯೂ ಗಳಿಸಿರುವ ಈ ಒಂದು ಸಣ್ಣ “ಕಿರು ನೆಲ್ಲಿ” ಹೆಸರಿನಂತೆಯೇ ಕಿರಿದಾದ ಗಿಡ. ಕೇವಲ 10-20 ಸೆಂ.ಮೀ ಎತ್ತರವಾಗಿರುವ, ಹೆಚ್ಚೆಂದರೆ ಅಪರೂಪಕ್ಕೆ 50-60 ಸೆಂ.ಮೀ ಇರುವ ಗಿಡ. ಹೆಚ್ಚಿನ ಪಾಲು ಅರ್ಧ-ಮುಕ್ಕಾಲು ಅಡಿ ಮಾತ್ರವೇ ಇದ್ದು ನೆಲಕ್ಕೆ ಹತ್ತಿರವಿರುವುದಲ್ಲದೆ, ನೆಲ್ಲಿಯಂತೆಯೇ ಎಲೆಗಳ ನಡುವೆ ಪುಟ್ಟ-ಪುಟ್ಟ ಕಾಯಿತುಂಬಿಕೊಂಡ ಗಿಡ. ಆದ್ದರಿಂದಲೇ ಇದಕ್ಕೆ ನೆಲನೆಲ್ಲಿ, ಭೂಮ್ಯಾಮಲಕ್ಕಿ, ಭೂನೆಲ್ಲಿ ಹೆಸರುಗಳ ಜೊತೆಗೆ ಜಾಂಡೀಸ್‌ ಗಿಡ ಎಂಬೆಲ್ಲಾ ಹೆಸರುಗಳುಂಟು.

ಇದು ನಮಗೆಲ್ಲಾ ಉಪ್ಪಿನಕಾಯಿಯಲ್ಲಿ ಪರಿಚಯ ಇರಬಹುದಾದ ಆಮ್ಲ ಅಥವಾ ನೆಲ್ಲಿ ಗಿಡದ ಸಂಬಂಧಿಯೇ! ಅದರ ಕುಟುಂಬಕ್ಕೆ ಸೇರಿದ ಗಿಡವೇ. ಇಡೀ ಕುಟುಂಬ ಕಥೆಯಿಂದ ಮೊದಲ್ಗೊಂಡು ಅದರ ಸಂಕುಲ ಅಥವಾ ಕುಲದ ಕಥೆಯನ್ನೂ ಒಳಗೊಂಡು, ಅದರ ಪ್ರಭೇದಗಳಲ್ಲೂ ಕಥೆಗಳನಿಟ್ಟುಕೊಂಡು ಪ್ರಪಂಚದಲ್ಲೆಲ್ಲಾ ಹೆಸರು ಮಾಡಿರುವ ಪುಟ್ಟ ಗಿಡ. ಹೆಪಟೈಟಿಸ್‌ ಅಥವಾ ಜಾಂಡೀಸ್‌ ಕಾಯಿಲೆಯಲ್ಲಿ ಇದರ ಪಾತ್ರದ ಬಗೆಗೆ ಸಾಕಷ್ಟು ವಿವರಗಳೂ, ಚರ್ಚೆಗಳೂ ಹೆಸರುವಾಸಿ. ಈಗಾಗಲೇ ಹೇಳಿದಂತೆ ಹೆಸರಿಂದಲೂ ಸಾಕಷ್ಟು ಚರ್ಚೆಗಳ ಹುಟ್ಟಿಗೆ ಕಾರಣವಾಗಿರುವ ಗಿಡ. ವೈಜ್ಞಾನಿಕವಾಗಿ ಫಿಲಾಂತಸ್‌ ಅಮರಸ್‌ (Phyllanthus amarus) ಎಂದು ಕರೆಯ ಬೇಕಿದ್ದರೂ ಫಿಲಾಂತಸ್‌ ನಿರೂರಿ (Phyllanthus niruri)ಎಂಬ ಹೆಸರಿಂದಲೇ ಭಾರತದಲ್ಲಿ ಪದೆ ಪದೇ ತಪ್ಪಾಗಿ ಕರೆಯಿಸಿಕೊಂಡಿದೆ. ಇದೂ ಕೂಡ ಅಗತ್ಯವಾಗಿ ತಿಳಿಯಬೇಕಿರುವ ಸಂಗತಿಯೇ. ಇವೆಲ್ಲವುಗಳ ಕಥನಗಳನ್ನು ಒಂದೊಂದೇ ತಿಳಿಯುತ್ತಾ ಕಿರಿದಾದ ಗಿಡ “ಕಿರು ನೆಲ್ಲಿ“ಯ ಹಿರಿಯದಾದ ಕಥೆಯನ್ನು ತಿಳಿಯೋಣ.

ಈ ಎಲ್ಲಾ ಚರ್ಚೆಗಳಿಗೆ ಕಾರಣ ಇದು ಬಹುಪಯೋಗಿ ಔಷಧೀಯ ಗುಣಗಳನ್ನು ಒಳಗೊಂಡಿರುವುದು ಎಂಬುದಕ್ಕೆ ಎರಡು ಮಾತಿಲ್ಲ. ಭಾರತವನ್ನೂ ಒಳಗೊಂಡಂತೆ ಹಲವು ಏಶಿಯಾ ದೇಶಗಳು, ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕಾ ದೇಶಗಳಲ್ಲಿ, ಅನೇಕ ಜನಪದ ಬಳಕೆಗಳಿಂದ ಇದೊಂದು ಪ್ರಮುಖವಾದ ಸಸ್ಯವಾಗಿದೆ. ದಾಖಲೆಗಳ ಲೆಕ್ಕದಲ್ಲಿ ಇಂಡಿಯಾದ ಆಯುರ್ವೇದದ ಚಿಕಿತ್ಸೆಗಳಲ್ಲಿ ನೆಲನೆಲ್ಲಿಯೇ ಪುರಾತನವಾದದ್ದು. ಜಾಂಡೀಸ್‌ ಅಲ್ಲದೆ, ಮೂತ್ರಕೋಶ ಹಾಗೂ ಜೀರ್ಣಕ್ರಿಯೆಗೆ ಸಂಬಂಧಿಸಿದ ಚಿಕಿತ್ಸೆಗಳಲ್ಲೂ ಇದು ಬಳಕೆಯಾಗುತ್ತಿದೆ. ಭಾರತದಲ್ಲಿ ಜಾಂಡೀಸ್‌ ಜೊತೆಗೆ ಮಧುಮೇಹ, ಮಲೇರಿಯಾ, ಹೊಟ್ಟೆನೋವು, ಅಜೀರ್ಣ, ಅತಿಭೇದಿ, ಕಿಡ್ನಿ ಸಮಸ್ಯೆಗಳು ಮುಂತಾದ ವಿವಿಧ ಕಾಯಿಲೆಗಳಲ್ಲಿ ಬಳಕೆಯನ್ನು ವಿವಿಧ ವಿವರಗಳು ದಾಖಲುಗೊಳಿಸಿವೆ. ಇವುಗಳಿಗೆ ಕಾರಣವಾಗಿರಬಹುದಾದ ಹಾಗೂ ಕೆಲವನ್ನು ಪ್ರಶ್ನಿಸಿ ಚರ್ಚೆಗೆ ತಂದಿರುವ ವಿವರಗಳನ್ನೂ ಕೊನೆಯಲ್ಲಿ ನೋಡೋಣ. ಮೊದಲು ಗಿಡದ ಪರಂಪರಾಗತವಾದ ಚರಿತ್ರೆಯನ್ನು ಒಳಗೊಂಡಿರುವ ಸಂಗತಿಗಳಿಂದ ಆರಂಭಿಸೋಣ.

ಕಿರು ನೆಲ್ಲಿ, ನೆಲ್ಲಿ ಮುಂತಾದವುಗಳನ್ನು ಮೊದಲು ಸಸ್ಯವರ್ಗೀಕರಣದಲ್ಲಿ “ಇಫೋರ್ಬಿಯೇಸಿಯೆ” ಎಂಬ ಸಸ್ಯ ಕುಟುಂಬದಲ್ಲಿ ಸೇರಿಸಿ ವಿವರಿಸಲಾಗಿತ್ತು. ಆಗ ವರ್ಗೀಕರಣ ಪಿತಾಮಹಾ ಕಾರ್ಲ್‌ ಲಿನೆಯಸ್‌ ಅದನ್ನು ವಿವರಿಸಿದ್ದರು. ಆಗ ಅವರು ಮಾಡಿರಬಹುದೆಂಬ ತಪ್ಪಿನ ಕಾರಣದಿಂದಲೇ ಇದರ ಪ್ರಭೇದದ ಹೆಸರಿನ ಕುರಿತ ಚರ್ಚೆಗಳು ಇಂದಿಗೂ ಮುಂದುವರೆದಿವೆ. ಇಫೋರ್ಬಿಯೇಸಿಯೆ ಕುಟುಂಬವು, ಸಾಮಾನ್ಯವಾಗಿ “ಹಾಲು” ಒಸರುವಂತಹಾ ಕಳ್ಳಿ ಮುಂತಾದ ಗಿಡಗಳನ್ನು ಒಳಗೊಂಡ ಸಸ್ಯಗಳ ಕುಟುಂಬ ಎಂದೇ ಹೆಸರುವಾಸಿ. ಕಾರ್ಲ್‌ ಲಿನೆಯಸ್‌ 1753ರಲ್ಲಿಯೇ ಈ ಕುಟುಂಬವನ್ನು ಹೆಸರಿಸಿ ವಿವರಿಸಿದ್ದರೂ ಮುಂದೆ ಮೊಟ್ಟ ಮೊದಲಬಾರಿಗೆ 1820ರಲ್ಲಿ ರಶಿಯಾದ ವಿಜ್ಞಾನಿ ಇವಾನ್‌ ಮಾರ್ಟಿನೊವ್‌ (Ivan Ivanovich Martynov) ಎಂಬುವರು ಗಿಡಗಳನ್ನು ಚಿವುಟುವುದರಿಂದ ಹಾಲು ಬರದ ಗಿಡಗಳನ್ನು ಬೇರ್ಪಡಿಸಿ “ಫಿಲಾಂತೇಸಿಯೆ (Phyllanthaceae)” ಎಂದು ಹೊಸತೊಂದು ಕುಟುಂಬವನ್ನು ರೂಪಿಸಿ ಅದರಲ್ಲಿ ನೆಲ್ಲಿ, ಕಿರುನೆಲ್ಲಿ ಮುಂತಾದ ಸಸ್ಯಗಳನ್ನು ಸೇರಿಸಿ ವಿಂಗಡಿಸಿದ್ದರು. ಆದರೂ ಸರಿಸುಮಾರು 180 ವರ್ಷಗಳಿಗೂ ಹೆಚ್ಚುಕಾಲ ಯಾವ ಸಸ್ಯ ವಿಜ್ಞಾನಿಯೂ ಇದನ್ನು ಗಮನಕ್ಕೆ ತೆಗೆದುಕೊಳ್ಳದೆ, ಇಫೋರ್ಬಿಯೇಸಿಯೇ ಕುಟುಂಬದಲ್ಲಿಯೇ ಈ ಸಸ್ಯಗಳನ್ನು ವಿಂಗಡಿಸಿ ಹೆಸರಿಸುತ್ತಿದ್ದರು. ನಂತರ 1990ರ ದಶಕದಲ್ಲಿ ಇಫೋರ್ಬಿಯೇಸಿಯೆ ಕುಟುಂಬದಲ್ಲಿರುವ ನ್ಯೂನ್ಯತೆಗಳ ವಿಂಗಡಣೆಗಳನ್ನು ಗಣನೆಗೆ ತೆಗೆದುಕೊಂಡು ಆ ಕುಟುಂಬವನ್ನು ಪುಟ್ಟ ಪುಟ್ಟ ಕುಟುಂಬಗಳಾಗಿ ವಿಭಾಗಿಸಿದಾಗ, ಮತ್ತೆ ಫಿಲಾಂತೇಸಿಯೆಗೆ ಬಲ ಬಂತು. ಹೆಚ್ಚೂ ಕಡಿಮೆ ಈಗ್ಗೆ ಒಂದೂವರೆ – ಎರಡು ದಶಕಗಳಿಂದ ಮಾತ್ರವೇ ಫಿಲಾಂತೇಸಿಯೆ ಕುಟುಂಬವು ಚಾಲ್ತಿಗೆ ಬಂದಿದೆ. ಹಾಗಾಗಿ ಕಿರುನೆಲ್ಲಿಯ ಸಸ್ಯ ಕುಟುಂಬವು ಈಗ “ಫಿಲಾಂತೇಸಿಯೆ (Phyllanthaceae)” ಎಂಬುದಾಗಿದೆ. ಆದರೂ ಇದನ್ನು ಅನೇಕ ಸಸ್ಯವಿಜ್ಞಾನದ ಶಿಕ್ಷಕರು, ವಿದ್ಯಾರ್ಥಿಗಳು, ಅಧ್ಯಯನಕಾರರು ಇನ್ನೂ ಇಫೋರ್ಬಿಯೇಸಿಯೆ ಕುಟುಂಬದ ಸದಸ್ಯ ಎಂಬುದಾಗಿಯೇ ವಿವರಿಸುತ್ತಾರೆ.

ಇದು ಕುಟುಂಬದ ಕಥೆಯಾದರೆ, ಅದರ ಸಂಕುಲದ್ದು ಮತ್ತೊಂದು ಬಗೆಯದ್ದು. ಫಿಲಾಂತೇಸಿಯೆ ಕುಟುಂಬವು ಹತ್ತು ಹಲವು ರಾಸಾಯನಿಕಗಳನ್ನು ಒಳಗೊಂಡ ಸಸ್ಯಗಳ ಸಂಕುಲವೆಂದೇ ಹೆಸರುವಾಸಿ. ಹಾಗಾಗಿ ಈ ಫಿಲಾಂತೇಸಿಯೆ ಕುಲದ ಅನೇಕ ಸಸ್ಯಗಳು ಹೋಲಿಕೆಯನ್ನೂ ಹೊಂದಿರುವುದರಿಂದ ಒಂದರ ಜಾಗದಲ್ಲಿ ಮತ್ತೊಂದನ್ನು ಬಳಸುವುದು ಉಂಟು. ಅದರಲ್ಲೂ ಈಗ ನಾವು ಇಂದು ತಿಳಿಯುತ್ತಿರುವ ಪ್ರಭೇದದ ಬಗೆಗಂತೂ ಹೆಚ್ಚು ಇಂತಹ ಪ್ರಮಾದಗಳಾಗಿವೆ. ಅವುಗಳನ್ನು ಮುಂದೆ ನೋಡೋಣ. ಈ ಫಿಲಾಂತೇಸಿಯೆ ಕುಟುಂಬದಲ್ಲಿರುವ ಸಂಕುಲಗಳಲ್ಲಿ ಫಿಲಾಂತಸ್‌ ಕುಲದಲ್ಲಿ ಅತೀ ಹೆಚ್ಚು ಪ್ರಭೇದಗಳಿವೆ. ಒಂದು ಅಂದಾನಂತೆ ಸುಮಾರು 750 ರಿಂದ 1250 ರವರೆಗೂ ವಿವಿಧ ಸಸ್ಯ ಪ್ರಭೇದಗಳಿರುವ ಬಗೆಗೆ ಅಧ್ಯಯನಕಾರರು ಅಭಿಪ್ರಾಯ ಪಟ್ಟಿದ್ದಾರೆ. ಜೊತೆಗೆ ಇದರಲ್ಲಿ ವಾರ್ಷಿಕ ಸಸ್ಯಗಳೂ, ಬಹುವಾರ್ಷಿಕ ಸಸ್ಯಗಳೂ ಇವೆ. ಪುಟ್ಟ ಪುಟ್ಟ ಗಿಡಗಳು, ಸಣ್ಣ ಪೊದೆಗಳು, ಮರಗಳು, ಬಳ್ಳಿಗಳೂ ಅಷ್ಟೇಕೆ ಜಲವಾಸಿಗಳೂ ಇವೆ. ಬೀಜ ಬಿಡುವ ಸಸ್ಯಗಳಲ್ಲೇ ಅತಿ ಹೆಚ್ಚು ವಿವಿಧತೆಯ ಪರಾಗಗಳನ್ನು ಹೊಂದಿರುವ ಕುಲ ಇದು. ಹಾಗಾಗಿ ಇದರಲ್ಲಿ ಹೂಗಳ ವಿವಿಧತೆಯೂ ಹೆಚ್ಚು. ಈಗಾಗಲೇ ಪ್ರಸ್ತಾಪಿಸಿದಂತೆ ಔಷಧಗಳ ವಿವಿಧ ರಾಸಾಯನಿಕಗಳ ಹುಡುಕಾಟದಲ್ಲಿ ಅತ್ಯಂತ ಹೆಚ್ಚು ಆಸಕ್ತಿಯನ್ನು ಸಂಶೋಧಕರಿಗೆ ಒದಗಿಸಿದ ಸಂಕುಲ ಇದಾಗಿದೆ.

ಇನ್ನು ಪ್ರಭೇದದ ಬಗೆಗಿನ ಚರ್ಚೆಗಳ ಕಥಾನಕವನ್ನು ನೋಡೋಣ. ಹಿಂದೆ ಈ ಪ್ರಬಂಧದ ಆರಂಭದಲ್ಲಿ ಕಿರುನೆಲ್ಲಿಗೆ ಫಿಲಾಂತಸ್‌ ಅಮರಸ್‌ (Phyllanthus amarus) ಎಂದು ಕರೆಯಬೇಕಿದ್ದು, ಅದನ್ನು ಫಿಲಾಂತಸ್‌ ನಿರೂರಿ (Phyllanthus niruri) ಎಂದು ತಪ್ಪಾಗಿ ಕರೆಯುತ್ತಿದ್ದೇವೆ ಎಂದು ಪ್ರಸ್ತಾಪಿಸಿದ್ದೆನ್ನಲ್ಲವೇ? ಇದೊಂದು ಆಕರ್ಷಕ ಸಂಗತಿ. ಇದನ್ನು ವಿವರವಾಗಿ ಸಂಶೋಧನೆಯ ಕುರುಹುಗಳ ಮೂಲಕ ಕನ್ನಡಿಗರೇ ಆದ ವಿಜ್ಞಾನಿ ಡಾ. ಕೆ.ಎನ್.‌ ಗಣೇಶಯ್ಯನವರೂ ತಮ್ಮ ವೈಜ್ಞಾನಿಕ ಪ್ರಬಂಧಗಳಲ್ಲಿ ಈ ತಪ್ಪಿನ ಬಗೆಗೆ ವಿವರಿಸಿದ್ದಾರೆ. ನಮ್ಮಲ್ಲಿ ಇರುವ ಸಸ್ಯವು ಫಿಲಾಂತಸ್‌ ಅಮರಸ್‌ ವಿನಾಃ ಅದು ಫಿಲಾಂತಸ್‌ ನಿರೂರಿ ಅಲ್ಲವೇ ಅಲ್ಲ! ಭಾರತದಲ್ಲಿ ನಿರೂರಿ ಪ್ರಭೇದವೇ ಇಲ್ಲ. ಆದಾಗ್ಯೂ ಅನೇಕ ಸಂಶೋಧನಾ ಪ್ರಬಂಧಗಳಲ್ಲೂ ನಿರೂರಿ ಎಂದೇ ಪ್ರಕಟಗೊಂಡು ಪ್ರಮಾದಗಳ ಮುಂದುವರಿಕೆಯು ನಡೆದೇ ಇದೆ. ಜೊತೆಗೆ ಬಹುಪಾಲು ಸಸ್ಯ ವಿಜ್ಞಾನದ ಕಲಿಕೆಯಲ್ಲೂ ನಿರೂರಿಯ ಪ್ರಸ್ತಾಪವೂ ಮುಂದುವರೆದಿದೆ. ಪ್ರಮಾದ ಆರಂಭವಾದದ್ದು ಕಾರ್ಲ್‌ ಲಿನೆಯಸ್‌ ಕಾಲದಿಂದ, ಜೊತೆಗೆ ಆತನಿಂದಲೇ ಎಂಬುದು ಡಾ. ಗಣೇಶಯ್ಯನವರ ಅಭಿಪ್ರಾಯ. ಹದಿನೆಂಟನೆಯ ಶತಮಾನದಲ್ಲಿ ಲಿನೆಯಸ್‌ ಸಸ್ಯ ವರ್ಗೀಕರಣದ ಸಂದರ್ಭದಲ್ಲಿ ಭಾರತದಿಂದ ಪಡೆದ ಸಸ್ಯ ಹಾಗೂ ವೆಸ್ಟ್‌ ಇಂಡೀಸ್‌ ನಿಂದ ಪಡೆದ ಸಸ್ಯಗಳು ಹೆಚ್ಚು-ಕಡಿಮೆ ಒಂದೇ ಬಗೆಯವಾಗಿದ್ದು, ಭಾರತದ ಗಿಡಕ್ಕೆ ಅಮರಸ್‌ ಎಂದೂ ವೆಸ್ಟ್‌ ಇಂಡಿಸ್‌ ಗಿಡಕ್ಕೆ ನಿರೂರಿ ಎಂದೂ ಹೆಸರಿಸಿದ್ದರು. ಅಮರಸ್‌ ಮತ್ತು ನಿರೂರಿ ಎರಡೂ ಪದಗಳ ಮೂಲ ಗ್ರೀಕ್‌ ಮತ್ತು ಲ್ಯಾಟಿನ್‌ನಲ್ಲಿ “ಕಹಿಯಾದ” ಎಂಬ ಅರ್ಥವೇ! ನಿರೂರಿಯ ಪ್ರಭೇದ ನನ್ನ ಗ್ರಹಿಕೆಯಂತೆ ನಮ್ಮಲ್ಲಿರುವ ಅಮರಸ್‌ ಗಿಂತಾ ಎತ್ತರವಾದದ್ದು! ಆದರೂ ಈ ಎರಡನ್ನೂ ಒಟ್ಟಿಗೆ ಒಂದೇ ಫೈಲಿನಲ್ಲಿ ಲಿನೆಯಸ್‌ ಅವರು ಇಟ್ಟಿರುವುದರಿಂದ ಆದ ಪ್ರಮಾದ ಇಂದಿಗೂ ಮುಂದುವರೆದಿದೆ. ಆದರೆ ನಿರೂರಿ ಭಾರತದಲ್ಲಿ ಇಲ್ಲವೇ ಇಲ್ಲ! ಇಲ್ಲಿರುವುದು ಅಮರಸ್‌ ಮಾತ್ರವೇ! ಇದರ ಹೆಸರಲ್ಲೇನಿದೆ, ಏನು ಕರೆದರೂ ಅದರ ಔಷಧಿ ಸಿಕ್ಕರೆ ಸಾಕು ಎನ್ನುವಂತಾದದರೂ ಅದರ ಇನ್ನೊಂದು ಮುಖವನ್ನು ಮುಂದೆ ಕಡೆಯಲ್ಲಿ ನೋಡೋಣ.

ಇನ್ನು ಇದರ ಔಷಧೀಯ ಸಂಗತಿಗಳ ಚರ್ಚೆಗಳ ಸಂಗತಿಗಳು. ಈ ಫಿಲಾಂತಸ್‌ ಪ್ರಭೇದಗಳು ಪ್ರಮುಖವಾಗಿ ಲಿವರ್‌ (ಪಿತ್ತಜನಕಾಂಗ ಅಥವಾ ಯಕೃತ್)ಅನ್ನು, ಅದನ್ನು ಕಾಡುವ ವೈರಸ್ಸುಗಳಿಂದ ರಕ್ಷಿಸುತ್ತದೆ ಎಂಬ ತಿಳಿವಳಿಕೆಯು ಜನಪ್ರಿಯವಾದುದು. ಲಿವರ್‌ಅನ್ನು ಕಾಡುವ ವೈರಸ್ಸುಗಳು ಹೆಪಟೈಟಿಸ್‌ ವೈರಸ್ಸುಗಳು. ಅವುಗಳು ಕಾಡುವಾಗ ಲಿವರ್‌ನ ಕಾರ್ಯದಲ್ಲಿ ಕುಂಠಿತವಾಗಿ ನಮ್ಮ ದೇಹದಲ್ಲಿ ಕೊಬ್ಬು ಜೀರ್ಣವಾಗುವ ಸಮಸ್ಯೆಯಾಗುತ್ತದೆ. ಆಗ ದೇಹದ ರಕ್ತದಲ್ಲಿ ಹಿಮೊಗ್ಲೋಬಿನ್‌ ಕಡಿಮೆಯಾಗಿ ಆ ಜಾಗವನ್ನು ಬಿಲಿರುಬಿನ್‌ ಎಂಬ ಮತ್ತೊಂದು ಅದೇ ಬಗೆಯ ಆದರೆ ಸ್ವಲ್ಪವೇ ಭಿನ್ನವಾದ ರಾಸಾಯನಿಕವು ತುಂಬಿಕೊಳ್ಳುತ್ತದೆ. ಕಣ್ಣು ಹಳದಿಯಾಗುತ್ತದೆ. ಜಾಂಡೀಸ್‌ ಎಂದು ಕರೆಯುತ್ತೇವೆ. ಅನೇಕ ಹಿರಿಯರಿಗೆ ಗೊತ್ತಿರಬಹುದು, ಪ್ರತೀ ಊರಿನಲ್ಲೂ ಅಥವಾ ಆಸುಪಾಸಿನಲ್ಲಿ ಜಾಂಡೀಸ್‌ಗೆ ಔಷಧ ಕೊಡುವವರು ಇರುತ್ತಾರೆ. ಬಹುಪಾಲು ಗೊತ್ತಾದ ದಿನದಲ್ಲಿ. ಹೆಚ್ಚಾಗಿ ಗುರುವಾರ (ಬೃಹಸ್ಪತಿ ವಾರವೆಂದು?) ಔಷಧವನ್ನು ಕೊಡುತ್ತಾರೆ. ಅಥವಾ ಕೆಲವೆಡೆ ಇನ್ನಾವುದೋ ಕಾರಣದಿಂದ ಬೇರೊಂದು ವಾರವೂ ಆಗಿರಬಹುದು. ಆದರೆ ಅವರುಗಳಾರೂ ಔಷಧ ತಯಾರಿಯ ಬಗೆಗಾಗಲಿ, ಅದರ ಕಂಟೆಂಟ್‌ ಅಂದರೆ ಅದನ್ನು ಯಾವುದರಿಂದ ತಯಾರಿಸಲಾಗಿದೆ ಎಂಬುದನ್ನು ಹೇಳವುದಿಲ್ಲ. ಔಷಧ ಕೊಟ್ಟು, ಕರಿದ ಪದಾರ್ಥಗಳ ತಿನ್ನಬಾರದು, ತುಪ್ಪ ಬೇಡ, ಇತ್ಯಾದಿ ಪಥ್ಯಗಳನ್ನು ತುಂಬಾ ಕಟ್ಟು ನಿಟ್ಟಾಗಿ ಪಾಲಿಸಲು ಹೇಳುತ್ತಾರೆ. ಆಡುವ ಹುಡುಗರ ವಯೋಮಾನದಿಂದ ಮಧ್ಯ ವಯಸ್ಕರಲ್ಲಿ ಹೆಚ್ಚಾಗಿ ಕಾಡುವ ಈ ಸಮಸ್ಯೆಯ ಸಂದರ್ಭಗಳಲ್ಲಿ ಪಥ್ಯ (ಎಣ್ಣೆ-ತುಪ್ಪರಹಿತ ಊಟ) ಬಹಳ ಮುಖ್ಯವಾಗುತ್ತದೆ. ಅಂತೂ ಔಷಧದ ಪರಿಣಾಮವಾಗಿ ಒಂದೆರಡು ವಾರ ಅಥವಾ ತಿಂಗಳಲ್ಲಿ ವಾಸಿಯಾಗಿ ಕಣ್ಣುಗಳು ಯಥಾಪ್ರಕಾರ ಮಾಸಲು ಬಿಳಿಯಾಗಿ ಹೊಳೆಯುತ್ತವೆ. ಕಾಯಿಲೆಯು ವಾಸಿಯಾಗಿರುವುದು ಪಥ್ಯದಿಂದಲೋ ಅಥವಾ ಔಷಧ ಸೇವನೆಯಿಂದಲೋ! ಈ ಗೊಂದಲಗಳಿಗೆ ವಿವರಗಳು ಬೇಕಾಗುತ್ತವೆ. ಅಂತಹವನ್ನು ಪ್ರಮಾಣಿಸಿ ಅರಿಯಬೇಕಾದ ಹಿತದಲ್ಲಿ ಅಂತರರಾಷ್ಟ್ರೀಯವಾದ ಚರ್ಚೆಗೆ ಕಾರಣವಾಗಿರುವ ಸಂಗತಿಯ ಹುಟ್ಟು ಇದೆ. ಅಂದರೆ ನಿಜಕ್ಕೂ ಔಷಧದ ಪರಿಣಾಮವೇನು ಎಂಬುದರ ವಿವರಗಳನ್ನು ಜೀವಿರಸಾಯನಿಕ ಸಂಗತಿಗಳಿಂದ ಹಾಗೂ ದೈಹಿಕ ಕ್ರಿಯಾ ವಿಶೇಷಣಗಳಿಂದ ವಿವರಿಸಬೇಕಾದೀತು. ಅವುಗಳೆಲ್ಲವೂ ತಿಳಿಯದ ಹೊರತಾಗಿಯೂ ದೇಹದೊಳಗಣ ಅರಿಯದ ಕ್ರಿಯೆಗಳಿಂದ ರೋಗ ಅಥವಾ ಕಾಯಿಲೆಯು ವಾಸಿಯಾಗುತ್ತಿರಬಹುದು.

ಜಾಂಡೀಸ್‌ ಒಂದು ರೋಗವಲ್ಲ. ರೋಗ ಲಕ್ಷಣ. ಯಾವುದೋ ಕಾರಣಕ್ಕೆ ಕಣ್ಣುಗಳ ಬಿಳಿಯ ಭಾಗ ಹಳದಿಯತ್ತ ತಿರುಗಿದಾಗ ಕರೆಯುವ ಹೆಸರು ಅಥವಾ ತೀರಾ ಚಿಕ್ಕ ಮಕ್ಕಳಲ್ಲಿ ಮೈ- ಕೈ ಕೂಡ ತುಸು ಹಳದಿಗೆ ತಿರುಗುತ್ತದೆ. ಒಂದೆರಡು ದಿನಗಳ ಮಗುವಿನಲ್ಲಿ ಇದು ಸಹಜ. ಆಗ ಬೆಳಕಿನ ಚಿಕಿತ್ಸೆಯನ್ನು ಆಧುನಿಕ ಆಸ್ಪತ್ರೆಗಳು ಕೊಡುತ್ತವೆ. ಮಗುವಿಗ ತೊಟ್ಟಿಲಿಗೆ ತೀರಾ ಹತ್ತಿರದಲ್ಲಿ ಬೆಳಕಿನ ಬಲ್ಬುಗಳನ್ನು ಇರುತ್ತಾರೆ. ಹಿಂದೆ ನಮ್ಮ ಮನೆಗಳಲ್ಲಿ ಚಿಕ್ಕ ಮಕ್ಕಳನ್ನು ಎಳೆಯ ಬಿಸಿಲಲ್ಲಿ ಬರಿ ಮೈಯಲ್ಲಿ ಒಡ್ಡುತ್ತಿರುವುದು ತಿಳಿದಿರಬೇಕಲ್ಲ! ಅದೊಂದು ಇಂತಹದೇ ಜನಪದರ ತಿಳಿವಳಿಕೆ. ಮಗುವಿನ ಜೀರ್ಣ ಶಕ್ತಿ ವೃದ್ಧಿಯಾಗುವುದೆಂಬಂತೆ ಅಥವಾ ಇತ್ಯಾದಿ ನಂಬಿಕೆಯ ವಿವರವನ್ನು ಒಳಗೊಂಡಿರುತ್ತದೆ. ಆದರೂ ಕೆಲವೊಮ್ಮೆ ತೀರಾ ಹೆಚ್ಚು ಬಿಲಿರುಬಿನ್‌ ಇದ್ದಾಗ ಪುಟ್ಟ ಮಕ್ಕಳ ರಕ್ತವನ್ನೇ ಬದಲಿಸುತ್ತಾರೆ. ಇದು ಬಿಡಿ, ಪುಟ್ಟ ಮಕ್ಕಳ ಲಿವರ್‌ ಕಾರ್ಯದಲ್ಲಿನ ತೊಂದರೆಯ ಜಾಂಡೀಸ್, ವೈರಸ್ಸಿನದಲ್ಲ! ಅಪ್ರಬುದ್ಧ ಲಿವರ್‌ನ ಸಮಸ್ಯೆ. ಬೆಳಕಿಗೆ ಒಡ್ಡಿದಾಗ ಲಿವರ್‌ನ ಕಾರ್ಯ ಪ್ರಬುದ್ಧವಾಗುತ್ತದೆ. ಆದರೆ ದೊಡ್ಡವರಲ್ಲಿ ಲಿವರ್‌ ವೈರಸ್ಸಿನ ಸೋಂಕಿನಿಂದಾಗಿ ತನ್ನ ಕಾರ್ಯ ಕ್ಷಮತೆಯನ್ನು ಕಳೆದುಕೊಂಡಿರುತ್ತದೆ. ಆಗ ಆಹಾರದ ಪಚನಕ್ರಿಯೆಯು ನಡೆದು ರಕ್ತದಲ್ಲಿ ಒಂದಾಗ ಬೇಕಾದ ಶಾರೀರಕ ಕ್ರಿಯೆಗಳಲ್ಲಿ ಕಬ್ಬಿಣವನ್ನು ಒಳಗೊಂಡು ಹಿಮೊಗ್ಲೋಬಿನ್‌ ಆಗಿ ತಯಾರಾಗುವುದಿಲ್ಲ. ರಕ್ತವು ಕೆಂಪಾಗುವುದು ತಪ್ಪುತ್ತದೆ. ಹಾಗಾಗಬೇಕಾದ ಹಂತವು ಕುಂಠಿತವಾಗಿ ಬಿಲಿರುಬಿನ್‌ ಎಂಬ ಹಳದಿ ಬಣ್ಹದ ವಸ್ತುವಿನ ಹಂತದಲ್ಲೇ ಉಳಿದು ರಕ್ತವು ಹಳದಿಯಾಗುತ್ತದೆ. ಇದು ಬೇರಾವುದೇ ಕಾರಣದಿಂದಲೂ ಆಗಬಹುದು. ಈ ಬಗೆಯಲ್ಲಿ ಉಂಟಾಗುವ ಜಾಂಡೀಸ್‌ ವೈರಸ್ಸಿನ ಸೋಂಕಿನಿಂದಾಗುವಲ್ಲಿ ಎರಡು ಬಗೆಯನ್ನು ಹೊಂದಿದೆ. ಒಂದು ತೀವ್ರವಾದ-ಅಕ್ಯೂಟ್‌ ಜಾಂಡೀಸ್‌, ಮತ್ತೊಂದು ಕ್ರಾನಿಕ್‌-ಬಹುಕಾಲ ಕಾಡುವ ಜಾಂಡೀಸ್‌. ಈ ಅಕ್ಯೂಟ್‌ ಅಥವಾ ತೀವ್ರವಾದ ಜಾಂಡೀಸ್‌ ಒಂದೆರಡು ವಾರದಲ್ಲಿ ತನ್ನಷ್ಟಕ್ಕೆ ತಾನೆ, ಸ್ವಲ್ಪವೇ ಕಾಲವಿದ್ದು ಸೋಂಕು ನಿವಾರಣೆಯಾಗಿ ವಾಸಿಯಾಗುತ್ತದೆ. ಆ ಕಾಲದಲ್ಲಿ ಎಣ್ಣೆ-ತುಪ್ಪದ ಪದಾರ್ಥಗಳು ಜೀರ್ಣವಾಗದೆ ವಾಂತಿ-ಭೇಧಿ ಕಾಣಿಸಬಹುದು. ಆದರೇ ಬಹುಕಾಲ ಇರುವ ಜಾಂಡೀಸ್‌ ಮಾತ್ರ ವೈರಸ್ಸು ಸೋಂಕು ನಿವಾರಣೆಯಾಗದೆ ವಾಸಿಯಾಗದು. ಜಾಂಡೀಸ್‌ ಫ್ರೆಂಚ್‌ ಪದದ ಮೂಲ, ಹಳದಿ ಕಾಯಿಲೆ ಎಂಬ ಅರ್ಥವುಳ್ಳದ್ದು.

ಇಲ್ಲಿ ಚರ್ಚೆಗೆ ಗ್ರಾಸವಾಗಿರುವ ಸಂಗತಿಗಳು ಹೀಗೆ ಮುಂದುವರೆಯುತ್ತವೆ. ಮಾತ್ರವಲ್ಲ ಅಂತರರಾಷ್ಟ್ರೀಯ ನಿರ್ಧಾರಗಳಲ್ಲೂ ಬಳಕೆಯಾಗುತ್ತವೆ. ಇಂತಹಾ ಸಂದರ್ಭಗಳನ್ನು ಒಳಗೊಂಡ ಹಾಗೂ ಸಾಕಷ್ಟು ಮಾಹಿತಿಯ ಅಗತ್ಯಗಳ ಹಿನ್ನೆಲೆಯಲ್ಲಿ ವೈದ್ಯಕೀಯ ಸಂಗತಿಗಳನ್ನು ಕುರಿತಂತೆ ಅವನ್ನೆಲ್ಲಾ “ಒರೆಹಚ್ಚಿ” ನೋಡುವ ಒಂದು ಅಂತರರಾಷ್ಟ್ರೀಯ ವಿದ್ಯಮಾನವಿದೆ. ಇದು ಆಧುನಿಕ ವಿಜ್ಞಾನದ ತಳಹದಿಯನ್ನು ಹೊಂದಿದ್ದು ಅದನ್ನು ಕೊಕ್ರಿನ್‌ (Cochrane) ಸಂಸ್ಥೆಯು ನಿರ್ವಹಿಸುತ್ತದೆ. ಅದೊಂದು ಚಾರಿಟಬಲ್‌ ಟ್ರಸ್ಟ್‌. ಅಷ್ಟೇ ಅಲ್ಲ ಇದಕ್ಕೆ ಜಾಗತಿಕ ಆರೋಗ್ಯ ಸಂಸ್ಥೆಯ (WHO) ಹಾಗೂ ವಿಕಿಪೀಡಿಯಾದ ಸಾಹಚರ್ಯವಿದೆ. ಜಗತ್ತಿನಾದ್ಯಂತ ಸುಮಾರು 30,000ಕ್ಕೂ ಹೆಚ್ಚು ಕಾರ್ಯಕರ್ತರನ್ನು ಇದು ಹೊಂದಿದೆ. ಇದರ 2011 ರ ಪರಾಮರ್ಶನೆಯ (ರಿವ್ಯೂ) ಪ್ರಕಾರ ಫಿಲಾಂತಸ್‌ ಕುಲದ ಔಷಧ ಗುಣಗಳ ಬಗೆಗೆ ನಿಖರವಾದ ಚಿಕಿತ್ಸಾ ಮಾಹಿತಿಗಳ ಕೊರತೆ ಇದೆ. ಅಂದರೆ ಈ ಸಸ್ಯ ಸಂಕುಲವು ಒಟ್ಟಾರೆಯಾಗಿ ನಿಯಂತ್ರಿಸುವ ವೈರಸ್ಸಿನ ಚಿಕಿತ್ಸೆಯ ಅಧ್ಯಯನಗಳಲ್ಲಿ ಸಾಮರಸ್ಯವನ್ನು ಹೊಂದಿಲ್ಲ. ಇಂತಹದನ್ನು ತೀರ್ಮಾನಿಸಲು ವಿವಿಧ ಅಧ್ಯಯನಗಳ ಮೆಟಾ ವಿಶ್ಲೇಷಣೆಯನ್ನು ಅದು ಕೈಗೊಳ್ಳುತ್ತದೆ. ಕೊಕ್ರಿನ್‌ ರಿವ್ಯೂ ಎಂದೇ ಪ್ರಸಿದ್ಧವಾದ ಈ ಬಗೆಯ ಮೆಟಾ ಅನಾಲಿಸಿಸ್‌ -ಅಂದರೆ ತನ್ನನ್ನು ತಾನೇ ಪ್ರಶ್ನಿಸಿಕೊಂಡು ಒರೆಹಚ್ಚಿ ನೋಡುವ ಬಗೆ- ನಿರ್ಧಾರಗಳನ್ನು ಅದು ಕೊಕ್ರಿನ್‌ ರಿವ್ಯೂ ಎಂದು ಹಂಚಿಕೊಳ್ಳುತ್ತದೆ. ಅದರ ಪ್ರಕಾರ ಈ ಸಸ್ಯಕ್ಕೆ ವೈರಸ್ಸನ್ನು ನಿಯಂತ್ರಿಸುವ ಔಷಧೀಯ ಗುಣಗಳ ಅಧ್ಯಯನದ ಸಾಮರಸ್ಯ ಕಡಿಮೆ. ಹಾಗಂತ ಇದೇನು ಅದರ ಔಷಧಿಯ ಪರಂಪರೆಯನ್ನು ವಿರೋಧಿಸುವುದಿಲ್ಲ. ಆದರೂ ಅಧ್ಯಯನಗಳ ಅಗತ್ಯತೆಯನ್ನು ಹೇಳಿದೆ. ಇರಲಿ ಮುಂದೆ ನೋಡೋಣ.

ಇಷ್ಟೆಲ್ಲಾ ಸಂದರ್ಭಗಳನ್ನೂ ತಿಳಿದುಕೊಂಡು ಒಟ್ಟಾರೆ ಔಷಧೀಯ ಸಸ್ಯಗಳ ವಹಿವಾಟನ್ನು ಮತ್ತು ಅದರಲ್ಲಿ ಫಿಲಾಂತಸ್‌ ಸ್ಥಾನವನ್ನೂ ನೋಡೋಣ. ಜೊತೆಗೆ ವೈರಸ್ಸಿಗೆ ಪರಿಹಾರದ ಪ್ರಸಂಗಗಳನ್ನು ಒಂದಷ್ಟು ಒರೆಹಚ್ಚಿ ನೋಡೋಣ. ಜಗತ್ತಿನಲ್ಲಿ ಏನಿಲ್ಲವೆಂದರೂ 30,000ಕ್ಕೂ ಹೆಚ್ಚು ಸಸ್ಯಜನ್ಯ ಔಷಧಿಗಳು ಉತ್ಪಾದನೆಯಾಗುತ್ತದೆ. ಇವೆಲ್ಲವನ್ನೂ ಸುಮಾರು 1000 ಕ್ಕೂ ಹೆಚ್ಚು ಸಂಖ್ಯೆಯ ಕಂಪನಿಗಳು ನಿರ್ವಹಿಸುತ್ತವೆ. ಇವೆಲ್ಲವೂ ವಾರ್ಷಿಕವಾಗಿ 75 ಶತಕೋಟಿ ಡಾಲರ್‌ಗಳನ್ನೂ ಮೀರಿ ವಹಿವಾಟನ್ನು ನಡೆಸುತ್ತವೆ. ಭಾರತದಿಂದಲೇ ಸುಮಾರು 8000 ಕ್ಕೂ ಮಿಕ್ಕಿ ವಿವಿಧ ಸಸ್ಯಗಳು ವಿವಿಧ ಬಗೆಯ ಔಷಧಿಗಳ ಮಾರುಕಟ್ಟೆಗೆ ಒದಗುತ್ತವೆ. ಅವುಗಳಲ್ಲಿ ಸುಮಾರು 1000 ಸಸ್ಯಗಳಾದರೂ ತೀವ್ರವಾದ ಮಾರುಕಟ್ಟೆಯನ್ನು ಜಾಗತಿಕವಾಗಿ ಹೊಂದಿವೆ. ಅವುಗಳಲ್ಲಿ ಕನಿಷ್ಟ 200 ರಷ್ಟಾದರೂ ನೂರಾರು ಟನ್ನುಗಳ ಕೊಯಿಲಿಗೆ ಒಳಗಾಗುತ್ತವೆ. ಇಷ್ಟೆಲ್ಲವೂ ನಡೆಯುತ್ತಿರುವುದರಲ್ಲಿ “ಲಾಭ” ಎನ್ನುವುದು ಆರೋಗ್ಯದ ಹಿತದಲ್ಲಿ ಇದೆಯೋ ಅಥವಾ ಕಂಪನಿಗಳ ಹಿಡಿತದಲ್ಲಿ ಇದೆಯೋ ಎಂಬುದು ಮತ್ತೊಂದು ಚರ್ಚೆಯನ್ನು ಹುಟ್ಟಿ ಹಾಕೀತು! ಇವುಗಳಲ್ಲಿ ಅನೇಕ ಸಸ್ಯಗಳು ವನ್ಯ ಮೂಲದಿಂದ ಕೊಯಿಲು ಮಾಡಿ ವಿವಿಧ ಮೂಲಗಳಿಂದ ಸಂಗ್ರಹಗೊಂಡು ಗೊತ್ತಾದ ನಿಯಂತ್ರಿತ ಮಾರುಕಟ್ಟೆಗಳಲ್ಲಿ ವಹಿವಾಟುಗೊಳ್ಳುತ್ತಿಲ್ಲ. ಹಾಗಾಗಿ ಕೊನೆಯಂಚಿನ ಉತ್ಪನ್ನಗಳಿಂದ ಅಂದಾಜಿಸಿರುವ ಮಾಹಿತಿಗಳು. ಒಟ್ಟಾರೆಯ ಸಸ್ಯಜನ್ಯ ಔಷಧಗಳ ಉತ್ಪಾದಕತೆಗಳ ವಸ್ತು ಸ್ಥಿತಿ ಹೀಗಿದೆ. ಮತ್ತೀಗ ಫಿಲಾಂತಸ್‌ಗೆ ವಾಪಸ್ಸು ಹಿಂದಿರುಗೋಣ.

ಕಳೆದ ಕೇವಲ ಏಳೆಂಟು ವರ್ಷಗಳ ಹಿಂದೆಯಷ್ಟೇ ಫಿಲಾಂತಸ್‌ ಅಮರಸ್‌ ಸಸ್ಯದ ಒಟ್ಟಾರೆ ಔಷಧಿಯ ಗುಣಗಳನ್ನು, ಮಾನವಿಕ ಸಸ್ಯವೈಜ್ಞಾನಿಕ ಅಧ್ಯಯನಗಳ ಹಿನ್ನಲೆಯಲ್ಲಿ ಮಾಡಿದ ಜಾಗತಿಕ ಪರಾಮರ್ಶೆಯೊಂದು ಅದರ ಅತ್ಯದ್ಭುತ ಪ್ರಬಂಧಗಳನ್ನು ಅವಲೋಕಿಸಿದೆ. ಸುಮಾರು ಇನ್ನೂರಕ್ಕೂ ಹೆಚ್ಚು ಅಧ್ಯಯನಗಳು ಕಿರು ನೆಲ್ಲಿಯ(ಫಿಲಾಂತಸ್‌ ಅಮರಸ್‌) ಸಸ್ಯವೈಜ್ಞಾನಿಕ ಸಂಗತಿಗಳನ್ನು ಒಳಗೊಂಡಂತೆ ಔಷಧಿಯ ಅಧ್ಯಯನಗಳ ವಿವರಗಳನ್ನು ದಾಖಲಿಸಿದೆ. ಅವುಗಳ ವಿವರದ ಆಧಾರದಿಂದ ಅಮರಸ್‌ ಪ್ರಭೇದವು ಲಿವರ್‌ ನ ಆರೋಗ್ಯದ ಪೋಷಣೆಯಲ್ಲೂ ಒಳಗೊಂಡಿದೆ, ಜೊತೆಗೆ ಅನೇಕ ಬಗೆಯ ಇತರೆ ಆರೋಗ್ಯದ ಲಾಭಗಳನ್ನು ನೀಡುತ್ತದೆ. ಹಲವು ಅಧ್ಯಯನಗಳು ಫಿಲಾಂತಸ್‌ ಅಮರಸ್‌ ಪ್ರಭೇದದಲ್ಲಿರುವ ರಾಸಾಯನಿಕ ವಿಶ್ಲೇಷಣೆಯ ಅಧ್ಯಯನಗಳನ್ನೂ ಪರಾಮರ್ಶಿಸಿವೆ. ಉರಿಯೂತ, ವೈರಸ್ಸುಗಳ ನಿಯಂತ್ರಣ, ಬ್ಯಾಕ್ಟಿರಿಯಾಗಳ ನಿಯಂತ್ರಣ, ಮಧುಮೇಹ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗಳು ಮುಂತಾದ ವಿವಿಧ ಆಯುರ್ವೇದ ಸೇರಿದಂತೆ ಪರಂಪರಾಗತ ದಾಖಲೆಗಳನ್ನು ಈ ಪರಾಮರ್ಶನವು ಜಾಲಾಡಿದೆ. ಇವೆಲ್ಲವೂ ಫಿಲಾಂತಸ್‌ನ ವೈವಿಧ್ಯಮಯ ಔಷಧೀಯ ಗುಣಗಳ ಪರಂಪರೆಯನ್ನು ಎತ್ತಿಹಿಡಿದಿವೆ. ಆದರೂ ಕ್ರೊಕಿನ್‌ ರಿವ್ಯೂ ವರದಿಯು ಪ್ರಸ್ತಾಪಿಸಿರುವುದನ್ನು ಗಮನಿಸಿದರೆ, ಇದೀಗ ಈ ಸಸ್ಯದ ಬಗೆಗಿರುವ ಔಷಧಿಯ ಗುಣಗಳ ಬಗೆಗೆ ಇರುವ ಹಕ್ಕುಗಳು ಸಮಂಜಸವಾಗಿ ತಿಳಿವಳಿಕೆಯ ಭಾಗವಾಗಿಲ್ಲ. ಒಟ್ಟಾರೆಯ ತಿಳಿವಳಿಕೆಯನ್ನು ಹುಟ್ಟಿಹಾಕುವ ಅಧ್ಯಯನಗಳು, ಆಳುವ ರೀತಿ ರಿವಾಜುಗಳು ಒಳಗೊಂಡ ನೀತಿ-ನಡಾವಳಿಗಳು, ಔಷಧಿಯ ವಹಿವಾಟು ಮಾರುಕಟ್ಟೆಗಳು, ಮಾನವತೆಯನ್ನು ನಿರ್ವಹಿಸುವ ಅಥವಾ ಸತ್ಯವನ್ನೇ ನಿದರ್ಶಿಸುವ ಬಗೆಗಿನ ವಿವರಗಳ ಬಲು ದೊಡ್ಡ ಕೊರತೆಯಿರುವುದು ತಿಳಿಯುತ್ಸುತದೆ.

ಆರಂಭದಲ್ಲಿ ಫಿಲಾಂತಸ್‌ ಅಮರಸ್‌ ಹೆಸರಿನ ಬಗೆಗಿನ ಪ್ರಮಾದಗಳನ್ನು ಉಲ್ಲೇಖಿಸಿದ್ದೆ. ಅದರ ಹೆಸರಿನಲ್ಲಿ ಇನ್ನೂ ಹಲವು ಇತರೇ ಪ್ರಭೇದಗಳು ಮಿಶ್ರಣಗೊಂಡು ಮಾರಾಟದ ವಹಿವಾಟಿನಲ್ಲಿ ಗಣನೀಯ ಪ್ರಮಾಣದಲ್ಲಿ ಇರುವುದರಿಂದ ಅದನ್ನು ಹೇಳಬೇಕಾಗಿತ್ತು. ಏಕೆಂದರೆ ಫಿಲಾಂತಸ್‌ ಅಥವಾ ಈ ಕಿರುನೆಲ್ಲಿಯು ಭಾರತದಿಂದ ಸುಮಾರು ನಾಲ್ಕೈದು ಸಾವಿರ ಟನ್ನುಗಳಷ್ಟು ಸಂಗ್ರಹಗೊಂಡು ವಹಿವಾಟುಗೊಳ್ಳುತ್ತದೆ. ಇದರಲ್ಲಿ ನಾಲ್ಕಾರು ನೂರು ಟನ್ನುಗಳು ಅಮರಸ್‌ ಅಲ್ಲದೆಯೂ ಅದೇ ಹೆಸರಿನಲ್ಲಿ ಮಾರಾಟವಾಗುತ್ತಿದೆ! ಇದು ತಿಳಿಯದೆಯೋ ಅಥವಾ ಲಾಭದ ಹಿತದಲ್ಲೋ ಎಂಬುದು ಪರಾಮರ್ಶಿಸಬೇಕಾದ ಸಂಗತಿ. ನಮ್ಮ ದೇಶದ ಔಷಧೀಯ ವಹಿವಾಟಿನಲ್ಲಿ ಫಿಲಾಂತಸ್‌ ಪಾತ್ರವು ಗಮನಾರ್ಹವಾಗಿದ್ದು, ಅದರ ಚಿಕಿತ್ಸೆಯ ಆಧಾರಿತ ಅಧ್ಯಯನಗಳು ನಡೆದು ಅದರ ಫಲಿತಗಳು ಸಾರ್ವತ್ರಿಕವಾಗಬೇಕಿದೆ. ಹೆಪಟೈಟಿಸ್‌ ವೈರಸ್‌ನ ಹೆಚ್ಚುವಿಕೆಯ ತಡೆಯುವಲ್ಲಿಯೂ ಅದರ ಪಾತ್ರವಿರುವುದನ್ನು ನೆಪವಾಗಿಟ್ಟುಕೊಂಡು, ವೈರಸ್ಸಿನ ನಿಯಂತ್ರಣದಲ್ಲಿ ಏನಾದರೂ ಒಳಿತಾಗುವುದೇನೋ ಎಂಬ ಹಿತದಿಂದ ಇದನ್ನೆಲ್ಲಾ ಹಂಚಿಕೊಳ್ಳಬೇಕಾಯಿತು. ಕೇವಲ ವೈರಸ್ಸಿನ ನಿಯಂತ್ರಣವಷ್ಟೇ ಅಲ್ಲದೆ, ಮಾನವ ಸ್ವಾಸ್ಥ್ಯದ ಹಿನ್ನೆಲೆಯ ಅದ್ಯಾವ ಸಂಗತಿಗಳನ್ನು ತನ್ನ ಒಡಲಲ್ಲಿಟ್ಟುಕೊಂಡಿದೆಯೋ ಈ ಸಸ್ಯ ಸಮೂಹ. ಹಾಗಾಗಿ ಈಗಿರುವ ಕರೋನ ನಿಯಂತ್ರಣವು ಸಾಧ್ಯವಾಗಿ ಮಾನವತೆಯನ್ನು ಕಾಪಾಡಲಿ ಎಂಬ ಆಶಯದೊಂದಿಗೆ ನಿಲ್ಲಿಸುತ್ತೇನೆ.

ನಮಸ್ಕಾರ

ಡಾ.ಟಿ.ಎಸ್.‌ ಚನ್ನೇಶ್.‌

This Post Has 4 Comments

  1. Kusum salian

    Very good information about phyllanthus niruri/ amarus. Very important medicinal plant for Hapatities as I know. After reading your article there’s a small hope …it may helps to week carona viruse
    Thank you

  2. ಶ್ರೀಹರಿ ಸಾಗರ, ಕೊಚ್ಚಿ

    ಲೇಖನ ಉಪಯುಕ್ತ ಮಾಹಿತಿಯನ್ನು ಹೊಂದಿದ್ದು ತುಂಬಾ ಚೆನ್ನಾಗಿದೆ. ಕಟ್ಟುನಿಟ್ಟಾದ ಪಥ್ಯ ಆಯುರ್ವೇದದ ಭಾಗವಲ್ಲದೆ ಬೇರ್ಯಾವ ರೀತಿಯಿಂದಲೂ ವಿವರಿಸಲಾಗುವುದಿಲ್ಲ. ಅರಿಸಿನ ಕಾಮಾಲೆಗೆ ಆಯುರ್ವೇದದ ಮದ್ದು ರಾಮಬಾಣ. ಇದನ್ನ ನನ್ನ ಮಿತ್ರರೊಬ್ಬರ ಅನುಭವ ದಿಂದ ಕಂಡಿದ್ದೇನೆ. ಹತ್ತಾರು ದಿನಗಳ ಕಾರ್ಪೊರೇಟ್ ಆಸ್ಪತ್ರೆಯಲ್ಲಿ ಗುಣವಾಗದ್ದು ಮತ್ತು ಬಿಗಡಾಯಿಸಿದ್ದು ಆಯುರ್ವೇದದ ಇದೇ ಗಿಡವೋ ಗೊತ್ತಿಲ್ಲ ಸಂಪೂರ್ಣ ಗುಣಮುಖರಾಗಿದ್ದು ಇದೇ ಪಥ್ಯವೂ ಸೇರಿ. ನಿಮ್ಮ ಲೇಖನ ಚೆನ್ನಾಗಿದೆ. ಹೀಗೆ ಮುಂದುವರಿಯಲಿ..

  3. ಹಂ.ಗು. ರಾಜೇಶ್

    ಉಪಯುಕ್ತ ಬರವಣಿಗೆ. ಧನ್ಯವಾದಗಳು ಸರ್

  4. RAMESH GOVIND PAI

    Very relevant and useful pieces of information Dr. Chennesh. I heartily appreciate and thank you for this spread of knowledge. Best of luck.

Leave a Reply