ಯಾವುದೇ ವಿಜ್ಞಾನಿಯೊಬ್ಬರನ್ನು ನಾವು ಸಾಮಾನ್ಯವಾಗಿ ನೆನಪಿಸಿಕೊಳ್ಳುವುದು ಅವರ ಅನ್ವೇಷಣೆಯಿಂದ, ಅವರ ಮೇಧಾವಿತನದಿಂದ ಜೊತೆಗೆ ಅವರ ಮಾನವತೆಯಿಂದ. ಇವೆಲ್ಲವೂ ಇದ್ದೂ ಅದರ ಜತೆಗೆ ಮತ್ತೇನನ್ನೋ ಅಪರೂಪಕ್ಕೆ ಜೋಡಿಸಿಕೊಳ್ಳಬೇಕಷ್ಟೇ. ಅಂತಹ ಅಪರೂಪದ ವಿಜ್ಞಾನಿಯೊಬ್ಬರು ವಿಜ್ಞಾನದ ಓದುಗರನ್ನು ತಲುಪಲೇಬೇಕು. ಏಕೆಂದರೆ ಅತ್ಯಂತ ಜಾಣತನ ಅಪರೂಪದ ಅನ್ವೇಷಣೆಯಿಂದ ನೊಬೆಲ್ ಬಹುಮಾನವನ್ನೂ ಪಡೆದುದಲ್ಲದೆ ತಮ್ಮ ಅಪರೂಪದ ವಾಕ್ ಚಾತುರ್ಯದಿಂದ ವಿಜ್ಞಾನವನ್ನು ಪಾಠಮಾಡುವ ಮೇಷ್ಟ್ರಾಗಿದ್ದರು ರಿಚರ್ಡ್ ಫೈನ್‌ಮನ್. ನಮ್ಮಲ್ಲಿ ಅನೇಕರಿಗೆ ನೆನಪಿನಲ್ಲಿ ಉಳಿವ ಮೇಷ್ಟ್ರೆಂದರೆ ಹೆಚ್ಚಿನ ಪಾಲು ಸಾಹಿತ್ಯದವರೇ ಆಗಿರುವುದರಲ್ಲಿ ಅನುಮಾನಗಳಿಲ್ಲ. ಸಾಹಿತ್ಯದಲ್ಲಿನ ಲೌಕಿಕ ಸಂಗತಿಗಳಿಂದ ಮತ್ತವನ್ನು ನಮ್ಮ ಜೀವನಕ್ಕೂ ಸಮೀಕರಿಸಿ ಹೇಳುವ ಪರಿಯಿಂದ ಅವರು ನಮ್ಮ ನೆನಪಿನಲ್ಲಿ ಉಳಿದಿರಲು ಸಾಧ್ಯವಿದೆ. ಅದರ ಜತೆಗೆ ವಿಜ್ಞಾನದ ವಿದ್ಯಾರ್ಥಿಗಳಿಗೆ ವಿಜ್ಞಾನದ ಮೇಷ್ಟ್ರೂ ಅವರ ಅಪರೂಪದ ವಿಧಾನದಿಂದ ಅಥವಾ ಇನ್ನಾವುದೋ ಕಾರಣಕ್ಕೂ ನೆನಪಲ್ಲಿ ಇರಬಹುದು. ಆದರೆ ಫೈನ್‌ಮನ್ ಮಾತ್ರ ಇಡೀ ವಿಜ್ಞಾನದ ಆಸಕ್ತಿಯುಳ್ಳ ಎಲ್ಲರಿಗೂ ಇಷ್ಟವಾಗುವ ಅಪ್ರತಿಮ ವಿಜ್ಞಾನದ ತಿಳಿವನ್ನು ಹಂಚುವ ಪರಿಯಿಂದ ಜಗತ್ತಿಗೇ ಪರಿಚಿತರು. ಓರ್ವ ವಿಜ್ಞಾನ ಮೇಷ್ಟ್ರಾಗಿ ಅವರೊಬ್ಬ ಮಾಂತ್ರಿಕರೇ ಸರಿ.
ವಿಜ್ಞಾನದ ಚರ್ಚೆಗಳಲ್ಲಿ ರಿಚರ್ಡ್ ಫೈನ್‌ಮನ್ ಅವರನ್ನು ನೆನಪಿಸಿಕೊಳ್ಳದಿದ್ದಲ್ಲಿ ಅದಕ್ಕೊಂದು ಪರಿಪೂರ್ಣತೆಯೇ ಇರದು. ಏಕೆಂದರೆ ಫೈನ್‌ಮನ್‌ರನ್ನು ಹೊರತು ಪಡಿಸಿ ವಿಜ್ಞಾನವನ್ನು ನೋಡುವುದೇ ಕಷ್ಟ. ವಿಜ್ಞಾನ ಕಲಿಕೆಯ ಹಿಂದೆ ಹೋದವರು ಅದರಲ್ಲೂ ಭೌತವಿಜ್ಞಾನದ ವಿದ್ಯಾರ್ಥಿಗಳು ಫೈನ್‌ಮನ್‌ರ ಪಾಠದ ಕುರಿತು ಕೇಳಿರಲೇ ಬೇಕು, ಇಲ್ಲವಾದಲ್ಲಿ ಅವರು ವಿಜ್ಞಾನದ ವಿದ್ಯಾರ್ಥಿಗಳೇ ಅಲ್ಲ. ಭೌತವಿಜ್ಞಾನದಲ್ಲಿ ಫೈನ್‌ಮನ್‌ರ ಪಾಠಗಳು ಅದ್ಭುತವಾದ ಮೈಲುಗಲ್ಲು. ವಿಜ್ಞಾನಿಗಳು ಏನು ಮಾಡುತ್ತಾರೋ ಅದೇ ವಿಜ್ಞಾನ ಎಂತಲೂ, ವಿಜ್ಞಾನವನ್ನು ಮಾಡುವವರನ್ನು ವಿಜ್ಞಾನಿಗಳು ಎಂತಲೂ ತಮಾಷೆಗೆ ಹೇಳುವುದುಂಟು. ಹಾಗೇ ವಿಜ್ಞಾನಿಯೋರ್ವರು ಮಾಡಿದ್ದೆಲ್ಲವೂ ವಿಜ್ಞಾನವೇ ಎನ್ನುವುದಾದಲ್ಲಿ ಅದಕ್ಕೆ ನಿಜಕ್ಕೂ ಸರಿಹೊಂದುವ ಉದಾಹರಣೆಯೆಂದರೆ ರಿಚರ್ಡ್ ಫೈನ್‌ಮನ್. ನಿಜಕ್ಕೂ ಅವರು ಮಾಡಿದ್ದೆಲ್ಲವೂ ವಿಜ್ಞಾನವೇ. ಅಷ್ಟರ ಮಟ್ಟಿಗೆ ವಿಜ್ಞಾನದಲ್ಲಿ ತೊಡಗಿಸಿಕೊಂಡವರು.
ವಿಜ್ಞಾನವೊಂದು ಸತ್ಯದ ಹುಡುಕಾಟ! ಅದರಲ್ಲೂ ನಿಸರ್ಗದ ಆಗು ಹೋಗುಗಳ ತಿಳಿವಿನ ಪರಿ. ಸತ್ಯದೊಳಗಣ ಸೌಂದರ್ಯದ ವಿವರಗಳನ್ನು ಒದಗಿಸುವ ಮಾಧ್ಯಮ. ವಿಜ್ಞಾನಿಗಳು ಮಾಡುವುದನ್ನೇ ವಿಜ್ಞಾನ ಎನ್ನುವ ವಿಚಾರದಲ್ಲಂತೂ ನೊಬೆಲ್ ಪುರಸ್ಕೃತ ವಿಜ್ಞಾನಿ ರಿಚರ್ಡ್ ಫೈನ್‌ಮನ್‌ರದ್ದು ಅದ್ವಿತೀಯ ಬದುಕು. ವಿಜ್ಞಾನದ ಆರಂಭದ ಶತಮಾನದಲ್ಲಾದ ಭೌತವಿಜ್ಞಾನದ ಬದಲಾವಣೆಗಳ ಅಡಿಪಾಯ ಒದಗಿಸುವ ಅವರ ಉಪನ್ಯಾಸಗಳು ಜಗತ್ತಿನಾದ್ಯಂತ ಹೆಸರುವಾಸಿ. ಅವೆಲ್ಲಾ ಪುಸ್ತಕ ರೂಪದ ಪ್ರಕಟಣೆಗಳಾಗಿ ಪ್ರಪಂಚದ ಎಲ್ಲಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೂ ಪ್ರಿಯವಾಗಿವೆ. ಓರ್ವ ಉಪನ್ಯಾಸಕರಾಗಿ ಅವರೊಬ್ಬ ಮಾಂತ್ರಿಕರೇ ಸರಿ. ವಿಜ್ಞಾನವನ್ನು ರಂಗದ ಮೇಲೇ ತಂದಂತೆ ನಟಿಸಿ ಬೋಧಿಸುತ್ತಿದ್ದ ಪರಿ ಅನನ್ಯವಾದುದು. ವಿಜ್ಞಾನಗಳ ಬಗೆಗೆ ಬೆರಗು ಹುಟ್ಟಿಸುವಂತೆ ಅವರ ವರ್ತನೆಗಳು, ವಿಜ್ಞಾನ ಹಾದಿಯಲ್ಲಿ ನಡೆವವರಿಗೆ ಎಲ್ಲಾ ಕಾಲಕ್ಕೂ ದಾರಿ ದೀಪವೇ ಆಗಿರುವುವು ಆ ಉಪನ್ಯಾಸಗಳಿಗೆ ಸಲ್ಲುತ್ತದೆ. ಈ ಉಪನ್ಯಾಸಗಳನ್ನು ಅವರು ಕ್ಯಾಲ್‌ಟೆಕ್ ಅಥವಾ ಕ್ಯಾಲಿಫೋರ್ನಿಯಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ 1960ರ ದಶಕದಲ್ಲಿ ಕೊಟ್ಟರು.
ಕಾಲ್‌ಟೆಕ್ ಸಾಮಾನ್ಯ ಸಂಸ್ಥೆಯಲ್ಲ. ಅದರ ಆರಂಭವೇ ವಿಶೇಷವಾದದ್ದು. ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಒಮ್ಮೆ ಕೆಲವು ವಿದ್ವಾಂಸರು ಸೇರಿಕೊಂಡು ಚರ್ಚಿಸುತ್ತಿರುವಾಗ ಗೋಲ್ಡ್ ರಷ್ ಮಾದರಿಯಲ್ಲಿ ಜನರು ಮುಗಿಬಿದ್ದು ಓಡಿ ಬರಬೇಕು ಅಂತಹದೊಂದನ್ನು ಮಾಡುವ ಆಲೋಚನೆ ಬಂತು. ಸರಿ ಹಾಗಾದರೆ ಒಂದು ಶೈಕ್ಷಣಿಕ ಸಂಸ್ಥೆಯನ್ನು ಮಾಡವಂತೆಯೂ ಅದಕ್ಕೆ ಜಗತ್ತಿನಾದ್ಯಂತ ವಿದ್ಯಾರ್ಥಿಗಳು ಮುಗಿಬಿದ್ದು ಬರುವಂತೆ ಆಸೆಹೊಂದಬೇಕೆಂಬ ತೀರ್ಮಾನದಿಂದ ಹುಟ್ಟಿದ ಸಂಸ್ಥೆ. ಈ ಹೊತ್ತು ನಿಜಕ್ಕೂ ಜಗತ್ತಿನಾದ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳು ಮುಗಿ ಬಿದ್ದು ಹೋಗ ಬಯಸುವ ತಾಣ. ಅಲ್ಲಿನ ಶ್ರೇಷ್ಠತೆಯ ಪರಂಪರೆ ಎಂತಹದ್ದೆಂದರೆ ಭೌತವಿಜ್ಞಾನದಲ್ಲಿ ಮಾಂತ್ರಿಕ ವಿಜ್ಞಾನಿಯೆಂದೂ, ಇಂದು ಬೆಳೆಯುತ್ತಿರುವ ಭೌತವಿಜ್ಞಾನದ ಪರಂಪರೆಗೆ ಮಹತ್ವದ ದಾರಿ ತೋರಿದ, ಮಾಹಾನ್ ವಿಜ್ಞಾನಿ ಆಲ್ಬರ್ಟ್ ಐನ್‌ಸೈನ್‌ರನ್ನೂ ಅಚ್ಚರಿಗೊಳಿಸಿದ ನೊಬಲ್ ವಿಜೇತ ರಿಚರ್ಡ್ ಫೈನ್‌ಮನ್ ಇದ್ದ ವಿದ್ಯಾಲಯ. ಆತನ ಎಲ್ಲ ಚಟುವಟಿಕೆಗಳ ತಾಣ. ಅಲ್ಲಿ ಆತನೆತ್ತಿದ ಪ್ರಶ್ನೆಗಳು ವಿಜ್ಞಾನದಲ್ಲಿ ಹೊಸತೊಂದು ಕ್ರಾಂತಿಯನ್ನೇ ಮೊಳಗಿದವು. ಇವು ಕೇವಲ ಭೌತವಿಜ್ಞಾನಕ್ಕೆ ಮಾತ್ರ ಸೀಮಿತವಾಗಿರದೆ ವಿಜ್ಞಾನ ಜಗತ್ತನ್ನು ಕುರಿತಾಗಿದ್ದವು. ಅಷ್ಟೇ ಅಲ್ಲದೆ ವಿಜ್ಞಾನದ ಪಾಠ ಹೇಳುವ ರೀತಿಯನ್ನು ಅತ್ಯಂತ ಸರಳವಾಗಿ ವಿದ್ಯಾರ್ಥಿ ಸ್ನೇಹಿಯಾಗಿ ರೂಪಿಸಿದವರು. ಫೈನ್‌ಮನ್ ಲಕ್ಚರ್ಸ್ ಎಂದೇ ಜಗತ್ ಪ್ರಸಿದ್ದವಾಗಿ ಪ್ರಕಟಣೆಯಾದ ಆ ಭೌತವಿಜ್ಞಾನದ ಪುಸ್ತಕಗಳು ಅಲ್ಲಿನ ಕೊಡುಗೆ. ಈಗ ಕ್ಯಾಲ್‌ಟೆಕ್ ಜಗತ್ತಿನಲ್ಲೇ ಮೊದಲ ಹತ್ತು ವಿದ್ಯಾಸಂಸ್ಥೆಗಳಲ್ಲಿ ಒಂದು. ಅಂತಹ ಸ್ಥಳದಲ್ಲಿ ನೀಡಿದ ಈ ಉಪನ್ಯಾಸಗಳ ಇತಿಹಾಸವೂ ಅಷ್ಟೇ ಗಂಭೀರ ಗುರಿಯನ್ನೂ ಹೊಂದಿದೆ.
ಕಳೆದ ಶತಮಾನದ 1960ರ ದಶಕದಲ್ಲಿ ವಿಜ್ಞಾನದಲ್ಲಿ ಆಸಕ್ತಿ ಹೊಂದುವಂತೆ ಅದರಲ್ಲೂ ಭೌತವಿಜ್ಞಾನದ ವಿದ್ಯಾರ್ಥಿಗಳಿಗೆ ಮೊದಲ ಪಾಠಗಳಿಂದಲೇ ಆರಂಭಿಕ ಕುತೂಹಲ ಮತ್ತು ಆಸಕ್ತಿಯನ್ನು ಉಂಟುಮಾಡುವಂತೆ ವಿಶೇಷ ಕೋರ್ಸುಗಳನ್ನು ಕೊಡಲು ಆಲೋಚಿಸಲಾಯಿತು. ಸರಿ ಅದಕ್ಕೆ ಅತ್ಯುತ್ತಮ ವಾಕ್‌ಚತುರತೆಯುಳ್ಳ ವ್ಯಕ್ತಿಯನ್ನು ಆಲೋಚಿಸದಾಗ. ಎಲ್ಲರ ಒಮ್ಮತದ ವ್ಯಕ್ತಿಯಾಗಿ ರಿಚರ್ಡ್ ಫೈನ್‌ಮನ್ ಅವರನ್ನು ಸೂಚಿಸಲಾಯಿತು. ರಿಚರ್ಡ್ ಫೈನ್‌ಮನ್ ಅತ್ಯದ್ಭುತ ಭೌತವಿಜ್ಞಾನದ ಪ್ರತಿಭೆ. ಅವರ ಉಪನ್ಯಾಸದಿಂದ ಅವವನ್ನು ವಿಖ್ಯಾತ ವಿಜ್ಞಾನ ಪತ್ರಿಕೆ “ಅತ್ಯದ್ಭುತ ವ್ಯಾಖ್ಯಾನಕಾರ” ಎಂದೇ ಬಣ್ಣಿಸಿದೆ. ಅಂತಹಾ ವಿಶೇಷ ವಿಜ್ಞಾನ ಹಾಗೂ ಮನುಷ್ಯ ಸಂಬಂಧಗಳನ್ನು ಹೊಂದಿದ್ದ ಅದ್ವೀತೀಯ ಸಂವಹನಕಾರ ರಿಚರ್ಡ್ ಫೈನ್‌ಮನ್ 1961 ಮತ್ತು 63ರ ಮಧ್ಯೆ ಕ್ಯಾಲ್‌ಟೆಕ್‌ನಲ್ಲಿ ಈ ಉಪನ್ಯಾಸಗಳನ್ನು ನೀಡಿದರು. ಈ ಎಲ್ಲಾ ಉಪನ್ಯಾಸಗಳನ್ನೂ ಹಾಗೇ ಆಗಿನ ಕಾಲದ ಶ್ರೇಷ್ಠ ತಂತ್ರಜ್ಞಾನದ ಪ್ರಕಾರ ಸಂಪೂರ್ಣವಾಗಿ ರೆಕಾರ್ಡು ಮಾಡಲಾಯಿತು. ಹಾಗೇ ಮಾಡಿದ ಎಲ್ಲಾ ಉಪನ್ಯಾಸಗಳನ್ನೂ ಅವರು ಮಾತಾಡಿದಂತೆಯೇ ಲಿಪ್ಯಂತರಿಸಿ “ಫೈನ್‌ಮನ್‌ರ ಭೌತವಿಜ್ಞಾನದ ಉಪನ್ಯಾಸಗಳು (ಫೈನ್‌ಮನ್ ಲಕ್ಚರ್ಸ್ ಆನ್ ಫಿಸಿಕ್ಸ್)” ಎಂದು ಮೂರು ಸಂಪುಟಗಳಲ್ಲಿ ಪ್ರಕಟಿಸಲಾಯಿತು.
ಈ ಮೂರೂ ಸಂಪುಟಗಳು ಯಾವುದೇ ವಿಜ್ಞಾನ ಅಥವಾ ಇತರೇ ಜ್ಞಾನ ಶಿಸ್ತಿನ ಪ್ರಕಟಣೆಯಂತಿರದೆ ನೇರ ಮಾತುಗಳ ವಿವರಣೆಯನ್ನು ಒಳಗೊಂಡಿವೆ. ಹಾಗಾಗಿ ಓದುಗರಿಗೇ ಫೈನ್‌ಮನ್ ಭೌತವಿಜ್ಞಾನದ ಸಂಗತಿಗಳಿಂದ ಅನುರಣಿಸುತ್ತಲೇ ಇರುತ್ತಾರೆ. ಮೂರು ಸಂಪುಟಗಳಿಂದ ಇಡೀ ಭೌತವಿಜ್ಞಾನದ ಅತ್ಯುತ್ತಮ ಅಡಿಪಾಯ ಒದಗುತ್ತದೆ. ಮೊದಲ ಸಂಪುಟದಲ್ಲಿ ಭೌತಿಕ ವಸ್ತುಗಳ ವರ್ತನೆ ಮತ್ತು ಬಲಕ್ಕೆ ಸಂಬಂಧಿಸಿದ ವಿಜ್ಞಾನದ ವಿವರಗಳು, ಶಾಖಕ್ಕೆ ಸಂಬಂಧಿಸಿದ ವೈಜ್ಞಾನಿಕ ಸಂಗತಿಗಳು ಜತೆಗೆ ವಿಕಿರಣಕ್ಕೆ ಸಂಬಂಧಿಸಿದ ವಿಚಾರಗಳನ್ನು ವಿವರಿಸಲಾಗಿದೆ. ಎರಡನೆಯ ಸಂಪುಟದಲ್ಲಿ ವಿದ್ಯುತ್ ಕಾಂತತ್ವ ಮತ್ತು ಅದರ ನಿಯಮಗಳ ವಿವರಗಳು ಹಾಗೂ ವಸ್ತುಗಳ ರೂಪ ಮತ್ತದರ ವಿವರಗಳಸಂಗತಿಗಳೂ ಇವೆ. ಇನ್ನು ಮೂರನೆಯ ಸಂಪುಟದಲ್ಲಿ ಕ್ವಾಂಟಂ ಮೆಕಾನಿಕ್ಸ್ ಅಥವಾ ಕ್ವಾಂಟಂ ಸೈದ್ಧಾಂತಿಕ ವಿವರಗಳ ಭೌತವಿಜ್ಞಾನದ ವಿಚಾರಗಳನ್ನು ವಿವರಿಸಲಾಗಿದೆ.
ಫೈನ್‌ಮನ್ ಭೌತವಿಜ್ಞಾನದ ಪಾಠಗಳ ಓದಿನ ಬಗೆಗೆ ಒಂದು ವಿದ್ವತ್ಪೂರ್ಣ ಮಾದರಿಯ ಉದಾಹರಣೆಯಿದೆ. ಇದು ಭೌತವಿಜ್ಞಾನದ ಬೆರಗು ಮತ್ತು ಕುತೂಹಲ ಕಲಿಕೆಯ ಸಂಗತಿಗಳನ್ನು ಕೊಡುವಲ್ಲಿ ಫೈನ್‌ಮನ್‌ರ ಶ್ರೇಷ್ಠತೆಯನ್ನು ಎತ್ತಿಹಿಡಿಯಬಲ್ಲದು. ಮೈಖೆಲ್ ಗಾಟ್‌ಲಿಬ್ ಒಬ್ಬ ಕಂಪ್ಯೂಟರ್ ಪ್ರೊಗ್ರಾಮರ್. ಆತ ಫೈನ್‌ಮನ್ ಪಾಠಗಳ ಓದಿದ್ದಲ್ಲದೆ ಇದೀಗ ಅವೆಲ್ಲವನ್ನೂ ಮತ್ತೆ ಸಂಪಾದಿಸಿ ಕೊಟ್ಟವರಲ್ಲಿ ಒಬ್ಬ. ಆತನಿಗೆ ಫೈನ್‌ಮನ್ ಪಾಠದ ಪರಿಚಯವೇ ವಿಶೇಷವಾದದ್ದು. ಪಾಠಗಳ ಸಂಪಾದಕರೊಬ್ಬರಾದ ರಾಲ್ಫ್ ಲೈಟೆನ್ ಗಾಟ್‌ಲಿಬ್‌ಗೆ ೮೦ರ ದಶಕದಲ್ಲಿ ಪರಿಚಯವಾಗುತ್ತಾರೆ. ಅವರಿಬ್ಬರ ಸ್ನೇಹದಲ್ಲಿ ಫೈನ್‌ಮನ್‌ರ ಪಾಠಗಳ ವಿನಿಮಯವಾಗುತ್ತದೆ. ಗಾಟ್‌ಲಿಬ್ ಕ್ವಾಂಟಂ ಸೈದ್ಧಾಂತಿಕ ವಿವರಗಳಲ್ಲಿ ಆಸಕ್ತಿಯನ್ನು ಹೊಂದಿದ್ದಲ್ಲದೆ ಸ್ವತಃ ಪ್ರೊಗ್ರಾಮರ್ ಆಗಿದ್ದರಿಂದ ಫೈನ್‌ಮನ್ ಕಂಪ್ಯುಟೇಶನ್ ಓದಲು ರಾಲ್ಫ್ ಸಲಹೆ ನೀಡುತ್ತಾರೆ. ಓದಿಗೆ ತೊಡಗಿದಾಗ ಆದ ಸಹಜ ತೊಂದರೆಗಳ ನಿವಾರಿಸಲು ಫೈನ್‌ಮನ್ ಪಾಠಗಳನ್ನು ಸಂಪೂರ್ಣವಾಗಿ ಓದುವ ಪ್ರೇರಣೆಗೆ ಗಾಟ್‌ಲಿಬ್ ಒಳಗಾಗುತ್ತಾರೆ. ಎಷ್ಟೆಂದರೆ ಅದರ ಓದಿಗಾಗಿ ತನ್ನ ಮಾಮೂಲಿ ಕಂಪ್ಯೂಟರ್ ಪ್ರೊಗ್ರಾಮಿಂಗ್ ಕೆಲಸದಿಂದ ಆರು ತಿಂಗಳ ಮುಕ್ತಿ ಪಡೆದು, ಕೊಸ್ಟರಿಕಾದ ಹಳ್ಳಿಯಲ್ಲಿ ಹೋಗಿ ಆರೂ ತಿಂಗಳು ಫೈನ್‌ಮನ್ ಪಾಠಗಳ ಓದಿನಲ್ಲಿ ಮುಳುಗಿಬಿಡುತ್ತಾರೆ. ಆಗ ಗಾಟ್‌ಲಿಬ್‌ಗೆ ಫೈನ್‌ಮನ್ ಇಡೀ ಭೌತಶಾಸ್ತçವನ್ನು ಬೆರಗು ಮತ್ತು ಹುಡುಕಾಟಗಳಿಂದ ಸತ್ಯ ದರ್ಶನವನ್ನು ಮಾಡಸುವಂತಹ ಭೌತವಿಜ್ಞಾನದ ಸಂತನಂತೆ ಕಾಣಿಸುತ್ತಾರೆ. ಹಾಗೆ ಎಂತಹದ್ದೇ ವಿದ್ಯಾರ್ಥಿಗೂ ಆಗುವ ಎಲ್ಲ ಸಾಧ್ಯತೆಗಳನ್ನೂ ಈ ಪಾಠಗಳು ಒಳಗೊಂಡಿವೆ. ಇದರ ಕಾಣಿಕೆಯೆಂಬಂತೆ ಗಾಟ್‌ಲಿಬ್ ಫೈನ್‌ಮನ್ನರಿಗೊಂದು ಗೌರವ ಕೊಡವ ಕೆಲಸಕ್ಕೆ ರಾಲ್ಫ್ ಅವರೊಂದಿಗೆ ಆಲೋಚಿಸಿ “ಫೈನ್‌ಮನ್ ಓದಿಗೊಂದು ಪೀಠಿಕೆ – (Feynman’s Tips on physics)” ಎಂಬ ಪುಸ್ತಕವನ್ನು ಪ್ರಕಟಿಸುತ್ತಾರೆ. ಇದು ಇಂದು ಫೈನ್‌ಮನ್ ಪಾಠಗಳ ಜತೆಗೆ ಒದಲೇ ಬೇಕಾದ ಪಠ್ಯವನ್ನು ಒಳಗೊಂಡಿದೆ. ಇದು ಫೈನ್‌ಮನ್ ಪಾಠಗಳ ಓದು ಮಾಡುವ ಚಮತ್ಕಾರ.
ಫೈನ್‌ಮನ್‌ರ ಬೆರಗು ಮತ್ತು ಹುಡುಕಾಟ
ರಿಚರ್ಡ್ ಫೈನ್‌ಮನ್ ಅವರ ಭೌತವಿಜ್ಞಾನದ ಉಪನ್ಯಾಸಗಳು ಇಂದು ಜಗದ್ವಿಖ್ಯಾತವಾದ ಆಕರ ಗ್ರಂಥಗಳು. ಅವೆಲ್ಲವೂ ರಿಚರ್ಡ್ಪೈನ್‌ಮನ್ ಪಾಠ ಕೊಡುವಾಗ ಮಾಡಿದ್ದ ರೆಕಾರ್ಡ್ಗಳು ಮಾತ್ರವಲ್ಲದೇ ಆತ ವಿವರಣೆಗಾಗಿ ಮಾಡಿದ್ದ ಚಿತ್ರಗಳ ಫೋಟೋಗಳನ್ನೂ ಒಳಗೊಂಡಿವೆ. ಒಟ್ಟಾರೆ ಭೌತವಿಜ್ಞಾನವನ್ನು ಆತ್ಯಂತಿಕ ಬೆರಗಿನಿಂದ ತನ್ನ ರಂಗನಟನೆಯ ರೀತಿಯ ಭೌತವಿಜ್ಞಾನದ ವಿವರಣೆಗಳ ಮಾದರಿಯನ್ನು ಹೊತ್ತು ಇಂದು ಜಗತ್ತಿನ ಎಲ್ಲಾ ವಿಜ್ಞಾನ ಪ್ರಿಯರ ಮನಸೂರೆಗೊಂಡಿವೆ. ಈವರೆಗೆ ಇಂಗ್ಲೀಶ್ ಭಾಷೆಯಲ್ಲೇ ಮೂರು ದಶಲಕ್ಷದಷ್ಟು ಪುಸ್ತಕಗಳು ಮಾರಾಟವಾಗಿವೆ. ಹೆಚ್ಚೂ ಕಡಿಮೆ ಅಷ್ಟೇ ಸಂಖ್ಯೆಯಲ್ಲಿ ಇತರ ಹತ್ತಾರು ಭಾಷೆಯಲ್ಲಿ ಅನುವಾದಗೊಂಡ ಪಾಠಗಳೂ ಓದುಗರನ್ನು ತಲುಪಿವೆ.
ಮೂರೂ ಸಂಪುಟಗಳನ್ನು ಕ್ಯಾಲ್‌ಟೆಕ್ ಆರಂಭಿಕ ಗ್ರಂಥಸ್ವಾಮ್ಯವನ್ನು ಹೊಂದಿದ್ದರೂ 2013ರಿಂದ ಅವೆಲ್ಲವನ್ನೂ ಉಚಿತವಾಗಿ ಜಗತ್ತಿನ ಎಲ್ಲಾ ವಿಜ್ಞಾನದ ಓದುಗುರಿಗೆ ಸಿಗುವಂತೆ ತನ್ನ ವಿಶೇಷ ವೆಬ್‌ಪುಟಗಳಲ್ಲಿ ಕೊಟ್ಟಿದೆ. ಅವೆಲ್ಲವನ್ನೂ www.feynmanlectures.caltech.edu ನಿಂದ ಉಚಿತವಾಗಿ ಪಡೆಯಬಹುದು. 2012ಮತ್ತು 13ರಲ್ಲಿ ಗಾಟ್‌ಲಿಬ್ ಮತ್ತು ರಾಲ್ಫ್ ಜತೆಗೂಡಿ ಫೈನ್‌ಮನ್ ಗೌರವಾರ್ಥ ಜಗತ್ತಿನ ಎಲ್ಲ ವಿಜ್ಞಾನದ ಓದುಗರಿಗೆ ಆಸಕ್ತರಿಗೆಂದೇ ಅರ್ಪಿಸಿದ ಈ ವೆಬ್‌ಪುಟಗಳು ಎಲ್ಲೆಡೆ ಜನಪ್ರಿಯವಾಗಿವೆ. ಸಾಲದಕ್ಕೆ ಹುಡುಕಾಟದ ಖುಷಿಯನ್ನು ಫೈನ್‌ಮನ್ ಅನುಭವಿಸಿದ ಪರಿಯ ಚಿತ್ರವೊಂದು ಸಹಾ ಯು ಟ್ಯೂಬ್‌ನಲ್ಲಿ The complete FUN TO IMAGINE with Richard Feynman ಎಂಬ ಶೀರ್ಷಿಕೆಯಲ್ಲಿದೆ. ಅದರಲ್ಲಿ ಸ್ವತಃ ರಿಚರ್ಡ್ ಫೈನ್‌ಮನ್ ಹುಡುಕಾಟದ ಬೆರಗನ್ನು ವಿವರಿಸುವ ಪರಿ ವಿಜ್ಞಾನಕ್ಕೊಂದು ಅನನ್ಯ ಮಾದರಿಯ ಅನುಭವಕ್ಕೆ ಲಿಂಕ್
https://www.youtube.com/watch?v=P1ww1IXRfTA ನೋಡಬಹುದು.
ರಿಚರ್ಡ್ ಫೈನ್‌ಮನ್ನರಿಗೆ 1965ರಲ್ಲಿ ಅವರ ಕ್ವಾಂಟಂ ಇಲೆಕ್ಟ್ರೊಡೈನಮಿಕ್ಸ್ ಕುರಿತ ಅನ್ವೇಷಣೆಗೆ ನೊಬೆಲ್ ಪುರಸ್ಕಾರ ಲಭಿಸಿತು. ಕ್ವಾಂಟಂ ಇಲೆಕ್ಟ್ರೊಡೈನಮಿಕ್ಸ್ ವಸ್ತು ಮತ್ತು ಬೆಳಕಿನ ನಡುವಿನ ವರ್ತನೆಯ ಕ್ವಾಂಟಂ ವಿವರ. ಫೋಟಾನುಗಳ ಮೂಲಕ ಯಾವುದೇ ಇಲೆಕ್ಟ್ರಾನಿಕ್ ಚಾರ್ಜ್ ವುಳ್ಳ ವಸ್ತುಗಳು ಬೆಳಕಿನ ನಡುವೆ ನಡೆಸುವ ಮುಖಾಮುಖಿಯಾದ ಆತ್ಯಂತಿಕ ವಿವರಗಳು.
ಫೈನ್‌ಮನ್ ಅವರು ತಮ್ಮ ಆತ್ಮ ಚರಿತ್ರೆಯ ಮಾದರಿಯ ಕೆಲವು ಪ್ರಕಟಣೆಗಳನ್ನು ಮಾಡಿದ್ದಾರೆ. Surely you are Joking Mr Feynman” , “Don’t you have time to think” ಮತ್ತು What Do You Care What Other People Think” ಇದರಲ್ಲಿ “ಶ್ಯೂರ್‌ಲೀ ಯು ಆರ್ ಜೋಕಿಂಗ್, ಮಿ.ಫೈನ್‌ಮನ್” ಬಹುಶಃ ಹೈಸ್ಕೂಲ್ ಶಾಲಾ ಮಕ್ಕಳಿಗೆ ಪರಿಚಯಿಸಲೇಬೇಕಾದ ಕೃತಿ. ಫೈನ್‌ಮನ್ ವಿಜ್ಞಾನದ ಜತೆ ಆಟವಾಡಿದ ಮಾದರಿಯನ್ನು ಖುಷಿಯಿಂದ ಓದಿ ವಿಜ್ಞಾನದಲ್ಲಿ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಅವರ ವಿಜ್ಞಾನದ ಒಡನಾಟದ ಪರಿಚಯವನ್ನು ಅಷ್ಟು ಆಪ್ತವಾಗಿ ಕಂಡದ್ದನ್ನೂ ಪರಿಚಯಿಸಿಕೊಳ್ಬಹುದು. ರಿಚರ್ಡ್ ಫೈನ್‌ಮನ್ ಸುತ್ತಲಿನ ಪ್ರಪಂಚದ ಬಗ್ಗೆ ಎಷ್ಟೊಂದು ಬೆರಗನ್ನು ಮತ್ತು ಹುಡುಕಾಟದಲ್ಲಿ ಆಸಕ್ತಿಯನ್ನು ಹೊಂದಿದ್ದರು ಎಂಬುದಕ್ಕೆ ಇಲ್ಲೊಂದು ಉದಾಹರಣೆಯಿದೆ. ರಿಚರ್ಡ್ ಫೈನ್‌ಮನ್ ಒಮ್ಮೆ ವಿಜ್ಞಾನ ಸಮ್ಮೇಳಕ್ಕೆ ಜಪಾನಿಗೆ ಆಹ್ವಾನಿತರಾಗಿ ಹೋಗಿದ್ದರು. ಅಲ್ಲಿ ಅತಿಥೇಯರು ಇವರಿಗೆ ಜಪಾನಿನ ಪರಿಚಯಕ್ಕಾಗಿ ಅವರಿಚ್ಚೆ ಪಟ್ಟ ಪ್ರದೇಶಕ್ಕೆ ಕರೆದೊಯ್ಯಲು ಇಷ್ಟಪಟ್ಟಿದ್ದರು. ಅದಕ್ಕಾಗಿ ಅವರನ್ನು ಯಾವ ಪ್ರದೇಶಕ್ಕೆ ಹೋಗಲು ಇಚ್ಚೆ ಪಡುತ್ತೀರಿ ಎಂದು ಕೇಳುತ್ತಾ ಅದರ ತಯಾರಿ ಮತು ನಿರ್ಧಾರಕ್ಕೆಂದು ಅವರ ಮುಂದೆ ಜಪಾನಿನ ನಕ್ಷೆಯನ್ನು ಹರಹಿ ತೋರಿಸಿದರು. ಫೈನ್‌ಮನ್ ತಮ್ಮ ಜತೆಗೆ ಅವರ ಹೆಂಡತಿಯನ್ನೂ ಕರೆದೊಯ್ದಿದ್ದರು. ಜೊತೆಯಲ್ಲೇ ಇದ್ದ ಅವರ ಹೆಂಡತಿಯು ನಕ್ಷೆಯಲ್ಲಿ ಒಂದೆಡೆ ಬೆರಳಿಟ್ಟು, ಇಲ್ಲಿಗೆ ಆಗಬಹುದೇ ಎಂಬಂತೆ ತೋರಿಸುತ್ತಾರೆ. ಅದು ಯಾವುದೋ ಪ್ರದೇಶವಾಗಿದ್ದು ಫೈನ್‌ಮನ್ನರಿಗಾಗಲಿ ಅವರ ಹೆಂಡತಿಗಾಗಲಿ ಅದರ ವಿಶೇಷವೂ ತಿಳಿದಿರುವುದಿಲ್ಲ, ತಿಳಿಯುವುದಕ್ಕೇ ಅಲ್ಲೇನೂ ವಿಶೇಷವೂ ಇರುವುದಿಲ್ಲ. ಅದಕ್ಕೆ ತಕ್ಷಣ ಅತಿಥೇಯರು “ಅಯ್ಯೋ, ಅಲ್ಲಿ ಏನೂ ಇಲ್ಲ! ಅದೊಂದು ಪುಟ್ಟ ಪಟ್ಟಣ ಇಸೆಕಿತ್ಸೂ!” ಎನ್ನುತ್ತಾರೆ. ಫೈನ್‌ಮನ್ನರಿಗೆ ಹೊಸ ಪ್ರದೇಶಕ್ಕೆ ಹೋದಾಗ ಅಪರಿಚಿತ ಜಾಗಕ್ಕೆ ಭೇಟಿಯಿತ್ತು ಅರಿಯದ ಸಂಸ್ಕೃತಿಯ ಅನುಭವಕ್ಕೆ ಹಾತೊರೆವ ಮನಸ್ಸು. ಹಿಂದೆಯೂ ಹೆಂಡತಿಯೊಂದಿಗೆ ಅಂತಹದ್ದೇ ಕ್ಷಣಗಳ ಅನುಭವಿಸಿದವರು. ಅದಕ್ಕೇ ಹೌದು ಇಸೆಕಿತ್ಸೂಗೇ ಹೋಗಬೇಕು ಎನ್ನುತ್ತಾರೆ. ಆಗ ಆಶ್ಚರ್ಯಕ್ಕೊಳಗಾಗುವುದು ಅಲ್ಲಿನವರ ಸರದಿ. ನಿಜವಾದ ಬೆರಗನ್ನು ಹೊಸ ಪ್ರದೇಶದಲ್ಲಿ ಅನುಭವಿಸಲು ಅದರ ಪೂರ್ವಾಪರಗಳನ್ನು ತಿಳಿದೇ ಅನುಭವಿಸಬೇಕಿಲ್ಲ, ನಿವಾದ ಕುತೂಹಲಕ್ಕೆ ಅಪರಿಚಿತವಾದ ಎಂತಹದ್ದೇ ಆದರೂ ಸಾಧ್ಯ ಎಂಬುದೂ ಹೌದು.
ಅಲ್ಲಿ ಹೆಚ್ಚೆಂದರೆ ಜಪಾನಿ ಮಾದರಿಯ ಪುಟ್ಟದೊಂದು ಹೋಟೆಲಿರುತ್ತದೆ. ಅಲ್ಲಿರುವುದು ಕಷ್ಟವಾದೀತು ಎಂದೆಲ್ಲಾ ವಿವರಣೆಗಳಿಂದ ಅವರನ್ನು ತಡೆದು ಅತಿಥೇಯರು ಬೇರೆಡೆಗೆ ಗಮನ ಸಳೆಯಲು ಪ್ರಯತ್ನಿಸುತ್ತಾರೆ. ಆದರೂ ಕೊನೆಗೂ ಇಸೆಕಿತ್ಸೂಗೆ ತಲುಪಿ ಅದೇ ಪುಟ್ಟ ಹೋಟೆಲಿಗೆ ಬರುತ್ತಾರೆ. ಹೋಟೆಲಿನ ವರಾಂಡದಲ್ಲಿ ನಿಂತು ದಿಗಂತದಾಚೆ ನೋಡುತ್ತಾ, ದೂರದ ನೋಟಗಳತ್ತ ದೃಷ್ಟಿ ಹಾಯಿಸಿ ಅವರೆಂದ ಮಾತು “ನಿಜ! ಇಲ್ಲಿ ಏನೂ ಇಲ್ಲ, ಆದರೆ ಇರುವುದೆಲ್ಲವೂ ಸುಂದರವಾಗಿದೆ.” ಅದರ ಜತೆಗೆ ಅಲ್ಲಿನ ಟಾಯ್ಲೆಟ್ ಒಳಹೊಕ್ಕು ಕಂಡದ್ದು ಕಲಾತ್ಮಕವಾದ ಸ್ನಾನದ ಟಬ್. ನಮ್ಮಲ್ಲಿರುವಂತೆ ವೈಭವದ ಸಂಕೇತವಾಗಿರದೆ. ಆ ಕ್ಷಣದ ಅನುಭವಕ್ಕೆ ಎಂಥಹವರನ್ನೂ ಮಕ್ಕಳ ಮನಸ್ಸಿನ ಲೋಕಕ್ಕೆ ಕೊಂಡೊಯ್ಯವ ಸ್ನಾನದ ಟಬ್ ಅದು. ಮರದಿಂದ ಮಾಡಲಾದ ಅದರ ಮೇಲೆ, ಪುಟ್ಟ ಪುಟ್ಟ ಪಕ್ಷಿಗಳ, ವೈವಿಧ್ಯವಾದ ಬೆರಗಿನ ಚಿತ್ತಾರಗಳ –ಕಡೆಗೆ ಒಂದು ಮಿಕ್ಕಿ ಮೌಸ್ ಕೂಡ ಕೆತ್ತನೆಯಾಗಿರುತ್ತದೆ. ಇಂತಹ ವಿವರಗಳನ್ನು ಫೈನ್‌ಮನ್ ದಾಖಲಿಸಿದ್ದಾರೆ. ಅಷ್ಟರ ಮಟ್ಟಿಗೆ ಬೆರಗಿನಿಂದ ಅನುಭವಿಸುವ ಕಲೆಯನ್ನು ಅವರ ಬರಹಗಳು ತಿಳಿಸುತ್ತವೆ.
ಆಗ ಅಲ್ಲಿದ್ದ ಅವರ ನೆನಪುಗಳಿಂದ ಹುಡುಕಾಟದ ಪರಿಯ ದರ್ಶನ ಸಿಗುತ್ತದೆ. ಅವರು ಉಳಿದುಕೊಂಡಿದ್ದ ಹೋಟೆಲಿಂದ ಸ್ವಲ್ವದೂರದಲ್ಲಿ ಒಂದೆರಡು ಮೈಲಿಗಳಾಚೆ ಪುಟ್ಟ ಗುಡಿ ಕಾಣುತ್ತಿರುತ್ತದೆ. ಒಂದು ಮುಂಜಾನೆ ಹೆಂಡತಿಯೊಂದಿಗೆ ಅಲ್ಲಿಗೆ ವಾಯು ವಿಹಾರದಿಂದ ವಾಪಾಸ್ಸಾಗುತ್ತಿರುತ್ತಾರೆ. ಅವರನ್ನು ಕಾರೊಂದು ಹಿಂಬಾಲಿಸಿ ಹಾಯ್ದು ಹೋಗುತ್ತದೆ. ಅಪರಿಚಿತ ಚಾಲಕ ಇವರನ್ನು ಕಂಡು ನಿಲ್ಲಸಿ ನಗೆ ಬೀರಿ ಅವರನ್ನು ಹತ್ತಿಕೊಂಡು ಹೋಟೆಲಿಗೆ ಡ್ರಾಪ್ ಕೊಡುತ್ತಾನೆ. ಕಾರಿನಿಂದ ಇಳಿಯುವಾಗ ತಮ್ಮ ಜತೆಯಲ್ಲೇ ಒಯ್ದಿದ್ದ ಕ್ಯಾಮೆರದ ಜತೆಗಿನ ಒಂದು ಫೋಟೊ ಫಿಲಂಅನ್ನು ಮರೆತು ಹೋಗುತ್ತಾರೆ. ಹಾಗೇ ಕಾರಿಂದ ಇಳಿಯುತ್ತಾರೆ. ಮರಳಿ ಹೋಟೆಲಿಗೆ ಬಂದಾಗಲೇ ಅದರ ನೆನಪು. ಹೋಟೆಲಿನವನಿಗೆ ಅದೂ ಯಾವುದೋ ಅಪರಿಚಿತ ಕಾರಿನವನ ಕುರಿತು ಜಪಾನಿ ಭಾಷೆ ಬರದೇ ವಿವರಿಸುವುದು ಹೇಗೇ? ಮೊದಲೇ ಹುಡುಕಾಟದ ಮನಸ್ಸು ಬೇರೆ! ತಮ್ಮಲ್ಲಿದ್ದ ಜಪಾನಿ ನಿಘಂಟಿನ ಸಹಾಯದಿಂದ Film ಮತ್ತು Lost ಪದಗಳಿಗೆ ಜಪಾನಿ ಪದಗಳ ಹುಡುಕಿ ಎರಡೇ ಪದಗಳಿಂದ ವಿವರಿಸುತ್ತಾರೆ. ಮರುದಿನ ಹೋಟೆಲಿನವನು ಕಾರನ್ನು ಪತ್ತೆ ಹಚ್ಚಿ ಫಿಲಂ ತಲುಪಿಸುತ್ತಾನೆ. ಅವರ ಹುಡುಕಾಟದ ಯಶಸ್ಸಿನ ಹಾದಿಯ ಒಂದು ಉದಾಹರಣೆ ಇದು.
ಹೀಗೆ ಬದುಕನ್ನು ಬೆರಗು ಮತ್ತು ಹುಡುಕಾಟಗಳಿಂದ ಸಂದರವಾಗಿಸಲು ವಿಜ್ಞಾನ ಹಾದಿಯನ್ನು ಅನುಸರಿಸುವವರಿಗೆ ಫೈನ್‌ಮನ್ನರ ಅನುಭವಗಳು ಸದಾ ದಾರಿದೀಪ. ರಿಚರ್ಡ್ ಫೈನ್‌ಮನ್‌ರ ಓದನ್ನು ಈ ಪುಟ್ಟ ಟಿಪ್ಪಣಿಯಲ್ಲಿ ಹೇಳಲಾಗದು. ಅವರ ಶ್ಯುರ್‌ಲೀ ಯು ಆರ್ ಜೋಕಿಂಗ್‌ನಿಂದ ಎಂತಹವರೂ ಪ್ರೇರಣೆ ಪಡೆಯಲು ಸಾಧ್ಯವಿದೆ. ನಮ್ಮ ಎಲ್ಲಾ ವಿಜ್ಞಾನದ ಕಲಿಕೆಯ ಮಕ್ಕಳಂತೂ ಓದಲೇ ಬೇಕಾದ ಪುಸ್ತಕವಿದು. ಹಾಗಾಗಿ ಫೈನ್‌ಮನ್ ವಿಜ್ಞಾನ ಸಂವಹನದ ಮಾಂತ್ರಿಕ. ಆತನಿಗೆ ಆತನೇ ಸಮ. ಜಗತ್ತಿಗೆ ರಿಚರ್ಡ್ ಫೈನ್‌ಮನ್ ಪರಿಚವಾಗಬೇಕಾದ್ದೇ ಆತನ ಪಾಠಗಳಿಂದ.
ಕಡೆಯದಾಗಿ ಅವರ ವಿಶಿಷ್ಟ ವ್ಯಕ್ತಿತ್ವಕ್ಕೆ ಒಂದು ವಿಷಯವನ್ನು ಹೇಳಿ ಮುಗಿಸುತ್ತೇನೆ. ರಿಚರ್ಡ್ ಫೈನ್ ಮನ್ ಅವರು ತಮ್ಮ ಮೊದಲ ಹೆಂಡತಿ ಆರ್ಲಿನ್ (Arline Greenbaum) ಜೊತೆಗೆ ವಿಶೇಷ ಪ್ರೀತ್ಯಾದರಗಳನ್ನು ಹೊಂದಿದ್ದವರು. ಆಕೆಯ ಮರಣವಾದ ಆರು ತಿಂಗಳ ನಂತರ ಆಕೆಗೆ ಒಂದು ಪತ್ರವನ್ನು ಬರೆದು, ಕಡೆಯಲ್ಲಿ ನಿನ್ನ ವಿಳಾಸ ನನಗೆ ಗೊತ್ತಿಲ್ಲ, ಇದನ್ನು ಪೋಸ್ಟ್ ಮಾಡದಿರುವುದಕ್ಕೆ ಕ್ಷಮಿಸು (PS: Please excuse my not mailing this — but I don’t know your new address.) ಎಂದು ಬರೆದು ಅದನ್ನು ಕವರ್ ಒಂದರಲ್ಲಿಟ್ಟು ಅಂಟು ಹಚ್ಚಿ ಹಾಗೆ ಇಡುತ್ತಾರೆ. ಫೈನ್ ಮನ್ ಅವರ ಮರಣಾನಂತರ ಅದನ್ನು ತೆರೆಯಲಾಗುತ್ತದೆ. ಅದರ ವಿವರಗಳೀಗ ಲಭ್ಯವಿವೆ. ಅದೊಂದು ವಿಶಿಷ್ಟ ಪ್ರೇಮ ಪತ್ರವಾಗಿ ದಾಖಲಾಗಿದೆ.
ಇಷ್ಟೇ ಅಲ್ಲ. ಚಾಲೆಂಜರ್ ದುರಂತದ ಹಿನ್ನೆಲೆಯಲ್ಲಿ ಅವರ ನಿಲುವುಗಳು, ಅಣುಬಾಂಬು ತಯಾರಿಯಲ್ಲಿ ಕಂಪ್ಯುಟೇಶನ್ ವಿವರಗಳು, ಇಂದಿನ ನ್ಯಾನೊ ತಾಂತ್ರಿಕತೆಗೆ ಅವರಿತ್ತ ಕೊಡುಗೆಗಳು ಮುಂತಾಗಿ ವೈಜ್ಞಾನಿಕ ಸಂಗತಿಗಳು ಅಸಂಖ್ಯವಾದವು. ಹಾಗೆಂದು ವಿಜ್ಞಾನ ಜಗತ್ತಿನಲ್ಲಿ ಮಾಂತ್ರಿಕರೇ ಸರಿ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
ರಿಚರ್ಡ್ ಪೈನ್ ಮನ್ ರವರ ಬಗ್ಗೆ ಕನ್ನಡದಲ್ಲಿ ಬರೆದ ವಿವರಗಳು ಬಹಳ ಚೆನ್ನಾಗಿ ಬಂದಿದೆ. ಇವರ ಬಗ್ಗೆ ಕನ್ನಡದಲ್ಲಿ ಬರೆದ ಪುಸ್ತಕ ಯಾವುದಾದರೂ ಇದ್ದರೆ ತಿಳಿಸಿ.
ಅವರನ್ನು ಸರಿಯಾಗಿ ಅರ್ಥ ಮಾಡಿಕೊಂಡು ಬರೆದ ಪುಸ್ತಕ ಇಲ್ಲ. ಇದನ್ನು ಒಂದು ಕೆಟ್ಟ ಪುಸ್ತಕದ ನೆನಪಿನಿಂದ ಹೇಳಬೇಕಾಯ್ತು. CPUS ಅವರ ಬಗ್ಗೆ ನಿಧಾನವಾಗಿ ಪ್ರಕಟಿಸುವ ಯೋಚನೆ ಇದೆ.
ನಮಸ್ಕಾರ
ಚನ್ನೇಶರ ಲೇಖನ ಫೈನಮನ್ ರ ಜೀವನಕ್ಕೆ ಹಿಡಿದ ಕೈಗನ್ನಡಿ.
ವಿಜ್ಞಾನಕ್ಕೆ ತಕ್ಕ ವಿಜ್ಞಾನಿ.ವಿಜ್ಞಾನಿಗೆ ತಕ್ಕ ಚೊಕ್ಕ ಲೇಖನ.ಲೇಖನಿಯಿಂದ ಕಂಡರಿಸಿದ ಶಬ್ದಶಿಲ್ಪಕ್ಕೆ ಓದುಗ ಸ್ತಬ್ದ ಚಿತ್ರ.