You are currently viewing ರುಚಿಗೆ ಪರಿಮಳವನ್ನು ಬೆರೆಸಿದ ಏಲಕ್ಕಿ – Cardamom Elettaria cardamomum

ರುಚಿಗೆ ಪರಿಮಳವನ್ನು ಬೆರೆಸಿದ ಏಲಕ್ಕಿ – Cardamom Elettaria cardamomum

ಏಲಕ್ಕಿ, ಯಾಲಕ್ಕಿ ಅಥವಾ ಇಲಾಚಿ ಎಂದೆಲ್ಲಾ ಕರೆಯಿಸಿಕೊಳ್ಳುವ ಅತ್ಯಂತ ಜನಪ್ರಿಯ ಸಂಬಾರು ಪದಾರ್ಥ. ಕೇಸರಿ ಮತ್ತು ವೆನಿಲಾದ ನಂತರ ಅತೀ ಹೆಚ್ಚು ಬೆಲೆಯುಳ್ಳದ್ದು. ಏಲಕ್ಕಿಯಲ್ಲಿ ಇಡಿಯಾದ ಕಾಯಿ ಅಥವಾ ಬೀಜವು ಪರಿಮಳದ ಮೂಲದ ಸಾಂಬಾರು ಪದಾರ್ಥವಾಗಿ ಜಗತ್ತಿನಾಧ್ಯಂತ ಬಳಕೆಯಲ್ಲಿದೆ. “ನಿಜ”ವಾದ ಹಾಗೂ “ಹುಸಿ”ಯಾದ ಏಲಕ್ಕಿ ಎಂಬ ಎರಡು ಬಗೆಯ ಏಲಕ್ಕಿಗಳು ಬಳಕೆಯಲ್ಲಿವೆ. “ನಿಜ”ವಾದ ಏಲಕ್ಕಿ ಅಪ್ಪಟ ದಕ್ಷಿಣ ಭಾರತದ್ದು ಅಥವಾ ಶ್ರೀಲಂಕಾದ್ದು! ಭಾರತ ಉಪಖಂಡದ ಪಶ್ಚಿಮಘಟ್ಟಗಳ ನೆಲೆಯದು. ಈ ಏಲಕ್ಕಿಯೇ ಸುಪೀರಿಯರ್‌ ಏಲಕ್ಕಿ, ಹೆಚ್ಚು ಬೆಲೆಯುಳ್ಳದ್ದು. ಇದನ್ನು ಕ್ರಿ.ಪೂ 4ನೆಯ ಶತಮಾನದಿಂದಲೂ ಆಯುರ್ವೇದದಲ್ಲಿ ಬಳಸುತ್ತಿರುವ ಬಗ್ಗೆ ದಾಖಲೆಗಳು ಇವೆ.

       ನಮಗೆಲ್ಲಾ ದಕ್ಷಿಣ ಭಾರತದ ಹಸಿರು ಛಾಯೆಯ ಏಲಕ್ಕಿ ತುಂಬಾ ಪರಿಚಿತ. ಇದುವೇ ನಿಜ”ವಾದ (True Cardamom) ಏಲಕ್ಕಿ. “ಹುಸಿ”ಯಾದ (False Cardamom) ಏಲಕ್ಕಿಯು ಕಪ್ಪು ಬಣ್ಣದ ಏಲಕ್ಕಿ! ಇದರಲ್ಲೂ ಎರಡು ಬಗೆಯಿದ್ದು, ಕಪ್ಪು ಏಲಕ್ಕಿ ಮತ್ತು ಹುಸಿ ಏಲಕ್ಕಿ ಅಥವಾ ಇಥಿಯೋಪಿಯನ್‌ ಏಲಕ್ಕಿ ಎಂದು ಕರೆಯಲಾಗುತ್ತದೆ. ಆದರೆ ಇವೆರಡೂ ನಿಜವಾದ ಏಲಕ್ಕಿಗೆ ಹತ್ತಿರವಾಗಬಲ್ಲ ಪರಿಮಳ ಸೂಸುತ್ತವೆಯೇ ಹೊರತು, ನಿಜವಾದ ಏಲಕ್ಕಿಯಷ್ಟು ಪರಿಮಳಯುಕ್ತವಲ್ಲ. ಅಲ್ಲದೆ ಮೂರೂ ಭಿನ್ನ ಭಿನ್ನವಾದ ಸಂಕುಲದವು! ಆದರೆ ಜಿಂಜಿಬರೆಸಿಯೇ (Zingiberaceae) ಎಂಬ ಒಂದೇ ಕುಟುಂಬದವು. ನಿಜ”ವಾದ ಏಲಕ್ಕಿಯ ಸಸ್ಯವೈಜ್ಞಾನಿಕ ಹೆಸರು ಎಲಿಟೆರಿಯಾ ಕಾರ್ಡಮೊಮಂ (Elettaria cardamomum), ಕಪ್ಪು ಅಥವಾ ಬ್ಲಾಕ್‌ (Black cardamom) ಏಲಕ್ಕಿಯು ನೇಪಾಳದ ಏಲಕ್ಕಿ ಎಂದೂ ಕರೆಯಲಾಗುತ್ತದೆ, ಇದರ ಸಸ್ಯ ವೈಜ್ಞಾನಿಕ ಹೆಸರು ಅಮೊಮಂ ಸಬುಲಾಟಂ (Amomum subulatum). “ಹುಸಿ”ಯಾದ (False Cardamom) ಏಲಕ್ಕಿಯೆಂದೇ ಪರಿಚಿತವಾದ ಇಥಿಯೋಪಿಯದ ಏಲಕ್ಕಿ (Ethiopian cardamom)ಯ ಸಸ್ಯವೈಜ್ಞಾನಿಕ ಹೆಸರು ಅಫ್ರಮೊಮಂ ಕರೊರಿಮಾ (Aframomum corrorima). ಈ ಅಮೊಮಂ (Amomum) ಮತ್ತು ಅಫ್ರಮೊಮಂ (Aframomum) ಸಂಕುಲಗಳೆರಡರ ವಿವಿಧ ಪ್ರಭೇದಗಳು ಹುಸಿ ಏಲಕ್ಕಿ ಎಂದು ಕರೆಯಿಸಿಕೊಂಡರೂ ಈ ಮೊದಲು ಹೇಳಿದ ನೇಪಾಳದ ಹಾಗೂ ಇಥಿಯೊಪಿಯಾದ ಏಲಕ್ಕಿಗಳು ಹೆಚ್ಚು ಜನಪ್ರಿಯ. ಈ ಮೂರೂ ಸಂಕುಲವನ್ನು ಸಸ್ಯವಿಜ್ಞಾನದ ಪಿತಾಮಹರಾದ ಥಿಯೊಪ್ರಾಸ್ಟಸ್‌ (Theophrastus) ಅವರೇ ವೈಜ್ಞಾನಿಕವಾಗಿ ವಿವರಿಸಿದ್ದಾರೆ.

       ಮುಂದೆ “ನಿಜ”ವಾದ ಏಲಕ್ಕಿಯಾದ ಎಲಿಟೆರಿಯಾ ಕಾರ್ಡಮೊಮಂ (Elettaria cardamomum) ಮಾತ್ರವೇ ನೋಡೋಣ. ಈ ಏಲಕ್ಕಿಯೇ ಹೆಚ್ಚು ಉತ್ಪಾದನೆಯಾಗುವುದು ಹಾಗೂ ಹೆಚ್ಚು ಬೆಲೆಯುಳ್ಳದ್ದು ಕೂಡ. ಇದುವೇ ಮೂಲ ಭಾರತದಿಂದ ಅರಬ್ಬರ ಮೂಲಕ ಆಫ್ರಿಕಾಕ್ಕೂ, ಮಧ್ಯಪ್ರಾಚ್ಯಕ್ಕೂ ಕ್ರಿ.ಶ 1150ರಲ್ಲೇ ಪರಿಚಯವಾಗಿತ್ತು. ಈ ವಿಚಾರವನ್ನು ಉತ್ತರ ಆಫ್ರಿಕಾದ ವಿಖ್ಯಾತ ಭೂಗೋಳ ತಜ್ಞ ಹಾಗೂ ನಕಾಶೆಯ ವಿನ್ಯಾಸಕ ಅಲ್‌ ಇದ್ರಿಸಿಯು ದಾಖಲಿಸಿದ್ದಾನೆ. ನಂತರದಲ್ಲಿ ಪ್ರಪಂಚವನ್ನು ಪರ್ಯಟನೆ ಮಾಡಿದ ನಾವಿಕ ಮೆಗಲನ್‌ ಅವರ ಸೋದರಳಿಯ ಬರ್ಬೊಸಾ ಕೂಡ 1514ರಲ್ಲಿ ಮಲಬಾರಿನಿಂದ ವರದಿ ಮಾಡಿದ್ದನು. ಆ ಸಮಯದಿಂದಲೇ ಅರಬ್ಬರ ಕಾಫಿಯಲ್ಲಿ ಭಾರತದ ಏಲಕ್ಕಿಯು ಪರಿಮಳವನ್ನು ಬೆರೆಸಿತ್ತು. ಅರಬ್ಬರಲ್ಲಿ ಏಲಕ್ಕಿ ಪರಿಮಳದ ಕಾಫಿಯು ಅವರ ಅತಿಥಿಗಳಿಗೆ ನೀಡುವ ಗೌರವದ ಸಂಕೇತವಾಗಿತ್ತು. ಅಲ್ಲಿಂದಲೇ ಯೂರೋಪನ್ನು ಹೊಕ್ಕ ಏಲಕ್ಕಿಯು ಸ್ಕ್ಯಾಂಡಿನೇವಿಯಾಕ್ಕೂ ತಲುಪಿ ಅವರಲ್ಲಿ ಮಾಂಸದ ಪರಿಮಳವನ್ನು ಹೆಚ್ಚಿಸಿತ್ತು. ಆದರೆ ನಿಜವಾದ ಏಲಕ್ಕಿಯ ಬೆಲೆಯು ಹೆಚ್ಚಾಗಿದ್ದಾಗ ಹಾಗೂ ದೊರಕುವಿಕೆಯಲ್ಲಿ ಅಭಾವವಾದಾಗ ಇಥಿಯೋಪಿಯನ್‌ ಏಲಕ್ಕಿಯು ಬಳಕೆಯಾದ ಬಗ್ಗೆ ನಿದರ್ಶನಗಳಿವೆ.

       ಭಾರತೀಯ ಸಂಬಾರು ಪದಾರ್ಥವೆಂದೇ ಜಗತ್ತಿನಲ್ಲಿ ಜನಪ್ರಿಯವಾಗಿಯೂ ಕೇವಲ ಒಂದು ಶತಮಾನದ ಹಿಂದೆಯಷ್ಟೇ ಅಟ್ಲಾಂಟಿಕ್‌ ದಾಟಿ ಮಧ್ಯ ಅಮೆರಿಕಾದ ಗ್ವಾಟೆಮಾಲ (Guatemala) ದೇಶವನ್ನು ತಲುಪಿದ ಏಲಕ್ಕಿಯು ಇಂದು ಆ ದೇಶವನ್ನು ಏಲಕ್ಕಿಯ ಉತ್ಪಾದನೆಯಲ್ಲಿ ಭಾರತವನ್ನು ಹಿಂದಕ್ಕೆ ತಳ್ಳಿ ಮೊದಲ ಸ್ಥಾನವನ್ನು ಪಡೆದಿದೆ. ಜರ್ಮನ್‌ ಕಾಫಿ ತೋಟಗಾರರಾಗಿದ್ದ ಆಸ್ಕರ್‌ ಮಜಸ್‌ ಕ್ಲೊಫೆರ್ (Oscar Majus Klöffer)‌ ಎಂಬಾತ ಗ್ವಾಟೆಮಾಲಕ್ಕೆ ಭಾರತದಿಂದ ಏಲಕ್ಕಿಯನ್ನು ಪರಿಚಯಿಸಿದ. ಕೇವಲ ಒಂದು ಶತಮಾನದಲ್ಲಿ ಏಲಕ್ಕಿ ಬೆಳೆಯು ಅಲ್ಲಿನ ಸುಮಾರು 3,50,000 ಬೆಳೆಗಾರರನ್ನು ತಲುಪಿ, ಇಂದು ಜಗತ್ತಿನ ಅತಿ ಹೆಚ್ಚು ಏಲಕ್ಕಿ ಬೆಳೆಯುವ ದೇಶವಾಗಿದೆ.

       ಏಲಕ್ಕಿಯಂತೆ ಭಕ್ಷ್ಯ, ಸಿಹಿ ಮತ್ತು ಪಾನೀಯ  ( Dish, Dessert and Drink) ಹೀಗೆ ಎಲ್ಲಾ ಬಗೆಯ ಆಹಾರದ ಬಗೆಗಳನ್ನು ಪರಿಮಳವಾಗಿಸಬಲ್ಲ ಸಂಬಾರು ಪದಾರ್ಥಗಳು ಅಪರೂಪ. ಶುಂಠಿಯು ಬಳಸಿದರೂ ಘಾಟು! ವೆನಿಲಾ, ಚಕ್ಕೆ ಅಥವಾ ದಾಲ್ಚಿನ್ನಿ ಕೂಡ ಸಿಹಿಯನ್ನೂ ಬೆರಸುತ್ತವೆ! ಆದರೆ ಬೇರೆ ಏನನ್ನೂ ಬಿಟ್ಟುಕೊಡದೆ ಶುದ್ಧ ಪರಿಮಳವನ್ನು ಆಹ್ಲಾದಕತೆಯೊಂದಿಗೆ ಬೆರೆಸುವ ಏಲಕ್ಕಿ ಮಾತ್ರ ವಿಶೇಷವೇ ಸರಿ. ಪುಲಾವ್‌ ಮಾಂಸಾಹಾರದ ಭಕ್ಷ್ಯಗಳಲ್ಲಾಗಲಿ, ಸಿಹಿಯಾದ ತಿನಿಸುಗಳಲ್ಲಾಗಲಿ, ಹಣ್ಣಿನ ರಸಗಳಲ್ಲಾಗಲಿ ಪರಿಮಳವನ್ನು ಬೆರೆಸಿ ತನ್ನಿರುವಿನಿಂದ ಆಹ್ಲಾದದ ಆನಂದವನ್ನು ತಲುಪಿಸುವಲ್ಲಿ ಏಲಕ್ಕಿಯು ವಿಶಿಷ್ಟವೇ ಸರಿ!

       ಏಲಕ್ಕಿ ಗಿಡವು ಬಹುವಾರ್ಷಿಕ ಸಸ್ಯ. ಸುಮಾರು 2-4 ಮೀಟರ್‌ಗಳಷ್ಟು ಎತ್ತರಕ್ಕೆ ಬೆಳೆಯುತ್ತದೆ. ಇದರ ಹೂವುಗಳು ಹೆಚ್ಚಿನ ಪಾಲು ಬಿಳಿಯ ಬಣ್ಣದವು.  ಬಿಡಿ ಬಿಡಿಯಾಗಿ  ಉದ್ದನೆಯ ಗೊಂಚಲಾಗಿ ಸುಮಾರು 40 – 60 ಸೆಂ.ಮೀ ನಷ್ಟು ಇರುವುದುಂಟು. ಏಲಕ್ಕಿ ಕಾಯಿಯು ಒಳಗೆ ಮೂರು ಕವಾಟದಂತೆ ಇದ್ದು ಒಳಗೆ 15-20 ಬೀಜಗಳನ್ನು ಹೊಂದಿರುತ್ತದೆ. ಬೀಜಗಳು ಕಪ್ಪು ಇಲ್ಲವೆ ಕಂದು ಬಣ್ಣದವು.

       ಇಡಿ ಕಾಯಿ ಅಥವಾ ಬೀಜವನ್ನು ಪರಿಮಳಕ್ಕಾಗಿ ಬಳುಸುವುದನ್ನೂ ಹಾಗೆಯೇ ಅದರಲ್ಲಿ ಹಲವಾರು ಔಷಧೀಯ ಅಥವಾ ಆರೋಗ್ಯಕರ ಉಪಯೋಗಗಳನ್ನು ಮಾನವ ಕುಲವು ಬಹು ಹಿಂದಿನಿಂದಲೂ ಕಂಡುಕೊಂಡಿದೆ. ಏಲಕ್ಕಿಯ ಆಹಾರದ ಗುಣಗಳು ಖನಿಜಾಂಶಗಳನ್ನೂ, ಪ್ರೊಟೀನು ಅಲ್ಲದೆ “ಬಿ” ಮತ್ತು “ಸಿ” ವಿಟಮಿನ್ನುಗಳನ್ನೂ ಹೊಂದಿದೆ. ಕಬ್ಬಿಣ, ಮ್ಯಾಗ್ನೆಸಿಯಂ, ಸೆಲೆನಿಯಂ, ಸತು, ಮ್ಯಾಮಗನೀಸ್‌, ಕ್ಯಾಲ್ಸಿಯಂ ಪೊಟ್ಯಾಸಿಯಂ ಮುಂತಾದ ಖನಿಜಗಳು ಏಲಕ್ಕಿಯಲ್ಲಿವೆ.   

       ಆರೋಗ್ಯದ ಹಿತದಲ್ಲಿ ಏಲಕ್ಕಿಯನ್ನು ಬಳಸುವುದನ್ನು ಪಾರಂಪರಿಕ ವೈದ್ಯ ಪದ್ದತಿಯು ಗುರುತಿಸಿದೆ. ಇದಕ್ಕೆ ಉರಿಯೂತವನ್ನು ಪ್ರತಿರೋಧಿಸುವ ಗುಣವಿದ್ದು ಹಲವು ಅಧ್ಯಯನಗಳು ಅದನ್ನು ಸಾಬೀತು ಪಡಿಸಿವೆ. ಜೊತೆಗೆ ಇದಕ್ಕೆ ಆಂಟಿಆಕ್ಸಿಡೆಂಟ್‌ ಗುಣವಿರುವುದನ್ನೂ ಅಧ್ಯಯನಗಳು ತಿಳಿಸಿವೆ. ರಕ್ತ ಪರಿಚಲನೆಯ ಮೇಲೂ ಪರಿಣಾಮಕಾರಿಯಾಗಿದ್ದು, ರಕ್ತದ ಒತ್ತಡವನ್ನು ನಿಯಂತ್ರಿಸುವ ಗುಣವನ್ನೂ ಹೊಂದಿದೆ. ಇದರಲ್ಲಿ ಸಾಕಷ್ಟು ಕೊಬ್ಬಿನಾಂಶವಿದ್ದರೂ ಸಹಾ ರಕ್ತದಲ್ಲಿ ಕೊಲೆಸ್ಟರಾಲ್‌ ನಿಯಂತ್ರಿಸಲು ಸಹಾಯ ಮಾಡುವುದೆಂದು ಅರಿಯಲಾಗಿದೆ. ಆಯುರ್ವೇದ, ಯುನಾನಿ ಹಾಗೂ ಚೀನಿ ವೈದ್ಯ ಪದ್ದತಿಗಳಲ್ಲಿ ಪಚನ ಕ್ರಿಯೆಯನ್ನು ಹೆಚ್ಚಿಸಲು ಏಲಕ್ಕಿಯನ್ನು ಬಳಸಲಾಗುತ್ತದೆ.

       ಎಲ್ಲದಕ್ಕಿಂತಾ ಹೆಚ್ಚಾಗಿ ಆಹ್ಲಾದಕರವಾದ ಮಾನಸಿಕ ಹಿತವನ್ನು ಕೊಡುವ ಏಲಕ್ಕಿಯ ಗುಣವನ್ನು ಕಂಡುಕೊಂಡೇ ಚಹಾ ಮುಂತಾದ ಪೇಯಗಳಲ್ಲಿ ಇದನ್ನು ಬಳಸಲಾಗುತ್ತದೆ. ಏಲಕ್ಕಿ ಚಹಾ ತುಂಬಾ ಜನಪ್ರಿಯವಾದ ಪಾನೀಯ. ಮಧ್ಯ ಪ್ರಾಚ್ಯ ದೇಶಗಳಲ್ಲಿ ಕಾಫಿಯಲ್ಲೂ ಪರಿಮಳಕ್ಕೆಂದು ಬಳಸುತ್ತಾರೆ. ಕಾಫಿ ಮತ್ತು ಚಹಾಗಳಲ್ಲಿ ಬಳಸುವುದನ್ನು ವಿವಿಧ ಸಂಸ್ಕೃತಿಗಳು ವಿವಿಧ ಬಗೆಯಲ್ಲಿ ವಿಕಸಿಸಿಕೊಂಡಿವೆ. ಥೈಲ್ಯಾಂಡ್‌, ಜಪಾನ್‌, ಚೀನಾ, ಅಸ್ಸಾಂ, ತಮಿಳುನಾಡು ಹೀಗೆ ಅನೇಕ ಬಗೆಯ ಚಹಾಗಳು ಏಲಕ್ಕಿಯನ್ನು ಒಳಗೊಂಡು ಪರಿಮಳವನ್ನು ಹೆಚ್ಚಿಸುತ್ತಾ ನೆರವಾಗಿವೆ.

       ಪಶ್ಚಿಮ ಘಟ್ಟಗಳ ತವರನ್ನು ಹೊಂದಿದ್ದೂ, ಹಾವೇರಿಯಲ್ಲಿ ಮಾರಾಟ ಹಾಗೂ ಅದರ ಹಾರಗಳಿಂದ ಪ್ರಸಿದ್ಧಿಯನ್ನು ಪಡೆದಿದೆ. ಹಾವೇರಿ ಪಟ್ಟಣವು ಏಲಕ್ಕಿ ಹಾರಗಳಿಗೆ ರಾಜ್ಯದಲ್ಲೇ ವಿಶೇಷತೆಯನ್ನು ಪಡೆದಿದೆ. ಏಲಕ್ಕಿ ಪೇಟೆ ಎಂಬ ರಸ್ತೆಯನ್ನೂ ಅದು ಹೊಂದಿದ್ದು, ಖ್ಯಾತರಾದ ಏಲಕ್ಕಿ ವಹಿವಾಟುದಾರರೂ ಅಲ್ಲದೆ ಏಲಕ್ಕಿ ಹಾರವನ್ನು ಕಟ್ಟುವ ಕಲಾವಿದರೂ ರಾಜ್ಯದ ಹಾವೇರಿಯಲ್ಲಿದ್ದಾರೆ.

       ಪರಿಮಳವನ್ನು, ಅಲಂಕಾರವನ್ನೂ, ಆರೋಗ್ಯವನ್ನೂ, ಆಹ್ಲಾದಕತೆಯನ್ನೂ ತನ್ನೊಳಗಿಟ್ಟು ಭಾರತೀಯ ಅದರಲ್ಲೂ ದಕ್ಷಿಣ ಭಾರತದ ಮೆರುಗನ್ನು ಜಗತ್ತಿನಾದ್ಯಂತ ಹಬ್ಬಿಸಿ “ಸಾಂಬಾರು ಪದಾರ್ಥಗಳ ರಾಣಿ” ಎಂದೇ ಜನಪ್ರಿಯತೆಯನ್ನು ಪಡೆದಿದೆ.

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್.‌

Leave a Reply