ಲೈನಸ್ ಪಾಲಿಂಗ್, ಅವರು ವಿಜ್ಞಾನಿಯಾಗಿ ವಿಶ್ವದ ವೈಜ್ಞಾನಿಕ ಸಮುದಾಯಕ್ಕೆ ತಿಳಿದಿರುವಂತೆಯೇ ಅಮೆರಿಕಾದ ಸಾರ್ವಜನಿಕರಿಗೂ ಪರಿಚಿತರಾಗಿದ್ದರು. ನೊಬೆಲ್ ಪುರಸ್ಕಾರವನ್ನು ವಿಜ್ಞಾನ (ರಸಾಯನವಿಜ್ಞಾನ-1954) ಹಾಗೂ ಶಾಂತಿ (1962) ಎರಡರಲ್ಲೂ ಯಾರೊಡನೆಯೂ ಹಂಚಿಕೊಳ್ಳದೆ ತಾವೊಬ್ಬರೇ ಪಡೆದ ಏಕಮಾತ್ರ ವ್ಯಕ್ತಿ ಪಾಲಿಂಗ್. ರಸಾಯನವಿಜ್ಞಾನದ 20ನೆಯ ಶತಮಾನದ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರೆಂದು ಸಾಮಾನ್ಯ ಮನ್ನಣೆಗೆ ಒಳಗಾದ ಪಾಲಿಂಗ್ ಅವರನ್ನು ಸಾಮಾನ್ಯವಾಗಿ 18 ನೇ ಶತಮಾನದ ಆಧುನಿಕ ರಸಾಯನವಿಜ್ಞಾನದ ಸಂಸ್ಥಾಪಕರಾದ ಲಾವೊಸಿಯರ್ ಅವರ ನಂತರದ ಅತ್ಯಂತ ಪ್ರಭಾವಶಾಲಿ ರಸಾಯನವಿಜ್ಞಾನಿಯೆಂದೂ ಕರೆಯಲಾಗುತ್ತದೆ. ಕ್ರಿಯಾತ್ಮಕ ವ್ಯಕ್ತಿತ್ವ ಮತ್ತು ವ್ಯಾಪಕವಾದ ವೈವಿಧ್ಯಮಯ ಕ್ಷೇತ್ರಗಳಲ್ಲಿ ಅವರ ಹಲವಾರು ಸಾಧನೆಗಳ ಕಾರಣದಿಂದಾಗಿ ಲೈನಸ್ ಪಾಲಿಂಗ್ ಅವರನ್ನು ಸಮರ್ಪಕವಾಗಿ ವ್ಯಾಖ್ಯಾನಿಸುವುದು ಕಷ್ಟ. ವಿಜ್ಞಾನ ಹಾಗೂ ಸಾಮಾಜಿಕ ಸಂಗತಿಗಳೆರಡರಲ್ಲೂ ಗಮನಾರ್ಹವಾದ ಪ್ರತಿಭೆ ಹಾಗೂ ಪ್ರಭಾವವನ್ನು ಹೊಂದಿದ್ದವರು ಲೈನಸ್ ಪಾಲಿಂಗ್.
ಲೈನಸ್ ಪಾಲಿಂಗ್ ಅವರನ್ನು 20ನೆಯ ಶತಮಾನದ ಅತ್ಯಂತ ಪ್ರಮುಖ 20 ವಿಜ್ಞಾನಿಗಳಲ್ಲಿ ಒಬ್ಬರೆಂದು ವಿಶ್ವವಿಖ್ಯಾತ ವಿಜ್ಞಾನ ಪತ್ರಿಕೆ “ನ್ಯೂ ಸೈಂಟಿಸ್ಟ್” ಕರೆದಿತ್ತು. ವಿಜ್ಞಾನ ಮತ್ತು ಸಮಾಜ ಎರಡನ್ನೂ ಸಮೀಕರಿಸುವ ಪ್ರಯತ್ನಗಳಲ್ಲಿ ಪಾಲಿಂಗ್ ಅವರ ಸೇವೆ ತುಂಬಾ ದೊಡ್ಡದು. ರಸಾಯನ ವಿಜ್ಞಾನವನ್ನು ಆರಂಭದ ಕಲಿಕೆಯ ವಿಶ್ವವಿದ್ಯಾಲಯದ ಪಾಠಗಳಲ್ಲಿ ಹಾಗೂ ರಸಾಯನವಿಜ್ಞಾನವನ್ನು ಏಕೆ ಮತ್ತು ಹೇಗೆ ಕಲಿಯಬೇಕು ಎನ್ನುವುದರಲ್ಲಿ ಅವರದ್ದು ಹೆಸರಾಂತ ವ್ಯಕ್ತಿತ್ವ. ಹಾಗೆಯೇ ಎಂಥಹಾ ಕ್ಲಿಷ್ಟಕರವಾದ ವೈದ್ಯಕೀಯ ಮತ್ತು ವೈಜ್ಞಾನಿಕ ವಿಚಾರವನ್ನು ಸಹಾ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸುವಲ್ಲಿಯೂ ಕೂಡ ಲೈನಸ್ ಪಾಲಿಂಗ್ ತುಂಬಾ ನಿಪುಣರಾಗಿದ್ದರು. ಅವರು ವಿಜ್ಞಾನ, ಶಾಂತಿ ಮತ್ತು ಆರೋಗ್ಯದ ಕುರಿತು ಶಿಕ್ಷಣಾರ್ಥಿಗಳಿಗೂ ಮತ್ತು ಸಾರ್ವಜನಿಕರಿಗೂ ಹಲವಾರು ಲೇಖನಗಳು ಮತ್ತು ಪುಸ್ತಕಗಳನ್ನು ಬರೆದ ವಿಶಿಷ್ಟ ವಿಜ್ಞಾನಿ. ಲೈನಸ್ ಪಾಲಿಂಗ್ ಅವರು ವೈದ್ಯಕೀಯ ವಿಜ್ಞಾನದಲ್ಲಿ ರಸಾಯನವಿಜ್ಞಾನದ ಒಳಗೊಳ್ಳುವಿಕೆಯ ಮಹತ್ವವನ್ನು ಪೌಷ್ಟಿಕಾಂಶದ ಶಿಫಾರಸುಗಳನ್ನು ವಿವರಿಸುವ ಸಂಶೋಧನೆ ಮತ್ತು ಪ್ರಚಾರಗಳ ಮೂಲಕ ಕೈಗೊಂಡವರು. ಅವರ ಜನಪ್ರಿಯವಾದ ಸಾರ್ವಜನಿಕ ಪುಸ್ತಕಗಳೆಂದರೆ “ವಿಟಮಿನ್ ಸಿ ಅಂಡ್ ಕಾಮನ್ ಕೋಲ್ಡ್” “ಕ್ಯಾನ್ಸರ್ ಅಂಡ್ ವಿಟಮಿನ್ ಸಿ” (ಇವಾನ್ ಕ್ಯಾಮರೂನ್, ಎಂ.ಡಿ. ಜೊತೆ), ಮತ್ತು “ಹೌ ಟು ಲಿವ್ ಲಾಂಗರ್ ಮತ್ತು ಫೀಲ್ ಬೆಟರ್”, ಹೀಗೆ! ವೈದ್ಯಕೀಯ ಸಂಶೋಧನೆಯಲ್ಲಿ ವಿಟಮಿನ್ ಬಳಕೆಯ ಕಾರಣಕರ್ತರು ಡಾ. ಪಾಲಿಂಗ್. ವಿಟಮಿನ್ಗಳನ್ನು ಚಿಕಿತ್ಸೆಯಲ್ಲಿ ಬಳಸುವುದನ್ನು ಇದೀಗ ಸಾಮಾನ್ಯ ಸಂಗತಿ ಎಂಬಂತೆ ವೈದ್ಯಕೀಯ ಶಿಫಾರಸ್ಸುಗಳಲ್ಲಿ ನೋಡುತ್ತಿದ್ದೇವೆ. ವಿಜ್ಞಾನವನ್ನು ಮನವತೆಯ ಹಿತದಲ್ಲಿ ನೋಡಲು ವೈದ್ಯಕೀಯ ಶೋಧಗಳಲ್ಲೂ ತೊಡಗಿಸಿಕೊಂಡದ್ದೇ ಅಲ್ಲದೆ ಅದರ ಬಳಕೆಗೂ ಕಾರಣರಾದರು. ಇಷ್ಟೇ ಅಲ್ಲದೆ ಇಡೀ ಜಗತ್ತಿನ ರಸಾಯನಿಕ ವಸ್ತುಗಳ ಸಂರಚನೆಯನ್ನು ವಿವರಿಸುವ ಬಂಧಗಳ ವಿವರಣೆಯ ನಿಯಮಗಳನ್ನು ಕೊಟ್ಟವರು ಪಾಲಿಂಗ್. ಕೆಮಿಕಲ್ ಬಾಂಡಿಂಗ್ನ ಪಾಲಿಂಗ್ ರೂಲ್ಸ್ (ನಿಯಮಗಳು) ಎಂದೇ ಅವುಗಳು ವಿಜ್ಞಾನ ಜಗತ್ತಿನಲ್ಲಿ ಜನಪ್ರಿಯ. ಸುಮಾರು ಐದು ನಿಯಮಗಳು ಜಗತ್ತಿನ ಬಹುಪಾಲು ವಸ್ತುಗಳ ಸಂರಚನೆಯನ್ನು ಅವುಗಳ ಅಣು-ಬಂಧಗಳ ಮೂಲಕ ವಿವರಿಸುವ ಸೈದ್ಧಾಂತಿಕ ನಿಯಮಗಳವು. “ದ ನೇಚರ್ ಆಫ್ ದ ಕೆಮಿಕಲ್ ಬಾಂಡ್ (The Nature of the Chemical Bond)” ಎಂಬ ಅತ್ಯಂತ ಜನಪ್ರಿಯವಾದ ಅವರ ಪುಸ್ತಕದ ಪ್ರಕಟಣೆಗೆ ಕಾರಣವಾದ ಅವರ ಇದೇ ಸಂಶೋಧನೆಯು ಮುಂದೆ 1954ರ ರಸಾಯನ ವಿಜ್ಞಾನದ ನೊಬೆಲ್ ಪುರಸ್ಕಾರಕ್ಕೂ ಒಳಗಾಯಿತು.
ಸಾಮಾನ್ಯವಾಗಿ ರಸಾಯನವಿಜ್ಞಾನವನ್ನು ಮೂಲ ಆಶಯವಾಗಿಟ್ಟುಕೊಂಡು ಓದುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ. ಇಂಜನಿಯರಿಂಗ್ ಆಸಕ್ತರು ಭೌತವಿಜ್ಞಾನವನ್ನು ಆಶ್ರಯಿಸಿ ಹಿಂದೆ ಹೋದರೆ, ವೈದ್ಯಕೀಯ, ಕೃಷಿ ಮುಂತಾದವರು ಜೀವಿವಿಜ್ಞಾನದ ಹಿಂದೆ ಹೋಗುತ್ತಾರೆ. ಗಣಿತವನ್ನು ತಮ್ಮದಾಗಿಸಿಕೊಂಡು ಅದನ್ನೇ ಬಯಸುವವರಂತೂ ತುಂಬಾ ಕಡಿಮೆ. ರಸಾಯನವಿಜ್ಞಾನ ಯಾವುದೇ ವಿಜ್ಞಾನದ ಅನ್ವಯದ ಕಲಿಕೆ, ಉತ್ಪಾದನೆ, ಬಳಕೆ ಇತ್ಯಾದಿಗಳಿಗೆ ಕಡ್ಡಾಯವಾಗಿ ಬೇಕಿದ್ದರೂ, ಅದನ್ನೇ ಮೂಲ ಆಶಯದಲ್ಲಿ ಇಟ್ಟುಕೊಂಡು ಬೆಳೆದವರು ಅಪರೂಪ. ರಸಾಯನವಿಜ್ಞಾನ ಹೇಗೆ ಎಲ್ಲರಿಗೂ ಬೇಕೇ ಬೇಕು ಎಂಬುದನ್ನು ಅರ್ಥಪೂರ್ಣವಾಗಿ ಹಾಗೂ ಭಾವನಾತ್ಮಕವಾಗಿಯೂ ಅರಿವಾಗಲು ಲೈನಸ್ ಪಾಲಿಂಗ್ ಅವರ ಜೀವನ ಮತ್ತು ಕಾರ್ಯವೈಖರಿಯನ್ನು ತುಸುವಾದರೂ ತಿಳಿಯಬೇಕು. ಸ್ವಂತ ಆಸಕ್ತಿ ಮತ್ತು ಪರಿಶ್ರಮದಿಂದ ರಸಾಯನಿಕ ಉತ್ಪನ್ನಗಳ ತಯಾರಿಯನ್ನು ಕಲಿತಿದ್ದ ಅವರ ತಂದೆ ಹರ್ಮನ್ ಹೆನ್ರಿ ವಿಲಿಯಂ ಪಾಲಿಂಗ್ ಅವರು ಓರ್ವ ಔಷಧಗಳ ತಯಾರಿಸಿ ಮಾರುವರಾಗಿದ್ದರು. ಅಕ್ಷರಶಃ ತಂದೆಯ ಬಳುವಳಿಯೇ ಎಂಬಂತೆ ಮುಂದೆ 20ನೆಯ ಶತಮಾನದ ರಸಾಯನವಿಜ್ಞಾನದ ಪ್ರಭಾವವನ್ನು ಅದು ಅನ್ವಯಿಸಬಹುದಾದ ಎಲ್ಲಾ ಕ್ಷೇತ್ರಗಳಿಗೂ ವಿಸ್ತರಿಸುವಂತಾಗಲು ಸಂಶೋಧನೆಗಳಿಂದ ಪ್ರಭಾವಿಸಿದ ವಿಜ್ಞಾನಿ ಡಾ. ಲೈನಸ್ ಕಾರ್ಲ್ ಪಾಲಿಂಗ್(Linus Carl Pauling).
ಲೈನಸ್ ಪಾಲಿಂಗ್ ಅವರು ಫೆಬ್ರವರಿ 28, 1901 ರಂದು ಅಮೆರಿಕದ ಒರೆಗಾನ್ ರಾಜ್ಯದ ಪೋರ್ಟ್ಲ್ಯಾಂಡ್ನಲ್ಲಿ ಜನಿಸಿದರು. ಅವರು ಒರೆಗಾನ್ ಸ್ಟೇಟ್ ಅಗ್ರಿಕಲ್ಚರಲ್ ಕಾಲೇಜಿನಿಂದ (ಈಗ ಅದು ಒರೆಗಾನ್ ಸ್ಟೇಟ್ ಯೂನಿವರ್ಸಿಟಿಯಾಗಿದೆ) 1922 ರಲ್ಲಿ ರಾಸಾಯನಿಕ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದರು. (ಆಗ ಇನ್ನೂ ವಿದ್ಯಾರ್ಥಿಯಾಗಿದ್ದಾಗಲೇ ರಸಾಯನವಿಜ್ಞಾನವನ್ನು ಪಾಠ ಮಾಡಲು ಅವರ ಕಾಲೇಜು ಅವರಿಗೆ ಅವಕಾಶವಿತ್ತಿತ್ತು) ನಂತರದ ಅವರು 1925 ರಲ್ಲಿ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಕ್ಯಾಲ್ಟೆಕ್) ನಿಂದ ಡಾಕ್ಟರೇಟ್ ಪಡೆದರು. ಮುಂದಿನ ಎರಡು ವರ್ಷಗಳ ಕಾಲ ಪಾಲಿಂಗ್ ಯುರೋಪ್ನ ಮ್ಯೂನಿಚ್, ಜ್ಯೂರಿಚ್, ಲಂಡನ್ ಮತ್ತು ಕೋಪನ್ಹೇಗನ್ಗಳಲ್ಲಿ ಪ್ರಮುಖ ವಿಜ್ಞಾನಿಗಳೊಂದಿಗೆ ಪರಮಾಣು ಮತ್ತು ಕ್ವಾಂಟಮ್ ಭೌತವಿಜ್ಞಾನವನ್ನು ಅಧ್ಯಯನ ಮಾಡಿದರು. 1927 ರಲ್ಲಿ ಅವರು ರಸಾಯನ ವಿಜ್ಞಾನದ ಸಹಾಯಕ ಪ್ರಾಧ್ಯಾಪಕರಾಗಿ ಕ್ಯಾಲ್ಟೆಕ್ಗೆ ಮರಳಿದ, ಅವರು 1931 ರಲ್ಲಿ ಪೂರ್ಣ ಪ್ರಾಧ್ಯಾಪಕರಾದರು ಮತ್ತು 1964 ರವರೆಗೆ ಅಲ್ಲೇ ಇದ್ದರು. ಆಗ ಅವರು ರಸಾಯನವಿಜ್ಞಾನವನ್ನು ಕಾಲೇಜಿನ ಆರಂಭದಲ್ಲಿ ಕಲಿಸುವ ಮೊದಲ ತರಗತಿಗಳನ್ನು ನಡೆಸುವುದರಲ್ಲಿ ಅತ್ಯಂತ ಪ್ರಸಿದ್ಧರಾಗಿದ್ದರು. ಅದರ ಹಿನ್ನೆಲೆಯಲ್ಲಿಯೇ “ಕಾಲೇಜ್ ಕೆಮಿಸ್ಟ್ರಿ-College Chemistry” “ಜನರಲ್ ಕೆಮಿಸ್ಟ್ರಿ -General Chemistry” ಅಂತಹಾ ಪುಸ್ತಕಗಳನ್ನು ಪ್ರಕಟಿಸಿದರು.
ಅವರ “ಕಾಲೇಜ್ ಕೆಮಿಸ್ಟ್ರಿ”ಯ ಆರಂಭದ ಮೊದಲ ಅಧ್ಯಾಯವು ರಸಯಾನ ವಿಜ್ಞಾನವನ್ನು ಏಕೆ ಮತ್ತು ಹೇಗೆ ಕಲಿಯಬೇಕು ಎನ್ನುವುದನ್ನು ಅದ್ಭುತವಾಗಿ ವಿವರಿಸುತ್ತದೆ. ತಮಗಿಂತ ನೂರಾರು ವರ್ಷಗಳ ಹಿಂದಿನ “It is impossible to imagine the height to which may be carried in a thousand years, the power of man over matter” ಎನ್ನುವ ಬೆಂಜಮಿನ್ ಫ್ರಾಂಕ್ಲಿನ್ ಅವರ ಮಾತನ್ನು ಉದಾಹರಿಸಿ ಮುಂದುವರೆದು ಹೀಗೆ ಹೇಳುತ್ತಾರೆ. “It is through chemistry and her sister sciences that the power of man, of mind, over matter is obtained” ಹೀಗೆ ವಸ್ತುಗಳ ಸಾಧ್ಯತೆಯನ್ನು ರಸಾಯನವಿಜ್ಞಾನವು ಸಾಧಿಸುವ ಸುಳಿವನ್ನು ಸುಲಭವಾದ ಮಾತಿನಿಂದ ಎತ್ತಿಕೊಳ್ಳುತ್ತಾರೆ.
ವಸ್ತುಗಳ ರಚನೆಯ ಬಗ್ಗೆ ಪಾಲಿಂಗ್ ಅವರ ಅಧ್ಯಯನಗಳು ಮುಂದೆ ರಾಸಾಯನಿಕ ಬಂಧಗಳ ಸ್ವರೂಪ ಮತ್ತು ಅಣುಗಳ ರಚನೆಯನ್ನು ಪರಿಗಣಿಸಲು ಕಾರಣವಾದವು. ಅವರ ಈ ಸಂಶೋಧನೆಗಳ ಫಲಿತಾಂಶಗಳನ್ನು 1939 ರಲ್ಲಿ “ದಿ ನೇಚರ್ ಆಫ್ ದಿ ಕೆಮಿಕಲ್ ಬಾಂಡ್ ಮತ್ತು ಸ್ಟ್ರಕ್ಚರ್ ಆಫ್ ಮಾಲಿಕ್ಯೂಲ್ಸ್ ಅಂಡ್ ಕ್ರಿಸ್ಟಲ್ಸ್” ಎಂದು ಪ್ರಕಟಿಸಿದರು. ನಂತರ ಇದೇ ಆಸಕ್ತಿಯನ್ನು ಅಮೈನೋ ಆಮ್ಲಗಳ ಹೆಚ್ಚು ಸಂಕೀರ್ಣವಾದ ಅಣುಗಳು ಮತ್ತು ಪ್ರೊಟೀನ್ಗಳನ್ನು ರೂಪಿಸುವ ಜೈವಿಕ ವಸ್ತುಗಳತ್ತ ತಿರುಗಿಸಿದರು. ಪ್ರೊಟೀನ್ ಅಣುಗಳನ್ನು ಸಂಶೋಧಿಸುವಾಗ, ಆನುವಂಶಿಕ ಕಾಯಿಲೆಯಾದ Sickle-cell Anaemia (ಸಿಕಲ್ ಸೆಲ್ ಅನಿಮಿಯಾ-ಕುಡಗೋಲುನಂತಹಾ ರಕ್ತಕಣ ರಕ್ತಹೀನತೆ) ಹೊಂದಿರುವ ಜನರ ಹಿಮೋಗ್ಲೋಬಿನ್ನಲ್ಲಿ ರಚನಾತ್ಮಕ ದೋಷವನ್ನು ಅವರು ಗಮನಿಸಿದರು. ದೋಷವು ಕೆಲವು ಕೆಂಪು ರಕ್ತ ಕಣಗಳು ಕುಡಗೋಲು ಆಕಾರಕ್ಕೆ ಇರುವ ಕಾರಣ ಎಂದೇ ಸಾಬೀತಾಗಿದೆ. ಹೀಗೆ ವಸ್ತುಗಳ ರಾಚನಿಕ ಹಿನ್ನೆಲೆಯನ್ನು ಆರೋಗ್ಯದ ಹಿತದಲ್ಲೂ ಗಮನಿಸುವ ಕಾರಣಗಳನ್ನು ಮುನ್ನೆಲೆಗೆ ತಂದವರು ಪಾಲಿಂಗ್.
ಜಾಗತಿಕ ಮಹಾ ಯುದ್ಧಗಳ ನಂತರ 1950ರ ದಶಕದಲ್ಲಿ, ಪರಮಾಣು ಶಸ್ತ್ರಾಸ್ತ್ರಗಳ ಬಗೆಗಿನ ಆಸಕ್ತಿಯು ಹೆಚ್ಚುವಂತಾಗಿ ಅದರಿಂದ ಉಂಟಾಗುವ ವಿಕಿರಣದ ಅಪಾಯಗಳ ಬಗ್ಗೆ ಪಾಲಿಂಗ್ ಅಪಾರ ಕಾಳಜಿ ವಹಿಸಿದರು. ಧೈರ್ಯವಾಗಿ ತಮ್ಮ ಅಭಿಪ್ರಾಯಗಳನ್ನು 1958 ರಲ್ಲಿ “ನೋ ಮೋರ್ ವಾರ್!” ಎಂಬ ಪುಸ್ತಕದಲ್ಲಿ ಪ್ರಕಟಿಸಿದರು, ವಿಶ್ವಸಂಸ್ಥೆಗೆ ಪರಮಾಣು ಪರೀಕ್ಷೆಯನ್ನು ನಿಲ್ಲಿಸುವಂತೆ ಒತ್ತಾಯಿಸಿ ವಿಶ್ವದ ಎಲ್ಲಾ ಭಾಗಗಳಿಂದ 11,021 ವಿಜ್ಞಾನಿಗಳು ಸಹಿ ಮಾಡಿದ ಮನವಿಯನ್ನು ಮಂಡಿಸಿದರು. ಕಡೆಗೂ 1963ರಲ್ಲಿ, ಪರಮಾಣು ಪರೀಕ್ಷೆ-ನಿಷೇಧ ಒಪ್ಪಂದವನ್ನು ತೀರ್ಮಾನಿಸಲು ಕಾರಣರಾದರು. ಆಗ ಅವರು ಕ್ಯಾಲ್ಟೆಕ್ ನಿಂದ ಹೊರಬಂದು ಕ್ಯಾಲಿಫೋರ್ನಿಯಾದ ಸಾಂಟಾ ಬಾರ್ಬರಾದಲ್ಲಿನ ಡೆಮಾಕ್ರಟಿಕ್ ಸಂಸ್ಥೆಗಳ ಅಧ್ಯಯನ ಕೇಂದ್ರದಲ್ಲಿ ಯುದ್ಧ ಮತ್ತು ಶಾಂತಿಯ ಸಮಸ್ಯೆಗಳ ಕುರಿತು ಕೆಲಸ ಮಾಡಲು ಸೇರಿಕೊಂಡರು. ಅಲ್ಲಿರುವಾಗಲೇ ಅವರು ಸಾಂಟಾ ಬಾರ್ಬರಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಹ ಕಲಿಸಿದರು. ಮುಂದೆ 1969ರಲ್ಲಿ ಅವರು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯದ ರಸಾಯನವಿಜ್ಞಾನ ವಿಭಾಗಕ್ಕೆ ಸೇರಿದರು, ಅಲ್ಲಿ ಅವರು ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ “ಸಿ” ಬಳಸಿ ಸಾಮಾನ್ಯ ಶೀತ ಮತ್ತು ಇತರ ಕಾಯಿಲೆಗಳನ್ನು ತಡೆಗಟ್ಟಬಹುದು ಅಥವಾ ಗುಣಪಡಿಸಬಹುದು ಎಂಬ ಸಿದ್ಧಾಂತವನ್ನು ಅನುಮೋದಿಸುವ ಮೂಲಕ ಜಗತ್ತಿನ ಗಮನ ಸೆಳೆದರು. ಅವರು 1974 ರಲ್ಲಿ ನಿವೃತ್ತರಾಗುವವರೆಗೂ ಸ್ಟ್ಯಾನ್ಫೋರ್ಡ್ನಲ್ಲಿಯೇ ಇದ್ದರು. ಅವರು ಆಗಸ್ಟ್ 19, 1994 ರಂದು ಕ್ಯಾಲಿಫೋರ್ನಿಯಾದ ಬಿಗ್ ಸುರ್ನಲ್ಲಿ ನಿಧನರಾದರು.
ಲೈನಸ್ ಪಾಲಿಂಗ್ ಅಸಾಂಪ್ರದಾಯಿಕ ವೈಜ್ಞಾನಿಕ ವಿಚಾರಗಳನ್ನು ವ್ಯಕ್ತಪಡಿಸುವ ಮೂಲಕ ರಾಜಕೀಯವಾಗಿಯೂ ಪ್ರತಿಭಟಿಸಲು ಹಿಂದೆ ಮುಂದೆ ನೋಡುತ್ತಿರಲಿಲ್ಲ. ಅವರ ಬದ್ಧತೆ ಮತ್ತು ಮುಕ್ತ ಮನೋಭಾವದ ಒಂದು ಉದಾಹರಣೆ ಎಂದರೆ, 1962 ರಲ್ಲಿ, ಜಾನ್ ಕೆನಡಿ ಆಡಳಿತದ ಅವಧಿಯಲ್ಲಿ, ನೊಬೆಲ್ ಪ್ರಶಸ್ತಿ ವಿಜೇತರನ್ನು ಗೌರವಿಸುವ ವೈಟ್ ಹೌಸ್ನಲ್ಲಿ ವಿಶೇಷ ಪಾರ್ಟಿಗೆ ಪಾಲಿಂಗ್ ಅವರನ್ನು ಆಹ್ವಾನಿಸಲಾಗಿತ್ತು. ಡಾ. ಪೌಲಿಂಗ್ ಅದಕ್ಕೆ ಹೋಗದೆ ಪರಮಾಣು ಪರೀಕ್ಷೆಯನ್ನು ಪ್ರತಿಭಟಿಸುವ ಫಲಕವನ್ನು ಹಿಡಿದುಕೊಂಡು ಗೇಟ್ಗಳ ಹೊರಗೆ ಇಡೀ ದಿನವನ್ನು ಕಳೆದರು. ಅಚ್ಚರಿ ಎಂಬಂತೆ ಅದೇ ವರ್ಷ ಅವರಿಗೆ ನೊಬೆಲ್ ಶಾಂತಿ ಪಾರಿತೋಷಕವೂ ಬಂದಿತ್ತು.
ವೈಜ್ಞಾನಿಕ ವೃತ್ತಿಜೀವನದ ಏಳು ದಶಕಗಳಲ್ಲಿ ಪೌಲಿಂಗ್ ಅವರ ಸಂಶೋಧನಾ ಆಸಕ್ತಿಗಳು ವಿಸ್ಮಯಕಾರಿಯಾಗಿಯೂ, ವ್ಯಾಪಕವಾಗಿಯೂ ಇದ್ದವು. ಅವರು ಭೌತಿಕ, ರಚನಾತ್ಮಕ, ವಿಶ್ಲೇಷಣಾತ್ಮಕ, ಅಜೈವಿಕ ಮತ್ತು ಸಾವಯವ ರಸಾಯನವಿಜ್ಞಾನ, ಜೀವರಸಾಯನವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಆವಿಷ್ಕಾರಗಳನ್ನು ಮಾಡಿದರು. ಅವರು ಸೈದ್ಧಾಂತಿಕ ಭೌತವಿಜ್ಞಾನವನ್ನು, ಮುಖ್ಯವಾಗಿ ಕ್ವಾಂಟಮ್ ಸಿದ್ಧಾಂತ ಮತ್ತು ಕ್ವಾಂಟಮ್ ಮೆಕ್ಯಾನಿಕ್ಸ್ ಅನ್ನು ಪರಮಾಣು ಮತ್ತು ಆಣ್ವಿಕ ರಚನೆ ಮತ್ತು ರಾಸಾಯನಿಕ ಬಂಧದ ವಿವರಣೆಗಳನ್ನು ಸಂಶೋಧನೆಗಳಲ್ಲಿ ಬಳಸಿದರು. ಅವರು ಪರಮಾಣು ರಚನೆಗಳನ್ನು, ಲೋಹಗಳು ಮತ್ತು ಖನಿಜಗಳ ಬಂಧದ ಅಧ್ಯಯನದ ಮೂಲಕ ಲೋಹವಿಜ್ಞಾನ ಮತ್ತು ಖನಿಜವಿಜ್ಞಾನದಲ್ಲಿ ತೊಡಗಿಸಿ, ನೂರಾರು ಅಜೈವಿಕ ವಸ್ತುಗಳ ರಚನೆಗಳನ್ನು ಪ್ರಕಟಿಸಿದರು. ಸೈದ್ಧಾಂತಿಕ ಮತ್ತು ಅನ್ವಯಿಕ ಔಷಧ ಎರಡರಲ್ಲೂ, ಜೊತೆಗೆ ಆನುವಂಶಿಕ ಕಾಯಿಲೆಗಳು, ಹೆಮಟಾಲಜಿ, ಇಮ್ಯುನೊಲಾಜಿ, ಮಿದುಳಿನ ಕಾರ್ಯ ಮತ್ತು ಮನೋವೈದ್ಯಶಾಸ್ತ್ರ, ಆಣ್ವಿಕ ವಿಕಸನ, ಪೌಷ್ಟಿಕಾಂಶ ಚಿಕಿತ್ಸೆ, ರೋಗನಿರ್ಣಯದ ತಂತ್ರಜ್ಞಾನ, ಸಂಖ್ಯಾಶಾಸ್ತ್ರೀಯ ಸಾಂಕ್ರಾಮಿಕ ರೋಗವಿಜ್ಞಾನ ಮತ್ತು ಬಯೋಮೆಡಿಸಿನ್ಗಳಲ್ಲಿಯೂ ಅಧ್ಯಯನ ನಡೆಸಿದರು. ಅವರ ವ್ಯಾಪಕವಾದ ಅಧ್ಯಯನಶೀಲತೆಯು ವಿಜ್ಞಾನದಲ್ಲಿ ಒಂದು ಬೃಹತ್ತಾದ ಬದಲಾವಣೆಯನ್ನು ಮಾಲೆಕ್ಯೂಲಾರ್ ಆಸಕ್ತಿಗಳತ್ತ, ವಸ್ತುಗಳ ಸಂರಚನೆಯ ಅರಿವಿನ ಮೂಲಕ ವಿಜ್ಞಾನವು ಹಿಗ್ಗುವಂತೆ ಮಾಡಿದೆ.
ಒಂದು ಪುಟ್ಟ ಉದಾಹರಣೆಯ ಮೂಲಕ ಅವರು ಕೊಟ್ಟ ಸಿದ್ಧಾಂತವು ಜಾಗತಿಕವಾಗಿ ತೆರೆದಕೊಂಡದನ್ನು ಗಮನಿಸಬಹುದು. ಕೊವಿಡ್ ನಂತರದಲ್ಲಿ ಪಾಲಿಂಗ್ ಇನ್ಸ್ಟಿಟ್ಯೂಟ್ ಇರುವ ಒರೆಗಾನ್ ವಿಶ್ವವಿದ್ಯಾಲಯವು 2021ರ ಫೆಬ್ರವರಿ 27ರಂದು ವಿಟಮಿನ್ “ಸಿ” ಕುರಿತಂತೆ Vitamine C and Health: New Frontires ಎಂಬ ವೆಬಿನಾರ್ ಅನ್ನು ಆಯೋಜಿಸಿತ್ತು. ಜಗತ್ತಿನಾದ್ಯಂತ ಸಾವಿರಾರು ವಿಜ್ಞಾನಿಗಳು ಅದರಲ್ಲಿ ಭಾಗವಹಿಸಿದ್ದರು.
ಹೆಚ್ಚಿನ ಓದಿಗಾಗಿ
https://www.thefamouspeople.com/profiles/linus-pauling-4946.php
Interesting article. Congratulations to have made it in Kannada
Interesting that too in kannada