ಎಲ್ಲರಿಗೂ ಯುಗಾದಿಯ ಶುಭಾಶಯಗಳು.
ಯುಗಾದಿ ಹಬ್ಬಕ್ಕೆ ಸರಿಯಾಗಿ ಗಿಡ-ಮರಗಳೂ ಚಿಗುರು ತುಂಬಿಕೊಂಡು, ಹೂ-ಹಣ್ಣು ಬಿಟ್ಟು, ಹೊಸ ವರ್ಷವನ್ನು ಆಹ್ವಾನಿಸಲು ಅಣಿಯಾಗಿರುತ್ತವೆ. ಹಬ್ಬದಾಚರಣೆಗೆ ಬೇವು-ಬೆಲ್ಲವು ಸಂಭ್ರಮವನ್ನು ಸೇರಿಸುತ್ತದೆ. ಬೇವು-ಕಹಿಯ ರೂಪಕವಾಗಿ ಸದಾ ನಮ್ಮ ಸಂಸ್ಕೃತಿಯಲ್ಲಿ ಬೆರೆತಿದೆ. ಬೇವಿನ ಹಣ್ಣನ್ನು ತಿಂದು ನೋಡಿದ್ದೀರಾ? ಹಣ್ಣು ಎಂದ ಮೇಲೆ ಸಿಹಿ ಅಥವಾ ಸವಿಯ ಕಾರಣವಿರಬೇಕಲ್ಲವೇ? ಒಮ್ಮೆ, ಧಾರಾಳವಾಗಿ ಬೇವು ಬೆಳೆವ ಹಂಪಿಯ ವಾತಾವರಣದಲ್ಲಿ ಬಿಸಿಲಿನಲ್ಲಿ ಅಲೆದಾಡುತ್ತಿದ್ದೆವು. ಜೊತೆಯಲ್ಲಿದ್ದವರು ಬೆಂಗಳೂರಲ್ಲೇ ಹುಟ್ಟಿ ಬೆಳೆದ ಗೆಳೆಯ-ಗೆಳತಿಯರು. ಅವರೊಡನೆ ಬೇವಿನ ಹಣ್ಣನ್ನು ತಿನ್ನುವುವಾಗಿ ಬಾಜಿ ಕಟ್ಟಿದೆ. ನಾಲ್ಕು ಹಣ್ಣು ತಿಂದರೆ ಸಂಜೆಗೆ ಹಬ್ಬದೂಟದ ಭರ್ಜರಿ ಪಾರ್ಟಿಯ ತೀರ್ಮಾನವನ್ನು ಎಲ್ಲರೂ ಒಪ್ಪಿಕೊಂಡರು. ಚೆನ್ನಾಗಿ ಮಾಗಿ ಬಿದ್ದ ನಾಲ್ಕು ಹಣ್ಣುಗಳನ್ನು ಆಯ್ದು ಮೇಲಿನ ಸಿಪ್ಪೆಯನ್ನು ತೆಗೆದು ತಿರುಳು-ಬೀಜ ಸಮೇತ ಬಾಯಲ್ಲಿ ಹಾಕಿ ಸವಿದೆ. ತಿರುಳನ್ನು ಚೀಪುತ್ತಲೇ ಹೀರಿಕೊಂಡು, ಬೀಜವನ್ನು ಉಗಿದೆ. ಪಾರ್ಟಿಯ ಪ್ರಶ್ನೆ ಏನೇ ಇರಲಿ, ಹಣ್ಣಿನ ತಿರುಳು ತುಂಬಾ ಸಹಿ ಅಲ್ಲದಿದ್ದರೂ, ಕಹಿ ಮಿಶ್ರಿತ ಸಿಹಿಯನ್ನು ಖುಷಿಯಿಂದಲ್ಲದಿದ್ದರೂ, ತಿನ್ನಬಹುದಾದ ಆನಂದವನ್ನು ಎಲ್ಲರೂ ಹಂಚಿಕೊಂಡೆವು.
ಯುಗಾದಿಗೆ ಬೇವು ಹೂಬಿಟ್ಟು, ದಟ್ಟ ತಿಳಿ ಹಸಿರಿನ ಎಲೆಗಳನ್ನು ತುಂಬಿಕೊಂಡು ನಳ ನಳಿಸುತ್ತಿರುತ್ತದೆ. ಬೇಸಿಗೆಗೆ ಅದರ ತಂಗಾಳಿ ತುಂಬಾ ಆಹ್ಲಾದಕರವಾಗಿರುತ್ತದೆ. ದಟ್ಟ ಬಿಸಿಲನ್ನು ಆನಂದದಿಂದ ಅನುಭವಿಸುವ ಈ ಸಸ್ಯ, ಬಯಲು ನಾಡಿಗೆ ಹೇಳಿ ಮಾಡಿಸಿದ ಮರ. ರಾಜ್ಯದಲ್ಲಿ ಮಲೆನಾಡಿ ದಾಟಿ ಬಯಲು ಸೀಮೆಯತ್ತ ಸಂಚಾರಕ್ಕೆ ಅನುವು ಮಾಡಿಕೊಡುವ ರಸ್ತೆಗಳ ಎರಡೂ ಕಡೆ ಸಾಲು ಮರಗಳ ಸಂಭ್ರಮ ಬಿಸಿಲಿನಲ್ಲೂ ಜೋರು. ಬಾಲ್ಯದ ದಿನಗಳಲ್ಲಿ ಊರಾಚೆಯ ಬೇವಿನ ಮರದ ನೆರಳಿಗೆ ಪರೀಕ್ಷೆಯ ದಿನಗಳ ತಯಾರಿಗೆ ಹುಡುಕಿಕೊಂಡು ಹೋಗುತ್ತಿದ್ದೆವು. ಶಾಲೆಯಿಂದ ತುಸು ಆಚೆಗಿನ ರಸ್ತೆಯ ಬೇವಿನ ಮರಗಳ ತಂಗಾಳಿ ಪರೀಕ್ಷೆಯ ತಯಾರಿಯ ಬೆವರನ್ನು ಕಡಿಮೆ ಮಾಡುತ್ತಿತ್ತು. ಬೇವು ನಮ್ಮದೇ ನೆಲದ ಸಸ್ಯ. ಅಪ್ಪಟ ಭಾರತೀಯ. ಹೆಸರೂ ಅಷ್ಟೇ. ಅಜಾಡಿರಕ್ಟ ಇಂಡಿಕಾ (Azadirachta indica). ಮಿಲಿಯೇಸಿಯೆ (Meliaceae) ಕುಟುಂಬದ ಸಸ್ಯ. ಇದೇ ಕುಟುಂಬದಲ್ಲಿ ಸುಮಾರು 53 ಸಂಕುಲಗಳಿದ್ದು, ಮಹಾಗನಿ, ತುರುಕ ಬೇವು ಅಥವಾ ಹುಚ್ಚು ಬೇವು ಮುಂತಾದ 600ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಈ ಕುಟುಂಬದ ಬಹುತೇಕ ಸಸ್ಯಗಳು ನಿತ್ಯ ಹರಿದ್ವರ್ಣದ ಸಸ್ಯಗಳು. ಹಾಗಾಗಿ ಬೇವು ಸಾಲು ಮರಗಳ ಪರ್ಮನೆಂಟ್ ಸದಸ್ಯ. ದಾರಿಯ ಉದ್ದಕ್ಕೂ ನೆರಳಿನ ಆಶ್ರಯಕ್ಕೆ ಬೇವಿಗೆ ಸಾಟಿಯಾದ ಮರಗಳ ಅಪರೂಪ. ಇದೇ ಮಿಲಿಯೇಸಿಯೆ ಕುಟುಂಬದಲ್ಲಿ ಹಲವು ಮ್ಯಾಂಗ್ರೊವ್ ಸಸ್ಯಗಳೂ ಇರುವುದು ವಿಶೇಷವಾಗಿದೆ. ಅಂದಂತೆ ಈ ಮ್ಯಾಂಗ್ರೊವ್ಗಳು ಸಮುದ್ರದ ಅಳಿವೆಗಳಲ್ಲಿ ಸದಾ ನೀರೊಳಿಗಿದ್ದರೆ, ಬೇವಿನಂತಹವು ಬಿಸಿಲಲ್ಲಿ ಆಗಸಕ್ಕೆ ಚಾಚಿರುತ್ತವೆ.
ಭಾರತೀಯ ಸಂಸ್ಕೃತಿಯಲ್ಲಿ ಬೇವನ್ನು ಪರಿಚಯಿಸಬೇಕಿಲ್ಲ. ಹಾಗಾಗಿಯೇ ಬೇವನ್ನು ಪೇಟೆಂಟು ಮಾಡಿಕೊಳ್ಳಲು ಪರದಾಡಿದ ಅಮೆರಿಕಾದ ಕೃಷಿ ಇಲಾಖೆ ಹಾಗೂ ಡಬ್ಲ್ಯು. ಆರ್. ಗ್ರೇಸ್ ಅಂಡ್ ಕಂಪನಿಯ ವಿರುದ್ಧ ನಾವು ಸುಲಭದಲ್ಲಿ ಗೆಲುವು ಸಾಧಿಸಿದೆವು. ಬೇವಿನ ಕಹಿಯನ್ನು ಕೀಟನಾಶಕವಾಗಿ ಬಳಸುವ ತಿಳಿವಳಿಕೆಯನ್ನು ಅಮೆರಿಕದ ಕೃಷಿ ಇಲಾಖೆ ಹಾಗೂ ಡಬ್ಲ್ಯು. ಆರ್. ಗೇಸ್ ಅಂಡ್ ಕಂಪನಿ ಒಂದಾಗಿ ಯೂರೋಪಿನ ಪೇಟೆಂಟನ್ನು ಪಡೆದುಕೊಂಡಿದ್ದವು. ನಮ್ಮ ದೇಶದ ಪ್ರತೀ ಊರಲ್ಲೂ ಬೇವಿನ ಬಳಕೆಯ ದೊಡ್ಡ ಇತಿಹಾಸವೇ ಇರುವಾಗ, ನಾವು ಅದನ್ನು ಪೇಟೆಂಟುಗೊಳಿಸಲು ಬಿಡಬೇಕೇ? ಅಂತರರಾಷ್ಟ್ರೀಯ ಕಟಕಟೆಯಲ್ಲಿ ಭಾರತೀಯ ಬೇವು-ಬಳಕೆಯ ಕುರುಹುಗಳನ್ನೆಲ್ಲಾ ಮುಂದಿಟ್ಟು 2005ರಲ್ಲೇ ಪೇಟೆಂಟು ಪಡೆದ ಸಿಹಿ ಸುದ್ದಿಯಲ್ಲಿದ್ದ ಅಮೆರಿಕಾ ಹಾಗೂ ಕಂಪನಿಗೆ ಅದನ್ನು ಪರ್ಮನೆಂಟಾಗಿ ಕಹಿ ಮಾಡಿದ್ದೀಗ ಹಳೆಯ ಸುದ್ದಿ.
ಬೇವಿನ ಔಷಧಿಯ ಗುಣವಾಗಲಿ, ಕೀಟನಾಶಕದ ಸಂಗತಿಯಾಗಲಿ ಯಾರಿಗೆ ಗೊತ್ತಿಲ್ಲ, ಅಲ್ಲವೇ? ಅದೆಷ್ಟು ಮಂದಿಯ ದಿನವೂ ಬೆಳಗಿನ ಹಲ್ಲಿಜ್ಜುವ ಕ್ಷಣದಿಂದಲೂ ಅದರ ಬಳಕೆಯ ಹಿತವನ್ನು ಅನುಭವಿಸಿದ್ದೇವೆ. ಸಂಗ್ರಹಿಸಿಟ್ಟ ಕಾಳು-ಬೇಳೆಗಳ ಜೊತೆಗೆ ಬೇವಿನ ಎಲೆ-ಬೀಜದ ಪುಡಿ ಮಿಶ್ರಣದ ವಿಚಾರವೂ ತಿಳಿದದ್ದೇ! ಅದಿರಲಿ ದಿನವೂ ಬೇವಿನ ಎಲೆಯ ರಸವನ್ನು ಕುಡಿಯುವವರೂ ಏನೂ ಕಡಿಮೆ ಇಲ್ಲ. ಇಷ್ಟೆಲ್ಲಾ ಇದ್ದೂ ಕಂಪನಿಯು ದಾಖಲೆಯನ್ನು ಕೇಳಿದ್ದು ತಮಾಷೆಯಾಗಿಯೇ ಇತ್ತು. ಏಕೆಂದರೆ ಬಾಯಲ್ಲಿ ಬೇವಿನ ಕಡ್ಡಿ ಇಟ್ಟು ಮರ ಸುತ್ತುವ ಹಿಂದಿ ಹೀರೋಗಳ ಚಿತ್ರಗಳು 60ರ ದಶಕದ ಮೊದಲೇ ಬಂದಿದ್ದವಲ್ಲ. ಹಾಗಾಗಿ 90ರ ದಶಕದಲ್ಲಿ ಪೇಟೆಂಟುಗೊಂಡ ಬೇವಿಗೆ ಆಯುರ್ವೇದ ಮುಂತಾದ ಗ್ರಂಥಗಳ ಜೊತೆಗೆ ನಮ್ಮ ಸಂಸ್ಕೃತಿಯ ದಾಖಲೆಗಳನ್ನು ಕೊಡುವುದೇನೂ ಕಷ್ಟವಾಗಲಿಲ್ಲ. ಅಂತೂ ಬೇವು ನಮ್ಮದೇ ಆಗಿ ಉಳಿಯಿತು. ಅಷ್ಟೇ ಅಲ್ಲ ಬೇವು, ಬಾಸಮತಿ ಅಕ್ಕಿ ಮತ್ತು ಅರಿಶಿಣಗಳ ಜೈವಿಕ ಉಪಯೋಗಗಳ ತಿಳಿವಳಿಕೆಯನ್ನು ಅಂತರರಾಷ್ಟ್ರೀಯ ಜನಪ್ರಿಯ ಚರ್ಚೆಗಳಲ್ಲಿ ಬಳಸುವುದರ ಮೂಲಕ ನಮ್ಮ ಸ್ಥಳೀಯ ಜೈವಿಕ ಜ್ಞಾನ ಮೂಲಗಳ ಪೊರ್ಟಲ್ ನ ಸ್ಥಾಪನೆಗೂ ಕಾರಣವಾಗಿದೆ.
ಯುಗಾದಿಗೆ ಬೇವು ಬಂದು ಅನೇಕ ರೂಪಗಳಲ್ಲಿ ನಮ್ಮ ಹೊಟ್ಟೆಯನ್ನು ಸೇರುವ ಸಾಂಸ್ಕೃತಿಕ ಸಂಭ್ರಮವನ್ನು ಭಾರತೀಯತೆಯು ಸೃಜಿಸಿಕೊಂಡಿದೆ. ಬೇವಿನ ಹೂವಿನ ಎಸಳುಗಳನ್ನು ಬೆಲ್ಲದ ಜೊತೆ ಬೆರೆಸಿ ತಿನ್ನುವುದರಿಂದ ಮೊದಲ್ಗೊಂಡು, ವಿವಿಧ ಬಗೆಯಲ್ಲಿ ಆಹಾರವಾಗಿಸಿದ್ದೇವೆ. ದಕ್ಷಿಣ ಭಾರತದಲ್ಲಿ ಇದರ ವೈಭವ ಒಂದು ಕೈ ಮೇಲು ಎಂದೇ ಹೇಳಬೇಕು. ಆಂಧ್ರದಲ್ಲಂತೂ ಬೇವು ಸಾಂಸ್ಕೃತಿಕ ಸಂಗಾತಿ, ತಮಿಳರೂ ಏನೂ ಕಡಿಮೆಯಾಗಿಲ್ಲ. ಮಲೆಯಾಳಿಗಳಂತೂ ಮಜ್ಜನದ ವೈಭವನ್ನೇ ಕಟ್ಟಿಕೊಂಡಿದ್ದಾರೆ. ಕರ್ನಾಟಕವೂ ಬಿಟ್ಟು ಕೊಡದೆ, ಕಹಿಯನ್ನು ಸಿಹಿಯಾಗಿಸುವ ಹತ್ತಾರು ಸಂಗತಿಗಳನ್ನು ಮನೆ ಮನೆಯಲ್ಲೂ ಬೆಳೆಸಿಕೊಂಡಿದೆ.
ಹಿಂದೂ ಪಂಚಾಂಗದಂತೆ ಯುಗಾದಿ ಬಂತೆಂದರೆ ಚೈತ್ರದ ಆಗಮನ. ವರ್ಷದ ಮೊದಲ ದಿನವೇ ಹಬ್ಬ. ಎಚ್ಚರಿಕೆಯ ಕುರುಹಾಗಿ ಕಹಿಯನ್ನೂ ಮೆಲ್ಲುವ ಅನಿವಾರ್ಯತೆಯನ್ನು ರೂಢಿಸಿದೆ. ಆಂಧ್ರ-ತೆಲುಂಗಾಣ ರಾಜ್ಯಗಳಲ್ಲಿ “ಬೇವಿನ ಹೂವಿನ ಪಚಡಿ” ಯುಗಾದಿಯ ಖಾಯಂ ಅಡಿಗೆ. ಸಾಂಬಾರು-ಸೂಪು ಎರಡರ ಮಿಶ್ರಣದ ರುಚಿಯನ್ನು ಒಂದಕ್ಕೇ ಸೇರಿಸಿದ ಖಾಧ್ಯ. ಮಹಾರಾಷ್ಟ್ರದ ಹಿಂದೂಗಳಂತೂ ಬೇವಿನ ರಸ ಅಥವಾ ಚಟ್ನಿ ರೂಪದ ತಿನಿಸನ್ನು ಮಾಡಿ ಚೈತ್ರದ ಆಗಮನವನ್ನು ಸ್ವಾಗತಿಸುತ್ತಾರೆ. “ಗುಡಿ ಪಾಡುವಾ” ಎಂದೇ ಕರೆಯಲಾಗುವ ಈ ಸಂಭ್ರಮವನ್ನು ಮರಾಠಿಗರು ತುಸು ವಿಜ್ರಂಭಣೆಯಿಂದಲೇ ಆಚರಿಸುತ್ತಾರೆ. ಕರ್ನಾಟಕವೂ ಸೇರಿದಂತೆ ತಮಿಳುನಾಡಿನಲ್ಲಿ ಮಾರಿಯಮ್ಮನ ಗುಡಿಯು ಬೇವಿನಮರವಿಲ್ಲದೇ ಇರುವುದು ಅಪರೂಪ. ಬೇವಿನ ಮರಕ್ಕೇ ದೈವತ್ವದ ಸ್ಥಾನವನ್ನು ಕೊಟ್ಟು, ಹಸಿರು ಸೀರೆ ಉಡಿಸಿ, ಬಳೆ-ಕುಂಕುಮವಿಟ್ಟು ಖಾಯಮ್ಮಾಗಿ ಮರಕ್ಕೆ ಗೌರವವನ್ನು ಕೊಡುವುದನ್ನು ಸಾಕಷ್ಟು ಜನರು ನೋಡಿರುತ್ತೀರಿ. ಒರಿಸ್ಸಾದ ಪುರಿಯ ಜಗನ್ನಾಥ ದೇವಾಲಯದ ಮುಖ್ಯ ದೈವವನ್ನು ಬೇವಿನ ಮರದಿಂದಲೇ ತಯಾರಿಸಲಾಗುತ್ತದೆ. ಹಾಗಾಗಿ ಬೇವು ಭಾರತೀಯತೆಯಲ್ಲಿ ಶಾಶ್ವತ ಗೌರವದ ಸ್ಥಾನವನ್ನು ಪಡೆದಿದೆ. ಸಿಡುಬು-ದಢಾರ ಮುಂತಾದ ಕಾಯಿಲೆಗಳನ್ನು ಕೂಡ ಬೇವಿನಿಂದಲೇ ಮುಕ್ತ ಗೊಳಿಸುವ ಹಲವಾರು ಸಂಪ್ರದಾಯಗಳು ಇನ್ನೂ ಉಳಿದಿದ್ದರೂ ಆಶ್ಚರ್ಯವಿಲ್ಲ.
ಬೇವಿನ ಬೀಜವನ್ನು ಬಳಸಿ ಕಷಾಯ ತಯಾರು ಮಾಡಲಾಗುತ್ತದೆ. ಬೀಜದ ಕಹಿಯನ್ನೂ ಅದರ ರಾಸಾಯನಿಕ ವಿವರಗಳನ್ನು ನೋಡೋಣ. ಬೇವಿನಲ್ಲಿ ಮುಖ್ಯವಾಗಿರುವ ಅಜಾಡಿರಕ್ಟಿನ್ ಎಂಬ ರಾಸಾಯನಿಕದಿಂದಾಗಿ ಒಂದು ಪ್ರಬಲ ಕೀಟನಾಶಕವಾಗಿ ಬಳಕೆಯಲ್ಲಿದೆ. ಸಾಲದಕ್ಕೆ ಈ ರಾಸಾಯನಿಕವು ಮನುಕುಲಕ್ಕೆ ಯಾವುದೇ ಹಾನಿಕಾರಕವಲ್ಲದಂತಹ ವಿಶೇಷತೆಯನ್ನು ಹೊಂದಿದೆ. ಈ ರಾಸಾಯನಿಕವು ಸಸ್ತನಿಗಳಿಗೆ ವಿಷವಸ್ತುವಾಗಲು ಸಾಧ್ಯವೇ ಇಲ್ಲ. ಏಕೆಂದರೆ ಇದರ ಎಲ್ಡಿ-50 (ಲೀಥಲ್ ಡೋಸ್ 50- ಅಂದರೆ ಸಸ್ತನಿಯು ಅರೆಜೀವವಾಗಲು ಬೇಕಾದ ಪ್ರಮಾಣ) ಪ್ರತೀ ಕಿಲೊ.ಗ್ರಾಂ ದೇಹತೂಕಕ್ಕೆ 3.5 ಗ್ರಾಂಗಿಂತಲೂ ಹೆಚ್ಚು ರಾಸಾಯನಿಕ ಬೇಕಾಗುತ್ತದೆ. ಪ್ರಾಕ್ಟಿಕಲಿ ಇದು ಸಾಧ್ಯವಾಗದಂತಹಾ ಸ್ಥಿತಿ. ಅಂದರೆ ಅಷ್ಟೊಂದು ವಿಷವು ಅದರಿಂದ ಬರಲು ಸಾಧ್ಯವೇ ಇಲ್ಲ. ಹೀಗಾಗಿ ಬೇವನ್ನು ಉತ್ತಮ ಕೀಟನಾಶಕವಾಗಿ ಬಳಸುವ ಸಾಧ್ಯತೆಯನ್ನು ಹೊಂದಿದೆ. ಜೊತೆಗೆ ಸುಮಾರು 200 ಪ್ರಭೇದಗಳಿಗಿಂತಳು ಹೆಚ್ಚು ಕೀಟಗಳಿಗೆ ಇದೊಂದೆ ರಾಸಾಯನಿಕವು ವಿಷಕಾರಿಯಾಗಿರುವುದೂ ಇದನ್ನು ಮತ್ತೂ ವಿಶೇಷವಾಗಿಸಿದೆ. ಅದೂ ಅಲ್ಲದೆ ಅಜಾಡಿರಕ್ಟಿನ್ ರಾಸಾಯನಿಕವು ಕೇವಲ 100 ಗಂಟೆಗಳ ಕಾಲ ಬೆಳಕು ಮತ್ತು ನೀರಿಗೆ ತೆರೆದುಕೊಂಡಲ್ಲಿ ಸರಳವಾಗಿ ಜೈವಿಕ ವಿಧಾನದಿಂದ ವಿಭಜನೆಯಾಗುತ್ತದೆ. ಹಾಗಾಗಿ ನಮ್ಮ ನೆಲದಲ್ಲೇ ಹುಟ್ಟಿ ಬೆಳೆದು ವಿಕಾಸಗೊಂಡ ಅತ್ಯಂತ ಪರಿಸರ ಸ್ನೇಹಿ ಕೀಟನಾಶಕವಾಗಿದೆ. ಜೊತೆಯಲ್ಲಿ ಸಾಕಷ್ಟು ಕೀಟಗಳಿಗೆ ಇದು ಪ್ರತಿರೋಧವನ್ನು ಕಟ್ಟಿಕೊಳ್ಳಲು ಬಿಡುವುದಿಲ್ಲ.
ಬಿಟಿ–ಯಿಂದಾಗದನ್ನು ಬೇವು ಮಾಡುತ್ತದೆ.
ತಮಗೆಲ್ಲಾ ತಿಳಿದಿರಬಹುದು. ಬಿಟಿ-ಬಂದದ್ದೇ ಕೀಟನಾಶಕವನ್ನು ಮೈಯಿಗೇ ಸೇರಿಸಿಕೊಂಡ ಸಂಗತಿಯಾಗಿ! ಇದರಲ್ಲಿರುವ ಬ್ಯಾಸಿಲಸ್ ಥುರಿಂಜೆನಸಿಸ್ ಕೀಟಗಳಿಗೆ ಮಾರಕವಾಗಿ ಕೆಲಸ ಮಾಡುತ್ತದೆ. ಆದರೆ ಹತ್ತಿಯ ಎಲೆಯನ್ನು ಕತ್ತರಿಸಿ ನುಂಗುವ ಹುಳುಗಳು ಈ ಬಿಟಿಯಿಂದ ಸಾಯುವುದಿಲ್ಲ. ಆದರೆ ಅಜಾಡಿರಕ್ಟಿನ್ ನಿಂದ ಸಾವನ್ನಪ್ಪುತ್ತವೆ. ಹಾಗಾಗಿ ಅಜಾಡಿರಕ್ಟಿನ್ ಒಂದು ಅತ್ಯಂತ ಒಳ್ಳೆಯ ಕೀಟನಾಶಕವಾಗಿದ್ದು ಬಿಟಿಯಿಂದಾಗ ಕೆಲಸವನ್ನು ಬೇವು ಮಾಡಿದ್ದನ್ನು ಸಂಶೋಧನೆಗಳು ಸಾಬೀತು ಪಡಿಸಿವೆ.
ಇದೇ ಕಾರಣದಿಂದಾಗಿ ತೀರಾ ಇತ್ತೀಚೆಗೆ ಕೃಷಿಕರಲ್ಲಿ ಸಾವಯವ ಪದ್ದತಿಯ ಕೃಷಿಯಲ್ಲಿ ಬೇವಿನ ಕಷಾಯದ ಬಳಕೆ ಹಾಗೂ ಬೇವಿನ ಹಿಂಡಿಯ ಬಳಕೆಯು ಸಾಕಷ್ಟು ಜನಪ್ರಿಯವಾಗಿದೆ. ಬೇವಿನ ಎಣ್ಣೆಯನ್ನು ತೆಗೆದ ನಂತರ ಬೀಜಗಳಿಂದ ಹಿಂಡಿಯನ್ನು ತಯಾರಿಸಲಾಗುತ್ತದೆ. ಈ ಹಿಂಡಿಯೂ ಒಳ್ಳೆಯ ಗೊಬ್ಬರ ಮಾತ್ರವಲ್ಲ ಮಣ್ಣಿನ ಆರೋಗ್ಯಕ್ಕೂ ಹಿತಕಾರಿ. ಹಾಗಾಗಿ ಬಹುಶಃ ದೇಶದಲ್ಲೇ ಮೊಟ್ಟ ಮೊದಲನೆಯ ಬೇವಿನ ಬೀಜವನ್ನು ಪುಡಿ ಮಾಡಿ ತಾಜಾ ಕಷಾಯ ತಯಾರಿಕೆಗೆ ಅನುವು ಮಾಡಿಕೊಡುವ ಪ್ರಯತ್ನವನ್ನು ನಮ್ಮ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಯುವಕರೊಬ್ಬರು ಮಾಡಿದ್ದಾರೆ. ಎರಡು ಲಾರಿಗಳಲ್ಲಿ ಯಂತ್ರ ಹಾಗೂ 10 ಟನ್ನುಗಳಷ್ಟು ಬೀಜವನ್ನು ಕೊಂಡೊಯ್ದು ಬೇಡಿಕೆಯಿರುವ ಹಳ್ಳಿಗೇ ಹೋಗಿ ಪುಡಿಮಾಡಿಕೊಟ್ಟು ಬರುತ್ತಾರೆ (ಅದರ ಚಿತ್ರವನ್ನೂ ನೋಡಬಹುದು). ಕೃಷಿಯಲ್ಲಿ ಕೀಟನಾಶಗಳ ದೊಡ್ಡ ಹಾವಳಿಯ ಹಾಗೂ ಅವುಗಳನ್ನೆಲ್ಲಾ ನಿಭಾಯಿಸುವ ದೊಡ್ಡ ದೊಡ್ಡ ಕಂಪನಿಗಳೂ ಇರುವಾಗ ಇಂತಹಾ ಬೃಹತ್ ಸಾಧ್ಯತೆಯನ್ನು ಒದಗಿಸಿಕೊಟ್ಟಿರುವುದು ಈ ಸಸ್ಯದ ಹೆಗ್ಗಳಿಕೆ. ಈ ಸಂಚಾರಿ ಬೀಜ ಪುಡಿ ಮಾಡುವ ಯಂತ್ರದಿಂದ ಕಳೆದ ವರ್ಷ 1000 ಟನ್ನುಗಳಷ್ಟು ಬೇವಿನ ಬೀಜವನ್ನು ಪುಡಿ ಮಾಡಿಕೊಟ್ಟದ್ದಾಗಿ ತಿಳಿದು ಬಂದಿದೆ.
ಔಷಧವಾಗಿ ಬೇವು ಬಹಳ ಹಿಂದಿನಿಂದಲೂ ಪರಿಚಿತವಾಗಿರುವ ಸಸ್ಯ. ಆಯುರ್ವೇದದ ಗ್ರಂಥಗಳು ಬೇವಿನ ರೋಗಉಪಶಮನ ಗುಣಗಳನ್ನು ಧಾರಾಳವಾಗಿ ವಿವರಿಸಿವೆ. ಬೇವಿನ ಉಪಯೋಗಗಳನ್ನು ಸಿದ್ಧ ಹಾಗೂ ಆಯುರ್ವೇದಗಳೆರಡೂ ಜಂತುನಾಶಕವಾಗಿ, ಬ್ಯಾಕ್ಟಿರಿಯಾಗಳ ವಿರುದ್ಧದ ಕಾಯಿಲೆಗಳಿಗೆ, ಹಾಗೂ ವೈರಸ್ಸುಗಳ ವಿರುದ್ಧದ ರೋಗರುಜಿನಗಳಿಗೆ ಗುರುತಿಸಿವೆ. ಅದರಲ್ಲೂ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಯುನಾನಿಯೂ ಸೇರಿದಂತೆ ಹಲವು ದೇಶಿ ವೈದ್ಯಕೀಯ ಮಾರ್ಗಗಳಲ್ಲಿ ಬೇವಿನ ಪ್ರಸ್ತಾಪ ಬರುತ್ತದೆ. ಬೇವಿನ ಎಲೆಗಳ ಅರೆದು ಚಟ್ನಿಯಾಗಿಸಿ ಮೈಗೆ ಸವರಿಕೊಂಡು ಎಣ್ಣೆ ಸ್ನಾನ ಮಾಡುವುದನ್ನು ಹಲವು ಅನುಭವಗಳು ದಾಖಲಿಸಿವೆ. ಇಷ್ಟೆಲ್ಲಾ ಇದ್ದರೂ ಬೇವಿನ ದೀರ್ಘಕಾಲಿಕ ಬಳಕೆಯ ಅಧ್ಯಯನಗಳನ್ನು ನಡೆಸಿಲ್ಲ. ಈ ವಿಚಾರಗಳಲ್ಲಿ ಸ್ವಲ್ವ ಮಟ್ಟಿಗಿನ ಅನುಮಾನಗಳನ್ನು ವಿವಿಧ ಅನುಶೋಧಕರು ವ್ಯಕ್ತ ಪಡಿಸಿದ್ದಾರೆ. ಕೆಲವೊಮ್ಮೆ ಗರ್ಭಸ್ರಾವದಂತಹಾ ತೊಂದರೆಯನ್ನು ಬೇವು ತರಬಲ್ಲದು. ಅಲ್ಲದೆ ನಿರಂತರ ಬಳಕೆಯಿಂದ ರಕ್ತದಲ್ಲಿ ಸಕ್ಕರೆಯ ಅಂಶ ತೀರಾ ಕಡಿಮೆಯಾಗಿ ತೊಂದರೆಯಾಗುವ ಬಗ್ಗೆಯೂ ಅನುಮಾನಗಳಿವೆ. ಸಾಧಾರಣ ಬಳಕೆಯಿಂದ ಹಲವಾರು ಉಪಯೋಗಗಳನ್ನು ಖಂಡಿತವಾಗಿಯೂ ಪಡೆದುಕೊಳ್ಳಲು ಸಾಧ್ಯವಿದೆ.
ಭಾರತೀಯ ಪರಂಪರೆಯಲ್ಲಿ ವರ್ಷವನ್ನು ವಸಂತದ ಆಗಮನದಿಂದ ಅದೂ ಹಬ್ಬದ ದಿನವನ್ನಾಗಿಸಿ ಸಿಹಿಯ ಜೊತೆಗೆ ಬೇವಿನ ಕಹಿಯ ಕಂಪನ್ನೂ ಕಡ್ಡಾಯವಾಗಿಸಿ, ಜೊತೆಗೆ ಬೇವಿನ ಹತ್ತಾರು ಉಪಯೋಗಗಳನ್ನು ಶತಮಾನಗಳಿಂದಲೂ ಉಳಿಸಿ, ಬೆಳೆಸಿಕೊಂಡು ಬರಲಾಗಿದೆ. ಬೇವಿನ ಮರವು ನಮ್ಮದೆನ್ನುವ ಆತ್ಮ ವಿಶ್ವಾಸವನ್ನು ಕೊಟ್ಟು ಅಂತರರಾಷ್ಟ್ರೀಯ ತಿಳಿವಳಿಕೆಯ ಹೋರಾಟದಲ್ಲೂ ಬಳಸಲು ಪ್ರೇರೇಪಿಸಿದೆ. ಯುಗಾದಿ ಹಬ್ಬದ ಈ ದಿನದಂದು ಸಸ್ಯಯಾನದ ನೆಪವಾಗಿ ಬೇವಿಗಿಂತಾ ಸಿಹಿಯಾದ ಯಾವ ಸಸ್ಯವನ್ನು ಕುರಿತು ಚರ್ಚಿಸಲು ಸಾಧ್ಯ ಅಲ್ಲವೇ?
-ಚನ್ನೇಶ್ ಟಿ.ಎಸ್.