ಜೋಳ ಜಗತ್ತಿನ ಪ್ರಮುಖ ಆಹಾರ ಧಾನ್ಯಗಳಲ್ಲಿ ಐದನೆಯ ಸ್ಥಾನವನ್ನು ಪಡೆದಿದೆ. ಅಕ್ಕಿ, ಮೆಕ್ಕೆ ಜೋಳ, ಗೋಧಿ ಮತ್ತು ಬಾರ್ಲಿಯ ನಂತರದ ಸ್ಥಾನ ಜೋಳದ್ದು. ನಮಗೆಲ್ಲಾ ಉತ್ತರ ಕರ್ನಾಟಕದ ರೊಟ್ಟಿ ಬಡಿಯುವ ಜೋಳ ಎಂದರೇನೇ ಹೆಚ್ಚು ಆಪ್ತವಾಗುವುದು. ಏಕೆಂದರೆ ಮುಸುಕಿನ ಜೋಳ ಅಥವಾ ಮೆಕ್ಕೆಜೋಳವೂ ಸಹಾ ಸಾಮಾನ್ಯ ತಿಳಿವಳಿಕೆಯ ಮಾತಿಗೆ ಜೋಳ ಎಂದೇ ಪರಿಚಿತ, ಹಾಗಾಗಿ! ಅಕ್ಕಿಯಿಂದ ಅನ್ನ ಮಾಡುವಂತಹಾ ವಿಶೇಷವನ್ನೂ, ಗೋಧಿಯಿಂದ ಚಪಾತಿಯಂತಹದ್ದನ್ನೂ, ಬಾರ್ಲಿ-ಮೆಕ್ಕೆಜೋಳದ ಗಂಜಿಯನ್ನೂ ಮಾಡಬಹುದಾದ ಗುಣವನ್ನು ಹೊಂದಿರುವುದು ಈ ಜೋಳದ ವಿಶೇಷ. ಅಷ್ಟೆ ಏಕೆ ರಾಗಿಯಿಂದ ತಯಾರಾಗುವ ಮುದ್ದೆಯೂ ಜೋಳದಿಂದ ಅದ್ಭುತವಾಗಿ ಅಣಿಯಾಗುತ್ತದೆ. ಅದೆಲ್ಲದರ ಜೊತೆಗೆ ಮಾನವ ಕುಲದೊಡನೆಯ ಸಾಹಚರ್ಯ ಜೋಳಕ್ಕೆ ಸಾಕಷ್ಟು ಭಿನ್ನವಾಗಿ ಇರುವಂತಹಾ ವಿವರಗಳು ದೊರಕುತ್ತವೆ. ಅವೆಲ್ಲವನ್ನೂ ಜೊತೆಗೆ ಸಸ್ಯ ಸಂಕುಲದಲ್ಲಿ ಜೋಳದ ಸ್ಥಾನ-ಮಾನವನ್ನೂ ಅಲ್ಲದೆ ಮುಂದಿನ ಸಂತತಿಗೆ ಅದರ ಅಸಾಮಾನ್ಯ ಕೊಡುಗೆಯನ್ನೂ ತಿಳಿಯುವ ಅವಕಾಶವನ್ನು ಸಸ್ಯಯಾನವು ಒದಗಿಸಿದೆ.
ಜೋಳ, ಒಂದು ಆಹಾರ ಧಾನ್ಯವಾಗಿ ಅಕ್ಕಿ ಅಥವಾ ಗೋಧಿಗಿರುವ ಆಧುನಿಕತೆಯ ಹೊಳಪನ್ನು ಪಡೆದಿಲ್ಲ. ಅದರ ಕಾಳಿನ ಆಕಾರದಿಂದ ಇದೂ ಒಂದು ದೊಡ್ಡ ಮಿಲೆಟ್! ಹಾಗೆಂದು ಇದೇ ಹಿನ್ನೆಲೆಯಲ್ಲಿ ಕಡೆಗಾಣಿಸಿದ ಕಾಳೂ ಅಲ್ಲ. ಸರಿ ಸುಮಾರು ಹತ್ತು ಸಾವಿರ ವರ್ಷದಿಂದ ಮಾನವ ಕುಲದಲ್ಲಿ ಕೃಷಿಯ ಜೊತೆಗಾರನಾಗಿರುವ ಅತ್ಯದ್ಭುತ ಸಸ್ಯ ಇದು. ಮಾನವ ಕುಲವು ಆಫ್ರಿಕಾದ ಖಂಡದಲ್ಲಿ ಮೂಲ ನೆಲೆಯಾಗಿದ್ದು ವಿಕಾಸದಲ್ಲಿ ಆಧುನಿಕತೆಯತ್ತ ನಡೆದ ಸಂದರ್ಭವನ್ನು ಜೊತೆಗಿರಿಸಿಕೊಂಡು, ವಲಸೆಯನ್ನು ಆರಂಭಿಸಿದವರ ಜೊತೆಗೆ ಇದೂ ಸಾಗಿದ್ದೂ ಮತ್ತೊಂದು ವಿಶೇಷ. ಹಾಗಾಗಿಯೇ ಆಫ್ರಿಕಾ ಇದರ ಮೂಲ ನೆಲೆಯಾದರೂ, ೬೦-೬೫ ಸಾವಿರ ವರ್ಷಗಳ ಹಿಂದೆ ಭಾರತೀಯ ಉಪಖಂಡವನ್ನು ಪ್ರವೇಶಿಸಿದ ಮಾನವ ಸಂತತಿಯ ಜೊತೆಗೇ ಇದು ಬಂದಿರುವ ಸಾಧ್ಯತೆಗಳಿವೆ. ಆದರೆ ಪುರಾವೆಗಳಿನ್ನೂ ಸಿಕ್ಕಿಲ್ಲ. ಆದ್ದರಿಂದಲೇ ಆಫ್ರಿಕಾದ ನೈಜೀರಿಯಾ ಹಾಗೂ ಭಾರತ ಎರಡೂ ಸಮಪಾಲಿನ ಉತ್ಪನ್ನದಿಂದ ಜಗತ್ತಿನ ಮೊದಲ ಸ್ಥಾನವನ್ನು ಹಂಚಿಕೊಂಡಿವೆ. ಆಫ್ರಿಕಾ ಮತ್ತು ಭಾರತೀಯ ನೆಲದ ಮೂಲದಿಂದಲೇ ಜಾಗತಿಕವಾಗಿ ಹಬ್ಬಿದ ಕೀರ್ತಿಯನ್ನು ಜೊಳವು ಗಳಿಸಿಕೊಟ್ಟಿದೆ.
ಜೋಳದ ಸಾಕಷ್ಟು ವನ್ಯ ಹಾಗೂ ಕೃಷಿಯನ್ನು ಒಳಗೊಂಡ ತಳಿಗಳು ಹೆಚ್ಚಿರುವ ಆಫ್ರಿಕಾದ ಈಶಾನ್ಯ ಭಾಗದಲ್ಲಿ ಇದು ವಿಕಸನಗೊಂಡಿದೆ ಎಂದು ನಂಬಲಾಗಿದೆ. ಅಲ್ಲಿನ ಇಥಿಯೋಪಿಯಾ ಮತ್ತು ಸುಡಾನ್ ಗಡಿಯ ಪ್ರದೇಶದ ಪ್ರಾಚ್ಯ ಉಳಿಕೆಗಳ ಕುರುಹುಗಳು ಜೋಳವು ಅಲ್ಲಿ ಕ್ರಿ.ಪೂ 8,500 ರಷ್ಟು ಹಿಂದೆಯೇ ಇರುವುದನ್ನು ಸಾಬೀತು ಪಡಿಸಿವೆ. ಸುಮಾರು 10,500 ವರ್ಷಗಳಷ್ಟು ಹಿಂದೆಯೇ ಇದರ ಕೃಷಿ ನಡೆದಿತ್ತಾ, ಎನ್ನುವ ಆಶ್ಚರ್ಯ ಇದರ ದಾಖಲೆಗಳಲ್ಲಿ ಕಂಡುಬರುತ್ತದೆ. ಕ್ರಿ.ಪೂ 8,500 ರಿಂದ 4000 ವರ್ಷಗಳ ಮಧ್ಯದ ಅವಧಿಯಲ್ಲಿನ ಕೃಷಿಯಲ್ಲಿಯೇ ಇದರ ಆರಂಭದ ಸಾಧ್ಯತೆಗಳಿವೆ. ಹೀಗೆ ಇಥಿಯೋಪಿಯಾದಿಂದ ಇಡೀ ಆಫ್ರಿಕಾಕ್ಕೆ ಹಾಗೂ ಮಧ್ಯ ಪ್ರಾಚ್ಯ ದೇಶಗಳನ್ನೂ ಒಳಗೊಂಡಂತೆ ಭಾರತಕ್ಕೂ ಬಂದು ನೆಲೆಯಾಗಿ 3000 ವರ್ಷಗಳಾದರೂ ಸಂದಿವೆ. ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದ ದಕ್ಕನ್ ಪ್ರಸ್ಥಭೂಮಿಯು ಜೋಳಕ್ಕೆ ಅತ್ಯಂತ ಒಪ್ಪಿಗೆಯಾದ ನೆಲವಾಗಿ ಹೆಚ್ಚು ಹೆಚ್ಚು ವಿವಿಧತೆಗಳ ತಳಿಗಳ ವಿಕಾಸಕ್ಕೆ ಅನುವಾಗಿದೆ. ಇದರಿಂದಲೇ ತಳಿಗಳ ವೈವಿಧ್ಯತೆಯ ಹಂಚಿಕೆಯಲ್ಲಿ ದಕ್ಷಿಣ ಭಾರತದ ಕೊಡುಗೆಯನ್ನು ಜಾಗತಿಕವಾಗಿ ಗುರುತಿಸುವಂತಾಗಿದೆ. ಭಾರತದಿಂದ ಚೀನಾವನ್ನು ಹೊಕ್ಕು ಇಡೀ ಏಷಿಯಾವನ್ನು ಆವರಿಸಿದೆ. ಮುಂದೆ ಕೇವಲ ಇತ್ತೀಚೆಗಷ್ಟೇ ಅಂದರೆ ೧೯ನೆಯ ಶತಮಾನದ ಆದಿಯಲ್ಲಿ ಗುಲಾಮರ ಮಾರಾಟದಿಂದಾಗಿ ಅಮೆರಿಕಾವನ್ನು ತಲುಪಿದೆ. ಬಹುಶಃ ಗುಲಾಮರು ಅಮೆರಿಕಾಕ್ಕೆ ಕೊಂಡೊಯ್ದಿರುವ ಎಲ್ಲಾ ಸಾಧ್ಯತೆಗಳೂ ಅಥವಾ ಅವರನ್ನು ಕರೆದೊಯ್ದ ಮೂಲಗಳು ಜೋಳವನ್ನು ಅಮೆರಿಕಕ್ಕೆ ಪರಿಚಯಿಸಿವೆ. ದಕ್ಷಿಣ ಅಮೆರಿಕಾ ಹಾಗೂ ಆಸ್ಟ್ರೇಲಿಯಾವನ್ನು ತೀರಾ ಇತ್ತೀಚೆಗೆ ಅಂದರೆ 1950ರ ಸುಮಾರಿಗೆ ತಲುಪಿ ಹೆಚ್ಚೂ ಕಡಿಮೆ ಜಗದ್ವ್ಯಾಪಿಯಾಗಿದೆ. ಇಂದು ಇಡೀ ಭೂಗೋಳದ ಉತ್ತರ ಅಕ್ಷಾಂಶ 50 ಡಿಗ್ರಿಯಿಂದ ದಕ್ಷಿಣ ಅಕ್ಷಾಂಶ 45ರ ಮಧ್ಯದ ಸಂಪೂರ್ಣ ನೆಲವನ್ನು ಜೋಳವು ಆಕ್ರಮಿಸಿದೆ. ಇದೆಲ್ಲವೂ ಹೆಚ್ಚು ಕೃಷಿಗೆ ಒಳಗಾದ ನೆಲವಾಗಿ ಪರಿಚಿತ. ಇದು ಕೆನಡಾ ಹಾಗೂ ಉತ್ತರದ ರಶಿಯಾ ಹಾಗೂ ಅಪರಿಮಿತ ಚಳಿಯ ಯೂರೋಪನ್ನು ಹೊರತು ಪಡಿಸಿ ಜಗತ್ತನ್ನು ಸಂಪೂರ್ಣ ಆವರಿಸಿದೆ.
ಜೋಳಕ್ಕಿರುವ ಆತ್ಯಂತಿಕ ಆಪ್ತವಾದ ನಾಲಿಗೆ ರುಚಿಯ ರೂಪಕ -“ರೊಟ್ಟಿ”. ರೊಟ್ಟಿ – ಬ್ರೆಡ್ ಎರಡೂ ಹಸಿವಿನ ನಿವಾರಣೆಯ ಸಂಕೇತಗಳು! ಆದರೆ ಅಮೆರಿಕಾದ ಐತಿಹಾಸಿಕ ದಾಖಲೆಯ ಹಳೆಯ ಸಂಗತಿಯು ಅಲ್ಲಿ ಜೋಳದ ದಂಟಿನಿಂದ ಮಾಡಲಾದ ಪೊರಕೆಯ ಕುರಿತದ್ದಾಗಿದೆ. ಅಮೆರಿಕದಲ್ಲಿ ಬೆನ್ ಫ್ರಾಂಕ್ಲಿನ್ ಎಂಬಾತನ ೧೭೫೭ರ ಬರಹಗಳಲ್ಲಿ ಜೋಳದ ಗಿಡದ ಪೊರಕೆಗಳ ಕುರಿತು ಕಂಡು ಬಂದ ದಾಖಲೆಯೇ ಅಲ್ಲಿನ ಮೊದಲ ಪ್ರವೇಶದ ವಿಷಯ. ಆದರೆ ಅಚ್ಚರಿ ಎಂದರೆ ಪೊರಕೆಯಿಂದ ಆರಂಭವಾದ ಜೋಳದ ಕಥನವು ಇಂದು ಅಲ್ಲಿ ಅತ್ಯಾಧುನಿಕ ಮಾದಕ ಪೇಯದ ತಯಾರಿಯವರೆಗೂ ಆವರಿಸಿದೆ. ಜೋಳದ ಕಥನವು ಮಾನವ ಕುಲವನ್ನು ಹಂತ ಹಂತವಾಗಿ ಆವರಿಸುತ್ತಾ ಮುಂದೆ ತೀರಾ ಅನಿವಾರ್ಯವಾದ ಅತ್ಯಂತ ಪ್ರಮುಖ ಬೆಳೆಯಾಗುವ ಬಗೆಯನ್ನು ಊಹಿಸಬಹುದಾಗಿದೆ. ಇದರ ಜೀವಿವೈಜ್ಞಾನಿಕ ಸಂಗತಿಗಳು, ಭೂಗೋಳಿಕ ಹರಹು, ನೆಲ ಹಾಗೂ ವಾತಾವರಣವನ್ನು ಒಪ್ಪಿಕೊಂಡು ಬೆಳೆವ ಅದರ ಗುಣ, ಆಹಾರ ಧಾನ್ಯವಾಗಿ ಅದರ ವಿಶಿಷ್ಟತೆ, ದನಕರುಗಳಿಗೆ ಮೇವು, ಜೊತೆಗೆ ಆಧುನಿಕ ಅವಶ್ಯಕತೆಗಳಿಗೂ ಬೆಂಬಲವಾಗುವ ಅದರ ಸಾಧ್ಯತೆಗಳು ಇದನ್ನು ಮುಂದಿನ ದಿನಗಳಲ್ಲಿ ಬಹಳ ಮುಖ್ಯವಾದ ಆಹಾರವಾಗಿಸುವುದನ್ನು ಸೂಚಿಸುತ್ತಿವೆ. ಇದರಿಂದಲೇ ತಾನೆ ದಕ್ಷಿಣ ಕರ್ನಾಟದಲ್ಲಿಯೂ ರೊಟ್ಟಿ ಊಟದ ಹೊಟೆಲುಗಳು ವಿಶೇಷ ಮೆರುಗನ್ನು ಸ್ಥಾಪಿಸುತ್ತಿರುವುದು! ಇದಷ್ಟೇ ಅಲ್ಲ ಅದರ ವಿಶಿಷ್ಟ ಸಾಧ್ಯತೆಗಳೇ ಹಾಗಿವೆ. ಸ್ವಲ್ಪ ವಿವರಗಳನ್ನಿಲ್ಲಿ ನೋಡೋಣ.
ತೀರಾ ಇತ್ತೀಚೆಗೆ ಅಂದರೆ ಕಳೆದ ಅಕ್ಟೋಬರ್ ತಿಂಗಳಲ್ಲಿ ಅಮೆರಿಕಾದ ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಪ್ರಯೋಗಾಲಯದಿಂದ ಒಂದು ವಿಶಿಷ್ಟವಾದ ಸಂಶೋಧನಾ ಸಂಗತಿಯು ಪ್ರಕಟವಾಯಿತು. ಅದರ ಸಾರವನ್ನು ಒಂದೇ ವಾಕ್ಯದಲ್ಲಿ ಹೇಳುವುದಾದರೆ ಅದು ಹೀಗಿದೆ. “ಜೋಳದ ಧಾನ್ಯದ ಇಳುವರಿಯಲ್ಲಿ ಎರಡು ಪಟ್ಟು ಹೆಚ್ಚಿಸಲು ಸಾಧ್ಯವಿದೆ”. ಈಗಾಗಲೆ ಜೋಳದ ಬಗೆಗಿನ ಆಶಯಗಳು ಅಂತಿದ್ದರೆ ಅವು ಅಭಿವೃದ್ಧಿಯನ್ನು ನಿರೀಕ್ಷಿಸುತ್ತಿರುವ ಹಾಗೂ ಹೆಚ್ಚು ಜನಸಂಖ್ಯೆ ರಾಷ್ಟ್ರಗಳಿರುವ ಏಶಿಯಾ ಹಾಗೂ ಆಫ್ರಿಕಾಗಳಲ್ಲಿ ಇದಕ್ಕೆ ಆಹಾರ ಧಾನ್ಯವಾಗಿ ಹೆಚ್ಚು ಮಹತ್ವವಿರುವುದು. ಇಂತಹದ್ದರಲ್ಲಿ ಇದೊಂದು ಮಾಂತ್ರಿಕ ಧ್ವನಿಯಂತೆ ಕಂಡು ಬಂದರೂ ಆಶ್ಚರ್ಯವಿಲ್ಲ. ಇದು ಹೇಗೆ ಒಮ್ಮೆಲೆ ಎರಡು ಪಟ್ಟು ಎಂದರೆ ವಿಜ್ಞಾನದಲ್ಲಿ ದೊಡ್ಡ ಧ್ವನಿಯೇ ಸರಿ. ಈಗಾಗಲೇ ಜೋಳವು ಆಹಾರ, ಮೇವು ಮತ್ತು ಜೈವಿಕ ಇಂಧನವಾಗಿ ಪ್ರಾಮುಖ್ಯತೆ ಪಡೆದಿದ್ದು ಇನ್ನು ಕಾಳಿನಲ್ಲಿ ಎರಡು ಪಟ್ಟು ಹೆಚ್ಚಾದ ಇಳುವರಿ ಬಡ ರಾಷ್ಟ್ರಗಳಿಗೆ, ಅದರಲ್ಲೂ ಹೆಚ್ಚು ಜನಸಂಖ್ಯೆಯ, ಒಣ ನೆಲದ ಕೃಷಿಗೆ ವರವಾಗಲಿದೆ. ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಪ್ರಯೋಗಾಲಯದ ವಿಜ್ಞಾನಿಗಳ ತಂಡವು ಜೋಳದ ಆಹಾರೋತ್ಪಾದನೆಯ ವಿಧಾನವನ್ನು ನಿಯಂತ್ರಿಸುವ ವಿವಿಧತೆಯನ್ನು ಗುರುತಿಸಿದ್ದಾರೆ. ಜೋಳದಲ್ಲಿ ಹೂವು ಬಿಡುವ ಮತ್ತು ಬಿಟ್ಟ ಹೂವುಗಳಲ್ಲಿ ಕಾಳು ಕಟ್ಟುವ ಗುಣವನ್ನು ನಿಯಂತ್ರಿಸುವ ರಸಾಯನಿಕ ಪ್ರಕ್ರಿಯೆಗಳ ಸೂಕ್ಷ್ಮತೆಯನ್ನು ಕಂಡುಹಿಡಿದಿದ್ದಾರೆ. ಜಾಸ್ಮನಿಕ್ ಆಮ್ಲ ಎಂಬ ರಸಧೂತವು ಹೂವುಗಳ ನಿಯಂತ್ರಣವನ್ನು ನಿರ್ವಹಿಸುತ್ತಿದ್ದು, ಅದನ್ನು ಹಿಡಿತದಲ್ಲಿಟ್ಟ ಗುಣಾಣುವನ್ನು ಅರ್ಥೈಸಿದ್ದಾರೆ. ಇದೀಗ ಅದರಿಂದಾಗಿ ರಸಧೂತವನ್ನು ನಿಯಂತ್ರಣಕ್ಕೆ ತಂದು ಕಾಳುಗಳ ಇಳುವರಿಯನ್ನು ಎರಡು ಪಟ್ಟು ಮಾಡಬಹುದಾದ ಸಾಧ್ಯತೆಯನ್ನು ಪ್ರಕಟಿಸಿದ್ದಾರೆ. ಇದಿನ್ನೂ ಸಂಶೋಧನೆಯ ವರದಿ ನಿಜವೇ ಆದರೂ ಜೋಳದ ಇತಿಹಾಸದಲ್ಲಿ ಹೊಸತೊಂದು ಮೈಲಿಗಲ್ಲು.
ಒಂದು ಸಸ್ಯದಲ್ಲಿ ಹೂವನ್ನು ನಿಯಂತ್ರಿಸಿ ಆ ಮೂಲಕ ಅದರ ಮುಂದಿನ ಜೀವನದ ಕಾಳು ಕಟ್ಟುವ ಹಾದಿಯ ನವೀನ ಮಾರ್ಗವನ್ನು ರಸಧೂತವು ನಿರ್ಮಿಸುವ ಬಗೆಯನ್ನು ಸುಮಾರು 14 ವಿಜ್ಞಾನಿಗಳ ತಂಡವು ಸಂಶೋಧಿಸಿದೆ. ಜೋಳದಲ್ಲಿ ದೀರ್ಘಕಾಲಿಕ ಆಸಕ್ತಿಯನ್ನು ಹೊಂದಿರುವ ರತನ್ ಚೋಪ್ರಾ ಎನ್ನುವ (ಭಾರತೀಯ?) ಮಿನೆಸೊಟಾ ವಿಶ್ವವಿದ್ಯಾಲಯದ ವಿಜ್ಞಾನಿಯೂ ಸಂಶೋಧನೆಯ ಪಾಲುದಾರರು. ಹುಲ್ಲಿನ ಜಾತಿಯದಾದ ಜೋಳದ ದ್ಯುತಿ ಸಂಶ್ಲೇಷಣೆಯ ಮಾರ್ಗವು ಸಹಜವಾಗಿ ವಿಶೇಷವಾದದ್ದು. ಅದರಲ್ಲೂ ಈ ಬಗೆಯ ಶೋಧವು ಮುಂದೊಮ್ಮೆ ಇಡೀ ಹುಲ್ಲಿನ ಜಾತಿಯ ನಮ್ಮ ಬಹುಪಾಲು ಆಹಾರದ ಬೆಳೆಗಳ ಮೇಲೆ ಪ್ರಭಾವಿಸಬಲ್ಲದೇನೋ? ಆದರೆ ಈಗಂತೂ ಅಂತರರಾಷ್ಟ್ರೀಯ ಮಾಲೆಕ್ಯುಲಾರ್ ವಿಜ್ಞಾನ ಪತ್ರಿಕೆಯು ಇದನ್ನು ಹೊರತಂದಿದೆ. ಆದ್ದರಿಂದ ಜೋಳವನ್ನು ನಂಬುವ ಅನೇಕ ಆಹಾರ ವಿಚಾರಗಳಿಗೆ ಇದೊಂದು ಮಾಂತ್ರಿಕ ಸಂಗತಿಯೇ ಸರಿ. ಏಕೆಂದು ಸ್ವಲ್ಪ ವಿವರಗಳನ್ನೂ ಮುಂದೆ ನೋಡೋಣ.
ಜೋಳವನ್ನು ವೈಜ್ಞಾನಿಕವಾಗಿ Sorghum bicolor ಎಂದು ಕರೆಯಲಾಗುತ್ತದೆ. ಇದು ಹುಲ್ಲಿನ ಜಾತಿಯ ಸಸ್ಯ. ಭತ್ತ, ಗೋಧಿ ರಾಗಿಯಂತೆಯೇ ಸರಿ. ಪೊಯೇಸಿಯೆ ಸಸ್ಯ ಕುಟುಂಬದ ಸದಸ್ಯ. ಸೊರ್ಘಮ್ ಸಂಕುಲದಲ್ಲಿ ಐದು ಉಪ ಸಂಕುಲಗಳಿದ್ದು ಬೈಕಾಲರ್ ಪ್ರಭೇದವೂ ಕೂಡ ಹಲವಾರು ಅನಿಶ್ಚಿತತೆಯ ವಿವರಗಳನ್ನು ಒಳಗೊಂಡಿದೆ, ಇದೇ ಸಂಕುಲದ ಕಡಿಮೆ ಎಂದರೂ ೨೫ ಪ್ರಭೇದಗಳು ಜೋಳವನ್ನು ಗುರುತಿಸುವಲ್ಲಿ ಚರ್ಚೆಗೆ ಒಳಗಾಗಿವೆ. ಹಾಗಾಗಿ ಸಾಕಷ್ಟು ಹಳೆಯ ಕಾಲದಿಂದಲೂ ಕೃಷಿ ಒಳಗಾಗಿದ್ದರೂ ತೀರಾ ಇತ್ತೀಚೆಗೆ ವೈಜ್ಞಾನಿಕ ವಿವರಗಳಿಗೆ ಸಾಧ್ಯಮಾಡಿದೆ. ಅಪಾರ ವೈವಿಧ್ಯತೆ ಹಾಗೂ ವಿಶಿಷ್ಟವಾದ ನೆಲ ಹಾಗೂ ವಾತಾವರಣದ ಹೊಂದಾಣಿಯಿಂದಾಗಿ ಜಗದ್ವ್ಯಾಪಿಯಾಗಿ ಹರಡಿದೆ. ಇಂತಹಾ ವೈವಿಧ್ಯತೆಯೇ ಇದರ ಅಪಾರ ಸಾಧ್ಯತೆಗಳನ್ನು ಮಾನವ ಕುಲಕ್ಕೆ ಕಾಣಿಕೆಯಾಗಿ ನಿಸರ್ಗವು ಒದಗಿಸಿದೆ. ಇದರಿಂದ ಜನ ಜಾನುವಾರುಗಳ ಆಹಾರ ಭದ್ರತೆಯ ಹಿತದಿಂದ ಇದು ಮುಂದೆ ಅದರಲ್ಲೂ ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಪ್ರಯೋಗಾಲಯದ ಸಂಶೋಧನೆಯಂತೆ ಸಾಧ್ಯವಾದರೆ, ಬಹಳ ದೊಡ್ಡ ಆಹಾರದ ಬದಲಾವಣೆಯನ್ನು ತರಲಿದೆ. ಇವನ್ನೆಲ್ಲಾ ಆಹಾರ ಮತ್ತಿತರ ಬಳಕೆಯ ವಿವರಗಳಲ್ಲಿ ನೋಡೋಣ.
ಜೋಳವು ಅದರ ವಿಶೇಷವಾದ ಅಭಿವೃದ್ಧಿಯ ಹಂತಗಳಿಂದ ಸಸ್ಯ ವಿಜ್ಞಾನದಲ್ಲಿ ಪರಿಚಿತವಾಗಿದೆ. ಸರಿ ಸುಮಾರು 110ರಿಂದ 140 ದಿನಗಳ ಅವಧಿಯಲ್ಲಿ ಜೀವನ ಚಕ್ರವನ್ನು ಪೂರೈಸುವ ವೈವಿಧ್ಯಮಯ ತಳಿಗಳನ್ನು ಇದು ಒಳಗೊಂಡಿದೆ. ಜಗತ್ತಿನಾಧ್ಯಂತ 30,000 ಕ್ಕೂ ಹೆಚ್ಚು ತಳಿಗಳು ವಿವಿಧ ಪ್ರದೇಶಗಳನ್ನು ಆವರಿಸಿವೆ. ಇದರ ಬರವನ್ನು, ಉಪ್ಪು ನೆಲವನ್ನೂ ಹಾಗೂ ಒಣ ವಾತಾವರಣವನ್ನೂ ತಡೆದುಕೊಳ್ಳುವ ಗುಣವು ಹೆಚ್ಚು ಪ್ರಮುಖ ಆಹಾರ ಧಾನ್ಯವಾಗಿಸಿದೆ. ತಾನು ಹುಟ್ಟಿದ ನೆಲದ ಮಣ್ಣಿನ ಕೆಳಭಾಗದ ಪದರಗಳ ಅಡಚಣೆಯೇಣು ಇರದಿದ್ದರೆ ಜೋಳದ ಬೇರುಗಳು ಸುಮಾರು ಒಂದು ಮುಕ್ಕಾಲು ಮೀಟರ್ (1.8ಮೀ) ಆಳದಿಂದ ನೀರನ್ನು ಹೀರಿಕೊಳ್ಳಬಲ್ಲವು. ಉಷ್ಣವನ್ನು ಸಹಿಸುವ ಗುಣವೂ ವಿಶಿಷ್ಟವಾಗಿದ್ದು. 14 ಡಿಗ್ರಿಯಿಂದ 34 ಡಿಗ್ರಿಯವರೆಗೂ ಇದು ಸಹಿಸಿಕೊಳ್ಳಬಲ್ಲದು. ಜೋಳವು ತನ್ನ ಬೆಳವಣಿಗೆಯ ಹಿತದಿಂದ ವಿವಿಧ ಹಂತಗಳನ್ನು ಹೊಂದಿದ್ದು ಅದರ ಅರಿವು ಕೃಷಿಯಲ್ಲಿ ಅಳವಡಿಸುವ ತಿಳಿವಳಿಕೆಯನ್ನು ಹೆಚ್ಚಿಸಿದೆ. ಮೊಳಕೆಯ ನಂತರದ ಆ ಹಂತಗಳ ವಿವರಗಳು ಹೀಗಿವೆ.
1. ಬಿತ್ತನೆಯ ನಂತರ 3ರಿಂದ 10ದಿನದ ಮೊಳಕೆಯ ಹಂತ, 2). ಮೂರು ಎಲೆಗಳ ನಂತರದ 20 ದಿನಗಳು, 3. 21ದಿನಗಳ ನಂತರದ ಐದು ಎಲೆಗಳ ಹಂತ, 4). ಬೆಳವಣಿಗೆಯ ಹಂತ 30 ದಿನಗಳ ನಂತರ, 5). ಎಲೆಗಳ ವಿಸ್ತಾರ ಹೆಚ್ಚುವ ಹಂತ, 6). ಹೂವಾಡುವ ಹಂತ -ಮೊದಲ ಹೂ ಕಾಣಿಸಿಕೊಂಡು ನಂತರ 5-6 ದಿನಗಳಲ್ಲಿ ತೆನೆ ತುಂಬುವಷ್ಟು ಹೂವು, 7). ಹಾಲುಗಾಳಿನ ಹಂತ – ಕಾಳುಗಳಲ್ಲಿ ಹಾಲಿನಂತಹ ಸಿಹಿಯಾದ ದ್ರವ ತುಂಬಿ ಪರಿಮಳವನ್ನೂ ಕೊಡುತ್ತದೆ. 8). ಗಟ್ಟಿ ಕಾಳಿನ ಹಂತ -ಪ್ರತಿಶತ ೭೫ರಷ್ಟು ಕಾಳುಗಳು ತುಂಬಿ ಬಲಿಯುವ ಹಂತಕ್ಕೆ ಬಂದು ಇನ್ನೇನು ಕೊಯಿಲಿಗೆ ಅಣಿ 9). ಕೊನೆಯ ಪೂರ್ಣ ಬಲಿತ ಹಂತ. ಕಾಳುಗಳು ಪೂರ್ಣ ಗಟ್ಟಿಯಾಗಿ, ಅದರೊಳಗಿನ ತೇವವು ಕಡಿಮೆಯಾಗುತ್ತಾ ಒಣಗುವ ಹಂತ. ಇವೆಲ್ಲಾ ಹಂತಗಳೂ ವಿಶಿಷ್ಟ ಸಂಗತಿಗಳನ್ನು ಒಳಗೊಂಡಿದ್ದು ವಿವಿಧತೆಗಳ ಸಂಕೀರ್ಣ ಕಥನಗಳನ್ನು ಒದಗಿಸುತ್ತವೆ. ಇದರಿಂದಾಗಿಯೇ ಜೋಳದ ಬಳಕೆಯ ವಿಶೇಷಣಗಳೂ ಹೇರಳವಾಗಿವೆ. ಗಂಜಿ, ರೊಟ್ಟಿ, ಮುದ್ದೆ, ಗುಗ್ಗರಿ, ಹಾಲುಗಾಳಿನ ಉಪಹಾರಗಳು, ಬರಿ ದಂಟಿನ ರಸ, ಸಿಹಿಯನ್ನು ಸ್ರವಿಸುವ ತಳಿಗಳು, ಆಲ್ಕೋಹಾಲ್ ತಯಾರಿ ನೇರ ಪೇಯಗಳ ತಯಾರಿ, ಕಡೆಗೆ ಜೈವಿಕ ಇಂಧನವಾಗಿಯೂ ಜೋಳದ ಬಳಕೆಯ ಕಥನಗಳಿವೆ. ಇವೆಲ್ಲವನ್ನೂ ವಿವರವಾಗಿ ಮುಂದಿನ ವಾರ ಚರ್ಚಿಸೋಣ. ಕಾರಣ ಜೋಳದಲ್ಲಿ ಮಾತ್ರ ಹೋಲ್ ಗ್ರೈನ್, ಪಾಲಿಶ್ ಮಾಡಿದ ಗ್ರೈನ್ ಇತ್ಯಾದಿಗಳಿಲ್ಲ. ಇರುವುದೆಲ್ಲವೂ ತಿನ್ನಬಲ್ಲ ಒಂದೇ ಬಗೆಯ ಆಹಾರದ ಕಾಳೇ! ಅದಕ್ಕೇ ಅದರ ಉದ್ದವಾಗುವ ಕಥನವನ್ನು ಮುಂದಿನವಾರ ತಿಳಿಯೋಣ.
ನಮಸ್ಕಾರ
ಡಾ. ಟಿ.ಎಸ್. ಚನ್ನೇಶ್
ಮಾಹಿತಿ ಪೂರ್ಣ ಲೇಖನ
ಧನ್ಯವಾದಗಳು ಸರ್