You are currently viewing ಮಹಿಳೆಯರ ಉದ್ಯೋಗ ಮಾರುಕಟ್ಟೆಯ ಅರ್ಥವತ್ತಾದ ವಿಶ್ಲೇಷಣೆಗೆ ಅರ್ಥವಿಜ್ಞಾನದ ನೊಬೆಲ್‌ ಪುರಸ್ಕಾರ

ಮಹಿಳೆಯರ ಉದ್ಯೋಗ ಮಾರುಕಟ್ಟೆಯ ಅರ್ಥವತ್ತಾದ ವಿಶ್ಲೇಷಣೆಗೆ ಅರ್ಥವಿಜ್ಞಾನದ ನೊಬೆಲ್‌ ಪುರಸ್ಕಾರ

ಜಾಗತಿಕವಾಗಿ ಸ್ತ್ರೀಯರ ದುಡಿಮೆಗೂ ಪುರುಷರ ದುಡಿಮೆಗೂ ಐತಿಹಾಸಿಕವಾದ ವ್ಯತ್ಯಾಸಗಳಿವೆ. “ಉದ್ಯೋಗಂ ಪುರುಷ ಲಕ್ಷಣಂ”  ಎಂಬ ಮಾತಿದೆ. ಹಾಗೆಂದರೆ ಉದ್ಯೋಗವು ಸ್ತ್ರೀಯರಿಗೆ ಏನೂ ಅಲ್ಲವೆ? ಎಂಬ ಪ್ರಶ್ನೆಯಂತೂ ಮೇಲು ನೋಟಕ್ಕೂ ತಿಳಿಯುತ್ತದೆ! ಜೊತೆಗೆ ಐತಿಹಾಸಿಕವಾಗಿ ಸೂಕ್ಷ್ಮಗಳನ್ನು ಹೆಕ್ಕಿ ನೋಡಿದಾಗ ಸಮಸ್ಯೆಯ ತಿಳಿವು ಇನ್ನೂ ಅರ್ಥವತ್ತಾಗಿರುತ್ತದೆ ಎನ್ನುವುದಕ್ಕೆ ಸಾಕ್ಷಿ ಈ 2023ರ ಅರ್ಥವಿಜ್ಞಾನದ ನೊಬೆಲ್‌ ಪುರಸ್ಕಾರದ ಅಧ್ಯಯನ. ಗಂಡು ಮತ್ತು ಹೆಣ್ಣಿನ ದುಡಿಮೆಯನ್ನು ಸಮಾನಗಿ ಪರಿಗಣಿಸದ ಸಮಾಜದ ವ್ಯವಸ್ಥೆಯ ಶತಮಾನಗಳ ಇತಿಹಾಸವನ್ನು ಕೂಲಂಕಷವಾಗಿ ಅಗೆದು ಅಳೆದು ಅದರ ಮಾದರಿಗಳನ್ನು (Patterns) ವಿವರಿಸಿ ಆ ಮೂಲಕ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಅನುವಾಗುವಂತಹ ಅಧ್ಯಯನವನ್ನು ಹಾರ್ವರ್ಡ್‌ ವಿಶ್ವವಿದ್ಯಾಲಯದ ಕ್ಲಾಡಿಯಾ ಗೋಲ್ಡಿನ್‌ (Claudia Goldin) ಮಾಡಿದ್ದಾರೆ. 

ಸ್ವೀಡನ್ನಿನ ಕೇಂದ್ರೀಯ ಬ್ಯಾಂಕ್‌ ದ ರಿಸ್ಕ್‌ ಬ್ಯಾಂಕ್‌ ಅರ್ಥವಿಜ್ಞಾನದ ಸಂಶೋಧನೆಗೆ ನೀಡುವ ಆಲ್‌ಫ್ರೆಡ್‌ ನೊಬೆಲ್‌ ಸ್ಮರಣೆಯ ಪುರಸ್ಕಾರವನ್ನು ಮಹಿಳೆಯರು ಏಕೆ ಕಡಿಮೆ ಉದ್ಯೋಗಗಳನ್ನು ಮಾಡುತ್ತಾರೆ ಮತ್ತು ಅವರು ಪುರುಷರಿಗಿಂತ ಕಡಿಮೆ ಆದಾಯವನ್ನು ಏಕೆ ಗಳಿಸುತ್ತಾರೆ ಎಂಬುದನ್ನು ಐತಿಹಾಸಿಕವಾಗಿ ಅಭಿವೃದ್ಧಿ ಹೊಂದಿದ ಸಮಾಜದ ಅಧ್ಯಯನಕ್ಕೆ  ಪ್ರೊ. ಕ್ಲಾಡಿಯಾ ಗೋಲ್ಡಿನ್‌ ಅವರಿಗೆ ಘೋಷಿಸಲಾಗಿದೆ. ಕ್ಲೌಡಿಯಾ ಗೋಲ್ಡಿನ್ ಅವರು ಶತಮಾನಗಳ ಮೂಲಕ ಮಹಿಳೆಯರ ಗಳಿಕೆ ಮತ್ತು ಔದ್ಯೋಗಿಕ ಮಾರುಕಟ್ಟೆಯ ಭಾಗವಹಿಸುವಿಕೆಯ ಸಮಗ್ರವಾದ ವಿವರಣೆಯನ್ನು ಒದಗಿಸಿದ್ದಾರೆ. ಅವರ ಸಂಶೋಧನೆಯು ಆಯಾ ಕಾಲದ ಬದಲಾವಣೆಯ ಕಾರಣಗಳನ್ನು ಮತ್ತು ಇನ್ನೂ ಹಾಗೇಯೇ ಉಳಿದಿರುವ ಸ್ತ್ರೀ-ಪುರುಷರ ಅಂತರದ ಮುಖ್ಯ ಮೂಲಗಳನ್ನು ಬಹಿರಂಗಪಡಿಸುತ್ತದೆ.

ಜಾಗತಿಕ ಔದ್ಯೋಗಿಕ ಮಾರುಕಟ್ಟೆಯಲ್ಲಿ ಮಹಿಳೆಯರು ಕಡಿಮೆ ಪ್ರಾತಿನಿಧ್ಯವನ್ನು ಹೊಂದಿದ್ದಾರೆ ಮತ್ತು ಅವರು ಕೆಲಸ ಮಾಡುವಾಗ ಅವರು ಪುರುಷರಿಗಿಂತ ಕಡಿಮೆ ಗಳಿಸುತ್ತಾರೆ. ಒಂದು ಅಂದಾಜಿನಂತೆ ಜಾಗತಿಕವಾಗಿ ಪ್ರತಿಶತ ೫೦ರಷ್ಟು ಮಹಿಳೆಯರು ಮನೆಯಿಂದ ಹೊರ ಬಂದು ದುಡಿಯುತ್ತಾರೆ. ಅದೇ ಪ್ರತಿಶತ ೮೦ರಷ್ಟು ಪುರುಷರು ಕೆಲಸಗಳನ್ನು ಮಾಡುತ್ತಾರೆ. ಹಾಗೆಯೇ ಮಹಿಳೆಯರ ಗಳಿಕೆಯೂ ಕಡಿಮೆ. ಒಂದು ಕೆಲಸವನ್ನು ಹೆಣ್ಣು ಮಾಡಿ ಗಳಿಸುವುದಕ್ಕೂ ಗಂಡು ಅದೇ ಕೆಲಸವನ್ನು ಮಾಡಿ ಗಳಿಸುವುದಕ್ಕೂ ಸಾಕಷ್ಟು ವ್ಯತ್ಯಾಸಗಳು ಇರುವುದು ಸಹಜವೇ ಆಗಿದೆ. ಇದನ್ನು ಇಂದಿಗೂ ಕೂಲಿಯಾಳಿನ ದರ ಪಟ್ಟಿಯಲ್ಲಿ ಸ್ತ್ರೀ ಕೂಲಿ ಹಾಗೂ ಪುರುಷರ ಕೂಲಿ ಭಿನ್ನವಾಗಿಯೇ ಇರುವುದು ಎಲ್ಲಾ ದಾಖಲೆಗಳಲ್ಲೂ ಕಾಣಬಹುದು.  ಗೋಲ್ಡಿನ್ ಅವರು ಇಡೀ ಅಮೆರಿಕಾ ಹಳೆಯ ದಾಖಲೆ (ಆರ್ಕೈವ್‌)ಗಳನ್ನು ಆಮೂಲಾಗ್ರವಾಗಿ ತಡಕಾಡಿ ಅಧ್ಯಯನ ಮಾಡಿದ್ದಾರೆ. ಎರಡು ಶತಮಾನಗಳ ದಾಖಲೆಗಳನ್ನು ಹುಡುಕಾಡುವುದೆಂದರೆ ಒಂದು ರೀತಿಯಲ್ಲಿ ಪತ್ತೆದಾರಿಕೆ ಎಂದೇ ನೊಬೆಲ್‌ ಸಮಿತಿಯು ಬಣ್ಣಿಸಿದೆ. ಈದೇನು ಒಂದೆರಡು ವರ್ಷಗಳ ದಾಖಲೆಗಳಲ್ಲ ಸುಮಾರು 200 ವರ್ಷಗಳ ಡೇಟಾವನ್ನು ಅವರು ಸಂಗ್ರಹಿಸಿದ್ದಾರೆ. ಅದನ್ನು ಅವಲೋಕಿಸಿ ವಿಶ್ಲೇಷಣೆಗೂ ಒಳಪಡಿಸಿ ಕಾಲಾನಂತರದಲ್ಲಿ ಗಳಿಕೆ ಮತ್ತು ಉದ್ಯೋಗ ದರಗಳಲ್ಲಿ ಲಿಂಗ ವ್ಯತ್ಯಾಸಗಳು ಹೇಗೆ  ಮತ್ತು ಏಕೆ ಬದಲಾಗಿವೆ ಎಂಬುದನ್ನು ಅರ್ಥೈಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಂತ ಅವರೇನು ಪರಿಹಾರಗಳ ಅಳತೆಗೋಲನ್ನೇನು ಹುಡುಕಿ ಕೊಟ್ಟಿಲ್ಲ! ಬದಲಾಗ ವಾಸ್ತವಗಳ ಚಿತ್ರಣವನ್ನು ಅರ್ಥವತ್ತಾಗಿ ವಿವರಿಸಿದ್ದಾರೆ.

ಸಾಮಾನ್ಯ ನೋಟದಲ್ಲಿ ಈ ಮೇಲಿನ ನಕ್ಷೆಯು ಲಿಂಗ ತಾರತಮ್ಯದ ವ್ಯತ್ಯಾಸಗಳು ಆರ್ಥಿಕ ಅಭಿವೃದ್ಧಿಗೆ ನೇರವಾಗಿ ತಾಳೆಯಾಗುವಂತೆ ಕಾಣುತ್ತವೆ. ಉದಾಹರಣೆಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ಅಮೆರಿಕದಲ್ಲಿ ಕಡಿಮೆ ಅಂತರವಿದ್ದಂತೆಯೂ ಭಾರತವೂ ಸೇರಿದಂತೆ ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕದ ರಾಷ್ಟ್ರಗಳಲ್ಲಿ ಹೆಚ್ಚಿನ ಅಂತರವಿದ್ದಂತೆಯೂ ನಕ್ಷೆಯು ವಿವರಿಸುವುದಲ್ಲವೇ? ಆದರೆ ಅಮೆರಿಕದ ಎರಡು ಶತಮಾನಗಳ ದಾಖಲೆಗಳನ್ನು ಪತ್ತೆದಾರರಂತೆ ಹುಡುಕಿ ವಿಶ್ಲೇಷಿಸಿರುವ ಕ್ಲಾಡಿಯಾ ಗೋಲ್ಡಿನ್‌ ಅವರ ಅಧ್ಯಯನವು ಭಿನ್ನವಾದ ಮಾದರಿಯನ್ನು ಪ್ರದರ್ಶಿಸುತ್ತದೆ. ಆರಂಭದಲ್ಲಿ ಇದು ಸರಿ ಎಂಬಂತೆ ಕಂಡರೂ ಮುಂದುವರೆದಂತೆ ಇದು ಏರಿಕೆಯನ್ನೇನೂ ಕಾಣದೆ ಮತ್ತೆ ಇಳಿಕೆಯನ್ನು ಕಂಡ ಚಿತ್ರಣವನ್ನು ಅವರು ಸಂಶೋಧಿಸಿದ್ದಾರೆ. ಅಂದರೆ ಅದೊಂದು U ಆಕಾರದ  (U-shaped curve) ಚಿತ್ರಣ.

ಔದ್ಯೋಗಿಕ ಮಾರುಕಟ್ಟೆಯಲ್ಲಿ ಸ್ತ್ರೀ ಭಾಗವಹಿಸುವಿಕೆಯು ಈ ಸಂಪೂರ್ಣವಾಗಿ ಮೇಲ್ಮುಖ ಪ್ರವೃತ್ತಿಯನ್ನೇನೂ ಹೊಂದಿಲ್ಲ ಎಂದು ಗೋಲ್ಡಿನ್ ತೋರಿಸಿದರು, ಬದಲಿಗೆ U- ಆಕಾರದ ವಕ್ರರೇಖೆಯನ್ನು ಅದು ರೂಪಿಸುತ್ತದೆ. ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಕೃಷಿಕರಿಂದ ಕೈಗಾರಿಕಾ ಸಮಾಜಕ್ಕೆ ಪರಿವರ್ತನೆಯೊಂದಿಗೆ ವಿವಾಹಿತ ಮಹಿಳೆಯರ ಭಾಗವಹಿಸುವಿಕೆ ಕಡಿಮೆಯಾಯಿತು, ಆದರೆ ಇಪ್ಪತ್ತನೇ ಶತಮಾನದ ಆರಂಭದಲ್ಲಿ ಸೇವಾ ಕ್ಷೇತ್ರದ ಬೆಳವಣಿಗೆಯೊಂದಿಗೆ ಹೆಚ್ಚಾಗಲು ಪ್ರಾರಂಭಿಸಿತು. ಗೋಲ್ಡಿನ್ ಈ ಮಾದರಿಯಲ್ಲಿ ಮನೆ ಮತ್ತು ಕುಟುಂಬಕ್ಕಾಗಿ ಮಹಿಳೆಯರ ಜವಾಬ್ದಾರಿಗಳ ಬಗ್ಗೆ ಸಾಮಾಜಿಕ ರೂಢಿಗಳನ್ನು ಬಳಸಿ ರಚನಾತ್ಮಕ ಬದಲಾವಣೆಯ ಪರಿಣಾಮವಾಗಿ ವಿವರಿಸಿದರು.

     ಇಪ್ಪತ್ತನೇ ಶತಮಾನದ ಅವಧಿಯಲ್ಲಿ, ಮಹಿಳೆಯರ ಶಿಕ್ಷಣದ ಮಟ್ಟಗಳು ನಿರಂತರವಾಗಿ ಹೆಚ್ಚುತ್ತಿವೆ ಮತ್ತು ಹೆಚ್ಚಿನ ಆದಾಯದ ದೇಶಗಳಲ್ಲಿ ಅವರು ಈಗ ಪುರುಷರಿಗಿಂತ ಗಣನೀಯವಾಗಿ ಹೆಚ್ಚಿದ್ದಾರೆ. ವೃತ್ತಿ ಯೋಜನೆಗೆ ಹೊಸ ಅವಕಾಶಗಳನ್ನು ನೀಡುವಲ್ಲಿ ಗರ್ಭನಿರೋಧಕ ತಂತ್ರಗಳ ಪ್ರವೇಶವು ಈ ಕ್ರಾಂತಿಕಾರಿ ಬದಲಾವಣೆಯನ್ನು ವೇಗಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಗೋಲ್ಡಿನ್ ಅಭಿಪ್ರಾಯ ಪಡುತ್ತಾರೆ.

ಇಪ್ಪತ್ತನೇ ಶತಮಾನದಲ್ಲಿ ಆಧುನೀಕರಣ, ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗಸ್ಥ ಮಹಿಳೆಯರ ಹೆಚ್ಚುತ್ತಿರುವ ಪ್ರಮಾಣಗಳ ಹೊರತಾಗಿಯೂ, ದೀರ್ಘಕಾಲದವರೆಗೆ ಮಹಿಳೆಯರು ಮತ್ತು ಪುರುಷರ ನಡುವಿನ ಗಳಿಕೆಯ ಅಂತರವು ಅಷ್ಟೇನೂ ಕಡಿಮೆಯಾಗಿಲ್ಲ ಒಂದು ರೀತಿಯಲ್ಲಿ ಮುಂದುವರೆದಂತೆಯೇ ಇವೆ.. ಗೋಲ್ಡಿನ್ ಅವರ ಪ್ರಕಾರ, ಇದರ ವಿವರಣೆಯ ಏನೆಂದರೆ ಶೈಕ್ಷಣಿಕ ನಿರ್ಧಾರಗಳು! ಸಾಮಾನ್ಯವಾಗಿ ಹೆಣ್ಣು ಮಕ್ಕಳನ್ನು ಹೆಚ್ಚಿನ ವ್ಯಾಸಂಗದ ಬಗೆಗೆ ಇನ್ನೂ ಉತ್ತೇಜಿಸುವ ಸಂದರ್ಭಗಳು ಗಂಡು ಮಕ್ಕಳಿಗೆ ಇರುವಂತೆ ಇಲ್ಲ. ಹಾಗಾಗಿ ಇದು ಕೂಡ ವೃತ್ತಿಜೀವನದ ಅವಕಾಶಗಳ ಮೇಲೆ ಜೀವನ ಪರ್ಯಂತದ ಪರಿಣಾಮವನ್ನು ಬೀರುತ್ತದೆ. 

ಬಹುಪಾಲು ಹೆಚ್ಚಿನ ಸಂದರ್ಭಗಳಲ್ಲಿ ಎಲ್ಲಾ ಯುವತಿಯರ ನಿರೀಕ್ಷೆಗಳು ಹಿಂದಿನ ತಲೆಮಾರಿನ ಅನುಭವಗಳಿಂದ ರೂಪುಗೊಳ್ಳುತ್ತವೆ. ತಮ್ಮ ಹಿಂದಿನ ಅಂದರೆ ತಾಯಂದಿರ/ಅಜ್ಜಿಯರ ಜೀವನಗಳನ್ನು ಸಮೀಕರಿಸಿ ಅಯ್ಯೋ ಹೀಗೆಲ್ಲಾ ಇರುವುದನ್ನು ನಿಭಾಯಿಸಬೇಕಲ್ಲ ಎಂಬಂತಹಾ ಅನುಭವಗಳು ಅವರನ್ನು ನಿರ್ಧಾರಗಳನ್ನು ಪ್ರಭಾವಿಸುತ್ತವೆ.  – ಉದಾಹರಣೆಗೆ, ಗರ್ಭವತಿಯಾದಾಗ ಆರೋಗ್ಯದ ಭಯ, ಆರೈಕೆಯ ಒತ್ತಡದ ಕ್ಷಣಗಳು, ಮುಂದೆ ಮಕ್ಕಳು ಬೆಳೆಯುವವರೆಗೂ ಕೆಲಸಕ್ಕೆ ಹಿಂತಿರುಗದ ಅವರ ತಾಯಂದಿರು ಬಗೆಗಳು- ಹೀಗೆ ಆಗ ಅವರ ವೃತ್ತಿ ಬೆಳವಣಿಗೆಯು ನಿಧಾನವಾದ ವಿವರಗಳು- ವೃತ್ತಿ ಸಂಬಂಧದ ತೀರ್ಮಾನದಲ್ಲಿ ಅಡ್ಡ ಬರುವ ಸಂಗತಿಗಳು.

       ಐತಿಹಾಸಿಕವಾಗಿ, ಗಳಿಕೆಯಲ್ಲಿನ ಹೆಚ್ಚಿನ ಲಿಂಗ ಅಂತರವನ್ನು ಶಿಕ್ಷಣ ಮತ್ತು ಔದ್ಯೋಗಿಕ ಆಯ್ಕೆಗಳಲ್ಲಿನ ವ್ಯತ್ಯಾಸಗಳಿಂದ ವಿವರಿಸಬಹುದು. ಆದಾಗ್ಯೂ, ಈ ಗಳಿಕೆಯ ವ್ಯತ್ಯಾಸದ ಬಹುಪಾಲು ಈಗ ಮತ್ತು ಅದೇ ಉದ್ಯೋಗದಲ್ಲಿರುವ ಮಹಿಳೆಯರ ನಡುವೆ ಅವರ ಮಕ್ಕಳ  ಅದರಲ್ಲೂ ಮೊದಲ ಮಗುವಿನ ಜನನದೊಂದಿಗೆ ಹೆಚ್ಚಾಗಿ ಉದ್ಭವಿಸುತ್ತದೆ ಎಂದು ಗೋಲ್ಡಿನ್ ತೋರಿಸಿದ್ದಾರೆ. ಒಟ್ಟಾರೆ ಮಕ್ಕಳನ್ನು ಸಾಕುವ ಸಲಹುವ ಕಾರಣದಿಂದ ಔದ್ಯೋಗಿಕ ಒತ್ತಡವನ್ನು ನಿಭಾಯಿಸುವುದನ್ನು ಎಷ್ಟೇ ಮುಂದುವರೆದ ಸಮಾಜವಾದರೂ ನಿರ್ಮಿಸಿಲ್ಲ ಎಂಬದನ್ನೂ ಸೂಕ್ಷ್ಮವಾಗಿಯೇ ಗೋಲ್ಡಿನ್‌ ದಾಖಲಿಸಿದ್ದಾರೆ. “ಸಮಾಜಕ್ಕೆ ದುಡಿಮೆಯಲ್ಲಿ ಮಹಿಳೆಯರ ಪಾತ್ರವನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂಬುದನ್ನು ಗೋಲ್ಡಿನ್ ಅವರ ಅದ್ಭುತವಾದ ಸಂಶೋಧನೆಗಳು ಸಾಬೀತು ಪಡಿಸಿವೆ,  ಅವರ ಇತ್ತೀಚೆಗಿನ ಪ್ರಕಟಣೆಗಳಲ್ಲಿ ಈ ಕೆಳಗಿನ ಎರಡು ಪುಸ್ತಕಗಳು ಈ ವಿವರಗಳನ್ನು ಅತ್ಯದ್ಭುತವಾಗಿ ವಿಶ್ಲೇಷಿಸಿವೆ.

       ಒಟ್ಟಾರೆಯ ವಿಷಯ ಬಹಳ ಸರಳವಾದ ವಿಶ್ಲೇಷಣೆ ಎಂದು ಅನ್ನಿಸಬಹುದು. ಆದರೆ ಸಮಾಜ ಎನ್ನುವುದು ಗಂಡೋ ಅಥವಾ ಹೆಣ್ಣೋ? ಎಂಬ ಪ್ರಶ್ನೆಗೆ ಉತ್ತರ ಸಹಜವಾಗಿ ಗಂಡು ಎಂದು ಹೇಳದಿದ್ದರೂ ನಿಜ ಎಂದೇ ತಾನೇ? ಇದು ನಮ್ಮ ಸುತ್ತಲಿನ ಪ್ರಪಂಚವಷ್ಟೇ ಅಲ್ಲ. ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ಸಮಾಜದ್ದೂ ಕೂಡ.  ನಮ್ಮಲ್ಲಿ ಸ್ತ್ರೀಗೆ ಗೌರವದ ಸ್ಥಾನವಿದೆ, ಎಂದು ತಾಯಿಯನ್ನು ನಮಸ್ಕರಿಸುವ ಮಂತ್ರಿ ಮಹೋದಯರನ್ನು ರೈಲ್ವೇ ನಿಲ್ದಾಣಗಳಲ್ಲಿ ಚಿತ್ರಗಳ ತೂಗು ಬಿಟ್ಟು ಮೆರೆಯುವುದರಲ್ಲಿ ಹೆಚ್ಚುಗಾರಿಕೆಯಿಲ್ಲ. ಈ ಕೆಳಗಿನ ಒಂದೆರಡು ಸಂಗತಿಗಳು ನನ್ನ ಮುಂದಿನ ಪೀಳಿಗೆಯದು. ನನ್ನ ವಿದ್ಯಾರ್ಥಿಯನಿಯರಲ್ಲಿ ಒಬ್ಬಾಕೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ, ಆಕೆಯ ಸಂಬಳ ಕ್ರೆಡಿಟ್‌ ಆಗುವ ಬ್ಯಾಂಕಿನ ATM ಕಾರ್ಡಿನ ಪಿನ್‌ ಕೋಡ್‌ ಆಕೆಗೆ ಗೊತ್ತಿಲ್ಲ! ಎನ್ನುತ್ತಾಳೆ. ಇನ್ನೊಬ್ಬಳು ಕ್ಲಾಸ್‌ ಒನ್‌ ಅಧಿಕಾರಿ ಆಕೆಗೂ ತಿಂಗಳ ಸಂಬಳದ ಮೆಸೇಜ್‌ ಫೋನಿಗೆ ಬರುವುದರಿಂದ ಎಷ್ಟು ಎಂದು ತಿಳಿಯುತ್ತದೆ, ಎಂದೂ ಹೇಳಿದ್ದಾಳೆ. ಮತ್ತೊಬ್ಬಳು ಇನ್ನೂ ಪುಟ್ಟ ಹುಡುಗಿ. ಈ ವರ್ಷದಲ್ಲಿಯೇ ಅಮೆರಿಕದಲ್ಲಿ ಪಿಎಚ್.ಡಿ.ಗೆ ಫೆಲೋಶಿಪ್‌ ಸಮೇತ ಸೀಟು ಸಿಕ್ಕಿತ್ತು. ಹೆಣ್ಣುಮಗಳು ಎಂಬ ಕಾರಣಕ್ಕೇನೋ ಭಾರತದದಲ್ಲೇ ಪಿಎಚ್.ಡಿಗೆ ಸೇರಿ ಪೊಸ್ಟ್‌ ಡಾಕ್ಟೊರೆಲ್‌ ಹೋಗುತ್ತೇನೆ ಎಂದು ಸಮಾಧಾನ ಪಟ್ಟುಕೊಂಡಿದ್ದಾಳೆ. ಏನೋ ಒಂದು ಕಾರಣಕ್ಕೆ ಅವಕಾಶದಿಂದ  ಸದ್ಯಕ್ಕಂತೂ ವಂಚಿತಳಾಗಿದ್ದಾಳೆ. ಇಂತಹವು ನೂರಾರು ಒಂದಕ್ಕಿಂತಾ ಒಂದು ಸಂಕೀರ್ಣವಾದ ಸಂಗತಿಗಳು ಇವೆ.

       ಮಹಿಳೆ ಮತ್ತು ಉದ್ಯೋಗ ಎಂಬುದು ನಾವೆಲ್ಲಾ ಮಾತೆ, ದೇವತೆ, ಇತ್ಯಾದಿಗಳ ಗುಣವಾಚಕಗಳಿಂದ ಹೇಳಿದಷ್ಟು ಸುಲಭವಿಲ್ಲ. ಅದೆಷ್ಟೋ ಡಿಪಾರ್ಟುಮೆಂಟುಗಳಲ್ಲಿ ಮುಖ್ಯಸ್ಥರು ಹೆಣ್ಣು ಮಕ್ಕಳಾಗಿದ್ದನ್ನು ಸಹಿಸಿಕೊಳ್ಳದ ವಿಜ್ಞಾನಿಗಳನ್ನು ನಾನು ನೋಡಿದ್ದೇನೆ. ಒಮ್ಮೆ ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನ ಕುಲಪತಿಯಾಗಿದ್ದ ಒಬ್ಬ ವ್ಯಕ್ತಿ, ಹೆಣ್ಣು ಮಕ್ಕಳ ಕಡೆ ತಿರುಗಿ ನೀವು ಬಿಡಮ್ಮ ಕೆಲಸ ತೆಗೆದುಕೊಂಡು ಆಮೇಲೆ ಪ್ರಗ್ನೆಂಟ್‌ ಆಗಿ ರಜೆಯ ಮೇಲೆ ಹೋಗುತ್ತೀರಿ. ಎಂದು ಸಹಾಯಕ ಪ್ರಾಧ್ಯಾಪಕರಾಗಿದ್ದ ಹೆಣ್ಣು ಮಕ್ಕಳ ಬಗ್ಗೆ ಹೇಳಿದ್ದಾತ.. (ನಾನಾಗ ಅಲ್ಲಿಯೇ ವೃತ್ತಿಯಲ್ಲಿದ್ದೆ) ಆತನೂ ಹೇಳಿಕೊಳ್ಳಲು ಅರ್ಥವಿಜ್ಞಾನ ಓದಿದ ವ್ಯಕ್ತಿಯೇ! (ಹೌದು ತೀರಾ ಇತ್ತೀಚೆಗಿನ ಮಾರುಕಟ್ಟೆಯ ಅರ್ಥವಿಜ್ಞಾನಿಯೇ! ಗೊತ್ತಿದ್ದರೆ….ನಿಮ್ಮ ಊಹೆ ಸರಿ ಎನ್ನಬಹುದು).

       ಏನೇ ಇರಲಿ, ಈ ವರ್ಷದ ಅರ್ಥವಿಜ್ಞಾನದ ನೊಬೆಲ್‌ ಪುರಸ್ಕಾರಕ್ಕೆ ಯಾರೊಡನೆಯೂ ಹಂಚಿಕೊಳ್ಳದೆ ಪಡೆದ ಮೊಟ್ಟ ಮೊದಲ ಮಹಿಳೆ ಪ್ರೊ. ಕ್ಲಾಡಿಯಾ ಗೋಲ್ಡಿನ್‌ (Prof. Claudia Goldin). ಈ ವಿಭಾಗದಲ್ಲಿ ನೊಬೆಲ್‌  ಪಡೆದ ಮೂರನೆಯ ಮಹಿಳೆ ಕೂಡ. ಮಹಿಳೆಯರ ಒಟ್ಟಾರೆಯ ಸಂಕೀರ್ಣ ಸಂಗತಿಗಳನ್ನು ಮಹಿಳೆಯೇ ವಿವರಿಸಬೇಕಾದ್ದು ನ್ಯಾಯವಾದದ್ದೇ. ಅದನ್ನು ಪರಿಹಾರವೆಂದೇನೂ ಕಟ್ಟಿಕೊಡದೆ ಸಮಸ್ಯೆಗಳ ತಿಳಿವಾಗಿ ಕೊಟ್ಟ ಪ್ರೊ. ಕ್ಲಾಡಿಯಾ ಗೋಲ್ಡಿನ್‌ ಅವರಿಗೆ ತುಂಬು ಹೃದಯದ ಅಭಿನಂದನೆಗಳು.

ಪ್ರೊ. ಕ್ಲಾಡಿಯಾ ಗೋಲ್ಡಿನ್‌ ಅವರು (May 14, 1946) ರಂದು ಅಮೆರಿಕದ ನ್ಯೂರ್ಯಕ್‌ನಲ್ಲಿ ಯಹೂದಿ ಕುಟುಂಬವೊಂದರಲ್ಲಿ ಜನಿಸಿದರು. ಹೈಸ್ಕೂಲಿನಲ್ಲಿದ್ದಾಗ  Paul de Kruif  ಅವರ  The Microbe Hunters  ಪುಸ್ತಕವನ್ನು ಓದಿ ಮೈಕ್ರೋಬಯಾಲಜಿಸ್ಟ್‌ ಆಗಬೇಕಿಂದಾಕೆ! (ಈ ಪುಸ್ತಕದ ವಿವರಗಳು CPUS website ನಲ್ಲಿ ಇದೆ https://bit.ly/3CMDWAV ಲಿಂಕ್‌ ನೋಡಿ) ಆದರೆ ಕಾರ್ನೆಲ್‌ ವಿಶ್ವವಿದ್ಯಾಲಯದಲ್ಲಿ Alfred E. Kahn ಅವರ ಪಾಠಗಳು ಮೈಕ್ರೋಬಯಾಲಜಿಯ ಸೂಕ್ಷ್ಮತೆಯನ್ನು ಅರ್ಥವಿಜ್ಞಾನದಲ್ಲಿ ಬೆಸೆಯುವಂತೆ ಮಾಡಿ ಇಂದು ಅದರಲ್ಲೇ ಯಾರೊಡನೆಯೂ ಹಂಚಿಕೊಳ್ಳದೆ ಅರ್ಥವಿಜ್ಞಾನದ ನೊಬೆಲ್‌ ಪಡೆದ ಮೊದಲ ಮಹಿಳೆಯಾಗಿದ್ದಾರೆ. ಅಂದ ಹಾಗೆ ಕ್ಲಾಡಿಯಾ ಸಾಕಿರುವ ನಾಯಿ Pika, ಅಲ್ಲೇ ಒಂದು ನರ್ಸಿಂಗ್‌ ಹೋಂ ನಲ್ಲಿ ಚಿಕಿತ್ಸೆಯನ್ನು ಕೊಡುವ ನಾಯಿ(Therapy Dog)! ಅದರ ವಿಧೆಯತೆ ಮತ್ತು ವಿಶಿಷ್ಟ ಪರಿಮಳದಿಂದ ಗುರುತಿಸಲ್ಪಟ್ಟ ಗೋಲ್ಡನ್‌ ರಿಟ್ರೈವರ್‌ (Golden Retriever).  

ನಮಸ್ಕಾರ

ಡಾ. ಟಿ.ಎಸ್.‌ ಚನ್ನೇಶ್.‌

Leave a Reply