You are currently viewing ಮರಳಿ ಮಣ್ಣಿಗೆ: ಕಾಯಕ ನೆಲೆಯಾದ ಭಾರತೀಯ ವಿಜ್ಞಾನ ಸಂಸ್ಥೆ

ಮರಳಿ ಮಣ್ಣಿಗೆ: ಕಾಯಕ ನೆಲೆಯಾದ ಭಾರತೀಯ ವಿಜ್ಞಾನ ಸಂಸ್ಥೆ

(ಪ್ರೊ. ಸತೀಶ್‌ ಧವನ್ ಜನ್ಮಶತಮಾನೋತ್ಸವ ಸರಣಿಮೂರನೆಯ ಕಂತು)

೨೦೦೯ ನೇ ಇಸವಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ(ಐ.ಐ.ಎಸ್ ಸಿ)  ತನ್ನ ಶತಮಾನೋತ್ಸವವನ್ನು ಆಚರಿಸಿಕೊಂಡಿತು. ನೂರು ವರ್ಷಗಳ ಆ ಪಯಣದ ಮೈಲಿಗಲ್ಲಾಗಿ ಈ ಸಂದರ್ಭದಲ್ಲಿ ವಿಶೇಷ ಅಂಚೆಚೀಟಿಯನ್ನು ಹೊರತರಲಾಯಿತು. ಈ ಸಂಸ್ಥೆ ಶುರು ಮಾಡಿ  ಬೆಳೆಸಿದ ದಾನಿಗಳು, ಮುನ್ನಡೆಸಿದ ನಿರ್ದೇಶಕರು, ಪ್ರಖ್ಯಾತ ಅಧ್ಯಾಪಕರು ಮತ್ತು ಹಳೆ ವಿದ್ಯಾರ್ಥಿಗಳನ್ನು ಇಲ್ಲಿ ಒಂದೆಡೆ ತಂದು ಅವರ ಕೊಡುಗೆಯನ್ನು ನೆನೆಯಲಾಗಿದೆ. ಇಂತಹ ಅಪರೂಪದ ಗೌರವಕ್ಕೆ ಪಾತ್ರರಾದ , ಈ ಸಂಸ್ಥೆಯನ್ನು ಅತ್ಯಂತ ದೀರ್ಘ ಅವಧಿಗೆ, ಅಂದರೆ ಸುಮಾರು ೧೯ ವರ್ಷಗಳ ಕಾಲ ಮುನ್ನಡೆಸಿದ ವ್ಯಕ್ತಿ ಪ್ರೊ.ಸತೀಶ್ ಧವನ್.

ಐ.ಐ.ಎಸ್ ಸಿ ಶತಮಾನೋತ್ಸವ ಸಂದರ್ಭದಲ್ಲಿ ಹೊರತಂದ ಅಂಚೆ ಚೀಟಿ.‌ (ಚಿತ್ರಕೃಪೆ: ಐ.ಐ.ಎಸ್ ಸಿ ಆರ್ಕೈವ್ಸ್)

ಸತೀಶ್ ತಮ್ಮ ಡಾಕ್ಟೋರಲ್ ಅಧ್ಯಯನವನ್ನು ಕ್ಯಾಲ್‌ಟೆಕ್ ನಲ್ಲಿ ಮುಗಿಸಿ ೧೯೫೧ ರಲ್ಲಿ ಭಾರತಕ್ಕೆ ಹಿಂದಿರುಗಿದಾಗ, ಐ.ಐ.ಎಸ್ ಸಿ ಯಲ್ಲಿ ಹಿರಿಯ ವೈಜ್ಞಾನಿಕ ಅಧಿಕಾರಿಯಾಗಿ ಏರೋಸ್ಪೇಸ್ ವಿಭಾಗಕ್ಕೆ ಸೇರಿದರು. ತಮ್ಮ ಮೇಲ್ಪಂಕ್ತಿ ಓದಿನ ಹಿನ್ನೆಲೆಯಲ್ಲಿ ಬಹುಬೇಗ ಸಹ- ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಮುಂದೆ  ಏರೋಸ್ಪೇಸ್ ವಿಭಾಗದ ಮುಖ್ಯಸ್ಥರಾದರು. ಆ ಕಾಲದಲ್ಲಿ ಐ.ಐ.ಎಸ್ ಸಿ ಬಗ್ಗೆ ಇದ್ದ ಜೋಕು – “It was a bunch of small labs built around Gymkhana”!!  ಇದು ಏಕೆಂದರೆ ಹಲವು ಉತ್ಸಾಹಿ ಸಿಬ್ಬಂದಿ ಹಗಳಿರುಳು ದುಡಿದರೂ ಹೆಚ್ಚಿನವರು ಕೆಲಸವನ್ನು ಹಗುರಾಗಿ ತೆಗೆದುಕೊಳ್ಳುತ್ತಿದ್ದವರು.  ಮಧ್ಯಾಹ್ನ ಮೂರರ ನಂತರ ಕೆಲವಾರು ಟೆನ್ನಿಸ್ ಪ್ರಿಯ ಅಧ್ಯಾಪಕರು, ಟೆನ್ನಿಸ್ ಆಡಿ ಟೀ ಕುಡಿದು ಸೀದಾ ಮನೆಗೆ ನಡೆಯುತ್ತಿದ್ದರಂತೆ. ಆದರೆ ಮುಂದೆ ಸತೀಶ್ ನಿರ್ದೇಶಕರಾದ ನಂತರ ಇದಕ್ಕೆಲ್ಲಾ ಕತ್ತರಿ ಬಿತ್ತು!!

ಸತೀಶ್ ಅವರು ಏರೋಸ್ಪೇಸ್ ವಿಭಾಗಕ್ಕೆ ಸೇರಿದ ಹೊಸದರಲ್ಲಿ ಅವರ ಉಡುಗೆ-ತೊಡುಗೆ, ಚಲನವಲನಗಳ ಬಗ್ಗೆ  ಇದ್ದ ಹಲವಾರು ಕಥೆಗಳು ದಾಖಲಾಗಿವೆ. ಅವರು ತಮ್ಮ ಕನ್ವರ್ಟಿಬಲ್ ಕಾರಿನಿಂದ ಹಾಗೇ ನೆಗೆದು, ಕ್ಯಾಲಿಫೋರ್ನಿಯ ಗುರುತಾದ  ಬಣ್ಣ-ಬಣ್ಣದ ಅಂಗಿಯನ್ನು ತೊಟ್ಟು ನಗುಮುಖದಲ್ಲಿ ತರಗತಿಗೆ ಹಾಜರಾಗಿ ವಿದ್ಯಾರ್ಥಿಗಳಿಗೆ ಗುಡ್ ಮಾರ್ನಿಂಗ್ ಹೇಳುತ್ತಿದ್ದರಂತೆ. ಬಿಗುಮಾನದ ಸೂಟುಬೂಟುಧಾರಿಗಳಾದ ಅಂದಿನ  ಅಧ್ಯಾಪಕರ ಸಾಮಾನ್ಯ  ರೀತಿಗೆ ಬದಲಾಗಿ ಇವರ ಸ್ನೇಹಮಯ ಸಲುಗೆ ಬಹು ಬೇಗ ವಿದ್ಯಾರ್ಥಿಗಳಲ್ಲಿ  ಮತ್ತು ಸಂಸ್ಥೆಯಲ್ಲಿ ಮನೆಮಾತಾಯಿತು. ಪಾಠ-ಪ್ರವಚನಗಳಲ್ಲಿ ತುಂಬಾ ನಿಷ್ಟೆಯಿಂದ  ತೊಡಗಿಕೊಳ್ಳುತ್ತಿದ್ದ ಸತೀಶ್. ತಡರಾತ್ರಿಯವರೆಗೂ ಎಚ್ಚರವಿದ್ದು ಮುಂದಿನ ದಿನದ ಪಾಠಗಳಿಗೆ ಬೇಕಾದ ನೋಟ್ಸು ಮತ್ತು ಡೇಟಾಶೀಟ್ ಗಳನ್ನು ವಿದ್ಯಾರ್ಥಿಗಳಿಗೋಸ್ಕರ ತಯಾರು ಮಾಡಿ ಹಂಚುತ್ತಿದ್ದರಂತೆ. ಹೀಗೆ ಹಾಸ್ಟೆಲ್ ನ ಕೋಣೆಯಿಂದ ಅವರ ರೂಮಿನ ದೀಪ ತಡರಾತ್ರಿಯವರೆಗೂ ಉರಿಯುವುದನ್ನು ಅವರ ಶಿಷ್ಯರು ನೆನಪಿಸಿಕೊಂಡಿದ್ದಾರೆ. ಸೂಪರ್ ಸಾನಿಕ್ ಹರಿವಿನ ಕುರಿತಾದ ಆಗಿನ ನವನವೀನ ವಿಷಯಗಳನ್ನು ಅವರು ಪ್ರಾಯೋಗಿಕ ಉದಾಹರಣೆಗಳ ಮೂಲಕ ಮನವರಿಕೆ ಮಾಡಿಕೊಡುತ್ತಿದ್ದರಂತೆ.

ಸತೀಶ್ ಅವರನ್ನು ಭಾರತೀಯ ಪ್ರಾಯೋಗಿಕ ಫ್ಲೂ-ಇಡ್ ಡೈನಮಿಕ್ಸ್ ಸಂಶೋಧನೆಗಳ ಜನಕ ಎಂದು ಕರೆಯಲಾಗುತ್ತದೆ. ಅವರು ಸಂಸ್ಥೆಯಲ್ಲಿ ಇದ್ದುಕೊಂಡು ಸ್ವತಃ, ತಮ್ಮ ನೇರ ಶಿಷ್ಯರ ಮೂಲಕ ಮತ್ತು ಅವರುಗಳ ಶಿಷ್ಯರ ಮೂಲಕ ಈ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಮುಂದಿನ ಪ್ಯಾರಾಗಳಲ್ಲಿ ಅರಿಯೋಣ. ಸತೀಶ್‌ ಏರೋಸ್ಪೇಸ್‌ ಸಂಸ್ಥೆ ಸೇರಿದಾಗ ಅಲ್ಲಿ ೫ ಅಡಿ X ೭ ಅಡಿ ಗಾತ್ರದ ಗಾಳಿ ಸುರಂಗ (Wind Tunnel) ಸೌಲಭ್ಯವಿತ್ತು. ಏರೋಡೈನಮಿಕ್ಸ್‌ ಸಂಶೋಧನೆಗಳಿಗೆ ಈ ಗಾಳಿ ಸುರಂಗಗಳು ಅತ್ಯವಶ್ಯ. ಇದರೊಳಗೆ ವಿಮಾನದ ಅಥವಾ ಇನ್ನಿತರೆ ವಸ್ತುಗಳ ಸಣ್ಣ ಮಾದರಿಗಳನ್ನು  ಇಟ್ಟು ಗಾಳಿ ಹಾಯಿಸಿ, ಆ ಮೂಲಕ ಅವೆರೆಡರ ನಡುವಿನ ಏರೋಡೈನಮಿಕ್ಸ್‌ ಸಂಬಂಧಗಳನ್ನು ಅಧ್ಯಯನ ಮಾಡುತ್ತಾರೆ. ಸತೀಶ್‌ ವಿಭಾಗಕ್ಕೆ ಸೇರಿದ ಹೊಸದರಲ್ಲಿ ಸಿಕ್ಕ ಸರ್ಕಾರದ ಅನುದಾನದ ಸಹಾಯದಿಂದ ವಿವಿಧ ಮಾಕ್‌ ಸಂಖ್ಯೆಯಲ್ಲಿ ಕೆಲಸಮಾಡಬಲ್ಲ ಹಲವು ಗಾಳಿ ಸುರಂಗಗಳನ್ನು ಇಲ್ಲಿನ ತಂತ್ರಜ್ಞರ ಸಹಾಯದಿಂದ ದೇಶೀಯವಾಗಿ ಸಿದ್ಧಪಡಿಸಿದರು. ಐದು ವರ್ಷಗಳ ಅವಧಿಯಲ್ಲಿ ಹೆಚ್ಚು ವೇಗದಲ್ಲಿ ಕೆಲಸ ಮಾಡುವ ನಾಲ್ಕು ಗಾಳಿ ಸುರಂಗಗಳು  ಮತ್ತು ಕಡಿಮೆ ವೇಗಗಳಲ್ಲಿ ಕಾರ್ಯ ನಿರ್ವಹಿಸುವ ಮೂರು ಗಾಳಿ ಸುರಂಗಗಳನ್ನು ನಿರ್ಮಿಸಿದರು. ವಿದ್ಯಾರ್ಥಿಗಳು ಇವುಗಳನ್ನು ಬಳಸಿ ಪ್ರಾಯೋಗಿಕ ಅಧ್ಯಯನ ಮಾಡುವಂತೆ ಅಣಿಗೊಳಿಸಿದರು. ಆ ಮೂಲಕ ಮುಂದಿನ ೨-೩ ದಶಕಗಳಷ್ಟು ಕಾಲ, ಹಿಂದಿನ ಕಂತಿನಲ್ಲಿ ವಿವರಿಸಿದ್ದ ಫ್ಲೂ-ಇಡ್‌ ಡೈನಮಿಕ್ಸ್‌ ಸಂಬಂಧಿಸಿದ ವಿಷಯಗಳಾದ ಸಂಕ್ರಮಣ ಸ್ಥಿತಿ ಮತ್ತು ಹಿಮ್ಮುಖ ಸಂಕ್ರಮಣ(Reverse Transition) ಸ್ಥಿತಿ, ಮೂರುಆಯಾಮಗಳ ಎಲ್ಲೆ ಪದರಗಳು(3D Boundary Layers), ಅವುಗಳ ಬೇರ್ಪಪಡಿಸುವಿಕೆ (Separation), ಬೇರ್ಪಟ್ಟ ಹಾಳೆಹರಿವಿನ ಗುಳ್ಳೆಗಳು (Laminar separation bubbles), ವಾಲ್‌ ಜೆಟ್ಸ್‌ ಮತ್ತು ಎಲ್ಲೆ ಹರಿವಿನ ನಿಯಂತ್ರಣ (Wall jets & Boundary flow control), ಪ್ರಕ್ಷುಬ್ಧ ಹರಿವಿನಿಂದ ಪುನಃ ಹಾಳೆಹರಿವಾಗಿ ಬದಲಾಗುವ ಪ್ರಕ್ರಿಯೆ ಪುನರ್-ಪಟಲೀಕರಣ(Relaminarization) ಮುಂತಾದ ವಿಷಯಗಳಲ್ಲಿ ಸಂಶೋಧನೆಗಳು ಆದವು. ಈ ಬಗ್ಗೆ ಸತೀಶ್‌ ಅವರೇ ೧೯೮೧ ರಲ್ಲಿ ಒಂದು ಅವಲೋಕನ ಲೇಖನವನ್ನು ಬರೆದಿದ್ದಾರೆ.

ಸತೀಶ್ ಹೆಸರಿನಲ್ಲಿ ಪ್ರಕಟವಾದ ಸಂಶೋಧನ ಪ್ರಬಂಧಗಳ ಸಂಖ್ಯೆ ಬಹಳ ಕಡಿಮೆ. ಅವರೆಂದೂ ತಮ್ಮ ವಿದ್ಯಾರ್ಥಿಗಳ ಪ್ರಬಂಧಗಳಲ್ಲಿ ತಮ್ಮ ಹೆಸರನ್ನು ಹಾಕಿಕೊಳ್ಳುತ್ತಿರಲಿಲ್ಲ ಮತ್ತು ಅದಕ್ಕೆ ಶಿಷ್ಯರಿಗೆ ಅವಕಾಶವನ್ನೂ ನೀಡುತ್ತಿರಲಿಲ್ಲ. ಶಿಷ್ಯರ ಪ್ರಬಂಧಗಳನ್ನು ತಿದ್ದಿ ಒಪ್ಪ-ಓರಣ ಮಾಡಿಕೊಡುತ್ತಿದ್ದರು. ಈ ಮಾತಿಗೆ ಒಂದೇ ಒಂದು ಅಪವಾದ ಎಂದರೆ ೧೯೫೮ ರಲ್ಲಿ ಅವರು ತಮ್ಮ ಪ್ರೀತಿಯ ಶಿಷ್ಯ ಪ್ರೊ. ರೊದ್ದಂ ನರಸಿಂಹ ಅವರೊಟ್ಟಿಗೆ ಪ್ರಕಟಿಸಿದ  ಸಂಕ್ರಮಣ ಸ್ಥಿತಿಯಲ್ಲಿನ ಎಲ್ಲೆಪದರಗಳ ಹರಿವಿನ ಬಗ್ಗೆ ಸಂಶೋಧನಾ ಬರಹ.  ಎರಡು  ವಿಭಿನ್ನ ಆದರೆ ಹಿರಿದಾದ ಸಂಸ್ಥೆಗಳ((ಇಸ್ರೊ ಹಾಗೂ ಐ.ಐ.ಎಸ್ಸಿ)) ಆಡಳಿತ ಚುಕ್ಕಾಣಿ ಹಿಡಿದ ನಂತರ ಅವರಿಗೆ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಸಮಯ ಮತ್ತು ಅವಕಾಶ ಕಡಿಮೆಯಾಯಿತು. ಹಾಗಾಗಿ ತನ್ನ ಶಿಷ್ಯ ಪ್ರೊ.ರೊದ್ದಂ ನರಸಿಂಹ ಅವರಂತೆ ಆಡಳಿತಾತ್ಮಕ ಜವಾಬ್ದಾರಿಗಳ ಜೊತೆಗೇ ಹೆಚ್ಚು ಶೈಕ್ಷಣಿಕ ಸಂಶೋಧನಾ ಕೆಲಸಗಳನ್ನು ಮಾಡಲಾಗಲಿಲ್ಲ ಎಂಬ ಕೊರಗು ಅವರಲ್ಲಿ ಉಳಿದೇ ಇತ್ತು. ಅದೇನೇ ಇದ್ದರೂ ಸತೀಶ್ ಅವರು ಬೆಳೆಸಿದ ಪರಂಪರೆ ಸಾಮಾನ್ಯವಾದದ್ದಲ್ಲ. ಅವರ ಶಿಷ್ಯರು ಜಗತ್ತಿನ ಮತ್ತು ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ದುಡಿದು ಅತಿ ಎತ್ತರಕ್ಕೆ ಏರಿದವರಿದ್ದಾರೆ.

ಸತೀಶ್‌-ನಳಿನಿ ನಿರೋಡಿ ಅವರ ವಿವಾಹ

೧೯೫೦ ರ  ದಶಕದ ಪಾಠ ಮತ್ತು ಸಂಶೋಧನಾ ಚಟುವಟಿಕೆಗಳ ನಡುವೆ ಸತೀಶ್‌ ಅವರ ವೈಯಕ್ತಿಕ ಜೀವನದ ಬಹುಮುಖ್ಯ ತಿರುವೊಂದು ಒದಗಿ ಬಂದಿತ್ತು. ಏರೋಸ್ಪೇಸ್ ನಂತಹ ಮೆಕ್ಯಾನಿಕಲ್ ವಿಭಾಗಗಳಲ್ಲಿ ಪ್ರೀತಿ ಅರಳುವುದಿಲ್ಲ ಎಂಬ ಬೇಜಾರಿನ ತಮಾಷೆಯೊಂದಿದೆ!! ಆದರೆ ಸತೀಶ್ ಆ ಮಾತಿಗೆ ಅಪವಾದ. ೧೯೫೫ ರಲ್ಲಿ ಏರೋಸ್ಪೇಸ್‌ ವಿಭಾಗದ ಆವರಣದಲ್ಲಿ ಆದ ಸತೀಶ್ ಮತ್ತು ನಳಿನಿ ಅವರಿಬ್ಬರ ಮೊದಲ ಭೇಟಿ, ನಂತರದ ದಿನಗಳಲ್ಲಿ ಒಂದಾಗಿ ಬಾಳುವ ಮಟ್ಟಿಗೆ ಪ್ರೀತಿಯಾಗಿ ಚಿಗುರೊಡೆಯಿತು.

ಹಾಗೆ ನೋಡಿದರೆ ಸತೀಶ್ ಅವರು ನಮ್ಮ ಕರ್ನಾಟಕ ನೆಲದ ಅಳಿಯ. ಅವರ ಹೆಂಡತಿ ನಳಿನಿ ಅವರು ಮೂಲತಃ ಕುಂದಾಪುರ ಮೂಲದ ಕೊಂಕಣಿ ಮನೆಮಾತಿನ ಕುಟುಂಬದ ಹೆಣ್ಣುಮಗಳು. ಅಮೆರಿಕೆಗೆ ಹೋಗಿ, ಸೆಂಟ್ ಲೂಯಿಸ್ ನ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ , ಸೈಟೋಜೆನೆಟಿಕ್ಸ್(Cytogenetics) ವಿಷಯದಲ್ಲಿ ಅಧ್ಯಯನ ಮಾಡಿದ್ದ ಡಾಕ್ಟರೇಟ್ ಪಧವೀಧರೆ. ಅವರ ತಂದೆ ಬಿ.ಎಸ್.ನಿರೋಡಿ ಅವರು ಕೂಡ ವಿದೇಶದಲ್ಲಿ ವ್ಯಾಸಂಗ ಮಾಡಿ, ಕೆಲವು ಕಾಲ ಆಗಿನ ಮದರಾಸಿನಲ್ಲಿದ್ದು,  ನಂತರ ಐ.ಐ.ಎಸ್ ಸಿ ಯಲ್ಲಿ  ತೋಟಗಾರಿಕೆ ತಜ್ಞರಾಗಿ ದುಡಿಯುತ್ತಿದ್ದರು. ೧೯೫೫ ರಲ್ಲಿ ನಳಿನಿಯವರು ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರು. ಸತೀಶ್‌ ದೆಹಲಿಯಲ್ಲಿದ್ದ ತಮ್ಮ ತಂದೆ-ತಾಯಿಗಳಿಗೆ ತಮ್ಮ ಪ್ರೀತಿಯ ವಿಷಯ ತಿಳಿಸಿದಾಗ ಸಂತೋಷದಿಂದ ಒಪ್ಪಿದ ಅವರ ಪೋಷಕರು ನಳಿನಿಯವರನ್ನು ತಮ್ಮ ಹಳೆ-ದಿಲ್ಲಿಯ ಮನೆಯಲ್ಲೇ ಉಳಿಯುವಂತೆ ವ್ಯವಸ್ಥೆ ಮಾಡಿದ್ದರು. ಮುಂದೆ ೧೯೫೬ ರಲ್ಲಿ ಶಿಮ್ಲಾದಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಸಂಭ್ರಮದ ಮತ್ತು ಗೌರವಯುತ ಸಂಬಂಧಕ್ಕೆ, ಉತ್ತರ-ದಕ್ಷಿಣ ವೆಂಬ ಭೇದವಿರಲಿಲ್ಲ. ಜಾತಿ,ವರ್ಗ,ಭಾಷೆ,ಆಹಾರ ಬೇರೆ ಬೇರೆಯೆಂಬ ಸೀಮಿತ ಸಂಕೋಲೆಗಳಿರಲಿಲ್ಲ. ಒಟ್ಟಿನಲ್ಲಿ ಸತೀಶ್‌ ಅವರ ಸಾಧನೆಯಲ್ಲಿ ಮಾತೃ-ಹೃದಯಿ ಮತ್ತು ಉನ್ನತ ಶಿಕ್ಷಣ ಪಡೆದು ವಿದ್ಯಾವಂತರಾಗಿದ್ದ  ಶ್ರೀಮತಿ ನಳಿನಿ ಧವನ್‌ ಅವರ ಪಾಲು ಅಪಾರವಾದದ್ದು.

ಸತೀಶ್‌ ಧವನ್‌ ಮತ್ತು ನಳಿನಿ ನಿರೋಡಿ ದಂಪತಿಗಳ ಮದುವೆಯ ಚಿತ್ರ. (ಕೃಪೆ: ಡಾ.ಜ್ಯೋತ್ಸ್ನಾ ಧವನ್)

ಐ.ಐ.ಎಸ್ ಸಿ ನಿರ್ದೇಶಕರಾಗಿ ಅವರ ಸೇವೆ(೧೯೬೨-೧೯೮೧)

೧೯೬೨ ನೇ ಇಸವಿ ಸತೀಶ್‌ ಅವರ ಬದುಕಿನಲ್ಲಿ ಮತ್ತೊಂದು ನಿರ್ಣಾಯಕ ಘಟ್ಟ. ಈ ಮೊದಲೇ ತಿಳಿಸಿದಂತೆ ಈ ವರ್ಷ ಅವರನ್ನು ಅತ್ಯಂತ ಕಿರಿಯ ವಯಸ್ಸಿಗೇ ಐ.ಐ.ಎಸ್ ಸಿ ನಿರ್ದೇಶಕರಾಗಿ ನೇಮಿಸಲಾಯಿತು. ಈ ಸಂಬಂಧ ಶುರುವಿನಲ್ಲಿ ಅವರಿಗೆ ತುಂಬಾ ತೊಂದರೆಗಳಾದವು. ಕೆಲವರು ಈ ನೇಮಕ ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿದ್ದರು. ಆ ನಂತರ ಕೆಲವು ವರ್ಷಗಳ ನಂತರ ಪತ್ರಿಕೆಯೊಂದರಲ್ಲಿ ಸತೀಶ್‌ ಮನಸ್ಸಿಗೆ ಘಾಸಿ ಉಂಟು ಮಾಡಿದ ಲೇಖನವೊಂದು ಪ್ರಕಟವಾಗಿತ್ತು ಕೂಡ. ಆದರೂ ಹೋಮಿ ಭಾಭಾ ಅವರ ಮಾತಿಗೆ ಗೌರವ ಕೊಟ್ಟು ಆ ಹುದ್ದೆಯಲ್ಲಿ ಮುಂದುವರೆದು ನಿಷ್ಟೆಯಿಂದ ದುಡಿದರು.

ನಿರ್ದೇಶಕರಾದ ಮೊದಲ ಕೆಲವು ವರ್ಷಗಳ ತಿಕ್ಕಾಟ-ಘರ್ಷಣೆಗಳೆಲ್ಲ ತಿಳಿಯಾದ ನಂತರ, ಸತೀಶ್‌ ಸಂಸ್ಥೆಯ ಬೆಳವಣಿಗೆಗೆ ಬೇಕಾದ ಒಂದೊಂದೇ ದೃಢ ಹೆಜ್ಜೆಗಳನ್ನು ಇಡುತ್ತಾ ಹೋದರು. ವಿಭಾಗದ ಮುಖ್ಯಸ್ಥರ ಪದವಿಯನ್ನು ಬದಲಾಯಿಸಿ ವಿಭಾಗಗಳಿಗೆ ಛೇರ್ಮನ್‌ ಗಳನ್ನು ನೇಮಿಸಿದರು. ಈ ಹುದ್ದೆ ಸರದಿಯಲ್ಲಿ ಬೇರೆ ಬೇರೆ ಪ್ರೊಫೆಸರ್‌ ಗಳಿಗೂ ದೊರೆಯುವ ವ್ಯವಸ್ಥೆ ತಂದರು. ಇದರಿಂದ ಪಾಳೆಯಪಟ್ಟುಗಳಂತೆ ಇದ್ದ ವಿಭಾಗಗಳಲ್ಲಿ ಹೊಸ ಬದಲಾವಣೆಯ ಗಾಳಿ ಬೀಸಿತು.

ಐ.ಐ.ಎಸ್ ಸಿ ಆವರಣದಲ್ಲಿ  ನಿರ್ದೇಶಕರಾಗಿ ಸತೀಶ್‌ ಧವನ್‌ (ಕೃಪೆ: ಡಾ.ಜ್ಯೋತ್ಸ್ನಾ ಧವನ್)

ಕೇವಲ ಎರಡು ವಿಭಾಗಗಳೊಂದಿಗೆ ಶುರುವಾದ ಸಂಸ್ಥೆ, ಸತೀಶ್‌ ಅವರು ಅಧಿಕಾರ ವಹಿಸಿಕೊಂಡಾಗ ೧೪ ವಿಭಾಗಗಳನ್ನು ಹೊಂದಿತ್ತು. ಆದರೆ ಶುದ್ಧಗಣಿತ, ಸೈದ್ಧಾಂತಿಕ ಭೌತವಿಜ್ಞಾನ, ಇಕಾಲಜಿ, ವಾತಾವರಣ ವಿಜ್ಞಾನ, ಕಂಪ್ಯೂಟರ್‌ ವಿಜ್ಞಾನ, ಮಾಲಿಕ್ಯೂಲಾರ್‌ ಜೀವಿವಿಜ್ಞಾನ ಮುಂತಾದ  ಮೂಲಭೂತ ಮತ್ತು ನವೀನ ವಿಷಯಗಳ ಸಂಬಂಧಿಸಿದ ವಿಭಾಗಗಳು ಇರಲಿಲ್ಲ. ಇದನ್ನು ಬಹಳ ಬೇಗ ಅರಿತುಕೊಂಡ ಸತೀಶ್‌ ಹಲವು ಹೊಸ ವಿಭಾಗಗಳನ್ನು ವಿಶೇಷ ಮುತುವರ್ಜಿ ವಹಿಸಿ ಪ್ರಾರಂಭಿಸಿದರು. ಅವುಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು.

೧. ೧೯೬೪ ರಲ್ಲಿ ಕೇಂದ್ರೀಯ ಉಪಕರಣ ಮತ್ತು ಸೇವಾ ಪ್ರಯೋಗಾಲಯ (CISL-Central Instruments and Services Laboratory) ಸ್ಥಾಪನೆ

೨. ೧೯೬೮ ರಲ್ಲಿ , ಸೋವಿಯತ್‌ ಯೂನಿಯನ್‌ ಸಹಯೋಗದೊಂದಿಗೆ ಸ್ಕೂಲ್‌ ಆಫ್‌ ಆಟೋಮೇಷನ್‌ ನ ಸ್ಥಾಪನೆ.

೩. ೧೯೭೦ ರಲ್ಲಿ ಕಂಪ್ಯೂಟರ್‌ ವಿಭಾಗದ ಸ್ಥಾಪನೆ

೪. ೧೯೭೧ ರಲ್ಲಿ, ಐ.ಐ.ಎಸ್‌ಸಿ ಯ ಪ್ರಸಿದ್ಧ ಹಳೆ ವಿದ್ಯಾರ್ಥಿ, ಟ್ರಿಪಲ್‌ ಹೆಲಿಕ್ಸ್‌ ರಚನೆಯನ್ನು ಪರಿಚಯಿಸಿದ ಪ್ರೊ.ಜಿ.ಎನ್.ರಾಮಚಂದ್ರನ್‌ (ಅವರ ಭಾವಚಿತ್ರವೂ ಲೇಖನದ ಶುರುವಿನಲ್ಲಿ ನೀಡಿರುವ ಅಂಚೆಚೀಟಿಯ ಚಿತ್ರದಲ್ಲಿದೆ) ಅವರ ಮನವೊಲಿಸಿ, ಅವರು ಸಂಸ್ಥೆಯಲ್ಲಿ ಮಾಲೆಕ್ಯೂಲರ್‌ ಬಯೋಫಿಸಿಕ್ಸ್‌(Molecular BioPhysics) ವಿಭಾಗವನ್ನು ತೆರೆಯುವಂತೆ ವ್ಯವಸ್ಥೆ ಮಾಡಿದರು.

೫. ೧೯೭೨ ರಲ್ಲಿ ಪ್ರಸಿದ್ಧ ಭೌತವಿಜ್ಞಾನಿ ಇ.ಸಿ,ಜಿ.ಸುದರ್ಶನ್‌ (ನಿವೃತ್ತ ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾಯರ ಅಳಿಯ) ಅವರನ್ನು ಆಹ್ವಾನಿಸಿ, ಸೈದ್ಧಾಂತಿಕ ವಿಜ್ಞಾನಗಳ ಅಧ್ಯಯನಕ್ಕೆ ಕೇಂದ್ರವನ್ನು ಸ್ಥಾಪಿಸಿದರು. ಅದೇ ಸೆಂಟರ್‌ ಫಾರ್‌ ಥಿಯರಿಟಕಲ್‌ ಸ್ಟಡೀಸ್(CTS-Centre for Theoretical Sciences).‌ ಈ ಕೇಂದ್ರವು ಹಲವು ಶಿಸ್ತುಗಳನ್ನು ಒಳಗೊಳ್ಳುವ ಮತ್ತು ಅಂತರ್-ಶಿಸ್ತೀಯತೆಗೆ(Inter-disciplinary) ಅನುಗುಣವಾಗಿ ಕೆಲಸ ಮಾಡತೊಡಗಿತು. ಮುಂದೆ ಇದೇ ಸಂಸ್ಥೆಯ ಅಡಿಯಲ್ಲಿ ಹಲವಾರು ವಿಭಾಗಗಳು ಸ್ವತಂತ್ರ ಕೇಂದ್ರಗಳಾಗಿ ವಿಕಾಸ ಹೊಂದಿದವು. ಅವುಗಳಲ್ಲಿ ಮುಖ್ಯವಾದವು

  • ಸೆಂಟರ್‌ ಫಾರ್‌ ಹೈ-ಎನರ್ಜಿ ಫಿಸಿಕ್ಸ್‌ (CHEP-Centre for High Energy Physics)
  • ಮಾಧವ್‌ ಗಾಡ್ಗೀಳ್‌ ಅವರ ನೇತೃತ್ವದಲ್ಲಿ ಸೆಂಟರ್‌ ಫಾರ್‌ ಇಕಾಲಜಿಕಲ್‌ ಸೈನ್ಸ್‌ (CES – Centre for Ecological Sciences)
  • ಮಾನ್ಸೂನ್‌ ಮಾರುತಗಳು ಮತ್ತು ವಾತಾವರಣ ಅಧ್ಯಯನಕ್ಕೆ ಹೆಸರುವಾಸಿಯಾದ ಸೆಂಟರ್‌ ಫಾರ್‌ ಅಟ್ಮಾಸ್ಪೆರಿಕ್‌ ಅಂಡ್‌ ಓಸಿಯಾನಿಕ್‌ ಸೈನ್ಸ್‌ (CAOS – Centre for Atmospheric & Oceanic Sciences)
  • ಹೆಚ್.ಜಿ.ಶರತ್ಚಂದ್ರ (ಕರ್ನಾಟಕದ ನಿವೃತ್ತ ಹೈಕೋರ್ಟ್‌ ನ್ಯಾಯಮೂರ್ತಿ ಹೊಂಬೇಗೌಡರ ಮಗ) ಅವರ ನೇತೃತ್ವದಲ್ಲಿ ಮಾನವ ಜೆನಿಟಿಕ್ಸ್‌ ಸಂಬಂಧಿತ ಸಂಶೋಧನಾ ಚಟುವಟಿಕೆಗಳು.

೬. ೧೯೭೪ ರಲ್ಲಿ ಪಿ.ಹೆಚ್ ಡಿ ಪದವಿಗಾಗಿ ಗ್ಯಾಜುಯೇಟ್‌ ಕೋರ್ಸುಗಳನ್ನು ಹಲವು ವಿರೋಧಗಳ ನಡುವೆ ಆರಂಭಿಸಿದರು. ಕ್ಯಾಲ್‌ಟೆಕ್‌ ನ ಸಂಸ್ಕೃತಿಯಾದ ಸಂಶೋಧನೆ ಮತ್ತು ಭೋದನೆ ಸಮ್ಮಿಳಿತ ವ್ಯವಸ್ಥೆ ಇಲ್ಲಿಯೂ ಬರುವಂತೆ ಶ್ರಮಿಸಿದರು.

೭. ಅದೇ ವರ್ಷ ಪ್ರಸಿದ್ಧ ಎಲೆಕ್ಟ್ರೋಲಿಟಿಕ್‌ ಕೆಮಿಸ್ಟ್ರಿ ತಜ್ಞ ಅಮೂಲ್ಯ ಕೆ.ಎನ್.ರೆಡ್ಡಿ ಅವರಿಗೆ ಬೆಂಬಲವಾಗಿ ನಿಂತು, ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ಗ್ರಾಮೀಣ ಪ್ರದೇಶಗಳ ಉನ್ನತಿಗೆ ಸಹಾಯವಾಗಲೆಂಬ ಧ್ಯೇಯದೊಂದಿಗೆ ಆಸ್ತ್ರ (ASTRA – Application of Science & Technology for Rural Areas) ಸಂಸ್ಥೆಯನ್ನು ಪ್ರಾರಂಭಿಸಿದರು.

೮. ಇದೇ ಅಮೂಲ್ಯ ಕೆ.ಎನ್.ರೆಡ್ಡಿ ಅವರ ಕನಸಿನ ಇನ್ನೊಂದು ಕೂಸಾದ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯನ್ನು(KSCST – Karnataka State Council for Science & Technology ) ೧೯೭೫ ರಲ್ಲಿ ಸ್ಥಾಪನೆಗೆ ಕಾರಣರಾದರು. ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನ ಸಂಸ್ಥೆಗಳು, ಆಯಾ ಪ್ರದೇಶದ ಅವಶ್ಯಕತೆಗಳಿಗೆ ಸ್ಪಂದಿಸುತ್ತಾ ಬೆಳೆಯಬೇಕೆಂಬ ಆಶಯದೊಂದಿಗೆ ಶುರುವಾದ ಮೊದಲ ರಾಜ್ಯಮಟ್ಟದ ಸಂಸ್ಥೆ ಇದು. ಮುಂದೆ ಹಲವು ರಾಜ್ಯಗಳಲ್ಲಿ ಈ ಮಾದರಿಯನ್ನು ಅನುಸರಿಸಿ ಸ್ಟೇಟ್‌ ಕೌನ್ಸಿಲ್‌ ಗಳು ಪ್ರಾರಂಭಗೊಂಡವು

೯. ಅದಾಗಲೇ ಕಾನ್ಪುರ ಐ.ಐ.ಟಿ. ಯಲ್ಲಿ ಹೆಸರು ಮಾಡಿದ್ದ ಪ್ರೊ.ಸಿ.ಎನ್.ಆರ್.ರಾವ್‌ ಅವರೂ ಕೂಡ ಬೆಂಗಳೂರಿಗೆ ಬರುವಂತೆ ನೋಡಿಕೊಂಡ ಫ್ರೊ.ಸತೀಶ್, ಅವರ ನೇತೃತ್ವದಲ್ಲಿ ೧೯೭೫ ರಲ್ಲಿ ಸಾಲಿಡ್‌ ಸ್ಟೇಟ್‌ ಅಂಡ್‌ ಸ್ಟ್ರಕ್ಚರಲ್‌ ಕೆಮಿಸ್ಟ್ರಿ ವಿಭಾಗ(SSCU- Solid State & Structural Chemistry)  ಮತ್ತು ೧೯೭೮ ರಲ್ಲಿ ಮೆಟೀರಿಯಲ್ಸ್‌ ರೀಸರ್ಚ್‌ ಸೆಂಟರ್‌ (MRC- Materials Research Centre) ಇವೆರೆಡೂ ಶುರು ಆಗುವಲ್ಲಿ ಮಹತ್ವದ ಪಾತ್ರ ವಹಿಸಿದರು.

ಸಮಾರಂಭವೊಂದರಲ್ಲಿ ಪ್ರೊ.ಸತೀಶ್‌ ಧವನ್‌, ಪ್ರೊ.ಸಿ.ಎನ್.ಆರ್.ರಾವ್‌ ಮತ್ತು ಪ್ರೊ.ಅಮೂಲ್ಯ ಕೆ.ಎನ್.ರೆಡ್ಡಿ (ಕೃಪೆ: ಕರೆಂಟ್‌ ಸೈನ್ಸ್‌ ಪತ್ರಿಕೆ)

ಸತೀಶ್‌ ಅವರ ಶಿಷ್ಯ ವಾತ್ಸಲ್ಯ

ಸತೀಶ್‌ ಅವರು ಈ ಎಲ್ಲಾ ಜವಾಬ್ದಾರಿಗಳ ನಡುವೆಯೂ ೬೦ ಮತ್ತು ೭೦ ರ ದಶಕದಲ್ಲಿ ತಮ್ಮ ಸಂಶೋಧನಾ ಚಟುವಟಿಕೆಗಳು ಸಂಪೂರ್ಣ ನಿಂತು ಹೋಗದಿರಲೆಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಅವರು ಸಬ್ಬತು ರಜೆ ಮೇರೆಗೆ ಮರಳಿ ಕ್ಯಾಲ್‌ಟೆಕ್‌ ಗೆ ಹೋಗಿದ್ದು ಕೂಡ ಈ ಕಾರಣದಿಂದಲೇ. ಅವರ ಶಿಷ್ಯ ವಾತ್ಸಲ್ಯದ ರೀತಿ, ನಮ್ಮ ಕನ್ನಡ ಜಾಯಮಾನದ ಟಿ.ಎಸ್.ವೆಂಕಣ್ಣಯ್ಯ, ತ.ಸು.ಶಾಮರಾಯರು, ಜಿ.ಪಿ.ರಾಜರತ್ನಂ, ಪ್ರಭುಶಂಕರ್ ಮುಂತಾದ ಶಿಷ್ಯ ಪ್ರೀತಿಯ ಗುರುಗಳ ಹಾಗೇ ಇತ್ತು. ಅದಕ್ಕೆ ಒಂದು ಉದಾಹರಣೆ ಕನ್ನಡಿಗರೇ ಆದ ಅವರ ವಿದ್ಯಾರ್ಥಿ ಶ್ರೀ ತುಮಕೂರು ಎಸ್.‌ ಪ್ರಹ್ಲಾದ್.‌ ಪ್ರಹ್ಲಾದ್‌ ರ ಡಾಕ್ಟರೇಟ್‌ ಆಧ್ಯಯನದ ಕೊನೆಯ ದಿನಗಳಲ್ಲಿ, ಅವರ ತಂದೆಗೆ ಕ್ಯಾನ್ಸರ್‌ ನಿಂದ ಹುಷಾರಿಲ್ಲದ ಕಾರಣ ಅವರು ನೋವಿನಲ್ಲಿದ್ದಾಗ, ಮನೆಗೆ ಪರಿಚಯದ ಪ್ರೊಫೆಸರ್‌ ಒಬ್ಬರನ್ನು ಕಳುಹಿಸಿ ಆಗ ಭಾರತದಲ್ಲಿ ಅಪರೂಪವಾಗಿದ್ದ ಕೀಮೋಥೆರಪಿ ಬಗ್ಗೆ ಚರ್ಚಿಸುವಂತೆ ಮಾಡಿದ್ದರಂತೆ ಸತೀಶ್!! ಈ ಪ್ರಯತ್ನಗಳು ಫಲವಾಗದೇ ಅವರ ತಂದೆ ತೀರಿಕೊಂಡಾಗ, ತಮ್ಮ ಶಿಷ್ಯನಿಗೆ ಬರೆದ ಸಾಂತ್ವನ ಹೇಳುವ ಪತ್ರ ಕೆಳಗೆ ನೀಡಿದೆ ನೋಡಿ. ಆ ಪತ್ರ ನಿಜಕ್ಕೂ ನನ್ನ ತಂದೆಯ ಸಾವಿನ ನೋವನ್ನು ಭರಿಸುವ ಶಕ್ತಿ ನೀಡಿತು ಎಂದು ಡಾ.ಟಿ.ಎಸ್.ಪ್ರಹ್ಲಾದ್‌ ತುಂಬಾ ಅಕ್ಕರೆಯಿಂದ ನೆನೆಯುತ್ತಾರೆ.

ಪ್ರೊ. ಸತೀಶ್‌ ಡಾ. ಟಿ.ಎಸ್.ಪ್ರಹ್ಲಾದ್ ಅವರಿಗೆ ಬರೆದ ಪತ್ರ (ಕೃಪೆ- ಡಾ. ಟಿ.ಎಸ್.ಪ್ರಹ್ಲಾದ್ )

ಉಪಸಂಹಾರ

ಪ್ರೊ. ಸತೀಶ್‌ ಧವನ್‌ ೧೯ ವರ್ಷಗಳ ದೀರ್ಘ ಅವಧಿಗೆ ನಿರ್ದೇಶಕರಾಗಿ ಕೆಲಸ ಮಾಡಿ ೧೯೮೧ ರಲ್ಲಿ ನಿವೃತ್ತಿ ಹೊಂದಿದರು. ಅವರೊಬ್ಬರೇ ಇಷ್ಟು ದೀರ್ಘ ಕಾಲ ಸಂಸ್ಥೆಯನ್ನು ಮುನ್ನಡೆಸಿದವರು. ಇಸ್ರೊ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಅವರ ಸಾಧನೆಯ ಪ್ರಭಾವಳಿಯಲ್ಲಿ, ಅವರು ಐ.ಐ.ಎಸ್ ಸಿ ಯನ್ನು ಮರುರೂಪಿಸಿದ ಸಾಧನೆ ಸ್ವಲ್ಪ ಮಂಕಾಗಿದೆ. ಸುಮಾರು ೪೦ಕ್ಕೂ ಹೆಚ್ಚು ವಿಭಾಗಗಳುಳ್ಳ ಐ.ಐ.ಎಸ್ ಸಿ ಯ ಇಂದಿನ ಸ್ಥಿತಿಗೆ, ವಿಸ್ತಾರ ಮತ್ತು ವೈವಿಧ್ಯತೆಗೆ ಸತೀಶ್‌ ಅವರು ಬಹಳಷ್ಟು ಕಾರಣರು. ಐ.ಐ.ಎಸ್ ಸಿ ಯ ಆವರಣದಲ್ಲಿ ಒಮ್ಮೆ ಅಡ್ಡಾಡಿದವರಿಗೆ ಅಲ್ಲಿನ ಹಸಿರಿನ ವಾತಾವರಣ ಮನಸೂರೆಗೊಳ್ಳದೇ ಇರದು. ಆ ತುಂಬು ಹಸಿರಿನ ಪ್ರಕೃತಿಯ ಹಿಂದೆ ಪ್ರೊ.ಸತೀಶ್‌ ಅವರ ಕುಟುಂಬದ ಪ್ರೀತಿ ಮತ್ತು ಪರಿಶ್ರಮವಿದೆ. ಐ.ಐ.ಎಸ್ ಸಿ ಆವರಣದಷ್ಟೇ ಸತೀಶ್‌ ಕೊಡುಗೆಗಳು ಮತ್ತು ಅವರ ಕುಟುಂಬದ ನೆನಪುಗಳು ಹಸಿರಾಗಿರಬೇಕು ಕೂಡ.

ಮುಂದಿನ ಕಂತಿನಲ್ಲಿ ಅವರ ಇಸ್ರೊ ಪಯಣವನ್ನು ಸಂಭ್ರಮಿಸೋಣ.

(ಈ ಲೇಖನದಲ್ಲಿ ತಮ್ಮ ಬದುಕಿನ ಘಟನೆಯನ್ನು ಸೇರಿಸಲು ಒಪ್ಪಿಗೆ ನೀಡಿ, ಲೇಖವನ್ನು ಓದಿ, ಅತ್ಯಮೂಲ್ಯ ಸಲಹೆ ನೀಡಿದ  ಪ್ರೊ.. ಸತೀಶ್‌ ಧವನ್‌ ಅವರ ಶಿಷ್ಯ ಮತ್ತು ಎನ್.ಎ.ಎಲ್.‌ ಸಂಸ್ಥೆಯ ನಿವೃತ್ತ ನಿರ್ದೇಶಕರಾದ ಡಾ.ಟಿ.ಎಸ್.ಪ್ರಹ್ಲಾದ್‌ ಅವರಿಗೆ ವಿಶೇಷ ವಂದನೆಗಳು)

ನಮಸ್ಕಾರಗಳು.

ಆಕಾಶ್‌ ಬಾಲಕೃಷ್ಣ.

ಹೆಚ್ಚಿನ ಓದಿಗೆ:

  1. S. Dhawan. 1982. “A glimpse of fluid mechanics research in Bangalore 25 years ago.” In Surveys in Fluid Mechanics, eds. R. Narasimha and S.M. Deshpande, printed for the Indian Academy of Sciences by Macmillan India Press, pp. 1-15.
  2. S. Dhawan and R. Narasimha. 1958. “Some properties of boundary layer flow during the transition from laminar to turbulent motion.” J. Fluid Mech. 3, 418-436.
  3. Satish Dhawan by K R Sreenivasan, Bhavana Magazine, Issue 3, July 2020
  4. Satish by Jyotsna Dhawan, Bhavana Magazine, Issue 3, July 2020
  5. “A Real Patriot”: Roddam Narasimha on Satish Dhawan, Bhavana Magazine, Issue 3, July 2020
  6. Special Section: Satish Dhawan Birth Centenary, Current Science, Vol 119, No.9, 10 NOVEMBER 2020

This Post Has One Comment

  1. S Y Somashekhar

    Nice article

Leave a Reply