You are currently viewing ಭೌಗೋಳಿಕ ಅರಿವನ್ನು ಹಿಗ್ಗಿಸಿದ ಕಾಳು ಮೆಣಸು: Black pepper (Piper nigrum)

ಭೌಗೋಳಿಕ ಅರಿವನ್ನು ಹಿಗ್ಗಿಸಿದ ಕಾಳು ಮೆಣಸು: Black pepper (Piper nigrum)

ಕಾಳು ಮೆಣಸು ಅಥವಾ ಕರಿ ಮೆಣಸು ಅಥವಾ ಮೆಣಸಿನಕಾಳು, ಸಂಬಾರು ಪದಾರ್ಥಗಳಲ್ಲೆಲ್ಲಾ ಅತಿ ಹೆಚ್ಚು ಬೇಡಿಕೆಯ ಉತ್ಪನ್ನ. ಅಪ್ಪಟ ಭಾರತೀಯವಾದ ಅದರಲ್ಲೂ ದಕ್ಷಿಣ ಭಾರತದ, ಪ್ರಮುಖವಾಗಿ ಮಲೆನಾಡಿನ ಅತ್ಯಂತ ಪ್ರಮುಖವಾದ ಬೆಳೆ. ಪಶ್ಚಿಮ ಘಟ್ಟಗಳ ನೆಲದಿಂದ ಪ್ರಮುಖವಾಗಿ ಮಲಬಾರು ಅಥವಾ ಕೇರಳದ ತೀರದಿಂದ ಪಶ್ಚಿಮದ ನೆಲಕ್ಕೆ ಘಾಟಿನ ಪರಿಮಳವನ್ನು ಸಹಸ್ರಾರು ವರ್ಷಗಳ ಕಾಲ ಬೀರುತ್ತಾ ಇರುವ ಸಸ್ಯದ ಉತ್ಪನ್ನ. ಯುರೋಪಿಯನ್ನರಿಗೆ ಭಾರತವನ್ನು ಹುಡುಕಿಕೊಂಡು ಬರಲು ಪ್ರೇರೇಪಿಸಿದ ಬೆಳೆ. ಯೂರೋಪಿನ ಹಿಂದಿನ ನಾಗರಿಕರಾದ ರೋಮನ್‌ ಮತ್ತು ಗ್ರೀಕರಿಂದಲೂ ಐರೋಪ್ಯರಿಗೆ ನಾಲಿಗೆಯ ರುಚಿಗೆ ಹಿತವಾದ ಖಾರವನ್ನು ಬೆರೆಸಿದ್ದೇ ಭಾರತೀಯ ಮೆಣಸಿನ ಕಾಳು. ಮಧ್ಯಪ್ರಾಚ್ಯದ ನೆಲದ ಮೂಲಕ ಸರಬರಾಜಾಗುತ್ತಿದ್ದು ನಡುವೆ ರಾಜಕೀಯ ಕಾರಣಗಳಿಂದ ಅಡ್ಡಿಯಾಗಿ ಭಾರತೀಯ ನೆಲಕ್ಕೆ ಜಲಮಾರ್ಗದ ಹುಡುಕಾಟಕ್ಕೆ ಮೂಲ ಪ್ರೇರಣೆ ಕಾಳು “ಮೆಣಸು”. ಜೊತೆಗಿನ ಇತರೇ ಸಂಬಾರು ಪದಾರ್ಥಗಳೂ ಸೇರಿದ್ದರೂ ಮೆಣಸಿನ ಕಾಳಿನ ಮಹತ್ವಕ್ಕೆ ಹೆಚ್ಚೇ ಬೆಲೆ, ಆದ್ದರಿಂದಲೇ ಇದು King of Spices!  

       ಕೇವಲ ಸುಮಾರು 4-5 ಮಿ.ಮೀ ಗಾತ್ರದ ದುಂಡನೆಯ ಗಟ್ಟಿ ಕಾಳು. ಅದೊಂದು ಅರೆ-ಮಾಗಿದ ಹಣ್ಣು. ಕೆಂಪು ಮಿಶ್ರಿತ ಕಪ್ಪು ಬಣ್ಣದ ಒಂದೇ ಬೀಜದ ಹಣ್ಣು. ಸಂಪೂರ್ಣ ಮಾಗಿದ ಹಣ್ಣಾದರೆ ಬಿಳಿಯ ಕಾಳುಗಳು. ಅರೆ ಮಾಗಿದ ಹಸಿರು ಮೆಣಸಿನ ಕಾಳೂ ಸಹಾ ಸಿಗುತ್ತದೆ, ಮಲಬಾರ್‌ ತೀರದ ನೆಲ ಇದರ ತವರೂರು. ಪಶ್ಚಿಮ ಘಟ್ಟಗಳ ಉದ್ದಕ್ಕೂ ಹಬ್ಬಿರುವ ಇದರ ತವರು ನೆಲದಿಂದ ಮುಂದೆ ಉಷ್ಣವಲಯದ ಇತರೆಡೆಗೂ ಹಬ್ಬಿದೆ. ಇಡಿಯಾದ ಕಾಳನ್ನು ಪುಡಿ ಮಾಡಿ ಬಳಸುವುದು ಭಾರತೀಯತೆಗೆ ಸುಮಾರು 4000 ವರ್ಷಗಳಿಂದಲೂ ತಿಳಿದ ಸಂಗತಿ. ನಿತ್ಯದ ಅಡುಗೆಗಳಲ್ಲಿ ಇರಬಹುದು ಅಥವಾ ವಿವಿಧ ಚಿಕಿತ್ಸೆಗಳಲ್ಲಿ ಆಗಬಹುದು. ಅಡುಗೆಯಲ್ಲಿ ಖಾರದ ಪರಿಮಳವಾಗಿದ್ದರೆ ಚಿಕಿತ್ಸೆಗಳಲ್ಲಿ ಅದರ ಪರಿಣಾಮದಿಂದ ಉಪಶಮನಗಳ ತಿಳಿವಾಗಿ ಬಳಸಲಾಗುತ್ತಿತ್ತು. ಇತ್ತೀಚೆಗೆ ನಿತ್ಯದ ಅಡುಗೆಗಳಲ್ಲಿ ದಕ್ಷಿಣ ಅಮೆರಿಕ ಮೆಣಸಿನಕಾಯಿಯು ಪರ್ಯಾಯವಾಗಿದ್ದರೂ ಪೊಂಗಲ್‌ ಮುಂತಾದ ಕೆಲವೊಂದು ಅಡುಗೆಗೆ ಕಾಳು ಮೆಣಸು ಇದ್ದೇ ಇರುವುದುಂಟು.  

       ಸಸ್ಯ ವೈಜ್ಞಾನಿಕವಾಗಿ ಕಾಳು ಮೆಣಸನ್ನು ಪೈಪರ್‌ ನಿಗ್ರಮ್‌ (Piper nigrum) ಎಂದು ಹೆಸರಿಸಲಾಗಿದೆ. ಇದು ಒಂದು ಬಳ್ಳಿ. ತಾಂಬೂಲ ಅಥವಾ ಪಾನ್‌ಗಳಲ್ಲಿ ಬಳಸುವ ವೀಳ್ಯದ ಎಲೆಯಂತಹ ಎಲೆಗಳನ್ನೇ ಹೊಂದಿದೆ. ಬಳ್ಳಿಯೂ ಅಷ್ಟೇ. ವೀಳ್ಯದೆಲೆಯ ಬಳ್ಳಿಯಂತೆಯೇ! ಎರಡೂ ಸಂಬಂಧಿಗಳೇ! ಎರಡೂ ಪೈಪರೆಸಿಯೇ (Piperaceae) ಎಂಬ ಒಂದೇ ಕುಟುಂಬವನ್ನು ಸೇರಿವೆ. ಕರಿ-ಮೆಣಸು ಅಥವಾ ಕಾಳು ಮೆಣಸು ಅದರ ಪರಿಮಳಕ್ಕೆ ಹಾಗೂ ಔಷಧಿಯ ಗುಣಗಳಿಗೆ ಜಗತ್ತಿನಾಧ್ಯಂತ ಹೆಸರಾಗಿದೆ. ಮಾತ್ರವಲ್ಲ ಅತ್ಯಂತ ಹೆಚ್ಚು ಬೆಲೆಯ ಮಾರಾಟದ ವಹಿವಾಟನ್ನು ಹೊಂದಿರುವ ಸಂಬಾರು ಪದಾರ್ಥ. ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಬಳಸುವ ದೇಶ ನಮ್ಮದು. ನಮ್ಮದೇ ನೆಲದ ತವರಿನದಾದರೂ ಅನ್ಯ ದೇಶಗಳನ್ನು ಹದಿನಾಲ್ಕು- ಹದಿನಾರನೆಯ ಶತಮಾನದ ನಂತರ ಹೊಕ್ಕು ಅಲ್ಲಿ ಉತ್ಪಾದನೆಯಿಂದ ಹೆಸರನ್ನು ಕೊಟ್ಟಿದೆ. ವಿಯಟ್ನಾಂಗೆ ಹದಿನೈದನೆಯ ಶತಮಾನದಲ್ಲಿ ತಲುಪಿದೆ ಎಂಬ ಊಹೆಯಿದ್ದರೂ, ಹದಿನಾರನೆಯ ಶತಮಾನದ ನಂತರ ಪ್ರಮುಖ ಬೆಳೆಯಾಗಿದ್ದು, ಇಂದು ಜಗತ್ತಿನ ಮೂರನೆಯ ಒಂದು ಭಾಗದಷ್ಟನ್ನು ಆ ಒಂದೇ ದೇಶ ಉತ್ಪಾದಿಸುತ್ತಿದೆ. ಬ್ರೆಜಿಲ್‌ ಮತ್ತು ಇಂಡೋನೇಷಿಯಾದ ನಂತರದ ನಾಲ್ಕನೆಯ ಸ್ಥಾನದ ಉತ್ಪಾದನೆಯನ್ನು ಭಾರತವು ಹೊಂದಿದೆ. ಅವುಗಳಲ್ಲದೆ ಶ್ರೀಲಂಕಾ, ಚೀನಾ, ಮಲೇಷಿಯಾಗಳೂ ಸಹಾ ಉತ್ಪಾದನೆಯ ದೃಷ್ಟಿಯಿಂದ ಮುಂಚೂಣಿಯಲ್ಲಿವೆ.

       ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಸ್ಯದ ಪರಾಗಸ್ಪರ್ಶಕ್ರಿಯೆಯ ಬಗ್ಗೆ ಮೆಣಸಿನ ಕಾಳಿನ ಬಗ್ಗೆ ರೈತರಲ್ಲಿ ವಿಚಿತ್ರವಾದ ನಂಬಿಕೆಯಿದೆ. ಕಾಳು ಮೆಣಸು ಚೆನ್ನಾಗಿ ಇಳುವರಿ ಬರಲು ಪರಾಗಸ್ಪರ್ಶವಾಗಬೇಕಷ್ಟೇ? ಮೆಣಸಿನ ಪರಾಗಗಳು ಸಾಗಲು ನೀರನ್ನು ಮಾಧ್ಯಮವನ್ನಾಗಿ ಬಳಸುತ್ತವೆ ಎಂಬದು ಒಂದು ಮಿಥ್ (ಕೇವಲ ನಂಬಿಕೆ! ತಿಳಿವಳಿಕೆಯಲ್ಲದ್ದು ಪುರಾಣದಂತೆ) . ಇದೇ ನಂಬಿಕೆಯಿಂದ ನೀರನ್ನು ಎರಚುವ ಪದ್ಧತಿಯೂ ಇದೆ. ಆದರೆ ಇಂಡಿಯನ್‌ ಸ್ಪೈಸ್‌ ಸಂಶೋಧನಾ ಸಂಸ್ಥೆಯು ಇದನ್ನು ಅಧ್ಯಯನಕ್ಕೆ ಒಳಪಡಿಸಿ ಮೆಣಸು ಸಂಪೂರ್ಣ ಸ್ವಕೀಯ ಪರಾಗಸ್ಪರ್ಶದ ಸಸ್ಯವೆಂದು, ನೀರಿನಿಂದ ಪರಾಗಗಳೇನೂ ತಲುಪುವುದಿಲ್ಲವೆಂದು ಸಾಬೀತು ಮಾಡಿದೆ.

       ಇದಕ್ಕೆ ಪೆಪ್ಪರ್‌ ಎನ್ನುವ ಹೆಸರು ಬಂದದ್ದು ಸಂಸ್ಕೃತ ಮೂಲದಿಂದ. ಪಿಪ್ಪಲಿ ಎನ್ನುವ ಮತ್ತೊಂದು ಔಷಧೀಯ ಸಸ್ಯದಿಂದ ಇದು ರೂಪಾಂತರಿತವಾಗಿ ಲ್ಯಾಟಿನ್‌ ಸೇರಿ ಇಂಗ್ಲೀಷಿಗೆ ಬಂದು ಪೆಪ್ಪರ್‌ ಆಗಿದೆ. ಹಾಗಾಗಿಯೇ ಕಾಯಿ ಮೆಣಸನ್ನೂ ಸಹಾ ಐರೋಪ್ಯರು “ಚಿಲ್ಲಿ ಪೆಪ್ಪರ್‌” ಎಂದೇ ಕರೆದಿದ್ದಾರೆ. ಕಾಯಿ ಮೆಣಸು ಜಗತ್ತನ್ನು ಆವರಿಸಿದ್ದು 15ನೆಯ ಶತಮಾನದ ನಂತರವಷ್ಟೇ! ಆದರೆ ಅದಕ್ಕೂ ಹಿಂದಿನಿಂದಲೂ ಶತಮಾನಗಳ ಕಾಲ ಏಷಿಯಾ ಹಾಗೂ ಯೂರೋಪಿನಲ್ಲಿ ಜನಪ್ರಿಯವಾಗಿದ್ದೇ ಮೆಣಸು. ಹನ್ನೆರಡು-ಹದಿನಾಲ್ಕನೆಯ ಶತಮಾನದ ಮಧ್ಯಪ್ರಾಚ್ಯ ದೇಶಗಳ ರಾಜಕೀಯ ಬೆಳವಣಿಗೆಗಳು ಭಾರತಕ್ಕೆ ಜಲಮಾರ್ಗವನ್ನು ಕಂಡುಹಿಡಿಯುವ ಒತ್ತಾಸೆಗೆ ಯೂರೋಪನ್ನು ಒತ್ತಾಯಿಸಿದ್ದೇ ಕಾರಣವಾಗಿ ಜಾಗತಿಕ ಭೌಗೋಳಿಕ ಅರಿವು ಹೆಚ್ಚಿತು.

       ಭಾರತಕ್ಕೆ ಜಲಮಾರ್ಗವನ್ನು ಸಂಪರ್ಕಿಸುವ ಹುಡುಕಾಟದ ಯಾನಗಳು ಆರಂಭವಾಗುವ ಮೊದಲು ಮೆಡಟರೇನಿಯನ್‌ ಮಾರ್ಗದ ನೆಲದ ಸಂಪರ್ಕವನ್ನು ಅವಲಂಬಿಸಿದ “ರೇಷಿಮೆಯ ಹಾದಿ” (ಸಿಲ್ಕ್‌ ರೂಟ್‌- Silk Route) ಬಳಕೆಯಲ್ಲಿತ್ತು. ಒಟ್ಟು 6500 ಕಿ.ಮೀ ಉದ್ದದ ಈ ಮಾರ್ಗದ ವಹಿವಾಟು ಯೂರೋಪು-ಏಶಿಯಾ-ಆಫ್ರಿಕಾವನ್ನು ಸಂಪರ್ಕದಲ್ಲಿಟ್ಟಿದ್ದವು. ಮುಂದೆ ವಾಸ್ಕೋಡಿಗಾಮ ಆಫ್ರಿಕಾದ ಭೂಶಿರದ ಮಾರ್ಗವಾಗಿ ಕ್ಯಾಲಿಕಟ್‌ ತಲುಪಿ ಹೊಸ ಭೌಗೋಳಿಕ ಅರಿವು ಹಾಗೂ ರಾಜಕೀಯ ಬೆಳವಣಿಗೆಗೆ ಕಾರಣವಾದನು. ಅತ್ತ ಸ್ಪಾನಿಷರು ಕೊಲಂಬಸ್ಸನ ನೇತೃತ್ವದಿಂದ ಭಾರತವನ್ನು ಹುಡುಕುತ್ತಾ ಅಮೆರಿಕಾ ತಲುಪಿ ಹೊಸತೊಂದು ಜಗತ್ತನ್ನೇ ಹಳೆಯ ಖಂಡಗಳಿಗೆ ತೆರೆದಿಟ್ಟನು. ಮತ್ತೆ ಸ್ಪೇಯಿನಿನ ನೆರವಿನಿಂದಲೇ ಸಾಗರಯಾನ ಹೊರಟ ಪರ್ಡಿನ್ಯಾಂಡ್‌ ಮೆಗಲ್ಲನ್‌ ನೇತೃತ್ವದ ಹಡಗು ಭೂಗೋಳವನ್ನೇ ಒಂದು ಸುತ್ತು ಸುತ್ತಿ ಆಸ್ಟ್ರೇಲಿಯಾ ಇತ್ಯಾದಿಯ ಅರಿವಿನ ಜೊತೆಗೆ “ಫೆಸಿಪಿಕ್‌ ಸಾಗರ” ದಾಟಿ ಬಂದು ಆ ಮೂಲಕ ಹೊಸತೊಂದು ನೆಲದ ಬೆಳಕನ್ನೇ ತೆರೆದಿಟ್ಟಿತು. ಇದಕ್ಕೆ ಆ ಪಯಣ ತೆಗೆದುಕೊಂಡ ಒಟ್ಟು ಸಾಗರಯಾನದ ಕಾಲಾವಧಿ ಬರೊಬ್ಬರಿ ಮೂರು ವರ್ಷಗಳು! ಅಚ್ಚರಿಯ ಸಂಗತಿ ಎಂದರೆ ಇಷ್ಟೆಲ್ಲಾ ಸಾಗರ ಸುತ್ತಾಟಗಳ ಹಿಂದೆ ಪುಟ್ಟದೊಂದು ಮೆಣಸಿನ ಕಾಳು ಮತ್ತು ಅದರ ಜೊತೆಗಾರ ಸಾಂಬಾರು ಪದಾರ್ಥಗಳು ಇದ್ದವು ಎಂಬುದು.

       ಎಷ್ಟೆಲ್ಲಾ ಬದಲಾವಣೆಗಳ ಹಿಂದಿರುವ ಈ ಮೆಣಸಿನ ಕಾಳನ್ನು “ಸಂಬಾರು ಪದಾರ್ಥಗಳ ರಾಜ – King of Spices” ಎಂದು ಕರೆಯುತ್ತಾರೆ. ಮೆಣಸು ರಾಜ-ಏಲಕ್ಕಿ ರಾಣಿ! ಮೆಣಸಿನಲ್ಲಿರುವ ಪೈಪರಿನ್‌ (Piperine) ಎನ್ನುವ ಅಲ್ಕಲೈನ್‌ ರಾಸಾಯನಿಕವು ಅದರ ಘಾಟಿನ ಪರಿಮಳಕ್ಕೆ ಕಾರಣ. ಇದು ಮೆಣಸಿನ ಕಾಯಿಯ ಖಾರಕ್ಕೆ ಕಾರಣವಾದ ಕ್ಯಾಪ್ಸೈಸಿನ್‌ (Capsaicin) ನಂತೆ ಅಲ್ಲ! ಹಾಗಾಗಿಯೇ ಭಿನ್ನವಾದ ಪರಿಮಳಯುಕ್ತವಾದ ಖಾರ ಅಥವಾ ಘಾಟು ಕರಿ ಮೆಣಸಿನದು. ಸಹಜವಾಗಿ ಅನುಭವಿಸುವ ಘಾಟು ಅಥವಾ ಖಾರದ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಅಥವಾ ಭಿನ್ನ ರುಚಿಯನ್ನು ಅನುಭವಿಸುವ ನಾಲಿಗೆಯ ಹಿತದಲ್ಲಿ ಕಾಯಿ ಒಗ್ಗಿವೆ ನಿಜ! ಆದರೂ ಇಂದಿಗೂ ಮೆಣಸಿನ ಕಾಳು ಪೈಪರಿನ್‌ ಕಾರಣದಿಂದ ತನ್ನ ಘನತೆಯನ್ನು ಭಿನ್ನವಾಗಿಸಿಕೊಂಡಿದೆ. ಈ ಪೈಪರಿನ್‌ ರಾಸಾಯನಿಕವನ್ನು ಡಚ್‌ ವೈದ್ಯ ಹಾಗೂ ರಸಾಯನಿಕ ತಜ್ಞ ಹ್ಯಾನ್ಸ್‌ ಕ್ರಿಶ್ಚಿಯನ್‌ ಆರ್ಸ್ಟೆಡ್‌ ಎಂಬಾತ ರಸಾಯನಿಕವಾಗಿ ಬೇರ್ಪಡಿಸಿ ಕಂಡುಹಿಡಿದರು. ಮೆಣಸಿನಕಾಯಿಗಳಲ್ಲಿ ಇರುವ ಹಾಟ್‌ ಅಥವಾ ಬಿಸಿ ತರುವ ಬಗೆಯು ಕಾಳುಗಳಲ್ಲಿ ಇಲ್ಲ. ಇಲ್ಲಿರುವುದು ಪರಿಮಳದ ಘಾಟು! ಇದರ ಚಟುವಟಿಕೆಯು ನಮ್ಮ ನಾಲಿಗೆ ಹಾಗೂ ನಂತರ ದೇಹದೊಳಗೆ ಉಂಟಾಗಲು ಬಿಸಿ ಜೊತೆಗೆ ಆಮ್ಲದ ಸಾಹಚರ್ಯ ಎರಡೂ ಇರುತ್ತದೆ.  

       ಪೈಪರಿನ್‌ ರಾಸಾಯನಿಕಕ್ಕೆ ಹಲವಾರು ಔಷಧೀಯ ಗುಣಗಳಿವೆ. ನಮ್ಮ ಇಮ್ಯೂನ್‌ ವ್ಯವಸ್ಥೆಯನ್ನು ತೀವ್ರಗೊಳಿಸುವ ಬಗ್ಗೆಯೂ ಸಂಶೋಧನೆಗಳು ನಡೆದಿವೆ. ಜೊತೆಗೆ ಆಂಟಿಆಕ್ಸಿಡೆಂಟ್‌, ಉರಿಯೂತ ನಿವಾರಕ ಗುಣಗಳನ್ನೂ ಹಾಗೆಯೇ ಹಲವು ಎಂಜೈಮುಗಳ ಮೇಲೆ ಪರಿಣಾಮ ಬೀರುವುದನ್ನೂ ಅಧ್ಯಯನಗಳು ಸಾಬೀತು ಮಾಡಿವೆ. ಕೆಮ್ಮು ಅಸ್ತಮಾ ನಿವಾರಣೆಯಲ್ಲಿ ಪೈಪರಿನ್‌ ಅನ್ನು ವ್ಯಾಪಕವಾಗಿ ಬಳಸಬಹುದಾಗಿದೆ. ಆದರೆ ಈ ಎಲ್ಲಾ ಗುಣ ವಿಶೇಷಣಗಳು ಮೆಣಸಿನ ಕಾಳನ್ನು ಸಂಶ್ಲೇಷಣೆ ಮಾಡುವ ಪದ್ಧತಿಗಳಲ್ಲಿ ಏರು ಪೇರು ಆಗಬಹುದಾಗಿದೆ.

       ನಮ್ಮ ಬಳಕೆಯಲ್ಲಿನ ಕರಿ ಮೆಣಸು ಅಲ್ಲದೆ ಬಿಳಿಯ ಮೆಣಸು, ಹಸಿರು ಮೆಣಸಿನ ಕಾಳು ಹಾಗೂ ಕೆಂಪು ಕಾಳುಗಳೂ ಇರುತ್ತದೆ. ಇವುಗಳಲ್ಲಿ ಬಿಳಿಯ ಮೆಣಸು ಮಾತ್ರವೇ ಸಂಪೂರ್ಣ ಬಲಿತ ಕಾಯಿ! ಉಳಿದೆಲ್ಲವೂ ಬಲಿಯದ ಆದರೆ ಸಂಶ್ಲೇಷಿಸಿದ ಕಾಯಿಗಳು. ಕರಿಮೆಣಸನ್ನು ಬಲಿಯದ ಕಾಯಿಗಳನ್ನು ಕೊಯಿಲು ಮಾಡಿ ಬಿಸಿಯಾದ ನೀರಿನಲ್ಲಿ ತುಸುವೇ ಬೇಯಿಸಿ ಸಂಶ್ಲೇಷಿಸಲಾಗುತ್ತದೆ. ತುಸುವೇ ಬೇಯಿಸಿದಾಗ ಕಾಯಿಯ ಜೀವಿಕೋಶಗಳ ಗೋಡೆಯು ಒಡೆಯುತ್ತದೆ. ಅದನ್ನೇ ವೇಗದ ಕ್ರಿಯೆಗೆ ಒಳಪಡಿಸಿ ಅದು ಕಂದು ಬಣ್ಣಕ್ಕೆ ತಿರುಗುವ ಸಹಜವಾದ ಕ್ರಿಯೆಯನ್ನು ಉತ್ತೇಜಿಸಲಾಗುತ್ತದೆ. ನಂತರ ಒಣಗಿಸಿದಾಗ ಕೆಂಪು ಮಿಶ್ರಿತ ಕಪ್ಪು ಬಣ್ಣಕ್ಕೆ ತಿರುಗುತ್ತವೆ.

       ಹಸಿರು ಮೆಣಸು ಕಾಳಿನಲ್ಲಿ ಕಾಯಿಯು ಇನ್ನೂ ಹಸಿರಾಗಿರುವಾಗಲೇ ಕೊಯಿಲು ಮಾಡಿ ಹಸಿರನ್ನು ಉಳಿಸಿಕೊಳ್ಳುವ ಹಾಗೆ ಸಂಶ್ಲೇಷಿಸಲಾಗುತ್ತದೆ. ಹಾಗೇಯೇ ಕೆಂಪು ಕಾಯಿಗಳನ್ನೂ ಸಹಾ ಕೆಂಪು ಬಣ್ಣವು ಒಣಗಿಯೂ ಉಳಿದುಕೊಳ್ಳುವಂತೆ ಪ್ರೋತ್ಸಾಹಿಸಲಾಗುತ್ತದೆ.

       ಆದರೆ ಬಿಳಿಯ ಮೆಣಸು ಮಾತ್ರ ಸಂಪೂರ್ಣ ಮಾಗಿದ ಕಾಯಿಗಳು.  ಬಿಳಿ ಕಾಳನ್ನು ಪಡೆಯಲು ಕಾಯಿಯ ಮೇಲಿನ ಸಿಪ್ಪೆಯನ್ನು ತೊಳೆದು ತೆಗೆಯಲಾಗುತ್ತದೆ. ಇದಕ್ಕೆ ರೆಟ್ಟಿಂಗ್‌(Retting) – ನೆನೆಯಿಟ್ಟು ಕಳೆಯಿಸುವಿಕೆ – ಎಂಬ ವಿಧಾನವನ್ನು ಬಳಸಲಾಗುತ್ತದೆ. ಈ ರೆಟ್ಟಿಂಗ್‌ ಅಲ್ಲಿ ಕಾಯಿಯ ಮೇಲ್ಮೈಯನ್ನು ಸೂಕ್ಷ್ಮ ಜೀವಿಗಳು ಹಾಗೂ ತೇವಾಂಶದ ಸಹಾಯದಿಂದ ಕಳಿಯುವಂತೆ ಮಾಡಲಾಗುತ್ತದೆ. ಒಂದು ಬಗೆಯಲ್ಲಿ ಉಪ್ಪಿನಕಾಯಿ ಹಾಕುವಂತೆ! ಆಗ ಹೊರಮೈಯ ಕವಚವು ಕಳಿತು ಬಿಳಿಚಿಕೊಳ್ಳುತ್ತದೆ. ಅದೇ ಒಣಗಿದಾಗ ಬಿಳಿಯ ಕಾಳಾಗಿ ಕಾಣುತ್ತದೆ. ಇದೊಂದು ರೀತಿಯಲ್ಲಿ ಕಾಳನ್ನು ಕೃತಕವಾಗಿ ನಗ್ನವಾಗಿಸುವ ಕ್ರಿಯೆ! ಇದು ಚೀನಿ ಪದ್ಧತಿಯ ಅಡುಗೆಗಳಲ್ಲಿ ಸಹಜವಾದ ಬಳಕೆಯಿದೆ. ಜೊತೆಗೆ ಥಾಯ್‌ ಹಾಗೂ ಕೆಲವು ಯೂರೋಪಿನ ತಿನಿಸುಗಳಲ್ಲಿಯೂ ಬಿಳಿಯ ಮೆಣಸು ಬಳಸಲಾಗುತ್ತದೆ.

       ಮೆಣಸು ನಮ್ಮ ನೆಲದಲ್ಲಿ, ಅಡಿಕೆ, ಕಾಫಿ, ಕೋಕೊ, ಏಲಕ್ಕಿ, ದಾಲ್ಚಿನ್ನಿ, ಕೋಕಂ ಮುಂತಾದ ಬೆಳೆಗಳ ಸಹಜವಾದ ಸಂಗಾತಿ! ನಮ್ಮ ತೋಟಗಳು ಹಾಗೆ ಇರುತ್ತವೆ.  ಆದರೆ, ಭಾರತದಿಂದಲೇ ಪರಿಚಯಗೊಂಡ ವಿಯಟ್ನಾಂ ಅಲ್ಲಿ ತೋಟಗಳು ಮಾತ್ರ ಭಿನ್ನವಾದವು. ನಮ್ಮಲ್ಲಿ ಸಹಜವಾದ ಬೆಳೆಯ ಕ್ರಮವನ್ನು ಅನುಸರಿಸಿದರೆ, ವಿಯಟ್ನಾಮಿಗರು ಒಂದೇ ಬೆಳೆಯ ಕ್ರಮವನ್ನು ಅನುಸರಿಸಿದ್ದಾರೆ. ನಾವು ಅಡಿಕೆಯಲ್ಲಿ ಹಬ್ಬು ಬಳ್ಳಿಯಾಗಿ ಅಥವಾ ಕಾಫಿಯಲ್ಲಿ ನೆರಳಿನ ಮರಗಳಿಗೆ ಹಬ್ಬು ಬಳ್ಳಿಯಾಗಿ ಬೆಳೆಸುತ್ತೇವೆ. ವಿಯಟ್ನಾಂ ದೇಶವು ಬೆಳೆಯುವುದೇ ಹೊರ ದೇಶಕ್ಕೆ ರಫ್ತು ಮಾಡಲು! ನಾವು ಬಹು ಪಾಲು ಬೆಳೆಯುದೇ ತಿನ್ನಲು! ಸ್ವಲ್ಪ ರಫ್ತು ಮಾಡಿದರೂ ತಿನ್ನುವುದೇ ಹೆಚ್ಚು. ರಫ್ತು ಮಾಡುವ ವಹಿವಾಟಿನಲ್ಲಿ ಜಾಗತಿಕವಾಗಿ ಜನಪ್ರಿಯತೆಗಳಿಸಿದ ನಮ್ಮ ಕನ್ನಡ ನಾಡಿನ ರಾಣಿಯೊಬ್ಬಾಕೆ “ಮೆಣಸಿನ ಕಾಳಿನ ರಾಣಿ” ಎಂದೇ ಪೋರ್ಚುಗೀಸರಿಂದ ಮೆಚ್ಚುಗೆ ಪಡೆದ ಬಗ್ಗೆ ಹೇಳಿ ಮೆಣಸಿನ ಪರಿಮಳದ ಸಂಗತಿಗಳನ್ನು ಮುಗಿಸುತ್ತೇನೆ.

       ಶಿವಮೊಗ್ಗಾ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿವ ಶರಾವತಿ ನದಿಯ ದಡದ ಗೇರುಸೊಪ್ಪಾದಲ್ಲಿ ಆಳ್ವಿಕೆ ನಡೆಸಿದ “ರಾಣಿ ಚೆನ್ನಭೈರಾದೇವಿ”. ಆಕೆಯು 1550ರ ಸುಮಾರಿನಲ್ಲಿ ವಿಜಯನಗರದ ಸಾಮಂತರಾಗಿದ್ದ ಸಾಳುವ ರಾಜಮನೆತನಕ್ಕೆ ಸೇರಿದ ರಾಣಿ. ಭಾರತೀಯ ಮಹಿಳೆಯರಲ್ಲಿ ಅತೀ ದೀರ್ಘಕಾಲ (54 ವರ್ಷಗಳು) ರಾಜ್ಯಭಾರ ಮಾಡಿದ ರಾಣಿ. ಜೈನ ಮನೆತನದ ರಾಣಿ  ಆಗ ಪಶ್ಚಿಮಘಟ್ಟಗಳ ನೆಲದಲ್ಲಿ ಮೆಣಸಿನ ವಹಿವಾಟಿನಲ್ಲಿ ಪೋರ್ಚುಗೀಸರ ದಬ್ಬಾಳಿಕೆಯನ್ನು ಹಿಮ್ಮೆಟ್ಟಿದ್ದರು. ಎರಡು ಬಾರಿ ಯುದ್ದಗಳಲ್ಲಿ ಅವರನ್ನು ಸೋಲಿಸಿ ಮುಂದೆ ಅವರಿಂದಲೇ ‘Raina de Pimenta’ — The Pepper Queen  ಎಂದು ಕರೆಯಿಸಿಕೊಂಡವಳು. ಮೆಣಸಿನ ಕಾಳಿನ ರಾಣಿ ಎಂದವರು ಕರೆಯಲು ಕಾರಣ ಮೆಣಸಿನ ವಹಿವಾಟನ್ನು ಜಾಣತನದಿಂದ ಆಕೆ ನಿಭಾಯಿಸುತ್ತಿದ್ದ ರೀತಿಗೆ!

       ಜಗತ್ತಿನ ಭೂಗೋಳದ ಅರಿವನ್ನು ಹಿಗ್ಗಿಸಿ, ರಾಜಕೀಯವಾಗಿ ಎಂದೂ ಕಾಣದ ಬದಲಾವಣೆಯನ್ನೂ ಜಾಗತಿಕವಾಗಿಸಲು ಕಾರಣವಾದ ಸಂಬಾರು ಪದಾರ್ಥಗಳ ರಾಜನಾದ “ಪುಟ್ಟ ಕಾಳು” ಮೆಣಸು! ಅದರ ಎಲ್ಲಾ ಆರಂಭಿಕ ವಹಿವಾಟಿನ ಲಾಭವನ್ನು ಹಿಡಿತದಲ್ಲಿಟ್ಟ ಕನ್ನಡದ ರಾಣಿಯನ್ನು ಮೆಣಸಿನಕಾಳಿನ ರಾಣಿಯಾಗಿಸಿದ್ದೂ ಅದೇ ಪುಟ್ಟ ಕಾಳು ಮೆಣಸು!

ನಮಸ್ಕಾರ

ಡಾ.‌ ಟಿ. ಎಸ್‌. ಚನ್ನೇಶ್

 ಹೆಚ್ಚಿನ ಓದಿಗೆ:

The Cultural History of Plants, 2005. Sir Ghillean Prance and Mark Nesbitt (Eds.) Routledge Publishers, 270 Madison Avenue. New York,

Muralidhar Meghwal and Goswamy, T.K. Piper nigrum and piperine: an update. Phytotherapy  Research. 2013. Aug;27(8):1121-30.  doi: 10.1002/ptr.4972. 

This Post Has One Comment

  1. ಶಾಂತಕುಮಾರಿ ಸಿ ಆರ್ ಪಿ ಆನಂದಪುರಂ ಸಾಗರ ತಾಲೂಕು ಶಿವಮೊಗ್ಗ ಜಿಲ್ಲೆ

    Sz ಹೌದು ಸರ್ ನಾನು ಭೇಟಿ ನೀಡುವ ಶಾಲೆಗಳ ರೈತರ ಮನೆಯ ಅಂಗಳದಲ್ಲಿ ಕಾಳುಮೆಣಸಿನ ಒಣಗಿಸುವಿಕೆ ಹದವರಿತು ಮಾಡುವ ವಿಧಾನ ಇವುಗಳೆಲ್ಲವನ್ನು ನೋಡಿದ್ದೇನೆ

Leave a Reply