Skip to content
CPUS
  • Home
  • About CPUS
    • Overview
    • Leadership
    • History
  • Programmes
    • Natural Sciences
    • Engineering & Technology
    • Health Sciences
    • Mathematics & Economic Science
    • Philosophy, Epistemology & Knowledge Dynamics
    • Social Science & Humanities
    • Education & Psychological Sciences
    • Communication & Linguistics
    • Computation, Robotics & Artificial intelligence
    • Food, Farming & Ecology
  • Outreach
    • Posts
    • News & Events
    • Nobel Series
  • Resources
    • Publications
    • Downloads
    • Useful Links
  • Donate
  • Contact
  • Toggle website search
Menu Close
  • Home
  • About CPUS
    • Overview
    • Leadership
    • History
  • Programmes
    • Natural Sciences
    • Engineering & Technology
    • Health Sciences
    • Mathematics & Economic Science
    • Philosophy, Epistemology & Knowledge Dynamics
    • Social Science & Humanities
    • Education & Psychological Sciences
    • Communication & Linguistics
    • Computation, Robotics & Artificial intelligence
    • Food, Farming & Ecology
  • Outreach
    • Posts
    • News & Events
    • Nobel Series
  • Resources
    • Publications
    • Downloads
    • Useful Links
  • Donate
  • Contact
  • Toggle website search

ಭೂಮಿಯ ಮೇಲ್ಮೈಯ ಉಲ್ಕಾಕುಳಿಗಳು -Impact Craters

  1. Home>
  2. ಭೂಮಿಯ ಮೇಲ್ಮೈಯ ಉಲ್ಕಾಕುಳಿಗಳು -Impact Craters

ಮಣ್ಣು ವಿಜ್ಞಾನದ ವಿದ್ಯಾರ್ಥಿಯಾದ ನನಗೆ ನೆಲದ ಮೇಲ್ಮೈ ಮತ್ತು ಅದರ ಮೇಲೆ ಆಗಿರುವ, ಆಗುತ್ತಿರುವ ಮತ್ತು ಆಗುವ ಪರಿಣಾಮಗಳ ಬಗ್ಗೆ ತುಂಬಾ ಕುತೂಹಲ. ನನ್ನ ಸ್ನಾತಕೋತ್ತರ ಪದವಿ ಅಧ್ಯಯನದಲ್ಲಿ ಮಣ್ಣಿನ ಭೌಗೋಳಿಕ ಅಧ್ಯಯನದ ಸಂದರ್ಭದಲ್ಲಿ ಮೊಟ್ಟ ಮೊದಲ ಬಾರಿಗೆ ಅರಿಜೊನಾದಲ್ಲಿರುವ ಉಲ್ಕೆಯು ಅಪ್ಪಳಿಸಿ ಉಂಟಾದ ಕುಳಿಯ ಬಗ್ಗೆ ಓದಿದ್ದೆ. ವಿವರಗಳೇನೂ ಹೆಚ್ಚಾಗಿ ತಿಳಿದಿರಲಿಲ್ಲ. ಅಚ್ಚರಿ ಎಂಬಂತೆ ಅಮೆರಿಕದ ಮಾಂಟ್ಗೊಮರಿಗೆ ಬಂದ ಮೊದಲ ವಾರದಲ್ಲೇ ಅಲ್ಲಿಯೇ ಹತ್ತಿರವೇ ಇರುವ ವೆಟುಂಪ್ಕಾ ಎಂಬಲ್ಲಿ ಒಂದು ಉಲ್ಕೆಯ ಕುಳಿಯಿರುವ ವಿಚಾರ ತಿಳಿಯಿತು. ಅದು ಅಲ್ಲಿಂದ ಕೇವಲ 25 ಕಿ.ಮೀ ದೂರ ಅಷ್ಟೇ. ಅಮೆರಿಕದಲ್ಲಿ ನಾನು ಅತ್ಯಂತ ಕುತೂಹಲದಿಂದ ಭೇಟಿಯಿತ್ತ ಪಟ್ಟಣ ವೆಟುಂಪ್ಕಾ (Wetumpka). ಆ ಊರಿಗೆ ಹೊಂದಿಕೊಂಡಂತೆಯೇ ತೀರಾಹತ್ತಿರದಲ್ಲೇ ಉಲ್ಕೆಯ ಅಪ್ಪಳಿಸುವಿಕೆಯಿಂದಾದ ಒಂದು ಕುಳಿಯಿದೆ (Impact Crater). ಕುಳಿಯ ಏರಿಯು ಊರಿನ ಬೆನ್ನ ಹಿಂದೆಯೇ ಕಾಣುತ್ತದೆ. ಸುಮಾರು 85 ದಶಲಕ್ಷ ವರ್ಷಗಳ ಹಿಂದೆ ಉಂಟಾಗಿರುವ ಕುಳಿಯ ಏರಿಯನ್ನು ಹಾಯ್ದು ಒಳಹೊಕ್ಕು ಹೆಚ್ಚೂ ಕಡಿಮೆ ಕುಳಿಯ ಕೇಂದ್ರವನ್ನು ತಲುಪಬಹುದು. ವೆಟುಂಪ್ಕಾ ಉಲ್ಕಾಕುಳಿಯನ್ನು ಒಳಹೊಕ್ಕು ಅರಿತು ನೋಡಿ ಬರಲು ಸ್ವಂತ ತಿಳಿಯುವಂತಹಾ (View Point) ಸುಮಾರು ಏಳು ಕೇಂದ್ರಗಳನ್ನು ಗುರುತಿಸಿ ಅಲ್ಲಿ ಮಾಹಿತಿಯನ್ನು ಪ್ರದರ್ಶಿಸಿದ್ದಾರೆ. ಅಂತಹಾ View Point ರ ಚಿತ್ರ ಈ ಕೆಳಗಿನದು.

ವೆಟುಂಪ್ಕಾ “ಪ್ರಕೃತಿ ಸೌಂದರ್ಯದ ನಗರ” ಎಂದು ಹೆಸರಾಗಿರುವ ನಗರ. ಈ ಊರಿಗೆ ವೆಟುಂಪ್ಕಾ ಎಂಬ ಹೆಸರು ಅಲ್ಲಿನ ಸ್ಥಳಿಯ ಮೂಲ ನಿವಾಸಿಗಳ ಭಾಷೆ ಮಸ್ಕಗೀ ಕ್ರೀಕ್‌ (Muscogee Creek)ನ ಜುಮ್ಮೆನಿಸುವ ನೀರು (Rumbling Waters) ಎಂಬರ್ಥದ ವೆ-ವಯು-ಟುಂ-ಕಾ (we-wautum-cau) ಎಂಬುದರಿಂದ ವಿಕಾಸವಾಗಿದೆ. ಊರನ್ನು ಬಳಸಿಕೊಂಡು ಒಳಗೇ ಹರಿದು ಹಾಯುತ್ತಿರುವ ಕೂಸಾ ನದಿ (Coosa River)ಯ ಬೋರ್ಗೆರೆಯುವ ಸದ್ದಿನಿಂದ ಹಾಗೆ ಮೂಲ ನಿವಾಸಿಗಳು ಕರೆಯುತ್ತಿದ್ದರು. ಕಳೆದ ಶತಮಾನದ 1967ರಲ್ಲಿ ವೆಟುಂಪ್ಕಾ ಹತ್ತಿರವೇ ಇದೇ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟುವವರೆಗೂ ಹಲವಾರು ಮೈಲಿಗಳವರೆಗೂ ನದಿಯ ನೀರಿನ ಹರಿವಿನ ಬೋರ್ಗರೆತ ಕೇಳುತ್ತಿತ್ತಂತೆ. ಕೂಸಾ ನದಿಯು ಅಲಬಾಮಾ ರಾಜ್ಯದ ಪ್ರಮುಖ ನದಿಯಾದ ಅಲಬಾಮಾ ನದಿಯ ಉಪನದಿ.

ಭೂಮಿಯ ಮೇಲೆ ಉಲ್ಕೆಯಿಂದಾದ ಕುಳಿಗಳಿರುವ ಬಗ್ಗೆ ಸಹಜವಾಗ ಅಚ್ಚರಿ ಹಾಗೂ ಅನುಮಾನಗಳಿವೆ. ಇಡೀ ಭೂಮಿಯಲ್ಲಿ ನೂರಾರು ಕುಳಿಗಳು ಇರುವುದಲ್ಲದೆ ನಮ್ಮ ದೇಶದಲ್ಲೂ ಉಲ್ಕಾ ಕುಳಿಗಳಿವೆ. ನನ್ನ ವೆಟುಂಪ್ಕಾ ಉಲ್ಕಾಕುಳಿಯ ಭೇಟಿಯ ಚಿತ್ರ ನೋಡಿ, ನೆಲದ ಮೇಲೆಯೇ ಚಂದ್ರಯಾನವಾ ಎಂದು ಗೆಳೆಯರೊಬ್ಬರು ಪ್ರಶ್ನಿಸಿದ್ದರು. ಕಾರಣವೇನೆಂದರೆ ಚಂದ್ರನ ಮೇಲಿನ ಕುಳಿಗಳ ಬಗ್ಗೆ ನಮಗೆಲ್ಲಾ ತಿಳಿದ ಸಾಮಾನ್ಯ ತಿಳಿವಳಿಕೆ. ಒಂದು ಸಾಮಾನ್ಯ ದೂರದರ್ಶಕದಿಂದಲೂ ಚಂದ್ರನ ಕುಳಿಗಳನ್ನು ಕಾಣಬಹುದು. ಭೂಮಿಯ ಮೇಲೆ ಜ್ವಾಲಾಮುಖಿಗಳಿಂದ ಆದ ಕುಳಿಗಳು (Volcanic Craters) ತುಂಬಾ ಸಹಜವಾದವು. ಉಲ್ಕೆಯಿಂದ ಡಿಕ್ಕಿಯಾಗಿ ಆದದ್ದಾದರೂ ಹೇಗೆ? ಅಲ್ಲದೆ ಎಂದೋ ಆಗಿರುವ ಉಲ್ಕೆಯ ಕುಳಿಗಳನ್ನು ಇತ್ತೀಚೆಗೆ ಗುರುತಿಸಿರುವುದಾದರೂ ಹೇಗೆ? ಜ್ವಾಲಾಮುಖಿ ಕುಳಿಗಳಿಂದ ಈ ಉಲ್ಕೆಯ ಡಿಕ್ಕಿಯಿಂದ ಆಗಿರುವ ಕುಳಿಗಳನ್ನು ಭಿನ್ನವಾಗಿ ಗುರುತಿಸುವುದಾದರೂ ಹೇಗೆ? ಇಂತಹ ಕುತೂಹಲದ ಪ್ರಶ್ನೆಗಳಿಗೆ ಉತ್ತರಗಳು ಇಲ್ಲಿವೆ. ಜೊತೆಗೆ ಭೂವಿಜ್ಞಾನದ ಇತಿಹಾಸದಲ್ಲಿ ಈ ಕುಳಿಗಳ ಅರಿವಿನ ಪ್ರಮುಖವಾದ ಹಾಗೂ ಗುರುತರವಾದ ಹಾದಿಯನ್ನೂ, ಜೊತೆಗೆ ನಮ್ಮ ದೇಶದಲ್ಲೂ ಇರುವ ಉಲ್ಕೆಯ ಕುಳಿಗಳನ್ನೂ ಪರಿಚಯಿಸುವ ಉದ್ದೇಶವಿದೆ.

ಸಾಮಾನ್ಯವಾಗಿ ಜ್ವಾಲಾಮುಖಿಗಳ ಕುಳಿಗಳ (Volcanic Craters) ಬಗ್ಗೆ ಶಾಲಾ ವಿಜ್ಞಾನದ ಪಾಠಗಳಲ್ಲಿ ಅಥವಾ ಸುದ್ದಿಗಳಲ್ಲಿ ಓದಿರುತ್ತೇವೆ. ಆದರೆ ನೆಲದಲ್ಲೂ ಉಂಟಾಗಿರುವ ಉಲ್ಕಾಕುಳಿ (Impact Crater)ಗಳ ಬಗೆಗಿನ ಸುದ್ದಿಗಳು ಒಂದರ್ಥದಲ್ಲಿ ಹೊಸದಾದವು ಮತ್ತು ವಿಜ್ಞಾನದ ಚರ್ಚೆಯಲ್ಲೂ ತೀರಾ ತಡವಾಗಿ ಒಪ್ಪಿತವಾದಂತಹವು. ಜ್ಞಾಲಾಮುಖಿಗಳ ಚಟುವಟಿಕೆಗಳು ನಿರಂತರವಾದ ಕ್ರಿಯೆಗಳಾಗಿದ್ದು ಅವುಗಳು ಉಂಟುಮಾಡಿರುವ ಕುಳಿಗಳು ಹೆಚ್ಚು ಪರಿಚಿತವಾಗಿವೆ. ಆದರೆ ಉಲ್ಕಾಕುಳಿಗಳು ಅಪರೂಪದವು ಎಂದು ಅಂದುಕೊಂಡಿದೇವೆ ಅಷ್ಟೇ! ಇಡೀ ಭೂಜಗತ್ತಿನಲ್ಲಿ ಒಟ್ಟು ಸುಮಾರು 190ಕ್ಕೂ ಹೆಚ್ಚು ಉಲ್ಕಾಕುಳಿ (Impact Crater)ಗಳು ಇವೆಯೆಂದು ಅಧ್ಯಯನಗಳಿಂದ ಅರಿಯಲಾಗಿದೆ. ನಮ್ಮ ಭಾರತದ ದೇಶದಲ್ಲೂ ಸುಮಾರು ನಾಲ್ಕು ಉಲ್ಕಾ ಕುಳಿಗಳು ಇರುವುದನ್ನು ದಾಖಲಿಸಲಾಗಿದೆ. ಇಡೀ ಜಗತ್ತಿನಾದ್ಯಂತ ಹರಡಿಕೊಂಡಿರುವ ಇವುಗಳಲ್ಲಿ ಕೆಲವು 1 ಕಿಮೀಗಿಂತಾ ಕಡಿಮೆ ವ್ಯಾಸದವು ಕೆಲವು 1,10, ಮತ್ತು 100 ಕಿಮೀ ಗಿಂತಲೂ ದೊಡ್ಡದಾದ ವ್ಯಾಸದ ಕುಳಿಗಳು. ಹೆಚ್ಚೂ ಕಡಿಮೆ ಎಲ್ಲಾ ಖಂಡಗಳಲ್ಲೂ ಈ ಉಲ್ಕಾಕುಳಿಗಳನ್ನು ಕಾಣಬಹುದಾಗಿದೆ. ಅವುಗಳ ಭೌಗೋಳಿಕ ಹರಹು ಮತ್ತು ವಿಸ್ತಾರದ ನಕ್ಷೆ ಮುಂದಿನದು.

ಉಲ್ಕಾಕುಳಿ (Impact Crater)ಗಳು ಗಟ್ಟಿಯಾದ ಮೇಲ್ಮೈಯನ್ನು ಹೊಂದಿದ ಗ್ರಹಗಳು, ಉಪಗ್ರಹಗಳನ್ನು ತುಂಬಾ ಭಾರವಾದ, ಅಗಲವಾದ ಉರಿಯುತ್ತಿರುವ ಉಲ್ಕೆಗಳು ತುಂಬಾ ಹೆಚ್ಚಿನ ವೇಗದಿಂದ ಅಪಾರ ಶಕ್ತಿಯಿಂದ ಅಪ್ಪಳಿಸುವುದರಿಂದ ಉಂಟಾಗಿವೆ. ಈ ಉಲ್ಕೆಗಳು, ತುಂಬಾ ಅಗಾಧವಾದವು ಮತ್ತು ಅಪಾರ ಶಕ್ತಿಯನ್ನು ಒಳಗೊಂಡಂತಹವು. ತುಂಬಾ ದೂರದಿಂದ ವಿಪರೀತ ಶಕ್ತಿಯಿಂದ ಅಪ್ಪಳಿಸುವುದರಿಂದ ದೊಡ್ಡ ಅಣು ಬಾಂಬು ಸ್ಪೋಟಿಸಿದಂತೆ ಪರಿಣಾಮ (Impact) ಉಂಟಾಗುವುದರಿಂದ ಅವು Impact Crater – ಉಲ್ಕೆಯ ಪರಿಣಾಮದ ಕುಳಿ -ಉಲ್ಕಾಕುಳಿಗಳಾದವು. ಜೋರಾಗಿ ಅಪ್ಪಳಿಸುವುದರಿಂದ ಕುಳಿಯಾಗಿದ್ದಲ್ಲದೆ, ಕಂದಕದಿಂದೆದ್ದ ಕಲ್ಲು-ಮಣ್ಣು ಸುತ್ತಲೂ ಏರಿಯನ್ನು ಉಂಟುಮಾಡುತ್ತದೆ. ಈ ಏರಿ ಅಥವಾ ಕಂದಕಸ ದುತ್ತಲಿನ ದಿಬ್ಬವು ಏರು ಮಣ್ಣಿನಿಂದಾದದ್ದು! ಆದರೆ ಜ್ವಾಲಾಮುಖಿಗಳ ಕುಳಿಗಳು ಸ್ಪೋಟದಿಂದ ಅಥವಾ ಒಳಗಿನ ಸೆಳೆತದಿಂದ ಉಂಟಾದವು. ಹಾಗಾಗಿ ಕುಳಿಗಳು ಸಾಮಾನ್ಯವಾಗಿ ಏರಿಯನ್ನು ಹೊಂದಿರುವುದಿಲ್ಲ. ಜೊತೆಗೆ ಆಳದ ಕುಳಿಗಳು ಸಮತಳವನ್ನು ಹೊಂದಿದ್ದು, ಸುತ್ತಲೂ ಅಂಚಿನಲ್ಲಿ ಏರಿಯನ್ನು ಹೊಂದಿರುತ್ತವೆ. ಭೂಮಿಗೆ ವಾತಾವರಣವು ಇರುವುದರಿಂದ ಅನೇಕ ಚಿಕ್ಕ-ಪುಟ್ಟ ಉಲ್ಕೆಗಳು ಬೀಳುತ್ತಿರುವಾಗಲೇ ಉರಿದು ಬೂದಿಯಾಗುತ್ತವೆ. ಹಾಗೆ ಬೀಳುತ್ತಿರುವ, ನೆಲವನ್ನೂ ತಲುಪದ ಅನೇಕ ಉಲಕೆಗಳನ್ನು ನಾವು ನೋಡಿಯೇ ಇರುತ್ತೇವೆ. ನೆಲದ ಮೇಲೆ ಹಿಂದೆಂದೋ ಬಿದ್ದು ಕುಳಿಗಳನ್ನು ಮಾಡಿದ್ದರೂ ಮೇಲ್ಮೈಯ ಚಟುವಟಿಕೆಗಳಿಂದ ಗುರುತಿಸುವುದೂ ಕಷ್ಟವಾಗುತ್ತದೆ.

ಅನೇಕ ಬಾರಿ ಈ ಕುಳಿಯ ಏರಿ ಮತ್ತು ತಳಗಳು ತಮ್ಮ ಗುರುತನ್ನು ನಷ್ಟ ಮಾಡಿಕೊಂಡೂ ಇರಬಹುದು. ಕಾರಣ ಭೂಮಿಯ ಮೇಲ್ಮೈಯು ಅತ್ಯಂತ ಹೆಚ್ಚು ಚಟುವಟಿಕೆಯಿಂದಿದ್ದು ಗಾಳಿ-ಮಳೆಯಿಂದ ಕೊರೆತ ಅಥವಾ ಸವೆತಗಳು ಉಂಟಾಗಿ ಮೇಲ್ಮೈಯು ಹಾಳಾಗಿ ಗುರುತು ಕೆಡಿಸಿಕೊಂಡಿತ್ತವೆ. ಆದರೂ ಇಂತಹ ನೆಲವನ್ನು ಭೂವೈಜ್ಞಾನಿಕ ಅಧ್ಯಯನಗಳಲ್ಲಿ ಒಳಪಟ್ಟಾಗ ನೆಲದ ಮೇಲ್ಮೈಯು ಹತ್ತಿರದ ಮೇಲ್ಮೈಗಿಂದ ಭಿನ್ನವಾದ ಖನಿಜ-ಶಿಲೆ ಪದರ ಅಥವಾ ಸಂಯೋಜನೆಯನ್ನು ಹೊಂದಿರುವು ತಿಳಿಯುತ್ತದೆ. ಈ ಭಿನ್ನವಾದ ಪದರಗಳ ಸಂಯೋಜನೆಯೇ ಉಲ್ಕೆಯ ಪರಿಣಾಮಗಳಿಗೆ (Impact of Meteorites) ಕಾರಣಗಳನ್ನು ಕೊಡುವುದು. ಹಾಗಾಗಿ ಭೌಗೋಳಿಕ ಸರ್ವೇಕ್ಷಣಾ ಅಧ್ಯಯಗಳಲ್ಲಿ ಈ ಭಿನ್ನತೆಯನ್ನು ಮತ್ತು ಆಕಾರ ಇತ್ಯಾದಿಗಳನ್ನು ಗುರುತಿಸಿ ನಿಗಧಿ ಪಡಿಸಲಾಗುತ್ತದೆ. ಅಲ್ಲದೆ ಶಿಲಾ ಪದರಗಳು ಹೊರಚಾಚುಗಳಿಂದ ಅವುಗಳ ಕಾಲಮಾನವನ್ನು ಗುರುತಿಸಲಾಗುತ್ತದೆ. ಇದು ನಿಜಕ್ಕೂ ತುಸು ಕಷ್ಟದ ಕೆಲಸವೇ! ಏಕೆಂದರೆ ಭೂಮಿಯ ಮೇಲ್ಮೈಯು ನಿರಂತರವಾಗಿ ವಾತಾವರಣದ ಪರಿಣಾಮಗಳಿಗೆ ತೆರೆದುಕೊಳ್ಳುತ್ತದೆ. ಕೆನಡಾದ ಒಟ್ಟಾವದಲ್ಲಿರುವ ಡೊಮಿನಿಯನ್‌ ವೀಕ್ಷಣಾಲಯ (Dominion Observatory)ದ ನಿರ್ದೇಶನದಂತೆ 1955ರಿಂದ ಗುರುತಿಸಿ ಭೂಮಿಯ ಉಲ್ಕಾಕುಳಿಗಳ ಡೆಟಾಬೇಸ್‌ (Earth Impact Database) ಅನ್ನು ರಚಿಸಲಾಗಿದೆ. ಇದರಿಂದ ಒಪ್ಪಿತವಾದಾಗ ಕುಳಿಯ ಬಗ್ಗೆ ವೈಜ್ಞಾನಿಕ ಒಮ್ಮತ ಎನಿಸುತ್ತದೆ.

ಆದರೆ ಚಂದ್ರನಿಗಾಗಲಿ, ಹತ್ತಿರದ ಗ್ರಹಗಳಾದ ಬುಧ ಮತ್ತು ಮಂಗಳಗಳಿಗೆ ವಾತಾವರಣದ ಸಮಸ್ಯೆಗಳು ಇಲ್ಲ. ಹಾಗಾಗಿಯೇ ಸಹಜವಾಗಿ ಗೋಚರವಾಗುವ ಕುಳಿಗಳನ್ನು ಈ ಮೂರೂ ಆಕಾಶಕಾಯಗಳಲ್ಲಿ ಕಾಣಬಹುದು. ಕುಳಿಗಳ ಪರಿಣಾಮವನ್ನು ಗುರುತಿಸಲು ಮೇಲ್ಮೈಯು ಗಟ್ಟಿಯಾಗಿರಬೇಕು, ಈ ಕಾರಣದಿಂದಲೇ ಗಟ್ಟಿ ಮೇಲ್ಮೈಯನ್ನು ಹೊಂದಿದ ಆಕಾಶಕಾಯಗಳಲ್ಲಿ ಮಾತ್ರವೇ ಕುಳಿಗಳಿವೆ. ಜೊತೆಗೆ ಗುರು ಗ್ರಹದ ಉಪಗ್ರಹಗಳಾದ ಕ್ಯಾಲಿಸ್ಟೊ ಮತ್ತು ಗ್ಯಾನಿಮೀಡ್‌ (Callisto and Ganymede)ಗಳಲ್ಲೂ ಉಲ್ಕಾಕುಳಿಗಳನ್ನು ಗುರುತಿಸಲಾಗಿದೆ. ಬುಧ ಗ್ರಹದಲ್ಲಿ ಸುಮಾರು 31,000 ಕುಳಿಗಳನ್ನೂ, ಮಂಗಳ ಗ್ರಹದಲ್ಲಿ ಸುಮಾರು 3,00,000 ಕುಳಿಗಳನ್ನೂ ಮತ್ತು ಚಂದ್ರನಲ್ಲಿ 1,09,000 ಕುಳಿಗಳನ್ನೂ ಗುರುತಿಸಲಾಗಿದೆ. ಆದರೂ ಇನ್ನೂ ಹೆಚ್ಚು ಇರುವ ಅಂದಾಜೂ ಕೂಡ ಇದೆ.

ಕುಳಿಗಳನ್ನು (Impact Craters) ಗುರುತಿಸಿದ ವೈಜ್ಞಾನಿಕ ವಿವರಗಳು

ಡೇನಿಎಲ್‌ ಎಂ. ಬ್ಯಾರಿಂಗರ್‌ (Daniel M. Barringer, May 25, 1860 – November 30, 1929) ) ಎಂಬ ಓರ್ವ‌ ಭೂವಿಜ್ಞಾನಿ ಸುಮಾರು 1902ರಲ್ಲಿ ಅರಿಜೊನಾದಲ್ಲಿ ಒಂದು ಕುಳಿ ಇರುವುದನ್ನು ತಿಳಿದು, ಅದರ ವೈಜ್ಞಾನಿಕ ಮತ್ತು ವೈಯಕ್ತಿಕ ಲಾಭದ ಹಿನ್ನೆಲೆಯಲ್ಲಿ ಗಣಿಕಾರಿಕಾ ಕಂಪನಿಯೊಂದನ್ನು ಆರಂಭಿಸಿ ಆ ನೆಲದ ಮಾಲಿಕರೂ ಆಗುತ್ತಾರೆ. ಆ ಕುಳಿಯ ಸುತ್ತಲೂ ಆಸುಪಾಸಿನಲ್ಲಿ ನಿಕ್ಕಲ್‌ ಮತ್ತು ಕಬ್ಬಿಣದ ಅದಿರಿನ ನಿಕ್ಷೇಪಕ್ಕೆ ಹುಡುಕಾಡಿ, ಇದೊಂದು ಅಗಾಧವಾದ ಭಯಾನಕ ಅಪ್ಪಳಿಸುವಿಕೆಯಿಂದಾದ ಕುಳಿಯೆಂದು 1903 ಮತ್ತು 1904ರ ಮಧ್ಯೆಯೇ ತೀರ್ಮಾನಕ್ಕೆ ಬರುತ್ತಾರೆ. ಮುಂದೆ 1906ರಲ್ಲಿ ತಮ್ಮ ಗೆಳೆಯ ಗಣಿತಜ್ಞ ಮತ್ತು ಭೌತವಿಜ್ಞಾನಿ ಬೆಂಜಮಿನ್‌ ಟಿಲ್ಗ್‌ಮನ್‌ (Benjamin C. Tilghman) ಜೊತೆಗೂಡಿ ಅರಿಜೊನಾದ ತಮ್ಮ ಸುಪರ್ದಿಯಲ್ಲೇ ಇರುವ 1.5 ಕಿಮೀ ವ್ಯಾಸದ ಕುಳಿಯನ್ನು ಉಲ್ಕೆಯಿಂದಾದ ಕುಳಿಯೆಂದು ತೀರ್ಮಾನಿಸಿ ಅಮೆರಿಕದ ಭೂವೈಜ್ಞಾನಿಕ ಸರ್ವೆಯ (US Geological Survey) ತಮ್ಮ ಉಲ್ಕೆಯ ಪರಿಣಾಮದ ಸಿದ್ಧಾಂತವನ್ನು ಮಂಡಿಸುತ್ತಾರೆ. ಮುಂದೆ ಅವರ ಸಂಶೋಧನಾ ಪ್ರಬಂಧವು Proceedings of the Academy of Natural Sciences ನಲ್ಲಿ ಪ್ರಕಟವಾಗುತ್ತದೆ. ಹಿರೊಶಿಮಾ ಮೇಲೆ ಬಿದ್ದ ಅಣುಬಾಂಬಿನ 150 ಪಟ್ಟು ಶಕ್ತಿಯುತವಾದ 3 ಲಕ್ಷ ಟನ್ನುಗಳ ಉಲ್ಕೆಯು ಸೆಕೆಂಡಿಗೆ 12ಕಿಮೀ ವೇಗದಲ್ಲಿ ಅಪ್ಪಳಿಸಿದ್ದರಿಂದ ಉಂಟಾಗಿರುವ ಅದೀಗ ಬ್ಯಾರಿಂಗರ್‌ ಉಲ್ಕಾಕುಳಿ (Barringer Crater) ಎಂದು ಜನಪ್ರಿಯವಾಗಿದೆ. ಅದನ್ನು ಅವರ ಕುಟುಂಬವೇ ಬ್ಯಾರಿಂಗರ್‌ ಕ್ರೆಟರ್‌ ಕಂಪನಿ(The Barringer Crater Company)ಯ ಮೂಲಕ ನಿರ್ವಹಿಸುತ್ತಿದೆ. ಸಾವರ್ಜನಿಕವಾಗಿ ಒಂದು ಮ್ಯೂಸಿಯಂ ರೀತಿಯಲ್ಲಿ ಮುಕ್ತವಾಗಿದೆ. (https://barringercrater.com/)

ಹಾಗಾಗಿ 1903ರಲ್ಲೇ ಡೇನಿಎಲ್‌ ಎಂ. ಬ್ಯಾರಿಂಗರ್‌ ಅವರು ಉಲ್ಕೆಯ ಪರಿಣಾಮವು ಭೂಮಿಯ ಮೇಲೂ ಇರುವ ಊಹೆಯನ್ನು ಹೊಂದಿದ್ದಲ್ಲದೆ, ಅರಿಜೊನಾದ ಕುಳಿಯ ಮಾಲೀಕರಾಗಿಯೂ, ಸುಮಾರು 1920ರವೇಳೆಗೆ ವಿಜ್ಞಾನ ಜಗತ್ತಿಗೆ ಬ್ಯಾರಿಂಗರ್‌ ತಮ್ಮ ಸೈದ್ಧಾಂತಿಕ ನಿಲುವಿಂದ (Impact Theory) ಪರಿಚಿತರಾಗುತ್ತಾರೆ. ಮುಂದೆ 1960ರ ದಶಕದಲ್ಲಿ ಯೂಜೀನ್‌ ಶೂಮ್ಯಾಕರ್‌ ಅದೇ ಕುಳಿಯನ್ನು ಅಧ್ಯಯನ ಮಾಡಿ ಹ್ಯಾರಿ ಹೆಸ್‌ ಅವರ ಮಾರ್ಗದರ್ಶನದಲ್ಲಿ ಚಂದ್ರನ ಕುಳಿಗಳಿಗೂ ಅದಕ್ಕೂ ಸಮೀಕರಿಸಿ ಸಾಬೀತು ಮಾಡುತ್ತಾರೆ. ಹಾಗೆ ಸಾಬೀತು ಮಾಡಲು ನವಾಡದಲ್ಲಿ ಅಮೆರಿಕವು ನ್ಯೂಕ್ಲಿಯರ್‌ ಪರೀಕ್ಷೆಯಲ್ಲಿ ಉಂಟಾದ ಕುಳಿಯನ್ನೂ ಸಮೀಕರಿಸಿದ್ದರು. (ಹ್ಯಾರಿ ಹೆಸ್‌ (Harry Hammond Hess) ಭೂಮಿಯ ಪ್ಲೇಟ್‌ ಟೆಕ್ಟಾನಿಕ್‌ – ಭೂತಳಗಳ– ಚಲನೆಯ ಸೈದ್ಧಾಂತಿಕ ಪಿತಾಮಹಾ ಎನಿಸಿಕೊಂಡವರು. ನನ್ನ ಸ್ನಾತಕೋತ್ತರ ಅಧ್ಯಯನದ ಮಣ್ಣಿನ ಮೇಲ್ಮೈ ಅಧ್ಯಯನಗಳನ್ನು ಪ್ರಮಾಣೀಕರಿಸಲು ಪ್ರಭಾವ ಬೀರಿದ ವಿಜ್ಞಾನಿ). 1994ರಲ್ಲಿ ಗುರುಗ್ರಹವನ್ನು ಅಪ್ಪಳಿಸಿದ ಲೆವಿ-ಶೂಮ್ಯಾಕರ್‌ ಧೂಮಕೇತು(Shoemaker–Levy 9 -SL9)ವನ್ನು 1993ರಲ್ಲಿ ಡೇವಿಡ್‌ ಲೆವಿ, ಯೂಜೀನ್‌ ಶೂಮ್ಯಾಕರ್‌ ಮತ್ತು ಕ್ಯಾರೊಲಿನ್‌ ಶೂಮ್ಯಾಕರ್‌ ಕಂಡುಹಿಡಿದಿದ್ದರು. ಆ ಧೂಮಕೇತುವು ಅವರ ಅಧ್ಯಯನಗಳಿಂದ ಗುರು ಗ್ರಹದ ಹಿಡಿತಕ್ಕೆ ಸಿಕ್ಕ ಬಗ್ಗೆ ತಿಳಿದು ಮುಂದೆ ಅದಕ್ಕೆ ಲೆವಿ-ಶೂಮ್ಯಾಕರ್‌ ಧೂಮಕೇತುವೆಂದು ಹೆಸರಾಗಿತ್ತು.

ಭಾರತೀಯ ನೆಲದಲ್ಲಿ ಉಲ್ಕಾಕುಳಿಗಳು

ನಮ್ಮ ದೇಶದಲ್ಲೂ ಈವರೆಗೆ ಸುಮಾರು ನಾಲ್ಕು ಉಲ್ಕಾಕುಳಿಗಳನ್ನು ಗುರುತಿಸಲಾಗಿದೆ. ಮೊಟ್ಟ ಮೊದಲ ಉಲ್ಕಾಕುಳಿಯು ಮಹಾರಾಷ್ಟ್ರ ರಾಜ್ಯದ ಬುಲ್ಧಾನ್‌ ಪಟ್ಟಣದಿಂದ ಸುಮಾರು 70 ಕಿಮೀ ದೂರದಲ್ಲಿರುವ ಸರಾಸರಿ 1.2 ಕಿ.ಮೀ ವ್ಯಾಸದ ಉಲ್ಕೆಯ ಕುಳಿ, ಒಂದು ಸರೋವರ ಅಥವಾ ಕೆರೆಯಂತಿದೆ. ಲೊನಾರ್‌ ಸರೋವರ (Lonar Lake) ಲೊನಾರ್‌ ಕುಳಿ ಎಂದು ಕರೆಯುವ ಇದರಲ್ಲಿ ಉಪ್ಪು ನೀರಿದ್ದು, ಇದನ್ನು ರಾಷ್ಟ್ರೀಯ ಭೂ-ಪಾರಂಪರಿಕ ಸ್ಮಾರಕವೆಂದು ಘೋಷಿಸಲಾಗಿದೆ (National Geo-heritage Monument). ಹಿಂದಿನ ಅಧ್ಯಯನಗಳು ಇದನ್ನು ಸುಮಾರು 60,000 ವರ್ಷಗಳ ಹಿಂದಿನದೆಂದು ಗುರುತಿಸಿದ್ದರೆ, ಇತ್ತೀಚೆಗಿನ ಸಂಶೋಧನೆಗಳು ಸುಮಾರು 5 –6 ಲಕ್ಷ (57,600 ± 47,000 years) ವರ್ಷಗಳೆಂದು ತೀರ್ಮಾನಿಸಿವೆ. ಈ ಸರೋವರವು ಸುಮಾರು 450 ಅಡಿ ಸರಾಸರಿ ಆಳವಿದ್ದು, ಗರಿಷ್ಠ 490 ಅಡಿಗಳಷ್ಟು ಆಳವಿದೆ. ನ್ಯಾಷನಲ್‌ ಜಿಯೊಗ್ರಾಫಿಕ್‌ ದಾಖಲಿಸಿರುವ 2.45 ನಿಮಿಷಗಳ ಕುಳಿಯ ವಿಡೀಯೊವನ್ನು ಈ ಲಿಂಕ್‌ ( https://www.youtube.com/watch?v=9QiUM0mb3UU )ನಲ್ಲಿ ನೋಡಬಹುದು.

ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಭೊಂತ ಹಳ್ಳಿಯ ಸಮೀಪ ಸುಮಾರು 2.44 -2.24 ಬಿಲಿಯನ್‌ ವರ್ಷಗಳ ಹಿಂದೆಯೇ ಉಂಟಾಗಿರುವ ಕುಳಿಯಿದೆ. ಇದು ಸರಿ ಸುಮಾರು 11 ಕಿಮೀ ಅಗಲ ಇರುವ ಏಶಿಯಾದಲ್ಲೇ ಅತೀ ದೊಡ್ಡದಾದ ಧಾಲಾ ಉಲ್ಕೆಯ ಕುಳಿ (Dhala Crater). ಇದನ್ನು ಲೊನಾರ್‌ ಕುಳಿಯ ನಂತರ ಗುರುತಿಸಲಾಗಿದೆ.

ಇದರ ಹತ್ತಿರವೇ ಸುಮಾರು ಕೇವಲ 200 ಕಿಮೀ ದೂರದ ರಾಜಸ್ತಾನದ ಮತ್ತೊಂದು ಕುಳಿಯಿದ್ದು ಅದನ್ನು ರಾಮಗರ್‌ ಕುಳಿ ಎಂದು ಕರೆಯುತ್ತಾರೆ. ಇದರ ಅಗಲ ಸುಮಾರು 3.5 ಕಿಮೀ ಗಳಾಗಿದೆ.

ಗುಜರಾತ್‌ ರಾಜ್ಯದ ಕಚ್‌ ಜಿಲ್ಲೆಯ ಭುಜ್‌ ತಾಲೂಕಿನ ಲುನಾ ಎಂಬ ಹಳ್ಳಿಯಲ್ಲಿ ಒಂದು 1.2 ಕಿಮೀ ಅಗಲ ಕುಳಿಯನ್ನು ಗುರುತಿಸಲಾಗಿದೆ. ಇದು ತೀರಾ ಇತ್ತೀಚೆಗೆ ಗುರುತಿಸಲಾಗಿರುವ ಕುಳಿಯಾಗಿದ್ದು ತುಂಬಾ ಪ್ರಕಾಶಮಾನವಾದ ಕಬ್ಬಣಹೊಂದಿರುವ ಉಲ್ಕೆಯಿಂದ ಸುಮಾರು 10,000 – 50,000 ವರ್ಷಗಳ ಹಿಂದೆ ಉಂಟಾಗಿರಬಹುದೆಂಬ ಅಂದಾಜಿದೆ.

ಇದೂ ಅಲ್ಲದೆ ಶಂಕರ್‌ ಚಟರ್ಜಿ ಎನ್ನುವ ಪಳೆಯುಳಿಕೆ ತಜ್ಞರು ಮುಂಬೈನಿಂದ ಸುಮಾರು 500 ಕಿಮೀ ದೂರದಲ್ಲಿ ಅರಬ್ಬೀಸಮುದ್ರದ ಒಳಗೆ ಇರುವ ಕುಳಿಯು ಉಲ್ಕೆ ಅಥವಾ ಧೂಮಕೇತುವಿನ ಅಪ್ಪಳಿಸುವುದರಿಂದ ಆದದ್ದೆಂದು 2004ರಲ್ಲಿ ಸಾಧಿಸ ಹೊರಟಿದ್ದರು. ಆದರೆ ಅದಕ್ಕೆ ಬಹುತೇಕ ತಜ್ಞರಿಂದ ಆಕ್ಷೇಪಗಳು ಬಂದವು. ಆದರೂ ಡಾ. ಚಟರ್ಜಿಯವರು ಯಾವುದೇ ಪುರಾವೆಗಳನ್ನು ಒದಗಿಸಿಲ್ಲ.

ವೆಟುಂಪ್ಕಾ ಉಲ್ಕಾ ಕುಳಿಯ ಭೇಟಿಯನ್ನು ಹಂಚಿಕೊಂಡ ಕಾರಣದಿಂದ, ನನ್ನ ಗೆಳೆಯ/ಗೆಳತಿಯರು ಕೇಳಿದ ಕುತೂಹಲದ ಪ್ರಶ್ನೆಗಳ ಹಿಂದೆ ಹೋಗಿದ್ದರ ಫಲ ಈ ಪ್ರಬಂಧ! ನನ್ನ ಸ್ನಾತಕೋತ್ತರ ಪದವಿಯ ಅಧ್ಯಯನದಲ್ಲಿ ನನ್ನನ್ನು ಅಪಾರವಾಗಿ ಆಕರ್ಷಿಸಿದ್ದ ಮಣ್ಣ-ನೆಲದ ಭೌಗೋಳಿಕ ವಿಚಾರಗಳಿಂದಾಗಿ ಎಲ್ಲವನ್ನೂ ಮೆಲುಕುಹಾಕುಂತಾಯಿತು. ಒಂದಷ್ಟು ಓದಿನಲ್ಲಿ ತೊಡಗಿಸಲು ಸಾಧ್ಯವಾಯಿತು. ನನ್ನ ಕುತೂಹಲವನ್ನು ಕೆರಳಿಸಿದ್ದ ಎಲ್ಲಾ ಗೆಳೆಯ/ಗೆಳತಿಯರಿಗೆ ಧನ್ಯವಾದಗಳು.

(ಮುಂದಿನ ವಾರದಿಂದ ಏಪ್ರಿಲ್‌ ತಿಂಗಳು ಪೂರ್ತಿ ಅಮೆರಿಕದ ಇಲಿನಾಯ್‌, ವರ್ಜಿನಿಯಾ, ಪೆನ್ಸಿಲ್ವೇನಿಯಾ ಮತ್ತು ನ್ಯೂಯಾರ್ಕ್‌ ರಾಜ್ಯಗಳಲ್ಲು ಸುತ್ತಾಟದ ಪ್ರಯುಕ್ತ ಹೆಚ್ಚು ಬರೆಯಲು ಸಾಧ್ಯವಾಗದು. ನಂತರ ಮುಂದಿನ ಬರಹಗಳ ಮೂಲಕ ಮತ್ತೆ ಭೇಟಿಯಾಗೋಣ).

ವಂದನೆಗಳು

ಡಾ. ಟಿ.ಎಸ್.‌ ಚನ್ನೇಶ್.‌

Recent Posts

  • “ಹೊಸತನವನ್ನೊಳಗೊಂಡ ಆರ್ಥಿಕ ಬೆಳವಣಿಗೆಯ ವಿವರಣೆ”ಗೆ ಆಲ್ಫ್ರೆಡ್‌ ನೊಬೆಲ್‌ ಸ್ಮರಣೆಯ 2025ರ ಅರ್ಥವಿಜ್ಞಾನದ ಪ್ರಶಸ್ತಿ
  • ಲೋಹ-ಸಾವಯವ ಚೌಕಟ್ಟುಗಳೆಂಬ (Metal-Organic Frameworks, MOFs) ರಸಾಯನಿಕಗಳ  ಅಭಿವೃದ್ಧಿಗೆ 2025ರ  ರಸಾಯನ ವಿಜ್ಞಾನದ ನೊಬೆಲ್
  • 2025 ರ ಭೌತ ವಿಜ್ಞಾನದ ನೊಬೆಲ್‌ For the Discovery of Macroscopic Quantum Mechanical Tunnelling and Energy Quantisation in an Electric Circuit
  • “ಹೊರ ಮೈಯ ಅಥವಾ ಬಾಹ್ಯ ರೋಗನಿರೋಧಕ ಪ್ರತಿಕ್ರಿಯೆ”ಯ ಸಂಶೋಧನೆಗಳಿಗಾಗಿ 2025ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿ
  • ಅಮೆರಿಕ ಯಾತ್ರೆಯಲಿ ಕಂಡ “ಚಂದ್ರಯಾನಿ ಮರ” (NASA ವೆಬ್‌ಸೈಟ್‌ ಸೇರಿದ ಚಿತ್ರಗಳ ಕಥೆ)

Recent Comments

  • ಮಹದೇವಯ್ಯ on ಮನೆಯಂಗಳದಿ ಎದಿರುಗೊಳ್ಳುವ ಲಕ್ಷ್ಮಿ – ಔಷಧಗಳ ಮೈದುಂಬಿಕೊಂಡ ತುಳಸಿ : Ocimum tenuiflorum
  • Shiva Makki on ಕನ್ನಡಕ್ಕೊಂದು ವಿಜ್ಞಾನದ ಓದು
  • T Niranjana Prabhu on ಲೋಹ-ಸಾವಯವ ಚೌಕಟ್ಟುಗಳೆಂಬ (Metal-Organic Frameworks, MOFs) ರಸಾಯನಿಕಗಳ  ಅಭಿವೃದ್ಧಿಗೆ 2025ರ  ರಸಾಯನ ವಿಜ್ಞಾನದ ನೊಬೆಲ್
  • ನಿರಂಜನ ಆರಾಧ್ಯ on “ಹೊರ ಮೈಯ ಅಥವಾ ಬಾಹ್ಯ ರೋಗನಿರೋಧಕ ಪ್ರತಿಕ್ರಿಯೆ”ಯ ಸಂಶೋಧನೆಗಳಿಗಾಗಿ 2025ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿ
  • K SANJEEVA REDDY on “ಹೊರ ಮೈಯ ಅಥವಾ ಬಾಹ್ಯ ರೋಗನಿರೋಧಕ ಪ್ರತಿಕ್ರಿಯೆ”ಯ ಸಂಶೋಧನೆಗಳಿಗಾಗಿ 2025ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿ

Archives

  • October 2025
  • July 2025
  • June 2025
  • May 2025
  • April 2025
  • March 2025
  • January 2025
  • December 2024
  • October 2024
  • September 2024
  • August 2024
  • June 2024
  • May 2024
  • April 2024
  • February 2024
  • January 2024
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021
  • September 2021
  • August 2021
  • July 2021
  • June 2021
  • May 2021
  • April 2021
  • March 2021
  • February 2021
  • January 2021
  • December 2020
  • November 2020
  • October 2020
  • September 2020
  • August 2020
  • July 2020
  • June 2020
  • May 2020
  • April 2020
  • March 2020
  • February 2020
  • January 2020
  • December 2019
  • November 2019
  • October 2019
  • September 2019
  • August 2019
  • July 2019
  • June 2019
  • May 2019
  • April 2019
  • March 2019
  • February 2019
  • January 2019
  • December 2018

Categories

  • Abel Awards
  • America -ಅಲಬಾಮಾ ಅನುಭವಗಳು
  • Covid-19 Series / ಕೋವಿಡ್-19 ಸರಣಿ
  • Dr. B.K. Subba Rao Memorial Series
  • Nobel -2021
  • Nobel 2022
  • Nobel 2024
  • Nobel 2025
  • Nobel-2019 Series
  • Nobel-2020 Series
  • Nobel-2023
  • Prof. Satish Dhawan Series
  • Prof.BGL Swamy Series -ಸಸ್ಯಯಾನ
  • Pustakayana-ಪುಸ್ತಕಯಾನ
  • Scientists Series/ ಅಪರೂಪದ ವಿಜ್ಞಾನಿಗಳ ಸರಣಿ
  • Uncategorized
  • Weekly News

Meta

  • Log in
  • Entries feed
  • Comments feed
  • WordPress.org

  • Programmes
  • Donate
  • Contact

Copyright 2025 – CPUS

Facebook Twitter Youtube Instagram

  • Programmes
  • Donate
  • Contact

Copyright 2025 – CPUS

Facebook Twitter Youtube Instagram